‘ಮೊದಲು ನಿಮಗಿದ್ದ ಪ್ರೀತಿಯನ್ನು’ ಕಾಪಾಡಿಕೊಳ್ಳಿರಿ
‘ಮೊದಲು ನಿಮಗಿದ್ದ ಪ್ರೀತಿಯನ್ನು’ ಕಾಪಾಡಿಕೊಳ್ಳಿರಿ
“ನಿನಗಿರುವದನ್ನು [ಭದ್ರವಾಗಿ] ಹಿಡಿದುಕೊಂಡಿರು.”—ಪ್ರಕ. 3:11.
ವಿಧೇಯ ಮಾನವಕುಲಕ್ಕೆ ಯೆಹೋವನು ಒದಗಿಸಲಿರುವ ಅದ್ಭುತಕರ ಭವಿಷ್ಯತ್ತಿನ ಕುರಿತು ನೀವು ಮೊದಮೊದಲು ಕಲಿತಾಗ ಹೇಗನಿಸಿತ್ತೆಂದು ನಿಮಗೆ ನೆನಪಿದೆಯೊ? ಮುಂಚೆ ನೀವು ಬೇರೊಂದು ಧರ್ಮಕ್ಕೆ ಸೇರಿದವರಾಗಿದ್ದಲ್ಲಿ, ಬೈಬಲಿನಿಂದ ದೇವರ ಉದ್ದೇಶವು ವಿವರಿಸಲ್ಪಟ್ಟಾಗ ನಿಮಗೆ ಹೇಗನಿಸಿತು? ಅಥವಾ ಒಂದೊಮ್ಮೆ ಕಷ್ಟಕರವಾಗಿದ್ದ ಬೋಧನೆಗಳನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಂಡಾಗ ಹೇಗನಿಸಿತು? ಬಹುಶಃ ಕತ್ತಲೆಯಲ್ಲಿ ಇಡಲ್ಪಟ್ಟಿದ್ದಿರೆಂದು ನಿಮಗನಿಸಿರಬಹುದು. ಆದರೆ ಈಗ ಬೆಳಕಿಗೆ ತರಲ್ಪಟ್ಟದ್ದಕ್ಕಾಗಿ ನೀವು ಎಷ್ಟೊಂದು ಹರ್ಷಿಸುತ್ತಿದ್ದೀರಿ! ಒಂದುವೇಳೆ ಕ್ರೈಸ್ತ ಹೆತ್ತವರಿಂದ ನೀವು ಬೆಳೆಸಲ್ಪಟ್ಟಿರುವಲ್ಲಿ, ಯೆಹೋವನ ಕುರಿತು ಏನು ಕಲಿಯುತ್ತಿದ್ದೀರೊ ಅದು ಸತ್ಯವೆಂದು ಮಂದಟ್ಟಾಗಿ ಅದರ ಹೊಂದಿಕೆಯಲ್ಲಿ ಜೀವಿಸಲು ನಿರ್ಣಯಿಸಿದಾಗ ನಿಮಗೆ ಹೇಗನಿಸಿತೆಂದು ನೆನಪಿದೆಯೊ?—ರೋಮಾ. 12:2.
2 ನಿಮ್ಮ ಅನೇಕ ಆಧ್ಯಾತ್ಮಿಕ ಸಹೋದರರು ತಮಗಾದ ಅನಿಸಿಕೆಯನ್ನು ನಿಮ್ಮ ಮುಂದೆ ಬಿಚ್ಚಿಡಬಲ್ಲರು. ಆಗ ತಮಗೆ ಬಹಳ ಸಂತೋಷವಾಯಿತು, ಯೆಹೋವನಿಗೆ ಆಪ್ತರಾದ ಅನಿಸಿಕೆಯಾಯಿತು, ನಮ್ಮನ್ನು ಆತನು ತನ್ನ ಕಡೆಗೆ ಎಳೆದದ್ದಕ್ಕಾಗಿ ನಾವು ಆಭಾರಿಗಳಾಗಿದ್ದೇವೆ ಎಂದು ಅವರು ಹೇಳುವರು. (ಯೋಹಾ. 6:44) ಅವರಿಗಾದ ಆ ಸಂತೋಷವೇ ಕ್ರೈಸ್ತ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅವರನ್ನು ಪ್ರೇರೇಪಿಸಿತು. ಅವರಿಗೆ ಎಷ್ಟು ಸಂತೋಷವಾಯಿತೆಂದರೆ ತಮಗೆ ತಿಳಿದಿರುವುದನ್ನೆಲ್ಲ ಪ್ರತಿಯೊಬ್ಬರಿಗೂ ಹೇಳಬೇಕೆಂದು ಅವರಿಗನಿಸಿತು. ನಿಮಗೂ ಹಾಗನಿಸಿತ್ತೊ?
3 ಯೇಸು ಎಫೆಸದಲ್ಲಿನ ಪ್ರಥಮ ಶತಮಾನದ ಕ್ರೈಸ್ತ ಸಭೆಯ ಕುರಿತು ಸಂಬೋಧಿಸಿದಾಗ, “ಮೊದಲು ನಿನಗಿದ್ದ ಪ್ರೀತಿ” ಎಂಬ ವಾಕ್ಸರಣಿಯನ್ನು ಬಳಸಿದನು. ಎಫೆಸ ಸಭೆಯವರಲ್ಲಿ ಅನೇಕ ಉತ್ತಮ ಗುಣಗಳಿದ್ದವು. ಆದರೂ ಯೆಹೋವನ ಕಡೆಗೆ ಆರಂಭದಲ್ಲಿ ಅವರಿಗಿದ್ದ ಪ್ರೀತಿಯು ತಣ್ಣಗಾಗಿತ್ತು. ಆದುದರಿಂದ ಯೇಸು ಅವರಿಗೆ, “ನಿನ್ನ ಕೃತ್ಯಗಳನ್ನೂ ಪ್ರಯಾಸವನ್ನೂ ತಾಳ್ಮೆಯನ್ನೂ ಬಲ್ಲೆನು; ನೀನು ದುಷ್ಟರನ್ನು ಸಹಿಸಲಾರಿ; ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿ; ನೀನು ತಾಳ್ಮೆಯುಳ್ಳವನಾಗಿ ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಸೈರಿಸಿಕೊಂಡು ಬೇಸರಗೊಳ್ಳಲಿಲ್ಲ; ಇದನ್ನೆಲ್ಲಾ ಬಲ್ಲೆನು. ಆದರೆ ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪುಹೊರಿಸಬೇಕಾಗುತ್ತದೆ” ಎಂದು ಹೇಳಿದನು.—ಪ್ರಕ. 2:2-4.
4 ಎಫೆಸ ಮತ್ತು ಇತರ ಸಭೆಗಳನ್ನು ಸಂಬೋಧಿಸಿ ಯೇಸು ಪ್ರಕಟನೆ ಪುಸ್ತಕದಲ್ಲಿ ನೀಡಿದ ಸಲಹೆಗಳು, 1914ರಿಂದೀಚೆಗೆ ಅಭಿಷಿಕ್ತ ಕ್ರೈಸ್ತರ ಮಧ್ಯೆ ಸ್ವಲ್ಪ ಸಮಯದ ವರೆಗೆ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಗಳಿಗೆ ಸೂಕ್ತವಾಗಿತ್ತು. (ಪ್ರಕ. 1:10) ಇಂದು ಸಹ ಕೆಲವು ಕ್ರೈಸ್ತರು ಯೆಹೋವನ ಮತ್ತು ಕ್ರೈಸ್ತ ಸತ್ಯದ ಕಡೆಗೆ “ಮೊದಲು [ತಮಗಿದ್ದ] ಪ್ರೀತಿಯನ್ನು” ಕಳೆದುಕೊಳ್ಳಸಾಧ್ಯವಿದೆ. ಇದನ್ನು ಮನಸ್ಸಿನಲ್ಲಿಟ್ಟವರಾಗಿ, ನಿಮ್ಮ ಸ್ವಂತ ಅನುಭವಗಳನ್ನು ನೆನಪಿಸಿಕೊಳ್ಳುವ ಮತ್ತು ಧ್ಯಾನಿಸುವ ಮೂಲಕ ದೇವರ ಹಾಗೂ ಸತ್ಯದ ಕಡೆಗಿನ ನಿಮ್ಮ ಮೊದಲ ಪ್ರೀತಿಯನ್ನೂ ಹುರುಪನ್ನೂ ಕಾಪಾಡಲು, ಚುರುಕುಗೊಳಿಸಲು ಮತ್ತು ಹೆಚ್ಚಿಸಲು ಹೇಗೆ ಸಾಧ್ಯ ಎಂಬುದನ್ನು ನಾವೀಗ ಪರಿಗಣಿಸೋಣ.
ಸತ್ಯವನ್ನು ನಿಮಗೆ ಯಾವುದು ಮಂದಟ್ಟುಮಾಡಿತು?
5 ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಳ್ಳುವ ಪ್ರತಿಯೊಬ್ಬನು ಮೊದಲಾಗಿ ‘ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವುದೆಂದು ವಿವೇಚಿಸಿ ತಿಳುಕೊಳ್ಳಬೇಕು.’ (ರೋಮಾ. 12:1, 2) ಇದರಲ್ಲಿ ಬೈಬಲಿನ ಸತ್ಯವನ್ನು ಕಲಿತುಕೊಳ್ಳುವುದು ಸಹ ಸೇರಿದೆ. ಯೆಹೋವನ ಸಾಕ್ಷಿಗಳು ಸತ್ಯವನ್ನೇ ಕಲಿಸುತ್ತಾರೆಂದು ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ವಿಷಯಗಳು ಮನಗಾಣಿಸುತ್ತವೆ. ಕೆಲವರು ತಾವು ಬೈಬಲಿನಲ್ಲಿ ದೇವರ ಹೆಸರನ್ನು ಓದಿದಾಗ ಅಥವಾ ಸತ್ತವರ ನಿಜ ಸ್ಥಿತಿಯ ಕುರಿತು ತಿಳಿದುಕೊಂಡಾಗ ಬದಲಾವಣೆಯನ್ನು ಮಾಡಿಕೊಂಡೆವು ಎಂದು ಹೇಳುತ್ತಾರೆ. (ಕೀರ್ತ. 83:18; ಪ್ರಸಂ. 9:5, 10) ಇನ್ನು ಕೆಲವರನ್ನು ಪ್ರಭಾವಿಸಿದಂಥದ್ದು ಯೆಹೋವನ ಜನರ ಮಧ್ಯೆ ಇರುವ ಪ್ರೀತಿಯೇ ಆಗಿತ್ತು. (ಯೋಹಾ. 13:34, 35) ಇನ್ನಿತರರು ಈ ಲೋಕದ ಭಾಗವಾಗದೆ ಇರುವುದರ ಅರ್ಥವನ್ನು ತಿಳಿದುಕೊಂಡಾಗ ಪ್ರಭಾವಿತರಾದರು. ಸತ್ಯ ಕ್ರೈಸ್ತರು ರಾಜಕೀಯ ವಿವಾದಗಳಲ್ಲಿ ಅಥವಾ ಯಾವುದೇ ಜನಾಂಗೀಯ ಯುದ್ಧಗಳಲ್ಲಿ ಭಾಗವಹಿಸಬಾರದು ಎಂಬುದನ್ನು ಅವರು ತಿಳಿದುಕೊಂಡರು.—ಯೆಶಾ. 2:4; ಯೋಹಾ. 6:15; 17:14-16.
6 ಇಂಥ ಹಲವಾರು ಕಾರಣಗಳೇ ಅನೇಕರಿಗೆ ದೇವರ ಕಡೆಗೆ ತಮ್ಮ ಮೊದಲ ಪ್ರೀತಿಯ ಕಿಡಿಯನ್ನು ಹೊತ್ತಿಸುವಂತೆ ಮಾಡಿತು. ಕೀರ್ತನೆ 119:151, 152; 143:5 ಓದಿ.
ನಿಮಗೆ ಸತ್ಯವನ್ನು ಮಂದಟ್ಟುಮಾಡಿದ ಸಂಗತಿ ಯಾವುದೆಂದು ನೆನಪಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಪ್ರತಿಯೊಬ್ಬರ ಸನ್ನಿವೇಶ ಮತ್ತು ವ್ಯಕ್ತಿತ್ವವು ಬೇರೆ ಬೇರೆಯಾಗಿರುತ್ತದೆ. ಆದುದರಿಂದ ಯೆಹೋವನನ್ನು ಪ್ರೀತಿಸುವಂತೆ ಮತ್ತು ಆತನ ವಾಗ್ದಾನಗಳಲ್ಲಿ ನಂಬಿಕೆಯಿಡುವಂತೆ ನಿಮ್ಮನ್ನು ಪ್ರೇರೇಪಿಸಿದ ಕಾರಣಗಳು ಬೇರೆಯವರಿಗಿಂತ ಭಿನ್ನವಾಗಿರುತ್ತವೆ. ಹಾಗಿದ್ದರೂ, ಆ ಕಾರಣಗಳು ಆರಂಭದಲ್ಲಿ ನೀವು ಸತ್ಯವನ್ನು ಕಲಿಯುವಾಗ ಎಷ್ಟು ಮಹತ್ತ್ವದ್ದಾಗಿದ್ದವೊ ಇಂದು ಸಹ ಅಷ್ಟೇ ಮಹತ್ತ್ವದ್ದಾಗಿವೆ. ಸತ್ಯವು ಬದಲಾಗಲಿಲ್ಲ. ಆದುದರಿಂದ ಆ ನಿಮ್ಮ ಯೋಚನೆಗಳನ್ನೂ ಭಾವನೆಗಳನ್ನೂ ಪುನಃ ನೆನಪಿಗೆ ತರುವ ಮೂಲಕ ಸತ್ಯದ ಕಡೆಗೆ ನಿಮಗಿದ್ದ ಮೊದಲ ಪ್ರೀತಿಯನ್ನು ನೀವು ನವೀಕರಿಸಲು ಮತ್ತು ಚುರುಕುಗೊಳಿಸಲು ಸಾಧ್ಯವಿದೆ.—ನಿಮ್ಮ ‘ಮೊದಲ ಪ್ರೀತಿಯನ್ನು’ ಬಲಗೊಳಿಸಿರಿ
7 ನೀವು ಯೆಹೋವನಿಗೆ ಸಮರ್ಪಿಸಿಕೊಂಡಂದಿನಿಂದ ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಿರಬಹುದು. ಸತ್ಯದ ಕಡೆಗಿನ ಮೊದಲ ಪ್ರೀತಿಯು ಪ್ರಾಮುಖ್ಯವಾಗಿತ್ತಾದರೂ, ದಿನ ಕಳೆದಂತೆ ನಿಮ್ಮ ನಂಬಿಕೆಯನ್ನು ಪರೀಕ್ಷೆಗೆ ಒಡ್ಡುವಂಥ ಹೊಸ ಪಂಥಾಹ್ವಾನಗಳನ್ನು ಎದುರಿಸಲು ಇನ್ನೂ ಆಳವಾದ ಪ್ರೀತಿಯು ಅಗತ್ಯವಿತ್ತು. ಅದಕ್ಕೆ ಬೇಕಿದ್ದ ಸಹಾಯವನ್ನು ಯೆಹೋವನು ಒದಗಿಸಿದನಲ್ಲವೆ? (1 ಕೊರಿಂ. 10:13) ಆದುದರಿಂದ, ವರುಷಗಳು ಗತಿಸಿದಂತೆ ನೀವು ಪಡೆಯುವ ಅನುಭವಗಳು ಸಹ ನಿಮಗೆ ಅತ್ಯಮೂಲ್ಯವಾಗಿವೆ. ಏಕೆಂದರೆ ನಿಮ್ಮ ಮೊದಲ ಪ್ರೀತಿಯನ್ನು ಇನ್ನಷ್ಟು ಬಲಪಡಿಸುವಂತೆ ಅವು ನಿಮಗೆ ಸಹಾಯಮಾಡುವವು. ಮಾತ್ರವಲ್ಲದೆ, ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ಯಾವುದೆಂದು ವಿವೇಚಿಸಿ ತಿಳಿದುಕೊಳ್ಳುವಿರಿ.—ಯೆಹೋ. 23:14; ಕೀರ್ತ. 34:8.
8 ಉದಾಹರಣೆಗೆ, ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡುಸುವ ತನ್ನ ಉದ್ದೇಶವನ್ನು ಯೆಹೋವನು ಅವರಿಗೆ ತಿಳಿಸಿದಾಗ ಅವರು ಯಾವ ಪರಿಸ್ಥಿತಿಯಲ್ಲಿದ್ದರು ಎಂಬುದನ್ನು ಪರಿಗಣಿಸಿರಿ. ದೇವರು ತನ್ನ ಕುರಿತು ಮೋಶೆಗೆ, “ನಾನು ಏನಾಗಿ ಪರಿಣಮಿಸಲು ಬಯಸುವೆನೋ ಅದಾಗಿಯೇ ಪರಿಣಮಿಸುತ್ತೇನೆ” ಎಂದು ಹೇಳಿದನು. (ವಿಮೋ. 3:7, 8, 13, 14, NW) ಇನ್ನೊಂದು ಮಾತಿನಲ್ಲಿ, ತನ್ನ ಜನರನ್ನು ಬಿಡುಗಡೆಮಾಡಲು ಅಗತ್ಯವಿರುವ ಯಾವುದೇ ಪಾತ್ರವನ್ನು ತಾನು ತೆಗೆದುಕೊಳ್ಳಬಲ್ಲೆನು ಎಂದು ಯೆಹೋವನು ಹೇಳಿದನು. ಹಿಂಬಾಲಿಸಿ ಬಂದ ಘಟನೆಗಳಲ್ಲಿ ಮತ್ತು ಪರಿಸ್ಥಿತಿಯು ಅಗತ್ಯಪಡಿಸಿದಂತೆ ಯೆಹೋವನು ತನ್ನ ವ್ಯಕ್ತಿತ್ವದ ಬೇರೆ ಬೇರೆ ಮುಖಗಳನ್ನು ಪ್ರದರ್ಶಿಸುವುದನ್ನು ಇಸ್ರಾಯೇಲ್ಯರು ನೋಡಿದರು. ಆತನು ತನ್ನನ್ನು ಸರ್ವಶಕ್ತನಾಗಿ, ನ್ಯಾಯಾಧಿಪತಿಯಾಗಿ, ನಾಯಕನಾಗಿ, ವಿಮೋಚಕನಾಗಿ, ಯುದ್ಧವೀರನಾಗಿ ಮತ್ತು ಪೋಷಕನಾಗಿ ತೋರಿಸಿಕೊಂಡನು.—ವಿಮೋ. 12:12; 13:21; 14:24-31; 16:4; ನೆಹೆ. 9:9-15.
9 ನಿಮ್ಮ ಪರಿಸ್ಥಿತಿಯು ಪುರಾತನ ಇಸ್ರಾಯೇಲ್ಯರಿಗಿಂತ ಭಿನ್ನವಾಗಿದೆ. ಆದರೂ, ದೇವರು ವೈಯಕ್ತಿಕವಾಗಿ ನಿಮ್ಮ ಕುರಿತು ಆಸಕ್ತಿಯುಳ್ಳವನಾಗಿದ್ದಾನೆ ಎಂಬುದನ್ನು ದೃಢಪಡಿಸಿರುವ ಅನುಭವಗಳು ನಿಮಗಾಗಿರಬಹುದು ಮತ್ತು ಅವು ನಿಮ್ಮ ನಂಬಿಕೆಯನ್ನು ಬಲಪಡಿಸಿರಬಹುದು. ಯೆಹೋವನು ಯಾವುದೋ ಒಂದು ವಿಧದಲ್ಲಿ ನಿಮ್ಮ ಪೋಷಕ, ಸಾಂತ್ವನಗಾರ ಇಲ್ಲವೆ ಬೋಧಕನಾಗಿ ರುಜುವಾಗಿರಬಹುದು. (ಯೆಶಾಯ 30:20ಬಿ, 21 ಓದಿ.) ಅಥವಾ ನಿಮ್ಮ ಪ್ರಾರ್ಥನೆಗೆ ನೀವು ನೇರ ಉತ್ತರವನ್ನು ಪಡೆದಿರಬಹುದು. ಒಂದು ಪಂಥಾಹ್ವಾನವನ್ನು ಎದುರಿಸುತ್ತಿದ್ದಾಗ ಜೊತೆ ಕ್ರೈಸ್ತನು ನಿಮಗೆ ಸಹಾಯಮಾಡಿರಬಹುದು. ಇಲ್ಲವೆ ವೈಯಕ್ತಿಕ ಅಧ್ಯಯನದಲ್ಲಿ ಸೂಕ್ತವಾದ ವಚನಗಳು ನಿಮ್ಮ ಗಮನಕ್ಕೆ ಬಂದಿರಬಹುದು.
10 ಇಂಥ ಅನುಭವಗಳನ್ನು ನೀವು ಬೇರೆಯವರಿಗೆ ಹೇಳುವುದಾದರೆ, ಅದು ಕೆಲವರ ಮನಸ್ಸನ್ನು ಸ್ಪರ್ಶಿಸಲಿಕ್ಕಿಲ್ಲ. ಏಕೆಂದರೆ ಆ ಘಟನೆಗಳೇನು ಅದ್ಭುತಗಳಲ್ಲ. ಆದರೆ ಅವು ವ್ಯಕ್ತಿಗತವಾಗಿ ನಿಮಗೆ ಬಹಳಷ್ಟು ಅರ್ಥವನ್ನು ಹೊಂದಿರುತ್ತವೆ. ಹೌದು, ಯೆಹೋವನು ನಿಮಗಾಗಿ ಏನಾಗಿ ಪರಿಣಮಿಸಲು ಬಯಸಿದನೋ ಅದಾಗಿ ಪರಿಣಮಿಸಿದನು. ಸತ್ಯದಲ್ಲಿ ನೀವು ಕಳೆದಿರುವ ವರುಷಗಳ ಕುರಿತು ಆಲೋಚಿಸಿರಿ. ನಿಮ್ಮ ಜೀವನದಲ್ಲಿ ಯೆಹೋವನು ನಿಮಗೆ ವೈಯಕ್ತಿಕ ಕಾಳಜಿಯನ್ನು ತೋರಿಸಿದ ಒಂದಕ್ಕಿಂತ ಹೆಚ್ಚಿನ ಸನ್ನಿವೇಶಗಳನ್ನು ನೀವು ನೆನಪಿಸಿಕೊಳ್ಳಬಲ್ಲಿರೊ? ಹಾಗಿರುವಲ್ಲಿ, ಆ ಘಟನೆಗಳನ್ನು ಮತ್ತು ನಿಮಗಾದ ಅನಿಸಿಕೆಗಳನ್ನು ನೆನಪಿಗೆ ತಂದುಕೊಳ್ಳುವುದು ಅಂದಿನಂತೆ ಈಗಲೂ ಸಹ ನಿಮ್ಮಲ್ಲಿ ಯೆಹೋವನ ಕಡೆಗೆ ಪ್ರೀತಿಯು ಉಕ್ಕಿ ಹರಿಯುವಂತೆ ಮಾಡುತ್ತದೆ. ಅಂಥ ಅನುಭವಗಳನ್ನು ಅತ್ಯಮೂಲ್ಯವಾಗಿ ಎಣಿಸಿರಿ. ಅದರ ಕುರಿತು ಧ್ಯಾನಿಸಿರಿ. ನಿಮ್ಮ ಬಗ್ಗೆ ಯೆಹೋವನಿಗೆ ಚಿಂತೆಯಿದೆ ಎಂಬುದಕ್ಕೆ ಅವು ರುಜುವಾತುಗಳಾಗಿವೆ. ನಿಮ್ಮ ಆ ದೃಢಭರವಸೆಯನ್ನು ಯಾರೂ ಕಸಿದುಕೊಳ್ಳಲಾರರು.
ನಿಮ್ಮನ್ನು ಪರೀಕ್ಷಿಸಿಕೊಳ್ಳಿ
11 ದೇವರ ಮತ್ತು ಸತ್ಯದ ಕಡೆಗೆ ನಿಮಗೆ ಮೊದಲಿದ್ದ ಪ್ರೀತಿಯು ಈಗ ಇಲ್ಲವಾದರೆ, ಅದಕ್ಕೆ ದೇವರು ಕಾರಣನಲ್ಲ. ಏಕೆಂದರೆ ಯೆಹೋವನು ಎಂದಿಗೂ ಬದಲಾಗುವವನಲ್ಲ. (ಮಲಾ. 3:6; ) ಆತನಿಗೆ ಮುಂಚೆಯೂ ನಿಮ್ಮ ಬಗ್ಗೆ ಚಿಂತೆಯಿತ್ತು, ಈಗಲೂ ನಿಮ್ಮ ಬಗ್ಗೆ ಅಷ್ಟೇ ಚಿಂತೆಯಿದೆ. ಹಾಗಾದರೆ, ಯೆಹೋವನೊಂದಿಗಿನ ನಿಮ್ಮ ಸಂಬಂಧದಲ್ಲಿ ಏನಾದರೂ ಬದಲಾವಣೆಯಾಗಿದ್ದರೆ ಅದಕ್ಕೆ ಕಾರಣವೇನು? ಒಂದುವೇಳೆ ನೀವೀಗ ತುಂಬ ಕಾರ್ಯಮಗ್ನರಾಗಿಯೂ ಚಿಂತೆಯಲ್ಲಿ ಮುಳುಗಿದವರಾಗಿಯೂ ಇದ್ದೀರೆಂದು ನೆನಸುವುದೇ ಇದಕ್ಕೆ ಕಾರಣವೊ? ಹಿಂದೆ ನೀವು ಹೆಚ್ಚು ಶ್ರದ್ಧೆಯಿಂದ ಪ್ರಾರ್ಥನೆ ಮಾಡುವವರೂ ಅಧ್ಯಯನ ಮಾಡುವವರೂ ಹೆಚ್ಚಾಗಿ ಧ್ಯಾನಿಸುವವರೂ ಆಗಿದ್ದಿರಬಹುದು. ಶುಶ್ರೂಷೆಯಲ್ಲಿ ಮತ್ತು ಸಭಾ ಕೂಟಕ್ಕೆ ಕ್ರಮವಾಗಿ ಹಾಜರಾಗುವುದರಲ್ಲಿ ನೀವು ಈಗಿನದಕ್ಕಿಂತಲೂ ಆಗ ಹೆಚ್ಚು ಹುರುಪುಳ್ಳವರಾಗಿದ್ದೀರೊ?— ಯಾಕೋ. 1:172 ಕೊರಿಂ. 13:5.
12 ಅಂಥ ಯಾವುದೇ ಬದಲಾವಣೆಗಳನ್ನು ನೀವು ನಿಮ್ಮಲ್ಲಿ ಕಂಡುಕೊಳ್ಳಲಿಕ್ಕಿಲ್ಲ. ಆದರೆ ಒಂದುವೇಳೆ ಕಂಡುಕೊಂಡಲ್ಲಿ ಆ ಬದಲಾವಣೆ ಯಾಕಾಯಿತು? ಕುಟುಂಬಕ್ಕೆ ಸಾಕಷ್ಟು ಒದಗಿಸಬೇಕು, ಆರೋಗ್ಯದ ಕಾಳಜಿವಹಿಸಬೇಕು ಮುಂತಾದ ಯೋಗ್ಯ ಚಿಂತನೆಗಳು ಯೆಹೋವನ ದಿನ ನಿಕಟವಾಗಿದೆ ಎಂಬ ತ್ವರಿತ ಪ್ರಜ್ಞೆಯನ್ನು ಮೊಂಡಾಗಿಸಿವೆಯೊ? ಯೇಸು ತನ್ನ ಅಪೊಸ್ತಲರಿಗೆ, “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯ ಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ” ಎಂದು ಹೇಳಿದನು.—ಲೂಕ 21:34-36.
13 ಪ್ರೇರಿತ ಬೈಬಲ್‌ಲೇಖಕನಾದ ಯಾಕೋಬನು ತನ್ನ ಜೊತೆ ವಿಶ್ವಾಸಿಗಳಿಗೆ ದೇವರ ವಾಕ್ಯದ ಬೆಳಕಿನಲ್ಲಿ ತಮ್ಮನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳುವಂತೆ ಉತ್ತೇಜಿಸಿದನು. ಅವನು ಬರೆದದ್ದು: “ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ. ಯಾವನಾದರೂ ವಾಕ್ಯವನ್ನು ಕೇಳುವವನಾದರೂ ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿದ ಮನುಷ್ಯನಂತಿರುವನು; ಇವನು ತನ್ನನ್ನು ನೋಡಿಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವನು. ಆದರೆ ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು ವಾಕ್ಯವನ್ನು ಕೇಳಿ ಮರೆತುಹೋಗುವವನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.”—ಯಾಕೋ. 1:22-25.
14 ಒಬ್ಬ ವ್ಯಕ್ತಿಯು ತಾನು ಠಾಕುಠೀಕಾಗಿದ್ದೇನೋ ಎಂದು ನೋಡಲು ಕನ್ನಡಿಯನ್ನು ಉಪಯೋಗಿಸುತ್ತಾನೆ. ಉದಾಹರಣೆಗೆ, ಒಬ್ಬ ಪುರುಷನು ತನ್ನ ಟೈ ಸರಿಯಾಗಿಲ್ಲ ಎಂದು ಕನ್ನಡಿಯಲ್ಲಿ ಕಂಡೊಡನೆ ಸರಿಮಾಡಿಕೊಳ್ಳುತ್ತಾನೆ. ಒಬ್ಬ ಸ್ತ್ರೀ ತನ್ನ ಕೂದಲು ಸರಿಯಾಗಿಲ್ಲ ಎಂದು ಕಾಣುವಾಗ ಅದನ್ನು ಸರಿಮಾಡಿಕೊಳ್ಳುತ್ತಾಳೆ. ಅದೇ ರೀತಿ ನಾವು ಏನಾಗಿದ್ದೇವೆಂದು ಪರೀಕ್ಷಿಸಲು ಬೈಬಲ್ ಸಹಾಯಮಾಡುತ್ತದೆ. ನಾವು ಹೇಗಿರಬೇಕೆಂದು ಬೈಬಲ್ ಹೇಳುತ್ತದೋ ಆ ಮಾಹಿತಿಯೊಂದಿಗೆ ನಾವು ನಮ್ಮನ್ನು ಹೋಲಿಸಿ ನೋಡುವಾಗ ನಾವದನ್ನು ಒಂದು ಕನ್ನಡಿಯಂತೆ ಉಪಯೋಗಿಸುತ್ತೇವೆ. ಆದರೆ, ಕನ್ನಡಿಯಲ್ಲಿ ನೋಡಿಯೂ ಕೊರತೆಯನ್ನು ನಾವು ಸರಿಪಡಿಸಿಕೊಳ್ಳದಿದ್ದರೆ ನೋಡಿ ಏನು ಪ್ರಯೋಜನ? ನಾವು ದೇವರ ‘ಸರ್ವೋತ್ತಮ ಧರ್ಮಪ್ರಮಾಣದಲ್ಲಿ’ ನೋಡಿದಕ್ಕನುಸಾರ ಕ್ರಿಯೆಗೈಯುವುದಾದರೆ ಅಂದರೆ ಅದರ ‘ಪ್ರಕಾರ ನಡೆಯುವವರಾದರೆ’ ವಿವೇಕಿಗಳಾಗಿದ್ದೇವೆ. ಆದುದರಿಂದ, ಯೆಹೋವನ ಮತ್ತು ಸತ್ಯದ ಕಡೆಗೆ ತನಗೆ ಮೊದಲಿದ್ದ ಪ್ರೀತಿಯು ತಣ್ಣಗಾಗಿದೆ ಎಂದು ನೆನಸುವವನು ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ಜೀವನದಲ್ಲಿ ನಾನು ಯಾವ ಒತ್ತಡಗಳನ್ನು ಎದುರಿಸುತ್ತಿದ್ದೇನೆ ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದೇನೆ? ಈ ಹಿಂದೆ ನಾನು ಹೇಗೆ ಪ್ರತಿಕ್ರಿಯಿಸಿದ್ದೆ? ಅದರಲ್ಲಿ ಏನಾದರೂ ಬದಲಾವಣೆ ಆಗಿದೆಯೊ?’ ಆ ರೀತಿ ಪರೀಕ್ಷೆ ಮಾಡುವಾಗ ಏನಾದರೂ ಕೊರತೆ ಕಂಡುಬಂದಲ್ಲಿ ಇಬ್ರಿ. 12:12, 13.
ಅದನ್ನು ಅಲಕ್ಷ್ಯಮಾಡಬೇಡಿ. ಹೊಂದಾಣಿಕೆ ಬೇಕಾಗಿರುವಲ್ಲಿ, ತಡಮಾಡದೆ ಅದನ್ನು ಮಾಡಿರಿ.—15 ಅಂಥ ಧ್ಯಾನಿಸುವಿಕೆಯು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಲು ಯುಕ್ತವಾದ ಗುರಿಗಳನ್ನು ಇಡುವಂತೆ ಸಹ ನಿಮಗೆ ಸಹಾಯಮಾಡಬಲ್ಲದು. ಅಪೊಸ್ತಲ ಪೌಲನು ದೇವಪ್ರೇರಿತನಾಗಿ ತನ್ನ ಜೊತೆ ಕೆಲಸಗಾರನಾದ ತಿಮೊಥೆಯನಿಗೆ, ಶುಶ್ರೂಷೆಯಲ್ಲಿ ಪ್ರಗತಿಮಾಡುವಂತೆ ಸಲಹೆ ನೀಡಿದನು. “ಈ ವಿಷಯಗಳನ್ನು ಧ್ಯಾನಿಸುವವನಾಗಿರು. ಇವುಗಳಲ್ಲಿಯೇ ನೆಲೆಗೊಂಡಿರು. ಹೀಗೆ ನಿನ್ನ ಪ್ರಗತಿಯು ಎಲ್ಲರಿಗೂ ಪ್ರಕಟವಾಗುವುದು” ಎಂದು ಪೌಲನು ಆ ಯುವಕನನ್ನು ಉತ್ತೇಜಿಸಿದನು. ನಾವು ಸಹ ಯಾವ ಪ್ರಗತಿಯನ್ನು ಮಾಡಬೇಕೆಂಬುದನ್ನು ದೇವರ ವಾಕ್ಯದ ಬೆಳಕಿನಲ್ಲಿ ಧ್ಯಾನಿಸುವುದು ಉತ್ತಮ.—1 ತಿಮೊ. 4:15, NIBV.
16 ಪ್ರಾಮಾಣಿಕ ಸ್ವಪರೀಕ್ಷೆಯು ಖಂಡಿತವಾಗಿ ಕೆಲವು ಬಲಹೀನತೆಗಳನ್ನು ಬಯಲುಪಡಿಸುತ್ತದೆ. ಅದು ಕೆಲವರನ್ನು ನಿರುತ್ಸಾಹಗೊಳಿಸಲೂಬಹುದು, ಆದರೆ ಹಾಗಾಗಲು ಬಿಡಬೇಡಿ. ಸ್ವಪರೀಕ್ಷೆಯ ಉದ್ದೇಶವೇ ಎಲ್ಲಿ ಪ್ರಗತಿಮಾಡಸಾಧ್ಯವಿದೆ ಎಂಬುದನ್ನು ನೋಡುವುದಾಗಿದೆ. ಅಪರಿಪೂರ್ಣತೆಯಿಂದಾಗಿ ಕ್ರೈಸ್ತನೊಬ್ಬನು ತಾನು ಅಪ್ರಯೋಜಕನು ಎಂದು ನೆನಸಬೇಕೆಂಬುದೇ ಸೈತಾನನ ಬಯಕೆ. ವಾಸ್ತವದಲ್ಲಿ, ದೇವರನ್ನು ಸೇವಿಸಲು ಜನರು ಮಾಡುವ ಎಲ್ಲ ಪ್ರಯತ್ನಗಳನ್ನು ದೇವರು ತುಚ್ಛವಾಗಿ ಕಾಣುತ್ತಾನೆಂದು ಅವನು ವಾದಿಸಿದ್ದಾನೆ. (ಯೋಬ 15:15, 16; 22:3) ಅದು ಸುಳ್ಳಾಗಿದೆ ಮತ್ತು ಯೇಸು ಅದನ್ನು ಸತತವಾಗಿ ಅಲ್ಲಗಳೆದನು; ದೇವರು ಪ್ರತಿಯೊಬ್ಬರನ್ನು ಅಮೂಲ್ಯವಾಗಿ ವೀಕ್ಷಿಸುತ್ತಾನೆ. (ಮತ್ತಾಯ 10:29-31 ಓದಿ.) ನಿಮ್ಮಲ್ಲಿರುವ ಬಲಹೀನತೆಯ ಪ್ರಜ್ಞೆಯು ನಿಮ್ಮಲ್ಲಿ ದೀನಭಾವವನ್ನು ಮೂಡಿಸಿ ಯೆಹೋವನ ಸಹಾಯದಿಂದ ಪ್ರಗತಿಮಾಡುವ ನಿರ್ಧಾರವನ್ನು ಬಲಗೊಳಿಸಬೇಕು. (2 ಕೊರಿಂ. 12:7-10) ಒಂದುವೇಳೆ ಆರೋಗ್ಯದ ಸಮಸ್ಯೆಯು ನೀವು ಮಾಡಸಾಧ್ಯವಿರುವುದನ್ನು ಕಡಿಮೆಗೊಳಿಸಿರುವಲ್ಲಿ ಯೋಗ್ಯ ಗುರಿಗಳನ್ನು ಇಡಿರಿ; ಆದರೆ ಬಿಟ್ಟುಕೊಡಬೇಡಿ ಅಥವಾ ನಿಮ್ಮ ಪ್ರೀತಿ ತಣ್ಣಗಾಗುವಂತೆ ಬಿಡಬೇಡಿ.
ಆಭಾರಿಗಳಾಗಿರಲು ಇನ್ನೂ ಅನೇಕ ಕಾರಣಗಳು
17 ಮೊದಲು ನಿಮಗಿದ್ದ ಪ್ರೀತಿಯನ್ನು ಬೆಳೆಸುತ್ತಾ ಮುಂದುವರಿಯುವುದರಿಂದ ಮಹಾ ಪ್ರಯೋಜನಗಳು ಸಿಗಲಿವೆ. ದೇವರ ಕುರಿತಾದ ಜ್ಞಾನವನ್ನು ಮತ್ತು ಆತನ ಪ್ರೀತಿಯ ಮಾರ್ಗದರ್ಶನಕ್ಕಾಗಿರುವ ಗಣ್ಯತೆಯನ್ನು ನೀವು ಹೆಚ್ಚಿಸಬಲ್ಲಿರಿ. (ಜ್ಞಾನೋಕ್ತಿ 2:1-9; 3:5, 6 ಓದಿ.) “[ಯೆಹೋವನ ನ್ಯಾಯವಿದಾಯಕ ನಿರ್ಣಯಗಳನ್ನು] ಕೈಕೊಳ್ಳುವದರಿಂದ ಬಹಳ ಫಲ ಉಂಟಾಗುತ್ತದೆ” ಎಂದು ಕೀರ್ತನೆಗಾರನು ಹೇಳಿದನು. ಇದಲ್ಲದೆ, “ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ” ಮತ್ತು “ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ಸದಾಚಾರಿಗಳಾಗಿ ನಡೆಯುವವರು ಧನ್ಯರು.”—ಕೀರ್ತ. 19:7, 11; 119:1.
18 ಆಭಾರಿಯಾಗಿರಲು ನಿಮಗೆ ಅನೇಕ ಒಳ್ಳೇ ವಿಷಯಗಳಿವೆ ಎಂಬುದನ್ನು ನೀವು ಒಪ್ಪುತ್ತೀರಿ. ಲೋಕದಲ್ಲಿ ನಡೆಯುವ ಸಂಗತಿಗಳಿಗೆ ಕಾರಣವೇನೆಂದು ನಿಮಗೆ ತಿಳಿದಿದೆ. ದೇವರು ಇಂದು ತನ್ನ ಜನರಿಗೆ ಒದಗಿಸುವ ಆಧ್ಯಾತ್ಮಿಕ ಆರೈಕೆ ಮತ್ತು ಗಮನದಿಂದ ನೀವು ಪ್ರಯೋಜನ ಪಡೆಯುತ್ತಿದ್ದೀರಿ. ಯೆಹೋವನು ನಿಮ್ಮನ್ನು ತನ್ನ ಲೋಕವ್ಯಾಪಕ ಸಭೆಯೊಳಗೆ ತಂದು ಆತನ ಒಬ್ಬ ಸಾಕ್ಷಿಯಾಗಿರುವ ಸದವಕಾಶವನ್ನು ನೀಡಿರುವುದಕ್ಕಾಗಿ ನೀವು ಖಂಡಿತ ಆಭಾರಿಯಾಗಿದ್ದೀರಿ. ಎಷ್ಟೊಂದು ಆಶೀರ್ವಾದಗಳು! ಅದರ ಒಂದು ಪಟ್ಟಿಯನ್ನು ಮಾಡುವುದಾದರೆ ಅದು ತೀರ ದೊಡ್ಡದಾಗಿರುವುದು. ನಿಮಗೆ ದೊರೆತ ಆಶೀರ್ವಾದಗಳ ಕುರಿತು ಆಗಾಗ ಯೋಚಿಸುವುದು, “ನಿನಗಿರುವದನ್ನು [ಭದ್ರವಾಗಿ] ಹಿಡಿದುಕೊಂಡಿರು” ಎಂಬ ಬುದ್ಧಿವಾದವನ್ನು ಅನ್ವಯಿಸಲು ನಿಮಗೆ ನಿಶ್ಚಯವಾಗಿಯೂ ಸಹಾಯಮಾಡುವುದು.—ಪ್ರಕ. 3:11.
19 ವರುಷಗಳು ಗತಿಸಿದಂತೆ ನಿಮ್ಮ ನಂಬಿಕೆಯು ಹೇಗೆ ಬೆಳೆಯುತ್ತಾ ಬಂದಿದೆ ಎಂದು ಧ್ಯಾನಿಸುವುದು, ನಿಮಗಿರುವುದನ್ನು ಭದ್ರವಾಗಿ ಹಿಡಿದುಕೊಂಡಿರುವಂತೆ ಸಹಾಯಮಾಡಬಲ್ಲ ಒಂದು ಹೆಜ್ಜೆಯಾಗಿದೆ. ನಿಮ್ಮ ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಬೇರೆ ವಿಷಯಗಳ ಕಡೆಗೆ ಈ ಪತ್ರಿಕೆಯು ಆಗಿಂದಾಗ್ಗೆ ನಿಮ್ಮ ಗಮನವನ್ನು ಸೆಳೆದಿದೆ. ಅವುಗಳಲ್ಲಿ ಪ್ರಾರ್ಥನೆ, ಕ್ರೈಸ್ತ ಕೂಟಗಳಿಗೆ ಹಾಜರಿ ಮತ್ತು ಭಾಗವಹಿಸುವಿಕೆ, ಸಾರ್ವಜನಿಕ ಶುಶ್ರೂಷೆಯಲ್ಲಿ ಹುರುಪಿನಿಂದ ಒಳಗೂಡುವುದು ಸೇರಿವೆ. ಈ ವಿಷಯಗಳು, ಮೊದಲು ನಿಮಗಿದ್ದ ಪ್ರೀತಿಯನ್ನು ನವೀಕರಿಸಲು, ಚುರುಕುಗೊಳಿಸಲು ಮತ್ತು ಅದನ್ನು ಬೆಳೆಸುತ್ತಾ ಮುಂದುವರಿಯಲು ಸಹಾಯವನ್ನು ನೀಡಬಲ್ಲದು.—ಎಫೆ. 5:10; 1 ಪೇತ್ರ 3:15; ಯೂದ 20, 21.
ಹೇಗೆ ಉತ್ತರಿಸುವಿರಿ?
• ಯೆಹೋವನನ್ನು ನೀವು ಪ್ರೀತಿಸಲು ಆರಂಭಿಸಿದ ಕಾರಣಗಳು ನಿಮಗೀಗ ಹೇಗೆ ಉತ್ತೇಜನದ ಮೂಲವಾಗಿರಬಲ್ಲವು?
• ಗತ ವರುಷಗಳಲ್ಲಿ ನೀವು ಪಡೆದ ಅನುಭವಗಳ ಕುರಿತು ಯೋಚಿಸುವುದು ನಿಮಗೆ ಯಾವುದನ್ನು ಮಂದಟ್ಟುಮಾಡುತ್ತದೆ?
• ದೇವರ ಕಡೆಗಿನ ನಿಮ್ಮ ಪ್ರೀತಿಯನ್ನು ನೀವು ಏಕೆ ಪರೀಕ್ಷಿಸಬೇಕು?
[ಅಧ್ಯಯನ ಪ್ರಶ್ನೆಗಳು]
1, 2. ಯೆಹೋವನ ಕುರಿತು ಕಲಿಯುತ್ತಿದ್ದ ವಿಷಯವು ಸತ್ಯವೆಂದು ಮಂದಟ್ಟಾದಾಗ ನಿಮಗೆ ಹೇಗನಿಸಿತು?
3. ಯೇಸು ಎಫೆಸ ಸಭೆಯವರಿಗೆ ಸಂದೇಶವನ್ನು ಕಳುಹಿಸಿದಾಗ ಅಲ್ಲಿ ಯಾವ ಪರಿಸ್ಥಿತಿ ಇತ್ತು?
4. ಯೇಸು ಎಫೆಸದವರಿಗೆ ನೀಡಿದ ಸಲಹೆ ಇಂದು ಏಕೆ ಪ್ರಾಮುಖ್ಯವಾಗಿದೆ?
5, 6. (ಎ) ಪ್ರತಿಯೊಬ್ಬ ಕ್ರೈಸ್ತನು ಯಾವುದನ್ನು ಮಂದಟ್ಟುಮಾಡಿಕೊಳ್ಳಬೇಕು? (ಬಿ) ಯೆಹೋವನ ಸಾಕ್ಷಿಗಳು ಸತ್ಯವನ್ನೇ ಕಲಿಸುತ್ತಾರೆಂಬುದನ್ನು ನಿಮಗೆ ಯಾವುದು ಮನಗಾಣಿಸಿತು? (ಸಿ) ಒಬ್ಬ ವ್ಯಕ್ತಿಯು ತನಗಿದ್ದ ಮೊದಲ ಪ್ರೀತಿಯನ್ನು ಚುರುಕುಗೊಳಿಸುವಂತೆ ಯಾವುದು ಸಹಾಯಮಾಡಬಲ್ಲದು?
7. ಸತ್ಯದ ಕಡೆಗಿನ ನಮ್ಮ ಮೊದಲ ಪ್ರೀತಿಯನ್ನು ನಾವು ಏಕೆ ಬಲಪಡಿಸಬೇಕು, ಮತ್ತು ಹೇಗೆ ಬಲಪಡಿಸಬಲ್ಲೆವು?
8. ಯೆಹೋವನು ತನ್ನ ಕುರಿತು ಮೋಶೆಗೆ ಏನಂದನು, ಮತ್ತು ಇಸ್ರಾಯೇಲ್ಯರು ಹೇಗೆ ಯೆಹೋವನನ್ನು ಅತಿ ನಿಕಟವಾಗಿ ತಿಳಿದುಕೊಂಡರು?
9, 10. ದೇವರನ್ನು ತಿಳಿದುಕೊಳ್ಳುವಂತೆ ಯಾವ ರೀತಿಯ ಸನ್ನಿವೇಶ ಒಬ್ಬನಿಗೆ ಸಹಾಯಮಾಡಬಲ್ಲದು, ಮತ್ತು ಅಂಥ ಅನುಭವಗಳನ್ನು ನೆನಪಿಸಿಕೊಳ್ಳುವುದು ಏಕೆ ಪ್ರಾಮುಖ್ಯ?
11, 12. ಸತ್ಯದ ಕಡೆಗೆ ಕ್ರೈಸ್ತನೊಬ್ಬನ ಪ್ರೀತಿಯು ತಣ್ಣಗಾಗಿರುವುದಾದರೆ ಅದಕ್ಕೆ ಯಾವುದು ಕಾರಣವಾಗಿರಬಹುದು, ಮತ್ತು ಯೇಸು ಯಾವ ಸಲಹೆಯನ್ನು ನೀಡಿದನು?
13. ಯಾಕೋಬನು ದೇವರ ವಾಕ್ಯವನ್ನು ಯಾವುದಕ್ಕೆ ಹೋಲಿಸಿದನು?
14, 15. (ಎ) ನಿಮ್ಮ ಆಧ್ಯಾತ್ಮಿಕ ಸ್ಥಿತಿಯನ್ನು ಉತ್ತಮಗೊಳಿಸಲು ಬೈಬಲ್‌ಹೇಗೆ ಸಹಾಯಮಾಡಬಲ್ಲದು? (ಬಿ) ಯಾವ ಪ್ರಶ್ನೆಗಳ ಕುರಿತು ನೀವು ಧ್ಯಾನಿಸಬಹುದು?
16. ಬೈಬಲಿನ ಬೆಳಕಿನಲ್ಲಿ ಸ್ವಪರೀಕ್ಷೆಯನ್ನು ಮಾಡುವಾಗ ಯಾವ ಅಪಾಯದ ಕುರಿತು ಎಚ್ಚರದಿಂದಿರಬೇಕು?
17, 18. ಮೊದಲು ನಿಮಗಿದ್ದ ಪ್ರೀತಿಯನ್ನು ಬೆಳೆಸುವುದರಿಂದ ಯಾವ ಪ್ರಯೋಜನಗಳು ದೊರಕಲಿವೆ?
19. ದೇವರೊಂದಿಗಿನ ನಿಮ್ಮ ಸಂಬಂಧದ ಕುರಿತು ಧ್ಯಾನಿಸುವುದಲ್ಲದೆ, ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇರೆ ಯಾವುದು ಅಗತ್ಯ?
[ಪುಟ 23ರಲ್ಲಿರುವ ಚಿತ್ರ]
ಸತ್ಯದ ಯಾವ ಅಂಶವು ನಿಮ್ಮನ್ನು ಆಕರ್ಷಿಸಿತು ಮತ್ತು ಯಾವುದು ಅದನ್ನು ಮಂದಟ್ಟುಮಾಡಿತು?
[ಪುಟ 25ರಲ್ಲಿರುವ ಚಿತ್ರ]
ಸರಿಪಡಿಸಿಕೊಳ್ಳಬೇಕಾದ ಯಾವುದಾದರೂ ಸಂಗತಿಯನ್ನು ನೀವು ಕಾಣುತ್ತೀರೋ?