ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊರಿಂಥದವರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಕೊರಿಂಥದವರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಕೊರಿಂಥದವರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಕೊರಿಂಥದಲ್ಲಿದ್ದ ಸಭೆಯ ಆಧ್ಯಾತ್ಮಿಕ ಕ್ಷೇಮದ ಕುರಿತು ಅಪೊಸ್ತಲ ಪೌಲನಿಗೆ ಗಾಢ ಚಿಂತೆಯಿದೆ. ಅಲ್ಲಿನ ಸಹೋದರರ ಮಧ್ಯೆ ತಿಕ್ಕಾಟಗಳಿವೆ ಎಂಬ ಸುದ್ದಿ ಅವನ ಕಿವಿಗೆ ಬಿದ್ದಿದೆ. ಸಭೆಯಲ್ಲಿ ಅನೈತಿಕತೆಯನ್ನು ಸಹಿಸಲಾಗುತ್ತಿದೆ. ಕೆಲವೊಂದು ವಿಷಯಗಳ ಕುರಿತು ವಿಚಾರಿಸುತ್ತಾ ಆ ಸಭೆ ಅವನಿಗೆ ಪತ್ರವನ್ನೂ ಬರೆದಿದೆ. ಆದುದರಿಂದ, ಅವನು ತನ್ನ ಮೂರನೇ ಮಿಷನೆರಿ ಸಂಚಾರದ ಸಮಯದಲ್ಲಿ ಅಂದರೆ ಸಾ.ಶ. 55ರಷ್ಟಕ್ಕೆ ಎಫೆಸದಲ್ಲಿರುವಾಗ, ಕೊರಿಂಥದವರಿಗೆ ತನ್ನ ಪ್ರಥಮ ಪತ್ರ ಬರೆಯುತ್ತಾನೆ.

ಬಹುಶಃ ಕೆಲವೇ ತಿಂಗಳುಗಳ ನಂತರ ಬರೆದ ಎರಡನೆಯ ಪತ್ರವು, ಮೊದಲನೇ ಪತ್ರದ ಮುಂದುವರಿಕೆ ಆಗಿತ್ತು. ಪ್ರಥಮ ಶತಮಾನದ ಕೊರಿಂಥ ಸಭೆಯ ಒಳಗೂ ಹೊರಗೂ ಇದ್ದ ಪರಿಸ್ಥಿತಿಗಳು ನಮ್ಮ ಸಮಯಕ್ಕೆ ಬಹಳಷ್ಟು ವಿಧಗಳಲ್ಲಿ ಹೋಲುವುದರಿಂದ, ಪೌಲನು ಕೊರಿಂಥದವರಿಗೆ ಬರೆದ ಪತ್ರಗಳಲ್ಲಿರುವ ಸಂದೇಶ ನಮಗೂ ಬಹುಮೂಲ್ಯವಾಗಿದೆ.—ಇಬ್ರಿ. 4:12.

‘ಎಚ್ಚರವಾಗಿರಿ, ದೃಢವಾಗಿ ನಿಲ್ಲಿರಿ, ಬಲಗೊಳ್ಳಿರಿ’

(1 ಕೊರಿಂ. 1:1-16:24)

“ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು” ಎಂದು ಪೌಲನು ಬುದ್ಧಿಹೇಳುತ್ತಾನೆ. (1 ಕೊರಿಂ. 1:10) ಕ್ರೈಸ್ತ ಗುಣಗಳನ್ನು ಕಟ್ಟಬೇಕಾದ ‘ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರು.’ (1 ಕೊರಿಂ. 3:11-13) ಸಭೆಯಲ್ಲಿದ್ದ ಒಬ್ಬ ಜಾರನ ಕುರಿತಾಗಿ ಪೌಲನು ಹೇಳುವುದು: “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” (1 ಕೊರಿಂ. 5:13) ಏಕೆಂದರೆ “ದೇಹವು ಹಾದರಕ್ಕೋಸ್ಕರ ಇರುವಂಥದಲ್ಲ, ಕರ್ತನಿಗೋಸ್ಕರವಾಗಿದೆ” ಎಂದವನು ಹೇಳುತ್ತಾನೆ.—1 ಕೊರಿಂ. 6:13.

ಕೊರಿಂಥದವರು “ಬರೆದ ಸಂಗತಿಗಳನ್ನು ಕುರಿತು” ಪ್ರತಿಕ್ರಿಯಿಸುತ್ತಾ ಪೌಲನು ಮದುವೆಯಾಗುವುದರ ಕುರಿತು ಮತ್ತು ಮದುವೆಯಾಗದೆ ಉಳಿಯುವುದರ ಕುರಿತು ಬಲವಾದ ಸಲಹೆ ಕೊಡುತ್ತಾನೆ. (1 ಕೊರಿಂ. 7:1) ಕ್ರೈಸ್ತ ತಲೆತನ, ಕ್ರೈಸ್ತ ಕೂಟಗಳಲ್ಲಿರಬೇಕಾದ ಕ್ರಮ ಮತ್ತು ಪುನರುತ್ಥಾನದ ನಿಶ್ಚಿತತೆಯ ಕುರಿತು ತಿಳಿಸಿದ ಬಳಿಕ ಪೌಲನು ಈ ಬುದ್ಧಿವಾದ ಕೊಡುತ್ತಾನೆ: “ಎಚ್ಚರವಾಗಿರಿ, ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ. ಶೂರರಾಗಿರಿ, ಬಲಗೊಳ್ಳಿರಿ.”—1 ಕೊರಿಂ. 16:13.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:21—ನಂಬುವವರನ್ನು ರಕ್ಷಿಸಲಿಕ್ಕಾಗಿ ಯೆಹೋವನು ನಿಜವಾಗಿಯೂ “ಹುಚ್ಚುಮಾತು” ಬಳಸುತ್ತಾನೋ? ಇಲ್ಲ. ಆದರೆ “ಲೋಕವು ಜ್ಞಾನವೆನಿಸುವ ಮಾರ್ಗದಿಂದ ದೇವರನ್ನು ತಿಳುಕೊಳ್ಳದೆ ಹೋದ” ಕಾರಣ, ಜನರನ್ನು ರಕ್ಷಿಸಲಿಕ್ಕಾಗಿ ಆತನು ಬಳಸುವ ವಿಧಾನವು ಲೋಕಕ್ಕೆ ಹುಚ್ಚುತನದಂತೆ ತೋರುತ್ತದೆ.—ಯೋಹಾ. 17:25.

7:33, 34—ಮದುವೆಯಾಗಿರುವ ಸ್ತ್ರೀಪುರುಷರು ಚಿಂತಿಸುವ ‘ಪ್ರಪಂಚದ ಕಾರ್ಯಗಳು’ ಯಾವುದಾಗಿವೆ?ವಿವಾಹಿತ ಕ್ರೈಸ್ತರು ಚಿಂತಿಸಬೇಕಾಗುವ ದೈನಂದಿನ ಜೀವನದ ಕಾರ್ಯಕಲಾಪಗಳಿಗೆ ಪೌಲನು ಇಲ್ಲಿ ಸೂಚಿಸುತ್ತಿದ್ದನು. ಈ ಪ್ರಪಂಚದ ಕಾರ್ಯಗಳಲ್ಲಿ ಆಹಾರ, ಬಟ್ಟೆ, ವಸತಿ ಮುಂತಾದ ವಿಷಯಗಳು ಸೇರಿವೆಯೇ ಹೊರತು, ಕ್ರೈಸ್ತರು ವರ್ಜಿಸಬೇಕಾಗಿರುವ ಲೋಕದ ಕೆಟ್ಟ ಸಂಗತಿಗಳು ಸೇರಿಲ್ಲ.—1 ಯೋಹಾ. 2:15-17.

11:26—ಯೇಸುವಿನ ಮರಣದ ಜ್ಞಾಪಕಾಚರಣೆಯನ್ನು ಎಷ್ಟು ಸಾರಿ ಮಾಡಬೇಕು, ಮತ್ತು ಎಂದಿನ “ತನಕ”? ಯೇಸುವಿನ ಮರಣದ ಜ್ಞಾಪಕಾಚರಣೆಯನ್ನು ವರ್ಷದಲ್ಲಿ ಹಲವಾರು ಬಾರಿ ಮಾಡಲಾಗುವುದೆಂದು ಪೌಲನು ಹೇಳುತ್ತಿರಲಿಲ್ಲ. ಬದಲಿಗೆ, ಅಭಿಷಿಕ್ತ ಕ್ರೈಸ್ತರು ಜ್ಞಾಪಕಾಚರಣೆಯ ಕುರುಹುಗಳನ್ನು ನೈಸಾನ್‌ 14ರಂದು ವರ್ಷಕ್ಕೊಮ್ಮೆ ಸೇವಿಸುವಾಗೆಲ್ಲ ಅವರು ‘ಕರ್ತನ ಮರಣವನ್ನು ಪ್ರಸಿದ್ಧಿಪಡಿಸುತ್ತಿದ್ದಾರೆ’ ಎಂದು ಪೌಲನು ಹೇಳುತ್ತಿದ್ದನು. ಇದನ್ನು “ಆತನು ಬರುವ ತನಕ” ಅಂದರೆ, ಅವರ ಪುನರುತ್ಥಾನದ ಮೂಲಕ ಯೇಸು ಅವರನ್ನು ಪರಲೋಕಕ್ಕೆ ಬರಮಾಡಿಕೊಳ್ಳುವ ತನಕ ಮಾಡುವರು.—1 ಥೆಸ. 4:14-17.

13:13—ಪ್ರೀತಿಯು ಯಾವ ವಿಧದಲ್ಲಿ ನಂಬಿಕೆ ಹಾಗೂ ನಿರೀಕ್ಷೆಗಿಂತ ದೊಡ್ಡದಾಗಿದೆ? “ನಿರೀಕ್ಷಿಸುವ” ವಿಷಯಗಳು ಈಡೇರುವಾಗ ಮತ್ತು “ಭರವಸದಿಂದಿರುವ” ಸಂಗತಿಗಳು ಪೂರೈಸಲ್ಪಟ್ಟಾಗ ನಂಬಿಕೆ ಹಾಗೂ ನಿರೀಕ್ಷೆಗಳು ಕೊನೆಗೊಳ್ಳುತ್ತವೆ. (ಇಬ್ರಿ. 11:1) ಆದರೆ ಪ್ರೀತಿಯು ಶಾಶ್ವತವಾಗಿ ಉಳಿಯುವುದರಿಂದಲೇ ಅದು ನಂಬಿಕೆ ಹಾಗೂ ನಿರೀಕ್ಷೆಗಿಂತ ದೊಡ್ಡದಾಗಿದೆ.

15:29—‘ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದರ’ ಅರ್ಥವೇನು? ಪೌಲನು ಇಲ್ಲಿ, ದೀಕ್ಷಾಸ್ನಾನವಾಗದೇ ಸತ್ತುಹೋದ ವ್ಯಕ್ತಿಗಳಿಗೋಸ್ಕರ ಜೀವದಿಂದಿರುವವರು ದೀಕ್ಷಾಸ್ನಾನ ಪಡೆಯಬೇಕೆಂದು ಸೂಚಿಸುತ್ತಿರಲಿಲ್ಲ. ಬದಲಿಗೆ ಅವನು ತಿಳಿಸುತ್ತಿದ್ದದ್ದೇನೆಂದರೆ, ಆತ್ಮಾಭಿಷಿಕ್ತ ಕ್ರೈಸ್ತರು ತಮ್ಮ ಸಮಗ್ರತೆಯನ್ನು ಮರಣಪರ್ಯಂತ ಕಾಪಾಡಿಕೊಳ್ಳುವ ಒಂದು ಜೀವನಕ್ರಮದಲ್ಲಿ ತಲ್ಲೀನರಾಗುತ್ತಾರೆ. ಆ ಬಳಿಕವೇ ಅವರು ಪರಲೋಕಕ್ಕೆ ಪುನರುತ್ಥಾನಹೊಂದುತ್ತಾರೆ.

ನಮಗಾಗಿರುವ ಪಾಠಗಳು:

1:26-31; 3:3-9; 4:7. ನಮ್ಮ ಬಗ್ಗೆಯೇ ಹೆಚ್ಚಳಪಡುವುದರ ಬದಲು ನಮ್ರಭಾವದಿಂದ ಯೆಹೋವನಲ್ಲಿ ಹೆಚ್ಚಳಪಡುವುದು ಸಭೆಯ ಐಕ್ಯವನ್ನು ಪ್ರವರ್ಧಿಸುತ್ತದೆ.

2:3-5. ಪೌಲನು ಗ್ರೀಕ್‌ ತತ್ತ್ವಜ್ಞಾನ ಹಾಗೂ ಕಲಿಕೆಯ ಕೇಂದ್ರವಾಗಿದ್ದ ಕೊರಿಂಥದಲ್ಲಿ ಸಾಕ್ಷಿಕೊಡುತ್ತಿದ್ದಾಗ, ತನ್ನ ಕೇಳುಗರ ಮನವೊಪ್ಪಿಸಲು ಶಕ್ತನಾಗುವೆನೋ ಇಲ್ಲವೋ ಎಂಬುದರ ಕುರಿತು ಚಿಂತಿತನಾಗಿದ್ದನು. ಆದರೆ ಯಾವುದೇ ಬಲಹೀನತೆ ಇಲ್ಲವೇ ಭಯ ತನ್ನ ದೇವದತ್ತ ಶುಶ್ರೂಷೆಯನ್ನು ಪೂರೈಸುವುದನ್ನು ತಡೆಗಟ್ಟುವಂತೆ ಆತನು ಬಿಡಲಿಲ್ಲ. ಅದೇ ರೀತಿಯಲ್ಲಿ, ದೇವರ ರಾಜ್ಯದ ಸುವಾರ್ತೆ ಸಾರುವುದರಿಂದ ಯಾವುದೇ ಅಸಾಮಾನ್ಯ ಪರಿಸ್ಥಿತಿಗಳು ನಮ್ಮನ್ನು ತಡೆಗಟ್ಟುವಂತೆ ನಾವು ಬಿಡಬಾರದು. ಪೌಲನಂತೆಯೇ ನಾವು ಭರವಸೆಯಿಂದ ಸಹಾಯಕ್ಕಾಗಿ ಯೆಹೋವನೆಡೆಗೆ ನೋಡಬೇಕು.

2:16. ‘ಕ್ರಿಸ್ತನ ಮನಸ್ಸನ್ನು’ ಹೊಂದುವುದರ ಅರ್ಥ ಆತನ ಯೋಚನಾಧಾಟಿಯನ್ನು ತಿಳಿದುಕೊಳ್ಳುವುದು, ಆತನಂತೆಯೇ ಯೋಚಿಸುವುದು, ಆತನ ವ್ಯಕ್ತಿತ್ವವನ್ನು ಪೂರ್ಣವಾಗಿ ಗ್ರಹಿಸಿಕೊಳ್ಳುವುದು ಮತ್ತು ಆತನ ಮಾದರಿಯನ್ನು ಅನುಕರಿಸುವುದಾಗಿದೆ. (1 ಪೇತ್ರ 2:21; 4:1) ಆದುದರಿಂದ ನಾವು ಯೇಸುವಿನ ಜೀವನ ಹಾಗೂ ಶುಶ್ರೂಷೆಯನ್ನು ಶ್ರದ್ಧೆಯಿಂದ ಅಧ್ಯಯನ ಮಾಡುವುದು ಎಷ್ಟು ಮಹತ್ತ್ವಪೂರ್ಣ!

3:10-15; 4:17. ಬೋಧಿಸುವ ಮತ್ತು ಶಿಷ್ಯರನ್ನಾಗಿ ಮಾಡುವ ನಮ್ಮ ಸಾಮರ್ಥ್ಯವನ್ನು ನಾವು ವಿಶ್ಲೇಷಿಸಿ ಉತ್ತಮಗೊಳಿಸಬೇಕು. (ಮತ್ತಾ. 28:19, 20) ನಾವು ಸರಿಯಾಗಿ ಬೋಧಿಸದಿದ್ದರೆ, ನಮ್ಮ ವಿದ್ಯಾರ್ಥಿ ನಂಬಿಕೆಯ ಪರೀಕ್ಷೆಗಳನ್ನು ಪಾರಾಗಲಿಕ್ಕಿಲ್ಲ ಮತ್ತು ಆ ನಷ್ಟದಿಂದ ನಮಗೆಷ್ಟು ವೇದನೆ ಆಗುವುದೆಂದರೆ ನಮ್ಮ ರಕ್ಷಣೆಯಾಗುವುದಾದರೂ, ನಮ್ಮ ಸ್ಥಿತಿಯು ಎಲ್ಲವನ್ನು ಕಳೆದುಕೊಂಡು “ಬೆಂಕಿಯೊಳಗಿಂದ ತಪ್ಪಿಸಿಕೊಂಡವನ” ಹಾಗಿರುವುದು.

6:18. ‘ಜಾರತ್ವದಿಂದ ದೂರವಾಗಿ ಓಡಿಹೋಗುವುದರ’ ಅರ್ಥ ಕೇವಲ ಪೋರ್ನಿಯದ ಕೃತ್ಯಗಳಿಂದ ದೂರವಾಗಿರುವದು ಮಾತ್ರವಲ್ಲ, ಜಾರತ್ವಕ್ಕೆ ನಡೆಸಬಲ್ಲ ಯಾವುದೇ ವಿಷಯದಿಂದ ಅಂದರೆ ಅಶ್ಲೀಲ ಚಿತ್ರಣಗಳು, ನೈತಿಕ ಅಶುದ್ಧತೆ, ಅನೈತಿಕ ಯೋಚನೆಗಳು, ವಿರುದ್ಧ ಲಿಂಗದವರೊಂದಿಗೆ ಚೆಲ್ಲಾಟವಾಡುವುದು ಇಂಥವುಗಳಿಂದ ದೂರವಿರುವುದೇ ಆಗಿದೆ.—ಮತ್ತಾ. 5:28; ಯಾಕೋ. 3:17.

7:29. ರಾಜ್ಯಾಭಿರುಚಿಗಳು ಜೀವನದಲ್ಲಿ ಎರಡನೇ ಸ್ಥಾನಕ್ಕೆ ಇಳಿಯುವಷ್ಟರ ಮಟ್ಟಿಗೆ ವಿವಾಹಿತ ಸಂಗಾತಿಗಳು ತಮ್ಮದೇ ಪ್ರಪಂಚದಲ್ಲಿ ಮುಳುಗಿರಬಾರದು.

10:8-11. ಇಸ್ರಾಯೇಲ್ಯರು ಮೋಶೆಆರೋನರ ವಿರುದ್ಧ ಗುಣುಗುಟ್ಟಿದಾಗ ಯೆಹೋವನಿಗೆ ತುಂಬ ಸಿಟ್ಟುಬಂತು. ಆದುದರಿಂದ ನಾವು ಗುಣುಗುಟ್ಟುವ ರೂಢಿಯನ್ನು ಮಾಡಿಕೊಳ್ಳದಿರುವುದು ವಿವೇಕಯುತ.

16:2. ರಾಜ್ಯಾಭಿರುಚಿಗಳ ಪ್ರವರ್ಧನೆಗಾಗಿ ಕಾಣಿಕೆಗಳನ್ನು ಕೊಡುವುದರ ಕುರಿತು ಮುಂಚಿತವಾಗಿ ಯೋಜಿಸಿ, ಅದನ್ನು ಕ್ರಮಬದ್ಧ ರೀತಿಯಲ್ಲಿ ಮಾಡಿದರೆ ಅವುಗಳನ್ನು ತಪ್ಪದೇ ಕೊಡಶಕ್ತರಾಗುವೆವು.

“ಕ್ರಮಪಡಿಸಿಕೊಳ್ಳಿರಿ”

(2 ಕೊರಿಂ. 1:1-13:14)

ಶಿಕ್ಷೆ ಪಡೆದಿರುವ ಒಬ್ಬ ಪಶ್ಚಾತ್ತಾಪಿ ತಪ್ಪಿತಸ್ಥನನ್ನು ‘ಮನ್ನಿಸಿ, ಸಂತೈಸ’ಬೇಕೆಂದು ಪೌಲನು ಕೊರಿಂಥದವರಿಗೆ ಹೇಳುತ್ತಾನೆ. ಅವನ ಪ್ರಥಮ ಪತ್ರದಿಂದ ಅವರಿಗೆ ನೋವಾಗಿದ್ದರೂ, ಅವರು “ದುಃಖಪಟ್ಟು ಬೇರೆ ಮನಸ್ಸನ್ನು ಹೊಂದಿದ್ದಕ್ಕಾಗಿ” ಇಲ್ಲವೇ ಪಶ್ಚಾತ್ತಾಪಪಟ್ಟದ್ದಕ್ಕಾಗಿ ಪೌಲನು ಸಂತೋಷ ವ್ಯಕ್ತಪಡಿಸುತ್ತಾನೆ.—2 ಕೊರಿಂ. 2:6, 7; 7:8, 9.

ಕೊರಿಂಥದವರು ‘ಎಲ್ಲಾ ವಿಷಯಗಳಲ್ಲಿ ಹೇಗೆ ಸಮೃದ್ಧರಾಗಿದ್ದರೋ’ ಹಾಗೆಯೇ “ಧರ್ಮಕಾರ್ಯದಲ್ಲಿಯೂ” ಅಂದರೆ ಕೊಡುವುದರಲ್ಲಿ “ಸಮೃದ್ಧರಾಗಿ”ರುವಂತೆ ಪೌಲನು ಉತ್ತೇಜಿಸುತ್ತಾನೆ. ವಿರೋಧಿಗಳಿಗೆ ಉತ್ತರ ನೀಡಿದ ಬಳಿಕ “ಸಂತೋಷಪಡಿರಿ, ಕ್ರಮಪಡಿಸಿಕೊಳ್ಳಿರಿ; ಧೈರ್ಯವುಳ್ಳವರಾಗಿರಿ, ಒಂದೇ ಮನಸ್ಸುಳ್ಳವರಾಗಿರಿ, ಸಮಾಧಾನದಿಂದಿರಿ” ಎಂಬ ಕೊನೆ ಬುದ್ಧಿಮಾತನ್ನು ಎಲ್ಲರಿಗೂ ಹೇಳುತ್ತಾನೆ.—2 ಕೊರಿಂ. 8:7; 13:11.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

2:15, 16—ನಾವು “ಕ್ರಿಸ್ತನ ಪರಿಮಳ” ಆಗಿರುವುದು ಹೇಗೆ? ಹೇಗೆಂದರೆ ನಾವು ಬೈಬಲಿಗನುಸಾರ ನಡೆಯುತ್ತೇವೆ ಮತ್ತು ಅದರ ಸಂದೇಶವನ್ನು ಬಿತ್ತರಿಸುವುದರಲ್ಲಿ ಪಾಲ್ಗೊಳ್ಳುತ್ತೇವೆ. ಅಂಥ “ಪರಿಮಳ” ಅನೀತಿವಂತರಿಗೆ ಅಸಹ್ಯಕರ ವಾಸನೆಯಾಗಿದ್ದರೂ ಯೆಹೋವನಿಗೂ ಪ್ರಾಮಾಣಿಕ ಹೃದಯದ ಜನರಿಗೂ ಸುಗಂಧವಾಗಿದೆ.

5:16ಅಭಿಷಿಕ್ತ ಕ್ರೈಸ್ತರು “ಯಾರನ್ನೂ ಶರೀರಸಂಬಂಧವಾಗಿ ಅರಿತುಕೊಳ್ಳುವದಿಲ್ಲ” ಹೇಗೆ? ಅವರು ಜನರನ್ನು ಶಾರೀರಿಕ ದೃಷ್ಟಿಕೋನದಿಂದ ನೋಡುವುದಿಲ್ಲ ಅಂದರೆ, ಹಣ, ಜಾತಿ, ಬುಡಕಟ್ಟು ಇಲ್ಲವೇ ರಾಷ್ಟ್ರೀಯತೆಯ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಜೊತೆ ವಿಶ್ವಾಸಿಗಳೊಂದಿಗಿನ ಆಧ್ಯಾತ್ಮಿಕ ಸಂಬಂಧವೇ ಅವರಿಗೆ ಪ್ರಾಮುಖ್ಯ.

11:1, 16; 12:11ಪೌಲನು ಕೊರಿಂಥದವರೊಂದಿಗೆ ಬುದ್ಧಿಹೀನನಾಗಿ ನಡೆದುಕೊಂಡನೋ? ಇಲ್ಲ. ಆದರೆ ತನ್ನ ಅಪೊಸ್ತಲತನವನ್ನು ಸಮರ್ಥಿಸಲಿಕ್ಕಾಗಿ ಅವನು ಏನು ಹೇಳಬೇಕಾಯಿತೋ ಅದರಿಂದಾಗಿ ಅವನು ತನ್ನನ್ನೇ ಹೊಗಳಿಕೊಳ್ಳುತ್ತಿದ್ದಾನೆ ಮತ್ತು ಬುದ್ಧಿಹೀನನಾಗಿದ್ದಾನೆಂದು ಕೆಲವರಿಗೆ ತೋರಿರಬಹುದು.

12:1-4—‘ಪರದೈಸಕ್ಕೆ ಒಯ್ಯಲ್ಪಟ್ಟವನು’ ಯಾರು? ಇಂಥ ದರ್ಶನವನ್ನು ಬೇರಾರೂ ಪಡೆದಿರುವುದರ ಬಗ್ಗೆ ಬೈಬಲ್‌ ಹೇಳದೆ ಇರುವುದರಿಂದ ಮತ್ತು ಮುಂದಿನ ವಚನಗಳಲ್ಲಿ ಪೌಲನು ತನ್ನ ಅಪೊಸ್ತಲತನವನ್ನು ಸಮರ್ಥಿಸುತ್ತಿರುವುದರಿಂದ ಅವನು ಬಹುಶಃ ತನ್ನ ಸ್ವಂತ ಅನುಭವ ಹೇಳುತ್ತಿದ್ದನು. ‘ಅಂತ್ಯಕಾಲದಲ್ಲಿ’ ಕ್ರೈಸ್ತ ಸಭೆಯು ಅನುಭವಿಸುವ ಆಧ್ಯಾತ್ಮಿಕ ಪರದೈಸನ್ನು ಪೌಲನು ದರ್ಶನದಲ್ಲಿ ನೋಡಿದ್ದಿರಬಹುದು.—ದಾನಿ. 12:4.

ನಮಗಾಗಿರುವ ಪಾಠಗಳು:

3:5. ಈ ವಚನದ ಮೂಲತತ್ತ್ವವು, ಯೆಹೋವನು ಕ್ರೈಸ್ತರನ್ನು ಶುಶ್ರೂಷೆಗಾಗಿ ತನ್ನ ವಾಕ್ಯ, ಪವಿತ್ರಾತ್ಮ ಮತ್ತು ಸಂಘಟನೆಯ ಭೂಭಾಗದ ಮೂಲಕ ಸಮರ್ಥಗೊಳಿಸುತ್ತಾನೆಂದು ತಿಳಿಸುತ್ತಿದೆ. (ಯೋಹಾ. 16:7; 2 ತಿಮೊ. 3:16, 17) ನಾವು ಬೈಬಲ್‌ ಮತ್ತು ಬೈಬಲ್‌ ಆಧರಿತ ಪ್ರಕಾಶನಗಳನ್ನು ಶ್ರದ್ಧೆಯಿಂದ ಅಧ್ಯಯನಮಾಡುವುದು, ಪವಿತ್ರಾತ್ಮಕ್ಕಾಗಿ ಪಟ್ಟುಬಿಡದೆ ಪ್ರಾರ್ಥನೆಮಾಡುವುದು ಮತ್ತು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗಿ ಅದರಲ್ಲಿ ಪಾಲ್ಗೊಳ್ಳುವುದು ಒಳ್ಳೇದು.—ಕೀರ್ತ. 1:1-3; ಲೂಕ 11:10-13; ಇಬ್ರಿ. 10:24, 25.

4:16. ಯೆಹೋವನು ‘ನಮ್ಮ ಆಂತರ್ಯವನ್ನು ದಿನೇದಿನೇ ಹೊಸದಾಗಿಸುತ್ತಾ’ ಇರಲು ನಾವು ಕ್ರಮವಾಗಿ ಆತನ ಏರ್ಪಾಡುಗಳ ಪೂರ್ಣ ಪ್ರಯೋಜನವನ್ನು ತೆಗೆದುಕೊಳ್ಳಬೇಕು. ಇದರರ್ಥ, ಆಧ್ಯಾತ್ಮಿಕ ವಿಷಯಗಳನ್ನು ಪರಿಗಣಿಸುವುದನ್ನು ಒಂದು ದಿನವೂ ತಪ್ಪಿಸಬಾರದು.

4:17, 18. ಸಂಕಟವು ‘ಕ್ಷಣಮಾತ್ರ ಹಾಗೂ ಹಗುರವಾಗಿದೆ’ ಎಂಬುದನ್ನು ನೆನಪಿನಲ್ಲಿಟ್ಟರೆ, ಕಷ್ಟದ ಸಮಯದಲ್ಲಿ ಯೆಹೋವನಿಗೆ ನಂಬಿಗಸ್ತರಾಗಿರಲು ನಮಗೆ ಸಹಾಯವಾಗುವುದು.

5:1-5. ಅಭಿಷಿಕ್ತ ಕ್ರೈಸ್ತರಿಗೆ ಸ್ವರ್ಗೀಯ ಜೀವನದ ತಮ್ಮ ನಿರೀಕ್ಷೆಯ ಕುರಿತು ಇರುವ ಭಾವನೆಗಳನ್ನು ಪೌಲನು ಎಷ್ಟು ಸೊಗಸಾಗಿ ವರ್ಣಿಸುತ್ತಾನೆ!

10:13. ಹೆಚ್ಚಿನ ಪ್ರಚಾರಕರ ಅಗತ್ಯವಿರುವ ಕ್ಷೇತ್ರಕ್ಕೆ ನಮ್ಮನ್ನು ನೇಮಿಸಲಾಗದಿರುವಾಗ, ನಮ್ಮ ಸಭೆಗೆ ನೇಮಿಸಲಾಗಿರುವ ಟೆರಿಟೊರಿಯಲ್ಲಿ ಮಾತ್ರ ನಾವು ಕೆಲಸಮಾಡಬೇಕೆಂಬುದು ಒಂದು ಸಾಮಾನ್ಯ ನಿಯಮ.

13:5. ‘ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಲಿಕ್ಕಾಗಿ’ ನಮ್ಮ ನಡತೆ ಬೈಬಲಿನೊಂದಿಗೆ ಹೊಂದಿಕೆಯಲ್ಲಿದೆಯೋ ಎಂಬುದನ್ನು ಹೋಲಿಸಿನೋಡಬೇಕು. ‘ನಮ್ಮನ್ನೇ ಪರಿಶೋಧಿಸಿಕೊಳ್ಳಲಿಕ್ಕಾಗಿ’ ನಾವು ನಮ್ಮ ಆಧ್ಯಾತ್ಮಿಕತೆಯ ಮಟ್ಟವನ್ನು ಪರೀಕ್ಷಿಸಬೇಕು. ಇದರಲ್ಲಿ, ನಮ್ಮ ‘ಜ್ಞಾನೇಂದ್ರೀಯಗಳು’ ಎಷ್ಟು ತೀಕ್ಷ್ಣವಾಗಿವೆ ಹಾಗೂ ನಮ್ಮ ನಂಬಿಕೆಯ ಕೃತ್ಯಗಳು ಎಷ್ಟು ವೈವಿಧ್ಯಮಯವಾಗಿವೆ ಮತ್ತು ಯಾವ ಗುಣಮಟ್ಟದ್ದಾಗಿವೆ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಸೇರಿದೆ. (ಇಬ್ರಿ. 5:14; ಯಾಕೋ. 1:22-25) ಪೌಲನ ಬಲವಾದ ಬುದ್ಧಿವಾದವನ್ನು ಅನ್ವಯಿಸಿಕೊಳ್ಳುವುದರ ಮೂಲಕ ನಾವು ಸತ್ಯದ ಮಾರ್ಗದಲ್ಲಿ ನಡೆಯುತ್ತಾ ಇರಬಲ್ಲೆವು.

[ಪುಟ 26, 27ರಲ್ಲಿರುವ ಚಿತ್ರ]

“ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ” ಎಂಬ ಮಾತುಗಳ ಅರ್ಥವೇನು?​—⁠1 ಕೊರಿಂ. 11:26