ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಟ್ಟು ಸಂತೋಷದಿಂದಿರ್ರಿ

ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಟ್ಟು ಸಂತೋಷದಿಂದಿರ್ರಿ

ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಟ್ಟು ಸಂತೋಷದಿಂದಿರ್ರಿ

“ನಾ ನು ಪುನಃ ಸೋತೆ!” ಈ ಮಾತುಗಳನ್ನು ನೀವು ಎಷ್ಟೊಂದು ಬಾರಿ ಹೇಳಿದ್ದಿಲ್ಲ? ಬಹುಶಃ ಕೆಲಸವೊಂದನ್ನು ಪೂರೈಸಲಾಗದಿದ್ದಾಗ ನೀವು ಹೀಗೆ ಹೇಳಿರಬಹುದು. ಉದಾಹರಣೆಗೆ, ಒಬ್ಬ ಯುವ ಕ್ರೈಸ್ತ ತಾಯಿಗೆ ತನ್ನ ನವಜಾತ ಮಗುವಿನ ಆರೈಕೆ ಮಾಡುತ್ತಾ ಸುಸ್ತಾಗಿ ಆಧ್ಯಾತ್ಮಿಕ ಅಭಿರುಚಿಗಳಿಗೆ ಹೆಚ್ಚಿನ ಗಮನ ಕೊಡಲು ಕಷ್ಟವಾಗುತ್ತಿರಬಹುದು. ಇದರಿಂದ ಆಕೆಗೆ ಹತಾಶೆಯಾಗಬಹುದು. ಅಥವಾ ಒಬ್ಬ ಕ್ರೈಸ್ತನಿಗೆ ತಾನು ಅಸಮರ್ಥನು ಹಾಗೂ ಸಭೆಯಲ್ಲಿ ತಾನು ಸಾಕಷ್ಟನ್ನು ಮಾಡುತ್ತಿಲ್ಲ ಎಂಬ ಅನಿಸಿಕೆಯಿರಬಹುದು. ಇದಕ್ಕೆ ಕಾರಣ ಅವನು ಬೆಳೆದಿರುವ ರೀತಿಯಾಗಿರಬಹುದು. ಅಥವಾ ವೃದ್ಧ ಸಾಕ್ಷಿಯೊಬ್ಬಳನ್ನು ತೆಗೆದುಕೊಳ್ಳಿ. ತನಗೆ ಹೆಚ್ಚು ಶಕ್ತಿ ಸಾಮರ್ಥ್ಯವಿದ್ದಾಗ ಕ್ರೈಸ್ತ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಷ್ಟು ಪೂರ್ಣವಾಗಿ ಈಗ ಭಾಗವಹಿಸಲು ಆಗುತ್ತಿಲ್ಲ ಎಂಬ ದುಃಖ ಆಕೆಗಿರಬಹುದು. ಕ್ರಿಸ್ಟಿಯಾನಾ ಎಂಬವಳಿಗೆ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ಆಸೆಯಿದ್ದರೂ ಕೌಟುಂಬಿಕ ಪರಿಸ್ಥಿತಿಗಳಿಂದಾಗಿ ಅದನ್ನು ಮಾಡಲಾಗುತ್ತಿಲ್ಲ. ಆಕೆ ಹೇಳುವುದು: “ಪಯನೀಯರ್‌ ಸೇವೆಯನ್ನು ಉತ್ತೇಜಿಸುವ ಭಾಷಣ ಕೇಳಿದರೆ ಸಾಕು, ನನಗೆ ದುಃಖ ಉಮ್ಮಳಿಸಿ ಬರುತ್ತದೆ.”

ಇಂಥ ಭಾವನೆಗಳನ್ನು ನಾವು ಹೇಗೆ ನಿಭಾಯಿಸಬಹುದು? ಕೆಲವು ಕ್ರೈಸ್ತರು ತಮ್ಮ ಪರಿಸ್ಥಿತಿಗಳ ಬಗ್ಗೆ ಹೇಗೆ ವಾಸ್ತವಿಕ ನೋಟವನ್ನಿಟ್ಟುಕೊಂಡಿದ್ದಾರೆ? ಸಮತೋಲನವುಳ್ಳ ನಿರೀಕ್ಷಣೆಗಳನ್ನು ಇಟ್ಟುಕೊಳ್ಳುವುದರ ಪ್ರಯೋಜನಗಳೇನು?

ನ್ಯಾಯಸಮ್ಮತರಾಗಿರಿ

ನಾವು ಸಂತೋಷವನ್ನು ಹೇಗೆ ಕಾಪಾಡಿಕೊಳ್ಳಬಹುದೆಂಬುದನ್ನು ಅಪೊಸ್ತಲ ಪೌಲನು ತಿಳಿಸುತ್ತಾನೆ. ಅವನಂದದ್ದು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ. ನಿಮ್ಮ ಸೈರಣೆಯು [“ನ್ಯಾಯಸಮ್ಮತತೆಯು,” NW] ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ.” (ಫಿಲಿ. 4:4, 5) ದೇವರ ಸೇವೆಯಲ್ಲಿ ಸಂತೋಷ ಹಾಗೂ ತೃಪ್ತಿ ಪಡೆಯಲು, ನಮ್ಮ ಸಾಮರ್ಥ್ಯ ಮತ್ತು ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಡಬೇಕು. ನಾವು ನ್ಯಾಯಸಮ್ಮತವಲ್ಲದ ಗುರಿಗಳನ್ನಿಟ್ಟು ಅವುಗಳನ್ನು ಹೇಗಾದರೂ ಮಾಡಿ ತಲಪಲು ಪ್ರಯತ್ನಿಸುವುದಾದರೆ ಅನಾವಶ್ಯಕ ಚಿಂತೆಗೆ ಗುರಿಯಾಗುತ್ತೇವೆ. ಆದರೆ ಅದೇ ಸಮಯದಲ್ಲಿ, ಇತಿಮಿತಿಗಳನ್ನೇ ನೆಪವಾಗಿಟ್ಟು ನಮ್ಮ ಕುರಿತು ಅತಿಯಾದ ದಯಾಪರ ಮನೋಭಾವ ತಾಳಿ ಕ್ರೈಸ್ತ ಶುಶ್ರೂಷೆಯನ್ನು ಕಡಿಮೆಗೊಳಿಸದಂತೆಯೂ ಎಚ್ಚರವಹಿಸಬೇಕು.

ನಮ್ಮ ಪರಿಸ್ಥಿತಿಗಳು ಏನೇ ಆಗಿರಲಿ ನಾವು ಅತ್ಯುತ್ತಮವಾದುದ್ದನ್ನು ಅಂದರೆ ಪೂರ್ಣಪ್ರಾಣದ ಮತ್ತು ಮನಃಪೂರ್ವಕವಾದ ಸೇವೆ ಸಲ್ಲಿಸಬೇಕೆಂದು ಯೆಹೋವನು ಕೇಳಿಕೊಳ್ಳುತ್ತಾನೆ. (ಕೊಲೊ. 3:23, 24) ನಾವು ಯೆಹೋವನಿಗೆ, ಅತ್ಯುತ್ತಮಕ್ಕಿಂತ ಕಡಿಮೆ ಗುಣಮಟ್ಟದ ಸೇವೆ ಸಲ್ಲಿಸುತ್ತಿರುವಲ್ಲಿ ನಮ್ಮ ಸಮರ್ಪಣೆಗನುಸಾರ ಜೀವಿಸುತ್ತಿದ್ದೇವೆಂದು ಹೇಳಸಾಧ್ಯವಿಲ್ಲ. (ರೋಮಾ. 12:1) ಅಲ್ಲದೆ, ಹೀಗೆ ಮಾಡಿದರೆ ಪೂರ್ಣಪ್ರಾಣದ ಸೇವೆಯಿಂದ ಸಿಗುವ ಗಾಢ ತೃಪ್ತಿ, ನಿಜ ಸಂತೋಷ ಮತ್ತು ಇತರ ಹೇರಳ ಆಶೀರ್ವಾದಗಳಿಂದ ವಂಚಿತರಾಗುವೆವು.—ಜ್ಞಾನೋ. 10:22.

ಬೈಬಲಿನಲ್ಲಿ “ನ್ಯಾಯಸಮ್ಮತತೆ” ಎಂದು ಭಾಷಾಂತರಿಸಲಾದ ಪದ, ಪರಿಗಣನೆ ತೋರಿಸುವುದನ್ನು ಸೂಚಿಸುತ್ತದೆ. ಅದರ ಅಕ್ಷರಾರ್ಥವು “ಮಣಿಯುವುದು” ಎಂದಾಗಿದೆ. ಅತಿ ಕಟ್ಟುನಿಟ್ಟಿನವರು ಆಗಿರದಿರುವುದು ಎಂಬರ್ಥವನ್ನೂ ಆ ಪದ ಕೊಡುತ್ತದೆ. ಹೀಗೆ, ನಾವು ನ್ಯಾಯಸಮ್ಮತರಾಗಿರುವಲ್ಲಿ ನಮ್ಮ ಪರಿಸ್ಥಿತಿಗಳನ್ನು ಯೋಗ್ಯ ರೀತಿಯಲ್ಲಿ ತೂಗಿ ನೋಡುತ್ತೇವೆ. ಅದು ಕಷ್ಟಕರವೋ? ಕೆಲವರಿಗೆ ಇತರರ ಬಗ್ಗೆ ಪರಿಗಣನೆ ಇರುವುದಾದರೂ ಸ್ವತಃ ತಮಗೆ ಪರಿಗಣನೆ ತೋರಿಸಲು ಕಷ್ಟವೆನಿಸಬಹುದು. ಉದಾಹರಣೆಗೆ, ನಮ್ಮ ಆಪ್ತ ಮಿತ್ರನೊಬ್ಬನು ಹೊರಲಾಗದಷ್ಟು ಜವಾಬ್ದಾರಿಗಳಿಂದ ಬಳಲಿರುವುದು ನಮ್ಮ ಗಮನಕ್ಕೆ ಬಂದಿರಬಹುದು. ಆಗ, ಜೀವನದಲ್ಲಿ ಕೆಲವೊಂದು ಹೊಂದಾಣಿಕೆಗಳನ್ನು ಮಾಡುವಂತೆ ನಾವಾತನಿಗೆ ಸಹಾಯ ಮಾಡುವುದಿಲ್ಲವೋ? ತದ್ರೀತಿಯಲ್ಲಿ ನಾವು ನಮ್ಮ ಇತಿಮಿತಿಗಳನ್ನು ದಾಟುತ್ತಿದ್ದೇವೆ ಎಂಬ ಸೂಚನೆಗಳು ತೋರಿಬರುವಾಗ ಅವುಗಳನ್ನು ಗುರುತಿಸಲು ಕಲಿಯಬೇಕು.—ಜ್ಞಾನೋ. 11:17.

ನಾವು ಚಿಕ್ಕವರಿದ್ದಾಗ ಹೆತ್ತವರು ನಮ್ಮಿಂದ ಅತಿಯಾದದ್ದನ್ನು ಬಯಸಿದ್ದಲ್ಲಿ ಈಗ ದೊಡ್ಡವರಾದ ಮೇಲೆ ನಮ್ಮ ಇತಿಮಿತಿಗಳ ಕುರಿತು ನ್ಯಾಯಸಮ್ಮತ ನೋಟವನ್ನಿಟ್ಟುಕೊಳ್ಳುವುದು ಹೆಚ್ಚು ಕಷ್ಟಕರವಾದೀತು. ಬಾಲ್ಯದಲ್ಲಿ ಕೆಲವರಿಗೆ, ಹೆತ್ತವರ ಪ್ರೀತಿ ಸಿಗಬೇಕಾದರೆ ತಾವು ಮಾಡಿದ್ದಕ್ಕಿಂತಲೂ ಹೆಚ್ಚು ಮಾಡಬೇಕು ಮತ್ತು ಇನ್ನಷ್ಟು ಒಳ್ಳೆಯವರಾಗಬೇಕೆಂಬ ಭಾವನೆಯಿತ್ತು. ನಮಗೂ ಹಾಗೆ ಅನಿಸಿದ್ದಲ್ಲಿ, ಯೆಹೋವನಿಗೆ ನಮ್ಮ ಬಗ್ಗೆ ಇರುವ ನೋಟದ ಕುರಿತೂ ನಮಗೆ ತಪ್ಪಭಿಪ್ರಾಯವಿರಬಹುದು. ನಿಜಾಂಶವೇನೆಂದರೆ, ನಾವು ಮನಃಪೂರ್ವಕವಾಗಿ ಸಲ್ಲಿಸುವ ಸೇವೆಗಾಗಿ ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ. ಯೆಹೋವನು “ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ” ಎಂಬುದಾಗಿ ದೇವರ ವಾಕ್ಯವು ನಮಗೆ ಆಶ್ವಾಸನೆಯನ್ನೀಯುತ್ತದೆ. (ಕೀರ್ತ. 103:14) ನಮ್ಮ ಇತಿಮಿತಿಗಳೇನೆಂಬುದು ಆತನಿಗೆ ತಿಳಿದಿದೆ. ಇತಿಮಿತಿಗಳಿದ್ದರೂ ನಾವು ಹುರುಪಿನ ಸೇವೆ ಸಲ್ಲಿಸುವಾಗ ಆತನು ನಮ್ಮನ್ನು ಪ್ರೀತಿಸುತ್ತಾನೆ. ನಮ್ಮ ದೇವರು ನಿಷ್ಠುರ ಧಣಿಯಲ್ಲ ಎಂಬುದನ್ನು ನೆನಪಿನಲ್ಲಿಡುವುದು, ನಮ್ಮ ಇತಿಮಿತಿಗಳನ್ನು ನಮ್ರತೆಯಿಂದ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾ ನಾವು ನಮ್ಮಿಂದ ಅತಿಯಾದದ್ದನ್ನು ನಿರೀಕ್ಷಿಸದಂತೆ ಸಹಾಯ ಮಾಡುತ್ತದೆ.—ಮೀಕ 6:8.

ಆದಾಗ್ಯೂ ಕೆಲವರಿಗೆ ಅಂಥ ಸಮತೂಕದ ಮನೋಭಾವ ಬೆಳೆಸಿಕೊಳ್ಳಲು ಕಷ್ಟವಾಗುತ್ತದೆ. ನಿಮಗೂ ಕಷ್ಟವಾಗುತ್ತಿರುವಲ್ಲಿ, ನಿಮ್ಮನ್ನು ಚೆನ್ನಾಗಿ ತಿಳಿದಿರುವ ಅನುಭವಸ್ಥ ಕ್ರೈಸ್ತನ ಸಹಾಯವನ್ನೇಕೆ ತೆಗೆದುಕೊಳ್ಳಬಾರದು? (ಜ್ಞಾನೋ. 27:9) ಉದಾಹರಣೆಗೆ, ನೀವು ರೆಗ್ಯುಲರ್‌ ಪಯನೀಯರರಾಗಲು ಬಯಸುತ್ತೀರಾದರೆ ಅದೊಂದು ಅತ್ಯುತ್ಕೃಷ್ಟ ಗುರಿ! ಆ ಗುರಿ ಮುಟ್ಟಲು ಕಷ್ಟವಾಗುತ್ತದೋ? ಬಹುಶಃ ನಿಮ್ಮ ಜೀವನವನ್ನು ಸರಳೀಕರಿಸಲು ಸಹಾಯ ಬೇಕಾಗಿರಬಹುದು. ಇಲ್ಲವೇ ನಿಮಗಿರುವ ಹಲವು ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಈಗ ರೆಗ್ಯುಲರ್‌ ಪಯನೀಯರನಾಗುವುದು ಪ್ರಾಯೋಗಿಕವೋ ಅಲ್ಲವೋ ಎಂಬುದನ್ನು ಭರವಸಾರ್ಹ ಕ್ರೈಸ್ತ ಸ್ನೇಹಿತನೊಬ್ಬನು ನಿಮ್ಮೊಂದಿಗೆ ಚರ್ಚಿಸಬಹುದು. ಪಯನೀಯರ್‌ ಸೇವೆಯಲ್ಲಿ ಒಳಗೂಡಿರುವ ಹೆಚ್ಚಿನ ಚಟುವಟಿಕೆಗಳನ್ನು ನೀವು ಮಾಡಬಲ್ಲಿರೋ ಎಂಬುದನ್ನು ಇಲ್ಲವೇ ಅದಕ್ಕಾಗಿ ನೀವು ಯಾವ ಹೊಂದಾಣಿಕೆಗಳನ್ನು ಮಾಡಬೇಕು ಎಂಬುದನ್ನು ನಿರ್ಧರಿಸಲು ಅವರು ಸಹಾಯ ಮಾಡುವರು. ಹೆಂಡತಿ ತನ್ನ ಸಾಮರ್ಥ್ಯವನ್ನು ಗ್ರಹಿಸುವಂತೆ ಗಂಡನು ಸಹಾಯ ಮಾಡಶಕ್ತನು. ಉದಾಹರಣೆಗೆ, ಹೆಚ್ಚಿನ ಚಟುವಟಿಕೆಗಳಿರುವ ಹೊಸ ತಿಂಗಳನ್ನು ಆರಂಭಿಸುವ ಮುಂಚೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಂತೆ ಅವನು ಆಕೆಗೆ ಹೇಳಬಹುದು. ಇದು ಆಕೆಯನ್ನು ದೈಹಿಕವಾಗಿ ಬಲಗೊಳಿಸುವುದಲ್ಲದೆ ಶುಶ್ರೂಷೆಯಲ್ಲಿನ ಸಂತೋಷವನ್ನು ಕಾಪಾಡಿಕೊಳ್ಳುವಂತೆ ನೆರವು ನೀಡುವುದು.

ನಿಮ್ಮಿಂದ ಸಾಧ್ಯವಾಗುವ ವಿಷಯಗಳಿಗೆ ಗಮನಕೊಡಿ

ಇಳಿವಯಸ್ಸು ಅಥವಾ ಕ್ಷೀಣಿಸುತ್ತಿರುವ ಆರೋಗ್ಯವು ನಾವು ಯೆಹೋವನಿಗೆ ಸಲ್ಲಿಸುವ ಸೇವೆಯನ್ನು ಮಿತಗೊಳಿಸಬಹುದು. ಚಿಕ್ಕ ಮಕ್ಕಳಿರುವ ಹೆತ್ತವರು ನೀವಾಗಿರುವಲ್ಲಿ ನಿಮ್ಮ ಹೆಚ್ಚಿನ ಸಮಯ ಹಾಗೂ ಶಕ್ತಿ ಅವರ ಆರೈಕೆಯಲ್ಲಿ ಕಳೆಯುತ್ತದೆ. ಆದ್ದರಿಂದ ವೈಯಕ್ತಿಕ ಅಧ್ಯಯನ ಹಾಗೂ ಕ್ರೈಸ್ತ ಕೂಟಗಳಿಂದ ನಿಮಗೆ ಹೆಚ್ಚಿನ ಪ್ರಯೋಜನ ಸಿಗುತ್ತಿಲ್ಲ ಎಂದು ನಿಮಗನಿಸಬಹುದು. ಆದರೆ ನಿಮ್ಮ ಇತಿಮಿತಿಗಳ ಕುರಿತ ವಿಪರೀತ ಚಿಂತೆ, ನೀವು ಮಾಡಸಾಧ್ಯವಿರುವುದನ್ನೂ ಮಾಡದಂತೆ ತಡೆಯುತ್ತಿದೆಯೋ?

ಸಾವಿರಾರು ವರ್ಷಗಳ ಹಿಂದೆ ಒಬ್ಬ ಲೇವ್ಯನಿಗೆ ತನ್ನಿಂದ ಪೂರೈಸಲು ಅಸಾಧ್ಯವಾದ ಒಂದು ಆಸೆಯಿತ್ತು. ಪ್ರತಿ ವರ್ಷ ಎರಡು ವಾರ ದೇವಾಲಯದಲ್ಲಿ ಸೇವೆ ಸಲ್ಲಿಸುವ ಸುಯೋಗ ಅವನಿಗಿತ್ತು. ಆದಾಗ್ಯೂ ಆಲಯದ ವೇದಿಯ ಬಳಿ ಕಾಯಂ ನೆಲೆಸಬೇಕೆಂಬ ಬಯಕೆಯನ್ನು ಅವನು ವ್ಯಕ್ತಪಡಿಸಿದನು. (ಕೀರ್ತ. 84:1-3) ಅವನಿಗಿದ್ದ ಸೇವಾವಕಾಶದಲ್ಲೇ ತೃಪ್ತನಾಗಿರಲು ಈ ನಂಬಿಗಸ್ತ ಸೇವಕನಿಗೆ ಯಾವುದು ಸಹಾಯ ಮಾಡಿತು? ಆಲಯದ ಅಂಗಳದಲ್ಲಿ ಕಳೆಯಲು ಒಂದು ದಿನ ಸಿಗುವುದು ಕೂಡ ವಿಶೇಷ ಸುಯೋಗವೆಂಬುದನ್ನು ಅವನು ಮನಗಂಡನು. (ಕೀರ್ತ. 84:4, 5, 10) ಅದೇ ರೀತಿ ನಮ್ಮ ಇತಿಮಿತಿಗಳ ಕುರಿತೇ ಯೋಚಿಸುವ ಬದಲು ನಮಗೆ ಏನೆಲ್ಲಾ ಮಾಡಸಾಧ್ಯವಿದೆ ಎಂಬುದನ್ನು ಗ್ರಹಿಸಲು ಪ್ರಯತ್ನಿಸಿ ಅದಕ್ಕಾಗಿ ಆಭಾರಿಗಳಾಗಿರಬೇಕು.

ಕೆನಡದ ನೆರ್‌ಲಾಂಡ್‌ ಎಂಬ ಕ್ರೈಸ್ತ ಸಹೋದರಿಯ ಉದಾಹರಣೆಯನ್ನು ತೆಗೆದುಕೊಳ್ಳಿ. ಆಕೆ ಗಾಲಿಕುರ್ಚಿಯಲ್ಲೇ ಇರಬೇಕಾದದ್ದರಿಂದ ಶುಶ್ರೂಷೆಯಲ್ಲಿ ತಾನು ಸ್ವಲ್ಪವನ್ನೇ ಮಾಡುತ್ತಿದ್ದೇನೆಂಬ ಅನಿಸಿಕೆ ಆಕೆಗಿತ್ತು. ಆದಾಗ್ಯೂ ತನ್ನ ದೃಷ್ಟಿಕೋನವನ್ನು ಬದಲಾಯಿಸಿ ಹತ್ತಿರದ ಶಾಪಿಂಗ್‌ ಮಾಲ್‌ (ಅಂಗಡಿಗಳಿರುವ ವ್ಯಾಪಾರ ಕೇಂದ್ರ) ಅನ್ನು ತನ್ನ ವೈಯಕ್ತಿಕ ಟೆರಿಟೊರಿಯನ್ನಾಗಿ ಮಾಡಿದಳು. ಆಕೆ ವಿವರಿಸುವುದು: “ಶಾಪಿಂಗ್‌ ಮಾಲ್‌ನಲ್ಲಿ ಒಂದು ಬೆಂಚಿನ ಹತ್ತಿರ ನನ್ನ ಗಾಲಿಕುರ್ಚಿಯಲ್ಲಿ ಕುಳಿತಿರುತ್ತೇನೆ. ಅಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡು ವಿಶ್ರಮಿಸಲು ಬರುವವರಿಗೆ ಸಾಕ್ಷಿಕೊಡುವಾಗ ನನಗೆ ಸಂತೋಷವಾಗುತ್ತದೆ.” ಈ ತರಹದ ವಿಶಿಷ್ಟ ಶುಶ್ರೂಷೆಯಲ್ಲಿ ಭಾಗವಹಿಸುವುದು ನೆರ್‌ಲಾಂಡ್‌ಳಿಗೆ ತುಂಬ ಸಂತೃಪ್ತಿ ಕೊಡುತ್ತದೆ.

ಅಗತ್ಯವಿರುವಲ್ಲಿ ಹೊಂದಾಣಿಕೆಗಳನ್ನು ಮಾಡಿ

ಒಂದು ಹಾಯಿಹಡಗು ಗಾಳಿ ಬೀಸುವಾಗ ರಭಸದಿಂದ ಚಲಿಸುತ್ತದೆ. ಆದರೆ ಬಿರುಗಾಳಿ ಬೀಸುವಾಗ ಚುಕ್ಕಾಣಿ ಹಿಡಿದಿರುವ ನಾವಿಕನು ಅದರ ಹಾಯಿಗಳನ್ನು ಸರಿಹೊಂದಿಸಲೇಬೇಕಾಗುತ್ತದೆ. ಅವನಿಗೆ ಗಾಳಿಯ ಮೇಲೆ ನಿಯಂತ್ರಣವಿರದಿದ್ದರೂ ಹೊಂದಾಣಿಕೆಗಳನ್ನು ಮಾಡುವ ಮೂಲಕ ತನ್ನ ಹಡಗನ್ನು ನಿಯಂತ್ರಣದಲ್ಲಿಡಬಲ್ಲನು. ತದ್ರೀತಿ, ನಮ್ಮ ಜೀವನದಲ್ಲಿ ಎದುರಾಗುವ ಬಿರುಗಾಳಿಗಳಂಥ ಸನ್ನಿವೇಶಗಳ ಮೇಲೆ ನಮಗೆ ನಿಯಂತ್ರಣವಿರಲಿಕ್ಕಿಲ್ಲ. ಆದರೆ ನಮ್ಮ ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕ ಸಾಮರ್ಥ್ಯಗಳನ್ನು ಉಪಯೋಗಿಸುವ ವಿಧವನ್ನು ಸರಿಹೊಂದಿಸುವ ಮೂಲಕ ನಮ್ಮ ಜೀವನವನ್ನು ಸಾಧ್ಯವಾದಷ್ಟುಮಟ್ಟಿಗೆ ನಿಯಂತ್ರಣದಲ್ಲಿಡಬಹುದು. ದೀನರಾಗಿ ನಮ್ಮ ಹೊಸ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುವಾಗ, ದೇವರ ಸೇವೆಯಲ್ಲಿ ಸಂತೃಪ್ತಿ ಹಾಗೂ ಸಂತೋಷವನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯವಾಗುವುದು.—ಜ್ಞಾನೋ. 11:2.

ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿ. ನಮಗೆ ಕಡಿಮೆ ತ್ರಾಣವಿರುವಲ್ಲಿ, ಕ್ರೈಸ್ತ ಕೂಟಗಳಿರುವ ದಿನದಂದು ಸುಸ್ತುಗೊಳಿಸುವಂಥ ಕೆಲಸ ಮಾಡದಿರುವ ಮೂಲಕ ಕೂಟಗಳಿಗೆ ಹಾಜರಾಗಲು ಶಕ್ತರಾಗುವೆವು. ಇದರಿಂದ ನಾವು ಜೊತೆ ಕ್ರೈಸ್ತರ ಸಹವಾಸವನ್ನು ಪೂರ್ಣಮಟ್ಟಿಗೆ ಆನಂದಿಸಲು ಸಾಧ್ಯವಾಗುವುದು. ಇಲ್ಲವೇ, ಒಬ್ಬ ತಾಯಿಗೆ ತನ್ನ ಮಗು ಅಸ್ವಸ್ಥವಾಗಿರುವುದರಿಂದ ಮನೆಮನೆಯ ಶುಶ್ರೂಷೆಯಲ್ಲಿ ಭಾಗವಹಿಸಲು ಅಸಾಧ್ಯವಾಗಿರುವಲ್ಲಿ ಆಗೇನು? ಮಗು ಮಲಗಿರುವಾಗ ಆಕೆ ಟೆಲಿಫೋನ್‌ ಸಾಕ್ಷಿಕಾರ್ಯವನ್ನು ಮಾಡಬಹುದು. ಇದನ್ನು ಮಾಡಲು ತನ್ನನ್ನು ಜೊತೆಗೂಡುವಂತೆ ಕ್ರೈಸ್ತ ಸಹೋದರಿಯೊಬ್ಬಳನ್ನು ಮನೆಗೆ ಆಮಂತ್ರಿಸಬಹುದು.

ನಿಮ್ಮ ಪರಿಸ್ಥಿತಿಗಳಿಂದಾಗಿ, ಕ್ರೈಸ್ತ ಕೂಟಗಳಲ್ಲಿ ಪರಿಗಣಿಸಲಾಗುವ ಎಲ್ಲಾ ಮಾಹಿತಿಯನ್ನು ಮುಂಚಿತವಾಗಿ ತಯಾರಿಮಾಡಲು ಸಾಧ್ಯವಾಗದಿರುವಲ್ಲಿ ಆಗೇನು? ನಿಮ್ಮಿಂದ ಎಷ್ಟನ್ನು ತಯಾರಿಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ನಿರ್ಧರಿಸಿ ಅದನ್ನು ಸಾಧ್ಯವಾದಷ್ಟು ಉತ್ತಮವಾಗಿ ತಯಾರಿಸಿರಿ. ನಮ್ಮ ಸದ್ಯದ ಗುರಿಗಳನ್ನು ಸರಿಹೊಂದಿಸಿಕೊಳ್ಳುವ ಮೂಲಕ ನಾವು ಕ್ರಿಯಾಶೀಲರೂ ಸಂತೋಷಿತರೂ ಆಗಿರಸಾಧ್ಯವಿದೆ.

ನಮ್ಮ ಗುರಿಗಳನ್ನು ಸರಿಹೊಂದಿಸಲು ದೃಢಸಂಕಲ್ಪ ಮತ್ತು ಪ್ರಯತ್ನ ಅಗತ್ಯ. ಫ್ರಾನ್ಸ್‌ನ ಸರ್ಸ್‌ ಮತ್ತು ಆ್ಯನ್ಯೀಸ್‌ ಎಂಬ ದಂಪತಿಯು ತಮ್ಮ ಯೋಜನೆಗಳಲ್ಲಿ ದೊಡ್ಡ ಬದಲಾವಣೆ ಮಾಡಬೇಕಾಯಿತು. ಸರ್ಸ್‌ ಹೇಳುವುದು: “ಆ್ಯನ್ಯೀಸ್‌ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಾಗ ಮಿಷನೆರಿಗಳಾಗುವ ನಮ್ಮ ಕನಸು ಛಿದ್ರಗೊಂಡಿತು.” ಅವರು ಹೇಗೆ ಹೊಸ ಗುರಿಗಳನ್ನಿಟ್ಟರು ಎಂಬುದನ್ನು, ಈಗ ಇಬ್ಬರು ಹೆಣ್ಮಕ್ಕಳ ತಂದೆಯಾಗಿರುವ ಸರ್ಸ್‌ ವಿವರಿಸುತ್ತಾನೆ. ಅವನು ಹೇಳುವುದು: “ವಿದೇಶದಲ್ಲಿ ಸೇವೆ ಮಾಡಲು ಅಶಕ್ತರಾದದ್ದರಿಂದ ನಾವು ಸ್ವದೇಶದಲ್ಲೇ ‘ಮಿಷನೆರಿಗಳಾಗಿರಲು’ ನಿರ್ಧರಿಸಿದೆವು. ಆದ್ದರಿಂದ ನಾವು ಒಂದು ವಿದೇಶಿ ಭಾಷೆಯ ಗುಂಪನ್ನು ಸೇರಿದೆವು.” ಈ ಹೊಸ ಗುರಿಯನ್ನಿಟ್ಟದ್ದರಿಂದ ಅವರು ಪ್ರಯೋಜನ ಪಡೆದರೋ? ಸರ್ಸ್‌ ತಿಳಿಸುವುದು: “ನಾವು ಸಭೆಗೆ ತುಂಬ ಸಹಾಯ ಮಾಡಲು ಶಕ್ತರಾಗಿದ್ದೇವೆ.”

ಫ್ರಾನ್ಸ್‌ನಲ್ಲಿರುವ ಒಡೀಲ್‌ ಎಂಬ 70ರ ಹರೆಯದ ಕ್ರೈಸ್ತ ಸಹೋದರಿಗೆ ಮೊಣಕಾಲಿನ ಅಸ್ಥಿಸಂಧಿವಾತವಿರುವುದರಿಂದ ಹೆಚ್ಚು ಹೊತ್ತು ನಿಂತುಕೊಳ್ಳಲಾಗುವುದಿಲ್ಲ. ದೈಹಿಕ ಸಮಸ್ಯೆಯಿಂದಾಗಿ ಆಕೆಗೆ ಮನೆಮನೆಯ ಶುಶ್ರೂಷೆ ಮಾಡಲಾಗದಿದ್ದ ಕಾರಣ ಆಕೆ ನಿರುತ್ಸಾಹಗೊಂಡಳು. ಆದರೂ ಆಕೆ ಬಿಟ್ಟುಕೊಡಲಿಲ್ಲ. ಟೆಲಿಫೋನ್‌ ಸಾಕ್ಷಿಕಾರ್ಯದ ಮೂಲಕ ತನ್ನ ಚಟುವಟಿಕೆಗಳಲ್ಲಿ ಹೊಂದಾಣಿಕೆಗಳನ್ನು ಮಾಡಿದಳು. ಆಕೆ ಹೇಳುವುದು: “ಇದು ನಾನು ಎಣಿಸಿದ್ದಕ್ಕಿಂತ ಹೆಚ್ಚು ಸುಲಭವೂ ಆನಂದದಾಯಕವೂ ಆಗಿದೆ!” ಈ ಸಾರುವ ವಿಧಾನವು ಶುಶ್ರೂಷೆಯಲ್ಲಿನ ಆಕೆಯ ಆಸಕ್ತಿಯನ್ನು ಪುನಃ ಹೊತ್ತಿಸಿತು.

ನ್ಯಾಯಸಮ್ಮತ ನಿರೀಕ್ಷಣೆಗಳಿಂದ ಆಶೀರ್ವಾದಗಳು

ನಾವು ಮಾಡಸಾಧ್ಯವಿರುವ ವಿಷಯಗಳ ಬಗ್ಗೆ ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಡುವುದು ಆಶಾಭಂಗವನ್ನು ತಪ್ಪಿಸುತ್ತದೆ. ಸಮತೂಕದ ಗುರಿಗಳನ್ನಿಟ್ಟರೆ, ಇತಿಮಿತಿಗಳಿದ್ದರೂ ನಾವೇನನ್ನೋ ಪೂರೈಸಿದ್ದೇವೆಂಬ ತೃಪ್ತಿ ಸಿಗುತ್ತದೆ. ಹೀಗೆ ನಮ್ಮ ಸಾಧನೆ ಸ್ವಲ್ಪವೇ ಆಗಿರುವುದಾದರೂ ಅದರಲ್ಲಿ ಸಂತೋಷಿಸುತ್ತೇವೆ.—ಗಲಾ. 6:4.

ನಮ್ಮಿಂದ ನಾವೇನನ್ನು ನಿರೀಕ್ಷಿಸುತ್ತೇವೋ ಅದರಲ್ಲಿ ಸಮತೂಕವಿರುವಲ್ಲಿ ನಾವು ಜೊತೆ ಕ್ರೈಸ್ತರ ಬಗ್ಗೆ ಹೆಚ್ಚು ಪರಿಗಣನೆ ತೋರಿಸುವೆವು. ಅವರ ಇತಿಮಿತಿಗಳನ್ನು ತಿಳಿದಿರುವ ನಾವು, ನಮಗಾಗಿ ಅವರೇನು ಮಾಡಿದರೂ ಅದಕ್ಕಾಗಿ ಯಾವಾಗಲೂ ಕೃತಜ್ಞರಾಗಿರುವೆವು. ಕೊಡಲಾಗುವ ಯಾವುದೇ ಸಹಾಯಕ್ಕೆ ಗಣ್ಯತೆ ತೋರಿಸುವ ಮೂಲಕ ಸಹಕಾರ ಮನೋಭಾವ ಹಾಗೂ ಪರಸ್ಪರ ಪರಿಗಣನೆಯನ್ನು ತೋರಿಸುವೆವು. (1 ಪೇತ್ರ 3:8) ಪ್ರೀತಿಪರ ತಂದೆಯಾಗಿರುವ ಯೆಹೋವನು ನಮ್ಮಿಂದ ಕೊಡಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದ್ದನ್ನು ಎಂದಿಗೂ ಕೇಳುವುದಿಲ್ಲ ಎಂಬದನ್ನು ನೆನಪಿನಲ್ಲಿಡಿ. ನಾವು ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಡುವಾಗ ಮತ್ತು ನಿಲುಕುವ ಗುರಿಗಳನ್ನಿಡುವಾಗ ನಮ್ಮ ಆಧ್ಯಾತ್ಮಿಕ ಚಟುವಟಿಕೆಗಳು ನಮಗೆ ಹೆಚ್ಚಿನ ತೃಪ್ತಿ ಹಾಗೂ ಸಂತೋಷವನ್ನು ತರುವವು.

[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರ ಸೇವೆಯಲ್ಲಿ ಸಂತೋಷ ಹಾಗೂ ತೃಪ್ತಿ ಪಡೆಯಲು, ನಮ್ಮ ಸಾಮರ್ಥ್ಯ ಮತ್ತು ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ನ್ಯಾಯಸಮ್ಮತ ನಿರೀಕ್ಷಣೆಗಳನ್ನಿಡಬೇಕು

[ಪುಟ 30ರಲ್ಲಿರುವ ಚಿತ್ರ]

ನೆರ್‌ಲಾಂಡ್‌ ಶುಶ್ರೂಷೆಯಲ್ಲಿ ತನ್ನಿಂದ ಸಾಧ್ಯವಾದದ್ದನ್ನು ಮಾಡಲು ಸಂತೋಷಿಸುತ್ತಾಳೆ

[ಪುಟ 31ರಲ್ಲಿರುವ ಚಿತ್ರ]

“ಹಾಯಿಗಳನ್ನು ಸರಿಹೊಂದಿಸಲು” ಕಲಿಯಿರಿ

[ಕೃಪೆ]

© Wave Royalty Free/age fotostock

[ಪುಟ 32ರಲ್ಲಿರುವ ಚಿತ್ರ]

ಸರ್ಸ್‌ ಮತ್ತು ಆ್ಯನ್ಯೀಸ್‌ ಹೊಸ ಗುರಿಗಳನ್ನಿಡುವ ಮೂಲಕ ಪ್ರಯೋಜನ ಪಡೆದರು