ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನೆಮನೆಯ ಶುಶ್ರೂಷೆಯಲ್ಲಿನ ಸವಾಲುಗಳನ್ನು ನಿಭಾಯಿಸುವುದು

ಮನೆಮನೆಯ ಶುಶ್ರೂಷೆಯಲ್ಲಿನ ಸವಾಲುಗಳನ್ನು ನಿಭಾಯಿಸುವುದು

ಮನೆಮನೆಯ ಶುಶ್ರೂಷೆಯಲ್ಲಿನ ಸವಾಲುಗಳನ್ನು ನಿಭಾಯಿಸುವುದು

‘ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವು.’—1 ಥೆಸ. 2:2.

ಯೆಹೋವನು ಯೆರೆಮೀಯನನ್ನು “ಜನಾಂಗಗಳಿಗೆ ಪ್ರವಾದಿಯನ್ನಾಗಿ” ನೇಮಿಸಿದಾಗ ಅವನು “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು” ಎಂದು ಕೂಗಿಕೊಂಡನು. ಈ ಮಾತುಗಳಿಂದ, ಯೆರೆಮೀಯನಿಗೂ ನಮಗಿರುವಂಥದ್ದೇ ಭಾವನೆಗಳಿದ್ದವೆಂದು ತೋರಿಬರುತ್ತದೆ. ಆದರೂ ಯೆಹೋವನಲ್ಲಿ ಭರವಸೆಯಿಟ್ಟು ಆತನು ಆ ನೇಮಕವನ್ನು ಸ್ವೀಕರಿಸಿದನು. (ಯೆರೆ. 1:4-10) ಅವನು 40ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಜನರ ಉದಾಸೀನತೆ, ತಿರಸ್ಕಾರ, ಅಪಹಾಸ್ಯ ಮತ್ತು ಕೆಲವೊಮ್ಮೆ ಹಿಂಸಾಚಾರಕ್ಕೆ ಗುರಿಯಾದರೂ ಎಲ್ಲವನ್ನು ತಾಳಿಕೊಂಡನು. (ಯೆರೆ. 20:1, 2) ಕೆಲವೊಮ್ಮೆ ಅವನಿಗೆ ತನ್ನ ನೇಮಕವನ್ನೇ ತೊರೆಯಬೇಕನಿಸುತ್ತಿತ್ತು. ಹಾಗಿದ್ದರೂ ಆತನು, ಅಧಿಕಾಂಶ ಮಂದಿ ಪ್ರತಿಕ್ರಿಯೆ ತೋರಿಸದಿದ್ದ ಮತ್ತು ಅಪ್ರಿಯವೆಂದೆಣಿಸಿದ ಸಂದೇಶವನ್ನು ಘೋಷಿಸುವುದರಲ್ಲಿ ಪಟ್ಟುಹಿಡಿದನು. ಆತನು ತನ್ನಷ್ಟಕ್ಕೇ ಎಂದೂ ಸಾಧಿಸಲಾಗದ ಕೆಲಸಗಳನ್ನು ದೇವರ ಬಲದಿಂದ ಸಾಧಿಸಿದನು.—ಯೆರೆಮೀಯ 20:7-9 ಓದಿ.

2 ಯೆರೆಮೀಯನಿಗಿದ್ದಂಥ ಭಾವನೆಗಳು ಇಂದು ದೇವರ ಸೇವಕರಲ್ಲಿ ಅನೇಕರಿಗಿವೆ. ಮನೆಮನೆಗೆ ಹೋಗಿ ಸಾರಬೇಕು ಎಂಬುದರ ಕುರಿತು ಮೊದಲು ತಿಳಿದುಬಂದಾಗ ನಮ್ಮಲ್ಲಿ ಅನೇಕರು, ‘ಇದು ನನ್ನಿಂದ ಆಗದ ಕೆಲಸ’ ಎಂದು ನೆನಸಿದ್ದೆವು. ಆದರೆ ಸುವಾರ್ತೆ ಸಾರುವುದು ಯೆಹೋವನ ಚಿತ್ತವೆಂದು ಗೊತ್ತಾದಾಗ, ನಮ್ಮ ಅಂಜಿಕೆಯನ್ನು ಮೆಟ್ಟಿನಿಂತು, ಸಾರುವ ಕೆಲಸದಲ್ಲಿ ಕಾರ್ಯಮಗ್ನರಾದೆವು. ಹಾಗಿದ್ದರೂ ನಮ್ಮಲ್ಲಿ ಅನೇಕರಿಗೆ, ಸಾರುತ್ತಾ ಇರಲು ಕಷ್ಟಕರವನ್ನಾಗಿ ಮಾಡಿದ ಪರಿಸ್ಥಿತಿಗಳು ಕಡಿಮೆಪಕ್ಷ ಒಮ್ಮೆಯಾದರೂ ಎದುರಾಗಿವೆ. ಆದುದರಿಂದ, ಮನೆಮನೆಯ ಶುಶ್ರೂಷೆ ಆರಂಭಿಸುವುದು ಮತ್ತು ಕೊನೆವರೆಗೂ ಮಾಡುತ್ತಾ ಇರುವುದು ಒಂದು ಸವಾಲಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.—ಮತ್ತಾ. 24:13.

3 ಯೆಹೋವನ ಸಾಕ್ಷಿಗಳು ನಿಮ್ಮೊಂದಿಗೆ ಬಹಳ ಸಮಯದಿಂದ ಬೈಬಲ್‌ ಅಧ್ಯಯನ ಮಾಡುತ್ತಿದ್ದು, ನೀವು ಸಭಾ ಕೂಟಗಳಿಗೆ ಹಾಜರಾಗುತ್ತಿದ್ದರೂ ಮನೆಮನೆಗೆ ಹೋಗಿ ಸಾರುವುದನ್ನು ಆರಂಭಿಸಲು ಹಿಂದೇಟು ಹಾಕುತ್ತಿರುವಲ್ಲಿ ಏನು? ಅಥವಾ ನೀವು ದೀಕ್ಷಾಸ್ನಾನ ಪಡೆದಿರುವ ಸಾಕ್ಷಿಯಾಗಿದ್ದು ದೈಹಿಕ ಕ್ಷಮತೆಯಿದ್ದರೂ, ಮನೆಮನೆಯ ಸೇವೆ ನಿಮಗೆ ಕಷ್ಟಕರವೆನಿಸುತ್ತಿರುವಲ್ಲಿ ಆಗೇನು? ಎಲ್ಲ ಹಿನ್ನಲೆಗಳಿಂದ ಬಂದ ಸಾಕ್ಷಿಗಳು ಮನೆಮನೆ ಶುಶ್ರೂಷೆಯ ಸವಾಲುಗಳನ್ನು ನಿಭಾಯಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿರಲಿ. ಯೆಹೋವನ ಸಹಾಯದಿಂದ ನೀವು ಸಹ ಅದನ್ನು ಮಾಡಬಲ್ಲಿರಿ.

ಧೈರ್ಯ ತಂದುಕೊಳ್ಳುವುದು

4 ಜಗತ್ತಿನಾದ್ಯಂತ ಸಾರುವ ಕೆಲಸವು ಮಾನವ ಶಕ್ತಿ ಇಲ್ಲವೇ ವಿವೇಕದಿಂದಲ್ಲ ಬದಲಾಗಿ ದೇವರಾತ್ಮದಿಂದ ನಡೆಯುತ್ತಿದೆಯೆಂದು ನಿಮಗೆ ನಿಸ್ಸಂಶಯವಾಗಿ ತಿಳಿದುಬಂದಿದೆ. (ಜೆಕ. 4:6) ಈ ಮಾತು ಒಬ್ಬೊಬ್ಬ ಕ್ರೈಸ್ತನ ಶುಶ್ರೂಷೆಯ ವಿಷಯದಲ್ಲೂ ಸತ್ಯವಾಗಿದೆ. (2 ಕೊರಿಂ. 4:7) ಅಪೊಸ್ತಲ ಪೌಲನನ್ನು ತೆಗೆದುಕೊಳ್ಳಿ. ಅವನನ್ನೂ ಅವನ ಮಿಷನೆರಿ ಸಂಗಡಿಗನನ್ನೂ ವಿರೋಧಿಗಳು ದುರುಪಚರಿಸಿದ ಒಂದು ಸಂದರ್ಭವನ್ನು ನೆನಪಿಸಿಕೊಳ್ಳುತ್ತಾ ಅವನು ಬರೆದದ್ದು: “ನಮಗೆ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿದರೂ ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು . . . ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದ್ದೇವೆ.” (1 ಥೆಸ. 2:2; ಅ. ಕೃ. 16:22-24) ಹಾಗಾದರೆ, ಹುರುಪಿನ ಸೌವಾರ್ತಿಕನಾಗಿದ್ದ ಪೌಲನು ಸಹ ಕೆಲವು ಸಂದರ್ಭಗಳಲ್ಲಿ ಧೈರ್ಯ ತಂದುಕೊಳ್ಳಬೇಕಾಯಿತು. ಆದರೆ ನಮ್ಮೆಲ್ಲರಂತೆ ಅವನು ಸಹ ಧೈರ್ಯದಿಂದ ಸುವಾರ್ತೆ ಸಾರಲು ಯೆಹೋವನ ಮೇಲೆ ಅವಲಂಬಿಸಬೇಕಾಯಿತು. (ಎಫೆಸ 6:18-20 ಓದಿ.) ನಾವು ಪೌಲನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?

5 ಸಾರಲು ಧೈರ್ಯ ತಂದುಕೊಳ್ಳುವ ಒಂದು ವಿಧ ಪ್ರಾರ್ಥನೆ ಮಾಡುವುದಾಗಿದೆ. ಪಯನೀಯರಳೊಬ್ಬಳು ಅಂದದ್ದು: “ಆತ್ಮವಿಶ್ವಾಸದಿಂದ ಮಾತಾಡಲು, ಜನರ ಹೃದಯಗಳನ್ನು ತಲಪಲು, ಶುಶ್ರೂಷೆಯಲ್ಲಿ ಆನಂದ ಪಡೆಯಲು ನಾನು ಪ್ರಾರ್ಥಿಸುತ್ತೇನೆ. ಎಷ್ಟೆಂದರೂ ಇದು ಯೆಹೋವನ ಕೆಲಸ, ನಮ್ಮದಲ್ಲ. ಆದುದರಿಂದ ಆತನ ಸಹಾಯವಿಲ್ಲದೆ ನಾವೇನೂ ಮಾಡಲಾರೆವು.” (1 ಥೆಸ. 5:17) ಧೈರ್ಯದಿಂದ ಸಾರಲು ನಾವೆಲ್ಲರೂ ದೇವರ ಪವಿತ್ರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸುತ್ತಾ ಇರಬೇಕು.—ಲೂಕ 11:9-13.

6 ನಾವು ಧೈರ್ಯದಿಂದ ಮಾತಾಡುವಂತೆ ಸಹಾಯಮಾಡಬಲ್ಲ ಇನ್ನೊಂದು ವಿಷಯವನ್ನು ಯೆಹೆಜ್ಕೇಲ ಪುಸ್ತಕವು ಪ್ರಕಟಿಸುತ್ತದೆ. ದರ್ಶನವೊಂದರಲ್ಲಿ ಯೆಹೋವನು ಯೆಹೆಜ್ಕೇಲನಿಗೆ ಒಂದು ಸುರುಳಿ ಕೊಟ್ಟನು. ಅದರ ಎರಡೂ ಪಕ್ಕಗಳಲ್ಲಿ “ಗೋಳು, ಮೂಲುಗು, ಮೊರೆ”ಗಳು ಬರೆಯಲಾಗಿದ್ದವು. ಯೆಹೆಜ್ಕೇಲನಿಗೆ “ನರಪುತ್ರನೇ, ನಾನು ಕೊಡುವ ಈ ಸುರಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ” ಎಂದು ಹೇಳಲಾಯಿತು. ಈ ದರ್ಶನದ ಅರ್ಥವೇನಾಗಿತ್ತು? ಯೆಹೆಜ್ಕೇಲನು ತಾನು ಪ್ರಕಟಿಸಬೇಕಾಗಿದ್ದ ಸಂದೇಶವನ್ನು ಪೂರ್ಣವಾಗಿ ಹೀರಿಕೊಳ್ಳಬೇಕಿತ್ತು. ಅದು ಅವನ ಭಾಗವಾಗಬೇಕಿತ್ತು, ಅಂದರೆ ಅವನ ಅಂತರಂಗದ ಭಾವನೆಗಳನ್ನು ಪ್ರಭಾವಿಸಬೇಕಿತ್ತು. ಪ್ರವಾದಿಯು ಹೀಗನ್ನುತ್ತಾ ಮುಂದುವರಿಸಿದನು: “ಅದನ್ನು ತಿಂದುಬಿಟ್ಟೆನು; ಅದು ನನ್ನ ಬಾಯಲ್ಲಿ ಜೇನಿನಂತೆ ಸಿಹಿಯಾಗಿತ್ತು.” ಎಲ್ಲರ ಮುಂದೆ ದೇವರ ಸಂದೇಶ ಘೋಷಿಸುವುದು ಯೆಹೆಜ್ಕೇಲನಿಗೆ ಎಷ್ಟು ಆನಂದವನ್ನು ಕೊಟ್ಟಿತೆಂದರೆ ಅದು ಜೇನನ್ನು ಸವಿದಂತಿತ್ತು. ಅವನ ನೇಮಕವು, ಪ್ರತಿಕ್ರಿಯೆ ತೋರಿಸದ ಜನರಿಗೆ ಒಂದು ಪ್ರಬಲ ಸಂದೇಶವನ್ನು ಪ್ರಕಟಿಸುವುದಾಗಿತ್ತು. ಆದರೂ ಯೆಹೋವನ ಪ್ರತಿನಿಧಿಯಾಗಿ ಈ ದೇವದತ್ತ ನೇಮಕವನ್ನು ಪೂರೈಸುವುದು ಮಹತ್ತರ ಸದವಕಾಶವೆಂದು ಅವನು ಎಣಿಸಿದನು.—ಯೆಹೆಜ್ಕೇಲ 2:8-3:4, 7-9 ಓದಿ.

7 ಈ ದರ್ಶನದಲ್ಲಿ ದೇವರ ಇಂದಿನ ಸೇವಕರಿಗೆ ಒಂದು ಅಮೂಲ್ಯ ಪಾಠವಿದೆ. ನಾವು ಸಹ ಒಂದು ಪ್ರಬಲ ಸಂದೇಶ ಪ್ರಕಟಿಸಲಿಕ್ಕಿದೆ ಮತ್ತು ನಮ್ಮ ಪ್ರಯತ್ನಗಳನ್ನು ಅನೇಕರು ಗಣ್ಯಮಾಡುವುದಿಲ್ಲ. ಆದುದರಿಂದ, ಕ್ರೈಸ್ತ ಶುಶ್ರೂಷೆಯನ್ನು ದೇವದತ್ತ ಸದವಕಾಶವಾಗಿ ಪರಿಗಣಿಸುತ್ತಾ ಇರಲು ನಾವು ಆಧ್ಯಾತ್ಮಿಕವಾಗಿ ಉತ್ತಮ ಪೋಷಣೆ ಹೊಂದಬೇಕು. ಕಾಟಾಚಾರದ ಇಲ್ಲವೇ ಕ್ರಮವಿಲ್ಲದ ಅಧ್ಯಯನ ರೂಢಿಗಳು ನಮಗಿದ್ದರೆ, ದೇವರ ವಾಕ್ಯವನ್ನು ನಾವು ಪೂರ್ಣ ರೀತಿಯಲ್ಲಿ ಹೀರಿಕೊಳ್ಳಲಾರೆವು. ಹೀಗಿರುವುದರಿಂದ, ನಿಮ್ಮ ವೈಯಕ್ತಿಕ ಬೈಬಲ್‌ ವಾಚನ ಹಾಗೂ ಬೈಬಲ್‌ ಅಧ್ಯಯನದ ಗುಣಮಟ್ಟವನ್ನು ಉತ್ತಮಗೊಳಿಸಬಲ್ಲಿರೋ ಇಲ್ಲವೇ ಅದನ್ನು ಕ್ರಮವಾಗಿ ಮಾಡಬಲ್ಲಿರೋ? ನೀವೇನು ಓದುತ್ತೀರೋ ಅದರ ಕುರಿತು ಇನ್ನೂ ಹೆಚ್ಚಾಗಿ ಧ್ಯಾನಿಸಬಲ್ಲಿರೋ?—ಕೀರ್ತ. 1:2, 3.

ಬೈಬಲ್‌ ಚರ್ಚೆಗಳನ್ನು ಆರಂಭಿಸುವುದು

8 ಅನೇಕ ಪ್ರಚಾರಕರಿಗೆ, ಮನೆಮನೆ ಶುಶ್ರೂಷೆಯ ವಿಷಯದಲ್ಲಿ ತುಂಬ ಕಷ್ಟವೆನಿಸುವ ಸಂಗತಿಯು, ಮನೆಯವರೊಂದಿಗಿನ ಮೊದಲ ಸಂಭಾಷಣೆಯಾಗಿದೆ. ಕೆಲವು ಟೆರಿಟೊರಿಗಳಲ್ಲಂತೂ ಸಂಭಾಷಣೆ ಆರಂಭಿಸುವುದೇ ಒಂದು ಸವಾಲು. ಆದುದರಿಂದ ಕೆಲವು ಪ್ರಚಾರಕರು ಈ ಸಮಸ್ಯೆಯನ್ನು ನಿಭಾಯಿಸಲಿಕ್ಕಾಗಿ ತಮ್ಮ ನಿರೂಪಣೆಯ ಆರಂಭದಲ್ಲಿ, ಆಲೋಚಿಸಿ ಆಯ್ಕೆಮಾಡಿದ ಒಂದೆರಡು ಮಾತುಗಳನ್ನು (ಇಲ್ಲಿರುವ ಚೌಕದಲ್ಲಿ ಕೊಡಲಾಗಿರುವಂತೆ) ಹೇಳಿ, ನಂತರ ಮನೆಯವರಿಗೆ ಒಂದು ಟ್ರ್ಯಾಕ್ಟ್‌ ಕೊಟ್ಟು ಸಂಭಾಷಣೆ ಮುಂದುವರಿಸುತ್ತಾರೆ. ಟ್ರ್ಯಾಕ್ಟ್‌ನ ಶೀರ್ಷಿಕೆ ಇಲ್ಲವೇ ವರ್ಣರಂಜಿತ ಚಿತ್ರವು ಮನೆಯವರ ಗಮನವನ್ನು ಸೆರೆಹಿಡಿಯಬಹುದು. ಆಗ ಅವರಿಗೆ ನಮ್ಮ ಭೇಟಿಯ ಉದ್ದೇಶವನ್ನು ಚುಟುಕಾಗಿ ತಿಳಿಸಿ, ಒಂದು ಪ್ರಶ್ನೆ ಕೇಳಲು ಅವಕಾಶ ಸಿಗುವುದು. ಅಥವಾ ನೀವು ಹೀಗೂ ಮಾಡಬಹುದು: ಆರಂಭದ ಮಾತುಗಳನ್ನು ಹೇಳಿದ ಬಳಿಕ ಮನೆಯವನಿಗೆ ಮೂರೋ ನಾಲ್ಕೋ ಟ್ರ್ಯಾಕ್ಟ್‌ಗಳನ್ನು ತೋರಿಸಿ, ಅವನಿಗೆ ಇಷ್ಟವಾಗುವ ಒಂದು ಟ್ರ್ಯಾಕ್ಟ್‌ ಅನ್ನು ಆಯ್ಕೆಮಾಡಲು ಕೇಳಿ ನಂತರ ಸಂಭಾಷಣೆ ಮುಂದುವರಿಸಬಹುದು. ಹಾಗಿದ್ದರೂ ನಮ್ಮ ಉದ್ದೇಶ ಬರೀ ಟ್ರ್ಯಾಕ್ಟ್‌ಗಳನ್ನು ಹಂಚುವುದು ಇಲ್ಲವೇ ಅವುಗಳನ್ನು ಪ್ರತಿಯೊಂದು ಮನೆಯಲ್ಲಿ ನೀಡುವುದು ಅಲ್ಲ, ಬದಲಾಗಿ ಬೈಬಲ್‌ ಅಧ್ಯಯನಗಳಿಗೆ ನಡೆಸಬಲ್ಲ ಬೈಬಲ್‌ ಚರ್ಚೆಗಳನ್ನು ಆರಂಭಿಸುವುದೇ ಆಗಿದೆ. *

9 ನೀವು ಯಾವುದೇ ವಿಧಾನವನ್ನು ಉಪಯೋಗಿಸಿದರೂ ಒಳ್ಳೇ ತಯಾರಿ ಮಾಡಿದರೆ ಮಾತ್ರ, ಮನೆಮನೆ ಶುಶ್ರೂಷೆಯಲ್ಲಿ ಭರವಸೆಯಿಂದಲೂ ಉತ್ಸಾಹದಿಂದಲೂ ಪಾಲ್ಗೊಳ್ಳಲು ಸಾಧ್ಯವಾಗುವುದು. ಒಬ್ಬ ಪಯನೀಯರನು ಹೇಳಿದ್ದು: “ಚೆನ್ನಾಗಿ ತಯಾರಿಮಾಡಿದಾಗ ನನಗೆ ಹೆಚ್ಚು ಆನಂದ ಸಿಗುತ್ತದೆ ಮತ್ತು ನನ್ನ ನಿರೂಪಣೆಯನ್ನು ಬಳಸಲು ಮನಸ್ಸಾಗುತ್ತದೆ.” ಇನ್ನೊಬ್ಬ ಪಯನೀಯರನು ಹೇಳಿದ್ದು: “ನಾನು ನೀಡಲಿರುವ ಪ್ರಕಾಶನಗಳಲ್ಲಿ ಏನಿದೆಯೆಂಬುದು ನನಗೆ ತಿಳಿದಿರುವಾಗ, ಅವುಗಳನ್ನು ನೀಡಲು ನನ್ನಲ್ಲಿ ಉತ್ಸಾಹ ಮೂಡುತ್ತದೆ.” ತಯಾರಿಮಾಡುವಾಗ ನಿಮ್ಮ ನಿರೂಪಣೆಯನ್ನು ಮನಸ್ಸಿನಲ್ಲೇ ಹೇಳಿಕೊಳ್ಳುವುದು ಒಳ್ಳೆಯದಾದರೂ, ಅದನ್ನು ಗಟ್ಟಿಯಾಗಿ ಅಭ್ಯಾಸಮಾಡುವುದು ಹೆಚ್ಚು ಸಹಾಯಕಾರಿಯೆಂದು ಅನೇಕರಿಗೆ ತಿಳಿದುಬಂದಿದೆ. ಇದು, ಯೆಹೋವನಿಗೆ ಸರ್ವೋತ್ತಮವಾದದ್ದನ್ನು ಕೊಡಲು ಅವರನ್ನು ಶಕ್ತಗೊಳಿಸುತ್ತದೆ.—ಕೊಲೊ. 3:23; 2 ತಿಮೊ. 2:15.

10 ಕ್ಷೇತ್ರ ಸೇವಾ ಕೂಟಗಳು ಪ್ರಾಯೋಗಿಕವಾಗಿರುವಾಗ, ಮನೆಮನೆಯ ಶುಶ್ರೂಷೆಯು ಹೆಚ್ಚು ಪರಿಣಾಮಕಾರಿ ಹಾಗೂ ಹೆಚ್ಚು ಆನಂದಕರ ಆಗಿರುವುದು. ದಿನದ ವಚನವು ಸಾರುವ ಕೆಲಸಕ್ಕೆ ನೇರವಾಗಿ ಸಂಬಂಧಿಸಿರುವಲ್ಲಿ, ಅದನ್ನೇ ಓದಿ ಚುಟುಕಾಗಿ ಚರ್ಚಿಸಬಹುದು. ಆದರೆ ಆ ಕೂಟವನ್ನು ನಡೆಸುವ ಸಹೋದರನು, ಟೆರಿಟೊರಿಗೆ ಸೂಕ್ತವಾಗಿರುವ ಒಂದು ಸರಳ ನಿರೂಪಣೆಯನ್ನು ಚರ್ಚಿಸಲಿಕ್ಕೋ ಪ್ರತ್ಯಕ್ಷಾಭಿನಯಿಸಲಿಕ್ಕೋ ಅಥವಾ ಅಂದು ಶುಶ್ರೂಷೆಯಲ್ಲಿ ಬಳಸಬಹುದಾದ ಇತರ ಪ್ರಾಯೋಗಿಕ ಮಾಹಿತಿಯನ್ನು ಚರ್ಚಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಹೀಗೆ, ಅಲ್ಲಿದ್ದವರು ಪರಿಣಾಮಕಾರಿ ಸಾಕ್ಷಿಕೊಡಲು ಇನ್ನಷ್ಟು ಉತ್ತಮವಾಗಿ ಸಜ್ಜಿತರಾಗುವರು. ಇದೆಲ್ಲವನ್ನೂ ಮಾಡಿಯೂ, ಕೂಟವನ್ನು ನಿಗದಿತ ಸಮಯದೊಳಗೆ ಮುಗಿಸಲಿಕ್ಕಾಗಿ ಅದನ್ನು ನಡೆಸುವ ಹಿರಿಯರಾಗಲಿ ಇತರರಾಗಲಿ ಉತ್ತಮ ಮುಂಗಡ ತಯಾರಿಮಾಡಬೇಕು.—ರೋಮಾ. 12:8.

ಕಿವಿಗೊಡುವುದರಿಂದ ಸಿಗುವ ಫಲಿತಾಂಶ

11 ಶುಶ್ರೂಷೆಯಲ್ಲಿ ಬೈಬಲ್‌ ಚರ್ಚೆಗಳನ್ನು ಆರಂಭಿಸಲು ಮತ್ತು ಜನರ ಹೃದಯ ಮುಟ್ಟಲಿಕ್ಕಾಗಿ ಒಳ್ಳೇ ತಯಾರಿಯಲ್ಲದೆ ಇತರರಲ್ಲಿ ಗಾಢ ವೈಯಕ್ತಿಕ ಆಸಕ್ತಿ ತೋರಿಸುವುದೂ ಅಗತ್ಯ. ಇಂಥ ಆಸಕ್ತಿಯನ್ನು ತೋರಿಸುವ ಒಂದು ವಿಧ, ಅವರಿಗೆ ಕಿವಿಗೊಡುವುದೇ ಆಗಿದೆ. ಒಬ್ಬ ಸಂಚರಣಾ ಮೇಲ್ವಿಚಾರಕರು ಹೇಳಿದ್ದು: “ತಾಳ್ಮೆಯಿಂದಿರುವದು ಮತ್ತು ಕಿವಿಗೊಡಲು ನಮಗೆ ಮನಸ್ಸಿದೆಯೆಂದು ತೋರಿಸುವುದು, ಜನರನ್ನು ಸುವಾರ್ತೆಯ ಕಡೆಗೆ ಆಕರ್ಷಿಸುತ್ತದೆ ಮಾತ್ರವಲ್ಲ ನಮ್ಮ ಹೃತ್ಪೂರ್ವಕ ವೈಯಕ್ತಿಕ ಆಸಕ್ತಿಯನ್ನೂ ತೋರಿಸುತ್ತದೆ.” ಕರುಣೆಯಿಂದ ಕಿವಿಗೊಡುವುದು, ಮನೆಯವರ ಹೃದಯದ ಬಾಗಿಲನ್ನು ತೆರೆಯುವ ಬೀಗದಕೈ ಆಗಿರಬಲ್ಲದು. ಇದನ್ನೇ ಮುಂದಿನ ಅನುಭವವು ತೋರಿಸುತ್ತದೆ.

12 ಫ್ರಾನ್ಸ್‌ನ ಸೆಂಟ್‌ ಇಟೀಯೆನ್‌ ಎಂಬ ನಗರದ ಲೇ ಪ್ರೊಗ್ರೆ ವಾರ್ತಾಪತ್ರಿಕೆಯಲ್ಲಿ ಪ್ರಕಟಿಸಲಾದ ಒಂದು ಪತ್ರದಲ್ಲಿ ಒಬ್ಬಾಕೆ ಮಹಿಳೆ, ತನ್ನ ಮನೆಗೆ ಇಬ್ಬರು ವ್ಯಕ್ತಿಗಳು ಭೇಟಿನೀಡಿದ ಸಂದರ್ಭವನ್ನು ವರ್ಣಿಸಿದಳು. ಅವರು ಭೇಟಿಯಿತ್ತಾಗ, ಅವಳ ಮೂರು ತಿಂಗಳ ಕೂಸು ದುರಂತಕರ ಮರಣಕ್ಕೀಡಾಗಿ ಸ್ವಲ್ಪ ಸಮಯವಷ್ಟೇ ಕಳೆದಿತ್ತು. ಆಕೆ ಬರೆದದ್ದು: “ಅವರು ಯೆಹೋವನ ಸಾಕ್ಷಿಗಳೆಂದು ನನಗೆ ಕೂಡಲೇ ಗುರುತುಸಿಕ್ಕಿತು. ಅವರಿಗೆ ‘ಹೋಗಿ’ ಎಂದು ಒಳ್ಳೇ ರೀತಿಯಲ್ಲಿ ಹೇಳಬೇಕೆಂದಿದ್ದಾಗಲೇ, ಅವರ ಕೈಯಲ್ಲಿದ್ದ ಬ್ರೋಷರನ್ನು ಗಮನಿಸಿದೆ. ಅದು, ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ ಎಂಬುದರ ಕುರಿತಾಗಿತ್ತು. ಅವರು ಈ ವಿಷಯದಲ್ಲಿ ಸಾದರಪಡಿಸುವ ಎಲ್ಲ ತರ್ಕಸರಣಿಗಳು ತಪ್ಪೆಂದು ತೋರಿಸಲಿಕ್ಕಾಗಿಯೇ ಅವರನ್ನು ಒಳಗೆ ಕರೆದೆ. . . . ಆ ಸಾಕ್ಷಿಗಳು ಒಂದು ತಾಸಿಗಿಂತ ಹೆಚ್ಚು ಸಮಯ ನನ್ನೊಟ್ಟಿಗಿದ್ದರು. ಅವರು ಕರುಣೆಯಿಂದ ನನ್ನ ಮಾತಿಗೆ ಕಿವಿಗೊಟ್ಟರು. ಇದರಿಂದ ನನಗೆ ಎಷ್ಟು ಹಿತವೆನಿಸಿತೆಂದರೆ, ಅವರು ಹೊರಡುವ ಸಮಯದಲ್ಲಿ ‘ಪುನಃ ಬರಬಹುದೋ’ ಎಂದು ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡೆ.” (ರೋಮಾ. 12:15) ಕಾಲಾನಂತರ ಈ ಮಹಿಳೆ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡಳು. ಆ ಪ್ರಥಮ ಭೇಟಿಯ ಬಗ್ಗೆ ಅವಳಿಗೆ ನೆನಪಿದ್ದ ಸಂಗತಿ, ಸಾಕ್ಷಿಗಳ ಮಾತುಗಳಲ್ಲ ಬದಲಾಗಿ ಅವರು ಕಿವಿಗೊಟ್ಟ ರೀತಿ ಎಂಬುದರಿಂದ ನಾವು ಬಹಳ ವಿಷಯಗಳನ್ನು ಕಲಿಯಬಲ್ಲೆವು.

13 ನಾವು ಜನರಿಗೆ ಕರುಣೆಯಿಂದ ಕಿವಿಗೊಡುವಾಗ, ರಾಜ್ಯವು ಏಕೆ ಅಗತ್ಯ ಎಂಬುದಕ್ಕೆ ಕಾರಣಗಳು ಅವರಿಂದಲೇ ಬರುವಂತೆ ಅವಕಾಶಕೊಡುತ್ತಿದ್ದೇವೆ. ಇದರಿಂದಾಗಿ ಅವರಿಗೆ ಸುವಾರ್ತೆ ತಿಳಿಸಲು ಹೆಚ್ಚು ಸುಲಭವಾಗುತ್ತದೆ. ಪರಿಣಾಮಕಾರೀ ಸೌವಾರ್ತಿಕರು ಹೆಚ್ಚಾಗಿ ನಿಪುಣ ಕೇಳುಗರಾಗಿರುತ್ತಾರೆ ಎಂಬುದನ್ನು ನೀವು ಗಮನಿಸಿರಬಹುದು. (ಜ್ಞಾನೋ. 20:5) ಅವರು ಶುಶ್ರೂಷೆಯಲ್ಲಿ ಭೇಟಿಯಾಗುವ ಜನರಲ್ಲಿ ನಿಜ ಆಸಕ್ತಿ ತೋರಿಸುತ್ತಾರೆ. ಅವರು ಜನರ ಹೆಸರು, ವಿಳಾಸಗಳನ್ನು ಮಾತ್ರವಲ್ಲ ಅವರ ಅಭಿರುಚಿಗಳು ಹಾಗೂ ಅಗತ್ಯಗಳೇನೆಂಬುದನ್ನೂ ಬರೆದಿಡುತ್ತಾರೆ. ಯಾರಾದರೂ ಒಂದು ನಿರ್ದಿಷ್ಟ ವಿಷಯದ ಕುರಿತು ಚಿಂತೆ ವ್ಯಕ್ತಪಡಿಸಿದರೆ ಅದರ ಬಗ್ಗೆ ಸಂಶೋಧನೆಮಾಡಿ, ಕಂಡುಕೊಂಡ ವಿಷಯವನ್ನು ಅವರಿಗೆ ತಿಳಿಸಲು ಬೇಗನೆ ಪುನಃ ಭೇಟಿಮಾಡುತ್ತಾರೆ. ಅಪೊಸ್ತಲ ಪೌಲನಂತೆ ಅವರು ರಾಜ್ಯ ಸಂದೇಶದ ನಿರೂಪಣೆಯನ್ನು ಭೇಟಿಯಾಗುವ ಜನರಿಗೆ ತಕ್ಕಂತೆ ಹೊಂದಿಸಿಕೊಳ್ಳುತ್ತಾರೆ. (1 ಕೊರಿಂಥ 9:19-23 ಓದಿ.) ಇಂಥ ಯಥಾರ್ಥ ಆಸಕ್ತಿಯು ಜನರನ್ನು ಸುವಾರ್ತೆಯ ಕಡೆಗೆ ಆಕರ್ಷಿಸುತ್ತದೆ ಮತ್ತು ‘ನಮ್ಮ ದೇವರ ಕರುಣೆಯನ್ನು’ ಪ್ರತಿಬಿಂಬಿಸುತ್ತದೆ.—ಲೂಕ 1:77.

ಸಕಾರಾತ್ಮಕ ಮನೋಭಾವ ಇಟ್ಟುಕೊಳ್ಳಿ

14 ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟು ಯೆಹೋವನು ನಮ್ಮನ್ನು ಗೌರವಿಸಿದ್ದಾನೆ. ಆತನು ಸರ್ವಶಕ್ತ ದೇವರಾಗಿದ್ದರೂ, ತನ್ನ ಸೇವೆಮಾಡಲು ಯಾರಿಗೂ ಬಲವಂತಮಾಡುವುದಿಲ್ಲ. ಅದಕ್ಕೆ ಬದಲಾಗಿ ಜನರು ಪ್ರೀತಿಯಿಂದ ತನ್ನ ಸೇವೆಮಾಡುವಂತೆ ಕೇಳಿಕೊಳ್ಳುತ್ತಾನೆ. ತನ್ನ ಅದ್ಭುತ ಏರ್ಪಾಡುಗಳಿಗೆ ಕೃತಜ್ಞತಾಭಾವದಿಂದ ಪ್ರತಿಕ್ರಿಯೆ ತೋರಿಸುವವರನ್ನು ಆತನು ಆಶೀರ್ವದಿಸುತ್ತಾನೆ. (ರೋಮಾ. 2:4) ಆತನ ಶುಶ್ರೂಷಕರಾಗಿರುವ ನಾವು, ಸಾಕ್ಷಿಯನ್ನು ಕೊಡುವಾಗಲೆಲ್ಲ ನಮ್ಮ ಕರುಣಾಭರಿತ ದೇವರಿಗೆ ತಕ್ಕದಾದ ವಿಧದಲ್ಲಿ ಸುವಾರ್ತೆಯನ್ನು ಪ್ರಸ್ತುತಪಡಿಸಲು ಸಿದ್ಧರಾಗಿರಬೇಕು. (2 ಕೊರಿಂ. 5:20, 21; 6:3-6) ಇದನ್ನು ಮಾಡಲು, ನಮ್ಮ ಟೆರಿಟೊರಿಯಲ್ಲಿರುವ ಜನರೆಡೆಗೆ ನಾವು ಸಕಾರಾತ್ಮಕ ಮನೋಭಾವ ಇಟ್ಟುಕೊಳ್ಳಬೇಕು. ಈ ಸವಾಲನ್ನು ನಿಭಾಯಿಸಲು ನಮಗೆ ಯಾವುದು ಸಹಾಯಮಾಡುವುದು?

15 ಯಾರಾದರೂ ರಾಜ್ಯ ಸಂದೇಶವನ್ನು ತಿರಸ್ಕರಿಸುವಲ್ಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಯೋಗ್ಯರನ್ನು ಹುಡುಕಲು ಗಮನಕೊಡಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಆದೇಶಕೊಟ್ಟನು. (ಮತ್ತಾಯ 10:11-15 ಓದಿ.) ಇದನ್ನು ಮಾಡಲು, ಚಿಕ್ಕಚಿಕ್ಕ ಹಾಗೂ ತಲಪಸಾಧ್ಯವಿರುವ ಗುರಿಗಳನ್ನಿಡುವುದು ಸಹಾಯಕ. ಉದಾಹರಣೆಗೆ, ಒಬ್ಬ ಸಹೋದರನು ತನ್ನನ್ನು ನಿಧಿ ಅನ್ವೇಷಕನಿಗೆ ಹೋಲಿಸಿಕೊಳ್ಳುತ್ತಾನೆ. “ಇವತ್ತು ಎಲ್ಲಾದರೂ ನನಗೆ ನಿಧಿ ಸಿಕ್ಕೇ ಸಿಗುತ್ತದೆ” ಎಂಬುದೇ ಅವನ ಗುರಿನುಡಿ. ಇನ್ನೊಬ್ಬ ಸಹೋದರನು, “ಪ್ರತಿ ವಾರ ಒಬ್ಬ ಆಸಕ್ತ ವ್ಯಕ್ತಿಯನ್ನು ಭೇಟಿಯಾಗಿ, ಅವನ ಆಸಕ್ತಿಯನ್ನು ಬೆಳೆಸಲಿಕ್ಕಾಗಿ ಕೆಲವೇ ದಿನಗಳೊಳಗೆ ಪುನಃ ಭೇಟಿಮಾಡಬೇಕು” ಎಂಬ ಗುರಿಯಿಟ್ಟಿದ್ದಾನೆ. ಕೆಲವು ಪ್ರಚಾರಕರು, ಪ್ರತಿಯೊಬ್ಬ ಮನೆಯವನಿಗೆ ಸಾಧ್ಯವಿರುವಲ್ಲಿ ಒಂದು ವಚನವನ್ನಾದರೂ ತೋರಿಸಲು ಪ್ರಯತ್ನಿಸುತ್ತಾರೆ. ನೀವು ಯಾವ ವಾಸ್ತವಿಕ ಗುರಿಯನ್ನಿಡಬಲ್ಲಿರಿ?

16 ಮನೆಮನೆ ಶುಶ್ರೂಷೆಯ ಯಶಸ್ಸು, ಟೆರಿಟೊರಿಯಲ್ಲಿನ ಜನರ ಪ್ರತಿಕ್ರಿಯೆಯ ಮೇಲೆಯೇ ಹೊಂದಿಕೊಂಡಿರುವುದಿಲ್ಲ. ಸಾರುವ ಕೆಲಸವು ಪ್ರಾಮಾಣಿಕ ಹೃದಯದ ಜನರ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದಾದರೂ, ಅದು ಬೇರೆ ಪ್ರಮುಖ ಉದ್ದೇಶಗಳನ್ನೂ ಪೂರೈಸುತ್ತದೆ. ಈ ಕ್ರೈಸ್ತ ಶುಶ್ರೂಷೆಯ ಮೂಲಕ ನಮಗೆ ಯೆಹೋವನ ಮೇಲಿರುವ ಪ್ರೀತಿಯನ್ನು ತೋರಿಸಲು ಅವಕಾಶ ಸಿಗುತ್ತದೆ. (1 ಯೋಹಾ. 5:3) ರಕ್ತಾಪರಾಧವನ್ನು ತಪ್ಪಿಸಲು ನಮಗೆ ಸಾಧ್ಯವಾಗುತ್ತದೆ. (ಅ. ಕೃ. 20:26, 27) ದೇವರು “ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ” ಎಂದು ಭಕ್ತಿಹೀನರಿಗೆ ಅದರಿಂದ ಎಚ್ಚರಿಕೆ ಸಿಗುತ್ತದೆ. (ಪ್ರಕ. 14:6, 7) ಎಲ್ಲಕ್ಕಿಂತಲೂ ಮಿಗಿಲಾಗಿ, ಸುವಾರ್ತೆ ಸಾರುವ ಮೂಲಕ ಭೂಮ್ಯಾದ್ಯಂತ ಯೆಹೋವನ ನಾಮ ಸ್ತುತಿಸಲ್ಪಡುತ್ತಿದೆ. (ಕೀರ್ತ. 113:3) ಆದುದರಿಂದ ಜನರು ಕೇಳಲಿ, ಕೇಳದಿರಲಿ ನಾವು ರಾಜ್ಯದ ಸಂದೇಶವನ್ನು ಘೋಷಿಸುತ್ತಾ ಇರಬೇಕು. ಹೌದು, ಸುವಾರ್ತೆಯನ್ನು ಘೋಷಿಸಲು ನಾವು ಮಾಡುವ ಎಲ್ಲ ಪ್ರಯತ್ನಗಳು ಯೆಹೋವನ ದೃಷ್ಟಿಯಲ್ಲಿ ಅಂದವಾಗಿವೆ.—ರೋಮಾ. 10:13-15.

17 ಇಂದು ಅನೇಕ ಜನರು ನಮ್ಮ ಸಾರುವ ಕೆಲಸವನ್ನು ಅಸಡ್ಡೆಮಾಡುತ್ತಾರಾದರೂ, ಅವರ ದೃಷ್ಟಿಕೋನ ಬೇಗನೆ ಬದಲಾಗಲಿದೆ. (ಮತ್ತಾ. 24:37-39) ಯೆಹೆಜ್ಕೇಲನು ಘೋಷಿಸುವ ನ್ಯಾಯತೀರ್ಪುಗಳು ಜಾರಿಗೊಳ್ಳುವಾಗ ದ್ರೋಹಿಗಳಾದ ಇಸ್ರಾಯೇಲ್ಯರು, ‘ಒಬ್ಬ ಪ್ರವಾದಿ ತಮ್ಮ ಮಧ್ಯದಲ್ಲಿ ಕಾಣಿಸಿಕೊಂಡಿದ್ದನು’ ಎಂಬುದನ್ನು ನೆನಪಿಸಿಕೊಳ್ಳುವರೆಂದು ಯೆಹೋವನು ಅವನಿಗೆ ಹೇಳಿದನು. (ಯೆಹೆ. 2:5) ಅದೇ ರೀತಿ ಸದ್ಯದ ವಿಷಯಗಳ ವ್ಯವಸ್ಥೆಯ ಮೇಲೆ ದೇವರು ತನ್ನ ನ್ಯಾಯತೀರ್ಪುಗಳನ್ನು ಜಾರಿಗೊಳಿಸುವಾಗ, ಯೆಹೋವನ ಸಾಕ್ಷಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಮನೆಗೆ ಹೋಗಿ ಸಾರುತ್ತಿದ್ದ ಸಂದೇಶವು ವಾಸ್ತವದಲ್ಲಿ ಒಬ್ಬನೇ ಸತ್ಯ ದೇವರಾದ ಯೆಹೋವನದ್ದಾಗಿತ್ತು ಹಾಗೂ ಸಾಕ್ಷಿಗಳು ಆತನ ಪ್ರತಿನಿಧಿಗಳಾಗಿದ್ದರು ಎಂಬುದನ್ನು ಜನರು ಒಪ್ಪಿಕೊಳ್ಳಲೇಬೇಕಾಗುವುದು. ಬಹುಮುಖ್ಯವಾಗಿರುವ ಈ ದಿನಗಳಲ್ಲಿ ಯೆಹೋವನ ನಾಮಧಾರಿಗಳಾಗಿದ್ದು ಆತನ ಸಂದೇಶವನ್ನು ಘೋಷಿಸುವುದು ನಮಗೆಂಥ ಸದವಕಾಶ! ಆತನ ಸಹಾಯದಿಂದ ನಾವು ಮನೆಮನೆಯ ಶುಶ್ರೂಷೆಯಲ್ಲಿನ ಸವಾಲುಗಳನ್ನು ನಿಭಾಯಿಸುತ್ತಾ ಇರೋಣ.

[ಪಾದಟಿಪ್ಪಣಿ]

^ ಪ್ಯಾರ. 12 ಕೆಲವು ಟೆರಿಟೊರಿಗಳಲ್ಲಿ ಭಿನ್ನವಾದ ವಿಧಾನವನ್ನು ಬಳಸುವಂತೆ ನಮ್ಮ ರಾಜ್ಯದ ಸೇವೆ ಸೂಚಿಸಬಹುದು.

ನಿಮ್ಮ ಉತ್ತರವೇನು?

• ಸಾರಲಿಕ್ಕಾಗಿ ಹೇಗೆ ಧೈರ್ಯ ತಂದುಕೊಳ್ಳಬಲ್ಲೆವು?

• ಮನೆಮನೆಯ ಶುಶ್ರೂಷೆಯಲ್ಲಿ ಬೈಬಲ್‌ ಚರ್ಚೆಗಳನ್ನು ಆರಂಭಿಸಲು ನಮಗೆ ಯಾವುದು ಸಹಾಯ ಮಾಡಬಲ್ಲದು?

• ನಾವು ಇತರರಲ್ಲಿ ಹೇಗೆ ಯಥಾರ್ಥ ಆಸಕ್ತಿ ತೋರಿಸಬಲ್ಲೆವು?

• ಟೆರಿಟೊರಿಯಲ್ಲಿರುವ ಜನರೆಡೆಗೆ ಸಕಾರಾತ್ಮಕ ಮನೋಭಾವ ಇಟ್ಟುಕೊಳ್ಳಲು ನಮಗೆ ಯಾವುದು ಸಹಾಯ ಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

1. ಯೆರೆಮೀಯನಿಗೆ ಎದುರಾದ ಸವಾಲುಗಳು ಯಾವುವು, ಮತ್ತು ಅವುಗಳನ್ನು ಹೇಗೆ ನಿಭಾಯಿಸಲು ಶಕ್ತನಾದನು?

2, 3. ಇಂದು ದೇವರ ಸೇವಕರು ಯೆರೆಮೀಯನು ಎದುರಿಸಿದಂಥದ್ದೇ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ ಹೇಗೆ?

4. ಧೈರ್ಯದಿಂದ ಸುವಾರ್ತೆ ಸಾರಲು ಅಪೊಸ್ತಲ ಪೌಲನನ್ನು ಯಾವುದು ಶಕ್ತಗೊಳಿಸಿತು?

5. ನಾವು ಸಾರಲು ಧೈರ್ಯ ತಂದುಕೊಳ್ಳುವ ಒಂದು ವಿಧ ಯಾವುದು?

6, 7. (ಎ) ಯೆಹೆಜ್ಕೇಲನಿಗೆ ಯಾವ ದರ್ಶನ ಸಿಕ್ಕಿತು, ಮತ್ತು ಅದರ ಅರ್ಥವೇನು? (ಬಿ) ಯೆಹೆಜ್ಕೇಲನ ದರ್ಶನದಲ್ಲಿ ದೇವರ ಇಂದಿನ ಸೇವಕರಿಗೆ ಯಾವ ಪಾಠವಿದೆ?

8. ಮನೆಮನೆಯ ಶುಶ್ರೂಷೆಯಲ್ಲಿ ಬೈಬಲ್‌ ಚರ್ಚೆಗಳನ್ನು ಆರಂಭಿಸುವಂತೆ ಕೆಲವು ರಾಜ್ಯ ಪ್ರಚಾರಕರಿಗೆ ಯಾವ ವಿಧಾನವು ಸಹಾಯ ಮಾಡಿದೆ?

9. ಒಳ್ಳೇ ತಯಾರಿ ಪ್ರಾಮುಖ್ಯವೇಕೆ?

10. ಕ್ಷೇತ್ರ ಸೇವಾ ಕೂಟಗಳು ಪ್ರಾಯೋಗಿಕವೂ ಉಪಯುಕ್ತವೂ ಆಗಿರಲು ಏನು ಮಾಡಬಹುದು?

11, 12. ಕರುಣೆಯಿಂದ ಜನರಿಗೆ ಕಿವಿಗೊಡುವುದು ಸುವಾರ್ತೆಯನ್ನು ಅವರ ಹೃದಯಕ್ಕೆ ಮುಟ್ಟಿಸಲು ಹೇಗೆ ಸಹಾಯ ಮಾಡುವುದು? ಉದಾಹರಣೆಗಳನ್ನು ಕೊಡಿ.

13. ನಮ್ಮ ನಿರೂಪಣೆಯನ್ನು ನಾವು ಭೇಟಿಯಾಗುವ ಜನರಿಗೆ ತಕ್ಕಂತೆ ಹೇಗೆ ಹೊಂದಿಸಿಕೊಳ್ಳಬಲ್ಲೆವು?

14. ನಮ್ಮ ಶುಶ್ರೂಷೆಯಲ್ಲಿ ಯೆಹೋವನ ಗುಣಗಳನ್ನು ಹೇಗೆ ಪ್ರತಿಬಿಂಬಿಸಬಲ್ಲೆವು?

15. (ಎ) ಜನರು ಸಂದೇಶವನ್ನು ತಿರಸ್ಕರಿಸುವಲ್ಲಿ ಏನು ಮಾಡುವಂತೆ ಯೇಸು ತನ್ನ ಅಪೊಸ್ತಲರಿಗೆ ಆದೇಶಕೊಟ್ಟನು? (ಬಿ) ಯೋಗ್ಯರನ್ನು ಹುಡುಕಲು ಗಮನಕೊಡುವಂತೆ ನಮಗೇನು ಸಹಾಯಮಾಡಬಲ್ಲದು?

16. ಸಾರುತ್ತಾ ಇರಲು ನಮಗೆ ಯಾವ ಕಾರಣಗಳಿವೆ?

17. ಜನರು ಬಲುಬೇಗನೆ ಏನನ್ನು ಒಪ್ಪಿಕೊಳ್ಳಲೇಬೇಕಾಗುವುದು?

[ಪುಟ 9ರಲ್ಲಿರುವ ಚೌಕ/ಚಿತ್ರ]

ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಒಂದು ವಿ

ಆರಂಭಿಸಲು:

◼ ಮನೆಯವರನ್ನು ವಂದಿಸಿದ ಬಳಿಕ ಅವರಿಗೊಂದು ಟ್ರ್ಯಾಕ್ಟ್‌ ಕೊಟ್ಟು ಹೀಗನ್ನಿ: “ಈ ಪ್ರಾಮುಖ್ಯ ವಿಷಯವನ್ನು ತಿಳಿಸಲಿಕ್ಕಾಗಿ ನಿಮ್ಮನ್ನು ಭೇಟಿಮಾಡುತ್ತಿದ್ದೇನೆ.”

◼ ಅಥವಾ ಟ್ರ್ಯಾಕ್ಟ್‌ ನೀಡಿ ಹೀಗೂ ಅನ್ನಬಹುದು: “ಈ ವಿಷಯದ ಕುರಿತು ನಿಮ್ಮ ಅನಿಸಿಕೆಯೇನೆಂದು ತಿಳಿಯಲಿಕ್ಕೋಸ್ಕರ ನಿಮ್ಮನ್ನು ಭೇಟಿಮಾಡುತ್ತಿದ್ದೇನೆ.”

ಅವರು ಟ್ರ್ಯಾಕ್ಟ್‌ ಸ್ವೀಕರಿಸಿದರೆ:

◼ ತುಂಬ ಹೊತ್ತು ಕಾಯದೇ ಆ ಟ್ರ್ಯಾಕ್ಟ್‌ನ ಶೀರ್ಷಿಕೆಯ ಮೇಲಾಧರಿಸಿ ಸರಳವಾದ ದೃಷ್ಟಿಕೋನ ಪ್ರಶ್ನೆಯೊಂದನ್ನು ಕೇಳಿ.

◼ ತದೇಕಚಿತ್ತದಿಂದ ಕಿವಿಗೊಟ್ಟು, ಮನೆಯವನ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವನ ಅಭಿಪ್ರಾಯ ತಿಳಿಸಿದಕ್ಕೆ ಧನ್ಯವಾದ ಹೇಳಿ, ಅವನ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ಸಂಭಾಷಣೆ ಮುಂದುವರಿಸಿರಿ.

ಚರ್ಚೆ ಮುಂದುವರಿಸಲು:

◼ ಒಂದು ಅಥವಾ ಹೆಚ್ಚು ವಚನಗಳನ್ನು ಓದಿ ಚರ್ಚಿಸಿರಿ ಮತ್ತು ವ್ಯಕ್ತಿಯ ಅಭಿರುಚಿಗಳು ಹಾಗೂ ಅಗತ್ಯಗಳಿಗೆ ತಕ್ಕಂತೆ ನಿರೂಪಣೆಯನ್ನು ಹೊಂದಿಸಿ.

◼ ಆಸಕ್ತಿ ತೋರಿಸುವಲ್ಲಿ ಸಾಹಿತ್ಯ ನೀಡಿ, ಸಾಧ್ಯವಿರುವುದಾದರೆ ಬೈಬಲ್‌ ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಿರಿ. ಪುನಃ ಭೇಟಿಮಾಡಲು ಏರ್ಪಾಡು ಮಾಡಿ.