ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನೆಮನೆಯ ಶುಶ್ರೂಷೆ ಈಗಲೂ ಪ್ರಾಮುಖ್ಯವೇಕೆ?

ಮನೆಮನೆಯ ಶುಶ್ರೂಷೆ ಈಗಲೂ ಪ್ರಾಮುಖ್ಯವೇಕೆ?

ಮನೆಮನೆಯ ಶುಶ್ರೂಷೆ ಈಗಲೂ ಪ್ರಾಮುಖ್ಯವೇಕೆ?

“ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ [ಅವರು] ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.”—ಅ.ಕೃ. 5:42.

ನೀಟಾಗಿ ತೋರುವ ಇಬ್ಬರು ವ್ಯಕ್ತಿಗಳು ಒಂದು ಮನೆಗೆ ಹೋಗುತ್ತಾರೆ. ಮನೆಯವನಿಗೆ ದೇವರ ರಾಜ್ಯದ ಕುರಿತ ಸಂದೇಶವನ್ನು ಬೈಬಲಿನಿಂದ ಚುಟುಕಾಗಿ ತಿಳಿಸುತ್ತಾರೆ. ಅವನು ಆಸಕ್ತಿ ತೋರಿಸಿದರೆ, ಅವನಿಗೆ ಬೈಬಲ್‌ ಆಧಾರಿತ ಸಾಹಿತ್ಯ ನೀಡಿ, ಉಚಿತ ಮನೆ ಬೈಬಲ್‌ ಅಧ್ಯಯನದ ಕುರಿತು ಹೇಳುತ್ತಾರೆ. ಬಳಿಕ ಮುಂದಿನ ಮನೆಗೆ ಹೋಗುತ್ತಾರೆ. ಈ ದೃಶ್ಯವು ಭೂಮಿಯ ಹೆಚ್ಚುಕಡಿಮೆ ಪ್ರತಿಯೊಂದು ದೇಶದಲ್ಲಿ ಸರ್ವಸಾಮಾನ್ಯವಾಗಿದೆ. ನೀವು ಸಹ ಈ ಕೆಲಸ ಮಾಡುತ್ತಿರುವಲ್ಲಿ, ಮಾತಾಡಲು ತೊಡಗುವ ಮುಂಚೆಯೇ ಜನರು ನಿಮ್ಮನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸುವುದನ್ನು ನೋಡಿರಬಹುದು. ಹೌದು, ಮನೆಮನೆಯ ಶುಶ್ರೂಷೆ ಯೆಹೋವನ ಸಾಕ್ಷಿಗಳ ಗುರುತುಚಿಹ್ನೆಯಾಗಿಬಿಟ್ಟಿದೆ.

2 ಸಾರಲು ಮತ್ತು ಶಿಷ್ಯರನ್ನಾಗಿ ಮಾಡಲು ಯೇಸು ಕೊಟ್ಟ ನೇಮಕವನ್ನು ಪೂರೈಸಲಿಕ್ಕಾಗಿ ನಾವು ವಿವಿಧ ವಿಧಾನಗಳನ್ನು ಬಳಸುತ್ತೇವೆ. (ಮತ್ತಾ. 28:19, 20) ನಾವು ಪೇಟೆಗಳಲ್ಲಿ, ಬೀದಿಗಳಲ್ಲಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಾಕ್ಷಿನೀಡುತ್ತೇವೆ. (ಅ.ಕೃ. 17:17) ಟೆಲಿಫೋನ್‌ ಹಾಗೂ ಪತ್ರಗಳ ಮೂಲಕ ಅನೇಕರನ್ನು ಸಂಪರ್ಕಿಸುತ್ತೇವೆ. ನಮಗೆ ದಿನನಿತ್ಯ ಸಿಗುವ ಜನರಿಗೆ ಬೈಬಲ್‌ ಸತ್ಯಗಳನ್ನು ತಿಳಿಸುತ್ತೇವೆ. ನಮಗೊಂದು ಅಧಿಕೃತ ವೆಬ್‌ಸೈಟ್‌ ಸಹ ಇದೆ. ಹೀಗೆ ಬೆರಳತುದಿಯಲ್ಲೇ ಬೈಬಲ್‌ ಸಾಹಿತ್ಯದ ಮಾಹಿತಿ 300ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಲಭ್ಯವಾಗುತ್ತದೆ. * ಈ ಎಲ್ಲ ವಿಧಾನಗಳಿಂದ ಉತ್ತಮ ಪ್ರತಿಫಲಗಳು ಸಿಗುತ್ತಿವೆ. ಆದರೂ ಹೆಚ್ಚಿನ ಸ್ಥಳಗಳಲ್ಲಿ ಸುವಾರ್ತೆಯನ್ನು ಪ್ರಚುರಪಡಿಸುವ ಪ್ರಮುಖ ವಿಧಾನವು ಮನೆಮನೆಗೆ ಹೋಗಿ ಸಾರುವುದೇ ಆಗಿದೆ. ಸಾರುವಿಕೆಯ ಈ ವಿಧಾನಕ್ಕೆ ಯಾವ ಆಧಾರವಿದೆ? ಆಧುನಿಕ ಸಮಯಗಳಲ್ಲಿ ದೇವರ ಸೇವಕರು ಈ ವಿಧಾನವನ್ನು ಇಷ್ಟು ವ್ಯಾಪಕವಾಗಿ ಬಳಸಲಾರಂಭಿಸಿದ್ದು ಹೇಗೆ? ಅದು ಈಗಲೂ ಪ್ರಾಮುಖ್ಯವೇಕೆ?

ಅಪೊಸ್ತಲರು ಬಳಸಿದ ವಿಧಾನ

3 ಮನೆಯಿಂದ ಮನೆಗೆ ಸಾರುವ ವಿಧಾನಕ್ಕೆ ಬೈಬಲಿನಲ್ಲಿ ಆಧಾರವಿದೆ. ಯೇಸು ತನ್ನ ಅಪೊಸ್ತಲರನ್ನು ಸಾರಲು ಕಳುಹಿಸಿದಾಗ ಈ ಆದೇಶಕೊಟ್ಟನು: “ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆಮಾಡಿ.” ಯೋಗ್ಯರನ್ನು ಅವರು ಹೇಗೆ ಹುಡುಕಬೇಕಿತ್ತು? ಮನೆಮನೆಗಳಿಗೆ ಹೋಗಿ ಹುಡುಕಬೇಕೆಂದು ಯೇಸು ಹೇಳಿದನು. ಅವನಂದದ್ದು: “ಆ ಮನೆಯೊಳಕ್ಕೆ ಹೋಗುವಾಗ ಶುಭವಾಗಲಿ ಅನ್ನಿರಿ. ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ಅವರಿಗೆ ಆಗಲಿ.” ಮನೆಯವರು ಆಮಂತ್ರಿಸದಿದ್ದರೂ ಅವರು ಹೋಗಬೇಕಿತ್ತೋ? ಯೇಸು ಮುಂದುವರಿಸುತ್ತಾ ಹೇಳಿದ ಮಾತುಗಳನ್ನು ಗಮನಿಸಿರಿ: “ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನು ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.” (ಮತ್ತಾ. 10:11-14) ಈ ಆದೇಶಗಳ ಪ್ರಕಾರ, ಅಪೊಸ್ತಲರು ‘ಸುವಾರ್ತೆಯನ್ನು ಸಾರುತ್ತಾ ಗ್ರಾಮಗಳಲ್ಲೆಲ್ಲಾ ಸಂಚರಿಸುವಾಗ’ ಜನರನ್ನು ಮನೆಗಳಲ್ಲಿ ಭೇಟಿಮಾಡಲು ಮೊದಲ ಹೆಜ್ಜೆ ತೆಗೆದುಕೊಳ್ಳಬೇಕಿತ್ತು.—ಲೂಕ 9:6.

4 ಅಪೊಸ್ತಲರು ಮನೆಮನೆಗೆ ಹೋಗಿ ಸಾಕ್ಷಿನೀಡಿದರೆಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. ಉದಾಹರಣೆಗೆ, ಅವರ ಬಗ್ಗೆ ಅಪೊಸ್ತಲರ ಕೃತ್ಯಗಳು 5:42 ಹೇಳುವುದು: “ಹಿರೀಸಭೆಯ ಎದುರಿನಿಂದ ಹೊರಟುಹೋಗಿ ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” ಸುಮಾರು 20 ವರ್ಷಗಳ ಬಳಿಕ ಅಪೊಸ್ತಲ ಪೌಲನು ಎಫೆಸ ಸಭೆಯ ಹಿರಿಯರಿಗೆ ಜ್ಞಾಪಕಹುಟ್ಟಿಸಿದ್ದು: ‘ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವದಕ್ಕೂ ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗೆಯಲಿಲ್ಲ.’ ಆ ಹಿರಿಯರು ವಿಶ್ವಾಸಿಗಳಾಗುವ ಮೊದಲು ಪೌಲನು ಅವರನ್ನು ಭೇಟಿಯಾದನೆಂದು ತೋರುತ್ತದೆ. ಯಾಕೆಂದರೆ ಇತರ ವಿಷಯಗಳೊಂದಿಗೆ ಆತನು ಅವರಿಗೆ “ದೇವರ ಕಡೆಗೆ ತಿರುಗಬೇಕೆಂತಲೂ ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ” ಬೋಧಿಸಿದನು. (ಅ. ಕೃ. 20:20, 21) ಅಪೊಸ್ತಲರ ಕೃತ್ಯಗಳು 20:20ರ ಬಗ್ಗೆ ರಾಬರ್ಟ್‌ಸನ್‌ ಅವರ ವರ್ಡ ಪಿಕ್ಚರ್ಸ ಇನ್‌ ದ ನ್ಯೂ ಟೆಸ್ಟಮೆಂಟ್‌ ಎಂಬ ಪುಸ್ತಕ ತಿಳಿಸುವುದು: “ಅತ್ಯಂತ ಮಹಾನ್‌ ಸೌವಾರ್ತಿಕರಲ್ಲಿ ಒಬ್ಬನಾಗಿದ್ದ ಈತನು ಮನೆಮನೆಯ ಸಾಕ್ಷಿಕಾರ್ಯದಲ್ಲಿ ತೊಡಗಿದ್ದು ಗಮನಾರ್ಹ.”

ಆಧುನಿಕ ದಿನದ ಮಿಡತೆ ಸೈನ್ಯ

5 ಪ್ರಥಮ ಶತಮಾನದ ಸಾಕ್ಷಿಕಾರ್ಯವು ನಮ್ಮ ದಿನಗಳಲ್ಲಿ ನಡೆಯಲಿದ್ದ ಮಹಾನ್‌ ಸಾಕ್ಷಿಕಾರ್ಯದ ಮುನ್‌ಛಾಯೆ ಆಗಿತ್ತು. ಪ್ರವಾದಿ ಯೋವೇಲನು ಅಭಿಷಿಕ್ತ ಕ್ರೈಸ್ತರ ಸಾರುವ ಕೆಲಸವನ್ನು ಮಿಡತೆಗಳ ಧ್ವಂಸಕಾರಕ ದಾಳಿಗೆ ಹೋಲಿಸಿದನು. (ಯೋವೇ. 1:4) ಸೈನ್ಯದಂತೆ ಮುನ್ನುಗ್ಗುತ್ತಾ ಈ ಮಿಡತೆಗಳು ತಡೆಗಳನ್ನು ಜಯಿಸುತ್ತವೆ, ಮನೆಗಳೊಳಗೆ ನುಗ್ಗುತ್ತವೆ ಮತ್ತು ಸಿಕ್ಕಿದ್ದೆಲ್ಲವನ್ನು ತಿಂದುಬಿಡುತ್ತವೆ. (ಯೋವೇಲ 2:2, 7-9 ಓದಿ.) ಆಧುನಿಕ ದಿನಗಳಲ್ಲಿ ದೇವಜನರು ಸಾಕ್ಷಿಕಾರ್ಯವನ್ನು ಪಟ್ಟುಹಿಡಿದು, ಸಂಪೂರ್ಣ ರೀತಿಯಲ್ಲಿ ಮಾಡುವರೆಂಬುದನ್ನು ಇದೆಷ್ಟು ಸ್ಪಷ್ಟವಾಗಿ ವರ್ಣಿಸುತ್ತದೆ! ಈ ವರ್ಣನಾತ್ಮಕ ಪ್ರವಾದನೆಯನ್ನು ನೆರವೇರಿಸಲು ಅಭಿಷಿಕ್ತ ಕ್ರೈಸ್ತರು ಮತ್ತವರ ಸಂಗಡಿಗರಾದ ಬೇರೆ ಕುರಿಗಳು ಉಪಯೋಗಿಸುವ ಅತಿ ಪ್ರಧಾನ ವಿಧಾನವು ಮನೆಮನೆಯ ಶುಶ್ರೂಷೆ ಆಗಿದೆ. (ಯೋಹಾ. 10:16) ಅಪೊಸ್ತಲರು ಬಳಸಿದ ಈ ವಿಧಾನವನ್ನು ಯೆಹೋವನ ಸಾಕ್ಷಿಗಳಾದ ನಾವು ಬಳಸುವಂತಾದದ್ದು ಹೇಗೆ?

6 ಸಾರುವ ಕೆಲಸದಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕ್ರೈಸ್ತನಿಗಿದೆಯೆಂದು 1919ರಿಂದ ಒತ್ತಿಹೇಳಲಾಗಿದೆ. ಉದಾಹರಣೆಗೆ 1922, ಆಗಸ್ಟ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯಲ್ಲಿ, “ಸೇವೆಯು ಅತ್ಯಾವಶ್ಯಕ” ಎಂಬ ಲೇಖನವು, “ಪರಲೋಕ ರಾಜ್ಯವು ಸಮೀಪವಿದೆ ಎಂಬ ಮುದ್ರಿತ ಸಂದೇಶವನ್ನು ಜನರಿಗೆ ಕೊಡುವುದರಲ್ಲಿ ಮತ್ತು ಮನೆಬಾಗಲಿಗೆ ಹೋಗಿ ಜನರೊಂದಿಗೆ ಮಾತಾಡುವುದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ” ಮಹತ್ತ್ವವನ್ನು ಅಭಿಷಿಕ್ತ ಕ್ರೈಸ್ತರಿಗೆ ಜ್ಞಾಪಕಹುಟ್ಟಿಸಿತು. ಬುಲೆಟಿನ್‌ನಲ್ಲಿ (ಈಗ ನಮ್ಮ ರಾಜ್ಯದ ಸೇವೆ) ಶುಶ್ರೂಷೆಗಾಗಿ ಸವಿವರ ನಿರೂಪಣೆಗಳನ್ನು ಕೊಡಲಾಯಿತು. ಆದರೂ ಮನೆಮನೆಗೆ ಹೋಗಿ ಸಾರುತ್ತಿದ್ದವರು ಮೊದಮೊದಲು ಕೇವಲ ಕೊಂಚ ಮಂದಿ. ಕೆಲವರಂತೂ ಸೇವೆಗೇ ಹೋಗುತ್ತಿರಲಿಲ್ಲ, ಏನಾದರೂ ತಕರಾರು ಎಬ್ಬಿಸುತ್ತಾ ಇರುತ್ತಿದ್ದರು. ಆದರೆ ನಿಜವಾಗಿ ಸಮಸ್ಯೆ ಏನಾಗಿತ್ತೆಂದರೆ, ಮನೆಯಿಂದ ಮನೆಗೆ ಹೋದರೆ ತಮ್ಮ ಮರ್ಯಾದೆ ಕಡಿಮೆಯಾಗುತ್ತದೆಂದು ಇಂಥವರು ನೆನಸುತ್ತಿದ್ದರು. ಕ್ಷೇತ್ರ ಸೇವೆಗೆ ಇನ್ನಷ್ಟು ಮಹತ್ತ್ವ ಕೊಡಲಾದಾಗ ಅನೇಕರು ಕ್ರಮೇಣವಾಗಿ ಯೆಹೋವನ ಸಂಘಟನೆಯನ್ನೇ ಬಿಟ್ಟುಹೋದರು.

7 ಮುಂದಿನ ದಶಕಗಳಲ್ಲಿ ಲೋಕವ್ಯಾಪಕವಾಗಿ ಸಾರುವ ಕೆಲಸ ಹೆಚ್ಚಿತಾದರೂ ಮನೆಮನೆಯ ಶುಶ್ರೂಷೆಯ ವಿಷಯದಲ್ಲಿ ಪ್ರಚಾರಕರಿಗೆ ಹೆಚ್ಚಿನ ವೈಯಕ್ತಿಕ ತರಬೇತಿ ಅಗತ್ಯ ಎಂಬುದು ವ್ಯಕ್ತವಾಯಿತು. ಉದಾಹರಣೆಗೆ, 1950ರ ದಶಕದ ಆರಂಭದಲ್ಲಿ ಯುನೈಟೆಡ್‌ ಸ್ಟೇಟ್ಸ್‌ನಲ್ಲಿದ್ದ ಸನ್ನಿವೇಶವನ್ನು ತೆಗೆದುಕೊಳ್ಳಿ. ಅಲ್ಲಿನ ಸಾಕ್ಷಿಗಳಲ್ಲಿ 28 ಪ್ರತಿಶತ ಮಂದಿ ಕರಪತ್ರಗಳನ್ನು ಹಂಚುವುದರಲ್ಲಿ ಅಥವಾ ಪತ್ರಿಕೆಗಳನ್ನು ಹಿಡಿದು ಬೀದಿಯಲ್ಲಿ ನಿಂತು ಸಾರುವುದರಲ್ಲೇ ತೃಪ್ತರಾಗಿದ್ದರು. 40 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ ಅಕ್ರಮ ಪ್ರಚಾರಕರಾಗಿದ್ದು, ತಿಂಗಳುಗಟ್ಟಲೆ ಯಾವುದೇ ರೀತಿಯಲ್ಲಿ ಸುವಾರ್ತೆ ಸಾರುತ್ತಿರಲಿಲ್ಲ. ಹಾಗಾದರೆ, ಎಲ್ಲ ಸಮರ್ಪಿತ ಸಾಕ್ಷಿಗಳಿಗೆ ಮನೆಮನೆಯ ಶುಶ್ರೂಷೆಯಲ್ಲಿ ಹೇಗೆ ಸಹಾಯ ಮಾಡಬಹುದಿತ್ತು?

8 ನ್ಯೂ ಯಾರ್ಕ್‌ ನಗರದಲ್ಲಿ 1953ರಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಮನೆಮನೆಯ ಶುಶ್ರೂಷೆಗೆ ವಿಶೇಷ ಗಮನ ಕೊಡಲಾಯಿತು. ಆ ಅಧಿವೇಶನದಲ್ಲಿ, ಪ್ರತಿಯೊಬ್ಬ ಸಾಕ್ಷಿಯು ಮನೆಮನೆಯ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವಂತೆ ಸಹಾಯಮಾಡುವುದು ಎಲ್ಲ ಕ್ರೈಸ್ತ ಮೇಲ್ವಿಚಾರಕರ ಮುಖ್ಯ ಕೆಲಸವಾಗಿದೆ ಎಂಬದನ್ನು ಸಹೋದರ ನೇತನ್‌ ಎಚ್‌. ನಾರ್‌ ತಿಳಿಯಪಡಿಸಿದರು. ಅವರು ಹೇಳಿದ್ದು: “ಮನೆಮನೆಗೆ ಹೋಗಿ ಸುವಾರ್ತೆ ಸಾರಲು ಎಲ್ಲರೂ ಸಮರ್ಥರಾಗಬೇಕು.” ಈ ಗುರಿಯನ್ನು ಸಾಧಿಸಲೆಂದು ಭೌಗೋಳಿಕ ತರಬೇತು ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ, ಅಷ್ಟರತನಕ ಮನೆಮನೆಯ ಸಾರುವ ಕೆಲಸದಲ್ಲಿ ಭಾಗವಹಿಸದಿದ್ದವರಿಗೆ ತರಬೇತಿ ನೀಡಲಾಯಿತು. ಮನೆಮನೆಗೆ ಹೋಗಿ ಜನರನ್ನು ಭೇಟಿಮಾಡಲು, ಬೈಬಲನ್ನು ಬಳಸಿ ಚರ್ಚೆ ನಡೆಸಲು ಮತ್ತು ಮನೆಯವರ ಪ್ರಶ್ನೆಗಳನ್ನು ಉತ್ತರಿಸಲು ಅವರಿಗೆ ಸಹಾಯ ನೀಡಲಾಯಿತು.

9 ಈ ತರಬೇತು ಕಾರ್ಯಕ್ರಮದ ಫಲಿತಾಂಶಗಳು ಅತ್ಯುತ್ತಮವಾಗಿದ್ದವು. ಕೇವಲ ಒಂದು ದಶಕದೊಳಗೆ ಲೋಕವ್ಯಾಪಕವಾಗಿ ಪ್ರಚಾರಕರ ಸಂಖ್ಯೆ 100 ಪ್ರತಿಶತ, ಪುನರ್ಭೇಟಿಗಳ ಸಂಖ್ಯೆ 126 ಪ್ರತಿಶತ ಮತ್ತು ಬೈಬಲ್‌ ಅಧ್ಯಯನಗಳ ಸಂಖ್ಯೆ 150 ಪ್ರತಿಶತದಷ್ಟು ಹೆಚ್ಚಾಯಿತು. ಇಂದು ಸುಮಾರು ಎಪ್ಪತ್ತು ಲಕ್ಷದಷ್ಟು ಪ್ರಚಾರಕರು ಲೋಕದಾದ್ಯಂತ ಸುವಾರ್ತೆ ಸಾರುತ್ತಿದ್ದಾರೆ. ಈ ಗಮನಾರ್ಹ ಅಭಿವೃದ್ಧಿಯು ಯೆಹೋವನು ತನ್ನ ಜನರನ್ನು ಮನೆಮನೆಯ ಶುಶ್ರೂಷೆಯಲ್ಲಿ ಆಶೀರ್ವದಿಸುತ್ತಿದ್ದಾನೆ ಎಂಬದಕ್ಕೆ ಒಂದು ಪುರಾವೆಯಾಗಿದೆ.—ಯೆಶಾ. 60:22.

ರಕ್ಷಣೆಗಾಗಿ ಜನರನ್ನು ಗುರುತಿಸುವುದು

10 ಮನೆಮನೆ ಶುಶ್ರೂಷೆಯ ಮಹತ್ತ್ವವು ಪ್ರವಾದಿ ಯೆಹೆಜ್ಕೇಲನಿಗೆ ಕೊಡಲಾದ ದರ್ಶನದಿಂದ ತಿಳಿದುಬರುತ್ತದೆ. ಆ ದರ್ಶನದಲ್ಲಿ ಯೆಹೆಜ್ಕೇಲನು, ಆಯುಧಗಳನ್ನು ಹಿಡಿದಿದ್ದ ಆರು ಮಂದಿ ಪುರುಷರನ್ನು ಅಲ್ಲದೆ ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿದ್ದ ಏಳನೇ ಪುರುಷನನ್ನು ಕಂಡನು. ಏಳನೇ ಪುರುಷನಿಗೆ, “ಪಟ್ಟಣದಲ್ಲೆಲ್ಲಾ ತಿರುಗಿ ಅದರೊಳಗೆ ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು” ಎಂದು ಅಪ್ಪಣೆಕೊಡಲಾಯಿತು. ಅನಂತರ, ಯಾರಿಗೆಲ್ಲ ಆ ಗುರುತು ಇರಲಿಲ್ಲವೋ ಅವರನ್ನು ಹತಿಸುವಂತೆ ಆಯುಧಗಳಿದ್ದ ಆ ಆರು ಮಂದಿ ಪುರುಷರಿಗೆ ಆಜ್ಞಾಪಿಸಲಾಯಿತು.—ಯೆಹೆಜ್ಕೇಲ 9:1-6 ಓದಿ.

11 ಈ ಪ್ರವಾದನೆಯ ನೆರವೇರಿಕೆಯನ್ನು ಪರಿಗಣಿಸುವಾಗ, “ನಾರಿನ ಬಟ್ಟೆಯನ್ನು ಹೊದ್ದುಕೊಂಡ” ವ್ಯಕ್ತಿಯು ಆತ್ಮಾಭಿಷಿಕ್ತ ಕ್ರೈಸ್ತರ ಉಳಿಕೆಯವರನ್ನು ಪ್ರತಿನಿಧಿಸುತ್ತಾನೆ ಎಂಬುದನ್ನು ನಾವಿಂದು ಗ್ರಹಿಸುತ್ತೇವೆ. ಈ ಅಭಿಷಿಕ್ತ ವರ್ಗವು ಸಾರುವ ಮತ್ತು ಶಿಷ್ಯರನ್ನು ಮಾಡುವ ಕೆಲಸದ ಮೂಲಕ “ಬೇರೆ ಕುರಿಗಳ” ಭಾಗವಾಗುವವರ ಮೇಲೆ ಸಾಂಕೇತಿಕ ಗುರುತನ್ನು ಹಾಕುತ್ತದೆ. (ಯೋಹಾ. 10:16) ಆ ಗುರುತು ಏನಾಗಿದೆ? ಒಬ್ಬ ವ್ಯಕ್ತಿ ಯೇಸು ಕ್ರಿಸ್ತನ ಸಮರ್ಪಿತ, ದೀಕ್ಷಾಸ್ನಾನ ಹೊಂದಿದ ಶಿಷ್ಯನಾಗಿದ್ದಾನೆ ಮತ್ತು ಕ್ರಿಸ್ತಸದೃಶ ಹೊಸ ವ್ಯಕ್ತಿತ್ವವನ್ನು ಧರಿಸಿದ್ದಾನೆಂಬ ಪುರಾವೆಯೇ ಅದಾಗಿದೆ. ಇದು, ಅವರ ಹಣೆಯ ಮೇಲೆ ಇದೆಯೋ ಎಂಬಂತೆ ಸ್ಪಷ್ಟವಾಗಿ ಕಾಣುವಂತಿರುತ್ತದೆ. (ಎಫೆ. 4:20-24) ಈ ಕುರಿಸದೃಶ್ಯ ಜನರು ಅಭಿಷಿಕ್ತ ಕ್ರೈಸ್ತರೊಂದಿಗೆ ಸೇರಿ ಒಂದೇ ಹಿಂಡಾಗುತ್ತಾರೆ ಮತ್ತು ಅಭಿಷಿಕ್ತರು ಗುರುತುಹಾಕುವ ತಮ್ಮ ಪ್ರಮುಖ ಕೆಲಸವನ್ನು ನಿರ್ವಹಿಸುವಾಗ ಅವರಿಗೆ ನೆರವುನೀಡುತ್ತಾರೆ.—ಪ್ರಕ. 22:17.

12 ಯೆಹೆಜ್ಕೇಲನ ದರ್ಶನವು, ‘ನರಳಿ ಗೋಳಾಡುತ್ತಿರುವ’ ಜನರನ್ನು ನಾವು ಹುಡುಕುತ್ತಾ ಇರುವುದು ಏಕೆ ತುಂಬ ತುರ್ತಿನದ್ದಾಗಿದೆ ಎಂಬುದಕ್ಕೆ ಒಂದು ಕಾರಣ ಕೊಡುತ್ತದೆ. ಅದೇನೆಂದರೆ, ಜನರ ಜೀವ ಗಂಡಾಂತರದಲ್ಲಿದೆ. ಆಯುಧಗಳನ್ನು ಹಿಡಿದಿದ್ದ ಆರು ಮಂದಿ ಪುರುಷರು ಯೆಹೋವನ ಸ್ವರ್ಗೀಯ ಸಂಹಾರಕ ಪಡೆಗಳನ್ನು ಪ್ರತಿನಿಧಿಸುತ್ತಾರೆ. ಈ ಪಡೆಗಳು, ಸಾಂಕೇತಿಕ ಗುರುತನ್ನು ಪಡೆಯದಿದ್ದವರನ್ನು ಬೇಗನೆ ನಾಶಮಾಡಲಿವೆ. ಬರಲಿರುವ ಆ ನ್ಯಾಯತೀರ್ಪಿನ ಕುರಿತು ಪೌಲನು ಬರೆದದ್ದೇನೆಂದರೆ, ಕರ್ತನಾದ ಯೇಸು ತನ್ನ ಶಕ್ತಿಶಾಲಿ “ದೇವದೂತರಿಂದ ಕೂಡಿದವನಾಗಿ . . . ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.” (2 ಥೆಸ. 1:7, 8) ಜನರು ಸುವಾರ್ತೆಗೆ ತೋರಿಸುವ ಪ್ರತಿಕ್ರಿಯೆಯ ಮೇರೆಗೆ ತೀರ್ಪು ಹೊಂದುವರೆಂಬುದನ್ನು ಗಮನಿಸಿ. ಆದುದರಿಂದ ದೇವರ ಸಂದೇಶವನ್ನು ಘೋಷಿಸುವ ಕೆಲಸವು ಯಾವುದೇ ರೀತಿಯಲ್ಲಿ ಕಡಿಮೆಯಾಗದೆ ಕೊನೆವರೆಗೂ ಮುಂದುವರಿಯಬೇಕು. (ಪ್ರಕ. 14:6, 7) ಇದು ಯೆಹೋವನ ಎಲ್ಲ ಸಮರ್ಪಿತ ಸಾಕ್ಷಿಗಳ ಮೇಲೆ ಭಾರೀ ಜವಾಬ್ದಾರಿಯನ್ನು ತರುತ್ತದೆ.—ಯೆಹೆಜ್ಕೇಲ 3:17-19 ಓದಿ.

13 ಅಪೊಸ್ತಲ ಪೌಲನಿಗೆ, ಇತರರಿಗೆ ಸಾರುವುದು ತನ್ನ ವೈಯಕ್ತಿಕ ಜವಾಬ್ದಾರಿ ಆಗಿದೆ ಎಂಬ ಅರಿವಿತ್ತು. ಅವನು ಬರೆದದ್ದು: “ಗ್ರೀಕರಿಗೂ ಇತರ ಜನಗಳಿಗೂ ಜ್ಞಾನಿಗಳಿಗೂ ಮೂಢರಿಗೂ ತೀರಿಸಬೇಕಾದ ಒಂದು ಋಣ ನನ್ನ ಮೇಲೆ ಅದೆ. ಹೀಗಿರುವದರಿಂದ ರೋಮಾಪುರದಲ್ಲಿರುವ ನಿಮಗೆ ಸಹ ಸುವಾರ್ತೆಯನ್ನು ಸಾರುವದಕ್ಕೆ ನಾನಂತೂ ಸಿದ್ಧವಾಗಿದ್ದೇನೆ.” (ರೋಮಾ. 1:14, 15) ದೇವರು ತೋರಿಸಿದ್ದ ಕರುಣೆಯಿಂದ ಪೌಲನು ಪ್ರಯೋಜನ ಹೊಂದಿದ್ದನು ಮತ್ತು ಅದಕ್ಕಾಗಿ ಕೃತಜ್ಞನಾಗಿದ್ದನು. ಅದು, ಇತರರು ಸಹ ತನ್ನಂತೆಯೇ ದೇವರ ಅಪಾತ್ರ ಕೃಪೆಯಿಂದ ಪ್ರಯೋಜನ ಪಡೆಯಲು ಸಹಾಯಮಾಡುವಂತೆ ಅವನನ್ನು ಪ್ರೇರಿಸಿತು. (1 ತಿಮೊ. 1:12-16) ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಗೆ ಅವನೊಂದು ಋಣ ತೀರಿಸಲಿದೆಯೋ ಎಂಬಂತಿದ್ದು, ಸುವಾರ್ತೆಯನ್ನು ಸಾರುವ ಮೂಲಕವೇ ಅವನು ಆ ಋಣವನ್ನು ತೀರಿಸಸಾಧ್ಯವಿತ್ತು. ಟೆರಿಟೊರಿಯಲ್ಲಿರುವ ಜನರ ಕಡೆಗೆ ನಿಮಗೂ ಅಂಥ ಋಣ ಇದೆ ಎಂದು ನಿಮಗನಿಸುತ್ತದೋ?—ಅ.ಕೃತ್ಯಗಳು 20:26, 27 ಓದಿ.

14 ನಾವು ಮನೆಯಿಂದ ಮನೆಗೆ ಸಾರುವ ಒಂದು ಕಾರಣವು ಜನರ ಪ್ರಾಣರಕ್ಷಣೆ ಆಗಿದ್ದರೂ, ಅದಕ್ಕಿಂತಲೂ ಪ್ರಾಮುಖ್ಯವಾದ ಇನ್ನೊಂದು ಕಾರಣವಿದೆ. ಮಲಾಕಿಯ 1:11ರಲ್ಲಿ ದಾಖಲಾಗಿರುವ ಪ್ರವಾದನೆಯಲ್ಲಿ ಯೆಹೋವನು ಘೋಷಿಸುವುದು: “ಸೂರ್ಯನು ಮೂಡುವ ದಿಕ್ಕಿನಿಂದ ಮುಣುಗುವ ದಿಕ್ಕಿನ ವರೆಗೂ ನನ್ನ ನಾಮವು ಅನ್ಯಜನಾಂಗಗಳಲ್ಲಿ ಘನವಾಗಿದೆ; ಒಂದೊಂದು ಸ್ಥಳದಲ್ಲಿಯೂ ನನ್ನ ನಾಮಕ್ಕೆ . . . ಶುದ್ಧನೈವೇದ್ಯವನ್ನೂ ಅರ್ಪಿಸುತ್ತಾರೆ; ಹೌದು, ಅನ್ಯ ಜನಾಂಗಗಳಲ್ಲಿಯೇ ನನ್ನ ನಾಮವು ಘನವಾಗಿದೆ.” ಈ ಪ್ರವಾದನೆಯನ್ನು ನೆರವೇರಿಸುತ್ತಾ ಯೆಹೋವನ ಸಮರ್ಪಿತ ಸಾಕ್ಷಿಗಳು, ದೀನತೆಯಿಂದ ತಮ್ಮ ಶುಶ್ರೂಷೆಯನ್ನು ನಡೆಸುವ ಮೂಲಕ ಭೂಮ್ಯಾದ್ಯಂತ ಯೆಹೋವನ ನಾಮವನ್ನು ಬಹಿರಂಗವಾಗಿ ಸ್ತುತಿಸುತ್ತಿದ್ದಾರೆ. (ಕೀರ್ತ. 109:30; ಮತ್ತಾ. 24:14) ನಾವು ಸಾರ್ವಜನಿಕವಾಗಿಯೂ ಮನೆಮನೆಗೂ ಸಾರುವ ಮುಖ್ಯ ಕಾರಣವು, ಯೆಹೋವನಿಗೆ “ಸ್ತೋತ್ರಯಜ್ಞವನ್ನು” ಅರ್ಪಿಸುವುದೇ ಆಗಿದೆ.—ಇಬ್ರಿ. 13:15.

ಪ್ರಮುಖ ಘಟನೆಗಳು ಮುಂದಿವೆ!

15 ಸಾರುವ ಕೆಲಸದ ಸಂಬಂಧದಲ್ಲಿ ಯಾವ ಗಮನಾರ್ಹ ಬೆಳವಣಿಗೆಗಳು ಸಂಭವಿಸಲಿವೆ? ಇದನ್ನು ತಿಳಿಯಲು ನಾವು ಯೆಹೋಶುವ ಪುಸ್ತಕದಲ್ಲಿ ದಾಖಲಾಗಿರುವ ಒಂದು ಘಟನೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಯೆರಿಕೋ ಪಟ್ಟಣದ ನಾಶನದ ಸ್ವಲ್ಪ ಮುಂಚೆ, ಆರು ದಿವಸಗಳ ವರೆಗೆ ದಿನಕ್ಕೆ ಒಂದು ಸಾರಿ ಪಟ್ಟಣವನ್ನು ಸುತ್ತಬೇಕೆಂದು ದೇವರು ಇಸ್ರಾಯೇಲ್ಯರಿಗೆ ಅಪ್ಪಣೆಕೊಟ್ಟಿದ್ದನು. ಆದರೆ ಏಳನೇ ದಿವಸದಂದು ಅವರ ಚಟುವಟಿಕೆ ಬಹಳಷ್ಟು ಹೆಚ್ಚಾಗಬೇಕಾಗಿತ್ತು. ಯೆಹೋವನು ಯೆಹೋಶುವನಿಗಂದದ್ದು: “ನೀವು ಪಟ್ಟಣವನ್ನು ಏಳು ಸಾರಿ ಸುತ್ತಬೇಕು; ಯಾಜಕರು ಕೊಂಬುಗಳನ್ನು ಊದಬೇಕು. ಅವರು ದೀರ್ಘವಾಗಿ ಊದುವ ಕೊಂಬಿನ ಧ್ವನಿಯು ಕೇಳಿಸುತ್ತಲೇ ನೀವೆಲ್ಲರೂ ಮಹತ್ತರವಾಗಿ ಆರ್ಭಟಿಸಿರಿ. ಆಗ ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವದು.” (ಯೆಹೋ. 6:2-5) ತದ್ರೀತಿಯಲ್ಲಿ ನಮ್ಮ ಸಾರುವ ಚಟುವಟಿಕೆ ಸಹ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯದ ವ್ಯವಸ್ಥೆ ಕೊನೆಯಾಗುವಷ್ಟರಲ್ಲಿ, ಯೆಹೋವನ ನಾಮ ಹಾಗೂ ರಾಜ್ಯಕ್ಕೆ ಲೋಕ ಇತಿಹಾಸದಲ್ಲೇ ಅತ್ಯಂತ ಮಹಾನ್‌ ಸಾಕ್ಷಿ ಕೊಡಲಾಗಿರುವುದನ್ನು ನಾವು ಖಂಡಿತ ನೋಡುವೆವು.

16 ನಮ್ಮ ಸಂದೇಶದ ಘೋಷಣೆಯು ‘ಮಹತ್ತರವಾದ ಆರ್ಭಟದಂತೆ’ ಕೇಳಿಸುವ ಸಮಯ ಬರಬಹುದು. ಪ್ರಕಟನೆ ಪುಸ್ತಕದಲ್ಲಿ ಪ್ರಬಲವಾದ ಸಂದೇಶಗಳನ್ನು ‘ದೊಡ್ಡ ಆನೇಕಲ್ಲಿನ ಮಳೆ’ಯೆಂದು ಚಿತ್ರಿಸಲಾಗಿದೆ. “ಒಂದೊಂದು ಕಲ್ಲು ಹೆಚ್ಚುಕಡಿಮೆ ನಾಲ್ಕುಮಣ (ಮೂಲ: ಒಂದು ತಲಾಂತು) ತೂಕದ್ದಾಗಿತ್ತು.” * ‘ಆ ಆನೇಕಲ್ಲಿನ ಮಳೆಯ ಕಾಟವು ಬಹಳ ಹೆಚ್ಚಾಗಿತ್ತು’ ಎಂದು ಪ್ರಕಟನೆ 16:21 ಹೇಳುತ್ತದೆ. ಆ ತೀರ್ಪಿನ ಸಂದೇಶಗಳ ಅಂತಿಮ ಘೋಷಣೆಯಲ್ಲಿ ಮನೆಮನೆ ಶುಶ್ರೂಷೆಯ ಪಾತ್ರವೇನಾಗಿರುವುದು ಎಂಬುದನ್ನು ಕಾದು ನೋಡಬೇಕಷ್ಟೇ. ಆದರೆ ಈ ಮಾತಂತೂ ಖಂಡಿತ: ‘ಮಹಾ ಸಂಕಟವು’ ಕೊನೆಗೊಳ್ಳುವ ಮುಂಚೆ, ಮಾನವ ಇತಿಹಾಸದಲ್ಲಿ ಹಿಂದೆಂದೂ ಆಗಿರದಿದ್ದಂಥ ರೀತಿಯಲ್ಲಿ ಯೆಹೋವನ ಹೆಸರು ಪ್ರಸಿದ್ಧವಾಗುವುದು.—ಪ್ರಕ. 7:14; ಯೆಹೆ. 38:23.

17 ಮುಂದೆ ನಡೆಯಲಿರುವ ಪ್ರಮುಖ ಘಟನೆಗಳಿಗಾಗಿ ನಾವು ಕಾಯುತ್ತಿರುವಾಗ, ಸುವಾರ್ತೆಯನ್ನು ಹುರುಪಿನಿಂದ ಸಾರುತ್ತಾ ಇರೋಣ. ಈ ನೇಮಕವನ್ನು ಪೂರೈಸುವಾಗ ಮನೆಮನೆಯ ಶುಶ್ರೂಷೆಯಲ್ಲಿ ನಮಗೆದುರಾಗುವ ಸವಾಲುಗಳು ಯಾವುವು ಮತ್ತು ಅವುಗಳನ್ನು ನಾವು ಹೇಗೆ ನಿಭಾಯಿಸಬಲ್ಲೆವು? ಈ ಪ್ರಶ್ನೆಗಳನ್ನು ಮುಂದಿನ ಲೇಖನದಲ್ಲಿ ಪರಿಗಣಿಸಲಾಗುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 4 ವೆಬ್‌ಸೈಟ್‌: www.watchtower.org.

^ ಪ್ಯಾರ. 22 ಇದು ಗ್ರೀಕ್‌ ತಲಾಂತು ಆಗಿರುವಲ್ಲಿ, ಪ್ರತಿಯೊಂದು ಆನೇಕಲ್ಲಿನ ತೂಕ ಸುಮಾರು 20 ಕೆ.ಜಿ. ಆಗಿದೆ.

ನಿಮ್ಮ ಉತ್ತರವೇನು?

• ಮನೆಮನೆಯ ಸಾರುವಿಕೆಗೆ ಬೈಬಲ್‌ನಲ್ಲಿ ಯಾವ ಆಧಾರವಿದೆ?

• ಮನೆಮನೆಯ ಶುಶ್ರೂಷೆಗೆ ಆಧುನಿಕ ಸಮಯಗಳಲ್ಲಿ ಹೇಗೆ ಒತ್ತುಕೊಡಲಾಯಿತು?

• ಯೆಹೋವನ ಸಮರ್ಪಿತ ಸಾಕ್ಷಿಗಳಿಗೆ ಸಾರುವ ಜವಾಬ್ದಾರಿ ಇರುವುದೇಕೆ?

• ಯಾವ ಪ್ರಮುಖ ಘಟನೆಗಳು ಮುಂದೆ ನಡೆಯಲಿವೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಯೆಹೋವನ ಸಾಕ್ಷಿಗಳು ಯಾವ ವಿಧಾನದಲ್ಲಿ ಸಾರುವುದಕ್ಕಾಗಿ ಪ್ರಸಿದ್ಧರು? (ಬಿ) ಈ ಲೇಖನದಲ್ಲಿ ನಾವೇನು ಚರ್ಚಿಸುವೆವು?

3. ಸಾರುವುದರ ಬಗ್ಗೆ ಯೇಸು ತನ್ನ ಅಪೊಸ್ತಲರಿಗೆ ಯಾವ ಆದೇಶಗಳನ್ನು ಕೊಟ್ಟನು, ಮತ್ತು ಅವರು ಸಾರಬೇಕಾದ ವಿಧಾನದ ಬಗ್ಗೆ ಇದು ಏನನ್ನು ಸೂಚಿಸಿತು?

4. ಮನೆಮನೆಯ ಸಾರುವಿಕೆಯ ಕುರಿತು ನಿರ್ದಿಷ್ಟವಾಗಿ ಬೈಬಲಿನಲ್ಲಿ ಎಲ್ಲಿ ತಿಳಿಸಲಾಗಿದೆ?

5. ಸಾರುವ ಕೆಲಸವನ್ನು ಯೋವೇಲನ ಪ್ರವಾದನೆಯಲ್ಲಿ ಹೇಗೆ ಚಿತ್ರಿಸಲಾಗಿದೆ?

6. ಮನೆಮನೆಯ ಸೇವೆಯ ವಿಷಯದಲ್ಲಿ 1922ರಲ್ಲಿ ಯಾವ ಉತ್ತೇಜನ ಕೊಡಲಾಯಿತು, ಆದರೆ ಕೆಲವರು ಹೇಗೆ ಪ್ರತಿಕ್ರಿಯಿಸಿದರು?

7. ಯಾವ ಅಗತ್ಯವು 1950ರ ದಶಕದಲ್ಲಿ ವ್ಯಕ್ತವಾಯಿತು?

8, 9. ಯಾವ ತರಬೇತು ಕಾರ್ಯಕ್ರಮವನ್ನು 1953ರಲ್ಲಿ ಆರಂಭಿಸಲಾಯಿತು, ಮತ್ತು ಫಲಿತಾಂಶವೇನು?

10, 11. (ಎ) ಯೆಹೆಜ್ಕೇಲ 9ನೇ ಅಧ್ಯಾಯಕ್ಕನುಸಾರ ಯೆಹೆಜ್ಕೇಲನಿಗೆ ಯಾವ ದರ್ಶನ ಕೊಡಲಾಯಿತು? (ಬಿ) ಆ ದರ್ಶನವು ನಮ್ಮ ದಿನಗಳಲ್ಲಿ ಹೇಗೆ ನೆರೆವೇರಿದೆ?

12. ಹಣೆಯ ಮೇಲೆ ಗುರುತು ಹಾಕುವುದರ ಕುರಿತ ಯೆಹೆಜ್ಕೇಲನ ದರ್ಶನವು, ಕುರಿಸದೃಶ ಜನರಿಗಾಗಿ ನಾವು ಹುಡುಕುತ್ತಾ ಇರುವುದರ ಮಹತ್ತ್ವವನ್ನು ಹೇಗೆ ಎತ್ತಿತೋರಿಸುತ್ತದೆ?

13. (ಎ) ಅಪೊಸ್ತಲ ಪೌಲನಿಗೆ ಯಾವ ಜವಾಬ್ದಾರಿಯ ಅರಿವಿತ್ತು, ಮತ್ತು ಏಕೆ? (ಬಿ) ಟೆರಿಟೊರಿಯಲ್ಲಿರುವ ಜನರ ಬಗ್ಗೆ ನಿಮಗಿರುವ ಜವಾಬ್ದಾರಿಯ ಕುರಿತು ನಿಮಗೆ ಹೇಗನಿಸುತ್ತದೆ?

14. ನಾವು ಸಾರ್ವಜನಿಕವಾಗಿಯೂ ಮನೆಮನೆಗೂ ಸಾರುವ ಮುಖ್ಯ ಕಾರಣವೇನು?

15. (ಎ) ಇಸ್ರಾಯೇಲ್ಯರು ಯೆರಿಕೋ ಪಟ್ಟಣವನ್ನು ಏಳನೆಯ ದಿವಸ ಸುತ್ತುವಾಗ ತಮ್ಮ ಚಟುವಟಿಕೆಯನ್ನು ಬಹಳಷ್ಟು ಹೆಚ್ಚಿಸಿದ್ದು ಹೇಗೆ? (ಬಿ) ಸಾರುವ ಕೆಲಸದ ಕುರಿತಾಗಿ ಇದು ಏನನ್ನು ಸೂಚಿಸುತ್ತದೆ?

16, 17. (ಎ) “ಮಹಾ ಸಂಕಟ” ಕೊನೆಗೊಳ್ಳುವ ಮುಂಚೆ ಏನನ್ನು ಸಾಧಿಸಲಾಗುವುದು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸುವೆವು?

[ಪುಟ 4ರಲ್ಲಿರುವ ಚಿತ್ರಗಳು]

ಅಪೊಸ್ತಲ ಪೌಲನಂತೆ, ಇತರರಿಗೆ ಸಾರಲೇಬೇಕೆಂಬ ಜವಾಬ್ದಾರಿಯ ಅರಿವು ನಿಮಗಿದೆಯೋ?

[ಪುಟ 5ರಲ್ಲಿರುವ ಚಿತ್ರ]

1953ರಲ್ಲಿ ಸಹೋದರ ನಾರ್‌