ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಘನತೆಯಿಂದ ನಡೆದುಕೊಳ್ಳುವ ಮೂಲಕ ಯೆಹೋವನನ್ನು ಗೌರವಿಸಿ

ಘನತೆಯಿಂದ ನಡೆದುಕೊಳ್ಳುವ ಮೂಲಕ ಯೆಹೋವನನ್ನು ಗೌರವಿಸಿ

ಘನತೆಯಿಂದ ನಡೆದುಕೊಳ್ಳುವ ಮೂಲಕ ಯೆಹೋವನನ್ನು ಗೌರವಿಸಿ

“[ಯೆಹೋವನ] ಕಾರ್ಯವು ಘನಮಾನಗಳುಳ್ಳದ್ದು.”—ಕೀರ್ತ. 111:3.

ಯೆಹೋವನು ‘ಮಹಿಮೆಘನತೆಗಳಿಂದ ಭೂಷಿತನಾಗಿದ್ದಾನೆ’ ಎಂದು ಬೈಬಲ್‌ ತಿಳಿಸುತ್ತದೆ. (ಯೋಬ 40:10) ಮನುಷ್ಯರು ಸಹ ಘನತೆಯಿಂದ ನಡೆದುಕೊಳ್ಳಬಹುದು. ಇದನ್ನು ತೋರಿಸುವ ಒಂದು ವಿಧವು ಉಡುಗೆತೊಡುಗೆಯ ಮೂಲಕವಾಗಿದೆ. ಈ ಕುರಿತು ಅಪೊಸ್ತಲ ಪೌಲನು ಕ್ರೈಸ್ತ ಸ್ತ್ರೀಯರಿಗಂದದ್ದು: ‘ಸ್ತ್ರೀಯರು ಸಭ್ಯತೆ ಹಾಗೂ ಸ್ವಸ್ಥಬುದ್ಧಿಯುಳ್ಳವರಾಗಿದ್ದು ಗೌರವಕ್ಕೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕು.’ (1 ತಿಮೊ. 2:9, 10, NIBV) ಹಾಗಿದ್ದರೂ ಯೆಹೋವನನ್ನು ಗೌರವಿಸಲು ಘನತೆಯಿಂದ ನಡೆದುಕೊಳ್ಳುವುದರಲ್ಲಿ ನಮ್ಮ ಉಡುಗೆತೊಡುಗೆಗಿಂತ ಹೆಚ್ಚಿನದ್ದು ಸೇರಿದೆ.—ಯೋಬ 40:10.

2 “ಘನತೆ” ಎಂಬದಕ್ಕಿರುವ ಹೀಬ್ರು ಪದವನ್ನು “ಮಾನ,” “ವೈಭವ,” “ಪ್ರಭಾವ,” “ಮಹಿಮೆ,” “ಗೌರವ” ಎಂದೂ ಅನುವಾದಿಸಬಹುದು. ಒಂದು ಶಬ್ದಕೋಶವು “ಘನತೆ” ಎಂಬ ಪದವನ್ನು, “ಯೋಗ್ಯತೆ, ಗೌರವ, ಮಾನ್ಯತೆ ಅಥವಾ ಮನ್ನಣೆ” ಎಂಬದಾಗಿ ನಿರೂಪಿಸುತ್ತದೆ. ಯೆಹೋವ ದೇವರು ಅತ್ಯುನ್ನತ ಮಟ್ಟದ ಗೌರವ ಹಾಗೂ ಮನ್ನಣೆಗೆ ಅರ್ಹನು. ಆದುದರಿಂದ, ಆತನ ಸಮರ್ಪಿತ ಸೇವಕರಾದ ನಮ್ಮ ಮಾತು ಹಾಗೂ ನಡತೆ ಘನತೆಯುಳ್ಳದ್ದಾಗಿರಬೇಕು. ಮನುಷ್ಯರು ಘನತೆಯಿಂದ ನಡೆದುಕೊಳ್ಳಲು ಸಮರ್ಥರು ಏಕೆ? ಯೆಹೋವನ ಘನಮಾನಗಳು ಹೇಗೆ ವ್ಯಕ್ತವಾಗಿವೆ? ದೇವರ ಘನತೆ ನಮ್ಮನ್ನು ಹೇಗೆ ಪ್ರಭಾವಿಸಬೇಕು? ಘನತೆ ತೋರಿಸುವುದು ಹೇಗೆಂಬುದರ ಕುರಿತು ಯೇಸು ಕ್ರಿಸ್ತನು ನಮಗೆ ಏನನ್ನು ಕಲಿಸಬಲ್ಲನು? ಆರಾಧನೆಯಲ್ಲಿ ನಾವು ಘನತೆಯನ್ನು ಹೇಗೆ ತೋರಿಸಬಲ್ಲೆವು?

ನಾವು ಘನತೆಯಿಂದ ನಡೆದುಕೊಳ್ಳಲು ಸಮರ್ಥರು ಏಕೆ?

3 ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿ ರಚಿಸಿದ ಕಾರಣ ಘನತೆಯಿಂದ ನಡೆದುಕೊಳ್ಳುವ ಸಾಮರ್ಥ್ಯ ಪ್ರತಿಯೊಬ್ಬರಿಗಿದೆ. ಯೆಹೋವನು ಮೊದಲ ಮಾನವನಿಗೆ ಈ ಭೂಮಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಡುವ ಮೂಲಕ ಅವನಿಗೆ ಘನತೆ ನೀಡಿದ್ದಾನೆ. (ಆದಿ. 1:26, 27) ಮಾನವನು ಪರಿಪೂರ್ಣತೆಯನ್ನು ಕಳೆದುಕೊಂಡ ನಂತರವೂ ಯೆಹೋವನು ಭೂಮಿಯ ಕಡೆಗೆ ಮನುಷ್ಯನಿಗಿರುವ ಜವಾಬ್ದಾರಿಯನ್ನು ಪುನಃ ತಿಳಿಸಿದನು. ಹೀಗೆ ಯೆಹೋವನು ಮಾನವರಿಗೆ ಈಗಲೂ ಘನತೆಯನ್ನು “ಕಿರೀಟವಾಗಿ” ಇಟ್ಟಿದ್ದಾನೆ. (ಕೀರ್ತನೆ 8:5-9 ಓದಿ.) * ನಮಗೆ ನೀಡಲಾಗಿರುವ ಘನತೆಗೆ ನಾವು ತಕ್ಕ ಘನತೆಯಿಂದ ಪ್ರತಿಸ್ಪಂದಿಸಬೇಕು. ಯೆಹೋವನ ಮಹಿಮಾನ್ವಿತ ಹೆಸರನ್ನು ಭಕ್ತಿ ಹಾಗೂ ಘನತೆಯಿಂದ ಸ್ತುತಿಸುವ ಮೂಲಕ ನಾವಿದನ್ನು ಮಾಡುತ್ತೇವೆ.

4 ವಿಶೇಷವಾಗಿ ಯೆಹೋವನು, ತನಗೆ ಪವಿತ್ರ ಸೇವೆ ಸಲ್ಲಿಸುವವರಿಗೂ ಒಂದಿಷ್ಟು ಮಟ್ಟಿಗಿನ ಘನತೆ ನೀಡಿದ್ದಾನೆ. ಕಾಯಿನನ ಯಜ್ಞವನ್ನು ತಿರಸ್ಕರಿಸಿ ಹೇಬೆಲನ ಯಜ್ಞವನ್ನು ಸ್ವೀಕರಿಸುವ ಮೂಲಕ ಯೆಹೋವನು ಹೇಬೆಲನಿಗೆ ಘನತೆ ನೀಡಿದನು. (ಆದಿ. 4:4, 5) ಮೋಶೆಗೆ, ‘ನಿನಗಿರುವ ಗೌರವವನ್ನು ಯೆಹೋಶುವನಿಗೆ ಕೊಡು’ ಎಂದು ಹೇಳಲಾಯಿತು. ಯಾಕೆಂದರೆ ಅವನ ತರುವಾಯ ಯೆಹೋಶುವನೇ ಇಸ್ರಾಯೇಲ್ಯರ ನಾಯಕನಾಗಲಿದ್ದನು. (ಅರಣ್ಯ. 27:20) ದಾವೀದನ ಮಗನಾದ ಸೊಲೊಮೋನನ ವಿಷಯವಾಗಿ ಬೈಬಲ್‌ ಅನ್ನುವುದು: “ಯೆಹೋವನು ಇಸ್ರಾಯೇಲ್ಯರೆಲ್ಲರಿಗೆ ಗೊತ್ತಾಗುವಂತೆ ಸೊಲೊಮೋನನನ್ನು ಅಭಿವೃದ್ಧಿಪಡಿಸಿ ಅವನಿಗಿಂತ ಮೊದಲು ಇಸ್ರಾಯೇಲ್ಯರನ್ನಾಳಿದ ಎಲ್ಲಾ ಅರಸರ ವೈಭವಕ್ಕಿಂತಲೂ ಹೆಚ್ಚಿನ ವೈಭವವನ್ನು ಅವನಿಗೆ ಅನುಗ್ರಹಿಸಿದನು.” (1 ಪೂರ್ವ. 29:25) ಪುನರುತ್ಥಿತ ಅಭಿಷಿಕ್ತ ಕ್ರೈಸ್ತರಿಗೆ ಯೆಹೋವನು ವಿಶೇಷ ಘನತೆ ನೀಡುವನು ಏಕೆಂದರೆ ಅವರು ಆತನ ‘ರಾಜ್ಯದ ಮಹಾಪ್ರಭಾವವನ್ನು’ ನಂಬಿಗಸ್ತರಾಗಿ ಪ್ರಚುರಪಡಿಸಿದ್ದಾರೆ. (ಕೀರ್ತ. 145:11-13) ಯೆಹೋವನನ್ನು ಸ್ತುತಿಸುವ ದಿವ್ಯ ಹಾಗೂ ಘನತೆಯ ಸುಯೋಗ ಯೇಸುವಿನ ‘ಬೇರೆ ಕುರಿಗಳಿಗೂ’ ಇದೆ.—ಯೋಹಾ. 10:16.

ಯೆಹೋವನ ಘನಮಾನಗಳು ವ್ಯಕ್ತವಾಗಿವೆ

5 ದೇವರಿಗೆ ಹೋಲಿಸುವಾಗ ಮನುಷ್ಯನೆಷ್ಟು ಅಲ್ಪನು ಎಂಬದರ ಕುರಿತ ಗೀತೆಯೊಂದರಲ್ಲಿ ಕೀರ್ತನೆಗಾರ ದಾವೀದನು ಹಾಡಿದ್ದು: “ನಮ್ಮ ಕರ್ತನಾದ ಯೆಹೋವನೇ, ನಿನ್ನ ನಾಮವು ಭೂಲೋಕದಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದು. ಆಕಾಶಮಂಡಲದಲ್ಲಿ ನಿನ್ನ ವೈಭವವನ್ನು ಪ್ರಕಾಶಪಡಿಸಿದ್ದೀ.” (ಕೀರ್ತ. 8:1) “ಆಕಾಶವನ್ನೂ ಭೂಮಿಯನ್ನೂ” ಸೃಷ್ಟಿಸುವ ಮುಂಚಿನಿಂದ ಹಿಡಿದು ಭೂಮಿಯನ್ನು ಪರದೈಸಾಗಿ ಮಾರ್ಪಡಿಸಿ ಮಾನವರನ್ನು ಪರಿಪೂರ್ಣತೆಗೆ ನಡೆಸುವ ದೇವರ ಉದ್ದೇಶದ ಭವ್ಯ ನೆರವೇರಿಕೆಯ ನಂತರವೂ, ಅಂದರೆ ಯುಗಯುಗಾಂತರಕ್ಕೂ ಯೆಹೋವ ದೇವರು ವಿಶ್ವದಲ್ಲಿ ಅತ್ಯಂತ ವೈಭವಪೂರ್ಣ ಹಾಗೂ ಘನತೆಯುಳ್ಳ ವ್ಯಕ್ತಿಯಾಗಿರುವನು.—ಆದಿ. 1:1; 1 ಕೊರಿಂ. 15:24-28; ಪ್ರಕ. 21:1-5.

6 ರಾತ್ರಿಯಲ್ಲಿ ಮಿರಮಿರನೆ ಹೊಳೆಯುವ ರತ್ನಮಣಿಗಳಿಂದಲೊ ಎಂಬಂತೆ ಖಚಿತಗೊಂಡಿರುವ ನಕ್ಷತ್ರಮಯ ಆಕಾಶದ ಪ್ರಶಾಂತ ವೈಭವವು, ದೇವಭಕ್ತಿಯುಳ್ಳ ಕೀರ್ತನೆಗಾರನ ಮನಸ್ಸನ್ನು ಎಷ್ಟು ಸ್ಪರ್ಶಿಸಿರಬೇಕು! ದೇವರು ‘ಆಕಾಶವನ್ನು ಗುಡಾರದಂತೆ ಎತ್ತಿ ಹರಡಿದ’ ರೀತಿಯನ್ನು ನೋಡಿ ಕೀರ್ತನೆಗಾರನು ವಿಸ್ಮಯಗೊಂಡನು. ಯೆಹೋವನ ಈ ಸೃಜನಾ ಸಾಮರ್ಥ್ಯದಿಂದಾಗಿ ಆತನು ಪ್ರಭಾವಮಹತ್ವಗಳಿಂದ ಭೂಷಿತನು ಎಂದು ಕೀರ್ತನೆಗಾರನು ಹೇಳುತ್ತಾನೆ. (ಕೀರ್ತನೆ 104:1, 2 ಓದಿ.) ಅಸದೃಶ್ಯನಾದ ಸರ್ವಶಕ್ತ ಸೃಷ್ಟಿಕರ್ತನ ಘನಮಾನಗಳು ಆತನ ದೃಶ್ಯ ಸೃಷ್ಟಿಯಲ್ಲಿ ವ್ಯಕ್ತವಾಗಿವೆ.

7 ಉದಾಹರಣೆಗೆ ಕ್ಷೀರಪಥ ಎಂಬ ಗ್ಯಾಲಕ್ಸಿಯನ್ನು ತೆಗೆದುಕೊಳ್ಳಿ. ಈ ಗ್ಯಾಲಕ್ಸಿಯು ತಾರೆಗಳು, ಗ್ರಹಗಳು ಮತ್ತು ಸೌರಮಂಡಲಗಳಿಂದ ಕೂಡಿ ವಿಶಾಲ ಸಾಗರದಂತಿರುವುದರಿಂದ ಅದರಲ್ಲಿರುವ ಭೂಗ್ರಹವು ಸಮುದ್ರ ತೀರದ ಮರಳಿನ ಒಂದು ಚಿಕ್ಕ ಕಣದಷ್ಟು ಕ್ಷುಲ್ಲಕವಾಗಿ ಕಾಣುತ್ತದೆ. ಈ ಒಂದು ಗ್ಯಾಲಕ್ಸಿಯಲ್ಲೇ 10,000 ಕೋಟಿಗಿಂತ ಹೆಚ್ಚು ನಕ್ಷತ್ರಗಳಿವೆ! ಇವುಗಳನ್ನು, ಪ್ರತಿಯೊಂದು ಸೆಕೆಂಡಿಗೆ ಒಂದರಂತೆ ದಿನದ 24 ಗಂಟೆಯೂ ಎಣಿಸುತ್ತಾ ಹೋದರೆ, ಪೂರ್ತಿ ಲೆಕ್ಕಿಸಲು 3,000ಕ್ಕಿಂತ ಹೆಚ್ಚು ವರ್ಷಗಳೇ ಬೇಕಾಗುವವು!

8 ಕ್ಷೀರಪಥವೆಂಬ ಒಂದೇ ಗ್ಯಾಲಕ್ಸಿಯಲ್ಲಿ 10,000 ಕೋಟಿಯಷ್ಟು ನಕ್ಷತ್ರಗಳಿರುವಲ್ಲಿ ವಿಶ್ವದ ಇತರ ಗ್ಯಾಲಕ್ಸಿಗಳ ಕುರಿತೇನು? ವಿಶ್ವದಲ್ಲಿರುವ ಸರಿಸುಮಾರು 5,000-12,500 ಕೋಟಿ ಗ್ಯಾಲಕ್ಸಿಗಳಲ್ಲಿ ಕ್ಷೀರಪಥವು ಒಂದಾಗಿದೆಯೆಂಬುದು ಖಗೋಳಶಾಸ್ತ್ರಜ್ಞರ ಎಣಿಕೆ. ಹಾಗಾದರೆ ಇಡೀ ವಿಶ್ವದಲ್ಲಿ ಎಷ್ಟು ನಕ್ಷತ್ರಗಳಿವೆ? ಅದರ ಸಂಖ್ಯೆಯು ಖಂಡಿತವಾಗಿಯೂ ನಮ್ಮನ್ನು ಬೆಚ್ಚಿಬೀಳಿಸುವುದು. ಆದರೆ ಯೆಹೋವನು “ನಕ್ಷತ್ರಗಳ ಸಂಖ್ಯೆಯನ್ನು ಗೊತ್ತುಮಾಡಿ ಪ್ರತಿಯೊಂದಕ್ಕೆ ಹೆಸರಿಟ್ಟಿದ್ದಾನೆ.” (ಕೀರ್ತ. 147:4) ಯೆಹೋವನು ಇಂಥ ಘನಮಾನಗಳಿಂದ ಭೂಷಿತನಾಗಿರುವುದನ್ನು ಕಾಣುವಾಗ ಆತನ ಮಹಾ ನಾಮವನ್ನು ಸ್ತುತಿಸಲು ನಿಮಗೆ ಮನಸ್ಸಾಗುವುದಿಲ್ಲವೇ?

9 ನಾವೀಗ, ಸಾಮಾನ್ಯವಾದ ರೊಟ್ಟಿಯ ಕಡೆಗೆ ಗಮನಹರಿಸೋಣ. ಯೆಹೋವನು ‘ಭೂಮಿ ಆಕಾಶಗಳನ್ನು ನಿರ್ಮಿಸಿದವನು’ ಮಾತ್ರವಲ್ಲ “ಹಸಿದವರಿಗೆ ಆಹಾರಕೊಡುವವನೂ” ಆಗಿದ್ದಾನೆ. (ಕೀರ್ತ. 146:6, 7) ‘ದೇವರ ಘನಮಾನಗಳು’ ಆತನ ಮಹಾನ್‌ ಕಾರ್ಯಗಳಲ್ಲಿ ವ್ಯಕ್ತವಾಗಿವೆ. ಅಂಥ ಕಾರ್ಯಗಳಲ್ಲಿ ನಮಗೆ ರೊಟ್ಟಿ ಮಾಡಲು ಬೇಕಾಗಿರುವ ಸಸ್ಯಗಳನ್ನು ಆತನು ಕೊಟ್ಟಿರುವುದು ಒಂದಾಗಿದೆ. (ಕೀರ್ತನೆ 111:1-5 ಓದಿ.) ಯೇಸು ತನ್ನ ಶಿಷ್ಯರಿಗೆ ಹೀಗೆ ಪ್ರಾರ್ಥಿಸಲು ಕಲಿಸಿದನು: “ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು.” (ಮತ್ತಾ. 6:11) ಇಲ್ಲಿ “ಆಹಾರ” ಎಂದು ಕೊಡಲಾಗಿರುವ ಪದ ಮೂಲ ಭಾಷೆಯಲ್ಲಿ “ರೊಟ್ಟಿ” ಎಂದಾಗಿದೆ. ಇಸ್ರಾಯೇಲ್ಯರಿಗೆ ಮಾತ್ರವಲ್ಲ ಪ್ರಾಚೀನ ಕಾಲದ ಅನೇಕ ಜನಾಂಗಗಳವರಿಗೆ ರೊಟ್ಟಿಯು ಮುಖ್ಯ ಆಹಾರವಾಗಿತ್ತು. ರೊಟ್ಟಿ ತೀರ ಸರಳ ಆಹಾರವಾಗಿರುವುದಾದರೂ ಅದಕ್ಕೆ ಬೇಕಾಗುವ ಕೆಲವೇ ಮೂಲಭೂತ ಸಾಮಾಗ್ರಿಗಳನ್ನು ರುಚಿಕರವಾದ ರೊಟ್ಟಿಯಾಗಿ ಮಾರ್ಪಡಿಸುವಾಗ ನಡೆಯುವ ರಾಸಾಯನಿಕ ಪ್ರಕ್ರಿಯೆ ತುಂಬ ಜಟಿಲವಾದದ್ದು.

10 ಬೈಬಲ್‌ ಸಮಯಗಳಲ್ಲಿ ಇಸ್ರಾಯೇಲ್ಯರು ಗೋಧಿ ಅಥವಾ ಜವೆಗೋಧಿಯ ಹಿಟ್ಟಿಗೆ ನೀರನ್ನು ಕಲಸಿ ರೊಟ್ಟಿ ತಯಾರಿಸುತ್ತಿದ್ದರು. ಕೆಲವೊಮ್ಮೆ ಅದಕ್ಕೆ ಹುಳಿ ಅಥವಾ ಕಿಣ್ವವನ್ನೂ ಸೇರಿಸಲಾಗುತ್ತಿತ್ತು. ಈ ಸಾಮಾನ್ಯ ಧಾತುಗಳ ಸಂಯೋಗವಾಗಿ, ಕ್ರಿಯಾಶೀಲ ಜೋಡಣೆಗಳಿರುವ ಅನೇಕಾನೇಕ ರಾಸಾಯನಿಕ ಸಂಯುಕ್ತಗಳು ಉಂಟಾಗುತ್ತವೆ. ಆದರೆ ಇದೆಲ್ಲವೂ ನಿರ್ದಿಷ್ಟವಾಗಿ ಹೇಗೆ ನಡೆಯುತ್ತದೆಂಬುದು ಯಾರಿಗೂ ಪೂರ್ಣವಾಗಿ ಅರ್ಥವಾಗಿಲ್ಲ. ಅಲ್ಲದೆ ರೊಟ್ಟಿಯು ಹೊಟ್ಟೆಯಲ್ಲಿ ಜೀರ್ಣಗೊಳ್ಳುವುದು ತಾನೇ ಇನ್ನೊಂದು ಜಟಿಲ ಪ್ರಕ್ರಿಯೆಯಾಗಿದೆ. ಆದುದರಿಂದ ಕೀರ್ತನೆಗಾರನು ಹೀಗೆ ಹಾಡಿದ್ದು ಅಚ್ಚರಿಯ ಸಂಗತಿಯೇನಲ್ಲ: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ [“ವಿವೇಕದಿಂದಲೇ,” NW] ಮಾಡಿದ್ದೀ.” (ಕೀರ್ತ. 104:24) ಹೀಗೆಯೇ ಯೆಹೋವನನ್ನು ಸ್ತುತಿಸಲು ನಿಮಗೂ ಮನಸ್ಸಾಗುತ್ತದೋ?

ದೇವರ ಘನಮಾನಗಳು ನಿಮ್ಮನ್ನು ಹೇಗೆ ಪ್ರಭಾವಿಸಿವೆ?

11 ರಾತ್ರಿ ಆಕಾಶವನ್ನು ನೋಡಿ ವಿಸ್ಮಯಪಡಲು ನಾವು ಖಗೋಳಶಾಸ್ತ್ರಜ್ಞರು ಆಗಬೇಕಾಗಿಲ್ಲ ಅಥವಾ ರೊಟ್ಟಿಯ ರುಚಿ ಸವಿಯಲು ರಾಸಾಯನಶಾಸ್ತ್ರಜ್ಞರು ಆಗಬೇಕಾಗಿಲ್ಲ. ಹಾಗಿದ್ದರೂ ನಮ್ಮ ಸೃಷ್ಟಿಕರ್ತನ ವೈಭವವನ್ನು ಮಾನ್ಯಮಾಡಲಿಕ್ಕಾಗಿ ನಾವು ಆತನ ಕೈಕೆಲಸಗಳ ಕುರಿತು ಧ್ಯಾನಿಸಲು ಸಮಯ ಮಾಡಿಕೊಳ್ಳಬೇಕು. ಹೀಗೆ ಧ್ಯಾನಿಸುವುದರಿಂದ ನಮಗೇನು ಪ್ರಯೋಜನ ಸಿಗುತ್ತದೆ? ಯೆಹೋವನ ಇತರ ಮಹತ್ಕಾರ್ಯಗಳ ಬಗ್ಗೆ ಧ್ಯಾನಿಸುವುದರಿಂದ ಬರುವ ಪ್ರಯೋಜನವೇ.

12 ಯೆಹೋವನು ತನ್ನ ಜನರಿಗೋಸ್ಕರ ನಡೆಸಿದ ಮಹತ್ಕಾರ್ಯಗಳ ವಿಷಯವಾಗಿ ದಾವೀದನು ಹೀಗೆ ಹಾಡಿದನು: “ನಾನು ನಿನ್ನ ಮಹಾಪ್ರಭಾವಯುಕ್ತವಾದ ಮಹಿಮೆಯನ್ನೂ ಅದ್ಭುತಕಾರ್ಯಗಳನ್ನೂ ಧ್ಯಾನಿಸುವೆನು.” (ಕೀರ್ತ. 145:5) ಹೌದು ದಾವೀದನ ಮಾದರಿಯ ಅನುಕರಣೆಯಲ್ಲಿ, ನಾವು ಬೈಬಲ್‌ ಅಧ್ಯಯನಮಾಡಿ ಓದಿದಂಥ ವಿಷಯಗಳ ಕುರಿತು ಧ್ಯಾನಿಸಲು ಸಮಯ ಮಾಡಿಕೊಳ್ಳಬೇಕು. ಹೀಗೆ ಧ್ಯಾನಿಸುವುದರ ಪ್ರಯೋಜನವೇನು? ದೇವರ ಘನಮಾನಗಳನ್ನು ನಾವು ಹೆಚ್ಚು ಗಣ್ಯಮಾಡುವೆವು. ಆಗ ನಾವು ಸಹ ದಾವೀದನೊಂದಿಗೆ ಜೊತೆಗೂಡಿ ಯೆಹೋವನನ್ನು ಗೌರವಿಸುತ್ತಾ, “ನಾನು ನಿನ್ನ ಮಹತ್ತನ್ನು ಪ್ರಸಿದ್ಧಪಡಿಸುವೆನು” ಎಂದು ಹೇಳಲು ಖಂಡಿತ ಪ್ರಚೋದಿಸಲ್ಪಡುವೆವು. (ಕೀರ್ತ. 145:6) ದೇವರ ಅತ್ಯದ್ಭುತ ಕಾರ್ಯಗಳ ಕುರಿತು ಧ್ಯಾನಿಸುವುದರಿಂದ ಯೆಹೋವನೊಂದಿಗಿನ ನಮ್ಮ ಸಂಬಂಧ ಹೆಚ್ಚು ಬಲಗೊಳ್ಳುವುದು ಮತ್ತು ಆತನ ಕುರಿತು ಇತರರೊಂದಿಗೆ ಉತ್ಸಾಹ ಹಾಗೂ ಛಲದಿಂದ ಮಾತಾಡಲು ಪ್ರಚೋದನೆ ಸಿಗುವುದು. ಸುವಾರ್ತೆಯನ್ನು ಹುರುಪಿನಿಂದ ಸಾರುವ ಮೂಲಕ ಯೆಹೋವ ದೇವರ ಘನಮಾನ ವೈಭವವನ್ನು ಮಾನ್ಯಮಾಡಲು ನೀವು ಜನರಿಗೆ ಸಹಾಯ ಮಾಡುತ್ತಿದ್ದೀರೋ?

ದೇವರ ಘನತೆಯನ್ನು ಯೇಸು ಪರಿಪೂರ್ಣವಾಗಿ ಬಿಂಬಿಸುತ್ತಾನೆ

13 ದೇವರ ಮಗನಾದ ಯೇಸು ಕ್ರಿಸ್ತನು ಸುವಾರ್ತೆಯನ್ನು ಹುರುಪಿನಿಂದ ಘೋಷಿಸುವ ಮೂಲಕ ಘನಮಾನಗಳಿಂದ ಕೂಡಿದ ಸ್ವರ್ಗೀಯ ತಂದೆಯನ್ನು ಗೌರವಿಸಿದನು. ಯೆಹೋವನು ತನ್ನ ಈ ಏಕಜಾತ ಪುತ್ರನಿಗೆ ‘ದೊರೆತನವನ್ನೂ ರಾಜ್ಯವನ್ನೂ’ ಕೊಡುವ ಮೂಲಕ ಅವನಿಗೆ ವಿಶೇಷ ಘನತೆ ನೀಡಿದನು. (ದಾನಿಯೇಲ 7:13, 14 ಓದಿ.) ಹಾಗಿದ್ದರೂ ಯೇಸು ಅಹಂಕಾರಿಯಲ್ಲ ಅಥವಾ ಇತರರಿಂದ ತನ್ನನ್ನು ಶ್ರೇಷ್ಠನೆನಿಸಿಕೊಳ್ಳುವುದಿಲ್ಲ. ವ್ಯತಿರಿಕ್ತವಾಗಿ ಅವನೊಬ್ಬ ಕರುಣಾಮಯಿ ದೊರೆಯಾಗಿದ್ದಾನೆ. ತನ್ನ ಪ್ರಜೆಗಳ ಇತಿಮಿತಿಗಳನ್ನು ಅರ್ಥಮಾಡಿಕೊಂಡು ತಕ್ಕ ಮಟ್ಟಿಗಿನ ಘನತೆಯನ್ನು ಅವರಿಗೂ ಕೊಡುತ್ತಾನೆ. ಭಾವೀ ಅರಸನಾದ ಯೇಸು ಭೂಮಿಯಲ್ಲಿದ್ದಾಗ ಜನರೊಂದಿಗೆ, ಅದರಲ್ಲೂ ಮುಖ್ಯವಾಗಿ ಯಾರೂ ಪ್ರೀತಿಸದೆ ದೂರವಿಟ್ಟ ಜನರೊಂದಿಗೆ ಹೇಗೆ ನಡೆದುಕೊಂಡನೆಂಬ ಒಂದು ಉದಾಹರಣೆ ತೆಗೆದುಕೊಳ್ಳಿ.

14 ಪ್ರಾಚೀನ ಕಾಲಗಳಲ್ಲಿ ಕುಷ್ಠರೋಗವಿದ್ದವರು ನರಳಿ ನರಳಿ ಕ್ರಮೇಣ ಸಾವನ್ನಪ್ಪುತ್ತಿದ್ದರು. ಏಕೆಂದರೆ ರೋಗವು ಮೆಲ್ಲಮೆಲ್ಲನೆ ರೋಗಿಯ ಎಲ್ಲಾ ಅಂಗಗಳಿಗೆ ಹರಡುತ್ತಿತ್ತು. ಸತ್ತ ವ್ಯಕ್ತಿಯನ್ನು ಜೀವಕ್ಕೆ ತರುವುದು ಅಸಾಧ್ಯವಾಗಿರುವಂತೆ ಕುಷ್ಠರೋಗ ವಾಸಿಯಾಗುವುದು ಅಸಾಧ್ಯ ಎಂದು ಪರಿಗಣಿಸಲಾಗುತ್ತಿತ್ತು. (ಅರಣ್ಯ. 12:12; 2 ಅರ. 5:7, 14) ಕುಷ್ಠರೋಗಿಗಳು ಅಶುದ್ಧರೂ ಅಸಹ್ಯರೂ ಎಂದೆಣಿಸಲಾಗುತ್ತಿತ್ತು. ಸಮಾಜದಿಂದ ಅವರನ್ನು ಬಹಿಷ್ಕರಿಸಲಾಗುತ್ತಿತ್ತು. ಜನರಿದ್ದಲ್ಲಿಗೆ ಬರುವಾಗ ಅವರು, “ನಾನು ಅಶುದ್ಧನು ಅಶುದ್ಧನು” ಎಂದು ಕೂಗಿಕೊಳ್ಳಬೇಕಿತ್ತು. (ಯಾಜ. 13:43-46) ಕುಷ್ಠರೋಗಿಗಳನ್ನು ಮನುಷ್ಯರಂತಲ್ಲ, ಯಾವುದೇ ಕೆಲಸಕ್ಕೆ ಬಾರದ ವಸ್ತುಗಳಂತೆ ದೃಷ್ಟಿಸಲಾಗುತ್ತಿತ್ತು. ರಬ್ಬಿಗಳ ದಾಖಲೆಗಳಿಗನುಸಾರ, ಕುಷ್ಠರೋಗವಿದ್ದವನು ಜನರಿಂದ ಆರು ಅಡಿಯಷ್ಟು ದೂರವಿರಬೇಕಿತ್ತು. ಅದಕ್ಕಿಂತ ಹತ್ತಿರ ಹೋಗಬಾರದಿತ್ತು. ಒಬ್ಬ ಧಾರ್ಮಿಕ ಮುಖಂಡನಂತೂ, ಕುಷ್ಠರೋಗಿಯೊಬ್ಬನು ದೂರದಲ್ಲಿ ಕಣ್ಣಿಗೆಬಿದ್ದರೂ ಸಾಕು, ಅವನು ತನ್ನ ಹತ್ತಿರ ಬರದಂತೆ ಕಲ್ಲೆಸೆಯಲು ಆರಂಭಿಸುತ್ತಿದ್ದನೆಂದು ಹೇಳಲಾಗುತ್ತದೆ.

15 ಕುಷ್ಠರೋಗಿಗಳನ್ನು ಅಷ್ಟು ಕೀಳಾಗಿ ನೋಡಲಾಗುತ್ತಿದ್ದರೂ, ಒಬ್ಬ ಕುಷ್ಠರೋಗಿಯು ತನ್ನನ್ನು ಗುಣಪಡಿಸಬೇಕೆಂದು ಯೇಸುವಿನ ಬಳಿ ಬಂದು ಬೇಡಿಕೊಂಡಾಗ ಅವನು ತೋರಿಸಿದ ಪ್ರತಿಕ್ರಿಯೆಯು ಗಮನಾರ್ಹವಾದದ್ದಾಗಿದೆ. (ಮಾರ್ಕ 1:40-42 ಓದಿ.) ಸಮಾಜದಿಂದ ಬಹಿಷ್ಕೃತನಾದ ಆ ಕುಷ್ಠರೋಗಿಯನ್ನು ಅಟ್ಟಿಸಿಬಿಡುವ ಬದಲು, ಯೇಸು ಕನಿಕರ ಹಾಗೂ ಘನತೆಯಿಂದ ನಡೆದುಕೊಂಡನು. ಯೇಸು ಅವನನ್ನು, ದಯನೀಯ ಸ್ಥಿತಿಯಲ್ಲಿದ್ದು ಪರಿಹಾರಕ್ಕಾಗಿ ಹಾತೊರೆಯುತ್ತಿದ್ದ ಒಬ್ಬ ಮನುಷ್ಯನಂತೆ ಪರಿಗಣಿಸಿದನು. ಯೇಸುವಿನಲ್ಲಿ ಉಕ್ಕಿಬಂದ ಕರುಣೆಯು ಅವನು ತತ್‌ಕ್ಷಣ ಕ್ರಿಯೆಗೈಯುವಂತೆ ಮಾಡಿತು. ಅವನು ಆ ಕುಷ್ಠರೋಗಿಯನ್ನು ಮುಟ್ಟಿ ವಾಸಿಮಾಡಿದನು.

16 ಯೇಸು ತನ್ನ ತಂದೆಯ ಘನಮಾನವನ್ನು ಬಿಂಬಿಸಿದ ರೀತಿಯನ್ನು ಆತನ ಹಿಂಬಾಲಕರಾದ ನಾವು ಹೇಗೆ ಅನುಕರಿಸಬಲ್ಲೆವು? ಒಂದು ವಿಧವು ಅಂತಸ್ತು, ಆರೋಗ್ಯ, ಪ್ರಾಯವನ್ನು ಲೆಕ್ಕಿಸದೆ ಎಲ್ಲ ಮಾನವರು ತಕ್ಕ ಗೌರವ ಹಾಗೂ ಮರ್ಯಾದೆಗೆ ಅರ್ಹರಾಗಿದ್ದಾರೆ ಎಂಬದನ್ನು ಮಾನ್ಯಮಾಡುವುದಾಗಿದೆ. (1 ಪೇತ್ರ 2:16, 17) ಮುಖ್ಯವಾಗಿ ಮೇಲ್ವಿಚಾರಣೆಯ ಸ್ಥಾನದಲ್ಲಿರುವ ಗಂಡಂದಿರು, ಹೆತ್ತವರು ಮತ್ತು ಕ್ರೈಸ್ತ ಹಿರಿಯರು, ತಮ್ಮ ಪರಾಮರಿಕೆಯಡಿ ಇರುವವರನ್ನು ಘನತೆಯಿಂದ ಉಪಚರಿಸಿ ಅವರು ತಮ್ಮ ಸ್ವಗೌರವವನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡಬೇಕು. ಎಲ್ಲಾ ಕ್ರೈಸ್ತರು ಇದನ್ನು ಮಾಡಲೇಬೇಕೆಂಬದನ್ನು ಒತ್ತಿಹೇಳುತ್ತಾ ಬೈಬಲ್‌ ಅನ್ನುವುದು: “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.”—ರೋಮಾ. 12:10.

ಆರಾಧನೆಯಲ್ಲಿ ಘನತೆ ತೋರಿಸುವುದು

17 ಯೆಹೋವನಿಗೆ ಆರಾಧನೆ ಸಲ್ಲಿಸುವಾಗ ನಾವು ಘನತೆಯಿಂದ ನಡೆದುಕೊಳ್ಳಲು ವಿಶೇಷ ಗಮನಕೊಡಬೇಕು. “ದೇವರ ಆಲಯಕ್ಕೆ ನೀನು ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು” ಎನ್ನುತ್ತದೆ ಪ್ರಸಂಗಿ 5:1 (NIBV). ಪವಿತ್ರ ಸ್ಥಳದಲ್ಲಿರುವಾಗ ಕಾಲಿನ ಕೆರಗಳನ್ನು ತೆಗೆದಿಡುವಂತೆ ಯೆಹೋವನು ಮೋಶೆ ಯೆಹೋಶುವರಿಗೆ ಆಜ್ಞಾಪಿಸಿದ್ದನು. (ವಿಮೋ. 3:5; ಯೆಹೋ. 5:15) ತಮ್ಮ ಗೌರವ ಮತ್ತು ಭಕ್ತಿಭಾವದ ಸಂಕೇತವಾಗಿ ಅವರು ಹೀಗೆ ಮಾಡಬೇಕಾಗಿತ್ತು. “ರಹಸ್ಯಾಂಗವು ಕಾಣಿಸದಂತೆ” ಇಸ್ರಾಯೇಲಿನ ಯಾಜಕರು ನಾರಿನ ಚಡ್ಡಿಗಳನ್ನು ತೊಡಲೇಬೇಕಿತ್ತು. (ವಿಮೋ. 28:42, 43) ಇದು, ಅವರು ಯಜ್ಞವೇದಿಯ ಬಳಿ ಕೆಲಸಮಾಡುವಾಗ ಅಸಭ್ಯ ರೀತಿಯಲ್ಲಿ ಮೈಕಾಣದಂತೆ ತಡೆಯುತ್ತಿತ್ತು. ಯಾಜಕನ ಕುಟುಂಬದ ಪ್ರತಿ ಸದಸ್ಯನು ಘನತೆಯ ದೈವಿಕ ಮಟ್ಟವನ್ನು ಕಾಪಾಡಿಕೊಳ್ಳಬೇಕಿತ್ತು.

18 ಹಾಗಾದರೆ, ಘನತೆಯಿಂದ ಆರಾಧನೆ ಸಲ್ಲಿಸುವುದರಲ್ಲಿ ದೇವರನ್ನು ಗೌರವಿಸುವುದು ಸೇರಿದೆ. ನಮಗೆ ಗೌರವ ಸಿಗಬೇಕಾದರೆ ಮೊದಲು ನಾವು ಗೌರವದಿಂದ ನಡೆದುಕೊಳ್ಳಬೇಕು. ನಾವು ಘನತೆಯಿಂದ ನಡೆದುಕೊಳ್ಳುವ ನಾಟಕವಾಡಬಾರದು. ಬದಲಿಗೆ ಅದು ಹೃತ್ಪೂರ್ವಕವಾಗಿರಬೇಕು ಏಕೆಂದರೆ ಯೆಹೋವನು ಹೃದಯವನ್ನು ನೋಡುತ್ತಾನೆ. (1 ಸಮು. 16:7; ಜ್ಞಾನೋ. 21:2) ಘನತೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಅದು ನಮ್ಮ ನಡವಳಿಕೆ, ಮನೋಭಾವ, ಇತರರೊಂದಿಗಿನ ಸಂಬಂಧ ಮತ್ತು ನಮ್ಮ ಕುರಿತು ನಮಗಿರುವ ದೃಷ್ಟಿಕೋನವನ್ನೂ ಅನಿಸಿಕೆಯನ್ನೂ ಪ್ರಭಾವಿಸಬೇಕು. ನಾವು ಏನೇ ಹೇಳಲಿ, ಏನೇ ಮಾಡಲಿ ಎಲ್ಲಾ ಸಮಯಗಳಲ್ಲಿ ಘನತೆಯು ವ್ಯಕ್ತವಾಗಬೇಕು. ನಮ್ಮ ನಡತೆ, ಬಟ್ಟೆ ಹಾಗೂ ಕೇಶಾಲಂಕಾರದ ವಿಷಯದಲ್ಲೂ ನಾವು ಅಪೊಸ್ತಲ ಪೌಲನ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅವನು ಹೇಳಿದ್ದು : “ನಿಂದೆಗೆ ಅವಕಾಶಕೊಡದೆ ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.” (2 ಕೊರಿಂ. 6:3, 4) ನಾವು ‘ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರಬೇಕು.’—ತೀತ 2:10.

ಆರಾಧನೆಯಲ್ಲಿ ದೈವಿಕ ಘನತೆಯನ್ನು ತೋರಿಸುತ್ತಾ ಇರ್ರಿ

19 ‘ಕ್ರಿಸ್ತನ ರಾಯಭಾರಿಗಳಾದ’ ಅಭಿಷಿಕ್ತ ಕ್ರೈಸ್ತರು ಘನತೆಯಿಂದ ನಡೆದುಕೊಳ್ಳುತ್ತಾರೆ. (2 ಕೊರಿಂ. 5:20) ಅವರನ್ನು ನಿಷ್ಠೆಯಿಂದ ಬೆಂಬಲಿಸುತ್ತಿರುವ ‘ಬೇರೆ ಕುರಿಗಳು’ ಮೆಸ್ಸೀಯ ರಾಜ್ಯದ ಘನತೆಗೆ ಪಾತ್ರರಾದ ಪ್ರತಿನಿಧಿಗಳಾಗಿದ್ದಾರೆ. ಒಂದು ದೇಶದ ರಾಯಭಾರಿ ಅಥವಾ ಪ್ರತಿನಿಧಿಯು ತನ್ನ ಸರಕಾರದ ಪರವಾಗಿ ಧೈರ್ಯ ಹಾಗೂ ಘನತೆಯಿಂದ ಮಾತಾಡುತ್ತಾನೆ. ಅದೇ ರೀತಿಯಲ್ಲಿ ನಾವು ದೇವರ ರಾಜ್ಯ ಅಥವಾ ಸರಕಾರದ ಪರವಾಗಿ ಘನತೆಯಿಂದಲೂ ಧೈರ್ಯದಿಂದಲೂ ಮಾತಾಡಬೇಕು. (ಎಫೆ. 6:19, 20) ಅಲ್ಲದೆ, ನಾವು ಇತರರಿಗೆ “ಶುಭವರ್ತಮಾನವನ್ನು” ತಿಳಿಸುವಾಗ ಅವರಿಗೂ ಘನತೆ ನೀಡುತ್ತಿದ್ದೇವಲ್ಲವೇ?—ಯೆಶಾ. 52:7.

20 ಘನತೆಯಿಂದ ನಡೆದುಕೊಂಡು ದೇವರನ್ನು ಕೊಂಡಾಡುವ ದೃಢಸಂಕಲ್ಪ ನಮಗಿರಬೇಕು. (1 ಪೇತ್ರ 2:12) ಯೆಹೋವನಿಗೆ, ಆತನ ಆರಾಧನೆಗೆ ಮತ್ತು ನಮ್ಮ ಜೊತೆ ಆರಾಧಕರಿಗೆ ನಾವು ಸದಾ ಆಳವಾದ ಗೌರವ ತೋರಿಸೋಣ. ಘನಮಾನಗಳಿಂದ ಭೂಷಿತನಾದ ಯೆಹೋವನು ನಾವು ಘನತೆಯಿಂದ ಸಲ್ಲಿಸುವ ಆರಾಧನೆಯಿಂದ ಪ್ರಸನ್ನನಾಗಲಿ.

[ಪಾದಟಿಪ್ಪಣಿ]

^ ಪ್ಯಾರ. 6 ಎಂಟನೇ ಕೀರ್ತನೆಯಲ್ಲಿರುವ ದಾವೀದನ ಮಾತುಗಳು ಪರಿಪೂರ್ಣ ಮಾನವನಾದ ಯೇಸು ಕ್ರಿಸ್ತನಿಗೂ ಪ್ರವಾದನಾತ್ಮಕವಾಗಿ ಅನ್ವಯಿಸುತ್ತವೆ.—ಇಬ್ರಿ. 2:5-9.

ನೀವು ಹೇಗೆ ಉತ್ತರಿಸುವಿರಿ?

• ಯೆಹೋವನ ಘನಮಾನಗಳಿಗಾಗಿರುವ ಗಣ್ಯತೆಯು ನಮ್ಮನ್ನು ಹೇಗೆ ಪ್ರಭಾವಿಸಬೇಕು?

• ಒಬ್ಬ ಕುಷ್ಠರೋಗಿಗೆ ಯೇಸು ತೋರಿಸಿದ ಪ್ರತಿಕ್ರಿಯೆಯಿಂದ ನಾವೇನು ಕಲಿಯಸಾಧ್ಯವಿದೆ?

• ಘನತೆಯುಳ್ಳ ಯಾವೆಲ್ಲ ವಿಧಗಳಲ್ಲಿ ನಾವು ಯೆಹೋವನನ್ನು ಗೌರವಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. (ಎ) “ಘನತೆ” ಎಂಬ ಪದದ ಅರ್ಥವೇನು? (ಬಿ) ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

3, 4. (ಎ) ನಮಗೆ ನೀಡಲಾಗಿರುವ ಘನತೆಗೆ ನಾವು ಹೇಗೆ ಪ್ರತಿಸ್ಪಂದಿಸಬೇಕು? (ಬಿ) ಕೀರ್ತನೆ 8:5-9 ಪ್ರವಾದನಾತ್ಮಕವಾಗಿ ಯಾರಿಗೆ ಅನ್ವಯಿಸುತ್ತದೆ? (ಪಾದಟಿಪ್ಪಣಿ ನೋಡಿ.) (ಸಿ) ಯೆಹೋವನು ಗತಕಾಲದಲ್ಲಿ ಯಾರಿಗೆ ಘನತೆ ನೀಡಿದನು?

5. ಯೆಹೋವನ ಘನತೆಯು ಎಷ್ಟು ಅಪಾರ?

6. ದೇವರು ಪ್ರಭಾವಮಹತ್ವಗಳಿಂದ ಭೂಷಿತನಾಗಿದ್ದಾನೆ ಎಂದು ಕೀರ್ತನೆಗಾರನು ಏಕೆ ಹೇಳಿದನು?

7, 8. ಆಕಾಶದಲ್ಲಿ ನಾವು ಯೆಹೋವನ ಘನಮಾನಗಳ ಯಾವ ಪುರಾವೆಯನ್ನು ಕಾಣುತ್ತೇವೆ?

9, 10. ಸೃಷ್ಟಿಕರ್ತನು ರೊಟ್ಟಿಯನ್ನು ಒದಗಿಸಿದ ರೀತಿಯಿಂದ ಆತನ ವಿವೇಕ ಹೇಗೆ ತೋರಿಬರುತ್ತದೆ?

11, 12. ದೇವರ ಸೃಷ್ಟಿ ಕಾರ್ಯಗಳ ಕುರಿತು ಧ್ಯಾನಿಸುವುದು ನಮ್ಮನ್ನು ಹೇಗೆ ಪ್ರಭಾವಿಸಬಲ್ಲದು?

13. (ಎ) ದಾನಿಯೇಲ 7:13, 14ಕ್ಕನುಸಾರ ಯೆಹೋವನು ತನ್ನ ಮಗನಿಗೆ ಏನನ್ನು ನೀಡಿದ್ದಾನೆ? (ಬಿ) ರಾಜನಾಗಿ ಯೇಸು ತನ್ನ ಪ್ರಜೆಗಳೊಂದಿಗೆ ಹೇಗೆ ನಡೆದುಕೊಳ್ಳುತ್ತಾನೆ?

14. ಪ್ರಾಚೀನ ಇಸ್ರಾಯೇಲಿನಲ್ಲಿ ಕುಷ್ಠರೋಗಿಗಳನ್ನು ಹೇಗೆ ವೀಕ್ಷಿಸಲಾಗುತ್ತಿತ್ತು?

15. ಒಬ್ಬ ಕುಷ್ಠರೋಗಿಯೊಂದಿಗೆ ಯೇಸು ಹೇಗೆ ನಡೆದುಕೊಂಡನು?

16. ಯೇಸು ಇತರರೊಂದಿಗೆ ನಡೆದುಕೊಂಡ ರೀತಿಯಿಂದ ನೀವು ಯಾವ ಪಾಠ ಕಲಿತಿರಿ?

17. ಯೆಹೋವನಿಗೆ ಆರಾಧನೆ ಸಲ್ಲಿಸುವಾಗ ಘನತೆಯಿಂದ ನಡೆದುಕೊಳ್ಳುವುದರ ಕುರಿತು ಬೈಬಲಿನಿಂದ ನಾವೇನನ್ನು ಕಲಿಯಬಲ್ಲೆವು?

18. ನಾವು ಯೆಹೋವನಿಗೆ ಆರಾಧನೆ ಸಲ್ಲಿಸುವಾಗ ಹೇಗೆ ಘನತೆಯಿಂದ ನಡೆದುಕೊಳ್ಳಬಹುದು?

19, 20. (ಎ) ಇತರರಿಗೆ ಘನತೆ ನೀಡುವ ಒಂದು ಉತ್ತಮ ವಿಧಾನ ಯಾವುದು? (ಬಿ) ಘನತೆಯ ವಿಷಯದಲ್ಲಿ ಯಾವ ದೃಢಸಂಕಲ್ಪ ನಮಗಿರಬೇಕು?

[ಪುಟ 12ರಲ್ಲಿರುವ ಚಿತ್ರ]

ಯೆಹೋವನು ಹೇಬೆಲನಿಗೆ ಘನತೆ ನೀಡಿದ್ದು ಹೇಗೆ?

[ಪುಟ 14ರಲ್ಲಿರುವ ಚಿತ್ರ]

ಯೆಹೋವನು ರೊಟ್ಟಿಯನ್ನು ಒದಗಿಸಿರುವ ರೀತಿಯಿಂದ ಆತನ ಮಹತ್ಕಾರ್ಯಗಳು ವ್ಯಕ್ತವಾಗುತ್ತವೆ

[ಪುಟ 15ರಲ್ಲಿರುವ ಚಿತ್ರ]

ಯೇಸು ಒಬ್ಬ ಕುಷ್ಠರೋಗಿಯೊಂದಿಗೆ ನಡೆದುಕೊಂಡ ರೀತಿಯಿಂದ ಘನತೆಯ ಕುರಿತು ಏನು ಕಲಿತಿರಿ?

[ಪುಟ 16ರಲ್ಲಿರುವ ಚಿತ್ರ]

ಘನತೆಯಿಂದ ಆರಾಧನೆ ಸಲ್ಲಿಸುವುದರಲ್ಲಿ ಯೆಹೋವನನ್ನು ಗೌರವಿಸುವುದು ಸೇರಿದೆ