ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಶುದ್ಧ ಭಾಷೆಯನ್ನು” ನೀವು ನಿರರ್ಗಳವಾಗಿ ಮಾತಾಡುತ್ತಿದ್ದೀರೋ?

“ಶುದ್ಧ ಭಾಷೆಯನ್ನು” ನೀವು ನಿರರ್ಗಳವಾಗಿ ಮಾತಾಡುತ್ತಿದ್ದೀರೋ?

“ಶುದ್ಧ ಭಾಷೆಯನ್ನು” ನೀವು ನಿರರ್ಗಳವಾಗಿ ಮಾತಾಡುತ್ತಿದ್ದೀರೋ?

‘ಯೆಹೋವನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿ ಮಾಡುವೆನು [“ಶುದ್ಧ ಭಾಷೆಯನ್ನು ಕೊಡುವೆನು,” NW].’—ಚೆಫ. 3:9.

ಭಾಷೆಯು ಮನುಷ್ಯನ ಪ್ರಯತ್ನದ ಫಲವಲ್ಲ ಬದಲಾಗಿ ಮನುಷ್ಯನ ಸೃಷ್ಟಿಕರ್ತನಾದ ಯೆಹೋವ ದೇವರು ನೀಡಿದ ವರವಾಗಿದೆ. (ವಿಮೋ. 4:11, 12) ಆತನು ಪ್ರಥಮ ಮಾನವನಾದ ಆದಾಮನಿಗೆ ಮಾತಾಡುವ ಸಾಮರ್ಥ್ಯವನ್ನಲ್ಲದೆ, ಹೊಸ ಪದಗಳನ್ನು ರಚಿಸಿ ತನ್ನ ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವನ್ನೂ ಕೊಟ್ಟನು. (ಆದಿ. 2:19, 20, 23) ನಿಶ್ಚಯವಾಗಿ ಇದೊಂದು ಅದ್ಭುತಕರ ವರ! ಇದರಿಂದಾಗಿ ಮಾನವರು ತಮ್ಮ ಸ್ವರ್ಗೀಯ ತಂದೆಯೊಂದಿಗೆ ಮಾತಾಡಲು ಮತ್ತು ಆತನ ಮಹಿಮಾನ್ವಿತ ಹೆಸರನ್ನು ಸ್ತುತಿಸಲು ಸಾಧ್ಯವಾಗಿದೆ.

2 ಮಾನವರ ಸೃಷ್ಟಿಯಾದಂದಿನಿಂದ ಸುಮಾರು 17 ಶತಮಾನಗಳ ತನಕ ಎಲ್ಲರೂ ಒಂದೇ ಭಾಷೆಯನ್ನಾಡುತ್ತಿದ್ದರು, “ಭಾಷಾಭೇದವೇನೂ ಇರಲಿಲ್ಲ.” (ಆದಿ. 11:1) ಆದರೆ ಅನಂತರ ನಿಮ್ರೋದನ ದಿನಗಳಲ್ಲಿ ಬಂಡಾಯವೆದ್ದಿತು. ಯೆಹೋವನ ನಿರ್ದೇಶನಕ್ಕೆ ವಿರುದ್ಧವಾಗಿ ಎಲ್ಲರೂ ಒಂದೇ ಸ್ಥಳದಲ್ಲಿ ವಾಸಿಸಬೇಕೆಂದು ಕೂಡಿಬಂದರು. ಅವಿಧೇಯ ಮಾನವರು ಕೂಡಿಬಂದ ಆ ಸ್ಥಳ ತರುವಾಯ ಬಾಬೆಲ್‌ ಎಂಬ ಹೆಸರು ಪಡೆಯಿತು. ಅಲ್ಲಿ ಅವರೊಂದು ಬೃಹತ್‌ ಗೋಪುರವನ್ನು ನಿರ್ಮಿಸಲು ಆರಂಭಿಸಿದರು. ಅವರ ಉದ್ದೇಶ ಯೆಹೋವನಿಗೆ ಮಹಿಮೆ ತರುವುದಲ್ಲ ಬದಲಾಗಿ ಸ್ವತಃ ತಮಗಾಗಿ “ದೊಡ್ಡ ಹೆಸರನ್ನು” ಪಡೆಯುವುದಾಗಿತ್ತು. ಆದ್ದರಿಂದ ಯೆಹೋವನು ಆ ಬಂಡಾಯಗಾರರ ಮೂಲಭಾಷೆಯನ್ನು ತಾರುಮಾರುಮಾಡಿ ಅವರು ಬೇರೆ ಬೇರೆ ಭಾಷೆಗಳನ್ನಾಡುವಂತೆ ಮಾಡಿದನು. ಹೀಗೆ ಅವರು ಭೂಲೋಕದಲ್ಲೆಲ್ಲಾ ಚದರಿದರು.—ಆದಿಕಾಂಡ 11:4-8 ಓದಿ.

3 ಇಂದು ಲೋಕದಾದ್ಯಂತ 6,800ಕ್ಕಿಂತ ಹೆಚ್ಚು ಭಾಷೆಗಳಿವೆಯೆಂದು ಕೆಲವರು ಹೇಳುತ್ತಾರೆ. ಬೇರೆ ಬೇರೆ ಭಾಷೆಯನ್ನಾಡುವ ಜನರ ಯೋಚನಾ ರೀತಿ ಭಿನ್ನ ಭಿನ್ನವಾಗಿರುತ್ತದೆ. ಆದ್ದರಿಂದ ಯೆಹೋವ ದೇವರು ಆ ದಂಗೆಕೋರರ ಭಾಷೆಯನ್ನು ತಾರುಮಾರುಮಾಡಿದಾಗ ಅವರು ಈ ಮುಂಚೆ ಮಾತಾಡುತ್ತಿದ್ದ ಒಂದೇ ಭಾಷೆಯ ಸ್ಮರಣೆಯನ್ನು ಸಂಪೂರ್ಣವಾಗಿ ಅಳಿಸಿಹಾಕಿ ಅವರ ಮನಸ್ಸಿನಲ್ಲಿ ಹೊಸ ಶಬ್ದಭಂಡಾರವನ್ನು ತುಂಬಿಸಿದನು. ಅಷ್ಟುಮಾತ್ರವಲ್ಲದೆ ಅವರ ಯೋಚನಾ ನಮೂನೆಗಳನ್ನು ಬದಲಾಯಿಸಿ ಅವರ ಮನಸ್ಸಿನಲ್ಲಿ ಹೊಸ ವ್ಯಾಕರಣಗಳನ್ನು ತುಂಬಿಸಿದನು. ಆದುದರಿಂದಲೇ ಆ ಸ್ಥಳಕ್ಕೆ ಬಾಬೆಲ್‌ ಅಂದರೆ “ತಾರುಮಾರು” ಎಂಬ ಹೆಸರು ಬಂತು. (ಆದಿ. 11:9, BSI ರೆಫರೆನ್ಸ್‌ ಬೈಬಲ್‌ ಪಾದಟಿಪ್ಪಣಿ.) ಆಸಕ್ತಿಕರ ವಿಷಯವೇನೆಂದರೆ, ಇಂದಿನ ಭಾಷಾ ವೈವಿಧ್ಯತೆಗೆ ಕಾರಣವನ್ನು ಬೈಬಲ್‌ ಮಾತ್ರ ತೃಪ್ತಿಕರವಾಗಿ ವಿವರಿಸುತ್ತದೆ.

ಒಂದು ಹೊಸ ಶುದ್ಧ ಭಾಷೆ

4 ಬಾಬೆಲ್‌ನಲ್ಲಿ ಯೆಹೋವನು ಭಾಷೆಯನ್ನು ತಾರುಮಾರುಮಾಡಿದ್ದರ ಕುರಿತ ಬೈಬಲ್‌ ವೃತ್ತಾಂತವು ಎಷ್ಟು ಚಿತ್ತಾಕರ್ಷಕವಾಗಿದೆಯೋ ಅದಕ್ಕಿಂತ ಹೆಚ್ಚು ಆಸಕ್ತಿಕರ ಮತ್ತು ಪ್ರಾಮುಖ್ಯ ವಿಷಯವೊಂದು ನಮ್ಮ ದಿನಗಳಲ್ಲಿ ನಡೆದಿದೆ. ಯೆಹೋವನು ತನ್ನ ಪ್ರವಾದಿಯಾದ ಚೆಫನ್ಯನ ಮೂಲಕ ಮುಂತಿಳಿಸಿದ್ದು: “ಎಲ್ಲರೂ ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿ ಮಾಡುವೆನು [“ಶುದ್ಧ ಭಾಷೆಯನ್ನು ಕೊಡುವೆನು,” NW].” (ಚೆಫ. 3:9) ಆ “ಶುದ್ಧ ಭಾಷೆ” ಯಾವುದು, ಮತ್ತು ಆ ಭಾಷೆಯನ್ನು ನಿರರ್ಗಳವಾಗಿ ಮಾತಾಡಲು ನಾವು ಹೇಗೆ ಕಲಿಯಬಲ್ಲೆವು?

5 ಶುದ್ಧ ಭಾಷೆ ಅಂದರೆ, ಬೈಬಲ್‌ನಲ್ಲಿ ಕಂಡುಬರುವ ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತ ಸತ್ಯ ಆಗಿದೆ. ಆ “ಭಾಷೆ”ಯಲ್ಲಿ, ದೇವರ ರಾಜ್ಯದ ಕುರಿತ ಸತ್ಯ ಮತ್ತು ಅದು ಯೆಹೋವನ ಹೆಸರನ್ನು ಹೇಗೆ ಪವಿತ್ರೀಕರಿಸುವುದು, ಆತನ ಪರಮಾಧಿಕಾರವನ್ನು ಹೇಗೆ ನಿರ್ದೋಷೀಕರಿಸುವುದು ಮತ್ತು ಹೇಗೆ ನಂಬಿಗಸ್ತ ಮಾನವಕುಲಕ್ಕೆ ನಿತ್ಯ ಆಶೀರ್ವಾದಗಳನ್ನು ತರುವುದು ಎಂಬುದರ ಕುರಿತ ಸರಿಯಾದ ತಿಳಿವಳಿಕೆ ಸೇರಿದೆ. ಈ ಭಾಷಾ ಬದಲಾವಣೆಯ ಫಲಿತಾಂಶವೇನು? ಜನರು ‘ಯೆಹೋವನ ಹೆಸರನ್ನೆತ್ತಿ ಒಂದೇ ಮನಸ್ಸಿನಿಂದ ಆತನನ್ನು ಸೇವಿಸುವರು’ ಎಂದು ನಮಗೆ ತಿಳಿಸಲಾಗಿದೆ. ಬಾಬೆಲ್‌ನಲ್ಲಿ ಸಂಭವಿಸಿದ ಭಾಷಾ ಬದಲಾವಣೆಗೆ ವ್ಯತಿರಿಕ್ತವಾಗಿ, ಈ ಬದಲಾವಣೆಯು ಯೆಹೋವನ ಹೆಸರಿಗೆ ಸ್ತುತಿ ತಂದಿದೆ ಮತ್ತು ಆತನ ಜನರನ್ನು ಐಕ್ಯಗೊಳಿಸಿದೆ.

ಶುದ್ಧ ಭಾಷೆಯನ್ನು ಕಲಿಯುವುದು

6 ಇನ್ನೊಂದು ಭಾಷೆಯಲ್ಲಿ ಪರಿಣತನಾಗಲು ಬಯಸುವ ವ್ಯಕ್ತಿಯೊಬ್ಬನು ಕೇವಲ ಹೊಸ ಶಬ್ದಗಳನ್ನು ಕಂಠಪಾಠ ಮಾಡಿದರೆ ಸಾಲದು. ಹೊಸ ಭಾಷೆಯನ್ನು ಕಲಿಯಲು ಹೊಸ ಯೋಚನಾ ರೀತಿಯನ್ನು ಅಂದರೆ ಒಂದು ಭಿನ್ನ ರೀತಿಯಲ್ಲಿ ಆಲೋಚಿಸಲು ಕಲಿಯಬೇಕಾಗುತ್ತದೆ. ಒಂದು ಭಾಷೆಯಲ್ಲಿ ತರ್ಕಬದ್ಧವಾಗಿರುವ ಇಲ್ಲವೇ ಹಾಸ್ಯಮಯವಾಗಿರುವ ಸಂಗತಿ ಇನ್ನೊಂದು ಭಾಷೆಯಲ್ಲಿ ಬೇರೆಯೇ ಅರ್ಥಕೊಡಬಹುದು. ನಾವೊಂದು ಹೊಸ ಭಾಷೆಯ ಪದಗಳನ್ನು ಉಚ್ಚರಿಸುವಾಗ ನಮ್ಮ ನಾಲಗೆಯನ್ನು ಭಿನ್ನ ರೀತಿಯಲ್ಲಿ ಹೊರಳಿಸಬೇಕಾದೀತು. ಬೈಬಲ್‌ ಸತ್ಯಗಳ ಶುದ್ಧ ಭಾಷೆಯನ್ನು ನಾವು ಕಲಿಯಲಾರಂಭಿಸುವಾಗಲೂ ಈ ಮಾತು ಸತ್ಯ. ಬೈಬಲ್‌ನ ಕೆಲವು ಮೂಲಭೂತ ಬೋಧನೆಗಳನ್ನು ಕಲಿಯುವುದು ಮಾತ್ರ ಸಾಲದು. ಈ ಹೊಸ ಭಾಷೆಯಲ್ಲಿ ಪರಿಣತಿ ಪಡೆಯಲು ನಮ್ಮ ಯೋಚನಾಧಾಟಿಯನ್ನು ಬದಲಾಯಿಸುವುದು ಮತ್ತು ನೂತನಮನಸ್ಸನ್ನು ಹೊಂದುವುದು ಸೇರಿದೆ.—ರೋಮಾಪುರ 12:2; ಎಫೆಸ 4:23 ಓದಿ.

7 ಶುದ್ಧ ಭಾಷೆಯನ್ನು ಅರ್ಥಮಾಡಿಕೊಳ್ಳಲು ಮಾತ್ರವಲ್ಲ ಅದನ್ನು ನಿರರ್ಗಳವಾಗಿ ಮಾತಾಡಲು ನಮಗೆ ಯಾವುದು ಸಹಾಯ ಮಾಡಬಲ್ಲದು? ಯಾವುದೇ ಭಾಷೆಯನ್ನು ಕಲಿಯಲು ಕೆಲವೊಂದು ಮೂಲಭೂತ ವಿಧಾನಗಳಿವೆ. ಈ ವಿಧಾನಗಳೇ ಬೈಬಲ್‌ ಸತ್ಯದ ಶುದ್ಧ ಭಾಷೆಯಲ್ಲಿ ಪರಿಣತರಾಗಲು ನಮಗೆ ಸಹಾಯ ಮಾಡಬಲ್ಲವು. ಸಾಂಕೇತಿಕವಾದ ಹೊಸ ಭಾಷೆಯನ್ನು ಕಲಿಯಲು ಈ ಮೂಲಭೂತ ವಿಧಾನಗಳು ಹೇಗೆ ಸಹಾಯ ಮಾಡಬಲ್ಲವು ಎಂಬುದನ್ನು ನಾವೀಗ ಪರಿಗಣಿಸೋಣ.

ಶುದ್ಧ ಭಾಷೆಯನ್ನು ನಿರರ್ಗಳವಾಗಿ ಮಾತಾಡುವುದು

8ಜಾಗರೂಕತೆಯಿಂದ ಕಿವಿಗೊಡಿ. ಮೊದಮೊದಲು ಒಂದು ಹೊಸ ಭಾಷೆಯನ್ನು ಕೇಳಿಸಿಕೊಳ್ಳುವಾಗ ನಿಮಗೇನೂ ಅರ್ಥವಾಗಲಿಕ್ಕಿಲ್ಲ. (ಯೆಶಾ. 33:19) ಆದರೆ ಒಬ್ಬ ವ್ಯಕ್ತಿ ಏಕಾಗ್ರತೆಯಿಂದ ಕಿವಿಗೊಡುವಲ್ಲಿ ಆ ಭಾಷೆಯ ಪದಗಳನ್ನು ಗುರುತಿಸಲು ಶಕ್ತನಾಗುವನು ಹಾಗೂ ಅದನ್ನು ಮಾತಾಡುವ ರೀತಿ ಅವನಿಗೆ ತಿಳಿದುಬರುವುದು. ಅದಕ್ಕಾಗಿಯೇ ನಮಗೆ ಈ ಬುದ್ಧಿವಾದ ಕೊಡಲಾಗಿದೆ: “ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋದೇವೆಂದು ಭಯಪಟ್ಟು ಅವುಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು.” (ಇಬ್ರಿ. 2:1) ಯೇಸು ತನ್ನ ಶಿಷ್ಯರಿಗೆ ಮತ್ತೆ ಮತ್ತೆ ಹೇಳಿದ್ದು: “ಕಿವಿಯುಳ್ಳವನು ಕೇಳಲಿ.” (ಮತ್ತಾ. 11:15; 13:43; ಮಾರ್ಕ 4:23; ಲೂಕ 14:35) ಆದುದರಿಂದ, ಶುದ್ಧ ಭಾಷೆಯ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಲು ನಾವು ‘ಕಿವಿಗೊಟ್ಟು ಕೇಳಿ, ತಿಳುಕೊಳ್ಳಬೇಕು.’—ಮತ್ತಾ. 15:10; ಮಾರ್ಕ 7:14.

9 ಕಿವಿಗೊಡಲು ಏಕಾಗ್ರತೆ ಅಗತ್ಯ ಮತ್ತು ಇದಕ್ಕಾಗಿ ನಾವು ಮಾಡುವ ಪ್ರಯತ್ನವು ಸಾರ್ಥಕ. (ಲೂಕ 8:18) ಕ್ರೈಸ್ತ ಕೂಟಗಳಲ್ಲಿ ಏನನ್ನು ವಿವರಿಸಲಾಗುತ್ತದೋ ಅದಕ್ಕೆ ಏಕಾಗ್ರತೆಯಿಂದ ಕಿವಿಗೊಡುತ್ತಿರುತ್ತೇವೋ ಅಥವಾ ನಮ್ಮ ಮನಸ್ಸು ಅತ್ತಿತ್ತ ಅಲೆದಾಡುತ್ತಿರುತ್ತದೋ? ಆದುದರಿಂದ ಕೂಟಗಳಲ್ಲಿ ಏಕಾಗ್ರತೆಯಿಂದ ಕಿವಿಗೊಡಲು ಕೈಲಾದ ಪ್ರಯತ್ನ ಮಾಡುವುದು ಪ್ರಾಮುಖ್ಯ. ಇಲ್ಲವಾದಲ್ಲಿ ನಮ್ಮ ಕಿವಿಗಳು ಮಂದವಾಗುವವು.—ಇಬ್ರಿ. 5:11.

10ನಿರರ್ಗಳವಾಗಿ ಮಾತಾಡುವವರ ಅನುಕರಣೆ ಮಾಡಿ. ಹೊಸ ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳು ಜಾಗರೂಕತೆಯಿಂದ ಕಿವಿಗೊಡಬೇಕು ಮಾತ್ರವಲ್ಲ ಆ ಭಾಷೆಯನ್ನು ನಿರರ್ಗಳವಾಗಿ ಮಾತಾಡುವವರ ಉಚ್ಚಾರಣೆ ಹಾಗೂ ಮಾತಾಡುವ ರೀತಿಯನ್ನು ಅನುಕರಣೆ ಮಾಡುವುದು ಒಳ್ಳೇದು. ಇದು, ಅವರು ಹೊಸ ಭಾಷೆಯನ್ನು ಇನ್ನೊಂದು ಭಾಷೆಯ ಉಚ್ಚಾರಣಾ ಶೈಲಿಯಲ್ಲಿ ಮಾತಾಡದಂತೆ ತಡೆಯುವುದು. ಇಲ್ಲದಿದ್ದಲ್ಲಿ ಅವರು ಹೊಸ ಭಾಷೆಯನ್ನಾಡಿದರೂ ಇತರರಿಗೆ ಅರ್ಥವಾಗಲಿಕ್ಕಿಲ್ಲ. ಅದೇ ರೀತಿಯಲ್ಲಿ ಶುದ್ಧ ಭಾಷೆಯನ್ನು ‘ಬೋಧಿಸುವ ಕಲೆಯಲ್ಲಿ’ ನಿಪುಣರಾದವರಿಂದ ನಾವು ಕಲಿಯುವುದು ಅಗತ್ಯ. (2 ತಿಮೊ. 4:2, NW) ಸಹಾಯವನ್ನು ಕೇಳಿ ಪಡೆದುಕೊಳ್ಳಿ. ತಪ್ಪುಗಳನ್ನು ಯಾರಾದರೂ ತಿದ್ದುವಾಗ ಸಂತೋಷದಿಂದ ಸ್ವೀಕರಿಸಿ.—ಇಬ್ರಿಯ 12:5, 6, 11 ಓದಿ.

11 ಶುದ್ಧ ಭಾಷೆಯನ್ನು ಮಾತಾಡುವುದೆಂದರೆ ಕೇವಲ ಸತ್ಯವನ್ನು ನಂಬುವುದು ಮತ್ತು ಅದನ್ನು ಇತರರಿಗೆ ಬೋಧಿಸುವುದು ಮಾತ್ರವಲ್ಲ. ಬದಲಾಗಿ ನಮ್ಮ ನಡತೆ ಸಹ ದೇವರ ನಿಯಮಗಳು ಹಾಗೂ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿರಬೇಕು. ಇತರರನ್ನು ಅನುಕರಿಸುವುದು ಈ ನಿಟ್ಟಿನಲ್ಲಿ ನಮಗೆ ಸಹಾಯ ಮಾಡುವುದು. ಇದರಲ್ಲಿ, ಅವರ ನಂಬಿಕೆ ಮತ್ತು ಹುರುಪನ್ನು ಅನುಕರಿಸುವುದು ಸೇರಿದೆ. ಅಲ್ಲದೇ, ನಾವು ಯೇಸುವಿನ ಇಡೀ ಜೀವನರೀತಿಯನ್ನೂ ಅನುಕರಣೆ ಮಾಡಬೇಕು. (1 ಕೊರಿಂ. 11:1; ಇಬ್ರಿ. 12:2; 13:7) ಹೀಗೆ ಮಾಡಲು ಪಟ್ಟುಹಿಡಿಯುವಲ್ಲಿ ದೇವಜನರೆಲ್ಲರೂ ಒಂದೇ ಉಚ್ಚಾರಣಾ ಶೈಲಿಯಲ್ಲಿ ಶುದ್ಧ ಭಾಷೆಯನ್ನಾಡಲು ಸಾಧ್ಯವಾಗುವುದು ಮತ್ತು ಅವರ ಮಧ್ಯೆ ಐಕ್ಯವಿರುವುದು.—1 ಕೊರಿಂ. 4:16, 17.

12ಕಂಠಪಾಠ ಮಾಡಿ. ಹೊಸ ಭಾಷೆಯನ್ನು ಕಲಿಯಲಿಚ್ಛಿಸುವ ವಿದ್ಯಾರ್ಥಿಗಳು ಹೊಸ ಪದಗಳು ಮತ್ತು ಪದಗುಚ್ಛಗಳನ್ನು ಸೇರಿಸಿ ಅನೇಕ ಹೊಸ ವಿಚಾರಗಳನ್ನು ಕಂಠಪಾಠ ಮಾಡಬೇಕಾಗುತ್ತದೆ. ಕ್ರೈಸ್ತರಿಗಾದರೋ, ಶುದ್ಧ ಭಾಷೆಯಲ್ಲಿ ಪರಿಣತರಾಗಲು ಇದೊಂದು ಉತ್ತಮ ಸಹಾಯಕವಾಗಿದೆ. ಬೈಬಲ್‌ ಪುಸ್ತಕಗಳ ಹೆಸರುಗಳನ್ನು ಅವುಗಳ ಕ್ರಮದಲ್ಲಿ ಬಾಯಿಪಾಠ ಮಾಡುವುದು ಒಳ್ಳೇದು. ಕೆಲವರು ನಿರ್ದಿಷ್ಟ ಬೈಬಲ್‌ ವಚನಗಳನ್ನು ಅಥವಾ ಒಂದು ನಿರ್ದಿಷ್ಟ ವಿಚಾರ ಬೈಬಲ್‌ನಲ್ಲಿ ಎಲ್ಲಿದೆ ಎಂಬುದನ್ನು ಕಂಠಪಾಠ ಮಾಡುವ ಗುರಿಯನ್ನಿಟ್ಟಿದ್ದಾರೆ. ಇನ್ನಿತರರು ರಾಜ್ಯ ಗೀತೆಗಳನ್ನು, ಇಸ್ರಾಯೇಲ್ಯರ ಕುಲಗಳ ಹಾಗೂ 12 ಅಪೊಸ್ತಲರ ಹೆಸರುಗಳನ್ನು ಮತ್ತು ಪವಿತ್ರಾತ್ಮದ ಫಲಗಳನ್ನು ಕಂಠಪಾಠ ಮಾಡುವುದು ಪ್ರಯೋಜನಕರವೆಂಬುದನ್ನು ಕಂಡುಕೊಂಡಿದ್ದಾರೆ. ಪುರಾತನ ಸಮಯಗಳಲ್ಲಿ ಅನೇಕ ಇಸ್ರಾಯೇಲ್ಯರು ಕೀರ್ತನೆಗಳನ್ನು ಕಂಠಪಾಠ ಮಾಡುತ್ತಿದ್ದರು. ಆಧುನಿಕ ದಿನಗಳ ಬಗ್ಗೆ ಹೇಳುವುದಾದರೆ, ಚಿಕ್ಕ ಹುಡುಗನೊಬ್ಬನು ಆರು ವರ್ಷದವನಾಗುವಷ್ಟರಲ್ಲಿ 80ಕ್ಕಿಂತ ಹೆಚ್ಚು ಬೈಬಲ್‌ ವಚನಗಳನ್ನು ಕಂಠಪಾಠ ಮಾಡಿಕೊಂಡಿದ್ದನು. ಈ ಅಮೂಲ್ಯ ಕೌಶಲವನ್ನು ನಾವು ಸಹ ಉತ್ತಮವಾಗಿ ಬಳಸಬಾರದೇಕೆ?

13ಪುನರಾವರ್ತನೆಯು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಮರುಜ್ಞಾಪನಗಳ ಪುನರಾವರ್ತನೆಯು ಕ್ರೈಸ್ತ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಅಪೊಸ್ತಲ ಪೇತ್ರನು ಹೇಳಿದ್ದು: “ನೀವು ಈ ಸಂಗತಿಗಳನ್ನು ತಿಳಿದವರಾಗಿ ನಿಮಗೆ ದೊರಕಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ ಜ್ಞಾಪಕಕೊಡುವದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು.” (2 ಪೇತ್ರ 1:12) ನಮಗೆ ಮರುಜ್ಞಾಪನಗಳೇಕೆ ಬೇಕು? ಏಕೆಂದರೆ ಅವುಗಳಿಂದ ನಮ್ಮ ತಿಳುವಳಿಕೆ ಹೆಚ್ಚುತ್ತದೆ, ದೃಷ್ಟಿಕೋನ ವಿಶಾಲಗೊಳ್ಳುತ್ತದೆ ಮತ್ತು ದೇವರಿಗೆ ವಿಧೇಯರಾಗಬೇಕೆಂಬ ನಮ್ಮ ನಿರ್ಣಯ ಬಲಗೊಳ್ಳುತ್ತದೆ. ದೇವರ ಮಟ್ಟಗಳು ಮತ್ತು ಮೂಲತತ್ತ್ವಗಳನ್ನು ಯಾವಾಗಲೂ ಪುನರ್ವಿಮರ್ಶಿಸುತ್ತಿರುವುದು ಸ್ವಪರಿಶೀಲನೆ ಮಾಡಲು ಮತ್ತು “ಕೇಳಿ ಮರೆತುಹೋಗುವ” ಸ್ವಭಾವವನ್ನು ಪ್ರತಿರೋಧಿಸಲು ಸಹಾಯ ಮಾಡುವುದು. (ಯಾಕೋ. 1:22-25) ನಾವು ಸತ್ಯವನ್ನು ಪದೇ ಪದೇ ಜ್ಞಾಪಕಕ್ಕೆ ತರದಿದ್ದರೆ, ಇತರ ವಿಷಯಗಳು ನಮ್ಮ ಹೃದಯವನ್ನು ಪ್ರಭಾವಿಸಿ, ನಾವು ಶುದ್ಧ ಭಾಷೆಯನ್ನು ನಿರರ್ಗಳವಾಗಿ ಮಾತಾಡದಂತೆ ಮಾಡುವವು.

14ತಗ್ಗುದನಿಯಲ್ಲಿ ಓದಿ. ಕೆಲವು ವಿದ್ಯಾರ್ಥಿಗಳು ಹೊಸ ಭಾಷೆಯನ್ನು ತಮ್ಮಷ್ಟಕ್ಕೆ ಮೌನವಾಗಿ ಕಲಿಯಲು ಪ್ರಯತ್ನಿಸುತ್ತಾರೆ. ಇದರಿಂದ ಹೆಚ್ಚೇನು ಪ್ರಯೋಜನವಾಗಲಾರದು. ಏಕಾಗ್ರತೆ ಬೇಕಾದರೆ ತಗ್ಗುದನಿಯಲ್ಲಿ ಓದಬೇಕು. ಇದು ಶುದ್ಧ ಭಾಷೆಯ ಅಧ್ಯಯನಕ್ಕೂ ಅನ್ವಯಿಸುತ್ತದೆ. ಆದ್ದರಿಂದಲೇ ಕೀರ್ತನೆಗಾರನು ತಿಳಿಸಿದ್ದು: “ಯಾವನು . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ [“ತಗ್ಗುದನಿಯಲ್ಲಿ ಓದುತ್ತಿರುವನೋ,” NW] ಅವನು ಎಷ್ಟೋ ಧನ್ಯನು.” (ಕೀರ್ತ. 1:1, 2) ಹೀಗೆ ಮಾಡುವುದರಿಂದ ಓದಿದ ವಿಚಾರ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ತಿಂದ ಆಹಾರದಿಂದ ನಮಗೆ ಶಕ್ತಿ ಸಿಗಬೇಕಾದರೆ ಅದು ಜೀರ್ಣವಾಗಲೇಬೇಕು. ಅಂತೆಯೇ ನಾವು ಓದುವ ವಿಷಯ ಸ್ಪಷ್ಟವಾಗಿ ಅರ್ಥವಾಗಬೇಕಾದರೆ ಧ್ಯಾನಿಸುವುದು ಅವಶ್ಯ. ಅಧ್ಯಯನ ಮಾಡಿದ ವಿಷಯವನ್ನು ಧ್ಯಾನಿಸುವುದಕ್ಕೆ ನಾವು ಸಾಕಷ್ಟು ಸಮಯ ಕೊಡುತ್ತೇವೋ? ಬೈಬಲನ್ನು ಓದಿದ ಬಳಿಕ ಅದರ ಕುರಿತು ನಾವು ಗಾಢವಾಗಿ ಚಿಂತಿಸಬೇಕು.

15ವ್ಯಾಕರಣವನ್ನು ವಿಶ್ಲೇಷಿಸಿ. ಒಂದು ಹಂತದಲ್ಲಿ, ನಾವು ಕಲಿಯುತ್ತಿರುವ ಭಾಷೆಯ ವ್ಯಾಕರಣ ಅಂದರೆ ಅದರ ವಾಕ್ಯರಚನೆ ಹಾಗೂ ನಿಯಮಗಳನ್ನು ಕಲಿಯುವುದು ಪ್ರಯೋಜನಕರ. ಹೀಗೆ ಭಾಷಾರಚನೆ ನಮಗೆ ಅರ್ಥವಾಗುವಾಗ ಅದನ್ನು ಸರಿಯಾಗಿ ಮಾತಾಡಲು ಶಕ್ತರಾಗುತ್ತೇವೆ. ಪ್ರತಿ ಭಾಷೆಗೆ ಅದರದ್ದೇ ಆದ ವ್ಯಾಕರಣವಿರುವಂತೆ ಬೈಬಲ್‌ ಸತ್ಯಗಳೆಂಬ ಶುದ್ಧ ಭಾಷೆಗೂ ಅದರದ್ದೇ ಆದ ‘ವ್ಯಾಕರಣ’ ಅಥವಾ “ಸ್ವಸ್ಥವಾಕ್ಯಗಳ ಮಾದರಿ” ಇದೆ. (2 ತಿಮೊ. 1:13, NIBV) ಆ “ಮಾದರಿಯನ್ನು” ನಾವು ಅನುಕರಿಸಬೇಕು.

16ಪ್ರಗತಿ ಮಾಡುತ್ತಾ ಇರ್ರಿ. ಒಬ್ಬ ವ್ಯಕ್ತಿ ಸಾಮಾನ್ಯ ಸಂಭಾಷಣೆಯನ್ನು ಮಾಡುವಷ್ಟರ ಮಟ್ಟಿಗೆ ಹೊಸ ಭಾಷೆಯೊಂದನ್ನು ಕಲಿತು ಅಲ್ಲಿಗೆ ಬಿಟ್ಟುಬಿಡಬಹುದು. ಶುದ್ಧ ಭಾಷೆಯನ್ನಾಡುವವರಲ್ಲೂ ಈ ಸಮಸ್ಯೆ ತಲೆದೋರಬಹುದು. (ಇಬ್ರಿಯ 5:11-14 ಓದಿ.) ಈ ಪ್ರವೃತ್ತಿಯನ್ನು ಹೇಗೆ ಜಯಿಸಬಲ್ಲೆವು? ಶುದ್ಧ ಭಾಷೆಯ ಕಲಿಕೆಯನ್ನು ಮುಂದುವರಿಸುವುದು ನಮಗೆ ಸಹಾಯಮಾಡುವುದು. “ನಿರ್ಜೀವಕರ್ಮಗಳ ಮೇಲಣ ನಂಬಿಕೆಯನ್ನು ಬಿಟ್ಟುಬಿಟ್ಟು ದೇವರಲ್ಲಿಯೇ ನಂಬಿಕೆಯಿಡಬೇಕಾದದ್ದು, ಸ್ನಾನ ಹಸ್ತಾರ್ಪಣಗಳ ವಿಷಯವಾದ ಉಪದೇಶ, ಸತ್ತವರಿಗೆ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪು ಉಂಟೆಂಬದು ಇವುಗಳನ್ನು ಪದೇಪದೇ ಅಸ್ತಿವಾರವಾಗಿ ಹಾಕದೆ ಕ್ರಿಸ್ತನ ವಿಷಯವಾದ ಪ್ರಥಮಬೋಧನೆಯನ್ನು ಕುರಿತು ಇನ್ನೂ ಮಾತಾಡದೆ ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ.”—ಇಬ್ರಿ. 6:1, 2.

17ಅಧ್ಯಯನಕ್ಕಾಗಿ ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಿ. ಯಾವಾಗಲಾದರೊಮ್ಮೆ ಬಹಳ ಹೊತ್ತು ಕೂತು ಅಧ್ಯಯನ ಮಾಡುವುದಕ್ಕಿಂತ ಸ್ವಲ್ಪ ಹೊತ್ತಾದರೂ ಸರಿ ಅದನ್ನು ಕ್ರಮವಾಗಿ ಮಾಡುವುದರಿಂದ ಹೆಚ್ಚು ಪ್ರಯೋಜನಗಳು ಸಿಗುವವು. ನಿಮ್ಮ ಮನಸ್ಸು ಚುರುಕಾಗಿರುವಾಗ ಮತ್ತು ಅದು ಅತ್ತಿತ್ತ ಅಲೆದಾಡದ ಸಮಯದಲ್ಲಿ ಅಧ್ಯಯನ ಮಾಡಿ. ಹೊಸ ಭಾಷೆಯೊಂದನ್ನು ಕಲಿಯುವುದು ದಟ್ಟ ಕಾಡಿನಲ್ಲಿ ಕಾಲುದಾರಿ ಮಾಡುವುದಕ್ಕೆ ಸಮಾನವಾಗಿದೆ. ನಾವು ಆ ದಾರಿಯಾಗಿ ಎಷ್ಟು ಸಲ ಹೋಗುತ್ತೇವೋ ಅದರಲ್ಲಿ ಓಡಾಡುವುದು ಅಷ್ಟೇ ಸುಲಭವಾಗಿಬಿಡುತ್ತದೆ. ಸ್ವಲ್ಪ ಸಮಯ ನಾವು ಆ ದಾರಿಯನ್ನು ಬಳಸದಿರುವಲ್ಲಿ ಗಿಡಬಳ್ಳಿಗಳು ಬೆಳೆದು ಆ ದಾರಿ ಮುಚ್ಚಿಹೋಗುವುದು. ಆದ್ದರಿಂದ ಪಟ್ಟುಹಿಡಿಯುವಿಕೆ ಮತ್ತು ನಿತ್ಯಕ್ರಮವು ಬಹುಮುಖ್ಯ! (ದಾನಿ. 6:16, 20) ಹೀಗಿರುವುದರಿಂದ ಬೈಬಲ್‌ ಸತ್ಯಗಳೆಂಬ ಶುದ್ಧ ಭಾಷೆಯನ್ನು ಮಾತಾಡಲು “ಪೂರ್ಣ ಸ್ಥಿರಚಿತ್ತರಾಗಿದ್ದು” ಪ್ರಾರ್ಥನಾಪೂರ್ವಕವಾಗಿ “ಎಚ್ಚರವಾಗಿರ್ರಿ.”—ಎಫೆ. 6:18.

18ಸಾಧ್ಯವಾದಷ್ಟು ಮಾತಾಡಿ! ಹೊಸ ಭಾಷೆಯನ್ನು ಕಲಿಯುತ್ತಿರುವವರಲ್ಲಿ ಕೆಲವರು ಸಂಕೋಚದ ಕಾರಣದಿಂದ ಅಥವಾ ತಪ್ಪಾಗಬಹುದೆಂಬ ಹೆದರಿಕೆಯಿಂದ ಅದನ್ನು ಮಾತಾಡಲು ಹಿಂಜರಿಯುತ್ತಾರೆ. ಇದು ಅವರ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಭಾಷಾ ಕಲಿಕೆಯಲ್ಲಿ, ‘ಅಭ್ಯಾಸವೇ ಸಿದ್ಧಿಗೆ ಸಾಧನ’ ಎಂಬ ಮಾತು ನೂರಕ್ಕೆ ನೂರು ಸತ್ಯ. ವಿದ್ಯಾರ್ಥಿಯು ಹೊಸ ಭಾಷೆಯನ್ನು ಹೆಚ್ಚೆಚ್ಚು ಮಾತಾಡಿದಂತೆ ಅದನ್ನು ಬಳಸುವುದು ಅವನಿಗೆ ಹೆಚ್ಚು ಸುಲಭವಾಗುವುದು. ಹಾಗೆಯೇ ನಾವು ಪ್ರತಿಯೊಂದು ಸಂದರ್ಭದಲ್ಲೂ ಶುದ್ಧ ಭಾಷೆಯನ್ನಾಡಬೇಕು. “ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ, ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.” (ರೋಮಾ. 10:10) ನಾವು ದೀಕ್ಷಾಸ್ನಾನದ ಸಂದರ್ಭದಲ್ಲಿ ಮಾತ್ರವಲ್ಲ, ಶುಶ್ರೂಷೆಯಲ್ಲಿ ತೊಡಗಿರುವಾಗ ಹಾಗೂ ಸಿಗುವ ಪ್ರತಿಯೊಂದು ಸಂದರ್ಭದಲ್ಲಿ ಯೆಹೋವನ ಕುರಿತು ಮಾತಾಡುವ ಮೂಲಕವೂ ಬಹಿರಂಗವಾಗಿ ‘ಬಾಯಿಂದ ಪ್ರತಿಜ್ಞೆಮಾಡುತ್ತೇವೆ.’ (ಮತ್ತಾ. 28:19, 20; ಇಬ್ರಿ. 13:15) ನಾವು ಶುದ್ಧ ಭಾಷೆಯಲ್ಲಿ ಸ್ಪಷ್ಟ ಹಾಗೂ ಚುಟುಕಾದ ಹೇಳಿಕೆಗಳನ್ನು ಮಾಡಲು ಕ್ರೈಸ್ತ ಕೂಟಗಳು ಅವಕಾಶ ಕೊಡುತ್ತವೆ.—ಇಬ್ರಿಯ 10:23-25 ಓದಿ.

ಯೆಹೋವನನ್ನು ಸ್ತುತಿಸಲು ಐಕ್ಯವಾಗಿ ಶುದ್ಧ ಭಾಷೆಯನ್ನಾಡಿ

19 ಯೆರೂಸಲೇಮಿನಲ್ಲಿ ಸಾ.ಶ. 33ರ ಸಿವಾನ್‌ ತಿಂಗಳ 6ನೇ ದಿನವಾದ ಭಾನುವಾರ ಎಷ್ಟು ಸಂಭ್ರಮವಿದ್ದಿರಬೇಕು! ಅಂದು ಬೆಳಿಗ್ಗೆ ಒಂಭತ್ತು ಗಂಟೆಗೆ ಸ್ವಲ್ಪ ಮುಂಚೆ, ಮೇಲಂತಸ್ತಿನ ಕೋಣೆಯೊಂದರಲ್ಲಿ ಕೂಡಿಬಂದವರೆಲ್ಲರೂ ಅದ್ಭುತಕರವಾಗಿ “ಬೇರೆಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.” (ಅ. ಕೃ. 2:4) ಇಂದು ದೇವರ ಸೇವಕರಿಗೆ ವಿವಿಧ ಭಾಷೆಗಳಲ್ಲಿ ಮಾತಾಡುವ ವರವಿಲ್ಲ. (1 ಕೊರಿಂ. 13:8) ಹಾಗಿದ್ದರೂ ಯೆಹೋವನ ಸಾಕ್ಷಿಗಳು 430ಕ್ಕೂ ಹೆಚ್ಚು ಭಾಷೆಗಳಲ್ಲಿ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದಾರೆ.

20 ನಾವೆಲ್ಲರೂ ಆಡುವ ಭಾಷೆ ಬೇರೆ ಬೇರೆಯಾದರೂ ಬೈಬಲ್‌ ಸತ್ಯವೆಂಬ ಶುದ್ಧ ಭಾಷೆಯನ್ನಾಡುವುದರಲ್ಲಿ ಐಕ್ಯರಾಗಿದ್ದೇವೆ. ಇದಕ್ಕೆ ನಾವೆಷ್ಟು ಆಭಾರಿಗಳು! ಇದು ಬಾಬೆಲ್‌ನಲ್ಲಿ ಏನು ಸಂಭವಿಸಿತೋ ಅದಕ್ಕೆ ತೀರಾ ತದ್ವಿರುದ್ಧವಾದದ್ದಾಗಿದೆ. ಒಂದೇ ಭಾಷೆಯನ್ನಾಡುತ್ತಿದ್ದಾರೋ ಎಂಬಂತೆ ಯೆಹೋವನ ಜನರು ಆತನ ಹೆಸರನ್ನು ಸ್ತುತಿಸುತ್ತಿದ್ದಾರೆ. (1 ಕೊರಿಂ. 1:10) ಶುದ್ಧ ಭಾಷೆಯನ್ನು ಇನ್ನಷ್ಟು ನಿರರ್ಗಳವಾಗಿ ಮಾತಾಡಲು ಕಲಿಯುತ್ತಿರುವಾಗ ಲೋಕವ್ಯಾಪಕವಾಗಿ ನಮ್ಮ ಸಹೋದರ ಸಹೋದರಿಯರೊಂದಿಗೆ “ಹೆಗಲಿಗೆ ಹೆಗಲು ಕೊಟ್ಟು” ಸೇವೆ ಸಲ್ಲಿಸುವುದು ನಮ್ಮ ದೃಢನಿರ್ಧಾರವಾಗಿರಲಿ. ಇದು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಗೆ ಮಹಿಮೆ ತರುವುದು.—ಕೀರ್ತನೆ 150:1-6 ಓದಿ.

ನೀವು ಹೇಗೆ ಉತ್ತರಿಸುವಿರಿ?

• ಶುದ್ಧ ಭಾಷೆ ಎಂದರೇನು?

• ಶುದ್ಧ ಭಾಷೆಯನ್ನಾಡುವುದರಲ್ಲಿ ಏನೆಲ್ಲ ಸೇರಿದೆ?

• ಶುದ್ಧ ಭಾಷೆಯನ್ನು ನಿರರ್ಗಳವಾಗಿ ಮಾತಾಡಲು ನಮಗೆ ಯಾವುದು ಸಹಾಯ ಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

1. ಯೆಹೋವನು ನಮಗೆ ಯಾವ ಅದ್ಭುತಕರ ವರ ಕೊಟ್ಟಿದ್ದಾನೆ?

2. ಆರಂಭದಲ್ಲಿದ್ದಂತೆ ಎಲ್ಲಾ ಮಾನವರು ಒಂದೇ ಭಾಷೆಯನ್ನೇಕೆ ಮಾತಾಡುತ್ತಿಲ್ಲ?

3. ಬಾಬೆಲ್‌ನ ಬಂಡಾಯಗಾರರ ಭಾಷೆಯನ್ನು ಯೆಹೋವನು ತಾರುಮಾರುಮಾಡಿದಾಗ ಏನಾಯಿತು?

4. ನಮ್ಮ ದಿನಗಳ ಕುರಿತು ಯೆಹೋವನು ಏನನ್ನು ಮುಂತಿಳಿಸಿದನು?

5. “ಶುದ್ಧ ಭಾಷೆ” ಎಂದರೇನು, ಮತ್ತು ಈ ಭಾಷಾ ಬದಲಾವಣೆಯ ಫಲಿತಾಂಶವೇನು?

6, 7. (ಎ) ಹೊಸ ಭಾಷೆಯನ್ನು ಕಲಿಯಲು ಏನೆಲ್ಲಾ ಮಾಡಬೇಕು, ಮತ್ತು ಶುದ್ಧ ಭಾಷೆಯನ್ನು ಕಲಿಯುವುದರಲ್ಲಿ ಇದು ಹೇಗೆ ಅನ್ವಯಿಸುತ್ತದೆ? (ಬಿ) ನಾವೀಗ ಏನನ್ನು ಪರಿಗಣಿಸಲಿದ್ದೇವೆ?

8, 9. ಶುದ್ಧ ಭಾಷೆಯನ್ನು ಕಲಿಯಲು ಬಯಸುವಲ್ಲಿ ನಾವೇನು ಮಾಡಬೇಕು, ಮತ್ತು ಅದೇಕೆ ತುಂಬ ಪ್ರಾಮುಖ್ಯ?

10, 11. (ಎ) ನಾವು ಜಾಗರೂಕತೆಯಿಂದ ಕಿವಿಗೊಡುವುದಲ್ಲದೆ ಮತ್ತೇನು ಮಾಡಬೇಕು? (ಬಿ) ಶುದ್ಧ ಭಾಷೆಯನ್ನು ಮಾತಾಡಲು ನಾವು ಇನ್ನೇನು ಮಾಡಬೇಕು?

12. ಕಂಠಪಾಠ ಮಾಡುವುದು ಹೊಸ ಭಾಷೆಯನ್ನು ಕಲಿಯುವುದರಲ್ಲಿ ಹೇಗೆ ಸಹಾಯ ಮಾಡುತ್ತದೆ?

13. ಪುನರಾವರ್ತನೆ ಪ್ರಾಮುಖ್ಯವೇಕೆ?

14. ಶುದ್ಧ ಭಾಷೆಯ ಅಧ್ಯಯನದಲ್ಲಿ ನಮಗೆ ಯಾವುದು ಸಹಾಯ ಮಾಡಬಲ್ಲದು?

15. ಶುದ್ಧ ಭಾಷೆಯ ‘ವ್ಯಾಕರಣವನ್ನು’ ನಾವು ಹೇಗೆ ಕಲಿಯಬಲ್ಲೆವು?

16. ನಾವು ಯಾವ ಪ್ರವೃತ್ತಿಯನ್ನು ಜಯಿಸಬೇಕು, ಮತ್ತು ಅದನ್ನು ಹೇಗೆ ಮಾಡಬಲ್ಲೆವು?

17. ಕ್ರಮವಾದ ಅಧ್ಯಯನ ರೂಢಿ ಪ್ರಾಮುಖ್ಯವೇಕೆ? ದೃಷ್ಟಾಂತಿಸಿ.

18. ನಾವು ಪ್ರತಿಯೊಂದು ಸಂದರ್ಭದಲ್ಲೂ ಶುದ್ಧ ಭಾಷೆಯನ್ನಾಡಬೇಕು ಏಕೆ?

19, 20. (ಎ) ನಮ್ಮ ದಿನಗಳಲ್ಲಿ ಯೆಹೋವನ ಸಾಕ್ಷಿಗಳು ಯಾವ ಅದ್ಭುತಕರ ಕೆಲಸವನ್ನು ಪೂರೈಸುತ್ತಿದ್ದಾರೆ? (ಬಿ) ನಿಮ್ಮ ದೃಢನಿರ್ಧಾರವೇನು?

[ಪುಟ 23ರಲ್ಲಿರುವ ಚೌಕ]

ಶುದ್ಧ ಭಾಷೆಯನ್ನು ಇನ್ನಷ್ಟು ನಿರರ್ಗಳವಾಗಿ ಮಾತಾಡಲು:

ಜಾಗರೂಕತೆಯಿಂದ ಕಿವಿಗೊಡಿ.

ಲೂಕ 8:18; ಇಬ್ರಿ. 2:1.

ನಿರರ್ಗಳವಾಗಿ ಮಾತಾಡುವವರ ಅನುಕರಣೆ ಮಾಡಿ.

ಕೊರಿಂ. 11:1; ಇಬ್ರಿ 13:7.

ಕಂಠಪಾಠ ಮಾಡಿ ಮತ್ತು ಪುನರಾವರ್ತಿಸಿ.

ಯಾಕೋ. 1:22-25; 2 ಪೇತ್ರ 1:12.

◆ ತಗ್ಗುದನಿಯಲ್ಲಿ ಓದಿ.

ಕೀರ್ತ. 1:1, 2; ಪ್ರಕಟನೆ 1:3.

◆ ‘ವ್ಯಾಕರಣವನ್ನು’ ವಿಶ್ಲೇಷಿಸಿ.

2 ತಿಮೊ. 1:13.

◆ ಪ್ರಗತಿ ಮಾಡುತ್ತಾ ಇರ್ರಿ.

ಇಬ್ರಿ. 5:11-14; 6:1, 2.

◆ ಅಧ್ಯಯನಕ್ಕಾಗಿ ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಿ.

ದಾನಿ. 6:16, 20; ಎಫೆ. 6:18.

◆ ಸಾಧ್ಯವಾದಷ್ಟು ಮಾತಾಡಿ.

ರೋಮಾ. 10:10; ಇಬ್ರಿ. 10:23-25.

[ಪುಟ 24ರಲ್ಲಿರುವ ಚಿತ್ರಗಳು]

ಯೆಹೋವನ ಜನರು ಐಕ್ಯವಾಗಿ “ಶುದ್ಧ ಭಾಷೆ”ಯನ್ನಾಡುತ್ತಿದ್ದಾರೆ