ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅತ್ಯಾಸಕ್ತಿಯಿಂದ” ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿಹೊಂದಿರಿ

“ಅತ್ಯಾಸಕ್ತಿಯಿಂದ” ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿಹೊಂದಿರಿ

“ಅತ್ಯಾಸಕ್ತಿಯಿಂದ” ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿಹೊಂದಿರಿ

ಯೆಹೋವನ ಎಲ್ಲ ಸೇವಕರು ಆತನ ಸಮ್ಮತಿ ಪಡೆಯಲು ಬಯಸುತ್ತಾರೆ. ಅದಕ್ಕಾಗಿಯೇ ನಾವು ನಮ್ಮ ನಂಬಿಕೆಯ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ಹುರುಪಿನಿಂದ ಪವಿತ್ರ ಸೇವೆಸಲ್ಲಿಸಲು ಉತ್ಸುಕರಾಗಿದ್ದೇವೆ. ಹಾಗಿದ್ದರೂ ಅಪೊಸ್ತಲ ಪೌಲನು ಒಂದು ಸಂಭಾವ್ಯ ಅಪಾಯದ ಕಡೆಗೆ ನಮ್ಮ ಗಮನ ಸೆಳೆಯುತ್ತಾನೆ. ಈ ಅಪಾಯಕ್ಕೆ ಆತನ ದಿನಗಳಲ್ಲಿದ್ದ ಕೆಲವು ಯೆಹೂದ್ಯರು ತುತ್ತಾಗಿದ್ದರು. ಅದೇನೆಂದರೆ, ‘ಅವರು ದೇವರಲ್ಲಿ ಆಸಕ್ತರಾಗಿದ್ದರೂ ಅವರ ಆಸಕ್ತಿ ಜ್ಞಾನಾನುಸಾರವಾದದ್ದಾಗಿರಲಿಲ್ಲ.’ (ರೋಮಾ. 10:2) ಹೌದು, ನಮ್ಮ ನಂಬಿಕೆ ಹಾಗೂ ಯೆಹೋವನ ಆರಾಧನೆಯು ಬರೀ ಭಾವುಕತೆಯಿಂದ ಹೊಮ್ಮಬಾರದು. ನಮಗೆ ಸೃಷ್ಟಿಕರ್ತನ ಮತ್ತು ಆತನ ಚಿತ್ತದ ಕುರಿತ ನಿಷ್ಕೃಷ್ಟ ಜ್ಞಾನವಿರಬೇಕು.

ಪೌಲನು ತನ್ನ ಇತರ ಬರಹಗಳಲ್ಲಿ, ದೇವರು ಸಮ್ಮತಿಸುವ ನಡತೆಗೂ ನಿಷ್ಕೃಷ್ಟ ಜ್ಞಾನವನ್ನು ಉತ್ಸುಕತೆಯಿಂದ ಗಳಿಸುವುದಕ್ಕೂ ಸಂಬಂಧವಿದೆಯೆಂದು ತೋರಿಸುತ್ತಾನೆ. ಕ್ರಿಸ್ತನ ಹಿಂಬಾಲಕರು ದೇವರ ಚಿತ್ತದ ವಿಷಯವಾದ ‘ತಿಳುವಳಿಕೆಯಿಂದ [“ನಿಷ್ಕೃಷ್ಟ ಜ್ಞಾನದಿಂದ,” NW] ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ [“ದೇವರ ನಿಷ್ಕೃಷ್ಟ ಜ್ಞಾನದಲ್ಲಿ,” NW] ಅಭಿವೃದ್ಧಿಯಾಗುತ್ತಿರಬೇಕೆಂತಲೂ’ ಆತನು ಪ್ರಾರ್ಥಿಸಿದನು. (ಕೊಲೊ. 1:9, 10) ನಾವು “ನಿಷ್ಕೃಷ್ಟ ಜ್ಞಾನ”ವನ್ನು ಗಳಿಸುವುದು ಏಕೆ ತುಂಬ ಮಹತ್ತ್ವದ್ದಾಗಿದೆ? ನಾವೇಕೆ ಅಂಥ ಜ್ಞಾನದಲ್ಲಿ ಅಭಿವೃದ್ಧಿ ಹೊಂದಬೇಕು?

ನಂಬಿಕೆಗೆ ಆಧಾರ

ದೇವರು ಮತ್ತು ಆತನ ಚಿತ್ತವನ್ನು ಕುರಿತು ಬೈಬಲಿನಲ್ಲಿ ಪ್ರಕಟವಾಗಿರುವ ನಿಷ್ಕೃಷ್ಟ ಜ್ಞಾನವು ನಮ್ಮ ನಂಬಿಕೆಗೆ ಆಧಾರವಾಗಿದೆ. ಅಂಥ ಭರವಸಾರ್ಹ ಜ್ಞಾನವಿಲ್ಲದಿದ್ದಲ್ಲಿ ಯೆಹೋವನಲ್ಲಿನ ನಮ್ಮ ನಂಬಿಕೆಯು, ಇಸ್ಪೀಟು ಎಲೆಗಳಿಂದ ಕಟ್ಟಿದ ಮನೆಯಂತಿರುವುದು. ಸ್ವಲ್ಪ ಗಾಳಿ ಬಂದರೆ ಸಾಕು ಅದು ಕುಸಿದುಬೀಳುವುದು. ನಾವು ‘ವಿವೇಕಪೂರ್ವಕ ಆರಾಧನೆ’ ಅಂದರೆ ನಮ್ಮ ತರ್ಕಶಕ್ತಿಯನ್ನು ಬಳಸಿ ದೇವರನ್ನು ಆರಾಧಿಸುವಂತೆ ಮತ್ತು ‘ನೂತನ ಮನಸ್ಸನ್ನು ಹೊಂದಿಕೊಳ್ಳುವಂತೆ’ ಪೌಲನು ಉತ್ತೇಜಿಸುತ್ತಾನೆ. (ರೋಮಾ. 12:1, 2) ಇದನ್ನು ಮಾಡಲು ಕ್ರಮದ ಬೈಬಲ್‌ ಅಧ್ಯಯನ ನಮಗೆ ನೆರವು ನೀಡುವುದು.

ಪೊಲೆಂಡ್‌ನಲ್ಲಿ ರೆಗ್ಯುಲರ್‌ ಪಯನೀಯರ್‌ ಆಗಿರುವ ಈವಾ ಎಂಬಾಕೆ ಒಪ್ಪಿಕೊಳ್ಳುವುದು: “ನಾನು ಕ್ರಮವಾಗಿ ದೇವರ ವಾಕ್ಯವನ್ನು ಅಧ್ಯಯನ ಮಾಡದಿದ್ದಲ್ಲಿ, ಯೆಹೋವನ ಕುರಿತ ನಿಷ್ಕೃಷ್ಟ ಜ್ಞಾನದಲ್ಲಿ ಎಂದೂ ಅಭಿವೃದ್ಧಿ ಹೊಂದುತ್ತಿರಲಿಲ್ಲ. ಕ್ರೈಸ್ತಳೆಂಬ ನನ್ನ ಗುರುತು ಬೇಗನೆ ಮಾಸಿಹೋಗುತ್ತಿತ್ತು ಮತ್ತು ದೇವರಲ್ಲಿನ ನನ್ನ ನಂಬಿಕೆ ದುರ್ಬಲಗೊಳ್ಳುತ್ತಿತ್ತು. ಹೀಗೆ ಮುಂದೊಂದು ದಿನ ನಾನು ಆಧ್ಯಾತ್ಮಿಕವಾಗಿ ದಿವಾಳಿಯಾಗುತ್ತಿದ್ದೆ.” ಇದು ನಮಗೆಂದೂ ಆಗದಿರಲಿ! ಯೆಹೋವನ ಕುರಿತ ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿಹೊಂದಿ ಈ ಮೂಲಕ ಆತನ ಸಮ್ಮತಿ ಪಡೆದ ಒಬ್ಬ ವ್ಯಕ್ತಿಯ ಮಾದರಿಯನ್ನು ಪರಿಗಣಿಸಿರಿ.

“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ”

ನಮ್ಮ ಬೈಬಲ್‌ಗಳಲ್ಲಿ 119ನೇ ಕೀರ್ತನೆಯೆಂದು ಪಟ್ಟಿಮಾಡಲಾದ ಕಾವ್ಯಮಯ ಗೀತೆಯು, ಯೆಹೋವನ ನಿಬಂಧನೆಗಳು, ಕಟ್ಟಳೆಗಳು, ಆಜ್ಞೆಗಳು, ನೇಮಗಳು ಮತ್ತು ಧರ್ಮಶಾಸ್ತ್ರದ ಕಡೆಗೆ ಕೀರ್ತನೆಗಾರನಿಗಿದ್ದ ಭಾವನೆಗಳನ್ನು ಪ್ರಕಟಪಡಿಸುತ್ತದೆ. ಕೀರ್ತನೆಗಾರನು ಬರೆದದ್ದು: “ನಿನ್ನ ನಿಬಂಧನೆಗಳಲ್ಲಿ ಉಲ್ಲಾಸಪಡುವೆನು; . . . ನಿನ್ನ ಕಟ್ಟಳೆಗಳು ನನ್ನ ಆನಂದವು.” ಅವನು ಮತ್ತೂ ಬರೆದದ್ದು: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”—ಕೀರ್ತ. 119:16, 24, 47, 48, 77, 97.

“ಉಲ್ಲಾಸ,” “ಆನಂದ” ಮತ್ತು “ಧ್ಯಾನ” ಎಂಬ ಅಭಿವ್ಯಕ್ತಿಗಳು, ದೇವರ ವಾಕ್ಯದ ಕುರಿತು ಧ್ಯಾನಿಸಬೇಕೆಂಬುದನ್ನು ಅದರಲ್ಲೂ ಮುಖ್ಯವಾಗಿ ಧ್ಯಾನಿಸುವಿಕೆಯಲ್ಲಿ ಸಂತೋಷ ಪಡೆಯಬೇಕೆಂಬುದನ್ನೂ ಸೂಚಿಸುತ್ತವೆ. ಧರ್ಮಶಾಸ್ತ್ರವನ್ನು ಅಧ್ಯಯನಮಾಡುವುದು ಕೀರ್ತನೆಗಾರನಿಗೆ ಎಷ್ಟು ಪ್ರಿಯವಾಗಿತ್ತೆಂಬುದನ್ನು ಆ ಅಭಿವ್ಯಕ್ತಿಗಳು ಒತ್ತಿಹೇಳುತ್ತವೆ. ಕೀರ್ತನೆಗಾರನಿಗಿದ್ದ ಈ ಪ್ರೀತಿ ಕೇವಲ ಒಂದು ಭಾವುಕ ಪ್ರತಿಕ್ರಿಯೆ ಆಗಿರಲಿಲ್ಲ. ‘ಧರ್ಮಶಾಸ್ತ್ರವನ್ನು ಧ್ಯಾನಿಸುವ,’ ಅಂದರೆ ಯೆಹೋವನ ಮಾತುಗಳ ಒಳನೋಟ ಪಡೆಯುವ ಕಡುಬಯಕೆ ಅವನಲ್ಲಿತ್ತು. ಅವನು ದೇವರನ್ನೂ ಆತನ ಚಿತ್ತವನ್ನೂ ಸಾಧ್ಯವಾದಷ್ಟು ನಿಷ್ಕೃಷ್ಟವಾಗಿ ತಿಳಿಯಲು ಬಯಸಿದ್ದನೆಂದು ಅವನ ಮನೋಭಾವ ತೋರಿಸುತ್ತದೆ.

ದೇವರ ವಾಕ್ಯಕ್ಕಾಗಿ ಕೀರ್ತನೆಗಾರನಿಗಿದ್ದ ಪ್ರೀತಿ ಹೃದಯದಾಳದಿಂದ ಹೊಮ್ಮಿತ್ತೆಂಬುದು ಸ್ಪಷ್ಟ. ನಾವು ನಮ್ಮನ್ನೇ ಹೀಗೆ ಪ್ರಶ್ನಿಸಿಕೊಳ್ಳಬಲ್ಲೆವು: ‘ಈ ಮಾತು ನನ್ನ ವಿಷಯದಲ್ಲೂ ಸತ್ಯವೋ? ಪ್ರತಿದಿನ ಬೈಬಲಿನ ಒಂದು ಭಾಗವನ್ನು ಓದಿ, ಅದನ್ನು ವಿಶ್ಲೇಷಿಸುವುದು ನನಗೆ ಹರ್ಷಕರವಾಗಿದೆಯೋ? ದೇವರ ವಾಕ್ಯವನ್ನು ಓದಲು ನಾನು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತೇನೋ? ಅದನ್ನು ಓದಲಾರಂಭಿಸುವ ಮುಂಚೆ ಯೆಹೋವನಿಗೆ ಪ್ರಾರ್ಥಿಸುತ್ತೇನೋ?’ ಈ ಪ್ರಶ್ನೆಗಳಿಗೆ ನಮ್ಮ ಉತ್ತರ ಹೌದಾದರೆ, ನಾವು ‘ದೇವಜ್ಞಾನದಲ್ಲಿ ಅಭಿವೃದ್ಧಿ ಹೊಂದುತ್ತಿದ್ದೇವೆ’ ಎಂದರ್ಥ.

ಈವಾ ಹೇಳುವುದು: “ನನ್ನ ವೈಯಕ್ತಿಕ ಅಧ್ಯಯನದ ಗುಣಮಟ್ಟವನ್ನು ಉತ್ತಮಗೊಳಿಸುತ್ತಿರಲು ನಾನು ಸತತವಾಗಿ ಪ್ರಯತ್ನಿಸುತ್ತೇನೆ. ಒಳ್ಳೇ ದೇಶವನ್ನು ನೋಡಿ ಎಂಬ ಬ್ರೋಷರನ್ನು ಪಡೆದಾಗಿನಿಂದ ನನ್ನ ಅಧ್ಯಯನದಲ್ಲಿ ಬಹುಮಟ್ಟಿಗೆ ಪ್ರತಿಸಲ ಅದನ್ನು ಬಳಸಿದ್ದೇನೆ. ಅಗತ್ಯವಿದ್ದ ಹಾಗೆ, ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌ ಮತ್ತು ಇತರ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಲು ಹೆಚ್ಚೆಚ್ಚು ಪ್ರಯತ್ನಿಸುತ್ತೇನೆ.”

ವೋಯ್ಚೆಕ್‌ ಮತ್ತು ಮಾವ್ಗಾಸಾಟಾ ಎಂಬ ದಂಪತಿಯ ಮಾದರಿಯನ್ನೂ ಪರಿಗಣಿಸಿರಿ. ಅವರಿಗೆ ಅನೇಕ ಕೌಟುಂಬಿಕ ಜವಾಬ್ದಾರಿಗಳಿವೆ. ಅವರು ತಮ್ಮ ಕಾರ್ಯತಖ್ತೆಯಲ್ಲಿ ವೈಯಕ್ತಿಕ ಬೈಬಲ್‌ ಅಧ್ಯಯನಕ್ಕಾಗಿ ಹೇಗೆ ಸಮಯ ಬದಿಗಿರಿಸುತ್ತಾರೆ? “ಸಮಯ ಸಿಕ್ಕಾಗೆಲ್ಲ ನಾವು ವೈಯಕ್ತಿಕವಾಗಿ ದೇವರ ವಾಕ್ಯದ ಅಧ್ಯಯನ ಮಾಡುತ್ತೇವೆ. ನಮಗೆ ಸಿಕ್ಕಿರುವ ಆಸಕ್ತಿಕರ ಇಲ್ಲವೇ ಹುರಿದುಂಬಿಸುವ ಅಂಶಗಳನ್ನು ನಮ್ಮ ಕುಟುಂಬ ಅಧ್ಯಯನ ಮತ್ತು ದೈನಂದಿನ ಸಂಭಾಷಣೆಗಳಲ್ಲಿ ಪರಸ್ಪರ ಹಂಚಿಕೊಳ್ಳುತ್ತೇವೆ.” ಗಾಢವಾದ ವೈಯಕ್ತಿಕ ಅಧ್ಯಯನ ಅವರಿಗೆ ತುಂಬ ಆನಂದ ಕೊಡುತ್ತದೆ ಮತ್ತು ‘ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿ ಹೊಂದುವಂತೆ’ ಸಾಧ್ಯಮಾಡುತ್ತದೆ.

ತೆರೆದ ಮನಸ್ಸಿನಿಂದ ಅಧ್ಯಯನ ಮಾಡಿ

“ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ [ದೇವರ] ಚಿತ್ತವಾಗಿದೆ” ಎಂದು ಕ್ರೈಸ್ತರಾಗಿರುವ ನಾವು ನಂಬುತ್ತೇವೆ. (1 ತಿಮೊ. 2:3, 4) ಇದರಿಂದ, ಬೈಬಲನ್ನು ಓದುವುದು ಮತ್ತು ಅದನ್ನು ‘ತಿಳುಕೊಳ್ಳಲು’ ಇಲ್ಲವೇ ಗ್ರಹಿಸಲು ಶ್ರಮಿಸುವುದು ಎಷ್ಟು ಪ್ರಾಮುಖ್ಯ ಎಂಬುದು ತಿಳಿದುಬರುತ್ತದೆ. (ಮತ್ತಾ. 15:10) ಇದಕ್ಕೆ ಸಹಾಯಕವಾಗಿರುವ ಒಂದು ಅಂಶ, ತೆರೆದ ಮನಸ್ಸಿನಿಂದ ಅಧ್ಯಯನ ಮಾಡುವುದಾಗಿದೆ. ಪೌಲನು ಪ್ರಾಚೀನಕಾಲದ ಬೆರೋಯದವರಿಗೆ ಸುವಾರ್ತೆಯನ್ನು ತಿಳಿಸಿದಾಗ ಅವರು ಇದೇ ಮನೋಭಾವ ತೋರಿಸಿದರು: “ಅವರು ವಾಕ್ಯವನ್ನು ಅತ್ಯಾಸಕ್ತಿಯಿಂದ ಸ್ವೀಕರಿಸಿ, ಇವರು ಹೇಳಿದ್ದು ಸರಿಯಾದದ್ದೋ ಏನೋ ಎಂದು ಅವರು ಪ್ರತಿದಿನವೂ ಪವಿತ್ರ ಗ್ರಂಥಗಳನ್ನು ಪರೀಕ್ಷಿಸುತ್ತಿದ್ದರು.”—ಅ. ಕೃ. 17:11, NIBV.

ನೀವು ಮನಸ್ಸಿನಿಂದ ಅಪಕರ್ಷಣೆಗಳನ್ನು ದೂರವಿಡುತ್ತಾ ಬೈಬಲ್‌ ಅಧ್ಯಯನವನ್ನು ಅತ್ಯಾಸಕ್ತಿಯಿಂದ ಮಾಡುವ ಮೂಲಕ ಬೆರೋಯದವರನ್ನು ಅನುಸರಿಸುತ್ತೀರೋ? ಈ ಹಿಂದೆ ಅಧ್ಯಯನವನ್ನು ಇಷ್ಟಪಡದಿದ್ದ ಕ್ರೈಸ್ತರು ಸಹ ಬೆರೋಯದವರನ್ನು ಅನುಕರಿಸಲು ಪ್ರಯತ್ನಿಸಬಲ್ಲರು. ಕೆಲವು ವ್ಯಕ್ತಿಗಳು ಪ್ರಾಯ ಸಂದಂತೆ ಓದು ಮತ್ತು ಅಧ್ಯಯನವನ್ನು ಕಡಿಮೆಗೊಳಿಸುತ್ತಾರೆ. ಆದರೆ ಒಬ್ಬ ಕ್ರೈಸ್ತನು ಈ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಾರದು. ಒಬ್ಬನ ವಯಸ್ಸು ಎಷ್ಟೇ ಇದ್ದರೂ ಅಪಕರ್ಷಣೆಗಳನ್ನು ದೂರವಿಡಲು ಸಾಧ್ಯವಿದೆ. ಅಲ್ಲದೆ ನೀವು ಓದುತ್ತಿರುವಾಗ ಇತರರೊಂದಿಗೆ ಹಂಚಬಹುದಾದ ಮಾಹಿತಿಗಾಗಿ ಉತ್ಸುಕತೆಯಿಂದ ಹುಡುಕಬಲ್ಲಿರಿ. ಉದಾಹರಣೆಗೆ, ಅಧ್ಯಯನದ ಅವಧಿಯಲ್ಲಿ ನೀವು ಓದಿದ ಇಲ್ಲವೇ ಕಲಿತ ಸಂಗತಿಗಳನ್ನು ನಿಮ್ಮ ವಿವಾಹ ಸಂಗಾತಿ ಇಲ್ಲವೇ ಕ್ರೈಸ್ತ ಮಿತ್ರನೊಬ್ಬನಿಗೆ ತಿಳಿಸುವ ರೂಢಿಯನ್ನೇಕೆ ಮಾಡಬಾರದು? ಹೀಗೆ ಮಾಡುವುದರಿಂದ, ವಿಷಯಗಳು ನಿಮ್ಮ ಹೃದಮನಗಳಲ್ಲಿ ಅಚ್ಚೊತ್ತುವವು ಮಾತ್ರವಲ್ಲ, ಇತರರ ಮೇಲೂ ಸಕಾರಾತ್ಮಕ ಪರಿಣಾಮ ಬೀರುವವು.

ನಿಮ್ಮ ಅಧ್ಯಯನ ಅವಧಿಗಳಲ್ಲಿ ಎಜ್ರನ ಮಾದರಿಯನ್ನು ಅನುಸರಿಸಿರಿ. ದೇವರ ಈ ಪ್ರಾಚೀನಕಾಲದ ಸೇವಕನು, ‘ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಲಿಕ್ಕೆ’ ತನ್ನ ಹೃದಯವನ್ನು ಸಿದ್ಧಪಡಿಸಿದನು. (ಎಜ್ರ 7:10) ನೀವದನ್ನು ಹೇಗೆ ಮಾಡಬಲ್ಲಿರಿ? ಅಧ್ಯಯನದ ಅವಧಿಗಾಗಿ ಸೂಕ್ತ ವಾತಾವರಣವನ್ನು ಸೃಷ್ಟಿಸಿರಿ. ಅನಂತರ ಕುಳಿತುಕೊಂಡು, ಯೆಹೋವನ ಮಾರ್ಗದರ್ಶನ ಹಾಗೂ ವಿವೇಕಕ್ಕಾಗಿ ಪ್ರಾರ್ಥಿಸಿ. (ಯಾಕೋ. 1:5) ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಈ ಅಧ್ಯಯನ ಅವಧಿಯಲ್ಲಿ ನಾನೇನು ಕಲಿಯಲಿಕ್ಕಿದ್ದೇನೆ?’ ಓದುತ್ತಿರುವಾಗ ಮುಖ್ಯ ಅಂಶಗಳನ್ನು ಹುಡುಕಿರಿ. ನೀವದನ್ನು ಬರೆದಿಡಬಹುದು ಇಲ್ಲವೇ ನೆನಪಿನಲ್ಲಿಡಲು ಬಯಸುವ ಭಾಗಗಳಿಗೆ ಅಡಿಗೆರೆ ಹಾಕಿ ಇಡಬಹುದು. ಕಲಿತ ಮಾಹಿತಿಯನ್ನು ಸಾರುವ ಕಾರ್ಯದಲ್ಲಿ, ನಿರ್ಣಯಗಳನ್ನು ಮಾಡುವಾಗ ಇಲ್ಲವೇ ಜೊತೆ ವಿಶ್ವಾಸಿಗಳನ್ನು ಉತ್ತೇಜಿಸುವಾಗ ಹೇಗೆ ಬಳಸಬಹುದೆಂದು ಪರಿಗಣಿಸಿರಿ. ಅಧ್ಯಯನ ಅವಧಿಯಲ್ಲಿ ಆವರಿಸಿರುವ ವಿಷಯವನ್ನು ಸಮಾಪ್ತಿಯಲ್ಲಿ ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ. ಇದರಿಂದ ನೀವು ಕಲಿತ ವಿಷಯಗಳು ಮನಸ್ಸಿನಲ್ಲಿ ಉಳಿಯುವವು.

ಈವಾ ತನ್ನ ಅಧ್ಯಯನ ವಿಧಾನದ ಬಗ್ಗೆ ಹೇಳುವುದು: “ನಾನು ಬೈಬಲ್‌ ಓದುವಾಗ, ಅಡ್ಡ-ಉಲ್ಲೇಖಗಳನ್ನು, ವಾಚ್‌ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ಮತ್ತು ಸಿಡಿ-ರಾಮ್‌ನಲ್ಲಿರುವ ವಾಚ್‌ಟವರ್‌ ಲೈಬ್ರರಿಯನ್ನು ಬಳಸುತ್ತೇನೆ. ಶುಶ್ರೂಷೆಯಲ್ಲಿ ಬಳಸಬಹುದಾದ ಅಂಶಗಳನ್ನು ಟಿಪ್ಪಣಿ ಮಾಡಿಡುತ್ತೇನೆ.”

ಕೆಲವರು ಅನೇಕ ವರ್ಷಗಳಿಂದ ಗಾಢ ಅಧ್ಯಯನವನ್ನು ಅಂದರೆ ಆಧ್ಯಾತ್ಮಿಕ ವಿಷಯಗಳಲ್ಲಿ ಪೂರ್ತಿ ತಲ್ಲೀನರಾಗುವುದನ್ನು ಆನಂದಿಸಿದ್ದಾರೆ. (ಜ್ಞಾನೋ. 2:1-5) ಆದರೆ ಅವರಿಗೆ ಅನೇಕ ಜವಾಬ್ದಾರಿಗಳಿರುವುದರಿಂದ ವೈಯಕ್ತಿಕ ಅಧ್ಯಯನಕ್ಕಾಗಿ ಸಮಯವನ್ನು ಬದಿಗಿರಿಸಲು ಕಷ್ಟವಾಗುತ್ತಿದೆ. ನಿಮ್ಮ ಪರಿಸ್ಥಿತಿಯೂ ಹೀಗಿರುವಲ್ಲಿ, ನಿಮ್ಮ ಕಾರ್ಯತಖ್ತೆಯಲ್ಲಿ ಯಾವ ಹೊಂದಾಣಿಕೆಗಳನ್ನು ಮಾಡಬಲ್ಲಿರಿ?

ಹೇಗೆ ಸಮಯ ಮಾಡಿಕೊಳ್ಳಲಿ?

ನಾವೊಂದು ಕೆಲಸವನ್ನು ಇಷ್ಟಪಡುವಲ್ಲಿ ಅದಕ್ಕಾಗಿ ಹೇಗಾದರೂ ಸಮಯ ಮಾಡಿಕೊಳ್ಳುತ್ತೇವೆಂಬ ಮಾತನ್ನು ಬಹುಶಃ ನೀವು ಸಹ ಒಪ್ಪುವಿರಿ. ವೈಯಕ್ತಿಕ ಅಧ್ಯಯನದಲ್ಲಿ ತಲ್ಲೀನರಾಗಲು ಸಹಾಯಮಾಡುವ ಒಂದು ವಿಷಯವು, ವಾಸ್ತವಿಕ ಗುರಿಯನ್ನಿಡುವುದಾಗಿದೆ ಎಂದು ಅನೇಕರು ಕಂಡುಕೊಂಡಿದ್ದಾರೆ. ಉದಾಹರಣೆಗೆ, ಇಡೀ ಬೈಬಲನ್ನು ಓದುವ ಗುರಿಯನ್ನು ನೀವಿಟ್ಟುಕೊಳ್ಳಬಹುದು. ಅದರಲ್ಲಿರುವ ಉದ್ದುದ್ದ ವಂಶಾವಳಿ ಪಟ್ಟಿಗಳು, ಪ್ರಾಚೀನಕಾಲದ ಆಲಯದ ಸವಿವರ ವರ್ಣನೆಗಳು ಇಲ್ಲವೇ ದೈನಂದಿನ ಜೀವನದೊಂದಿಗೆ ಯಾವುದೇ ಸಂಬಂಧವಿಲ್ಲದಂತೆ ತೋರುವ ಕ್ಲಿಷ್ಟಕರ ಪ್ರವಾದನೆಗಳನ್ನು ಓದುವುದು ತೀರ ಕಷ್ಟಕರವೆಂದು ನಿಮಗನಿಸಬಹುದು. ನಿಮ್ಮ ಗುರಿ ಮುಟ್ಟಲಿಕ್ಕೆ ಪ್ರಾಯೋಗಿಕ ಹೆಜ್ಜೆಗಳನ್ನಿಡಲು ಪ್ರಯತ್ನಿಸಿರಿ. ಉದಾಹರಣೆಗೆ, ಬೈಬಲಿನ ಒಂದು ಭಾಗವು ಕಷ್ಟಕರವಾಗಿ ತೋರುತ್ತಿರುವಲ್ಲಿ, ಮೊದಲು ಅದರ ಐತಿಹಾಸಿಕ ಹಿನ್ನೆಲೆ ಇಲ್ಲವೇ ಪ್ರಾಯೋಗಿಕ ಅನ್ವಯದ ಕುರಿತು ಓದಿ. ಇಂಥ ಮಾಹಿತಿಯು “ಶಾಸ್ತ್ರವೆಲ್ಲವೂ ದೇವಪ್ರೇರಿತವೂ ಉಪಯುಕ್ತವೂ ಆಗಿದೆ” ಎಂಬ ಪುಸ್ತಕದಲ್ಲಿ ಸಿಗುವುದು. ಇದು ಹೆಚ್ಚುಕಡಿಮೆ 50 ಭಾಷೆಗಳಲ್ಲಿ ಲಭ್ಯವಿದೆ.

ಬೈಬಲನ್ನು ಓದುವಾಗ ನಿಮ್ಮ ಕಲ್ಪನಾಶಕ್ತಿಯನ್ನು ಬಳಸುವುದು ತುಂಬ ಉಪಯುಕ್ತ. ಈ ಮೂಲಕ ನೀವು ಆಯಾ ಪಾತ್ರಧಾರಿಗಳು ಮತ್ತು ಘಟನೆಗಳ ಬಗ್ಗೆ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಬಹುದು. ಕೇವಲ ಈ ಕೆಲವೊಂದು ಸಲಹೆಗಳನ್ನು ಅನ್ವಯಿಸುವುದರಿಂದ ನಿಮ್ಮ ಅಧ್ಯಯನ ಅವಧಿಗಳು ಹೆಚ್ಚು ಆನಂದಮಯವೂ ಪ್ರತಿಫಲದಾಯಕವೂ ಆಗುವವು. ಆಗ, ಅದಕ್ಕಾಗಿ ಸಮಯಮಾಡಲು ನೀವು ಹೆಚ್ಚು ಉತ್ಸಾಕರಾಗಿರುವಿರಿ. ಪ್ರತಿದಿನ ಬೈಬಲ್‌ ಓದುವ ರೂಢಿಯನ್ನು ಮುಂದುವರಿಸಿಕೊಂಡು ಹೋಗಲು ಹೆಚ್ಚು ಸುಲಭವಾಗುವುದು.

ಮೇಲೆ ಕೊಡಲಾಗಿರುವ ಸಲಹೆಗಳು ನಮಗೆ ವ್ಯಕ್ತಿಗತವಾಗಿ ಸಹಾಯ ಮಾಡಬಹುದಾದರೂ, ಕಾರ್ಯಮಗ್ನವಾಗಿರುವ ಒಂದು ಇಡೀ ಕುಟುಂಬದ ಬಗ್ಗೆ ಏನು? ಕುಟುಂಬ ಅಧ್ಯಯನದಿಂದ ಸಿಗುವ ಪ್ರಯೋಜನಗಳ ಬಗ್ಗೆ ಮಾತಾಡಲು ಎಲ್ಲರೂ ಒಟ್ಟುಸೇರಬಹುದು. ಇದರಿಂದ, ಕುಟುಂಬ ಅಧ್ಯಯನದ ಸಂಬಂಧದಲ್ಲಿ ಪ್ರಾಯೋಗಿಕ ಸಲಹೆಗಳು ಸಿಗಬಹುದು. ಉದಾಹರಣೆಗೆ, ಬೈಬಲಿನ ಒಂದು ಭಾಗವನ್ನು ಪರಿಗಣಿಸಲಿಕ್ಕಾಗಿ ಪ್ರತಿದಿನ ಇಲ್ಲವೇ ವಾರದಲ್ಲಿ ನಿರ್ದಿಷ್ಟ ದಿನಗಳಂದು ಸ್ವಲ್ಪ ಬೇಗನೆ ಏಳುವುದು ಒಂದು ಸಲಹೆಯಾಗಿರಬಹುದು. ಇಲ್ಲವೇ, ಕುಟುಂಬದ ಕಾರ್ಯತಖ್ತೆಯಲ್ಲಿ ಹೊಂದಾಣಿಕೆಯನ್ನು ಮಾಡುವ ಅಗತ್ಯವಿದೆಯೆಂದು ಆ ಮಾತುಕತೆಯಿಂದ ತಿಳಿದುಬರಬಹುದು. ಕೆಲವರು, ಕುಟುಂಬವಾಗಿ ಒಟ್ಟಿಗೆ ಕೂತು ರಾತ್ರಿಯೂಟ ಮಾಡಿದ ನಂತರ ದಿನದ ವಚನದ ಚರ್ಚೆ ಇಲ್ಲವೇ ಬೈಬಲ್‌ ಓದುವಿಕೆಯನ್ನು ಮಾಡುವುದು ಹೆಚ್ಚು ಪ್ರಾಯೋಗಿಕವೆಂದು ಕಂಡುಕೊಂಡಿದ್ದಾರೆ. ಅವರು ಮೇಜಿನಿಂದ ಬಟ್ಟಲುಪಾತ್ರೆಗಳನ್ನು ತೆಗೆದಿಡುವ ಮುಂಚೆ, ಅಥವಾ ಯಾರಾದರೂ ಬೇರೊಂದು ಕೆಲಸಕ್ಕೆ ಎದ್ದುಹೋಗುವ ಮುಂಚೆ ದೈನಂದಿನ ವಚನದ ಚರ್ಚೆಗಾಗಲಿ, ಶೆಡ್ಯೂಲ್‌ನಲ್ಲಿರುವ ಬೈಬಲ್‌ ಓದುವಿಕೆಗಾಗಲಿ ಎಲ್ಲರೂ ಕುಟುಂಬವಾಗಿ 10-15 ನಿಮಿಷಗಳನ್ನು ಕಳೆಯುತ್ತಾರೆ. ಮೊದಮೊದಲು ಇದು ಸ್ವಲ್ಪ ಕಷ್ಟಕರವೆಂದನಿಸಬಹುದು, ಆದರೆ ಸ್ವಲ್ಪ ಸಮಯದೊಳಗೆ ಇದು ರೂಢಿಯಾಗಿ ಬಿಡುತ್ತದೆ ಮತ್ತು ಸಂತೋಷದಾಯಕವಾಗುತ್ತದೆ.

ವೋಯ್ಚೆಕ್‌ ಮತ್ತು ಮಾವ್ಗಾಸಾಟಾ ದಂಪತಿ ತಮ್ಮ ಕುಟುಂಬಕ್ಕೆ ಯಾವುದು ಸಹಾಯ ಮಾಡಿತೆಂಬುದನ್ನು ಹೀಗೆ ವಿವರಿಸುತ್ತಾರೆ: “ಪ್ರಾಮುಖ್ಯವಲ್ಲದ, ಕ್ಷುಲ್ಲಕ ಚಟುವಟಿಕೆಗಳಲ್ಲಿ ಹಿಂದೆ ನಮ್ಮ ಸಮಯ ಪೋಲಾಗುತ್ತಿತ್ತು. ಈ-ಮೇಲ್‌ ಕಳುಹಿಸುವುದರಲ್ಲಿ ನಾವು ಕಳೆಯುತ್ತಿದ್ದ ಸಮಯವನ್ನು ಕಡಿಮೆಗೊಳಿಸಲು ನಿರ್ಣಯಿಸಿದೆವು. ಮನೋರಂಜನೆಗೆಂದು ನಾವು ವ್ಯಯಿಸುತ್ತಿದ್ದ ಸಮಯವನ್ನೂ ಕಡಿಮೆಗೊಳಿಸಿ, ಗಾಢವಾದ ಅಧ್ಯಯನಕ್ಕೆಂದೇ ನಿರ್ದಿಷ್ಟ ದಿನದಂದು ಸಮಯವನ್ನು ಬದಿಗಿರಿಸಿದ್ದೇವೆ.” ಹೊಂದಾಣಿಕೆಗಳನ್ನು ಮಾಡಿದ್ದಕ್ಕಾಗಿ ಆ ಕುಟುಂಬ ಖಂಡಿತ ವಿಷಾದಿಸುವುದಿಲ್ಲ. ನಿಮ್ಮ ಕುಟುಂಬದ ವಿಷಯದಲ್ಲೂ ಇದು ನಿಜವಾಗಿರಬಲ್ಲದು.

ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿ ಹೊಂದುವುದು ಸಾರ್ಥಕ!

ದೇವರ ವಾಕ್ಯದ ಗಾಢ ಅಧ್ಯಯನವು ‘ಸಕಲಸತ್ಕಾರ್ಯವೆಂಬ ಫಲವನ್ನು ಕೊಡುವುದು.’ (ಕೊಲೊ. 1:10) ಇದು ನಿಮ್ಮ ಜೀವನದಲ್ಲಿ ಸಂಭವಿಸುವಾಗ ನಿಮ್ಮ ಪ್ರಗತಿ ಎಲ್ಲರಿಗೂ ತೋರಿಬರುವುದು. ಬೈಬಲ್‌ ಸತ್ಯಗಳ ವಿಸ್ತೃತ ತಿಳುವಳಿಕೆಯುಳ್ಳ ಆಧ್ಯಾತ್ಮಿಕ ವ್ಯಕ್ತಿ ನೀವಾಗುವಿರಿ. ನೀವು ಸಮತೋಲನವುಳ್ಳ ನಿರ್ಣಯಗಳನ್ನು ಮಾಡುವಿರಿ ಮತ್ತು ಇತರರಿಗೆ ನೀವು ಹೆಚ್ಚು ಉತ್ತಮ ರೀತಿಯಲ್ಲಿ ನೆರವುನೀಡಲು ಶಕ್ತರಾಗುವಿರಿ. ಆಗ ನೀವು, ಈ ಎರಡೂ ಕ್ಷೇತ್ರಗಳಲ್ಲಿ ವಿಪರೀತಕ್ಕೆ ಹೋಗುವ ನಿಷ್ಕೃಷ್ಟ ಜ್ಞಾನವಿಲ್ಲದವರಂತಿರುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನೀವು ಯೆಹೋವನಿಗೆ ಹೆಚ್ಚು ಆಪ್ತರಾಗುವಿರಿ. ಆತನ ಗುಣಗಳನ್ನು ಹೆಚ್ಚು ಗಾಢವಾಗಿ ಗಣ್ಯಮಾಡುವಿರಿ ಮತ್ತು ಆತನ ಕುರಿತಾಗಿ ಇತರರೊಂದಿಗೆ ಮಾತಾಡುವಾಗ ಈ ಗಣ್ಯತೆ ವ್ಯಕ್ತವಾಗುವುದು.—1 ತಿಮೊ. 4:15; ಯಾಕೋ. 4:8.

ನಿಮ್ಮ ವಯಸ್ಸು ಇಲ್ಲವೇ ಅನುಭವ ಏನೇ ಆಗಿರಲಿ, ದೇವರ ವಾಕ್ಯದಲ್ಲಿ ಆನಂದಿಸಲು ಮತ್ತು ತೆರೆದ ಮನಸ್ಸಿನಿಂದ ಗಾಢ ಅಧ್ಯಯನ ಮಾಡಲು ಸಕಲ ಪ್ರಯತ್ನ ಮಾಡುತ್ತಾ ಇರಿ. ಯೆಹೋವನು ನಿಮ್ಮ ಪ್ರಯತ್ನಗಳನ್ನು ಎಂದೂ ಮರೆಯನೆಂಬ ಭರವಸೆ ನಿಮಗಿರಲಿ. (ಇಬ್ರಿ. 6:10) ಆತನು ನಿಮ್ಮ ಮೇಲೆ ಸಮೃದ್ಧ ಆಶೀರ್ವಾದಗಳನ್ನು ಸುರಿಸುವನು.

[ಪುಟ 13ರಲ್ಲಿರುವ ಚೌಕ]

ನಾವು ‘ನಿಷ್ಕೃಷ್ಟ ಜ್ಞಾನದಲ್ಲಿ ಅಭಿವೃದ್ಧಿ ಹೊಂದುವಾಗ’ . . .

ದೇವರಲ್ಲಿ ನಮ್ಮ ನಂಬಿಕೆ ಬಲಗೊಳ್ಳುತ್ತದೆ ಮತ್ತು ಯೆಹೋವನಿಗೆ ಯೋಗ್ಯರಾಗಿ ನಡೆದುಕೊಳ್ಳುತ್ತೇವೆ.ಕೊಲೊ. 1:9, 10

ನಾವು ಜ್ಞಾನಿಗಳಾಗುತ್ತೇವೆ ಅಂದರೆ ವಿವೇಚನಾಶಕ್ತಿ ಬಳಸಿ ಬುದ್ಧಿವಂತ ನಿರ್ಣಯಗಳನ್ನು ಮಾಡಲು ಸಾಧ್ಯವಾಗುತ್ತದೆ.ಕೀರ್ತ. 119:99

ಯೆಹೋವನಿಗೆ ಆಪ್ತರಾಗುವಂತೆ ಇತರರಿಗೆ ಸಹಾಯ ಮಾಡುವುದರಲ್ಲಿ ನಮಗೆ ಹೆಚ್ಚು ಸಂತೋಷ ಸಿಗುತ್ತದೆ.—ಮತ್ತಾ. 28:19, 20

[ಪುಟ 14ರಲ್ಲಿರುವ ಚಿತ್ರಗಳು]

ಅಧ್ಯಯನಕ್ಕಾಗಿ ಸೂಕ್ತ ಸ್ಥಳ ಸಿಗುವುದು ಕಷ್ಟಕರವಾಗಿದ್ದರೂ ಅದು ಅಗತ್ಯ

[ಪುಟ 15ರಲ್ಲಿರುವ ಚಿತ್ರ]

ಕೆಲವು ಕುಟುಂಬಗಳಲ್ಲಿ ಊಟದ ಬಳಿಕ ಬೈಬಲ್‌ ಓದುತ್ತಾರೆ