ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಥೆಸಲೊನೀಕದವರಿಗೆ ಮತ್ತು ತಿಮೊಥೆಯನಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಥೆಸಲೊನೀಕದವರಿಗೆ ಮತ್ತು ತಿಮೊಥೆಯನಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಥೆಸಲೊನೀಕದವರಿಗೆ ಮತ್ತು ತಿಮೊಥೆಯನಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಅಪೊಸ್ತಲ ಪೌಲನು ಥೆಸಲೊನೀಕಕ್ಕೆ ಭೇಟಿಯಿತ್ತು ಸಭೆಯನ್ನು ಸ್ಥಾಪಿಸಿದಂದಿನಿಂದಲೂ ಅಲ್ಲಿ ವಿರೋಧವಿತ್ತು. ಹಾಗಾಗಿ, ಪ್ರಾಯಶಃ 20-30ರೊಳಗಿನ ವಯಸ್ಸಿನವನಾಗಿದ್ದ ತಿಮೊಥೆಯನು ಥೆಸಲೊನೀಕದ ಸಭೆಗೆ ಭೇಟಿನೀಡಿ ಅದರ ಕುರಿತು ಒಳ್ಳೇ ವರದಿ ನೀಡಿದಾಗ, ಆ ಸಭೆಯವರನ್ನು ಪ್ರಶಂಸಿಸಿ ಉತ್ತೇಜಿಸಲು ಪೌಲನಿಗೆ ಮನಸ್ಸಾಗುತ್ತದೆ. ಸಾ.ಶ. 50ರ ಕೊನೆಯಷ್ಟಕ್ಕೆ ಬರೆಯಲಾದ ಈ ಪತ್ರವು ಪೌಲನು ಪ್ರೇರಣೆಯಿಂದ ಬರೆದ ಮೊತ್ತಮೊದಲ ಪತ್ರವಾಗಿದೆ. ಇದನ್ನು ಬರೆದ ಸ್ವಲ್ಪದರಲ್ಲೇ ಅವನು ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗೆ ಎರಡನೆಯ ಪತ್ರ ಬರೆಯುತ್ತಾನೆ. ಕೆಲವರಲ್ಲಿದ್ದ ತಪ್ಪಾದ ದೃಷ್ಟಿಕೋನವನ್ನು ಆತನು ಈ ಪತ್ರದ ಮೂಲಕ ತಿದ್ದುತ್ತಾ, ನಂಬಿಕೆಯಲ್ಲಿ ಸ್ಥಿರರಾಗಿರುವಂತೆ ಸಹೋದರರನ್ನು ಉತ್ತೇಜಿಸುತ್ತಾನೆ.

ಇದಾಗಿ ಸುಮಾರು ಹತ್ತು ವರ್ಷಗಳು ಕಳೆದಿವೆ. ಈಗ ಪೌಲನು ಮಕೆದೋನ್ಯದಲ್ಲಿಯೂ ತಿಮೊಥೆಯನು ಎಫೆಸದಲ್ಲಿಯೂ ಇದ್ದಾರೆ. ತಿಮೊಥೆಯನು ಎಫೆಸದಲ್ಲೇ ಇದ್ದುಕೊಂಡು ಸಭೆಯಲ್ಲಿದ್ದ ಸುಳ್ಳು ಬೋಧಕರ ವಿರುದ್ಧ ಆಧ್ಯಾತ್ಮಿಕ ಹೋರಾಟ ನಡೆಸಬೇಕೆಂದು ಪೌಲನು ಅವನಿಗೆ ಬರೆದ ಪತ್ರದ ಮೂಲಕ ಹುರಿದುಂಬಿಸುತ್ತಾನೆ. ಸಾ.ಶ. 64ರಲ್ಲಿ ರೋಮ್‌ ಪಟ್ಟಣಕ್ಕೆ ಬೆಂಕಿ ಹರಡಿತು. ತದನಂತರ ಹಿಂಸೆಯ ಅಲೆಯು ಕ್ರೈಸ್ತರನ್ನು ಅಪ್ಪಳಿಸಿದಾಗ ಪೌಲನು ತಿಮೊಥೆಯನಿಗೆ ತನ್ನ ಎರಡನೆಯ ಪತ್ರವನ್ನು ಬರೆಯುತ್ತಾನೆ. ಪೌಲನು ದೇವಪ್ರೇರಣೆಯಿಂದ ಬರೆದ ಪತ್ರಗಳಲ್ಲಿ ಇದು ಕೊನೆಯದ್ದು. ಪೌಲನ ಈ ನಾಲ್ಕು ಪತ್ರಗಳಲ್ಲಿರುವ ಉತ್ತೇಜನ ಹಾಗೂ ಬುದ್ಧಿವಾದದಿಂದ ನಾವಿಂದು ಪ್ರಯೋಜನ ಪಡೆಯಬಲ್ಲೆವು.—ಇಬ್ರಿ. 4:12.

‘ಎಚ್ಚರವಾಗಿರ್ರಿ’

(1 ಥೆಸ. 1:1–5:28)

ಥೆಸಲೊನೀಕದವರನ್ನು ಅವರ ‘ನಂಬಿಕೆಯ ಫಲವಾದ ಕೆಲಸಕ್ಕಾಗಿ, ಪ್ರೀತಿಪೂರ್ವಕವಾದ ಅವರ ಪ್ರಯಾಸಕ್ಕಾಗಿ ಮತ್ತು ಸೈರಣೆಗಾಗಿ’ ಪೌಲನು ಪ್ರಶಂಸಿಸುತ್ತಾನೆ. ಅವರು ‘ತನ್ನ ಭರವಸವೂ ಸಂತೋಷವೂ ಹೊಗಳಿಕೊಳ್ಳುವ ಜಯಮಾಲೆಯೂ’ ಆಗಿದ್ದಾರೆಂದು ಅವನು ಹೇಳುತ್ತಾನೆ.—1 ಥೆಸ. 1:2, 3; 2:19.

ಪುನರುತ್ಥಾನದ ನಿರೀಕ್ಷೆಯಿಂದ ಪರಸ್ಪರ ಸಾಂತ್ವನಪಡಿಸಿಕೊಳ್ಳಬೇಕೆಂದು ಥೆಸಲೊನೀಕದ ಕ್ರೈಸ್ತರನ್ನು ಉತ್ತೇಜಿಸಿದ ಬಳಿಕ ಪೌಲನು ಹೇಳಿದ್ದು: ‘ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ [ಯೆಹೋವನ] ದಿನವು ಬರುವದು.’ ಆದುದರಿಂದ ‘ಎಚ್ಚರವಾಗಿದ್ದು’ ಸ್ವಸ್ಥಚಿತ್ತವನ್ನು ಕಾಪಾಡಿಕೊಳ್ಳಲು ಅವನು ಅವರಿಗೆ ಬುದ್ಧಿಹೇಳುತ್ತಾನೆ.—1 ಥೆಸ. 4:16-18; 5:2, 6.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

4:15-17‘ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವವರು’ ಯಾರು, ಮತ್ತು ಇದು ಹೇಗೆ ಸಂಭವಿಸುತ್ತದೆ? ಇವರು, ರಾಜ್ಯಾಧಿಕಾರದಿಂದ ಬರುವ ಕ್ರಿಸ್ತನ ಸಾನ್ನಿಧ್ಯದ ವೇಳೆ ಜೀವಿಸುತ್ತಿರುವ ಅಭಿಷಿಕ್ತ ಕ್ರೈಸ್ತರಾಗಿದ್ದಾರೆ. ಇವರು ಅಗೋಚರವಾಗಿರುವ ಸ್ವರ್ಗೀಯ ರಾಜ್ಯದಲ್ಲಿ ‘ಕರ್ತನನ್ನು [ಯೇಸುವನ್ನು] ಎದುರುಗೊಳ್ಳುವರು.’ ಇದಕ್ಕಾಗಿ ಅವರು ಮೊದಲು ಮರಣಹೊಂದಬೇಕು ಮತ್ತು ಆತ್ಮಿಕ ಜೀವಕ್ಕೆ ಎಬ್ಬಿಸಲ್ಪಡಬೇಕು. (ರೋಮಾ. 6:3-5; 1 ಕೊರಿಂ. 15:35, 44) ಕ್ರಿಸ್ತನ ಸಾನ್ನಿಧ್ಯವು ಈಗಾಗಲೇ ಆರಂಭಗೊಂಡದ್ದರಿಂದ ಈಗ ಸಾಯುವ ಅಭಿಷಿಕ್ತ ಕ್ರೈಸ್ತರು ಸತ್ತ ಸ್ಥಿತಿಯಲ್ಲೇ ಇರಬೇಕಾಗಿಲ್ಲ. ಅವರು ‘ಫಕ್ಕನೆ ಒಯ್ಯಲ್ಪಡುತ್ತಾರೆ’ ಅಥವಾ ತತ್‌ಕ್ಷಣ ಎಬ್ಬಿಸಲ್ಪಡುತ್ತಾರೆ.—1 ಕೊರಿಂ. 15:51, 52.

5:23—ಸಹೋದರರ ‘ಆತ್ಮಪ್ರಾಣಶರೀರಗಳು ಕಾಪಾಡಲ್ಪಡಲಿ’ ಎಂದು ಪ್ರಾರ್ಥಿಸಿದಾಗ ಪೌಲನು ಏನನ್ನು ಸೂಚಿಸಿದನು? ಕ್ರೈಸ್ತ ಸಭೆಯ ಎಲ್ಲ ಸದಸ್ಯರ ಆತ್ಮ, ಪ್ರಾಣ ಹಾಗೂ ಶರೀರಗಳಿಗೆ ಪೌಲನು ಸೂಚಿಸುತ್ತಿದ್ದನು. ಇವರಲ್ಲಿ ಥೆಸಲೊನೀಕದ ಆತ್ಮಾಭಿಷಿಕ್ತ ಕ್ರೈಸ್ತರು ಸಹ ಸೇರಿದ್ದರು. ಕೇವಲ ಸಭೆಯು ಕಾಪಾಡಲ್ಪಡಲಿ ಎಂದು ಪ್ರಾರ್ಥಿಸುವ ಬದಲು ಅದರ “ಆತ್ಮ” ಅಂದರೆ ಮನೋವೃತ್ತಿ ಕಾಪಾಡಲ್ಪಡಲಿ ಎಂದು ಅವನು ಬೇಡಿದನು. ಅದರ “ಪ್ರಾಣ” ಅಂದರೆ ಜೀವ ಇಲ್ಲವೇ ಅಸ್ತಿತ್ವಕ್ಕೆ ಮತ್ತು ಅದರ ‘ಶರೀರಕ್ಕೆ’ ಅಂದರೆ ಅಭಿಷಿಕ್ತ ಕ್ರೈಸ್ತರ ಇಡೀ ಸಮೂಹಕ್ಕಾಗಿ ಸಹ ಆತನು ಪ್ರಾರ್ಥಿಸಿದನು. (1 ಕೊರಿಂ. 12:12, 13) ಪೌಲನ ಈ ಪ್ರಾರ್ಥನೆಯು ಸಭೆಗಾಗಿದ್ದ ಆತನ ಗಾಢ ಚಿಂತೆಯನ್ನು ತೋರಿಸುತ್ತದೆ.

ನಮಗಾಗಿರುವ ಪಾಠಗಳು:

1:2, 3, 7; 2:13; 4:1-12; 5:15. ಹೃತ್ಪೂರ್ವಕವಾಗಿ ಶ್ಲಾಘಿಸುವುದು ಮತ್ತು ಇನ್ನಷ್ಟು ಪ್ರಗತಿಮಾಡುವಂತೆ ಪ್ರೋತ್ಸಾಹಿಸುವುದು, ಸಲಹೆ ನೀಡುವ ಪರಿಣಾಮಕಾರಿ ವಿಧವಾಗಿದೆ.

4:1, 9, 10. ಯೆಹೋವನ ಆರಾಧಕರು ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಾ ಇರಬೇಕು.

5:1-3, 8, 19-21. ಯೆಹೋವನ ದಿನ ಸಮೀಪಿಸುತ್ತಿರುವುದರಿಂದ ನಾವು ‘ವಿಶ್ವಾಸ ಪ್ರೀತಿಗಳೆಂಬ ವಜ್ರಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರಬೇಕು.’ ಅಷ್ಟುಮಾತ್ರವಲ್ಲದೆ, ದೇವರ ಪ್ರವಾದನಾತ್ಮಕ ವಾಕ್ಯವಾದ ಬೈಬಲಿಗೆ ನಾವು ಪೂರ್ಣ ಗಮನ ಕೊಡಬೇಕು.

“ದೃಢವಾಗಿ ನಿಲ್ಲಿರಿ”

(2 ಥೆಸ. 1:1–3:18)

ಪೌಲನು ತನ್ನ ಪ್ರಥಮ ಪತ್ರದಲ್ಲಿ ಬರೆದ ವಿಷಯಗಳನ್ನು ಸಭೆಯಲ್ಲಿರುವ ಕೆಲವರು ತಿರುಚುತ್ತಾ, ‘ಕರ್ತನ ದಿನವು ಈಗಲೇ ಹತ್ತಿರವಾಯಿತೆಂದು’ ವಾದಿಸುತ್ತಿದ್ದಿರಬೇಕು. ಆ ದೃಷ್ಟಿಕೋನವನ್ನು ತಿದ್ದಲು, ಅದಕ್ಕಿಂತ “ಮೊದಲು” ಏನಾಗಬೇಕಾಗಿದೆ ಎಂಬದನ್ನು ಪೌಲನು ತಿಳಿಸುತ್ತಾನೆ.—2 ಥೆಸ. 2:1-3.

“ದೃಢವಾಗಿ ನಿಲ್ಲಿರಿ. . . . ನಿಮಗೆ ತಿಳಿಸಿದ ಬೋಧನೆಗಳನ್ನು ನೀವು ಭದ್ರವಾಗಿ ಹಿಡಿದುಕೊಂಡಿರ್ರಿ” ಎಂದು ಪೌಲನು ಸಲಹೆಯನ್ನೀಯುತ್ತಾನೆ. “ಅಕ್ರಮವಾಗಿ ನಡೆಯುವ ಪ್ರತಿ ಸಹೋದರನಿಗೆ ನೀವು ದೂರವಾಗಿರಬೇಕೆಂದು” ಆತನು ಅಪ್ಪಣೆಕೊಡುತ್ತಾನೆ.—2 ಥೆಸ. 2:14, 15; 3:6.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

2:3, 8—“ಅಧರ್ಮಸ್ವರೂಪನು” ಯಾರು, ಮತ್ತು ಅವನನ್ನು ಹೇಗೆ ತೆಗೆದುಬಿಡಲಾಗುವುದು? ಕ್ರೈಸ್ತಪ್ರಪಂಚದ ಪಾದ್ರಿವರ್ಗವನ್ನು “ಅಧರ್ಮಸ್ವರೂಪನು” ಎಂದು ಕರೆಯಲಾಗಿದೆ. ದುಷ್ಟರ ವಿರುದ್ಧ ದೇವರ ತೀರ್ಪುಗಳನ್ನು ಘೋಷಿಸುವ ಮತ್ತು ಅವುಗಳನ್ನು ಜಾರಿಗೊಳಿಸಲು ಆಜ್ಞಾಪಿಸುವ ಹಕ್ಕು ಕೇವಲ ‘ವಾಕ್ಯಕ್ಕೆ’ ಅಂದರೆ ದೇವರ ಮುಖ್ಯ ವಕ್ತಾರನಾದ ಯೇಸು ಕ್ರಿಸ್ತನಿಗಿದೆ. (ಯೋಹಾ. 1:1) ಆದುದರಿಂದಲೇ, ಆ ಅಧರ್ಮಸ್ವರೂಪನನ್ನು ಯೇಸು ತನ್ನ “ಬಾಯ ಉಸುರಿನಿಂದ” ತೆಗೆದುಹಾಕುವನೆಂದು ಹೇಳಸಾಧ್ಯವಿದೆ.

2:13, 14ದೇವರು ಅಭಿಷಿಕ್ತ ಕ್ರೈಸ್ತರನ್ನು ‘ರಕ್ಷಣೆ ಪಡೆಯುವುದಕ್ಕೆ ಆದಿಯಿಂದ ಆರಿಸಿಕೊಂಡದ್ದು’ ಹೇಗೆ? ಸ್ತ್ರೀಯ ಸಂತಾನವು ಸೈತಾನನ ತಲೆಯನ್ನು ಜಜ್ಜಬೇಕು ಎಂದು ಯೆಹೋವನು ಉದ್ದೇಶಿಸಿದಾಗಲೇ ಅಭಿಷಿಕ್ತರನ್ನು ಒಂದು ವರ್ಗವಾಗಿ ಮುಂಚಿತವಾಗಿಯೇ ಆರಿಸಿದನು. (ಆದಿ. 3:15) ಅವರು ಮುಟ್ಟಬೇಕಾದ ಅರ್ಹತೆಗಳು, ಮಾಡಬೇಕಾದ ಕೆಲಸ ಮತ್ತು ಒಳಗಾಗಬೇಕಾದ ಪರೀಕ್ಷೆಗಳ ಬಗ್ಗೆಯೂ ಯೆಹೋವನು ತಿಳಿಸಿದನು.

ನಮಗಾಗಿರುವ ಪಾಠಗಳು:

1:6-10. ಯೆಹೋವನು ತನ್ನ ತೀರ್ಪುಗಳನ್ನು ಗೊತ್ತುಗುರಿಯಿಲ್ಲದೆ ಎಲ್ಲರ ಮೇಲೆ ತರುವುದಿಲ್ಲ.

3:8-12. ಯೆಹೋವನ ದಿನವು ಹತ್ತಿರವಾಗಿದೆ ಎಂಬುದನ್ನು ನೆಪಮಾಡಿಕೊಂಡು ನಮ್ಮ ಅವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ದುಡಿಯದೆ ಇರಬಾರದು. ಕೆಲಸಮಾಡದೆ ಇರುವುದರಿಂದ ನಾವು ಸೋಮಾರಿಗಳಾಗುತ್ತೇವೆ ಮತ್ತು ಇದು, ನಾವು ‘ಪರಕಾರ್ಯಗಳಲ್ಲಿ ತಲೆಹಾಕುವಂತೆ’ ಎಡೆಮಾಡಿಕೊಡುತ್ತದೆ.—1 ಪೇತ್ರ 4:15.

“ನಿನ್ನ ವಶಕ್ಕೆ ಕೊಟ್ಟಿರುವದನ್ನೇ ಕಾಪಾಡು”

(1 ತಿಮೊ. 1:1–6:21)

‘ಕ್ರೈಸ್ತರ ದಿವ್ಯ ಯುದ್ಧವನ್ನು ನಡಿಸು. ನಂಬಿಕೆಯನ್ನೂ ಒಳ್ಳೇ ಮನಸ್ಸಾಕ್ಷಿಯನ್ನೂ ಬಿಡದೆ ಹಿಡುಕೋ’ ಎಂದು ಪೌಲನು ತಿಮೊಥೆಯನಿಗೆ ಸಲಹೆ ಕೊಡುತ್ತಾನೆ. ಸಭೆಯ ನೇಮಿತ ಪುರುಷರಿಗಿರಬೇಕಾದ ಅರ್ಹತೆಗಳನ್ನು ಅಪೊಸ್ತಲನು ಪಟ್ಟಿಮಾಡುತ್ತಾನೆ. ಅಲ್ಲದೆ, ‘ಅಜ್ಜೀಕಥೆಗಳಂತಿರುವ ಕೇವಲ ಪ್ರಾಪಂಚಿಕವಾದ ಕಥೆಗಳನ್ನು ತಳ್ಳಿಬಿಡುವಂತೆಯೂ’ ಪೌಲನು ತಿಮೊಥೆಯನಿಗೆ ಸಲಹೆ ಕೊಡುತ್ತಾನೆ.—1 ತಿಮೊ. 1:18, 19; 3:1-10, 12, 13; 4:7.

‘ವೃದ್ಧನನ್ನು ಗದರಿಸಬೇಡ’ ಎಂದು ಪೌಲನು ಬರೆಯುತ್ತಾನೆ. “ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಆ ಹರಟೆಮಾತುಗಳಿಗೂ ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವದನ್ನೇ ಕಾಪಾಡು” ಎಂಬ ಪ್ರೋತ್ಸಾಹವನ್ನು ಆತನು ತಿಮೊಥೆಯನಿಗೆ ಕೊಡುತ್ತಾನೆ.—1 ತಿಮೊ. 5:1; 6:20.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:18; 4:14—ತಿಮೊಥೆಯನ ಕುರಿತ “ಪ್ರವಾದನೆಗಳು” ಅಂದರೇನು? ಅವು, ಕ್ರೈಸ್ತ ಸಭೆಯಲ್ಲಿ ತಿಮೊಥೆಯನ ಭಾವೀ ಪಾತ್ರದ ಕುರಿತ ಪ್ರವಾದನೆಗಳಾಗಿದ್ದಿರಬಹುದು. ಪೌಲನು ತನ್ನ ಎರಡನೇ ಮಿಷನೆರಿ ಪ್ರಯಾಣದಲ್ಲಿ ಲುಸ್ತ್ರಕ್ಕೆ ಹೋದಾಗ ದೇವಪ್ರೇರಿತನಾಗಿ ಈ ಪ್ರವಾದನೆಗಳನ್ನು ನುಡಿದಿರಬೇಕು. (ಅ. ಕೃ. 16:1, 2) ಈ “ಪ್ರವಾದನೆಗಳ” ಆಧಾರದ ಮೇಲೆ ಸಭೆಯ ಹಿರಿಪುರುಷರು ಯುವ ತಿಮೊಥೆಯನ ಮೇಲೆ ‘ಹಸ್ತಗಳನ್ನಿಟ್ಟು’ ಹೀಗೆ ಅವನನ್ನು ಒಂದು ವಿಶೇಷ ಸೇವೆಗಾಗಿ ಮೀಸಲಾಗಿಟ್ಟರು.

2:15—ಸ್ತ್ರೀಯೊಬ್ಬಳು ‘ಮಕ್ಕಳನ್ನು ಹೆರುವ ಮೂಲಕ ಸುರಕ್ಷಿತವಾಗಿ ಇಡಲ್ಪಡುವುದು(NW) ಹೇಗೆ? ಮಕ್ಕಳನ್ನು ಹೆರುವುದು, ಅವರ ಪರಾಮರಿಕೆ ಮತ್ತು ಮನೆಕೆಲಸವು ಸ್ತ್ರೀಯೊಬ್ಬಳಿಗೆ ‘ಹರಟೆಮಾತಾಡಲು ಮತ್ತು ಇತರರ ಕೆಲಸದಲ್ಲಿ ಕೈಹಾಕುವುದಕ್ಕೆ’ ಅವಕಾಶಕೊಡುವುದಿಲ್ಲ. ಹೀಗೆ ಆಕೆ ಸುರಕ್ಷಿತಳಾಗಿರುವಳು.—1 ತಿಮೊ. 5:11-15.

3:16—ದೇವಭಕ್ತಿಯ ಸತ್ಯಾರ್ಥ ಅಥವಾ ರಹಸ್ಯ ಏನಾಗಿದೆ? ಯೆಹೋವನ ಪರಮಾಧಿಕಾರಕ್ಕೆ ಮನುಷ್ಯರು ಸಂಪೂರ್ಣ ವಿಧೇಯತೆ ತೋರಿಸಲು ಸಾಧ್ಯವಿದೆಯೋ ಇಲ್ಲವೋ ಎಂಬುದು ಹಲವಾರು ಶತಮಾನಗಳ ವರೆಗೆ ರಹಸ್ಯವಾಗಿತ್ತು. ಯೇಸು ಮರಣಪರ್ಯಂತ ದೇವರಿಗೆ ಸಂಪೂರ್ಣ ರೀತಿಯಲ್ಲಿ ಸಮಗ್ರನಾಗಿ ಉಳಿಯುವ ಮೂಲಕ ಇದು ಸಾಧ್ಯ ಎಂಬ ಉತ್ತರನೀಡಿದನು.

ನಮಗಾಗಿರುವ ಪಾಠಗಳು:

4:15. ನಾವು ನಿಜ ಕ್ರೈಸ್ತರಾಗಿ ಸ್ವಲ್ಪ ಸಮಯವಾಗಿರಲಿ ಹಲವಾರು ದಶಕಗಳೇ ಕಳೆದಿರಲಿ, ಆಧ್ಯಾತ್ಮಿಕ ಅಭಿವೃದ್ಧಿಮಾಡಲು ಮತ್ತು ಯೆಹೋವನೊಂದಿಗಿನ ಸಂಬಂಧವನ್ನು ಬಲಪಡಿಸಲು ಪ್ರಯಾಸಪಡುತ್ತಿರಬೇಕು.

6:2. ನಾವು ಜೊತೆ ಕ್ರೈಸ್ತರ ಬಳಿ ಕೆಲಸಮಾಡುತ್ತಿದ್ದೇವಾದರೆ, ಯಾವುದೇ ವಿಧದಲ್ಲಿ ಅವರನ್ನು ನಮ್ಮ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುವ ಬದಲು ನಾವು ಹೊರಗಿನವರೊಂದಿಗೆ ಕೆಲಸಮಾಡುವುದಕ್ಕಿಂತ ಹೆಚ್ಚು ಶ್ರದ್ಧೆಯಿಂದ ಅವರ ಬಳಿ ಕೆಲಸಮಾಡಬೇಕು.

‘ದೇವರ ವಾಕ್ಯವನ್ನು ಸಾರು, ಅದರಲ್ಲಿ ಆಸಕ್ತನಾಗಿರು’

(2 ತಿಮೊ. 1:1–4:22)

ಮುಂದೆ ಬರುವ ಕಷ್ಟಕರ ಸಮಯಗಳಿಗಾಗಿ ತಿಮೊಥೆಯನನ್ನು ಸಜ್ಜುಗೊಳಿಸಲಿಕ್ಕಾಗಿ ಪೌಲನು ಬರೆದದ್ದು: “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ [“ಸ್ವಸ್ಥಚಿತ್ತದ,” NW] ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.” ಅವನು ತಿಮೊಥೆಯನಿಗೆ ಬುದ್ಧಿಮಾತು ಹೇಳಿದ್ದು: “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ . . . ಆಗಿರಬೇಕು.”—2 ತಿಮೊ. 1:7; 2:24.

“ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು” ಎಂದು ಪೌಲನು ತಿಮೊಥೆಯನನ್ನು ಪ್ರೋತ್ಸಾಹಿಸುತ್ತಾನೆ. ಧರ್ಮಭ್ರಷ್ಟ ಬೋಧನೆಗಳು ಎಲ್ಲೆಡೆ ಹಬ್ಬುತ್ತಿದ್ದದ್ದರಿಂದ ಈ ಯುವ ಮೇಲ್ವಿಚಾರಕನಿಗೆ ಅಪೊಸ್ತಲನು ಹೀಗೆ ಸಲಹೆನೀಡುತ್ತಾನೆ: “ದೇವರ ವಾಕ್ಯವನ್ನು ಸಾರು, . . . ಅದರಲ್ಲಿ ಆಸಕ್ತನಾಗಿರು . . . ಖಂಡಿಸು, ಗದರಿಸು, ಎಚ್ಚರಿಸು.”—2 ತಿಮೊ. 3:14; 4:2.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:13—‘ಸ್ವಸ್ಥಬೋಧನಾವಾಕ್ಯಗಳ ಮಾದರಿ’ ಅಂದರೇನು? ‘ಸ್ವಸ್ಥಬೋಧನಾವಾಕ್ಯಗಳು,’ ‘ಯೇಸು ಕ್ರಿಸ್ತನ ಮಾತುಗಳು’ ಇಲ್ಲವೆ ನಿಜ ಕ್ರೈಸ್ತ ಬೋಧನೆಗಳಾಗಿವೆ. (1 ತಿಮೊ. 6:3) ಯೇಸು ಕಲಿಸಿದ ಮತ್ತು ನಡೆದುಕೊಂಡ ರೀತಿಯು ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿದ್ದದ್ದರಿಂದ ‘ಸ್ವಸ್ಥಬೋಧನಾವಾಕ್ಯಗಳು’ ವಿಶಾಲಾರ್ಥದಲ್ಲಿ ಬೈಬಲಿನ ಎಲ್ಲಾ ಬೋಧನೆಗಳಿಗೂ ಸೂಚಿಸಬಹುದು. ಈ ಬೋಧನೆಗಳು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬದನ್ನು ಗ್ರಹಿಸಲು ನೆರವಾಗುತ್ತವೆ. ಬೈಬಲಿನಿಂದ ಕಲಿತದ್ದನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ನಾವು ಈ ಮಾದರಿಗೆ ನಿಕಟವಾಗಿ ಅಂಟಿಕೊಳ್ಳುತ್ತೇವೆ.

4:12, 13—‘ಚರ್ಮದ ಕಾಗದಗಳು’ ಯಾವುದಾಗಿದ್ದವು? ಪೌಲನು, ರೋಮ್‌ನಲ್ಲಿ ತನ್ನ ಸೆರೆವಾಸದ ಸಮಯದಲ್ಲಿ ಅಧ್ಯಯನಮಾಡುವುದಕ್ಕಾಗಿ ಹೀಬ್ರು ಗ್ರಂಥದ ಕೆಲವೊಂದು ಭಾಗಗಳಿಗಾಗಿ ಪ್ರಾಯಶಃ ಕೇಳುತ್ತಿದ್ದಿರಬೇಕು. ಕೆಲವು ಸುರುಳಿಗಳು ಪಪೈರಸ್‌ನದ್ದಾಗಿದ್ದು ಇನ್ನು ಕೆಲವು ಚರ್ಮದ್ದಾಗಿರಬೇಕು.

ನಮಗಾಗಿರುವ ಪಾಠಗಳು:

1:5; 3:15. ಶೈಶವದಲ್ಲೇ ತಿಮೊಥೆಯನು ಮನೆಯಲ್ಲಿ ಪಡೆದ ಆಧ್ಯಾತ್ಮಿಕ ಶಿಕ್ಷಣವು, ಅವನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡಲು ಮುಖ್ಯ ಕಾರಣವಾಗಿತ್ತು. ಈ ನಂಬಿಕೆಯೇ ಅವನೆಲ್ಲಾ ಕೆಲಸಗಳನ್ನು ಪ್ರಭಾವಿಸಿತು. ಕುಟುಂಬ ಸದಸ್ಯರು ತಾವು ದೇವರ ಕಡೆಗಿನ ಹಾಗೂ ತಮ್ಮ ಮಕ್ಕಳ ಕಡೆಗಿನ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಿದ್ದೇವೆ ಎಂಬದನ್ನು ಕುರಿತು ಗಂಭೀರವಾಗಿ ಯೋಚಿಸುವುದು ಎಷ್ಟು ಅತ್ಯಗತ್ಯ!

1:16-18. ನಮ್ಮ ಜೊತೆ ವಿಶ್ವಾಸಿಗಳು ಕಷ್ಟದಲ್ಲಿರುವಾಗ, ವಿರೋಧ ಎದುರಿಸುತ್ತಿರುವಾಗ ಅಥವಾ ಸೆರೆಮನೆಯಲ್ಲಿರುವಾಗ ನಾವು ಅವರಿಗೋಸ್ಕರ ಪ್ರಾರ್ಥಿಸೋಣ ಮತ್ತು ಅವರಿಗೆ ಸಹಾಯ ಮಾಡಲು ನಮ್ಮಿಂದಾದದ್ದೆಲ್ಲವನ್ನು ಮಾಡೋಣ.—ಜ್ಞಾನೋ. 3:27; 1 ಥೆಸ. 5:25.

2:22. ಕ್ರೈಸ್ತರು ಅದರಲ್ಲೂ ಮುಖ್ಯವಾಗಿ ಯೌವನಸ್ಥರು ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸಮಯವೇ ಇಲ್ಲದಷ್ಟು ಮಟ್ಟಿಗೆ ವ್ಯಾಯಾಮ, ಕ್ರೀಡೆ, ಸಂಗೀತ, ಮನರಂಜನೆ, ಹವ್ಯಾಸಗಳು, ಪ್ರವಾಸ, ಗೊತ್ತುಗುರಿಯಿಲ್ಲದ ಮಾತು ಮುಂತಾದ ವಿಷಯಗಳಲ್ಲಿ ಸಮಯ ಕಳೆಯಬಾರದು.

[ಪುಟ 31ರಲ್ಲಿರುವ ಚಿತ್ರ]

ಅಪೊಸ್ತಲ ಪೌಲನು ದೇವಪ್ರೇರಣೆಯಿಂದ ಬರೆದ ಪತ್ರಗಳಲ್ಲಿ ಕೊನೆಯದ್ದು ಯಾವುದು?