ಬೈಬಲ್ ಸಮಯಗಳಲ್ಲಿ “ರಕ್ಷಕ”ನಾಗಿದ್ದ ಯೆಹೋವನು
ಬೈಬಲ್ ಸಮಯಗಳಲ್ಲಿ “ರಕ್ಷಕ”ನಾಗಿದ್ದ ಯೆಹೋವನು
“ದೇವರೇ, ಶೀಘ್ರವಾಗಿ ಬಾ. ಯೆಹೋವನೇ, ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ.”—ಕೀರ್ತ. 70:5.
ವಿಹಾರಕ್ಕೆಂದು ಇನ್ನೊಂದು ಊರಿಗೆ ಹೋಗಿದ್ದ ಒಂದು ದಂಪತಿಗೆ, ಮದುವೆಯಾಗಿದ್ದ ತಮ್ಮ 23 ವಯಸ್ಸಿನ ಮಗಳು ಮನೆಯಿಂದ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾಳೆಂಬ ಸುದ್ದಿ ಸಿಗುತ್ತದೆ. ಆಕೆಯ ಕೊಲೆಯಾಗಿರಬಹುದೆಂದು ಶಂಕಿಸಲಾಗಿದೆ. ಸುದ್ದಿ ಕೇಳಿದೊಡನೆ ಅವರು ಮನೆಗೆ ಹೊರಡುತ್ತಾರೆ. ದಾರಿಯುದ್ದಕ್ಕೂ ಯೆಹೋವನ ಸಹಾಯಕ್ಕಾಗಿ ಅಂಗಲಾಚುತ್ತಾರೆ. 20 ವರ್ಷ ಪ್ರಾಯದ ಸಾಕ್ಷಿಯೊಬ್ಬನಿಗೆ, ಕಾಲಾನಂತರ ತನ್ನನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವ ಕಾಯಿಲೆ ಇದೆ ಎಂದು ತಿಳಿದುಬರುತ್ತದೆ. ಕೂಡಲೇ ಅವನು ಯೆಹೋವನಿಗೆ ಪ್ರಾರ್ಥಿಸುತ್ತಾನೆ. ಒಂಟಿ ತಾಯಿಯೊಬ್ಬಳು ಕೆಲಸಕ್ಕಾಗಿ ತುಂಬ ಅಲೆದಾಡುತ್ತಿದ್ದಾಳೆ. ತನಗಾಗಿ ಮತ್ತು ತನ್ನ 12 ವರ್ಷ ಪ್ರಾಯದ ಮಗಳಿಗಾಗಿ ಆಹಾರ ಖರೀದಿಸಲು ಬೇಕಾದಷ್ಟು ಹಣವೂ ಆಕೆಯ ಬಳಿ ಇಲ್ಲ. ಪ್ರಾರ್ಥನೆಯ ಮೂಲಕ ಆಕೆ ತನ್ನ ದುಃಖವನ್ನು ಯೆಹೋವನಲ್ಲಿ ತೋಡಿಕೊಳ್ಳುತ್ತಾಳೆ. ಕಷ್ಟಗಳು ಬಂದಾಗ ದೇವರ ಆರಾಧಕರು ಸಹಜವಾಗಿಯೇ ಸಹಾಯಕ್ಕಾಗಿ ಯೆಹೋವನೆಡೆಗೆ ನೋಡುತ್ತಾರೆ. ನೀವು ಸಹ, ದಿಕ್ಕೇ ತೋಚದಂತಾದಾಗ ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟದ್ದುಂಟೋ?
2 ಈಗ ಪ್ರಾಮುಖ್ಯ ಪ್ರಶ್ನೆಯೊಂದು ಏಳುತ್ತದೆ: ಸಹಾಯಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳನ್ನು ಯೆಹೋವನು ಉತ್ತರಿಸುವನೆಂದು ನಾವು ನಿರೀಕ್ಷಿಸಬಹುದೋ? ಇದಕ್ಕೆ ನಂಬಿಕೆವರ್ಧಕ ಉತ್ತರವು 70ನೇ ಕೀರ್ತನೆಯಲ್ಲಿದೆ. ಈ ಮನಕಲಕುವ ಕೀರ್ತನೆಯನ್ನು ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಹಾಗೂ ಸವಾಲುಗಳನ್ನು ಎದುರಿಸಿದ ಯೆಹೋವನ ನಿಷ್ಠಾವಂತ ಆರಾಧಕನಾದ ದಾವೀದನು ಬರೆದನು. ಈ ಕೀರ್ತನೆಗಾರನು ದೇವಪ್ರೇರಿತನಾಗಿ ಹೀಗೆ ಹೇಳಿದನು: “ದೇವರೇ, . . . ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ.” (ಕೀರ್ತ. 70:5) ನಾವೀಗ 70ನೇ ಕೀರ್ತನೆಯನ್ನು ಪರಿಶೀಲಿಸೋಣ. ಸಹಾಯದ ಅಗತ್ಯವಿರುವಾಗ ನಾವು ಸಹ ಯೆಹೋವನೆಡೆಗೆ ಏಕೆ ತಿರುಗಬೇಕು ಮತ್ತು ಆತನು ನಮ್ಮ ‘ರಕ್ಷಕನಾಗಿರುವನು’ ಎಂಬ ಪೂರ್ಣ ಭರವಸೆ ನಮಗೇಕೆ ಇರಬಲ್ಲದು ಎಂಬುದಕ್ಕೆ ಕಾರಣಗಳನ್ನು ನಾವು ತಿಳಿದುಕೊಳ್ಳುವೆವು.
‘ನೀನೇ ರಕ್ಷಕನು ಆಗಿದ್ದೀ’
3 ದೇವರ ಸಹಾಯ ತುರ್ತಾಗಿ ಅಗತ್ಯವಿದೆ ಎಂಬುದನ್ನು 70ನೇ ಕೀರ್ತನೆಯ ಪ್ರಥಮ ಹಾಗೂ ಅಂತಿಮ ವಚನಗಳಲ್ಲಿ ತಿಳಿಸಲಾಗಿದೆ. (ಕೀರ್ತನೆ 70:1-5 ಓದಿ.) ತನ್ನನ್ನು ರಕ್ಷಿಸಲಿಕ್ಕಾಗಿ ಯೆಹೋವನು ‘ಬೇಗ ಬರುವಂತೆ’ ಮತ್ತು ‘ತಡಮಾಡದಂತೆ’ ದಾವೀದನು ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಮಧ್ಯದ 2-4ನೇ ವಚನಗಳಲ್ಲಿ ದಾವೀದನ ಐದು ಬಿನ್ನಹಗಳಿವೆ. ಪ್ರತಿ ಬಿನ್ನಹದ ಅಂತ್ಯದಲ್ಲಿ ‘ಆಗಲಿ’ ಎಂಬ ಪ್ರತ್ಯಯವನ್ನು ಬಳಸುತ್ತಾ ಅವನು ತನ್ನ ಹಾರೈಕೆಯನ್ನು ವ್ಯಕ್ತಪಡಿಸುತ್ತಾನೆ. ಮೊದಲ ಮೂರು ಬಿನ್ನಹಗಳಲ್ಲಿ, ಅವನನ್ನು ಕೊಲ್ಲಲು ಸಂಚು ಹೂಡುತ್ತಿರುವ ವೈರಿಗಳನ್ನು ಸೋಲಿಸುವಂತೆ ಮತ್ತು ಅವರ ದುಷ್ಟತನಕ್ಕಾಗಿ ಮಾನಭಂಗ ಮಾಡುವಂತೆ ದಾವೀದನು ಯೆಹೋವನಲ್ಲಿ ಕೇಳಿಕೊಳ್ಳುತ್ತಾನೆ. 4ನೇ ವಚನದಲ್ಲಿರುವ ಇನ್ನೆರಡು ಬಿನ್ನಹಗಳು ದೇವಜನರ ಕುರಿತಾಗಿವೆ. ಯೆಹೋವನನ್ನು ಹುಡುಕುವವರೆಲ್ಲರೂ ಆನಂದಿಸಲು ಮತ್ತು ಆತನನ್ನು ಸ್ತುತಿಸಲು ಪ್ರಚೋದಿಸಲ್ಪಡಲಿ ಎಂದು ದಾವೀದನು ಹಾರೈಸುತ್ತಾನೆ. ಸಮಾಪ್ತಿಯಲ್ಲಿ ದಾವೀದನು ಯೆಹೋವನಿಗೆ ಹೇಳುವುದು: “ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ.” ಇಲ್ಲಿ ದಾವೀದನು “ನೀನು ನನ್ನ ರಕ್ಷಕನು ಆಗಲಿ” ಎಂಬ ಬಿನ್ನಹ ಮಾಡದೆ, ‘ನೀನೇ ನನಗೆ ರಕ್ಷಕನು ಆಗಿದ್ದೀ’ ಎಂಬ ಖಚಿತ ಮಾತುಗಳ ಮೂಲಕ ತನಗಿದ್ದ ಭರವಸೆಯನ್ನು ವ್ಯಕ್ತಪಡಿಸಿದನು ಎಂಬುದನ್ನು ಗಮನಿಸಿ. ದೈವಿಕ ಸಹಾಯ ದೊರಕುವುದೆಂಬ ನಂಬಿಕೆ ದಾವೀದನಿಗಿತ್ತು.
4 ದಾವೀದನ ಕುರಿತು 70ನೇ ಕೀರ್ತನೆ ಏನನ್ನು ತಿಳಿಯಪಡಿಸುತ್ತದೆ? ತನ್ನನ್ನು ಮುಗಿಸಿಬಿಡಲು ಪಣತೊಟ್ಟಿದ್ದ ವೈರಿಗಳನ್ನು ಕೊಲ್ಲುವ ಅವಕಾಶ ಸಿಕ್ಕಿದರೂ ದಾವೀದನು ಹಾಗೆ ಮಾಡಲಿಲ್ಲ. ಬದಲಾಗಿ ಯೆಹೋವನು ತನ್ನ ಸಮಯದಲ್ಲಿ ತನ್ನದೇ ಆದ ರೀತಿಯಲ್ಲಿ ವಿರೋಧಿಗಳನ್ನು ಶಿಕ್ಷಿಸುವನು ಎಂಬ ಭರವಸೆಯಿಂದಿದ್ದನು. (1 ಸಮು. 26:10) ಯೆಹೋವನು ತನ್ನನ್ನು ಹುಡುಕುವವರಿಗೆ ಸಹಾಯ ಮಾಡುತ್ತಾನೆ ಮತ್ತು ಅವರನ್ನು ವಿಮೋಚಿಸುತ್ತಾನೆ ಎಂಬ ದೃಢಭರವಸೆಯಿಂದ ದಾವೀದನು ಮುಂದೆ ಸಾಗಿದನು. (ಇಬ್ರಿ. 11:6) ಇಂಥ ಸತ್ಯಾರಾಧಕರಿಗೆ, ಯೆಹೋವನ ಮಹೋನ್ನತೆಯ ಬಗ್ಗೆ ಇತರರಿಗೆ ಹೇಳುವ ಮೂಲಕ ಆನಂದಪಡಲು ಮತ್ತು ಆತನನ್ನು ಸ್ತುತಿಸಲು ಸಕಲ ಕಾರಣಗಳಿವೆ ಎಂದು ದಾವೀದನು ನಂಬಿದನು.—ಕೀರ್ತ. 5:11; 35:27.
5 ಯೆಹೋವನು ನಮ್ಮ ಸಹಾಯಕನು ಮಾತ್ರವಲ್ಲ ನಮ್ಮ “ರಕ್ಷಕನೂ” ಆಗಿದ್ದಾನೆಂಬ ಪೂರ್ಣಭರವಸೆ ದಾವೀದನಿಗಿದ್ದಂತೆ ನಮಗೂ ಇರಬಲ್ಲದು. ಆದ್ದರಿಂದ ಕಷ್ಟಗಳನ್ನು ಎದುರಿಸುವಾಗ ಇಲ್ಲವೇ ನೆರವಿನ ತೀವ್ರ ಅಗತ್ಯವಿರುವಾಗ ‘ಬೇಗ ಸಹಾಯಮಾಡು’ ಎಂದು ನಾವು ಯೆಹೋವನಿಗೆ ಪ್ರಾರ್ಥಿಸುವುದು ತಪ್ಪಲ್ಲ. (ಕೀರ್ತ. 71:12) ಹಾಗಾದರೆ ಸಹಾಯಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳನ್ನು ಯೆಹೋವನು ಹೇಗೆ ಉತ್ತರಿಸುವನು? ಯೆಹೋವನು ನಮಗೆ ಹೇಗೆ ಸಹಾಯ ನೀಡುವನು ಎಂಬುದನ್ನು ಚರ್ಚಿಸುವ ಮೊದಲು, ಆತನು ದಾವೀದನಿಗೆ ತುರ್ತಿನ ಸಂದರ್ಭಗಳಲ್ಲಿ ಸಹಾಯಮಾಡುತ್ತಾ ಯಾವ ಮೂರು ವಿಧಗಳಲ್ಲಿ ರಕ್ಷಿಸಿದನು ಎಂಬುದನ್ನು ಪರಿಶೀಲಿಸೋಣ.
ವಿರೋಧಿಗಳಿಂದ ವಿಮೋಚಿಸಿದ್ದು
6 ನೀತಿವಂತರು ಸಹಾಯಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಬಹುದು ಎಂಬುದನ್ನು ದಾವೀದನು ಆಗ ಲಭ್ಯವಿದ್ದ ಬೈಬಲ್ ಭಾಗಗಳಿಂದ ತಿಳಿದುಕೊಂಡಿದ್ದನು. ಯೆಹೋವನು ಭಕ್ತಿಹೀನ ಲೋಕವನ್ನು ನಾಶಮಾಡಲಿಕ್ಕಾಗಿ ಜಲಪ್ರಳಯವನ್ನು ತಂದಾಗ ನೋಹ ಮತ್ತು ಅವನ ದೇವಭಕ್ತ ಕುಟುಂಬ ಸದಸ್ಯರ ಪ್ರಾಣ ಉಳಿಸಿದನು. (ಆದಿ. 7:23) ಸೊದೋಮ್ ಗೊಮೋರಗಳ ದುಷ್ಟ ನಿವಾಸಿಗಳ ಮೇಲೆ ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿದರೂ ಆತನು ನೀತಿವಂತನಾದ ಲೋಟ ಮತ್ತು ಅವನ ಇಬ್ಬರು ಹೆಣ್ಣುಮಕ್ಕಳನ್ನು ಪಾರುಮಾಡಿದನು. (ಆದಿ. 19:12-26) ಅಹಂಕಾರಿಯಾದ ಫರೋಹ ಮತ್ತು ಅವನ ಸೈನ್ಯವನ್ನು ಯೆಹೋವನು ಕೆಂಪು ಸಮುದ್ರದಲ್ಲಿ ನಾಶಮಾಡಿದಾಗ ತನ್ನ ಜನರನ್ನಾದರೋ ರಕ್ಷಿಸಿದನು ಮತ್ತು ನಾಶನದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದನು. (ವಿಮೋ. 14:19-28) ಆದ್ದರಿಂದ, ಯೆಹೋವನು ‘ವಿಮೋಚಿಸುವ ದೇವರಾಗಿದ್ದಾನೆ’ ಎಂದು ದಾವೀದನು ಇನ್ನೊಂದು ಕೀರ್ತನೆಯಲ್ಲಿ ಹೊಗಳಿದ್ದು ಅಚ್ಚರಿಯ ಸಂಗತಿಯೇನಲ್ಲ.—ಕೀರ್ತ. 68:20.
7 ಯೆಹೋವನ ರಕ್ಷಣಾ ಸಾಮರ್ಥ್ಯದಲ್ಲಿ ಪೂರ್ಣ ಭರವಸೆಯಿಡಲು ದಾವೀದನಿಗೆ ಒಂದು ವೈಯಕ್ತಿಕ ಕಾರಣವೂ ಇತ್ತು. “ದೇವರ ಹಸ್ತ” ಸದಾ ಆತನ ಸೇವಕರನ್ನು ರಕ್ಷಿಸುವುದು ಎಂಬುದರ ಅನುಭವ ಸ್ವತಃ ದಾವೀದನಿಗಾಗಿತ್ತು. (ಧರ್ಮೋ. 33:27) ಯೆಹೋವನು ಒಂದಕ್ಕಿಂತ ಹೆಚ್ಚು ಬಾರಿ ದಾವೀದನನ್ನು “ಶತ್ರುಗಳಿಂದ” ರಕ್ಷಿಸಿದ್ದನು. (ಕೀರ್ತ. 18:17-19, 48) ಉದಾಹರಣೆಯೊಂದನ್ನು ಪರಿಗಣಿಸಿ.
8 ದಾವೀದನ ಮಿಲಿಟರಿ ಶೌರ್ಯಕ್ಕಾಗಿ ಇಸ್ರಾಯೇಲ್ಯ ಸ್ತ್ರೀಯರು ಅವನನ್ನು ಹಾಡಿಹೊಗಳಿದಾಗ ಅಸೂಯೆಗೊಂಡ ರಾಜ ಸೌಲನು ಅವನನ್ನು ಕೊಲ್ಲಲು ಎರಡು ಸಂದರ್ಭಗಳಲ್ಲಿ ಈಟಿಯನ್ನೆಸೆದನು. (1 ಸಮು. 18:6-9) ಎರಡೂ ಸಾರಿ ದಾವೀದನು ಈಟಿಯ ಚೂಪಾದ ಮೊನೆಯಿಂದ ಕೂದಲೆಳೆಯಷ್ಟು ಅಂತರದಲ್ಲಿ ತಪ್ಪಿಸಿಕೊಂಡನು. ಅನುಭವಿ ಯೋಧನಾಗಿದ್ದ ಅವನು ಸ್ವಂತ ಕೌಶಲ ಹಾಗೂ ಚಾಕಚಕ್ಯತೆಯಿಂದ ತಪ್ಪಿಸಿಕೊಂಡನೋ? ಇಲ್ಲ. ‘ಯೆಹೋವನು ಅವನ ಸಂಗಡ ಇದ್ದನು’ ಎಂದು ಬೈಬಲ್ ದಾಖಲೆ ತಿಳಿಸುತ್ತದೆ. (1 ಸಮುವೇಲ 18:11-14 ಓದಿ.) ಸಮಯಾನಂತರ ದಾವೀದನನ್ನು ಫಿಲಿಷ್ಟಿಯರ ಕೈಯಲ್ಲಿ ಕೊಲ್ಲಿಸಲು ಸೌಲನು ಮಾಡಿದ ಒಳಸಂಚು ನೆಲಕಚ್ಚಿದಾಗ, ‘ಯೆಹೋವನು ದಾವೀದನ ಸಂಗಡ ಇದ್ದಾನೆಂದು ಸೌಲನು ತಿಳಿದುಕೊಂಡನು.’—1 ಸಮು. 18:17-28.
9 ದಾವೀದನು ತನ್ನ ವಿಮೋಚನೆಯ ಶ್ರೇಯವನ್ನು ಯಾರಿಗೆ ಸಲ್ಲಿಸಿದನು? 18ನೇ ಕೀರ್ತನೆಯ ಮೇಲ್ಬರಹ ಹೀಗಿದೆ: ‘ದಾವೀದನು ಸೌಲನ ಕೈಯಿಂದ ತಪ್ಪಿಸಲ್ಪಟ್ಟಾಗ ಯೆಹೋವನ ಘನಕ್ಕಾಗಿ ಈ ಪದ್ಯವನ್ನು ರಚಿಸಿ ಹೇಳಿದನು.’ ಈ ಪದ್ಯದಲ್ಲಿ ದಾವೀದನು ತನ್ನ ಹೃದಯದಾಳದ ಅನಿಸಿಕೆಗಳನ್ನು ವ್ಯಕ್ತಪಡಿಸಿದನು. ಅವನು ಹೇಳಿದ್ದು: “ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ನನ್ನ ದೇವರೂ ನನ್ನ ಆಶ್ರಯಗಿರಿಯೂ . . . ಆಗಿದ್ದಾನೆ.” (ಕೀರ್ತ. 18:2) ಯೆಹೋವನು ತನ್ನ ಜನರನ್ನು ರಕ್ಷಿಸಲು ಸಮರ್ಥನು ಎಂಬ ಅರಿವು ನಮ್ಮ ನಂಬಿಕೆಯನ್ನು ಬಲಪಡಿಸುವುದಿಲ್ಲವೇ?—ಕೀರ್ತ. 35:10.
ರೋಗಗ್ರಸ್ಥನಾಗಿ ಹಾಸಿಗೆಹಿಡಿದಾಗ ಉದ್ಧರಿಸಿದ್ದು
10 ರಾಜ ದಾವೀದನು ಒಮ್ಮೆ ತುಂಬ ಅಸ್ವಸ್ಥನಾಗಿದ್ದನೆಂದು 41ನೇ ಕೀರ್ತನೆ ತಿಳಿಸುತ್ತದೆ. ಹಾಸಿಗೆ ಹಿಡಿದಿದ್ದ ದಾವೀದನು ಎಷ್ಟು ಅಸ್ವಸ್ಥನಾಗಿದ್ದನೆಂದರೆ ಅವನು “ತಿರಿಗಿ ಏಳುವದೇ ಇಲ್ಲವೆಂದು” ಅವನ ಶತ್ರುಗಳಲ್ಲಿ ಕೆಲವರು ಅಂದುಕೊಂಡರು. (ವಚನ 7, 8) ದಾವೀದನು ಅಷ್ಟು ಅಸ್ವಸ್ಥನಾದದ್ದು ಯಾವಾಗ? ಇದು, ದಾವೀದನ ಮಗನಾದ ಅಬ್ಷಾಲೋಮನು ಸಿಂಹಾಸನವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದ ಒತ್ತಡಭರಿತ ಸಮಯದಲ್ಲಾಗಿರಬಹುದು ಎಂಬುದರ ಕಡೆಗೆ ಈ ಕೀರ್ತನೆಯಲ್ಲಿ ತಿಳಿಸಲಾಗಿರುವ ಸನ್ನಿವೇಶಗಳು ಕೈತೋರಿಸುತ್ತವೆ.—2 ಸಮು. 15:6, 13, 14.
11 ಉದಾಹರಣೆಗೆ ಈ ಕೀರ್ತನೆಯಲ್ಲಿ ದಾವೀದನು, ತನ್ನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡ ಆಪ್ತಸ್ನೇಹಿತನೇ ತನಗೆ ದ್ರೋಹಬಗೆದನೆಂದು ಹೇಳುತ್ತಾನೆ. (ವಚನ 9) ಇದು ದಾವೀದನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನಮ್ಮ ನೆನಪಿಗೆ ತರುತ್ತದೆ. ಅಬ್ಷಾಲೋಮನು ದಂಗೆಯೆದ್ದ ಅವಧಿಯಲ್ಲಿ, ದಾವೀದನ ವಿಶ್ವಾಸಾರ್ಹ ಸಲಹೆಗಾರನಾದ ಅಹೀತೋಫೆಲನೂ ಅವನ ಜೊತೆಗೂಡಿ ರಾಜನಿಗೆ ವಿಶ್ವಾಸದ್ರೋಹ ಮಾಡಿದನು. (2 ಸಮು. 15:31; 16:15) ರಾಜನ ಸ್ಥಿತಿ ಹೇಗಿದ್ದಿರಬೇಕೆಂಬುದನ್ನು ಸ್ವಲ್ಪ ಯೋಚಿಸಿ. ಒಂದು ಕಡೆಯಲ್ಲಿ ಅವನು ಹಾಸಿಗೆಹಿಡಿದು ನಿಶ್ಶಕ್ತನಾಗಿದ್ದನು ಮತ್ತು ಇನ್ನೊಂದು ಕಡೆಯಲ್ಲಿ ಸಂಚುಗಾರರು ತಮ್ಮ ಯೋಜನೆಗಳನ್ನು ಸಿದ್ಧಿಗೆ ತರಲು ತನ್ನ ಸಾವಿಗಾಗಿ ಕಾಯುತ್ತಿದ್ದಾರೆಂದು ಅವನಿಗೆ ತಿಳಿದಿತ್ತು.—ವಚನ 5.
12 “ರಕ್ಷಕನ” ಮೇಲೆ ದಾವೀದನಿಗಿದ್ದ ಭರವಸೆ ಅಚಲವಾಗಿತ್ತು. ಅಸ್ವಸ್ಥನಾಗಿರುವ ಯಥಾರ್ಥ ಆರಾಧಕನೊಬ್ಬನ ವಿಷಯದಲ್ಲಿ ದಾವೀದನು ಹೇಳಿದ್ದು: “ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡಿದಿಯಲ್ಲಾ.” (ಕೀರ್ತ. 41:1, 3) ದಾವೀದನು ಇಲ್ಲಿ ಕೂಡ, ‘ಯೆಹೋವನು ಉದ್ಧರಿಸುವನು’ ಎಂದು ಖಚಿತವಾಗಿ ಹೇಳುವ ಮೂಲಕ ಆತನಲ್ಲಿ ಭರವಸೆ ವ್ಯಕ್ತಪಡಿಸಿದ್ದನ್ನು ಗಮನಿಸಿರಿ. ಯೆಹೋವನು ತನ್ನನ್ನು ಖಂಡಿತ ರಕ್ಷಿಸುವನು ಎಂಬ ಭರವಸೆ ಅವನಿಗಿತ್ತು. ಆದರೆ ಆತನು ಹೇಗೆ ರಕ್ಷಿಸಲಿದ್ದನು?
13 ಯೆಹೋವನು ಅದ್ಭುತಕರವಾಗಿ ತನ್ನ ರೋಗ ವಾಸಿಮಾಡುವನೆಂದು ದಾವೀದನು ನಿರೀಕ್ಷಿಸಲಿಲ್ಲ. ಬದಲಾಗಿ ತಾನು ರೋಗಗ್ರಸ್ಥನಾಗಿ ಹಾಸಿಗೆಹಿಡಿದಿದ್ದರೂ ಯೆಹೋವನು “ಉದ್ಧರಿಸುವನು” ಅಂದರೆ ಬೆಂಬಲ ಹಾಗೂ ಬಲ ಒದಗಿಸುವನೆಂಬ ಪೂರ್ಣ ಭರವಸೆ ಅವನಲ್ಲಿತ್ತು. ಇಂಥ ಸಹಾಯ ದಾವೀದನಿಗೆ ಖಂಡಿತ ಅಗತ್ಯವಿತ್ತು. ಅವನನ್ನು ದುರ್ಬಲಗೊಳಿಸಿದ ಅಸ್ವಸ್ಥತೆಯಲ್ಲದೇ, ಅವನ ಬಗ್ಗೆ ಕೆಟ್ಟ ಕೆಟ್ಟ ಮಾತುಗಳನ್ನಾಡುತ್ತಿದ್ದ ಶತ್ರುಗಳೂ ಇದ್ದರು. (ವಚನ 5, 6) ದಾವೀದನ ಮನಸ್ಸಿಗೆ ಸಾಂತ್ವನದಾಯಕ ವಿಚಾರಗಳನ್ನು ತರುವ ಮೂಲಕ ಯೆಹೋವನು ಅವನನ್ನು ಬಲಪಡಿಸಿರಬೇಕು. ದಾವೀದನು ಹೇಳಿದ್ದು: ‘ನಿರ್ದೋಷಿಯಾದ ನನ್ನನ್ನಾದರೋ ನೀನು ಉದ್ಧಾರಮಾಡಿದಿ.’ (ವಚನ 12) ಹೀಗೆ ತಾನು ನಿರ್ಬಲನಾಗಿದ್ದರೂ ಮತ್ತು ಶತ್ರುಗಳು ತನ್ನ ಬಗ್ಗೆ ಕೆಟ್ಟದ್ದಾಗಿ ಆಡಿಕೊಳ್ಳುತ್ತಿದ್ದರೂ ಯೆಹೋವನು ತನ್ನನ್ನು ನಿರ್ದೋಷಿಯಾಗಿ ಅಥವಾ ಸಮಗ್ರತೆಯ ಪಾಲಕನಾಗಿ ದೃಷ್ಟಿಸುತ್ತಾನೆ ಎಂಬ ವಾಸ್ತವಾಂಶದ ಕುರಿತು ಯೋಚಿಸುವುದರಿಂದ ದಾವೀದನು ಬಲಪಡಕೊಂಡನು. ಕೊನೆಗೂ ದಾವೀದನು ಗುಣಮುಖನಾದನು. ಯೆಹೋವನು ಅಸ್ವಸ್ಥರನ್ನು ಬಲಪಡಿಸಬಲ್ಲನು ಎಂಬ ಸಂಗತಿಯು ನಮ್ಮಲ್ಲಿ ಭರವಸೆ ತುಂಬಿಸುವುದಿಲ್ಲವೋ?—2 ಕೊರಿಂ. 1:3.
ಭೌತಿಕವಾಗಿ ಪೋಷಿಸಿದ್ದು
14 ದಾವೀದನು ಇಸ್ರಾಯೇಲಿನ ರಾಜನಾದಾಗ ಮೃಷ್ಟಾನ್ನಭೋಜನ ಸವಿಯುತ್ತಿದ್ದನು, ಅಲ್ಲದೆ ತನ್ನೊಟ್ಟಿಗೆ ಊಟಮಾಡಲು ಅನೇಕರನ್ನು ಆಮಂತ್ರಿಸುತ್ತಿದ್ದನು. (2 ಸಮು. 9:10) ಆದರೆ ದಾವೀದನಿಗೆ ಆಹಾರದ ಕೊರತೆಯಿದ್ದ ಸಮಯವೂ ಇತ್ತು. ಮಗನಾದ ಅಬ್ಷಾಲೋಮನು ತನ್ನಿಂದ ಸಿಂಹಾಸನವನ್ನು ಕಿತ್ತುಕೊಳ್ಳಲು ಪಿತೂರಿ ನಡೆಸಿದಾಗ ದಾವೀದನು ತನ್ನ ನಿಷ್ಠಾವಂತ ಬೆಂಬಲಿಗರೊಂದಿಗೆ ಯೆರೂಸಲೇಮನ್ನು ಬಿಟ್ಟುಹೋದನು. ಅವರು ಯೊರ್ದನ್ ಹೊಳೆಯ ಪೂರ್ವಕ್ಕಿದ್ದ ಗಿಲ್ಯಾದಿಗೆ ಪಲಾಯನಗೈದರು. (2 ಸಮು. 17:22, 24) ಅಲೆಮಾರಿಗಳಂತೆ ಜೀವಿಸಬೇಕಾದದ್ದರಿಂದ ಅವರಿಗೆ ಅನ್ನಪಾನಗಳ ಹಾಗೂ ವಿಶ್ರಾಂತಿಯ ಭಾರೀ ಅಗತ್ಯವಿತ್ತು. ಆದರೆ ಆ ಅರಣ್ಯದಲ್ಲಿ ಅವರಿಗೆ ಆಹಾರ ಹೇಗೆ ತಾನೇ ಸಿಗಸಾಧ್ಯವಿತ್ತು?
15 ಅಂತಿಮವಾಗಿ ದಾವೀದನು ತನ್ನ ಜನರೊಂದಿಗೆ ಮಹನಯಿಮ್ ಎಂಬ ಪಟ್ಟಣಕ್ಕೆ ಬಂದು ತಲಪಿದನು. ಅಲ್ಲಿ ಅವರು ಶೋಬಿ, ಮಾಕೀರ್, ಬರ್ಜಿಲ್ಲೈ ಎಂಬ ಮೂವರು ಧೀರ ಪುರುಷರನ್ನು ಭೇಟಿಯಾದರು. ಈ ಪುರುಷರು ದೇವನೇಮಿತ ಅರಸನಿಗೆ ಸಹಾಯ ಮಾಡಲು ಮುಂದೆ ಬರುವ ಮೂಲಕ ತಮ್ಮ ಜೀವವನ್ನು ಪಣಕ್ಕೊಡ್ಡಿದರು. ಏಕೆಂದರೆ ಒಂದುವೇಳೆ ಅಬ್ಷಾಲೋಮನು ಅರಸನಾಗುವಲ್ಲಿ ದಾವೀದನನ್ನು ಬೆಂಬಲಿಸುವವರೆಲ್ಲರನ್ನು ಖಂಡಿತ ಕ್ರೂರವಾಗಿ ಶಿಕ್ಷಿಸಲಿದ್ದನು. ದಾವೀದ ಮತ್ತು ಅವನ ಜನರಿಗೆ ಅವಶ್ಯವಿದ್ದ ಹಾಸಿಗೆ, ಊಟಕ್ಕಾಗಿ ಗೋದಿ ಜವೆಗೋದಿ ಹುರಿಗಾಳು ಅವರೆ ಅಲಸಂದಿ ಜೇನುತುಪ್ಪ ಬೆಣ್ಣೆ ಕುರಿ ಇವುಗಳನ್ನು ಈ ಮೂರು ಮಂದಿ ನಿಷ್ಠಾವಂತ ಪ್ರಜೆಗಳು ತಂದುಕೊಟ್ಟರು. (2 ಸಮುವೇಲ 17:27-29 ಓದಿ.) ಇವರು ತೋರಿಸಿದ ಅಸಾಮಾನ್ಯ ನಿಷ್ಠೆ ಮತ್ತು ಅತಿಥಿಸತ್ಕಾರಕ್ಕಾಗಿ ದಾವೀದನು ಬಹಳಷ್ಟು ಕೃತಜ್ಞನಾಗಿದ್ದಿರಬೇಕು. ಅವರ ಸಹಾಯವನ್ನು ದಾವೀದನು ಹೇಗೆ ತಾನೇ ಮರೆಯಸಾಧ್ಯ?
16 ದಾವೀದ ಮತ್ತು ಅವನ ಜನರಿಗೆ ಆಹಾರ ಸರಬರಾಯಿ ಸಿಗಲು ಮೂಲತಃ ಯಾರು ಕಾರಣನಾಗಿದ್ದನು? ಯೆಹೋವನು ತನ್ನ ಜನರನ್ನು ಪೋಷಿಸುತ್ತಾನೆಂಬ ದೃಢನಂಬಿಕೆ ದಾವೀದನಿಗಿತ್ತು. ಅಗತ್ಯದಲ್ಲಿರುವ ಆರಾಧಕನೊಬ್ಬನಿಗೆ ನೆರವಾಗುವಂತೆ ಯೆಹೋವನು ತನ್ನ ಇತರ ಸೇವಕರನ್ನು ಖಂಡಿತ ಪ್ರಚೋದಿಸಶಕ್ತನು. ದಾವೀದನು, ಹಿಂದೆ ಗಿಲ್ಯಾದಿನಲ್ಲಿ ಏನಾಯಿತೋ ಆ ಬಗ್ಗೆ ಆಲೋಚಿಸುವಾಗ ಆ ಮೂವರು ಪುರುಷರು ತನಗೆ ತೋರಿಸಿದ ದಯೆ ಯೆಹೋವನ ಪ್ರೀತಿಪೂರ್ವಕ ಆರೈಕೆಯ ಅಭಿವ್ಯಕ್ತಿಯಾಗಿತ್ತು ಎಂಬುದನ್ನು ಖಂಡಿತ ಮನಗಂಡನು. ತನ್ನ ಜೀವನದ ಕೊನೆಯಷ್ಟಕ್ಕೆ ದಾವೀದನು ಬರೆದದ್ದು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು [ತನ್ನನ್ನೂ ಸೇರಿಸಿ] ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” (ಕೀರ್ತ. 37:25) ಯೆಹೋವನ ಕೈ ಮೋಟುಗೈಯಲ್ಲ ಎಂಬುದನ್ನು ತಿಳಿಯುವಾಗ ನಿಮಗೆ ನೆಮ್ಮದಿಯೆನಿಸುವುದಿಲ್ಲವೇ?—ಜ್ಞಾನೋ. 10:3.
‘ಯೆಹೋವನು ಭಕ್ತರನ್ನು ಕಷ್ಟಗಳಿಂದ ತಪ್ಪಿಸುವುದಕ್ಕೆ ಬಲ್ಲವನು’
17 ಬೈಬಲ್ ಸಮಯಗಳಲ್ಲಿ ಯೆಹೋವನು ಯಾರಿಗೆ ರಕ್ಷಣೆ ಒದಗಿಸಿದನೋ ಆ ಅನೇಕ ಆರಾಧಕರಲ್ಲಿ ದಾವೀದನು ಒಬ್ಬನು. ಅವನ ನಂತರವೂ, ‘ಯೆಹೋವನು ತನ್ನ ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೆ ಬಲ್ಲವನಾಗಿದ್ದಾನೆ’ ಎಂಬ ಅಪೊಸ್ತಲ ಪೇತ್ರನ ಮಾತುಗಳ ಸತ್ಯತೆಯನ್ನು ಯೆಹೋವನು ಪುನಃ ಪುನಃ ರುಜುಪಡಿಸಿದ್ದಾನೆ. (2 ಪೇತ್ರ 2:9) ಇನ್ನೆರಡು ಉದಾಹರಣೆಗಳನ್ನು ಪರಿಗಣಿಸಿ.
18 ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ ಅಶ್ಶೂರದ ಬಲಿಷ್ಠ ಸೈನ್ಯ ಯೆಹೂದಕ್ಕೆ ಮುತ್ತಿಗೆ ಹಾಕಿ ಯೆರೂಸಲೇಮಿಗೆ ಬೆದರಿಕೆಯನ್ನೊಡ್ಡಿದಾಗ ರಾಜ ಹಿಜ್ಕೀಯನು ಪ್ರಾರ್ಥಿಸಿದ್ದು: “ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು . . . ಬಿಡಿಸು.” (ಯೆಶಾ. 37:20) ಯೆಹೋವನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂಬುದೇ ಹಿಜ್ಕೀಯನ ಮುಖ್ಯ ಚಿಂತೆಯಾಗಿತ್ತು. ಅವನ ಹೃತ್ಪೂರ್ವಕ ಪ್ರಾರ್ಥನೆಯನ್ನು ಯೆಹೋವನು ಉತ್ತರಿಸಿದನು. ಕೇವಲ ಒಬ್ಬ ದೇವದೂತನು ರಾತ್ರಿ ಬೆಳಗಾಗುವಷ್ಟರಲ್ಲಿ 1,85,000 ಮಂದಿ ಅಶ್ಶೂರ್ಯರನ್ನು ಸಂಹರಿಸುವ ಮೂಲಕ ಯೆಹೋವನ ನಂಬಿಗಸ್ತ ಸೇವಕರನ್ನು ರಕ್ಷಿಸಿದನು.—ಯೆಶಾ. 37:32, 36.
19 ಯೇಸು ತನ್ನ ಮರಣಕ್ಕೆ ಕೆಲವೇ ದಿನಗಳ ಮುಂಚೆ ಯೂದಾಯದಲ್ಲಿರುವ ತನ್ನ ಶಿಷ್ಯರ ಪ್ರಯೋಜನಾರ್ಥವಾಗಿ ಒಂದು ಪ್ರವಾದನಾತ್ಮಕ ಎಚ್ಚರಿಕೆ ಕೊಟ್ಟನು. (ಲೂಕ 21:20-22 ಓದಿ.) ಆ ಎಚ್ಚರಿಕೆಯನ್ನು ಕೊಟ್ಟು ದಶಕಗಳು ಕಳೆದರೂ ಏನೂ ಆಗಲಿಲ್ಲ. ಆದರೆ ಸಾ.ಶ. 66ರಲ್ಲಿ ಯೆಹೂದ್ಯರು ಬಂಡಾಯ ಎದ್ದದ್ದರಿಂದ ರೋಮನ್ ಸೈನ್ಯ ಯೆರೂಸಲೇಮಿಗೆ ಮುತ್ತಿಗೆ ಹಾಕಿತು. ಸೆಸ್ಟಿಯಸ್ ಗ್ಯಾಲಸ್ನ ನೇತೃತ್ವದಲ್ಲಿ ಬಂದ ಆ ಸೈನ್ಯವು ದೇವಾಲಯದ ಗೋಡೆಯನ್ನು ಕೊರೆಯಲಾರಂಭಿಸಿದ್ದರೂ ತಟ್ಟನೆ ಅದನ್ನು ಅರ್ಧಕ್ಕೆ ನಿಲ್ಲಿಸಿ ಹಿಂತೆರಳಿತು. ಯೇಸು ಮುಂತಿಳಿಸಿದ್ದ ಈ ನಾಶನದಿಂದ ತಪ್ಪಿಸಿಕೊಳ್ಳಲು ಇದೇ ಸೂಕ್ತ ಸಮಯ ಎಂದು ಮನಗಂಡ ನಂಬಿಗಸ್ತ ಕ್ರೈಸ್ತರು ಬೆಟ್ಟಗಳಿಗೆ ಓಡಿಹೋದರು. ಸಾ.ಶ. 70ರಲ್ಲಿ ರೋಮನ್ ಸೈನ್ಯ ಪುನಃ ಮುತ್ತಿಗೆಹಾಕಿತು ಮತ್ತು ಈ ಬಾರಿ ಯೆರೂಸಲೇಮನ್ನು ಪೂರ್ತಿ ನಾಶಗೊಳಿಸಿಯೇ ಹಿಂತೆರಳಿತು. ಯೇಸುವಿನ ಎಚ್ಚರಿಕೆಗೆ ಕಿವಿಗೊಟ್ಟ ಕ್ರೈಸ್ತರು ಆ ಭೀಕರ ವಿಪತ್ತಿನಿಂದ ಪಾರಾದರು.—ಲೂಕ 19:41-44.
20 ಗತ ಸಮಯಗಳಲ್ಲಿ ಯೆಹೋವನು ತನ್ನ ಜನರಿಗೆ ಹೇಗೆ ಸಹಾಯ ಮಾಡಿದನು ಎಂಬುದನ್ನು ಪರಿಶೀಲಿಸುವುದರಿಂದ ನಮ್ಮ ನಂಬಿಕೆ ಬಲಗೊಳ್ಳುತ್ತದೆ. ಹಿಂದೆ ಆತನು ಏನೆಲ್ಲಾ ಮಾಡಿದ್ದನೋ ಅದು ನಮ್ಮ ಭರವಸೆಗೆ ಆಧಾರ ಕೊಡುತ್ತದೆ. ನಾವೀಗ ಯಾವುದೇ ಸವಾಲುಗಳನ್ನು ಎದುರಿಸುತ್ತಿರಲಿ ಇಲ್ಲವೇ ಮುಂದೆ ಎದುರಿಸಬೇಕಾಗಿರಲಿ ಯೆಹೋವನು ನಮ್ಮ “ರಕ್ಷಕ”ನೆಂಬ ಭರವಸೆ ನಮಗೂ ಇರಬಲ್ಲದು. ಹಾಗಾದರೆ ಇಂದು ಯೆಹೋವನು ನಮ್ಮನ್ನು ಹೇಗೆ ರಕ್ಷಿಸುತ್ತಾನೆ? ಈ ಲೇಖನದ ಆರಂಭದಲ್ಲಿ ತಿಳಿಸಲಾದವರ ಕುರಿತೇನು? ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.
ನಿಮಗೆ ಜ್ಞಾಪಕವಿದೆಯೋ?
• ಯಾವ ಭರವಸೆಯಿಂದಿರುವಂತೆ 70ನೇ ಕೀರ್ತನೆ ನಮಗೆ ಕಾರಣ ಕೊಡುತ್ತದೆ?
• ಅಸ್ವಸ್ಥನಾದಾಗ ದಾವೀದನಿಗೆ ಹೇಗೆ ಸಹಾಯ ಸಿಕ್ಕಿತು?
• ಯೆಹೋವನು ತನ್ನ ಜನರನ್ನು ವಿರೋಧಿಗಳಿಂದ ರಕ್ಷಿಸಬಲ್ಲನು ಎಂಬುದನ್ನು ಯಾವ ಉದಾಹರಣೆಗಳು ತೋರಿಸುತ್ತವೆ?
[ಅಧ್ಯಯನ ಪ್ರಶ್ನೆಗಳು]
1, 2. (ಎ) ದೇವರ ಆರಾಧಕರು ಸಹಾಯಕ್ಕಾಗಿ ಯಾವಾಗ ಆತನೆಡೆಗೆ ನೋಡುತ್ತಾರೆ? (ಬಿ) ಈಗ ಯಾವ ಪ್ರಶ್ನೆ ಏಳುತ್ತದೆ, ಮತ್ತು ನಮಗೆ ಅದರ ಉತ್ತರ ಎಲ್ಲಿ ಸಿಗುವುದು?
3. (ಎ) ಸಹಾಯ ತುರ್ತಾಗಿ ಅಗತ್ಯವಿದೆ ಎಂಬುದನ್ನು 70ನೇ ಕೀರ್ತನೆಯಲ್ಲಿ ಹೇಗೆ ತಿಳಿಸಲಾಗಿದೆ? (ಬಿ) 70ನೇ ಕೀರ್ತನೆಯಲ್ಲಿ ದಾವೀದನು ಯಾವ ಭರವಸೆಯನ್ನು ವ್ಯಕ್ತಪಡಿಸುತ್ತಾನೆ?
4, 5. ದಾವೀದನ ಕುರಿತು 70ನೇ ಕೀರ್ತನೆಯಲ್ಲಿ ನಾವೇನನ್ನು ಕಲಿಯುತ್ತೇವೆ, ಮತ್ತು ನಮಗೆ ಯಾವ ಭರವಸೆಯಿರಬಲ್ಲದು?
6. ಯೆಹೋವನು ನೀತಿವಂತರನ್ನು ರಕ್ಷಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ದಾವೀದನಿಗೆ ಯಾವುದು ಸಹಾಯ ಮಾಡಿತು?
7-9. (ಎ) ಯೆಹೋವನ ರಕ್ಷಣಾ ಸಾಮರ್ಥ್ಯದಲ್ಲಿ ಭರವಸೆಯಿಡಲು ದಾವೀದನಿಗೆ ಯಾವ ಕಾರಣವಿತ್ತು? (ಬಿ) ದಾವೀದನು ತನ್ನ ವಿಮೋಚನೆಯ ಶ್ರೇಯವನ್ನು ಯಾರಿಗೆ ಸಲ್ಲಿಸಿದನು?
10, 11. ದಾವೀದನು ಅಸ್ವಸ್ಥನಾದ ಸಮಯವನ್ನು ತಿಳಿಯಲು ನಮಗೆ ಯಾವುದು ಸಹಾಯ ಮಾಡುತ್ತದೆ?
12, 13. (ಎ) ದಾವೀದನು ಯಾವ ಭರವಸೆಯನ್ನು ವ್ಯಕ್ತಪಡಿಸಿದನು? (ಬಿ) ಯೆಹೋವನು ಅವನನ್ನು ಹೇಗೆ ಬಲಪಡಿಸಿರಬೇಕು?
14, 15. ದಾವೀದ ಮತ್ತು ಅವನ ಜನರಿಗೆ ಯಾವಾಗ ಆಹಾರದ ಅಗತ್ಯಬಿತ್ತು, ಮತ್ತು ಅವರಿಗೆ ಯಾವ ಸಹಾಯ ಸಿಕ್ಕಿತು?
16. ದಾವೀದ ಮತ್ತು ಅವನ ಜನರಿಗೆ ಆಹಾರ ಸರಬರಾಯಿ ಸಿಗಲು ಮೂಲತಃ ಯಾರು ಕಾರಣನಾಗಿದ್ದನು?
17. ಯೆಹೋವನು ಏನನ್ನು ಪುನಃ ಪುನಃ ರುಜುಪಡಿಸಿದ್ದಾನೆ?
18. ಹಿಜ್ಕೀಯನ ದಿನಗಳಲ್ಲಿ ಯೆಹೋವನು ಹೇಗೆ ರಕ್ಷಣೆ ಒದಗಿಸಿದನು?
19. ಯಾವ ಎಚ್ಚರಿಕೆಗೆ ಕಿವಿಗೊಡುವ ಮೂಲಕ ಪ್ರಥಮ ಶತಮಾನದ ಕ್ರೈಸ್ತರು ವಿಪತ್ತಿನಿಂದ ಪಾರಾದರು?
20. ಯೆಹೋವನು ನಮ್ಮ “ರಕ್ಷಕ”ನೆಂದು ನಾವೇಕೆ ಭರವಸೆಯಿಡಬಲ್ಲೆವು?
[ಪುಟ 6ರಲ್ಲಿರುವ ಚಿತ್ರ]
ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಉತ್ತರಿಸಿದನು