ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರುಕಟ್ಟೆಯಲ್ಲಿ ಸಾಕ್ಷಿಕಾರ್ಯ

ಮಾರುಕಟ್ಟೆಯಲ್ಲಿ ಸಾಕ್ಷಿಕಾರ್ಯ

ಮಾರುಕಟ್ಟೆಯಲ್ಲಿ ಸಾಕ್ಷಿಕಾರ್ಯ

ಅಪೊಸ್ತಲ ಪೌಲನು ಅಥೇನೆ ಪಟ್ಟಣದಲ್ಲಿದ್ದಾಗ ಯೇಸುವಿನ ಕುರಿತ ಸುವಾರ್ತೆಯನ್ನು ಸಾರಲೆಂದು ಪ್ರತಿ ದಿನ ಪೇಟೆಗೆ ಅಥವಾ ಮಾರುಕಟ್ಟೆಗೆ ಹೋದನು. (ಅ. ಕೃ. 17:17) ಅಥೇನೆಯ ಜನರು ಮಾರುಕಟ್ಟೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದುದ್ದರಿಂದ ಸಾರಲಿಕ್ಕಾಗಿ ಪೌಲನು ಆ ಸ್ಥಳವನ್ನು ಆರಿಸಿದನು.

ಸರಿಸುಮಾರು 2,000 ವರ್ಷಗಳ ಬಳಿಕ ಅಂದರೆ ಈಗಲೂ, ಯೆಹೋವನ ಸಾಕ್ಷಿಗಳು ಮಾರುಕಟ್ಟೆಯಲ್ಲಿ ದೇವರ ರಾಜ್ಯದ ಸಂದೇಶವನ್ನು ಪಸರಿಸುತ್ತಾರೆ. ಏಕೆ? ಏಕೆಂದರೆ ಅಲ್ಲಿ ಅನೇಕ ಜನರನ್ನು ಭೇಟಿಯಾಗಬಹುದು. ಇಂದು ಮಾರುಕಟ್ಟೆಯೆಂದರೆ ಅಂಗಡಿ ಮಳಿಗೆಗಳು ಅಥವಾ ಮಾಲ್‌ಗಳಾಗಿರಬಹುದು. ಅನೇಕ ಸಾಕ್ಷಿಗಳು ಅಂಗಡಿಯ ಮಾಲಿಕನ ಪರವಾನಿಗೆಯನ್ನು ಪಡೆದು ಅವರ ಅಂಗಡಿಯ ಮುಂದೆ ಒಂದು ಮೇಜು ಇಟ್ಟು ಅಥವಾ ಸ್ಟಾಲ್‌ ಹಾಕಿ ಬೈಬಲ್‌ ಸಾಹಿತ್ಯಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ಉದಾಹರಣೆಗೆ ಅಮೆರಿಕದ ನ್ಯೂ ಜೆರ್ಸಿಯ ಒಂದು ಶಾಪಿಂಗ್‌ ಮಾಲ್‌ನಲ್ಲಿ, “ಕೌಟುಂಬಿಕ ಮೌಲ್ಯಗಳನ್ನು ಪಾಲಿಸುವುದು ಹೇಗೆ?” ಎಂಬ ಮುಖ್ಯ ವಿಷಯದ ಮೇಲಾಧರಿತ ಸಾಹಿತ್ಯಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿತ್ತು. ಫಲಿತಾಂಶವೇನು? ಒಂದೇ ದಿನದಲ್ಲಿ, 6 ಭಾಷೆಗಳ 153 ಪುಸ್ತಕಗಳನ್ನು ಜನರಿಗೆ ನೀಡಲಾಯಿತು.

ಸಾಹಿತ್ಯಗಳನ್ನಿಟ್ಟ ಮೇಜಿನ ಕಡೆ ಬಂದ ಒಬ್ಬಾಕೆ ಮಹಿಳೆ ಅಲ್ಲಿದ್ದ ಸಾಕ್ಷಿಯೊಬ್ಬಳು ನೀಡಿದ ವಿವರಣೆಗೆ ಕಿವಿಗೊಟ್ಟು ಕೇಳಿದಳು. ನಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಜೀವನದಲ್ಲಿ ದೇವರ ಚಿತ್ತವನ್ನು ಗಣನೆಗೆ ತೆಗೆದುಕೊಳ್ಳುವುದು ತುಂಬ ಪ್ರಾಮುಖ್ಯ ಎಂಬುದನ್ನು ಆ ಮಹಿಳೆ ಒಪ್ಪಿಕೊಂಡಳು. ಆಕೆ ಈ ಸಾಹಿತ್ಯಗಳನ್ನು ತೆಗೆದುಕೊಂಡಳು: ಮಹಾ ಬೋಧಕನಿಂದ ಕಲಿಯಿರಿ *, ಕುಟುಂಬ ಸಂತೋಷದ ರಹಸ್ಯ, ಮತ್ತು ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು.

ಮಧ್ಯಾಹ್ನ, ಪಕ್ಕದ ಅಂಗಡಿಗೆ ಹೋಗುತ್ತಿದ್ದ ಒಬ್ಬ ವ್ಯಕ್ತಿಯ ಗಮನ ಹರಡಿಸಿಡಲಾಗಿದ್ದ ಪುಸ್ತಕಗಳ ಮೇಲೆ ಹರಿಯಿತು. ಆತನು ಯುವ ಜನರ ಪ್ರಶ್ನೆಗಳು ಎಂಬ ಪುಸ್ತಕವನ್ನೇ ನೋಡುತ್ತಾ ನಿಂತನು. ಮೇಜಿನ ಬಳಿ ನಿಂತಿದ್ದ ಸಹೋದರಿಯು ಆ ವ್ಯಕ್ತಿಯ ಕುತೂಹಲವನ್ನು ಗಮನಿಸಿ, “ನಿಮಗೆ ಯಾವ ಪುಸ್ತಕ ಹಿಡಿಸಿತು?” ಎಂದು ಕೇಳಿದಕ್ಕೆ ಆತನು, ಯುವ ಜನರ ಪ್ರಶ್ನೆಗಳು ಎಂಬ ಪುಸ್ತಕಕ್ಕೆ ಬೆರಳು ತೋರಿಸುತ್ತಾ, ಅದರೆಡೆಗೆ ಕೈಚಾಚಿದನು. ಆಕೆ ಅದನ್ನು ಆತನಿಗೆ ಕೊಟ್ಟಳು. ಮಾತು ಮುಂದುವರಿದಂತೆ, ಆತನಿಗೆ ಮೂವರು ಗಂಡುಮಕ್ಕಳಿದ್ದಾರೆಂದೂ ಅವರೊಂದಿಗೆ ತಾನು ವಾರದಲ್ಲೊಮ್ಮೆ ಕೂತು ಚರ್ಚೆ ಮಾಡುತ್ತೇನೆಂದೂ ಆತನು ಹೇಳಿದನು. ಆತನ ಇಬ್ಬರು ಹಿರೀಮಕ್ಕಳು ಈಗಾಗಲೇ ಹದಿವಯಸ್ಕರಾಗಿದ್ದರು. ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತಿದ್ದಂತೆ, ತನ್ನ ಕುಟುಂಬದ ಚರ್ಚೆಗಳನ್ನು ನಡೆಸಲು ಈ ಪುಸ್ತಕವನ್ನು ಒಂದು ಮಾರ್ಗದರ್ಶಿಯಾಗಿ ಬಳಸಬಹುದೆಂದು ಆತನು ಹೇಳಿದನು. ಆತನ ಗಮನವನ್ನು ಆ ಪ್ರಚಾರಕಳು, ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕಕ್ಕೆ ತಿರುಗಿಸುತ್ತಾ, ಈ ಪುಸ್ತಕವು ಆತನಿಗೆ ಮತ್ತು ಆತನ ಪತ್ನಿಗೆ ಕೌಟುಂಬಿಕ ನಿರ್ಣಯಗಳನ್ನು ಮಾಡಲು ನೆರವಾಗುವುದೆಂದು ಹೇಳಿದಳು. ಇದನ್ನು ಕೇಳಿ ಆ ವ್ಯಕ್ತಿಗೆ ತುಂಬ ಸಂತೋಷವಾಯಿತು. ಕೃತಜ್ಞತೆ ವ್ಯಕ್ತಪಡಿಸುತ್ತಾ ಆತನು ಆ ಪುಸ್ತಕಗಳಿಗೆ ಕಾಣಿಕೆ ಕೊಟ್ಟನು. ಈ ವಿಷಯದ ಕುರಿತು ಮಾತಾಡಲು ಯಾರಾದರೂ ನಿಮ್ಮ ಮನೆಗೆ ಬರಬಹುದೇ ಎಂದು ಸಹೋದರಿ ಕೇಳಿದ್ದಕ್ಕೆ ಆತನು ಸಮ್ಮತಿಸಿದನು.

ಮಾಲ್‌ನಲ್ಲಿ ಇಡೀ ದಿನ ಸಾಕ್ಷಿಕಾರ್ಯ ಮಾಡಿದ ಆ ಪ್ರಚಾರಕರಿಗೆ ಹೇಗನಿಸಿತು? ಒಬ್ಬಾಕೆ ಸಹೋದರಿ ಹೇಳಿದ್ದು: “ಈ ರೀತಿಯ ಸಾಕ್ಷಿಕಾರ್ಯವನ್ನು ನಾನು ತುಂಬ ಆನಂದಿಸಿದೆ. ಅದೊಂದು ಸೊಗಸಾದ ಅನುಭವವಾಗಿತ್ತು!” ಇನ್ನೊಬ್ಬಳು ಸಹೋದರಿ ಹೇಳಿದ್ದು: “ಸುವಾರ್ತೆಯನ್ನು ಭೂಮಿಯ ಕಟ್ಟಕಡೆಯವರೆಗೂ ಸಾರಲಾಗುವುದೆಂದು ಯೆಹೋವನು ಹೇಳುತ್ತಾನೆ. ಇಂದು ನ್ಯೂ ಜೆರ್ಸಿಯ ಪರಮಸ್‌ನಲ್ಲಿ ಈ ಸುವಾರ್ತೆಯು ವಿಭಿನ್ನ ಭಾಷೆಗಳ ಜನರಿಗೆ ಮುಟ್ಟಿದೆ. ಈ ರೀತಿಯ ಸಾಕ್ಷಿಕಾರ್ಯದಲ್ಲಿ ಭಾಗವಹಿಸಿದ್ದು ನಿಜಕ್ಕೂ ಅಪೂರ್ವವಾಗಿತ್ತು. ಪಾಲ್ಗೊಂಡ ಎಲ್ಲರಿಗೂ ಖುಷಿಯಾಯಿತು. ಸಾಯಂಕಾಲ ಮನೆಗೆ ಹೋಗಲು ಯಾರಿಗೂ ಮನಸ್ಸಿರಲಿಲ್ಲ.”

ನೀವು ಸುವಾರ್ತೆಯನ್ನು ಬೇರೆ ಬೇರೆ ವಿಧಾನಗಳಲ್ಲಿ ಸಾರಬಲ್ಲಿರಾ? ನಮ್ಮ ಪ್ರಮುಖ ವಿಧಾನವು ಮನೆಮನೆಯ ಸಾಕ್ಷಿಕಾರ್ಯ ಆಗಿದೆ ನಿಜ. (ಅ. ಕೃ. 20:20) ಹಾಗಿದ್ದರೂ ಮಾರುಕಟ್ಟೆಯಲ್ಲಿ ಅಥವಾ ಮಾಲ್‌ಗಳಲ್ಲಿ ಸಾಕ್ಷಿನೀಡುವುದರ ಬಗ್ಗೆ ನೀವು ಯೋಚಿಸಬಾರದೇಕೆ?

[ಪಾದಟಿಪ್ಪಣಿ]

^ ಪ್ಯಾರ. 5 ಕನ್ನಡದಲ್ಲಿ ಲಭ್ಯವಿಲ್ಲ.