ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವನ್ನು ಅನುಕರಿಸುತ್ತಾ ದೇವರಿಗೆ ಸ್ವೀಕರಣೀಯವಾದ ಆರಾಧನೆ ಸಲ್ಲಿಸಿ

ಯೇಸುವನ್ನು ಅನುಕರಿಸುತ್ತಾ ದೇವರಿಗೆ ಸ್ವೀಕರಣೀಯವಾದ ಆರಾಧನೆ ಸಲ್ಲಿಸಿ

ಯೇಸುವನ್ನು ಅನುಕರಿಸುತ್ತಾ ದೇವರಿಗೆ ಸ್ವೀಕರಣೀಯವಾದ ಆರಾಧನೆ ಸಲ್ಲಿಸಿ

‘ಸಕಲ ಜನಾಂಗಕುಲ ಪ್ರಜೆಗಳವರು ಮತ್ತು ಸಕಲಭಾಷೆಗಳನ್ನಾಡುವವರು’ ತನ್ನನ್ನು ಆರಾಧಿಸುವಂತೆ ದೇವರು ಪ್ರೀತಿಯಿಂದ ಆಮಂತ್ರಿಸುತ್ತಾನೆ. (ಪ್ರಕ. 7:9, 10; 15:3, 4) ಈ ಆಮಂತ್ರಣಕ್ಕೆ ಓಗೊಡುವವರು ‘ಆತನ ಪ್ರಸನ್ನತೆಯನ್ನು ನೋಡುವದಕ್ಕೆ’ ಶಕ್ತರಾಗುತ್ತಾರೆ. (ಕೀರ್ತ. 27:4; 90:17) ಕೀರ್ತನೆಗಾರನಂತೆ ಅವರು ಧ್ವನಿಯೆತ್ತಿ ದೇವರಿಗೆ ಹೀಗೆ ಸ್ತುತಿ ಹಾಡುತ್ತಾರೆ: “ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ.”—ಕೀರ್ತ. 95:6.

ಯೆಹೋವನಿಗೆ ಅತ್ಯಮೂಲ್ಯವಾದ ಆರಾಧನೆ

ದೇವರ ಏಕಜಾತ ಪುತ್ರನಾದ ಯೇಸುವಿಗೆ, ತನ್ನ ತಂದೆಯ ಆಲೋಚನಾರೀತಿ, ಮೂಲತತ್ತ್ವಗಳು ಹಾಗೂ ಮಟ್ಟಗಳನ್ನು ಕಲಿಯಲು ಬಹಳಷ್ಟು ಅವಕಾಶಗಳಿದ್ದವು. ಆದುದರಿಂದಲೇ ಸತ್ಯರಾಧನೆಯ ಮಾರ್ಗ ಯಾವುದೆಂಬುದನ್ನು ಯೇಸು ತುಂಬು ಭರವಸೆಯಿಂದ ತಿಳಿಸಸಾಧ್ಯವಿತ್ತು. ಅವನಂದದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.”—ಯೋಹಾ. 1:14; 14:6.

ಯೇಸು ತನ್ನ ತಂದೆಗೆ ದೀನತೆಯಿಂದ ಅಧೀನನಾಗುವ ವಿಷಯದಲ್ಲಿ ಪರಿಪೂರ್ಣ ಮಾದರಿಯನ್ನಿಟ್ಟನು. ಅವನು ಹೇಳಿದ್ದು: ‘ನನ್ನಷ್ಟಕ್ಕೆ ನಾನೇ ಏನೂ ಮಾಡದೆ ತಂದೆಯು ನನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದ್ದೇನೆ.’ ನಂತರ ಅವನು ಕೂಡಿಸಿ ಹೇಳಿದ್ದು: ‘ನಾನು ಆತನಿಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುತ್ತೇನೆ.’ (ಯೋಹಾ. 8:28, 29) ಯೇಸು ಯಾವ ವಿಧಗಳಲ್ಲಿ ತನ್ನ ತಂದೆಯನ್ನು ಮೆಚ್ಚಿಸಿದನು?

ಆತನು ಮಾಡಿದ ಒಂದು ವಿಷಯವೇನೆಂದರೆ, ತನ್ನನ್ನೇ ತಂದೆಗೆ ಪೂರ್ಣವಾಗಿ ಅರ್ಪಿಸಿಕೊಂಡನು. ದೇವರನ್ನು ಆರಾಧಿಸುವುದರ ಸಾರ ಇದೇ ಆಗಿದೆ. ತನ್ನ ತಂದೆಗೆ ವಿಧೇಯನಾಗಿರುವ ಮೂಲಕ ಮತ್ತು ವೈಯಕ್ತಿಕ ತ್ಯಾಗಗಳನ್ನು ಮಾಡಬೇಕಾಗಿರುವಾಗಲೂ ಆತನ ಚಿತ್ತವನ್ನು ಮಾಡುವ ಮೂಲಕ ಆತನೊಂದಿಗೆ ತನಗಿದ್ದ ಆಪ್ತ ಬಂಧವನ್ನು ತೋರಿಸಿದನು. (ಫಿಲಿ. 2:7, 8) ಯೇಸುವಿನ ಆರಾಧನೆಯ ಒಂದು ಮುಖ್ಯ ಅಂಶವು, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದೇ ಆಗಿತ್ತು. ಅದನ್ನು ಎಷ್ಟರ ಮಟ್ಟಿಗೆ ಮಾಡಿದನೆಂದರೆ, ವಿಶ್ವಾಸಿಗಳು ಮಾತ್ರವಲ್ಲ ಅವಿಶ್ವಾಸಿ ಜನರು ಸಹ ಅವನನ್ನು ಗುರು ಅಥವಾ ಬೋಧಕ ಎಂದು ಕರೆದರು. (ಮತ್ತಾ. 22:23, 24; ಯೋಹಾ. 3:2) ಅಷ್ಟುಮಾತ್ರವಲ್ಲದೆ ಯೇಸು ಇತರರಿಗೆ ಸಹಾಯಮಾಡಲು ತನ್ನ ಶಕ್ತಿಸಾಮರ್ಥ್ಯ ಹಾಗೂ ಸಮಯವನ್ನು ವಿನಿಯೋಗಿಸಿದನು. ಅವನಲ್ಲಿ ಸ್ವತ್ಯಾಗದ ಮನೋಭಾವವಿದ್ದ ಕಾರಣ, ತನಗಾಗಿ ಎಂದು ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಹಾಗಿದ್ದರೂ ಇತರರ ಸೇವೆಮಾಡುವುದರಲ್ಲಿ ಅವನು ಸಂತೋಷ ಕಂಡುಕೊಂಡನು. (ಮತ್ತಾ. 14:13, 14; 20:28) ಕಾರ್ಯಮಗ್ನನಾಗಿದ್ದರೂ ಯೇಸು ಪ್ರಾರ್ಥನೆಯ ಮೂಲಕ ತನ್ನ ಸ್ವರ್ಗೀಯ ಪಿತನೊಂದಿಗೆ ಮಾತಾಡಲು ಯಾವಾಗಲೂ ಸಮಯ ಮಾಡಿಕೊಂಡನು. (ಲೂಕ 6:12) ಯೇಸು ಸಲ್ಲಿಸಿದ ಆರಾಧನೆ ದೇವರಿಗೆ ಎಷ್ಟು ಅತ್ಯಮೂಲ್ಯವಾಗಿತ್ತು!

ದೇವರನ್ನು ಮೆಚ್ಚಿಸಲು ಪ್ರಯಾಸ

ಯೆಹೋವನು ತನ್ನ ಪುತ್ರನ ನಡತೆಯನ್ನು ಗಮನಿಸಿ ತನ್ನ ಮೆಚ್ಚುಗೆ ವ್ಯಕ್ತಪಡಿಸಿದನು. (ಮತ್ತಾ. 17:5) ಪಿಶಾಚನಾದ ಸೈತಾನನು ಸಹ ಯೇಸುವಿನ ನಂಬಿಗಸ್ತ ಜೀವನಕ್ರಮವನ್ನು ಗಮನಿಸಿದನು. ಈ ಕಾರಣದಿಂದ ಯೇಸು, ಸೈತಾನನ ವಿಶೇಷ ಗುರಿಹಲಗೆಯಾದನು. ಏಕೆ? ಏಕೆಂದರೆ ಈ ವರೆಗೆ ಯಾವ ಮಾನವನೂ ದೇವರಿಗೆ ಪೂರ್ಣ ವಿಧೇಯತೆ ತೋರಿಸುವ ಮೂಲಕ ಆತನನ್ನು ಪರಿಪೂರ್ಣ ರೀತಿಯಲ್ಲಿ ಆರಾಧಿಸಿರಲಿಲ್ಲ. ಈಗಲಾದರೋ ಯೆಹೋವನಿಗೆ ಸಲ್ಲತಕ್ಕ ಆರಾಧನೆಯನ್ನು ಯೇಸು ಸಲ್ಲಿಸುತ್ತಿದ್ದದರಿಂದ, ಅದನ್ನು ತಡೆಯುವುದೇ ಸೈತಾನನ ಧ್ಯೇಯವಾಗಿತ್ತು.—ಪ್ರಕ. 4:11.

ಯೇಸುವನ್ನು ಭ್ರಷ್ಟಗೊಳಿಸಲೆಂದು ಸೈತಾನನು ಅವನಿಗೊಂದು ಆಮಿಷವೊಡ್ಡಿದನು. ಅವನು ಯೇಸುವನ್ನು “ಬಹಳ ಎತ್ತರವಾದ ಬೆಟ್ಟಕ್ಕೆ ಕರಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ”ದನು. ನಂತರ ಅವನು ಹೇಳಿದ್ದು: “ನೀನು ನನಗೆ ಸಾಷ್ಟಾಂಗನಮಸ್ಕಾರ ಮಾಡಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು.” ಇದಕ್ಕೆ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಅವನಂದದ್ದು: “ಸೈತಾನನೇ, ನೀನು ತೊಲಗಿ ಹೋಗು, ನಿನ್ನ ದೇವರಾಗಿರುವ ಕರ್ತನಿಗೆ [“ಯೆಹೋವನಿಗೆ,” NW] ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.” (ಮತ್ತಾ. 4:8-10) ಹೌದು, ಎಷ್ಟೇ ಲಾಭ ಸಿಗಲಿ, ಸೈತಾನನಿಗೆ ಅಡ್ಡಬೀಳುವುದು ವಿಗ್ರಹಾರಾಧನೆಗೆ ಸಮವೆಂದು ಯೇಸು ಗ್ರಹಿಸಿದನು. ಯೆಹೋವನನ್ನು ಬಿಟ್ಟರೆ ಬೇರಾರನ್ನೂ ಒಮ್ಮೆ ಕೂಡ ಆರಾಧಿಸಲು ಆತನು ಸಿದ್ಧನಿರಲಿಲ್ಲ.

ನಮಗಾದರೋ ನಮ್ಮ ಆರಾಧನೆಯ ವಿನಿಮಯದಲ್ಲಿ ಸೈತಾನನು ಈ ಲೋಕದ ಎಲ್ಲ ರಾಜ್ಯಗಳನ್ನೂ ಅವುಗಳ ಮಹಿಮೆಯನ್ನೂ ನೀಡಲಿಕ್ಕಿಲ್ಲ. ಆದರೆ ಆತನು, ಪ್ರಾಮಾಣಿಕ ಕ್ರೈಸ್ತರು ದೇವರಿಗೆ ಆರಾಧನೆ ಸಲ್ಲಿಸುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾನೆ. ನಾವು ಇನ್ನಾರನ್ನೋ ಇನ್ನಾವುದನ್ನೋ ಆರಾಧಿಸಬೇಕೆಂಬುದೇ ಪಿಶಾಚನ ಆಸೆ.—2 ಕೊರಿಂ. 4:4.

ಕ್ರಿಸ್ತ ಯೇಸು ಮರಣಪರ್ಯಂತರವೂ ನಂಬಿಗಸ್ತನಾಗಿದ್ದನು. ಯೇಸು ಸಮಗ್ರತೆಯನ್ನು ಕಾಪಾಡಿ ಯೆಹೋವನನ್ನು ಘನಪಡಿಸಿದ ರೀತಿಯಲ್ಲಿ ಬೇರಾವ ಮಾನವನೂ ಘನಪಡಿಸಿರಲಿಲ್ಲ. ಇಂದು ಸತ್ಕ್ರೈಸ್ತರಾಗಿರುವ ನಾವು, ಸೃಷ್ಟಿಕರ್ತನ ಆರಾಧನೆಯನ್ನು ಬೇರೆಲ್ಲದ್ದಕ್ಕಿಂತಲೂ ಮುಂದಾಗಿರಿಸುವ ಮೂಲಕ ಯೇಸುವಿನ ನಂಬಿಗಸ್ತ ಮಾರ್ಗಕ್ರಮವನ್ನು ಅನುಸರಿಸಲು ಪ್ರಯತ್ನಿಸುತ್ತೇವೆ. ಖಂಡಿತವಾಗಿಯೂ, ದೇವರೊಂದಿಗಿನ ಒಳ್ಳೇ ಸಂಬಂಧವು ನಮ್ಮ ಅತ್ಯಮೂಲ್ಯ ಸ್ವತ್ತಾಗಿದೆ.

ಸ್ವೀಕರಣೀಯ ಆರಾಧನೆ ಸಲ್ಲಿಸುವುದರ ಆಶೀರ್ವಾದಗಳು

ದೇವರ ದೃಷ್ಟಿಯಲ್ಲಿ “ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ” ಇಲ್ಲವೇ ಆರಾಧನೆಯನ್ನು ಸಲ್ಲಿಸುವುದರಿಂದ ಅನೇಕ ಆಶೀರ್ವಾದಗಳು ಸಿಗುತ್ತವೆ. (ಯಾಕೋ. 1:27) ಉದಾಹರಣೆಗೆ, ನಾವೀಗ ಜೀವಿಸುತ್ತಿರುವ ಕಾಲದಲ್ಲಿ ಹೆಚ್ಚೆಚ್ಚು ಜನರು “ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿ ಕೊಚ್ಚುವವರೂ . . . ಒಳ್ಳೇದನ್ನು ಪ್ರೀತಿಸದವರೂ” ಆಗಿದ್ದಾರೆ. (2 ತಿಮೊ. 3:1-5) ಆದರೆ ದೇವರ ಮನೆವಾರ್ತೆಯಲ್ಲಿರುವ ನಮಗೆ, ಆರಾಧನೆಯಲ್ಲಿ ದೇವರ ಮಟ್ಟಗಳನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಿರುವ ಶುದ್ಧ ಮತ್ತು ಒಳ್ಳೇ ಜನರೊಂದಿಗೆ ಸಹವಸಿಸುವ ಸುಯೋಗವಿದೆ. ಇಂಥ ಸಹವಾಸವು ನಮಗೆ ಚೈತನ್ಯದ ಬುಗ್ಗೆಯಂತಿದೆ ಅಲ್ಲವೇ?

ಲೋಕದಿಂದ ಕಳಂಕರಹಿತರಾಗಿ ಉಳಿಯುವುದರಿಂದ ನಮಗೊಂದು ಶುದ್ಧ ಮನಸ್ಸಾಕ್ಷಿಯಿದೆ. ಇದು ಇನ್ನೊಂದು ಆಶೀರ್ವಾದ. ದೇವರ ನೀತಿಯ ಮೂಲತತ್ತ್ವಗಳನ್ನು ಪಾಲಿಸುವ ಮತ್ತು ದೇವರ ನಿಯಮಗಳೊಂದಿಗೆ ಘರ್ಷಿಸದ ಕೈಸರನ ನಿಯಮಗಳಿಗೆ ವಿಧೇಯರಾಗುವ ಮೂಲಕ ನಾವು ಶುದ್ಧ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಬಲ್ಲೆವು.—ಮಾರ್ಕ 12:17; ಅ. ಕೃ. 5:27-29.

ಪೂರ್ಣ ಪ್ರಾಣದ ಆರಾಧನೆಯು ಇನ್ನಿತರ ಆಶೀರ್ವಾದಗಳನ್ನು ತರುತ್ತದೆ. ನಮ್ಮ ಸ್ವಂತ ಚಿತ್ತವನ್ನಲ್ಲ ಬದಲಾಗಿ ದೇವರ ಚಿತ್ತವನ್ನು ಮಾಡುವುದರ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವಾಗ, ನಮ್ಮ ಜೀವನವು ಅರ್ಥಭರಿತವೂ ತೃಪ್ತಿದಾಯಕವೂ ಆಗುತ್ತದೆ. “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂದು ಹೇಳುವ ಬದಲಿಗೆ, ನಮಗೆ ಭೂಪರದೈಸಿನಲ್ಲಿ ನಿತ್ಯಜೀವವೆಂಬ ಭರವಸಾರ್ಹ ನಿರೀಕ್ಷೆಯಿದೆ.—1 ಕೊರಿಂ. 15:32.

ಯೆಹೋವನ ಮುಂದೆ ಶುದ್ಧ ನಿಲುವನ್ನು ಕಾಪಾಡಿಕೊಂಡವರು ‘ಮಹಾ ಸಂಕಟದಿಂದ ಹೊರಬರುವ’ ಸಮಯದ ಬಗ್ಗೆ ಪ್ರಕಟನೆ ಪುಸ್ತಕವು ತಿಳಿಸುತ್ತದೆ. “ಸಿಂಹಾಸನದ ಮೇಲೆ ಕೂತಿರುವಾತನು ತನ್ನ ಗುಡಾರವನ್ನು ಅವರ ಮೇಲೆ ವಿಸ್ತರಿಸುವನು” ಎಂದು ಆ ವೃತ್ತಾಂತ ಹೇಳುತ್ತದೆ. (ಪ್ರಕ. 7:13-15, NIBV) ಸಿಂಹಾಸನದ ಮೇಲೆ ಕೂತಿರುವಾತನು ಇಡೀ ವಿಶ್ವದಲ್ಲೇ ಅತಿ ಮಹಿಮಾನ್ವಿತ ವ್ಯಕ್ತಿಯಾದ ಯೆಹೋವ ದೇವರು. ಸ್ವಲ್ಪ ಯೋಚಿಸಿ: ಆತನು ನಿಮ್ಮನ್ನು ತನ್ನ ಗುಡಾರದಲ್ಲಿ ಅತಿಥಿಯಾಗಿ ಸ್ವಾಗತಿಸಿ, ನಿಮಗೆ ಯಾವ ಹಾನಿಯೂ ಆಗದಂತೆ ಸಂರಕ್ಷಿಸುವಾಗ ಎಷ್ಟು ಒಳ್ಳೇದಾಗಿರುವುದು! ಆತನ ಸಂರಕ್ಷಣೆ ಹಾಗೂ ಆರೈಕೆಯನ್ನು ನಾವು ಈಗಲೂ ಸ್ವಲ್ಪಮಟ್ಟಿಗೆ ಅನುಭವಿಸಬಲ್ಲೆವು.

ಅಷ್ಟುಮಾತ್ರವಲ್ಲದೆ, ದೇವರಿಗೆ ಸ್ವೀಕರಣೀಯವಾದ ಆರಾಧನೆಯನ್ನು ಸಲ್ಲಿಸುವವರೆಲ್ಲರು “ಜೀವಜಲದ ಒರತೆಗಳ ಬಳಿ” ನಡೆಸಲ್ಪಡುವರೆಂದೂ ಹೇಳಲಾಗಿದೆ. ಈ ಚೇತೋಹಾರಿ ಒರತೆಗಳು ನಾವು ನಿತ್ಯಜೀವ ಪಡೆಯುವಂತೆ ಯೆಹೋವನು ಮಾಡುವ ಎಲ್ಲ ಒದಗಿಸುವಿಕೆಗಳನ್ನು ಪ್ರತಿನಿಧಿಸುತ್ತವೆ. ಹೌದು, ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದ ಮೂಲಕ “ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” (ಪ್ರಕ. 7:17) ಮಾನವಕುಲವನ್ನು ಪುನಃ ಪರಿಪೂರ್ಣತೆಗೆ ಏರಿಸಲಾಗುವುದು, ಮತ್ತು ಆಗ ಭೂಮಿಯ ಮೇಲೆ ಸದಾಕಾಲ ಜೀವಿಸುವ ಪ್ರತೀಕ್ಷೆಯುಳ್ಳವರ ಆನಂದಕ್ಕೆ ಪಾರವೇ ಇರದು. ಈಗಲೂ ಯೆಹೋವನ ಸಂತೋಷಭರಿತ ಆರಾಧಕರು ಆತನಿಗೆ ಹೃತ್ಪೂರ್ವಕ ಗಣ್ಯತೆ ವ್ಯಕ್ತಪಡಿಸುತ್ತಾ ಆನಂದದಿಂದ ಧ್ವನಿಗೈಯುತ್ತಾರೆ ಮತ್ತು ಪರಲೋಕದಲ್ಲಿರುವವರೊಂದಿಗೆ ಆರಾಧನೆಯಲ್ಲಿ ಜೊತೆಗೂಡುತ್ತಾರೆ. ಪರಲೋಕದಲ್ಲಿರುವವರು ಹೀಗೆ ಹಾಡುತ್ತಾರೆ: “ದೇವರಾದ ಕರ್ತನೇ, ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ; ಕರ್ತನೇ, ನಿನ್ನ ನಾಮಕ್ಕೆ ಭಯಪಡದವರೂ ಅದನ್ನು ಘನವಾದದ್ದೆಂದು ಒಪ್ಪಿಕೊಳ್ಳದವರೂ ಯಾರಾದರೂ ಇದ್ದಾರೇ? ನೀನೊಬ್ಬನೇ ಪರಿಶುದ್ಧನು; ನಿನ್ನ ನೀತಿಯುಳ್ಳ ಕೃತ್ಯಗಳು ಪ್ರಕಾಶಕ್ಕೆ ಬಂದದರಿಂದ ಎಲ್ಲಾ ಜನಾಂಗಗಳು ಬಂದು ನಿನ್ನ ಸನ್ನಿಧಾನದಲ್ಲಿ ನಮಸ್ಕಾರ ಮಾಡುವರು.”—ಪ್ರಕ. 15:3, 4.

[ಪುಟ 27ರಲ್ಲಿರುವ ಚಿತ್ರ]

ನಮ್ಮ ಆರಾಧನೆಯ ವಿನಿಮಯದಲ್ಲಿ ಸೈತಾನನು ಏನು ನೀಡುತ್ತಿದ್ದಾನೆ?