ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತೀತ, ಫಿಲೆಮೋನ ಮತ್ತು ಇಬ್ರಿಯರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ತೀತ, ಫಿಲೆಮೋನ ಮತ್ತು ಇಬ್ರಿಯರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ತೀತ, ಫಿಲೆಮೋನ ಮತ್ತು ಇಬ್ರಿಯರಿಗೆ ಬರೆದ ಪತ್ರಗಳ ಮುಖ್ಯಾಂಶಗಳು

ಅಪೊಸ್ತಲ ಪೌಲನು ರೋಮ್‌ನಲ್ಲಿ ತನ್ನ ಪ್ರಥಮ ಸೆರೆವಾಸದಿಂದ ಸಾ.ಶ. 61ರಲ್ಲಿ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ ಕ್ರೇತದ್ವೀಪವನ್ನು ಸಂದರ್ಶಿಸುತ್ತಾನೆ. ಅಲ್ಲಿನ ಸಭೆಗಳವರು ಯೆಹೋವನೊಂದಿಗಿನ ಸಂಬಂಧವನ್ನು ಬಲಪಡಿಸಬೇಕೆಂಬುದನ್ನು ಮನಗಂಡ ಪೌಲನು ತೀತನನ್ನು ಅಲ್ಲೇ ಉಳಿದುಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಅನಂತರ ತೀತನಿಗೆ ಅವನ ಕರ್ತವ್ಯಗಳ ಬಗ್ಗೆ ನಿರ್ದೇಶನಗಳನ್ನು ಕೊಡಲು ಮತ್ತು ಆ ಕೆಲಸವನ್ನು ಮಾಡಲು ಅವನು ಅಪೊಸ್ತಲ ಪೌಲನಿಂದ ಅಧಿಕಾರ ಪಡೆದಿದ್ದಾನೆಂಬದನ್ನು ತೋರಿಸಲು ಪೌಲನು ಬಹುಶಃ ಮಕೆದೋನ್ಯದಿಂದ ಪತ್ರ ಬರೆಯುತ್ತಾನೆ.

ಈ ಮುಂಚೆ ಅಂದರೆ ಸಾ.ಶ. 61ರಲ್ಲಿ ಸೆರೆಯಿಂದ ಬಿಡುಗಡೆಯಾಗುವ ತುಸು ಮೊದಲು ಪೌಲನು ಕೊಲೊಸ್ಸೆಯಲ್ಲಿ ಜೀವಿಸುತ್ತಿದ್ದ ಕ್ರೈಸ್ತ ಸಹೋದರನಾದ ಫಿಲೆಮೋನನಿಗೆ ಪತ್ರ ಬರೆದನು. ಇದೊಂದು ಸ್ನೇಹಿತನಿಗೆ ಮಾಡಿದ ವೈಯಕ್ತಿಕ ವಿಜ್ಞಾಪನೆಯಾಗಿತ್ತು.

ಅಲ್ಲದೇ ಸಾ.ಶ. 61ರ ಸುಮಾರಿಗೆ ಪೌಲನು ಯೂದಾಯದಲ್ಲಿದ್ದ ಇಬ್ರಿಯ ವಿಶ್ವಾಸಿಗಳಿಗೂ ಪತ್ರವೊಂದನ್ನು ಬರೆದನು. ಅದರಲ್ಲಿ, ಯೆಹೂದಿ ವ್ಯವಸ್ಥೆಗಿಂತ ಕ್ರೈಸ್ತತ್ವ ಶ್ರೇಷ್ಠವೆಂಬುದನ್ನು ತೋರಿಸಲಾಗಿದೆ. ಈ ಮೂರೂ ಪತ್ರಗಳಲ್ಲಿ ನಮಗಾಗಿ ಅಮೂಲ್ಯ ಸಲಹೆಯಿದೆ.—ಇಬ್ರಿ. 4:12.

ಆಧ್ಯಾತ್ಮಿಕವಾಗಿ ಸ್ವಸ್ಥರಾಗಿ ಉಳಿಯಿರಿ

(ತೀತ 1:1–3:15)

‘ಪಟ್ಟಣಪಟ್ಟಣಗಳಲ್ಲೂ ಸಭೆಯ ಹಿರಿಯರನ್ನು ನೇಮಿಸುವ’ ಕುರಿತು ನಿರ್ದೇಶನ ಕೊಟ್ಟ ನಂತರ “ಕ್ರಿಸ್ತನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು [ಅಧಿಕಾರಕ್ಕೆ ಒಳಗಾಗದವರನ್ನು] ಕಠಿಣವಾಗಿ ಖಂಡಿಸು”ವಂತೆ ಪೌಲನು ತೀತನಿಗೆ ಸಲಹೆ ನೀಡಿದನು. ಅವನು ಕ್ರೇತದ ಸಭೆಗಳಲ್ಲಿರುವ ಎಲ್ಲರಿಗೆ ‘ಭಕ್ತಿಹೀನತೆಯನ್ನು ವಿಸರ್ಜಿಸಿ ಸ್ವಸ್ಥ ಚಿತ್ತರಾಗಿ ಬದುಕುವಂತೆ’ ಬುದ್ಧಿವಾದ ಹೇಳಿದನು.—ತೀತ 1:5, 10-13; 2:12.

ಆಧ್ಯಾತ್ಮಿಕವಾಗಿ ಸ್ವಸ್ಥರಾಗಿರುವಂತೆ ಸಹಾಯ ಮಾಡಲು ಪೌಲನು ಕ್ರೇತದ ಸಹೋದರರಿಗೆ ಇನ್ನಷ್ಟು ಸಲಹೆ ಕೊಡುತ್ತಾನೆ. ಅವನು ತೀತನಿಗೆ, “ಬುದ್ಧಿಯಿಲ್ಲದ ವಿತರ್ಕಗಳಿಗೂ ... ಧರ್ಮಶಾಸ್ತ್ರದ ವಿಷಯವಾದ ವಾಗ್ವಾದಗಳಿಗೂ ದೂರವಾಗಿರು” ಎಂಬದಾಗಿ ಹೇಳುತ್ತಾನೆ.—ತೀತ 3:9.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:15“ಶುದ್ಧರಿಗೆ ಎಲ್ಲವೂ ಶುದ್ಧ” ಆದರೆ “ಮಲಿನವಾದವರಿಗೂ ನಂಬಿಕೆಯಿಲ್ಲದವರಿಗೂ” ಯಾವುದೂ ಶುದ್ಧವಲ್ಲ, ಹೇಗೆ? ನಾವು ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಪೌಲನು “ಎಲ್ಲವೂ” ಎಂದಾಗ ಅದರ ಅರ್ಥವೇನಾಗಿತ್ತು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ದೇವರ ಲಿಖಿತ ವಾಕ್ಯವು ನೇರವಾಗಿ ಖಂಡಿಸುವಂಥ ವಿಷಯಗಳ ಬಗ್ಗೆ ಅವನು ಹೇಳುತ್ತಿರಲಿಲ್ಲ. ಬದಲಿಗೆ ವಿಶ್ವಾಸಿಗಳು ತಮ್ಮ ಮನಸ್ಸಾಕ್ಷಿಗೆ ಹೊಂದಿಕೆಯಲ್ಲಿ ನಿರ್ಣಯ ಮಾಡಬಹುದಾದ ವಿಷಯಗಳ ಬಗ್ಗೆ ಹೇಳುತ್ತಿದ್ದನು. ವ್ಯಕ್ತಿಯೊಬ್ಬನ ಯೋಚನೆಗಳು ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿರುವಾಗ ಅಂಥ ವಿಷಯಗಳು ಅವನಿಗೆ ಶುದ್ಧವಾಗಿರುತ್ತವೆ. ಯಾರ ಯೋಚನೆಗಳು ತಪ್ಪಾಗಿರುತ್ತವೋ ಮತ್ತು ಮನಸ್ಸಾಕ್ಷಿ ಮಲಿನವಾಗಿರುತ್ತದೋ ಅಂಥವನಿಗೆ ಅವು ಅಶುದ್ಧವಾಗಿವೆ. *

3:5—ಅಭಿಷಿಕ್ತ ಕ್ರೈಸ್ತರುಸ್ನಾನದ ಮೂಲಕ ರಕ್ಷಿಸಲ್ಪಟ್ಟಿರುವುದುಮತ್ತುಪವಿತ್ರಾತ್ಮ ಅವರಲ್ಲಿ ನೂತನಸ್ವಭಾವ ಉಂಟುಮಾಡುವುದುಅಥವಾ ಅವರು ಪವಿತ್ರಾತ್ಮದಿಂದ ನೂತನರಾಗುವುದು ಹೇಗೆ? ದೇವರು ಅವರನ್ನು ವಿಮೋಚನಾ ಮೌಲ್ಯದ ಯಜ್ಞದ ಆಧಾರದ ಮೇಲೆ ಯೇಸುವಿನ ರಕ್ತದಿಂದ ಶುದ್ಧೀಕರಿಸಿರುವ ಕಾರಣ ಅವರು ಸ್ನಾನದ ಮೂಲಕ ರಕ್ಷಿಸಲ್ಪಟ್ಟಿದ್ದಾರೆ. ಅವರು ದೇವರ ಆತ್ಮಜನಿತ ಪುತ್ರರೋಪಾದಿ “ನೂತನಸೃಷ್ಟಿ” ಆಗಿರುವುದರಿಂದ ಅವರು ಪವಿತ್ರಾತ್ಮದಿಂದ ನೂತನರಾಗಿದ್ದಾರೆ.—2 ಕೊರಿಂ. 5:17.

ನಮಗಾಗಿರುವ ಪಾಠಗಳು:

1:10-13; 2:15. ಕ್ರೈಸ್ತ ಮೇಲ್ವಿಚಾರಕರು ಸಭೆಯಲ್ಲಿನ ತಪ್ಪುಗಳನ್ನು ಧೈರ್ಯದಿಂದ ಸರಿಪಡಿಸಬೇಕು.

2:3-5. ಪ್ರಥಮ ಶತಮಾನದಲ್ಲಿದ್ದಂತೆ ಇಂದು ಪ್ರೌಢ ಕ್ರೈಸ್ತ ಸಹೋದರಿಯರು ‘ಚಾಡಿಹೇಳುವವರೂ ಮದ್ಯಕ್ಕೆ ಗುಲಾಮರೂ ಆಗಿರದೆ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ ಸದ್ಬೋಧನೆ ಹೇಳುವವರೂ ಆಗಿರಬೇಕು.’ ಈ ರೀತಿಯಲ್ಲಿ ಅವರು ಸಭೆಯಲ್ಲಿರುವ “ಪ್ರಾಯದ ಸ್ತ್ರೀಯರಿಗೆ” ಇಲ್ಲವೇ ಯುವ ಸ್ತ್ರೀಯರಿಗೆ ಖಾಸಗಿಯಾಗಿ ಸಲಹೆ ನೀಡುವಾಗ ಪರಿಣಾಮಕಾರಿ ಆಗಿರುವರು.

3:8, 14. ‘ಸತ್ಕ್ರಿಯೆಗಳನ್ನು ಮಾಡುವದರಲ್ಲಿ ಜಾಗರೂಕರಾಗಿರುವುದು ಉತ್ತಮವೂ ಪ್ರಯೋಜನಕರವೂ ಆಗಿದೆ’ ಏಕೆಂದರೆ ದೇವರ ಸೇವೆಯಲ್ಲಿ ಫಲಭರಿತರಾಗಿರಲು ಅದು ನಮಗೆ ಸಹಾಯ ಮಾಡುತ್ತದೆ ಮತ್ತು ಈ ದುಷ್ಟ ಲೋಕದಿಂದ ನಮ್ಮನ್ನು ಪ್ರತ್ಯೇಕವಾಗಿಡುತ್ತದೆ.

“ಪ್ರೀತಿಯ ನಿಮಿತ್ತ” ಬೇಡಿಕೊಳ್ಳಿ

(ಫಿಲೆ. 1-25)

‘ಪ್ರೀತಿ ಮತ್ತು ನಂಬಿಕೆಯ’ ಮಾದರಿಯಾಗಿರುವುದಕ್ಕಾಗಿ ಫಿಲೆಮೋನನನ್ನು ಪ್ರಶಂಸಿಸಲಾಗುತ್ತದೆ. ಅವನು ಜೊತೆ ಕ್ರೈಸ್ತರಲ್ಲಿ ಚೈತನ್ಯ ತುಂಬುತ್ತಿದ್ದದರಿಂದ ಪೌಲನಿಗೆ “ಬಹಳ ಸಂತೋಷವೂ ಆದರಣೆಯೂ ಉಂಟಾದವು.”—ಫಿಲೆ. 4, 5, 7.

ಒನೇಸಿಮನ ಕುರಿತಾದ ಸೂಕ್ಷ್ಮ ವಿಚಾರವನ್ನು ನಿರ್ವಹಿಸುವಾಗ ಪೌಲನು ಫಿಲೆಮೋನನಿಗೆ ಅಪ್ಪಣೆಕೊಡದೆ “ಪ್ರೀತಿಯ ನಿಮಿತ್ತ” ಬೇಡಿಕೊಳ್ಳುವ ಮೂಲಕ ಮೇಲ್ವಿಚಾರಕರೆಲ್ಲರಿಗೂ ಮಾದರಿಯನ್ನಿಡುತ್ತಾನೆ. ಅವನು ಫಿಲೆಮೋನನಿಗೆ ಹೇಳುವುದು: “ನನ್ನ ಮಾತನ್ನು ಕೇಳುವಿ ಎಂಬ ಭರವಸವುಳ್ಳವನಾಗಿ ಈ ಪತ್ರಿಕೆಯನ್ನು ನಿನಗೆ ಬರೆದಿದ್ದೇನೆ. ನಾನು ಹೇಳಿದ್ದಕ್ಕಿಂತಲೂ ಹೆಚ್ಚಾಗಿ ಮಾಡುವಿಯೆಂದು ನನಗೆ ಗೊತ್ತುಂಟು.”—ಫಿಲೆ. 8, 9, 21.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

10, 11, 18—ಮೊದಲು “ಅಪ್ರಯೋಜಕನಾಗಿದ್ದ” ಒನೇಸಿಮನು ನಂತರ ‘ಪ್ರಯೋಜಕನಾದದ್ದು’ ಹೇಗೆ? ಒನೇಸಿಮನು ಕೊಲೊಸ್ಸೆಯಲ್ಲಿ ಫಿಲೆಮೋನನ ಮನೆಯಲ್ಲಿ ಒಲ್ಲದ ಮನಸ್ಸಿನಿಂದ ದಾಸನಾಗಿ ಕೆಲಸ ಮಾಡುತ್ತಿದ್ದನು. ಇವನು ತನ್ನ ದಣಿಯ ಬಳಿಯಿಂದ ರೋಮಿಗೆ ಓಡಿಹೋದನು. 1,400 ಕಿ.ಮೀ. ದೂರದ ಆ ಪ್ರಯಾಣಕ್ಕಾಗಿ ದಣಿಯಿಂದ ಹಣ ಸಹ ಕದ್ದಿರಬಹುದು. ಖಂಡಿತವಾಗಿ ಅವನು ಫಿಲೆಮೋನನಿಗೆ ಅಪ್ರಯೋಜಕನಾಗಿದ್ದನು. ಆದರೆ ರೋಮ್‌ನಲ್ಲಿ ಒನೇಸಿಮನು ಕ್ರೈಸ್ತನಾಗುವಂತೆ ಪೌಲನು ಸಹಾಯ ಮಾಡಿದನು. “ಅಪ್ರಯೋಜಕನಾಗಿದ್ದ” ಅವನು ಈಗ ಆಧ್ಯಾತ್ಮಿಕ ಸಹೋದರನಾದದ್ದರಿಂದ ‘ಪ್ರಯೋಜಕನಾದನು.’

15, 16—ಒನೇಸಿಮನನ್ನು ಸ್ವತಂತ್ರಗೊಳಿಸಲು ಪೌಲನು ಫಿಲೆಮೋನನ ಬಳಿ ಏಕೆ ಕೇಳಿಕೊಳ್ಳಲಿಲ್ಲ? ಪೌಲನು, “ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿ ಉಪದೇಶಮಾಡುತ್ತಾ” ಇರುವ ತನ್ನ ನೇಮಕಕ್ಕೆ ಕಟ್ಟುನಿಟ್ಟಾಗಿ ಅಂಟಿಕೊಳ್ಳಲು ಬಯಸಿದನು. ಆದ್ದರಿಂದಲೇ ಗುಲಾಮಗಿರಿಯಂಥ ಸಾಮಾಜಿಕ ಸಮಸ್ಯೆಗಳಿಂದ ದೂರವಿರಲು ಅವನು ಬಯಸಿದನು.—ಅ. ಕೃ. 28:31.

ನಮಗಾಗಿರುವ ಪಾಠಗಳು:

2. ಫಿಲೆಮೋನನು ಕ್ರೈಸ್ತ ಕೂಟಗಳಿಗಾಗಿ ತನ್ನ ಮನೆಯನ್ನು ಲಭ್ಯಗೊಳಿಸಿದನು. ಕ್ಷೇತ್ರ ಸೇವೆಗಾಗಿರುವ ಕೂಟವು ನಮ್ಮ ಮನೆಯಲ್ಲಿ ನಡೆಸಲ್ಪಡುವುದು ಖಂಡಿತವಾಗಿಯೂ ಸುಯೋಗವಾಗಿದೆ.—ರೋಮಾ. 16:5; ಕೊಲೊ. 4:15.

4-7. ನಂಬಿಕೆ ಮತ್ತು ಪ್ರೀತಿಯಲ್ಲಿ ಉತ್ತಮ ಮಾದರಿಯನ್ನಿಟ್ಟಿರುವ ಜೊತೆ ವಿಶ್ವಾಸಿಗಳನ್ನು ಪ್ರಶಂಸಿಸಲು ನಾವು ಪ್ರಥಮ ಹೆಜ್ಜೆ ತೆಗೆದುಕೊಳ್ಳಬೇಕು.

15, 16. ಜೀವನದ ಪ್ರತಿಕೂಲ ಘಟನೆಗಳಿಂದಾಗಿ ನಾವು ವಿಪರೀತ ಚಿಂತೆ ಮಾಡಬಾರದು ಏಕೆಂದರೆ ಒನೇಸಿಮನ ವಿಷಯದಲ್ಲಾದಂತೆ ಅಂಥ ಘಟನೆಗಳು ಕೊನೆಯಲ್ಲಿ ನಮಗೆ ಒಳಿತನ್ನೇ ತರಬಹುದು.

21. ಒನೇಸಿಮನನ್ನು ಫಿಲೆಮೋನನು ಕ್ಷಮಿಸಬೇಕೆಂದು ಪೌಲನು ಬಯಸಿದನು. ತದ್ರೀತಿಯಲ್ಲಿ ನಮ್ಮ ವಿರುದ್ಧ ತಪ್ಪು ಮಾಡಿರುವ ಸಹೋದರನನ್ನು ಕ್ಷಮಿಸುವಂತೆ ನಮ್ಮಿಂದಲೂ ನಿರೀಕ್ಷಿಸಲಾಗುತ್ತದೆ.—ಮತ್ತಾ. 6:14.

“ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ”

(ಇಬ್ರಿ. 1:1–13:25)

ಧರ್ಮಶಾಸ್ತ್ರದ ನೇಮನಿಷ್ಠೆಗಳಿಗಿಂತ ಯೇಸುವಿನ ಯಜ್ಞದಲ್ಲಿ ನಂಬಿಕೆಯೇ ಅತ್ಯುತ್ಕೃಷ್ಟ ಎಂಬುದನ್ನು ರುಜುಪಡಿಸಲು ಪೌಲನು ಕ್ರೈಸ್ತತ್ವದ ಸ್ಥಾಪಕನ ಘನತೆ, ಆತನ ಯಾಜಕತ್ವ, ಆತನ ಯಜ್ಞ, ಮತ್ತು ಹೊಸ ಒಡಂಬಡಿಕೆಯನ್ನು ಒತ್ತಿಹೇಳುತ್ತಾನೆ. (ಇಬ್ರಿ. 3:1-3; 7:1-3, 22; 8:6; 9:11-14, 25, 26) ಇದರ ಕುರಿತ ತಿಳುವಳಿಕೆಯು ಯೆಹೂದ್ಯರಿಂದ ಎದುರಾದ ಹಿಂಸೆಯನ್ನು ತಾಳಿಕೊಳ್ಳುವಂತೆ ಇಬ್ರಿಯ ಕ್ರೈಸ್ತರನ್ನು ಶಕ್ತಗೊಳಿಸಿರಬೇಕು. ಇಬ್ರಿಯ ಜೊತೆ ವಿಶ್ವಾಸಿಗಳನ್ನು ಪೌಲನು ಪ್ರೋತ್ಸಾಹಿಸಿದ್ದು: “ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ.”—ಇಬ್ರಿ. 6:2.

ಕ್ರೈಸ್ತರಿಗೆ ನಂಬಿಕೆ ಎಷ್ಟು ಪ್ರಾಮುಖ್ಯ? “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ” ಎನ್ನುತ್ತಾನೆ ಪೌಲನು. ಅವನು ಇಬ್ರಿಯರಿಗೆ ಪ್ರೋತ್ಸಾಹಿಸುವುದು: “ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.” ಇದನ್ನು ಅವರು ನಂಬಿಕೆಯಿಂದ ಮಾಡಬೇಕಿತ್ತು.—ಇಬ್ರಿ. 11:6; 12:2.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

2:14, 15—ಸೈತಾನನು “ಮರಣಾಧಿಕಾರಿ” ಆಗಿರುವುದು ಅವನು ಯಾರಿಗೆ ಬೇಕಾದರೂ ಅಕಾಲಿಕ ಮರಣವನ್ನು ಬರಮಾಡಬಹುದೆಂಬುದನ್ನು ಸೂಚಿಸುತ್ತದೋ? ಇಲ್ಲ. ಆದರೆ ಏದೆನ್‌ನಲ್ಲಿ ಸೈತಾನನು ದುಷ್ಟತನವನ್ನು ಆರಂಭಿಸಿದಂದಿನಿಂದ ಅವನ ಸುಳ್ಳುಗಳು ಮರಣಕ್ಕೆ ಕಾರಣವಾಗಿವೆ. ಏಕೆಂದರೆ ಅವನ ಸುಳ್ಳಿನಿಂದಾಗಿ ಪಾಪಗೈದ ಆದಾಮನು ಪಾಪ ಮತ್ತು ಮರಣವನ್ನು ಮಾನವ ಕುಟುಂಬಕ್ಕೆ ದಾಟಿಸಿದ್ದಾನೆ. (ರೋಮಾ. 5:12) ಅಲ್ಲದೇ, ಭೂಮಿಯಲ್ಲಿ ಸೈತಾನನ ಚಿತ್ತವನ್ನು ನಡೆಸುತ್ತಿರುವವರು ಯೇಸುವಿಗೆ ಮಾಡಿದಂತೆ ದೇವರ ಇತರ ಸೇವಕರನ್ನೂ ಮರಣದ ತನಕ ಹಿಂಸಿಸಿದ್ದಾರೆ. ಆದರೆ ಸೈತಾನನಿಗೆ ತಾನು ಬಯಸಿದವರನ್ನೆಲ್ಲ ಕೊಲ್ಲುವ ಅಪರಿಮಿತ ಶಕ್ತಿಯಿದೆ ಎಂದು ಇದರರ್ಥವಲ್ಲ. ಹಾಗಿರುತ್ತಿದ್ದಲ್ಲಿ ಅವನು ಬಹಳ ಹಿಂದೆಯೇ ಯೆಹೋವನ ಆರಾಧಕರೆಲ್ಲರನ್ನು ಅಳಿಸಿಹಾಕಿರುತ್ತಿದ್ದನು. ಯೆಹೋವನು ತನ್ನ ಜನರನ್ನು ಒಂದು ಗುಂಪಿನೋಪಾದಿ ರಕ್ಷಿಸುತ್ತಾನೆ ಮತ್ತು ಸೈತಾನನು ಅವರನ್ನು ನಿರ್ಮೂಲಗೊಳಿಸುವಂತೆ ಎಂದೂ ಬಿಡುವುದಿಲ್ಲ. ಒಂದುವೇಳೆ ನಾವು ಸೈತಾನನ ಆಕ್ರಮಣಗಳಿಂದ ಸಾಯುವಂತೆ ಯೆಹೋವನು ಅನುಮತಿಸಿದರೂ ನಮಗಾದ ಹಾನಿಯನ್ನು ದೇವರು ಇಲ್ಲವಾಗಿಸುವನು ಎಂಬ ಭರವಸೆ ನಮಗಿರಬಲ್ಲದು.

4:9-11—‘ನಾವು ದೇವರ ವಿಶ್ರಾಂತಿಯಲ್ಲಿ ಸೇರುವದು’ ಹೇಗೆ? ದೇವರು ಆರು ದಿನಗಳ ಸೃಷ್ಟಿಕಾರ್ಯ ಮುಗಿಸಿ, ಭೂಮಿ ಮತ್ತು ಮಾನವಕುಲದ ಕಡೆಗೆ ತನಗಿರುವ ಉದ್ದೇಶ ನೆರವೇರುವುದೆಂಬ ಭರವಸೆಯೊಂದಿಗೆ ಆರನೆಯ ದಿನದ ಅಂತ್ಯದಲ್ಲಿ ವಿಶ್ರಮಿಸಿಕೊಂಡನು. (ಆದಿ. 1:28; 2:2, 3) ರಕ್ಷಣೆಗಾಗಿ ನಾವು ಸ್ವಸಮರ್ಥನೆಯ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿ ದೇವರು ಮಾಡಿರುವ ಏರ್ಪಾಡನ್ನು ಸ್ವೀಕರಿಸುವ ಮೂಲಕ ‘ನಾವು ಆ ವಿಶ್ರಾಂತಿಯಲ್ಲಿ ಸೇರುವೆವು.’ ನಾವು ದೇವರಲ್ಲಿ ನಂಬಿಕೆಯಿಡುವಾಗ, ಮತ್ತು ಸ್ವಾರ್ಥ ಬಯಕೆಗಳನ್ನು ಬೆನ್ನಟ್ಟುವ ಬದಲು ವಿಧೇಯತೆಯಿಂದ ಆತನ ಮಗನನ್ನು ಹಿಂಬಾಲಿಸುವಾಗ ನಾವು ಚೈತನ್ಯಕರ ಹಾಗೂ ನೆಮ್ಮದಿದಾಯಕ ಆಶೀರ್ವಾದಗಳನ್ನು ಅನುದಿನ ಅನುಭವಿಸುವೆವು.—ಮತ್ತಾ. 11:28-30.

11:10, 13-16—ಅಬ್ರಹಾಮನು ಯಾವ “ಪಟ್ಟಣವನ್ನು” ಎದುರುನೋಡುತ್ತಿದ್ದನು? ಇದು ಅಕ್ಷರಾರ್ಥಕ ಪಟ್ಟಣವಲ್ಲ ಬದಲಿಗೆ ಸಾಂಕೇತಿಕವಾಗಿದೆ. ಯೇಸು ಕ್ರಿಸ್ತ ಮತ್ತು ಅವನ 1,44,000 ಮಂದಿ ಜೊತೆ ರಾಜರುಗಳಿರುವ ‘ಪರಲೋಕದ ಯೆರೂಸಲೇಮನ್ನು’ ಅಬ್ರಹಾಮನು ಎದುರುನೋಡುತ್ತಿದ್ದನು. ಸ್ವರ್ಗೀಯ ಮಹಿಮೆಯಲ್ಲಿರುವ ಈ ಜೊತೆ ರಾಜರುಗಳನ್ನು “ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು” ಎಂದೂ ಕರೆಯಲಾಗಿದೆ. (ಇಬ್ರಿ. 12:22; ಪ್ರಕ. 14:1; 21:2) ಅಬ್ರಹಾಮನು ದೇವರ ರಾಜ್ಯಾಡಳಿತದ ಕೆಳಗಿನ ಜೀವನವನ್ನು ಎದುರುನೋಡುತ್ತಿದ್ದನು.

12:2—ಯೇಸು, ತನ್ನ ‘ಮುಂದೆ ಇಡಲಾಗಿದ್ದ’ ಯಾವ ‘ಸಂತೋಷಕ್ಕೋಸ್ಕರ ಶಿಲುಬೆಯ ಮರಣವನ್ನು ಸಹಿಸಿಕೊಂಡನು’? ತನ್ನ ಶುಶ್ರೂಷೆಯು ಪೂರೈಸಲಿದ್ದ ವಿಷಯಗಳು ಅಂದರೆ ಯೆಹೋವನ ಹೆಸರಿನ ಪವಿತ್ರೀಕರಣ, ದೇವರ ಪರಮಾಧಿಕಾರದ ನಿರ್ದೋಷೀಕರಣ ಮತ್ತು ಮರಣದಿಂದ ಮಾನವ ಕುಟುಂಬದ ವಿಮೋಚನೆ ಇವುಗಳನ್ನು ನೋಡುವ ಸಂತೋಷ ಇದಾಗಿತ್ತು. ಅಲ್ಲದೇ ಮಾನವಕುಲದ ಪ್ರಯೋಜನಕ್ಕಾಗಿ ರಾಜನಾಗಿ ಆಳುವ ಮತ್ತು ಮಹಾಯಾಜಕನಾಗಿ ಸೇವೆಸಲ್ಲಿಸುವ ಬಹುಮಾನವನ್ನೂ ಯೇಸು ಮುನ್ನೋಡಿದನು.

13:20—ಹೊಸ ಒಡಂಬಡಿಕೆಯನ್ನು “ಶಾಶ್ವತವಾದ” ಒಡಂಬಡಿಕೆ ಎನ್ನಲಾಗಿರುವುದೇಕೆ? ಮೂರು ಕಾರಣಗಳಿಗಾಗಿ: (1) ಅದರ ಸ್ಥಾನದಲ್ಲಿ ಬೇರೊಂದು ಒಡಂಬಡಿಕೆ ಎಂದಿಗೂ ಬರದು, (2) ಅದರ ಪ್ರಯೋಜನಗಳು ಶಾಶ್ವತವಾಗಿರುವವು, ಮತ್ತು (3) “ಬೇರೆ ಕುರಿಗಳು” ಅರ್ಮಗೆದೋನಿನ ನಂತರವೂ ಅದರ ಏರ್ಪಾಡಿನಿಂದ ಪ್ರಯೋಜನ ಪಡೆಯುವರು.—ಯೋಹಾ. 10:16.

ನಮಗಾಗಿರುವ ಪಾಠಗಳು:

5:14. ನಾವು ದೇವರ ವಾಕ್ಯವಾದ ಬೈಬಲ್‌ನ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿದ್ದು ಅದರಿಂದ ಕಲಿತದ್ದನ್ನು ಅನ್ವಯಿಸಿಕೊಳ್ಳಬೇಕು. ಈ ವಿಧದಲ್ಲಿ ಮಾತ್ರ ನಾವು ‘ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದುಕೊಳ್ಳಬಲ್ಲೆವು.’—1 ಕೊರಿಂ. 2:10.

6:17-19. ದೇವರ ವಾಗ್ದಾನ ಮತ್ತು ಆಣೆಯ ಮೇಲೆ ನಮ್ಮ ನಿರೀಕ್ಷೆ ಸ್ಥಿರವಾಗಿ ಆಧರಿತವಾಗಿರುವಲ್ಲಿ ಸತ್ಯದ ಮಾರ್ಗದಿಂದ ವಿಚಲಿತರಾಗದಂತೆ ನಮಗೆ ಸಹಾಯ ಸಿಗುವುದು.

12:3, 4. ಎದುರಾಗುವ ಚಿಕ್ಕಪುಟ್ಟ ಪರೀಕ್ಷೆಗಳು ಅಥವಾ ವಿರೋಧಕ್ಕೆ ‘ಮನಗುಂದಿದವರಾಗಿ ಬೇಸರಗೊಳ್ಳದೆ’ ಪ್ರೌಢತೆಯ ಕಡೆಗೆ ಸಾಗುತ್ತಾ ಪರೀಕ್ಷೆಗಳನ್ನು ತಾಳಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ನಾವು ಹೆಚ್ಚಿಸಿಕೊಳ್ಳಬೇಕು. “ಪ್ರಾಣಾಪಾಯದ ತನಕ” ಅಂದರೆ ನಮ್ಮ ಕೊನೆಯುಸಿರಿನ ತನಕ ತಾಳಿಕೊಳ್ಳುವ ಸಂಕಲ್ಪ ನಮಗಿರಬೇಕು.—ಇಬ್ರಿ. 10:36-39.

12:13-15. “ವಿಷವುಳ್ಳ ಬೇರು” ಇಲ್ಲವೇ ಸಭೆಯಲ್ಲಿ ವಿಷಯಗಳನ್ನು ನಿರ್ವಹಿಸುವ ಬಗ್ಗೆ ತಪ್ಪು ಹುಡುಕುವವರು ನಾವು ‘ನಮ್ಮ ಕಾಲುಗಳಿಂದ ನೆಟ್ಟಗೆ ಮುಂದೆ ನಡೆಯುವುದನ್ನು’ ತಡೆಯುವಂತೆ ಬಿಡಬಾರದು.

12:26-28. ‘ನಿರ್ಮಿತವಾದ ವಸ್ತುಗಳು,’ ದೇವರು ನಿರ್ಮಿಸಿದ ವಸ್ತುಗಳನ್ನಲ್ಲ ಬದಲಾಗಿ ಬೇರೆಯವರು ನಿರ್ಮಿಸಿದ ವಸ್ತುಗಳನ್ನು ಅಂದರೆ ಸದ್ಯದ ದುಷ್ಟ ವ್ಯವಸ್ಥೆ ಮತ್ತು ದುಷ್ಟ “ಪರಲೋಕವನ್ನು” ಸೂಚಿಸುತ್ತದೆ. ಇವುಗಳನ್ನು ಅಸ್ತಿತ್ವದಿಂದ ತೆಗೆದುಹಾಕಲಾಗುವುದು. ಆಗ “ಕದಲಿಸದೆ ಇರುವ ವಸ್ತುಗಳು” ಅಂದರೆ ದೇವರ ರಾಜ್ಯ ಮತ್ತು ಅದರ ಬೆಂಬಲಿಗರು ಮಾತ್ರ ಉಳಿಯುವರು. ಆದುದರಿಂದ ನಾವು ರಾಜ್ಯದ ಕುರಿತು ಹುರುಪಿನಿಂದ ಘೋಷಿಸುವುದು ಮತ್ತು ಅದರ ಮೂಲತತ್ತ್ವಗಳಿಗನುಸಾರ ಜೀವಿಸುವುದು ಎಷ್ಟು ಪ್ರಾಮುಖ್ಯ!

13:7, 17. ಸಭೆಯಲ್ಲಿರುವ ಮೇಲ್ವಿಚಾರಕರಿಗೆ ವಿಧೇಯತೆ ಮತ್ತು ಅಧೀನತೆ ತೋರಿಸಬೇಕೆಂಬ ಈ ಬುದ್ಧಿವಾದಕ್ಕೆ ನಾವು ಗಮನ ಕೊಡುವುದು ಸಹಕಾರದ ಮನೋಭಾವವನ್ನು ತೋರಿಸಲು ಸಹಾಯ ಮಾಡುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 11 2007 ನವೆಂಬರ್‌ 1ರ ಕಾವಲಿನಬುರುಜು ಪುಟ 12-13 ನೋಡಿ.