ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನು ನನ್ನ ಬಲ’

‘ಯೆಹೋವನು ನನ್ನ ಬಲ’

‘ಯೆಹೋವನು ನನ್ನ ಬಲ’

ಜೋನ್‌ ಕೋವಿಲ್‌ ಅವರು ಹೇಳಿದಂತೆ

ನಾನು 1925ರ ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್‌ನ ಹಡ್ಡರ್ಸ್‌ಫೀಲ್ಡ್‌ನಲ್ಲಿ ಹುಟ್ಟಿದ್ದೆ. ನನ್ನ ಹೆತ್ತವರಿಗೆ ನಾನು ಒಬ್ಬಳೇ ಮಗಳು. ನನಗೆ ಅಷ್ಟೊಂದು ಒಳ್ಳೇ ಆರೋಗ್ಯವಿರಲಿಲ್ಲ. “ಸ್ವಲ್ಪ ಜೋರಾಗಿ ಗಾಳಿ ಬೀಸಿದರೂ ಸಾಕು ನಿನ್ನ ಆರೋಗ್ಯ ಕೆಡುತ್ತದೆ” ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು. ಅದು ಎಷ್ಟು ಸತ್ಯವಾಗಿತ್ತು!

ನಾನು ಚಿಕ್ಕವಳಾಗಿದ್ದಾಗ ಪಾದ್ರಿಗಳು ಲೋಕಶಾಂತಿಗಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತಿದ್ದರು. ಆದರೆ ಎರಡನೇ ಲೋಕ ಯುದ್ಧದ ಸಮಯದಲ್ಲಿ ಅದೇ ಪಾದ್ರಿಗಳು ಯುದ್ಧವಿಜಯಕ್ಕಾಗಿ ಬೇಡಿದರು. ಕಕ್ಕಾಬಿಕ್ಕಿಯಾದ ನನ್ನ ಮನಸ್ಸಿನಲ್ಲಿ ಸಂಶಯದ ಬೀಜಗಳು ಮೊಳಕೆಯೊಡೆದವು. ಅಷ್ಟರಲ್ಲಿ ಆ್ಯನಿ ರ್ಯಾಟ್‌ಕ್ಲಿಫ್‌ ಎಂಬವರು ನಮ್ಮ ಮನೆಗೆ ಬಂದರು. ನಮ್ಮ ವಠಾರದಲ್ಲಿ ಅವರೊಬ್ಬರೇ ಯೆಹೋವನ ಸಾಕ್ಷಿಯಾಗಿದ್ದರು.

ನಾನು ಸತ್ಯ ಕಲಿತೆ

ಸಾಲ್ವೆಷನ್‌ ಎಂಬ ಪುಸ್ತಕವನ್ನು ಆ್ಯನಿ ನಮಗೆ ಕೊಟ್ಟರು ಮತ್ತು ಅವರ ಮನೆಯಲ್ಲಿ ನಡೆಯಲಿದ್ದ ಬೈಬಲ್‌ ಚರ್ಚೆಗೆ ನನ್ನ ತಾಯಿಯನ್ನು ಕರೆದರು. * ನನ್ನ ತಾಯಿ ನನ್ನನ್ನು ಜೊತೆ ಕರೆದುಕೊಂಡು ಹೋದಳು. ನಾವು ಹಾಜರಾದ ಆ ಮೊತ್ತಮೊದಲ ಚರ್ಚೆ ನನಗಿನ್ನೂ ನೆನಪಿದೆ. ಅದು ವಿಮೋಚನಾ ಮೌಲ್ಯ ಯಜ್ಞದ ಕುರಿತಾಗಿತ್ತು. ಆ ಚರ್ಚೆ ನಾನು ನೆನಸಿದಂತೆ ಸಪ್ಪೆಯಾಗಿರಲಿಲ್ಲ. ಅದರಿಂದ ನನ್ನ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಸಿಕ್ಕಿತು. ಮುಂದಿನ ವಾರ ನಾವು ಮತ್ತೆ ಹೋದೆವು. ಆಗ ಕಡೇ ದಿವಸಗಳ ಸೂಚನೆಯ ಕುರಿತ ಯೇಸುವಿನ ಪ್ರವಾದನೆಯ ವಿವರಣೆ ಕೊಡಲಾಯಿತು. ಲೋಕದಲ್ಲಿರುವ ಚಿಂತಾಜನಕ ಪರಿಸ್ಥಿತಿಗಳನ್ನು ನೋಡಿ ನನಗೂ ನನ್ನ ತಾಯಿಗೂ ಇದೇ ಸತ್ಯ ಎಂಬ ಅರಿವಾಯಿತು. ಅದೇ ದಿನ ರಾಜ್ಯ ಸಭಾಗೃಹಕ್ಕೆ ಹೋಗಲು ನಮಗೆ ಆಮಂತ್ರಣ ಸಿಕ್ಕಿತು.

ಆ ಸಭಾಗೃಹದಲ್ಲಿ ನಾನು ಅನೇಕ ಯುವ ಪಯನೀಯರರನ್ನು ಭೇಟಿಯಾದೆ. ಅವರಲ್ಲಿ, ಈಗ ತಮ್ಮ ಗಂಡನೊಂದಿಗೆ ಲಂಡನ್‌ನ ಬೇತೇಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಜೊಯ್ಸ್‌ ಬಾರ್ಬರ್‌ (ಈಗ ಎಲಿಸ್‌) ಒಬ್ಬರು. ಎಲ್ಲರೂ ಪಯನೀಯರ್‌ ಸೇವೆ ಮಾಡಬೇಕೆಂದು ನಾನು ನೆನಸಿದ್ದೆ. ಹಾಗಾಗಿ ಇನ್ನೂ ಶಾಲೆಗೆ ಹೋಗುತ್ತಿದ್ದರೂ ಅಂದಿನಿಂದ ನಾನು ಪ್ರತಿ ತಿಂಗಳು 60 ತಾಸು ಕ್ಷೇತ್ರ ಸೇವೆಮಾಡುತ್ತಿದ್ದೆ.

ಐದು ತಿಂಗಳ ಬಳಿಕ 1940 ಫೆಬ್ರವರಿ 11ರಂದು ನಾನು ಮತ್ತು ನನ್ನ ತಾಯಿ ಬ್ರಾಡ್‌ಫೋರ್ಡ್‌ನಲ್ಲಿ ನಡೆದ ಜೋನ್‌ ಸಮ್ಮೇಳನದಲ್ಲಿ (ಈಗ ಸರ್ಕಿಟ್‌ ಸಮ್ಮೇಳನ ಎಂದು ಕರೆಯಲಾಗುತ್ತದೆ) ದೀಕ್ಷಾಸ್ನಾನ ಪಡೆದೆವು. ನಮ್ಮ ತಂದೆ ನಮ್ಮ ಹೊಸ ಧರ್ಮವನ್ನು ವಿರೋಧಿಸದಿದ್ದರೂ ಅವರು ಸಾಕ್ಷಿಯಂತೂ ಆಗಲಿಲ್ಲ. ನಾನು ದೀಕ್ಷಾಸ್ನಾನ ಪಡೆದ ಸಮಯದಷ್ಟಕ್ಕೆ ಬೀದಿ ಸಾಕ್ಷಿಕಾರ್ಯ ಚಾಲ್ತಿಗೆ ಬಂತು. ಪತ್ರಿಕೆಗಳಿದ್ದ ಕೈಚೀಲ ಮತ್ತು ಪ್ಲ್ಯಾಕಾರ್ಡ್‌(ಭಿತ್ತಿಪತ್ರ)ಗಳನ್ನು ತೆಗೆದುಕೊಂಡು ಈ ಸೇವೆಯಲ್ಲಿ ನಾನು ಪಾಲ್ಗೊಂಡೆ. ಒಂದು ಶನಿವಾರ ನನಗೆ, ಜನನಿಬಿಡವಾದ ಶಾಪಿಂಗ್‌ ಸ್ಥಳವೊಂದರಲ್ಲಿ ನಿಂತುಕೊಂಡು ಸಾಕ್ಷಿಕೊಡುವಂತೆ ಹೇಳಲಾಯಿತು. ನನಗಂತೂ ಮನುಷ್ಯರ ಭಯ ತುಂಬ ಇತ್ತು. ಅದಕ್ಕೆ ತಕ್ಕದಾಗಿ, ನನ್ನೆಲ್ಲಾ ಶಾಲಾಪಾಠಿಗಳು ನಾನು ನಿಂತ ದಾರಿಯಾಗಿಯೇ ಹೋಗುತ್ತಿದ್ದಂತೆ ನನಗನಿಸಿತು!

1940ರಲ್ಲಿ ನಾನು ಹೋಗುತ್ತಿದ್ದ ಕಂಪೆನಿಯನ್ನು (ಆಗ ಸಭೆಯನ್ನು ಹೀಗೆ ಕರೆಯಲಾಗುತ್ತಿತ್ತು) ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಫಲಿತಾಂಶವಾಗಿ ನನ್ನ ವಯಸ್ಸಿನ ಹೆಚ್ಚಿನವರು ಇನ್ನೊಂದು ಕಂಪೆನಿಯ ಭಾಗವಾದರು. ಅದಕ್ಕೆ ನಾನು ಹೋಗಿ ಕಂಪೆನಿ ಸರ್ವೆಂಟ್‌ಗೆ (ಈಗ ಅಧ್ಯಕ್ಷ ಮೇಲ್ವಿಚಾರಕನೆಂದು ಕರೆಯಲಾಗುತ್ತದೆ) ದೂರು ಹೇಳಿದೆ. ಅವರಂದದ್ದು, “ನಿನಗೆ ಗೆಳತಿಯರು ಬೇಕಾದರೆ, ಕ್ಷೇತ್ರ ಸೇವೆಗೆ ಹೋಗಿ ಪಡೆದುಕೋ.” ನಾನು ಹಾಗೆಯೇ ಮಾಡಿದೆ! ಅದಾಗಿ ಸ್ವಲ್ಪ ಸಮಯದಲ್ಲಿ ನಾನು ಎಲ್ಸಿ ನೊಬಲ್‌ ಎಂಬಾಕೆಯನ್ನು ಭೇಟಿಯಾದೆ. ಆಕೆ ಸತ್ಯವನ್ನು ಸ್ವೀಕರಿಸಿದಳು ಮತ್ತು ಈಗಲೂ ನನ್ನ ಆಪ್ತ ಗೆಳತಿಯಾಗಿದ್ದಾಳೆ.

ಪಯನೀಯರ್‌ ಸೇವೆ ಮತ್ತದರ ಆಶೀರ್ವಾದಗಳು

ಓದು ಮುಗಿಸಿದ ಬಳಿಕ ಒಬ್ಬ ಅಕೌಂಟೆಂಟ್‌ ಬಳಿ ನಾನು ಕೆಲಸಮಾಡಿದೆ. ಆದರೆ, ಪೂರ್ಣ ಸಮಯದ ಸೇವಕರ ಹರ್ಷವನ್ನು ನೋಡುತ್ತಾ ನೋಡುತ್ತಾ ಪಯನೀಯರಳಾಗಿ ಸೇವೆಮಾಡುವ ನನ್ನ ಬಯಕೆ ಹೆಚ್ಚೆಚ್ಚಾಗ ತೊಡಗಿತು. 1945 ಮೇ ತಿಂಗಳಿಂದ ನಾನು ವಿಶೇಷ ಪಯನೀಯರ್‌ ಸೇವೆ ಆರಂಭಿಸಿದೆ. ಮೊದಲ ದಿನವಿಡೀ ಮಳೆ ಧಾರಾಕಾರವಾಗಿ ಸುರಿಯಿತು. ಆದರೂ ನಾನು ಪಯನೀಯರ್‌ ಸೇವೆ ಮಾಡುತ್ತಿದ್ದೇನೆಂಬ ಸಂಗತಿಯಿಂದ ನನಗೆಷ್ಟು ಸಂತೋಷವಾಯಿತೆಂದರೆ ಸುರಿಯುತ್ತಿದ್ದ ಮಳೆಯ ಪರಿವೆಯೇ ನನಗಿರಲಿಲ್ಲ. ನಿಜವೇನೆಂದರೆ, ನಾನು ಪ್ರತಿದಿನ ನನ್ನ ಸೈಕಲ್‌ ತುಳಿದು ಸೇವೆಗೆ ಹೋಗುತ್ತಿದ್ದು ಮನೆಯಿಂದ ಹೊರಗಿರುತ್ತಿದ್ದರಿಂದ ನನಗೆ ಕ್ರಮವಾದ ವ್ಯಾಯಾಮ ಸಿಗುತ್ತಿತ್ತು ಮತ್ತು ಅದು ನನ್ನ ಆರೋಗ್ಯದ ಮೇಲೆ ಒಳ್ಳೇ ಪರಿಣಾಮ ಬೀರಿತು. ನನ್ನ ತೂಕ 42 ಕಿಲೋಗಿಂತ ಹೆಚ್ಚು ಆದದ್ದೇ ಇಲ್ಲವಾದರೂ ನನ್ನ ಪಯನೀಯರ್‌ ಸೇವೆಯನ್ನು ನಿಲ್ಲಿಸುವ ಸಂದರ್ಭವೇ ಬಂದದ್ದಿಲ್ಲ. ವರ್ಷಗಳಾದ್ಯಂತ ‘ಯೆಹೋವನು ನನ್ನ ಬಲ’ ಎಂಬದನ್ನು ನಾನು ಅಕ್ಷರಾರ್ಥಕವಾಗಿ ಅನುಭವಿಸಿದ್ದೇನೆ.—ಕೀರ್ತ. 28:7.

ಹೊಸ ಸಭೆಗಳನ್ನು ಸ್ಥಾಪಿಸುವ ಗುರಿಯಿಂದ ವಿಶೇಷ ಪಯನೀಯರಳಾದ ನನ್ನನ್ನು ಯೆಹೋವನ ಸಾಕ್ಷಿಗಳೇ ಇರದ ಪಟ್ಟಣಗಳಿಗೆ ಕಳುಹಿಸಲಾಯಿತು. ಮೊದಲು ನಾನು ಮೂರು ವರ್ಷ ಇಂಗ್ಲೆಂಡ್‌ನಲ್ಲೂ ತದನಂತರ ಮೂರು ವರ್ಷ ಐರ್ಲೆಂಡ್‌ನಲ್ಲೂ ಸೇವೆ ಸಲ್ಲಿಸಿದೆ. ಐರ್ಲೆಂಡ್‌ನ ಲಿಸ್ಬರ್ನ್‌ನಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ದಾಗ ಪ್ರಾಟೆಸ್ಟೆಂಟ್‌ ಚರ್ಚ್‌ನ ಸಹಾಯಕ ಪಾಸ್ಟರ್‌ ಅವರೊಂದಿಗೆ ನಾನು ಅಧ್ಯಯನ ನಡೆಸಿದೆ. ಮೂಲಭೂತ ಬೈಬಲ್‌ ಬೋಧನೆಗಳನ್ನು ಕಲಿತೊಡನೆ ತಾವು ಪಡೆದ ಈ ಹೊಸ ಜ್ಞಾನವನ್ನು ಅವರು ತಮ್ಮ ಸಭೆಯವರಿಗೆ ಹೇಳಿಕೊಡಲಾರಂಭಿಸಿದರು. ಆ ಸಭೆಯ ಕೆಲವರು ಅವರ ವಿರುದ್ಧ ಚರ್ಚ್‌ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಮತ್ತು ಹೀಗೇಕೆ ಬೋಧಿಸುತ್ತಿದ್ದೀ ಎಂದು ಪಾಸ್ಟರ್‌ಗೆ ಕೇಳಲಾಯಿತು. ತನ್ನ ಮಂದೆಗೆ ತಾನು ಈವರೆಗೆ ಅನೇಕ ಸುಳ್ಳು ವಿಚಾರಗಳನ್ನು ಕಲಿಸಿದ್ದೇನೆಂದು ತಿಳಿಸುವುದು ತನ್ನ ಕ್ರೈಸ್ತ ಕರ್ತವ್ಯ ಎಂದವರು ಉತ್ತರಿಸಿದರು. ಕುಟುಂಬದಿಂದ ತೀವ್ರ ವಿರೋಧ ಬಂದರೂ, ಅವರು ಯೆಹೋವನಿಗೆ ತಮ್ಮ ಜೀವನವನ್ನು ಸಮರ್ಪಿಸಿ ಸಾಯುವವರೆಗೂ ನಂಬಿಗಸ್ತರಾಗಿ ಉಳಿದರು.

ಐರ್ಲೆಂಡ್‌ನಲ್ಲಿದ್ದಾಗ ನನ್ನ ಎರಡನೇ ನೇಮಕ ಲಾರ್ನ್‌ನಲ್ಲಿ ಸೇವೆಸಲ್ಲಿಸುವುದಾಗಿತ್ತು. 1950ರಲ್ಲಿ ನನ್ನ ಪಯನೀಯರ್‌ ಸಹಪಾಠಿಯು, ‘ಥಿಯೋಕ್ರೆಸೀಸ್‌ ಇನ್‌ಕ್ರೀಸ್‌’ ಸಮ್ಮೇಳನವನ್ನು ಹಾಜರಾಗಲಿಕ್ಕಾಗಿ ನ್ಯೂ ಯಾರ್ಕ್‌ಗೆ ಹೋಗಿದ್ದರಿಂದ ಆರು ವಾರಗಳವರೆಗೆ ನಾನು ಒಂಟಿಯಾಗಿ ಸೇವೆಮಾಡಬೇಕಾಯಿತು. ಆಗ ನನಗೆ ನಿಜವಾಗಿಯೂ ತುಂಬ ಕಷ್ಟವೆನಿಸಿತು. ಸಮ್ಮೇಳನಕ್ಕೆ ಹೋಗಲು ನನಗೂ ತುಂಬ ಆಸೆಯಿತ್ತು. ಹಾಗಿದ್ದರೂ, ಆ ಆರು ವಾರಗಳಲ್ಲಿ, ಸೇವೆಯಲ್ಲಿ ಅನೇಕ ಉತ್ತೇಜನದಾಯಕ ಅನುಭವಗಳನ್ನು ಪಡೆದೆ. ಸುಮಾರು 20 ವರ್ಷಗಳ ಹಿಂದೆ ನಮ್ಮ ಪ್ರಕಾಶನವನ್ನು ಕೊಂಡುಕೊಂಡಿದ್ದ ಇಳಿವಯಸ್ಸಿನ ವ್ಯಕ್ತಿಯನ್ನು ನಾನು ಭೇಟಿಯಾದೆ. ಆ ವರ್ಷಗಳಲ್ಲಿ ಅವನದನ್ನು ಎಷ್ಟೊಂದು ಸಲ ಓದಿದ್ದನೆಂದರೆ ಅವನಿಗದು ಬಾಯಿಪಾಠವಾಗಿತ್ತು. ಅವನು ಮತ್ತು ಅವನ ಮಗ ಹಾಗೂ ಮಗಳು ಸತ್ಯವನ್ನು ಸ್ವೀಕರಿಸಿದರು.

ಗಿಲ್ಯಡ್‌ ಶಾಲೆಯಲ್ಲಿ ತರಬೇತು ಪಡೆಯುವುದು

1951ರಲ್ಲಿ ಇಂಗ್ಲೆಂಡ್‌ನ ಇತರ ಹತ್ತು ಮಂದಿ ಪಯನೀಯರರೊಂದಿಗೆ ನನಗೂ ನ್ಯೂ ಯಾರ್ಕ್‌ನ ಸೌತ್‌ ಲಾನ್ಸಿಂಗ್‌ನಲ್ಲಿದ್ದ ಗಿಲ್ಯಡ್‌ ಶಾಲೆಯ 17ನೇ ತರಗತಿಗೆ ಹಾಜರಾಗಲು ಆಮಂತ್ರಣ ಸಿಕ್ಕಿತು. ಆ ಕೆಲವು ತಿಂಗಳು ನಾನು ಪಡೆದ ಬೈಬಲ್‌ ತರಬೇತನ್ನು ನಾನೆಷ್ಟು ಆನಂದಿಸಿದೆ! ಆಗಿನ್ನೂ ಸ್ಥಳಿಕ ಸಭೆಗಳಲ್ಲಿ ಸಹೋದರಿಯರಿಗೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನೇಮಕಗಳು ಸಿಗುತ್ತಿರಲಿಲ್ಲ. ಆದರೆ ಗಿಲ್ಯಡ್‌ ಶಾಲೆಯಲ್ಲಿ ವಿದ್ಯಾರ್ಥಿ ಭಾಷಣಗಳನ್ನು ಕೊಡುವ ಮತ್ತು ವರದಿಗಳನ್ನು ಹೇಳುವ ನೇಮಕಗಳು ನಮಗೆ ಸಿಗುತ್ತಿದ್ದವು. ನಮಗಾಗುತ್ತಿದ್ದ ಭಯ ಅಷ್ಟಿಷ್ಟಲ್ಲ! ನನ್ನ ಮೊದಲ ಭಾಷಣಾದ್ಯಂತ ಕಾಗದವನ್ನು ಹಿಡಿದಿದ್ದ ನನ್ನ ಕೈ ಗಡಗಡನೆ ನಡುಗುತ್ತಿತ್ತು. ಶಿಕ್ಷಕರಾದ ಸಹೋದರ ಮ್ಯಾಕ್ಸ್‌ವೆಲ್‌ ಫ್ರೆಂಡ್‌ ಅವರು ನಗುನಗುತ್ತಲೇ ಹೇಳಿದ್ದು: “ಎಲ್ಲ ಒಳ್ಳೇ ಭಾಷಣಕರ್ತರಂತೆ ನಿಮಗೆ ಮೊದಮೊದಲು ಭಯವಿತ್ತು. ಅಷ್ಟೇ ಅಲ್ಲ ಭಾಷಣ ಮುಗಿಯುವವರೆಗೂ ಭಯವಿತ್ತು.” ನಮ್ಮ ತರಬೇತಿಯಾದ್ಯಂತ ತರಗತಿಯ ಮುಂದೆ ಬಂದು ಮಾತಾಡುವ ಕೌಶಲದಲ್ಲಿ ನಾವೆಲ್ಲರು ಪ್ರಗತಿಮಾಡಿದೆವು. ನೋಡುನೋಡುತ್ತಲೆ ನಮ್ಮ ತರಬೇತು ಮುಗಿಯಿತು ಮತ್ತು ಪದವೀಧರರಾದ ನಮ್ಮನ್ನು ಅನೇಕ ದೇಶಗಳಿಗೆ ಕಳುಹಿಸಲಾಯಿತು. ನನ್ನ ನೇಮಕ ಥಾಯ್‌ಲೆಂಡ್‌ ಆಗಿತ್ತು.

“ನಸುನಗೆಯ ನಾಡು”

ಸಹೋದರಿ ಆ್ಯಸ್ಟ್ರಿಡ್‌ ಆ್ಯಂಡರ್‌ಸನ್‌ರವರು ಥಾಯ್‌ಲೆಂಡ್‌ನಲ್ಲಿ ನನ್ನ ಮಿಷನೆರಿ ಸಂಗಾತಿಯಾಗಿ ನೇಮಕಗೊಂಡಾಗ ಅವರನ್ನು ಯೆಹೋವನ ವರವಾಗಿ ವೀಕ್ಷಿಸಿದೆ. ಸರಕು ಹಡಗಿನಲ್ಲಿ ಆ ದೇಶಕ್ಕೆ ಹೋಗಿ ತಲುಪಲು ಏಳು ವಾರಗಳು ಹಿಡಿದವು. ರಾಜಧಾನಿಯಾದ ಬ್ಯಾಂಕಾಕ್‌ಗೆ ತಲುಪಿದಾಗ, ಆ ನಗರದಲ್ಲಿ ಗಿಜಿಗುಟ್ಟುತ್ತಿರುವ ಮಾರುಕಟ್ಟೆಗಳು ಮತ್ತು ಮುಖ್ಯ ರಸ್ತೆಗಳಂತಿದ್ದ ಕಾಲುವೆಗಳ ಜಾಲವನ್ನು ನೋಡಿದೆವು. 1952ರಲ್ಲಿ ಥಾಯ್‌ಲೆಂಡ್‌ನಲ್ಲಿ 150ಕ್ಕೂ ಕಡಿಮೆ ಪ್ರಚಾರಕರಿದ್ದರು.

ಥಾಯ್‌ ಭಾಷೆಯಲ್ಲಿ ಕಾವಲಿನಬುರುಜು ಅನ್ನು ಮೊದಲನೆಯ ಸಲ ನೋಡಿದಾಗ, ‘ಈ ಭಾಷೆಯನ್ನು ನಾವು ಕಲಿತಂತೆ’ ಎಂದು ನೆನಸಿದೆವು. ಮುಖ್ಯವಾಗಿ, ಪದಗಳನ್ನು ಸರಿಯಾದ ರೀತಿಯಲ್ಲಿ ಉಚ್ಚರಿಸುವುದು ತುಂಬ ಕಷ್ಟವಾಗಿತ್ತು. ಉದಾಹರಣೆಗೆ, ಕಾವೂ ಎಂಬ ಪದವನ್ನೇ ತೆಗೆದುಕೊಳ್ಳಿ. ಅದನ್ನು ಒಂದು ರೀತಿಯಲ್ಲಿ ಉಚ್ಚರಿಸಿದರೆ ಅದು, “ಅನ್ನ” ಎಂದಾಗುತ್ತಿತ್ತು. ಆದರೆ ಅದೇ ಪದವನ್ನು ಸ್ವಲ್ಪ ವ್ಯತ್ಯಾಸವಾಗಿ ಉಚ್ಚರಿಸುವಲ್ಲಿ ಅದು, “ವಾರ್ತೆ” ಎಂದಾಗುತ್ತದೆ. ನಾವು ಮೊದಮೊದಲು ಕ್ಷೇತ್ರ ಸೇವೆಗೆ ಹೋದಾಗ “ನಾನು ನಿಮಗಾಗಿ ಒಳ್ಳೇ ವಾರ್ತೆ ತಂದಿದ್ದೇನೆ” ಎಂದು ಹೇಳುವ ಬದಲು “ಒಳ್ಳೇ ಅನ್ನ ತಂದಿದ್ದೇನೆ” ಎಂದು ಹೇಳುತ್ತಿದ್ದೆವು! ಆರಂಭದಲ್ಲಿ ಅನೇಕರು ನಕ್ಕರು ಆದರೆ ಕ್ರಮೇಣ ನಾವು ಆ ಭಾಷೆ ಕಲಿತೇ ಬಿಟ್ಟೆವು.

ಥಾಯ್‌ಲೆಂಡ್‌ನ ಜನರು ಸ್ನೇಹಜೀವಿಗಳು. ಸೂಕ್ತವಾಗಿಯೇ ಈ ದೇಶವನ್ನು “ನಸುನಗೆಯ ನಾಡು” ಎಂದು ಕರೆಯಲಾಗಿದೆ. ನಮ್ಮ ಮೊದಲ ನೇಮಕವು, ಖೋರಾತ್‌ (ಈಗ ನಾಕೋನ್‌ ರಾಚಸೀಮಾ) ಎಂಬ ನಗರವಾಗಿತ್ತು. ಅಲ್ಲಿ ನಾವು ಎರಡು ವರ್ಷ ಸೇವೆ ಸಲ್ಲಿಸಿದೆವು. ತದನಂತರದ ನೇಮಕವು ಚಿಯಾಂಗ್‌ ಮಾಯ್‌ ಎಂಬ ನಗರವಾಗಿತ್ತು. ಥಾಯ್‌ಲೆಂಡ್‌ನ ಹೆಚ್ಚಿನ ಜನರು ಬೌದ್ಧರಾಗಿರುವುದರಿಂದ ಅವರಿಗೆ ಬೈಬಲಿನ ಅಷ್ಟೊಂದು ಪರಿಚಯವಿಲ್ಲ. ಖೋರಾತ್‌ ನಗರದಲ್ಲಿ ನಾನು ಪೋಸ್ಟ್‌ ಮಾಸ್ಟರ್‌ರೊಂದಿಗೆ ಅಧ್ಯಯನ ಮಾಡುತ್ತಿದ್ದೆ. ನಾವು ಬೈಬಲ್‌ನಲ್ಲಿರುವ ಅಬ್ರಹಾಮನ ಕುರಿತು ಮಾತಾಡಿದೆವು. ಆ ವ್ಯಕ್ತಿ ಅಬ್ರಹಾಮನ ಹೆಸರನ್ನು ಮುಂಚೆ ಕೇಳಿದ್ದರಿಂದ, ತುಂಬ ಆಸಕ್ತಿಯಿಂದ ತನ್ನ ತಲೆಯಲ್ಲಾಡಿಸಿದನು. ಆದರೆ ಸ್ವಲ್ಪದರಲ್ಲೇ ನಾವಿಬ್ಬರು ಬೇರೆ ಬೇರೆ ಅಬ್ರಹಾಮರ ಕುರಿತು ಮಾತಾಡುತ್ತಿದ್ದೇವೆಂದು ನನಗೆ ತಿಳಿದುಬಂತು. ಅವರು, ಯುನೈಟೆಡ್‌ ಸ್ಟೇಟ್ಸ್‌ನ ಮಾಜಿ ರಾಷ್ಟ್ರಾಧ್ಯಕ್ಷ, ಅಬ್ರಹಾಂ ಲಿಂಕನ್‌ರ ಕುರಿತು ನೆನಸುತ್ತಿದ್ದರು!

ಥಾಯ್‌ಲೆಂಡ್‌ನ ಸಹೃದಯದ ಜನರಿಗೆ ಬೈಬಲ್‌ ಕಲಿಸಿಕೊಟ್ಟೆವು ಮತ್ತು ಅದೇವೇಳೆ, ಸರಳ ಜೀವನ ನಡೆಸುತ್ತಾ ಹೇಗೆ ಖುಷಿಯಾಗಿರಬಹುದು ಎಂಬದನ್ನು ಅವರಿಂದ ಕಲಿತೆವು. ಇದೊಂದು ಮಹತ್ತ್ವದ ಪಾಠವಾಗಿತ್ತು. ಏಕೆಂದರೆ ಖೋರಾತ್‌ನಲ್ಲಿದ್ದ ನಮ್ಮ ಮೊತ್ತಮೊದಲ ಮಿಷನೆರಿ ವಸತಿಗೃಹದಲ್ಲಿ ವಿದ್ಯುತ್‌ ಶಕ್ತಿ ಅಥವಾ ನಲ್ಲಿ ನೀರಿನ ವ್ಯವಸ್ಥೆಯಿರಲಿಲ್ಲ. ಅಂಥ ನೇಮಕಗಳಲ್ಲಿ ‘ಸಮೃದ್ಧಿಯುಳ್ಳವರಾದರೂ ಕೊರತೆಯುಳ್ಳವರಾದರೂ’ ಹೇಗೆ ಜೀವಿಸುವುದು ಎಂಬದರ ‘ಗುಟ್ಟನ್ನು’ ನಾವು ಕಲಿತೆವು. ಅಪೊಸ್ತಲ ಪೌಲನಂತೆ ‘ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತರಾಗಿರುವುದರ’ ಅರ್ಥವನ್ನು ಅನುಭವದಿಂದ ತಿಳಿದುಕೊಂಡೆವು.—ಫಿಲಿ. 4:12, 13.

ಹೊಸ ಸಂಗಾತಿ, ಹೊಸ ನೇಮಕ

1945ರಲ್ಲಿ ನಾನು ಲಂಡನ್‌ಗೆ ಹೋಗಿದ್ದೆ. ಆಗ, ‘ಬ್ರಿಟಿಷ್‌ ಮ್ಯೂಸಿಯಮ್‌’ ಅನ್ನು ನೋಡಲಿಕ್ಕಾಗಿ ನಾನು, ಕೆಲವು ಪಯನೀಯರರು ಹಾಗೂ ಬೇತೇಲಿಗರೊಂದಿಗೆ ಹೋಗಿದ್ದೆ. ಅವರಲ್ಲಿ ಆ್ಯಲನ್‌ ಕೋವಿಲ್‌ ಒಬ್ಬರಾಗಿದ್ದರು. ಆ ಬಳಿಕ ಅವರು ಗಿಲ್ಯಡ್‌ನ 11ನೇ ತರಗತಿಗೆ ಹಾಜರಾದರು. ಅವರನ್ನು ಮೊದಲು ಫ್ರಾನ್ಸ್‌ಗೆ ಮತ್ತು ಅನಂತರ ಬೆಲ್ಜಿಯಮ್‌ಗೆ ನೇಮಿಸಲಾಯಿತು. * ಆ ಬಳಿಕ, ನಾನು ಇನ್ನೂ ಥಾಯ್‌ಲೆಂಡ್‌ನಲ್ಲಿ ಮಿಷನೆರಿಯಾಗಿ ಸೇವೆ ಮಾಡುತ್ತಿದ್ದಾಗ ಅವರು ಮದುವೆಯ ಪ್ರಸ್ತಾಪವನ್ನು ಎದುರಿಟ್ಟರು. ನಾನದಕ್ಕೆ ಸಮ್ಮತಿಸಿದೆ.

1955 ಜುಲೈ 9ರಂದು, ನಾವು ಬೆಲ್ಜಿಯಮ್‌ನ ಬ್ರಸಲ್ಸ್‌ ಎಂಬಲ್ಲಿ ಮದುವೆಯಾದೆವು. ಮಧುಚಂದ್ರವನ್ನು ಪ್ಯಾರಿಸ್‌ನಲ್ಲಿ ಕಳೆಯಬೇಕೆಂಬುದು ನನ್ನ ಕನಸ್ಸಾಗಿತ್ತು. ಹಾಗಾಗಿ ಮದುವೆಯಾದ ಮುಂದಿನ ವಾರ ಪ್ಯಾರಿಸ್‌ನಲ್ಲಿ ನಡೆಯಲಿದ್ದ ಸಮ್ಮೇಳನಕ್ಕೆ ಹೋಗಲು ಆ್ಯಲನ್‌ ಯೋಜನೆಗಳನ್ನು ಮಾಡಿದರು. ಆದರೆ ಹೋಗಿ ತಲುಪಿದಾಕ್ಷಣ, ಸಮ್ಮೇಳನದುದ್ದಕ್ಕೂ ಭಾಷಣಗಳನ್ನು ಭಾಷಾಂತರ ಮಾಡಬೇಕೆಂದು ಸಹೋದರರು ಆ್ಯಲನ್‌ರನ್ನು ಕೇಳಿಕೊಂಡರು. ಪ್ರತಿ ದಿನ ಬೆಳಗ್ಗೆ ಅವರು ಬೇಗ ಹೋಗಬೇಕಾಗುತ್ತಿತ್ತು ಮತ್ತು ನಾವು ವಸತಿಗೃಹಕ್ಕೆ ಬಂದು ಮುಟ್ಟುವಷ್ಟರಲ್ಲಿ ತಡರಾತ್ರಿಯಾಗುತ್ತಿತ್ತು. ಹಾಗಾಗಿ ನಾನು ಮಧುಚಂದ್ರವನ್ನು ಪ್ಯಾರಿಸ್‌ನಲ್ಲಿ ಕಳೆದೆನಾದರೂ, ನನ್ನ ಪತಿಯನ್ನು ಬಹಳ ದೂರದಿಂದ ನೋಡಿದೆ ಅಷ್ಟೇ. ಅವರು ವೇದಿಕೆಯ ಮೇಲಿದ್ದರು ಮತ್ತು ನಾನು ಸಭಾಂಗಣದಲ್ಲಿ ಕುಳಿತು ಅವರನ್ನು ನೋಡುತ್ತಿದ್ದೆ! ಹಾಗಿದ್ದರೂ ನನ್ನ ಪತಿ, ಸಹೋದರ ಸಹೋದರಿಯರ ಸೇವೆಗಾಗಿ ಉಪಯೋಗಿಸಲ್ಪಡುವುದನ್ನು ನೋಡಲು ನನಗೆ ತುಂಬ ಸಂತೋಷವಾಯಿತು. ಯೆಹೋವನು ನಮ್ಮ ವಿವಾಹಬಂಧದಲ್ಲಿ ಮುಖ್ಯ ಸ್ಥಾನದಲ್ಲಿರುವುದಾದರೆ ನಮ್ಮ ವಿವಾಹವು ಯಶಸ್ವಿಯಾಗುವುದು ಎಂಬದು ನನಗೆ ಚೆನ್ನಾಗಿ ತಿಳಿದಿತ್ತು.

ಮದುವೆಯಿಂದಾಗಿ ನನಗೊಂದು ಹೊಸ ಟೆರಿಟೊರಿಯೂ ಸಿಕ್ಕಿತು. ಬೆಲ್ಜಿಯಮ್‌ನಲ್ಲಿ ನಾನು ಸೇವೆ ಆರಂಭಿಸಿದೆ. ಬೆಲ್ಜಿಯಮ್‌ ಎಂದರೆ ಹಲವಾರು ಯುದ್ಧಗಳು ನಡೆದಿರುವ ಯುದ್ಧಭೂಮಿ ಎಂದಷ್ಟೇ ನನಗೆ ಗೊತ್ತಿತ್ತು. ಆದರೆ ಅಲ್ಲಿದ್ದು ಸ್ವಲ್ಪ ಸಮಯವಾಗುವಷ್ಟರಲ್ಲೇ, ಅಲ್ಲಿನ ಜನರು ಶಾಂತಿಪ್ರಿಯರೆಂದು ನನಗೆ ತಿಳಿದುಬಂತು. ನನ್ನ ನೇಮಕದ ಅಂಗವಾಗಿ, ಆ ದೇಶದ ದಕ್ಷಿಣ ಭಾಗದಲ್ಲಿ ಮಾತಾಡಲಾಗುವ ಫ್ರೆಂಚ್‌ ಭಾಷೆಯನ್ನೂ ಕಲಿಯಬೇಕಾಯಿತು.

ಬೆಲ್ಜಿಯಮ್‌ ದೇಶದಲ್ಲಿ 1955ರಲ್ಲಿ ಸುಮಾರು 4,500 ಪ್ರಚಾರಕರಿದ್ದರು. ನಾನು ಮತ್ತು ನನ್ನ ಪತಿ ಬೇತೇಲ್‌ನಲ್ಲಿ ಮತ್ತು ಸಂಚರಣಾ ಕೆಲಸದಲ್ಲಿ ಸುಮಾರು 50 ವರ್ಷ ಕಳೆದೆವು. ಮೊದಲ ಎರಡುವರೆ ವರ್ಷಗಳಲ್ಲಿ ನಾವು ಸೇವೆಗೆ ಸೈಕಲಿನಲ್ಲಿ ಹೋದೆವು. ಮಳೆಯಿರಲಿ ಬಿಸಿಲಿರಲಿ, ಗುಡ್ಡಗಾಡು ಪ್ರದೇಶಗಳೇ ಇರಲಿ ನಾವು ಸೈಕಲ್‌ನಲ್ಲೇ ಪ್ರಯಾಣಿಸುತ್ತಿದ್ದೆವು. ಗತಿಸಿರುವ ವರ್ಷಗಳಲ್ಲಿ ಜೊತೆ ಸಾಕ್ಷಿಗಳ 2,000ಕ್ಕಿಂತ ಹೆಚ್ಚು ಮನೆಗಳಲ್ಲಿ ನಾವು ರಾತ್ರಿ ಉಳುಕೊಂಡಿದ್ದೇವೆ! ದೈಹಿಕವಾಗಿ ಅಷ್ಟೊಂದು ಶಕ್ತಿಯಿಲ್ಲದಿದ್ದರೂ ತಮ್ಮಲ್ಲಿದ್ದ ಪೂರ್ಣ ಶಕ್ತಿಯಿಂದ ಯೆಹೋವನನ್ನು ಸೇವಿಸಿದ ಹಲವಾರು ಸಹೋದರ ಸಹೋದರಿಯರನ್ನು ನಾನು ಎಷ್ಟೋ ಸಲ ಭೇಟಿಯಾದೆ. ನಾನು ನನ್ನ ಸೇವೆಯನ್ನು ಎಂದೂ ಕೈಬಿಡಬಾರದೆಂದು ಅವರ ಮಾದರಿಯು ನನ್ನನ್ನು ಪ್ರೋತ್ಸಾಹಿಸಿತು. ಸಭೆಯೊಂದಕ್ಕೆ ಸಂದರ್ಶನ ನೀಡಿ ಇಡೀ ವಾರ ಅವರೊಂದಿಗೆ ಕಳೆದು ವಾರದ ಅಂತ್ಯದಷ್ಟಕ್ಕೆ ನಮಗೆ ತುಂಬ ಉತ್ತೇಜನ ಸಿಗುತ್ತಿತ್ತು. (ರೋಮಾ. 1:11, 12) ನನ್ನ ಪತಿ ನಿಜವಾಗಿಯೂ ಉತ್ತಮ ಸಂಗಾತಿಯಾಗಿದ್ದರು. ಪ್ರಸಂಗಿ 4:9, 10ರಲ್ಲಿರುವ ಮಾತುಗಳು ಎಷ್ಟು ನಿಜ! ಅದು ಹೇಳುವುದು: “ಒಬ್ಬನಿಗಿಂತ ಇಬ್ಬರು ಲೇಸು ... ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.”

ಜೀವನವಿಡೀ ‘ಯೆಹೋವನ ಬಲದಿಂದ’ ಸೇವೆಮಾಡಿದ್ದರ ಆಶೀರ್ವಾದಗಳು

ಯೆಹೋವನನ್ನು ಸೇವಿಸಲು ಇತರರಿಗೆ ಸಹಾಯಮಾಡುವಂಥ ಅನೇಕ ಒಳ್ಳೇ ಅನುಭವಗಳು ನಮಗಿದ್ದವು. ಉದಾಹರಣೆಗೆ, 1983ರಲ್ಲಿ ಎಂಟ್‌ವರ್ಪ್‌ನಲ್ಲಿರುವ ಫ್ರೆಂಚ್‌ ಸಭೆಯನ್ನು ಸಂದರ್ಶಿಸಿದಾಗ ನಾವು ಒಂದು ಕುಟುಂಬದೊಂದಿಗೆ ಉಳುಕೊಂಡೆವು. ಅವರ ಮನೆಯಲ್ಲಿ ಸಾಯಿರೆ (ಈಗ ರಿಪಬ್ಲಿಕ್‌ ಆಫ್‌ ಕಾಂಗೊ) ದೇಶದ ಬೆಂಜಮಿನ್‌ ಬಂಡಿವಿಲ ಎಂಬ ಯುವ ಸಹೋದರನೂ ವಾಸಿಸುತ್ತಿದ್ದನು. ಉನ್ನತ ಶಿಕ್ಷಣಕ್ಕಾಗಿ ಇವನು ಬೆಲ್ಜಿಯಮ್‌ಗೆ ಬಂದಿದ್ದನು. ಅವನು ನಮಗಂದದ್ದು: “ಯೆಹೋವನ ಸೇವೆಗೆ ಸಂಪೂರ್ಣ ಮೀಸಲಾಗಿರುವ ನಿಮ್ಮ ಜೀವನವನ್ನು ನೋಡುವಾಗ ನಾನೂ ನಿಮ್ಮ ಹಾಗೆ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ನನಗನಿಸುತ್ತದೆ.” ನನ್ನ ಯಜಮಾನರು ಅವನಿಗೆ ಹೇಳಿದ್ದು: “ನೀನು ನಮ್ಮ ಹಾಗೆ ಇದ್ದಿದ್ದರೆ ಚೆನ್ನಾಗಿತ್ತು ಅಂತ ಹೇಳುತ್ತಿ, ಆದರೆ ನೀನು ಲೌಕಿಕ ಜೀವನವೃತ್ತಿಯ ಹಿಂದೆ ಬಿದ್ದಿದ್ದಿ. ನಿನ್ನ ಮನಸ್ಸಿಗೆ ವಿರುದ್ಧವಾದುದ್ದನ್ನು ಮಾಡುತ್ತಿದ್ದಿ ಅಂತ ನಿನಗನಿಸುವುದಿಲ್ಲವೇ?” ಆ ನೇರ ನುಡಿಯು, ಬೆಂಜಮಿನ್‌ ತನ್ನ ಜೀವನದ ಬಗ್ಗೆ ಯೋಚಿಸುವಂತೆ ಮಾಡಿತು. ಸಾಯಿರೆಗೆ ಹೋದ ಬಳಿಕ ಅವನು ಪಯನೀಯರ್‌ ಸೇವೆಯನ್ನು ಆರಂಭಿಸಿದನು ಮತ್ತು ಈಗ ಅಲ್ಲಿನ ಬ್ರಾಂಚ್‌ ಕಮಿಟಿಯ ಸದಸ್ಯನಾಗಿ ಸೇವೆ ಮಾಡುತ್ತಿದ್ದಾನೆ.

ನನ್ನ ಅನ್ನನಾಳದಲ್ಲಿ ಹುಣ್ಣು ಇದ್ದದ್ದರಿಂದ 1999ರಲ್ಲಿ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆದಾದ ಬಳಿಕ ನನ್ನ ತೂಕ 30 ಕಿಲೋಗೆ ಇಳಿದಿದೆ. ನಾನು ನಿಜವಾಗಿಯೂ ತುಂಬ ನಾಜೂಕಾದ ‘ಮಣ್ಣಿನ ಘಟಕವಾಗಿದ್ದರೂ’ ಯೆಹೋವನು ನನಗೆ ‘ಬಲಾಧಿಕ್ಯವನ್ನು’ ಕೊಟ್ಟಿರುವುದಕ್ಕೆ ನಾನಾತನಿಗೆ ಅಭಾರಿಯಾಗಿದ್ದೇನೆ. ನನ್ನ ಶಸ್ತ್ರಚಿಕಿತ್ಸೆಯ ನಂತರ ನನ್ನ ಗಂಡನ ಜೊತೆ ಪುನಃ ಸಂಚರಣಾ ಕೆಲಸಕ್ಕೆ ಹೋಗುವಂತೆ ಯೆಹೋವನು ನನಗೆ ಶಕ್ತಗೊಳಿಸಿದನು. (2 ಕೊರಿಂ. 4:7) ಆದರೆ 2004ರ ಮಾರ್ಚ್‌ ತಿಂಗಳಲ್ಲಿ ನನ್ನ ಪತಿ ಮಲಗಿದ್ದಲ್ಲೇ ಅಸುನೀಗಿದರು. ಅವರಿಲ್ಲದ ಜೀವನ ನನಗೆ ತುಂಬ ಬೇಸರವೆನಿಸುತ್ತದೆ. ಆದರೆ ಅವರು ಯೆಹೋವನ ಸ್ಮರಣೆಯಲ್ಲಿದ್ದಾರೆಂಬ ಸಂಗತಿ ನನಗೆ ಸಾಂತ್ವನ ಕೊಡುತ್ತದೆ.

ಈಗ ನನ್ನ 83ನೇ ಪ್ರಾಯದಲ್ಲಿ ಹಿಂದಕ್ಕೆ ನೋಡುವಾಗ 63ಕ್ಕಿಂತ ಹೆಚ್ಚು ವರ್ಷಗಳ ಪೂರ್ಣ ಸಮಯದ ಸೇವೆಯನ್ನು ನಾನು ಲೆಕ್ಕಹಾಕಬಲ್ಲೆ. ಈಗಲೂ ನಾನು ಶುಶ್ರೂಷೆಯಲ್ಲಿ ಸಕ್ರಿಯಳಾಗಿದ್ದೇನೆ. ನಾನು ಮನೆಯಲ್ಲಿದ್ದುಕೊಂಡು ಒಂದು ಬೈಬಲ್‌ ಅಧ್ಯಯನ ನಡೆಸುತ್ತೇನೆ ಮತ್ತು ದಿನನಿತ್ಯ ಸಿಗುವ ಸಂದರ್ಭಗಳನ್ನು ಯೆಹೋವನ ಮಹಾನ್‌ ಉದ್ದೇಶದ ಬಗ್ಗೆ ಇತರರೊಂದಿಗೆ ಮಾತಾಡಲು ಉಪಯೋಗಿಸುತ್ತೇನೆ. “ನಾನು 1945ರಲ್ಲಿ ಪಯನೀಯರ್‌ ಸೇವೆಯನ್ನು ಆರಂಭಿಸದಿದ್ದಲ್ಲಿ ನನ್ನ ಜೀವನ ಹೇಗಿರುತ್ತಿತ್ತೋ ಏನೋ” ಎಂದು ನಾನು ಕೆಲವೊಮ್ಮೆ ನೆನಸುತ್ತೇನೆ. ಆಗ ಪಯನೀಯರ್‌ ಸೇವೆಯನ್ನು ಆರಂಭಿಸದೆ ಇರಲು ನನ್ನ ಕ್ಷೀಣ ಆರೋಗ್ಯ ಸ್ಥಿತಿಯು ಒಳ್ಳೆಯ ನೆಪವಾಗಿತ್ತು. ಆದರೆ ನಾನು ಯುವಪ್ರಾಯದಲ್ಲೇ ಪಯನೀಯರ್‌ ಸೇವೆಯನ್ನು ಶುರುಮಾಡಿದ್ದು ಎಷ್ಟು ಒಳ್ಳೆಯದಾಯಿತು! ಯೆಹೋವನಿಗೆ ನಾವು ಮೊದಲ ಸ್ಥಾನ ಕೊಡುವಲ್ಲಿ, ಆತನು ನಮ್ಮ ಬಲವಾಗಿರುತ್ತಾನೆ ಎಂಬದನ್ನು ಅನುಭವದಿಂದ ತಿಳಿದುಕೊಳ್ಳುವ ಸದವಕಾಶ ನನಗೆ ಸಿಕ್ಕಿದೆ.

[ಪಾದಟಿಪ್ಪಣಿಗಳು]

^ ಪ್ಯಾರ. 6 ಸಾಲ್ವೆಷನ್‌ ಪುಸ್ತಕವನ್ನು 1939ರಲ್ಲಿ ಪ್ರಕಾಶಿಸಲಾಗಿತ್ತು ಆದರೆ ಈಗ ಮುದ್ರಿಸಲಾಗುತ್ತಿಲ್ಲ.

^ ಪ್ಯಾರ. 22 ಸಹೋದರ ಕೋವಿಲ್‌ರವರ ಜೀವನಕಥೆ ಕಾವಲಿನಬುರುಜು 1961 ಮಾರ್ಚ್‌ 15ರ ಸಂಚಿಕೆಯಲ್ಲಿದೆ.

[ಪುಟ 18ರಲ್ಲಿರುವ ಚಿತ್ರ]

ನನ್ನ ಮಿಷನೆರಿ ಸಂಗಾತಿ ಆ್ಯಸ್ಟ್ರಿಡ್‌ ಆ್ಯಂಡರ್‌ಸನ್‌ ಅವರೊಂದಿಗೆ (ಬಲಗಡೆ)

[ಪುಟ 18ರಲ್ಲಿರುವ ಚಿತ್ರ]

ನನ್ನ ಗಂಡನೊಂದಿಗೆ ಸಂಚರಣಾ ಸೇವೆಯಲ್ಲಿರುವಾಗ, 1956

[ಪುಟ 20ರಲ್ಲಿರುವ ಚಿತ್ರ]

ಇಸವಿ 2000ದಲ್ಲಿ ನನ್ನ ಗಂಡ ಆ್ಯಲನ್‌ ಅವರೊಂದಿಗೆ