ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ತಡಮಾಡದೇ ಮರಳುವಂತೆ ನೆರವಾಗಿ

ಅವರು ತಡಮಾಡದೇ ಮರಳುವಂತೆ ನೆರವಾಗಿ

ಅವರು ತಡಮಾಡದೇ ಮರಳುವಂತೆ ನೆರವಾಗಿ

“ನಿನ್ನನ್ನು ಬಿಟ್ಟು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು.”—ಯೋಹಾನ 6:68.

ಒಮ್ಮೆ, ಯೇಸು ಕ್ರಿಸ್ತನ ಬೋಧನೆಗಳಲ್ಲೊಂದನ್ನು ನಿರಾಕರಿಸುತ್ತಾ ಅನೇಕ ಶಿಷ್ಯರು ಆತನನ್ನು ಹಿಂಬಾಲಿಸುವುದನ್ನು ಬಿಟ್ಟುಬಿಟ್ಟರು. ಆಗ ಯೇಸು ತನ್ನ ಅಪೊಸ್ತಲರಿಗೆ, “ನೀವು ಸಹ ಹೋಗಬೇಕೆಂದಿದ್ದೀರಾ?” ಎಂದು ಕೇಳಿದನು. ಅದಕ್ಕುತ್ತರಿಸುತ್ತಾ ಪೇತ್ರನಂದದ್ದು: “ಸ್ವಾಮೀ, ನಿನ್ನನ್ನು ಬಿಟ್ಟು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು.” (ಯೋಹಾ. 6:51-69) ಅವರು ಇನ್ನೆಲ್ಲೂ ಹೋಗುವಂತಿರಲಿಲ್ಲ ಏಕೆಂದರೆ ಆಗ ಯೆಹೂದಿಮತದಲ್ಲಿ “ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳು” ಇರಲಿಲ್ಲ. ಇಂದು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲ್‌ನಲ್ಲೂ ಆ ವಾಕ್ಯಗಳು ಇಲ್ಲ. ಆದುದರಿಂದಲೇ, ದೇವರ ಮಂದೆಯಿಂದ ತಪ್ಪಿಸಿಕೊಂಡು ಹೋದರೂ ಯೆಹೋವನನ್ನು ಮೆಚ್ಚಿಸಲು ಬಯಸುವವರು ಮಂದೆಗೆ ಮರಳಲು “ಎಚ್ಚರವಾಗತಕ್ಕಕಾಲ” ಇದೇ ಆಗಿದೆ.—ರೋಮಾ. 13:11.

2 ತಪ್ಪಿಸಿಕೊಂಡ ಕುರಿಗಳಂತಿದ್ದ ಇಸ್ರಾಯೇಲ್‌ ಮನೆತನದವರಿಗೆ ಯೆಹೋವನು ಕಾಳಜಿ ತೋರಿಸಿದನು. (ಯೆಹೆಜ್ಕೇಲ 34:15, 16 ಓದಿ.) ತದ್ರೀತಿಯಲ್ಲಿ, ಮಂದೆಯಿಂದ ತಪ್ಪಿಸಿಕೊಂಡ ಕುರಿಸದೃಶ ವ್ಯಕ್ತಿಗೆ ಸಹಾಯ ಮಾಡುವ ಅಪೇಕ್ಷೆ ಮತ್ತು ಕರ್ತವ್ಯ ಕ್ರೈಸ್ತ ಹಿರಿಯರಿಗಿದೆ. ಸಹಾಯವನ್ನು ಬಯಸುವ ನಿಷ್ಕ್ರಿಯ ವ್ಯಕ್ತಿಯೊಂದಿಗೆ ಅಧ್ಯಯನ ನಡೆಸುವಂತೆ ಹಿರಿಯರು ನೇಮಿಸಿರುವ ಪ್ರಚಾರಕನಿಗೆ, ಆ ವ್ಯಕ್ತಿ ಗಂಭೀರ ಪಾಪ ಮಾಡಿದ್ದಾನೆಂದು ತಿಳಿದುಬರುವಲ್ಲಿ ಆಗೇನು? ನ್ಯಾಯನಿರ್ಣಾಯಕ ಅಥವಾ ಗೋಪ್ಯವಾಗಿಡಬೇಕಾದ ವಿಷಯದ ಕುರಿತು ನಿಷ್ಕ್ರಿಯ ವ್ಯಕ್ತಿಗೆ ಸಲಹೆ ನೀಡುವ ಬದಲು ಆ ವಿಷಯದ ಕುರಿತು ಹಿರಿಯರಿಗೆ ತಿಳಿಸುವಂತೆ ಪ್ರಚಾರಕನು ಅವನಿಗೆ ಹೇಳಬೇಕು. ಅವನದನ್ನು ಮಾಡದಿರುವಲ್ಲಿ, ಸ್ವತಃ ಪ್ರಚಾರಕನೇ ಅದನ್ನು ಹಿರಿಯರಿಗೆ ತಿಳಿಸಬೇಕು.—ಯಾಜ. 5:1; ಗಲಾ. 6:1.

3 ಹಿಂದಿನ ಲೇಖನದಲ್ಲಿ 100 ಕುರಿಗಳನ್ನು ಹೊಂದಿದ್ದವನ ಕುರಿತ ಯೇಸುವಿನ ದೃಷ್ಟಾಂತವನ್ನು ಪ್ರಸ್ತಾಪಿಸಲಾಗಿತ್ತು. ಅವುಗಳಲ್ಲೊಂದು ಕುರಿ ತಪ್ಪಿಸಿಕೊಂಡಾಗ ಆತನು ಉಳಿದ 99 ಕುರಿಗಳನ್ನು ಅಲ್ಲೇ ಬಿಟ್ಟು ಅದಕ್ಕಾಗಿ ಹುಡುಕಾಡತೊಡಗಿದನು. ಅದು ಸಿಕ್ಕಿದಾಗ ಅವನಿಗೆಷ್ಟು ಸಂತೋಷವಾಯಿತು! (ಲೂಕ 15:4-7) ದೇವರ ಮಂದೆಯಿಂದ ತಪ್ಪಿಹೋದ ಒಂದು ಕುರಿ ಮರಳುವಾಗ ನಮಗೂ ಅಷ್ಟೇ ಸಂತೋಷವಾಗುತ್ತದೆ. ಇದಕ್ಕಿಂತ ಮುಂಚೆಯೇ ಹಿರಿಯರು ಮತ್ತು ಸಭೆಯ ಇತರ ಸದಸ್ಯರು ಪ್ರೀತಿಯಿಂದ ಪ್ರಚೋದಿತರಾಗಿ ನಿಷ್ಕ್ರಿಯ ವ್ಯಕ್ತಿಯನ್ನು ಭೇಟಿಮಾಡಿದ್ದಿರಬೇಕು. ನಿಷ್ಕ್ರಿಯ ವ್ಯಕ್ತಿ ಮಂದೆಗೆ ಮರಳಿ ದೇವರ ಬೆಂಬಲ, ಸುರಕ್ಷೆ ಮತ್ತು ಆಶೀರ್ವಾದವನ್ನು ಪಡೆಯಬೇಕೆಂಬುದನ್ನು ಅವರು ಸಹ ಅಪೇಕ್ಷಿಸುತ್ತಾರೆ. (ಧರ್ಮೋ. 33:27; ಕೀರ್ತ. 91:14; ಜ್ಞಾನೋ. 10:22) ನಿಷ್ಕ್ರಿಯ ವ್ಯಕ್ತಿಗೆ ಸಹಾಯ ಮಾಡುವ ಅವಕಾಶ ಹಿರಿಯರಿಗೆ ಮತ್ತು ಸಭಾ ಸದಸ್ಯರಿಗೆ ಸಿಗುವಲ್ಲಿ ಅವರೇನು ಮಾಡಬಹುದು?

4 ಅವರು, ಯೆಹೋವನು ತನ್ನ ಕುರಿಗಳನ್ನು ಪ್ರೀತಿಸುತ್ತಾನೆ ಮತ್ತು ನಮ್ಮಿಂದ ಅಸಾಧ್ಯವಾಗಿರುವುದನ್ನು ಕೇಳಿಕೊಳ್ಳುವುದಿಲ್ಲ ಎಂಬುದನ್ನು ದಯೆಯಿಂದ ತೋರಿಸಿಕೊಡುವ ಮೂಲಕ ಆ ವ್ಯಕ್ತಿ ಸಭೆಗೆ ಮರಳುವಂತೆ ಉತ್ತೇಜಿಸಬಹುದು. ಯೆಹೋವನು ನಮ್ಮಿಂದ ಕೇಳಿಕೊಳ್ಳುವ ವಿಷಯಗಳಲ್ಲಿ, ಬೈಬಲ್‌ ಅಧ್ಯಯನ ಮಾಡುವುದು, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ರಾಜ್ಯದ ಸುವಾರ್ತೆ ಸಾರುವುದು ಒಳಗೂಡಿದೆ. ಗಲಾತ್ಯ 6:2, 5ನ್ನು ಓದಿ, ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳುವುದರಲ್ಲಿ ಕ್ರೈಸ್ತರು ಸಹಾಯ ಮಾಡುತ್ತಾರಾದರೂ ಆಧ್ಯಾತ್ಮಿಕ ಜವಾಬ್ದಾರಿಯ ಸಂಬಂಧದಲ್ಲಿ “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” ಎಂಬುದನ್ನು ಅವರಿಗೆ ಮನಗಾಣಿಸುವುದು ಸೂಕ್ತ. ಬೇರೆಯವರು ನಮ್ಮ ಪರವಾಗಿ ಯೆಹೋವನಿಗೆ ನಂಬಿಗಸ್ತರಾಗಿರಲು ಸಾಧ್ಯವಿಲ್ಲ.

‘ಜೀವನದ ಚಿಂತೆಗಳು’ ಕಾರಣವೋ?

5 ನಿಷ್ಕ್ರಿಯರಾದ ಜೊತೆ ವಿಶ್ವಾಸಿಗಳು ತಮ್ಮ ಭಾವನೆಗಳನ್ನು ಮನಬಿಚ್ಚಿ ವ್ಯಕ್ತಪಡಿಸುವಾಗ ಹಿರಿಯರು ಮತ್ತು ಇತರ ಪ್ರೌಢ ಪ್ರಚಾರಕರು ಕಿವಿಗೊಟ್ಟು ಕೇಳಬೇಕು. ಹೀಗೆ ಅವರಿಗೆ ಸಹಾಯಮಾಡುವುದು ಹೇಗೆಂಬುದನ್ನು ತಿಳಿದುಕೊಳ್ಳಲು ಅವರು ಶಕ್ತರಾಗುವರು. ಪ್ರಾಯಶಃ ನೀವೊಬ್ಬ ಹಿರಿಯರಾಗಿದ್ದು, ‘ಜೀವನದ ಚಿಂತೆಗಳಿಂದಾಗಿ’ ನಿಷ್ಕ್ರಿಯರಾದ ದಂಪತಿಯನ್ನು ಭೇಟಿಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. (ಲೂಕ 21:34, NIBV) ಹಣಕಾಸಿನ ಸಮಸ್ಯೆಗಳು ಅಥವಾ ಕುಟುಂಬದ ಹೆಚ್ಚುವರಿ ಜವಾಬ್ದಾರಿಗಳು ಅವರು ಆಧ್ಯಾತ್ಮಿಕವಾಗಿ ನಿಷ್ಕ್ರಿಯರಾಗುವಂತೆ ಮಾಡಿರಬೇಕು. ಈ ಎಲ್ಲ ತಾಪತ್ರಯದಿಂದ ತಮಗೆ ಸ್ವಲ್ಪ ನೆಮ್ಮದಿ ಬೇಕೆಂದು ಅವರು ಹೇಳುತ್ತಿರಬಹುದು. ಸಭೆಯಿಂದ ತಮ್ಮನ್ನೇ ಪ್ರತ್ಯೇಕಿಸಿಕೊಳ್ಳುವುದರಿಂದ ಅದು ಸಿಗಲಾರದು ಎಂದು ನೀವು ಅವರಿಗೆ ವಿವರಿಸಬಲ್ಲಿರಿ. (ಜ್ಞಾನೋಕ್ತಿ 18:1 ಓದಿ.) ಜಾಣ್ಮೆಯಿಂದ ನೀವು ಹೀಗೆ ಕೇಳಬಹುದು: “ಕೂಟಗಳಿಗೆ ಹಾಜರಾಗುವುದನ್ನು ನಿಲ್ಲಿಸಿದಂದಿನಿಂದ ನೀವು ಹೆಚ್ಚು ಖುಷಿಯಾಗಿದ್ದಿರಾ? ನಿಮ್ಮ ಕುಟುಂಬ ಜೀವನ ಹೆಚ್ಚು ಉತ್ತಮವಾಗಿದೆಯೋ? ಈಗಲೂ ಯೆಹೋವನ ಆನಂದ ನಿಮ್ಮ ಆಶ್ರಯವಾಗಿದೆಯೋ?”—ನೆಹೆ. 8:10.

6 ನಿಷ್ಕ್ರಿಯ ವ್ಯಕ್ತಿಗಳು ಇಂತಹ ಪ್ರಶ್ನೆಗಳ ಕುರಿತು ಯೋಚಿಸುವಾಗ, ಸಭೆಯೊಂದಿಗಿನ ಸಹವಾಸ ಬಿಟ್ಟಿದ್ದರಿಂದಲೇ ತಮ್ಮ ಆಧ್ಯಾತ್ಮಿಕತೆ ಮತ್ತು ಸಂತೋಷ ಕಡಿಮೆಯಾಗಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುವುದು. (ಮತ್ತಾ. 5:3; ಇಬ್ರಿ. 10:24, 25) ಸುವಾರ್ತೆ ಸಾರುವುದನ್ನು ನಿಲ್ಲಿಸಿದ್ದರಿಂದಲೇ ಅವರ ಆನಂದ ಮಾಯವಾಗಿದೆ ಎಂಬುದನ್ನು ಮನಗಾಣಿಸುವ ಮೂಲಕವೂ ಅವರಿಗೆ ಸಹಾಯ ಮಾಡಸಾಧ್ಯವಿದೆ. (ಮತ್ತಾ. 28:19, 20) ಹಾಗಾದರೆ ನಿಷ್ಕ್ರಿಯ ವ್ಯಕ್ತಿ ಏನನ್ನು ಮಾಡುವುದು ವಿವೇಕಯುತ?

7 ಯೇಸು ಹೇಳಿದ್ದು: “ಅತಿ ಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ, ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. . . . ಆದಕಾರಣ ಸಂಭವಿಸುವುದಕ್ಕಿರುವ ಇವೆಲ್ಲವುಗಳಿಂದ ನೀವು ತಪ್ಪಿಸಿಕೊಳ್ಳುವುದಕ್ಕೆ . . . ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರಿ.” (ಲೂಕ 21:34-36, NIBV) ಮಂದೆಯಿಂದ ತಪ್ಪಿಸಿಕೊಂಡವರು ಹಿಂದೊಮ್ಮೆ ಅನುಭವಿಸಿದ ಆನಂದವನ್ನು ಮರಳಿ ಪಡೆಯಲು ಬಯಸುವಲ್ಲಿ, ಅವರು ಪವಿತ್ರಾತ್ಮಕ್ಕಾಗಿ ಮತ್ತು ದೈವಿಕ ಸಹಾಯಕ್ಕಾಗಿ ಪ್ರಾರ್ಥಿಸುವಂತೆ ಹಾಗೂ ತಮ್ಮ ಪ್ರಾರ್ಥನೆಗನುಗುಣವಾಗಿ ಕ್ರಿಯೆಗೈಯುವಂತೆ ಪ್ರೋತ್ಸಾಹಿಸಬಹುದು.—ಲೂಕ 11:13.

ಅವರು ಎಡವಿಬಿದ್ದದ್ದು ಕಾರಣವೋ?

8 ಮಾನವ ಅಪರಿಪೂರ್ಣತೆಯಿಂದಾಗಿ ಏಳುವ ವೈಯಕ್ತಿಕ ಮನಸ್ತಾಪಗಳು ಒಬ್ಬ ವ್ಯಕ್ತಿಯನ್ನು ಎಡವಿಬೀಳುವಂತೆ ಮಾಡಬಹುದು. ಸಭೆಯಲ್ಲಿ ಮೆಚ್ಚುಗೆಗೆ ಪಾತ್ರನಾಗಿರುವ ವ್ಯಕ್ತಿಯೊಬ್ಬನು ಅಕ್ರೈಸ್ತ ರೀತಿಯಲ್ಲಿ ವರ್ತಿಸಿದಾಗ ಕೆಲವರು ಎಡವಿಬಿದ್ದಿದ್ದಾರೆ. ಒಬ್ಬ ವ್ಯಕ್ತಿ ನಿಷ್ಕ್ರಿಯನಾಗಲು ಇದು ಕಾರಣವಾಗಿರುವಲ್ಲಿ, ಭೇಟಿಮಾಡುವ ಹಿರಿಯನು ಅವನಿಗೆ ಮನಗಾಣಿಸಬೇಕಾದ ಸಂಗತಿಯೇನಂದರೆ ಯೆಹೋವನು ಯಾರನ್ನೂ ಎಡವಿಬೀಳಿಸುವುದಿಲ್ಲ. ಹಾಗಿರುವಾಗ, ಆತನೊಂದಿಗೆ ಮತ್ತು ಆತನ ಜನರೊಂದಿಗಿನ ಸಂಬಂಧವನ್ನೇಕೆ ಕಡಿದುಹಾಕಬೇಕು? ಅದಕ್ಕೆ ಬದಲಾಗಿ, “ಸರ್ವಲೋಕಕ್ಕೆ ನ್ಯಾಯತೀರಿಸುವವನು” ಎಲ್ಲವನ್ನೂ ತಿಳಿದಿದ್ದಾನೆ ಮತ್ತು ಸರಿಯಾದ ರೀತಿಯಲ್ಲಿ ವಿಷಯಗಳನ್ನು ನಿರ್ವಹಿಸುವನು ಎಂಬ ಭರವಸೆಯೊಂದಿಗೆ ಅವನು ಯೆಹೋವನ ಸೇವೆಯನ್ನು ಮುಂದುವರಿಸಬೇಕಲ್ಲವೇ? (ಆದಿ. 18:25; ಕೊಲೊ. 3:23-25) ಅಕ್ಷರಶಃ ಒಬ್ಬನು ಎಡವಿಬೀಳುವಲ್ಲಿ ಏಳಲು ಪ್ರಯತ್ನಿಸದೇ ಹಾಗೇ ಬಿದ್ದುಕೊಂಡಿರುವನೋ?

9 ಮಂದೆಗೆ ಮರಳಲು ನೆರವಾಗುವ ನಿಟ್ಟಿನಲ್ಲಿ ಹಿರಿಯನು ಆ ವ್ಯಕ್ತಿಗೆ ಹೇಳಬಹುದೇನೆಂದರೆ, ಕೆಲವರಿಗೆ ತಮ್ಮನ್ನು ಎಡವಿಬೀಳುವಂತೆ ಮಾಡಿದ ಸನ್ನಿವೇಶ ಅಷ್ಟೇನೂ ದೊಡ್ಡ ವಿಷಯವಲ್ಲವೆಂದು ಕಾಲಾನಂತರ ಅನಿಸಿದೆ. ಅಷ್ಟುಮಾತ್ರವಲ್ಲದೇ, ಬಳಿಕ ಆ ಸನ್ನಿವೇಶ ಬದಲಾಗಿರಬಹುದು. ಅಥವಾ ಒಬ್ಬ ವ್ಯಕ್ತಿ ಶಿಸ್ತು ಸಿಕ್ಕಿದ ಕಾರಣಕ್ಕೆ ನಿಷ್ಕ್ರಿಯನಾಗಿದ್ದಲ್ಲಿ, ಅವನದ್ದೂ ತಪ್ಪಿದೆ ಎಂಬುದನ್ನು ಒಪ್ಪಿಕೊಳ್ಳುವಂತೆ ಮತ್ತು ಕೊಡಲಾದ ಆ ಶಿಸ್ತಿನಿಂದಾಗಿ ತಾನು ಎಡವಿಬೀಳಬಾರದಿತ್ತು ಎಂಬದನ್ನು ಅರಿಯುವಂತೆ ಪ್ರಾರ್ಥನಾಪೂರ್ವಕ ಧ್ಯಾನವು ಸಹಾಯ ಮಾಡುವುದು.—ಕೀರ್ತ. 119:165; ಇಬ್ರಿ. 12:5-13.

ಬೈಬಲ್‌ ಬೋಧನೆಯೊಂದರ ವಿವರಣೆ ಕಾರಣವೋ?

10 ಕೆಲವರು, ನಿರ್ದಿಷ್ಟ ಬೈಬಲ್‌ ಬೋಧನೆಯೊಂದಿಗೆ ಅಸಮ್ಮತಿಸುತ್ತಾ ದೇವರ ಮಂದೆಯಿಂದ ದೂರಸರಿದಿರಬಹುದು. ಐಗುಪ್ತದ ಬಂಧಿವಾಸದಿಂದ ಬಿಡುಗಡೆಗೊಳಿಸಲ್ಪಟ್ಟ ಇಸ್ರಾಯೇಲ್ಯರು ‘ದೇವರ ಕೆಲಸಗಳನ್ನು ಮರೆತು ಆತನ ಸಂಕಲ್ಪಕ್ಕಾಗಿ ಕಾಯಲಿಲ್ಲ.’ (ಕೀರ್ತ. 106:13) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಅತ್ಯುತ್ಕೃಷ್ಟ ಆಧ್ಯಾತ್ಮಿಕ ಆಹಾರವನ್ನು ಉಣಬಡಿಸುತ್ತಿದೆ ಎಂಬುದನ್ನು ನಿಷ್ಕ್ರಿಯ ವ್ಯಕ್ತಿಗೆ ನೆನಪಿಸುವುದು ಸಹಾಯಕರ. (ಮತ್ತಾ. 24:45) ಆ ವ್ಯಕ್ತಿ ಆರಂಭದಲ್ಲಿ ಸತ್ಯ ಕಲಿತದ್ದು ಹಾಗೆಯೇ ಅಲ್ಲವೇ. ಹೀಗಿರುವುದರಿಂದ ಅವನು ಪುನಃ ಒಮ್ಮೆ ‘ಸತ್ಯದಲ್ಲಿ ನಡೆಯಲು’ ಮನಸ್ಸುಮಾಡಬಾರದೇಕೆ?—2 ಯೋಹಾ. 4, NIBV.

11 ದೇವರ ಮಂದೆಯಿಂದ ತಪ್ಪಿಸಿಕೊಂಡವನಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಹಿರಿಯನು, ಯೇಸುವಿನ ಬೋಧನೆಗಳಲ್ಲೊಂದನ್ನು ನಿರಾಕರಿಸಿ ಅವನನ್ನು ಬಿಟ್ಟುಹೋದ ಶಿಷ್ಯರ ಕುರಿತು ಮಾತಾಡಬಹುದು. (ಯೋಹಾ. 6:53, 66) ಕ್ರಿಸ್ತ ಮತ್ತು ಆತನ ನಂಬಿಗಸ್ತ ಹಿಂಬಾಲಕರೊಂದಿಗಿನ ಸಂಬಂಧವನ್ನು ಕಡಿದುಹಾಕುವ ಮೂಲಕ ಆ ಶಿಷ್ಯರು ತಮ್ಮ ಆಧ್ಯಾತ್ಮಿಕತೆ ಹಾಗೂ ಸಂತೋಷವನ್ನು ಕಳಕೊಂಡರು. ಕ್ರೈಸ್ತ ಸಭೆಯೊಂದಿಗಿನ ಸಹವಾಸವನ್ನು ಬಿಟ್ಟುಬಿಟ್ಟವರಿಗೆ ಅತ್ಯುತ್ಕೃಷ್ಟ ಆಧ್ಯಾತ್ಮಿಕ ಆಹಾರ ಬೇರೆಲ್ಲಾದರೂ ಸಿಕ್ಕಿದೆಯೋ? ಇಲ್ಲ, ಏಕೆಂದರೆ ಅದು ಬೇರೆಲ್ಲೂ ಇಲ್ಲ!

ಗಂಭೀರ ಪಾಪ ಕಾರಣವೋ?

12 ಕೆಲವರು ಗಂಭೀರ ಪಾಪಮಾಡಿರುವುದರಿಂದ ಸಾರುವುದನ್ನು ಮತ್ತು ಕೂಟಗಳಿಗೆ ಹಾಜರಾಗುವುದನ್ನು ನಿಲ್ಲಿಸುತ್ತಾರೆ. ಒಂದುವೇಳೆ ಹಿರಿಯರಿಗೆ ತಾವು ತಪ್ಪು ಮಾಡಿದ್ದೇವೆಂದು ಹೇಳುವಲ್ಲಿ ತಮ್ಮನ್ನು ಬಹಿಷ್ಕರಿಸಲಾಗುವುದು ಎಂದವರು ಎಣಿಸಬಹುದು. ಆದರೆ ಹೀಗಾಗಲೇ ಬೇಕೆಂದೇನಿಲ್ಲ. ಏಕೆಂದರೆ, ಅವರು ಆ ಅಕ್ರೈಸ್ತ ರೂಢಿಯನ್ನು ಬಿಟ್ಟು ಯಥಾರ್ಥವಾಗಿ ಪಶ್ಚಾತ್ತಾಪಪಟ್ಟಿರುವಲ್ಲಿ ಸಭೆಯಿಂದ ಅವರನ್ನು ಹೊರಹಾಕಲಾಗುವುದಿಲ್ಲ. (2 ಕೊರಿಂ. 7:10, 11) ಅವರನ್ನು ಪುನಃ ಸೇರಿಸಿಕೊಳ್ಳಲಾಗುತ್ತದೆ ಮತ್ತು ಅಗತ್ಯವಿರುವ ಆಧ್ಯಾತ್ಮಿಕ ನೆರವನ್ನು ಹಿರಿಯರು ನೀಡುತ್ತಾರೆ.

13 ನಿಷ್ಕ್ರಿಯ ವ್ಯಕ್ತಿಗೆ ಸಹಾಯ ಮಾಡಲು ನೇಮಿಸಲ್ಪಟ್ಟ ಪ್ರೌಢ ಪ್ರಚಾರಕರು ನೀವಾಗಿದ್ದು, ತಾನೊಂದು ಗಂಭೀರ ಪಾಪಮಾಡಿದ್ದೇನೆಂದು ಅವನು ನಿಮಗೆ ಹೇಳುವಲ್ಲಿ ಆಗೇನು? ಈ ಮುಂಚೆ ತಿಳಿಸಲಾದಂತೆ ಸನ್ನಿವೇಶವನ್ನು ನೀವು ನಿರ್ವಹಿಸುವ ಬದಲು ಹಿರಿಯರೊಂದಿಗೆ ಮಾತಾಡುವಂತೆ ಅವನಿಗೆ ಹೇಳಿ. ಒಂದುವೇಳೆ ಅವನು ಹಾಗೆ ಮಾಡಲು ಇಚ್ಛಿಸದಿದ್ದಲ್ಲಿ, ಇಂಥ ವಿಷಯಗಳಿಗೆ ಸಂಬಂಧಪಟ್ಟ ದೈವಿಕ ನಿರ್ದೇಶನಕ್ಕೆ ತಕ್ಕಂತೆ ಕ್ರಿಯೆಗೈಯಿರಿ. ಹೀಗೆ ಮಾಡುವ ಮೂಲಕ ಯೆಹೋವನ ಹೆಸರು ಮತ್ತು ಕ್ರೈಸ್ತ ಸಭೆಯ ಹಿತಕ್ಷೇಮದ ಬಗ್ಗೆ ನಿಮಗೆ ಕಾಳಜಿಯಿದೆ ಎಂಬುದನ್ನು ತೋರಿಸುವಿರಿ. (ಯಾಜಕಕಾಂಡ 5:1 ಓದಿ.) ಮರಳಿ ಬರಲು ಮತ್ತು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ನಡೆಯಲು ಮನಸ್ಸುಮಾಡುವ ಯಾವ ವ್ಯಕ್ತಿಗೂ ಸಹಾಯ ಮಾಡುವುದು ಹೇಗೆಂದು ಹಿರಿಯರಿಗೆ ಗೊತ್ತಿದೆ. ಅಂಥವರಿಗೆ ಹಿರಿಯರು ಪ್ರೀತಿಪೂರ್ವಕ ಶಿಸ್ತು ಕೊಡಬೇಕಾಗಬಹುದು. (ಇಬ್ರಿ. 12:7-11) ವ್ಯಕ್ತಿಯೊಬ್ಬನು ದೇವರ ವಿರುದ್ಧ ಪಾಪಮಾಡಿದ್ದೇನೆಂದು ಒಪ್ಪುವಲ್ಲಿ, ಆ ತಪ್ಪುಗೈಯುವುದನ್ನು ನಿಲ್ಲಿಸುವಲ್ಲಿ ಮತ್ತು ನಿಜವಾಗಿ ಪಶ್ಚಾತ್ತಾಪಪಡುವಲ್ಲಿ ಹಿರಿಯರು ಅವನಿಗೆ ಸಹಾಯ ಮಾಡುವರು. ಅಲ್ಲದೆ ಯೆಹೋವನು ಅವನನ್ನು ಕ್ಷಮಿಸುವನು.—ಯೆಶಾ. 1:18; 55:7; ಯಾಕೋ. 5:13-16.

ಮಗನು ಮರಳುವಾಗ ಆಗುವ ಸಂತೋಷ

14 ತಪ್ಪಿಸಿಕೊಂಡ ಕುರಿಗೆ ಸಹಾಯ ಮಾಡಲು ನೇಮಿಸಲ್ಪಟ್ಟವರು ಆ ನಿಷ್ಕ್ರಿಯ ವ್ಯಕ್ತಿಗೆ ನೆರವು ನೀಡುವಾಗ ಲೂಕ 15:11-24ರಲ್ಲಿ ದಾಖಲಾಗಿರುವ ಯೇಸುವಿನ ದೃಷ್ಟಾಂತದ ಕುರಿತು ಪ್ರಸ್ತಾಪಿಸಬಹುದು. ಆ ಸಾಮ್ಯದಲ್ಲಿನ ಯುವಕನೊಬ್ಬನು ಪಟಿಂಗನಾಗಿ ಬದುಕಿ ತನ್ನ ಸಂಪತ್ತನ್ನೆಲ್ಲಾ ಸೂರೆಮಾಡಿಕೊಂಡನು. ಕ್ರಮೇಣ ಅವನು ಆ ಜೀವನಶೈಲಿಯಿಂದ ಹತಾಶನಾದನು. ಹೊಟ್ಟೆಗೇನೂ ಇಲ್ಲದೇ ಮನೆಯ ನೆನಪು ಕಾಡಲಾರಂಭಿಸಿದಾಗ ಅವನು ಮನೆಗೆ ಹಿಂದಿರುಗಲು ಮನಸ್ಸು ಮಾಡಿದನು. ಅವನು ಇನ್ನೂ ದೂರದಲ್ಲಿದ್ದಾಗಲೇ ತಂದೆ ಅವನನ್ನು ಕಂಡು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟು ಬಹಳ ಸಂತೋಷಪಟ್ಟನು. ಈ ದೃಷ್ಟಾಂತವನ್ನು ಪರಿಗಣಿಸುವುದು, ತಪ್ಪಿಸಿಕೊಂಡು ಹೋದ ವ್ಯಕ್ತಿ ಮಂದೆಗೆ ಮರಳುವಂತೆ ಪ್ರಚೋದಿಸುವುದು. ಈ ವಿಷಯಗಳ ವ್ಯವಸ್ಥೆಯು ಬೇಗನೆ ನಾಶವಾಗುವುದರಿಂದ ತಡಮಾಡದೇ ಅವರು ‘ಮನೆಗೆ’ ಅಂದರೆ ಸಭೆಗೆ ಮರಳಬೇಕು.

15 ಸಭೆಯಿಂದ ದೂರಸರಿದವರಲ್ಲಿ ಹೆಚ್ಚಿನವರು ಎಲ್ಲ ವಿಧಗಳಲ್ಲಿ ಪೋಲಿಹೋದ ಮಗನಂತಿರಲಿಕ್ಕಿಲ್ಲ. ಕಟ್ಟಿಹಾಕಿರದ ಒಂದು ದೋಣಿ ದಡದಿಂದ ಮೆಲ್ಲಮೆಲ್ಲನೆ ದೂರ ಸರಿಯುವಂತೆ, ಕೆಲವರು ನಿಧಾನಗತಿಯಲ್ಲಿ ಸಭೆಯಿಂದ ದೂರಸರಿಯುತ್ತಾರೆ. ಇತರರು ಆಧ್ಯಾತ್ಮಿಕ ವಿಷಯಗಳ ಮೇಲಿನ ತಮ್ಮ ಗಮನ ಕಳೆದುಕೊಳ್ಳುವಷ್ಟರ ಮಟ್ಟಿಗೆ ಜೀವನದ ಚಿಂತೆಗಳಲ್ಲಿ ಮುಳುಗಿರುತ್ತಾರೆ. ಇನ್ನು ಕೆಲವರು, ಸಭೆಯ ಸದಸ್ಯರು ತಮ್ಮನ್ನು ಎಡವಿಬೀಳಿಸುವಂತೆ ಬಿಡುತ್ತಾರೆ ಅಥವಾ ನಿರ್ದಿಷ್ಟ ಬೈಬಲ್‌ ಬೋಧನೆಯೊಂದಿಗೆ ಅಸಮ್ಮತಿಸುವುದರಿಂದ ಬಿಟ್ಟುಹೋಗುತ್ತಾರೆ. ಕೆಲವರು ಅಕ್ರೈಸ್ತ ನಡತೆಯಲ್ಲಿ ಒಳಗೂಡುತ್ತಾರೆ. ಈ ಕಾರಣಗಳಿಂದ ಅಥವಾ ಇನ್ನಿತರ ಕಾರಣಗಳಿಂದಾಗಿ ಮಂದೆಯಿಂದ ತಪ್ಪಿಸಿಕೊಂಡವರು ಕಾಲಮಿಂಚಿ ಹೋಗುವ ಮೊದಲೇ ಮಂದೆಗೆ ಮರಳಲು ನೀವು ಸಹಾಯ ಮಾಡುವಂತೆ ಈ ಲೇಖನದಲ್ಲಿನ ಸಲಹೆಗಳು ನೆರವಾಗುವವು.

“ಮಗನೇ, ಮನೆಗೆ ಸ್ವಾಗತ!”

16 ಕ್ರೈಸ್ತ ಹಿರಿಯನೊಬ್ಬನು ತಿಳಿಸುವುದು: “ನಿಷ್ಕ್ರಿಯ ವ್ಯಕ್ತಿಗಳಿಗೆ ಭೇಟಿಮಾಡಲು ನಮ್ಮ ಸ್ಥಳಿಕ ಹಿರಿಯ ಮಂಡಲಿ ತುಂಬ ಆಸಕ್ತಿವಹಿಸುತ್ತದೆ. ನಾನು ಅಧ್ಯಯನ ನಡೆಸಿ ಯಾರಿಗೆ ಸತ್ಯದ ಜ್ಞಾನವನ್ನು ಕೊಟ್ಟೆನೋ ಆ ಸಹೋದರನ ಬಗ್ಗೆ ಯೋಚಿಸಿದೆ. ಅವನು ಸುಮಾರು 25 ವರ್ಷಗಳಿಂದ ನಿಷ್ಕ್ರಿಯನಾಗಿದ್ದನು ಮತ್ತು ಬಹಳ ಕಷ್ಟಮಯ ಪರಿಸ್ಥಿತಿಯಲ್ಲಿದ್ದನು. ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದರಿಂದ ಅವನಿಗೆ ಹೇಗೆ ಸಹಾಯ ಸಿಗುವುದು ಎಂಬುದನ್ನು ನಾನವನಿಗೆ ವಿವರಿಸಿದೆ. ಸ್ವಲ್ಪ ಸಮಯದ ನಂತರ ಅವನು ರಾಜ್ಯ ಸಭಾಗೃಹಕ್ಕೆ ಬಂದನು ಮತ್ತು ಮಂದೆಗೆ ಮರಳುವ ತನ್ನ ದೃಢನಿರ್ಣಯವನ್ನು ಬಲಪಡಿಸಲು ಸಹಾಯಕ್ಕಾಗಿ ತನ್ನೊಂದಿಗೆ ಪ್ರಚಾರಕನೊಬ್ಬನು ಬೈಬಲ್‌ ಅಧ್ಯಯನ ನಡೆಸುವಂತೆ ಒಪ್ಪಿಕೊಂಡನು.”

17 ಆ ಸಹೋದರನು ನಿಷ್ಕ್ರಿಯನಾದದ್ದೇಕೆ? ಅವನು ತಿಳಿಸುವುದು: “ಆಧ್ಯಾತ್ಮಿಕ ವಿಷಯಗಳಿಗಿಂತ ಪ್ರಾಪಂಚಿಕ ವಿಷಯಗಳಿಗೆ ಹೆಚ್ಚು ಗಮನ ಕೊಡಲಾರಂಭಿಸಿದ್ದೆ. ಸಮಯಾನಂತರ ನಾನು ಅಧ್ಯಯನ ಮಾಡುವುದನ್ನು, ಸಾರುವುದನ್ನು ಮತ್ತು ಕೂಟಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದೆ. ನಾನು ಕ್ರೈಸ್ತ ಸಭೆಯೊಂದಿಗೆ ಸಹವಸಿಸುವುದನ್ನು ನಿಲ್ಲಿಸಿಬಿಟ್ಟದ್ದು ನನಗೆ ಗೊತ್ತೇ ಆಗಲಿಲ್ಲ. ಆದರೆ ಆ ಹಿರಿಯನು ತೋರಿಸಿದ ವೈಯಕ್ತಿಕ ಹಾಗೂ ಯಥಾರ್ಥ ಆಸಕ್ತಿ ನನಗೆ ಮರಳುವಂತೆ ಸಹಾಯ ಮಾಡಿತು.” ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದ ಮೇಲೆ ಈ ಸಹೋದರನ ಸಮಸ್ಯೆಗಳು ಕಡಿಮೆಯಾಗತೊಡಗಿದವು. ಅವನು ಹೇಳುವುದು: “ನನ್ನ ಜೀವನದಲ್ಲಿ ಯೆಹೋವನ ಹಾಗೂ ಆತನ ಸಂಘಟನೆಯ ಪ್ರೀತಿ ಮತ್ತು ಮಾರ್ಗದರ್ಶನದ ಕೊರತೆಯಿತ್ತೆಂಬುದನ್ನು ನಾನು ಗ್ರಹಿಸಿದೆ.”

18 ಸಭೆಯಲ್ಲಿ ಈ ಸಹೋದರನನ್ನು ಹೇಗೆ ಬರಮಾಡಿಕೊಳ್ಳಲಾಯಿತು? ಅವನು ಹೇಳುವುದು: “ಯೇಸು ತಿಳಿಸಿದಂಥ ಪೋಲಿಹೋದ ಮಗನಂತೆ ನನಗನಿಸಿತು. 30 ವರ್ಷಗಳ ಮುಂಚೆ ಮತ್ತು ಈಗಲೂ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿರುವ ವೃದ್ಧ ಸಹೋದರಿಯೊಬ್ಬಳು ನನಗೆ ಹೇಳಿದ್ದು, ‘ಮಗನೇ, ಮನೆಗೆ ಸ್ವಾಗತ!’ ಆ ಮಾತು ನನ್ನ ಹೃದಯ ಸ್ಪರ್ಶಿಸಿತು. ನಿಜಕ್ಕೂ ಮನೆ ಸೇರಿದ ಅನಿಸಿಕೆ ನನಗಾಯಿತು. ನನ್ನ ಕಡೆಗೆ ಆ ಹಿರಿಯನು ಮತ್ತು ಸಭೆಯವರೆಲ್ಲರೂ ತೋರಿಸಿದ ಪ್ರೀತಿ, ಸ್ನೇಹ, ತಾಳ್ಮೆ ಮತ್ತು ಆಸಕ್ತಿಗಾಗಿ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಯೆಹೋವನ ಕಡೆಗೆ ಮತ್ತು ನೆರೆಯವರ ಕಡೆಗೆ ಅವರಿಗಿದ್ದ ಪ್ರೀತಿ ಮಂದೆಗೆ ಮರಳುವಂತೆ ನನಗೆ ಸಹಾಯ ಮಾಡಿತು.”

ಈಗಲೇ ಕಾರ್ಯವೆಸಗುವಂತೆ ಉತ್ತೇಜಿಸಿ

19 ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಮತ್ತು ಈ ವಿಷಯಗಳ ವ್ಯವಸ್ಥೆಯ ಅಂತ್ಯ ಹತ್ತಿರದಲ್ಲೇ ಇದೆ. ಆದ್ದರಿಂದ ಕ್ರೈಸ್ತ ಕೂಟಗಳಿಗೆ ಹಾಜರಾಗುವಂತೆ ನಿಷ್ಕ್ರಿಯರನ್ನು ಉತ್ತೇಜಿಸಿರಿ ಮತ್ತದನ್ನು ಈಗಿಂದೀಗಲೇ ಆರಂಭಿಸುವಂತೆ ಹುರಿದುಂಬಿಸಿ. ದೇವರೊಂದಿಗಿನ ಅವರ ಸಂಬಂಧವನ್ನು ಕಡಿದುಹಾಕುವಂತೆ ಮತ್ತು ಸತ್ಯಾರಾಧನೆಯನ್ನು ಬಿಟ್ಟುಬಿಟ್ಟರೆ ಅವರಿಗೆ ಜೀವನದ ಜಂಜಾಟಗಳಿಂದ ನೆಮ್ಮದಿ ಸಿಗುವುದು ಎಂದೆಣಿಸುವಂತೆ ಮಾಡುವುದೇ ಸೈತಾನನ ಗುರಿ ಎಂಬುದನ್ನು ಅವರಿಗೆ ನೆನಪುಹುಟ್ಟಿಸಿ. ಯೇಸುವಿನ ನಂಬಿಗಸ್ತ ಹಿಂಬಾಲಕರಾಗಿರುವ ಮೂಲಕ ಮಾತ್ರ ನಿಜ ಚೈತನ್ಯ ಅನುಭವಿಸಬಹುದು ಎಂಬ ಅಶ್ವಾಸನೆ ಅವರಿಗೆ ಕೊಡಿ.—ಮತ್ತಾಯ 11:28-30 ಓದಿ.

20 ನಾವು ಮಾಡಸಾಧ್ಯವಿರುವುದನ್ನು ಮಾತ್ರ ದೇವರು ನಮ್ಮಿಂದ ಕೇಳಿಕೊಳ್ಳುತ್ತಾನೆಂದು ನಿಷ್ಕ್ರಿಯ ವ್ಯಕ್ತಿಯ ಜ್ಞಾಪಕಕ್ಕೆ ತನ್ನಿ. ಲಾಜರನ ಸಹೋದರಿಯಾದ ಮರಿಯಳು ಯೇಸುವಿನ ಮರಣಕ್ಕೆ ಸ್ವಲ್ಪ ಮುಂಚೆ ಅವನ ತಲೆಯ ಮೇಲೆ ಬೆಲೆಬಾಳುವ ಸುಗಂಧ ತೈಲವನ್ನು ಹೊಯ್ದಾಗ ಅವಳನ್ನು ಟೀಕಿಸಲಾಯಿತು. ಅದಕ್ಕೆ ಯೇಸುವಂದದ್ದು: “ಈಕೆಯನ್ನು ಬಿಡಿರಿ. . . . ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ.” (ಮಾರ್ಕ 14:6-8) ದೇವಾಲಯದಲ್ಲಿ ಚಿಕ್ಕ ಮೊತ್ತದ ಕಾಣಿಕೆಯನ್ನು ಹಾಕಿದ ವಿಧವೆಯನ್ನು ಯೇಸು ಪ್ರಶಂಸಿಸಿದನು. ಆಕೆ ಕೂಡ ತನ್ನ ಕೈಲಾದದ್ದನ್ನು ಮಾಡಿದಳು. (ಲೂಕ 21:1-4) ನಮ್ಮಲ್ಲಿ ಹೆಚ್ಚಿನವರಿಗೆ ಕ್ರೈಸ್ತ ಕೂಟಗಳಿಗೆ ಹಾಜರಾಗಲು ಹಾಗೂ ರಾಜ್ಯ ಸಾರುವಿಕೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿದೆ. ಯೆಹೋವನ ಸಹಾಯದಿಂದ, ಈಗ ನಿಷ್ಕ್ರಿಯರಾಗಿರುವ ಅನೇಕರು ಮುಂದಿನ ದಿನಗಳಲ್ಲಿ ಅದನ್ನೇ ಮಾಡಲು ಶಕ್ತರಾಗುವರು.

21 ಒಂದುವೇಳೆ ಮಂದೆಯಿಂದ ದೂರಸರಿದ ನಿಷ್ಕ್ರಿಯ ವ್ಯಕ್ತಿಯೊಬ್ಬನು ತನ್ನ ಸಹೋದರರಿಗೆ ಪುನಃ ಮುಖ ಹೇಗೆ ತೋರಿಸಲಿ ಎಂದು ನೆನಸುತ್ತಿರುವಲ್ಲಿ, ಪೋಲಿಹೋದ ಮಗನು ಮನೆಗೆ ಮರಳಿದಾಗ ಆದ ಸಂತೋಷವನ್ನು ನೀವು ಅವನ ನೆನಪಿಗೆ ತರಬಹುದು. ಒಬ್ಬ ವ್ಯಕ್ತಿ ಸಭೆಗೆ ಮರಳುವಾಗಲೂ ತದ್ರೀತಿಯ ಸಂತೋಷವಾಗುತ್ತದೆ. ಈಗಲೇ ಕಾರ್ಯವೆಸಗುತ್ತಾ ಸೈತಾನನನ್ನು ಎದುರಿಸಿ ದೇವರ ಸಮೀಪಕ್ಕೆ ಬರುವಂತೆ ಅವನನ್ನು ಪ್ರೋತ್ಸಾಹಿಸಿ.—ಯಾಕೋ. 4:7, 8.

22 ಯೆಹೋವನ ಕಡೆಗೆ ತಿರುಗಿಕೊಳ್ಳುವವರಿಗೆ ಹರ್ಷಕರ ಸ್ವಾಗತ ಕಾದಿದೆ. (ಪ್ರಲಾ. 3:40) ಹಿಂದೆ ಅವರು ದೇವರನ್ನು ಸೇವಿಸುತ್ತಿದ್ದಾಗ ಖಂಡಿತವಾಗಿಯೂ ಸಂತೋಷದಿಂದಿದ್ದರು. ತಡಮಾಡದೇ ಮಂದೆಗೆ ಮರಳುವವರಿಗೆ ಮುಂದೆಯೂ ಅಪರಿಮಿತ ಆಶೀರ್ವಾದಗಳು ಕಾದಿವೆ!

ನಿಮ್ಮ ಉತ್ತರವೇನು?

• ಎಡವಿಬಿದ್ದ ಕಾರಣ ನಿಷ್ಕ್ರಿಯನಾದ ಕ್ರೈಸ್ತನೊಬ್ಬನಿಗೆ ನೀವು ಹೇಗೆ ಸಹಾಯ ಮಾಡಬಹುದು?

• ನಿರ್ದಿಷ್ಟ ಬೈಬಲ್‌ ಬೋಧನೆಯ ಕುರಿತ ವೈಯಕ್ತಿಕ ನೋಟದಿಂದಾಗಿ ದೇವರ ಮಂದೆಯಿಂದ ದೂರಸರಿದವರೊಂದಿಗೆ ಹೇಗೆ ತರ್ಕಿಸಬಹುದು?

• ಸಭೆಗೆ ಮರಳಲು ಹಿಂಜರಿಯುವ ವ್ಯಕ್ತಿಯೊಬ್ಬನಿಗೆ ಹೇಗೆ ಸಹಾಯ ಮಾಡಬಹುದು?

[ಅಧ್ಯಯನ ಪ್ರಶ್ನೆಗಳು]

1. ಅನೇಕ ಶಿಷ್ಯರು ಯೇಸುವನ್ನು ಬಿಟ್ಟುಹೋದಾಗ ಪೇತ್ರನು ಏನಂದನು?

2. ನ್ಯಾಯನಿರ್ಣಾಯಕ ಅಥವಾ ಗೋಪ್ಯವಾಗಿಡಬೇಕಾದ ವಿಷಯಗಳ ಕುರಿತು ಏನನ್ನು ನೆನಪಿನಲ್ಲಿಡತಕ್ಕದ್ದು?

3. ನೂರು ಕುರಿಗಳನ್ನು ಹೊಂದಿದ್ದ ವ್ಯಕ್ತಿಯ ಒಂದು ಕುರಿ ತಪ್ಪಿಸಿಕೊಂಡು ಬಳಿಕ ಸಿಕ್ಕಿದಾಗ ಅವನ ಪ್ರತಿಕ್ರಿಯೆ ಹೇಗಿತ್ತು?

4. ಗಲಾತ್ಯ 6:2, 5ರಿಂದ ನಾವೇನನ್ನು ತಿಳಿದುಕೊಳ್ಳಬಹುದು?

5, 6. (ಎ) ನಿಷ್ಕ್ರಿಯರಾದ ಜೊತೆ ವಿಶ್ವಾಸಿಗಳು ಮಾತಾಡುವಾಗ ಅವರಿಗೆ ಕಿವಿಗೊಟ್ಟು ಕೇಳುವುದು ಅಗತ್ಯವೇಕೆ? (ಬಿ) ದೇವಜನರ ಸಹವಾಸ ಬಿಟ್ಟದ್ದು ಸ್ವತಃ ಅವರಿಗೆ ಹಾನಿಕರವಾಗಿತ್ತೆಂಬುದನ್ನು ನಿಷ್ಕ್ರಿಯ ವ್ಯಕ್ತಿಗಳಿಗೆ ನೀವು ಹೇಗೆ ಮನಗಾಣಿಸುವಿರಿ?

7. ಮಂದೆಯಿಂದ ತಪ್ಪಿಸಿಕೊಂಡವರು ಏನು ಮಾಡುವಂತೆ ನಾವು ಪ್ರೋತ್ಸಾಹಿಸಬಹುದು?

8, 9. ಎಡವಿಬಿದ್ದ ವ್ಯಕ್ತಿಯೊಂದಿಗೆ ಒಬ್ಬ ಹಿರಿಯನು ಹೇಗೆ ತರ್ಕಿಸಬಲ್ಲನು?

10, 11. ಬೈಬಲ್‌ ಬೋಧನೆಯೊಂದರ ಬಗ್ಗೆ ಭಿನ್ನವಾದ ತಿಳುವಳಿಕೆಯುಳ್ಳವರಿಗೆ ಸಹಾಯ ಮಾಡಲು ಯಾವ ತರ್ಕ ಪರಿಣಾಮಕಾರಿಯಾಗಿದೆ?

12, 13. ಮಂದೆಯಿಂದ ತಪ್ಪಿಸಿಕೊಂಡವನು ತಾನೊಂದು ಗಂಭೀರ ಪಾಪಮಾಡಿದ್ದೇನೆಂದು ಒಪ್ಪಿಕೊಳ್ಳುವಲ್ಲಿ ಅವನಿಗೆ ಹೇಗೆ ಸಹಾಯ ನೀಡಬಹುದು?

14. ಪೋಲಿಹೋದ ಮಗನ ಕುರಿತಾದ ಯೇಸುವಿನ ದೃಷ್ಟಾಂತವನ್ನು ಸ್ವಂತ ಮಾತುಗಳಲ್ಲಿ ವಿವರಿಸಿ.

15. ಕೆಲವರು ಸಭೆಯಿಂದ ದೂರಸರಿಯುವುದೇಕೆ?

16-18. (ಎ) ಅನೇಕ ವರ್ಷಗಳ ವರೆಗೆ ನಿಷ್ಕ್ರಿಯನಾಗಿದ್ದ ಸಹೋದರನಿಗೆ ಹಿರಿಯನೊಬ್ಬನು ಹೇಗೆ ಸಹಾಯ ಮಾಡಿದನು? (ಬಿ) ಆ ಸಹೋದರನು ನಿಷ್ಕ್ರಿಯನಾದದ್ದು ಏಕೆ, ಅವನಿಗೆ ಹೇಗೆ ಸಹಾಯ ಸಿಕ್ಕಿತು, ಮತ್ತು ಸಭೆ ಅವನನ್ನು ಹೇಗೆ ಬರಮಾಡಿಕೊಂಡಿತು?

19, 20. ನಿಷ್ಕ್ರಿಯ ವ್ಯಕ್ತಿಗಳು ತಡಮಾಡದೇ ಮಂದೆಗೆ ಮರಳುವಂತೆ ಹೇಗೆ ಉತ್ತೇಜಿಸುವಿರಿ, ಮತ್ತು ಯೆಹೋವನು ನಮ್ಮಿಂದ ಹೆಚ್ಚನ್ನು ಕೇಳಿಕೊಳ್ಳುವುದಿಲ್ಲ ಎಂಬದನ್ನು ಅವರಿಗೆ ಹೇಗೆ ತೋರಿಸುವಿರಿ?

21, 22. ಯೆಹೋವನೆಡೆಗೆ ತಿರುಗಿಕೊಳ್ಳುವವರಿಗೆ ನೀವು ಯಾವ ಆಶ್ವಾಸನೆ ಕೊಡಬಲ್ಲಿರಿ?

[ಪುಟ 13ರಲ್ಲಿರುವ ಚಿತ್ರ]

ನಿಷ್ಕ್ರಿಯನಾದ ಜೊತೆ ವಿಶ್ವಾಸಿಯೊಬ್ಬನು ತನ್ನ ಭಾವನೆಗಳನ್ನು ವ್ಯಕ್ತಪಡಿಸುವಾಗ ಕಿವಿಗೊಟ್ಟು ಕೇಳಿ

[ಪುಟ 15ರಲ್ಲಿರುವ ಚಿತ್ರ]

ಪೋಲಿಹೋದ ಮಗನ ಕುರಿತ ಯೇಸುವಿನ ದೃಷ್ಟಾಂತವನ್ನು ಪರಿಗಣಿಸುವುದು, ಮಂದೆಗೆ ಮರಳುವಂತೆ ಕೆಲವರನ್ನು ಪ್ರೇರಿಸಬಹುದು