ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆರೋಗ್ಯಾರೈಕೆಯ ಕುರಿತು ಶಾಸ್ತ್ರಾಧಾರಿತ ನೋಟವನ್ನಿಟ್ಟುಕೊಳ್ಳಿ

ಆರೋಗ್ಯಾರೈಕೆಯ ಕುರಿತು ಶಾಸ್ತ್ರಾಧಾರಿತ ನೋಟವನ್ನಿಟ್ಟುಕೊಳ್ಳಿ

ಆರೋಗ್ಯಾರೈಕೆಯ ಕುರಿತು ಶಾಸ್ತ್ರಾಧಾರಿತ ನೋಟವನ್ನಿಟ್ಟುಕೊಳ್ಳಿ

“ನಿನ್ನ ದೇವರಾದ ಕರ್ತನನ್ನು [ಯೆಹೋವನನ್ನು] . . . ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.”—ಮಾರ್ಕ 12:30.

ಮನುಷ್ಯರಿಗಾಗಿದ್ದ ಯೆಹೋವ ದೇವರ ಮೂಲ ಉದ್ದೇಶದಲ್ಲಿ ಅಸ್ವಸ್ಥತೆ ಹಾಗೂ ಮರಣ ಸೇರಿರಲಿಲ್ಲ. ಆತನು ಆದಾಮಹವ್ವರನ್ನು ಏದೆನ್‌ ತೋಟದಲ್ಲಿ ಅಂದರೆ ಸುಖದಾಯಕ ಪರದೈಸಿನಲ್ಲಿ ಇಟ್ಟು ಆ ತೋಟವನ್ನು “ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ” ಅವರನ್ನು ನೇಮಿಸಿದನು. ಅವರು ಕೇವಲ 70 ಅಥವಾ 80 ವರ್ಷಗಳಿಗಲ್ಲ ಬದಲಿಗೆ ಸದಾಕಾಲ ಜೀವಿಸಬೇಕೆಂದು ಆತನು ಉದ್ದೇಶಿಸಿದ್ದನು. (ಆದಿ. 2:8, 15; ಕೀರ್ತ. 90:10) ಆ ಪ್ರಪ್ರಥಮ ದಂಪತಿ ಯೆಹೋವನಿಗೆ ನಂಬಿಗಸ್ತರಾಗಿ ಆತನ ಪರಮಾಧಿಕಾರಕ್ಕೆ ಪ್ರೀತಿಯಿಂದ ಅಧೀನರಾಗಿರುತ್ತಿದ್ದರೆ ಅವರೆಂದೂ ಕಾಯಿಲೆ, ನಿಶ್ಶಕ್ತತೆ ಮತ್ತು ಮರಣಕ್ಕೆ ಒಳಗಾಗುತ್ತಿರಲಿಲ್ಲ.

2 ಪ್ರಸಂಗಿ ಪುಸ್ತಕದ 12ನೇ ಅಧ್ಯಾಯ, ಅಪರಿಪೂರ್ಣ ಮಾನವರಿಗೆ ವೃದ್ಧಾಪ್ಯದಲ್ಲಿ ಬರುವ “ಕಷ್ಟದ ದಿನಗಳ” ಬಗ್ಗೆ ಸವಿವರವಾಗಿ ಬಣ್ಣಿಸುತ್ತದೆ. (ಪ್ರಸಂಗಿ 12:1-7 ಓದಿ.) ನರೆ ಕೂದಲನ್ನು “ಬಾದಾಮಿಯ ಮರ” ಹೂಬಿಡುವುದಕ್ಕೆ ಹೋಲಿಸಲಾಗಿದೆ. ಕಾಲುಗಳನ್ನು, ‘ಬಲಿಷ್ಠರಿಗೆ’ ಹೋಲಿಸಲಾಗಿದೆ ಮತ್ತು ವೃದ್ಧಾಪ್ಯದಲ್ಲಿ ಅವು ಬೊಗ್ಗಿ ಹೋಗಿರುವುದರಿಂದ ನಡೆಯಲು ಕಷ್ಟವಾಗುತ್ತದೆ. ಬೆಳಕಿಗಾಗಿ ಕಿಟಕಿಯ ಕಡೆಗೆ ನಡೆದು ಅಲ್ಲಿ ಕತ್ತಲಿರುವುದನ್ನು ನೋಡುವವರ ಚಿತ್ರಣವು ಇಳಿವಯಸ್ಸಿನಲ್ಲಿ ದೃಷ್ಟಿ ಮಂದವಾಗುವುದನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಹಲ್ಲುಗಳು ಉದುರಿಹೋಗುವುದನ್ನು ‘ಅರೆಯುವವರು ಕೊಂಚವಾಗಿ ಕೆಲಸವನ್ನು ನಿಲ್ಲಿಸಿಬಿಡುವುದಕ್ಕೆ’ ಹೋಲಿಸಲಾಗಿದೆ.

3 ಮನುಷ್ಯರಿಗೆ ನಡುಗುವ ಕಾಲುಗಳು, ಮಂದ ದೃಷ್ಟಿ ಮತ್ತು ಹಲ್ಲಿಲ್ಲದ ಬೋಡುಗಳಿರುವಂತೆ ದೇವರು ಖಂಡಿತ ಉದ್ದೇಶಿಸಿರಲಿಲ್ಲ. ವಾಸ್ತವದಲ್ಲಿ, ಮೆಸ್ಸೀಯ ರಾಜ್ಯದ ಮೂಲಕ ದೇವಕುಮಾರನು ‘ಲಯಮಾಡಲಿರುವ ಸೈತಾನನ ಕೆಲಸಗಳಲ್ಲಿ’ ಒಂದು, ಆದಾಮನಿಂದ ಬಾಧ್ಯತೆಯಾಗಿ ಬಂದಿರುವ ಮರಣವಾಗಿದೆ. ಅಪೊಸ್ತಲ ಯೋಹಾನನು ಬರೆದದ್ದು: “ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು.”—1 ಯೋಹಾ. 3:8.

ಸ್ವಲ್ಪಮಟ್ಟಿಗಿನ ಚಿಂತೆ ಸಹಜ

4 ಪಾಪಪೂರ್ಣ ಮಾನವಕುಲವನ್ನು ಬಾಧಿಸುವ ಅನಾರೋಗ್ಯ ಮತ್ತು ವೃದ್ಧಾಪ್ಯದ ಸಮಸ್ಯೆಗಳು ಸದ್ಯದಲ್ಲಿ ಯೆಹೋವನ ಸೇವಕರಲ್ಲೂ ಕೆಲವರಿಗಿವೆ. ಇಂಥ ಸನ್ನಿವೇಶಗಳಲ್ಲಿ ನಮ್ಮ ಆರೋಗ್ಯದ ಬಗ್ಗೆ ಸ್ವಲ್ಪಮಟ್ಟಿಗಿನ ಚಿಂತೆ ಸಹಜವೂ ಪ್ರಯೋಜನಕರವೂ ಆಗಿದೆ. ಏಕೆಂದರೆ ನಾವು ಯೆಹೋವನನ್ನು ‘ನಮ್ಮ ಪೂರ್ಣಶಕ್ತಿಯಿಂದ’ ಸೇವಿಸಬಯಸುತ್ತೇವೆ. (ಮಾರ್ಕ 12:30) ತಕ್ಕಷ್ಟು ಮಟ್ಟಿಗೆ ಆರೋಗ್ಯವಂತರಾಗಿರಲು ನಾವು ಪ್ರಯತ್ನಿಸಬೇಕಾದರೂ, ಕಾಯಿಲೆ ಬಾರದಂತಿರಲು ಅಥವಾ ಮುಪ್ಪನ್ನು ಮುಂದೂಡಲು ನಾವು ಹೆಚ್ಚೇನು ಮಾಡಸಾಧ್ಯವಿಲ್ಲ ಎಂಬ ವಾಸ್ತವಿಕತೆಯನ್ನು ಒಪ್ಪಿಕೊಳ್ಳಲೇಬೇಕು.

5 ಯೆಹೋವನ ನಂಬಿಗಸ್ತ ಸೇವಕರಲ್ಲಿ ಅನೇಕರಿಗೆ ಆರೋಗ್ಯ ಸಮಸ್ಯೆಗಳಿದ್ದವು. ಇವರಲ್ಲಿ ಎಪಫ್ರೊದೀತನು ಒಬ್ಬನು. (ಫಿಲಿ. 2:25-27) ಅಲ್ಲದೇ, ಅಪೊಸ್ತಲ ಪೌಲನ ನಿಷ್ಠಾವಂತ ಒಡನಾಡಿಯಾದ ತಿಮೊಥೆಯನಿಗೆ ಆಗಾಗ್ಗೆ ಹೊಟ್ಟೆಯ ಸಮಸ್ಯೆ ಕಾಡುತ್ತಿತ್ತು ಮತ್ತು ಅದಕ್ಕೆಂದೇ ಪೌಲನು “ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೋ” ಎಂದು ಶಿಫಾರಸ್ಸುಮಾಡಿದನು. (1 ತಿಮೊ. 5:23) ಅಷ್ಟುಮಾತ್ರವಲ್ಲದೆ ಸ್ವತಃ ಪೌಲನಿಗೆ, ‘ಶರೀರದಲ್ಲಿ ಒಂದು ಶೂಲ ನಾಟಿತ್ತು.’ ಇದು ಪ್ರಾಯಶಃ ಅವನಿಗಿದ್ದ ದೃಷ್ಟಿ ದೋಷವಾಗಿತ್ತು ಅಥವಾ ಆ ಸಮಯದಲ್ಲಿ ಚಿಕಿತ್ಸೆಯಿರದಂಥ ಯಾವುದೋ ದೈಹಿಕ ಕಾಯಿಲೆಯಾಗಿತ್ತು. (2 ಕೊರಿಂ 12:7; ಗಲಾ. 4:15; 6:11) ಅವನು ‘ಶರೀರದಲ್ಲಿ ನಾಟಿರುವ ಶೂಲದ’ ಬಗ್ಗೆ ಯೆಹೋವನಿಗೆ ಕಟ್ಟಾಸಕ್ತಿಯಿಂದ ಬೇಡಿದ್ದನು. (2 ಕೊರಿಂಥ 12:8-10 ಓದಿ.) ಆದರೆ ದೇವರು ಅದನ್ನು ಅದ್ಭುತಕರವಾದ ರೀತಿಯಲ್ಲಿ ತೆಗೆದುಹಾಕಲಿಲ್ಲ. ಬದಲಿಗೆ ಅದನ್ನು ತಾಳಿಕೊಳ್ಳುವಂತೆ ಅವನನ್ನು ಬಲಪಡಿಸಿದನು. ಹೀಗೆ ಪೌಲನ ಬಲಹೀನತೆಯಲ್ಲಿ ಯೆಹೋವನ ಬಲವು ತೋರಿಬಂತು. ಇದರಿಂದ ನಮಗೇನಾದರೂ ಪಾಠವಿದೆಯೋ?

ಆರೋಗ್ಯಾರೈಕೆಯ ಕುರಿತು ವಿಪರೀತ ಚಿಂತಿಸದಿರಿ

6 ನಿಮಗೆ ತಿಳಿದಿರುವಂತೆ ಯೆಹೋವನ ಸಾಕ್ಷಿಗಳು ಔಷಧೋಪಚಾರ ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ಸ್ವೀಕರಿಸುತ್ತಾರೆ. ನಮ್ಮ ಎಚ್ಚರ! ಪತ್ರಿಕೆಯಲ್ಲೂ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳಿರುತ್ತವೆ. ನಾವು ಒಂದು ನಿರ್ದಿಷ್ಟ ಚಿಕಿತ್ಸಾ ವಿಧಾನವನ್ನು ಶಿಫಾರಸ್ಸು ಮಾಡದಿದ್ದರೂ ವೈದ್ಯಕೀಯ ಸೇವೆ ನೀಡುವವರ ಸಹಾಯ ಹಾಗೂ ಸಹಕಾರವನ್ನು ಮಾನ್ಯಮಾಡುತ್ತೇವೆ. ಯಾರಿಗೂ ಪರಿಪೂರ್ಣ ಆರೋಗ್ಯ ಸಿಗಲಾರದು ಎಂಬುದಂತೂ ನಮಗೆ ತಿಳಿದಿದೆ. ಆದ್ದರಿಂದ, ಸದಾ ಆರೋಗ್ಯದ ಬಗೆಗೆ ಚಿಂತಿಸದಂತೆ ಜಾಗ್ರತೆ ವಹಿಸುವುದು ವಿವೇಕಯುತವೆಂದು ನಮಗೆ ಗೊತ್ತಿದೆ. ನಮ್ಮ ಮನೋಭಾವವು ‘ಯಾವ ನಿರೀಕ್ಷೆಯಿಲ್ಲದವರಿಗಿಂತ’ ಭಿನ್ನವಾಗಿರತಕ್ಕದ್ದು. ಅಂಥವರಿಗೆ ಸದ್ಯದ ಜೀವನವೇ ಸರ್ವಸ್ವ ಮತ್ತು ಈ ಕಾರಣದಿಂದ ತಮ್ಮ ರೋಗರುಜಿನಗಳಿಂದ ಗುಣಮುಖರಾಗಲು ಯಾವುದೇ ಚಿಕಿತ್ಸೆ ಪಡೆಯಲು ಸಿದ್ಧರಿರುತ್ತಾರೆ. (ಎಫೆ. 2:2, 12) ನಮಗಾದರೋ ನಮ್ಮ ಈಗಿನ ಜೀವವನ್ನು ಕಾಪಾಡಿಕೊಳ್ಳಲಿಕ್ಕಾಗಿ ಯೆಹೋವನ ಮೆಚ್ಚುಗೆಯನ್ನು ಕಳೆದುಕೊಳ್ಳಬಾರದೆಂಬ ದೃಢಸಂಕಲ್ಪವಿದೆ. ಏಕೆಂದರೆ, ದೇವರಿಗೆ ನಂಬಿಗಸ್ತರಾಗಿ ಉಳಿದರೆ ಆತನು ವಾಗ್ದಾನಿಸಿದ ನೂತನ ವ್ಯವಸ್ಥೆಯಲ್ಲಿ ನಿತ್ಯಜೀವವನ್ನು ಅಂದರೆ “ವಾಸ್ತವವಾದ ಜೀವವನ್ನು ಹೊಂದುವ” ನಿಶ್ಚಯ ನಮಗಿದೆ.—1 ತಿಮೊ. 6:12, 18, 19; 2 ಪೇತ್ರ 3:13.

7 ನಮ್ಮ ಆರೋಗ್ಯದ ಕುರಿತು ವಿಪರೀತವಾಗಿ ಚಿಂತಿಸದಿರಲು ನಮಗೆ ಇನ್ನೊಂದು ಕಾರಣವಿದೆ. ಇಂಥ ವಿಪರೀತ ಚಿಂತೆಯು ನಮ್ಮನ್ನು ಸ್ವಾರ್ಥಿಗಳನ್ನಾಗಿ ಮಾಡುವುದು. ಪೌಲನು ಫಿಲಿಪ್ಪಿಯ ಕ್ರೈಸ್ತರಿಗೆ ಈ ಅಪಾಯದ ಕುರಿತು ಎಚ್ಚರಿಸಿ ಹೇಳಿದ್ದು: “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.” (ಫಿಲಿ. 2:4) ನಮ್ಮ ಆರೋಗ್ಯವನ್ನು ತಕ್ಕಮಟ್ಟಿಗೆ ನೋಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ನಮ್ಮ ಸಹೋದರರ ಕುರಿತು ಹಾಗೂ ನಾವು ಯಾರಿಗೆ ‘ಪರಲೋಕ ರಾಜ್ಯದ ಸುವಾರ್ತೆಯನ್ನು’ ತಿಳಿಸುತ್ತೇವೋ ಅವರ ಕುರಿತು ನಾವು ತೀವ್ರ ಆಸಕ್ತಿ ವಹಿಸುವುದು, ನಾವು ಕೇವಲ ನಮ್ಮ ಶಾರೀರಿಕ ಕ್ಷೇಮದ ವಿಷಯದ ಚಿಂತೆಯಲ್ಲೇ ಮುಳುಗಿರದಂತೆ ತಡೆಯುವುದು.—ಮತ್ತಾ. 24:14.

8 ಕ್ರೈಸ್ತನೊಬ್ಬನು ತನ್ನ ಆರೋಗ್ಯದ ಕುರಿತ ಚಿಂತೆಯಿಂದಾಗಿ ರಾಜ್ಯಾಭಿರುಚಿಗಳನ್ನು ಬದಿಗೊತ್ತುವಂಥ ಅಪಾಯವಿದೆ. ಆರೋಗ್ಯಾರೈಕೆಯ ಬಗೆಗಿನ ವಿಪರೀತ ಚಿಂತೆಯು, ನಾವು ನಿರ್ದಿಷ್ಟ ಪಥ್ಯ, ಔಷಧಿ ಅಥವಾ ಕೆಲವು ಪೂರಕ ಆಹಾರ ಪದಾರ್ಥಗಳ ಕುರಿತ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಇತರರ ಮೇಲೆ ಹೊರಿಸುವುದಕ್ಕೂ ನಡೆಸಬಹುದು. ಈ ಕುರಿತು ಅಪೊಸ್ತಲ ಪೌಲನ ಮಾತುಗಳ ಹಿಂದಿರುವ ಮೂಲತತ್ತ್ವವನ್ನು ಪರಿಗಣಿಸಿರಿ. ಆತನಂದದ್ದು: ‘ಉತ್ತಮ [“ಹೆಚ್ಚು ಪ್ರಾಮುಖ್ಯ,” NW] ಕಾರ್ಯಗಳು ಯಾವವೆಂದು ನೀವು ವಿವೇಚಿಸುವವರಾಗಬೇಕೆಂತಲೂ ಕ್ರಿಸ್ತನು ಬರುವ ದಿನದಲ್ಲಿ ನೀವು ಸರಳರಾಗಿಯೂ ನಿರ್ಮಲರಾಗಿಯೂ ಕಾಣಿಸಿಕೊಳ್ಳಬೇಕು.’—ಫಿಲಿ. 1:10.

ಯಾವುದು ಹೆಚ್ಚು ಪ್ರಾಮುಖ್ಯ?

9 ನಾವು ಹೆಚ್ಚು ಪ್ರಾಮುಖ್ಯ ಕಾರ್ಯಗಳ ಕಡೆಗೆ ಗಮನಹರಿಸುತ್ತೇವಾದರೆ, ಇತರರು ದೇವರೊಂದಿಗೆ ಒಳ್ಳೇ ಸಂಬಂಧವನ್ನು ಬೆಸೆಯುವಂತೆ ಸಹಾಯಮಾಡುವದರಲ್ಲಿ ಅಂದರೆ ಆಧ್ಯಾತ್ಮಿಕ ವಾಸಿಮಾಡುವಿಕೆಯ ಕೆಲಸದಲ್ಲಿ ಸಕ್ರಿಯ ಪಾತ್ರ ವಹಿಸುವೆವು. ದೇವರ ವಾಕ್ಯದ ಕುರಿತು ಸಾರುವ ಮತ್ತು ಬೋಧಿಸುವ ಮೂಲಕ ಇದನ್ನು ಮಾಡಲಾಗುತ್ತದೆ. ಈ ಹರ್ಷಭರಿತ ಕೆಲಸವು ನಮಗೆ ಮತ್ತು ನಾವು ಯಾರಿಗೆ ಬೋಧಿಸುತ್ತೇವೋ ಅವರಿಗೆ ಪ್ರಯೋಜನ ತರುವುದು. (ಜ್ಞಾನೋ. 17:22; 1 ತಿಮೊ. 4:15, 16) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಆಗಿಂದಾಗ್ಗೆ, ಗಂಭೀರ ಕಾಯಿಲೆಗಳಿರುವ ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರ ಕುರಿತ ಲೇಖನಗಳು ಬರುತ್ತವೆ. ಈ ಲೇಖನಗಳು, ಅವರು ತಮ್ಮ ಗಂಭೀರ ಕಾಯಿಲೆಗಳನ್ನು ಹೇಗೆ ನಿಭಾಯಿಸುತ್ತಿದ್ದಾರೆ ಅಥವಾ ಯೆಹೋವನ ಮತ್ತು ಆತನ ವಾಗ್ದಾನಗಳ ಬಗ್ಗೆ ಇತರರಿಗೆ ಕಲಿಸುವ ಮೂಲಕ ಸ್ವಲ್ಪಸಮಯಕ್ಕಾದರೂ ತಮ್ಮ ಸಮಸ್ಯೆಯನ್ನು ಮರೆಯಲು ಪ್ರಯತ್ನಿಸುತ್ತಾರೆ ಎಂಬದನ್ನು ವಿವರಿಸುತ್ತವೆ. *

10 ಆರೋಗ್ಯದ ಸಮಸ್ಯೆ ಎದುರಾಗುವಾಗ ಪ್ರತಿಯೊಬ್ಬ ವಯಸ್ಕ ಕ್ರೈಸ್ತನು ತನಗೆ ಬೇಕಾದ ಚಿಕಿತ್ಸೆ ಆರಿಸುವ ಜವಾಬ್ದಾರಿಯ “ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.” (ಗಲಾ. 6:5) ಹಾಗಿದ್ದರೂ ಔಷಧೋಪಚಾರದ ಕುರಿತು ನಾವು ಮಾಡುವ ಆಯ್ಕೆಯಲ್ಲಿ ಯೆಹೋವನು ಆಸಕ್ತನಾಗಿದ್ದಾನೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಬೈಬಲ್‌ ಮೂಲತತ್ತ್ವಗಳನ್ನು ಗೌರವಿಸುವುದರಿಂದ ನಾವು ಹೇಗೆ ‘ರಕ್ತವನ್ನು ವಿಸರ್ಜಿಸುತ್ತೇವೋ’ ಹಾಗೆಯೇ ದೇವರ ವಾಕ್ಯವನ್ನು ನಾವು ಆಳವಾಗಿ ಮಾನ್ಯಮಾಡುವುದರಿಂದ, ನಮಗೆ ಆಧ್ಯಾತ್ಮಿಕ ಹಾನಿಮಾಡುವ ಅಥವಾ ಯೆಹೋವನೊಂದಿಗಿನ ನಮ್ಮ ಸಂಬಂಧಕ್ಕೆ ಕುತ್ತುತರಬಲ್ಲ ಯಾವುದೇ ಔಷಧೋಪಚಾರದಿಂದ ದೂರವಿರುವೆವು. (ಅ. ಕೃ. 15:20) ರೋಗನಿರ್ಣಯಕ್ಕಾಗಿರುವ ಕೆಲವು ವಿಧಾನಗಳು ಮತ್ತು ಕೆಲವು ಔಷಧೋಪಚಾರಗಳು ಪ್ರೇತವ್ಯವಹಾರದ ಆಚರಣೆಗಳನ್ನು ಹೋಲುವಂಥದ್ದಾಗಿರುತ್ತವೆ. “ಅಲೌಕಿಕ ಶಕ್ತಿ”ಯ ಮೊರೆಹೋಗುತ್ತಿದ್ದ ಅಥವಾ ಪ್ರೇತವ್ಯವಹಾರದ ಆಚಾರಗಳನ್ನು ನಡೆಸುತ್ತಿದ್ದ ಧರ್ಮಭ್ರಷ್ಟ ಇಸ್ರಾಯೇಲ್ಯರ ವಿಷಯದಲ್ಲಿ ಯೆಹೋವನು ಅಸಮ್ಮತಿ ಸೂಚಿಸಿದನು. ಆತನಂದದ್ದು: “ವ್ಯರ್ಥನೈವೇದ್ಯವನ್ನು ಇನ್ನು ತಾರದಿರಿ, ಧೂಪವು ನನಗೆ ಅಸಹ್ಯ; ಅಮಾವಾಸ್ಯೆ, ಸಬ್ಬತ್‌ ದಿನ, ಕೂಟಪ್ರಕಟನೆ, ಇವು ಬೇಡ; ಅಧರ್ಮದಿಂದ [“ಅಲೌಕಿಕ ಶಕ್ತಿಯಿಂದ,” NW] ಕೂಡಿದ ಸಂಘವನ್ನು ನಾನು ಸಹಿಸಲಾರೆನು.” (ಯೆಶಾ. 1:13) ರೋಗಾವಸ್ಥೆಯ ಸಮಯದಲ್ಲೂ ನಾವು, ನಮ್ಮ ಪ್ರಾರ್ಥನೆಗಳಿಗೆ ಅಡ್ಡಿಮಾಡುವ ಅಥವಾ ದೇವರೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡುವ ಯಾವುದಕ್ಕೂ ಕೈಹಾಕಬಾರದು.—ಪ್ರಲಾ. 3:44.

“ಸ್ವಸ್ಥ ಚಿತ್ತ” ಅತ್ಯಗತ್ಯ

11 ನಾವು ಅಸ್ವಸ್ಥರಾಗಿರುವಾಗ ಯೆಹೋವನು ನಮ್ಮನ್ನು ಅದ್ಭುತಕರ ರೀತಿಯಲ್ಲಿ ಗುಣಪಡಿಸುತ್ತಾನೆಂದು ನಿರೀಕ್ಷಿಸದೆ, ಸೂಕ್ತ ಔಷಧೋಪಚಾರವನ್ನು ಆರಿಸಲು ಬೇಕಾದ ವಿವೇಕಕ್ಕಾಗಿ ಆತನಲ್ಲಿ ಪ್ರಾರ್ಥಿಸಬಲ್ಲೆವು. ನಾವು ಆಯ್ಕೆಮಾಡುವಾಗ ಬೈಬಲ್‌ ಮೂಲತತ್ತ್ವಗಳು ಹಾಗೂ ಪರಿಜ್ಞಾನವನ್ನು ಬಳಸಬೇಕು. ಪರಿಸ್ಥಿತಿ ಗಂಭೀರವಾಗಿರುವಲ್ಲಿ, ಕೇವಲ ಒಬ್ಬ ವಿಶೇಷ ತಜ್ಞರ ಬಳಿ ಹೋಗುವ ಬದಲು ಜ್ಞಾನೋಕ್ತಿ 15:22ರಲ್ಲಿರುವ ಸಲಹೆಯನ್ನು ನಾವು ಅಳವಡಿಸತಕ್ಕದ್ದು. ಅದು ಅನ್ನುವುದು: “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ [“ಸಲಹೆಗಾರರಿರುವಲ್ಲಿ,” NIBV] ಈಡೇರುವವು.” ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳನ್ನು, “ಇಹಲೋಕದಲ್ಲಿ ಸ್ವಸ್ಥ ಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕಬೇಕೆಂದು” ಉತ್ತೇಜಿಸಿದನು.—ತೀತ 2:12.

12 ಇಂದು ಅನೇಕರ ಸ್ಥಿತಿ ಯೇಸುವಿನ ದಿನದ ಒಬ್ಬ ರೋಗಗ್ರಸ್ತ ಮಹಿಳೆಯಂತೆಯೇ ಇದೆ. ಮಾರ್ಕ 5:25, 26 ತಿಳಿಸುವುದು: “ಆಗ ಹನ್ನೆರಡು ವರುಷದಿಂದ ರಕ್ತಕುಸುಮರೋಗವಿದ್ದ ಒಬ್ಬ ಹೆಂಗಸು ಬಂದಳು. ಆಕೆಯು ಅನೇಕ ವೈದ್ಯರಿಂದ ಬಹು ಕಷ್ಟವನ್ನು ಅನುಭವಿಸಿ ಕೈಯಲ್ಲಿದ್ದದ್ದನ್ನೆಲ್ಲಾ ಕಳಕೊಂಡರೂ ರೋಗವು ಹೆಚ್ಚುತ್ತಾ ಬಂದದ್ದೇ ಹೊರತು ಮತ್ತೇನು ಪ್ರಯೋಜನವನ್ನೂ ಹೊಂದಿರಲಿಲ್ಲ.” ಯೇಸು ಆ ಸ್ತ್ರೀಯನ್ನು ಗುಣಪಡಿಸಿದನು ಮತ್ತು ಆಕೆಯೊಂದಿಗೆ ಕನಿಕರದಿಂದ ನಡೆದುಕೊಂಡನು. (ಮಾರ್ಕ 5:27-34) ತಮ್ಮ ಕಾಯಿಲೆಯಿಂದ ಹತಾಶರಾಗಿರುವ ಅನೇಕ ಕ್ರೈಸ್ತರು ರೋಗನಿರ್ಣಯ ಅಥವಾ ಚಿಕಿತ್ಸಾ ವಿಧಾನಗಳ ವಿಷಯದಲ್ಲಿ ಶುದ್ಧಾರಾಧನೆಯ ಮೂಲತತ್ತ್ವಗಳನ್ನು ಉಲ್ಲಂಘಿಸುವ ಆಯ್ಕೆಗಳನ್ನು ಮಾಡಿದ್ದಾರೆ.

13 ಸತ್ಯಾರಾಧನೆಯಿಂದ ನಮ್ಮನ್ನು ಅಪಕರ್ಷಿಸಲು ಸೈತಾನನು ಯಾವುದೇ ವಿಧಾನವನ್ನು ಬಳಸುವನು. ಅವನು ಲೈಂಗಿಕ ಅನೈತಿಕತೆ ಮತ್ತು ಪ್ರಾಪಂಚಿಕತೆಯ ಪಾಶದ ಮೂಲಕ ಕೆಲವರನ್ನು ಎಡವಿ ಬೀಳಿಸುವಂತೆಯೇ, ಮಾಟಮಂತ್ರ ಮತ್ತು ಪ್ರೇತವ್ಯವಹಾರಕ್ಕೆ ಸಂಬಂಧಪಟ್ಟ ಚಿಕಿತ್ಸೆಗಳ ಮೂಲಕ ಇನ್ನೂ ಕೆಲವರ ಸಮಗ್ರತೆ ಮುರಿಯಲು ಪ್ರಯತ್ನಿಸುತ್ತಾನೆ. “ಕೆಡುಕನಿಂದ ನಮ್ಮನ್ನು ತಪ್ಪಿಸು” ಮತ್ತು “ಅಧರ್ಮದಿಂದ ವಿಮೋಚಿಸು” ಎಂದು ನಾವು ಯೆಹೋವನಿಗೆ ಬೇಡುತ್ತೇವೆ. ಆದ್ದರಿಂದ ಪ್ರೇತವ್ಯವಹಾರ ಮತ್ತು ಮಾಟಮಂತ್ರಗಳಿಗೆ ಸಂಬಂಧಿಸಿರಬಹುದಾದ ಯಾವುದೇ ವಿಷಯಗಳಿಗೆ ನಮ್ಮನ್ನೇ ಒಡ್ಡುವ ಮೂಲಕ ನಾವು ಸೈತಾನನ ಕೈಗೆ ಸಿಗಬಾರದು.—ಮತ್ತಾ. 6:13, BSI Reference Bible ಪಾದಟಿಪ್ಪಣಿ; ತೀತ 2:14.

14 ಯೆಹೋವನು ಇಸ್ರಾಯೇಲ್ಯರಿಗೆ ಶಕುನನೋಡುವುದನ್ನು ಮತ್ತು ಯಂತ್ರಮಂತ್ರಗಳನ್ನು ಮಾಡುವುದನ್ನು ನಿಷೇಧಿಸಿದ್ದನು. (ಧರ್ಮೋ. 18:10-12) “ಶರೀರಭಾವದ ಕರ್ಮಗಳ” ಬಗ್ಗೆ ಪೌಲನು ಮಾಡಿದ ಪಟ್ಟಿಯಲ್ಲಿ “ಮಾಟ” ಒಂದಾಗಿತ್ತು. (ಗಲಾ. 5:19, 20) ಅಷ್ಟೇ ಅಲ್ಲ, ‘ಮಾಟಗಾರರಿಗೆ’ ಯೆಹೋವನ ಹೊಸ ವ್ಯವಸ್ಥೆಯಲ್ಲಿ ಪ್ರವೇಶವಿಲ್ಲ. (ಪ್ರಕ. 21:8) ಹಾಗಾದರೆ, ಪ್ರೇತವ್ಯವಹಾರದ ಸುಳಿವಿರುವ ಎಲ್ಲ ವಿಚಾರಗಳು ಯೆಹೋವನಿಗೆ ಅಸಹ್ಯವಾಗಿವೆ ಎಂಬುದು ಸ್ಪಷ್ಟ.

“ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ”

15 ಈಗಾಗಲೇ ಗಮನಿಸಿದಂತೆ ನಿರ್ದಿಷ್ಟ ರೋಗನಿರ್ಣಯ ವಿಧಾನ ಅಥವಾ ಚಿಕಿತ್ಸಾಕ್ರಮದ ಕುರಿತು ನಮಗೆ ಯಾವುದೇ ಸಂದೇಹವಿರುವಲ್ಲಿ ಅದರಿಂದ ದೂರವಿರುವದೇ ಲೇಸು. ಆರೋಗ್ಯಾರೈಕೆಗೆ ಸಂಬಂಧಪಟ್ಟ ಕಾರ್ಯವಿಧಾನ ನಮಗೆ ಅರ್ಥವಾಗುವುದಿಲ್ಲ ಎಂಬ ಕಾರಣಮಾತ್ರಕ್ಕೆ ಅದರಲ್ಲಿ ಪ್ರೇತವ್ಯವಹಾರ ಒಳಗೂಡಿದೆ ಎಂದು ನಿಶ್ಚಿತವಾಗಿ ಹೇಳಲಾಗದು. ಆರೋಗ್ಯಾರೈಕೆಯ ಕುರಿತು ಶಾಸ್ತ್ರಾಧಾರಿತ ನೋಟವನ್ನಿಟ್ಟುಕೊಳ್ಳಲಿಕ್ಕಾಗಿ ನಮಗೆ ದೈವಿಕ ವಿವೇಕ ಹಾಗೂ ವಿವೇಚನೆ ಇರಬೇಕು. ಜ್ಞಾನೋಕ್ತಿ 3ನೇ ಅಧ್ಯಾಯದಲ್ಲಿ ಈ ಸಲಹೆಯಿದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು . . . ಸುಜ್ಞಾನವನ್ನೂ ಬುದ್ಧಿಯನ್ನೂ ಭದ್ರವಾಗಿಟ್ಟುಕೋ . . . ಅವು ನಿನಗೆ ಜೀವವೂ ನಿನ್ನ ಕೊರಳಿಗೆ ಭೂಷಣವೂ ಆಗಿರುವವು.”—ಜ್ಞಾನೋ. 3:5, 6, 21, 22.

16 ಸಾಧ್ಯವಾದಷ್ಟು ಮಟ್ಟಿಗೆ ಆರೋಗ್ಯವಂತರಾಗಿ ಇರಲು ನಾವು ಪ್ರಯತ್ನಿಸುತ್ತೇವಾದರೂ, ಅಸ್ವಸ್ಥತೆ ಅಥವಾ ವೃದ್ಧಾಪ್ಯದ ಸಮಯದಲ್ಲಿ ಆರೋಗ್ಯಾರೈಕೆಯ ಸಂಬಂಧದಲ್ಲಿ ನಾವು ಯಾವುದೇ ರೀತಿಯಲ್ಲಿ ದೇವರ ಅನುಗ್ರಹವನ್ನು ಕಳೆದುಕೊಳ್ಳದಂತೆ ಜಾಗ್ರತೆ ವಹಿಸಬೇಕು. ಬೈಬಲ್‌ ಮೂಲತತ್ತ್ವಗಳಿಗನುಸಾರ ಜೀವಿಸುವ ಮೂಲಕ ಇತರ ವಿಷಯಗಳಂತೆ ಆರೋಗ್ಯದ ವಿಷಯದಲ್ಲೂ ನಮ್ಮ ‘ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರುವಂತೆ’ ಮಾಡಬೇಕು. (ಫಿಲಿ. 4:5, NW) ಪ್ರಥಮ ಶತಮಾನದ ಆಡಳಿತ ಮಂಡಲಿಯು ಅತಿ ಮಹತ್ತ್ವದ ಪತ್ರವೊಂದರ ಮೂಲಕ ಕ್ರೈಸ್ತರು ವಿಗ್ರಹಾರಾಧನೆ, ರಕ್ತ ಮತ್ತು ಹಾದರದಿಂದ ದೂರವಿರುವಂತೆ ತಿಳಿಸಿತು. “ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೇದಾಗುವದು” ಎಂಬ ಆಶ್ವಾಸನೆಯೂ ಅದರಲ್ಲಿತ್ತು. (ಅ. ಕೃ. 15:28, 29) ಒಳಿತಾಗುವುದು ಹೇಗೆ?

ಪರಿಪೂರ್ಣ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟು ತಕ್ಕಮಟ್ಟಿಗಿನ ಆರೈಕೆ

17 ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ರಕ್ತ ಹಾಗೂ ಹಾದರದ ಕುರಿತ ಬೈಬಲ್‌ ಮೂಲತತ್ತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ನನಗೆಷ್ಟು ಪ್ರಯೋಜನವಾಗಿದೆ?’ ನಾವು ಪ್ರಯಾಸಪಟ್ಟು “ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡ”ದ್ದರಿಂದ ಸಿಕ್ಕಿರುವ ಪ್ರಯೋಜನಗಳ ಕುರಿತೂ ಯೋಚಿಸಿರಿ. (2 ಕೊರಿಂ. 7:1) ದೈಹಿಕ ನೈರ್ಮಲ್ಯದ ಕುರಿತ ಬೈಬಲ್‌ ಮಟ್ಟಗಳನ್ನು ಪಾಲಿಸುವುದರಿಂದ ಅನೇಕ ವ್ಯಾಧಿಗಳನ್ನು ದೂರವಿಡುತ್ತೇವೆ. ತಂಬಾಕು ಮತ್ತು ಹಾನಿಕಾರಕ ಮಾದಕದ್ರವ್ಯಗಳ ಬಳಕೆ ನಮ್ಮ ದೇಹವನ್ನು ಕೆಡಿಸುತ್ತದೆ ಮತ್ತು ದೇವರೊಂದಿಗಿನ ನಮ್ಮ ಸಂಬಂಧಕ್ಕೆ ಕುತ್ತು ತರುತ್ತದೆ. ಇವುಗಳಿಂದ ದೂರವಿರುವ ಮೂಲಕ ನಮಗೆ ಒಳಿತಾಗುತ್ತದೆ. ಅಲ್ಲದೆ, ತಿನ್ನುವ ಹಾಗೂ ಕುಡಿಯುವ ವಿಷಯದಲ್ಲಿ ಮಿತಭಾವ ತೋರಿಸುವುದರಿಂದ ಆರೋಗ್ಯದ ಮೇಲಾಗುವ ಒಳ್ಳೇ ಫಲಿತಾಂಶದ ಕುರಿತೂ ಯೋಚಿಸಿರಿ. (ಜ್ಞಾನೋಕ್ತಿ 23:20; ತೀತ 2:2, 3 ಓದಿ.) ವಿಶ್ರಾಂತಿ ಹಾಗೂ ವ್ಯಾಯಾಮವು ನಮ್ಮ ಒಳ್ಳೇ ಆರೋಗ್ಯಕ್ಕೆ ಪೂರಕವಾಗಿರಬಹುದಾದರೂ, ನಮ್ಮ ಶಾರೀರಿಕ ಹಾಗೂ ಆಧ್ಯಾತ್ಮಿಕ ಏಳಿಗೆಯಲ್ಲಿ ಶಾಸ್ತ್ರಾಧಾರಿತ ಮಾರ್ಗದರ್ಶನವೇ ಮುಖ್ಯಪಾತ್ರ ವಹಿಸಿದೆ.

18 ಎಲ್ಲಕ್ಕಿಂತ ಮಿಗಿಲಾಗಿ ನಾವು ನಮ್ಮ ಆಧ್ಯಾತ್ಮಿಕ ಆರೋಗ್ಯವನ್ನು ನೋಡಿಕೊಳ್ಳಬೇಕು ಮತ್ತು “ಈಗ” ಮಾತ್ರವಲ್ಲ “ಮುಂದೆಯೂ” ಅಂದರೆ ವಾಗ್ದತ್ತ ನೂತನ ಲೋಕದಲ್ಲೂ ನಮ್ಮ ಜೀವದ ಉಗಮನಾದ ನಮ್ಮ ಸ್ವರ್ಗೀಯ ಪಿತನೊಂದಿಗಿನ ಅಮೂಲ್ಯ ಸಂಬಂಧವನ್ನು ಬಲಪಡಿಸಲು ಪ್ರಯಾಸಪಡಬೇಕು. (1 ತಿಮೊ. 4:8; ಕೀರ್ತ. 36:9) ದೇವರ ನೂತನ ಲೋಕದಲ್ಲಿ, ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದ ಆಧಾರದ ಮೇಲೆ ಸಿಗುವ ಪಾಪಗಳ ಕ್ಷಮಾಪಣೆಯ ಮೂಲಕ ಸಂಪೂರ್ಣ ಆಧ್ಯಾತ್ಮಿಕ ಹಾಗೂ ಶಾರೀರಿಕ ವಾಸಿಮಾಡುವಿಕೆ ನಡೆಯುವುದು. ದೇವರ ಕುರಿಮರಿಯಾಗಿರುವ ಯೇಸು ಕ್ರಿಸ್ತನು ನಮ್ಮನ್ನು “ಜೀವಜಲದ ಒರತೆಗಳ ಬಳಿಗೆ” ನಡಿಸುವನು ಮತ್ತು ದೇವರು ನಮ್ಮ ಕಣ್ಣೀರನ್ನೆಲ್ಲ ಒರಸಿಬಿಡುವನು. (ಪ್ರಕ. 7:14-17; 22:1, 2) ಆಗ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂಬ ರೋಮಾಂಚಕ ಪ್ರವಾದನೆಯ ನೆರವೇರಿಕೆಯನ್ನೂ ನೋಡುವೆವು.—ಯೆಶಾ. 33:24.

19 ನಮ್ಮ ಬಿಡುಗಡೆಯು ಸಮೀಪವಾಗಿದೆ ಎಂಬ ಮನವರಿಕೆ ನಮಗಾಗಿದೆ. ಅಲ್ಲದೆ, ಯೆಹೋವನು ರೋಗ ಮತ್ತು ಮರಣವನ್ನು ತೆಗೆದುಹಾಕುವ ದಿನವನ್ನು ನೋಡಲು ನಾವು ತುದಿಗಾಲಲ್ಲಿ ನಿಂತಿದ್ದೇವೆ. ಅಷ್ಟರ ತನಕ, ನಾವು ನಮ್ಮ ನೋವು ಬೇನೆಗಳ ಹೊರೆಯನ್ನು ಹೊತ್ತುಕೊಳ್ಳುವಂತೆ ನಮ್ಮ ಪ್ರೀತಿಯ ತಂದೆ ಸಹಾಯಮಾಡುವನೆಂಬ ಆಶ್ವಾಸನೆ ನಮಗಿರಬಲ್ಲದು. ಏಕೆಂದರೆ ‘ಆತನು ನಮಗೋಸ್ಕರ ಚಿಂತಿಸುತ್ತಾನೆ.’ (1 ಪೇತ್ರ 5:7) ಹಾಗಾಗಿ ನಾವು ಯಾವಾಗಲೂ, ದೇವರ ಪ್ರೇರಿತ ವಾಕ್ಯದಲ್ಲಿರುವ ಸ್ಪಷ್ಟ ನಿರ್ದೇಶನಗಳಿಗೆ ಹೊಂದಿಕೆಯಲ್ಲಿ ನಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳೋಣ!

[ಪಾದಟಿಪ್ಪಣಿ]

^ ಪ್ಯಾರ. 14 ಇಂಥ ಲೇಖನಗಳ ಒಂದು ಪಟ್ಟಿ 2003, ಸೆಪ್ಟೆಂಬರ್‌ 1ರ ಕಾವಲಿನಬುರುಜು, ಪುಟ 17ರಲ್ಲಿರುವ ಚೌಕದಲ್ಲಿದೆ.

ಪರಿಶೀಲನೆಗಾಗಿ

• ರೋಗಗಳಿಗೆ ಕಾರಣನಾರು, ಮತ್ತು ಪಾಪದ ಪರಿಣಾಮಗಳಿಂದ ನಮ್ಮನ್ನು ಯಾರು ಬಿಡಿಸುವನು?

• ನಮ್ಮ ಆರೋಗ್ಯದ ಕುರಿತು ಚಿಂತಿಸುವುದು ಸಹಜವಾದರೂ ನಾವು ಯಾವುದರ ಕುರಿತು ಎಚ್ಚರವಹಿಸಬೇಕು?

• ಔಷಧೋಪಚಾರದ ಕುರಿತು ನಾವು ಮಾಡುವ ಆಯ್ಕೆಯಲ್ಲಿ ಯೆಹೋವನು ಏಕೆ ಆಸಕ್ತನಾಗಿದ್ದಾನೆ?

• ನಮ್ಮ ಆರೋಗ್ಯದ ವಿಷಯದಲ್ಲಿ ಬೈಬಲ್‌ ಮೂಲತತ್ತ್ವಗಳಿಗೆ ಅಂಟಿಕೊಳ್ಳುವುದರ ಪ್ರಯೋಜನಗಳೇನು?

[ಅಧ್ಯಯನ ಪ್ರಶ್ನೆಗಳು]

1. ಮನುಷ್ಯರಿಗಾಗಿ ದೇವರ ಮೂಲ ಉದ್ದೇಶ ಏನಾಗಿತ್ತು?

2, 3. (ಎ) ಪ್ರಸಂಗಿ ಪುಸ್ತಕವು ವೃದ್ಧಾಪ್ಯದ ಬಗ್ಗೆ ಯಾವ ಚಿತ್ರಣ ಕೊಡುತ್ತದೆ? (ಬಿ) ಆದಾಮನಿಂದ ಬಂದಿರುವ ಮರಣಕ್ಕೆ ಕಾರಣರಾರು, ಮತ್ತು ಅದನ್ನು ಹೇಗೆ ಲಯಮಾಡಲಾಗುವುದು?

4. ಯೆಹೋವನ ಸಾಕ್ಷಿಗಳು ತಮ್ಮ ಆರೋಗ್ಯದ ಬಗ್ಗೆ ಏಕೆ ಸ್ವಲ್ಪಮಟ್ಟಿಗೆ ಚಿಂತಿಸುತ್ತಾರೆ, ಹಾಗಿದ್ದರೂ ಅವರಿಗೇನು ತಿಳಿದಿದೆ?

5. ಯೆಹೋವನ ನಂಬಿಗಸ್ತ ಸೇವಕರು ತಮ್ಮ ಅನಾರೋಗ್ಯವನ್ನು ನಿಭಾಯಿಸಿದ ರೀತಿಯಿಂದ ನಾವು ಯಾವ ಪಾಠ ಕಲಿಯಬಲ್ಲೆವು?

6, 7. ನಮ್ಮ ಆರೋಗ್ಯದ ಕುರಿತು ವಿಪರೀತವಾಗಿ ಚಿಂತಿಸಬಾರದೇಕೆ?

8. ಆರೋಗ್ಯದ ಕುರಿತ ವಿಪರೀತ ಚಿಂತೆ ಎಲ್ಲಿಗೆ ನಡೆಸಬಲ್ಲದು?

9. ನಾವು ಅಲಕ್ಷಿಸಬಾರದ ಹೆಚ್ಚು ಪ್ರಾಮುಖ್ಯ ಕಾರ್ಯಗಳಲ್ಲಿ ಒಂದು ಯಾವುದು, ಮತ್ತು ಅದನ್ನೇಕೆ ಅಲಕ್ಷಿಸಬಾರದು?

10. ಔಷಧೋಪಚಾರದ ಕುರಿತ ನಮ್ಮ ಆಯ್ಕೆ ಪ್ರಾಮುಖ್ಯವೇಕೆ?

11, 12. ಆರೋಗ್ಯಾರೈಕೆಯ ಕುರಿತ ಆಯ್ಕೆಗಳಲ್ಲಿ “ಸ್ವಸ್ಥ ಚಿತ್ತ” ಯಾವ ಪಾತ್ರವಹಿಸುತ್ತದೆ?

13, 14. (ಎ) ಚಿಕಿತ್ಸೆಯ ಕುರಿತು ನಾವು ಮಾಡುವ ಆಯ್ಕೆಗಳ ಸಂಬಂಧದಲ್ಲಿ ಸೈತಾನನು ನಮ್ಮ ಸಮಗ್ರತೆಯನ್ನು ಹೇಗೆ ಮುರಿಯಬಲ್ಲನು? (ಬಿ) ಮಾಟಮಂತ್ರಕ್ಕೆ ಸಂಬಂಧಿಸಿರಬಹುದಾದ ವಿಷಯಗಳಿಂದಲೂ ನಾವೇಕೆ ದೂರವಿರಬೇಕು?

15, 16. ಆರೋಗ್ಯಾರೈಕೆಯ ಆಯ್ಕೆಗಳನ್ನು ಮಾಡಲು ವಿವೇಕ ಏಕೆ ಅಗತ್ಯ, ಮತ್ತು ಪ್ರಥಮ ಶತಮಾನದ ಆಡಳಿತ ಮಂಡಲಿ ವಿವೇಕಯುತವಾದ ಯಾವ ಸಲಹೆ ನೀಡಿತು?

17. ಬೈಬಲ್‌ ಮೂಲತತ್ತ್ವಗಳಿಗೆ ಅಂಟಿಕೊಂಡಿರುವುದರಿಂದ ಶಾರೀರಿಕವಾಗಿ ನಾವು ಹೇಗೆ ಪ್ರಯೋಜನಪಡೆದಿದ್ದೇವೆ?

18. ನಮ್ಮ ಮುಖ್ಯ ಚಿಂತೆ ಏನಾಗಿರಬೇಕು, ಮತ್ತು ಆರೋಗ್ಯದ ಕುರಿತ ಯಾವ ಪ್ರವಾದನೆಯ ನೆರವೇರಿಕೆಯನ್ನು ನಾವು ಮುನ್ನೋಡಬಹುದು?

19. ನಾವು ತಕ್ಕಮಟ್ಟಿಗೆ ಆರೋಗ್ಯದ ಆರೈಕೆಮಾಡುತ್ತಿರುವಾಗ ನಮಗೆ ಯಾವ ಆಶ್ವಾಸನೆ ಇರಬಲ್ಲದು?

[ಪುಟ 23ರಲ್ಲಿರುವ ಚಿತ್ರ]

ಮಾನವನನ್ನು ಕಾಯಿಲೆ ಮತ್ತು ವೃದ್ಧಾಪ್ಯಕ್ಕೆ ಒಳಗಾಗುವಂತೆ ಸೃಷ್ಟಿಸಲಾಗಲಿಲ್ಲ

[ಪುಟ 25ರಲ್ಲಿರುವ ಚಿತ್ರ]

ಯೆಹೋವನ ಜನರಲ್ಲಿ ಕೆಲವರಿಗೆ ಆರೋಗ್ಯದ ಸಮಸ್ಯೆಗಳಿದ್ದರೂ ಅವರು ಶುಶ್ರೂಷೆಯಲ್ಲಿ ಹರ್ಷಿಸುತ್ತಾರೆ