ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಎಂಥ ವ್ಯಕ್ತಿಯಾಗಲು ಬಯಸುತ್ತೀರಿ?

ನೀವು ಎಂಥ ವ್ಯಕ್ತಿಯಾಗಲು ಬಯಸುತ್ತೀರಿ?

ನೀವು ಎಂಥ ವ್ಯಕ್ತಿಯಾಗಲು ಬಯಸುತ್ತೀರಿ?

ಫಿಲಿಪ್ಪೀನ್ಸ್‌ನ ಒಂದು ಪಟ್ಟಣದ ಪೊಲೀಸ್‌ ಮುಖ್ಯಾಧಿಕಾರಿಯು ಒಬ್ಬಾಕೆ ಪಯನೀಯರ್‌ ಸಹೋದರಿಯನ್ನು, “ಈ ವ್ಯಕ್ತಿ ಇಷ್ಟೊಂದು ಬದಲಾಗಲು ನೀವು ಮಾಡಿದ್ದಾದರೂ ಏನು?” ಎಂದು ಕೇಳಿದರು. ತನ್ನ ಮೇಜಿನ ಮೇಲಿದ್ದ ಕಾಗದಗಳ ಅಟ್ಟಿಗೆ ಬೆರಳು ತೋರಿಸುತ್ತಾ ಆತನಂದದ್ದು: “ಇದೆಲ್ಲವೂ ಅವನ ಗತ ಅಪರಾಧಗಳ ದಾಖಲೆಯಾಗಿದೆ ಎಂದು ನಿಮಗೆ ಗೊತ್ತಾ? ಈ ಪಟ್ಟಣದಲ್ಲಿ ನಮಗಿದ್ದ ಒಂದು ದೊಡ್ಡ ತಲೆಬಿಸಿಯನ್ನು ನೀವು ನಿವಾರಿಸಿದ್ದೀರಿ.” ಅವರು ಯಾರ ಬಗ್ಗೆ ಮಾತಾಡುತ್ತಿದ್ದರೋ ಆ ವ್ಯಕ್ತಿ ಕುಡುಕನಾಗಿದ್ದು ಯಾವಾಗಲೂ ಹಿಂಸಾಚಾರದಲ್ಲಿ ಒಳಗೂಡಿದ್ದನು. ಜೀವನದಲ್ಲಿ ಭಾರೀ ಬದಲಾವಣೆಗಳನ್ನು ಮಾಡುವಂತೆ ಅವನನ್ನು ಪ್ರಚೋದಿಸಿದ್ದೇನು? ದೇವರ ವಾಕ್ಯವಾದ ಬೈಬಲ್‌ನಲ್ಲಿರುವ ಪ್ರೇರಿತ ಸಂದೇಶವೇ.

ಅನೇಕ ಜನರು ಅಪೊಸ್ತಲ ಪೌಲನ ಬುದ್ಧಿವಾದವನ್ನು ಗಂಭೀರವಾಗಿ ಪರಿಗಣಿಸಿ, ‘ತಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿ ದೇವರ ಹೋಲಿಕೆಯ ಮೇರೆಗೆ ನಿರ್ಮಿಸಲ್ಪಟ್ಟ ನೂತನ ಸ್ವಭಾವವನ್ನು ಧರಿಸಿಕೊಂಡಿದ್ದಾರೆ.’ (ಎಫೆ. 4:22-24) ನಾವು ಮಾಡಬೇಕಾದ ಬದಲಾವಣೆಗಳು ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಕ್ರೈಸ್ತರಾಗಬೇಕಾದರೆ ನೂತನ ಸ್ವಭಾವವನ್ನು ಧರಿಸಿಕೊಳ್ಳುವುದು ಅಥವಾ ಹಾಕಿಕೊಳ್ಳುವುದು ಅತ್ಯಗತ್ಯ.

ಹಾಗಿದ್ದರೂ ನಾವು ಬದಲಾವಣೆಗಳನ್ನು ಮಾಡಿ ದೀಕ್ಷಾಸ್ನಾನವನ್ನು ಹೊಂದುವಷ್ಟರ ಮಟ್ಟಿಗೆ ಪ್ರಗತಿಮಾಡುವುದು ಕೇವಲ ಆರಂಭವಷ್ಟೇ. ನಾವು ದೀಕ್ಷಾಸ್ನಾನ ಪಡೆಯುವಾಗ, ಒಬ್ಬ ಶಿಲ್ಪಿಯು ಕೇವಲ ಮೇಲಿಂದ ಮೇಲೆಗೆ ಕೆತ್ತಿಟ್ಟ ಒಂದು ಮರದ ತುಂಡಿನಂತಿದ್ದೇವೆ. ಅದರ ಆಕಾರದಿಂದ ಅದು ಏನೆಂದು ನಮಗೆ ಹೇಳಸಾಧ್ಯವಿದ್ದರೂ ಬಹಳಷ್ಟು ಕೆಲಸ ಇನ್ನೂ ಬಾಕಿ ಉಳಿದಿದೆ. ಶಿಲ್ಪಿಯು ಅದನ್ನು ಒಂದು ಸುಂದರ ಆಕೃತಿಯನ್ನಾಗಿ ರೂಪಿಸಲು ಇನ್ನಷ್ಟು ನಾಜೂಕು ಕೆಲಸ ಮಾಡಬೇಕಾಗಿದೆ. ಹಾಗೆಯೇ ದೀಕ್ಷಾಸ್ನಾನವಾಗುವಷ್ಟರಲ್ಲಿ, ದೇವರ ಸೇವಕರಲ್ಲಿರಬೇಕಾದ ಮೂಲಭೂತ ಗುಣಗಳನ್ನು ನಾವು ಪಡೆದಿರುತ್ತೇವೆ. ಹಾಗಿದ್ದರೂ ನಾವು ಧರಿಸಿಕೊಂಡಿರುವ ಈ ನೂತನ ಸ್ವಭಾವವು ಇನ್ನೂ ಆರಂಭದ ಹಂತದಲ್ಲೇ ಇದೆ. ಆದುದರಿಂದ ಆ ಸ್ವಭಾವದ ವಿಷಯದಲ್ಲಿ ಅಭಿವೃದ್ಧಿ ಮಾಡಲಿಕ್ಕಾಗಿ ನಾವು ಹೊಂದಾಣಿಕೆಗಳನ್ನು ಮಾಡಬೇಕು.

ಅಭಿವೃದ್ಧಿ ಮಾಡಬೇಕಾದ ಅಗತ್ಯವನ್ನು ಪೌಲನೂ ಮನಗಂಡನು. ಆತನು ಒಪ್ಪಿಕೊಂಡದ್ದು: “ಒಳ್ಳೆಯದನ್ನು ಮಾಡಲು ಬಯಸುತ್ತಿರುವ ನನ್ನಲ್ಲಿ ಕೆಟ್ಟದ್ದು ಇರುವ ನಿಯಮವನ್ನು ಕಾಣುತ್ತಿದ್ದೇನೆ.” (ರೋಮಾ. 7:21, NIBV) ತಾನು ಏನಾಗಲು ಬಯಸುತ್ತೇನೆ ಮತ್ತು ತಾನು ಏನಾಗಿದ್ದೇನೆ ಎಂಬ ವಿಷಯದ ಕುರಿತು ಪೌಲನಿಗೆ ಚೆನ್ನಾಗಿ ತಿಳಿದಿತ್ತು. ನಮ್ಮ ಕುರಿತೇನು? ನಾವು ಸಹ ಹೀಗೆ ಕೇಳಿಕೊಳ್ಳಬೇಕು: ‘ನನ್ನ ಅಂತರಂಗ ಹೇಗಿದೆ? ನಾನು ಯಾವ ರೀತಿಯ ವ್ಯಕ್ತಿಯಾಗಿದ್ದೇನೆ ಮತ್ತು ಯಾವ ರೀತಿಯ ವ್ಯಕ್ತಿಯಾಗಲು ಬಯಸುತ್ತೇನೆ?’

‘ನನ್ನ ಅಂತರಂಗ ಹೇಗಿದೆ?’

ನಾವು ಹಳೇ ಮನೆಯೊಂದನ್ನು ನವೀಕರಿಸುವಾಗ ಕೇವಲ ಹೊರಗಿನಿಂದ ಅದಕ್ಕೆ ಬಣ್ಣ ಬಳಿದು, ಹಾಳುಬಿದ್ದಿರುವ ಮರದ ಅಡ್ಡ ತೊಲೆಗಳಂಥ ಮನೆಯೊಳಗಿನ ದೋಷಗಳನ್ನು ಅಸಡ್ಡೆಮಾಡುವಲ್ಲಿ ಮುಂದೆ ಸಮಸ್ಯೆಗಳೇಳಬಹುದು. ತದ್ರೀತಿಯಲ್ಲಿ ನಾವು ಯಥಾರ್ಥರೆಂಬ ಸೋಗನ್ನು ಹಾಕಿಕೊಳ್ಳಬಾರದು. ಬದಲಿಗೆ ಅಂತರಂಗದಲ್ಲಿ ಏನಾಗಿದ್ದೇವೆಂಬದನ್ನು ಪರಿಶೀಲಿಸಿ, ತಿದ್ದಿಕೊಳ್ಳಬೇಕಾದ ಸಂಗತಿಗಳನ್ನು ಗುರುತಿಸಬೇಕು. ಇಲ್ಲದಿದ್ದರೆ ಹಳೇ ಸ್ವಭಾವದ ಗುಣಲಕ್ಷಣಗಳು ಮತ್ತೆ ತಲೆದೋರುವ ಸಾಧ್ಯತೆಗಳಿವೆ. ಹಾಗಾಗಿ ನಾವು ನಮ್ಮನ್ನೇ ಪರಿಶೀಲಿಸಿಕೊಳ್ಳುವುದು ತುಂಬ ಅವಶ್ಯ. (2 ಕೊರಿಂ. 13:5) ನಾವು ನಮ್ಮಲ್ಲಿರುವ ನಕಾರಾತ್ಮಕ ಗುಣಲಕ್ಷಣಗಳನ್ನು ಗುರುತಿಸಿ ಅವುಗಳನ್ನು ತಿದ್ದಿಕೊಳ್ಳಬೇಕು. ಹೀಗೆ ಮಾಡಲು ಯೆಹೋವನು ನಮಗೆ ಸಹಾಯ ನೀಡಿದ್ದಾನೆ.

ಪೌಲನು ಬರೆದದ್ದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿ. 4:12) ದೇವರ ಲಿಖಿತ ವಾಕ್ಯವಾದ ಬೈಬಲಿನಲ್ಲಿರುವ ಸಂದೇಶವು ನಮ್ಮ ಜೀವನದ ಮೇಲೆ ಗಹನವಾದ ಪ್ರಭಾವ ಬೀರಬಲ್ಲದು. ಅದು ನಮ್ಮೊಳಗೆ ಆಳವಾಗಿ ತೂರಿಹೋಗಬಲ್ಲದು. ಸಾಂಕೇತಿಕವಾಗಿ ಹೇಳುವುದಾದರೆ ನಮ್ಮ ಎಲುಬುಗಳೊಳಗಿರುವ ಮಜ್ಜೆಗೂ ತಲುಪಬಲ್ಲದು. ಅದು ನಮ್ಮ ಆಲೋಚನೆ ಹಾಗೂ ಇರಾದೆಗಳನ್ನು ಹೊರಗೆಡಹುತ್ತಾ, ನಾವು ಹೊರಗಿನಿಂದ ಎಂಥ ರೀತಿಯ ವ್ಯಕ್ತಿಯಾಗಿದ್ದೇವೆ ಅಥವಾ ನಾವು ನಮ್ಮ ಕುರಿತು ಏನು ನೆನಸುತ್ತೇವೆ ಮತ್ತು ನಿಜವಾಗಿ ಅಂತರಂಗದಲ್ಲಿ ಎಂಥ ವ್ಯಕ್ತಿಯಾಗಿದ್ದೇವೆ ಎಂಬದನ್ನು ಬಯಲುಪಡಿಸುತ್ತದೆ. ನಮ್ಮ ಕುಂದುಕೊರತೆಗಳನ್ನು ಗುರುತಿಸಲು ದೇವರ ವಾಕ್ಯವು ನಮಗೆಷ್ಟು ಸಹಾಯ ಮಾಡುತ್ತದೆ!

ಹಳೆಯ ಮನೆಯನ್ನು ದುರಸ್ತಿಮಾಡುವಾಗ ಹಾಳುಬಿದ್ದ ಅಡ್ಡ ತೊಲೆಗಳನ್ನು ತೆಗೆದು ಹೊಸ ತೊಲೆಗಳನ್ನು ಹಾಕುವುದೊಂದೇ ಸಾಲದು. ಅವು ಹಾಳಾದದ್ದು ಹೇಗೆಂಬದನ್ನು ತಿಳಿದರೆ, ಮತ್ತೆ ಸಮಸ್ಯೆ ಏಳದಂತೆ ನಾವು ಅಗತ್ಯವಾದ ಕ್ರಮಕೈಗೊಳ್ಳಬಹುದು. ಅದೇ ರೀತಿಯಲ್ಲಿ ನಮ್ಮ ನಕಾರಾತ್ಮಕ ಗುಣಲಕ್ಷಣಗಳನ್ನು ಗುರುತಿಸುವುದು ಮಾತ್ರವಲ್ಲ ಅವುಗಳಿಗೆ ಕಾರಣವಾಗಿರುವ ಸಂಗತಿಗಳನ್ನು ಪತ್ತೆಹಚ್ಚುವುದರಿಂದ ನಾವು ಆ ಬಲಹೀನತೆಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುವುದು. ಅನೇಕ ಅಂಶಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇವುಗಳಲ್ಲಿ ನಮ್ಮ ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿ, ಸಂಸ್ಕೃತಿ, ಹೆತ್ತವರು, ಒಡನಾಡಿಗಳು ಮತ್ತು ಧಾರ್ಮಿಕ ಹಿನ್ನೆಲೆ ಸೇರಿದೆ. ನಾವು ವೀಕ್ಷಿಸುವ ಟಿ.ವಿ. ಕಾರ್ಯಕ್ರಮಗಳು, ಚಲನಚಿತ್ರಗಳು ಹಾಗೂ ಮನೋರಂಜನೆಯ ಇತರ ರೂಪಗಳು ಸಹ ನಮ್ಮ ವ್ಯಕ್ತಿತ್ವದ ಮೇಲೆ ಛಾಪು ಮೂಡಿಸಬಲ್ಲವು. ನಮ್ಮ ವ್ಯಕ್ತಿತ್ವದ ಮೇಲೆ ನಕಾರಾತ್ಮಕ ಪ್ರಭಾವ ಬೀರಬಲ್ಲ ವಿಷಯಗಳನ್ನು ಗುರುತಿಸುವಲ್ಲಿ, ಅವು ನಮ್ಮ ಮೇಲೆ ಬೀರುವ ಪರಿಣಾಮವನ್ನು ನಿಯಂತ್ರಿಸಲು ಸಾಧ್ಯವಾಗುವುದು.

ಸ್ವಪರಿಶೀಲನೆ ಮಾಡಿಯಾದ ನಂತರ, ‘ನನ್ನ ಸ್ವಭಾವವೇ ಹೀಗೆ, ಬದಲಾಗಲು ಸಾಧ್ಯವಿಲ್ಲ’ ಎಂದು ನಾವು ಹೇಳಬಹುದು. ಆದರೆ ಈ ರೀತಿ ಯೋಚಿಸುವುದು ತಪ್ಪಾಗಿದೆ. ಒಂದು ಕಾಲದಲ್ಲಿ ಜಾರರು, ಪುರುಷಗಾಮಿಗಳು, ಕುಡುಕರು ಮತ್ತು ತದ್ರೀತಿಯ ಜನರಾಗಿದ್ದ ಕೊರಿಂಥ ಸಭೆಯ ಕೆಲವರ ಕುರಿತಾಗಿ ಪೌಲನು ಹೇಳಿದ್ದು: ‘ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ನಮ್ಮ ದೇವರ ಆತ್ಮದಲ್ಲಿ ತೊಳೆದುಕೊಂಡಿರಿ.’ (1 ಕೊರಿಂ. 6:9-11) ಯೆಹೋವನ ಪವಿತ್ರಾತ್ಮದ ಸಹಾಯದಿಂದ ನಾವು ಸಹ ಅಗತ್ಯವಿರುವ ಬದಲಾವಣೆಗಳನ್ನು ಮಾಡುವುದರಲ್ಲಿ ಯಶಸ್ವಿಗಳಾಗಬಲ್ಲೆವು.

ಫಿಲಿಪ್ಪೀನ್ಸ್‌ನಲ್ಲಿ ವಾಸವಾಗಿರುವ ಮಾರ್ಕೋಸ್‌ * ಎಂಬವನನ್ನು ಪರಿಗಣಿಸಿ. ತನ್ನ ಹಿನ್ನಲೆಯ ಕುರಿತು ಅವನಂದದ್ದು: “ನನ್ನ ಹೆತ್ತವರು ಯಾವಾಗಲೂ ಕಚ್ಚಾಡುತ್ತಿದ್ದರು. ಅದಕ್ಕೆ ನಾನು 19ನೇ ವಯಸ್ಸಿನಲ್ಲೇ ಅವರಿಗೆ ತಿರುಗಿಬಿದ್ದೆ.” ಅವನು ಜೂಜಾಟ, ಕಳ್ಳತನ ಮತ್ತು ಬಂದೂಕು ತೋರಿಸಿ ದರೋಡೆಮಾಡುವುದರಲ್ಲಿ ಕುಖ್ಯಾತನಾಗಿದ್ದನು. ಅವನು ಮತ್ತು ಇನ್ನಿತರರು ಒಂದು ವಿಮಾನವನ್ನು ಅಪಹರಿಸಲೂ ಸಂಚುಹೂಡಿದ್ದರು ಆದರೆ ಅದು ಕಾರ್ಯಗತವಾಗಲಿಲ್ಲ. ಮಾರ್ಕೋಸ್‌ ಮದುವೆಯಾದ ನಂತರವೂ ತನ್ನ ಕೆಟ್ಟ ಚಾಳಿಯನ್ನು ಮುಂದುವರಿಸಿದನು. ಕ್ರಮೇಣ ಅವನು ಜೂಜಾಟದಲ್ಲಿ ಎಲ್ಲವನ್ನು ಕಳೆದುಕೊಂಡು ದಿವಾಳಿಯಾದನು. ಅದಾದ ಸ್ವಲ್ಪದರಲ್ಲಿ ಮಾರ್ಕೋಸ್‌, ಯೆಹೋವನ ಸಾಕ್ಷಿಗಳು ಅವನ ಹೆಂಡತಿಯೊಂದಿಗೆ ನಡೆಸುತ್ತಿದ್ದ ಬೈಬಲ್‌ ಅಧ್ಯಯನದಲ್ಲಿ ಜೊತೆಗೂಡಿದನು. ಮೊದಮೊದಲು ತಾನೊಬ್ಬ ಸಾಕ್ಷಿಯಾಗಲು ಅರ್ಹನಲ್ಲ ಎಂಬ ಭಾವನೆ ಅವನನ್ನು ಕಾಡತೊಡಗಿತು. ಹಾಗಿದ್ದರೂ, ಕಲಿತದ್ದನ್ನು ಅನ್ವಯಿಸುವುದರಿಂದ ಮತ್ತು ಕೂಟಗಳಿಗೆ ಹಾಜರಾಗುವುದರಿಂದ ಮಾರ್ಕೋಸ್‌ಗೆ ತನ್ನ ಹಿಂದಿನ ದುಶ್ಚಟಗಳನ್ನು ಬಿಟ್ಟುಬಿಡಲು ಸಾಧ್ಯವಾಯಿತು. ಅವನೀಗ ದೀಕ್ಷಾಸ್ನಾನ ಪಡೆದಿರುವ ಕ್ರೈಸ್ತನಾಗಿದ್ದು, ಇತರರಿಗೆ ಅವರು ಸಹ ಹೇಗೆ ಬದಲಾವಣೆಗಳನ್ನು ಮಾಡಬಲ್ಲರು ಎಂಬದನ್ನು ಕಲಿಸುವುದರಲ್ಲಿ ಕ್ರಮವಾಗಿ ಭಾಗವಹಿಸುತ್ತಿದ್ದಾನೆ.

ನೀವು ಏನಾಗಲು ಬಯಸುತ್ತೀರಿ?

ನಮ್ಮ ಕ್ರೈಸ್ತ ಗುಣಗಳಿಗೆ ಇನ್ನಷ್ಟು ಮೆರಗುನೀಡಲು ನಾವು ಯಾವೆಲ್ಲ ಬದಲಾವಣೆಗಳನ್ನು ಮಾಡಬೇಕಾದೀತು? ಪೌಲನು ಕ್ರೈಸ್ತರಿಗೆ ಸಲಹೆ ನೀಡಿದ್ದು: ‘ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ. ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ; ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಡಿರಿ.’ ಆತನು ಮುಂದುವರಿಸಿ ಹೇಳಿದ್ದು: ‘ನೂತನಸ್ವಭಾವವನ್ನು ಧರಿಸಿಕೊಳ್ಳಿರಿ. ಈ ಸ್ವಭಾವವು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ.’—ಕೊಲೊ. 3:8-10.

ಹಾಗಾದರೆ ನಮ್ಮ ಮುಖ್ಯ ಗುರಿಯು ಪೂರ್ವಸ್ವಭಾವವನ್ನು ತೆಗೆದುಹಾಕಿ ನೂತನಸ್ವಭಾವ ಅಥವಾ ವ್ಯಕ್ತಿತ್ವವನ್ನು ಧರಿಸಿಕೊಳ್ಳುವುದಾಗಿದೆ. ಈ ಗುರಿ ಮುಟ್ಟಲು ನಾವು ಯಾವ ಗುಣಗಳನ್ನು ಬೆಳೆಸಿಕೊಳ್ಳಬೇಕು? ಪೌಲನಂದದ್ದು: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” (ಕೊಲೊ. 3:12-14) ಈ ಗುಣಗಳನ್ನು ರೂಢಿಸಿಕೊಳ್ಳಲು ನಾವು ಕಠಿನ ಶ್ರಮವಹಿಸಿದರೆ, ‘ಯೆಹೋವನ ಮತ್ತು ಮನುಷ್ಯರ ದಯೆಗೆ ಪಾತ್ರರಾಗುವೆವು.’ (1 ಸಮು. 2:26) ಭೂಮಿಯಲ್ಲಿದ್ದಾಗ ಯೇಸು ದೈವಿಕ ಗುಣಗಳನ್ನು ಗಮನಾರ್ಹ ರೀತಿಯಲ್ಲಿ ತೋರಿಸಿದನು. ಆತನ ಮಾದರಿಯನ್ನು ಕಲಿತು ಅದನ್ನು ಅನುಕರಿಸುವುದರಿಂದ ನಾವು ‘ದೇವರನ್ನು ಅನುಸರಿಸುವವರಾಗಿ’ ಹೆಚ್ಚೆಚ್ಚಾಗಿ ಕ್ರಿಸ್ತನಂತೆ ಆಗಬಲ್ಲೆವು.—ಎಫೆ. 5:1, 2.

ನಾವು ಯಾವೆಲ್ಲ ಬದಲಾವಣೆಗಳನ್ನು ಮಾಡಬೇಕಾದೀತು ಎಂಬದನ್ನು ಅರಿಯಲು ಬೈಬಲ್‌ನಲ್ಲಿ ತಿಳಿಸಲಾಗಿರುವವರ ವ್ಯಕ್ತಿತ್ವದ ಕುರಿತು ಅಧ್ಯಯನಮಾಡಬೇಕು. ಅವರಲ್ಲಿದ್ದ ಆಕರ್ಷಕ ಮತ್ತು ಆಕರ್ಷಕವಲ್ಲದ ಗುಣಗಳನ್ನು ನಾವು ಪರಿಗಣಿಸಬೇಕು. ಉದಾಹರಣೆಗೆ, ಮೂಲಪಿತೃನಾದ ಯಾಕೋಬನ ಮಗನಾದ ಯೋಸೇಫನನ್ನು ತೆಗೆದುಕೊಳ್ಳಿ. ಅವನು ಮೇಲಿಂದ ಮೇಲೆ ಅನ್ಯಾಯವನ್ನು ಅನುಭವಿಸುತ್ತಿದ್ದಾಗಲೂ ಸಕಾರಾತ್ಮಕ ಮನೋಭಾವವನ್ನೂ ಆಂತರಿಕ ಸೌಂದರ್ಯವನ್ನೂ ಕಾಪಾಡಿಕೊಂಡನು. (ಆದಿ. 45:1-15) ತದ್ವಿರುದ್ಧವಾಗಿ, ರಾಜ ದಾವೀದನ ಮಗನಾದ ಅಬ್ಷಾಲೋಮನು ತನಗೆ ಜನರ ಬಗ್ಗೆ ತುಂಬ ಕಾಳಜಿಯಿದ್ದಂತೆ ನಟಿಸಿದನು. ಅವನ ಸೌಂದರ್ಯಕ್ಕಾಗಿ ಜನರು ಅವನನ್ನು ಹೊಗಳುತ್ತಿದ್ದರು. ಆದರೆ ಅಸಲಿಯಲ್ಲಿ ಅವನೊಬ್ಬ ವಿಶ್ವಾಸಘಾತಕನೂ ಕೊಲೆಗಾರನೂ ಆಗಿದ್ದನು. (2 ಸಮು. 13:28, 29; 14:25; 15:1-12) ಒಳ್ಳೇತನದ ಸೋಗನ್ನು ಹಾಕಿಕೊಳ್ಳುವುದರಿಂದ ಮತ್ತು ದೈಹಿಕ ಸೌಂದರ್ಯದಿಂದ ಒಬ್ಬ ವ್ಯಕ್ತಿ ನಿಜವಾಗಿಯೂ ಆಕರ್ಷಕನಾಗುವುದಿಲ್ಲ.

ಖಂಡಿತ ಯಶಸ್ವಿಗಳಾಗಬಲ್ಲೆವು

ನಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಲು ಮತ್ತು ದೇವರ ಮುಂದೆ ಸುಂದರವಾಗಿ ಕಾಣಲು ನಾವು ನಿಜವಾಗಿಯೂ ಯಾವ ರೀತಿಯ ವ್ಯಕ್ತಿಗಳಾಗಿದ್ದೇವೆ ಎಂಬುದಕ್ಕೆ ನಾವು ಗಮನಕೊಡಬೇಕು. (1 ಪೇತ್ರ 3:3, 4) ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಗಳನ್ನು ಮಾಡಲು, ಮೊದಲು ನಮ್ಮಲ್ಲಿರುವ ನಕಾರಾತ್ಮಕ ಗುಣಲಕ್ಷಣಗಳನ್ನು ಅಥವಾ ಅದಕ್ಕೆ ಕಾರಣವಾಗಿರುವ ಸಂಗತಿಗಳನ್ನು ಗುರುತಿಸಿ ನಂತರ ದೈವಿಕ ಗುಣಗಳನ್ನು ರೂಢಿಸಿಕೊಳ್ಳಬೇಕು. ಇದನ್ನು ಮಾಡಲು ನಾವು ಪಡುವ ಪ್ರಯತ್ನ ಯಶಸ್ಸು ಕಾಣುವುದೆಂಬ ಭರವಸೆಯಿಂದಿರಬಲ್ಲೆವೋ?

ಹೌದು, ಯೆಹೋವನ ಸಹಾಯದಿಂದ ನಾವು ಅಗತ್ಯವಿರುವ ಬದಲಾವಣೆಗಳನ್ನು ಮಾಡಬಲ್ಲೆವು. ಕೀರ್ತನೆಗಾರನಂತೆ ನಾವು ಸಹ ಹೀಗೆ ಪ್ರಾರ್ಥಿಸಬಲ್ಲೆವು: “ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.” (ಕೀರ್ತ. 51:10) ದೇವರಾತ್ಮವು ನಮ್ಮಲ್ಲಿ ಕೆಲಸಮಾಡಿ ನಮ್ಮ ಜೀವನವನ್ನು ಆತನ ಚಿತ್ತಕ್ಕೆ ಹೆಚ್ಚು ಪೂರ್ಣವಾಗಿ ಸರಿಹೊಂದಿಸಬೇಕೆಂಬ ನಮ್ಮ ಇಚ್ಛೆಯನ್ನು ಬಲಗೊಳಿಸುವಂತೆ ನಾವು ಬಿನ್ನಹಿಸಬಹುದು. ಯೆಹೋವನ ಮುಂದೆ ಸುಂದರವಾಗಿ ಕಾಣುವುದರಲ್ಲಿ ನಾವು ಖಂಡಿತ ಯಶಸ್ವಿಗಳಾಗಬಲ್ಲೆವು!

[ಪಾದಟಿಪ್ಪಣಿ]

^ ಪ್ಯಾರ. 11 ಹೆಸರನ್ನು ಬದಲಿಸಲಾಗಿದೆ.

[ಪುಟ 4ರಲ್ಲಿರುವ ಚಿತ್ರ]

ಬಿರುಗಾಳಿಯಿಂದ ಹಾನಿಗೊಂಡ ಈ ಮನೆಗೆ ಹೊರಗಿನಿಂದ ಕೇವಲ ಬಣ್ಣ ಬಳಿದರೆ ಸಾಕೇ?

[ಪುಟ 5ರಲ್ಲಿರುವ ಚಿತ್ರ]

ನಿಮ್ಮ ವ್ಯಕ್ತಿತ್ವವನ್ನು ಕ್ರಿಸ್ತನ ವ್ಯಕ್ತಿತ್ವದಂತೆ ರೂಪಿಸಿದ್ದೀರೋ?