ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನಂತೆ “ಸೈತಾನನನ್ನು ಎದುರಿಸಿರಿ”

ಯೇಸುವಿನಂತೆ “ಸೈತಾನನನ್ನು ಎದುರಿಸಿರಿ”

ಯೇಸುವಿನಂತೆ “ಸೈತಾನನನ್ನು ಎದುರಿಸಿರಿ”

“ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” —ಯಾಕೋ. 4:7.

ಯೇಸು ಕ್ರಿಸ್ತನಿಗೆ ತಾನು ಸೈತಾನನಿಂದ ವಿರೋಧವನ್ನು ಎದುರಿಸಲಿದ್ದೇನೆಂದು ತಿಳಿದಿತ್ತು. ಈ ವಾಸ್ತವಾಂಶ, ಸರ್ಪಕ್ಕೆ ಮತ್ತು ಈ ಮೂಲಕ ಅದನ್ನು ಬಳಸುತ್ತಿದ್ದ ದುಷ್ಟ ಆತ್ಮಜೀವಿಗೆ ದೇವರು ಹೇಳಿದ್ದ ಮಾತುಗಳಿಂದ ವ್ಯಕ್ತವಾಗುತ್ತದೆ. ಆತನಂದದ್ದು: “ನಿನಗೂ ಈ ಸ್ತ್ರೀಗೂ [ಯೆಹೋವನ ಸಂಘಟನೆಯ ಸ್ವರ್ಗೀಯ ಭಾಗ], ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು [ಯೇಸು ಕ್ರಿಸ್ತ] ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿ. 3:14, 15; ಪ್ರಕ. 12:9) ಯೇಸುವಿನ ಹಿಮ್ಮಡಿಯನ್ನು ಕಚ್ಚಲಾಗುವುದು ಎಂಬ ಸಂಗತಿ, ಭೂಮಿಯಲ್ಲಿರುವಾಗ ಆತನನ್ನು ಕೊಲ್ಲಲಾಗುವುದು ಮತ್ತು ಹೀಗೆ ಕೇವಲ ಒಂದು ತಾತ್ಕಾಲಿಕ ಹೊಡೆತವನ್ನು ಅನುಭವಿಸಲಿರುವನೆಂಬದನ್ನು ಸೂಚಿಸಿತು. ಆ ಹೊಡೆತ ಕೇವಲ ತಾತ್ಕಾಲಿಕವಾಗಿರಲಿತ್ತು ಏಕೆಂದರೆ ಯೆಹೋವನು ಅವನನ್ನು ಸ್ವರ್ಗೀಯ ಮಹಿಮೆಗೆ ಎಬ್ಬಿಸಲಿದ್ದನು. ಆದರೆ ಸರ್ಪದ ತಲೆಯನ್ನು ಜಜ್ಜುವುದು, ಪಿಶಾಚನು ಒಂದು ಮಾರಣಾಂತಿಕ ಹೊಡೆತವನ್ನು ಪಡೆದು ಅದರಿಂದ ಎಂದೂ ಚೇತರಿಸಿಕೊಳ್ಳನು ಎಂಬದನ್ನು ಸೂಚಿಸಿತು.—ಅ. ಕೃತ್ಯಗಳು 2:31, 32; ಇಬ್ರಿಯ 2:14 ಓದಿ.

2 ಯೇಸು ಭೂಮಿಯಲ್ಲಿ ತನ್ನ ನೇಮಕವನ್ನು ಪೂರೈಸುವುದರಲ್ಲಿ ಮತ್ತು ಸೈತಾನನನ್ನು ಎದುರಿಸುವುದರಲ್ಲಿ ಯಶಸ್ವಿಯಾಗುವನೆಂಬ ಭರವಸೆ ಯೆಹೋವನಿಗಿತ್ತು. ಏಕೆ? ಏಕೆಂದರೆ, ಬಹಳ ಹಿಂದೆಯೇ ಆತನು ಯೇಸುವನ್ನು ಸ್ವರ್ಗದಲ್ಲಿ ಸೃಷ್ಟಿಸಿದ್ದನು, ಆತನನ್ನು ಗಮನಿಸಿದ್ದನು ಮತ್ತು ಕುಶಲ “ಶಿಲ್ಪಿ” ಹಾಗೂ “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾದ ಇವನು ವಿಧೇಯನೂ ನಂಬಿಗಸ್ತನೂ ಆಗಿದ್ದಾನೆಂಬದನ್ನು ತಿಳಿದಿದ್ದನು. (ಜ್ಞಾನೋ. 8:22-31; ಕೊಲೊ. 1:15) ಹಾಗಾಗಿ ದೇವರು ಯೇಸುವನ್ನು ಈ ಭೂಮಿಗೆ ಕಳುಹಿಸಿ ಸೈತಾನನು ಅವನನ್ನು ಮರಣದವರೆಗೆ ಪರೀಕ್ಷಿಸುವಂತೆ ಬಿಟ್ಟಾಗ, ತನ್ನ ಏಕಜಾತ ಪುತ್ರನು ಸೈತಾನನನ್ನು ಎದುರಿಸುವುದರಲ್ಲಿ ಯಶಸ್ವಿಯಾಗುವನೆಂಬ ಭರವಸೆ ಆತನಿಗಿತ್ತು.—ಯೋಹಾ. 3:16.

ಯೆಹೋವನು ತನ್ನ ಸೇವಕರನ್ನು ಸಂರಕ್ಷಿಸುತ್ತಾನೆ

3 ಯೇಸು ಪಿಶಾಚನನ್ನು “ಇಹಲೋಕಾಧಿಪತಿ” ಎಂದು ಕರೆದನು ಮತ್ತು ತನ್ನಂತೆಯೇ ತನ್ನ ಶಿಷ್ಯರು ಅವನಿಂದ ಹಿಂಸೆಗೊಳಗಾಗುವರೆಂದು ಎಚ್ಚರಿಸಿದನು. (ಯೋಹಾ. 12:31; 15:20) ಪಿಶಾಚನಾದ ಸೈತಾನನ ಪ್ರಭಾವದಡಿ ಇರುವ ಈ ಲೋಕವು, ನಿಜ ಕ್ರೈಸ್ತರು ಯೆಹೋವನನ್ನು ಸೇವಿಸುವ ಮತ್ತು ಸುನೀತಿಯನ್ನು ಸಾರುವ ಕಾರಣಕ್ಕಾಗಿ ಅವರನ್ನು ದ್ವೇಷಿಸುತ್ತದೆ. (ಮತ್ತಾ. 24:9; 1 ಯೋಹಾ. 5:19) ಸೈತಾನನ ಮುಖ್ಯ ಗುರಿಯು, ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಆಳುವವರಾದ ಅಭಿಷಿಕ್ತ ಕ್ರೈಸ್ತರ ಉಳಿಕೆಯವರಾಗಿದ್ದಾರೆ. ಅಲ್ಲದೆ, ಪರದೈಸ್‌ ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆಯುಳ್ಳ ಅನೇಕ ಯೆಹೋವನ ಸಾಕ್ಷಿಗಳ ಮೇಲೂ ಅವನ ಕಣ್ಣಿದೆ. ದೇವರ ವಾಕ್ಯವು ನಮ್ಮನ್ನು ಎಚ್ಚರಿಸುವುದು: “ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”—1 ಪೇತ್ರ 5:8.

4 ಯೆಹೋವ ದೇವರ ಬೆಂಬಲವುಳ್ಳ ಒಂದು ಸಂಘಟನೆಯಾಗಿರುವ ನಾವು ಸೈತಾನನನ್ನು ಎದುರಿಸುವುದರಲ್ಲಿ ಯಶಸ್ವಿಗಳಾಗಿದ್ದೇವೆ. ಈ ನಿಜಾಂಶಗಳನ್ನು ಪರಿಗಣಿಸಿ: ಕಳೆದ 100 ವರ್ಷಗಳಲ್ಲಿ ಇತಿಹಾಸದಲ್ಲೇ ಅತ್ಯಂತ ಕ್ರೂರ ಸರ್ವಾಧಿಕಾರದ ಆಡಳಿತಗಳು ಯೆಹೋವನ ಸಾಕ್ಷಿಗಳನ್ನು ಅಳಿಸಿಬಿಡಲು ಪ್ರಯತ್ನಿಸಿವೆ. ಹಾಗಿದ್ದರೂ ಸಾಕ್ಷಿಗಳ ಸಂಖ್ಯೆಯು ಈಗ ಬೆಳೆಯುತ್ತಾ 70,00,000ದಷ್ಟಾಗಿದೆ. ಇವರು ಲೋಕವ್ಯಾಪಕವಾಗಿ 1,00,000ಕ್ಕಿಂತ ಹೆಚ್ಚಿನ ಸಭೆಗಳಲ್ಲಿದ್ದಾರೆ. ಯೆಹೋವನ ಜನರನ್ನು ಹಿಂಸಿಸಿದ ಕ್ರೂರ ಸರ್ವಾಧಿಕಾರಿ ಆಡಳಿತಗಳಾದರೋ ಅಳಿದುಹೋಗಿವೆ!

5 ಪ್ರಾಚೀನ ಇಸ್ರಾಯೇಲ್‌ ಜನಾಂಗವನ್ನು ಸಂಬೋಧಿಸುತ್ತಾ ದೇವರು ವಾಗ್ದಾನಿಸಿದ್ದು: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ.” (ಯೆಶಾ. 54:17) ಆ ವಾಗ್ದಾನವು, ಈ ‘ಕಡೇ ದಿವಸಗಳಲ್ಲೂ’ ಯೆಹೋವನ ಜನರ ವಿಷಯದಲ್ಲಿ ಸತ್ಯವಾಗಿದೆ. (2 ತಿಮೊ. 3:1-5, 13) ನಾವು ಪಿಶಾಚನನ್ನು ಎದುರಿಸುತ್ತಾ ಇರುವೆವು ಮತ್ತು ದೇವರ ಜನರನ್ನು ಅಳಿಸಿಬಿಡಲು ಅವನು ಬಳಸುವ ಯಾವ ಆಯುಧವೂ ಯಶಸ್ಸುಕಾಣದು ಏಕೆಂದರೆ ಯೆಹೋವನು ನಮ್ಮ ಪಕ್ಷದಲ್ಲಿದ್ದಾನೆ.—ಕೀರ್ತ. 118:6, 7.

6 ವೇಗವಾಗಿ ಸಮೀಪಿಸುತ್ತಿರುವ ಈ ಇಡೀ ದುಷ್ಟ ವ್ಯವಸ್ಥೆಯ ಅಂತ್ಯದಲ್ಲಿ, ಸೈತಾನನ ಆಳ್ವಿಕೆಯ ಎಲ್ಲ ಭಾಗಗಳನ್ನು ಸಂಪೂರ್ಣವಾಗಿ ನಿರ್ಮೂಲಮಾಡಲಾಗುವುದು. ದೇವ ಪ್ರೇರಣೆಯಿಂದ ಪ್ರವಾದಿ ದಾನಿಯೇಲನು ಮುಂತಿಳಿಸಿದ್ದು: “ಆ ರಾಜರ ಕಾಲದಲ್ಲಿ [ನಮ್ಮ ದಿನಗಳಲ್ಲಿ] ಪರಲೋಕದೇವರು ಒಂದು ರಾಜ್ಯವನ್ನು [ಸ್ವರ್ಗದಲ್ಲಿ] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ [ಈಗ ಇರುವಂಥ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿ. 2:44) ಹಾಗೆ ಸಂಭವಿಸುವಾಗ ಸೈತಾನನ ಮತ್ತು ಅಪರಿಪೂರ್ಣ ಮಾನವರ ಆಳ್ವಿಕೆಯು ಇಲ್ಲವಾಗುವುದು. ಪಿಶಾಚನ ವ್ಯವಸ್ಥೆಯ ಪ್ರತಿಯೊಂದು ಅಂಶವೂ ಶಾಶ್ವತವಾಗಿ ಇಲ್ಲದೆ ಹೋಗುವುದು ಮತ್ತು ದೇವರ ರಾಜ್ಯವು ಅವಿರೋಧವಾಗಿ ಆಳ್ವಿಕೆ ನಡೆಸುವುದು.—2 ಪೇತ್ರ 3:7, 13 ಓದಿ.

7 ಯೆಹೋವನ ಸಂಘಟನೆ ಸಂರಕ್ಷಿಸಲ್ಪಟ್ಟು ಆಧ್ಯಾತ್ಮಿಕವಾಗಿ ಏಳಿಗೆ ಹೊಂದುವುದು ಎಂಬದರಲ್ಲಿ ಯಾವ ಸಂಶಯವೂ ಇಲ್ಲ. (ಕೀರ್ತನೆ 125:1, 2 ಓದಿ.) ಆದರೆ ವೈಯಕ್ತಿಕವಾಗಿ ನಮ್ಮ ಕುರಿತೇನು? ಯೇಸುವಿನಂತೆ ನಾವು ಸಹ ಸೈತಾನನನ್ನು ಎದುರಿಸುವುದರಲ್ಲಿ ಯಶಸ್ವಿಗಳಾಗಬಲ್ಲೆವು ಎಂಬದಾಗಿ ಬೈಬಲ್‌ ಹೇಳುತ್ತದೆ. ಅಪೊಸ್ತಲ ಯೋಹಾನನ ಮುಖಾಂತರ ಕ್ರಿಸ್ತನು ಕೊಟ್ಟ ಪ್ರವಾದನೆಯು, ಸೈತಾನನ ವಿರೋಧವಿದ್ದರೂ ಭೂನಿರೀಕ್ಷೆಯಿರುವ ಒಂದು “ಮಹಾ ಸಮೂಹವು” ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗುವುದೆಂದು ತೋರಿಸುತ್ತದೆ. ಬೈಬಲಿಗನುಸಾರ ಅವರು, “ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ [ಯೇಸು ಕ್ರಿಸ್ತ] ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ” ಎಂದು ಧ್ವನಿಯೆತ್ತುವರು. (ಪ್ರಕ. 7:9-14) ಅಭಿಷಿಕ್ತ ಕ್ರೈಸ್ತರು ಸೈತಾನನನ್ನು ಜಯಿಸಿದ್ದಾರೆಂದು ಹೇಳಲಾಗುತ್ತದೆ. ಅವರ ಸಂಗಡಿಗರಾದ “ಬೇರೆ ಕುರಿಗಳು” ಸಹ ಅವನನ್ನು ಎದುರಿಸುವುದರಲ್ಲಿ ಯಶಸ್ವಿಗಳಾಗುತ್ತಾರೆ. (ಯೋಹಾ. 10:16; ಪ್ರಕ. 12:10, 11) ಆದರೆ ಇದಕ್ಕೆ ಶ್ರದ್ಧಾಪೂರ್ವಕ ಪ್ರಯತ್ನ ಹಾಗೂ ‘ಕೆಡುಕನಿಂದ ನಮ್ಮನ್ನು ತಪ್ಪಿಸು’ ಎಂದು ಕಟ್ಟಾಸಕ್ತಿಯಿಂದ ಪ್ರಾರ್ಥಿಸುವುದು ಅಗತ್ಯ.—ಮತ್ತಾ. 6:13.

ಸೈತಾನನನ್ನು ಎದುರಿಸುವುದರಲ್ಲಿ ಪರಿಪೂರ್ಣ ಮಾದರಿ

8 ಪಿಶಾಚನು ಯೇಸುವಿನ ಸಮಗ್ರತೆಯನ್ನು ಮುರಿಯಲು ಪ್ರಯತ್ನಿಸಿದ್ದನು. ಯೇಸು ಅಡವಿಯಲ್ಲಿದ್ದಾಗ ಅವನು ಯೆಹೋವನಿಗೆ ಅವಿಧೇಯನಾಗುವಂತೆ ಮಾಡಲು ಸೈತಾನನು ಶೋಧನೆಗಳನ್ನು ತಂದನು. ಹಾಗಿದ್ದರೂ ಸೈತಾನನನ್ನು ಎದುರಿಸುವುದರಲ್ಲಿ ಯೇಸು ಪರಿಪೂರ್ಣ ಮಾದರಿಯನ್ನಿಟ್ಟನು. 40 ದಿನ ಹಗಲುರಾತ್ರಿ ಉಪವಾಸ ಮಾಡಿದ ಬಳಿಕ ಯೇಸುವಿಗೆ ಏನಾದರೂ ತಿನ್ನಲು ತುಂಬ ಆಸೆಯಾಗಿದ್ದಿರಬೇಕು. ಆಗ ಸೈತಾನನು ಯೇಸುವಿಗಂದದ್ದು: “ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು.” ಆದರೆ ತನಗಿದ್ದ ದೇವದತ್ತ ಶಕ್ತಿಯನ್ನು ಯೇಸು ಸ್ವಪ್ರಯೋಜನಕ್ಕೆ ಬಳಸಲಿಲ್ಲ. ಬದಲಿಗೆ ಅವನಂದದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.”—ಮತ್ತಾ. 4:1-4; ಧರ್ಮೋ. 8:3.

9 ಇಂದು ಸಹ ಸೈತಾನನು ಯೆಹೋವನ ಸೇವಕರ ಸ್ವಾಭಾವಿಕವಾದ ಶಾರೀರಿಕ ಇಚ್ಛೆಗಳನ್ನು ತನ್ನ ಪ್ರಯೋಜನಕ್ಕೆ ಬಳಸಲು ಪ್ರಯತ್ನಿಸುತ್ತಾನೆ. ಆದ್ದರಿಂದ ಈ ಅನೈತಿಕ ಲೋಕದಲ್ಲಿ ಸಾಮಾನ್ಯವಾಗಿರುವ ಲೈಂಗಿಕ ಅನೈತಿಕತೆಯ ಶೋಧನೆಗಳನ್ನು ಪ್ರತಿರೋಧಿಸಲು ನಾವು ಗಟ್ಟಿಮನಸ್ಸುಮಾಡಬೇಕು. ದೇವರ ವಾಕ್ಯ ಪ್ರಬಲವಾಗಿ ಹೇಳುವುದು: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು . . . ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂ. 6:9, 10) ಸ್ಪಷ್ಟವಾಗಿಯೇ, ಅನೈತಿಕ ಜೀವನ ನಡೆಸುವವರನ್ನು ಮತ್ತು ಬದಲಾಗಲು ನಿರಾಕರಿಸುವವರನ್ನು ದೇವರ ನೂತನ ಲೋಕದಲ್ಲಿ ಜೀವಿಸಲು ಅನುಮತಿಸಲಾಗದು.

10 ಅರಣ್ಯದಲ್ಲಿ ಯೇಸುವಿಗೆ ಬಂದ ಶೋಧನೆಗಳಲ್ಲೊಂದರ ಕುರಿತು ಬೈಬಲ್‌ ಅನ್ನುವುದು: “ಆಗ ಸೈತಾನನು ಆತನನ್ನು ಪರಿಶುದ್ಧಪಟ್ಟಣಕ್ಕೆ ಕರಕೊಂಡು ಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ—ನೀನು ದೇವರ ಮಗನಾಗಿದ್ದರೆ ಕೆಳಕ್ಕೆ ಧುಮುಕು; ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲೀತೆಂದು ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು ಎಂಬದಾಗಿ ಬರೆದದೆಯಲ್ಲಾ ಎಂದು ಹೇಳಿದನು.” (ಮತ್ತಾ. 4:5, 6) ಒಂದುವೇಳೆ ಸೈತಾನನು ಹೇಳಿದ ಹಾಗೆ ಯೇಸು ಮಾಡಿರುತ್ತಿದ್ದಲ್ಲಿ ಆತನ ಮೆಸ್ಸೀಯತನದ ದೊಡ್ಡ ಪ್ರದರ್ಶನವೇ ಆಗುತ್ತಿತ್ತು. ಆದರೆ ವಾಸ್ತವದಲ್ಲಿ ಅದು ದುರಹಂಕಾರದ ತಪ್ಪು ಕೃತ್ಯವಾಗಿದ್ದು ಆತನು ದೇವರ ಮೆಚ್ಚುಗೆಯನ್ನೂ ಬೆಂಬಲವನ್ನೂ ಕಳಕೊಳ್ಳುತ್ತಿದ್ದನು. ಈ ಸಂದರ್ಭದಲ್ಲೂ ಯೆಹೋವನ ಕಡೆಗಿನ ನಿಷ್ಠೆಯನ್ನು ಯೇಸು ಬಿಟ್ಟುಕೊಡಲಿಲ್ಲ ಮತ್ತು ಶಾಸ್ತ್ರವಚನದಿಂದ ಉಲ್ಲೇಖಿಸುತ್ತಾ ಸೈತಾನನಿಗೆ ಉತ್ತರಕೊಟ್ಟನು. ಅವನಂದದ್ದು: “ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು ಎಂಬದಾಗಿ ಸಹ ಬರೆದದೆ.”—ಮತ್ತಾ. 4:7; ಧರ್ಮೋ. 6:16.

11 ನಾವು ನಮ್ಮನ್ನೇ ಮಹಿಮೆಪಡಿಸಿಕೊಳ್ಳುವಂತೆ ಸೈತಾನನು ಅನೇಕ ವಿಧಾನಗಳಲ್ಲಿ ಶೋಧನೆಗೆ ಒಳಪಡಿಸಬಹುದು. ಬಟ್ಟೆ ಹಾಗೂ ಕೇಶಾಲಂಕಾರದಲ್ಲಿ ನಾವು ಲೋಕದ ಶೈಲಿಯನ್ನು ಅನುಕರಿಸುವಂತೆ ಅಥವಾ ಪ್ರಶ್ನಾರ್ಹ ಮನೋರಂಜನೆಯಲ್ಲಿ ತೊಡಗಿಕೊಳ್ಳುವಂತೆ ಅವನು ನಮ್ಮನ್ನು ಪುಸಲಾಯಿಸಬಹುದು. ಆದರೆ ನಾವು ಬೈಬಲ್‌ ಹಿತೋಪದೇಶವನ್ನು ತಳ್ಳಿಹಾಕಿ ಈ ಲೋಕವನ್ನು ಅನುಕರಿಸಿದರೆ ಅದರಿಂದ ಉಂಟಾಗುವ ಕೆಟ್ಟ ಫಲಿತಾಂಶಗಳಿಂದ ದೇವದೂತರು ನಮ್ಮನ್ನು ಸಂರಕ್ಷಿಸುವಂತೆ ಹೇಗೆ ತಾನೇ ನಿರೀಕ್ಷಿಸಸಾಧ್ಯ? ರಾಜ ದಾವೀದನು ಬತ್ಷೆಬೆಯೊಂದಿಗೆ ಗೈದ ಪಾಪಕ್ಕಾಗಿ ಪಶ್ಚಾತ್ತಾಪಪಟ್ಟರೂ ತಾನು ಮಾಡಿದ್ದನ್ನು ಉಣ್ಣಲೇಬೇಕಾಯಿತು. (2 ಸಮು. 12:9-12) ಲೋಕದೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುವುದರ ಮೂಲಕ ಅಥವಾ ಇತರ ತಪ್ಪಾದ ರೀತಿಗಳಲ್ಲಿ ಯೆಹೋವನನ್ನು ಪರೀಕ್ಷಿಸದಿರೋಣ.ಯಾಕೋಬ 4:4; 1 ಯೋಹಾನ 2:15-17 ಓದಿ.

12 ರಾಜಕೀಯ ಅಧಿಕಾರವನ್ನು ಯೇಸುವಿನ ಎದುರಿಗಿಡುವ ಮೂಲಕ ಸೈತಾನನು ಅವನನ್ನು ಅಡವಿಯಲ್ಲಿ ಮತ್ತೊಂದು ರೀತಿಯಲ್ಲಿ ಶೋಧನೆಗೊಡ್ಡಿದನು. ಈ ಲೋಕದ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಯೇಸುವಿಗೆ ತೋರಿಸುತ್ತಾ ಸೈತಾನನಂದದ್ದು: “ನೀನು ನನಗೆ ಸಾಷ್ಟಾಂಗನಮಸ್ಕಾರ ಮಾಡಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು.” (ಮತ್ತಾ. 4:8, 9) ಯೆಹೋವನಿಗೆ ಸಲ್ಲಬೇಕಾದ ಆರಾಧನೆಯನ್ನು ಕಸಿದುಕೊಳ್ಳುವ ಮತ್ತು ದೇವರಿಗೆ ಯೇಸು ಅಪನಂಬಿಗಸ್ತನಾಗುವಂತೆ ಆಮಿಷವೊಡ್ಡುವ ಎಂಥ ನೀಚ ಯತ್ನವಿದು! ಒಂದು ಕಾಲದಲ್ಲಿ ನಿಷ್ಠಾವಂತ ದೇವದೂತನಾಗಿದ್ದವನು, ತನಗೇ ಆರಾಧನೆ ಸಿಗಬೇಕೆಂದು ಆಸೆಪಟ್ಟು ಅದರ ಕುರಿತಾಗಿಯೇ ಯೋಚಿಸುವ ಮೂಲಕ ಪಾಪಭರಿತ, ಲೋಭಿ ಮತ್ತು ಅತಿ ದುಷ್ಟ ವಂಚಕನಾಗಿರುವ ಪಿಶಾಚನಾದ ಸೈತಾನನಾದನು. (ಯಾಕೋ. 1:14, 15) ಆದರೆ ಅವನಿಗೆ ತದ್ವಿರುದ್ಧವಾಗಿ ಯೇಸುವಾದರೋ ತನ್ನ ಸ್ವರ್ಗೀಯ ತಂದೆಗೆ ನಂಬಿಗಸ್ತನಾಗಿರುವ ದೃಢನಿಶ್ಚಯದಿಂದ ಹೀಗಂದನು: “ಸೈತಾನನೇ, ನೀನು ತೊಲಗಿ ಹೋಗು, ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ.” ಹೀಗೆ ಯೇಸು ಈ ಸಂದರ್ಭದಲ್ಲೂ ಪಿಶಾಚನನ್ನು ಸ್ಪಷ್ಟ ಹಾಗೂ ಖಡಾಖಂಡಿತ ರೀತಿಯಲ್ಲಿ ಎದುರಿಸಿದನು. ದೇವರ ಮಗನಿಗೆ ಸೈತಾನನ ಲೋಕದ ಯಾವ ಭಾಗವೂ ಬೇಕಾಗಿರಲಿಲ್ಲ ಮತ್ತು ಆ ದುಷ್ಟನನ್ನು ಅವನೆಂದೂ ಆರಾಧಿಸಲು ಸಿದ್ಧನಿರಲಿಲ್ಲ!—ಮತ್ತಾ. 4:10; ಧರ್ಮೋ. 6:13; 10:20.

‘ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು’

13 ಲೋಕದ ಎಲ್ಲ ರಾಜ್ಯಗಳನ್ನು ಯೇಸುವಿಗೆ ತೋರಿಸುವ ಮೂಲಕ ಪಿಶಾಚನು, ಹಿಂದೆ ಯಾವ ಮಾನವನಿಗೂ ಸಿಕ್ಕಿರದ ಅಧಿಕಾರವನ್ನು ಆತನ ಮುಂದಿಟ್ಟನು. ಯೇಸು ಏನನ್ನು ಕಂಡನೋ ಅದರಿಂದ ಪ್ರಭಾವಿತನಾಗುವನು ಮತ್ತು ಭೂಮಿಯಲ್ಲೇ ಅತಿ ಬಲಿಷ್ಠ ರಾಜಕೀಯ ನಾಯಕನಾಗಲು ತಾನು ಅವನನ್ನು ಒಪ್ಪಿಸಬಲ್ಲೆನೆಂದು ಸೈತಾನನು ನೆನಸಿದನು. ಇಂದು ಸೈತಾನನು ನಮಗೆ ರಾಜ್ಯಗಳನ್ನು ನೀಡಲಿಕ್ಕಿಲ್ಲವಾದರೂ ನಮ್ಮ ಕಣ್ಣು, ಕಿವಿ ಹಾಗೂ ಮನಸ್ಸಿನ ಮೂಲಕ ನಮ್ಮ ಹೃದಯವನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಿದ್ದಾನೆ ಎಂಬುದಂತೂ ನಿಜ.

14 ಪಿಶಾಚನಿಗೆ ಈ ಲೋಕದ ಮೇಲೆ ಹತೋಟಿಯಿರುವುದರಿಂದ ಆತನು ಸಮೂಹ ಮಾಧ್ಯಮಗಳ ಮೇಲೂ ತನ್ನ ಅಧಿಕಾರ ಚಲಾಯಿಸುತ್ತಾನೆ. ಹಾಗಾಗಿ ಜನರು ವೀಕ್ಷಿಸುವಂತೆ, ಆಲಿಸುವಂತೆ ಮತ್ತು ಓದುವಂತೆ ಈ ಲೋಕ ಏನೇನನ್ನು ನೀಡುತ್ತದೋ ಅದರಲ್ಲೆಲ್ಲ ಅನೈತಿಕತೆ ಮತ್ತು ಹಿಂಸಾಚಾರ ತುಂಬಿರುವುದು ಆಶ್ಚರ್ಯದ ಸಂಗತಿಯಲ್ಲ. ಈ ಲೋಕದ ಜಾಹೀರಾತುಗಳು, ನಮಗೆ ಅಗತ್ಯವಿರದ ವಸ್ತುಗಳನ್ನು ತಂದು ರಾಶಿಹಾಕುವಂತೆ ನಮ್ಮಲ್ಲಿ ಆಸೆಹುಟ್ಟಿಸುತ್ತವೆ. ಈ ಮಾಧ್ಯಮಗಳ ಮೂಲಕ ಪಿಶಾಚನು ನಮ್ಮ ಕಣ್ಣು, ಕಿವಿ ಮತ್ತು ಮನಸ್ಸಿಗೆ ಹಿಡಿಸುವಂಥ ಪ್ರಾಪಂಚಿಕ ಆಕರ್ಷಣೆಗಳಿಂದ ನಮ್ಮನ್ನು ಶೋಧಿಸಲು ಸತತವಾಗಿ ಪ್ರಯತ್ನಿಸುತ್ತಾನೆ. ಆದರೆ ಬೈಬಲ್‌ ಮೂಲತತ್ತ್ವಗಳನ್ನು ಉಲ್ಲಂಘಿಸುವ ವಿಷಯಗಳನ್ನು ನೋಡಲು, ಆಲಿಸಲು ಮತ್ತು ಓದಲು ನಿರಾಕರಿಸುವಾಗ ನಾವು, “ಸೈತಾನನೇ, ನೀನು ತೊಲಗಿ ಹೋಗು” ಎಂದು ಹೇಳಿದಂತಾಗುವುದು. ಹೀಗೆ ನಾವು ಸೈತಾನನ ಅಶುದ್ಧ ಲೋಕವನ್ನು ತ್ಯಜಿಸುವುದರಲ್ಲಿ ಯೇಸುವಿನ ಹಾಗೆ ದೃಢ ಹಾಗೂ ನಿರ್ಣಯಾತ್ಮಕ ನಿಲುವನ್ನು ತೆಗೆದುಕೊಳ್ಳುತ್ತೇವೆ. ನಾವು ಸೈತಾನನ ಲೋಕದ ಭಾಗವಾಗಿಲ್ಲ ಎಂಬುದು, ನಾವು ನಿರ್ಭೀತಿಯಿಂದ ನಮ್ಮನ್ನು ಯೆಹೋವನ ಸಾಕ್ಷಿಗಳೆಂದೂ ಕ್ರಿಸ್ತನ ಹಿಂಬಾಲಕರೆಂದೂ ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ನೆರೆಹೊರೆಯಲ್ಲಿ ಮತ್ತು ಸಂಬಂಧಿಕರೊಂದಿಗೆ ಧೈರ್ಯದಿಂದ ಗುರುತಿಸಿಕೊಳ್ಳುವಾಗ ವ್ಯಕ್ತವಾಗುತ್ತದೆ.—ಮಾರ್ಕ 8:38 ಓದಿ.

15 ದೇವರ ಮೇಲಿನ ಯೇಸುವಿನ ಸಮಗ್ರತೆಯನ್ನು ಮುರಿಯಲು ಮೂರನೆಯ ಬಾರಿಯೂ ಅಸಫಲನಾದಾಗ “ಸೈತಾನನು ಆತನನ್ನು ಬಿಟ್ಟುಬಿಟ್ಟನು.” (ಮತ್ತಾ. 4:11) ಹಾಗಿದ್ದರೂ ಯೇಸುವಿಗೆ ಶೋಧನೆಗಳನ್ನು ತರುವುದನ್ನು ಸೈತಾನನು ನಿಲ್ಲಿಸಲಿಲ್ಲ. ಬೈಬಲ್‌ ತಿಳಿಸುವುದು: “ಸೈತಾನನು ಸಕಲವಿಧವಾದ ಶೋಧನೆಯನ್ನು [ಅಡವಿಯಲ್ಲಿ] ಮುಗಿಸಿ ಸ್ವಲ್ಪಕಾಲ ಆತನನ್ನು ಬಿಟ್ಟು ಹೊರಟುಹೋದನು.” (ಲೂಕ 4:13) ನಾವು ಪಿಶಾಚನನ್ನು ಎದುರಿಸುವುದರಲ್ಲಿ ಯಶಸ್ವಿಯಾಗುವಾಗಲೆಲ್ಲ ಯೆಹೋವನಿಗೆ ಕೃತಜ್ಞತೆ ಸಲ್ಲಿಸಬೇಕು. ಅಷ್ಟೇ ಅಲ್ಲ, ದೇವರ ಸಹಾಯದ ಮೇಲೆ ಅವಲಂಬಿಸುವುದನ್ನು ಮುಂದುವರಿಸಬೇಕು. ಏಕೆಂದರೆ, ಪಿಶಾಚನು ತನಗೆ ಸೂಕ್ತವಾದ ಇನ್ನೊಂದು ಸಮಯದಲ್ಲಿ ಮತ್ತೆ ಶೋಧನೆ ತರುವನು ಮತ್ತು ಅದು ನಾವು ಶೋಧನೆ ಬರುವುದೆಂದು ನಿರೀಕ್ಷಿಸುತ್ತಿರುವ ಸಮಯದಲ್ಲೇ ಬರಬೇಕೆಂದೇನಿಲ್ಲ. ಹಾಗಾಗಿ ನಾವು ಸದಾ ಎಚ್ಚರವಾಗಿದ್ದು, ಯಾವುದೇ ಪರೀಕ್ಷೆಗಳು ಬಂದರೂ ಸರಿ ಪಟ್ಟುಬಿಡದೆ ಯೆಹೋವನಿಗೆ ಪವಿತ್ರ ಸೇವೆ ಸಲ್ಲಿಸಲು ಸಿದ್ಧರಾಗಿರಬೇಕು.

16 ಪಿಶಾಚನನ್ನು ಎದುರಿಸುವ ನಮ್ಮ ಪ್ರಯತ್ನಗಳಲ್ಲಿ ನಮಗೆ ನೆರವಾಗಲು ನಾವು ವಿಶ್ವದಲ್ಲೇ ಅತಿ ಪ್ರಬಲ ಶಕ್ತಿಯಾದ ದೇವರ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಬೇಕು ಮತ್ತು ಆಗ ನಮಗದು ದೊರೆಯುವುದು. ಅದನ್ನು ಪಡೆದಾಗ ನಾವು ನಮ್ಮ ಸ್ವಂತ ಶಕ್ತಿಯಿಂದ ಮಾಡಲಸಾಧ್ಯವಾದ ಸಂಗತಿಗಳನ್ನು ಮಾಡಲು ಸಾಧ್ಯವಾಗುವುದು. ದೇವರಾತ್ಮವು ಲಭ್ಯವಿದೆ ಎಂಬ ಆಶ್ವಾಸನೆ ಕೊಡಲು ಯೇಸು ತನ್ನ ಹಿಂಬಾಲಕರಿಗಂದದ್ದು: “[ಅಪರಿಪೂರ್ಣರಾಗಿರುವ ಮತ್ತು ಈ ಅರ್ಥದಲ್ಲಿ] ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” (ಲೂಕ 11:13) ನಾವು ಪವಿತ್ರಾತ್ಮಕ್ಕಾಗಿ ಯೆಹೋವನನ್ನು ಬೇಡುತ್ತಾ ಇರೋಣ. ಪಿಶಾಚನನ್ನು ಎದುರಿಸುವ ನಮ್ಮ ದೃಢಸಂಕಲ್ಪವನ್ನು ಈ ಅತಿ ಪ್ರಬಲ ಶಕ್ತಿ ಬೆಂಬಲಿಸುವುದರಿಂದ ನಾವು ವಿಜಯಿಗಳಾಗಬಲ್ಲೆವು. ‘ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ’ ಕ್ರಮವಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸುವುದರ ಜೊತೆಗೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ನಾವು ಧರಿಸಿಕೊಳ್ಳಬೇಕು.—ಎಫೆ. 6:11-18.

17 ಸೈತಾನನನ್ನು ಎದುರಿಸಲು ಯೇಸುವಿಗೆ ಇನ್ನೊಂದು ಸಂಗತಿಯೂ ನೆರವು ನೀಡಿತು ಮತ್ತು ಅದು ನಮಗೂ ಬೇಕಾಗಿದೆ. ಬೈಬಲ್‌ ಅನ್ನುವುದು: “ಆತನು [ಯೇಸು] ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” (ಇಬ್ರಿ. 12:2) ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುವ, ಆತನ ಪವಿತ್ರ ನಾಮವನ್ನು ಘನಪಡಿಸುವ ಮತ್ತು ನಿತ್ಯಜೀವದ ಬಹುಮಾನವನ್ನು ನಮ್ಮೆದುರಿಗೆ ಇಟ್ಟುಕೊಳ್ಳುವ ಮೂಲಕ ನಾವು ಸಹ ಅದೇ ಸಂತೋಷವನ್ನು ಪಡೆಯಬಲ್ಲೆವು. ಸೈತಾನನೂ ಅವನ ಎಲ್ಲ ಕೆಲಸಗಳೂ ಶಾಶ್ವತವಾಗಿ ನಿರ್ಮೂಲವಾಗುವಾಗ ಮತ್ತು ‘ದೀನರು ದೇಶವನ್ನು ಅನುಭವಿಸಿ ಮಹಾಸೌಖ್ಯದಿಂದ ಆನಂದಿಸುವಾಗ’ ನಾವೆಷ್ಟು ಹರ್ಷಿಸುವೆವು! (ಕೀರ್ತ. 37:11) ಹಾಗಾಗಿ, ಯೇಸುವಿನಂತೆ ಸೈತಾನನನ್ನು ಎದುರಿಸುತ್ತಾ ಇರ್ರಿ.ಯಾಕೋಬ 4:7, 8 ಓದಿ.

ನಿಮ್ಮ ಉತ್ತರವೇನು?

• ಯೆಹೋವನು ತನ್ನ ಜನರನ್ನು ಸಂರಕ್ಷಿಸುತ್ತಾನೆ ಎಂಬದಕ್ಕೆ ಯಾವ ಪುರಾವೆಯಿದೆ?

• ಸೈತಾನನನ್ನು ಎದುರಿಸುವುದರಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು?

• ನೀವು ಯಾವ ವಿಧಗಳಲ್ಲಿ ಸೈತಾನನನ್ನು ಎದುರಿಸಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

1. ಯೇಸುವಿಗೆ ತಾನು ಯಾವ ವಿರೋಧವನ್ನು ಎದುರಿಸಲಿದ್ದೇನೆಂಬುದು ತಿಳಿದಿತ್ತು, ಮತ್ತು ಇದರ ಪರಿಣಾಮವೇನಾಗಲಿತ್ತು?

2. ಯೇಸು ಸೈತಾನನನ್ನು ಎದುರಿಸುವುದರಲ್ಲಿ ಯಶಸ್ವಿಯಾಗುವನೆಂಬ ಭರವಸೆ ಯೆಹೋವನಿಗಿರಲು ಕಾರಣವೇನು?

3. ಯೆಹೋವನ ಸೇವಕರ ಕಡೆಗೆ ಪಿಶಾಚನ ಮನೋಭಾವವೇನು?

4. ನಮ್ಮ ಸಮಯಗಳಲ್ಲಿ ದೇವಜನರು ಸೈತಾನನನ್ನು ಎದುರಿಸುವುದರಲ್ಲಿ ಯಶಸ್ವಿಗಳಾಗಿದ್ದಾರೆಂದು ಯಾವುದು ರುಜುಪಡಿಸುತ್ತದೆ?

5. ಯೆಶಾಯ 54:17 ಯೆಹೋವನ ಸೇವಕರ ವಿಷಯದಲ್ಲಿ ಹೇಗೆ ಸತ್ಯವಾಗಿದೆ?

6. ದಾನಿಯೇಲನ ಪ್ರವಾದನೆಗನುಸಾರ ಪಿಶಾಚನ ಆಳ್ವಿಕೆಯ ಭವಿಷ್ಯವೇನು?

7. ಯೆಹೋವನ ಸೇವಕರು ಗುಂಪಾಗಿ ಮಾತ್ರವಲ್ಲ ಒಬ್ಬೊಬ್ಬರಾಗಿಯೂ ಸೈತಾನನನ್ನು ಎದುರಿಸುವುದರಲ್ಲಿ ಯಶಸ್ವಿಗಳಾಗಬಲ್ಲರೆಂದು ನಮಗೆ ಹೇಗೆ ಗೊತ್ತು?

8. ಯೇಸು ಅಡವಿಯಲ್ಲಿದ್ದಾಗ ಪಿಶಾಚನು ಒಡ್ಡಿದ ಮೊದಲ ದಾಖಲಿತ ಶೋಧನೆ ಯಾವುದು, ಮತ್ತು ಕ್ರಿಸ್ತನು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದನು?

9. ನಮ್ಮ ಸ್ವಾಭಾವಿಕ ಶಾರೀರಿಕ ಇಚ್ಛೆಗಳನ್ನು ದುರುಪಯೋಗಿಸಲು ಪಿಶಾಚನು ಮಾಡುವ ಪ್ರಯತ್ನಗಳನ್ನು ನಾವೇಕೆ ಪ್ರತಿರೋಧಿಸಬೇಕು?

10. ಮತ್ತಾಯ 4:5, 6ರ ಮೇರೆಗೆ, ಯೇಸುವಿನ ಸಮಗ್ರತೆಯನ್ನು ಮುರಿಯಲು ಸೈತಾನನು ಬಳಸಿದ ಮತ್ತೊಂದು ಶೋಧನೆ ಯಾವುದು?

11. ಸೈತಾನನು ನಮ್ಮನ್ನು ಹೇಗೆ ಶೋಧನೆಗೆ ಒಡ್ಡಬಲ್ಲನು, ಮತ್ತು ಅದರ ಪರಿಣಾಮ ಏನಾಗಿರಬಹುದು?

12. ಮತ್ತಾಯ 4:8, 9 ಯಾವ ಶೋಧನೆಯ ಕುರಿತು ತಿಳಿಸುತ್ತದೆ, ಮತ್ತು ದೇವರ ಮಗನು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದನು?

13, 14. (ಎ) ಲೋಕದ ಎಲ್ಲ ರಾಜ್ಯಗಳನ್ನು ಯೇಸುವಿಗೆ ತೋರಿಸುವ ಮೂಲಕ ಪಿಶಾಚನು ಅವನಿಗೆ ಏನನ್ನು ನೀಡಿದನು? (ಬಿ) ನಮ್ಮನ್ನು ಭ್ರಷ್ಟಗೊಳಿಸಲು ಸೈತಾನನು ಏನು ಮಾಡುತ್ತಾನೆ?

15. ಸೈತಾನನನ್ನು ಎದುರಿಸಲು ಸದಾ ಎಚ್ಚರವಾಗಿರಬೇಕು ಏಕೆ?

16. ಯೆಹೋವನು ನಮಗೆ ಯಾವ ಪ್ರಬಲ ಶಕ್ತಿಯನ್ನು ದಯಪಾಲಿಸುತ್ತಾನೆ, ಮತ್ತು ನಾವು ಅದಕ್ಕಾಗಿ ಏಕೆ ಪ್ರಾರ್ಥಿಸಬೇಕು?

17. ಯಾವ ಸಂತೋಷವು ಯೇಸುವಿಗೆ ಪಿಶಾಚನನ್ನು ಎದುರಿಸಲು ಸಹಾಯಮಾಡಿತು?

[ಪುಟ 29ರಲ್ಲಿರುವ ಚಿತ್ರ]

ಲೋಕದ ಸ್ನೇಹಿತರಾಗುವಲ್ಲಿ ನಾವು ದೇವರಿಗೆ ವೈರಿಗಳಾಗುತ್ತೇವೆ

[ಪುಟ 31ರಲ್ಲಿರುವ ಚಿತ್ರ]

ಪಿಶಾಚನು ಲೋಕದ ಎಲ್ಲ ರಾಜ್ಯಗಳನ್ನು ಯೇಸುವಿಗೆ ನೀಡಿದಾಗ ಆತನದನ್ನು ನಿರಾಕರಿಸಿದನು