ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸಮಾಧಾನಕ್ಕೆ ನಡೆಸುವಂಥದ್ದನ್ನು ಮಾಡೋಣ’

‘ಸಮಾಧಾನಕ್ಕೆ ನಡೆಸುವಂಥದ್ದನ್ನು ಮಾಡೋಣ’

‘ಸಮಾಧಾನಕ್ಕೆ ನಡೆಸುವಂಥದ್ದನ್ನು ಮಾಡೋಣ’

ಒಂದು ಹೊಸ ರಸ್ತೆ ಸುಲಭವಾಗಿ ಸವೆಯದು ಅಥವಾ ಹಾಳಾಗದು ಎಂಬಂತೆ ತೋರಬಹುದು. ಆದರೆ ಸಮಯ ಕಳೆದಂತೆ ಅದರಲ್ಲಿ ಬಿರುಕುಗಳು ಮತ್ತು ಹೊಂಡಗಳು ಬೀಳಬಹುದು. ಸುರಕ್ಷೆಗಾಗಿ ಮತ್ತು ರಸ್ತೆಯನ್ನು ಉಳಿಸಲಿಕ್ಕಾಗಿ ಅದರ ನವೀಕರಣ ಅಗತ್ಯ.

ತದ್ರೀತಿಯಲ್ಲಿ, ಇತರರೊಂದಿಗಿನ ನಮ್ಮ ಸಂಬಂಧಗಳು ಕೆಲವೊಮ್ಮೆ ಕೆಡಬಹುದು ಇಲ್ಲವೇ ಅದರಲ್ಲಿ ಬಿರುಕುಗಳೇಳಬಹುದು. ರೋಮ್‌ನಲ್ಲಿದ್ದ ಕ್ರೈಸ್ತರಲ್ಲಿ ಭಿನ್ನಾಭಿಪ್ರಾಯಗಳೆದ್ದಿದ್ದವು ಎಂಬುದನ್ನು ಅಪೊಸ್ತಲ ಪೌಲನೂ ಒಪ್ಪಿಕೊಂಡನು. ಅವನು ಜೊತೆ ಕ್ರೈಸ್ತರಿಗೆ ಸಲಹೆನೀಡಿದ್ದು: “ಯಾವುದು ನಮ್ಮನ್ನು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ನಡೆಸುತ್ತದೋ ಅದನ್ನೇ ಮಾಡೋಣ.” (ರೋಮಾ. 14:13, 19, NIBV) ‘ಸಮಾಧಾನಕ್ಕೆ ನಡೆಸುವಂಥದ್ದನ್ನು ಮಾಡುವುದು’ ಅವಶ್ಯವೇಕೆ? ಸಮಾಧಾನಕ್ಕೆ ನಡೆಸುವಂಥದ್ದನ್ನು ನಾವು ಹೇಗೆ ಧೈರ್ಯದಿಂದ ಹಾಗೂ ಪರಿಣಾಮಕಾರಿಯಾಗಿ ಮಾಡಬಲ್ಲೆವು?

ಇತರರೊಂದಿಗೆ ಏಕೆ ಸಮಾಧಾನ ಮಾಡಿಕೊಳ್ಳಬೇಕು?

ರಸ್ತೆಯಲ್ಲಿನ ಸಣ್ಣ ಬಿರುಕುಗಳನ್ನು ಹಾಗೇ ಬಿಟ್ಟು ಬಿಡುವಲ್ಲಿ ಅವು ದೊಡ್ಡದಾಗಿ ಅಪಾಯಕಾರಿ ಹೊಂಡಗಳಾಗುವವು. ಅಂತೆಯೇ ವೈಯಕ್ತಿಕ ಮನಸ್ತಾಪಗಳನ್ನು ಇತ್ಯರ್ಥಗೊಳಿಸದಿರುವಲ್ಲಿ ಅವು ವಿನಾಶಕಾರಿಯಾಗಬಲ್ಲವು. ಅಪೊಸ್ತಲ ಯೋಹಾನನು ಬರೆದದ್ದು: “ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.” (1 ಯೋಹಾ. 4:20) ವೈಯಕ್ತಿಕ ಮನಸ್ತಾಪವನ್ನು ಇತ್ಯರ್ಥಗೊಳಿಸದೇ ಬಿಡುವಲ್ಲಿ ಅದು ಕ್ರಮೇಣ ಕ್ರೈಸ್ತನೊಬ್ಬನು ತನ್ನ ಸಹೋದರನನ್ನು ದ್ವೇಷಿಸುವಂತೆಯೂ ಮಾಡಬಹುದು.

ನಾವು ಇತರರೊಂದಿಗೆ ಸಮಾಧಾನ ಮಾಡಿಕೊಳ್ಳದಿದ್ದರೆ ನಮ್ಮ ಆರಾಧನೆಯನ್ನು ಯೆಹೋವನು ಸ್ವೀಕರಿಸುವುದಿಲ್ಲವೆಂದು ಯೇಸು ತೋರಿಸಿದನು. ಅವನು ತನ್ನ ಶಿಷ್ಯರಿಗೆ ಸಲಹೆ ನೀಡಿದ್ದು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತಿರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.” (ಮತ್ತಾ. 5:23, 24) ಹೌದು ನಾವು ಇತರರೊಂದಿಗೆ ಸಮಾಧಾನ ಮಾಡಿಕೊಳ್ಳುವುದರ ಮುಖ್ಯಕಾರಣ ನಾವು ಯೆಹೋವ ದೇವರನ್ನು ಮೆಚ್ಚಿಸಲು ಬಯಸುತ್ತೇವೆ. *

ನಾವು ಇತರರೊಂದಿಗೆ ಏಕೆ ಸಮಾಧಾನ ಮಾಡಿಕೊಳ್ಳಬೇಕೆಂಬುದಕ್ಕೆ ಇನ್ನೊಂದು ಕಾರಣವನ್ನು ಫಿಲಿಪ್ಪಿ ಸಭೆಯಲ್ಲಿದ್ದ ಒಂದು ಸನ್ನಿವೇಶವು ತೋರಿಸುತ್ತದೆ. ಆ ಸಭೆಯಲ್ಲಿದ್ದ ಸಹೋದರಿಯರಾದ ಯುವೊದ್ಯ ಮತ್ತು ಸಂತುಕೆಯರ ನಡುವೆ ಮನಸ್ತಾಪವಿತ್ತು. ಆ ಸಮಸ್ಯೆ ಏನೆಂಬುದನ್ನು ತಿಳಿಸಲಾಗಿಲ್ಲವಾದರೂ ಅದರಿಂದ ಇಡೀ ಸಭೆಯ ಶಾಂತಿಯನ್ನು ಕದಡುವ ಅಪಾಯವಿತ್ತು. (ಫಿಲಿ. 4:2, 3) ಪರಿಹರಿಸದೇ ಬಿಟ್ಟ ವೈಯಕ್ತಿಕ ಮನಸ್ತಾಪಗಳು ಬೇಗನೇ ಬಹಿರಂಗವಾಗಿ, ಎಲ್ಲರಿಗೂ ತಿಳಿದುಬರಬಹುದು. ಸಭೆಯ ಪ್ರೀತಿ ಮತ್ತು ಐಕ್ಯವನ್ನು ಕಾಪಾಡಿಕೊಳ್ಳಬೇಕೆಂಬ ಬಯಕೆ, ಜೊತೆ ವಿಶ್ವಾಸಿಗಳೊಂದಿಗೆ ಸಮಾಧಾನ ಮಾಡಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸುತ್ತದೆ.

ಯೇಸು ಹೇಳಿದ್ದು: “ಸಮಾಧಾನ ಪಡಿಸುವವರು ಧನ್ಯರು.” (ಮತ್ತಾ. 5:9) ಸಮಾಧಾನವನ್ನು ಬೆನ್ನಟ್ಟುವಲ್ಲಿ ಸಂತೋಷ ಹಾಗೂ ತೃಪ್ತಿ ಸಿಗುತ್ತದೆ. ಅಲ್ಲದೇ ಸಮಾಧಾನಿಗಳು ಆಗಿರುವುದರಿಂದ ನಾವು ಒಳ್ಳೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಏಕೆಂದರೆ, “ಶಾಂತಿಗುಣವು ದೇಹಕ್ಕೆ ಜೀವಾಧಾರ.” (ಜ್ಞಾನೋ. 14:30) ಆದರೆ ನಾವು ಮನಸ್ಸಿನಲ್ಲೇ ಅಸಮಾಧಾನ ಇಟ್ಟುಕೊಳ್ಳುವಲ್ಲಿ ಅಸ್ವಸ್ಥರಾಗುವ ಸಾಧ್ಯತೆ ಹೆಚ್ಚು.

ಇತರರೊಂದಿಗೆ ಸಮಾಧಾನವನ್ನು ಮಾಡಿಕೊಳ್ಳುವುದು ಅಗತ್ಯವೆಂದು ಹೆಚ್ಚಿನ ಕ್ರೈಸ್ತರು ಒಪ್ಪಿಕೊಳ್ಳುವುದಾದರೂ, ವೈಯಕ್ತಿಕ ಮನಸ್ತಾಪವನ್ನು ಇತ್ಯರ್ಥಗೊಳಿಸುವುದು ಹೇಗೆಂಬುದರ ಕುರಿತು ನೀವು ಯೋಚಿಸುತ್ತಿರಬಹುದು. ನಮ್ಮನ್ನು ಮಾರ್ಗದರ್ಶಿಸಬಲ್ಲ ಶಾಸ್ತ್ರಾಧಾರಿತ ಮೂಲತತ್ತ್ವಗಳನ್ನು ಈಗ ಪರಿಶೀಲಿಸೋಣ.

ಶಾಂತರಾಗಿ ಮಾತಾಡುವಲ್ಲಿ ಸಮಾಧಾನ ಮಾಡಿಕೊಳ್ಳಬಹುದು

ರಸ್ತೆಯಲ್ಲಿರುವ ಚಿಕ್ಕಪುಟ್ಟ ಬಿರುಕುಗಳನ್ನು ಮುಚ್ಚಿಹಾಕುವ ಮೂಲಕ ಕೆಟ್ಟುಹೋದ ಭಾಗವನ್ನು ದುರಸ್ತಿಗೊಳಿಸಲಾಗುತ್ತದೆ. ನಾವು ನಮ್ಮ ಸಹೋದರರಲ್ಲಿರುವ ಚಿಕ್ಕಪುಟ್ಟ ಕುಂದುಕೊರತೆಗಳನ್ನು ಕ್ಷಮಿಸಿ ಅವುಗಳನ್ನು ಮುಚ್ಚಿಹಾಕಲು ಸಾಧ್ಯವಿದೆಯೋ? ಹಾಗೆ ಮಾಡುವಲ್ಲಿ ಹೆಚ್ಚಿನ ವೈಯಕ್ತಿಕ ಮನಸ್ತಾಪಗಳನ್ನು ಬಗೆಹರಿಸಬಹುದು ಏಕೆಂದರೆ ಅಪೊಸ್ತಲ ಪೇತ್ರನು ಹೇಳಿದ್ದು: “ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”—1 ಪೇತ್ರ 4:8.

ಕೆಲವೊಮ್ಮೆ ಸಮಸ್ಯೆಯು ಸ್ವಲ್ಪ ಗಂಭೀರ ರೂಪದ್ದಾಗಿದ್ದು ಅದನ್ನು ಮುಚ್ಚಿಹಾಕಲು ಸಾಧ್ಯವಾಗಲಿಕ್ಕಿಲ್ಲ. ವಾಗ್ದತ್ತ ದೇಶವನ್ನು ವಶಪಡಿಸಿಕೊಂಡ ಬಳಿಕ ಸ್ವಲ್ಪದರಲ್ಲೇ ಇಸ್ರಾಯೇಲ್ಯರಿಗೆ ಏನು ಸಂಭವಿಸಿತೆಂಬುದನ್ನು ಪರಿಗಣಿಸಿ. “ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ” ಯೊರ್ದನ್‌ ನದಿ ತೀರದಲ್ಲಿ “ಒಂದು ಮಹಾವೇದಿಯನ್ನು ಕಟ್ಟಿದರು.” ಈ ವೇದಿಯನ್ನು ವಿಗ್ರಹಾರಾಧನೆಗೆ ಬಳಸಲಾಗುತ್ತಿದೆ ಎಂದು ನೆನಸಿದ ಇಸ್ರಾಯೇಲಿನ ಇತರ ಕುಲಗಳವರಿಗೆ ಆ ಸಮಸ್ಯೆಯನ್ನು ಅಲ್ಲೇ ಬಿಟ್ಟು ಬಿಡಲಾಗಲಿಲ್ಲ. ಆದ್ದರಿಂದ ಅವರು ಯುದ್ಧಕ್ಕೆ ಸನ್ನದ್ಧರಾದರು.—ಯೆಹೋ. 22:9-12.

ರೂಬೇನ್ಯರೂ ಗಾದ್ಯರೂ ಮನಸ್ಸೆಕುಲದ ಅರ್ಧಜನರೂ ತಪ್ಪು ಮಾಡುತ್ತಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆ ಇದೆ ಮತ್ತು ಅವರ ಮೇಲೆ ಒಮ್ಮೆಲೇ ಅಕ್ರಮಣ ಮಾಡುವಲ್ಲಿ ಹೆಚ್ಚೇನೂ ಪ್ರಾಣಹಾನಿಯಾಗಲಾರದು ಎಂದು ಕೆಲವು ಇಸ್ರಾಯೇಲ್ಯರು ನೆನಸಿರಬಹುದು. ಆದರೆ ದುಡುಕಿ ಕ್ರಿಯೆಗೈಯುವ ಬದಲು ಯೊರ್ದನ್‌ನ ಪಶ್ಚಿಮಕ್ಕಿದ್ದ ಕುಲಗಳವರು ತಮ್ಮ ಸಹೋದರರೊಂದಿಗೆ ಸಮಸ್ಯೆಯ ಕುರಿತು ಚರ್ಚಿಸಲು ಪ್ರತಿನಿಧಿಗಳನ್ನು ಕಳುಹಿಸಿದರು. ಅವರು ಕೇಳಿದ್ದು: “ನೀವು ಇಸ್ರಾಯೇಲ್‌ದೇವರಿಗೆ ವಿರುದ್ಧವಾಗಿ ಇಂಥ ದ್ರೋಹಮಾಡಿದ್ದೇಕೆ? ನಿಮಗೋಸ್ಕರ ವೇದಿಯನ್ನು ಕಟ್ಟಿಕೊಂಡದರಿಂದ ನೀವು ಯೆಹೋವನಿಗೆ ವಿಮುಖರಾದ ಹಾಗಾಯಿತಲ್ಲವೇ.” ಸತ್ಯ ಸಂಗತಿಯೇನಂದರೆ, ವೇದಿಯನ್ನು ಕಟ್ಟಿದ ಕುಲಗಳವರು ಅಪನಂಬಿಗಸ್ತರಾಗಿರಲಿಲ್ಲ. ಆದರೆ ಅವರ ಮೇಲೆ ಹೊರಿಸಲಾದ ಆ ಆರೋಪಕ್ಕೆ ಅವರು ಹೇಗೆ ಪ್ರತಿಕ್ರಿಯಿಸಿದರು? ಆರೋಪ ಹೊರಿಸಿದವರ ಮೇಲೆ ವಾಗ್ದಾಳಿ ನಡೆಸಿದರೋ ಅಥವಾ ಅವರೊಂದಿಗೆ ಮಾತಾಡುವುದನ್ನೇ ನಿಲ್ಲಿಸಿದರೋ? ಇಲ್ಲ. ಬದಲಾಗಿ ಅವರು ಶಾಂತ ರೀತಿಯಲ್ಲಿ ಮಾತನಾಡಿದರು. ಯೆಹೋವನನ್ನು ಸೇವಿಸಬೇಕೆಂಬ ತಮ್ಮ ಆಸೆಯೇ ಆ ವೇದಿಯನ್ನು ಕಟ್ಟಲು ತಮ್ಮನ್ನು ಪ್ರಚೋದಿಸಿತೆಂಬುದನ್ನು ಅವರು ವಿವರಿಸಿದರು. ಅವರ ಈ ಪ್ರತಿಕ್ರಿಯೆಯು ದೇವರೊಂದಿಗಿನ ಅವರ ಸಂಬಂಧವನ್ನು ಕಾಪಾಡಿತು ಅಷ್ಟೇ ಅಲ್ಲ ಜನರ ಪ್ರಾಣಗಳನ್ನೂ ಉಳಿಸಿತು. ಶಾಂತ ರೀತಿಯಲ್ಲಿ ಮಾತಾಡಿದ್ದರಿಂದ ಸಮಸ್ಯೆ ಬಗೆಹರಿದು ಸಮಾಧಾನ ಮತ್ತೆ ನೆಲೆಸಿತು.—ಯೆಹೋ. 22:13-34.

ಗಂಭೀರ ಕ್ರಮ ಕೈಗೊಳ್ಳುವ ಮೊದಲು ಇತರ ಇಸ್ರಾಯೇಲ್ಯರು ಸಮಸ್ಯೆಯನ್ನು ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರೊಂದಿಗೆ ಚರ್ಚಿಸಿದ್ದು ವಿವೇಕಯುತವಾಗಿತ್ತು. ದೇವರ ವಾಕ್ಯ ಹೇಳುವುದು: “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.” (ಪ್ರಸಂ. 7:9) ಶಾಂತ ಮತ್ತು ಮುಕ್ತ ಮಾತುಕತೆಯೇ ಗಂಭೀರ ವೈಯಕ್ತಿಕ ಮನಸ್ತಾಪಗಳನ್ನು ಬಗೆಹರಿಸುವ ಶಾಸ್ತ್ರಾಧಾರಿತ ವಿಧಾನವಾಗಿದೆ. ನಾವು ಅಸಮಾಧಾನವನ್ನು ಇಟ್ಟುಕೊಳ್ಳುವಲ್ಲಿ ಮತ್ತು ನಮ್ಮ ವಿರುದ್ಧ ತಪ್ಪು ಮಾಡಿದ ವ್ಯಕ್ತಿಯ ಬಳಿ ಹೋಗಿ ಮಾತನಾಡದೇ ಇರುವಲ್ಲಿ ಯೆಹೋವನ ಆಶೀರ್ವಾದವನ್ನು ನಿರೀಕ್ಷಿಸಸಾಧ್ಯವೋ?

ಜೊತೆ ಕ್ರೈಸ್ತನೊಬ್ಬನು, ನಾವು ಅವರ ಮನನೋಯಿಸಿದ್ದೇವೆಂದು ಹೇಳುವಲ್ಲಿ ಆಗೇನು? ಬಹುಶಃ ಅವರು ಹೇಳಿದ ಮಾತು ಸುಳ್ಳಾಗಿರಲೂಬಹುದು. ನಾವು ಆಗೇನು ಮಾಡುವೆವು? ಬೈಬಲ್‌ ತಿಳಿಸುವುದು: “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು.” (ಜ್ಞಾನೋ. 15:1) ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರು ಶಾಂತ ರೀತಿಯಲ್ಲಿ ಆದರೆ ಸ್ಪಷ್ಟವಾಗಿ ತಮ್ಮ ಕೃತ್ಯದ ಬಗ್ಗೆ ವಿವರಿಸಿದರು. ಹೀಗೆ ಭುಗಿಲೆದ್ದ ಸನ್ನಿವೇಶವನ್ನು ತಣ್ಣಗಾಗಿಸಿದರು. ನಮ್ಮ ಸಹೋದರನ ಬಳಿ ಹೋಗಲು ನಾವು ಪ್ರಥಮ ಹೆಜ್ಜೆ ತೆಗೆದುಕೊಳ್ಳುತ್ತಿರಲಿ ಇಲ್ಲವೇ ಸಮಸ್ಯೆಯ ಕುರಿತು ಮಾತಾಡಲು ಆ ಸಹೋದರನೇ ನಮ್ಮ ಬಳಿ ಬಂದಿರಲಿ, ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನನ್ನ ಮಾತು, ಸ್ವರ ಮತ್ತು ವರ್ತನೆ ಸಮಾಧಾನವನ್ನು ಪ್ರವರ್ಧಿಸುವುದೋ?’

ನಾಲಿಗೆಯನ್ನು ವಿವೇಕಯುತವಾಗಿ ಬಳಸಿ

ನಮ್ಮ ಮನಸ್ಸಿನಲ್ಲಿರುವ ಚಿಂತೆಗಳನ್ನು ಹೊರಹಾಕುವ ಅಗತ್ಯ ನಮಗಿದೆ ಎಂದು ಯೆಹೋವನಿಗೂ ಅರ್ಥವಾಗುತ್ತದೆ. ಒಂದುವೇಳೆ ವೈಯಕ್ತಿಕ ಮನಸ್ತಾಪವನ್ನು ಇತ್ಯರ್ಥಗೊಳಿಸದಿದ್ದರೆ, ಅದರ ಕುರಿತು ಇತರರಿಗೆ ಹೇಳಲು ನಮಗೆ ಮನಸ್ಸಾಗಬಹುದು. ನಾವು ಅಸಮಾಧಾನವನ್ನು ಹಾಗೇ ಮನಸ್ಸಿನಲ್ಲಿಟ್ಟುಕೊಳ್ಳುವಲ್ಲಿ ಸುಲಭವಾಗಿ ಟೀಕಾತ್ಮಕ ಮಾತುಗಳನ್ನಾಡಲು ಆರಂಭಿಸುವೆವು. ನಾಲಿಗೆಯ ಈ ಅಯೋಗ್ಯ ಉಪಯೋಗದ ಕುರಿತು ಜ್ಞಾನೋಕ್ತಿ 11:11 ಹೇಳುವುದು: “ಕೆಟ್ಟವರ ಬಾಯಿಂದ [ಪಟ್ಟಣವು] ಕೆಡವಲ್ಪಡುವದು.” ಅದೇ ರೀತಿಯಲ್ಲಿ ಜೊತೆ ಕ್ರೈಸ್ತನ ಕುರಿತು ಮಾತಾಡುವಾಗ ನಾಲಿಗೆಯನ್ನು ಬಿಗಿಹಿಡಿಯದಿರುವಲ್ಲಿ ಅದು ಪಟ್ಟಣದಂತಿರುವ ಸಭೆಯ ಶಾಂತಿಯನ್ನು ಕದಡುವುದು.

ಸಮಾಧಾನವನ್ನು ಮಾಡಿಕೊಳ್ಳುವುದರ ಅರ್ಥ, ನಾವು ನಮ್ಮ ಸಹೋದರ ಸಹೋದರಿಯರ ಕುರಿತು ಮಾತನಾಡಲೇಬಾರದು ಎಂದಲ್ಲ. ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳಿಗೆ ಸಲಹೆ ನೀಡಿದ್ದು: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು” ಅವನು ಮುಂದುವರಿಸಿ ಹೇಳಿದ್ದು: “ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. . . . ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ.” (ಎಫೆ. 4:29-32) ಇತರರೊಂದಿಗೆ ನಿಮ್ಮ ಬಗ್ಗೆ ಯಾವತ್ತೂ ನಕಾರಾತ್ಮಕವಾಗಿ ಮಾತನಾಡಿರದ ಸಹೋದರನೊಬ್ಬನು ನಿಮ್ಮ ಮಾತು ಇಲ್ಲವೇ ನಡತೆಯಿಂದ ಮನನೊಂದು ನಿಮ್ಮ ಬಳಿ ಬರುವಲ್ಲಿ ನೀವು ಕ್ಷಮೆಕೋರಿ ಅವರೊಂದಿಗೆ ಸಮಾಧಾನ ಮಾಡಿಕೊಳ್ಳುವುದು ಹೆಚ್ಚು ಸುಲಭವಾಗಿರುವುದಲ್ಲವೋ? ಅದೇ ರೀತಿ ನಾವು ಜೊತೆ ಕ್ರೈಸ್ತರ ಬಗ್ಗೆ ಭಕ್ತಿವೃದ್ಧಿ ಮಾಡುವಂಥ ಮಾತನ್ನಾಡಿದರೆ ಮನಸ್ತಾಪಗಳು ಎದ್ದಾಗ ಸಮಾಧಾನವನ್ನು ಮಾಡಿಕೊಳ್ಳಲು ಸುಲಭವಾಗುವುದು.—ಲೂಕ 6:31.

“ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ

ನಮ್ಮ ಪಾಪಪೂರ್ಣ ಮಾನವ ಪ್ರವೃತ್ತಿಯಿಂದಾಗಿ ತಪ್ಪು ಮಾಡಿದವರನ್ನು ನಾವು ದೂರವಿಡಲು ಅಥವಾ ಅವರೊಂದಿಗೆ ಸೇರದಿರಲು ಬಯಸುತ್ತೇವೆ. ಹೀಗೆ ಮಾಡುವುದು ಅವಿವೇಕಯುತ. (ಜ್ಞಾನೋ. 18:1) ಯೆಹೋವನ ಹೆಸರನ್ನು ಸ್ತುತಿಸುವ ಐಕ್ಯ ಜನರೋಪಾದಿ ‘ಒಂದೇ ಮನಸ್ಸಿನಿಂದ ಆತನನ್ನು ಸೇವಿಸುವ’ ದೃಢನಿರ್ಣಯ ನಮ್ಮದಾಗಿದೆ.—ಚೆಫ. 3:9.

ಇನ್ನೊಬ್ಬರ ಅಸಭ್ಯ ಮಾತು ಇಲ್ಲವೆ ನಡತೆ ಶುದ್ಧಾರಾಧನೆಗಾಗಿರುವ ನಮ್ಮ ಹುರುಪನ್ನು ಎಂದೂ ನಂದಿಸಬಾರದು. ಯೇಸುವಿನ ಯಜ್ಞವು ದೇವಾಲಯದಲ್ಲಿನ ಯಜ್ಞಾರ್ಪಣೆಗಳ ಸ್ಥಾನವನ್ನು ತೆಗೆದುಕೊಳ್ಳುವ ಸ್ವಲ್ಪ ದಿನಗಳ ಮುಂಚೆ ಹಾಗೂ ಶಾಸ್ತ್ರಿಗಳನ್ನು ಮುಚ್ಚುಮರೆಯಿಲ್ಲದೇ ಖಂಡಿಸಿದ ಸ್ವಲ್ಪ ಸಮಯಾನಂತರ, ವಿಧವೆಯೊಬ್ಬಳು “ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ” ದೇವಾಲಯದ ಬೊಕ್ಕಸದಲ್ಲಿ ಹಾಕುವುದನ್ನು ಯೇಸು ಗಮನಿಸಿದನು. ಆತನು ಆಕೆಯನ್ನು ತಡೆದನೋ? ಇಲ್ಲ. ಬದಲಾಗಿ ಆ ಸಮಯದಲ್ಲಿನ ಯೆಹೋವನ ಸಭೆಗಾಗಿ ಆಕೆ ಕೊಟ್ಟ ನಿಷ್ಠಾವಂತ ಬೆಂಬಲಕ್ಕಾಗಿ ಶ್ಲಾಘಿಸಿದನು. (ಲೂಕ 21:1-4) ಇತರರ ಅನೀತಿಯುತ ಕೃತ್ಯಗಳು ಯೆಹೋವನ ಆರಾಧನೆಯನ್ನು ಬೆಂಬಲಿಸುವ ಹಂಗಿನಿಂದ ಆಕೆಯನ್ನು ಮುಕ್ತಗೊಳಿಸಿರಲಿಲ್ಲ.

ಕ್ರೈಸ್ತ ಸಹೋದರ ಇಲ್ಲವೇ ಸಹೋದರಿ ಅಯೋಗ್ಯವಾಗಿ, ಬಹುಶಃ ಅನ್ಯಾಯವಾಗಿಯೂ ನಡೆದುಕೊಂಡಿದ್ದಾರೆಂದು ನಮಗನಿಸುವಲ್ಲಿ ನಮ್ಮ ಪ್ರತಿಕ್ರಿಯೆ ಹೇಗಿರಬೇಕು? ಇದು, ನಾವು ಯೆಹೋವನಿಗೆ ಸಲ್ಲಿಸುವ ಪೂರ್ಣ ಪ್ರಾಣದ ಸೇವೆಯನ್ನು ನಿಲ್ಲಿಸಲು ಕಾರಣವಾಗುವಂತೆ ಬಿಡುವೆವೋ? ಅಥವಾ ಯಾವದೇ ವೈಯಕ್ತಿಕ ಮನಸ್ತಾಪಗಳನ್ನು ಇತ್ಯರ್ಥಗೊಳಿಸಲು ಧೈರ್ಯದಿಂದ ಕ್ರಿಯೆಗೈದು ಇಂದು ದೇವರ ಸಭೆಯ ಅಮೂಲ್ಯ ಶಾಂತಿಯನ್ನು ಕಾಪಾಡುವೆವೋ?

ಬೈಬಲ್‌ ನಮಗೆ ಸಲಹೆ ನೀಡುವುದು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾ. 12:18) ಈ ಸಲಹೆಯನ್ನು ಪಾಲಿಸುವ ದೃಢಸಂಕಲ್ಪದಿಂದಿರೋಣ ಮತ್ತು ಹೀಗೆ ಜೀವದ ದಾರಿಯಲ್ಲಿ ಭದ್ರವಾಗಿ ಉಳಿಯೋಣ.

[ಪಾದಟಿಪ್ಪಣಿ]

^ ಪ್ಯಾರ. 6 ಮತ್ತಾಯ 18:15-17ರಲ್ಲಿ ದಾಖಲಾಗಿರುವ ಯೇಸುವಿನ ಸಲಹೆಯ ಬಗ್ಗೆ 1999, ಅಕ್ಟೋಬರ್‌ 15ರ ಕಾವಲಿನಬುರುಜು, ಪುಟ 17-22 ನೋಡಿ.

[ಪುಟ 17ರಲ್ಲಿರುವ ಚಿತ್ರ]

ಯುವೊದ್ಯ ಮತ್ತು ಸಂತುಕೆ ಪರಸ್ಪರರೊಂದಿಗೆ ಸಮಾಧಾನ ಮಾಡಿಕೊಳ್ಳಬೇಕಿತ್ತು

[ಪುಟ 18ರಲ್ಲಿರುವ ಚಿತ್ರ]

ಯಾವ ರೀತಿಯ ಮಾತು, ಸ್ವರ ಮತ್ತು ವರ್ತನೆ ಸಮಾಧಾನವನ್ನು ಪ್ರವರ್ಧಿಸುವುದು?