ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸಮುದ್ರ ಗೀತೆ” ಕಾಲದ ಅಂತರವನ್ನು ಭರ್ತಿಮಾಡುವ ಹಸ್ತಪ್ರತಿ

“ಸಮುದ್ರ ಗೀತೆ” ಕಾಲದ ಅಂತರವನ್ನು ಭರ್ತಿಮಾಡುವ ಹಸ್ತಪ್ರತಿ

“ಸಮುದ್ರ ಗೀತೆ” ಕಾಲದ ಅಂತರವನ್ನು ಭರ್ತಿಮಾಡುವ ಹಸ್ತಪ್ರತಿ

ಇಸವಿ 2007 ಮೇ 22ರಂದು, ಜೆರೂಸಲೇಮ್‌ನಲ್ಲಿರುವ ‘ಇಸ್ರಯೇಲ್‌ ಮ್ಯೂಸಿಯಮ್‌’ನಲ್ಲಿ, ಸಾ.ಶ. 7-8ನೇ ಶತಮಾನಕ್ಕೆ ಸೇರಿದ ಹೀಬ್ರು ಸುರುಳಿಯ ಒಂದು ಅವಶಿಷ್ಟ ಭಾಗವನ್ನು ಪ್ರದರ್ಶನಕ್ಕಿಡಲಾಯಿತು. ಅದು ವಿಮೋಚನಕಾಂಡ 13:19–16:1ರ ಹಸ್ತಪ್ರತಿಯಾಗಿದೆ. ಅದರಲ್ಲಿ, ಇಸ್ರಾಯೇಲ್ಯರು ಕೆಂಪು ಸಮುದ್ರದಿಂದ ಅದ್ಭುತಕರವಾಗಿ ಪಾರಾದ ಬಳಿಕ ಹಾಡಿದ ವಿಜಯದ ಗೀತೆ ಅಡಕವಾಗಿದೆ. ಈ ಗೀತೆಯು “ಸಮುದ್ರ ಗೀತೆ” ಎಂದೇ ಪ್ರಸಿದ್ಧವಾಗಿದೆ. ಈ ಸುರುಳಿಯ ಅವಶಿಷ್ಟ ಭಾಗವನ್ನು ಪ್ರದರ್ಶನಕ್ಕಿಟ್ಟಿದ್ದರ ಮಹತ್ತ್ವವೇನು?

ಆ ಹಸ್ತಪ್ರತಿಯ ತಾರೀಖು ತುಂಬ ಮಹತ್ತ್ವದ್ದು. ಮೃತ ಸಮುದ್ರದ ಸುರುಳಿಗಳನ್ನು ಸಾ.ಶ.ಪೂ. 3ನೇ ಶತಮಾನ ಮತ್ತು ಸಾ.ಶ. 1ನೇ ಶತಮಾನದ ಮಧ್ಯದ ಅವಧಿಯಲ್ಲಿ ಬರೆಯಲಾಗಿತ್ತು. ಈ ಸುರುಳಿಗಳನ್ನು ಸುಮಾರು 60 ವರ್ಷಗಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಇದಕ್ಕಿಂತ ಮುಂಚೆ ಲಭ್ಯವಿದ್ದ ಅತೀ ಹಳೆಯ ಹೀಬ್ರು ಹಸ್ತಪ್ರತಿ ಸಾ.ಶ. 930ನೇ ಇಸವಿಗೆ ಸೇರಿದ್ದ ಅಲೆಪ್ಪೊ ಕೋಡೆಕ್ಸ್‌ ಹಸ್ತಪ್ರತಿಯಾಗಿತ್ತು. ಮೃತ ಸಮುದ್ರದ ಸುರುಳಿಗಳು ಮತ್ತು ಅಲೆಪ್ಪೊ ಕೋಡೆಕ್ಸ್‌ ಹಸ್ತಪ್ರತಿಯ ನಡುವಿನ ನೂರಾರು ವರ್ಷಗಳ ಅವಧಿಗೆ ಸೇರಿದ ಕೆಲವೊಂದು ಅವಶಿಷ್ಟ ಭಾಗಗಳನ್ನು ಬಿಟ್ಟರೆ ಆ ತಾರೀಖಿನ ಬೇರಾವುದೇ ಹೀಬ್ರು ಹಸ್ತಪ್ರತಿಗಳು ಸಿಕ್ಕಿರಲಿಲ್ಲ.

‘ಇಸ್ರಯೇಲ್‌ ಮ್ಯೂಸಿಯಮ್‌’ನ ನಿರ್ದೇಶಕರಾದ ಜೇಮ್ಸ್‌ ಎಸ್‌. ಸ್ನೈಡರ್‌ ತಿಳಿಸುವುದು: ‘ಸಮುದ್ರ ಗೀತೆಯ ಹಸ್ತಪ್ರತಿಯು ಮೃತ ಸಮುದ್ರದ ಸುರುಳಿಗಳ ಹಾಗೂ ಅಲೆಪ್ಪೊ ಕೋಡೆಕ್ಸ್‌ನ ಮಧ್ಯದ ಐತಿಹಾಸಿಕ ಕಾಲದ ಅಂತರವನ್ನು ಭರ್ತಿಮಾಡುತ್ತದೆ.’ ಅವರ ಪ್ರಕಾರ ಬೈಬಲಿನ ಇತರ ಮೂಲ ಗ್ರಂಥಪಾಠಗಳ ಸಮೇತ ಈ ಹಸ್ತಪ್ರತಿಯು, “ಗ್ರಂಥಪಾಠಗಳು ಯಾವುದೇ ರೀತಿಯಲ್ಲಿ ಬದಲಾಗದೆ ಇದ್ದ ಹಾಗೆಯೇ ಇರುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.”

ಸುರುಳಿಯ ಈ ಅವಶಿಷ್ಟ ಭಾಗವು, 19ನೇ ಶತಮಾನದ ಕೊನೆಯಷ್ಟಕ್ಕೆ ಈಜಿಪ್ಟ್‌ನ ಕೈರೋವಿನಲ್ಲಿರುವ ಸಭಾಮಂದಿರವೊಂದರಲ್ಲಿ ಸಿಕ್ಕಿದ ಅನೇಕ ಹಸ್ತಪ್ರತಿಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಅದು ಹೀಬ್ರು ಹಸ್ತಪ್ರತಿಗಳ ಸಂಗ್ರಹಕನೊಬ್ಬನ ವಶದಲ್ಲಿತ್ತು ಮತ್ತು ಆತನಿಗೆ ಅದರ ಮಹತ್ತ್ವವೇನೆಂಬುದು ತಿಳಿದಿರಲಿಲ್ಲ. 1970ರ ದಶಕದ ಕೊನೆಯಷ್ಟಕ್ಕೆ ಅವನು ಒಬ್ಬ ಪರಿಣತನನ್ನು ವಿಚಾರಿಸಿದಾಗಲೇ ಅದೆಷ್ಟು ವಿಶೇಷವಾದದ್ದು ಎಂಬದು ತಿಳಿದುಬಂತು. ಅದನ್ನು ಬರೆಯಲಾದ ತಾರೀಖನ್ನು ಪತ್ತೆಹಚ್ಚಲಿಕ್ಕಾಗಿ ಕಾರ್ಬನ್‌ ಕಾಲಗಣನೆಯ ಪ್ರಕ್ರಿಯೆಗೆ ಒಳಪಡಿಸಿ ಸಂರಕ್ಷಿಸಿಡಲಾಯಿತು. ನಂತರ ಅದನ್ನು ‘ಇಸ್ರಯೇಲ್‌ ಮ್ಯೂಸಿಯಮ್‌’ನಲ್ಲಿ ಪ್ರದರ್ಶನಕ್ಕಿಡಲಾಯಿತು.

‘ಶ್ರೈನ್‌ ಆಫ್‌ ದ ಬುಕ್‌, ಇಸ್ರಯೇಲ್‌ ಮ್ಯೂಸಿಯಮ್‌’ನ ಮುಖ್ಯಸ್ಥರು ಮತ್ತು ಮೃತ ಸಮುದ್ರದ ಸುರುಳಿಗಳ ನಿರ್ವಾಹಕ ಅಡೋಲ್ಫೊ ರೊಯಿಟ್‌ಮೆನ್‌ ಆ ಹಸ್ತಪ್ರತಿಯ ಮೌಲ್ಯದ ಕುರಿತು ಹೇಳಿದ್ದು: “ಸಮುದ್ರ ಗೀತೆಯ ಹಸ್ತಪ್ರತಿಯು, ಮ್ಯಾಸೊರೆಟಿಕ್‌ ಬೈಬಲ್‌ ಆವೃತ್ತಿಯು ಶತಮಾನಗಳಾದ್ಯಂತ ಎಷ್ಟು ನಿಷ್ಕೃಷ್ಟವಾಗಿ ದಾಟಿ ಬಂದಿದೆ ಎಂಬದನ್ನು ತೋರಿಸಿಕೊಡುತ್ತದೆ. ಸಮುದ್ರ ಗೀತೆಯಲ್ಲಿರುವ ಆ 7-8ನೇ ಶತಮಾನಗಳ ಶೈಲಿಯು ಇಂದು ಕೂಡ ಬೈಬಲಿನಲ್ಲಿ ಕಂಡುಬರುವುದು ನಿಜವಾಗಿಯೂ ವಿಸ್ಮಯದ ಸಂಗತಿ.”

ಬೈಬಲ್‌ ದೇವರ ಪ್ರೇರಿತ ವಾಕ್ಯವಾಗಿದೆ ಮತ್ತು ಅದನ್ನು ಸಂರಕ್ಷಿಸುವುದರಲ್ಲಿ ಯೆಹೋವನ ಪಾತ್ರ ಮುಖ್ಯವಾದದ್ದು. ಅಲ್ಲದೆ ಬೈಬಲ್‌ ಹಸ್ತಪ್ರತಿಗಳ ನಕಲುಗಾರರು ತುಂಬ ಜಾಗರೂಕತೆಯಿಂದ ಅವುಗಳನ್ನು ನಕಲುಮಾಡಿದರು. ಆದ್ದರಿಂದ ನಮ್ಮ ಕೈಗಳಲ್ಲಿರುವ ಬೈಬಲ್‌ ವಿಶ್ವಾಸಾರ್ಹವಾಗಿದೆ ಎಂಬ ವಿಷಯದಲ್ಲಿ ಯಾವುದೇ ಸಂದೇಹವಿಲ್ಲ.

Picture Credit Line on page 32]

Courtesy of Israel Museum, Jerusalem