ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊರಿಯದ ಅಭಿವೃದ್ಧಿಯನ್ನು ಕಣ್ಣಾರೆ ಕಂಡೆ

ಕೊರಿಯದ ಅಭಿವೃದ್ಧಿಯನ್ನು ಕಣ್ಣಾರೆ ಕಂಡೆ

ಕೊರಿಯದ ಅಭಿವೃದ್ಧಿಯನ್ನು ಕಣ್ಣಾರೆ ಕಂಡೆ

ಮಿಲ್ಟನ್‌ ಹ್ಯಾಮಿಲ್ಟನ್‌ ಅವರು ಹೇಳಿದಂತೆ

“ರಿಪಬ್ಲಿಕ್‌ ಆಫ್‌ ಕೊರಿಯದ ಸರ್ಕಾರವು ಮಿಷನೆರಿಗಳಾದ ನಿಮ್ಮೆಲ್ಲರ ವೀಸಾಗಳನ್ನು ರದ್ದುಮಾಡಿದೆ ಮತ್ತು ನೀವು ಆ ದೇಶದಲ್ಲಿರುವುದು ಅವರಿಗಿಷ್ಟವಿಲ್ಲ. ಇದನ್ನು ತಿಳಿಸಲು ವಿಷಾದಿಸುತ್ತೇವೆ. . . . ಹೀಗಿರುವುದರಿಂದ ತತ್ಕಾಲಕ್ಕೆ ನೀವು ಜಪಾನ್‌ ದೇಶದಲ್ಲಿ ಸೇವೆಸಲ್ಲಿಸಬೇಕು.”

ಈ ಪತ್ರವು, 1954ರ ಕೊನೆಯಷ್ಟಕ್ಕೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಬ್ರೂಕ್ಲಿನ್‌ನಿಂದ ನಮಗೆ ಸಿಕ್ಕಿತು. ಅದೇ ವರ್ಷಾರಂಭದಲ್ಲಿ ನಾನು ಮತ್ತು ನನ್ನ ಹೆಂಡತಿ ನ್ಯೂಯಾರ್ಕ್‌ನಲ್ಲಿ ನಡೆದ ಗಿಲ್ಯಡ್‌ ಶಾಲೆಯ 23ನೇ ತರಗತಿಯಿಂದ ಪದವಿಪಡೆದೆವು. ಮೇಲೆ ತಿಳಿಸಲಾಗಿರುವ ಪತ್ರ ನಮ್ಮ ಕೈಸೇರಿದಾಗ ನಾವು ಸ್ವಲ್ಪಸಮಯಕ್ಕೆಂದು ಇಂಡಿಯಾನಾದ ಇಂಡಿಯನಾಪೊಲಿಸ್‌ನಲ್ಲಿ ಸೇವೆಮಾಡುತ್ತಿದ್ದೆವು.

ನನ್ನ ಪತ್ನಿ ಲಿಜ್‌ ಮತ್ತು ನಾನು ಹೈಸ್ಕೂಲಿನಲ್ಲಿ ಸಹಪಾಠಿಗಳಾಗಿದ್ದೆವು. 1948ರಲ್ಲಿ ನಾವು ಮದುವೆಯಾದೆವು. ಆಕೆಗೆ ಪೂರ್ಣ ಸಮಯದ ಶುಶ್ರೂಷೆ ಬಲು ಇಷ್ಟವಿತ್ತಾದರೂ ಅಮೆರಿಕವನ್ನು ಬಿಟ್ಟು ವಿದೇಶದಲ್ಲಿ ಸೇವೆಮಾಡುವ ಬಗ್ಗೆ ಅಂಜಿಕೆಯಿತ್ತು. ಆಕೆಯ ಮನಸ್ಸನ್ನು ಬದಲಾಯಿಸಿದ್ದೇನು?

ಗಿಲ್ಯಡ್‌ ವಿದ್ಯಾರ್ಥಿಗಳಾಗಲು ಬಯಸುವವರಿಗಾಗಿದ್ದ ಕೂಟಕ್ಕೆ ನನ್ನೊಂದಿಗೆ ಹಾಜರಾಗಲು ಲಿಜ್‌ ಒಪ್ಪಿಕೊಂಡಳು. ಅದು, 1953ರ ಬೇಸಿಗೆ ಕಾಲದಲ್ಲಿ, ನ್ಯೂ ಯಾರ್ಕ್‌ನ ಯಾಂಕಿ ಸ್ಟೇಡಿಯಮ್‌ನಲ್ಲಾದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ನಡೆಯಿತು. ಆ ಪ್ರೋತ್ಸಾಹಕರ ಕೂಟದ ಬಳಿಕ ನಾವಿಬ್ಬರೂ ಗಿಲ್ಯಡ್‌ ಶಾಲೆಗೆ ನಮ್ಮ ಅರ್ಜಿಗಳನ್ನು ಸಲ್ಲಿಸಿದೆವು. 1954ರ ಫೆಬ್ರವರಿಯಲ್ಲಿ ಆರಂಭವಾಗಲಿದ್ದ ಆ ತರಗತಿಗೆ ನಮಗೆ ಆಮಂತ್ರಣ ಸಿಕ್ಕಿದಾಗ ನಮಗಾದ ಆಶ್ಚರ್ಯ ಹೇಳತೀರದು.

ಕೊರಿಯದಲ್ಲಿ ಮೂರು ವರ್ಷ ಸತತವಾಗಿ ನಡೆದ ಯುದ್ಧವು 1953ರ ಬೇಸಿಗೆಕಾಲದಲ್ಲಿ ಅಂತ್ಯಗೊಂಡ ಸ್ವಲ್ಪದರಲ್ಲೇ ನಮ್ಮನ್ನು ಅಲ್ಲಿಗೆ ನೇಮಿಸಲಾಯಿತು. ಈ ಯುದ್ಧದಿಂದಾಗಿ ದೇಶವು ಧೂಳೀಪಟಗೊಂಡಿತ್ತು. ಲೇಖನದ ಆರಂಭದಲ್ಲಿ ಉಲ್ಲೇಖಿಸಲಾದ ಪತ್ರದಲ್ಲಿ ನಿರ್ದೇಶಿಸಲಾದಂತೆ ನಾವು ಮೊದಲು ಜಪಾನಿಗೆ ಹೊರಟೆವು. 20 ದಿನಗಳ ಸಮುದ್ರಯಾನದ ಬಳಿಕ 1955ರ ಜನವರಿಯಲ್ಲಿ ನಾವಲ್ಲಿಗೆ ತಲುಪಿದೆವು. ಕೊರಿಯಕ್ಕೆ ನೇಮಿಸಲಾದ ಇತರ ಆರು ಜೊತೆ ಮಿಷನೆರಿಗಳೂ ನಮ್ಮೊಟ್ಟಿಗಿದ್ದರು. ಆಗ ಜಪಾನ್‌ ಬ್ರಾಂಚ್‌ನ ಮೇಲ್ವಿಚಾರಕರಾದ ಸಹೋದರ ಲೊಯ್ಡ್‌ ಬ್ಯಾರಿ ಬೆಳಗ್ಗೆ 6 ಗಂಟೆಗೆ ಸರಿಯಾಗಿ ನಮ್ಮನ್ನು ಹಡಗುಕಟ್ಟೆಯಲ್ಲಿ ಭೇಟಿಯಾದರು. ತದನಂತರ ನಾವು ಯೋಕೊಹಾಮದಲ್ಲಿದ್ದ ಮಿಷನೆರಿ ಗೃಹಕ್ಕೆ ಹೋದೆವು. ಅಂದೇ ನಾವು ಕ್ಷೇತ್ರ ಸೇವೆಗೂ ಹೋದೆವು.

ಅಂತೂ ಕೊರಿಯ ತಲಪಿದೆವು!

ಸಮಯಾನಂತರ, ರಿಪಬ್ಲಿಕ್‌ ಆಫ್‌ ಕೊರಿಯಕ್ಕೆ ಹೋಗಲು ನಮಗೆ ವೀಸಾ ಸಿಕ್ಕಿತು. 1955 ಮಾರ್ಚ್‌ 7ರಂದು ನಾವು ಏರಿದ ವಿಮಾನವು ಟೋಕಿಯೋದಲ್ಲಿರುವ ಹನೆಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. ಮೂರುವರೆ ತಾಸಿನ ಪ್ರಯಾಣದ ಬಳಿಕ ನಾವು ಸೋಲ್‌ನಲ್ಲಿರುವ ವೈಡೋ ವಿಮಾನ ನಿಲ್ದಾಣಕ್ಕೆ ಬಂದುಮುಟ್ಟಿದೆವು. ಕೊರಿಯದ ಸುಮಾರು 200 ಮಂದಿ ಸಾಕ್ಷಿಗಳು ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಸ್ವಾಗತಿಸಿದರು. ನಾವು ಆನಂದಬಾಷ್ಪಗರೆದೆವು. ಆಗ ಕೊರಿಯದಲ್ಲಿ ಕೇವಲ 1,000 ಮಂದಿ ಸಾಕ್ಷಿಗಳಿದ್ದರು. ಎಲ್ಲ ಪೌರಸ್ತ್ಯರು, ಅವರು ಯಾವುದೇ ದೇಶದವರಾಗಿರಲಿ ನೋಡಲು ಒಂದೇ ತರಹ ಇರುತ್ತಾರೆ ಮತ್ತು ಒಂದೇ ರೀತಿಯಲ್ಲಿ ವರ್ತಿಸುತ್ತಾರೆಂದು ಅನೇಕ ಪಾಶ್ಚಾತ್ಯರಂತೆ ನಾವು ಸಹ ನೆನಸಿದೆವು. ಆದರೆ ನಿಜಾಂಶ ತಿಳಿದುಬರಲು ಹೆಚ್ಚು ಸಮಯ ಹಿಡಿಯಲಿಲ್ಲ. ಕೊರಿಯದವರಿಗೆ ತಮ್ಮದೇ ಆದ ಭಾಷೆ, ಲಿಪಿ, ರೂಪಲಕ್ಷಣಗಳು, ಆಹಾರ ಪದ್ಧತಿಗಳು ಮತ್ತು ಉಡುಗೆತೊಡುಗೆಗಳಿವೆ. ಅವರ ಕಟ್ಟಡ ವಿನ್ಯಾಸದಂಥ ಇತರ ವಿಷಯಗಳೂ ವಿಶಿಷ್ಟವಾಗಿವೆ.

ನಮಗೆದುರಾದ ಮೊದಲ ದೊಡ್ಡ ಸವಾಲು ಭಾಷೆ ಕಲಿಯುವುದಾಗಿತ್ತು. ಕೊರಿಯ ಭಾಷೆಯನ್ನು ಹೇಗೆ ಕಲಿಯುವುದು ಎಂದು ಹೇಳಿಕೊಡುವ ಯಾವ ಪುಸ್ತಕಗಳೂ ಲಭ್ಯವಿರಲಿಲ್ಲ. ನಾವು ಆಂಗ್ಲ ಭಾಷೆಯನ್ನಾಡುವ ರೀತಿಯಲ್ಲೇ ಮಾತಾಡಿದರೆ ಕೊರಿಯ ಭಾಷೆಯ ಪದಗಳನ್ನು ಉಚ್ಚರಿಸುವುದು ಅಸಾಧ್ಯ ಎಂಬದು ನಮಗೆ ಬೇಗನೆ ತಿಳಿದುಬಂತು. ಕೊರಿಯ ಭಾಷೆಯ ಅಕ್ಷರಮಾಲೆಯನ್ನು ಕಲಿತರೆ ಮಾತ್ರ ಸರಿಯಾದ ಉಚ್ಚರಣೆ ಕಲಿಯಸಾಧ್ಯವಿದೆ.

ನಾವು ತಪ್ಪುಗಳನ್ನು ಮಾಡಿದೆವು. ಉದಾಹರಣೆಗೆ ಒಬ್ಬಾಕೆ ಮನೆಯವಳಿಗೆ ನನ್ನ ಪತ್ನಿ ಲಿಜ್‌, ಬೈಬಲ್‌ ಇದೆಯೇ ಎಂದು ಕೇಳಿದಳು. ಆ ಮನೆಯವಳು ವಿಚಿತ್ರವಾಗಿ ಅವಳನ್ನು ನೋಡುತ್ತಾ ಒಳಗೆ ಹೋಗಿ ಒಂದು ಬೆಂಕಿ ಪೊಟ್ಟಣವನ್ನು ತಂದುಕೊಟ್ಟಳು. ಏಕೆಂದರೆ, “ಬೈಬಲ್‌” ಎನ್ನುವುದಕ್ಕಿರುವ ಸೆನ್ಯಾನ್‌ ಎಂಬ ಪದವನ್ನು ಹೇಳುವ ಬದಲು ಲಿಜ್‌ ಸೆನ್‌ಕ್ಯುನ್‌ (ಬೆಂಕಿ ಪೊಟ್ಟಣ) ಇದೆಯೇ ಎಂದು ಕೇಳಿದ್ದಳು.

ಕೆಲವು ತಿಂಗಳುಗಳ ಬಳಿಕ, ನಾವು ದಕ್ಷಿಣದಲ್ಲಿರುವ ರೇವು ಪಟ್ಟಣವಾದ ಪೂಸಾನ್‌ನಲ್ಲಿ ಮಿಷನೆರಿಗಳಿಗಾಗಿ ಒಂದು ಮನೆಯನ್ನು ಏರ್ಪಡಿಸುವ ನೇಮಕ ಪಡೆದೆವು. ನಮ್ಮಿಬ್ಬರಿಗೆ ಮತ್ತು ನಮ್ಮೊಂದಿಗೆ ನೇಮಕ ಪಡೆದ ಇಬ್ಬರು ಸಹೋದರಿಯರಿಗೆಂದು ನಾವು ಮೂರು ಕೊಠಡಿಗಳನ್ನು ಬಾಡಿಗೆಗೆ ಪಡೆದೆವು. ಆದರೆ ಕೊಠಡಿಗಳಲ್ಲಿ ಮತ್ತು ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯಿರಲಿಲ್ಲ. ನಮ್ಮ ಮನೆ ಎರಡನೇ ಮಹಡಿಯಲ್ಲಿತ್ತು. ಕೇವಲ ರಾತ್ರಿ ಹೊತ್ತಿಗೆ ನೀರು ಹೆಚ್ಚಿನ ಭರದಿಂದ ಬರುತ್ತಿದ್ದದ್ದರಿಂದ ಅದನ್ನು ಪೈಪ್‌ ಮೂಲಕ ಮೇಲೆ ಸಾಗಿಸಬಹುದಿತ್ತು. ಆದುದರಿಂದ ಪ್ರತಿದಿನ ನಮ್ಮಲ್ಲೊಬ್ಬರು ಬೆಳಕಾಗುವ ಮುಂಚೆಯೇ ಎದ್ದು ಪಾತ್ರೆಗಳಲ್ಲಿ ನೀರು ಹಿಡಿಯುತ್ತಿದ್ದೆವು. ಕುಡಿಯಲಿಕ್ಕಾಗಿ ನೀರನ್ನು ಕುದಿಸುತ್ತಿದ್ದೆವು ಇಲ್ಲವೇ ಅದಕ್ಕೆ ಕ್ಲೋರಿನ್‌ ಹಾಕಿ ಉಪಯೋಗಿಸುತ್ತಿದ್ದೆವು.

ನಾವು ಇತರ ತೊಂದರೆಗಳನ್ನೂ ಎದುರಿಸಬೇಕಾಯಿತು. ವಿದ್ಯುಚ್ಛಕ್ತಿಯ ಅಭಾವವಿದ್ದುದ್ದರಿಂದ ನಮಗೆ ವಾಷಿಂಗ್‌ ಮಷೀನ್‌ ಅಥವಾ ಇಸ್ತ್ರಿ ಪೆಟ್ಟಿಗೆಯನ್ನು ಬಳಸಲಾಗುತ್ತಿರಲಿಲ್ಲ. ಪ್ರವೇಶಾಂಗಣದಲ್ಲೇ ಅಡುಗೆಮಾಡುತ್ತಿದ್ದೆವು ಮತ್ತು ನಮ್ಮ ಬಳಿ ಕೇವಲ ಸೀಮೆ ಎಣ್ಣೆಯ ಸ್ಟೋವ್‌ ಇತ್ತು. ಆದರೆ ಸ್ವಲ್ಪದರಲ್ಲೇ, ನಮಗೆ ನೇಮಕ ಸಿಕ್ಕಿರುವ ಆಯಾ ದಿನದಂದು ಅಡುಗೆ ತಯಾರಿಸಲು ಕಲಿತೆವು. ನಾವು ಬಂದ ಮೂರು ವರ್ಷಗಳ ತರುವಾಯ ನನಗೆ ಮತ್ತು ಲಿಜ್‌ಗೆ ಹೆಪಟೈಟಿಸ್‌ ರೋಗ ಬಂತು. ಆ ವರ್ಷಗಳಲ್ಲಿ ಹೆಚ್ಚಿನ ಮಿಷನೆರಿಗಳಿಗೆ ಈ ರೋಗ ತಗಲಿತು. ಚೇತರಿಸಿಕೊಳ್ಳಲು ನಮಗೆ ಹಲವಾರು ತಿಂಗಳುಗಳೇ ಹಿಡಿದವು. ಅಲ್ಲದೆ ಆರೋಗ್ಯದ ಇತರ ಸಮಸ್ಯೆಗಳೂ ನಮಗಿದ್ದವು.

ಅಡ್ಡಿತಡೆಗಳನ್ನು ದಾಟಲು ಸಹಾಯ

ಕಳೆದ 55 ವರ್ಷಗಳಿಂದ ಕೊರಿಯ ಪರ್ಯಾಯದ್ವೀಪದ ರಾಜಕೀಯ ಸ್ಥಿತಿಯು ತುಂಬ ಅಸ್ಥಿರವಾಗಿದೆ. ಉತ್ತರ ಕೊರಿಯ ಹಾಗೂ ದಕ್ಷಿಣ ಕೊರಿಯ ದೇಶಗಳ ಗಡಿಯಲ್ಲಿ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಯದ ಒಂದು ವಲಯವಿದೆ (ಡಿಎಮ್‌ಜೆಡ್‌). ಅದು ದಕ್ಷಿಣ ಕೊರಿಯದ ರಾಜಧಾನಿ ಸೋಲ್‌ನಿಂದ 55 ಕಿ.ಮೀ. ಉತ್ತರಕ್ಕಿದೆ. 1971ರಲ್ಲಿ ಬ್ರೂಕ್ಲಿನ್‌ನಲ್ಲಿರುವ ಮುಖ್ಯ ಕಾರ್ಯಾಲಯದಿಂದ ಸಹೋದರ ಫ್ರೆಡ್‌ರಿಕ್‌ ಫ್ರಾನ್ಸ್‌ ಕೊರಿಯಕ್ಕೆ ಬಂದರು. ಜಗತ್ತಿನಲ್ಲೇ ಅತಿ ಸುಭದ್ರವಾದ ಆ ಗಡಿಪ್ರದೇಶಕ್ಕೆ ನಾನು ಅವರನ್ನು ಕರೆದುಕೊಂಡು ಹೋದೆ. ವರ್ಷಗಳಿಂದ ವಿಶ್ವಸಂಸ್ಥೆಯು ಈ ಎರಡು ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಅನೇಕವೇಳೆ ಈ ವಲಯದಲ್ಲೇ ಮಾತುಕತೆ ನಡೆಸಿದೆ.

ನಾವಾದರೋ, ಕೊರಿಯ ಪರ್ಯಾಯದ್ವೀಪದ ಸನ್ನಿವೇಶದ ಕುರಿತು ಮಾತ್ರವಲ್ಲ ಈ ಲೋಕದ ಯಾವುದೇ ರಾಜಕೀಯ ವಿಷಯದ ಕುರಿತು ತಟಸ್ಥರಾಗಿ ಉಳಿಯುತ್ತೇವೆ. (ಯೋಹಾ. 17:14) ಯುದ್ಧದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಕ್ಕಾಗಿ ಕೊರಿಯದ ಸಾಕ್ಷಿಗಳಲ್ಲಿ 13,000ಕ್ಕಿಂತಲೂ ಹೆಚ್ಚು ಮಂದಿ ಒಟ್ಟು 26,000 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. (2 ಕೊರಿಂ. 10:3, 4) ಈ ಸನ್ನಿವೇಶವನ್ನು ತಾವು ಎದುರಿಸಲಿದ್ದೇವೆಂದು ಆ ದೇಶದ ಎಲ್ಲ ಯುವ ಸಹೋದರರಿಗೆ ತಿಳಿದಿದೆ. ಆದರೂ ಅವರು ಹೆದರಿಕೆಯಿಂದ ಮುದುರಿಕೊಳ್ಳುವುದಿಲ್ಲ. ತಮ್ಮ ಕ್ರೈಸ್ತ ತಾಟಸ್ಥ್ಯವನ್ನು ರಾಜಿಮಾಡಿಕೊಳ್ಳಲು ಒಪ್ಪುವುದಿಲ್ಲವೆಂಬ ಒಂದೇ “ಅಪರಾಧ”ಕ್ಕಾಗಿ ಆ ಸರ್ಕಾರವು ಕ್ರೈಸ್ತ ಶುಶ್ರೂಷಕರಿಗೆ “ದುಷ್ಕರ್ಮಿಗಳು” ಎಂಬ ಹಣೆಪಟ್ಟಿ ಕಟ್ಟಿರುವುದು ನಿಜವಾಗಿಯೂ ಬೇಸರದ ಸಂಗತಿ.

ಹಿಂದೆ 1944ರಲ್ಲಿ, ಎರಡನೇ ಲೋಕ ಯುದ್ಧ ನಡೆಯುತ್ತಿದ್ದಾಗ ನಾನು ಸಹ ಸೈನ್ಯಕ್ಕೆ ಸೇರಲು ನಿರಾಕರಿಸಿದ್ದೆ. ಆದ್ದರಿಂದ ನಾನು ಪೆನ್ಸಿಲ್ವೇನಿಯ ಲೂಯಿಸ್‌ಬರ್ಗ್‌ನಲ್ಲಿರುವ ಯು.ಎಸ್‌. ಕಾರಾಗೃಹದಲ್ಲಿ ಎರಡೂವರೆ ವರ್ಷ ಕಳೆಯಬೇಕಾಯಿತು. ಹಾಗಾಗಿ, ಜೈಲಿನಲ್ಲಿ ನನಗಿಂತ ಕಠಿನ ಪರಿಸ್ಥಿತಿಯನ್ನು ಎದುರಿಸಿದ ಕೊರಿಯದ ಯುವ ಸಹೋದರರ ಕಷ್ಟಗಳು ನನಗೆ ಅರ್ಥವಾಗುತ್ತವೆ. ಕೊರಿಯದಲ್ಲಿ ಮಿಷನೆರಿಗಳಾದ ನಮಗೂ ತದ್ರೀತಿಯ ಅನುಭವವಾಗಿದೆ ಎಂದು ತಿಳಿದು ಅನೇಕರಿಗೆ ಪ್ರೋತ್ಸಾಹ ಸಿಕ್ಕಿದೆ. —ಯೆಶಾ. 2:4.

ನಮಗೆ ಬಂದ ಕಷ್ಟ

1977ರಲ್ಲೆದ್ದ ಒಂದು ವಿವಾದಾಂಶದಲ್ಲಿ ರಾಜಕೀಯ ವಿಷಯಗಳಲ್ಲಿ ಮಿಷನೆರಿಗಳಾದ ನಮ್ಮ ತಾಟಸ್ಥ್ಯ ಪರೀಕ್ಷೆಗೊಳಗಾಯಿತು. ಕೊರಿಯದ ಯುವಕರು ಸೈನ್ಯಕ್ಕೆ ಸೇರದಂತೆ ಹಾಗೂ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳದಂತೆ ನಾವು ಅವರ ತಲೆಕೆಡಿಸುತ್ತಿದ್ದೇವೆಂದು ಅಧಿಕಾರಿಗಳು ನೆನಸಿದರು. ಆದುದರಿಂದ, ಅಲ್ಲಿದ್ದ ಮಿಷನೆರಿಗಳು ಯಾವುದೇ ಕಾರಣಕ್ಕೆ ದೇಶದಿಂದ ಹೊರಹೋದರೆ ಹಿಂದೆ ಬರಲು ಅನುಮತಿ ಕೊಡದಿರಲು ಸರ್ಕಾರ ನಿಶ್ಚಯಿಸಿತು. ಈ ನಿರ್ಬಂಧವು 1977ರಿಂದ 1987ರ ವರೆಗಿತ್ತು. ಆ ವರ್ಷಗಳಲ್ಲಿ ಯಾವುದೇ ಕಾರಣಕ್ಕೆ ನಾವು ಕೊರಿಯ ಬಿಟ್ಟುಹೋದಲ್ಲಿ ನಮಗೆ ಮರಳಿ ಬರುವ ಅವಕಾಶವಿರಲಿಲ್ಲ. ಆದುದರಿಂದ ಅಷ್ಟು ವರ್ಷ ನಾವು ನಮ್ಮ ತಾಯ್ನಾಡಿಗೆ ಹೋಗಲಿಲ್ಲ.

ನಾವು ಅನೇಕ ಸಲ ಸರ್ಕಾರಿ ಅಧಿಕಾರಿಗಳನ್ನು ಭೇಟಿಮಾಡಿ, ಕ್ರಿಸ್ತನ ಹಿಂಬಾಲಕರಾಗಿರುವ ನಮ್ಮ ತಟಸ್ಥ ನಿಲುವಿನ ಬಗ್ಗೆ ತಿಳಿಸಿದೆವು. ನಾವು ಯಾವುದೇ ಕಾರಣಕ್ಕೆ ಹೆದರುವುದಿಲ್ಲವೆಂದು ಅವರಿಗೆ ಗೊತ್ತಾದಾಗ ಆ ನಿರ್ಬಂಧವನ್ನು ಹಿಂತೆಗೆದರು. ಅದು ಕೂಡ ಹತ್ತು ವರ್ಷಗಳ ಬಳಿಕ! ಆ ವರ್ಷಗಳ ನಡುವೆ ಕೆಲವು ಮಿಷನೆರಿಗಳು ಆರೋಗ್ಯದಂಥ ಕಾರಣಕ್ಕಾಗಿ ದೇಶದಿಂದ ಹೊರಹೋಗಬೇಕಾಗಿದ್ದರೂ ನಮ್ಮಲ್ಲಿ ಬಾಕಿ ಮಂದಿ ಅಲ್ಲೇ ಉಳಿದೆವು. ಹೀಗೆ ಮಾಡಲು ಶಕ್ತರಾದದ್ದಕ್ಕೆ ನಾವೆಷ್ಟು ಸಂತೋಷಪಡುತ್ತೇವೆ!

1980ರ ದಶಕದ ಮಧ್ಯಭಾಗದಲ್ಲಿ ಶುಶ್ರೂಷೆಯ ವಿರೋಧಿಗಳು ನಮ್ಮ ಕಾನೂನುಬದ್ಧ ಸಂಸ್ಥೆಯ ಡೈರೆಕ್ಟರ್‌ಗಳು ಯುವ ಪುರುಷರನ್ನು ಸೈನ್ಯಕ್ಕೆ ಸೇರಿಕೊಳ್ಳದಂತೆ ಕಲಿಸಿಕೊಡುತ್ತಿದ್ದಾರೆಂಬ ಆರೋಪವನ್ನು ಹೊರಿಸಿದರು. ಇದರಿಂದಾಗಿ ಸರ್ಕಾರವು ನಮ್ಮಲ್ಲಿ ಪ್ರತಿಯೊಬ್ಬ ಡೈರೆಕ್ಟರನನ್ನು ವಿಚಾರಣೆಗೆ ಒಳಪಡಿಸಿತು. ಆದರೆ ನಮ್ಮ ಮೇಲೆ ಹೊರಿಸಲಾದ ಎಲ್ಲ ಆರೋಪಗಳು ನಿರಾಧಾರವಾಗಿವೆ ಎಂದು 1987 ಜನವರಿ 22ರಂದು ಸಾಬೀತಾಯಿತು. ಇದರಿಂದಾಗಿ, ಮುಂದಕ್ಕೆ ಏಳಬಹುದಾದ ಯಾವುದೇ ತಪ್ಪಭಿಪ್ರಾಯಗಳನ್ನು ಸರಿಪಡಿಸಲು ನಮಗೆ ಆಧಾರಸಿಕ್ಕಿತು.

ದೇವರು ನಮ್ಮ ಕೆಲಸವನ್ನು ಹರಸುತ್ತಾನೆ

ವರ್ಷಗಳು ದಾಟಿದಂತೆ ನಮ್ಮ ತಾಟಸ್ಥ್ಯದ ನಿಮಿತ್ತ ಕೊರಿಯದಲ್ಲಿ ಸಾರುವ ಕೆಲಸಕ್ಕೆ ವಿರೋಧವು ಹೆಚ್ಚಾಯಿತು. ಇದರಿಂದಾಗಿ ನಮ್ಮ ಸಮ್ಮೇಳನಗಳನ್ನು ನಡೆಸಲು ಬೇಕಾದ ಸೂಕ್ತ ಸ್ಥಳಗಳನ್ನು ಕಂಡುಕೊಳ್ಳುವುದು ಹೆಚ್ಚೆಚ್ಚು ಕಷ್ಟವಾಗತೊಡಗಿತು. ಈ ಸಮಸ್ಯೆಯನ್ನು ಪರಿಹರಿಸಲು, ಸಾಕ್ಷಿಗಳೇ ಮುಂದೆಬಂದು ಪೂಸಾನ್‌ನಲ್ಲಿ ಒಂದು ಸಮ್ಮೇಳನ ಸಭಾಂಗಣವನ್ನು ಕಟ್ಟಿದರು. ಇದು ಪೌರಸ್ತ್ಯ ದೇಶಗಳಲ್ಲಿ ಕಟ್ಟಲಾದ ಮೊತ್ತಮೊದಲ ಸಭಾಂಗಣವಾಗಿತ್ತು. 1976, ಎಪ್ರಿಲ್‌ 5ರಂದು 1,300 ಮಂದಿ ಸಭಿಕರ ಸಮ್ಮುಖದಲ್ಲಿ ಸಮರ್ಪಣೆಯ ಭಾಷಣ ಕೊಡುವ ಸದವಕಾಶ ನನ್ನದಾಗಿತ್ತು.

1950ರಿಂದ ಲಕ್ಷಾಂತರ ಅಮೆರಿಕನ್‌ ಸೈನಿಕರನ್ನು ಕೊರಿಯದಲ್ಲಿ ಇರಿಸಲಾಗಿದೆ. ಅಂಥವರಲ್ಲಿ ಅಮೆರಿಕಕ್ಕೆ ತೆರಳಿದವರಲ್ಲಿ ಅನೇಕರು ಸಕ್ರಿಯ ಸಾಕ್ಷಿಗಳಾಗಿದ್ದಾರೆ. ಅನೇಕ ವೇಳೆ, ಇಂಥವರು ನಮಗೆ ಕಾಗದ ಬರೆಯುತ್ತಾರೆ. ನಾವು ಅವರಿಗೆ ಆಧ್ಯಾತ್ಮಿಕವಾಗಿ ನೆರವು ನೀಡಿದ್ದನ್ನು ನಿಜವಾಗಿಯೂ ಒಂದು ಆಶೀರ್ವಾದವಾಗಿ ಎಣಿಸುತ್ತೇವೆ.

ದುಃಖದ ಸಂಗತಿಯೇನೆಂದರೆ, 2006 ಸೆಪ್ಟೆಂಬರ್‌ 26ರಂದು ನನ್ನ ಪ್ರಿಯ ಪತ್ನಿ ಲಿಜ್‌ ತೀರಿಕೊಂಡಳು. ಆಕೆಯಿಲ್ಲದೆ ನನಗೆ ತುಂಬ ಬೇಸರವೆನಿಸುತ್ತದೆ. ನಾವಿಲ್ಲಿ ಕಳೆದ 51 ವರ್ಷಗಳಲ್ಲಿ ಆಕೆ ತನಗೆ ಸಿಕ್ಕಿದ ಪ್ರತಿಯೊಂದು ನೇಮಕವನ್ನು ಸಂತೋಷದಿಂದ ಸ್ವೀಕರಿಸಿದ್ದಳು. ಅವಳೆಂದೂ ಗೊಣಗಿದ್ದೇ ಇಲ್ಲ. ಅಮೆರಿಕವನ್ನೆಂದೂ ಬಿಟ್ಟುಹೋಗಲಾರೆ ಎಂದು ಒಂದು ಕಾಲದಲ್ಲಿ ಹೇಳುತ್ತಿದ್ದ ಆಕೆ, ಬಿಟ್ಟುಬಂದ ಮೇಲೆ ಮರಳಿ ತಾಯ್ನಾಡಿಗೆ ಹೋಗುವ ಮಾತನ್ನೆಂದೂ ಎತ್ತಿದ್ದಿಲ್ಲ!

ನಾನೀಗಲೂ ಕೊರಿಯ ಬೆತೆಲಿನ ಸದಸ್ಯನಾಗಿ ಸೇವೆ ಮಾಡುತ್ತಿದ್ದೇನೆ. ಆರಂಭದಲ್ಲಿ ಬೆರಳೆಣಿಕೆಯಷ್ಟು ಇದ್ದ ಬೆತೆಲಿಗರ ಸಂಖ್ಯೆ ಈಗ 250ಕ್ಕೆ ತಲುಪಿದೆ. ಇಲ್ಲಿನ ಕೆಲಸವನ್ನು ನೋಡಿಕೊಳ್ಳುತ್ತಿರುವ ಬ್ರಾಂಚ್‌ ಕಮಿಟಿಯ ಏಳು ಸದಸ್ಯರಲ್ಲಿ ಒಬ್ಬನಾಗಿ ಸೇವೆಸಲ್ಲಿಸುವ ಸುಯೋಗ ನನಗಿದೆ.

ನಾವು ಕೊರಿಯಕ್ಕೆ ಆಗಮಿಸಿದಾಗ ಅದು ತೀರಾ ಬಡ ರಾಷ್ಟ್ರವಾಗಿತ್ತು. ಆದರೆ ಈಗ ಅದು ಲೋಕದಲ್ಲೇ ಅತಿ ಮುಂದುವರಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಕೊರಿಯದಲ್ಲಿ 95,000ಕ್ಕಿಂತಲೂ ಹೆಚ್ಚು ಸಾಕ್ಷಿಗಳಿದ್ದಾರೆ. ಅವರಲ್ಲಿ ಸರಿಸುಮಾರು 40% ಮಂದಿ ರೆಗ್ಯುಲರ್‌ ಅಥವಾ ಆಕ್ಸಿಲಿಯರಿ ಪಯನೀಯರರಾಗಿದ್ದಾರೆ. ಇದೆಲ್ಲವು, ನಾನು ಇಲ್ಲಿದ್ದುಕೊಂಡು ದೇವರ ಸೇವೆ ಮಾಡಲು ಹಾಗೂ ಆತನ ಮಂದೆ ಅಭಿವೃದ್ಧಿಯಾಗುವುದನ್ನು ಕಂಡು ಹರ್ಷಿಸಲು ಇನ್ನಷ್ಟು ಕಾರಣಗಳನ್ನು ಕೊಡುತ್ತದೆ.

[ಪುಟ 24ರಲ್ಲಿರುವ ಚಿತ್ರ]

ಜೊತೆ ಮಿಷನೆರಿಗಳೊಂದಿಗೆ ಕೊರಿಯಕ್ಕೆ ಆಗಮಿಸಿದಾಗ

[ಪುಟ 24, 25ರಲ್ಲಿರುವ ಚಿತ್ರ]

ಪೂಸಾನ್‌ನಲ್ಲಿ ಸೇವೆ ಮಾಡುತ್ತಿದ್ದಾಗ

[ಪುಟ 25ರಲ್ಲಿರುವ ಚಿತ್ರ]

1971ರಲ್ಲಿ ಸಹೋದರ ಫ್ರೆಡ್‌ರಿಕ್‌ ಫ್ರಾನ್ಸ್‌ರೊಂದಿಗೆ ಡಿಎಮ್‌ಜೆಡ್‌ ವಲಯದಲ್ಲಿ

[ಪುಟ 26ರಲ್ಲಿರುವ ಚಿತ್ರ]

ಲಿಜ್‌ಳೊಂದಿಗೆ, ಆಕೆ ಸಾಯುವ ಸ್ವಲ್ಪಕಾಲ ಮುಂಚೆ

[ಪುಟ 26ರಲ್ಲಿರುವ ಚಿತ್ರ]

ನಾನೀಗ ಸೇವೆ ಮಾಡುತ್ತಿರುವ ಕೊರಿಯದ ಬ್ರಾಂಚ್‌ ಆಫೀಸು