ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಯೂನಿಫಾರಂ ಲಿಪಿ ಮತ್ತು ಬೈಬಲ್‌

ಕ್ಯೂನಿಫಾರಂ ಲಿಪಿ ಮತ್ತು ಬೈಬಲ್‌

ಕ್ಯೂನಿಫಾರಂ ಲಿಪಿ ಮತ್ತು ಬೈಬಲ್‌

ಮನುಷ್ಯರಾಡುವ ಭಾಷೆಯು ಬಾಬೆಲ್‌ನಲ್ಲಿ ತಾರುಮಾರುಗೊಂಡ ಬಳಿಕ ವಿವಿಧ ರೀತಿಯ ಬರಹ ವಿಧಾನಗಳು ರೂಪತಾಳಿದವು. ಮೆಸೊಪೊತಾಮ್ಯದಲ್ಲಿ ವಾಸಿಸುತ್ತಿದ್ದ ಸುಮೇರಿಯನ್ನರು ಮತ್ತು ಬ್ಯಾಬಿಲೋನ್ಯರು ಕ್ಯೂನಿಫಾರಂ ಇಲ್ಲವೇ ಬೆಣೆಲಿಪಿಯನ್ನು ಬಳಸಿದರು. ಬೆಣೆಲಿಪಿ ಎಂಬ ಹೆಸರು, ಲ್ಯಾಟಿನ್‌ ಭಾಷೆಯಲ್ಲಿ “ಬೆಣೆಯಾಕಾರ”ಕ್ಕಾಗಿರುವ ಪದದಿಂದ ಬಂದಿದೆ. ಈ ಲಿಪಿಯು, ಒದ್ದೆ ಜೇಡಿಫಲಕಗಳ ಮೇಲೆ ಮುಳ್ಳಿನಿಂದ ಬರೆದ ತ್ರಿಕೋನಾಕಾರದ ಗುರುತುಗಳನ್ನು ಸೂಚಿಸುತ್ತದೆ.

ಬೈಬಲಿನಲ್ಲಿ ತಿಳಿಸಲಾಗಿರುವ ಜನರ ಹಾಗೂ ಘಟನೆಗಳ ಬಗ್ಗೆ ಸೂಚಿಸುವ ಕ್ಯೂನಿಫಾರಂ ಬರಹಗಳು ಪ್ರಾಕ್ತನಶಾಸ್ತ್ರಜ್ಞರಿಗೆ ಸಿಕ್ಕಿವೆ. ಪ್ರಾಚೀನ ಕಾಲದ ಈ ಬರಹ ವಿಧಾನದ ಕುರಿತು ನಮಗೇನು ತಿಳಿದಿದೆ? ಇಂಥ ಬರಹಗಳು ಬೈಬಲಿನ ವಿಶ್ವಾಸಾರ್ಹತೆಗೆ ಯಾವ ಸಾಕ್ಷ್ಯಕೊಡುತ್ತವೆ?

ಈವರೆಗೂ ಉಳಿದಿರುವ ದಾಖಲೆಗಳು

ವಿದ್ವಾಂಸರಿಗನುಸಾರ ಮೆಸೊಪೊತಾಮ್ಯದಲ್ಲಿ ಮೊತ್ತಮೊದಲ ಬರಹ ವಿಧಾನದಲ್ಲಿ ಚಿತ್ರಲಿಪಿಯನ್ನು ಬಳಸಲಾಗುತ್ತಿತ್ತು. ಅಂದರೆ, ಒಂದು ಪದ ಅಥವಾ ವಿಚಾರವನ್ನು ಒಂದು ಚಿಹ್ನೆ ಅಥವಾ ಚಿತ್ರದ ಮೂಲಕ ಸೂಚಿಸಲಾಗುತ್ತಿತ್ತು. ಉದಾಹರಣೆಗೆ, ಎತ್ತನ್ನು ಸೂಚಿಸಲು ಎತ್ತಿನ ತಲೆಯನ್ನು ಚಿಹ್ನೆಯಾಗಿ ಬಳಸಲಾಗುತ್ತಿತ್ತು. ದಾಖಲೆಗಳನ್ನಿಡುವ ಅಗತ್ಯವು ಹೆಚ್ಚಾದಂತೆ ಕ್ಯೂನಿಫಾರಂ ಲಿಪಿ ವಿಕಾಸ ಹೊಂದಿತು. “ಅಂದಿನಿಂದ, ಚಿಹ್ನೆಗಳನ್ನು ಕೇವಲ ಪದಗಳನ್ನು ಸೂಚಿಸಲು ಮಾತ್ರವಲ್ಲ ಪದಾಂಶಗಳನ್ನು ಸೂಚಿಸಲೂ ಬಳಸಲಾಗುತ್ತಿತ್ತು. ಹಲವಾರು ಪದಾಂಶಗಳ ಚಿಹ್ನೆಗಳು ಒಟ್ಟುಸೇರಿ ಒಂದು ಪದವಾಗುತ್ತಿತ್ತು” ಎಂದು ಎನ್‌ಐವಿ ಆರ್ಕಿಅಲಾಜಿಕಲ್‌ ಸ್ಟಡಿ ಬೈಬಲ್‌ ವಿವರಿಸುತ್ತದೆ. ಕ್ರಮೇಣ, ಕ್ಯೂನಿಫಾರಂ ಲಿಪಿಯಲ್ಲಿ 200 ಬೇರೆಬೇರೆ ಚಿಹ್ನೆಗಳನ್ನು ವಿಕಸಿಸಿದ್ದರಿಂದಾಗಿ, “ಶಬ್ದಭಂಡಾರ ಹಾಗೂ ವ್ಯಾಕರಣಗಳಂಥ ಜಟಿಲತೆಯಿರುವ ಭಾಷೆಯನ್ನು ಬರಹ ರೂಪದಲ್ಲಿ ಹಾಕಲು ಸಾಧ್ಯವಾಯಿತು.”

ಅಬ್ರಹಾಮನ ಕಾಲದಲ್ಲಿ ಅಂದರೆ ಸುಮಾರು ಸಾ.ಶ.ಪೂ. 2,000ದಷ್ಟಕ್ಕೆ ಕ್ಯೂನಿಫಾರಂ ಲಿಪಿ ಅಭಿವೃದ್ಧಿಯಾಗಿತ್ತು. 20 ಶತಮಾನಗಳ ಅವಧಿಯಲ್ಲಿ ಸುಮಾರು 15 ವಿಭಿನ್ನ ಭಾಷೆಗಳು ಆ ಲಿಪಿಯನ್ನೇ ಬಳಸಿದವು. ದೊರೆತ ಕ್ಯೂನಿಫಾರಂ ಬರಹಗಳಲ್ಲಿ 99 ಪ್ರತಿಶತಕ್ಕಿಂತಲೂ ಹೆಚ್ಚಿನವು ಮಣ್ಣಿನ ಫಲಕಗಳಲ್ಲಿದ್ದವು. ಕಳೆದ 150 ವರ್ಷಗಳಿಂದ ಇಂಥ ಅನೇಕ ಫಲಕಗಳು ಊರ್‌, ಯುರಕ್‌, ಬ್ಯಾಬಿಲೋನ್‌, ನಿಮ್ರೂಡ್‌, ನಿಪೂರ್‌, ಅಶೂರ್‌, ನಿನೆವ, ಮಾರಿ, ಇಬ್ಲ, ಯುಗಾರಿಟ್‌ ಮತ್ತು ಅಮಾರ್ನಾದಲ್ಲಿ ಕಂಡುಬಂದಿವೆ. ಆರ್ಕಿಅಲಾಜಿ ಒಡಿಸ್ಸಿ ಎಂಬ ಪತ್ರಿಕೆ ತಿಳಿಸುವುದು: “ಪರಿಣತರ ಅಂದಾಜಿಗನುಸಾರ, ಒಂದು ಕೋಟಿಯಿಂದ ಎರಡು ಕೋಟಿಯಷ್ಟು ಕ್ಯೂನಿಫಾರಂ ಫಲಕಗಳು ಈಗಾಗಲೇ ಭೂಶೋಧನೆಯಿಂದ ದೊರಕಿವೆ ಮತ್ತು ಈಗಲೂ ಪ್ರತಿ ವರ್ಷ 25,000ದಷ್ಟು ಸಿಗುತ್ತಲಿವೆ.”

ಲೋಕವ್ಯಾಪಕವಿರುವ ಕ್ಯೂನಿಫಾರಂ ಲಿಪಿ ವಿದ್ವಾಂಸರಿಗೆ ಆ ಲಿಪಿಯನ್ನು ಭಾಷಾಂತರಿಸುವ ಬೃಹತ್‌ ಕೆಲಸವಿದೆ. ಒಂದು ಅಂದಾಜಿಗನುಸಾರ, “ಈಗ ಲಭ್ಯವಿರುವ ಕ್ಯೂನಿಫಾರಂ ಬರಹಗಳ ಹತ್ತರಲ್ಲಿ ಒಂದಂಶವನ್ನು ಮಾತ್ರ ಆಧುನಿಕ ಸಮಯದಲ್ಲಿ ಓದಲಾಗಿದೆ. ಅದು ಸಹ ಬರೀ ಒಮ್ಮೆ.”

ಕ್ಯೂನಿಫಾರಂ ಲಿಪಿಯಲ್ಲಿದ್ದ ದ್ವಿಭಾಷೆಯ ಮತ್ತು ತ್ರಿಭಾಷೆಯ ಬರಹಗಳ ಕಂಡುಹಿಡಿತವು ಕ್ಯೂನಿಫಾರಂ ಲಿಪಿಯ ರಹಸ್ಯವನ್ನು ಭೇದಿಸಿ ಅದರ ಅರ್ಥವನ್ನು ಗ್ರಹಿಸುವಂತೆ ದಾರಿತೆರೆಯಿತು. ತದ್ರೂಪದ ಮಾಹಿತಿಯಿದ್ದ ಈ ಎಲ್ಲ ಬರಹಗಳು ಕ್ಯೂನಿಫಾರಂ ಲಿಪಿಯಲ್ಲೇ ಇದ್ದವಾದರೂ ಭಾಷೆ ಮಾತ್ರ ಬೇರೆ ಬೇರೆಯಾಗಿದೆ ಎಂಬುದು ಭಾಷಾ ತಜ್ಞರ ಅರಿವಿಗೆ ಬಂತು. ಹೆಸರುಗಳು, ಬಿರುದುಗಳು, ದೊರೆಗಳ ವಂಶಾವಳಿಯ ಪಟ್ಟಿಗಳು ಮತ್ತು ಸ್ವಪ್ರಶಂಸೆಯ ಮಾತುಗಳನ್ನು ಸಹ ಪುನರಾವರ್ತಿಸಲಾಗಿದೆ ಎಂದು ಗೊತ್ತಾದದ್ದೇ ಈ ಜಟಿಲ ಕ್ಯೂನಿಫಾರಂ ಲಿಪಿಯನ್ನು ಭೇದಿಸಲು ಸಹಾಯನೀಡಿತು.

1850ರ ದಶಕದಷ್ಟಕ್ಕೆ ವಿದ್ವಾಂಸರು ಪ್ರಾಚೀನ ಮಧ್ಯ ಪೂರ್ವದಲ್ಲಿ ಸಾಮಾನ್ಯ ಭಾಷೆಯಾಗಿದ್ದ ಆಕಾಡ್‌ ಭಾಷೆ ಅಥವಾ ಅಶ್ಶೂರ್ಯ-ಬ್ಯಾಬಿಲೋನಿಯ ಭಾಷೆಯನ್ನು ಕ್ಯೂನಿಫಾರಂ ಲಿಪಿಯಲ್ಲಿ ಓದಶಕ್ತರಾದರು. ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ವಿವರಿಸುವುದು: “ಕ್ಯೂನಿಫಾರಂ ಲಿಪಿಯಲ್ಲಿರುವ ಆಕಾಡ್‌ ಭಾಷೆಯನ್ನು ಒಮ್ಮೆ ಅರಿತುಕೊಂಡ ಬಳಿಕ ಕ್ಯೂನಿಫಾರಂ ಲಿಪಿಯು ಅರ್ಥವಾಗತೊಡಗಿತು ಮತ್ತು ಅದೇ ಬರವಣಿಗೆಯಲ್ಲಿರುವ ಇತರ ಭಾಷೆಗಳ ಅರ್ಥಗ್ರಹಿಸಲು ಒಂದು ಮೂಲರೂಪ ಸಿಕ್ಕಿದಂತಾಯಿತು.” ಈ ಬರವಣಿಗೆಗಳಿಗೂ ಬೈಬಲಿಗೂ ಏನು ಸಂಬಂಧ?

ಬೈಬಲಿನೊಂದಿಗೆ ಸರಿಬೀಳುವ ರುಜುವಾತು

ಯೆರೂಸಲೇಮಿನ ಮೇಲೆ ರಾಜ ದಾವೀದನು ಸಾ.ಶ.ಪೂ. 1070ರಲ್ಲಿ ಜಯಸಾಧಿಸುವ ವರೆಗೆ ಕಾನಾನ್ಯ ಅರಸರು ಅಲ್ಲಿ ಆಳುತ್ತಿದ್ದರೆಂದು ಬೈಬಲ್‌ ತಿಳಿಸುತ್ತದೆ. (ಯೆಹೋ. 10:1; 2 ಸಮು. 5:4-9) ಆದರೆ ಈ ಕುರಿತು ಕೆಲವು ವಿದ್ವಾಂಸರು ಸಂದೇಹ ವ್ಯಕ್ತಪಡಿಸಿದರು. ಹಾಗಿದ್ದರೂ, 1887ರಲ್ಲಿ ಗದ್ದೆ ಕೆಲಸ ಮಾಡುತ್ತಿದ್ದ ಒಬ್ಬಾಕೆ ಸ್ತ್ರೀಗೆ ಈಜಿಪ್ಟ್‌ನ ಅಮಾರ್ನಾದಲ್ಲಿ ಜೇಡಿಫಲಕವೊಂದು ಸಿಕ್ಕಿತು. ಕಟ್ಟಕಡೆಗೆ ಅಲ್ಲಿ ದೊರೆತ 380 ಫಲಕಗಳಲ್ಲಿದ್ದ ಮಾಹಿತಿಯು ಈಜಿಪ್ಟ್‌ನ ಅರಸರ (ಅಮನ್‌ಹೋಟೆಪ್‌ III ಮತ್ತು ಆಖನಟನ್‌) ಮತ್ತು ಕಾನಾನ್ಯ ರಾಜ್ಯಗಳ ನಡುವಿನ ಪತ್ರವ್ಯವಹಾರಕ್ಕೆ ಸಂಬಂಧಪಟ್ಟದ್ದೆಂದು ತಿಳಿದುಬಂತು. ಅವುಗಳಲ್ಲಿ ಆರು ಪತ್ರಗಳನ್ನು ಯೆರೂಸಲೇಮಿನ ದೊರೆ ಅಬ್ದಿ-ಹೀಬಾನು ಬರೆದಿದ್ದನು.

ಬಿಬ್ಲಿಕಲ್‌ ಆರ್ಕಿಅಲಾಜಿ ರಿವ್ಯೂ ಎಂಬ ಪತ್ರಿಕೆ ತಿಳಿಸುವುದು: “ಅಮಾರ್ನಾ ಫಲಕಗಳಲ್ಲಿ, ಯೆರೂಸಲೇಮನ್ನು ತೋಟವಾಗಿ ಅಲ್ಲ ಬದಲಿಗೆ ಪಟ್ಟಣವೆಂದು ಸೂಚಿಸಲಾಗಿರುವುದು ಮತ್ತು ಅಬ್ದಿ-ಹೀಬಾನು ಯೆರೂಸಲೇಮಿನಲ್ಲಿ ಒಂದು ನಿವಾಸಸ್ಥಾನವನ್ನೂ 50 ಮಂದಿ ಐಗುಪ್ತ ಸೈನಿಕರ ದಳವನ್ನೂ ಹೊಂದಿದ್ದ ರಾಜ್ಯಪಾಲನಾಗಿದ್ದನೆಂದು ಸೂಚಿಸಲಾಗಿರುವುದು ತಾನೇ, ಯೆರೂಸಲೇಮ್‌ ಬೆಟ್ಟ ಪ್ರದೇಶದ ಒಂದು ಚಿಕ್ಕ ರಾಜ್ಯವಾಗಿತ್ತೆಂಬದನ್ನು ತೋರಿಸುತ್ತದೆ.” ಅದೇ ಪತ್ರಿಕೆ ಮುಂದಕ್ಕೆ ಹೀಗೆ ತಿಳಿಸುತ್ತದೆ: “ಆ ಕಾಲದಲ್ಲಿ ಗಮನಾರ್ಹವಾಗಿದ್ದ ಒಂದು ನಗರವು ಅಸ್ತಿತ್ವದಲ್ಲಿತ್ತು ಎಂಬದಕ್ಕೆ ಅಮಾರ್ನಾ ಪತ್ರಗಳು ನಮಗೆ ಖಾತ್ರಿಕೊಡುತ್ತವೆ.”

ಅಶ್ಶೂರ್ಯ ಮತ್ತು ಬ್ಯಾಬಿಲೋನಿಯದ ದಾಖಲೆಗಳಲ್ಲಿರುವ ಹೆಸರುಗಳು

ಅಶ್ಶೂರ್ಯರು ಮತ್ತು ಅನಂತರ ಬ್ಯಾಬಿಲೋನ್ಯರು ಜೇಡಿಮಣ್ಣಿನ ಫಲಕಗಳು, ಸಿಲಿಂಡರ್‌ ಆಕೃತಿಗಳು, ಅಶ್ರಗಗಳು ಮತ್ತು ಸ್ಮಾರಕಗಳ ಮೇಲೆ ತಮ್ಮ ಇತಿಹಾಸ ಬರೆದಿಟ್ಟರು. ಆದ್ದರಿಂದ ಪರಿಣತರು ಆಕಾಡ್‌ ಭಾಷೆಯ ಕ್ಯೂನಿಫಾರಂ ಲಿಪಿಯನ್ನು ಭೇದಿಸಿದಾಗ ಅದರಲ್ಲಿ, ಬೈಬಲಿನಲ್ಲಿ ತಿಳಿಸಲಾದ ಜನರ ಹೆಸರುಗಳಿರುವುದನ್ನು ಕಂಡುಕೊಂಡರು.

ದ ಬೈಬಲ್‌ ಇನ್‌ ದ ಬ್ರಿಟಿಷ್‌ ಮ್ಯೂಸಿಯಮ್‌ ಎಂಬ ಪುಸ್ತಕ ಹೀಗನ್ನುತ್ತದೆ: “ಡಾಕ್ಟರ್‌ ಸ್ಯಾಮ್‌ವೆಲ್‌ ಬರ್ಚ್‌, ಹೊಸದಾಗಿ ನಿರ್ಮಾಣಗೊಂಡ ಬಿಬ್ಲಿಕಲ್‌ ಆರ್ಕಿಅಲಾಜಿ ಸೊಸೈಟಿಯನ್ನು 1870ರಲ್ಲಿ ನಿರ್ದೇಶಿಸಿ ಮಾತಾಡಿದಾಗ, [ಕ್ಯೂನಿಫಾರಂ ಬರಹಗಳಲ್ಲಿರುವ] ಇಬ್ರಿಯ ಅರಸರಾದ ಒಮ್ರಿ, ಅಹಾಬ, ಯೇಹು, ಅಜರ್ಯ . . . ಮೆನಹೇಮ್‌, ಪೆಕಹ, ಹೋಶೇಯ, ಹಿಜ್ಕೀಯ ಮತ್ತು ಮನಸ್ಸೆ, ಅಶ್ಶೂರ್ಯದ ರಾಜರಾದ ತಿಗ್ಲತ್ಪಿಲೆಸೆರ್‌ . . . [III], ಸರ್ಗೋನ್‌, ಸನ್ಹೇರೀಬ, ಏಸರ್‌ಹದ್ದೋನ್‌, ಅಶ್ಶೂರ್‌ಬನಿಪಾಲ್‌ . . . ಮತ್ತು ಸಿರಿಯಾದವರಾದ ಬೆನ್ಹದದ, ಹಜಾಯೇಲ ಮತ್ತು ರೆಚೀನನ ಹೆಸರುಗಳನ್ನು ಗುರುತಿಸಶಕ್ತರಾದರು.”

ದ ಬೈಬಲ್‌ ಆ್ಯಂಡ್‌ ರೇಡಿಯೋಕಾರ್ಬನ್‌ ಡೇಟಿಂಗ್‌ ಎಂಬ ಪುಸ್ತಕವು ಇಸ್ರಾಯೇಲ್‌ ಮತ್ತು ಯೆಹೂದದ ಕುರಿತು ಬೈಬಲ್‌ನಲ್ಲಿರುವ ಇತಿಹಾಸವನ್ನು ಪ್ರಾಚೀನ ಕ್ಯೂನಿಫಾರಂ ಲಿಪಿಯೊಂದಿಗೆ ಹೋಲಿಸುತ್ತದೆ. ಇದರಿಂದ ಏನು ತಿಳಿದುಬಂತು? “ಬೇರೆ ಮೂಲಗಳಲ್ಲಿ ಕಂಡುಬರುವ ಯೆಹೂದ ಮತ್ತು ಇಸ್ರಾಯೇಲಿನ ಒಟ್ಟು 15 ಅಥವಾ 16 ಅರಸರ ಹೆಸರುಗಳು ಮತ್ತು ಅವರು ಜೀವಿಸಿರುವ ಕಾಲವು [ಬೈಬಲ್‌ ಪುಸ್ತಕವಾದ] ಅರಸುಗಳೊಂದಿಗೆ ಸಂಪೂರ್ಣ ಸಹಮತದಲ್ಲಿದೆ. ಪ್ರತಿಯೊಬ್ಬ ರಾಜನ ಹೆಸರನ್ನು ಕಾಲಾನುಕ್ರಮದಲ್ಲಿ ಸರಿಯಾಗಿ ನಮೂದಿಸಲಾಗಿದೆ. ಅಷ್ಟುಮಾತ್ರವಲ್ಲದೆ ಆ ಹೊರಗಿನ ಮೂಲಗಳು ಅರಸುಗಳು ಪುಸ್ತಕದಲ್ಲಿರದ ಒಂದು ಹೆಸರನ್ನೂ ಪ್ರಸ್ತಾಪಿಸುವುದಿಲ್ಲ.”

‘ಸೈರಸ್‌ ಸಿಲಿಂಡರ್‌’ ಎಂಬ ಪ್ರಸಿದ್ಧ ಕ್ಯೂನಿಫಾರಂ ಲಿಪಿಯ ಕೆತ್ತನೆಯು 1879ರಲ್ಲಿ ಸಿಕ್ಕಿತು. ಅದರಲ್ಲಿ, ಸಾ.ಶ.ಪೂ. 539ರಲ್ಲಿ ಬಾಬೆಲನ್ನು ವಶಪಡಿಸಿದ ಬಳಿಕ ಸೈರಸ್‌ನು [ಕೋರೆಷನು] ಬಂಧಿವಾಸಿಗಳನ್ನು ತಮ್ಮ ತಮ್ಮ ತಾಯ್ನಾಡುಗಳಿಗೆ ಕಳುಹಿಸಿಬಿಡುವ ತನ್ನ ಕಾರ್ಯನೀತಿಯನ್ನು ಜಾರಿಗೆತಂದದ್ದರ ದಾಖಲೆಯಿದೆ. ಇದರಿಂದ ಯೆಹೂದ್ಯರೂ ಪ್ರಯೋಜನಪಡೆದರು. (ಎಜ್ರ 1:1-4) 19ನೇ ಶತಮಾನದ ಅನೇಕ ವಿದ್ವಾಂಸರು ಬೈಬಲಿನಲ್ಲಿ ದಾಖಲಾಗಿರುವ ಕೋರೆಷನ ಆಜ್ಞೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದರು. ಆದರೆ, ‘ಸೈರಸ್‌ ಸಿಲಿಂಡರ್‌’ ಅನ್ನು ಸೇರಿಸಿ ಪಾರಸಿಯರ ಕಾಲದ ಕ್ಯೂನಿಫಾರಂ ಲಿಪಿಯ ದಾಖಲೆಗಳು ಬೈಬಲಿನಲ್ಲಿ ತಿಳಿಸಲಾದ ಸಂಗತಿಗಳು ನಿಷ್ಕೃಷ್ಟ ಎಂಬುದಕ್ಕೆ ಮನದಟ್ಟು ಮಾಡುವಂಥ ರುಜುವಾತನ್ನು ಕೊಡುತ್ತವೆ.

1883ರಲ್ಲಿ ಕ್ಯೂನಿಫಾರಂ ಲಿಪಿಯ 700ರಕ್ಕಿಂತಲೂ ಹೆಚ್ಚು ಬರಹಗಳ ಒಂದು ಸಂಗ್ರಹವು ಬ್ಯಾಬಿಲೋನಿನ ಸಮೀಪವಿರುವ ನಿಪೂರ್‌ನಲ್ಲಿ ಸಿಕ್ಕಿತ್ತು. ಅದರಲ್ಲಿರುವ 2,500 ಹೆಸರುಗಳಲ್ಲಿ ಸುಮಾರು 70, ಯೆಹೂದಿ ಹೆಸರುಗಳೆಂದು ಗುರುತಿಸಲಾಗಿದೆ. ಅವು, “ಒಪ್ಪಂದ ಮಾಡುತ್ತಿರುವ ಪಕ್ಷಗಳ, ಏಜೆಂಟರ, ಸಾಕ್ಷಿಗಳ, ಸುಂಕ ವಸೂಲಿಮಾಡುವವರ ಮತ್ತು ಅಧಿಕಾರಶಾಹಿಗಳ” ಹೆಸರುಗಳಾಗಿರುವಂತೆ ತೋರುತ್ತವೆ ಎಂದು ಇತಿಹಾಸಗಾರ ಎಡ್ವಿನ್‌ ಯಮೌಚಿ ತಿಳಿಸುತ್ತಾರೆ. ಬ್ಯಾಬಿಲೋನಿಗೆ ಹತ್ತಿರವಾಗಿದ್ದ ಈ ಸ್ಥಳದಲ್ಲಿ ಯೆಹೂದ್ಯರು ಆ ಸಮಯಾವಧಿಯಲ್ಲಿ ಇಂಥ ಚಟುವಟಿಕೆಗಳಲ್ಲಿ ತೊಡಗಿದ್ದರು ಎನ್ನುವ ಪುರಾವೆಯು ಮಹತ್ತ್ವದ್ದಾಗಿದೆ. ಇದು, ಅಶ್ಶೂರ್ಯ ಮತ್ತು ಬ್ಯಾಬಿಲೋನಿನ ಸೆರೆಯಿಂದ ಇಸ್ರಾಯೇಲ್ಯರ “ಜನಶೇಷವು” ಯೆಹೂದಕ್ಕೆ ಹಿಂತೆರಳಿತಾದರೂ ಅನೇಕರು ಅಲ್ಲೇ ಉಳಿಯುವರೆಂಬ ಬೈಬಲ್‌ನ ಪ್ರವಾದನಾತ್ಮಕ ಮಾತನ್ನು ಸ್ಥಿರೀಕರಿಸುತ್ತದೆ.—ಯೆಶಾ. 10:21, 22.

ಸಾ.ಶ.ಪೂ. ಮೊದಲನೆಯ ಸಹಸ್ರಮಾನದಲ್ಲಿ ಕ್ಯೂನಿಫಾರಂ ಲಿಪಿ ಮತ್ತು ಅಕ್ಷರ ಲಿಪಿ ಎರಡೂ ಬಳಕೆಯಲ್ಲಿತ್ತು. ಆದರೆ ಅಶ್ಶೂರ್ಯರು ಮತ್ತು ಬ್ಯಾಬಿಲೋನ್ಯರು ಅಕ್ಷರ ಲಿಪಿಯನ್ನು ತಮ್ಮದಾಗಿಸಿಕೊಂಡು ಕ್ರಮೇಣ ಕ್ಯೂನಿಫಾರಂ ಲಿಪಿಯನ್ನು ತೊರೆದುಬಿಟ್ಟರು.

ಮ್ಯೂಸಿಯಮ್‌ಗಳಲ್ಲಿ ಸಂಗ್ರಹಿಸಿಡಲಾಗಿರುವ ಸಾವಿರಾರು ಫಲಕಗಳನ್ನು ಅಧ್ಯಯನ ಮಾಡುವುದು ಇನ್ನೂ ಬಾಕಿಯಿದೆ. ಪರಿಣತರು ಈಗಾಗಲೇ ಎಷ್ಟೆಲ್ಲ ಕ್ಯೂನಿಫಾರಂ ಲಿಪಿಗಳನ್ನು ಭೇದಿಸಿದ್ದಾರೋ ಅವೆಲ್ಲವೂ ಬೈಬಲ್‌ನ ವಿಶ್ವಾಸಾರ್ಹತೆಗೆ ಬಹುಮೂಲ್ಯ ರುಜುವಾತನ್ನು ಕೊಟ್ಟಿವೆ. ಇನ್ನೂ ಅಧ್ಯಯನ ನಡೆಸಲಾಗಿರದ ಆ ಉಳಿದ ಬರಹಗಳಲ್ಲಿ ಎಷ್ಟೊಂದು ಪುರಾವೆಗಳಿವೆಯೋ ಏನೋ!

[ಪುಟ 21ರಲ್ಲಿರುವ ಚಿತ್ರ ಕೃಪೆ]

Photograph taken by courtesy of the British Museum