ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಗಣ್ಯಮಾಡಿ

ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಗಣ್ಯಮಾಡಿ

ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಗಣ್ಯಮಾಡಿ

“ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.”​—⁠ಯೋಹಾನ 14:6.

ಯುಗಗಳಾದ್ಯಂತ ಅನೇಕರು ತಮ್ಮ ಸುತ್ತಲಿನ ಜನರಿಗಿಂತ ಭಿನ್ನರಾಗಿ ಎದ್ದುಕಾಣಲು ಪ್ರಯತ್ನಿಸಿದ್ದಾರಾದರೂ ಅದರಲ್ಲಿ ಸಫಲರಾದವರು ಕೊಂಚ ಮಂದಿ ಮಾತ್ರ. ಅವರಲ್ಲೂ ಬೆರಳೆಣಿಕೆಯಷ್ಟು ಮಂದಿ ಮಾತ್ರ ತಾವು ಕೆಲವು ವಿಧಗಳಲ್ಲಿ ಅದ್ವಿತೀಯರೆಂದು ಸೂಕ್ತವಾಗಿಯೇ ಹೇಳಬಹುದು. ದೇವರ ಮಗನಾದ ಯೇಸು ಕ್ರಿಸ್ತನಾದರೋ ಹಲವಾರು ವಿಧಗಳಲ್ಲಿ ಅದ್ವಿತೀಯನಾಗಿದ್ದಾನೆ.

2 ಯೇಸುವಿನ ಅದ್ವಿತೀಯ ಪಾತ್ರದಲ್ಲಿ ನಮಗೇಕೆ ಆಸಕ್ತಿಯಿರಬೇಕು? ಏಕೆಂದರೆ ಅದರಲ್ಲಿ ಸ್ವರ್ಗೀಯ ತಂದೆಯಾದ ಯೆಹೋವನೊಂದಿಗಿನ ನಮ್ಮ ಸಂಬಂಧವೇ ಒಳಗೂಡಿದೆ. ಯೇಸು ಹೇಳಿದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.” (ಯೋಹಾ. 14:6; 17:3) ಯೇಸು ಯಾವೆಲ್ಲ ವಿಧಗಳಲ್ಲಿ ಅದ್ವಿತೀಯನಾಗಿದ್ದಾನೆ ಎಂಬುದನ್ನು ನಾವೀಗ ಪರಿಗಣಿಸೋಣ. ಹಾಗೆ ಮಾಡುವುದರಿಂದ ದೇವರ ಉದ್ದೇಶದಲ್ಲಿ ಅವನಿಗಿರುವ ಪಾತ್ರದ ಕಡೆಗೆ ನಮ್ಮ ಗಣ್ಯತೆ ಹೆಚ್ಚುವುದು.

“ಒಬ್ಬನೇ ಮಗ”

3 ಸೈತಾನನು ಯೇಸುವನ್ನು ಶೋಧನೆಗೊಳಪಡಿಸುತ್ತಿದ್ದಾಗ ಅವನನ್ನು “ದೇವರ ಮಗ” ಎಂದು ಸಂಬೋಧಿಸಿದನು. (ಮತ್ತಾ. 4:3, 6) ಆದರೆ ಯೇಸು ದೇವರ ಮಗನಷ್ಟೇ ಅಲ್ಲ, ‘ದೇವರ ಒಬ್ಬನೇ ಮಗನಾಗಿದ್ದಾನೆ.’ (ಯೋಹಾ. 3:16, 18) “ಒಬ್ಬನೇ” ಅಥವಾ ಏಕಜಾತ ಎಂದು ಭಾಷಾಂತರಿಸಲಾಗಿರುವ ಗ್ರೀಕ್‌ ಪದದ ಅರ್ಥ “ಒಂದು ವಿಶಿಷ್ಟ ವರ್ಗದಲ್ಲಿ ಏಕೈಕ, ಏಕಮಾತ್ರ” ಅಥವಾ “ಅದ್ವಿತೀಯ” ಎಂದಾಗಿದೆ. ಯೆಹೋವನಿಗೆ ಕೋಟ್ಯಾನುಕೋಟಿ ಆತ್ಮಪುತ್ರರಿರುವುದರಿಂದ ಯೇಸುವನ್ನು “ವರ್ಗದಲ್ಲಿ ಏಕೈಕ, ಏಕಮಾತ್ರ” ಎಂದು ಹೇಗೆ ಕರೆಯಸಾಧ್ಯವಿದೆ?

4 ಯೇಸುವನ್ನು ಆತನ ತಂದೆಯೇ ನೇರವಾಗಿ ಸೃಷ್ಟಿಸಿದ್ದರಿಂದ ಅವನು ಅದ್ವಿತೀಯನು. ಅಲ್ಲದೆ ಅವನು ಜ್ಯೇಷ್ಠಪುತ್ರನು, “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದಾನೆ. (ಕೊಲೊ. 1:15) ಅವನು “ದೇವರ ಸೃಷ್ಟಿಗೆ ಮೂಲನೂ” ಆಗಿದ್ದಾನೆ. (ಪ್ರಕ. 3:14) ಈ ಒಬ್ಬನೇ ಮಗನು ಸೃಷ್ಟಿಕಾರ್ಯದಲ್ಲಿ ವಹಿಸಿದ ಪಾತ್ರವೂ ಅದ್ವಿತೀಯವಾಗಿದೆ. ಅವನು ಸೃಷ್ಟಿಕರ್ತನಾಗಿರಲಿಲ್ಲ ಅಥವಾ ಸೃಷ್ಟಿಯ ಮೂಲಕರ್ತನಾಗಿರಲಿಲ್ಲ. ಆದರೆ ಎಲ್ಲವನ್ನು ಸೃಷ್ಟಿಸುವುದರಲ್ಲಿ ಯೆಹೋವನು ಅವನನ್ನು ತನ್ನ ಕಾರ್ಯಕರ್ತನಾಗಿ ಇಲ್ಲವೇ ಸಾಧನವಾಗಿ ಬಳಸಿದನು. (ಯೋಹಾನ 1:3 ಓದಿ.) ಅಪೊಸ್ತಲ ಪೌಲನು ಬರೆದದ್ದು: “ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲಕಾರಣನು; ನಾವು ಆತನಿಗಾಗಿ ಉಂಟಾದೆವು. ಮತ್ತು ನಮಗೆ ಒಬ್ಬನೇ ಕರ್ತ; ಆತನು ಯೇಸು ಕ್ರಿಸ್ತನೇ; ಆತನ ಮುಖಾಂತರ ಸಮಸ್ತವೂ ಉಂಟಾಯಿತು, ನಾವೂ ಆತನ ಮುಖಾಂತರ ಉಂಟಾದೆವು.”​—⁠1 ಕೊರಿಂ. 8:6.

5 ಯೇಸು ಇನ್ನೂ ಅನೇಕ ವಿಧಗಳಲ್ಲಿ ಅದ್ವಿತೀಯನಾಗಿದ್ದಾನೆ. ಬೈಬಲ್‌ ಯೇಸುವಿಗೆ ಅನೇಕ ಬಿರುದುಗಳನ್ನು ಕೊಡುತ್ತದೆ. ಇವು ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಎತ್ತಿತೋರಿಸುತ್ತವೆ. ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಯೇಸುವಿಗೆ ಕೊಡಲಾಗಿರುವ ಬಿರುದುಗಳಲ್ಲಿ ಐದನ್ನು ನಾವೀಗ ಪರಿಗಣಿಸೋಣ.

“ವಾಕ್ಯ”

6 (ಯೋಹಾನ 1:14 ಓದಿ.) ಯೇಸುವನ್ನು “ವಾಕ್ಯ” ಅಥವಾ ಲೊಗೋಸ್‌ ಎಂದು ಕರೆಯಲಾಗಿರುವುದೇಕೆ? ಬುದ್ಧಿಶಕ್ತಿಯುಳ್ಳ ಇತರ ಜೀವಿಗಳ ಸೃಷ್ಟಿಯಾದಂದಿನಿಂದ ಅವನು ನಿರ್ವಹಿಸಿದ ಕೆಲಸವನ್ನು ಈ ಬಿರುದು ತಿಳಿಸುತ್ತದೆ. ಇತರ ಆತ್ಮಪುತ್ರರಿಗೆ ಮಾಹಿತಿ ಮತ್ತು ನಿರ್ದೇಶನಗಳನ್ನು ನೀಡಲು ಯೆಹೋವನು ತನ್ನ ಈ ಪುತ್ರನನ್ನು ಉಪಯೋಗಿಸಿದನು ಮಾತ್ರವಲ್ಲ ಭೂಮಿಯಲ್ಲಿದ್ದ ಮಾನವರಿಗೆ ತನ್ನ ಸಂದೇಶವನ್ನು ಮುಟ್ಟಿಸಲೂ ಅವನನ್ನು ಬಳಸಿದನು. ಯೇಸು ವಾಕ್ಯವಾಗಿದ್ದಾನೆ ಅಂದರೆ ದೇವರ ವಕ್ತಾರನಾಗಿದ್ದಾನೆ ಎಂಬ ವಾಸ್ತವಾಂಶವು ಅವನು ತನ್ನ ಯೆಹೂದಿ ಕೇಳುಗರಿಗೆ ಹೇಳಿದ ಈ ಮಾತುಗಳಿಂದ ವ್ಯಕ್ತವಾಗುತ್ತದೆ: “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು. ಆತನ ಚಿತ್ತದಂತೆ ನಡೆಯುವದಕ್ಕೆ ಯಾರಿಗೆ ಮನಸ್ಸದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದದ್ದೋ ನಾನೇ ಕಲ್ಪಿಸಿ ಹೇಳಿದ್ದೋ ಗೊತ್ತಾಗುವದು.” (ಯೋಹಾ. 7:16, 17) ಯೇಸು ಸ್ವರ್ಗೀಯ ಮಹಿಮೆಗೆ ಹಿಂದಿರುಗಿದ ನಂತರವೂ “ದೇವರ ವಾಕ್ಯ” ಎಂಬ ಬಿರುದು ಅವನಿಗೆ ಅನ್ವಯವಾಗುತ್ತದೆ.​—⁠ಪ್ರಕ. 19:11, 13, 16.

7 ಈ ಬಿರುದು ಏನನ್ನು ಸೂಚಿಸುತ್ತದೆಂಬುದನ್ನು ಸ್ವಲ್ಪ ಯೋಚಿಸಿ. ಯೆಹೋವನ ಸೃಷ್ಟಿಯಲ್ಲಿ ಯೇಸುವಿಗಿರುವಷ್ಟು ವಿವೇಕ ಯಾರಿಗೂ ಇಲ್ಲ. ಆದರೂ ಅವನು ತನ್ನ ಸ್ವಂತ ವಿವೇಕದ ಮೇಲೆ ಆತುಕೊಳ್ಳುವುದಿಲ್ಲ. ತನ್ನ ತಂದೆ ಉಪದೇಶಿಸಿದ್ದನ್ನೇ ಅವನು ಬೋಧಿಸುತ್ತಾನೆ. ಯಾವಾಗಲೂ, ಇತರರ ಗಮನವನ್ನು ತನ್ನ ಕಡೆಗಲ್ಲ ಬದಲಾಗಿ ಯೆಹೋವನ ಕಡೆಗೆ ಸೆಳೆಯುತ್ತಾನೆ. (ಯೋಹಾ. 12:50) ಅನುಕರಿಸಲು ಎಷ್ಟೊಂದು ಉತ್ತಮ ಮಾದರಿ! “ಶುಭದ ಸುವಾರ್ತೆಯನ್ನು ಸಾರುವ” ಅಮೂಲ್ಯ ಸುಯೋಗ ನಮಗೂ ಇದೆ. (ರೋಮಾ. 10:15) ದೀನತೆಯ ವಿಷಯದಲ್ಲಿ ಯೇಸುವಿಟ್ಟ ಮಾದರಿಯನ್ನು ನಾವು ಗಣ್ಯಮಾಡುವಲ್ಲಿ ನಾವು ನಮ್ಮ ಸ್ವಂತದ್ದನ್ನು ಬೋಧಿಸದಿರುವೆವು. ಬೈಬಲಿನ ಜೀವರಕ್ಷಕ ಸಂದೇಶವನ್ನು ತಿಳಿಯಪಡಿಸುವಾಗ ನಾವು ‘ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿಹೋಗಬಾರದು.’​—⁠1 ಕೊರಿಂ. 4:6.

“ಆಮೆನ್‌”

8 (ಪ್ರಕಟನೆ 3:14 ಓದಿ.) ಯೇಸುವನ್ನು “ಆಮೆನ್‌” ಎಂದು ಏಕೆ ಕರೆಯಲಾಗಿದೆ? “ಆಮೆನ್‌” ಎಂಬ ಹೀಬ್ರು ಪದದ ಅರ್ಥ “ಹಾಗೆಯೇ ಆಗಲಿ” ಅಥವಾ “ನಿಶ್ಚಯವಾಗಿಯೂ” ಎಂದಾಗಿದೆ. ಆಮೆನ್‌ ಎಂಬುದರ ಮೂಲಪದ, “ನಂಬಿಗಸ್ತ” ಅಥವಾ “ಭರವಸಾರ್ಹ” ಎಂಬರ್ಥ ಕೊಡುತ್ತದೆ. ಯೆಹೋವನ ನಂಬಿಗಸ್ತಿಕೆಯ ಕುರಿತು ಹೇಳುವಾಗಲೂ ಇದೇ ಪದ ಬಳಸಲಾಗಿದೆ. (ಧರ್ಮೋ. 7:9; ಯೆಶಾ. 49:7) ಹಾಗಾದರೆ ಯೇಸುವನ್ನು “ಆಮೆನ್‌” ಎಂದು ಕರೆಯುವಾಗ ಆತನು ಯಾವ ವಿಧದಲ್ಲಿ ಅದ್ವಿತೀಯನಾಗಿದ್ದಾನೆ? ಇದನ್ನು ಉತ್ತರಿಸುತ್ತಾ 2 ಕೊರಿಂಥ 1:19, 20 ಹೇಳುವುದು: “ನಿಮ್ಮಲ್ಲಿ ಪ್ರಸಿದ್ಧಿಪಡಿಸಿದ ದೇವರ ಮಗನಾದ ಯೇಸು ಕ್ರಿಸ್ತನು ಹೌದೆಂತಲೂ ಅಲ್ಲವೆಂತಲೂ ಎರಡು ಪ್ರಕಾರವಾಗಿರಲಿಲ್ಲ; ಆತನಲ್ಲಿ ಹೌದೆಂಬದೇ ನೆಲೆಗೊಂಡಿದೆ. ನಿಶ್ಚಯವಾಗಿ ದೇವರ ವಾಗ್ದಾನಗಳು ಎಷ್ಟಿದ್ದರೂ ಕ್ರಿಸ್ತನಲ್ಲೇ ದೃಢವಾಗುತ್ತವೆ. ಆದಕಾರಣ ದೇವರ ಪ್ರಭಾವವು ಪ್ರಕಾಶವಾಗುವದಕ್ಕೋಸ್ಕರ ಆತನ ಮೂಲಕವಾಗಿ ನಾವು ಆಮೆನ್‌ ಎಂದು ಹೇಳುತ್ತೇವೆ.”

9 ಎಲ್ಲ ದೈವಿಕ ವಾಗ್ದಾನಗಳ ಸಂಬಂಧದಲ್ಲಿ ಯೇಸುವನ್ನು “ಆಮೆನ್‌” ಎಂದು ಕರೆಯಲಾಗಿದೆ. ಅವನ ಯಜ್ಞಾರ್ಪಿತ ಮರಣವನ್ನು ಸೇರಿಸಿ ಭೂಮಿಯಲ್ಲಿ ಅವನ ದೋಷರಹಿತ ಜೀವನವು ಯೆಹೋವ ದೇವರ ಎಲ್ಲ ವಾಗ್ದಾನಗಳನ್ನು ಸ್ಥಿರಪಡಿಸಿತು ಮತ್ತು ಅವುಗಳ ನೆರವೇರಿಕೆಯನ್ನು ಸಾಧ್ಯಗೊಳಿಸಿತು. ಯೋಬ ಪುಸ್ತಕದಲ್ಲಿ ದಾಖಲಾಗಿರುವಂತೆ, ಬಡತನ, ಕಷ್ಟಗಳು ಮತ್ತು ಶೋಧನೆಗಳು ಎದುರಾಗುವಲ್ಲಿ ದೇವರ ಸೇವಕರು ಆತನಿಗೆ ತಿರುಗಿಬೀಳುವರು ಎಂಬುದು ಸೈತಾನನ ವಾದವಾಗಿತ್ತು. ಯೇಸುವಾದರೋ ನಂಬಿಗಸ್ತನಾಗಿ ಉಳಿಯುವ ಮೂಲಕ ಸೈತಾನನ ಈ ವಾದವನ್ನು ಸುಳ್ಳೆಂದು ತೋರಿಸಿಕೊಟ್ಟನು. (ಯೋಬ 1:6-12; 2:2-7) ದೇವರ ಎಲ್ಲ ಸೃಷ್ಟಿಜೀವಿಗಳ ಪೈಕಿ ಈ ಸವಾಲಿಗೆ ಅಲ್ಲಗಳೆಯಲಾಗದ ಉತ್ತರ ಕೊಡಶಕ್ತನಾಗಿದ್ದವನು ಆ ಜ್ಯೇಷ್ಠಪುತ್ರನು ಮಾತ್ರ. ಅಷ್ಟೇ ಅಲ್ಲ, ಈ ಮೂಲಕ ಅವನು ಯೆಹೋವನ ವಿಶ್ವ ಪರಮಾಧಿಕಾರದ ಯುಕ್ತತೆಯ ಕುರಿತ ಹೆಚ್ಚು ಮಹತ್ತಾದ ವಿವಾದಾಂಶದಲ್ಲಿ ತನ್ನ ತಂದೆಯ ಪರವಹಿಸಿದ್ದಾನೆಂಬುದಕ್ಕೆ ಅತ್ಯುತ್ಕೃಷ್ಟ ಸಾಕ್ಷ್ಯ ಕೊಟ್ಟನು.

10 “ಆಮೆನ್‌” ಎಂಬ ಯೇಸುವಿನ ಅದ್ವಿತೀಯ ಪಾತ್ರವನ್ನು ನಾವು ಹೇಗೆ ಅನುಕರಿಸಬಹುದು? ಯೆಹೋವನಿಗೆ ನಂಬಿಗಸ್ತರಾಗಿದ್ದು ಆತನ ವಿಶ್ವ ಪರಮಾಧಿಕಾರವನ್ನು ಬೆಂಬಲಿಸುವ ಮೂಲಕವೇ. ಹೀಗೆ ಮಾಡುವ ಮೂಲಕ, “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು” ಎಂದು ಜ್ಞಾನೋಕ್ತಿ 27:11ರಲ್ಲಿ ಮಾಡಲಾಗಿರುವ ಕೋರಿಕೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವೆವು.

“ಹೊಸ ಒಡಂಬಡಿಕೆಗೆ ಮಧ್ಯಸ್ಥ”

11 (1 ತಿಮೊಥೆಯ 2:5, 6 ಓದಿ.) ಯೇಸು “ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು,” ಅಂದರೆ “ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ.” (ಇಬ್ರಿ. 9:15; 12:24) ಮೋಶೆಯನ್ನು ಕೂಡ ಮಧ್ಯಸ್ಥನು ಅಂದರೆ ನಿಯಮದೊಡಂಬಡಿಕೆಯ ಮಧ್ಯಸ್ಥನು ಎನ್ನಲಾಗಿದೆ. (ಗಲಾ. 3:19) ಹೀಗಿರುವುದರಿಂದ, ಮಧ್ಯಸ್ಥನಾಗಿ ಯೇಸುವಿಗಿರುವ ಪಾತ್ರವೇ ಏಕೆ ಅದ್ವಿತೀಯವಾಗಿರಬೇಕು?

12 “ಮಧ್ಯಸ್ಥ” ಎಂದು ಭಾಷಾಂತರಿಸಲಾದ ಮೂಲಭಾಷಾ ಪದವು ಕಾನೂನು ಸಂಬಂಧಿತ ಪದವಾಗಿದೆ. ಇದು, ‘ದೇವರ ಇಸ್ರಾಯೇಲ್‌’ ಎಂಬ ಹೊಸ ರಾಷ್ಟ್ರದ ಜನನವನ್ನು ಶಕ್ತಗೊಳಿಸಿದ ಹೊಸ ಒಡಂಬಡಿಕೆಗೆ ಯೇಸು ಕಾನೂನುಬದ್ಧ ಮಧ್ಯಸ್ಥನೆಂದು ಸೂಚಿಸುತ್ತದೆ. (ಗಲಾ. 6:16) ಈ ರಾಷ್ಟ್ರದಲ್ಲಿ ಆತ್ಮಾಭಿಷಿಕ್ತ ಕ್ರೈಸ್ತರಿದ್ದಾರೆ ಮತ್ತು ಅವರು ಸ್ವರ್ಗದಲ್ಲಿ ‘ರಾಜವಂಶಸ್ಥರಾದ ಯಾಜಕರು’ ಆಗಿರುವರು. (1 ಪೇತ್ರ 2:9; ವಿಮೋ. 19:6) ಮೋಶೆ ಮಧ್ಯಸ್ಥನಾಗಿದ್ದ ಧರ್ಮಶಾಸ್ತ್ರದ ಒಡಂಬಡಿಕೆಯಿಂದ ಅಂಥ ಒಂದು ಜನಾಂಗದ ರಚನೆ ಸಾಧ್ಯವಾಗಲಿಲ್ಲ.

13 ಮಧ್ಯಸ್ಥನಾಗಿ ಯೇಸುವಿಗಿರುವ ಪಾತ್ರದಲ್ಲಿ ಏನು ಒಳಗೂಡಿದೆ? ಹೊಸ ಒಡಂಬಡಿಕೆಯೊಳಗೆ ತರಲ್ಪಟ್ಟವರಿಗೆ ಯೇಸುವಿನ ರಕ್ತದ ಮೌಲ್ಯವನ್ನು ಅನ್ವಯಿಸುವ ಮೂಲಕ ಯೆಹೋವನು ಕಾನೂನುಬದ್ಧ ವಿಧದಲ್ಲಿ ಅವರನ್ನು ನೀತಿವಂತರೆಂದು ಎಣಿಸುತ್ತಾನೆ. (ರೋಮಾ. 3:24; ಇಬ್ರಿ. 9:15) ಹೀಗೆ ಮಾಡುವುದರ ಮೂಲಕ ದೇವರು ಅವರನ್ನು ಸ್ವರ್ಗದಲ್ಲಿ ರಾಜರೂ ಯಾಜಕರೂ ಆಗುವ ಪ್ರತೀಕ್ಷೆಯೊಂದಿಗೆ ಹೊಸ ಒಡಂಬಡಿಕೆಯೊಳಗೆ ಸೇರಿಸಬಲ್ಲನು. ಅವರು ದೇವರ ಮುಂದೆ ಶುದ್ಧ ನಿಲುವನ್ನು ಕಾಪಾಡಿಕೊಳ್ಳುವಂತೆ ಯೇಸು ಮಧ್ಯಸ್ಥನಾಗಿ ಅವರಿಗೆ ಸಹಾಯ ಮಾಡುವನು.​—⁠ಇಬ್ರಿ. 2:16.

14 ಹೊಸ ಒಡಂಬಡಿಕೆಯಲ್ಲಿ ಸೇರಿರದ ಮತ್ತು ಹೀಗೆ ಸ್ವರ್ಗದಲ್ಲಲ್ಲ ಬದಲಾಗಿ ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆಯುಳ್ಳವರ ಕುರಿತೇನು? ಅವರು ಹೊಸ ಒಡಂಬಡಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ಅದರಿಂದ ಪ್ರಯೋಜನ ಪಡೆಯುತ್ತಾರೆ. ಅವರಿಗೆ ಪಾಪಗಳ ಕ್ಷಮೆ ಸಿಗುತ್ತದೆ ಮತ್ತು ಅವರು ದೇವರ ಸ್ನೇಹಿತರೋಪಾದಿ ನೀತಿವಂತರೆಂದು ಎಣಿಸಲ್ಪಡುತ್ತಾರೆ. (ಯಾಕೋ. 2:23; 1 ಯೋಹಾ. 2:1, 2) ನಮಗೆ ಸ್ವರ್ಗೀಯ ನಿರೀಕ್ಷೆಯಿರಲಿ ಭೂನಿರೀಕ್ಷೆಯಿರಲಿ, ಹೊಸ ಒಡಂಬಡಿಕೆಯ ಮಧ್ಯಸ್ಥನಾಗಿ ಯೇಸುವಿಗಿರುವ ಪಾತ್ರವನ್ನು ಗಣ್ಯಮಾಡಲು ನಮ್ಮೆಲ್ಲರಿಗೆ ಸಕಾರಣವಿದೆ.

ಮಹಾ ಯಾಜಕ

15 ಹಿಂದೆ ಹಲವರು ಮಹಾ ಯಾಜಕರಾಗಿ ಸೇವೆ ಸಲ್ಲಿಸಿದ್ದಾರೆ. ಆದರೂ ಮಹಾ ಯಾಜಕನಾಗಿ ಯೇಸುವಿಗಿರುವ ಪಾತ್ರ ಅದ್ವಿತೀಯವಾದುದಾಗಿದೆ. ಅದು ಹೇಗೆ? ಪೌಲನು ವಿವರಿಸುವುದು: “ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆ ಮೇಲೆ ಜನರ ಪಾಪಪರಿಹಾರಕ್ಕಾಗಿ ಸಮರ್ಪಣೆಮಾಡುವ ಲೇವಿಕ ಮಹಾಯಾಜಕರಂತೆ ಈತನು ಪ್ರತಿನಿತ್ಯವೂ ಸಮರ್ಪಿಸಬೇಕಾದ ಅವಶ್ಯವಿಲ್ಲ. ಈತನು ತನ್ನನ್ನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. ಧರ್ಮಶಾಸ್ತ್ರವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇಮಿಸುತ್ತದೆ; ಆದರೆ ಧರ್ಮಶಾಸ್ತ್ರದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ನೇಮಿಸುತ್ತದೆ.”​—⁠ಇಬ್ರಿ. 7:27, 28. *

16 ಯೇಸು ಪರಿಪೂರ್ಣ ಮಾನವನಾಗಿದ್ದನು. ಅಂದರೆ, ಆದಾಮನು ಪಾಪಗೈಯುವ ಮುಂಚೆ ಹೇಗಿದ್ದನೋ ಹಾಗಿದ್ದನು. (1 ಕೊರಿಂ. 15:45) ಆದ್ದರಿಂದಲೇ, ಮಾನವರ ಪೈಕಿ ಯೇಸು ಮಾತ್ರ ಒಂದು ಪರಿಪೂರ್ಣ ಯಜ್ಞವನ್ನು ಕೊಡಶಕ್ತನಿದ್ದನು. ಇದು ಪುನಃ ಪುನಃ ಅರ್ಪಿಸುವ ಅಗತ್ಯವಿಲ್ಲದಂಥ ರೀತಿಯ ಯಜ್ಞವಾಗಿತ್ತು. ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಪ್ರತಿದಿನ ಯಜ್ಞಗಳನ್ನು ಅರ್ಪಿಸಲಾಗುತ್ತಿತ್ತಾದರೂ ಆ ಯಜ್ಞಗಳು ಹಾಗೂ ಯಾಜಕ ಸೇವೆಯು ಯೇಸು ಏನನ್ನು ಪೂರೈಸಲಿದ್ದನೋ ಅದರ ಮುನ್‌ಛಾಯೆಯಾಗಿತ್ತು ಅಷ್ಟೇ. (ಇಬ್ರಿ. 8:5; 10:1) ಯೇಸು ಇತರ ಮಹಾ ಯಾಜಕರಿಗಿಂತಲೂ ಎಷ್ಟೋ ಹೆಚ್ಚಿನದ್ದನ್ನು ಪೂರೈಸುವುದರಿಂದ ಮತ್ತು ಆ ಸ್ಥಾನದಲ್ಲಿ ಸದಾಕಾಲ ಉಳಿಯುವುದರಿಂದ ಮಹಾ ಯಾಜಕನಾಗಿ ಅವನಿಗಿರುವ ಪಾತ್ರ ನಿಜಕ್ಕೂ ಅದ್ವಿತೀಯವಾಗಿದೆ.

17 ದೇವರ ಮುಂದೆ ಉತ್ತಮ ನಿಲುವನ್ನು ಹೊಂದಲು ನಮಗೆ, ಮಹಾ ಯಾಜಕನಾಗಿ ಯೇಸು ಸಲ್ಲಿಸುತ್ತಿರುವ ಸೇವೆ ಅವಶ್ಯ. ಎಷ್ಟೊಂದು ಉತ್ತಮ ಮಹಾ ಯಾಜಕ ನಮಗಿದ್ದಾನೆ! ಪೌಲನು ಬರೆದದ್ದು: “ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ.” (ಇಬ್ರಿ. 4:15) ಈ ವಾಸ್ತವಾಂಶವನ್ನು ನಾವು ಅಂಗೀಕರಿಸುವಲ್ಲಿ, ‘ಇನ್ನು ಮೇಲೆ ನಮಗಾಗಿ ಜೀವಿಸದೆ ನಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಲು’ ನಾವು ಪ್ರೇರಿಸಲ್ಪಡುವೆವು.​—⁠2 ಕೊರಿಂ. 5:14, 15; ಲೂಕ 9:23.

ಮುಂತಿಳಿಸಲಾದ “ಸಂತಾನ”

18 ಮಾನವಕುಲವು ಏದೆನ್‌ನಲ್ಲಿ ದೇವರೊಂದಿಗಿನ ಶುದ್ಧ ನಿಲುವು, ನಿತ್ಯಜೀವ, ಸಂತೋಷ ಮತ್ತು ಪರದೈಸ್‌ ಹೀಗೆ ಎಲ್ಲವನ್ನು ಕಳೆದುಕೊಂಡಂತೆ ತೋರಿದಾಗ ಯೆಹೋವ ದೇವರು ಒಬ್ಬ ವಿಮೋಚಕನ ಕುರಿತು ಮುಂತಿಳಿಸಿದನು. ಈತನನ್ನು “ಸಂತಾನ” ಎಂದು ಕರೆಯಲಾಯಿತು. (ಆದಿ. 3:15) ರಹಸ್ಯವಾಗಿದ್ದ ಈ ಸಂತಾನದ ಕುರಿತ ಮಾಹಿತಿಯು ಹಲವಾರು ವರ್ಷಗಳ ತನಕ ಬೈಬಲ್‌ ಪ್ರವಾದನೆಗಳ ಮುಖ್ಯ ವಿಷಯವಾಯಿತು. ಈ ಸಂತಾನ ಅಬ್ರಹಾಮ, ಇಸಾಕ ಮತ್ತು ಯಾಕೋಬರ ವಂಶಜನಾಗಿರಲಿದ್ದನು. ಅಲ್ಲದೆ ಅವನು ರಾಜ ದಾವೀದನ ವಂಶದಲ್ಲಿ ಹುಟ್ಟಿಬರಲಿದ್ದನು.​—⁠ಆದಿ. 21:12; 22:16-18; 28:14; 2 ಸಮು. 7:12-16.

19 ಈ ವಾಗ್ದತ್ತ ಸಂತಾನ ಯಾರು? ಈ ಪ್ರಶ್ನೆಗೆ ಉತ್ತರ ಗಲಾತ್ಯ 3:16ರಲ್ಲಿದೆ. (ಓದಿ.) ಅಲ್ಲದೆ, ಅದೇ ಅಧ್ಯಾಯದಲ್ಲಿ ಅಪೊಸ್ತಲ ಪೌಲನು ಅಭಿಷಿಕ್ತ ಕ್ರೈಸ್ತರಿಗೆ ತಿಳಿಸುವುದು: “ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರೂ ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.” (ಗಲಾ. 3:29) ಯೇಸು ವಾಗ್ದತ್ತ ಸಂತಾನವಾಗಿರುವುದು ಮತ್ತು ಅದೇ ಸಮಯದಲ್ಲಿ ಅದರಲ್ಲಿ ಇತರರೂ ಒಳಗೂಡಿರುವುದು ಹೇಗೆ?

20 ಲಕ್ಷಗಟ್ಟಲೆ ಜನರು ತಾವು ಅಬ್ರಹಾಮನ ಸಂತತಿಯವರೆಂದು ಹೇಳಿಕೊಳ್ಳುತ್ತಾರೆ. ಕೆಲವರಂತೂ ಪ್ರವಾದಿಗಳಂತೆಯೂ ವರ್ತಿಸುತ್ತಾರೆ. ಕೆಲವು ಧರ್ಮಗಳು ತಮ್ಮ ಪ್ರವಾದಿಗಳು ಅಬ್ರಹಾಮನ ಸಂತತಿಯವರೆಂದು ಹೇಳಿಕೊಳ್ಳುತ್ತವೆ. ಆದರೆ ಇವರೆಲ್ಲರೂ ವಾಗ್ದತ್ತ ಸಂತಾನವಾಗಿದ್ದಾರೋ? ಇಲ್ಲ. ಏಕೆಂದರೆ, ಅಬ್ರಹಾಮನ ಸಂತತಿಯ ಎಲ್ಲರೂ ಮುಂತಿಳಿಸಲ್ಪಟ್ಟ ಸಂತಾನವಾಗಿರಲು ಸಾಧ್ಯವಿಲ್ಲ ಎಂದು ಅಪೊಸ್ತಲ ಪೌಲನು ದೇವಪ್ರೇರಣೆಯಿಂದ ಹೇಳಿದ್ದಾನೆ. ಮಾನವಕುಲವನ್ನು ಆಶೀರ್ವದಿಸಲು ಅಬ್ರಹಾಮನ ಇತರ ಪುತ್ರರ ಸಂತತಿಯವರನ್ನು ಉಪಯೋಗಿಸಲಾಗಿಲ್ಲ. ಆಶೀರ್ವಾದಗಳನ್ನು ತರಲಿದ್ದ ಆ ಸಂತಾನವು ಕೇವಲ ಇಸಾಕನ ಮೂಲಕ ಬರಲಿತ್ತು. (ಇಬ್ರಿ. 11:17, 18) ಅಂತಿಮವಾಗಿ, ಕೇವಲ ಒಬ್ಬ ಪುರುಷನು ಅಂದರೆ ಯೇಸು ಕ್ರಿಸ್ತನು ಮುಂತಿಳಿಸಲಾಗಿರುವ ಸಂತಾನದ ಪ್ರಧಾನ ಭಾಗವಾದನು. * ಅವನು ಅಬ್ರಹಾಮನ ವಂಶಜನೆಂಬ ದಾಖಲೆ ಬೈಬಲ್‌ನಲ್ಲಿದೆ. ಅನಂತರ ಇತರರು, ‘ಕ್ರಿಸ್ತನವರು’ ಆಗಿರುವುದರಿಂದ ಅಬ್ರಹಾಮನ ಸಂತತಿಯ ದ್ವಿತೀಯ ಭಾಗವಾದರು. ಹೌದು, ಈ ಪ್ರವಾದನೆಯನ್ನು ನೆರವೇರಿಸುವುದರಲ್ಲಿ ಯೇಸುವಿನ ಪಾತ್ರ ನಿಜಕ್ಕೂ ಅದ್ವಿತೀಯವಾಗಿದೆ.

21 ಯೆಹೋವನ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರದ ಕುರಿತ ಸಂಕ್ಷಿಪ್ತ ಚರ್ಚೆಯಿಂದ ನಾವೇನನ್ನು ಕಲಿತೆವು? ಅವನ ಸೃಷ್ಟಿಯಾದಂದಿನಿಂದಲೂ, ದೇವರ ಒಬ್ಬನೇ ಮಗನು ನಿಜಕ್ಕೂ ಅದ್ವಿತೀಯನೂ ಏಕಮಾತ್ರನೂ ಆಗಿದ್ದಾನೆ. ಹಾಗಿದ್ದರೂ, ದೇವರ ಅದ್ವಿತೀಯ ಮಗನಾದ ಯೇಸು ತನ್ನನ್ನು ಮಹಿಮೆಪಡಿಸಿಕೊಳ್ಳಲು ಪ್ರಯತ್ನಿಸದೇ ಯಾವಾಗಲೂ ತನ್ನ ತಂದೆಯ ಚಿತ್ತಕ್ಕೆ ಹೊಂದಿಕೆಯಲ್ಲಿ ದೀನತೆಯಿಂದ ಸೇವೆ ಸಲ್ಲಿಸುತ್ತಾನೆ. (ಯೋಹಾ. 5:41; 8:50) ಇಂದು ನಮಗೆ ಎಷ್ಟೊಂದು ಶ್ರೇಷ್ಠ ಮಾದರಿಯಿದು! ಯೇಸುವಿನಂತೆಯೇ ‘ಎಲ್ಲವನ್ನೂ ದೇವರ ಘನತೆಗಾಗಿ ಮಾಡುವುದು’ ನಮ್ಮ ಗುರಿಯಾಗಿರಲಿ.​—⁠1 ಕೊರಿಂ. 10:31.

[ಪಾದಟಿಪ್ಪಣಿಗಳು]

^ ಪ್ಯಾರ. 22 ಒಬ್ಬ ಬೈಬಲ್‌ ವಿದ್ವಾಂಸನಿಗನುಸಾರ “ಒಂದೇ ಸಾರಿ” ಎಂದು ಭಾಷಾಂತರಿಸಲಾಗಿರುವ ಪದವು, “ಯೇಸುವಿನ ಮರಣ ಖಚಿತವಾದದ್ದು, ಅದ್ವಿತೀಯವಾದದ್ದು ಅಥವಾ ವಿಶಿಷ್ಟವಾದದ್ದು” ಎಂಬ ಮಹತ್ತ್ವಪೂರ್ಣ ಬೈಬಲ್‌-ವಿಚಾರವನ್ನು ವ್ಯಕ್ತಪಡಿಸುತ್ತದೆ.

^ ಪ್ಯಾರ. 28 ಸಾ.ಶ. ಪ್ರಥಮ ಶತಮಾನದಲ್ಲಿದ್ದ ಯೆಹೂದ್ಯರು, ತಾವು ಅಬ್ರಹಾಮನ ಸಂತಾನದವರಾಗಿರುವುದರಿಂದ ಅನುಗ್ರಹಿತ ಜನರಾಗುವೆವೆಂದು ಎಣಿಸಿದರಾದರೂ, ತಮ್ಮೊಳಗಿಂದ ಒಬ್ಬ ವ್ಯಕ್ತಿ ಮಾತ್ರ ಮೆಸ್ಸೀಯನಾಗಿ ಇಲ್ಲವೇ ಕ್ರಿಸ್ತನಾಗಿ ಬರುವನೆಂದು ಎದುರುನೋಡುತ್ತಿದ್ದರು.​—⁠ಯೋಹಾ. 1:25; 7:41, 42; 8:39-41.

ನಿಮಗೆ ನೆನಪಿದೆಯೇ?

• ಯೇಸುವಿಗಿರುವ ಬಿರುದುಗಳಿಂದ ಆತನ ಅದ್ವಿತೀಯ ಪಾತ್ರದ ಕುರಿತು ನೀವೇನನ್ನು ಕಲಿತಿರಿ? (ಚೌಕ ನೋಡಿ.)

• ಯೆಹೋವನ ಅದ್ವಿತೀಯ ಪುತ್ರನ ಮಾದರಿಯನ್ನು ನೀವು ಹೇಗೆ ಅನುಕರಿಸಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

1, 2. ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಪರಿಗಣಿಸಲು ನಾವೇಕೆ ಆಸಕ್ತಿವಹಿಸಬೇಕು?

3, 4. (ಎ) ಒಬ್ಬನೇ ಮಗನಾಗಿ ಯೇಸುವಿನ ಪಾತ್ರ ಅದ್ವಿತೀಯವಾದುದೆಂದು ನಾವು ಹೇಗೆ ಹೇಳಬಲ್ಲೆವು? (ಬಿ) ಸೃಷ್ಟಿಕಾರ್ಯದಲ್ಲಿ ಯೇಸುವಿನ ಪಾತ್ರ ಹೇಗೆ ಅದ್ವಿತೀಯವಾಗಿದೆ?

5. ಯೇಸು ಅದ್ವಿತೀಯನೆಂಬುದನ್ನು ಬೈಬಲ್‌ ಹೇಗೆ ಎತ್ತಿತೋರಿಸುತ್ತದೆ?

6. ಯೇಸುವನ್ನು “ವಾಕ್ಯ” ಎಂದು ಕರೆದಿರುವುದು ಸೂಕ್ತವೇಕೆ?

7. ಯೇಸು “ವಾಕ್ಯ” ಎಂಬ ತನ್ನ ಪಾತ್ರವನ್ನು ನಿರ್ವಹಿಸುವಾಗ ತೋರಿಸುವ ದೀನತೆಯನ್ನು ನಾವು ಹೇಗೆ ಅನುಕರಿಸಬಲ್ಲೆವು?

8, 9. (ಎ) “ಆಮೆನ್‌” ಎಂಬ ಪದದ ಅರ್ಥವೇನು, ಮತ್ತು ಯೇಸುವನ್ನು ಹಾಗೆ ಕರೆಯಲಾಗಿರುವುದೇಕೆ? (ಬಿ) “ಆಮೆನ್‌” ಎಂಬ ತನ್ನ ಪಾತ್ರವನ್ನು ಯೇಸು ಹೇಗೆ ನೆರವೇರಿಸಿದನು?

10. “ಆಮೆನ್‌” ಎಂಬ ಯೇಸುವಿನ ಅದ್ವಿತೀಯ ಪಾತ್ರವನ್ನು ನಾವು ಹೇಗೆ ಅನುಕರಿಸಬಹುದು?

11, 12. ಮಧ್ಯಸ್ಥನಾಗಿ ಯೇಸುವಿಗಿರುವ ಪಾತ್ರ ಹೇಗೆ ಅದ್ವಿತೀಯವಾಗಿದೆ?

13. ಮಧ್ಯಸ್ಥನಾಗಿ ಯೇಸುವಿಗಿರುವ ಪಾತ್ರದಲ್ಲಿ ಏನು ಒಳಗೂಡಿದೆ?

14. ಕ್ರೈಸ್ತರಿಗೆ ಯಾವುದೇ ನಿರೀಕ್ಷೆಯಿರಲಿ, ಮಧ್ಯಸ್ಥನಾಗಿ ಯೇಸುವಿಗಿರುವ ಪಾತ್ರವನ್ನು ಅವರೆಲ್ಲರೂ ಏಕೆ ಗಣ್ಯಮಾಡಬೇಕು?

15. ಮಹಾ ಯಾಜಕನಾಗಿ ಯೇಸುವಿಗಿರುವ ಪಾತ್ರವು ಮಹಾ ಯಾಜಕರಾಗಿ ಸೇವೆ ಸಲ್ಲಿಸಿದ ಇತರರಿಗಿಂತ ಹೇಗೆ ಭಿನ್ನವಾಗಿದೆ?

16. ಯೇಸುವಿನ ಯಜ್ಞ ಏಕೆ ನಿಜಕ್ಕೂ ಅದ್ವಿತೀಯವಾಗಿದೆ?

17. ನಮ್ಮ ಮಹಾ ಯಾಜಕನಾಗಿ ಯೇಸುವಿನ ಪಾತ್ರವನ್ನು ನಾವೇಕೆ ಗಣ್ಯಮಾಡಬೇಕು, ಮತ್ತು ನಾವದನ್ನು ಹೇಗೆ ಮಾಡಬಲ್ಲೆವು?

18. ಆದಾಮನು ಪಾಪ ಮಾಡಿದ ನಂತರ ಯಾವ ಪ್ರವಾದನೆಯನ್ನು ಉಚ್ಚರಿಸಲಾಯಿತು, ಮತ್ತು ನಂತರ ಆ ಪ್ರವಾದನೆಯ ಕುರಿತು ಏನನ್ನು ಪ್ರಕಟಪಡಿಸಲಾಯಿತು?

19, 20. (ಎ) ವಾಗ್ದತ್ತ ಸಂತಾನ ಯಾರು? (ಬಿ) ಮುಂತಿಳಿಸಲಾದ ಸಂತಾನದಲ್ಲಿ ಯೇಸುವಲ್ಲದೆ ಇತರರೂ ಇರುವರೆಂದು ಹೇಗೆ ಹೇಳಬಹುದು?

21. ದೇವರ ಉದ್ದೇಶದಲ್ಲಿ ಯೇಸು ತನ್ನ ಅದ್ವಿತೀಯ ಪಾತ್ರ ಪೂರೈಸಿದ ವಿಧದಲ್ಲಿ ನಿಮಗೆ ಯಾವುದು ಹಿಡಿಸಿತು?

[ಪುಟ 15ರಲ್ಲಿರುವ ಚೌಕ/ಚಿತ್ರ]

ದೇವರ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರವನ್ನು ಸೂಚಿಸುವ ಬಿರುದುಗಳು

ಒಬ್ಬನೇ ಮಗ. (ಯೋಹಾ. 1:3) ಯೇಸುವೊಬ್ಬನನ್ನು ಮಾತ್ರ ಅವನ ತಂದೆ ನೇರವಾಗಿ ಸೃಷ್ಟಿಸಿದ್ದನು.

ವಾಕ್ಯ. (ಯೋಹಾ. 1:14) ಇತರ ಜೀವಿಗಳಿಗೆ ಮಾಹಿತಿ ಮತ್ತು ನಿರ್ದೇಶನಗಳನ್ನು ನೀಡಲು ಯೆಹೋವನು ತನ್ನ ಪುತ್ರನನ್ನು ವಕ್ತಾರನಾಗಿ ಉಪಯೋಗಿಸುತ್ತಾನೆ.

ಆಮೆನ್‌. (ಪ್ರಕ. 3:14) ಯೇಸುವಿನ ಯಜ್ಞಾರ್ಪಿತ ಮರಣವನ್ನು ಸೇರಿಸಿ ಭೂಮಿಯಲ್ಲಿ ಅವನ ದೋಷರಹಿತ ಜೀವನವು ಯೆಹೋವ ದೇವರ ಎಲ್ಲ ವಾಗ್ದಾನಗಳನ್ನು ಸ್ಥಿರಪಡಿಸಿತು ಮತ್ತು ಅವುಗಳ ನೆರವೇರಿಕೆಯನ್ನು ಸಾಧ್ಯಗೊಳಿಸಿತು.

ಹೊಸ ಒಡಂಬಡಿಕೆಗೆ ಮಧ್ಯಸ್ಥ. (1 ತಿಮೊ. 2:5, 6) ಕಾನೂನುಬದ್ಧ ಮಧ್ಯಸ್ಥನಾದ ಯೇಸುವಿನಿಂದಾಗಿ, ‘ದೇವರ ಇಸ್ರಾಯೇಲ್‌’ ಎಂಬ ಹೊಸ ರಾಷ್ಟ್ರದ ಜನನ ಸಾಧ್ಯವಾಗಿದೆ. ಸ್ವರ್ಗದಲ್ಲಿ ‘ರಾಜವಂಶಸ್ಥರಾದ ಯಾಜಕರು’ ಆಗಲಿರುವ ಕ್ರೈಸ್ತರು ಈ ರಾಷ್ಟ್ರದಲ್ಲಿದ್ದಾರೆ.​—⁠ಗಲಾ. 6:16; 1 ಪೇತ್ರ 2:9.

ಮಹಾ ಯಾಜಕ. (ಇಬ್ರಿ. 7:27, 28) ಮಾನವರ ಪೈಕಿ ಯೇಸು ಮಾತ್ರ ಒಂದು ಪರಿಪೂರ್ಣ ಯಜ್ಞವನ್ನು ಕೊಡಶಕ್ತನಿದ್ದನು. ಇದು ಪುನಃ ಪುನಃ ಅರ್ಪಿಸುವ ಅಗತ್ಯವಿಲ್ಲದಂಥ ರೀತಿಯ ಯಜ್ಞವಾಗಿತ್ತು. ಪಾಪ ಮತ್ತು ಅದರಿಂದಾಗಿ ಬರುವ ಮರಣದಿಂದ ಆತನು ನಮ್ಮನ್ನು ಬಿಡಿಸಶಕ್ತನು.

ವಾಗ್ದತ್ತ ಸಂತಾನ. (ಆದಿ. 3:15) ಕೇವಲ ಒಬ್ಬ ಪುರುಷನು ಅಂದರೆ ಯೇಸು ಕ್ರಿಸ್ತನು, ಮುಂತಿಳಿಸಲಾಗಿರುವ ಸಂತಾನದ ಪ್ರಧಾನ ಭಾಗವಾದನು. ಅನಂತರ ಇತರರು, ‘ಕ್ರಿಸ್ತನವರು’ ಆಗಿರುವುದರಿಂದ ಅಬ್ರಹಾಮನ ಸಂತತಿಯ ದ್ವಿತೀಯ ಭಾಗವಾದರು.​—⁠ಗಲಾ. 3:29.