ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಸಮಗ್ರತೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವಿರೋ?

ನಿಮ್ಮ ಸಮಗ್ರತೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವಿರೋ?

ನಿಮ್ಮ ಸಮಗ್ರತೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವಿರೋ?

“ಸಾಯುವ ತನಕ ನನ್ನ ಯಥಾರ್ಥತ್ವದ [“ಸಮಗ್ರತೆಯ,” NW] ಹೆಸರನ್ನು ಕಳಕೊಳ್ಳೆನು.”​—⁠ಯೋಬ 27:⁠5.

ನೀವೊಂದು ಮನೆಯ ನಕ್ಷೆಯನ್ನು ನೋಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಮನೆಯ ವಿನ್ಯಾಸ ನಿಮಗೆ ತುಂಬ ಹಿಡಿಸುತ್ತದೆ. ಆ ಮನೆಯಿಂದ ನಿಮಗೂ ನಿಮ್ಮ ಕುಟುಂಬಕ್ಕೂ ಎಷ್ಟೆಲ್ಲ ಪ್ರಯೋಜನವಾಗಲಿದೆ ಎಂಬುದರ ಕುರಿತು ಯೋಚಿಸಿಯೂ ನಿಮಗೆ ಖುಷಿಯಾಗುತ್ತದೆ. ಆದರೆ ನೀವು ಆ ನಕ್ಷೆಯ ಕುರಿತು ಬರೀ ಯೋಚಿಸುತ್ತಾ ಇರುವಲ್ಲಿ ಏನೂ ಪ್ರಯೋಜನವಾಗದು. ಆ ಮನೆ ಕಟ್ಟಿ, ಅದರಲ್ಲಿ ವಾಸಿಸಲಾರಂಭಿಸಿ, ಅದನ್ನು ಸುಸ್ಥಿತಿಯಲ್ಲಿಟ್ಟರೆ ಮಾತ್ರ ಆ ನಕ್ಷೆಯಿಂದ ಒಳಿತಾಗುವುದು, ಅಲ್ಲವೇ?

2 ಅದೇ ರೀತಿಯಲ್ಲಿ, ಸಮಗ್ರತೆ ಎಂಬ ಗುಣ ನಮಗೆ ತುಂಬ ಹಿಡಿಸಬಹುದು. ಅದೊಂದು ಅತ್ಯಾವಶ್ಯಕ ಗುಣವೆಂದೂ, ಅದರಿಂದ ನಮಗೂ ನಮ್ಮ ಪ್ರಿಯಜನರಿಗೂ ಬಹಳ ಒಳಿತಾಗುವುದೆಂದು ನಾವು ಒಪ್ಪಿಕೊಳ್ಳಬಹುದು. ಆದರೆ ಸಮಗ್ರತೆಯ ಬಗ್ಗೆ ಬರೀ ಮೆಚ್ಚುಗೆ ವ್ಯಕ್ತಪಡಿಸುವುದರಿಂದ ನಮಗೇನೂ ಪ್ರಯೋಜನವಾಗದು. ನಾವು ಕ್ರೈಸ್ತ ಸಮಗ್ರತೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಅದನ್ನು ಕಾಪಾಡಿಕೊಳ್ಳಬೇಕು. ಇಂದಿನ ಜಗತ್ತಿನಲ್ಲಿ, ಒಂದು ಕಟ್ಟಡ ಕಟ್ಟುವುದು ತುಂಬ ದುಬಾರಿ ಕೆಲಸ. (ಲೂಕ 14:​28, 29) ಹಾಗೆಯೇ ನಮ್ಮ ಸಮಗ್ರತೆಯನ್ನು ಬೆಳೆಸಿಕೊಳ್ಳಲು ಸಮಯ ಹಾಗೂ ಪ್ರಯತ್ನ ವ್ಯಯವಾಗುತ್ತದೆ. ಆದರೂ ಅದು ಸಾರ್ಥಕ. ಆದುದರಿಂದ ನಾವೀಗ ಮೂರು ಪ್ರಶ್ನೆಗಳನ್ನು ಚರ್ಚಿಸೋಣ: ನಾವು ಹೇಗೆ ಸಮಗ್ರತೆ ಪಾಲಕರಾಗಿರಬಲ್ಲೆವು? ನಮ್ಮ ಕ್ರೈಸ್ತ ಸಮಗ್ರತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು? ಯಾರಾದರೂ ಸಮಗ್ರತೆ ಕಾಪಾಡಿಕೊಳ್ಳಲು ತಪ್ಪಿಹೋಗುವಲ್ಲಿ ಅವರೇನು ಮಾಡಬಲ್ಲರು?

ನಾವು ಹೇಗೆ ಸಮಗ್ರತೆ ಪಾಲಕರಾಗಿರಬಲ್ಲೆವು?

3 ಸಮಗ್ರತೆ ಪಾಲಕರಾಗಿರುವೆವೋ ಇಲ್ಲವೋ ಎಂಬುದನ್ನು ಸ್ವತಃ ನಿರ್ಣಯಿಸುವ ಸುಯೋಗವನ್ನು ಕೊಟ್ಟು ಯೆಹೋವನು ನಮ್ಮನ್ನು ಗೌರವಿಸುತ್ತಾನೆ ಎಂಬುದನ್ನು ಹಿಂದಿನ ಲೇಖನದಲ್ಲಿ ನೋಡಿದೆವು. ಆದರೆ ಸಂತೋಷದ ಸಂಗತಿಯೇನೆಂದರೆ, ಸಮಗ್ರತೆ ಪಾಲಿಸುವ ವಿಷಯದಲ್ಲಿ ಆತನು ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟಿಲ್ಲ. ಈ ಅಮೂಲ್ಯ ಗುಣವನ್ನು ನಾವು ಹೇಗೆ ಬೆಳೆಸಿಕೊಳ್ಳಬೇಕೆಂಬುದನ್ನು ಆತನು ಕಲಿಸುತ್ತಾನೆ ಮತ್ತು ತನ್ನ ಬೋಧನೆಗಳನ್ನು ನಾವು ಅನ್ವಯಿಸಿಕೊಳ್ಳುವಂತೆ ತನ್ನ ಪವಿತ್ರಾತ್ಮವನ್ನೂ ನಮಗೆ ಉದಾರವಾಗಿ ಕೊಡುತ್ತಾನೆ. (ಲೂಕ 11:13) ಸಮಗ್ರತೆ ಪಾಲಿಸಲು ಪ್ರಯತ್ನಿಸುವವರಿಗೆ ಆತನು ಆಧ್ಯಾತ್ಮಿಕ ಸಂರಕ್ಷಣೆಯನ್ನೂ ಕೊಡುತ್ತಾನೆ.​—⁠ಜ್ಞಾನೋ. 2:⁠7.

4 ಸಮಗ್ರತೆ ಪಾಲಕರಾಗಿರುವಂತೆ ಯೆಹೋವನು ನಮಗೆ ಹೇಗೆ ಕಲಿಸಿದ್ದಾನೆ? ಸರ್ವಶ್ರೇಷ್ಠ ವಿಧಾನವು, ತನ್ನ ಮಗನಾದ ಯೇಸುವನ್ನು ಭೂಮಿಗೆ ಕಳುಹಿಸುವ ಮೂಲಕವೇ. ಯೇಸುವಿನ ಜೀವನಕ್ರಮವು ಪರಿಪೂರ್ಣ ವಿಧೇಯತೆಯನ್ನು ಪ್ರತಿಬಿಂಬಿಸಿತು. ಆತನು “ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” (ಫಿಲಿ. 2:⁠8) ತುಂಬ ಕಷ್ಟಕರವಾದ ವಿಷಯಗಳನ್ನು ಸೇರಿಸಿ ಪ್ರತಿಯೊಂದು ಸಂಗತಿಯಲ್ಲೂ ಆತನು ತನ್ನ ಸ್ವರ್ಗೀಯ ತಂದೆಗೆ ವಿಧೇಯನಾದನು. “ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ” ಎಂದಾತನು ಯೆಹೋವನಿಗೆ ಹೇಳಿದನು. (ಲೂಕ 22:42) ನಮ್ಮಲ್ಲಿ ಪ್ರತಿಯೊಬ್ಬರೂ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ನನಗೂ ಅದೇ ರೀತಿಯ ವಿಧೇಯ ಮನೋವೃತ್ತಿ ಇದೆಯೋ?’ ಯೋಗ್ಯ ಇರಾದೆಗಳೊಂದಿಗೆ ವಿಧೇಯತೆ ತೋರಿಸುವ ಮೂಲಕ ನಾವು ಸಮಗ್ರತೆ ಪಾಲಕರಾಗಬಲ್ಲೆವು. ವಿಧೇಯತೆಯು ವಿಶೇಷವಾಗಿ ಪ್ರಾಮುಖ್ಯವಾಗಿರುವ ಕೆಲವೊಂದು ಕ್ಷೇತ್ರಗಳನ್ನು ಪರಿಗಣಿಸಿರಿ.

5 ನಾವು ಒಬ್ಬರೇ ಇರುವಾಗಲೂ ಯೆಹೋವನಿಗೆ ವಿಧೇಯರಾಗಿರಬೇಕು. ಕೀರ್ತನೆಗಾರ ದಾವೀದನು, ತಾನು ಒಬ್ಬನೇ ಇದ್ದ ಸಂದರ್ಭಗಳಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರ ಮಹತ್ತ್ವವನ್ನು ಅರಿತುಕೊಂಡನು. (ಕೀರ್ತನೆ 101:2 ಓದಿ. *) ದಾವೀದನು ರಾಜನಾಗಿದ್ದರಿಂದ ಯಾವಾಗಲೂ ಅವನ ಸುತ್ತಮುತ್ತ ಜನರಿರುತ್ತಿದ್ದರು. ಎಷ್ಟೋ ಸಲ, ನೂರಾರು ಅಷ್ಟೇಕೆ ಸಾವಿರಾರು ಪ್ರೇಕ್ಷಕರೂ ಇದ್ದಿರಬೇಕು. (ಕೀರ್ತನೆ 26:12 ಹೋಲಿಸಿ.) ಇಂಥ ಸಮಯಗಳಲ್ಲಿ ಸಮಗ್ರತೆ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿತ್ತು, ಏಕೆಂದರೆ ರಾಜನಾಗಿ ಅವನು ತನ್ನ ಪ್ರಜೆಗಳಿಗೆ ಒಳ್ಳೇ ಮಾದರಿಯನ್ನಿಡಬೇಕಿತ್ತು. (ಧರ್ಮೋ. 17:​18, 19) ಆದರೆ ತಾನು ಒಬ್ಬನೇ ಇರುವಾಗ, ‘ಮನೆಯೊಳಗೆ’ ಇರುವಾಗಲೂ ಸಮಗ್ರತೆಯಿಂದ ನಡೆದುಕೊಳ್ಳಬೇಕೆಂಬುದನ್ನು ದಾವೀದನು ಕಲಿತುಕೊಂಡನು. ನಾವು ಸಹ ಈ ಪಾಠವನ್ನು ಕಲಿತಿದ್ದೇವೋ?

6ಕೀರ್ತನೆ 101:3ರಲ್ಲಿ ದಾವೀದನ ಈ ಮಾತುಗಳಿವೆ: ‘ನಾನು ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವದಿಲ್ಲ.’ ನೀಚ ಸಂಗತಿಗಳನ್ನು ದೃಷ್ಟಿಸಲು ಇಂದು ಅನೇಕಾನೇಕ ಸಂದರ್ಭಗಳಿವೆ. ವಿಶೇಷವಾಗಿ ನಾವು ಒಬ್ಬರೇ ಇರುವಾಗ ಇದು ಸತ್ಯ. ಇಂಟರ್‌ನೆಟ್‌ ಸೌಲಭ್ಯವು ಸುಲಭವಾಗಿ ಲಭ್ಯವಿರುವುದರಿಂದ ಅನೇಕರಿಗೆ ಇದರಿಂದಾಗಿ ಸಮಸ್ಯೆಯೆದ್ದಿದೆ. ಅಯೋಗ್ಯ ಇಲ್ಲವೇ ಅಶ್ಲೀಲ ಚಿತ್ರಣಗಳನ್ನು ನೋಡುವ ಪಾಶಕ್ಕೆ ಸುಲಭವಾಗಿ ಸಿಲುಕುವ ಸಾಧ್ಯತೆಯಿದೆ. ಆದರೆ ಅಂಥ ಚಿತ್ರಣಗಳನ್ನು ನೋಡುವಲ್ಲಿ, ಕೀರ್ತನೆ 101:3ರ ಮಾತುಗಳನ್ನು ಬರೆಯುವಂತೆ ದಾವೀದನನ್ನು ಪ್ರೇರಿಸಿದ ದೇವರಿಗೆ ವಿಧೇಯತೆ ತೋರಿಸಿದಂತಾಗುವುದೋ? ಅಶ್ಲೀಲ ಚಿತ್ರಣಗಳು ಕೂಡಲೇ ಹಾನಿಮಾಡಬಲ್ಲವು. ಏಕೆಂದರೆ ಅವು ದುರಾಶೆಗಳನ್ನು ಕೆರಳಿಸುತ್ತವೆ, ಮನಸ್ಸಾಕ್ಷಿಯನ್ನು ಕೆಡಿಸುತ್ತವೆ, ವಿವಾಹಬಂಧಗಳನ್ನು ಶಿಥಿಲಗೊಳಿಸುತ್ತವೆ ಮತ್ತು ಅವುಗಳನ್ನು ನೋಡುವವರೆಲ್ಲರನ್ನು ನೀಚ ಮಟ್ಟಕ್ಕಿಳಿಸುತ್ತವೆ.​—⁠ಜ್ಞಾನೋ. 4:23; 2 ಕೊರಿಂ. 7:1; 1 ಥೆಸ. 4:​3-5.

7 ಯೆಹೋವನ ಸೇವಕರಾದ ನಾವು ಒಬ್ಬರೇ ಇರುವಾಗ ನಮ್ಮನ್ನು ಯಾರೂ ನೋಡುವುದಿಲ್ಲವೆಂದು ನೆನಸಬಾರದು. ಏಕೆಂದರೆ ಪ್ರೀತಿಯಿಂದ ನಮ್ಮ ಸ್ವರ್ಗೀಯ ತಂದೆ ನಮ್ಮನ್ನು ನೋಡುತ್ತಿರುತ್ತಾನೆ. (ಕೀರ್ತನೆ 11:4 ಓದಿ.) ಬಂದಿರುವ ಶೋಧನೆಯನ್ನು ನೀವು ಪ್ರತಿರೋಧಿಸುವುದನ್ನು ನೋಡುವಾಗ ಯೆಹೋವನಿಗೆಷ್ಟು ಸಂತೋಷವಾಗುತ್ತಿರಬೇಕು! ಹೀಗೆ ಮಾಡುವ ಮೂಲಕ ನೀವು ಮತ್ತಾಯ 5:28ರಲ್ಲಿರುವ ಯೇಸುವಿನ ಮಾತುಗಳಲ್ಲಿ ಸೂಚ್ಯವಾಗಿರುವ ಎಚ್ಚರಿಕೆಯನ್ನು ಪಾಲಿಸುತ್ತಿದ್ದೀರಿ. ಏನೇ ಆಗಲಿ, ತಪ್ಪುಕೃತ್ಯ ನಡೆಸಲು ಕುಮ್ಮಕ್ಕು ಕೊಡುವ ಚಿತ್ರಣಗಳನ್ನು ನೋಡದಿರಲು ಗಟ್ಟಿಮನಸ್ಸು ಮಾಡಿರಿ. ಅಶ್ಲೀಲ ಮಾಹಿತಿಯನ್ನು ಓದುವ ಇಲ್ಲವೇ ಅಶ್ಲೀಲ ಚಿತ್ರಗಳನ್ನು ನೋಡುವಂಥ ನಾಚಿಕೆಗೆಟ್ಟ ಕೃತ್ಯಕ್ಕಾಗಿ ನಿಮ್ಮ ಅಮೂಲ್ಯವಾದ ಸಮಗ್ರತೆಯನ್ನು ಬಿಟ್ಟುಕೊಡಬೇಡಿ!

8 ಅವಿಶ್ವಾಸಿಗಳೊಟ್ಟಿಗೆ ಇರುವಾಗಲೂ ನಾವು ಯೆಹೋವನಿಗೆ ವಿಧೇಯರಾಗಿರುವ ಮೂಲಕ ಸಮಗ್ರತೆ ಪಾಲಕರಾಗಿರಬಲ್ಲೆವು. ದಾನಿಯೇಲ ಮತ್ತವನ ಮೂವರು ಸಂಗಡಿಗರ ಕುರಿತು ಯೋಚಿಸಿರಿ. ಯೌವನಸ್ಥರಾಗಿದ್ದಾಗ ಅವರನ್ನು ಬಾಬೆಲಿಗೆ ಬಂಧಿಗಳಾಗಿ ಒಯ್ಯಲಾಯಿತು. ಯೆಹೋವನ ಕುರಿತು ಅಲ್ಪಸ್ವಲ್ಪ ತಿಳಿದಿದ್ದ ಇಲ್ಲವೇ ಏನೂ ತಿಳಿದಿರದ ಅವಿಶ್ವಾಸಿಗಳೇ ಆ ಮೂವರು ಇಬ್ರಿಯರ ಸುತ್ತಲಿದ್ದರು ಮತ್ತು ಧರ್ಮಶಾಸ್ತ್ರವು ನಿಷೇಧಿಸಿದಂಥ ಆಹಾರವನ್ನು ತಿನ್ನುವ ಒತ್ತಡ ಅವರ ಮೇಲೆ ಬಂತು. ಆ ಹುಡುಗರು ರಾಜಿಮಾಡಿಕೊಳ್ಳುತ್ತಾ ಆ ಆಹಾರವನ್ನು ತಿಂದು, ತಾವು ಮಾಡಿದ್ದರಲ್ಲಿ ಏನೂ ತಪ್ಪಿಲ್ಲವೆಂದು ಸಮರ್ಥಿಸಿಕೊಳ್ಳಬಹುದಿತ್ತು. ಹೇಗೂ ಅವರೇನು ಮಾಡುತ್ತಿದ್ದಾರೆ ಎಂಬುದನ್ನು ಅವರ ಹೆತ್ತವರಾಗಲಿ, ಹಿರಿಯರಾಗಲಿ, ಯಾಜಕರಾಗಲಿ ನೋಡಸಾಧ್ಯವಿರಲಿಲ್ಲ. ಆದರೆ ಯಾರು ನೋಡುತ್ತಿದ್ದನು? ಯೆಹೋವನು. ಆದುದರಿಂದ ಅವರೊಂದು ದೃಢ ನಿಲುವನ್ನು ತೆಗೆದುಕೊಂಡು, ಒತ್ತಡ ಹಾಗೂ ಅಪಾಯದ ಮಧ್ಯೆಯೂ ದೇವರಿಗೆ ವಿಧೇಯರಾದರು.​—⁠ದಾನಿ. 1:​3-9.

9 ಲೋಕದ ಸುತ್ತಲೂ ಇಂದು ಸಹ ಯೆಹೋವನ ಯುವ ಸಾಕ್ಷಿಗಳು ಅದೇ ರೀತಿಯ ನಿಲುವನ್ನು ತೆಗೆದುಕೊಳ್ಳುತ್ತಾರೆ. ಅವರು ಕ್ರೈಸ್ತರಿಗಾಗಿರುವ ದೇವರ ಮಟ್ಟಗಳಿಗೆ ಅಂಟಿಕೊಂಡು ಸಮಾನಸ್ಥರ ಹಾನಿಕಾರಕ ಒತ್ತಡಕ್ಕೆ ಮಣಿಯುವುದಿಲ್ಲ. ನೀವು ಯುವ ಜನರಲ್ಲೊಬ್ಬರಾಗಿದ್ದರೆ, ಮಾದಕ ದ್ರವ್ಯ, ಹಿಂಸಾಚಾರ, ದುರ್ಭಾಷೆ, ಅನೈತಿಕತೆ ಮತ್ತು ಇತರ ತಪ್ಪುಕೆಲಸಗಳಲ್ಲಿ ಒಳಗೂಡದಿರುವ ಮೂಲಕ ಯೆಹೋವನಿಗೆ ವಿಧೇಯರಾಗುತ್ತಿದ್ದೀರಿ. ಹೀಗೆ ನೀವು ಸಮಗ್ರತೆಯನ್ನೂ ಕಾಪಾಡಿಕೊಳ್ಳುತ್ತಿದ್ದೀರಿ. ಇದರಿಂದ ನಿಮಗೆ ಪ್ರಯೋಜನವಾಗುತ್ತದೆ ಮಾತ್ರವಲ್ಲ ಯೆಹೋವನೂ ನಿಮ್ಮ ಜೊತೆ ಕ್ರೈಸ್ತರೂ ಹರ್ಷಿತರಾಗುತ್ತಾರೆ!​—⁠ಕೀರ್ತ. 110:⁠3.

10 ವಿರುದ್ಧ ಲಿಂಗದವರೊಂದಿಗಿನ ನಡತೆಯ ವಿಷಯದಲ್ಲೂ ನಾವು ವಿಧೇಯತೆ ತೋರಿಸಬೇಕು. ದೇವರ ವಾಕ್ಯವು ಜಾರತ್ವವನ್ನು ನಿಷೇಧಿಸುತ್ತದೆಂದು ನಮಗೆ ಚೆನ್ನಾಗಿ ತಿಳಿದಿದೆ. ಆದರೆ, ನಮ್ಮ ವಿಧೇಯ ಮನೋಭಾವವು ಕ್ಷೀಣಿಸಿ ಸ್ವೇಚ್ಛಾಪರ ಮನೋಭಾವವಾಗಿ ಬದಲಾಗುವುದು ಸುಲಭ. ದೃಷ್ಟಾಂತಕ್ಕಾಗಿ, ಕೆಲವು ಯುವ ಜನರು ಬಾಯಿ ಅಥವಾ ಗುದದ್ವಾರದ ಮೂಲಕ ಲೈಂಗಿಕತೆ ನಡೆಸಿ ಇಲ್ಲವೇ ಪರಸ್ಪರ ಹಸ್ತಮೈಥುನದಲ್ಲಿ ತೊಡಗಿ, ಈ ಕೃತ್ಯಗಳು ಅಷ್ಟೇನೂ ಕೆಟ್ಟದ್ದಲ್ಲ ಏಕೆಂದರೆ ತಾವು ನಿಜವಾದ “ಸಂಭೋಗದಲ್ಲಿ ತೊಡಗಲಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ. ಇಂಥವರು, ಬೈಬಲಿಗನುಸಾರ ಜಾರತ್ವ ಎಂಬ ಪದದಲ್ಲಿ ಆ ಎಲ್ಲ ಕೃತ್ಯಗಳು ಸೇರಿವೆ ಮತ್ತು ಅವುಗಳನ್ನು ಮಾಡುವ ವ್ಯಕ್ತಿಯನ್ನು ಬಹಿಷ್ಕರಿಸುವ ಸಾಧ್ಯತೆ ಇದೆ ಎಂಬುದನ್ನು ಮರೆತುಬಿಡುತ್ತಾರೆ ಇಲ್ಲವೇ ಬೇಕುಬೇಕೆಂದು ಅಲಕ್ಷಿಸುತ್ತಾರೆ. * ಇನ್ನೂ ಕೆಟ್ಟ ಸಂಗತಿಯೇನೆಂದರೆ, ಇಂಥವರು ಸಮಗ್ರತೆಯನ್ನು ಕಾಪಾಡುವ ಅಗತ್ಯವನ್ನೇ ನಿರ್ಲಕ್ಷಿಸುತ್ತಾರೆ. ನಾವು ಸಮಗ್ರತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಕೆಟ್ಟದ್ದನ್ನು ಮಾಡಲಿಕ್ಕೆ ನೆವಗಳನ್ನು ಹುಡುಕದಿರುವೆವು. ನಮಗೆ ಶಿಕ್ಷೆಯಾಗದಂಥ ರೀತಿಯಲ್ಲಿ ನಾವೊಂದು ಪಾಪಕೃತ್ಯಕ್ಕೆ ಎಷ್ಟು ಹತ್ತಿರಹೋಗಸಾಧ್ಯವೋ ಅಷ್ಟು ಹತ್ತಿರಹೋಗಲು ಪ್ರಯತ್ನಿಸದಿರುವೆವು. ಒಂದು ತಪ್ಪುಕೃತ್ಯ ನಡೆಸಿದರೆ ಸಭೆ ನಮಗೇನು ಶಿಸ್ತು ಕೊಡುವುದೋ ಎಂಬುದರ ಕುರಿತು ಮಾತ್ರ ಚಿಂತಿಸದೆ, ನಮ್ಮ ನಡತೆ ಯೆಹೋವನನ್ನು ಮೆಚ್ಚಿಸಬೇಕು, ಆತನ ಮನನೋಯಿಸಬಾರದು ಎಂಬುದಕ್ಕೆ ಹೆಚ್ಚು ಗಮನ ಕೊಡುವೆವು. ಪಾಪಕೃತ್ಯಕ್ಕೆ ಎಷ್ಟು ಹತ್ತಿರ ಹೋಗಬಲ್ಲೆವೆಂದು ನೋಡುವುದರ ಬದಲು ಅದರಿಂದ ಆದಷ್ಟು ದೂರವಿರುತ್ತೇವೆ ಮತ್ತು ‘ಜಾರತ್ವಕ್ಕೆ ದೂರವಾಗಿ ಓಡಿಹೋಗುತ್ತೇವೆ.’ (1 ಕೊರಿಂ. 6:18) ಹೀಗೆ ನಾವು ನಿಜವಾದ ಸಮಗ್ರತೆ ಪಾಲಕರೆಂದು ತೋರಿಸಿಕೊಡುತ್ತೇವೆ.

ಸಮಗ್ರತೆಯನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು?

11 ವಿಧೇಯತೆ ತೋರಿಸುವ ಮೂಲಕ ನಾವು ಸಮಗ್ರತೆ ​ಬೆಳೆಸಿಕೊಳ್ಳುತ್ತೇವೆ. ಆದುದರಿಂದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ವಿಧೇಯತೆಯ ಜೀವನಕ್ರಮವನ್ನು ಅನುಸರಿಸುತ್ತಾ ಇರಬೇಕು. ವಿಧೇಯತೆಯ ಒಂದು ಕೃತ್ಯ ನಗಣ್ಯವಾಗಿ ತೋರಬಹುದು. ಆದರೆ ವಿಧೇಯತೆಯ ಇಂಥ ಒಂದೊಂದು ಕೃತ್ಯಗಳು ಸೇರಿಯೇ ಸಮಗ್ರತೆಯ ದಾಖಲೆಯಾಗಿಬಿಡುತ್ತದೆ. ದೃಷ್ಟಾಂತಕ್ಕೆ, ಕೇವಲ ಒಂದು ಇಟ್ಟಿಗೆ ಅಷ್ಟೇನೂ ಪ್ರಾಮುಖ್ಯವೆಂದು ತೋರಲಿಕ್ಕಿಲ್ಲ. ಆದರೆ ನಾವು ಅಂಥ ಹಲವಾರು ಇಟ್ಟಿಗೆಗಳನ್ನು ಜಾಗ್ರತೆಯಿಂದ ಜೋಡಿಸುವಲ್ಲಿ ಒಂದು ಸುಂದರ ಮನೆಯನ್ನೇ ಕಟ್ಟಬಲ್ಲೆವು. ಹಾಗೆಯೇ, ನಮ್ಮ ವಿಧೇಯತೆಯ ಕೃತ್ಯಗಳಿಗೆ ಒಂದೊಂದನ್ನು ಕೂಡಿಸುತ್ತಾ ಹೋಗುವ ಮೂಲಕವೇ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಬಲ್ಲೆವು.​—⁠ಲೂಕ 16:⁠10.

12 ನಾವು ಕಷ್ಟಗಳು, ದುರುಪಚಾರ ಇಲ್ಲವೇ ಅನ್ಯಾಯವನ್ನು ಅನುಭವಿಸುವಾಗ ಸಮಗ್ರತೆಯು ವಿಶೇಷವಾಗಿ ವ್ಯಕ್ತವಾಗುತ್ತದೆ. ಬೈಬಲಿನಲ್ಲಿ ದಾವೀದನ ಮಾದರಿಯನ್ನು ಪರಿಗಣಿಸಿರಿ. ಅವನೊಬ್ಬ ಯುವಕನಾಗಿದ್ದಾಗ, ಯೆಹೋವನ ಅಧಿಕಾರವನ್ನು ಪ್ರತಿನಿಧಿಸಬೇಕಾದ ರಾಜನಿಂದಲೇ ಹಿಂಸೆಯನ್ನು ಅನುಭವಿಸಿದನು. ಯೆಹೋವನ ಅನುಗ್ರಹವನ್ನು ಕಳೆದುಕೊಂಡ ಈ ರಾಜ ಸೌಲನು ದಾವೀದನಿಗೆ ದೈವಾನುಗ್ರಹವಿದ್ದ ಕಾರಣ ಅವನ ಬಗ್ಗೆ ತುಂಬ ಅಸೂಯೆಪಟ್ಟನು. ಹಾಗಿದ್ದರೂ ಸೌಲನು ಸ್ವಲ್ಪಕಾಲ ಅಧಿಕಾರದಲ್ಲಿ ಮುಂದುವರಿದನು ಮತ್ತು ದಾವೀದನನ್ನು ಅಟ್ಟಿಸಿಕೊಂಡು ಹೋಗಲು ಇಸ್ರಾಯೇಲಿನ ಸೈನ್ಯವನ್ನು ಬಳಸಿದನು. ಈ ಅನ್ಯಾಯವು ಕೆಲವು ವರ್ಷಗಳ ವರೆಗೆ ಮುಂದುವರಿಯುವಂತೆ ಯೆಹೋವನು ಅನುಮತಿಸಿದನು. ಇದರಿಂದಾಗಿ ದಾವೀದನು ದೇವರ ಬಗ್ಗೆ ಕಹಿಭಾವನೆ ತಾಳಿದನೋ? ತಾಳಿಕೊಳ್ಳುವುದರಲ್ಲಿ ಏನೂ ಪ್ರಯೋಜನವಿಲ್ಲ ಎಂಬ ತೀರ್ಮಾನಕ್ಕೆ ಬಂದನೋ? ಖಂಡಿತ ಇಲ್ಲ. ದೇವರ ಅಭಿಷಿಕ್ತನಾಗಿ ಸೌಲನಿಗಿದ್ದ ಸ್ಥಾನಕ್ಕಾಗಿ ಅತ್ಯುಚ್ಚ ಗೌರವವನ್ನು ಕಾಪಾಡಿಕೊಂಡು, ಅವನ ಮೇಲೆ ಸೇಡು ತೀರಿಸಲು ಅವಕಾಶ ಸಿಕ್ಕಿದರೂ ಅವನನ್ನು ಸಾಯಿಸಲಿಲ್ಲ.​—⁠1 ಸಮು. 24:​2-7.

13 ದಾವೀದನ ಮಾದರಿ ಇಂದು ನಮ್ಮನ್ನು ಎಷ್ಟು ಬಲವಾಗಿ ಪ್ರಭಾವಿಸಬೇಕು! ನಾವು, ಅಪರಿಪೂರ್ಣ ಮಾನವರಿರುವ ಲೋಕವ್ಯಾಪಕ ಸಭೆಯ ಭಾಗವಾಗಿದ್ದೇವೆ. ಇವರಲ್ಲಿ ಯಾರಾದರೂ ನಮಗೆ ಅನ್ಯಾಯಮಾಡುವ ಇಲ್ಲವೇ ಅವರೇ ಅಪನಂಬಿಗಸ್ತರಾಗುವ ಸಾಧ್ಯತೆಯಿದೆ. ಹಾಗಿದ್ದರೂ, ಯೆಹೋವನ ಜನರನ್ನು ಒಂದು ಗುಂಪಾಗಿ ಕೆಡಿಸಲಾಗದಂಥ ಸಮಯದಲ್ಲಿ ಜೀವಿಸುತ್ತಿರುವ ನಾವು ನಿಜಕ್ಕೂ ಧನ್ಯರು. (ಯೆಶಾ. 54:17) ಆದರೆ, ಒಬ್ಬ ವ್ಯಕ್ತಿ ನಮ್ಮನ್ನು ನಿರಾಶೆಗೊಳಿಸುವಲ್ಲಿ ಇಲ್ಲವೇ ನಮ್ಮ ಮನನೋಯಿಸುವಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು? ಒಬ್ಬ ಜೊತೆ ಆರಾಧಕನ ಬಗ್ಗೆ ನಮ್ಮ ಹೃದಯದಲ್ಲಿ ಕಹಿಭಾವನೆ ತುಂಬಿಕೊಳ್ಳುವಂತೆ ಬಿಟ್ಟರೆ, ಅದು ದೇವರ ಕಡೆಗಿನ ನಮ್ಮ ಸಮಗ್ರತೆಗೆ ಕಂಟಕವಾಗಸಾಧ್ಯವಿದೆ. ನಾವು, ದೇವರ ಕುರಿತು ಕಹಿಭಾವನೆ ತಾಳಲು ಇಲ್ಲವೇ ನಂಬಿಗಸ್ತ ಮಾರ್ಗಕ್ರಮದಿಂದ ಸರಿಯಲು ಇತರರ ನಡತೆಯನ್ನು ಒಂದು ನೆವವಾಗಿ ಬಳಸಬಾರದು. (ಕೀರ್ತ. 119:165) ಪರೀಕ್ಷೆಗಳ ಸಮಯದಲ್ಲೂ ತಾಳಿಕೊಳ್ಳುವುದು ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದು.

14 ಸಮಗ್ರತೆ ಕಾಪಾಡಿಕೊಳ್ಳಲು ನಾವು ತಪ್ಪುಹುಡುಕುವ, ಟೀಕಾತ್ಮಕ ಮನೋಭಾವವನ್ನು ತ್ಯಜಿಸಬೇಕು. ಇದನ್ನು ಮಾಡಲು ನಾವು ಯೆಹೋವನಿಗೆ ನಿಷ್ಠರಾಗಿರಬೇಕೆಂಬುದಂತೂ ಖಂಡಿತ. ಹಿಂದೆಂದಿಗಿಂತಲೂ ಹೆಚ್ಚಾಗಿ ಆತನು ತನ್ನ ಜನರನ್ನು ಈಗ ಆಶೀರ್ವದಿಸುತ್ತಿದ್ದಾನೆ. ಭೂಮಿಯ ಇತಿಹಾಸದಲ್ಲಿ ಶುದ್ಧಾರಾಧನೆಯು ಹಿಂದೆಂದೂ ಇಷ್ಟು ಉನ್ನತಕ್ಕೇರಿಸಲ್ಪಟ್ಟಿದ್ದಿಲ್ಲ. (ಯೆಶಾ. 2:​2-4) ಆದುದರಿಂದ, ಬೈಬಲ್‌ ವಚನಗಳ ವಿವರಣೆಯಲ್ಲಿ ಇಲ್ಲವೇ ಸಂಘಟನೆಯಲ್ಲಿ ವಿಷಯಗಳನ್ನು ನಿರ್ವಹಿಸಲಾಗುವ ವಿಧಾನದಲ್ಲಿ ಹೊಂದಾಣಿಕೆಗಳನ್ನು ಮಾಡಲಾಗುವಾಗ ನಾವದನ್ನು ಸ್ವೀಕರಿಸುವೆವು. ಆಧ್ಯಾತ್ಮಿಕ ಬೆಳಕು ಈಗಲೂ ಹೆಚ್ಚುತ್ತಾ ಇದೆ ಎಂಬ ಪುರಾವೆ ನೋಡಿ ನಮಗೆ ಸಂತಸವಾಗುವುದು. (ಜ್ಞಾನೋ. 4:18) ನಿರ್ದಿಷ್ಟ ಹೊಂದಾಣಿಕೆಯನ್ನು ಯಾಕೆ ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಕಷ್ಟವಾಗುತ್ತಿರುವಲ್ಲಿ, ಅದನ್ನು ಗ್ರಹಿಸಲು ಸಹಾಯಮಾಡುವಂತೆ ಯೆಹೋವನ ಬಳಿ ಬೇಡಿಕೊಳ್ಳುತ್ತೇವೆ. ಆದರೆ ಅಷ್ಟರ ವರೆಗೆ ನಾವು ವಿಧೇಯರಾಗಿ ಉಳಿಯುವ ಮೂಲಕ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವೆವು.

ಸಮಗ್ರತೆ ಕಾಪಾಡಿಕೊಳ್ಳಲು ತಪ್ಪಿದರೆ ಆಗೇನು?

15 ಇದೊಂದು ಗಂಭೀರ ಪ್ರಶ್ನೆಯಾಗಿದೆ, ಅಲ್ಲವೇ? ನಾವು ಹಿಂದಿನ ಲೇಖನದಲ್ಲಿ ಕಲಿತಿರುವಂತೆ, ಸಮಗ್ರತೆ ಖಂಡಿತವಾಗಿಯೂ ಅತ್ಯಾವಶ್ಯಕ. ಅದಿಲ್ಲದೆ ನಮಗೆ ಯೆಹೋವನೊಂದಿಗೆ ಸಂಬಂಧವೂ ಇರದು, ನಿಜ ನಿರೀಕ್ಷೆಯೂ ಇರದು. ಇದನ್ನು ಮನಸ್ಸಿನಲ್ಲಿಡಿರಿ: ಇಡೀ ವಿಶ್ವದಲ್ಲಿ ನಿಮ್ಮ ಹೊರತು ಬೇರಾರೂ ನೀವು ಸಮಗ್ರತೆಯನ್ನು ಕಳಕೊಳ್ಳುವಂತೆ ಮಾಡಲಾರರು. ಈ ಸತ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಯೋಬನಂದದ್ದು: “ಸಾಯುವ ತನಕ ನನ್ನ ಯಥಾರ್ಥತ್ವದ [“ಸಮಗ್ರತೆಯ,” NW] ಹೆಸರನ್ನು ಕಳಕೊಳ್ಳೆನು.” (ಯೋಬ 27:⁠5) ನಿಮಗೂ ಅದೇ ದೃಢಮನಸ್ಸಿರುವಲ್ಲಿ ಮತ್ತು ನೀವು ಯೆಹೋವನಿಗೆ ಆಪ್ತರಾಗಿ ಉಳಿಯುವಲ್ಲಿ, ನೀವು ಸಹ ನಿಮ್ಮ ಸಮಗ್ರತೆಯನ್ನು ಎಂದೂ ಕಳಕೊಳ್ಳದಿರುವಿರಿ.​—⁠ಯಾಕೋ. 4:⁠8.

16 ಹಾಗಿದ್ದರೂ, ಕೆಲವರು ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ತಪ್ಪಿಹೋಗುತ್ತಾರೆ. ಹಿಂದೆ ಅಪೊಸ್ತಲರಿದ್ದಾಗ ನಡೆದಂತೆ, ಕೆಲವರಿಗೆ ಗಂಭೀರ ಪಾಪಮಾಡುವುದು ರೂಢಿಯಾಗಿಬಿಟ್ಟಿದೆ. ನೀವೂ ಹೀಗೆ ಮಾಡಿರುವಲ್ಲಿ ನಿಮ್ಮ ಸ್ಥಿತಿ ಆಶಾಹೀನವಾಗಿದೆಯೋ? ಹಾಗೆ ಆಗಲೇಬೇಕೆಂದೇನಿಲ್ಲ. ನೀವೇನು ಮಾಡಬಹುದು? ಮೊದಲು, ಏನು ಮಾಡಬಾರದೆಂಬುದನ್ನು ಪರಿಗಣಿಸೋಣ. ತಪ್ಪನ್ನು ಹೆತ್ತವರಿಂದ, ಜೊತೆ ಕ್ರೈಸ್ತರಿಂದ, ಹಿರಿಯರಿಂದ ಮುಚ್ಚಿಡುವುದು ಮಾನವ ಸ್ವಭಾವ. ಆದರೆ ಬೈಬಲ್‌ ನಮಗೆ ನೆನಪುಹುಟ್ಟಿಸುವುದು: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” (ಜ್ಞಾನೋ. 28:13) ಪಾಪಗಳನ್ನು ಮುಚ್ಚಿಹಾಕುವುದು ದೊಡ್ಡ ತಪ್ಪು, ಏಕೆಂದರೆ ಯಾವುದನ್ನೂ ದೇವರಿಂದ ಮುಚ್ಚಿಡಲು ಸಾಧ್ಯವಿಲ್ಲ. (ಇಬ್ರಿಯ 4:13 ಓದಿ.) ಕೆಲವರು ಇಬ್ಬಗೆಯ ಜೀವನವನ್ನೂ ನಡೆಸುತ್ತಾರೆ. ತಾವು ಯೆಹೋವನ ಸೇವೆ ಮಾಡುತ್ತಿದ್ದೇವೆಂಬಂತೆ ನಟಿಸುತ್ತಾರೆ ಮತ್ತು ಅದೇ ಸಮಯದಲ್ಲಿ ಯಾವುದೋ ಗಂಭೀರ ಪಾಪಮಾಡುತ್ತಿರುತ್ತಾರೆ. ಇಂಥ ಜೀವನದಲ್ಲಿ ಸಮಗ್ರತೆಯೆಂಬುದೇ ಇಲ್ಲ. ವಾಸ್ತವದಲ್ಲಿ ಅದು ಸಮಗ್ರತೆಗೆ ವಿರುದ್ಧವಾಗಿದೆ. ಗಂಭೀರ ಪಾಪಗಳನ್ನು ಮುಚ್ಚಿಡುವ ವ್ಯಕ್ತಿಗಳ ಆರಾಧನಾ ಕೃತ್ಯಗಳನ್ನು ಯೆಹೋವನು ಮೆಚ್ಚುವುದಿಲ್ಲ. ಬದಲಿಗೆ, ಅಂಥ ಕಪಟತನ ಆತನಿಗೆ ಸಿಟ್ಟುಬರಿಸುತ್ತದೆ.​—⁠ಜ್ಞಾನೋ. 21:27; ಯೆಶಾ. 1:​11-16.

17 ಕ್ರೈಸ್ತನೊಬ್ಬನು ಗಂಭೀರ ತಪ್ಪುಗೈದಾಗ ಏನು ಮಾಡಬೇಕೆಂಬುದನ್ನು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. ಅವನು ಕ್ರೈಸ್ತ ಹಿರಿಯರ ಸಹಾಯ ಕೋರಬೇಕು. ಗಂಭೀರ ಆಧ್ಯಾತ್ಮಿಕ ಅಸ್ವಸ್ಥತೆಯನ್ನು ನಿಭಾಯಿಸಲು ಯೆಹೋವನು ಏರ್ಪಾಡು ಮಾಡಿದ್ದಾನೆ. (ಯಾಕೋಬ 5:14 ಓದಿ.) ಶಿಸ್ತು ಅಥವಾ ತಿದ್ದುಪಾಟು ಸಿಗುತ್ತದೆಂಬ ಹೆದರಿಕೆಯಿಂದ, ನಿಮ್ಮ ಆಧ್ಯಾತ್ಮಿಕ ಆರೋಗ್ಯವನ್ನು ಮರಳಿ ಪಡೆಯಲು ಅಗತ್ಯವಾದ ಹೆಜ್ಜೆಗಳನ್ನು ತೆಗೆದುಕೊಳ್ಳಲು ಹಿಂಜರಿಯದಿರಿ. ಒಬ್ಬ ವಿವೇಕಿ ವ್ಯಕ್ತಿಯು, ಇಂಜೆಕ್ಷನ್‌ ಇಲ್ಲವೇ ಶಸ್ತ್ರಚಿಕಿತ್ಸೆಯಿಂದ ನೋವಾಗುತ್ತದೆಂಬ ಕಾರಣಕ್ಕಾಗಿ ಜೀವಘಾತಕವಾದ ಆರೋಗ್ಯ ಸಮಸ್ಯೆಯನ್ನು ನಿವಾರಿಸದೇ ಸುಮ್ಮನಿರುವನೋ?​—⁠ಇಬ್ರಿ. 12:⁠11.

18 ಒಬ್ಬನು ಪೂರ್ಣ ರೀತಿಯಲ್ಲಿ ಚೇತರಿಸಿಕೊಳ್ಳಲು ಸಾಧ್ಯವೋ? ಸಮಗ್ರತೆ ಕಾಪಾಡಿಕೊಳ್ಳಲು ಒಮ್ಮೆ ತಪ್ಪುವಲ್ಲಿ ಅದನ್ನು ಮರಳಿ ಪಡೆಯಬಹುದೋ? ಪುನಃ ಒಮ್ಮೆ ದಾವೀದನ ಮಾದರಿಯನ್ನು ಪರಿಗಣಿಸಿರಿ. ಅವನು ಗಂಭೀರ ಪಾಪಗೈದನು. ಅವನು ಪರಸ್ತ್ರೀಯನ್ನು ಆಶಿಸಿ, ಹಾದರಗೈದು, ಆಕೆಯ ಅಮಾಯಕ ಗಂಡನ ಕೊಲೆಮಾಡಿಸಿದನು. ಆ ಸಂದರ್ಭದಲ್ಲಿ, ದಾವೀದನನ್ನು ಸಮಗ್ರತೆಯ ಪುರುಷನಾಗಿ ಎಣಿಸಲೂ ಸಾಧ್ಯವಿಲ್ಲ ಅಲ್ಲವೇ? ಆದರೆ ಅವನ ಸ್ಥಿತಿ ಆಶಾಹೀನವಾಗಿತ್ತೋ? ದಾವೀದನಿಗೆ ಕಠಿನ ಶಿಸ್ತಿನ ಅಗತ್ಯವಿತ್ತು ಮತ್ತು ಅವನಿಗೆ ಅದನ್ನು ಕೊಡಲಾಯಿತು. ಆದರೆ ಅವನು ಮನಃಪೂರ್ವಕವಾಗಿ ಪಶ್ಚಾತ್ತಾಪಪಟ್ಟದ್ದರಿಂದ ಯೆಹೋವನು ಕರುಣೆ ತೋರಿಸಿದನು. ಆ ಶಿಸ್ತಿನಿಂದ ದಾವೀದನು ಪಾಠ ಕಲಿತನು. ಅವನು ದೇವರಿಗೆ ವಿಧೇಯನಾದನು ಮಾತ್ರವಲ್ಲ, ಹಾಗೆ ಮಾಡುತ್ತಾ ಮುಂದುವರಿದನು. ಹೀಗೆ ತನ್ನ ಸಮಗ್ರತೆಯನ್ನು ಮರಳಿ ಪಡೆದನು. ದಾವೀದನ ಜೀವನವು, ಜ್ಞಾನೋಕ್ತಿ 24:16ರ ಮಾತುಗಳ ಒಂದು ನಿದರ್ಶನವಾಗಿತ್ತು. ಅದನ್ನುವುದು: “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು, ದುಷ್ಟನು ಕೇಡಿನಿಂದ ಬಿದ್ದೇಹೋಗುವನು.” ಇದರ ಪರಿಣಾಮವೇನಾಗಿತ್ತು? ದಾವೀದನು ಮೃತಪಟ್ಟ ನಂತರ ಯೆಹೋವನು ಸೊಲೊಮೋನನಿಗೆ ಹೇಳಿದ ಮಾತನ್ನು ಪರಿಗಣಿಸಿರಿ. (1 ಅರಸು 9:4 ಓದಿ *.) ದೇವರು ದಾವೀದನನ್ನು ಸಮಗ್ರತೆಯುಳ್ಳ ಪುರುಷನಾಗಿ ಸ್ಮರಿಸಿದನು. ಹೌದು, ಯೆಹೋವನು ಪಶ್ಚಾತ್ತಾಪಪಡುವ ಪಾಪಿಗಳಿಂದ ಗಂಭೀರ ಪಾಪಗಳ ಕಲೆಯನ್ನೂ ತೆಗೆದು ಅವರನ್ನು ಶುದ್ಧಗೊಳಿಸಬಲ್ಲನು.​—⁠ಯೆಶಾ. 1:⁠18.

19 ಹೌದು, ಪ್ರೀತಿಪೂರ್ವಕ ವಿಧೇಯತೆಯನ್ನು ತೋರಿಸುವ ಮೂಲಕ ನೀವು ಸಮಗ್ರತೆ ಪಾಲಕರಾಗಬಲ್ಲಿರಿ. ನಿಷ್ಠಾವಂತರಾಗಿ ತಾಳ್ಮೆ ಕಾಪಾಡಿಕೊಳ್ಳಿ. ಗಂಭೀರ ಪಾಪಗೈಯುವಲ್ಲಿ ಮನಃಪೂರ್ವಕವಾಗಿ ಪಶ್ಚಾತ್ತಾಪಪಡಿರಿ. ಸಮಗ್ರತೆಯು ನಿಜವಾಗಿಯೂ ಅಮೂಲ್ಯ ರತ್ನದಂತಿದೆ! “ನಾನಾದರೋ ನಿರ್ದೋಷಿಯಾಗಿಯೇ [“ಸಮಗ್ರತೆಯಿಂದ,” NW] ನಡೆದುಕೊಳ್ಳುವವನು” ಎಂಬ ದಾವೀದನ ದೃಢನಿರ್ಣಯವೇ ನಮ್ಮದಾಗಿರಲಿ.​—⁠ಕೀರ್ತ. 26:⁠11.

[ಪಾದಟಿಪ್ಪಣಿಗಳು]

^ ಪ್ಯಾರ. 8 ಕೀರ್ತನೆ 101:2 (NW): ‘ಸನ್ಮಾರ್ಗವನ್ನು ಲಕ್ಷಿಸಿ ನಡೆಯುವೆನು; ನನಗೆ ಯಾವಾಗ ದರ್ಶನಕೊಡುವಿ? ಮನೆಯೊಳಗೂ ಸಮಗ್ರತೆಯಿಂದ ಪ್ರವರ್ತಿಸುವೆನು.’

^ ಪ್ಯಾರ. 13 2004, ಫೆಬ್ರವರಿ 15ರ ಕಾವಲಿನಬುರುಜು, ಪುಟ 13, ಪ್ಯಾರ 15ನ್ನು ನೋಡಿ.

^ ಪ್ಯಾರ. 23 1 ಅರಸು 9:4 (NW): ‘ನೀನು ನಿನ್ನ ತಂದೆಯಾದ ದಾವೀದನಂತೆ ಸಮಗ್ರತೆಯಿಂದಲೂ ಯಥಾರ್ಥಚಿತ್ತದಿಂದಲೂ ನನಗೆ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುತ್ತಾ ಬರುವದಾದರೆ . . . ’

ನಿಮ್ಮ ಉತ್ತರವೇನು?

• ನೀವು ಹೇಗೆ ಸಮಗ್ರತೆ ಪಾಲಕರಾಗಿರಬಲ್ಲಿರಿ?

• ನಿಮ್ಮ ಸಮಗ್ರತೆಯನ್ನು ಯಾವ ವಿಧಗಳಲ್ಲಿ ಕಾಪಾಡಿಕೊಳ್ಳಬಲ್ಲಿರಿ?

• ಸಮಗ್ರತೆಯನ್ನು ಮರಳಿ ಪಡೆಯಲು ಹೇಗೆ ಸಾಧ್ಯ?

[ಅಧ್ಯಯನ ಪ್ರಶ್ನೆಗಳು]

1, 2. ನಾವು ಏನನ್ನು ಬೆಳೆಸಿಕೊಳ್ಳಬೇಕು, ಮತ್ತು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

3, 4. (ಎ) ನಾವು ಸಮಗ್ರತೆಯನ್ನು ಬೆಳೆಸಿಕೊಳ್ಳುವಂತೆ ಯೆಹೋವನು ಯಾವೆಲ್ಲ ವಿಧಗಳಲ್ಲಿ ಸಹಾಯ ಮಾಡುತ್ತಾನೆ? (ಬಿ) ಯೇಸು ತೋರಿಸಿದಂಥ ಸಮಗ್ರತೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?

5, 6. (ಎ) ಇತರರು ನೋಡದಿರುವಾಗಲೂ ಸಮಗ್ರತೆ ಕಾಪಾಡಿಕೊಳ್ಳುವುದರ ಮಹತ್ತ್ವವನ್ನು ದಾವೀದನು ಹೇಗೆ ಒತ್ತಿಹೇಳಿದನು? (ಬಿ) ಈಗಲೂ, ಕ್ರೈಸ್ತರು ಒಬ್ಬರೇ ಇರುವಾಗ ಯಾವ ಸವಾಲುಗಳನ್ನು ಎದುರಿಸುತ್ತಾರೆ?

7. ನಾವು ಒಬ್ಬರೇ ಇರುವಾಗ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಯಾವ ಶಾಸ್ತ್ರವಚನ ಸಹಾಯ ಮಾಡುವುದು?

8, 9. (ಎ) ದಾನಿಯೇಲ ಮತ್ತವನ ಸಂಗಡಿಗರು ತಮ್ಮ ಸಮಗ್ರತೆಯ ವಿಷಯ​ದಲ್ಲಿ ಯಾವ ಸವಾಲನ್ನು ಎದುರಿಸಿದರು? (ಬಿ) ಇಂದು ಯುವ ಕ್ರೈಸ್ತರು ಯೆಹೋವನಿಗೂ ತಮ್ಮ ಜೊತೆ ಕ್ರೈಸ್ತರಿಗೂ ಹೇಗೆ ಹರ್ಷ ತರುತ್ತಾರೆ?

10. (ಎ) ಜಾರತ್ವದ ಕುರಿತ ಯಾವ ತಪ್ಪು ಅಭಿಪ್ರಾಯಗಳಿಂದಾಗಿ ಕೆಲವು ಯುವಜನರು ತಮ್ಮ ಸಮಗ್ರತೆಯನ್ನು ರಾಜಿಮಾಡಿಕೊಂಡಿದ್ದಾರೆ? (ಬಿ) ನಾವು ಸಮಗ್ರತೆಯುಳ್ಳವರಾಗಿರುವಲ್ಲಿ ಜಾರತ್ವವೆಂಬ ಅಪಾಯವಿರುವಾಗ ಹೇಗೆ ನಡೆದುಕೊಳ್ಳುವೆವು?

11. ವಿಧೇಯತೆಯ ಒಂದೊಂದು ಕೃತ್ಯವೂ ಮಹತ್ತ್ವದ್ದಾಗಿದೆ ಏಕೆ? ದೃಷ್ಟಾಂತಿಸಿ.

12. ದಾವೀದನು, ದುರುಪಚಾರ ಹಾಗೂ ಅನ್ಯಾಯವನ್ನು ಅನುಭವಿಸಿದಾಗಲೂ ಸಮಗ್ರತೆ ಕಾಪಾಡಿಕೊಳ್ಳುವ ಮಾದರಿಯನ್ನು ಇಟ್ಟದ್ದು ಹೇಗೆ?

13. ಯಾರಾದರೂ ನಮ್ಮ ಮನನೋಯಿಸುವಲ್ಲಿ ಇಲ್ಲವೇ ಸಿಟ್ಟೆಬ್ಬಿಸುವಲ್ಲಿ ನಾವು ಸಮಗ್ರತೆ ಕಾಪಾಡಿಕೊಳ್ಳುವುದು ಹೇಗೆ?

14. ಸಮಗ್ರತೆ ಪಾಲಕರು ಸಂಘಟನಾತ್ಮಕ ಮತ್ತು ಬೋಧನಾತ್ಮಕ ಹೊಂದಾಣಿಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ?

15. ನೀವು ಸಮಗ್ರತೆಯನ್ನು ಕಳಕೊಳ್ಳುವಂತೆ ಮಾಡಲು ಯಾರಿಗೆ ಮಾತ್ರ ಸಾಧ್ಯ?

16, 17. (ಎ) ವ್ಯಕ್ತಿಯೊಬ್ಬನು ಗಂಭೀರ ಪಾಪಮಾಡುವಲ್ಲಿ, ಯಾವ ಹೆಜ್ಜೆ ತೆಗೆದುಕೊಳ್ಳುವುದು ತಪ್ಪು? (ಬಿ) ಅಂಥ ಸನ್ನಿವೇಶದಲ್ಲಿ ಏನನ್ನು ಮಾಡುವುದು ಸರಿಯಾಗಿದೆ?

18, 19. (ಎ) ಸಮಗ್ರತೆಯನ್ನು ಮರಳಿ ಪಡೆಯಬಹುದೆಂಬುದನ್ನು ದಾವೀದನ ಮಾದರಿ ಹೇಗೆ ತೋರಿಸುತ್ತದೆ? (ಬಿ) ನಿಮ್ಮ ಸಮಗ್ರತೆಯ ಕುರಿತು ನಿಮ್ಮ ದೃಢನಿರ್ಣಯವೇನು?

[ಪುಟ 8ರಲ್ಲಿರುವ ಚೌಕ]

“ಎಷ್ಟು ಒಳ್ಳೇ ಕೆಲಸ!”

ಐದು ತಿಂಗಳ ಗರ್ಭಿಣಿಯೊಬ್ಬಳು, ಒಬ್ಬ ಅಪರಿಚಿತಳ ದಯೆ ಹಾಗೂ ಸಮಗ್ರತೆಯ ಕುರಿತು ನುಡಿದ ಮಾತುಗಳಿವು. ಆ ಮಹಿಳೆ ಒಂದು ಹೊಟೇಲ್‌ಗೆ ಹೋಗಿದ್ದಳು. ಅಲ್ಲಿಂದ ಹೊರಬಂದ ಕೆಲವು ತಾಸುಗಳ ಬಳಿಕವಷ್ಟೇ, ತನ್ನ ಪರ್ಸ್‌ ಅನ್ನು ಅಲ್ಲೇ ಬಿಟ್ಟಿದ್ದು ಆಕೆಗೆ ನೆನಪಾಯಿತು. ಅದರಲ್ಲಿ 2,000 ಡಾಲರುಗಳಿದ್ದವು. ಇಷ್ಟೊಂದು ಹಣವನ್ನು ಆಕೆ ಹಿಂದೆಂದೂ ತೆಗೆದುಕೊಂಡು ಹೋದದ್ದೇ ಇಲ್ಲ. “ನನಗೆ ಆಕಾಶವೇ ಕಳಚಿಬಿದ್ದಂತಾಯಿತು,” ಎಂದಾಕೆ ಒಂದು ಸ್ಥಳಿಕ ವಾರ್ತಾಪತ್ರಿಕೆಗೆ ಹೇಳಿದಳು. ಆದರೆ ಆಕೆಯ ಪರ್ಸ್‌ ಒಬ್ಬಾಕೆ ಯುವತಿಗೆ ಸಿಕ್ಕಿತ್ತು, ಮತ್ತು ಅವಳು ಅದರ ಯಜಮಾನಿಯನ್ನು ಹುಡುಕಲು ಪ್ರಯತ್ನಿಸಿದ್ದಳು. ಆಕೆ ಅವಳಿಗೆ ಸಿಗದಿದ್ದಾಗ, ಪೊಲೀಸ್‌ ಠಾಣೆಗೆ ಹೋದಳು ಮತ್ತು ಪೊಲೀಸರು ಆ ಸ್ತ್ರೀಯನ್ನು ಪತ್ತೆಮಾಡಿದರು. ಕೃತಜ್ಞತೆಯಿಂದ ಆಕೆ ಹೇಳಿದ್ದು: “ಎಷ್ಟು ಒಳ್ಳೇ ಕೆಲಸ!” ಆ ಯುವತಿ ಹಣವನ್ನು ಹಿಂದಿರುಗಿಸಲು ಅಷ್ಟೆಲ್ಲ ಕಷ್ಟಪಟ್ಟದ್ದೇಕೆ? ಯೆಹೋವನ ಸಾಕ್ಷಿಯಾಗಿರುವ ಅವಳು, ‘ತಾನು ಪಾಲಿಸುತ್ತಿದ್ದ ಧರ್ಮವೇ ತನಗೆ ಸಮಗ್ರತೆಯನ್ನು ಕಲಿಸಿದೆ ಎಂದು ಹೇಳಿದ್ದನ್ನು’ ಆ ವಾರ್ತಾಪತ್ರಿಕೆ ವರದಿಸಿತು.

[ಪುಟ 9ರಲ್ಲಿರುವ ಚಿತ್ರ]

ಯುವ ಜನರು ಪರೀಕ್ಷೆಗೊಳಗಾಗುವಾಗ ಸಮಗ್ರತೆ ಕಾಪಾಡಬಲ್ಲರು

[ಪುಟ 10ರಲ್ಲಿರುವ ಚಿತ್ರ]

ದಾವೀದನು ಒಮ್ಮೆ ಸಮಗ್ರತೆ ಕಾಪಾಡಿಕೊಳ್ಳಲು ತಪ್ಪಿಹೋದರೂ ಅದನ್ನು ಮರಳಿ ಪಡೆದನು