ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವೇಕೆ ಸಮಗ್ರತೆ ಕಾಪಾಡಿಕೊಳ್ಳಬೇಕು?

ನೀವೇಕೆ ಸಮಗ್ರತೆ ಕಾಪಾಡಿಕೊಳ್ಳಬೇಕು?

ನೀವೇಕೆ ಸಮಗ್ರತೆ ಕಾಪಾಡಿಕೊಳ್ಳಬೇಕು?

‘ಯೆಹೋವನೇ, ನನ್ನ ಸಮಗ್ರತೆಯ ಪ್ರಕಾರ ನನಗೆ ನ್ಯಾಯತೀರಿಸು.’​—⁠ಕೀರ್ತ. 7:8, NW.

ಈ ಮೂರು ಸನ್ನಿವೇಶಗಳನ್ನು ಊಹಿಸಿಕೊಳ್ಳಿ: ಹುಡುಗನೊಬ್ಬನನ್ನು ಶಾಲಾಪಾಠಿಗಳು ಗೇಲಿಮಾಡುತ್ತಿದ್ದಾರೆ. ಅವನು ತಾಳ್ಮೆಗೆಟ್ಟು ರೇಗಾಡುವಂತೆ ಇಲ್ಲವೇ ತಮ್ಮೊಂದಿಗೆ ಜಗಳಕ್ಕಿಳಿಯುವಂತೆ ಕೆಣಕುತ್ತಿದ್ದಾರೆ. ಆ ಹುಡುಗನು ಏನು ಮಾಡುವನು? ಅವರೆಣಿಸಿದಂತೆ ಅವರ ಮೇಲೆ ತಿರುಗಿಬೀಳುವನೋ ಇಲ್ಲವೇ ತನ್ನನ್ನೇ ನಿಯಂತ್ರಿಸಿಕೊಂಡು ಅಲ್ಲಿಂದ ಹೊರಟುಹೋಗುವನೋ? ವಿವಾಹಿತನೊಬ್ಬನು ಇಂಟರ್‌ನೆಟ್‌ನಲ್ಲಿ ಏನೋ ಹುಡುಕಾಡುತ್ತಿದ್ದಾನೆ. ಮನೆಯಲ್ಲಿ ಬೇರಾರೂ ಇಲ್ಲ. ತಟ್ಟನೆ ಕಂಪ್ಯೂಟರ್‌ ಪರದೆ ಮೇಲೆ ಒಂದು ಅಶ್ಲೀಲ ವೆಬ್‌ಸೈಟ್‌ ಕುರಿತ ಜಾಹೀರಾತು ಮೂಡಿಬರುತ್ತದೆ. ಅವನು ಆ ವೆಬ್‌ಸೈಟ್‌ ತೆರೆಯುವನೋ, ಇಲ್ಲವೇ ಅದನ್ನು ತೆರೆಯದಿರಲು ಕಟ್ಟೆಚ್ಚರ ವಹಿಸುವನೋ? ಕ್ರೈಸ್ತ ಸ್ತ್ರೀಯೊಬ್ಬಳು ಕೆಲವು ಸಹೋದರಿಯರೊಂದಿಗೆ ಇದ್ದಾಳೆ. ಅವರು ಮಾತಾಡುತ್ತಾ ಮಾತಾಡುತ್ತಾ ಸಭೆಯಲ್ಲಿರುವ ಸಹೋದರಿಯೊಬ್ಬಳ ಕುರಿತು ನಕಾರಾತ್ಮಕ ವಿಷಯಗಳನ್ನು ಹೇಳಲಾರಂಭಿಸುತ್ತಾರೆ. ಆ ಸ್ತ್ರೀ ಇಂಥ ಹಾನಿಕಾರಕ ಹರಟೆಯಲ್ಲಿ ಪಾಲ್ಗೊಳ್ಳುವಳೋ ಇಲ್ಲವೇ ವಿಷಯವನ್ನು ಬದಲಾಯಿಸಲು ಪ್ರಯತ್ನಿಸುವಳೋ?

2 ಈ ಮೂರೂ ಸನ್ನಿವೇಶಗಳು ಭಿನ್ನಭಿನ್ನವಾಗಿದ್ದರೂ ಅವುಗಳಲ್ಲಿರುವ ಒಂದು ಸಾಮಾನ್ಯ ಸಂಗತಿಯೇನೆಂದರೆ, ಕ್ರೈಸ್ತರಾಗಿ ಸಮಗ್ರತೆ ಕಾಪಾಡಿಕೊಳ್ಳಲು ಹೆಣಗಾಡಬೇಕು. ನೀವು ಚಿಂತೆಗಳನ್ನು ಎದುರಿಸುವಾಗ, ಅಗತ್ಯಗಳನ್ನು ಪೂರೈಸಿಕೊಳ್ಳುವಾಗ ಮತ್ತು ಗುರಿಗಳನ್ನು ಇಡುವಾಗ ನಿಮ್ಮ ಸಮಗ್ರತೆಯ ಕುರಿತು ಯೋಚಿಸುತ್ತೀರೋ? ಪ್ರತಿದಿನವೂ ಜನರು ತಮ್ಮ ತೋರಿಕೆ, ಆರೋಗ್ಯ, ಹೊಟ್ಟೆಪಾಡು, ಸ್ನೇಹಬಂಧಗಳಲ್ಲಿನ ಏರುಪೇರು ಮತ್ತು ಬಹುಶಃ ಪ್ರಣಯದ ಕುರಿತು ಸಹ ಯೋಚಿಸುತ್ತಾರೆ. ಇಂಥ ವಿಷಯಗಳಿಗೆಲ್ಲ ನಾವು ಕೂಡ ಗಮನಕೊಡುತ್ತಿರಬಹುದು. ಆದರೆ ಯೆಹೋವನು ನಮ್ಮ ಹೃದಯವನ್ನು ಪರೀಕ್ಷಿಸುವಾಗ, ವಿಶೇಷವಾಗಿ ಯಾವುದಕ್ಕೆ ಬೆಲೆಕೊಡುತ್ತಾನೆ? (ಕೀರ್ತ. 139:23, 24) ನಮ್ಮ ಸಮಗ್ರತೆಗೇ.

3 ‘ಎಲ್ಲಾ ಒಳ್ಳೇ ದಾನಗಳ ಮತ್ತು ಕುಂದಿಲ್ಲದ ಎಲ್ಲಾ ವರಗಳ’ ದಾತನಾದ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವೈವಿಧ್ಯಮಯ ಕೊಡುಗೆಗಳನ್ನು ದಯಪಾಲಿಸಿದ್ದಾನೆ. (ಯಾಕೋ. 1:17) ಆತನೇ ನಮಗೆ ದೇಹ, ಮನಸ್ಸು, ಆರೋಗ್ಯ ಹಾಗೂ ವಿಭಿನ್ನ ಸಾಮರ್ಥ್ಯಗಳನ್ನು ವರವಾಗಿ ಕೊಟ್ಟಿದ್ದಾನೆ. (1 ಕೊರಿಂ. 4:7) ಆದರೆ ಸಮಗ್ರತೆ ತೋರಿಸಬೇಕೆಂದು ಯೆಹೋವನು ನಮ್ಮನ್ನು ಒತ್ತಾಯಿಸುವುದಿಲ್ಲ. ಈ ಗುಣವನ್ನು ನಾವು ಬೆಳೆಸಿಕೊಳ್ಳುವೆವೋ ಇಲ್ಲವೋ ಎಂಬ ಆಯ್ಕೆಯನ್ನು ಆತನು ನಮಗೆ ಬಿಟ್ಟಿದ್ದಾನೆ. (ಧರ್ಮೋ. 30:19) ಆದುದರಿಂದ ಸಮಗ್ರತೆ ಎಂದರೇನು ಎಂಬುದನ್ನು ನಾವು ಮೊದಲು ಪರಿಶೀಲಿಸಬೇಕು. ಈ ಗುಣ ಏಕೆ ತುಂಬ ಪ್ರಾಮುಖ್ಯ ಎಂಬದಕ್ಕೆ ಮೂರು ಕಾರಣಗಳನ್ನು ಸಹ ಪರಿಗಣಿಸೋಣ.

ಸಮಗ್ರತೆ ಎಂದರೇನು?

4 ಸಮಗ್ರತೆ ಎಂದರೆ ಏನೆಂದು ಹೆಚ್ಚಿನ ಜನರಿಗೆ ಸ್ಪಷ್ಟವಾಗಿ ತಿಳಿದಿಲ್ಲ. ಉದಾಹರಣೆಗೆ, ಸಮಗ್ರತೆ ಅಂದರೆ ಪ್ರಾಮಾಣಿಕತೆ ಅಷ್ಟೇ ಎಂಬುದು ಕೆಲವರ ಎಣಿಕೆ. ಆ ಗುಣ ಪ್ರಾಮುಖ್ಯ ಆಗಿದೆಯಾದರೂ ಅದು ಸಮಗ್ರತೆಯ ಒಂದು ಭಾಗ ಅಷ್ಟೇ. ವಾಸ್ತವದಲ್ಲಿ ಸಮಗ್ರತೆ ಎಂಬ ಪದ ನೈತಿಕ ಪೂರ್ಣತೆ ಇಲ್ಲವೇ ಸಮರ್ಪಕತೆಯನ್ನು ಸೂಚಿಸುತ್ತದೆ ಮತ್ತು ಬೈಬಲ್‌ನಲ್ಲೂ ಅದನ್ನು ಇದೇ ಅರ್ಥದಲ್ಲಿ ಬಳಸಲಾಗಿದೆ. “ಸಮಗ್ರತೆ” ಎಂಬ ಪದಕ್ಕೆ ಸಂಬಂಧಿಸಿದ ಹೀಬ್ರು ಪದಗಳ ಮೂಲಾರ್ಥವು ಸಮರ್ಪಕ, ಪೂರ್ಣ ಇಲ್ಲವೇ ಕುಂದಿಲ್ಲದ್ದು ಎಂದಾಗಿದೆ. ಇವುಗಳಲ್ಲಿ ಒಂದು ಪದವನ್ನು, ಯೆಹೋವನಿಗೆ ಅರ್ಪಿಸಲಾಗುತ್ತಿದ್ದ ಯಜ್ಞಗಳ ಸಂಬಂಧದಲ್ಲಿ ಬಳಸಲಾಗಿದೆ. ಯಜ್ಞದ ಪ್ರಾಣಿಯು ಕುಂದು ಕೊರತೆಯಿಲ್ಲದೆ ಸಮರ್ಪಕವಾಗಿದ್ದಲ್ಲಿ ಮಾತ್ರ ಅದನ್ನು ಅರ್ಪಿಸುತ್ತಿದ್ದವನ ಮೇಲೆ ಯೆಹೋವನ ಅನುಗ್ರಹವಿರುತ್ತಿತ್ತು. (ಯಾಜಕಕಾಂಡ 22:19, 20 ಓದಿ.) ತನ್ನ ಈ ನಿರ್ದೇಶನವನ್ನು ಉಲ್ಲಂಘಿಸಿ ಕುಂಟ, ಕುರುಡ ಅಥವಾ ಅಸ್ವಸ್ಥ ಪ್ರಾಣಿಗಳನ್ನು ಅರ್ಪಿಸುವವರನ್ನು ಯೆಹೋವನು ತೀಕ್ಷ್ಣವಾಗಿ ಖಂಡಿಸಿದನು.​—⁠ಮಲಾ. 1:6-8.

5 ಕುಂದಿಲ್ಲದ ಪೂರ್ಣವಾದ ವಸ್ತುವನ್ನು ಪಡೆಯಲು ಪ್ರಯತ್ನಿಸುವುದು ಮತ್ತು ಅದನ್ನು ಅಮೂಲ್ಯವೆಂದೆಣಿಸುವುದು ಅಸಾಮಾನ್ಯ ಸಂಗತಿಯಲ್ಲ. ದೃಷ್ಟಾಂತಕ್ಕೆ, ಒಂದು ಅಪರೂಪದ ಪುಸ್ತಕಕ್ಕಾಗಿ ಹುಡುಕುತ್ತಿರುವ ಪುಸ್ತಕ ಸಂಗ್ರಹಕನೊಬ್ಬನ ಕುರಿತು ಯೋಚಿಸಿ. ತುಂಬ ಹುಡುಕಾಡಿದ ನಂತರ ಅವನಿಗೆ ಆ ಪುಸ್ತಕ ಸಿಗುತ್ತದಾದರೂ ತೆರೆದು ನೋಡುವಾಗ, ಅದರಲ್ಲಿ ಮುಖ್ಯವಾದ ಹಲವಾರು ಪುಟಗಳು ಇಲ್ಲವೆಂದು ತಿಳಿದುಬರುತ್ತದೆ. ನಿರಾಶನಾಗಿ, ಅವನು ಆ ಪುಸ್ತಕವನ್ನು ಅಲ್ಲೇ ಬಿಟ್ಟು ಬರುತ್ತಾನೆ. ಇಲ್ಲವೇ, ಒಬ್ಬ ಮಹಿಳೆ ಸಮುದ್ರ ಕಿನಾರೆಯಲ್ಲಿ ಚಿಪ್ಪುಗಳನ್ನು ಹೆಕ್ಕುತ್ತಿರುವುದನ್ನು ಚಿತ್ರಿಸಿಕೊಳ್ಳಿ. ಆ ಚಿಪ್ಪುಗಳ ವೈವಿಧ್ಯತೆ ಹಾಗೂ ಸೌಂದರ್ಯಕ್ಕೆ ಮಾರುಹೋಗಿ, ಅವಳು ಒಂದೊಂದನ್ನೂ ಪರೀಕ್ಷಿಸಿನೋಡುತ್ತಾಳೆ. ಅವುಗಳಲ್ಲಿ ಯಾವುದನ್ನು ಆರಿಸುತ್ತಾಳೆ? ಯಾವ ದೋಷವೂ ಇಲ್ಲದ ಇಡೀ ಚಿಪ್ಪುಗಳನ್ನು ಮಾತ್ರ. ಹಾಗೆಯೇ ದೇವರು ಸಹ, ತನ್ನ ಕಡೆಗೆ ಯಥಾರ್ಥ ಇಲ್ಲವೇ ಪೂರ್ಣ ಮನಸ್ಸುಳ್ಳವರಿಗಾಗಿ ಹುಡುಕುತ್ತಿದ್ದಾನೆ.​—⁠2 ಪೂರ್ವ. 16:9.

6 ನಾವು ಪರಿಪೂರ್ಣರಾಗಿರುವಲ್ಲಿ ಮಾತ್ರ ಸಮಗ್ರತೆಯುಳ್ಳವರಾಗಿರಲು ಸಾಧ್ಯವೆಂಬ ಅನಿಸಿಕೆ ನಮಗಿರಬಹುದು. ಆದರೆ ಪಾಪ ಹಾಗೂ ಅಪರಿಪೂರ್ಣತೆಯಿಂದ ಕಳಂಕಿತರಾದ ನಾವು ಒಂದು ಅಪೂರ್ಣ ಪುಸ್ತಕ ಇಲ್ಲವೇ ಹಾನಿಗೊಂಡ ಚಿಪ್ಪಿನಂತಿರುವುದರಿಂದ ಹೇಗೆ ಸಮಗ್ರತೆ ತೋರಿಸಬಹುದು? ಈ ಪ್ರಶ್ನೆ ನಿಮಗೂ ಬಂದಿದೆಯೋ? ಯೆಹೋವನು ಮನುಷ್ಯರಿಂದ ಪರಿಪೂರ್ಣತೆಯನ್ನು ನಿರೀಕ್ಷಿಸುವುದಿಲ್ಲ ಎಂಬ ಭರವಸೆ ನಿಮಗಿರಲಿ. ಆತನೆಂದೂ ನಮ್ಮಿಂದ ಅಸಾಧ್ಯವಾದದ್ದನ್ನು ನಿರೀಕ್ಷಿಸುವುದಿಲ್ಲ. * (ಕೀರ್ತ. 103:14; ಯಾಕೋ. 3:2) ಆದರೆ ನಾವು ಸಮಗ್ರತೆ ಕಾಪಾಡಿಕೊಳ್ಳಬೇಕು ಎಂಬುದನ್ನಂತೂ ಖಂಡಿತ ನಿರೀಕ್ಷಿಸುತ್ತಾನೆ. ಹಾಗಾದರೆ ಪರಿಪೂರ್ಣತೆ ಮತ್ತು ಸಮಗ್ರತೆಯ ನಡುವೆ ವ್ಯತ್ಯಾಸವಿದೆಯೋ? ಹೌದು. ಇದಕ್ಕೊಂದು ದೃಷ್ಟಾಂತ ತೆಗೆದುಕೊಳ್ಳಿ. ಒಬ್ಬ ಪುರುಷನು ತಾನು ಮದುವೆಯಾಗಲಿರುವ ಹುಡುಗಿಯನ್ನು ಪ್ರೀತಿಸುತ್ತಾನೆ. ಯಾವುದೇ ಕುಂದಿಲ್ಲದೆ ಅವಳು ಪರಿಪೂರ್ಣಳಾಗಿರಬೇಕು ಎಂದು ಅವನು ನಿರೀಕ್ಷಿಸುವಲ್ಲಿ ಅದು ಮೂರ್ಖತನ. ಆದರೆ, ಆಕೆ ತನ್ನನ್ನು ಮನಸಾರೆ ಪ್ರೀತಿಸಬೇಕು ಮತ್ತು ಪ್ರಣಯಾತ್ಮಕ ಪ್ರೀತಿಯನ್ನು ತನಗೊಬ್ಬನಿಗೆ ಮಾತ್ರ ತೋರಿಸಬೇಕೆಂದು ನಿರೀಕ್ಷಿಸುವುದು ವಿವೇಕತನ. ಅದೇ ರೀತಿಯಲ್ಲಿ ಯೆಹೋವನು, ತನಗೆ ‘ಸಲ್ಲತಕ್ಕ ಗೌರವವನ್ನು [“ಭಕ್ತಿಯನ್ನು,” NW] ಮತ್ತೊಬ್ಬನಿಗೆ ಸಲ್ಲಗೊಡಿಸನು.’ (ವಿಮೋ. 20:5) ನಾವು ಪರಿಪೂರ್ಣರಾಗಿರಬೇಕೆಂದು ನಿರೀಕ್ಷಿಸದೆ ನಾವು ಆತನೊಬ್ಬನ್ನನ್ನೇ ಆರಾಧಿಸಿ, ಮನಃಪೂರ್ವಕವಾಗಿ ಪ್ರೀತಿಸಬೇಕೆಂದು ಆತನು ನಿರೀಕ್ಷಿಸುತ್ತಾನೆ.

7 ಎಲ್ಲ ಆಜ್ಞೆಗಳಲ್ಲಿ ಶ್ರೇಷ್ಠ ಆಜ್ಞೆ ಯಾವುದೆಂದು ಯೇಸುವಿಗೆ ಕೇಳಲಾದಾಗ ಅವನು ಕೊಟ್ಟ ಉತ್ತರವನ್ನು ನಾವು ನೆನಪಿಸಿಕೊಳ್ಳಬಹುದು. (ಮಾರ್ಕ 12:28-30 ಓದಿ.) ಯೇಸು ಆ ಉತ್ತರ ಕೊಟ್ಟನು ಮಾತ್ರವಲ್ಲ ಅದಕ್ಕನುಸಾರ ಜೀವಿಸಿದನು ಸಹ. ಯೆಹೋವನನ್ನು ಪೂರ್ಣ ಹೃದಯ, ಪ್ರಾಣ, ಬುದ್ಧಿ ಹಾಗೂ ಶಕ್ತಿಯಿಂದ ಪ್ರೀತಿಸುವ ಅತ್ಯುತ್ಕೃಷ್ಟ ಮಾದರಿಯನ್ನು ಆತನಿಟ್ಟನು. ಸಮಗ್ರತೆಯು ಬರೀ ಮಾತುಗಳಲ್ಲಿ ಅಲ್ಲ, ಬದಲಾಗಿ ಒಳ್ಳೇ ಇರಾದೆಗಳಿಂದ ಹೊಮ್ಮುವ ಸಕಾರಾತ್ಮಕ ಕ್ರಿಯೆಗಳಲ್ಲಿ ವ್ಯಕ್ತವಾಗುತ್ತದೆಂದು ಅವನು ಸೂಚಿಸಿದನು. ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಾವು ಯೇಸುವಿನ ಆ ಹೆಜ್ಜೆಜಾಡಿನಲ್ಲಿ ನಡೆಯತಕ್ಕದ್ದು.​—⁠1 ಪೇತ್ರ 2:21.

8 ಹಾಗಾದರೆ ಶಾಸ್ತ್ರಾಧಾರಿತವಾಗಿ ಸಮಗ್ರತೆಯ ಅರ್ಥ, ಸ್ವರ್ಗದಲ್ಲಿರುವ ಯೆಹೋವ ದೇವರಿಗೂ, ಆತನ ಪ್ರಕಟಿತ ಚಿತ್ತ ಹಾಗೂ ಉದ್ದೇಶಕ್ಕೂ ಪೂರ್ಣಹೃದಯದ ಭಕ್ತಿ ತೋರಿಸುವುದೇ ಆಗಿದೆ. ಸಮಗ್ರತೆಯುಳ್ಳವರು ಆಗಿರುವುದರ ಅರ್ಥ, ನಾವು ನಮ್ಮ ದೈನಂದಿನ ಜೀವನದಲ್ಲಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಯೆಹೋವ ದೇವರನ್ನು ಮೆಚ್ಚಿಸಲು ಪ್ರಯತ್ನಿಸುವೆವು ಎಂದಾಗಿದೆ. ಆಗ, ಜೀವನದಲ್ಲಿ ನಾವಿಡುವ ಆದ್ಯತೆಗಳು ಆತನ ಆದ್ಯತೆಗಳನ್ನು ಹೋಲುವವು. ಸಮಗ್ರತೆ ಏಕೆ ತುಂಬ ಮಹತ್ತ್ವದ್ದೆಂಬುದಕ್ಕೆ ಮೂರು ಕಾರಣಗಳನ್ನು ನಾವೀಗ ನೋಡೋಣ.

1. ನಮ್ಮ ಸಮಗ್ರತೆ ಮತ್ತು ಪರಮಾಧಿಕಾರದ ವಿವಾದಾಂಶ

9 ಯೆಹೋವನ ಪರಮಾಧಿಕಾರವು ನಾವು ತೋರಿಸುವ ಸಮಗ್ರತೆಯ ಮೇಲೆ ಅವಲಂಬಿಸಿಲ್ಲ. ಆತನ ಪರಮಾಧಿಕಾರವು ನ್ಯಾಯವಾದದ್ದೂ, ಶಾಶ್ವತವೂ, ವಿಶ್ವವ್ಯಾಪಿಯೂ ಆಗಿದೆ ಮತ್ತು ಯಾರು ಏನೇ ಹೇಳಲಿ ಇಲ್ಲವೇ ಮಾಡಲಿ ಅದು ಯಾವಾಗಲೂ ಹಾಗೆ ಇರುವುದು. ಹಾಗಿದ್ದರೂ, ದೇವರ ಪರಮಾಧಿಕಾರ ಸ್ವರ್ಗದಲ್ಲೂ ಭೂಮಿಯಲ್ಲೂ ತೀವ್ರ ದೂಷಣೆಗೊಳಗಾಗಿದೆ. ಆದುದರಿಂದ, ಬುದ್ಧಿಶಕ್ತಿಯುಳ್ಳ ಎಲ್ಲ ಜೀವಿಗಳ ಮುಂದೆ ಆತನ ಆಳ್ವಿಕೆಯನ್ನು ನಿರ್ದೋಷೀಕರಿಸುವ, ಅಂದರೆ ಅದು ಸರಿಯಾದದ್ದೂ, ನ್ಯಾಯವಾದದ್ದೂ, ಪ್ರೀತಿಭರಿತವಾದದ್ದೂ ಆಗಿದೆ ಎಂಬುದನ್ನು ದೃಢೀಕರಿಸುವ ಅಗತ್ಯವಿದೆ. ನಾವು ಯೆಹೋವನ ಸಾಕ್ಷಿಗಳಾಗಿರಲಾಗಿ, ಆತನ ವಿಶ್ವ ಪರಮಾಧಿಕಾರದ ಬಗ್ಗೆ ಕಿವಿಗೊಡಲು ಮನಸ್ಸುಳ್ಳವರೊಂದಿಗೆ ಚರ್ಚಿಸಲು ಸಂತೋಷಿಸುತ್ತೇವೆ. ಆದರೆ ಪರಮಾಧಿಕಾರದ ವಿವಾದಾಂಶದ ವಿಷಯದಲ್ಲಿ ಸ್ವತಃ ನಾವು ಹೇಗೆ ನಿಲುವನ್ನು ತೆಗೆದುಕೊಳ್ಳಬಲ್ಲೆವು? ನಮ್ಮ ಜೀವನದಲ್ಲಿ ಯೆಹೋವನನ್ನು ಪರಮಾಧಿಕಾರಿಯಾಗಿ ಆಯ್ಕೆಮಾಡಿದ್ದೇವೆಂದು ಹೇಗೆ ತೋರಿಸುವೆವು? ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕವೇ.

10 ನಿಮ್ಮ ಸಮಗ್ರತೆ ಇದರಲ್ಲಿ ಹೇಗೆ ಒಳಗೂಡಿದೆ ಎಂಬುದನ್ನು ಪರಿಗಣಿಸಿರಿ. ಯಾವ ಮಾನವನೂ ಪರಮಾಧಿಕಾರದ ಸಂಬಂಧದಲ್ಲಿ ದೇವರ ಪಕ್ಷವಹಿಸಲಿಕ್ಕಿಲ್ಲ, ನಿಸ್ವಾರ್ಥ ಪ್ರೀತಿಯಿಂದ ಆತನನ್ನು ಸೇವಿಸಲಿಕ್ಕಿಲ್ಲ ಎಂಬುದೇ ಸೈತಾನನ ವಾದದ ತಿರುಳಾಗಿದೆ. ಆತ್ಮಜೀವಿಗಳ ಒಂದು ದೊಡ್ಡ ಒಕ್ಕೂಟದ ಮುಂದೆ ಪಿಶಾಚನು ಯೆಹೋವನಿಗೆ, “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂದು ಮೂದಲಿಸಿದನು. (ಯೋಬ 2:4) ಸೈತಾನನು ತನ್ನ ಈ ಕೆಣಕುಮಾತನ್ನು ನೀತಿವಂತನಾದ ಯೋಬನ ವಿಷಯದಲ್ಲಿ ಮಾತ್ರ ಹೇಳದೆ ಎಲ್ಲ ಮಾನವಕುಲಕ್ಕೆ ಅನ್ವಯಿಸುತ್ತಾ ಹೇಳಿದನೆಂಬುದನ್ನು ಗಮನಿಸಿ. ಅದಕ್ಕಾಗಿಯೇ ಬೈಬಲ್‌ ಸೈತಾನನನ್ನು, ‘ನಮ್ಮ ಸಹೋದರರ ದೂರುಗಾರನು’ ಎಂದು ಕರೆಯುತ್ತದೆ. (ಪ್ರಕ. 12:10) ನಿಮ್ಮನ್ನು ಸೇರಿಸಿ ಯಾವ ಕ್ರೈಸ್ತನೂ ನಂಬಿಗಸ್ತನಾಗಿ ಉಳಿಯುವುದಿಲ್ಲವೆಂದು ಆತನು ಯೆಹೋವನನ್ನು ಹಂಗಿಸುತ್ತಾನೆ. ಜೀವ ಉಳಿಸಿಕೊಳ್ಳಲಿಕ್ಕಾಗಿ ನೀವು ಯೆಹೋವನಿಗೆ ದ್ರೋಹಬಗೆಯಲೂ ಸಿದ್ಧರಿದ್ದೀರೆಂದು ಸೈತಾನನು ಹೇಳಿಕೊಳ್ಳುತ್ತಾನೆ. ನಿಮ್ಮ ಮೇಲೆ ಹೇರಲಾಗಿರುವ ಈ ಎಲ್ಲ ಅಪವಾದಗಳ ಬಗ್ಗೆ ನಿಮಗೆ ಹೇಗನಿಸುತ್ತದೆ? ಸೈತಾನನನ್ನು ಸುಳ್ಳುಗಾರನೆಂದು ಸಾಬೀತುಪಡಿಲು ಸಿಗುವ ಯಾವುದೇ ಅವಕಾಶವನ್ನು ಉಪಯೋಗಿಸಿಕೊಳ್ಳುವಿರಿ ಅಲ್ಲವೇ? ನಿಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ನೀವು ಸೈತಾನನನ್ನು ಸುಳ್ಳುಗಾರನೆಂದು ಸಾಬೀತುಪಡಿಸಬಲ್ಲಿರಿ.

11 ವಿವಾದಾಂಶದಲ್ಲಿ ನಿಮ್ಮ ಸಮಗ್ರತೆ ಒಳಗೂಡಿರುವುದರಿಂದ ನಿಮ್ಮ ದೈನಂದಿನ ನಡತೆ ಹಾಗೂ ಆಯ್ಕೆಗಳು ತುಂಬ ಮಹತ್ತ್ವದ್ದಾಗಿವೆ. ನಾವು ಈ ಹಿಂದೆ ತಿಳಿಸಿದ ಮೂರು ಸನ್ನಿವೇಶಗಳನ್ನು ಪುನಃ ನೆನಪಿಗೆ ತನ್ನಿ. ಆ ಮೂವರು ಹೇಗೆ ಸಮಗ್ರತೆ ಕಾಪಾಡಿಕೊಳ್ಳುವರು? ಶಾಲಾಪಾಠಿಗಳ ಕೆಣಕುಮಾತುಗಳಿಗೆ ಗುರಿಯಾಗಿರುವ ಆ ಹುಡುಗನಿಗೆ, ಅವರಿಗೆ ಏನಾದರೂ ಮಾಡಬೇಕೆಂದು ತುಂಬ ಮನಸ್ಸಾಗುತ್ತದೆ. ಆದರೆ ಅವನು, “ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು [“ಯೆಹೋವನು,” NW] ಹೇಳುತ್ತಾನೆ” ಎಂಬ ಬುದ್ಧಿಮಾತನ್ನು ನೆನಪಿಸಿಕೊಳ್ಳುತ್ತಾನೆ. (ರೋಮಾ. 12:19) ಆದುದರಿಂದ ಅವನು ಸುಮ್ಮನಿದ್ದು ಅಲ್ಲಿಂದ ಹೊರಡುತ್ತಾನೆ. ಇಂಟರ್‌ನೆಟ್‌ ಬಳಸುತ್ತಿದ್ದ ಆ ವಿವಾಹಿತ ವ್ಯಕ್ತಿ, ಲೈಂಗಿಕವಾಗಿ ಕೆರಳಿಸುವ ವಿಷಯಗಳನ್ನು ನೋಡಬಹುದಿತ್ತು. ಆದರೆ ಅವನು, “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?” ಎಂಬ ಯೋಬನ ಮಾತುಗಳಲ್ಲಿರುವ ಮೂಲತತ್ತ್ವವನ್ನು ಜ್ಞಾಪಕಕ್ಕೆ ತರುತ್ತಾನೆ. (ಯೋಬ 31:1) ಈ ವ್ಯಕ್ತಿ ಸಹ ಯೋಬನಂತೆ ತನ್ನ ಕಣ್ಣುಗಳೊಡನೆ ನಿಬಂಧನೆ ಮಾಡುತ್ತಾ, ಹೊಲಸಾದ ಚಿತ್ರಣಗಳನ್ನು ನೋಡುವುದಿಲ್ಲ. ವಿಷವೋ ಎಂಬಂತೆ ಅವುಗಳಿಂದ ದೂರವಿರುತ್ತಾನೆ. ಕ್ರೈಸ್ತ ಸಹೋದರಿಯರೊಂದಿಗೆ ಮಾತಾಡುತ್ತಿದ್ದ ಸ್ತ್ರೀಗೆ ಹಾನಿಕಾರಕ ಹರಟೆ ಕಿವಿಗೆಬಿದ್ದಾಗ, “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನ ಸುಖವನ್ನು ನೋಡಿಕೊಳ್ಳಲಿ” ಎಂಬ ನಿರ್ದೇಶನವನ್ನು ಮನಸ್ಸಿಗೆ ತಂದುಕೊಳ್ಳುತ್ತಾ, ಏನೋ ಹೇಳಲು ಹೋಗಿ ಸುಮ್ಮನಾಗುತ್ತಾಳೆ. (ರೋಮಾ. 15:2) ತಾನು ಹೇಳಲಿರುವ ವಿಷಯ ಭಕ್ತಿವೃದ್ಧಿಮಾಡುವಂಥದ್ದಲ್ಲ. ಅದರಿಂದ ತನ್ನ ಕ್ರೈಸ್ತ ಸಹೋದರಿಗೆ ಒಳಿತಾಗದು ಮಾತ್ರವಲ್ಲ ತನ್ನ ಸ್ವರ್ಗೀಯ ಪಿತನಿಗೂ ಸಂತೋಷವಾಗದು ಎಂದು ತಿಳಿದವಳಾಗಿ ತನ್ನ ನಾಲಗೆಗೆ ಕಡಿವಾಣಹಾಕಿ ವಿಷಯವನ್ನು ಬದಲಾಯಿಸುತ್ತಾಳೆ.

12 ಈ ಮೂರೂ ಸನ್ನಿವೇಶಗಳಲ್ಲಿ ಆಯಾ ಕ್ರೈಸ್ತನು ಮಾಡಿದ ಆಯ್ಕೆಯು ಅವರು, ‘ಯೆಹೋವನೇ ನನ್ನ ಒಡೆಯ; ಈ ವಿಷಯದಲ್ಲಿ ಆತನನ್ನು ಸಂತೋಷಪಡಿಸಲು ಪ್ರಯತ್ನಿಸುವೆ’ ಎಂದು ಹೇಳಿದಂತಿರುವುದು. ವೈಯಕ್ತಿಕ ಆಯ್ಕೆಗಳು ಹಾಗೂ ನಿರ್ಣಯಗಳನ್ನು ಮಾಡುವಾಗ ನೀವು ಸಹ ಹೀಗೆ ಯೋಚಿಸುತ್ತೀರೋ? ಹಾಗೆ ಮಾಡುವಲ್ಲಿ ನೀವು ಜ್ಞಾನೋಕ್ತಿ 27:11ರಲ್ಲಿರುವ ಈ ಉತ್ತೇಜನದಾಯಕ ಮಾತುಗಳನ್ನು ನಿಜವಾಗಿಯೂ ಪಾಲಿಸುತ್ತೀರಿ: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” ದೇವರನ್ನು ಸಂತೋಷಪಡಿಸುವ ಎಂಥ ಸದವಕಾಶ ನಮಗಿದೆ! ಸಮಗ್ರತೆ ಕಾಪಾಡಿಕೊಳ್ಳಲು ನಾವು ಪರಿಶ್ರಮಪಡುವುದು ಸಾರ್ಥಕವಲ್ಲವೋ?

2. ದೈವಿಕ ತೀರ್ಪಿಗೆ ಆಧಾರ

13 ಸಮಗ್ರತೆ ಕಾಪಾಡುವ ಮೂಲಕ ನಾವು ಯೆಹೋವನ ಪರಮಾಧಿಕಾರದ ಪಕ್ಷವಹಿಸಲು ಸಾಧ್ಯವಾಗುತ್ತದೆಂದು ನೋಡಿದೆವು. ಹೀಗೆ, ಅದರ ಆಧಾರದ ಮೇಲೆ ದೇವರು ನಮಗೆ ತೀರ್ಪು ಮಾಡುವನು. ಯೋಬನು ಈ ಸತ್ಯವನ್ನು ಚೆನ್ನಾಗಿ ಅರಿತಿದ್ದನು. (ಯೋಬ 31:6 ಓದಿ *.) ದೇವರು ಎಲ್ಲರನ್ನು “ನ್ಯಾಯವಾದ ತ್ರಾಸಿನಲ್ಲಿ” ತೂಗಿನೋಡುತ್ತಾ, ನಮ್ಮ ಸಮಗ್ರತೆಯನ್ನು ಅಳೆಯಲು ತನ್ನ ಪರಿಪೂರ್ಣ ನ್ಯಾಯದ ಮಟ್ಟವನ್ನು ಬಳಸುತ್ತಾನೆಂದು ಯೋಬನಿಗೆ ತಿಳಿದಿತ್ತು. ಅಂತೆಯೇ ದಾವೀದನಂದದ್ದು: ‘ಯೆಹೋವನು ಎಲ್ಲಾ ಜನಾಂಗಗಳಿಗೂ ನ್ಯಾಯತೀರಿಸುವವನಾಗಿದ್ದಾನೆ. ಯೆಹೋವನೇ, ನಿರಪರಾಧಿಯೂ [“ಸಮಗ್ರತೆಯುಳ್ಳವನೂ,” NW] ನೀತಿವಂತನೂ ಆಗಿರುವ ನನಗೋಸ್ಕರ ನ್ಯಾಯತೀರಿಸು. ಮನುಷ್ಯರ ಹೃದಯವನ್ನೂ ಅಂತರಿಂದ್ರಿಯವನ್ನೂ ಪರಿಶೋಧಿಸುವ ನೀತಿಸ್ವರೂಪನಾದ ದೇವರೇ, ನೀತಿವಂತರನ್ನು ದೃಢಪಡಿಸು.’ (ಕೀರ್ತ. 7:8, 9) ದೇವರು ಒಬ್ಬ ವ್ಯಕ್ತಿಯ ಸಾಂಕೇತಿಕ “ಹೃದಯವನ್ನೂ ಅಂತರಿಂದ್ರಿಯವನ್ನೂ” ಅಂದರೆ ಅವನ ಅಂತರಂಗವನ್ನು ನೋಡಶಕ್ತನೆಂದು ನಮಗೆ ತಿಳಿದಿದೆ. ಆದರೆ ಆತನು ನಮ್ಮಲ್ಲಿ ಏನನ್ನು ಹುಡುಕುತ್ತಿದ್ದಾನೆ ಎಂಬದನ್ನು ನಾವು ಮರೆಯಬಾರದು. ದಾವೀದನು ಹೇಳಿದಂತೆ, ಯೆಹೋವನು ನಮ್ಮ ಸಮಗ್ರತೆಗನುಸಾರ ನಮಗೆ ತೀರ್ಪು ಮಾಡುತ್ತಾನೆ.

14 ಇಂದು, ಯೆಹೋವ ದೇವರು ಕೋಟಿಗಟ್ಟಲೆ ಮಾನವರ ಹೃದಯಗಳನ್ನು ಪರೀಕ್ಷಿಸುತ್ತಿರುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ. (1 ಪೂರ್ವ. 28:9) ಹಾಗೆ ಪರೀಕ್ಷಿಸುವಾಗ, ಕ್ರೈಸ್ತ ಸಮಗ್ರತೆ ಕಾಪಾಡಿಕೊಳ್ಳುವ ಎಷ್ಟು ಮಂದಿ ಆತನಿಗೆ ಸಿಗುತ್ತಾರೆ? ತುಲನಾತ್ಮಕವಾಗಿ ತುಂಬ ಕಡಿಮೆ ಮಂದಿಯೇ! ಹೀಗಿದ್ದರೂ, ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳಲಾಗದಷ್ಟರ ಮಟ್ಟಿಗೆ ಕಳಂಕಿತರು ಎಂದೆಣಿಸಬಾರದು. ವ್ಯತಿರಿಕ್ತವಾಗಿ, ನಾವು ಅಪರಿಪೂರ್ಣರಾಗಿದ್ದರೂ ಸಮಗ್ರತೆ ಕಾಪಾಡಿಕೊಳ್ಳಸಾಧ್ಯವಿದೆ ಮತ್ತು ಯೆಹೋವನು ಅದನ್ನು ಗಮನಿಸುತ್ತಾನೆಂದು ನಂಬಲು ನಮಗೆ ದಾವೀದ ಹಾಗೂ ಯೋಬನಂತೆ ಸಕಾರಣವಿದೆ. ನೆನಪಿಡಿ, ಪರಿಪೂರ್ಣತೆ ತಾನೇ ನಾವು ಸಮಗ್ರತೆ ಕಾಪಾಡಿಕೊಳ್ಳುವೆವು ಎಂಬುದಕ್ಕೆ ಖಾತರಿಯಲ್ಲ. ಭೂಮಿಯಲ್ಲಿ ಜೀವಿಸಿದ್ದ ಮೂವರು ಪರಿಪೂರ್ಣ ಮಾನವರಲ್ಲಿ ಇಬ್ಬರು, ಅಂದರೆ ಆದಾಮಹವ್ವರು ಸಮಗ್ರತೆ ತೋರಿಸಲು ತಪ್ಪಿಹೋದರು. ಆದರೆ ಅಪರಿಪೂರ್ಣರಾದ ಸಾವಿರಾರು ಮಂದಿ ಸಮಗ್ರತೆ ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಗಳಾಗಿದ್ದಾರೆ. ಹಾಗೆಯೇ ನೀವು ಸಹ ಯಶಸ್ವಿಗಳಾಗಬಲ್ಲಿರಿ.

3. ನಮ್ಮ ನಿರೀಕ್ಷೆಗೆ ಅತ್ಯಗತ್ಯ

15 ಯೆಹೋವನು ನಮ್ಮ ಸಮಗ್ರತೆಯ ಆಧಾರದ ಮೇಲೆ ತೀರ್ಪು ಮಾಡುವುದರಿಂದ, ಅದು ಭವಿಷ್ಯಕ್ಕಾಗಿರುವ ನಮ್ಮ ನಿರೀಕ್ಷೆಗೆ ಅತ್ಯಗತ್ಯ. ಇದು ದಾವೀದನಿಗೂ ತಿಳಿದಿತ್ತು. (ಕೀರ್ತನೆ 41:12 ಓದಿ. *) ಸದಾ ದೇವರ ಅನುಗ್ರಹಕ್ಕೆ ಪಾತ್ರನಾಗುವ ನಿರೀಕ್ಷೆ ಅವನಿಗೆ ಬಹುಮೂಲ್ಯವಾಗಿತ್ತು. ಇಂದಿನ ಸತ್ಯ ಕ್ರೈಸ್ತರಂತೆಯೇ ದಾವೀದನಿಗೂ ಸದಾಕಾಲ ಜೀವಿಸುವ ಮತ್ತು ಯೆಹೋವ ದೇವರ ಸೇವೆ ಮಾಡುತ್ತಾ ಆತನಿಗೆ ಹೆಚ್ಚೆಚ್ಚು ಸಮೀಪವಾಗುವ ನಿರೀಕ್ಷೆಯಿತ್ತು. ಈ ನಿರೀಕ್ಷೆ ಈಡೇರುವುದನ್ನು ನೋಡಲು, ತಾನು ಸಮಗ್ರತೆ ಕಾಪಾಡಿಕೊಳ್ಳಬೇಕು ಎಂಬುದನ್ನು ಅವನು ಗ್ರಹಿಸಿದನು. ಅದೇ ರೀತಿಯಲ್ಲಿ, ನಾವಿಂದು ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಾಗ ಯೆಹೋವನು ನಮ್ಮನ್ನು ಉದ್ಧಾರಮಾಡುತ್ತಾನೆ, ಬೋಧಿಸುತ್ತಾನೆ, ಮಾರ್ಗದರ್ಶಿಸುತ್ತಾನೆ ಮತ್ತು ಆಶೀರ್ವದಿಸುತ್ತಾನೆ.

16 ಈಗಲೂ ಸಂತೋಷದಿಂದಿರಲು ನಮಗೆ ನಿರೀಕ್ಷೆ ಅತ್ಯಗತ್ಯ. ಕಷ್ಟಕರ ಸಮಯಗಳನ್ನು ದಾಟಲು ಬೇಕಾದ ಆನಂದವನ್ನು ಅದು ಕೊಡಬಲ್ಲದು. ಅದು ನಮ್ಮ ಯೋಚನಾರೀತಿಯನ್ನೂ ಸಂರಕ್ಷಿಸಬಲ್ಲದು. ನಿರೀಕ್ಷೆಯು ಶಿರಸ್ತ್ರಾಣದಂತಿದೆ ಎಂದು ಬೈಬಲ್‌ ಹೇಳುವುದನ್ನು ಜ್ಞಾಪಿಸಿಕೊಳ್ಳಿ. (1 ಥೆಸ. 5:8) ಯುದ್ಧದಲ್ಲಿ ಶಿರಸ್ತ್ರಾಣವು ಸೈನಿಕನ ತಲೆಯನ್ನು ರಕ್ಷಿಸುವಂತೆ, ಅವಸಾನಗೊಳ್ಳುತ್ತಿರುವ ಈ ಹಳೇ ಲೋಕದಲ್ಲಿ ಸೈತಾನನು ಪ್ರವರ್ಧಿಸುತ್ತಿರುವ ನಿರಾಶಾವಾದದ ಯೋಚನಾಧಾಟಿಯ ವಿರುದ್ಧ ನಿರೀಕ್ಷೆಯು ನಮ್ಮ ಮನಸ್ಸನ್ನು ರಕ್ಷಿಸುತ್ತದೆ. ನಿರೀಕ್ಷೆ ಇಲ್ಲದ ಜೀವನಕ್ಕೇನೂ ಅರ್ಥವಿಲ್ಲ. ಆದುದರಿಂದ ನಾವು ನಮ್ಮನ್ನೇ ಪ್ರಾಮಾಣಿಕವಾಗಿ ಪರೀಕ್ಷಿಸುತ್ತಾ, ನಮ್ಮ ಸಮಗ್ರತೆ ಮತ್ತು ಅದಕ್ಕೆ ಜೋಡಿಸಲ್ಪಟ್ಟಿರುವ ನಿರೀಕ್ಷೆ ಎಷ್ಟು ದೃಢವಾಗಿದೆ ಎಂಬುದಕ್ಕೆ ಲಕ್ಷ್ಯಕೊಡಬೇಕು. ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ನೀವು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುತ್ತಿದ್ದೀರಿ ಮತ್ತು ಭವಿಷ್ಯಕ್ಕಾಗಿರುವ ನಿಮ್ಮ ಅಮೂಲ್ಯ ನಿರೀಕ್ಷೆಯನ್ನು ಕಾಪಾಡಿಕೊಳ್ಳುತ್ತಿದ್ದೀರಿ ಎಂಬುದನ್ನು ಮರೆಯಬೇಡಿ. ನೀವು ಸದಾ ಸಮಗ್ರತೆ ಕಾಪಾಡಿಕೊಳ್ಳುವಂತಾಗಲಿ!

17 ಸಮಗ್ರತೆ ಬಹಳಷ್ಟು ಮಹತ್ತ್ವದ್ದಾಗಿರುವುದರಿಂದ, ನಾವು ಇನ್ನಷ್ಟು ಪ್ರಶ್ನೆಗಳನ್ನು ಪರಿಗಣಿಸಬೇಕು. ನಾವು ಸಮಗ್ರತೆಯನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು? ಅದನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು? ಯಾರಾದರೂ ಸಮಗ್ರತೆ ಕಾಪಾಡಿಕೊಳ್ಳಲು ತಪ್ಪಿಹೋದಾಗ ಏನು ಮಾಡಬೇಕು? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಚರ್ಚಿಸುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 9 “ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆ ನೀವೂ ಪರಿಪೂರ್ಣರಾಗಿರಿ” ಎಂದು ಯೇಸು ಹೇಳಿದ್ದು ನಿಜ. (ಮತ್ತಾ. 5:48, NIBV) ಅಪರಿಪೂರ್ಣ ಮಾನವರು ಸಹ, ಕೆಲವೊಂದು ಅರ್ಥಗಳಲ್ಲಿ ಪರಿಪೂರ್ಣರು ಆಗಿರಬಲ್ಲರೆಂಬುದು ಆತನಿಗೆ ತಿಳಿದಿತ್ತು. ಉದಾಹರಣೆಗೆ, ನಮ್ಮ ಶತ್ರುಗಳನ್ನು ಸಹ ಪ್ರೀತಿಸುವ ಮೂಲಕ ಪ್ರೀತಿ ತೋರಿಸುವ ವಿಷಯದಲ್ಲಿ ಯೆಹೋವನನ್ನು ಪೂರ್ಣವಾಗಿ ಮೆಚ್ಚಿಸಬಲ್ಲೆವು. ಯೆಹೋವನಾದರೋ ಪೂರ್ಣ ಅರ್ಥದಲ್ಲಿ ಎಲ್ಲ ವಿಷಯಗಳಲ್ಲಿ ಪರಿಪೂರ್ಣನಾಗಿದ್ದಾನೆ. “ಸಮಗ್ರತೆ” ಎಂಬ ಪದವನ್ನು ಆತನಿಗೆ ಅನ್ವಯಿಸುವಾಗ ಅದು, ಆತನು ಪರಿಪೂರ್ಣನು ಅಂದರೆ ಆತನಲ್ಲಿ ಯಾವ ದೋಷ ಇಲ್ಲ ಎಂಬುದನ್ನು ಸೂಚಿಸುತ್ತದೆ.​—⁠ಕೀರ್ತ. 18:30.

^ ಪ್ಯಾರ. 18 ಯೋಬ 31:6 (NW): “ದೇವರು ನನ್ನನ್ನು ನ್ಯಾಯವಾದ ತ್ರಾಸಿನಲ್ಲಿ ತೂಗಿ ನನ್ನ ಸಮಗ್ರತೆಯನ್ನು ತಿಳಿದುಕೊಳ್ಳುವನು.”

^ ಪ್ಯಾರ. 21 ಕೀರ್ತನೆ 41:12 (NW): “ನನ್ನನ್ನಾದರೋ ನನ್ನ ಸಮಗ್ರತೆಗಾಗಿ ಉದ್ಧಾರಮಾಡಿ, ನಿನ್ನ ಸಮ್ಮುಖದಲ್ಲಿ ಸದಾಕಾಲಕ್ಕೂ ನಿಲ್ಲಿಸುವಿ.”

ನಿಮ್ಮ ಉತ್ತರವೇನು?

• ಸಮಗ್ರತೆ ಎಂದರೇನು?

• ಸಮಗ್ರತೆಗೂ ವಿಶ್ವ ಪರಮಾಧಿಕಾರದ ವಿವಾದಾಂಶಕ್ಕೂ ಸಂಬಂಧವೇನು?

• ಸಮಗ್ರತೆಯು ನಮ್ಮ ನಿರೀಕ್ಷೆಗೆ ಆಧಾರಕೊಡುವುದು ಹೇಗೆ?

[ಅಧ್ಯಯನ ಪ್ರಶ್ನೆಗಳು]

1, 2. ಕ್ರೈಸ್ತನೊಬ್ಬನ ಸಮಗ್ರತೆಗೆ ಸವಾಲೊಡ್ಡುವ ಕೆಲವು ಸಾಮಾನ್ಯ ಸನ್ನಿವೇಶಗಳು ಯಾವುವು?

3. ಯಾವ ವಿಶೇಷ ಆಯ್ಕೆಯನ್ನು ಯೆಹೋವನು ನಮಗೆ ಬಿಟ್ಟಿದ್ದಾನೆ, ಮತ್ತು ಈ ಲೇಖನದಲ್ಲಿ ನಾವೇನನ್ನು ಪರಿಗಣಿಸುವೆವು?

4. ಸಮಗ್ರತೆಯಲ್ಲಿ ಏನೆಲ್ಲ ಒಳಗೂಡಿದೆ, ಮತ್ತು ಪ್ರಾಣಿ ಯಜ್ಞಗಳ ಕುರಿತ ಯೆಹೋವನ ನಿಯಮದಿಂದ ನಾವೇನು ಕಲಿಯಬಹುದು?

5, 6. (ಎ) ಕುಂದಿಲ್ಲದ ಪೂರ್ಣವಾದ ವಸ್ತುವನ್ನೇ ನಾವು ಹೆಚ್ಚಾಗಿ ಇಷ್ಟಪಡುತ್ತೇವೆಂದು ಯಾವ ಉದಾಹರಣೆಗಳು ತೋರಿಸುತ್ತವೆ? (ಬಿ) ಸಮಗ್ರತೆ ತೋರಿಸಲು ನಾವು ಪರಿಪೂರ್ಣರಾಗಿರಬೇಕೋ? ವಿವರಿಸಿ.

7, 8. (ಎ) ಸಮಗ್ರತೆಯ ವಿಷಯದಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು? (ಬಿ) ಶಾಸ್ತ್ರಾಧಾರಿತವಾಗಿ ಸಮಗ್ರತೆಯ ಅರ್ಥವೇನು?

9. ವಿಶ್ವ ಪರಮಾಧಿಕಾರದ ವಿವಾದಾಂಶಕ್ಕೂ ನಮ್ಮ ವೈಯಕ್ತಿಕ ಸಮಗ್ರತೆಗೂ ಸಂಬಂಧವೇನು?

10. ಮಾನವರ ಸಮಗ್ರತೆಯ ಕುರಿತು ಸೈತಾನನು ಯಾವ ಅಪವಾದ ಹೊರಿಸಿದ್ದಾನೆ, ಮತ್ತು ನೀವು ಹೇಗೆ ಪ್ರತಿಕ್ರಿಯಿಸಲು ಇಷ್ಟಪಡುತ್ತೀರಿ?

11, 12. (ಎ) ನಮ್ಮ ದೈನಂದಿನ ನಿರ್ಣಯಗಳು ವೈಯಕ್ತಿಕ ಸಮಗ್ರತೆಯ ವಿವಾದಾಂಶಕ್ಕೆ ಸಂಬಂಧಿಸುತ್ತವೆ ಎಂಬುದನ್ನು ಯಾವ ಉದಾಹರಣೆಗಳು ತೋರಿಸುತ್ತವೆ? (ಬಿ) ಸಮಗ್ರತೆ ಕಾಪಾಡಿಕೊಳ್ಳುವುದು ಒಂದು ಸದವಕಾಶವೇಕೆ?

13. ನಮ್ಮ ಸಮಗ್ರತೆಯ ಆಧಾರದ ಮೇಲೆ ಯೆಹೋವನು ತೀರ್ಪು ಮಾಡುತ್ತಾನೆಂದು ಯೋಬ ಹಾಗೂ ದಾವೀದನ ಮಾತುಗಳು ಹೇಗೆ ತೋರಿಸುತ್ತವೆ?

14. ಪಾಪಮಯ ಸ್ವಭಾವದಿಂದಾಗಿ ನಾವೆಂದೂ ಸಮಗ್ರತೆ ತೋರಿಸಲಾರೆವೆಂದು ಎಣಿಸಬಾರದೇಕೆ?

15. ಭವಿಷ್ಯತ್ತಿಗಾಗಿರುವ ನಮ್ಮ ನಿರೀಕ್ಷೆಗೆ ಸಮಗ್ರತೆ ಅತ್ಯಗತ್ಯ ಎಂಬದನ್ನು ದಾವೀದನು ಹೇಗೆ ತೋರಿಸಿದನು?

16, 17. (ಎ) ನಿಮ್ಮ ಸಮಗ್ರತೆಗೆ ಸದಾ ಅಂಟಿಕೊಳ್ಳಲು ಏಕೆ ದೃಢಸಂಕಲ್ಪಮಾಡಿದ್ದೀರಿ? (ಬಿ) ಮುಂದಿನ ಲೇಖನ ಯಾವ ಪ್ರಶ್ನೆಗಳನ್ನು ಚರ್ಚಿಸುವುದು?

[ಪುಟ 5ರಲ್ಲಿರುವ ಚಿತ್ರಗಳು]

ದೈನಂದಿನ ಜೀವನದಲ್ಲಿ ನಮ್ಮ ಸಮಗ್ರತೆಗೆ ಅನೇಕ ಸವಾಲುಗಳು ಎದುರಾಗುತ್ತವೆ