ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಗೋ! ಯೆಹೋವನು ಒಪ್ಪಿಗೆ ನೀಡಿರುವ ಸೇವಕನು

ಇಗೋ! ಯೆಹೋವನು ಒಪ್ಪಿಗೆ ನೀಡಿರುವ ಸೇವಕನು

ಇಗೋ! ಯೆಹೋವನು ಒಪ್ಪಿಗೆ ನೀಡಿರುವ ಸೇವಕನು

‘ಇಗೋ, ನನ್ನ ಸೇವಕನು! . . . ಇವನಿಗೆ ನಾನು ಒಪ್ಪಿಗೆ ನೀಡಿದ್ದೇನೆ.’ ​—⁠ಯೆಶಾ. 42:​1, NW.

ಕ್ರಿಸ್ತನ ಮರಣವನ್ನು ಆಚರಿಸುವ ಸಮಯವು ಹತ್ತಿರವಾಗುತ್ತಿರುವಾಗ ದೇವಜನರು ಅಪೊಸ್ತಲ ಪೌಲನ ಸಲಹೆಯನ್ನು ಪಾಲಿಸುವುದು ಒಳ್ಳೆಯದಾಗಿರುವುದು. “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು” ನೋಡುವಂತೆ ಅವನು ಸಲಹೆ ನೀಡಿದನು. ಪೌಲನು ಕೂಡಿಸಿ ಹೇಳಿದ್ದು: “ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.” (ಇಬ್ರಿ. 12:​2, 3) ಯೇಸುವಿನ ಯಜ್ಞದಲ್ಲಿ ಕೊನೆಗೊಂಡ ಅವನ ನಂಬಿಗಸ್ತ ಮಾರ್ಗಕ್ರಮಕ್ಕೆ ನಿಕಟವಾದ ಗಮನವನ್ನು ಕೊಡುವುದು, ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸುವುದನ್ನು ಮುಂದುವರಿಸುವಂತೆ ಮತ್ತು “ಮನಗುಂದಿದವರಾಗಿ ಬೇಸರಗೊಳ್ಳದಂತೆ” ಅಭಿಷಿಕ್ತ ಕ್ರೈಸ್ತರಿಗೂ ಅವರ ಸಂಗಡಿಗರಾದ ಬೇರೆ ಕುರಿಗಳಿಗೂ ಸಹಾಯಮಾಡುವುದು.​—⁠ಗಲಾತ್ಯ 6:9 ಹೋಲಿಸಿರಿ.

2 ಯೆಹೋವನು ಪ್ರವಾದಿಯಾದ ಯೆಶಾಯನ ಮೂಲಕ ತನ್ನ ಕುಮಾರನಿಗೆ ನೇರವಾಗಿ ಸಂಬಂಧಿಸಿದ ಅನೇಕ ಪ್ರವಾದನೆಗಳನ್ನು ಪ್ರೇರಿಸಿದನು. ಈ ಪ್ರವಾದನೆಗಳು “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸು [ಕ್ರಿಸ್ತನ] ಮೇಲೆ ದೃಷ್ಟಿಯಿಟ್ಟು” ನೋಡಲು ನಮಗೆ ಸಹಾಯಮಾಡುವವು. * ಇವು ಅವನ ವ್ಯಕ್ತಿತ್ವ, ಅವನು ಅನುಭವಿಸಿದ ಕಷ್ಟಗಳು ಮತ್ತು ನಮ್ಮ ರಾಜ ಹಾಗೂ ವಿಮೋಚಕನಾಗಿ ಅವನು ಉನ್ನತಿಗೇರಿಸಲ್ಪಟ್ಟದ್ದರ ಮೇಲೆ ಬೆಳಕನ್ನು ಚೆಲ್ಲುತ್ತವೆ. ಇವು ಜ್ಞಾಪಕಾಚರಣೆಯ ಕುರಿತಾದ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವವು. ಈ ವರ್ಷ ನಾವು ಇದನ್ನು ಏಪ್ರಿಲ್‌ 9ರ ಗುರುವಾರದಂದು ಸೂರ್ಯಾಸ್ತಮಾನದ ನಂತರ ಆಚರಿಸಲಿರುವೆವು.

ಸೇವಕನು ಗುರುತಿಸಲ್ಪಡುತ್ತಾನೆ

3 ಯೆಶಾಯ ಪುಸ್ತಕದಲ್ಲಿ “ಸೇವಕ” ಎಂಬ ಪದವು ಅನೇಕ ಬಾರಿ ಕಂಡುಬರುತ್ತದೆ. ಇದು ಕೆಲವು ಬಾರಿ ಪ್ರವಾದಿಯಾದ ಯೆಶಾಯನನ್ನೇ ಸೂಚಿಸಿ ಮಾತಾಡುತ್ತದೆ. (ಯೆಶಾ. 20:3; 44:26) ಕೆಲವೊಮ್ಮೆ ಇದು ಇಡೀ ಇಸ್ರಾಯೇಲ್‌ ಜನಾಂಗ ಅಥವಾ ಯಾಕೋಬ್‌ಗೆ ಅನ್ವಯಿಸಲ್ಪಡುತ್ತದೆ. (ಯೆಶಾ. 41:​8, 9; 44:​1, 2, 21) ಆದರೆ ಯೆಶಾಯ 42, 49, 50, 52 ಮತ್ತು 53ನೇ ಅಧ್ಯಾಯಗಳಲ್ಲಿ ದಾಖಲಿಸಲ್ಪಟ್ಟಿರುವ ಸೇವಕನ ಕುರಿತಾದ ಗಮನಾರ್ಹವಾದ ಪ್ರವಾದನೆಗಳ ಕುರಿತಾಗಿ ಏನು? ಈ ಅಧ್ಯಾಯಗಳಲ್ಲಿ ತಿಳಿಸಲ್ಪಟ್ಟಿರುವ ಯೆಹೋವನ ಸೇವಕನ ಗುರುತಿನ ವಿಷಯದಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥವು ಯಾವುದೇ ಸಂದೇಹಕ್ಕೆ ಆಸ್ಪದವನ್ನು ಕೊಡುವುದಿಲ್ಲ. ಆಸಕ್ತಿಕರವಾಗಿಯೇ, ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಐಥಿಯೋಪ್ಯದ ಅಧಿಕಾರಿಯು ಈ ಪ್ರವಾದನೆಗಳಲ್ಲಿ ಒಂದನ್ನು ಓದುತ್ತಿರುವಾಗಲೇ ಸೌವಾರ್ತಿಕನಾದ ಫಿಲಿಪ್ಪನು ಅವನನ್ನು ಭೇಟಿಮಾಡುವಂತೆ ದೇವರಾತ್ಮದಿಂದ ನಿರ್ದೇಶಿಸಲ್ಪಟ್ಟನು. ನಾವು ಈಗ ಯಾವುದನ್ನು ಯೆಶಾಯ 53:​7, 8ರಲ್ಲಿ ಕಂಡುಕೊಳ್ಳುತ್ತೇವೋ ಆ ಬೈಬಲ್‌ ಭಾಗವನ್ನು ಓದಿದ ಬಳಿಕ ಆ ಅಧಿಕಾರಿಯು, “ಪ್ರವಾದಿಯು ಇದನ್ನು ಯಾರ ವಿಷಯದಲ್ಲಿ ಹೇಳಿದ್ದಾನೆ? ತನ್ನ ವಿಷಯದಲ್ಲಿಯೋ? ಮತ್ತೊಬ್ಬನ ವಿಷಯದಲ್ಲಿಯೋ?” ಎಂದು ಫಿಲಿಪ್ಪನನ್ನು ಕೇಳಿದನು. ಯೆಶಾಯನು ಮೆಸ್ಸೀಯನಾದ ಯೇಸುವಿನ ಕುರಿತು ತಿಳಿಸಿದನು ಎಂದು ವಿವರಿಸಲು ಫಿಲಿಪ್ಪನು ಕಿಂಚಿತ್ತೂ ತಡಮಾಡಲಿಲ್ಲ.​—⁠ಅ. ಕೃ. 8:​26-35.

4 ಯೇಸು ಚಿಕ್ಕ ಮಗುವಾಗಿದ್ದಾಗ ನೀತಿವಂತನಾಗಿದ್ದ ಸಿಮೆಯೋನನೆಂಬವನು ಪವಿತ್ರಾತ್ಮದ ಪ್ರೇರಣೆಯಿಂದ ‘ಮಗುವಾದ ಯೇಸು ಅನ್ಯದೇಶದವರಿಗೆ ಜ್ಞಾನೋದಯದ ಬೆಳಕಾಗುವನು’ ಎಂದು ಪ್ರಕಟಿಸಿದನು. ಇದು ಯೆಶಾಯ 42:6 ಮತ್ತು 49:6ರಲ್ಲಿ ಮುಂತಿಳಿಸಲ್ಪಟ್ಟಿತ್ತು. (ಲೂಕ 2:​25-32) ಮಾತ್ರವಲ್ಲದೆ, ಯೇಸು ವಿಚಾರಣೆಗೊಳಗಾದ ರಾತ್ರಿಯಂದು ಅವನು ಅನುಭವಿಸಿದ ಅವಮಾನಕರ ದುರುಪಚಾರವು ಯೆಶಾಯ 50:​6-9ರ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಿತ್ತು. (ಮತ್ತಾ. 26:67; ಲೂಕ 22:63) ಸಾ.ಶ. 33ರ ಪಂಚಾಶತ್ತಮದ ನಂತರ ಅಪೊಸ್ತಲ ಪೇತ್ರನು ಯೇಸುವನ್ನು ಯೆಹೋವನ “ಸೇವಕ”ನೆಂದು ಸ್ಪಷ್ಟವಾಗಿ ಗುರುತಿಸಿದನು. (ಯೆಶಾ. 52:13; 53:11; ಅಪೊಸ್ತಲರ ಕೃತ್ಯಗಳು 3:​13, 26 ಓದಿ.) ನಾವು ಈ ಮೆಸ್ಸೀಯ ಸಂಬಂಧಿತ ಪ್ರವಾದನೆಗಳಿಂದ ಏನನ್ನು ಕಲಿಯಬಲ್ಲೆವು?

ಯೆಹೋವನು ತನ್ನ ಸೇವಕನಿಗೆ ತರಬೇತಿ ನೀಡುತ್ತಾನೆ

5 ಪ್ರವಾದನೆಯು, ಯೆಹೋವನ ಚೊಚ್ಚಲು ಮಗನು ಮಾನವನಾಗಿ ಜನಿಸುವುದಕ್ಕೆ ಮುಂಚೆ ಯೆಹೋವನ ಮತ್ತು ಅವನ ನಡುವೆ ಇದ್ದ ಅತ್ಯಾಪ್ತ ಸಂಬಂಧದ ಮೇಲೆ ಬೆಳಕನ್ನು ಚೆಲ್ಲುತ್ತದೆ. (ಯೆಶಾಯ 50:​4-9 ಓದಿ.) ಯೆಹೋವನು ತನಗೆ ಸತತವಾದ ತರಬೇತಿಯನ್ನು ನೀಡಿದನು ಎಂಬುದನ್ನು ಸ್ವತಃ ಸೇವಕನೇ ಹೇಳುತ್ತಾ “ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಜಾಗರಗೊಳಿಸುತ್ತಾನೆ” ಅಂದನು. (ಯೆಶಾ. 50:⁠4) ಆ ಎಲ್ಲ ಸಮಯದಲ್ಲಿ ಯೆಹೋವನ ಸೇವಕನು ತನ್ನ ತಂದೆಗೆ ಕಿವಿಗೊಡುತ್ತಾ ಆತನಿಂದ ಕಲಿತುಕೊಳ್ಳುತ್ತಾ ಒಬ್ಬ ವಿಧೇಯ ಶಿಷ್ಯನಾದನು. ವಿಶ್ವದ ಸೃಷ್ಟಿಕರ್ತನಿಂದ ಕಲಿಸಲ್ಪಡುವುದು ಎಂತಹ ಅಪೂರ್ವ ಸದವಕಾಶವಾಗಿದೆ!

6 ಈ ಪ್ರವಾದನೆಯಲ್ಲಿ ಸೇವಕನು ತನ್ನ ತಂದೆಯನ್ನು “ಪರಮಾಧಿಕಾರಿ ಕರ್ತನಾದ ಯೆಹೋವನು” (NW) ಎಂದು ಸಂಬೋಧಿಸಿ ಮಾತಾಡುತ್ತಾನೆ. ಇದು ಯೆಹೋವನ ವಿಶ್ವ ಪರಮಾಧಿಕಾರದ ಕುರಿತಾದ ಮೂಲಭೂತ ಸತ್ಯವನ್ನು ಆ ಸೇವಕನು ಕಲಿತುಕೊಂಡಿದ್ದನು ಎಂದು ತೋರಿಸುತ್ತದೆ. ತನ್ನ ತಂದೆಗೆ ತಾನು ಸಂಪೂರ್ಣವಾಗಿ ಅಧೀನನು ಎಂಬುದನ್ನು ತೋರಿಸುತ್ತಾ ಅವನು ಹೇಳಿದ್ದು: “[ಪರಮಾಧಿಕಾರಿ] ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ; ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ.” (ಯೆಶಾ. 50:⁠5) ಅವನು ಭೌತಿಕ ವಿಶ್ವ ಮತ್ತು ಮನುಷ್ಯನ ಸೃಷ್ಟಿಯಲ್ಲಿ “[ಯೆಹೋವನ] ಹತ್ತಿರ [ಕುಶಲ] ಶಿಲ್ಪಿಯಾಗಿ” ಇದ್ದನು. ದೇವರ ಮಗನಾದ ಈ “[ಕುಶಲ] ಶಿಲ್ಪಿ . . . ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ ಆತನ ಭೂಲೋಕದಲ್ಲಿ ಉಲ್ಲಾಸಿಸುತ್ತಾ ಮಾನವಸಂತಾನದಲ್ಲಿ ಹರ್ಷಿಸುತ್ತಾ” ಇದ್ದನು.​—⁠ಜ್ಞಾನೋ. 8:​22-31.

7 ಆ ಸೇವಕನು ಪಡೆದುಕೊಂಡ ತರಬೇತಿ ಮತ್ತು ಮಾನವಕುಲದಲ್ಲಿ ಅವನಿಗಿದ್ದ ಹರ್ಷವು ಅವನು ಭೂಮಿಗೆ ಬಂದು ತೀವ್ರವಾದ ವಿರೋಧವನ್ನು ಎದುರಿಸುವುದಕ್ಕೆ ಸಿದ್ಧಪಡಿಸಿತು. ಕ್ರೂರವಾದ ಹಿಂಸೆಯ ಎದುರಿನಲ್ಲಿಯೂ ಅವನು ತನ್ನ ತಂದೆಯ ಚಿತ್ತವನ್ನು ಮಾಡುವುದರಲ್ಲಿ ಯಾವಾಗಲೂ ಸಂತೋಷವನ್ನು ಕಂಡುಕೊಂಡನು. (ಕೀರ್ತ. 40:8; ಮತ್ತಾ. 26:42; ಯೋಹಾ. 6:38) ಯೇಸು ಭೂಮಿಯಲ್ಲಿದ್ದಾಗ ಎದುರಿಸಿದ ಎಲ್ಲ ಪರೀಕ್ಷೆಗಳ ಸಮಯದಲ್ಲಿ ಅವನಿಗೆ ತನ್ನ ತಂದೆಯ ಒಪ್ಪಿಗೆ ಮತ್ತು ಬೆಂಬಲದ ಖಾತ್ರಿಯಿತ್ತು. ಯೆಶಾಯನ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಂತೆ, “ನನ್ನ ನ್ಯಾಯಸ್ಥಾಪಕನು ಸಮೀಪದಲ್ಲಿದ್ದಾನೆ; ನನ್ನೊಡನೆ ಯಾರು ವ್ಯಾಜ್ಯವಾಡುವರು? . . . ಆಹಾ, ಕರ್ತನಾದ ಯೆಹೋವನು ನನಗೆ ಸಹಾಯಮಾಡುವನು” ಎಂದು ಯೇಸು ಹೇಳಶಕ್ತನಾದನು. (ಯೆಶಾ. 50:​8, 9) ಯೆಶಾಯನ ಮತ್ತೊಂದು ಪ್ರವಾದನೆಯು ತೋರಿಸುವಂತೆ ಯೆಹೋವನು ತನ್ನ ನಂಬಿಗಸ್ತ ಸೇವಕನ ಭೂಶುಶ್ರೂಷೆಯಾದ್ಯಂತ ಖಂಡಿತವಾಗಿಯೂ ಅವನಿಗೆ ಸಹಾಯಮಾಡಿದನು.

ಭೂಮಿಯ ಮೇಲೆ ಆ ಸೇವಕನ ಶುಶ್ರೂಷೆ

8 ಯೇಸು ಸಾ.ಶ. 29ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಾಗ ಏನು ಸಂಭವಿಸಿತು ಎಂಬುದನ್ನು ತಿಳಿಸುತ್ತಾ ಬೈಬಲ್‌ ಹೀಗನ್ನುತ್ತದೆ: ‘ಪವಿತ್ರಾತ್ಮವು ಆತನ ಮೇಲೆ ಇಳಿಯಿತು. ಆಗ​—⁠ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.’ (ಲೂಕ 3:​21, 22) ಹೀಗೆ ಯೆಹೋವನು ಯೆಶಾಯನ ಪ್ರವಾದನೆಯಲ್ಲಿ ತಿಳಿಸಲ್ಪಟ್ಟಿರುವ ತನ್ನ ‘ಚುನಾಯಿತನನ್ನು’ (NW) ಸ್ಪಷ್ಟವಾಗಿ ಗುರುತಿಸಿದನು. (ಯೆಶಾಯ 42:​1-7 ಓದಿ.) ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯೇಸು ಈ ಪ್ರವಾದನೆಯನ್ನು ಗಮನಾರ್ಹವಾದ ವಿಧದಲ್ಲಿ ನೆರವೇರಿಸಿದನು. ತನ್ನ ಸುವಾರ್ತಾ ವೃತ್ತಾಂತದಲ್ಲಿ ಮತ್ತಾಯನು ಯೆಶಾಯ 42:​1-4ರಲ್ಲಿ ಕಂಡುಬರುವ ಮಾತುಗಳನ್ನು ಉಲ್ಲೇಖಿಸುತ್ತಾ ಅವುಗಳನ್ನು ಯೇಸುವಿಗೆ ಅನ್ವಯಿಸಿದನು.​—⁠ಮತ್ತಾ. 12:​15-21.

9 ಯೆಹೂದ್ಯರ ನಡುವೆ ಇದ್ದ ಸಾಮಾನ್ಯ ಜನರನ್ನು ಯೆಹೂದಿ ಧಾರ್ಮಿಕ ಮುಖಂಡರು ತಿರಸ್ಕಾರದಿಂದ ಕಾಣುತ್ತಿದ್ದರು. (ಯೋಹಾ. 7:​47-49) ಜನರನ್ನು ಒರಟಾಗಿ ನಡಿಸಿಕೊಳ್ಳಲಾಗುತ್ತಿತ್ತು ಮತ್ತು ಅವರನ್ನು ‘ಮುರಿದ ದಂಟುಗಳಿಗೆ’ ಅಥವಾ ಇನ್ನೇನು ನಂದಿಹೋಗಲಿಕ್ಕಿದ್ದ ‘ದೀಪಗಳಿಗೆ’ ಹೋಲಿಸಬಹುದಾಗಿತ್ತು. ಯೇಸುವಾದರೋ ಬಡವರಿಗೂ ಶೋಷಣೆಗೊಳಗಾಗಿದ್ದವರಿಗೂ ಕನಿಕರ ತೋರಿಸಿದನು. (ಮತ್ತಾ. 9:​35, 36) ಯೇಸು ಅವರಿಗೆ ದಯಾಭರಿತ ಆಮಂತ್ರಣವನ್ನು ನೀಡುತ್ತಾ, “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು” ಎಂದು ಹೇಳಿದನು. (ಮತ್ತಾ. 11:28) ಮಾತ್ರವಲ್ಲದೆ, ಸರಿ ಮತ್ತು ತಪ್ಪಿನ ಕುರಿತಾದ ಯೆಹೋವನ ಮಟ್ಟಗಳನ್ನು ಬೋಧಿಸುವ ಮೂಲಕ ಯೇಸು ‘ನ್ಯಾಯವನ್ನು ಹೊರತಂದನು.’ (ಯೆಶಾ. 42:​3, NIBV) ಇದಲ್ಲದೆ ದೇವರ ಧರ್ಮಶಾಸ್ತ್ರವನ್ನು ನ್ಯಾಯಸಮ್ಮತತೆಯಿಂದಲೂ ಕರುಣೆಯಿಂದಲೂ ಅನ್ವಯಿಸಬೇಕು ಎಂಬುದನ್ನು ಸಹ ಅವನು ತೋರಿಸಿದನು. (ಮತ್ತಾ. 23:23) ಶ್ರೀಮಂತರಿಗೆ ಮತ್ತು ಬಡವರಿಗೆ ಪೂರ್ವಾಗ್ರಹವಿಲ್ಲದೆ ಸಾರುವ ಮೂಲಕವೂ ಯೇಸು ನ್ಯಾಯವನ್ನು ತೋರಿಸಿದನು.​—⁠ಮತ್ತಾ. 11:5; ಲೂಕ 18:​18-23.

10 ಯೆಶಾಯನ ಪ್ರವಾದನೆಯು ಯೆಹೋವನ “ಚುನಾಯಿತನು” ‘ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವನು’ ಎಂಬುದನ್ನು ಸಹ ಮುಂತಿಳಿಸುತ್ತದೆ. (ಯೆಶಾ. 42:​4, NIBV) ಇದನ್ನು ಅವನು ಬೇಗನೆ, ಮೆಸ್ಸೀಯ ರಾಜ್ಯದ ರಾಜನಾಗಿ ಎಲ್ಲ ರಾಜಕೀಯ ರಾಜ್ಯಗಳನ್ನು ನಾಶಮಾಡಿ ಅವುಗಳ ಸ್ಥಾನದಲ್ಲಿ ತನ್ನ ಸ್ವಂತ ನೀತಿಯುತ ಆಳ್ವಿಕೆಯನ್ನು ಸ್ಥಾಪಿಸುವಾಗ ಮಾಡುವನು. ಅವನು ‘ನೀತಿಯು ವಾಸವಾಗಿರುವ’ ಒಂದು ಹೊಸ ಲೋಕವನ್ನು ತರುವನು.​—⁠2 ಪೇತ್ರ 3:13; ದಾನಿ. 2:⁠44.

‘ಬೆಳಕು’ ಮತ್ತು ‘ಒಡಂಬಡಿಕೆಯ ಆಧಾರ’

11ಯೆಶಾಯ 42:7ರ ನೆರವೇರಿಕೆಯಲ್ಲಿ ಯೇಸು ನಿಜವಾಗಿಯೂ ‘ಅನ್ಯಜನಗಳಿಗೆ ಬೆಳಕಾಗಿ’ ಕಂಡುಬಂದನು. ತನ್ನ ಭೂಶುಶ್ರೂಷೆಯ ಸಮಯದಲ್ಲಿ ಅವನು ಮುಖ್ಯವಾಗಿ ಯೆಹೂದ್ಯರಿಗೆ ಆಧ್ಯಾತ್ಮಿಕ ಬೆಳಕನ್ನು ತಂದನು. (ಮತ್ತಾ. 15:24; ಅ. ಕೃ. 3:26) ಆದರೆ, “ನಾನೇ ಲೋಕಕ್ಕೆ ಬೆಳಕು” ಎಂದು ಯೇಸು ಹೇಳಿದನು. (ಯೋಹಾ. 8:12) ಅವನು ಯೆಹೂದ್ಯರಿಗೆ ಹಾಗೂ ಅನ್ಯಜನಗಳಿಗೆ ಆಧ್ಯಾತ್ಮಿಕ ಜ್ಞಾನೋದಯವನ್ನು ತರುವ ಮೂಲಕ ಮಾತ್ರವಲ್ಲದೆ ಇಡೀ ಮಾನವಕುಲಕ್ಕಾಗಿ ತನ್ನ ಪರಿಪೂರ್ಣ ಮಾನವ ಜೀವವನ್ನು ವಿಮೋಚನಾ ಮೌಲ್ಯವಾಗಿ ಅರ್ಪಿಸುವ ಮೂಲಕವೂ ಬೆಳಕಾಗಿ ಪರಿಣಮಿಸಿದನು. (ಮತ್ತಾ. 20:28) ತನ್ನ ಪುನರುತ್ಥಾನದ ಬಳಿಕ, “ಭೂಲೋಕದ ಕಟ್ಟಕಡೆಯವರೆಗೂ” ತನಗೆ ಸಾಕ್ಷಿಗಳಾಗಿರಬೇಕು ಎಂದು ತನ್ನ ಶಿಷ್ಯರಿಗೆ ಆಜ್ಞೆಯನ್ನಿತ್ತನು. (ಅ. ಕೃ. 1:⁠8) ತಮ್ಮ ಶುಶ್ರೂಷೆಯ ಸಮಯದಲ್ಲಿ ಪೌಲ-ಬಾರ್ನಬರು ‘ಅನ್ಯಜನಗಳ ಬೆಳಕು’ ಎಂಬ ಅಭಿವ್ಯಕ್ತಿಯನ್ನು ಉಲ್ಲೇಖಿಸಿದರು ಮತ್ತು ಯೆಹೂದ್ಯೇತರರ ಮಧ್ಯೆ ತಾವು ಮಾಡುತ್ತಿದ್ದ ಸಾಕ್ಷಿಕಾರ್ಯಕ್ಕೆ ಅದನ್ನು ಅನ್ವಯಿಸಿದರು. (ಅ. ಕೃ. 13:​46-48; ಯೆಶಾಯ 49:6 ಹೋಲಿಸಿರಿ.) ಭೂಮಿಯಲ್ಲಿರುವ ಯೇಸುವಿನ ಅಭಿಷಿಕ್ತ ಸಹೋದರರು ಮತ್ತು ಅವರ ಸಂಗಡಿಗರು ಆಧ್ಯಾತ್ಮಿಕ ಬೆಳಕನ್ನು ಪಸರಿಸುತ್ತಾ ‘ಅನ್ಯಜನಗಳಿಗೆ ಬೆಳಕಾಗಿರುವ’ ಯೇಸುವಿನಲ್ಲಿ ನಂಬಿಕೆಯಿಡಲು ಜನರಿಗೆ ಸಹಾಯಮಾಡುತ್ತಾ ಇರುವಾಗ ಈ ಕೆಲಸವು ಈಗಲೂ ನಡೆಸಲ್ಪಡುತ್ತಿದೆ.

12 ಅದೇ ಪ್ರವಾದನೆಯಲ್ಲಿ ಯೆಹೋವನು ತನ್ನ ಚುನಾಯಿತ ಸೇವಕನಿಗೆ, ‘ನಾನು ನಿನ್ನನ್ನು ಕಾಪಾಡಿ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇಮಿಸಿದ್ದೇನೆ’ ಎಂದು ಹೇಳಿದನು. (ಯೆಶಾ. 42:⁠7) ಸೈತಾನನು ಯೇಸುವನ್ನು ನಾಶಮಾಡಲು ಮತ್ತು ತನ್ನ ಭೂಶುಶ್ರೂಷೆಯನ್ನು ಪೂರ್ಣಗೊಳಿಸುವುದರಿಂದ ಯೇಸುವನ್ನು ತಡೆಯಲು ಸತತವಾಗಿ ಪ್ರಯತ್ನಿಸಿದನು, ಆದರೆ ಯೇಸು ಸಾಯಲು ನೇಮಿತ ಸಮಯವು ಬರುವ ತನಕ ಯೆಹೋವನು ಅವನನ್ನು ಸಂರಕ್ಷಿಸಿದನು. (ಮತ್ತಾ. 2:13; ಯೋಹಾ. 7:30) ತದನಂತರ ಯೆಹೋವನು ಯೇಸುವನ್ನು ಪುನರುತ್ಥಾನಗೊಳಿಸಿ ಭೂಮಿಯಲ್ಲಿದ್ದ ಜನರಿಗೆ “ಒಡಂಬಡಿಕೆಯ ಆಧಾರವನ್ನಾಗಿ” ಅಥವಾ ಒಂದು ಪ್ರತಿಜ್ಞೆಯಾಗಿ ಕೊಟ್ಟನು. ಆ ಗಂಭೀರವಾದ ವಾಗ್ದಾನವು ದೇವರ ನಂಬಿಗಸ್ತ ಸೇವಕನು ಆಧ್ಯಾತ್ಮಿಕವಾಗಿ ಕತ್ತಲೆಯಲ್ಲಿರುವವರನ್ನು ಬಿಡಿಸುತ್ತಾ ‘ಅನ್ಯಜನಗಳಿಗೆ ಬೆಳಕಾಗಿ’ ಮುಂದುವರಿಯಲಿದ್ದಾನೆ ಎಂಬ ಖಾತ್ರಿಯನ್ನು ಕೊಟ್ಟಿತು.​—⁠ಯೆಶಾಯ 49:​8, 9 ಓದಿ. *

13 ಈ ಪ್ರತಿಜ್ಞೆಗೆ ಹೊಂದಿಕೆಯಲ್ಲಿ ಯೆಹೋವನ ಚುನಾಯಿತ ಸೇವಕನು ‘ಕುರುಡರಿಗೆ ಕಣ್ಣುಕೊಡುವನು,’ ‘ಬಂದಿಗಳನ್ನು ಸೆರೆಯಿಂದ ಹೊರಗೆ ಕರತರುವನು’ ಮತ್ತು ‘ಕತ್ತಲಲ್ಲಿ ಬಿದ್ದವರನ್ನು’ ಬಿಡಿಸುವನು. (ಯೆಶಾ. 42:⁠6) ಇದನ್ನು ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಸುಳ್ಳು ಧಾರ್ಮಿಕ ಸಂಪ್ರದಾಯಗಳನ್ನು ಬಯಲುಪಡಿಸುವ ಮೂಲಕ ಮತ್ತು ದೇವರ ರಾಜ್ಯದ ಕುರಿತಾದ ಸುವಾರ್ತೆಯನ್ನು ಸಾರುವ ಮೂಲಕ ಮಾಡಿದನು. (ಮತ್ತಾ. 15:3; ಲೂಕ 8:⁠1) ಹೀಗೆ ಅವನು ತನ್ನ ಶಿಷ್ಯರಾಗಿ ಪರಿಣಮಿಸಿದ ಯೆಹೂದ್ಯರನ್ನು ಆಧ್ಯಾತ್ಮಿಕ ಬಂಧನದಿಂದ ಬಿಡಿಸಿದನು. (ಯೋಹಾ. 8:​31, 32) ತದ್ರೀತಿಯಲ್ಲಿ ಯೇಸು ಲಕ್ಷಾಂತರ ಮಂದಿ ಯೆಹೂದ್ಯೇತರರಿಗೆ ಆಧ್ಯಾತ್ಮಿಕ ಬಿಡುಗಡೆಯನ್ನು ತಂದಿದ್ದಾನೆ. ಅವನು ತನ್ನ ಹಿಂಬಾಲಕರಿಗೆ, “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಆಜ್ಞೆಯನ್ನು ಕೊಟ್ಟು “ಯುಗದ ಸಮಾಪ್ತಿಯ ವರೆಗೂ” ತನ್ನ ಹಿಂಬಾಲಕರೊಂದಿಗೆ ಇರುವೆನು ಎಂದು ವಾಗ್ದಾನಿಸಿದ್ದಾನೆ. (ಮತ್ತಾ. 28:​19, 20) ತನ್ನ ಸ್ವರ್ಗೀಯ ಸ್ಥಾನದಿಂದ ಕ್ರಿಸ್ತ ಯೇಸು ಲೋಕವ್ಯಾಪಕವಾಗಿ ನಡೆಯುತ್ತಿರುವ ಸಾರುವ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದಾನೆ.

ಯೆಹೋವನು ‘ಸೇವಕನನ್ನು’ ಉನ್ನತಿಗೇರಿಸಿದನು

14 ತನ್ನ ಮೆಸ್ಸೀಯ ಸೇವಕನ ಕುರಿತಾದ ಮತ್ತೊಂದು ಪ್ರವಾದನೆಯಲ್ಲಿ ಯೆಹೋವನು, “ಇಗೋ, ನನ್ನ ಸೇವಕನು ಕೃತಾರ್ಥನಾಗುವನು; ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತಪದವಿಗೆ ಬರುವನು” ಎಂದು ಹೇಳುತ್ತಾನೆ. (ಯೆಶಾ. 52:13) ತನ್ನ ಪರಮಾಧಿಕಾರಕ್ಕೆ ತನ್ನ ಮಗನು ತೋರಿಸಿದ ನಿಷ್ಠಾವಂತ ಅಧೀನತೆಯ ಕಾರಣ ಮತ್ತು ಅತಿ ಕಠಿನವಾದ ಪರೀಕ್ಷೆಯ ಕೆಳಗೆ ಅವನು ತೋರಿಸಿದ ನಂಬಿಗಸ್ತಿಕೆಯಿಂದಾಗಿ ಯೆಹೋವನು ಅವನನ್ನು ಉನ್ನತಿಗೇರಿಸಿದನು.

15 ಯೇಸುವಿನ ಕುರಿತು ಅಪೊಸ್ತಲ ಪೇತ್ರನು, “ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ; ದೇವದೂತರೂ ಅಧಿಕಾರಿಗಳೂ ಮಹತ್ವಗಳೂ ಆತನ ಸ್ವಾಧೀನವಾಗಿವೆ” ಎಂದು ಬರೆದನು. (1 ಪೇತ್ರ 3:22) ತದ್ರೀತಿಯಲ್ಲಿ ಅಪೊಸ್ತಲ ಪೌಲನು ಬರೆದುದು: “ಆತನು . . . ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ [ಯಾತನಾ ಕಂಬದ] ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದದರಿಂದ ಸ್ವರ್ಗ ಮರ್ತಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.”​—⁠ಫಿಲಿ. 2:​8-11.

16 ಇಸವಿ 1914ರಲ್ಲಿ ಯೆಹೋವನು ಯೇಸುವನ್ನು ಇನ್ನಷ್ಟು ಉನ್ನತಿಗೇರಿಸಿದನು. ಯೆಹೋವನು ಅವನನ್ನು ಮೆಸ್ಸೀಯ ರಾಜ್ಯದ ರಾಜನಾಗಿ ಸಿಂಹಾಸನಕ್ಕೇರಿಸಿದಾಗ ಅವನು “ಮಹೋನ್ನತಪದವಿಗೆ” ಏರಿಸಲ್ಪಟ್ಟನು. (ಕೀರ್ತ. 2:6; ದಾನಿ. 7:​13, 14) ಅಂದಿನಿಂದ ಕ್ರಿಸ್ತನು “[ತನ್ನ] ವೈರಿಗಳ ಮಧ್ಯದಲ್ಲಿ ದೊರೆತನ”ಮಾಡಲಾರಂಭಿಸಿದ್ದಾನೆ. (ಕೀರ್ತ. 110:⁠2) ಅವನು ಮೊದಲು ಸೈತಾನನನ್ನೂ ಅವನ ದೆವ್ವಗಳನ್ನೂ ಪರಾಜಯಪಡಿಸಿ ಅವರನ್ನು ಭೂಕ್ಷೇತ್ರಕ್ಕೆ ದೊಬ್ಬಿಬಿಟ್ಟನು. (ಪ್ರಕ. 12:​7-12) ಅನಂತರ ಕ್ರಿಸ್ತನು ಮಹಾ ಕೋರೆಷನಾಗಿ ಕ್ರಿಯೆಗೈಯುತ್ತಾ ಭೂಮಿಯಲ್ಲಿದ್ದ ತನ್ನ ಅಭಿಷಿಕ್ತ ಸಹೋದರರಲ್ಲಿ ಉಳಿಕೆಯವರನ್ನು ‘ಮಹಾ ಬಾಬೆಲ್‌ನ’ ಹಿಡಿತದಿಂದ ಬಿಡಿಸಿದನು. (ಪ್ರಕ. 18:2; ಯೆಶಾ. 44:28) ಅವನು ಮುಂದೆ ನಿಂತು ನಡಿಸುತ್ತಿರುವ ಒಂದು ಲೋಕವ್ಯಾಪಕ ಸಾರುವ ಕೆಲಸದ ಫಲಿತಾಂಶವಾಗಿ ಅವನ ಆಧ್ಯಾತ್ಮಿಕ ಸಹೋದರರಲ್ಲಿ ‘ಉಳಿದವರು’ ಕೂಡಿಸಲ್ಪಟ್ಟಿದ್ದಾರೆ ಮತ್ತು ‘ಚಿಕ್ಕ ಹಿಂಡಿನ’ ನಿಷ್ಠಾವಂತ ಸಂಗಡಿಗರಾದ “ಬೇರೆ ಕುರಿಗಳು” ಲಕ್ಷಾಂತರ ಸಂಖ್ಯೆಯಲ್ಲಿ ಕೂಡಿಸಲ್ಪಟ್ಟಿದ್ದಾರೆ.​—⁠ಪ್ರಕ. 12:17; ಯೋಹಾ. 10:16; ಲೂಕ 12:⁠32.

17 ಯೆಶಾಯ ಪುಸ್ತಕದಲ್ಲಿರುವ ಈ ಗಮನಾರ್ಹ ಪ್ರವಾದನೆಗಳನ್ನು ಅಧ್ಯಯನ ಮಾಡಿದ್ದರಿಂದ ನಮ್ಮ ರಾಜನೂ ವಿಮೋಚಕನೂ ಆದ ಕ್ರಿಸ್ತ ಯೇಸುವಿಗಾಗಿರುವ ನಮ್ಮ ಗಣ್ಯತೆಯು ಇನ್ನಷ್ಟು ಹೆಚ್ಚಾಗಿದೆ ಎಂಬುದು ಖಂಡಿತ. ಅವನು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಒಬ್ಬ ಮಗನಾಗಿ ತೋರಿಸಿದ ಅಧೀನತೆಯು ಭೂಮಿಗೆ ಬರುವ ಮುಂಚೆ ತನ್ನ ತಂದೆಯ ಬಳಿಯಲ್ಲಿ ಪಡೆದುಕೊಂಡ ತರಬೇತಿಯನ್ನು ಪ್ರತಿಬಿಂಬಿಸುತ್ತದೆ. ಅವನು ತನ್ನ ಸ್ವಂತ ಶುಶ್ರೂಷೆಯ ಮೂಲಕ ಮತ್ತು ಇಂದಿನ ತನಕವೂ ಮೇಲ್ವಿಚಾರಣೆ ನಡಿಸುತ್ತಿರುವ ಸಾರುವ ಕೆಲಸದ ಮೂಲಕ ತಾನು ನಿಜವಾಗಿಯೂ ‘ಅನ್ಯಜನಗಳಿಗೆ ಬೆಳಕಾಗಿದ್ದೇನೆ’ ಎಂಬುದನ್ನು ರುಜುಪಡಿಸಿದ್ದಾನೆ. ನಾವು ಮುಂದೆ ನೋಡಲಿರುವಂತೆ, ಮೆಸ್ಸೀಯ ಸೇವಕನ ಕುರಿತಾದ ಮತ್ತೊಂದು ಪ್ರವಾದನೆಯು ಅವನು ನಮ್ಮ ಪ್ರಯೋಜನಕ್ಕಾಗಿ ಬಾಧೆಯನ್ನು ಅನುಭವಿಸಿ ತನ್ನ ಪ್ರಾಣವನ್ನು ಧಾರೆಯೆರೆಯುವನು ಎಂಬುದನ್ನು ತಿಳಿಯಪಡಿಸುತ್ತದೆ. ಅವನ ಮರಣದ ಜ್ಞಾಪಕಾಚರಣೆಯು ಸಮೀಪಿಸುತ್ತಿರುವಾಗ ಈ ವಿಚಾರಗಳನ್ನು ‘ನಿಕಟವಾಗಿ ಪರಿಗಣಿಸುವುದು’ (NW) ಪ್ರಾಮುಖ್ಯ.​—⁠ಇಬ್ರಿ. 12:​2, 3.

[ಪಾದಟಿಪ್ಪಣಿಗಳು]

^ ಪ್ಯಾರ. 4 ಈ ಪ್ರವಾದನೆಗಳನ್ನು ನೀವು ಯೆಶಾಯ 42:​1-7; 49:​1-12; 50:​4-9; ಮತ್ತು 52:​13–53:12ರಲ್ಲಿ ಕಂಡುಕೊಳ್ಳಸಾಧ್ಯವಿದೆ.

^ ಪ್ಯಾರ. 18 ಯೆಶಾಯ 49:​1-12ರಲ್ಲಿರುವ ಪ್ರವಾದನೆಯ ಚರ್ಚೆಗಾಗಿ ಯೆಶಾಯನ ಪ್ರವಾದನೆ​—⁠ಸಕಲ ಮಾನವಕುಲಕ್ಕೆ ಬೆಳಕು II, ಪುಟ 136-145ನ್ನು ನೋಡಿ.

ಪುನರ್ವಿಮರ್ಶೆ

• ಯೆಶಾಯನ ಪ್ರವಾನೆಗಳಲ್ಲಿ ತಿಳಿಸಲ್ಪಟ್ಟಿರುವ “ಸೇವಕನು” ಯಾರು ಮತ್ತು ಇದು ನಮಗೆ ಹೇಗೆ ಗೊತ್ತು?

• ಸೇವಕನು ಯೆಹೋವನಿಂದ ಯಾವ ತರಬೇತಿಯನ್ನು ಪಡೆದುಕೊಂಡನು?

• ಯೇಸು ಹೇಗೆ ‘ಅನ್ಯಜನಗಳಿಗೆ ಬೆಳಕಾಗಿದ್ದಾನೆ’?

• ಸೇವಕನು ಹೇಗೆ ಉನ್ನತಿಗೇರಿಸಲ್ಪಟ್ಟನು?

[ಅಧ್ಯಯನ ಪ್ರಶ್ನೆಗಳು]

1. ಮುಖ್ಯವಾಗಿ ಜ್ಞಾಪಕಾಚರಣೆಯು ಹತ್ತಿರವಾಗುತ್ತಿರುವಾಗ ಯೆಹೋವನ ಜನರು ಏನು ಮಾಡುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದಾರೆ ಮತ್ತು ಏಕೆ?

2. ದೇವಕುಮಾರನಿಗೆ ಸಂಬಂಧಿಸಿದ ಯೆಶಾಯನ ಪ್ರವಾದನೆಗಳಿಂದ ನಾವು ಏನನ್ನು ಕಲಿಯಸಾಧ್ಯವಿದೆ?

3, 4. (ಎ) ಯೆಶಾಯ ಪುಸ್ತಕದಲ್ಲಿ “ಸೇವಕ” ಎಂಬ ಪದ ಯಾವುದಕ್ಕೆ ಸೂಚಿತವಾಗಿದೆ? (ಬಿ) ಯೆಶಾಯ 42, 49, 50, 52 ಮತ್ತು 53ನೇ ಅಧ್ಯಾಯಗಳಲ್ಲಿ ತಿಳಿಸಲ್ಪಟ್ಟಿರುವ ಸೇವಕನನ್ನು ಬೈಬಲ್‌ ಹೇಗೆ ಗುರುತಿಸುತ್ತದೆ?

5. ಸೇವಕನು ಎಂತಹ ತರಬೇತಿಯನ್ನು ಪಡೆದುಕೊಂಡನು?

6. ತನ್ನ ತಂದೆಗೆ ತಾನು ಸಂಪೂರ್ಣವಾಗಿ ಅಧೀನನು ಎಂಬುದನ್ನು ಸೇವಕನು ಹೇಗೆ ತೋರಿಸಿಕೊಟ್ಟನು?

7. ಸೇವಕನು ಪರೀಕ್ಷೆಗಳನ್ನು ಎದುರಿಸಿದಾಗ ಅವನಿಗೆ ತನ್ನ ತಂದೆಯ ಬೆಂಬಲದ ಖಾತ್ರಿಯಿತ್ತು ಎಂಬುದನ್ನು ಯಾವುದು ತೋರಿಸುತ್ತದೆ?

8. ಯೆಶಾಯ 42:1ರಲ್ಲಿ ಮುಂತಿಳಿಸಲ್ಪಟ್ಟಿರುವಂತೆ ಯೇಸುವೇ ಯೆಹೋವನ “ಚುನಾಯಿತನು” ಎಂಬುದನ್ನು ಯಾವುದು ರುಜುಪಡಿಸುತ್ತದೆ?

9, 10. (ಎ) ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ಯೆಶಾಯ 42:3ನ್ನು ಹೇಗೆ ನೆರವೇರಿಸಿದನು? (ಬಿ) ಯೇಸು ಭೂಮಿಯಲ್ಲಿದ್ದಾಗ ಹೇಗೆ ‘ನ್ಯಾಯವನ್ನು ಹೊರತಂದನು’ ಮತ್ತು ಅವನು ಯಾವಾಗ ‘ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವನು’?

11. ಪ್ರಥಮ ಶತಮಾನದಲ್ಲಿ ಯೇಸು ಯಾವ ಅರ್ಥದಲ್ಲಿ ‘ಅನ್ಯಜನಗಳಿಗೆ ಬೆಳಕಾಗಿದ್ದನು’ ಮತ್ತು ಇಂದಿನ ತನಕವೂ ಅವನು ಹೇಗೆ ‘ಅನ್ಯಜನಗಳಿಗೆ ಬೆಳಕಾಗಿದ್ದಾನೆ’?

12. ಯೆಹೋವನು ಹೇಗೆ ತನ್ನ ಸೇವಕನನ್ನು ‘ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿ ನೇಮಿಸಿದ್ದಾನೆ’?

13. ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯೇಸು ಯಾವ ವಿಧದಲ್ಲಿ ‘ಕತ್ತಲಲ್ಲಿ ಬಿದ್ದವರನ್ನು’ ಬಿಡಿಸಿದನು ಮತ್ತು ಅದನ್ನು ಮಾಡುವುದನ್ನು ಹೇಗೆ ಮುಂದುವರಿಸಿದ್ದಾನೆ?

14, 15. ಯೆಹೋವನು ತನ್ನ ಸೇವಕನನ್ನು ಏಕೆ ಮತ್ತು ಹೇಗೆ ಉನ್ನತಿಗೇರಿಸಿದನು?

16. ಇಸವಿ 1914ರಲ್ಲಿ ಯೇಸು “ಮಹೋನ್ನತಪದವಿಗೆ” ಏರಿಸಲ್ಪಟ್ಟದ್ದು ಹೇಗೆ ಮತ್ತು ಅಂದಿನಿಂದ ಅವನು ಏನನ್ನು ಸಾಧಿಸಿದ್ದಾನೆ?

17. ‘ಸೇವಕನ’ ಕುರಿತಾದ ಯೆಶಾಯನ ಪ್ರವಾದನೆಗಳನ್ನು ಅಧ್ಯಯನ ಮಾಡಿದ್ದರಿಂದ ಇಷ್ಟರ ತನಕ ನಾವು ಏನನ್ನು ಕಲಿತಿದ್ದೇವೆ?

[ಪುಟ 21ರಲ್ಲಿರುವ ಚಿತ್ರ]

ಯೆಶಾಯನಿಂದ ತಿಳಿಸಲ್ಪಟ್ಟ “ಸೇವಕನು” ಮೆಸ್ಸೀಯನಾದ ಯೇಸುವೇ ಆಗಿದ್ದನು ಎಂದು ಫಿಲಿಪ್ಪನು ಸ್ಪಷ್ಟವಾಗಿ ಗುರುತಿಸಿದನು

[ಪುಟ 23ರಲ್ಲಿರುವ ಚಿತ್ರ]

ಯೆಹೋವನ ಚುನಾಯಿತ ಸೇವಕನಾಗಿ ಯೇಸು ಬಡವರಿಗೂ ಶೋಷಣೆಗೊಳಗಾಗಿದ್ದವರಿಗೂ ಕನಿಕರ ತೋರಿಸಿದನು

[ಪುಟ 24ರಲ್ಲಿರುವ ಚಿತ್ರ]

ಯೇಸು ತನ್ನ ತಂದೆಯಿಂದ ಉನ್ನತಿಗೇರಿಸಲ್ಪಟ್ಟನು ಮತ್ತು ಮೆಸ್ಸೀಯ ರಾಜ್ಯದ ರಾಜನಾಗಿ ಸಿಂಹಾಸನಕ್ಕೇರಿಸಲ್ಪಟ್ಟನು