ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ‘ದೇವರ ಅಪಾತ್ರ ದಯೆಯ ಮನೆವಾರ್ತೆಯವರು’ ಆಗಿದ್ದೀರೊ?

ನೀವು ‘ದೇವರ ಅಪಾತ್ರ ದಯೆಯ ಮನೆವಾರ್ತೆಯವರು’ ಆಗಿದ್ದೀರೊ?

ನೀವು ‘ದೇವರ ಅಪಾತ್ರ ದಯೆಯ ಮನೆವಾರ್ತೆಯವರು’ ಆಗಿದ್ದೀರೊ?

“ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು [ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ]. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” ​—⁠ರೋಮಾ. 12:⁠10.

ನಾವು ನಿರುತ್ಸಾಹಗೊಂಡಿರುವಾಗ ಅಥವಾ ಎದೆಗುಂದಿರುವಾಗ ಯೆಹೋವನು ನಮ್ಮ ಸಹಾಯಕ್ಕೆ ಬರುತ್ತಾನೆ ಎಂದು ದೇವರ ವಾಕ್ಯವು ನಮಗೆ ಪದೇ ಪದೇ ಆಶ್ವಾಸನೆ ನೀಡುತ್ತದೆ. ಉದಾಹರಣೆಗೆ, ಈ ಮುಂದಿನ ಸಾಂತ್ವನದಾಯಕ ಮಾತುಗಳನ್ನು ಗಮನಿಸಿರಿ: “ಯೆಹೋವನು ಬೀಳುವವರೆಲ್ಲರನ್ನು ಉದ್ಧಾರ ಮಾಡುತ್ತಾನೆ; [ಕುಗ್ಗಿದವರನ್ನು] ಎತ್ತುತ್ತಾನೆ.” “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ.” (ಕೀರ್ತ. 145:14; 147:⁠3) ಅಷ್ಟುಮಾತ್ರವಲ್ಲದೆ, ನಮ್ಮ ಸ್ವರ್ಗೀಯ ತಂದೆಯು ತಾನೇ ಹೀಗೆ ಹೇಳುತ್ತಾನೆ: “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.”​—⁠ಯೆಶಾ. 41:⁠13.

2 ಆದರೆ ಅದೃಶ್ಯವಾದ ಸ್ವರ್ಗದಲ್ಲಿ ನಿವಾಸಿಸುವವನಾದ ಯೆಹೋವನು ಹೇಗೆ ‘ನಮ್ಮ ಕೈಹಿಡಿಯುತ್ತಾನೆ’? ನಾವು ಮನೋವ್ಯಥೆಯಿಂದ ಕುಗ್ಗಿರುವಾಗ ಆತನು ನಮ್ಮನ್ನು ಹೇಗೆ ‘ಎತ್ತುತ್ತಾನೆ’? ಯೆಹೋವ ದೇವರು ಇಂಥ ಬೆಂಬಲವನ್ನು ಬೇರೆ ಬೇರೆ ವಿಧಗಳಲ್ಲಿ ನೀಡುತ್ತಾನೆ. ಉದಾಹರಣೆಗೆ, ಆತನು ತನ್ನ ಪವಿತ್ರಾತ್ಮದ ಮೂಲಕ ತನ್ನ ಜನರಿಗೆ ‘ಬಲಾಧಿಕ್ಯವನ್ನು’ ಅಂದರೆ ಸಹಜವಾದ ಶಕ್ತಿಗಿಂತಲೂ ಹೆಚ್ಚಿನ ಶಕ್ತಿಯನ್ನು ಕೊಡುತ್ತಾನೆ. (2 ಕೊರಿಂ. 4:7; ಯೋಹಾ. 14:​16, 17) ಪ್ರಬಲವಾದದ್ದಾಗಿರುವ ದೇವರ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸಂದೇಶದಿಂದಲೂ ದೇವರ ಸೇವಕರು ಮೇಲಕ್ಕೆತ್ತಲ್ಪಡುತ್ತಾರೆ. (ಇಬ್ರಿ. 4:12) ಯೆಹೋವನು ನಮ್ಮನ್ನು ಬಲಪಡಿಸುವಂಥ ಇನ್ನೂ ಒಂದು ವಿಧವು ಇದೆಯೊ? ಪೇತ್ರನ ಮೊದಲನೆಯ ಪುಸ್ತಕದಲ್ಲಿ ನಾವು ಇದಕ್ಕೆ ಉತ್ತರವನ್ನು ಕಂಡುಕೊಳ್ಳುತ್ತೇವೆ.

“ವಿವಿಧ ರೀತಿಯಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ದೇವರ ಅಪಾತ್ರ ದಯೆ”

3 ಅಪೊಸ್ತಲ ಪೇತ್ರನು ಆತ್ಮಾಭಿಷಿಕ್ತರಾಗಿದ್ದ ವಿಶ್ವಾಸಿಗಳನ್ನು ಸಂಬೋಧಿಸುತ್ತಾ, ಅವರಿಗಾಗಿ ಅಮೂಲ್ಯವಾದ ಬಹುಮಾನವು ಕಾದಿರಿಸಲ್ಪಟ್ಟಿರುವುದರಿಂದ ಆನಂದಭರಿತರಾಗಿರಲು ಅವರಿಗೆ ಸಕಾರಣವಿದೆ ಎಂದು ಬರೆಯುತ್ತಾನೆ. ತದನಂತರ ಅವನು ಕೂಡಿಸಿ ಹೇಳುವುದು: ‘ನೀವು ಸದ್ಯಕ್ಕೆ ಸ್ವಲ್ಪಕಾಲ ನಾನಾ ಕಷ್ಟಗಳಲ್ಲಿದ್ದು [ಪರೀಕ್ಷೆಗಳಿಂದ] ದುಃಖಿಸುವವರಾಗಿದ್ದೀರಿ.’ (1 ಪೇತ್ರ 1:​1-6) “ನಾನಾ” ಎಂಬ ಪದವನ್ನು ಗಮನಿಸಿರಿ. ಪರೀಕ್ಷೆಗಳು ಬೇರೆ ಬೇರೆ ವಿಧಗಳಲ್ಲಿ ಬರುತ್ತವೆ ಎಂಬುದನ್ನು ಇದು ಸೂಚಿಸುತ್ತದೆ. ಆದರೆ ಪೇತ್ರನು ಅಷ್ಟಕ್ಕೇ ನಿಲ್ಲಿಸುವುದಿಲ್ಲ. ಅವನು ಹಾಗೆ ಮಾಡುತ್ತಿದ್ದಲ್ಲಿ, ತಾವು ಇಂಥ ನಾನಾ ರೀತಿಯ ಪರೀಕ್ಷೆಗಳನ್ನು ತಾಳಿಕೊಳ್ಳಲು ಶಕ್ತರಾಗುವೆವೋ ಇಲ್ಲವೊ ಎಂದು ಅವನ ಸಹೋದರರು ಆಲೋಚಿಸುತ್ತಾ ಇರುವಂತಾಗುತ್ತಿತ್ತು. ಅದಕ್ಕೆ ಬದಲಾಗಿ, ಕ್ರೈಸ್ತರು ಎದುರಿಸುವ ಪರೀಕ್ಷೆಯು ಯಾವುದೇ ರೀತಿಯದ್ದಾಗಿರಲಿ, ಅವರು ಎದುರಿಸುವ ಪ್ರತಿಯೊಂದು ಪರೀಕ್ಷೆಯನ್ನು ತಾಳಿಕೊಳ್ಳುವಂತೆ ಯೆಹೋವನು ಸಹಾಯಮಾಡುವನು ಎಂಬ ಖಾತ್ರಿ ಅವರಿಗೆ ಇರಸಾಧ್ಯವಿದೆ ಎಂದು ಪೇತ್ರನು ತಿಳಿಸುತ್ತಾನೆ. ಪೇತ್ರನ ಪತ್ರದ ಕೊನೆಯ ಭಾಗದಲ್ಲಿ ಈ ಆಶ್ವಾಸನೆಯು ಕೊಡಲ್ಪಟ್ಟಿದೆ. ಈ ಅಪೊಸ್ತಲನು ಅಲ್ಲಿ “ಎಲ್ಲವುಗಳ ಅಂತ್ಯ”ಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತಾನೆ.​—⁠1 ಪೇತ್ರ 4:⁠7.

4 ಪೇತ್ರನು ಹೇಳುವುದು: “[ನಾನಾ] ರೀತಿಯಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ದೇವರ ಅಪಾತ್ರ ದಯೆಯ ಉತ್ತಮ ಮನೆವಾರ್ತೆಯವರಾಗಿರುವ ಪ್ರತಿಯೊಬ್ಬನು ತನಗೆ ಸಿಕ್ಕಿದ ವರದ ಪ್ರಮಾಣಕ್ಕನುಸಾರ ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ ಅದನ್ನು ಉಪಯೋಗಿಸಲಿ.” (1 ಪೇತ್ರ 4:​10, NW) ಪೇತ್ರನು ಪುನಃ “ನಾನಾ” ಎಂಬ ಪದವನ್ನು ಉಪಯೋಗಿಸುತ್ತಾನೆ. ಕಾರ್ಯತಃ ಅವನು ಹೇಳುವುದೇನೆಂದರೆ, ‘ಪರೀಕ್ಷೆಗಳು ಅನೇಕ ಭಿನ್ನ ವಿಧಗಳಲ್ಲಿ ಬರುತ್ತವೆ, ಆದರೆ ದೇವರ ಅಪಾತ್ರ ದಯೆಯ ಅಭಿವ್ಯಕ್ತಿಗಳು ಸಹ ಅನೇಕ ಭಿನ್ನ ವಿಧಗಳಲ್ಲಿ ಬರುತ್ತವೆ.’ ಈ ಹೇಳಿಕೆಯು ಸಾಂತ್ವನದಾಯಕವಾಗಿದೆ ಏಕೆ? ನಮಗೆ ಎದುರಾಗುವ ಪರೀಕ್ಷೆಯು ಯಾವುದೇ ರೀತಿಯದ್ದಾಗಿರಲಿ, ಅದನ್ನು ತಾಳಿಕೊಳ್ಳಲು ನಮಗೆ ಸಹಾಯಮಾಡುವಂಥ ದೇವರ ಅಪಾತ್ರ ದಯೆಯ ಒಂದು ಅಭಿವ್ಯಕ್ತಿಯು ಯಾವಾಗಲೂ ಇರುತ್ತದೆ ಎಂಬುದನ್ನು ಅದು ಸೂಚಿಸುತ್ತದೆ. ಆದರೂ, ಯೆಹೋವನ ಅಪಾತ್ರ ದಯೆಯು ನಮಗೆ ಹೇಗೆ ತಾನೇ ವ್ಯಕ್ತಪಡಿಸಲ್ಪಡುತ್ತದೆ ಎಂಬುದನ್ನು ನೀವು ಪೇತ್ರನ ಹೇಳಿಕೆಯಲ್ಲಿ ಗಮನಿಸಿದಿರೊ? ಜೊತೆ ಕ್ರೈಸ್ತರ ಮೂಲಕವೇ.

“ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ”

5 ಕ್ರೈಸ್ತ ಸಭೆಯ ಎಲ್ಲ ಸದಸ್ಯರನ್ನು ಸಂಬೋಧಿಸುತ್ತಾ ಪೇತ್ರನು ಹೇಳುವುದು: “ಮೊಟ್ಟಮೊದಲು ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ.” ತದನಂತರ ಅವನು ಕೂಡಿಸಿ ಹೇಳುವುದು: “ಪ್ರತಿಯೊಬ್ಬನು ತನಗೆ ಸಿಕ್ಕಿದ ವರದ ಪ್ರಮಾಣಕ್ಕನುಸಾರ ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ ಅದನ್ನು ಉಪಯೋಗಿಸಲಿ” (NW). (1 ಪೇತ್ರ 4:​8, 10) ಆದುದರಿಂದ, ಜೊತೆ ಕ್ರೈಸ್ತರನ್ನು ಬಲಪಡಿಸುವುದರಲ್ಲಿ ಸಭೆಯಲ್ಲಿರುವ ಪ್ರತಿಯೊಬ್ಬರು ಪಾಲನ್ನು ಹೊಂದಿರಬೇಕಾಗಿದೆ. ಯೆಹೋವನಿಗೆ ಸೇರಿದ್ದಾಗಿರುವ ಅಮೂಲ್ಯವಾದ ಏನೋ ಒಂದರ ಹೊಣೆಯನ್ನು ನಮಗೆ ವಹಿಸಿಕೊಡಲಾಗಿದೆ ಮತ್ತು ಅದನ್ನು ಇತರರಿಗೆ ಹಂಚುವ ಜವಾಬ್ದಾರಿ ನಮಗಿದೆ. ಹಾಗಾದರೆ ಯಾವುದನ್ನು ನಮ್ಮ ವಶಕ್ಕೆ ಒಪ್ಪಿಸಿಕೊಡಲಾಗಿದೆ? ಅದು ಒಂದು “ವರ”ವಾಗಿದೆ ಎಂದು ಪೇತ್ರನು ಹೇಳುತ್ತಾನೆ. ಆ ವರ ಏನಾಗಿದೆ? “ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ” ನಾವು ಅದನ್ನು ಹೇಗೆ ಉಪಯೋಗಿಸುತ್ತೇವೆ?

6 ದೇವರ ವಾಕ್ಯವು ಹೇಳುವುದು: “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ . . . ಇಳಿದುಬರುತ್ತವೆ.” (ಯಾಕೋ. 1:17) ವಾಸ್ತವದಲ್ಲಿ, ಯೆಹೋವನು ತನ್ನ ಜನರಿಗೆ ವಹಿಸಿಕೊಡುವ ಎಲ್ಲ ವರಗಳು ಆತನ ಅಪಾತ್ರ ದಯೆಯ ಅಭಿವ್ಯಕ್ತಿಗಳಾಗಿವೆ. ಯೆಹೋವನು ನಮಗೆ ದಯಪಾಲಿಸುವ ಒಂದು ಗಮನಾರ್ಹ ವರವು ಪವಿತ್ರಾತ್ಮವೇ ಆಗಿದೆ. ಈ ವರವು ಪ್ರೀತಿ, ಒಳ್ಳೇತನ ಮತ್ತು ಸಾಧುತ್ವ ಅಥವಾ ಮೃದುಸ್ವಭಾವದಂಥ ದೈವಿಕ ಗುಣಗಳನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ. ಪ್ರತಿಯಾಗಿ, ಇಂಥ ಗುಣಗಳು ಜೊತೆ ವಿಶ್ವಾಸಿಗಳಿಗೆ ಹೃದಯದಾಳದಿಂದ ಮಮತೆಯನ್ನು ತೋರಿಸುವಂತೆ ಮತ್ತು ಅವರಿಗೆ ಮನಃಪೂರ್ವಕವಾದ ಬೆಂಬಲವನ್ನು ಕೊಡುವಂತೆ ನಮ್ಮನ್ನು ಪ್ರಚೋದಿಸುತ್ತವೆ. ಪವಿತ್ರಾತ್ಮದ ಸಹಾಯದಿಂದ ನಾವು ಪಡೆದುಕೊಳ್ಳುವ ಒಳ್ಳೇ ವರಗಳಲ್ಲಿ ನಿಜವಾದ ವಿವೇಕ ಮತ್ತು ಜ್ಞಾನಗಳು ಸಹ ಒಳಗೂಡಿವೆ. (1 ಕೊರಿಂ. 2:​10-16; ಗಲಾ. 5:​22, 23) ವಾಸ್ತವದಲ್ಲಿ, ನಮ್ಮ ಎಲ್ಲ ಶಕ್ತಿ, ಸಾಮರ್ಥ್ಯಗಳು ಮತ್ತು ಪ್ರತಿಭೆಗಳನ್ನು ನಮ್ಮ ಸ್ವರ್ಗೀಯ ತಂದೆಗೆ ಸ್ತುತಿ ಹಾಗೂ ಮಹಿಮೆಯನ್ನು ತರಲಿಕ್ಕಾಗಿ ಉಪಯೋಗಿಸಬೇಕಾಗಿರುವಂಥ ವರಗಳಾಗಿ ಪರಿಗಣಿಸಬಹುದು. ನಮ್ಮ ಸಾಮರ್ಥ್ಯಗಳು ಮತ್ತು ಗುಣಗಳನ್ನು ನಮ್ಮ ಜೊತೆ ವಿಶ್ವಾಸಿಗಳಿಗೆ ದೇವರ ಅಪಾತ್ರ ದಯೆಯ ಅಭಿವ್ಯಕ್ತಿಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿ ಉಪಯೋಗಿಸುವ ದೇವದತ್ತ ಜವಾಬ್ದಾರಿ ನಮಗಿದೆ.

‘ಸೇವೆಸಲ್ಲಿಸುವುದಕ್ಕಾಗಿ ಅದನ್ನು ಉಪಯೋಗಿಸುವುದು’​—⁠ಹೇಗೆ?

7 ನಾವು ಪಡೆದುಕೊಂಡಿರುವ ವರಗಳ ಕುರಿತು ಪೇತ್ರನು, ‘ಪ್ರತಿಯೊಬ್ಬನು ತನಗೆ ಸಿಕ್ಕಿದ ವರದ ಪ್ರಮಾಣಕ್ಕನುಸಾರ ಅದನ್ನು ಉಪಯೋಗಿಸಲಿ’ ಎಂದು ಸಹ ಹೇಳುತ್ತಾನೆ. “ಪ್ರಮಾಣಕ್ಕನುಸಾರ” ಎಂಬ ಅಭಿವ್ಯಕ್ತಿಯು, ಗುಣಗಳು ಮತ್ತು ಸಾಮರ್ಥ್ಯಗಳ ಸ್ವರೂಪದಲ್ಲಿ ಮಾತ್ರವಲ್ಲ ವ್ಯಾಪ್ತಿಯಲ್ಲಿಯೂ ಭಿನ್ನತೆಯಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಹಾಗಿದ್ದರೂ, ‘ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ ಅದನ್ನು [ಅಂದರೆ, ತಾನು ಪಡೆದುಕೊಂಡಿರುವ ಯಾವುದೇ ನಿರ್ದಿಷ್ಟ ವರವನ್ನು] ಉಪಯೋಗಿಸುವಂತೆ’ ಪ್ರತಿಯೊಬ್ಬರನ್ನೂ ಉತ್ತೇಜಿಸಲಾಗಿದೆ. ಅಷ್ಟುಮಾತ್ರವಲ್ಲ, “ಉತ್ತಮ ಮನೆವಾರ್ತೆಯವರಾಗಿ . . . ಅದನ್ನು ಉಪಯೋಗಿಸಲಿ” ಎಂಬ ಅಭಿವ್ಯಕ್ತಿಯು ಒಂದು ಆಜ್ಞೆಯಾಗಿದೆ. ಆದುದರಿಂದ ನಾವು ಸ್ವತಃ ಹೀಗೆ ಕೇಳಿಕೊಳ್ಳಬೇಕು: ‘ನನ್ನ ವಶಕ್ಕೆ ಕೊಡಲ್ಪಟ್ಟಿರುವ ವರಗಳನ್ನು ನನ್ನ ಜೊತೆ ವಿಶ್ವಾಸಿಗಳನ್ನು ಬಲಪಡಿಸಲಿಕ್ಕಾಗಿ ಉಪಯೋಗಿಸುತ್ತೇನೋ?’ (1 ತಿಮೊಥೆಯ 5:​9, 10 ಹೋಲಿಸಿರಿ.) ‘ಅಥವಾ ನಾನು ಯೆಹೋವನಿಂದ ಪಡೆದುಕೊಂಡಿರುವ ಸಾಮರ್ಥ್ಯಗಳನ್ನು ಮುಖ್ಯವಾಗಿ ನನ್ನ ಸ್ವಂತ ಲಾಭಕ್ಕಾಗಿ, ಬಹುಶಃ ಐಶ್ವರ್ಯವನ್ನು ಸಂಪಾದಿಸಲಿಕ್ಕಾಗಿ ಅಥವಾ ಸಾಮಾಜಿಕ ಸ್ಥಾನಮಾನವನ್ನು ಎಟುಕಿಸಿಕೊಳ್ಳಲಿಕ್ಕಾಗಿ ಉಪಯೋಗಿಸುತ್ತೇನೊ?’ (1 ಕೊರಿಂ. 4:⁠7) ನಮ್ಮ ವರಗಳನ್ನು “ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ” ಉಪಯೋಗಿಸುವುದಾದರೆ ನಾವು ಯೆಹೋವನನ್ನು ಸಂತೋಷಪಡಿಸುತ್ತಿರುವೆವು.​—⁠ಜ್ಞಾನೋ. 19:17; ಇಬ್ರಿಯ 13:16 ಓದಿ.

8 ಪ್ರಥಮ ಶತಮಾನದ ಕ್ರೈಸ್ತರು ಒಬ್ಬರಿಗೊಬ್ಬರು ಸೇವೆಸಲ್ಲಿಸಿದ ಬೇರೆ ಬೇರೆ ವಿಧಗಳನ್ನು ದೇವರ ವಾಕ್ಯವು ತಿಳಿಯಪಡಿಸುತ್ತದೆ. (ರೋಮಾಪುರ 15:​25, 26; 2 ತಿಮೊಥೆಯ 1:​16-18 ಓದಿ.) ತದ್ರೀತಿಯಲ್ಲಿ ಇಂದು, ಒಬ್ಬನು ತನ್ನ ವರವನ್ನು ಜೊತೆ ವಿಶ್ವಾಸಿಗಳಿಗೋಸ್ಕರ ಉಪಯೋಗಿಸುವ ಆಜ್ಞೆಗೆ ನಿಜ ಕ್ರೈಸ್ತರು ಮನಃಪೂರ್ವಕವಾಗಿ ವಿಧೇಯರಾಗುತ್ತಾರೆ. ಅದು ಮಾಡಲ್ಪಡುತ್ತಿರುವ ವಿಧಗಳಲ್ಲಿ ಕೆಲವನ್ನು ಪರಿಗಣಿಸಿರಿ.

9 ಅನೇಕ ಸಹೋದರರು ಪ್ರತಿ ತಿಂಗಳು ಕೂಟಗಳ ಭಾಗಗಳಿಗಾಗಿ ತಯಾರಿಮಾಡುವುದರಲ್ಲಿ ಹಲವಾರು ತಾಸುಗಳನ್ನು ವ್ಯಯಿಸುತ್ತಾರೆ. ತಮ್ಮ ಬೈಬಲ್‌ ಅಧ್ಯಯನದ ಸಮಯದಲ್ಲಿ ತಾವು ಕಂಡುಕೊಂಡಿರುವ ಅಮೂಲ್ಯ ಮಾಹಿತಿಯಲ್ಲಿ ಕೆಲವನ್ನು ಅವರು ಕೂಟಗಳಲ್ಲಿ ತಿಳಿಯಪಡಿಸುವಾಗ, ಅವರ ಒಳನೋಟಭರಿತ ಮಾತುಗಳು ಸಭೆಯಲ್ಲಿರುವ ಎಲ್ಲರನ್ನು ತಾಳಿಕೊಳ್ಳುವಂತೆ ಪ್ರಚೋದಿಸುತ್ತವೆ. (1 ತಿಮೊ. 5:17) ಅನೇಕಾನೇಕ ಸಹೋದರ ಸಹೋದರಿಯರು ತಮ್ಮ ಜೊತೆ ವಿಶ್ವಾಸಿಗಳ ಕಡೆಗೆ ಆದರಣೀಯ ಭಾವ ಹಾಗೂ ಸಹಾನುಭೂತಿಯನ್ನು ತೋರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. (ರೋಮಾ. 12:15) ಕೆಲವರು, ಖಿನ್ನರಾಗಿರುವವರನ್ನು ಕ್ರಮವಾಗಿ ಭೇಟಿಮಾಡುತ್ತಾರೆ ಮತ್ತು ಅವರೊಂದಿಗೆ ಪ್ರಾರ್ಥಿಸುತ್ತಾರೆ. (1 ಥೆಸ. 5:14) ಇನ್ನಿತರರು, ಪರೀಕ್ಷೆಯನ್ನು ಎದುರಿಸುತ್ತಿರುವ ಜೊತೆ ಕ್ರೈಸ್ತರಿಗೆ ಕೆಲವು ಉತ್ತೇಜನದಾಯಕ ಮಾತುಗಳನ್ನು ಬರೆಯಲಿಕ್ಕಾಗಿ ಸಮಯವನ್ನು ಬದಿಗಿರಿಸುತ್ತಾರೆ. ಇನ್ನೂ ಕೆಲವರು, ಸಭಾ ಕೂಟಗಳಿಗೆ ಹಾಜರಾಗಲು ಶಾರೀರಿಕ ಸಮಸ್ಯೆಗಳಿರುವವರಿಗೆ ದಯಾಭರಿತ ಸಹಾಯವನ್ನು ನೀಡುತ್ತಾರೆ. ಸಾವಿರಾರು ಮಂದಿ ಸಾಕ್ಷಿಗಳು ಪರಿಹಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ, ಅಂದರೆ ವಿಪತ್ತುಗಳಿಂದ ಹಾನಿಗೊಳಗಾಗಿರುವ ಮನೆಗಳನ್ನು ಪುನಃ ನಿರ್ಮಿಸುವುದರಲ್ಲಿ ಜೊತೆ ವಿಶ್ವಾಸಿಗಳಿಗೆ ಸಹಾಯಮಾಡುತ್ತಾರೆ. ಕಾಳಜಿ ತೋರಿಸುವ ಇಂಥ ಸಹೋದರ ಸಹೋದರಿಯರಿಂದ ದೊರಕುವ ಕೋಮಲ ಮಮತೆ ಹಾಗೂ ಪ್ರಾಯೋಗಿಕ ಸಹಾಯವೆಲ್ಲವೂ, “ವಿವಿಧ ರೀತಿಯಲ್ಲಿ ವ್ಯಕ್ತಪಡಿಸಲ್ಪಟ್ಟಿರುವ ದೇವರ ಅಪಾತ್ರ ದಯೆಯ” ಅಭಿವ್ಯಕ್ತಿಗಳಾಗಿವೆ.​1 ಪೇತ್ರ 4:11 ಓದಿ.

ಯಾವುದು ಹೆಚ್ಚು ಪ್ರಾಮುಖ್ಯವಾಗಿದೆ?

10 ತಮ್ಮ ಜೊತೆ ವಿಶ್ವಾಸಿಗಳ ಪರವಾಗಿ ಉಪಯೋಗಿಸುವಂತೆ ದೇವರ ಸೇವಕರಿಗೆ ಒಂದು ವರವು ಕೊಡಲ್ಪಟ್ಟಿದೆ ಮಾತ್ರವಲ್ಲ, ತಮ್ಮ ಜೊತೆ ಮಾನವರೊಂದಿಗೆ ಹಂಚಿಕೊಳ್ಳುವಂತೆ ಒಂದು ಸಂದೇಶವು ಸಹ ಕೊಡಲ್ಪಟ್ಟಿದೆ. ಯೆಹೋವನಿಗೆ ತಾನು ಸಲ್ಲಿಸುವ ಸೇವೆಯ ಈ ಎರಡು ಅಂಶಗಳನ್ನು ಅಪೊಸ್ತಲ ಪೌಲನು ಮನಗಂಡನು. ಎಫೆಸದಲ್ಲಿರುವ ಸಭೆಯ ಪ್ರಯೋಜನಕ್ಕೋಸ್ಕರ ‘ದೇವರು ತನ್ನ ಅಪಾತ್ರ ದಯೆಯಿಂದ ತನಗೆ ಕೊಟ್ಟಿರುವ ಮನೆವಾರ್ತೆಯ ಕೆಲಸದ’ ಕುರಿತು ಅವನು ಪತ್ರವನ್ನು ಬರೆದನು. (ಎಫೆ. 3:​2, NW) ಇದಲ್ಲದೆ ಅವನು ಇನ್ನೂ ಹೇಳಿದ್ದು: “ಸುವಾರ್ತೆಯನ್ನು ನಮ್ಮ ವಶಕ್ಕೆ ಒಪ್ಪಿಸಲು ನಾವು ಯೋಗ್ಯರೆಂದು ದೇವರಿಂದ ರುಜುಪಡಿಸಲ್ಪಟ್ಟಿ”ದ್ದೇವೆ. (1 ಥೆಸ. 2:​4, NW) ಪೌಲನಂತೆಯೇ, ದೇವರ ರಾಜ್ಯದ ಕುರಿತು ಸಾರುವವರಾಗಿ ಸೇವೆಮಾಡುವ ನೇಮಕವು ನಮಗೆ ಒಪ್ಪಿಸಲ್ಪಟ್ಟಿದೆ ಎಂಬುದನ್ನು ನಾವು ಸಹ ಮನಗಾಣುತ್ತೇವೆ. ಸಾರುವ ಕೆಲಸದಲ್ಲಿ ನಾವು ಹುರುಪಿನಿಂದ ಪಾಲ್ಗೊಳ್ಳುವ ಮೂಲಕ ಸುವಾರ್ತೆಯನ್ನು ದಣಿವಿಲ್ಲದೆ ಸಾರುವವನಾಗಿ ಪೌಲನು ಇಟ್ಟಂಥ ಮಾದರಿಯನ್ನು ನಾವು ಅನುಕರಿಸಲು ಪ್ರಯತ್ನಿಸುತ್ತೇವೆ. (ಅ. ಕೃ. 20:​20, 21; 1 ಕೊರಿಂ. 11:⁠1) ದೇವರ ರಾಜ್ಯದ ಸಂದೇಶವನ್ನು ಸಾರುವುದು ಜೀವಗಳನ್ನು ಕಾಪಾಡಬಲ್ಲದು ಎಂಬುದು ನಮಗೆ ತಿಳಿದಿದೆ. ಆದರೆ ಅದೇ ಸಮಯದಲ್ಲಿ, ಜೊತೆ ವಿಶ್ವಾಸಿಗಳಿಗೆ ‘ಕೆಲವು ಆತ್ಮಿಕ ವರಗಳನ್ನು ಕೊಡಲಿಕ್ಕಾಗಿರುವ’ (NIBV) ಸದವಕಾಶಗಳಿಗಾಗಿ ಎದುರುನೋಡುತ್ತಾ ಇರುವ ಮೂಲಕವೂ ನಾವು ಪೌಲನನ್ನು ಅನುಕರಿಸಲು ಪ್ರಯತ್ನಿಸುತ್ತೇವೆ.​ರೋಮಾಪುರ 1:​11, 12; 10:​13-15 ಓದಿ.

11 ಈ ಎರಡು ಕ್ರೈಸ್ತ ಚಟುವಟಿಕೆಗಳಲ್ಲಿ ಯಾವುದು ಹೆಚ್ಚು ಪ್ರಾಮುಖ್ಯವಾದದ್ದಾಗಿದೆ? ಈ ರೀತಿಯ ಪ್ರಶ್ನೆಯನ್ನು ಕೇಳುವುದು, ಒಂದು ಪಕ್ಷಿಗಿರುವ ಎರಡು ರೆಕ್ಕೆಗಳಲ್ಲಿ ಯಾವುದು ಹೆಚ್ಚು ಪ್ರಾಮುಖ್ಯವಾದದ್ದು? ಎಂದು ಕೇಳುವುದಕ್ಕೆ ತುಲನಾತ್ಮಕವಾಗಿದೆ. ಇದಕ್ಕೆ ಉತ್ತರವು ಸ್ಪಷ್ಟವಾಗಿದೆ. ಒಂದು ಪಕ್ಷಿಯು ಸರಿಯಾಗಿ ಹಾರಾಡಬೇಕಾದರೆ ಅದು ಎರಡೂ ರೆಕ್ಕೆಗಳನ್ನು ಉಪಯೋಗಿಸುವ ಅಗತ್ಯವಿದೆ. ತದ್ರೀತಿಯಲ್ಲಿ, ಕ್ರೈಸ್ತರಾಗಿರುವ ನಾವು ಪೂರ್ಣ ರೀತಿಯಲ್ಲಿ ನಮ್ಮಿಂದ ಕೇಳಿಕೊಳ್ಳಲ್ಪಡುವುದನ್ನು ಪೂರೈಸಲಿಕ್ಕಾಗಿ ದೇವರಿಗೆ ನಾವು ಸಲ್ಲಿಸುವ ಸೇವೆಯ ಎರಡೂ ಅಂಶಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಹೀಗೆ, ಸುವಾರ್ತೆಯನ್ನು ಸಾರುವ ಮತ್ತು ಜೊತೆ ವಿಶ್ವಾಸಿಗಳನ್ನು ಬಲಪಡಿಸುವ ನಮ್ಮ ನೇಮಕಗಳನ್ನು ನಾವು ಸಂಬಂಧರಹಿತವಾದ ಎರಡು ಭಿನ್ನ ನೇಮಕಗಳಾಗಿ ಪರಿಗಣಿಸುವ ಬದಲು, ಅಪೊಸ್ತಲರಾದ ಪೇತ್ರ ಮತ್ತು ಪೌಲರು ಪರಿಗಣಿಸಿದಂತೆ ಪರಸ್ಪರ ಪೂರಕವಾಗಿರುವ ಜವಾಬ್ದಾರಿಗಳಾಗಿ ಪರಿಗಣಿಸುತ್ತೇವೆ. ಯಾವ ರೀತಿಯಲ್ಲಿ ಅವು ಪರಸ್ಪರ ಪೂರಕವಾಗಿವೆ?

12 ಸೌವಾರ್ತಿಕರಾಗಿರುವ ನಾವು ಹೊಂದಿರಬಹುದಾದ ಯಾವುದೇ ಬೋಧನಾ ಕೌಶಲಗಳನ್ನು, ದೇವರ ರಾಜ್ಯದ ಕುರಿತಾದ ಭಕ್ತಿವರ್ಧಕ ಸಂದೇಶದಿಂದ ನಮ್ಮ ಜೊತೆ ಮಾನವರ ಹೃದಯಗಳನ್ನು ಸ್ಪರ್ಶಿಸಲು ಪ್ರಯತ್ನಿಸುವುದರಲ್ಲಿ ಉಪಯೋಗಿಸುತ್ತೇವೆ. ಈ ರೀತಿಯಲ್ಲಿ, ಅವರು ಕ್ರಿಸ್ತನ ಶಿಷ್ಯರಾಗಿ ಪರಿಣಮಿಸುವಂತೆ ಅವರಿಗೆ ಸಹಾಯಮಾಡಲು ನಿರೀಕ್ಷಿಸುತ್ತೇವೆ. ಅದೇ ಸಮಯದಲ್ಲಿ, ನಾವು ಹೊಂದಿರಬಹುದಾದ ಯಾವುದೇ ಸಾಮರ್ಥ್ಯಗಳು ಹಾಗೂ ಇತರ ವರಗಳನ್ನು, ದೇವರ ಅಪಾತ್ರ ದಯೆಯ ಅಭಿವ್ಯಕ್ತಿಗಳಾಗಿರುವ ಭಕ್ತಿವರ್ಧಕ ಮಾತುಗಳು ಮತ್ತು ಸಹಾಯಕರ ಕೃತ್ಯಗಳಿಂದ ನಮ್ಮ ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಲು ಪ್ರಯತ್ನಿಸುವುದರಲ್ಲಿಯೂ ಉಪಯೋಗಿಸುತ್ತೇವೆ. (ಜ್ಞಾನೋ. 3:27; 12:25) ಈ ರೀತಿಯಲ್ಲಿ, ಅವರು ಕ್ರಿಸ್ತನ ಶಿಷ್ಯರಾಗಿ ಉಳಿಯುವಂತೆ ಅವರಿಗೆ ಸಹಾಯಮಾಡಲು ನಿರೀಕ್ಷಿಸುತ್ತೇವೆ. ಈ ಎರಡೂ ಚಟುವಟಿಕೆಗಳಲ್ಲಿ, ಅಂದರೆ ಸಾರ್ವಜನಿಕರಿಗೆ ಸಾರುವ ಮತ್ತು “ಒಬ್ಬರಿಗೊಬ್ಬರು ಸೇವೆಸಲ್ಲಿಸುವ” ಕೆಲಸದಲ್ಲಿ ಯೆಹೋವನ ಕೈಯಲ್ಲಿ ಒಂದು ಸಾಧನವಾಗಿ ಕಾರ್ಯನಡಿಸುವ ಮಹಾನ್‌ ಸುಯೋಗ ನಮಗಿದೆ.​—⁠ಗಲಾ. 6:⁠10.

“ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ”

13 ಪೌಲನು ತನ್ನ ಜೊತೆ ವಿಶ್ವಾಸಿಗಳನ್ನು ಈ ಮಾತುಗಳಿಂದ ಉತ್ತೇಜಿಸಿದನು: “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು [ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ]. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮಾ. 12:10) ವಾಸ್ತವದಲ್ಲಿ, ನಮ್ಮ ಸಹೋದರರ ಬಗ್ಗೆ ಮಮತೆಯುಳ್ಳವರಾಗಿರುವುದು ದೇವರ ಅಪಾತ್ರ ದಯೆಯ ಮನೆವಾರ್ತೆಗಾರರಾಗಿ ಪೂರ್ಣಹೃದಯದಿಂದ ಸೇವೆಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. ‘ಒಬ್ಬರಿಗೊಬ್ಬರು ಸೇವೆಸಲ್ಲಿಸುವುದರಿಂದ’ ನಮ್ಮನ್ನು ತಡೆಹಿಡಿಯುವುದರಲ್ಲಿ ಸೈತಾನನು ಒಂದುವೇಳೆ ಸಫಲನಾಗುವುದಾದರೆ, ಅವನು ನಮ್ಮ ಐಕ್ಯಭಾವವನ್ನು ದುರ್ಬಲಗೊಳಿಸುತ್ತಾನೆ ಎಂಬುದನ್ನು ನಾವು ಗ್ರಹಿಸುತ್ತೇವೆ. (ಕೊಲೊ. 3:14) ಪ್ರತಿಯಾಗಿ, ಐಕ್ಯಭಾವದ ಕೊರತೆಯು ಸಾರುವ ಕೆಲಸದಲ್ಲಿ ಹುರುಪಿನ ಕೊರತೆಯನ್ನು ಉಂಟುಮಾಡಸಾಧ್ಯವಿದೆ. ಆಲಂಕಾರಿಕವಾಗಿ ಹೇಳುವುದಾದರೆ, ನಮ್ಮ ರೆಕ್ಕೆಗಳಲ್ಲಿ ಕೇವಲ ಒಂದನ್ನು ಹಾನಿಗೊಳಿಸಿದರೆ ಸಾಕು ನಮ್ಮನ್ನು ಹಾರಾಡದಂತೆ ತಡೆಯಬಹುದು ಎಂಬುದು ಸೈತಾನನಿಗೆ ಚೆನ್ನಾಗಿ ತಿಳಿದಿದೆ.

14 “ಒಬ್ಬರಿಗೊಬ್ಬರು ಸೇವೆಸಲ್ಲಿಸುವುದು” ದೇವರ ಅಪಾತ್ರ ದಯೆಯನ್ನು ಪಡೆದುಕೊಳ್ಳುವವರಿಗೆ ಮಾತ್ರವೇ ಅಲ್ಲ, ಅದನ್ನು ಕೊಡುವವರಿಗೆ ಸಹ ಪ್ರಯೋಜನವನ್ನು ತರುತ್ತದೆ. (ಜ್ಞಾನೋ. 11:25) ಉದಾಹರಣೆಗೆ, ಅಮೆರಿಕದ ಇಲಿನೋಯಿಯ ರೈಯನ್‌ ಮತ್ತು ರಾನೀ ಎಂಬ ದಂಪತಿಗಳನ್ನು ತೆಗೆದುಕೊಳ್ಳಿ. ಕತ್ರೀನಾ ಚಂಡಮಾರುತವು ಜೊತೆ ಸಾಕ್ಷಿಗಳ ನೂರಾರು ಮನೆಗಳನ್ನು ಧ್ವಂಸಗೊಳಿಸಿತ್ತೆಂಬುದು ಇವರಿಗೆ ತಿಳಿದುಬಂದಾಗ, ಸಹೋದರ ಪ್ರೀತಿಯು ಅವರು ತಮ್ಮ ಉದ್ಯೋಗವನ್ನು ತೊರೆದು, ತಮ್ಮ ಅಪಾರ್ಟ್‌ಮೆಂಟನ್ನು ಮಾರಿ, ಒಂದು ಸೆಕೆಂಡ್‌-ಹ್ಯಾಂಡ್‌ ಮೋಟಾರುಮನೆಯನ್ನು (ಟ್ರೇಲರ್‌) ಖರೀದಿಸಿ, ವಾಸಕ್ಕಾಗಿ ಅದನ್ನು ಸಿದ್ಧಪಡಿಸಿ, 1,400 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಲೂಯಿಸಿಯಾನಕ್ಕೆ ಪ್ರಯಾಣಿಸುವಂತೆ ಪ್ರಚೋದಿಸಿತು. ಅಲ್ಲಿ ಅವರು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಉಳಿದು, ತಮ್ಮ ಸಹೋದರರಿಗೆ ಸಹಾಯಮಾಡಲಿಕ್ಕಾಗಿ ತಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಉಪಯೋಗಿಸಿದರು. 29ರ ಪ್ರಾಯದ ರೈಯನ್‌ ಹೇಳುವುದು: “ಪರಿಹಾರ ಕಾರ್ಯದಲ್ಲಿ ಭಾಗವಹಿಸಿದ್ದು ನನ್ನನ್ನು ದೇವರಿಗೆ ಇನ್ನಷ್ಟು ಹತ್ತಿರ ಮಾಡಿತು. ಯೆಹೋವನು ಹೇಗೆ ತನ್ನ ಜನರ ವಿಷಯದಲ್ಲಿ ಕಾಳಜಿವಹಿಸುತ್ತಾನೆ ಎಂಬುದನ್ನು ನಾನು ಕಣ್ಣಾರೆ ಕಂಡೆ.” ರೈಯನ್‌ ಇನ್ನೂ ಹೇಳಿದ್ದು: “ಹಿರಿಯ ಸಹೋದರರೊಂದಿಗೆ ಕೆಲಸಮಾಡುವುದು, ಸಹೋದರರಿಗೆ ಹೇಗೆ ಕಾಳಜಿಯನ್ನು ತೋರಿಸಬೇಕು ಎಂಬ ವಿಷಯದಲ್ಲಿ ನನಗೆ ಹೆಚ್ಚನ್ನು ಕಲಿಸಿತು. ಪ್ರಾಯದಲ್ಲಿ ಚಿಕ್ಕವರಾಗಿರುವ ನಮಗೆ ಯೆಹೋವನ ಸಂಸ್ಥೆಯಲ್ಲಿ ಮಾಡಲು ಎಷ್ಟೋ ವಿಷಯಗಳಿವೆ ಎಂಬುದನ್ನೂ ಕಲಿತುಕೊಂಡೆ.” 25ರ ಪ್ರಾಯದ ರಾನೀ ಹೇಳುವುದು: “ನಾನು ಇತರರಿಗೆ ಸಹಾಯಮಾಡುವುದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದಕ್ಕಾಗಿ ಆಭಾರಿಯಾಗಿದ್ದೇನೆ. ನನ್ನ ಜೀವನದಲ್ಲಿ ಹಿಂದೆಂದಿಗಿಂತಲೂ ಈಗ ಹೆಚ್ಚು ಸಂತೋಷಭರಿತಳಾಗಿದ್ದೇನೆ. ಬರಲಿರುವ ವರ್ಷಗಳಲ್ಲಿ, ಈ ಅದ್ಭುತಕರ ಅನುಭವದಿಂದ ನಾನು ಪ್ರಯೋಜನ ಪಡೆದುಕೊಳ್ಳುತ್ತಾ ಇರುವೆನೆಂಬುದು ನನಗೆ ತಿಳಿದಿದೆ.”

15 ವಾಸ್ತವದಲ್ಲಿ, ಸುವಾರ್ತೆಯನ್ನು ಸಾರುವ ಮತ್ತು ಜೊತೆ ವಿಶ್ವಾಸಿಗಳನ್ನು ಬಲಪಡಿಸುವ ದೇವದತ್ತ ಆಜ್ಞೆಗಳಿಗೆ ವಿಧೇಯರಾಗುವುದು ಎಲ್ಲರಿಗೂ ಆಶೀರ್ವಾದಗಳನ್ನು ತರುತ್ತದೆ. ನಾವು ಯಾರಿಗೆ ಸಹಾಯಮಾಡುತ್ತೇವೋ ಅವರು ಆಧ್ಯಾತ್ಮಿಕವಾಗಿ ಬಲಪಡಿಸಲ್ಪಡುತ್ತಾರೆ, ಅದೇ ಸಮಯದಲ್ಲಿ ನಾವು ಕೊಡುವುದರಿಂದ ಮಾತ್ರವೇ ಸಿಗುವ ಹೃತ್ಪೂರ್ವಕ ಆನಂದವನ್ನು ಅನುಭವಿಸುವೆವು. (ಅ. ಕೃ. 20:35) ಸಭೆಯ ಪ್ರತಿಯೊಬ್ಬ ಸದಸ್ಯನು ಇತರರಲ್ಲಿ ಪ್ರೀತಿಭರಿತ ಆಸಕ್ತಿಯನ್ನು ತೋರಿಸುವಾಗ ಇಡೀ ಸಭೆಯ ಸೌಹಾರ್ದತೆಯು ಇನ್ನಷ್ಟು ಹೆಚ್ಚುತ್ತದೆ. ಅಷ್ಟುಮಾತ್ರವಲ್ಲ, ನಾವು ಒಬ್ಬರಿಗೊಬ್ಬರು ತೋರಿಸುವ ಪ್ರೀತಿ ಮತ್ತು ಮಮತೆಯು ನಮ್ಮನ್ನು ನಿಜ ಕ್ರೈಸ್ತರೆಂದು ಸ್ಪಷ್ಟವಾಗಿ ಗುರುತಿಸುತ್ತದೆ. ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾ. 13:35) ಎಲ್ಲಕ್ಕಿಂತಲೂ ಮಿಗಿಲಾಗಿ, ಅಗತ್ಯದಲ್ಲಿರುವವರನ್ನು ಬಲಪಡಿಸಲಿಕ್ಕಾಗಿರುವ ಯೆಹೋವನ ಬಯಕೆಯು ಆತನ ಭೂಸೇವಕರಲ್ಲಿ ಪ್ರತಿಬಿಂಬಿಸುವಾಗ, ನಮ್ಮ ಕಾಳಜಿಭರಿತ ತಂದೆಯಾದ ಆತನಿಗೆ ಕೀರ್ತಿಯು ಸಲ್ಲುತ್ತದೆ. ಆದುದರಿಂದ, ‘ದೇವರ ಅಪಾತ್ರ ದಯೆಯ ಉತ್ತಮ ಮನೆವಾರ್ತೆಯವರಾಗಿ ಒಬ್ಬರಿಗೊಬ್ಬರು ಸೇವೆಸಲ್ಲಿಸುವುದಕ್ಕಾಗಿ’ ನಮ್ಮ ವರವನ್ನು ಉಪಯೋಗಿಸಲು ನಮಗೆಷ್ಟು ಸಕಾರಣಗಳಿವೆ! ನೀವು ಹಾಗೆ ಮಾಡುತ್ತಾ ಮುಂದುವರಿಯುವಿರೊ?​ಇಬ್ರಿಯ 6:10 ಓದಿ.

ನಿಮಗೆ ನೆನಪಿದೆಯೆ?

• ಯಾವ ವಿಧಗಳಲ್ಲಿ ಯೆಹೋವನು ತನ್ನ ಸೇವಕರನ್ನು ಬಲಪಡಿಸುತ್ತಾನೆ?

• ಯಾವುದು ನಮಗೆ ಒಪ್ಪಿಸಿಕೊಡಲ್ಪಟ್ಟಿದೆ?

• ನಾವು ನಮ್ಮ ಜೊತೆ ವಿಶ್ವಾಸಿಗಳ ಸೇವೆಯನ್ನು ಮಾಡಸಾಧ್ಯವಿರುವ ಕೆಲವು ವಿಧಗಳು ಯಾವುವು?

• ‘ಒಬ್ಬರಿಗೊಬ್ಬರು ಸೇವೆಸಲ್ಲಿಸಲಿಕ್ಕಾಗಿ’ ನಮ್ಮ ವರವನ್ನು ಉಪಯೋಗಿಸುತ್ತಾ ಮುಂದುವರಿಯುವಂತೆ ಯಾವುದು ನಮ್ಮನ್ನು ಪ್ರಚೋದಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

1. ದೇವರ ವಾಕ್ಯದಲ್ಲಿ ನಾವು ಯಾವ ಆಶ್ವಾಸನೆಗಳನ್ನು ಕಂಡುಕೊಳ್ಳುತ್ತೇವೆ?

2. ಯೆಹೋವನು ತನ್ನ ಸೇವಕರಿಗೆ ಹೇಗೆ ಬೆಂಬಲವನ್ನು ನೀಡುತ್ತಾನೆ?

3. (ಎ) ಪರೀಕ್ಷೆಗಳ ವಿಷಯದಲ್ಲಿ ಅಪೊಸ್ತಲ ಪೇತ್ರನು ಏನು ತಿಳಿಸಿದನು? (ಬಿ) ಪೇತ್ರನ ಮೊದಲನೆಯ ಪತ್ರದ ಕೊನೆಯ ಭಾಗದಲ್ಲಿ ಏನನ್ನು ಚರ್ಚಿಸಲಾಗಿದೆ?

4. ಒಂದನೆಯ ಪೇತ್ರ 4:10ರ ಮಾತುಗಳು ನಮಗೆ ಏಕೆ ಸಾಂತ್ವನದಾಯಕವಾಗಿವೆ?

5. (ಎ) ಪ್ರತಿಯೊಬ್ಬ ಕ್ರೈಸ್ತನು ಏನು ಮಾಡತಕ್ಕದ್ದು? (ಬಿ) ಯಾವ ಪ್ರಶ್ನೆಗಳು ಏಳುತ್ತವೆ?

6. ಕ್ರೈಸ್ತರಿಗೆ ವಹಿಸಿಕೊಡಲಾಗಿರುವ ವರಗಳಲ್ಲಿ ಕೆಲವು ಯಾವುವು?

7. (ಎ) “ಪ್ರಮಾಣಕ್ಕನುಸಾರ” ಎಂಬ ಅಭಿವ್ಯಕ್ತಿಯು ಏನನ್ನು ಸೂಚಿಸುತ್ತದೆ? (ಬಿ) ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು ಮತ್ತು ಏಕೆ?

8, 9. (ಎ) ಲೋಕವ್ಯಾಪಕವಾಗಿರುವ ಕ್ರೈಸ್ತರು ಜೊತೆ ವಿಶ್ವಾಸಿಗಳ ಪರವಾಗಿ ಸೇವೆಮಾಡುತ್ತಿರುವ ವಿಧಗಳಲ್ಲಿ ಕೆಲವು ಯಾವುವು? (ಬಿ) ನಿಮ್ಮ ಸಭೆಯಲ್ಲಿರುವ ಸಹೋದರ ಸಹೋದರಿಯರು ಒಬ್ಬರಿಗೊಬ್ಬರು ಹೇಗೆ ಸಹಾಯಮಾಡುತ್ತಾರೆ?

10. (ಎ) ದೇವರಿಗೆ ತಾನು ಸಲ್ಲಿಸುವ ಸೇವೆಯ ಯಾವ ಎರಡು ಅಂಶಗಳ ವಿಷಯದಲ್ಲಿ ಪೌಲನು ಆಸಕ್ತನಾಗಿದ್ದನು? (ಬಿ) ನಾವು ಇಂದು ಹೇಗೆ ಪೌಲನನ್ನು ಅನುಕರಿಸುತ್ತೇವೆ?

11. ಸಾರುವ ಮತ್ತು ಜೊತೆ ವಿಶ್ವಾಸಿಗಳನ್ನು ಬಲಪಡಿಸುವ ನಮ್ಮ ನೇಮಕಗಳನ್ನು ನಾವು ಹೇಗೆ ಪರಿಗಣಿಸಬೇಕು?

12. ನಾವು ಯೆಹೋವನ ಕೈಯಲ್ಲಿ ಒಂದು ಸಾಧನವಾಗಿ ಹೇಗೆ ಕಾರ್ಯನಡಿಸುತ್ತೇವೆ?

13. ‘ಒಬ್ಬರಿಗೊಬ್ಬರು ಸೇವೆಸಲ್ಲಿಸುವುದರಿಂದ’ ನಮ್ಮನ್ನು ತಡೆಹಿಡಿಯುವುದಾದರೆ ಏನು ಸಂಭವಿಸಸಾಧ್ಯವಿದೆ?

14. ‘ಒಬ್ಬರಿಗೊಬ್ಬರು ಸೇವೆಸಲ್ಲಿಸುವುದರಿಂದ’ ಯಾರು ಪ್ರಯೋಜನ ಪಡೆಯುತ್ತಾರೆ? ಒಂದು ಉದಾಹರಣೆಯನ್ನು ಕೊಡಿ.

15. ದೇವರ ಅಪಾತ್ರ ದಯೆಯ ಮನೆವಾರ್ತೆಯವರಾಗಿ ಸೇವೆಮಾಡುತ್ತಾ ಮುಂದುವರಿಯಲು ನಮಗೆ ಯಾವ ಸಕಾರಣಗಳಿವೆ?

[ಪುಟ 13ರಲ್ಲಿರುವ ಚಿತ್ರಗಳು]

ನಿಮ್ಮ “ವರ”ವನ್ನು ನೀವು ಇತರರ ಸೇವೆಗಾಗಿ ಉಪಯೋಗಿಸುತ್ತೀರೊ ಅಥವಾ ನಿಮ್ಮ ಸ್ವಸಂತೋಷಕ್ಕಾಗಿ ಉಪಯೋಗಿಸುತ್ತೀರೊ?

[ಪುಟ 15ರಲ್ಲಿರುವ ಚಿತ್ರಗಳು]

ನಾವು ಇತರರಿಗೆ ಸುವಾರ್ತೆಯನ್ನು ಸಾರುತ್ತೇವೆ ಮತ್ತು ಜೊತೆ ಕ್ರೈಸ್ತರಿಗೆ ಬೆಂಬಲ ನೀಡುತ್ತೇವೆ

[ಪುಟ 16ರಲ್ಲಿರುವ ಚಿತ್ರ]

ಪರಿಹಾರ ಕಾರ್ಯದಲ್ಲಿ ಕೆಲಸಮಾಡುವವರು ತಮ್ಮ ಸ್ವತ್ಯಾಗ ಮನೋಭಾವಕ್ಕಾಗಿ ಪ್ರಶಂಸಾರ್ಹರು