ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ ಪುಸ್ತಕದ ಮುಖ್ಯಾಂಶಗಳು—I

ಪ್ರಕಟನೆ ಪುಸ್ತಕದ ಮುಖ್ಯಾಂಶಗಳು—I

ಯೆಹೋವನ ವಾಕ್ಯವು ಸಜೀವವಾದದ್ದು

ಪ್ರಕಟನೆ ಪುಸ್ತಕದ ಮುಖ್ಯಾಂಶಗಳು​—⁠I

ವೃದ್ಧನಾದ ಅಪೊಸ್ತಲ ಯೋಹಾನನು ಪತ್ಮೋಸ್‌ ದ್ವೀಪದಲ್ಲಿ ಬಂಧನದಲ್ಲಿದ್ದಾಗ ಅನುಕ್ರಮವಾಗಿ 16 ದರ್ಶನಗಳನ್ನು ಪಡೆದುಕೊಳ್ಳುತ್ತಾನೆ. ಆ ದರ್ಶನಗಳಲ್ಲಿ ಅವನು, ಕರ್ತನ ದಿನದಲ್ಲಿ ಅಂದರೆ 1914ರಲ್ಲಿ ದೇವರ ರಾಜ್ಯವು ಸ್ಥಾಪಿಸಲ್ಪಟ್ಟಂದಿನಿಂದ ಕ್ರಿಸ್ತನ ಸಾವಿರ ವರ್ಷದಾಳಿಕೆಯ ಕೊನೆಯ ತನಕ ವಿಸ್ತರಿಸುವಂಥ ಕಾಲಾವಧಿಯಲ್ಲಿ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಏನನ್ನು ಪೂರೈಸುತ್ತಾರೆ ಎಂಬುದನ್ನು ನೋಡುತ್ತಾನೆ. ಸಾ.ಶ. 96ರ ಸುಮಾರಿಗೆ ಯೋಹಾನನಿಂದ ಬರೆಯಲ್ಪಟ್ಟ ಪ್ರಕಟನೆ ಪುಸ್ತಕವು ಈ ದರ್ಶನಗಳ ಪುಳಕಗೊಳಿಸುವ ವೃತ್ತಾಂತವಾಗಿದೆ.

ನಾವೀಗ ಪ್ರಕಟನೆ 1:​1–12:17ರ ಮುಖ್ಯಾಂಶಗಳನ್ನು ಪರಿಗಣಿಸೋಣ. ಇದು ಯೋಹಾನನು ಪಡೆದುಕೊಂಡ ಮೊದಲ ಏಳು ದರ್ಶನಗಳನ್ನು ಆವರಿಸುತ್ತದೆ. ಈ ದರ್ಶನಗಳು ನಮಗೆ ಆಸಕ್ತಿಕರವಾಗಿವೆ, ಏಕೆಂದರೆ ಅವು ಈಗ ಲೋಕ ರಂಗದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಸಂಬಂಧಿಸಿವೆ ಮತ್ತು ಭವಿಷ್ಯತ್ತಿನಲ್ಲಿ ಬಹು ಬೇಗನೆ ಯೆಹೋವನು ಹೇಗೆ ಕ್ರಿಯೆಗೈಯಲಿದ್ದಾನೆ ಎಂಬುದನ್ನು ತೋರಿಸುತ್ತವೆ. ಈ ದರ್ಶನಗಳ ವೃತ್ತಾಂತವನ್ನು ನಂಬಿಕೆಯಿಂದ ಓದುವವರು ನಿಜವಾಗಿಯೂ ಸಂತೈಸಲ್ಪಡುತ್ತಾರೆ ಮತ್ತು ಉತ್ತೇಜಿಸಲ್ಪಡುತ್ತಾರೆ.​—⁠ಇಬ್ರಿ. 4:⁠12.

‘ಕುರಿಮರಿಯು’ ಏಳು ಮುದ್ರೆಗಳಲ್ಲಿ ಆರು ಮುದ್ರೆಗಳನ್ನು ಒಡೆಯುತ್ತದೆ

(ಪ್ರಕ. 1:1-7:⁠17)

ಮೊದಲನೆಯದಾಗಿ ಯೋಹಾನನು ಮಹಿಮೆಗೇರಿಸಲ್ಪಟ್ಟಿರುವ ಯೇಸು ಕ್ರಿಸ್ತನನ್ನು ನೋಡುತ್ತಾನೆ ಮತ್ತು ‘[ಸುರುಳಿಯಲ್ಲಿ] ಬರೆದು ಏಳು ಪಟ್ಟಣಗಳ ಸಭೆಗಳಿಗೆ ಕಳುಹಿಸಬೇಕಾಗಿರುವ’ ಸಂದೇಶಗಳ ಒಂದು ಸರಣಿಯು ಅವನಿಗೆ ಕೊಡಲ್ಪಡುತ್ತದೆ. (ಪ್ರಕ. 1:​10, 11) ಆ ಬಳಿಕ ಸ್ವರ್ಗದಲ್ಲಿ ಅದರ ಸ್ಥಾನದಲ್ಲಿದ್ದ ಒಂದು ಸಿಂಹಾಸನದ ದರ್ಶನವು ಅವನಿಗಾಯಿತು. ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯು ಇದೆ ಮತ್ತು ಅದಕ್ಕೆ ಏಳು ಮುದ್ರೆಗಳಿಂದ ಮುದ್ರೆಯೊತ್ತಲಾಗಿದೆ. ‘ಸುರುಳಿಯನ್ನು ಬಿಚ್ಚುವುದಕ್ಕೆ ಯೋಗ್ಯನಾಗಿ’ ಪರಿಗಣಿಸಲ್ಪಟ್ಟವನು “ಯೂದಾ ಕುಲದಲ್ಲಿ ಜನಿಸಿದ ಸಿಂಹ” ಅಥವಾ ‘ಏಳು ಕೊಂಬುಗಳೂ ಏಳು ಕಣ್ಣುಗಳೂ ಇದ್ದ ಕುರಿಯೇ’ ಆಗಿದ್ದಾನೆ.​—⁠ಪ್ರಕ. 4:2; 5:​1, 2, 5, 6.

‘ಯಜ್ಞದ ಕುರಿಯಾದಾತನು’ ಮೊದಲ ಆರು ಮುದ್ರೆಗಳನ್ನು ಒಂದರ ನಂತರ ಇನ್ನೊಂದರಂತೆ ಒಡೆಯುವಾಗ ಏನು ಸಂಭವಿಸುತ್ತದೆ ಎಂಬುದನ್ನು ಮೂರನೆಯ ದರ್ಶನವು ಬಯಲುಪಡಿಸುತ್ತದೆ. ಆರನೆಯ ಮುದ್ರೆಯನ್ನು ಒಡೆದಾಗ ಮಹಾಭೂಕಂಪವು ಉಂಟಾಗುತ್ತದೆ ಮತ್ತು ಯೆಹೋವನ ಕೋಪದ ಮಹಾ ದಿನವು ಬರುತ್ತದೆ. (ಪ್ರಕ. 6:​1, 12, 17) ಆದರೆ ಮುಂದಿನ ದರ್ಶನವು, 1,44,000 ಮಂದಿಯ ಮುದ್ರೆಯೊತ್ತುವಿಕೆಯು ಪೂರ್ಣಗೊಳ್ಳುವ ತನಕ ‘ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ಗಾಳಿಗಳನ್ನು ಬಿಗಿಯಾಗಿ ಹಿಡಿದುಕೊಂಡಿರುವುದನ್ನು’ ತೋರಿಸುತ್ತದೆ. ಮುದ್ರೆಯೊತ್ತಲ್ಪಡದವರ “ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ” ನಿಂತಿರುವುದು ಕಂಡುಬರುತ್ತದೆ.​—⁠ಪ್ರಕ. 7:​1, 9.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

1:4; 3:1; 4:5; 5:6​​—⁠“ಏಳು ಆತ್ಮಗಳು” ಎಂಬ ಅಭಿವ್ಯಕ್ತಿಯು ಏನನ್ನು ಸೂಚಿಸುತ್ತದೆ? ಏಳು ಎಂಬ ಸಂಖ್ಯೆಯು ದೇವರ ದೃಷ್ಟಿಕೋನದಿಂದ ಪೂರ್ಣತೆಯನ್ನು ಸೂಚಿಸುತ್ತದೆ. ಹೀಗೆ “ಏಳು ಪಟ್ಟಣಗಳ ಸಭೆಗಳಿಗೆ” ಕಳುಹಿಸಲ್ಪಟ್ಟ ಸಂದೇಶವು, ಅಂತಿಮವಾಗಿ ಭೂವ್ಯಾಪಕವಾಗಿರುವ 1,00,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಒಟ್ಟುಗೂಡಿರುವ ದೇವಜನರೆಲ್ಲರಿಗೂ ಅನ್ವಯವಾಗುತ್ತದೆ. (ಪ್ರಕ. 1:​11, 20) ತಾನು ಏನನ್ನು ಸಾಧಿಸಲು ಬಯಸುತ್ತಾನೋ ಅದಕ್ಕನುಸಾರ ಯೆಹೋವನು ಪವಿತ್ರಾತ್ಮವನ್ನು ಕೊಡುತ್ತಾನಾದ್ದರಿಂದ, “ಏಳು ಆತ್ಮಗಳು” ಎಂಬ ಅಭಿವ್ಯಕ್ತಿಯು ಪ್ರವಾದನೆಗೆ ಯಾರು ಗಮನ ಕೊಡುತ್ತಾರೋ ಅವರಿಗೆ ತಿಳಿವಳಿಕೆಯನ್ನು ನೀಡುವುದರಲ್ಲಿ ಮತ್ತು ಆಶೀರ್ವಾದಗಳನ್ನು ತರುವುದರಲ್ಲಿ ಅದು ಪೂರ್ಣ ರೀತಿಯಲ್ಲಿ ಕಾರ್ಯನಡಿಸುವುದನ್ನು ಸೂಚಿಸುತ್ತದೆ. ಪ್ರಕಟನೆ ಪುಸ್ತಕವು ಏಳರ ಗುಂಪುಗಳಿಂದ ಕೂಡಿದ ವಿಷಯಗಳನ್ನು ಚರ್ಚಿಸುವ ಒಂದು ನಮೂನೆಯನ್ನು ಅನುಸರಿಸುವಂತೆ ತೋರುತ್ತದೆ. ಇಲ್ಲಿ ಏಳು ಎಂಬ ಸಂಖ್ಯೆಯು ಪೂರ್ಣತೆಯನ್ನು ಪ್ರತಿನಿಧಿಸುತ್ತದೆ ಮತ್ತು ಈ ಪುಸ್ತಕವು “ದೇವರ ಪವಿತ್ರ ರಹಸ್ಯವನ್ನು” ‘ನೆರವೇರಿಸುವುದರೊಂದಿಗೆ’ ಅಥವಾ ಪೂರ್ಣಗೊಳಿಸುವುದರೊಂದಿಗೆ ವ್ಯವಹರಿಸುತ್ತದೆ.​—⁠ಪ್ರಕ. 10:​7, NW.

1:​8, 17​​—⁠‘ಆದಿ ಮತ್ತು ಅಂತ [ಆಲ್ಫ ಮತ್ತು ಒಮೇಗ]’ ಹಾಗೂ ‘ಮೊದಲನೆಯವನು ಮತ್ತು ಕಡೆಯವನು’ ಎಂಬ ಬಿರುದುಗಳು ಯಾರಿಗೆ ಸೂಚಿತವಾಗಿವೆ? ಆಲ್ಫ ಮತ್ತು ಒಮೇಗ ಗ್ರೀಕ್‌ ಅಕ್ಷರಮಾಲೆಯ ಮೊದಲ ಮತ್ತು ಕೊನೆಯ ಅಕ್ಷರಗಳಾಗಿವೆ. ‘ಆದಿ ಮತ್ತು ಅಂತ [ಆಲ್ಫ ಮತ್ತು ಒಮೇಗ]’ ಎಂಬ ಬಿರುದು ಯೆಹೋವನಿಗೆ ಅನ್ವಯವಾಗುತ್ತದೆ. ಆತನಿಗೆ ಮುಂಚೆ ಸರ್ವಶಕ್ತನಾದ ದೇವರು ಯಾವನೂ ಇರಲಿಲ್ಲ ಮತ್ತು ಆತನ ಬಳಿಕವೂ ಇರುವುದಿಲ್ಲ ಎಂಬ ಅಂಶವನ್ನು ಇದು ಒತ್ತಿಹೇಳುತ್ತದೆ. ಆತನೇ “ಪ್ರಾರಂಭವೂ ಸಮಾಪ್ತಿಯೂ” ಆಗಿದ್ದಾನೆ. (ಪ್ರಕ. 21:6; 22:13) ಯೆಹೋವನಿಗೆ ಮುಂಚೆ ಮತ್ತು ಆತನ ಬಳಿಕ ಯಾರೂ ಇಲ್ಲದಿರುವುದರಿಂದ ಪ್ರಕಟನೆ 22:13ರಲ್ಲಿ ಆತನನ್ನು ‘ಮೊದಲನೆಯವನು ಮತ್ತು ಕಡೆಯವನು’ ಎಂದು ಸೂಚಿಸಿ ಮಾತಾಡಲಾಗಿದೆಯಾದರೂ, ಪ್ರಕಟನೆ ಪುಸ್ತಕದ ಮೊದಲನೆಯ ಅಧ್ಯಾಯದ ಪೂರ್ವಾಪರ ವಚನವು ಇಲ್ಲಿ ‘ಮೊದಲನೆಯವನು ಮತ್ತು ಕಡೆಯವನು’ ಎಂಬ ಬಿರುದು ಯೇಸು ಕ್ರಿಸ್ತನಿಗೆ ಅನ್ವಯವಾಗುತ್ತದೆ ಎಂಬುದನ್ನು ತೋರಿಸುತ್ತದೆ. ಅಮರವಾದ ಆತ್ಮ ಜೀವನಕ್ಕೆ ಪುನರುತ್ಥಾನಗೊಳಿಸಲ್ಪಟ್ಟ ಮೊದಲನೆಯ ಮನುಷ್ಯನು ಅವನಾಗಿದ್ದನು ಮತ್ತು ವೈಯಕ್ತಿಕವಾಗಿ ಯೆಹೋವನಿಂದ ಹಾಗೆ ಪುನರುತ್ಥಾನಗೊಳಿಸಲ್ಪಟ್ಟ ಕೊನೆಯವನೂ ಅವನೇ ಆಗಿದ್ದನು.​—⁠ಕೊಲೊ. 1:⁠18.

2:7​​—⁠“ದೇವರ ಪರದೈಸ” ಏನಾಗಿದೆ? ಈ ಮಾತುಗಳು ಅಭಿಷಿಕ್ತ ಕ್ರೈಸ್ತರಿಗೆ ಸಂಬೋಧಿಸಲ್ಪಟ್ಟಿರುವುದರಿಂದ, ಇಲ್ಲಿ ತಿಳಿಸಲ್ಪಟ್ಟಿರುವ ಪರದೈಸವು ಪರದೈಸದಂಥ ಸ್ವರ್ಗೀಯ ಕ್ಷೇತ್ರವನ್ನು ಅಂದರೆ ಸ್ವತಃ ದೇವರ ಸನ್ನಿಧಿಯನ್ನು ಸೂಚಿಸುತ್ತಿರಬೇಕು. ನಂಬಿಗಸ್ತ ಅಭಿಷಿಕ್ತರಿಗೆ “ಜೀವದಾಯಕ ವೃಕ್ಷದ ಹಣ್ಣನ್ನು” ತಿನ್ನುವ ಬಹುಮಾನವು ಕೊಡಲ್ಪಡುವುದು. ಅವರು ಅಮರತ್ವವನ್ನು ಪಡೆದುಕೊಳ್ಳುವರು.​—⁠1 ಕೊರಿಂ. 15:⁠53.

3:7​​—⁠ಯೇಸು “ದಾವೀದನ ಬೀಗದಕೈ”ಯನ್ನು ಯಾವಾಗ ಪಡೆದುಕೊಂಡನು ಮತ್ತು ಅವನು ಆ ಬೀಗದಕೈಯನ್ನು ಹೇಗೆ ಉಪಯೋಗಿಸುತ್ತಿದ್ದಾನೆ? ಸಾ.ಶ. 29ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಬಳಿಕ ಯೇಸು ದಾವೀದನ ವಂಶದಲ್ಲಿ ರಾಜನಾಗಿ ನೇಮಕಗೊಂಡನು. ಆದರೆ ಸಾ.ಶ. 33ರಲ್ಲಿ ಸ್ವರ್ಗದಲ್ಲಿ ದೇವರ ಬಲಗಡೆಯ ಸ್ಥಾನಕ್ಕೆ ಏರಿಸಲ್ಪಡುವ ತನಕ ಯೇಸು ದಾವೀದನ ಬೀಗದಕೈಯನ್ನು ಪಡೆದುಕೊಳ್ಳಲಿಲ್ಲ. ಅಲ್ಲಿ ಅವನು ದಾವೀದಸಂಬಂಧಿತ ರಾಜ್ಯದ ಎಲ್ಲ ಹಕ್ಕುಗಳನ್ನು ಪಡೆದುಕೊಂಡನು. ಅಂದಿನಿಂದ ಯೇಸು ಆ ರಾಜ್ಯಕ್ಕೆ ಸಂಬಂಧಿಸಿದ ಸದವಕಾಶಗಳನ್ನು ಮತ್ತು ಸುಯೋಗಗಳನ್ನು ತೆರೆಯಲಿಕ್ಕಾಗಿ ಆ ಬೀಗದಕೈಯನ್ನು ಉಪಯೋಗಿಸುತ್ತಿದ್ದಾನೆ. 1919ರಲ್ಲಿ ಯೇಸು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು’ “ತನ್ನ ಎಲ್ಲಾ ಆಸ್ತಿಯ ಮೇಲೆ” ನೇಮಿಸುವ ಮೂಲಕ, “ದಾವೀದನ ಮನೆಯ ಬೀಗದ ಕೈಯನ್ನು” ಆ ಆಳು ವರ್ಗದ ಜವಾಬ್ದಾರಿಗೆ ಒಪ್ಪಿಸಿದನು.​—⁠ಯೆಶಾ. 22:22; ಮತ್ತಾ. 24:​45, 47.

3:​12​​—⁠ಯೇಸುವಿನ “ಹೊಸ ಹೆಸರು” ಏನಾಗಿದೆ? ಈ ಹೆಸರು ಯೇಸುವಿನ ಹೊಸ ಅಧಿಕಾರಸ್ಥಾನ ಮತ್ತು ಸುಯೋಗಗಳಿಗೆ ಸಂಬಂಧಿಸಿದ್ದಾಗಿದೆ. (ಫಿಲಿ. 2:​9-11) ಆ ಹೆಸರನ್ನು ಯೇಸು ಗ್ರಹಿಸುವಂಥ ರೀತಿಯಲ್ಲಿ ಬೇರೆ ಯಾರೂ ಗ್ರಹಿಸಲಾರರಾದರೂ ಸ್ವರ್ಗೀಯ ಕ್ಷೇತ್ರದಲ್ಲಿ ಯೇಸು ಅದನ್ನು ತನ್ನ ನಂಬಿಗಸ್ತ ಸಹೋದರರ ಮೇಲೆ ಬರೆಯುತ್ತಾನೆ ಮತ್ತು ಹೀಗೆ ಅವರನ್ನು ತನ್ನೊಂದಿಗೆ ಆಪ್ತ ಸಂಬಂಧಕ್ಕೆ ತರುತ್ತಾನೆ. (ಪ್ರಕ. 19:12) ಯೆಹೋವನು ಯೇಸುವಿಗೆ ದಯಪಾಲಿಸುವಂಥ ಅಪೂರ್ವ ಸುಯೋಗಗಳಲ್ಲಿ ಕೆಲವನ್ನು ಅವರು ಸಹ ಪಡೆದುಕೊಳ್ಳುತ್ತಾರೆ.

ನಮಗಾಗಿರುವ ಪಾಠಗಳು:

1:⁠3. ಸೈತಾನನ ಲೋಕದ ಮೇಲೆ ದೇವರ ನ್ಯಾಯತೀರ್ಪುಗಳನ್ನು ವಿಧಿಸುವ ‘[ನೇಮಿತ] ಸಮಯವು ಸಮೀಪವಾಗಿರುವುದರಿಂದ’ ಪ್ರಕಟನೆ ಪುಸ್ತಕದ ಸಂದೇಶವನ್ನು ಅರ್ಥಮಾಡಿಕೊಳ್ಳುವ ಮತ್ತು ಅದಕ್ಕನುಸಾರ ಕ್ರಿಯೆಗೈಯುವ ಜರೂರಿಯು ಅತ್ಯಧಿಕವಾಗಿದೆ.

3:​17, 18. ಆಧ್ಯಾತ್ಮಿಕವಾಗಿ ಐಶ್ವರ್ಯವಂತರಾಗಿರಬೇಕಾದರೆ ನಾವು ಯೇಸುವಿನಿಂದ “ಬೆಂಕಿಯಲ್ಲಿ ಪುಟಾಹಾಕಿದ ಚಿನ್ನವನ್ನು” ಕೊಂಡುಕೊಳ್ಳುವ ಅಗತ್ಯವಿದೆ. ಅದರರ್ಥ ನಾವು ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರಲು ಶ್ರಮಿಸಬೇಕಾಗಿದೆ. (1 ತಿಮೊ. 6:​17-19) ನಾವು “ಬಿಳೀ ವಸ್ತ್ರಗಳನ್ನೂ” ಧರಿಸಿಕೊಳ್ಳುವ ಅಗತ್ಯವಿದೆ; ಇದು ಕ್ರಿಸ್ತನ ಹಿಂಬಾಲಕರೋಪಾದಿ ನಮ್ಮ ಗುರುತನ್ನು ಪ್ರಕಟಪಡಿಸುತ್ತದೆ. ಮತ್ತು ಆಧ್ಯಾತ್ಮಿಕ ವಿವೇಚನಾಶಕ್ತಿಯನ್ನು ಪಡೆದುಕೊಳ್ಳಲಿಕ್ಕಾಗಿ ಕಾವಲಿನಬುರುಜು ಪತ್ರಿಕೆಯಲ್ಲಿ ಪ್ರಕಾಶಿಸಲ್ಪಡುವ ಸಲಹೆಯಂಥ “ಅಂಜನವನ್ನು” ಉಪಯೋಗಿಸಬೇಕಾಗಿದೆ.​—⁠ಪ್ರಕ. 19:⁠8.

7:​13, 14. ಇಪ್ಪತ್ತನಾಲ್ಕು ಮಂದಿ ಹಿರಿಯರು ತಮ್ಮ ಸ್ವರ್ಗೀಯ ಮಹಿಮೆಯಲ್ಲಿರುವ 1,44,000 ಮಂದಿಯನ್ನು ಪ್ರತಿನಿಧಿಸುತ್ತಾರೆ. ಸ್ವರ್ಗದಲ್ಲಿ ಅವರು ರಾಜರಾಗಿ ಮಾತ್ರವಲ್ಲ ಯಾಜಕರಾಗಿಯೂ ಸೇವೆಮಾಡುತ್ತಾರೆ. ಅವರು ಪುರಾತನ ಇಸ್ರಾಯೇಲಿನಲ್ಲಿದ್ದ ಯಾಜಕರಿಂದ ಚಿತ್ರಿಸಲ್ಪಟ್ಟಿದ್ದರು; ಅರಸನಾದ ದಾವೀದನು ಅವರನ್ನು 24 ವರ್ಗಗಳಲ್ಲಿ ವ್ಯವಸ್ಥಾಪಿಸಿದ್ದನು. ಆ ಹಿರಿಯರಲ್ಲಿ ಒಬ್ಬನು ಯೋಹಾನನಿಗೆ ಮಹಾ ಸಮೂಹದ ಗುರುತನ್ನು ಬಹಿರಂಗಪಡಿಸುತ್ತಾನೆ. ಆದುದರಿಂದ, ಅಭಿಷಿಕ್ತ ಕ್ರೈಸ್ತರ ಪುನರುತ್ಥಾನವು 1935ಕ್ಕೆ ಮುಂಚೆ ಆರಂಭಿಸಿದ್ದಿರಬೇಕು. ಹೀಗೆ ಏಕೆ ಹೇಳಸಾಧ್ಯವಿದೆ? ಏಕೆಂದರೆ ಭೂಮಿಯಲ್ಲಿರುವ ದೇವರ ಅಭಿಷಿಕ್ತ ಸೇವಕರಿಗೆ ಮಹಾ ಸಮೂಹದ ಸರಿಯಾದ ಗುರುತು ತಿಳಿಯಪಡಿಸಲ್ಪಟ್ಟದ್ದು ಆ ವರ್ಷದಲ್ಲೇ.​—⁠ಲೂಕ 22:​28-30; ಪ್ರಕ. 4:4; 7:⁠9.

ಏಳನೆಯ ಮುದ್ರೆಯ ಒಡೆಯುವಿಕೆಯು ಏಳು ತುತೂರಿಗಳ ಊದುವಿಕೆಗೆ ನಡಿಸುತ್ತದೆ

(ಪ್ರಕ. 8:1–​12:⁠17)

ಯಜ್ಞದ ಕುರಿಯಾದಾತನು ಏಳನೆಯ ಮುದ್ರೆಯನ್ನು ಒಡೆಯುತ್ತಾನೆ. ಏಳು ಮಂದಿ ದೇವದೂತರಿಗೆ ಏಳು ತುತೂರಿಗಳು ಕೊಡಲ್ಪಡುತ್ತವೆ. ದೇವದೂತರಲ್ಲಿ ಆರು ಮಂದಿ ತಮ್ಮ ತುತೂರಿಗಳನ್ನು ಊದುವಾಗ ಮಾನವಕುಲದ “ಮೂರರಲ್ಲಿ ಒಂದು ಭಾಗ”ವಾಗಿರುವ ಕ್ರೈಸ್ತಪ್ರಪಂಚದ ಮೇಲೆ ನ್ಯಾಯತೀರ್ಪಿನ ಸಂದೇಶಗಳನ್ನು ಘೋಷಿಸುತ್ತಾರೆ. (ಪ್ರಕ. 8:​1, 2, 7-12; 9:​15, 18) ಐದನೆಯ ದರ್ಶನದಲ್ಲಿ ಯೋಹಾನನು ಇದನ್ನೇ ನೋಡುತ್ತಾನೆ. ಅದರ ನಂತರ ಕಂಡ ದರ್ಶನದಲ್ಲಿ ಭಾಗವಹಿಸುತ್ತಾ ಯೋಹಾನನು ಚಿಕ್ಕ ಸುರುಳಿಯನ್ನು ತಿನ್ನುತ್ತಾನೆ ಮತ್ತು ಯಜ್ಞವೇದಿಯನ್ನು ಅಳತೆಮಾಡುತ್ತಾನೆ. ಏಳನೆಯ ತುತೂರಿಯು ಊದಲ್ಪಟ್ಟ ಬಳಿಕ, “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು” ಎಂದು ಮಹಾ ಶಬ್ದಗಳು ಪ್ರಕಟಿಸುತ್ತವೆ.​—⁠ಪ್ರಕ. 10:10; 11:​1, 15.

ಏಳನೆಯ ದರ್ಶನವು ಪ್ರಕಟನೆ 11:​15, 17ರಲ್ಲಿ ತಿಳಿಸಲ್ಪಟ್ಟಿರುವ ವಿಷಯಗಳ ಕುರಿತು ಹೆಚ್ಚಿನ ವಿವರಣೆಯನ್ನು ನೀಡುತ್ತದೆ. ಸ್ವರ್ಗದಲ್ಲಿ ಒಂದು ಮಹಾ ಲಕ್ಷಣವು ಕಾಣಿಸುತ್ತದೆ. ಸ್ವರ್ಗೀಯ ಸ್ತ್ರೀಯು ಒಂದು ಗಂಡು ಮಗುವನ್ನು ಹೆರುತ್ತಾಳೆ. ಪಿಶಾಚನು ಸ್ವರ್ಗದಿಂದ ದೊಬ್ಬಲ್ಪಡುತ್ತಾನೆ. ಸ್ವರ್ಗೀಯ ಸ್ತ್ರೀಯ ಮೇಲೆ ಕೋಪಗೊಂಡಿರುವ ಪಿಶಾಚನು “ಆಕೆಯ ಸಂತಾನದವರಲ್ಲಿ ಉಳಿದವರ ಮೇಲೆ . . . ಯುದ್ಧಮಾಡುವುದಕ್ಕೆ” ಹೋಗುತ್ತಾನೆ.​—⁠ಪ್ರಕ. 12:​1, 5, 9, 17.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

8:​1-5​​—⁠ಸ್ವರ್ಗದಲ್ಲಿ ಏಕೆ ನಿಶ್ಯಬ್ದವುಂಟಾಯಿತು ಮತ್ತು ತದನಂತರ ಭೂಮಿಗೆ ಏನು ಬಿಸಾಡಲ್ಪಟ್ಟಿತು? ಭೂಮಿಯಲ್ಲಿರುವ ‘ದೇವಜನರೆಲ್ಲರ ಪ್ರಾರ್ಥನೆಗಳನ್ನು’ ಕೇಳಿಸಿಕೊಳ್ಳಸಾಧ್ಯವಾಗುವಂತೆ ಸ್ವರ್ಗದಲ್ಲಿ ಸಾಂಕೇತಿಕ ನಿಶ್ಯಬ್ದವುಂಟಾಯಿತು. ಇದು ಸಂಭವಿಸಿದ್ದು ಮೊದಲನೆಯ ಲೋಕ ಯುದ್ಧದ ಅಂತ್ಯದ ಸಮಯದಲ್ಲಿ. ಅನ್ಯಜನಾಂಗಗಳ ಕಾಲಗಳ ಕೊನೆಯಷ್ಟಕ್ಕೆ ಅಭಿಷಿಕ್ತ ಕ್ರೈಸ್ತರು ಸ್ವರ್ಗಕ್ಕೆ ಏರಿಹೋಗುತ್ತಾರೆ ಎಂದು ಅವರಲ್ಲಿ ಅನೇಕರು ನಿರೀಕ್ಷಿಸಿದ್ದಂತೆ ಸಂಭವಿಸಲಿಲ್ಲ. ಯುದ್ಧದ ಸಮಯದಲ್ಲಿ ಅವರು ಕಷ್ಟಕರ ಸಮಯಗಳನ್ನು ಅನುಭವಿಸಿದರು. ಆದುದರಿಂದ ಈ ಸಮಯದಲ್ಲಿ ಅವರು ಮಾರ್ಗದರ್ಶನಕ್ಕಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದರು. ಅವರ ಪ್ರಾರ್ಥನೆಗಳಿಗೆ ಉತ್ತರವಾಗಿ ದೇವದೂತನು ಭೂಮಿಗೆ ಸಾಂಕೇತಿಕ ಬೆಂಕಿಯನ್ನು ಬಿಸಾಡಿದನು, ಅದು ಅಭಿಷಿಕ್ತ ಕ್ರೈಸ್ತರನ್ನು ಆಧ್ಯಾತ್ಮಿಕವಾಗಿ ಹೆಚ್ಚಿನ ಚಟುವಟಿಕೆಯಲ್ಲಿ ಒಳಗೂಡುವಂತೆ ಮಾಡಿತು. ಅವರು ಕಡಿಮೆ ಸಂಖ್ಯೆಯಲ್ಲಿದ್ದರಾದರೂ, ದೇವರ ರಾಜ್ಯವನ್ನು ಒಂದು ಜ್ವಲಂತ ವಿವಾದಾಂಶವಾಗಿ ಮಾಡಿದಂಥ ಲೋಕವ್ಯಾಪಕ ಸಾರುವ ಕಾರ್ಯಾಚರಣೆಯನ್ನು ಆರಂಭಿಸಿದರು; ಹೀಗೆ ಕ್ರೈಸ್ತಪ್ರಪಂಚದಲ್ಲಿ ಬೆಂಕಿಯನ್ನು ಹೊತ್ತಿಸಿದರು. ಬೈಬಲಿನಿಂದ ಗುಡುಗಿನಂಥ ಎಚ್ಚರಿಕೆಗಳು ಪ್ರಕಟಿಸಲ್ಪಟ್ಟವು, ಶಾಸ್ತ್ರವಚನಗಳ ಸತ್ಯದ ಝಳಪುಗಳು ತಿಳಿಯಪಡಿಸಲ್ಪಟ್ಟವು ಮತ್ತು ಒಂದು ಭೂಕಂಪದಿಂದ ಕಟ್ಟಡಗಳು ಅದುರಿಸಲ್ಪಡುವಂತೆಯೇ ಸುಳ್ಳು ಧರ್ಮದ ಸಾಮ್ರಾಜ್ಯದ ತಳಪಾಯವೇ ಅಲ್ಲಾಡಿಸಲ್ಪಟ್ಟಿತು.

8:​6-​12; 9:​1, 13; 11:15​​—⁠ಏಳು ಮಂದಿ ದೇವದೂತರು ತಮ್ಮ ತುತೂರಿಗಳನ್ನು ಊದುವುದಕ್ಕೆ ಯಾವಾಗ ಸಿದ್ಧಮಾಡಿಕೊಂಡರು ಮತ್ತು ಯಾವಾಗ ಹಾಗೂ ಹೇಗೆ ತುತೂರಿ ಶಬ್ದಗಳು ಧ್ವನಿಸಲ್ಪಟ್ಟವು? ಏಳು ತುತೂರಿಗಳನ್ನು ಊದುವ ಸಿದ್ಧತೆಯಲ್ಲಿ, ಭೂಮಿಯಲ್ಲಿ ನವಚೈತನ್ಯವನ್ನು ಪಡೆದುಕೊಂಡಿದ್ದ ಯೋಹಾನ ವರ್ಗದ ಸದಸ್ಯರಿಗೆ 1919ರಿಂದ 1922ರ ವರೆಗೆ ಮಾರ್ಗದರ್ಶನವನ್ನು ನೀಡುವುದು ಒಳಗೂಡಿತ್ತು. ಆಗ ಅಂಥ ಅಭಿಷಿಕ್ತರು ಸಾರ್ವಜನಿಕ ಶುಶ್ರೂಷೆಯನ್ನು ಪುನಃ ಸಂಘಟಿಸುವುದರಲ್ಲಿ ಮತ್ತು ಪ್ರಕಾಶಿಸುವ ಸೌಕರ್ಯಗಳನ್ನು ನಿರ್ಮಿಸುವುದರಲ್ಲಿ ಕಾರ್ಯಮಗ್ನರಾಗತೊಡಗಿದ್ದರು. (ಪ್ರಕ. 12:​13, 14) ತುತೂರಿಗಳ ಶಬ್ದಗಳನ್ನು ಧ್ವನಿಸುವುದು, ದೇವಜನರು ದೇವದೂತರೊಂದಿಗಿನ ಸಹಕಾರದಲ್ಲಿ ಸೈತಾನನ ಲೋಕದ ವಿರುದ್ಧ ಯೆಹೋವನ ನ್ಯಾಯತೀರ್ಪುಗಳನ್ನು ನಿರ್ಭಯದಿಂದ ಸಾರಿಹೇಳುವುದನ್ನು ಪ್ರತಿನಿಧಿಸುತ್ತದೆ. ಗಮನಾರ್ಹವಾಗಿಯೇ, ಇದು 1922ರಲ್ಲಿ ನಡೆದ ಸೀಡರ್‌ ಪಾಯಿಂಟ್‌ ಒಹಾಯೋ ಅಧಿವೇಶನದೊಂದಿಗೆ ಆರಂಭಗೊಂಡಿತು ಮತ್ತು ಮಹಾ ಸಂಕಟದ ಸಮಯದ ವರೆಗೂ ಮುಂದುವರಿಯುತ್ತದೆ.

8:​13; 9:​12; 11:14​​—⁠ಕೊನೆಯ ಮೂರು ತುತೂರಿ ಊದುವಿಕೆಗಳು ಯಾವ ರೀತಿಯಲ್ಲಿ ‘ವಿಪತ್ತುಗಳಾಗಿವೆ’? ಮೊದಲ ನಾಲ್ಕು ತುತೂರಿ ಊದುವಿಕೆಗಳು ಕ್ರೈಸ್ತಪ್ರಪಂಚದ ಆಧ್ಯಾತ್ಮಿಕ ಮೃತ ಸ್ಥಿತಿಯನ್ನು ಬಯಲುಪಡಿಸುವ ಘೋಷಣೆಗಳಾಗಿರುವಾಗ, ಕೊನೆಯ ಮೂರು ತುತೂರಿ ಊದುವಿಕೆಗಳು ವಿಪತ್ತುಗಳಾಗಿವೆ ಹೇಗೆಂದರೆ ಇವು ನಿರ್ದಿಷ್ಟ ಘಟನೆಗಳಿಗೆ ಸಂಬಂಧಿಸಿದವುಗಳಾಗಿವೆ. ಐದನೆಯ ತುತೂರಿ ಊದುವಿಕೆಯು, 1919ರಲ್ಲಿ ನಿಷ್ಕ್ರಿಯೆಯ ‘ಅಧೋಲೋಕದ ಕೂಪದಿಂದ’ ದೇವಜನರ ಬಿಡುಗಡೆ ಮತ್ತು ಕ್ರೈಸ್ತಪ್ರಪಂಚದ ಮೇಲೆ ಯಾತನಾಮಯ ಬಾಧೆಯಾಗಿ ಪರಿಣಮಿಸಿದ ಅವರ ಪಟ್ಟುಹಿಡಿದ ಸಾಕ್ಷಿಕಾರ್ಯಕ್ಕೆ ಸಂಬಂಧಿಸಿದ್ದಾಗಿದೆ. (ಪ್ರಕ. 9:⁠1) ಆರನೆಯದ್ದು ಇತಿಹಾಸದಲ್ಲೇ ಅತಿ ದೊಡ್ಡ ಕುದುರೆಯ ದಂಡಿನ ಕುರಿತಾಗಿದೆ ಮತ್ತು 1922ರಲ್ಲಿ ಆರಂಭಗೊಂಡ ಲೋಕವ್ಯಾಪಕ ಸಾರುವ ಕಾರ್ಯಾಚರಣೆಗೆ ಸಂಬಂಧಿಸಿದ್ದಾಗಿದೆ. ಕೊನೆಯ ತುತೂರಿ ಊದುವಿಕೆಯು ಮೆಸ್ಸೀಯ ರಾಜ್ಯದ ಜನನಕ್ಕೆ ಸಂಬಂಧಿಸಿದ್ದಾಗಿದೆ.

ನಮಗಾಗಿರುವ ಪಾಠಗಳು:

9:​10, 19. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಪ್ರಕಾಶನಗಳಲ್ಲಿರುವ ಅಧಿಕಾರಯುತ ಬೈಬಲ್‌ ಆಧಾರಿತ ಹೇಳಿಕೆಗಳು ಕುಟುಕುವಂಥ ಸಂದೇಶವನ್ನು ಒಳಗೂಡಿವೆ. (ಮತ್ತಾ. 24:45) ಈ ಸಂದೇಶವು, ‘ಚೇಳಿಗಿರುವಂತೆ ಕೊಂಡಿಗಳನ್ನು’ ಹೊಂದಿರುವ ಮಿಡಿತೆಗಳ ಬಾಲಕ್ಕೆ ಮತ್ತು ಯಾವುದರ ‘ಬಾಲಗಳು ಸರ್ಪಗಳ ಹಾಗೆ’ ಇವೆಯೋ ಆ ಕುದುರೆದಂಡಿನ ಕುದುರೆಗಳಿಗೆ ಅನುರೂಪವಾಗಿವೆ. ಏಕೆ? ಏಕೆಂದರೆ ಈ ಪ್ರಕಾಶನಗಳು ‘ಯೆಹೋವನ ಮುಯ್ಯಿತೀರಿಸುವ ದಿನದ’ ಕುರಿತು ಎಚ್ಚರಿಕೆ ನೀಡುತ್ತವೆ. (ಯೆಶಾ. 61:⁠2) ನಾವು ಇವುಗಳನ್ನು ಧೈರ್ಯದಿಂದಲೂ ಹುರುಪಿನಿಂದಲೂ ವಿತರಿಸೋಣ.

9:​20, 21. ಕ್ರೈಸ್ತೇತರ ದೇಶಗಳೆಂದು ಕರೆಸಿಕೊಳ್ಳಲ್ಪಡುವ ದೇಶಗಳಲ್ಲಿ ವಾಸಿಸುತ್ತಿರುವ ಅನೇಕ ದೀನ ಜನರು ನಾವು ಸಾರುವ ಸಂದೇಶಕ್ಕೆ ಒಳ್ಳೇ ಪ್ರತಿಕ್ರಿಯೆ ತೋರಿಸಿದ್ದಾರೆ. ಆದರೆ, “ಉಳಿದ ಜನರು” ಎಂದು ಸೂಚಿಸಿ ಮಾತಾಡಲ್ಪಟ್ಟಿರುವ ಕ್ರೈಸ್ತಪ್ರಪಂಚದ ಕ್ಷೇತ್ರದ ಹೊರಗಿರುವ ಜನರ ಸಾಮೂಹಿಕ ಮತಾಂತರವನ್ನು ನಾವು ನಿರೀಕ್ಷಿಸುತ್ತಿಲ್ಲ. ಆದರೂ ನಾವು ಶುಶ್ರೂಷೆಯಲ್ಲಿ ಪಟ್ಟುಬಿಡದೆ ಮುಂದುವರಿಯುತ್ತೇವೆ.

12:​15, 16. “ಭೂಮಿ” ಅಂದರೆ ಸೈತಾನನ ವ್ಯವಸ್ಥೆಯೊಳಗೇ ಇರುವ ಘಟಕಗಳು ಅಥವಾ ಬೇರೆ ಬೇರೆ ದೇಶಗಳಲ್ಲಿರುವ ಆಳುವ ಶಕ್ತಿಗಳು ಆರಾಧನಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತವೆ. 1940ಗಳಿಂದ ಆರಂಭಿಸಿ ಆ ಶಕ್ತಿಗಳು ‘ಘಟಸರ್ಪನು ತನ್ನ ಬಾಯೊಳಗಿಂದ ಬಿಟ್ಟ [ಹಿಂಸೆಯ] ನದಿಯನ್ನು ಕುಡಿದುಬಿಟ್ಟವು.’ ವಾಸ್ತವದಲ್ಲಿ, ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ ಸರಕಾರದ ಅಧಿಕಾರಿಗಳ ಮೇಲೆ ಪ್ರಭಾವವನ್ನು ಬೀರುವ ಆಯ್ಕೆಯನ್ನು ಯೆಹೋವನು ಮಾಡುವಾಗೆಲ್ಲ ಆತನು ಪ್ರಭಾವವನ್ನು ಬೀರಬಲ್ಲನು. ಆದುದರಿಂದ, ಜ್ಞಾನೋಕ್ತಿ 21:1 ಹೀಗೆ ಹೇಳುವುದು ಸೂಕ್ತವಾದದ್ದಾಗಿದೆ: “ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲಿವೆಗಳಂತೆ ಇವೆ; ತನಗೆ ಬೇಕಾದ ಕಡೆಗೆ ತಿರುಗಿಸುತ್ತಾನೆ.” ಇದು ದೇವರಲ್ಲಿನ ನಮ್ಮ ನಂಬಿಕೆಯನ್ನು ಇನ್ನಷ್ಟು ಬಲಪಡಿಸತಕ್ಕದ್ದು.