ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಬಂದು ನನ್ನನ್ನು ಹಿಂಬಾಲಿಸು”

“ಬಂದು ನನ್ನನ್ನು ಹಿಂಬಾಲಿಸು”

“ಬಂದು ನನ್ನನ್ನು ಹಿಂಬಾಲಿಸು”

“ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ [ಯಾತನಾ ಕಂಬವನ್ನು] ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ.”​—⁠ಲೂಕ 9:⁠23.

ತನ್ನ ಶುಶ್ರೂಷೆಯ ಅಂತ್ಯಭಾಗದಷ್ಟಕ್ಕೆ ಯೇಸು ಯೂದಾಯದ ಈಶಾನ್ಯ ದಿಕ್ಕಿನಲ್ಲಿ ಯೊರ್ದನ್‌ ನದಿಯ ಆಚೇಕಡೆ ಇದ್ದ ಪೆರಿಯ ಎಂಬ ಪ್ರಾಂತದಲ್ಲಿ ಸುವಾರ್ತೆಯನ್ನು ಸಾರುತ್ತಿದ್ದನು. ಆಗ ಒಬ್ಬ ಯೌವನಸ್ಥನು ಅವನ ಬಳಿಗೆ ಬಂದು, ತಾನು ನಿತ್ಯಜೀವಕ್ಕೆ ಬಾಧ್ಯನಾಗಬೇಕಾದರೆ ಏನು ಮಾಡಬೇಕು ಎಂದು ಕೇಳಿದನು. ಆ ಯೌವನಸ್ಥನು ಮೋಶೆಯ ಧರ್ಮಶಾಸ್ತ್ರವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾನೆಂಬುದನ್ನು ಗ್ರಹಿಸಿದ ಬಳಿಕ ಯೇಸು ಅವನಿಗೆ ಗಮನಾರ್ಹವಾದ ಒಂದು ಆಮಂತ್ರಣವನ್ನು ಕೊಟ್ಟನು. “ಹೋಗು, ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. (ಮಾರ್ಕ 10:21) ತುಸು ಯೋಚಿಸಿರಿ, ಸರ್ವೋನ್ನತ ದೇವರ ಏಕಜಾತ ಪುತ್ರನಾದ ಯೇಸುವನ್ನು ಹಿಂಬಾಲಿಸುವ ಆಮಂತ್ರಣ!

2 ಆ ಯೌವನಸ್ಥನು ಯೇಸು ಕೊಟ್ಟ ಆಮಂತ್ರಣವನ್ನು ಸ್ವೀಕರಿಸಲಿಲ್ಲ, ಆದರೆ ಇತರರು ಸ್ವೀಕರಿಸಿದರು. ಇದಕ್ಕೆ ಮುಂಚೆ ಯೇಸು ಫಿಲಿಪ್ಪನಿಗೆ “ನನ್ನನ್ನು ಹಿಂಬಾಲಿಸು” ಎಂದು ಹೇಳಿದ್ದನು. (ಯೋಹಾ. 1:43) ಫಿಲಿಪ್ಪನು ಈ ಆಮಂತ್ರಣವನ್ನು ಸ್ವೀಕರಿಸಿ ಸಮಯಾನಂತರ ಒಬ್ಬ ಅಪೊಸ್ತಲನಾದನು. ಯೇಸು ಮತ್ತಾಯನಿಗೆ ಇದೇ ಆಮಂತ್ರಣವನ್ನು ಕೊಟ್ಟಾಗ ಅವನು ಸಹ ಇದನ್ನು ಸ್ವೀಕರಿಸಿದನು. (ಮತ್ತಾ. 9:9; 10:​2-4) ವಾಸ್ತವದಲ್ಲಿ, “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ [ಯಾತನಾ ಕಂಬವನ್ನು] ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ” ಎಂದು ಯೇಸು ಹೇಳಿದಾಗ ನೀತಿಯನ್ನು ಪ್ರೀತಿಸುವವರೆಲ್ಲರಿಗೆ ಅವನು ಇದೇ ಆಮಂತ್ರಣವನ್ನು ಕೊಟ್ಟನು. (ಲೂಕ 9:23) ಆದುದರಿಂದ, ನಿಜವಾಗಿಯೂ ಮನಸ್ಸಿರುವುದಾದರೆ ಯಾವನಾದರೂ ಯೇಸುವಿನ ಹಿಂಬಾಲಕನಾಗಸಾಧ್ಯವಿದೆ. ನಿಮಗೆ ಆ ಬಯಕೆ ಇದೆಯೆ? ನಮ್ಮಲ್ಲಿ ಹೆಚ್ಚಿನವರು ಯೇಸುವಿನ ದಯಾಭರಿತ ಆಮಂತ್ರಣಕ್ಕೆ ಈಗಾಗಲೇ ಸಕಾರಾತ್ಮಕವಾಗಿ ಪ್ರತಿಕ್ರಿಯೆ ತೋರಿಸಿದ್ದೇವೆ ಮತ್ತು ಕ್ಷೇತ್ರ ಸೇವೆಯಲ್ಲಿ ಇದೇ ಆಮಂತ್ರಣವನ್ನು ಇತರರಿಗೆ ತಿಳಿಯಪಡಿಸುತ್ತೇವೆ.

3 ಆದರೆ, ಬೈಬಲ್‌ ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿರುವಂಥ ಕೆಲವರು ಅಧ್ಯಯನ ಮಾಡುವುದನ್ನು ನಿಲ್ಲಿಸಿಬಿಟ್ಟಿರುವುದು ದುಃಖಕರ ಸಂಗತಿಯಾಗಿದೆ. ಅವರು ಯೇಸುವನ್ನು ಹಿಂಬಾಲಿಸುವುದನ್ನು ನಿಧಾನಗೊಳಿಸುತ್ತಾ ಕಾಲಕ್ರಮೇಣ ‘ದೂರ ತೇಲಿಹೋಗುತ್ತಾರೆ.’ (ಇಬ್ರಿ. 2:​1, NW) ಇಂಥ ಪಾಶದಲ್ಲಿ ಬೀಳುವುದನ್ನು ನಾವು ಹೇಗೆ ತಪ್ಪಿಸಸಾಧ್ಯವಿದೆ? ‘ಮೊದಲನೆಯದಾಗಿ ನಾನು ಯೇಸುವನ್ನು ಹಿಂಬಾಲಿಸುವ ಆಯ್ಕೆಯನ್ನು ಏಕೆ ಮಾಡಿದೆ? ಅವನನ್ನು ಹಿಂಬಾಲಿಸುವುದರ ಅರ್ಥವೇನು?’ ಎಂದು ಸ್ವತಃ ಪ್ರಶ್ನಿಸಿಕೊಳ್ಳುವುದಾದರೆ ನಮಗೆ ಸಹಾಯವಾಗುತ್ತದೆ. ಈ ಎರಡು ಪ್ರಶ್ನೆಗಳಿಗೆ ಉತ್ತರವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ನಾವು ಆರಿಸಿಕೊಂಡಿರುವ ಉತ್ತಮ ಪಥದಲ್ಲೇ ಉಳಿಯುವ ನಮ್ಮ ದೃಢನಿರ್ಧಾರವನ್ನು ಇನ್ನಷ್ಟು ಬಲಗೊಳಿಸಲು ಸಹಾಯಮಾಡುವುದು. ಇದು ಯೇಸುವನ್ನು ಹಿಂಬಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಲು ಸಹ ನಮಗೆ ಸಹಾಯಮಾಡುವುದು.

ಯೇಸುವನ್ನು ಏಕೆ ಹಿಂಬಾಲಿಸಬೇಕು?

4 ಪ್ರವಾದಿಯಾದ ಯೆರೆಮೀಯನು ಹೇಳಿದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆ. 10:23) ಇತಿಹಾಸವು ಯೆರೆಮೀಯನ ಮಾತುಗಳು ಸತ್ಯವೆಂಬುದನ್ನು ಸಾಬೀತುಪಡಿಸಿದೆ. ಅಪರಿಪೂರ್ಣ ಮಾನವರು ತಮ್ಮನ್ನು ಯಶಸ್ವಿಕರವಾಗಿ ನಿರ್ದೇಶಿಸಿಕೊಳ್ಳಲಾರರು ಎಂಬುದು ಹೆಚ್ಚೆಚ್ಚು ವ್ಯಕ್ತವಾಗಿದೆ. ಯಾವ ಮಾನವನೂ ಎಂದಿಗೂ ನಾಯಕನಾಗಲು ಸಾಧ್ಯವಿಲ್ಲದಿರುವಂಥ ರೀತಿಯಲ್ಲಿ ಯೇಸು ನಮ್ಮ ನಾಯಕನಾಗಲು ಅರ್ಹನಾಗಿದ್ದಾನೆ ಎಂಬುದನ್ನು ಕಲಿತುಕೊಂಡಿರುವುದರಿಂದಲೇ ನಾವು ಅವನನ್ನು ಹಿಂಬಾಲಿಸುವ ಆಮಂತ್ರಣವನ್ನು ಸ್ವೀಕರಿಸಿದೆವು. ಯೇಸುವಿನ ಅರ್ಹತೆಗಳಲ್ಲಿ ಕೆಲವನ್ನು ಪರಿಗಣಿಸಿರಿ.

5 ಮೊದಲನೆಯದಾಗಿ, ಯೇಸುವನ್ನು ಮೆಸ್ಸೀಯ ನಾಯಕನಾಗಿ ಆರಿಸಿದ್ದು ಸ್ವತಃ ಯೆಹೋವನೇ. ನಮಗೋಸ್ಕರ ಯಾರನ್ನು ನಾಯಕನಾಗಿ ನೇಮಿಸಬೇಕು ಎಂಬುದನ್ನು ನಮ್ಮ ಸೃಷ್ಟಿಕರ್ತನಲ್ಲದೆ ಇನ್ನಾರು ಹೆಚ್ಚು ಉತ್ತಮವಾಗಿ ತಿಳಿದಿದ್ದಾನೆ? ಎರಡನೆಯದಾಗಿ, ನಾವು ಮೆಚ್ಚಬಲ್ಲ ಮತ್ತು ಅನುಕರಿಸಬಲ್ಲ ಗುಣಗಳು ಯೇಸುವಿನಲ್ಲಿವೆ. (ಯೆಶಾಯ 11:​2, 3 ಓದಿ.) ಅವನು ಪರಿಪೂರ್ಣ ಮಾದರಿಯಾಗಿದ್ದಾನೆ. (1 ಪೇತ್ರ 2:21) ಮೂರನೆಯದಾಗಿ, ತನ್ನನ್ನು ಹಿಂಬಾಲಿಸುವವರ ವಿಷಯದಲ್ಲಿ ಯೇಸುವಿಗೆ ಆಳವಾದ ಚಿಂತೆಯಿದೆ. ಅವರಿಗೋಸ್ಕರ ತನ್ನ ಜೀವವನ್ನು ಅರ್ಪಿಸುವ ಮೂಲಕ ಅವನು ಇದನ್ನು ಸಾಬೀತುಪಡಿಸಿದನು. (ಯೋಹಾನ 10:​14, 15 ಓದಿ.) ಈಗ ನಮಗೆ ಸಂತೋಷವನ್ನು ತರುವ ಮತ್ತು ಮಹಿಮಾಯುತವಾದ ಶಾಶ್ವತ ಭವಿಷ್ಯತ್ತಿಗೆ ನಡಿಸುವ ಜೀವಿತದ ಕಡೆಗೆ ಅವನು ನಮ್ಮನ್ನು ಮಾರ್ಗದರ್ಶಿಸುವಾಗ ತನ್ನನ್ನು ಕಾಳಜಿಭರಿತ ಕುರುಬನಾಗಿಯೂ ತೋರಿಸಿಕೊಳ್ಳುತ್ತಾನೆ. (ಯೋಹಾ. 10:​10, 11; ಪ್ರಕ. 7:​16, 17) ಈ ಕಾರಣಕ್ಕಾಗಿ ಮತ್ತು ಇತರ ಕಾರಣಗಳಿಗಾಗಿ, ನಾವು ಅವನನ್ನು ಹಿಂಬಾಲಿಸುವ ಆಯ್ಕೆಯನ್ನು ಮಾಡಿದಾಗ ವಿವೇಕಪೂರ್ಣ ನಿರ್ಣಯವನ್ನು ಮಾಡಿದೆವು. ಆದರೆ, ಅವನನ್ನು ಹಿಂಬಾಲಿಸುವುದರಲ್ಲಿ ಏನು ಒಳಗೂಡಿದೆ?

6 ಕ್ರೈಸ್ತರೆಂದು ಕರೆಸಿಕೊಂಡ ಮಾತ್ರಕ್ಕೆ ನಾವು ಕ್ರಿಸ್ತನ ಹಿಂಬಾಲಕರಾಗಿಬಿಡುವುದಿಲ್ಲ. ಇಂದು ಸುಮಾರು 200 ಕೋಟಿ ಜನರು ಕ್ರೈಸ್ತರೆಂದು ಹೇಳಿಕೊಳ್ಳುತ್ತಾರೆ, ಆದರೆ ಅವರ ಕ್ರಿಯೆಗಳು ಅವರನ್ನು ‘ಧರ್ಮವನ್ನು ಮೀರಿನಡೆಯುವವರಾಗಿ’ ರುಜುಪಡಿಸುತ್ತವೆ. (ಮತ್ತಾಯ 7:​21-23 ಓದಿ.) ಯೇಸುವನ್ನು ಹಿಂಬಾಲಿಸುವ ಆಮಂತ್ರಣದಲ್ಲಿ ವ್ಯಕ್ತಿಗಳು ಆಸಕ್ತಿಯನ್ನು ತೋರಿಸುವಾಗ, ನಿಜ ಕ್ರೈಸ್ತರು ತಮ್ಮ ಇಡೀ ಜೀವನ ರೀತಿಯನ್ನು ಅವನ ಬೋಧನೆಗಳು ಮತ್ತು ಮಾದರಿಗೆ ಹೊಂದಿಸಿಕೊಳ್ಳುತ್ತಾರೆ ಮತ್ತು ತಮ್ಮ ಜೀವನದಲ್ಲಿ ಪ್ರತಿ ದಿನವೂ ಅದನ್ನು ಪಾಲಿಸುತ್ತಾರೆ ಎಂದು ನಾವು ಅವರಿಗೆ ವಿವರಿಸುತ್ತೇವೆ. ಇದರ ಅರ್ಥವೇನು ಎಂಬುದನ್ನು ದೃಷ್ಟಾಂತಿಸಲಿಕ್ಕಾಗಿ, ಯೇಸುವಿನ ಕುರಿತು ನಮಗೆ ತಿಳಿದಿರುವ ವಿಷಯಗಳಲ್ಲಿ ಕೆಲವನ್ನು ಪರಿಗಣಿಸೋಣ.

ಯೇಸುವಿನ ವಿವೇಕದ ಮಾದರಿಯನ್ನು ಅನುಕರಿಸಿರಿ

7 ಯೇಸು ಅನೇಕ ಗಮನಾರ್ಹ ಗುಣಗಳನ್ನು ತೋರಿಸಿದನಾದರೂ ಅವುಗಳಲ್ಲಿ ನಾಲ್ಕು ಗುಣಗಳ ಮೇಲೆ ನಾವು ಗಮನವನ್ನು ಕೇಂದ್ರೀಕರಿಸುವೆವು. ಅವು ಯಾವುವೆಂದರೆ ಅವನ ವಿವೇಕ, ದೀನಭಾವ, ಹುರುಪು ಮತ್ತು ಪ್ರೀತಿಯೇ. ಮೊದಲನೆಯದಾಗಿ ಅವನ ವಿವೇಕವನ್ನು ಅಂದರೆ ಜ್ಞಾನ ಮತ್ತು ತಿಳಿವಳಿಕೆಯನ್ನು ಪ್ರಾಯೋಗಿಕ ರೀತಿಯಲ್ಲಿ ಕಾರ್ಯರೂಪಕ್ಕೆ ಹಾಕುವ ಅವನ ಸಾಮರ್ಥ್ಯವನ್ನು ಪರಿಗಣಿಸಿರಿ. “[ಯೇಸುವಿನಲ್ಲಿ] ವಿವೇಕ ಮತ್ತು ಜ್ಞಾನದ ಎಲ್ಲ ನಿಕ್ಷೇಪಗಳು ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿವೆ” ಎಂದು ಅಪೊಸ್ತಲ ಪೌಲನು ಬರೆದನು. (ಕೊಲೊ. 2:​2, NW) ಇಂಥ ವಿವೇಕವನ್ನು ಯೇಸು ಎಲ್ಲಿಂದ ಪಡೆದನು? ‘ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದೆನು’ ಎಂದು ಸ್ವತಃ ಅವನೇ ಹೇಳಿದನು. (ಯೋಹಾ. 8:28) ಯೆಹೋವನು ಅವನಿಗೆ ವಿವೇಕವನ್ನು ಕೊಟ್ಟನು, ಆದುದರಿಂದ ಯೇಸುವಿನ ಸ್ವಸ್ಥ ವಿವೇಚನಾಶಕ್ತಿಯನ್ನು ನೋಡಿ ನಮಗೆ ಆಶ್ಚರ್ಯವಾಗುವುದಿಲ್ಲ.

8 ಉದಾಹರಣೆಗೆ, ತನ್ನ ಜೀವನ ರೀತಿಯನ್ನು ಆರಿಸಿಕೊಳ್ಳುವುದರಲ್ಲಿ ಯೇಸು ಸ್ವಸ್ಥ ವಿವೇಚನಾಶಕ್ತಿಯನ್ನು ಉಪಯೋಗಿಸಿದನು. ಅವನು ತನ್ನ ಜೀವನವನ್ನು ಸರಳವಾಗಿ ಇಟ್ಟುಕೊಳ್ಳಲು, ದೇವರ ಚಿತ್ತವನ್ನು ಮಾಡುವ ಏಕೈಕ ಲಕ್ಷ್ಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ನಿರ್ಧರಿಸಿದನು. ಅವನು ವಿವೇಕದಿಂದ ತನ್ನ ಸಮಯ ಮತ್ತು ಶಕ್ತಿಯನ್ನು ರಾಜ್ಯಾಭಿರುಚಿಗಳ ಅಭಿವೃದ್ಧಿಗಾಗಿ ಮೀಸಲಾಗಿಟ್ಟನು. ‘ಕಣ್ಣನ್ನು ಸರಳವಾಗಿ’ ಇಟ್ಟುಕೊಳ್ಳಲು ಪ್ರಯಾಸಪಡುವ ಮೂಲಕ ನಾವು ಯೇಸುವಿನ ಮಾದರಿಯನ್ನು ಹಿಂಬಾಲಿಸುತ್ತೇವೆ; ಹೀಗೆ ನಮ್ಮ ಶಕ್ತಿಯನ್ನು ಮತ್ತು ಗಮನವನ್ನು ಕಬಳಿಸಿಬಿಡುವಂಥ ಅನಗತ್ಯ ವಿಷಯಗಳಿಂದ ನಮ್ಮನ್ನು ಭಾರಗೊಳಿಸಿಕೊಳ್ಳುವುದರಿಂದ ದೂರವಿರುತ್ತೇವೆ. (ಮತ್ತಾ. 6:​22, NW) ಅನೇಕ ಕ್ರೈಸ್ತರು ಶುಶ್ರೂಷೆಗೆ ಹೆಚ್ಚು ಸಮಯವನ್ನು ಮೀಸಲಾಗಿಡಲು ಸಾಧ್ಯವಾಗುವಂತೆ ತಮ್ಮ ಜೀವನ ಶೈಲಿಯನ್ನು ಸರಳೀಕರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕೆಲವರು ಪಯನೀಯರ್‌ ಸೇವೆಯನ್ನು ಆರಂಭಿಸಲು ಶಕ್ತರಾಗಿದ್ದಾರೆ. ನೀವು ಇವರಲ್ಲಿ ಒಬ್ಬರಾಗಿರುವಲ್ಲಿ, ಇದು ತುಂಬ ಪ್ರಶಂಸಾರ್ಹವಾಗಿದೆ. ‘ರಾಜ್ಯವನ್ನು ಮೊದಲಾಗಿ ಹುಡುಕುತ್ತಾ ಇರುವುದು’ ಅಪಾರ ಸಂತೋಷ ಮತ್ತು ಸಂತೃಪ್ತಿಯನ್ನು ತರುತ್ತದೆ.​—⁠ಮತ್ತಾ. 6:​33, NIBV.

ಯೇಸುವಿನಂತೆ ದೀನಭಾವದವರಾಗಿರಿ

9 ಯೇಸುವಿನ ವ್ಯಕ್ತಿತ್ವದ ವಿಷಯದಲ್ಲಿ ನಾವು ಪರಿಗಣಿಸಲಿರುವ ಎರಡನೆಯ ಅಂಶವು ಅವನ ದೀನಭಾವವೇ ಆಗಿದೆ. ಅಪರಿಪೂರ್ಣ ಮಾನವರಿಗೆ ಅಧಿಕಾರ ಸಿಕ್ಕಿದ ಕೂಡಲೆ ಹೆಚ್ಚಾಗಿ ಅವರು ಅಹಂಭಾವವನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಯೇಸು ಎಷ್ಟು ಭಿನ್ನನಾಗಿದ್ದನು! ಯೆಹೋವನ ಉದ್ದೇಶದ ನೆರವೇರಿಕೆಯಲ್ಲಿ ಯೇಸು ಪ್ರಮುಖ ಸ್ಥಾನವನ್ನು ಹೊಂದಿದ್ದರೂ ಅವನಲ್ಲಿ ಅಹಂಕಾರವು ಲೇಶಮಾತ್ರವೂ ಇರಲಿಲ್ಲ. ಮತ್ತು ನಾವು ಅವನ ದೀನ ಮನೋಭಾವವನ್ನು ಅನುಕರಿಸುವಂತೆ ಉತ್ತೇಜಿಸಲ್ಪಟ್ಟಿದ್ದೇವೆ. ಅಪೊಸ್ತಲ ಪೌಲನು ಬರೆದುದು: “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು.” (ಫಿಲಿ. 2:​5-7) ಇದರಲ್ಲಿ ಏನು ಒಳಗೂಡಿತ್ತು?

10 ತನ್ನ ತಂದೆಯ ಸ್ವರ್ಗೀಯ ಸನ್ನಿಧಿಯಲ್ಲಿ ನಿವಾಸಿಸುವ ಮಹಿಮಾಯುತ ಸುಯೋಗದಲ್ಲಿ ಯೇಸು ಆನಂದಿಸುತ್ತಿದ್ದನಾದರೂ ಅವನು ಇಷ್ಟಪೂರ್ವಕವಾಗಿ ‘ತನ್ನನ್ನು ಬರಿದು ಮಾಡಿಕೊಂಡನು.’ ಅವನ ಜೀವವು ಯೆಹೂದಿ ಕನ್ಯೆಯೊಬ್ಬಳ ಗರ್ಭಕ್ಕೆ ಸ್ಥಳಾಂತರಿಸಲ್ಪಟ್ಟಿತು. ಅಲ್ಲಿ ಅವನು ಒಂಬತ್ತು ತಿಂಗಳುಗಳ ತನಕ ಬೆಳೆದು ದೀನ ಬಡಗಿಯೊಬ್ಬನ ಕುಟುಂಬದಲ್ಲಿ ನಿಸ್ಸಹಾಯಕ ಶಿಶುವಾಗಿ ಹುಟ್ಟಿದನು. ಯೋಸೇಫನ ಮನೆಯಲ್ಲಿ ಯೇಸು ಅಂಬೆಗಾಲಿಡುವ ಮಗುವಾಗಿ, ಚಿಕ್ಕ ಹುಡುಗನಾಗಿ ಅನಂತರ ಹದಿಹರೆಯದವನಾಗಿ ಬೆಳೆದನು. ಅವನು ಪಾಪರಹಿತನಾಗಿದ್ದರೂ ತನ್ನ ಯುವಪ್ರಾಯದಾದ್ಯಂತ ಅಪರಿಪೂರ್ಣ ಪಾಪಿಗಳಾಗಿದ್ದ ಹೆತ್ತವರಿಗೆ ಅಧೀನನಾಗಿ ಉಳಿದನು. (ಲೂಕ 2:​51, 52) ಎಂಥ ಅಸಾಧಾರಣ ದೀನಭಾವ!

11 ಕೀಳಾಗಿ ತೋರಬಹುದಾದ ನೇಮಕಗಳನ್ನು ನಾವು ಮನಃಪೂರ್ವಕವಾಗಿ ಅಂಗೀಕರಿಸುವಾಗ ಯೇಸುವಿನ ದೀನಭಾವವನ್ನು ಅನುಕರಿಸುತ್ತೇವೆ. ಒಂದು ಉದಾಹರಣೆಯಾಗಿ, ಸುವಾರ್ತೆಯನ್ನು ಸಾರುವ ನೇಮಕವನ್ನು ಪರಿಗಣಿಸಿರಿ. ವಿಶೇಷವಾಗಿ ಜನರು ಉದಾಸೀನಭಾವದಿಂದ ಪ್ರತಿಕ್ರಿಯಿಸುವಾಗ, ಅಪಹಾಸ್ಯಮಾಡುವಾಗ ಅಥವಾ ವಿರೋಧವನ್ನು ವ್ಯಕ್ತಪಡಿಸುವಾಗ ಈ ಕೆಲಸವು ಕೀಳಾಗಿ ತೋರಬಹುದು. ಆದರೆ ನಾವು ಸಾರುವ ಕೆಲಸವನ್ನು ಮಾಡುತ್ತಾ ಮುಂದುವರಿಯುವ ಮೂಲಕ ತನ್ನನ್ನು ಹಿಂಬಾಲಿಸುವಂತೆ ಯೇಸು ಕೊಟ್ಟ ಆಮಂತ್ರಣಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ತೋರಿಸುವಂತೆ ಇತರರಿಗೆ ಸಹಾಯಮಾಡುತ್ತೇವೆ. ಹೀಗೆ ಜೀವಗಳನ್ನು ರಕ್ಷಿಸಲು ನಾವು ಸಹಾಯಮಾಡುತ್ತೇವೆ. (2 ತಿಮೊಥೆಯ 4:​1-5 ಓದಿ.) ಇನ್ನೊಂದು ಉದಾಹರಣೆಯು, ನಮ್ಮ ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡುವುದರ ಕುರಿತಾಗಿದೆ. ಇದರಲ್ಲಿ ಕಸದ ಬುಟ್ಟಿಗಳನ್ನು ಖಾಲಿಮಾಡುವುದು, ನೆಲವನ್ನು ಒರಸುವುದು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಒಳಗೂಡಿರಸಾಧ್ಯವಿದೆ​—⁠ಇವೆಲ್ಲವೂ ಕೀಳಾಗಿ ಕಾಣುವಂಥ ಕೆಲಸಗಳಾಗಿವೆ! ಆದರೂ ಸ್ಥಳಿಕವಾಗಿ ಶುದ್ಧವಾದ ಆರಾಧನೆಯ ಕೇಂದ್ರವಾಗಿರುವ ನಮ್ಮ ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡುವುದು ನಮ್ಮ ಪವಿತ್ರ ಸೇವೆಯ ಭಾಗವಾಗಿದೆ ಎಂಬುದನ್ನು ನಾವು ಮನಗಾಣುತ್ತೇವೆ. ಕೀಳಾಗಿ ತೋರುವಂಥ ಕೆಲಸಗಳನ್ನು ಮನಃಪೂರ್ವಕವಾಗಿ ಮಾಡಿಮುಗಿಸುವ ಮೂಲಕ ನಾವು ದೀನಭಾವವನ್ನು ತೋರಿಸುತ್ತಾ ಕ್ರಿಸ್ತನ ಹೆಜ್ಜೆಜಾಡನ್ನು ಅನುಸರಿಸುತ್ತೇವೆ.

ಯೇಸುವಿನಂತೆ ಹುರುಪುಳ್ಳವರಾಗಿರಿ

12 ಶುಶ್ರೂಷೆಯಲ್ಲಿ ಯೇಸುವಿಗಿದ್ದ ಹುರುಪನ್ನು ಪರಿಗಣಿಸಿರಿ. ಯೇಸು ಭೂಮಿಯಲ್ಲಿದ್ದಾಗ ಎಷ್ಟೋ ವಿಷಯಗಳನ್ನು ಮಾಡಿದನು. ತನ್ನ ಜೀವನದ ಆರಂಭದ ಭಾಗದಲ್ಲಿ ಅವನು ತನ್ನ ಸಾಕುತಂದೆಯಾದ ಯೋಸೇಫನೊಂದಿಗೆ ಬಡಗಿಯ ಕೆಲಸವನ್ನು ಮಾಡಿದ್ದಿರಬಹುದು. ತನ್ನ ಶುಶ್ರೂಷೆಯ ಸಮಯದಲ್ಲಿ ಯೇಸು ಅದ್ಭುತಕಾರ್ಯಗಳನ್ನು ಮಾಡಿದನು. ರೋಗಿಗಳನ್ನು ವಾಸಿಮಾಡಿದನು ಮತ್ತು ಮೃತರನ್ನು ಪುನರುತ್ಥಾನಗೊಳಿಸಿದನು. ಆದರೆ ಅವನ ಮುಖ್ಯ ಕೆಲಸವು ಸುವಾರ್ತೆಯನ್ನು ಸಾರುವುದು ಮತ್ತು ಕಿವಿಗೊಡುವ ಮನಸ್ಸಿದ್ದವರಿಗೆ ಕಲಿಸುವುದೇ ಆಗಿತ್ತು. (ಮತ್ತಾ. 4:23) ಅವನ ಹಿಂಬಾಲಕರಾದ ನಮಗೂ ಅದೇ ಕೆಲಸವನ್ನು ಮಾಡಲಿಕ್ಕಿದೆ. ನಾವು ಅವನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು? ಒಂದು ವಿಧ, ಯೇಸುವಿಗೆ ಇದ್ದಂಥ ಹೇತುಗಳನ್ನೇ ನಾವು ಸಹ ಬೆಳೆಸಿಕೊಳ್ಳುವ ಮೂಲಕವೇ.

13 ಎಲ್ಲಕ್ಕಿಂತಲೂ ಮುಖ್ಯವಾಗಿ, ದೇವರಿಗಾಗಿರುವ ಪ್ರೀತಿಯು ಸಾರುವಂತೆ ಮತ್ತು ಕಲಿಸುವಂತೆ ಯೇಸುವನ್ನು ಪ್ರಚೋದಿಸಿತು. ಆದರೆ ಯೇಸು ತಾನು ಕಲಿಸಿದ ಸತ್ಯಗಳನ್ನು ಸಹ ಪ್ರೀತಿಸಿದನು. ಆ ಸತ್ಯಗಳು ಅವನಿಗೆ ಬೆಲೆ ಕಟ್ಟಲಾಗದ ನಿಧಿಯಂತಿದ್ದವು ಮತ್ತು ಅವನು ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದನು. ಬೋಧಕರು ಅಥವಾ ‘ಸಾರ್ವಜನಿಕ ಉಪದೇಶಕರು’ ಆಗಿರುವ ನಮಗೆ ಸಹ ಹಾಗೆಯೇ ಅನಿಸುತ್ತದೆ. ದೇವರ ವಾಕ್ಯದಿಂದ ನಾವು ಕಲಿತುಕೊಂಡಿರುವ ಕೆಲವು ಅಮೂಲ್ಯ ಸತ್ಯಗಳ ಕುರಿತು ತುಸು ಆಲೋಚಿಸಿರಿ! ವಿಶ್ವ ಪರಮಾಧಿಕಾರದ ವಿವಾದ ಮತ್ತು ಅದು ಬಗೆಹರಿಸಲ್ಪಡುವ ವಿಧದ ಕುರಿತು ನಮಗೆ ತಿಳಿದಿದೆ. ಮೃತರ ಸ್ಥಿತಿ ಮತ್ತು ದೇವರ ನೂತನ ಲೋಕದಲ್ಲಿ ದೊರಕಲಿರುವ ಆಶೀರ್ವಾದಗಳ ಕುರಿತು ಶಾಸ್ತ್ರವಚನಗಳು ಏನು ಕಲಿಸುತ್ತವೆ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ನಾವು ಇಂಥ ಸತ್ಯಗಳನ್ನು ಇತ್ತೀಚೆಗೆ ಕಲಿತಿರಲಿ ಅಥವಾ ದೀರ್ಘ ಸಮಯಕ್ಕೆ ಮುಂಚೆ ಕಲಿತಿರಲಿ, ಅವುಗಳ ಮೌಲ್ಯವು ಎಂದಿಗೂ ಕಡಿಮೆಯಾಗುವುದಿಲ್ಲ. ವಾಸ್ತವದಲ್ಲಿ ಇಂಥ ಸತ್ಯಗಳು ಹಳೆಯವುಗಳಾಗಿರಲಿ ಹೊಸತಾದವುಗಳಾಗಿರಲಿ ಅವು ಬೆಲೆಕಟ್ಟಲಾರದ ನಿಧಿಯಾಗಿವೆ. (ಮತ್ತಾಯ 13:52 ಓದಿ.) ಹೃದಯಪೂರ್ವಕ ಉತ್ಸಾಹದಿಂದ ಸಾರುವ ಮೂಲಕ ಯೆಹೋವನು ನಮಗೆ ಕಲಿಸಿರುವ ವಿಷಯಗಳಿಗಾಗಿರುವ ನಮ್ಮ ಪ್ರೀತಿಯನ್ನು ನಾವು ಇತರರಿಗೆ ವ್ಯಕ್ತಪಡಿಸುತ್ತೇವೆ.

14 ಯೇಸು ಹೇಗೆ ಕಲಿಸಿದನು ಎಂಬುದನ್ನು ಸಹ ಗಮನಿಸಿರಿ. ಅವನು ತನ್ನ ಕೇಳುಗರ ಗಮನವನ್ನು ಯಾವಾಗಲೂ ಶಾಸ್ತ್ರವಚನಗಳ ಕಡೆಗೆ ನಿರ್ದೇಶಿಸುತ್ತಿದ್ದನು. ಅವನು ಆಗಿಂದಾಗ್ಗೆ “ಎಂದು ಬರೆದದೆ” ಎಂದು ಹೇಳುವ ಮೂಲಕ ಒಂದು ಪ್ರಮುಖ ಅಂಶವನ್ನು ಪರಿಚಯಿಸುತ್ತಿದ್ದನು. (ಮತ್ತಾ. 4:4; 21:13) ಅವನ ದಾಖಲಿತ ಮಾತುಗಳಲ್ಲಿ, ಹೀಬ್ರು ಶಾಸ್ತ್ರದ ಅರ್ಧಕ್ಕಿಂತಲೂ ಹೆಚ್ಚು ಪುಸ್ತಕಗಳಿಂದ ಅವನು ನೇರವಾಗಿ ಇಲ್ಲವೆ ಪರೋಕ್ಷವಾಗಿ ಉಲ್ಲೇಖಿಸಿದನು. ಯೇಸುವಿನಂತೆ, ನಾವೂ ನಮ್ಮ ಶುಶ್ರೂಷೆಯಲ್ಲಿ ಬೈಬಲಿನ ಮೇಲೆ ಬಹಳವಾಗಿ ಆತುಕೊಳ್ಳುತ್ತೇವೆ ಮತ್ತು ಸಾಧ್ಯವಿರುವಾಗೆಲ್ಲ ಶಾಸ್ತ್ರವಚನವನ್ನು ತೆರೆದು ತೋರಿಸಲು ಪ್ರಯತ್ನಿಸುತ್ತೇವೆ. ಈ ರೀತಿಯಲ್ಲಿ ನಾವು ನಮ್ಮ ಸ್ವಂತ ಆಲೋಚನೆಗಳನ್ನಲ್ಲ, ದೇವರ ಆಲೋಚನೆಗಳನ್ನು ಕಲಿಸುತ್ತಿದ್ದೇವೆ ಎಂಬುದನ್ನು ಸೂಕ್ತಹೃದಯದ ಜನರು ಸ್ವತಃ ನೋಡುವಂತೆ ಬಿಡುತ್ತೇವೆ. ಯಾರಾದರೂ ಬೈಬಲನ್ನು ಓದಲು ಮತ್ತು ದೇವರ ವಾಕ್ಯದ ಮೌಲ್ಯವನ್ನೂ ಅರ್ಥವನ್ನೂ ಚರ್ಚಿಸಲು ಒಪ್ಪಿಕೊಳ್ಳುವಾಗ ನಮಗೆಷ್ಟು ಸಂತೋಷವಾಗುತ್ತದೆ! ಅಂಥವರು ಯೇಸುವನ್ನು ಹಿಂಬಾಲಿಸುವ ಆಮಂತ್ರಣವನ್ನು ಸ್ವೀಕರಿಸುವಾಗಂತೂ ನಮಗಾಗುವ ಸಂತೋಷವು ಹೇಳತೀರದು.

ಯೇಸುವನ್ನು ಹಿಂಬಾಲಿಸುವುದರ ಅರ್ಥ ಇತರರನ್ನು ಪ್ರೀತಿಸುವುದಾಗಿದೆ

15 ಯೇಸುವಿನ ವ್ಯಕ್ತಿತ್ವದ ವಿಷಯದಲ್ಲಿ ನಾವು ಚರ್ಚಿಸಲಿರುವ ಕೊನೆಯ ಅಂಶವು ಅತ್ಯಂತ ಹೃದಯಸ್ಪರ್ಶಿಯಾಗಿದೆ. ಅದು ಜೊತೆ ಮಾನವರ ಕಡೆಗೆ ಅವನಿಗಿರುವ ಪ್ರೀತಿಯೇ ಆಗಿದೆ. “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ” ಎಂದು ಅಪೊಸ್ತಲ ಪೌಲನು ಬರೆದನು. (2 ಕೊರಿಂ. 5:14) ಸಾಮಾನ್ಯವಾಗಿ ಇಡೀ ಮಾನವಕುಲದ ಮೇಲೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರ ಮೇಲೆ ಯೇಸುವಿಗಿರುವ ಪ್ರೀತಿಯ ಕುರಿತು ನಾವು ಮನನಮಾಡುವಾಗ, ಅದು ನಮ್ಮ ಹೃದಯಗಳನ್ನು ಸ್ಪರ್ಶಿಸುತ್ತದೆ ಮತ್ತು ನಾವು ಅವನ ಮಾದರಿಯನ್ನು ಅನುಸರಿಸುವ ಬಲವಾದ ಅನಿಸಿಕೆ ನಮಗಾಗುತ್ತದೆ.

16 ಯೇಸು ಇತರರಿಗೆ ಹೇಗೆ ಪ್ರೀತಿಯನ್ನು ತೋರಿಸಿದನು? ಮಾನವಕುಲಕ್ಕೋಸ್ಕರ ತನ್ನ ಪ್ರಾಣವನ್ನೇ ಒಪ್ಪಿಸಿಕೊಡಲು ಅವನಿಗಿದ್ದ ಸಿದ್ಧಮನಸ್ಸು ಅವನ ಪ್ರೀತಿಯ ಸರ್ವೋತ್ಕೃಷ್ಟ ಅಭಿವ್ಯಕ್ತಿಯಾಗಿತ್ತು. (ಯೋಹಾ. 15:13) ಆದರೆ ತನ್ನ ಶುಶ್ರೂಷೆಯ ಸಮಯದಲ್ಲಿ ಯೇಸು ಬೇರೆ ವಿಧಗಳಲ್ಲೂ ಪ್ರೀತಿಯನ್ನು ತೋರಿಸಿದನು. ಉದಾಹರಣೆಗೆ, ಕಷ್ಟವನ್ನು ಅನುಭವಿಸುತ್ತಿದ್ದವರ ಬಗ್ಗೆ ಅವನಿಗೆ ಸಹಾನುಭೂತಿಯಿತ್ತು. ಮರಿಯಳೂ ಅವಳೊಂದಿಗಿದ್ದವರೂ ಲಾಜರನು ಸತ್ತದ್ದಕ್ಕಾಗಿ ಅಳುತ್ತಿರುವುದನ್ನು ನೋಡಿದಾಗ ಅವನು ಅವರ ದುಃಖವನ್ನು ಕಂಡು ಬಹಳವಾಗಿ ಮರುಗಿದನು. ಯೇಸು ಲಾಜರನನ್ನು ಸ್ವಲ್ಪದರಲ್ಲೇ ಪುನರುತ್ಥಾನಗೊಳಿಸಲಿಕ್ಕಿದ್ದನಾದರೂ ಅವನು ಎಷ್ಟು ನೊಂದುಕೊಂಡನೆಂದರೆ “ಕಣ್ಣೀರು ಬಿಟ್ಟನು.”​—⁠ಯೋಹಾ. 11:​32-35.

17 ಯೇಸುವಿನ ಶುಶ್ರೂಷೆಯ ಆರಂಭದಲ್ಲಿ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಹೇಳಿದನು. ಯೇಸು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದನು? ‘ಅವನು ಕನಿಕರಪಟ್ಟನು’ ಎಂದು ದಾಖಲೆಯು ತಿಳಿಸುತ್ತದೆ. ಆ ಬಳಿಕ ಅವನು ಅಸಾಧಾರಣವಾದ ಒಂದು ಕಾರ್ಯವನ್ನು ಮಾಡಿದನು. “ಕೈನೀಡಿ ಅವನನ್ನು ಮುಟ್ಟಿ​—⁠ನನಗೆ ಮನಸ್ಸುಂಟು; ಶುದ್ಧವಾಗು ಅಂದನು. ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧವಾದನು.” ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಕುಷ್ಠರೋಗಿಗಳು ಅಶುದ್ಧರಾಗಿದ್ದರು ಮತ್ತು ಯೇಸು ಆ ಮನುಷ್ಯನನ್ನು ಮುಟ್ಟದೆಯೇ ಅವನನ್ನು ವಾಸಿಮಾಡಸಾಧ್ಯವಿತ್ತು ಎಂಬುದಂತೂ ಖಂಡಿತ. ಆದರೂ ಯೇಸು ಆ ಕುಷ್ಠರೋಗಿಯನ್ನು ವಾಸಿಮಾಡುತ್ತಿರುವಾಗ, ಬಹುಶಃ ಅನೇಕ ವರ್ಷಗಳಲ್ಲಿ ಮೊದಲ ಬಾರಿಗೆ ಅವನು ಇನ್ನೊಬ್ಬ ಮಾನವನ ಸ್ಪರ್ಶವನ್ನು ಅನುಭವಿಸುವಂತೆ ಮಾಡಿದನು. ಸಹಾನುಭೂತಿಯ ಎಂಥ ಕೋಮಲ ಕಾರ್ಯವಿದು!​—⁠ಮಾರ್ಕ 1:​40-42.

18 ಕ್ರಿಸ್ತನ ಹಿಂಬಾಲಕರಾದ ನಾವು ಕೂಡ ‘ಅನುಕಂಪವನ್ನು’ ತೋರಿಸುವ ಮೂಲಕ ನಮ್ಮ ಪ್ರೀತಿಯನ್ನು ತೋರ್ಪಡಿಸುವಂತೆ ನಮಗೆ ಆಜ್ಞೆಯು ಕೊಡಲ್ಪಟ್ಟಿದೆ. (1 ಪೇತ್ರ 3:​8, NW) ಅಸ್ಥಿಗತ ರೋಗದಿಂದ ಅಥವಾ ತೀವ್ರವಾದ ಖಿನ್ನತೆಯಿಂದ ಕಷ್ಟವನ್ನು ಅನುಭವಿಸುತ್ತಿರುವ ಜೊತೆ ವಿಶ್ವಾಸಿಯೊಬ್ಬನ ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗಿರಲಿಕ್ಕಿಲ್ಲ; ವಿಶೇಷವಾಗಿ ಅಂಥ ನೋವುಗಳನ್ನು ಸ್ವತಃ ಎಂದೂ ಅನುಭವಿಸದೇ ಇರುವಾಗಂತೂ ಇದು ತುಂಬ ಕಷ್ಟ. ಆದರೆ ಯೇಸು ಎಂದೂ ಅಸ್ವಸ್ಥನಾಗಿರದಿದ್ದರೂ ರೋಗಿಗಳಿಗೆ ಪರಾನುಭೂತಿಯನ್ನು ತೋರಿಸಿದನು. ಅಂಥ ಪರಾನುಭೂತಿಯನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ನೋವನ್ನು ಅನುಭವಿಸುತ್ತಿರುವವರು ನಮ್ಮ ಬಳಿ ಮನಸ್ಸನ್ನು ತೋಡಿಕೊಳ್ಳುತ್ತಿರುವಾಗ ತಾಳ್ಮೆಯಿಂದ ಕಿವಿಗೊಡುವ ಮೂಲಕವೇ. ‘ನಾನು ಅವರ ಸನ್ನಿವೇಶದಲ್ಲಿ ಇರುತ್ತಿದ್ದಲ್ಲಿ ನನಗೆ ಹೇಗೆ ಅನಿಸುತ್ತಿತ್ತು?’ ಎಂದೂ ಸ್ವತಃ ಕೇಳಿಕೊಳ್ಳಸಾಧ್ಯವಿದೆ. ಇತರರ ಅನಿಸಿಕೆಗಳ ಕಡೆಗೆ ನಾವು ಸೂಕ್ಷ್ಮಸಂವೇದನೆಯನ್ನು ಬೆಳೆಸಿಕೊಳ್ಳುವುದಾದರೆ, ‘ಮನಗುಂದಿದವರನ್ನು ಧೈರ್ಯಪಡಿಸಿ’ ಸಾಂತ್ವನಗೊಳಿಸಲು ಹೆಚ್ಚು ಸಮರ್ಥರಾಗುವೆವು. (1 ಥೆಸ 5:14) ಹೀಗೆ ನಾವು ಯೇಸುವನ್ನು ಹಿಂಬಾಲಿಸುತ್ತಾ ಇರುವೆವು.

19 ಯೇಸು ಕ್ರಿಸ್ತನ ಮಾತುಗಳಲ್ಲಿ ಮತ್ತು ಕ್ರಿಯೆಗಳಲ್ಲಿ ನಾವು ಎಷ್ಟೆಲ್ಲ ಆಸಕ್ತಿಕರವಾದ ವಿಷಯಗಳನ್ನು ಕಲಿತುಕೊಳ್ಳುತ್ತೇವೆ! ನಾವು ಅವನ ಕುರಿತು ಎಷ್ಟು ಹೆಚ್ಚನ್ನು ಕಲಿಯುತ್ತೇವೋ ಅಷ್ಟೇ ಹೆಚ್ಚಾಗಿ ಅವನಂತಾಗಲು ಮತ್ತು ಇತರರು ಸಹ ಅವನಂತಾಗಲು ಅವರಿಗೆ ಸಹಾಯಮಾಡಲು ಹೆಚ್ಚೆಚ್ಚು ಬಯಸುತ್ತೇವೆ. ಆದುದರಿಂದ, ಮೆಸ್ಸೀಯ ರಾಜನನ್ನು ಈಗಲೂ ನಿತ್ಯಕ್ಕೂ ಹಿಂಬಾಲಿಸುವುದರಲ್ಲಿ ಸಂತೋಷವನ್ನು ಕಂಡುಕೊಳ್ಳೋಣ.

ವಿವರಿಸಬಲ್ಲಿರೊ?

• ಯೇಸು ತೋರಿಸಿದಂತೆ ನಾವು ಹೇಗೆ ವಿವೇಕವನ್ನು ತೋರಿಸಬಲ್ಲೆವು?

• ಯಾವ ವಿಧಗಳಲ್ಲಿ ನಾವು ದೀನಭಾವವನ್ನು ತೋರಿಸಬಲ್ಲೆವು?

• ನಾವು ಶುಶ್ರೂಷೆಗಾಗಿ ಹುರುಪನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು?

• ಇತರರಿಗೆ ಪ್ರೀತಿಯನ್ನು ತೋರಿಸುವುದರಲ್ಲಿ ನಾವು ಯಾವ ವಿಧಗಳಲ್ಲಿ ಯೇಸುವನ್ನು ಅನುಕರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಯಾವ ದಯಾಭರಿತ ಆಮಂತ್ರಣವನ್ನು ಯೇಸು ಕೊಟ್ಟನು? (ಬಿ) ಯೇಸುವಿನ ಆಮಂತ್ರಣಕ್ಕೆ ನೀವು ಹೇಗೆ ಪ್ರತಿಕ್ರಿಯೆ ತೋರಿಸಿದ್ದೀರಿ?

3. ಯೇಸುವನ್ನು ಹಿಂಬಾಲಿಸುವುದರಿಂದ ದೂರ ತೇಲಿಹೋಗುವುದನ್ನು ನಾವು ಹೇಗೆ ತಪ್ಪಿಸಸಾಧ್ಯವಿದೆ?

4, 5. ಯೇಸು ನಾಯಕನಾಗಲು ಏಕೆ ಅರ್ಹನಾಗಿದ್ದಾನೆ?

6. ಯೇಸುವನ್ನು ಹಿಂಬಾಲಿಸುವುದರಲ್ಲಿ ಏನು ಒಳಗೂಡಿದೆ?

7, 8. (ಎ) ವಿವೇಕ ಎಂದರೇನು ಮತ್ತು ಯೇಸುವಿನಲ್ಲಿ ಅಪಾರವಾದ ವಿವೇಕವಿತ್ತು ಏಕೆ? (ಬಿ) ಯೇಸು ಹೇಗೆ ವಿವೇಕವನ್ನು ತೋರಿಸಿದನು ಮತ್ತು ನಾವು ಅವನನ್ನು ಹೇಗೆ ಅನುಕರಿಸಸಾಧ್ಯವಿದೆ?

9, 10. ಯೇಸು ತನ್ನ ದೀನಭಾವವನ್ನು ಹೇಗೆ ತೋರಿಸಿದನು?

11. ಯಾವ ವಿಧಗಳಲ್ಲಿ ನಾವು ಯೇಸುವಿನ ದೀನಭಾವವನ್ನು ಅನುಕರಿಸಸಾಧ್ಯವಿದೆ?

12, 13. (ಎ) ಯೇಸು ಹೇಗೆ ಹುರುಪನ್ನು ತೋರಿಸಿದನು ಮತ್ತು ಅವನನ್ನು ಯಾವುದು ಪ್ರಚೋದಿಸಿತು? (ಬಿ) ಶುಶ್ರೂಷೆಯಲ್ಲಿ ಹುರುಪುಳ್ಳವರಾಗಿರುವಂತೆ ನಮ್ಮನ್ನು ಯಾವುದು ಪ್ರಚೋದಿಸುತ್ತದೆ?

14. ಯೇಸುವಿನ ಬೋಧನಾ ರೀತಿಯನ್ನು ನಾವು ಹೇಗೆ ಅನುಕರಿಸಬಲ್ಲೆವು?

15. ಯೇಸುವಿನ ಗಮನಾರ್ಹ ಗುಣವು ಯಾವುದಾಗಿತ್ತು ಮತ್ತು ಅದರ ಕುರಿತು ಮನನಮಾಡುವುದು ನಮ್ಮ ಮೇಲೆ ಹೇಗೆ ಪ್ರಭಾವ ಬೀರಬಲ್ಲದು?

16, 17. ಯಾವ ವಿಧಗಳಲ್ಲಿ ಯೇಸು ಇತರರ ಕಡೆಗೆ ತನಗಿರುವ ಪ್ರೀತಿಯನ್ನು ತೋರಿಸಿದನು?

18. ನಾವು ಹೇಗೆ ‘ಅನುಕಂಪವನ್ನು’ ತೋರಿಸಸಾಧ್ಯವಿದೆ?

19. ಯಾವ ವಿಧಗಳಲ್ಲಿ ನಾವು ಯೇಸುವಿನ ಮಾದರಿಯಿಂದ ಪ್ರಭಾವಿತರಾಗಿದ್ದೇವೆ?

[ಪುಟ 5ರಲ್ಲಿರುವ ಚೌಕ/ಚಿತ್ರ]

ಕ್ರಿಸ್ತನನ್ನು ಅನುಕರಿಸಲು ನಮಗೆ ಸಹಾಯಮಾಡುವಂಥ ಪ್ರಕಾಶನ

2007ನೆಯ ಜಿಲ್ಲಾ ಅಧಿವೇಶನ ಕಾರ್ಯಕ್ರಮದಲ್ಲಿ “ಬಂದು ನನ್ನನ್ನು ಹಿಂಬಾಲಿಸು” ಎಂಬ ಶೀರ್ಷಿಕೆಯುಳ್ಳ 192 ಪುಟದ ಪುಸ್ತಕವು ಇಂಗ್ಲಿಷ್‌ ಭಾಷೆಯಲ್ಲಿ ಬಿಡುಗಡೆಮಾಡಲ್ಪಟ್ಟಿತು. ಈ ಪ್ರಕಾಶನವನ್ನು ಯೇಸುವಿನ ಮೇಲೆ, ವಿಶೇಷವಾಗಿ ಅವನ ಗುಣಗಳು ಮತ್ತು ಕ್ರಿಯೆಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಂತೆ ಕ್ರೈಸ್ತರಿಗೆ ಸಹಾಯಮಾಡುವ ಉದ್ದೇಶದಿಂದ ರಚಿಸಲಾಗಿದೆ. ಪೀಠಿಕಾರೂಪದ ಎರಡು ಅಧ್ಯಾಯಗಳ ಬಳಿಕ, ಮೊದಲ ವಿಭಾಗವು ಯೇಸುವಿನ ಗಮನಾರ್ಹ ಗುಣಗಳ ಅಂದರೆ ಅವನ ದೀನಭಾವ, ಧೈರ್ಯ, ವಿವೇಕ, ವಿಧೇಯತೆ ಮತ್ತು ತಾಳ್ಮೆಯ ಕುರಿತು ಸ್ಥೂಲ ಸಮೀಕ್ಷೆಯನ್ನು ನೀಡುತ್ತದೆ.

ಇದಾದ ಬಳಿಕ, ಸುವಾರ್ತೆಯನ್ನು ಬೋಧಿಸುವವನಾಗಿ ಮತ್ತು ಸಾರುವವನಾಗಿ ಯೇಸುವಿನ ಚಟುವಟಿಕೆಗಳ ಕುರಿತಾದ ಮತ್ತು ಅವನ ಮಹತ್ತರವಾದ ಪ್ರೀತಿಯು ತೋರಿಸಲ್ಪಟ್ಟ ಕೆಲವು ವಿಧಗಳ ಕುರಿತಾದ ವಿಭಾಗಗಳಿವೆ. ಈ ಪುಸ್ತಕದಾದ್ಯಂತ, ಯೇಸುವನ್ನು ಅನುಕರಿಸುವಂತೆ ಕ್ರೈಸ್ತನೊಬ್ಬನಿಗೆ ಸಹಾಯಮಾಡುವ ಮಾಹಿತಿಯು ಪ್ರಸ್ತುತಪಡಿಸಲ್ಪಟ್ಟಿದೆ.

ಈ ಪ್ರಕಾಶನವು ನಾವೆಲ್ಲರೂ ನಮ್ಮನ್ನು ಪರೀಕ್ಷಿಸಿಕೊಳ್ಳುವಂತೆ ಮತ್ತು ‘ನಾನು ಯೇಸುನ್ನು ನಿಜವಾಗಿಯೂ ಹಿಂಬಾಲಿಸುತ್ತಿದ್ದೇನೊ? ನಾನು ಅವನನ್ನು ಹೆಚ್ಚು ನಿಕಟವಾಗಿ ಹೇಗೆ ಹಿಂಬಾಲಿಸಬಲ್ಲೆ?’ ಎಂದು ಕೇಳಿಕೊಳ್ಳುವಂತೆ ಪ್ರಚೋದಿಸುವುದು ಎಂಬ ಭರವಸೆ ನಮಗಿದೆ. ಇದು “ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರು” ಕ್ರಿಸ್ತನ ಹಿಂಬಾಲಕರಾಗಲು ಸಹ ಸಹಾಯಮಾಡುವುದು.​—⁠ಅ. ಕೃ. 13:⁠48.

[ಪುಟ 4ರಲ್ಲಿರುವ ಚಿತ್ರ]

ಯೇಸು ಭೂಮಿಗೆ ಬರಲು ಮತ್ತು ಮಾನವ ಶಿಶುವಾಗಿ ಜನಿಸಲು ಒಪ್ಪಿಕೊಂಡನು. ಇದಕ್ಕೆ ಯಾವ ಗುಣ ಬೇಕಾಗಿತ್ತು?

[ಪುಟ 6ರಲ್ಲಿರುವ ಚಿತ್ರ]

ಶುಶ್ರೂಷೆಯಲ್ಲಿ ಹುರುಪುಳ್ಳವರಾಗಿರಲು ನಮ್ಮನ್ನು ಯಾವುದು ಪ್ರಚೋದಿಸುತ್ತದೆ?