ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸೇವಕನು—‘ನಮ್ಮ ದ್ರೋಹಗಳ ದೆಸೆಯಿಂದ ಗಾಯಗೊಳಿಸಲ್ಪಟ್ಟನು’

ಯೆಹೋವನ ಸೇವಕನು—‘ನಮ್ಮ ದ್ರೋಹಗಳ ದೆಸೆಯಿಂದ ಗಾಯಗೊಳಿಸಲ್ಪಟ್ಟನು’

ಯೆಹೋವನ ಸೇವಕನು​—⁠‘ನಮ್ಮ ದ್ರೋಹಗಳ ದೆಸೆಯಿಂದ ಗಾಯಗೊಳಿಸಲ್ಪಟ್ಟನು’

“ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು, ನಮ್ಮ ಅಪರಾಧಗಳ ನಿಮಿತ್ತ ಅವನು ಜಜ್ಜಲ್ಪಟ್ಟನು . . . ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು.”​—⁠ಯೆಶಾ. 53:⁠5.

ನಾವು ಕ್ರಿಸ್ತನ ಮರಣವನ್ನು ಸ್ಮರಿಸಲು ಮತ್ತು ಅವನ ಮರಣ ಹಾಗೂ ಪುನರುತ್ಥಾನವು ಸಾಧಿಸಿದ್ದೆಲ್ಲವನ್ನು ಜ್ಞಾಪಕಕ್ಕೆ ತಂದುಕೊಳ್ಳಲು ಜ್ಞಾಪಕಾಚರಣೆಯನ್ನು ಆಚರಿಸುತ್ತೇವೆ. ಜ್ಞಾಪಕಾಚರಣೆಯು ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ, ಆತನ ನಾಮದ ಪವಿತ್ರೀಕರಣ ಮತ್ತು ಮಾನವಕುಲದ ರಕ್ಷಣೆಯನ್ನು ಒಳಗೂಡಿರುವ ಆತನ ಉದ್ದೇಶದ ನೆರವೇರಿಕೆಯನ್ನು ನೆನಪಿಗೆ ತರುತ್ತದೆ. ಕ್ರಿಸ್ತನ ಯಜ್ಞವನ್ನು ಮತ್ತು ಅದು ಏನನ್ನು ಸಾಧಿಸಿದೆಯೆಂಬುದನ್ನು ಯೆಶಾಯ 53:​3-12ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಯು ವರ್ಣಿಸುವಷ್ಟು ಉತ್ತಮವಾಗಿ ಬೇರೆ ಯಾವುದೇ ಬೈಬಲ್‌ ಪ್ರವಾದನೆಯು ಪ್ರಾಯಶಃ ವರ್ಣಿಸಲಿಕ್ಕಿಲ್ಲ. ಆ ಸೇವಕನು ಅನುಭವಿಸಲಿಕ್ಕಿದ್ದ ಬಾಧೆಗಳನ್ನು ಯೆಶಾಯನು ಮುಂತಿಳಿಸಿದನು ಮತ್ತು ಕ್ರಿಸ್ತನ ಮರಣದ ಕುರಿತಾದ ಹಾಗೂ ಅವನ ಮರಣದಿಂದ ಅಭಿಷಿಕ್ತ ಸಹೋದರರಿಗೂ ‘ಬೇರೆ ಕುರಿಗಳಿಗೂ’ ಸಿಗಲಿಕ್ಕಿದ್ದ ಆಶೀರ್ವಾದಗಳ ಕುರಿತಾದ ನಿರ್ದಿಷ್ಟ ವಿವರಗಳನ್ನು ನೀಡಿದನು.​—⁠ಯೋಹಾ. 10:⁠16.

2 ಯೇಸು ಭೂಮಿಯಲ್ಲಿ ಹುಟ್ಟುವುದಕ್ಕಿಂತ ಏಳು ಶತಮಾನಗಳಿಗೆ ಮುಂಚೆಯೇ, ತನ್ನ ಚುನಾಯಿತ ಸೇವಕನು ಗರಿಷ್ಠ ಮಟ್ಟದ ವರೆಗೆ ಪರೀಕ್ಷಿಸಲ್ಪಡುವುದಾದರೂ ನಂಬಿಗಸ್ತನಾಗಿ ಉಳಿಯುವನು ಎಂದು ಪ್ರವಾದಿಸುವಂತೆ ಯೆಹೋವನು ಯೆಶಾಯನನ್ನು ಪ್ರೇರಿಸಿದನು. ಈ ಸಂಗತಿಯು ಯೆಹೋವನಿಗೆ ತನ್ನ ಕುಮಾರನ ನಿಷ್ಠೆಯ ವಿಷಯದಲ್ಲಿದ್ದ ಸಂಪೂರ್ಣ ಭರವಸೆಯ ಪುರಾವೆಯಾಗಿದೆ. ನಾವು ಈ ಪ್ರವಾದನೆಯನ್ನು ಪರಿಗಣಿಸುವಾಗ, ನಮ್ಮ ಹೃದಯಗಳು ಕೃತಜ್ಞತಾಭಾವದಿಂದ ತುಂಬಿಬರುವವು ಮತ್ತು ನಮ್ಮ ನಂಬಿಕೆಯು ಬಲಗೊಳಿಸಲ್ಪಡುವುದು.

“ಧಿಕ್ಕರಿಸಲ್ಪಟ್ಟನು” ಮತ್ತು ‘ಲಕ್ಷ್ಯಕ್ಕೇ ತರಲ್ಪಡಲಿಲ್ಲ’

3ಯೆಶಾಯ 53:3 ಓದಿ. ತನ್ನ ತಂದೆಯ ಬಳಿಯಲ್ಲಿದ್ದುಕೊಂಡು ಸಂತೋಷದಿಂದ ಸೇವೆಸಲ್ಲಿಸುವುದನ್ನು ತ್ಯಾಗಮಾಡಿ ಭೂಮಿಗೆ ಬಂದು ಮಾನವಕುಲವನ್ನು ಪಾಪ ಮತ್ತು ಮರಣದಿಂದ ಕಾಪಾಡಲು ತನ್ನ ಜೀವವನ್ನು ಯಜ್ಞವಾಗಿ ಕೊಡುವುದು ದೇವರ ಏಕಜಾತ ಪುತ್ರನಿಗೆ ಯಾವ ಅರ್ಥದಲ್ಲಿತ್ತೆಂಬುದನ್ನು ತುಸು ಆಲೋಚಿಸಿ ನೋಡಿ. (ಫಿಲಿ. 2:​5-8) ಮೋಶೆಯ ಧರ್ಮಶಾಸ್ತ್ರದ ಕೆಳಗೆ ಪ್ರಾಣಿಯಜ್ಞಗಳನ್ನು ಅರ್ಪಿಸುವುದು ಯಾವುದನ್ನು ಮುನ್‌ಛಾಯೆಯಾಗಿ ತೋರಿಸಿತೋ ಆ ಪಾಪಗಳ ನಿಜವಾದ ಕ್ಷಮಾಪಣೆಯನ್ನು ಅವನ ಯಜ್ಞವು ಪೂರೈಸಲಿಕ್ಕಿತ್ತು. (ಇಬ್ರಿ. 10:​1-4) ಯಾರು ವಾಗ್ದತ್ತ ಮೆಸ್ಸೀಯನಿಗಾಗಿ ಕಾಯುತ್ತಿದ್ದರೋ ಆ ಯೆಹೂದ್ಯರಾದರೂ ಅವನನ್ನು ಸೇರಿಸಿಕೊಂಡು ಗೌರವಿಸಬೇಕಾಗಿತ್ತಲ್ಲವೆ? (ಯೋಹಾ. 6:14) ಅದರ ಬದಲಿಗೆ, ಯೆಶಾಯನು ಪ್ರವಾದಿಸಿದಂತೆಯೇ ಕ್ರಿಸ್ತನು ಯೆಹೂದ್ಯರಿಂದ “ಧಿಕ್ಕರಿಸಲ್ಪಟ್ಟನು” ಮತ್ತು ಅವರು “ಅವನನ್ನು ಲಕ್ಷ್ಯಕ್ಕೇ ತರಲಿಲ್ಲ.” “ಆತನು ತನ್ನ [ಮನೆಗೆ] ಬಂದನು; ಆದರೆ ಸ್ವಂತಜನರು ಆತನನ್ನು ಅಂಗೀಕರಿಸಲಿಲ್ಲ” ಎಂದು ಅಪೊಸ್ತಲ ಯೋಹಾನನು ಬರೆದನು. (ಯೋಹಾ. 1:11) ಅಪೊಸ್ತಲ ಪೇತ್ರನು ಯೆಹೂದ್ಯರಿಗೆ ಹೇಳಿದ್ದು: ‘ನಮ್ಮ ಪಿತೃಗಳ ದೇವರು ತನ್ನ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ನೀವಂತೂ ಆತನನ್ನು ಹಿಡಿದುಕೊಟ್ಟಿರಿ; ಮತ್ತು ಪಿಲಾತನು ಆತನನ್ನು ಬಿಡಿಸಬೇಕೆಂದು ನಿರ್ಣಯಿಸಿದಾಗ ಆತನನ್ನು ಬೇಡವೆಂದಿರಿ. ನೀವು ಪರಿಶುದ್ಧನೂ ನೀತಿವಂತನೂ ಆಗಿರುವ ಪುರುಷನನ್ನು ಬೇಡವೆಂದು ಹೇಳಿದಿರಿ.’​—⁠ಅ. ಕೃ. 3:​13, 14.

4 ಯೇಸು “ವ್ಯಾಧಿಪೀಡಿತನು” ಆಗಬೇಕಿತ್ತು ಎಂದು ಸಹ ಯೆಶಾಯನು ಪ್ರವಾದಿಸಿದನು. ತನ್ನ ಶುಶ್ರೂಷೆಯ ಸಮಯದಲ್ಲಿ ಯೇಸು ಕೆಲವೊಮ್ಮೆ ಆಯಾಸಗೊಂಡದ್ದು ನಿಜ, ಆದರೆ ಅವನಿಗೆ ವ್ಯಾಧಿ ತಗಲಿತು ಅಥವಾ ಅವನು ಅಸ್ವಸ್ಥನಾದನು ಎಂಬುದಕ್ಕೆ ಯಾವುದೇ ಸೂಚನೆಯಿಲ್ಲ. (ಯೋಹಾ. 4:⁠6) ಆದರೆ ಅವನು ಯಾರಿಗೆ ಸಾರಿದನೋ ಅವರ ವ್ಯಾಧಿಗಳ ಪರಿಚಯ ಅವನಿಗಾಯಿತು. ಅವನು ಅವರ ಮೇಲೆ ಕನಿಕರಪಟ್ಟು ಅನೇಕರನ್ನು ವಾಸಿಮಾಡಿದನು. (ಮಾರ್ಕ 1:​32-34) ಹೀಗೆ ಯೇಸು, “ನಿಜವಾಗಿಯೂ ನಮ್ಮ ಸಂಕಷ್ಟಗಳನ್ನು ಅನುಭವಿಸಿದನು; ಅವನು ಹೊತ್ತ ಹೊರೆಯು ನಮ್ಮ ಸಂಕಟವೇ” ಎಂಬ ಪ್ರವಾದನೆಯನ್ನು ನೆರವೇರಿಸಿದನು.​—⁠ಯೆಶಾ. 53:4ಎ; ಮತ್ತಾ. 8:​16, 17.

‘ದೇವರಿಂದ ಬಾಧಿತನಾದ’ ಹಾಗೆ

5ಯೆಶಾಯ 53:4ಬಿ ಓದಿ. ಯೇಸುವಿನ ಸಮಕಾಲೀನರಲ್ಲಿ ಅನೇಕರು ಅವನು ಏಕೆ ಬಾಧೆಪಟ್ಟು ಸತ್ತನು ಎಂಬುದರ ಕಾರಣವನ್ನು ಅರ್ಥಮಾಡಿಕೊಳ್ಳಲಿಲ್ಲ. ಅಸಹ್ಯಕರವಾದ ಒಂದು ರೋಗದಿಂದ ಬಾಧಿಸುತ್ತಿದ್ದಾನೋ ಎಂಬಂತೆ ದೇವರು ಅವನನ್ನು ಶಿಕ್ಷಿಸುತ್ತಿದ್ದಾನೆ ಎಂದು ಅವರು ನೆನಸಿದರು. (ಮತ್ತಾ. 27:​38-44) ಯೆಹೂದ್ಯರು ಯೇಸುವಿನ ಮೇಲೆ ದೇವದೂಷಣೆಯ ಆರೋಪವನ್ನು ಹೊರಿಸಿದರು. (ಮಾರ್ಕ 14:​61-64; ಯೋಹಾ. 10:33) ವಾಸ್ತವದಲ್ಲಿ ಯೇಸು ಪಾಪಿಯಾಗಲಿ ದೇವದೂಷಕನಾಗಲಿ ಆಗಿರಲಿಲ್ಲ. ಆದರೆ ಅವನಿಗೆ ತನ್ನ ತಂದೆಯ ಮೇಲಿದ್ದ ಮಹಾ ಪ್ರೀತಿಯ ಕಾರಣದಿಂದ ತಾನು ದೇವದೂಷಣೆಯ ಅಪವಾದವನ್ನು ಹೊತ್ತವನಾಗಿ ಸಾಯಲಿಕ್ಕಿದ್ದೇನೆ ಎಂಬ ವಿಚಾರವು ಯೆಹೋವನ ಸೇವಕನಾಗಿ ಅವನ ಬಾಧೆಗೆ ಹೆಚ್ಚನ್ನು ಕೂಡಿಸಿದ್ದಿರಬೇಕು. ಆದರೂ ಅವನು ಯೆಹೋವನ ಚಿತ್ತಕ್ಕೆ ತನ್ನನ್ನು ಅಧೀನಪಡಿಸಿಕೊಳ್ಳಲು ಮನಃಪೂರ್ವಕವಾಗಿ ಸಿದ್ಧನಿದ್ದನು.​—⁠ಮತ್ತಾ. 26:⁠39.

6 ಕ್ರಿಸ್ತನು ‘ದೇವರಿಂದ ಬಾಧಿತನಾದನು’ ಎಂದು ಇತರರು ನೆನಸುವರು ಎಂದು ಯೆಶಾಯನ ಪ್ರವಾದನೆ ತಿಳಿಸುತ್ತದೆ ಎಂದು ಓದುವುದು ನಮಗೆ ಆಶ್ಚರ್ಯವನ್ನು ಉಂಟುಮಾಡುವುದಿಲ್ಲ, ಆದರೆ “ಅವನನ್ನು ಜಜ್ಜುವುದರಲ್ಲಿ ಯೆಹೋವನು ತಾನೇ ಆನಂದಪಟ್ಟನು” ಎಂದು ಅದೇ ಪ್ರವಾದನೆಯು ಮುಂತಿಳಿಸುವುದು ಖಂಡಿತ ಆಶ್ಚರ್ಯವನ್ನು ಉಂಟುಮಾಡುತ್ತದೆ. (ಯೆಶಾ. 53:​10, NW) “ಇಗೋ, ನನ್ನ ಸೇವಕನು! . . . ನಾನು ಒಪ್ಪಿಗೆ ನೀಡಿರುವ ನನ್ನ ಚುನಾಯಿತನು” ಎಂದು ಸಹ ಯೆಹೋವನು ಹೇಳಿದ್ದರಿಂದ ಹೇಗೆ ತಾನೇ ಯೆಹೋವನು ‘ಅವನನ್ನು ಜಜ್ಜುವುದರಲ್ಲಿ ಆನಂದಪಡಸಾಧ್ಯವಿದೆ’? (ಯೆಶಾ. 42:​1, NW) ಇದು ಯೆಹೋವನಿಗೆ ಆನಂದವನ್ನು ತಂದಿತು ಎಂದು ಯಾವ ಅರ್ಥದಲ್ಲಿ ಹೇಳಸಾಧ್ಯವಿದೆ?

7 ಪ್ರವಾದನೆಯ ಈ ಭಾಗವನ್ನು ಅರ್ಥಮಾಡಿಕೊಳ್ಳಲು, ಯೆಹೋವನ ಪರಮಾಧಿಕಾರಕ್ಕೆ ಸವಾಲನ್ನು ಒಡ್ಡುವ ಮೂಲಕ ಸೈತಾನನು ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ ಎಲ್ಲ ದೇವರ ಸೇವಕರ ನಿಷ್ಠೆಯ ಕುರಿತು ಸಂದೇಹವನ್ನು ಎಬ್ಬಿಸಿದನು ಎಂಬುದನ್ನು ನಾವು ನೆನಪಿಗೆ ತಂದುಕೊಳ್ಳಬೇಕು. (ಯೋಬ 1:​9-11; 2:​3-5) ಯೇಸು ಮರಣದ ತನಕ ನಂಬಿಗಸ್ತನಾಗಿ ಉಳಿಯುವ ಮೂಲಕ ಸೈತಾನನ ಸವಾಲಿಗೆ ಸರಿಯಾದ ಜವಾಬನ್ನು ನೀಡಿದನು. ಹೀಗೆ ಕ್ರಿಸ್ತನನ್ನು ಅವನ ವೈರಿಗಳು ಕೊಲ್ಲುವಂತೆ ಯೆಹೋವನು ಅನುಮತಿಸಿದನಾದರೂ ತನ್ನ ಚುನಾಯಿತ ಸೇವಕನು ಕೊಲ್ಲಲ್ಪಡುತ್ತಿರುವುದನ್ನು ನೋಡಿದಾಗ ಯೆಹೋವನು ಬಾಧೆಪಟ್ಟನು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ತನ್ನ ಕುಮಾರನ ಸಂಪೂರ್ಣ ನಂಬಿಗಸ್ತಿಕೆಯನ್ನು ಗಮನಿಸುವುದು ಯೆಹೋವನಿಗೆ ತುಂಬ ಆನಂದವನ್ನು ತಂದಿತು. (ಜ್ಞಾನೋ. 27:11) ಮಾತ್ರವಲ್ಲದೆ, ತನ್ನ ಕುಮಾರನ ಮರಣವು ಪಶ್ಚಾತ್ತಾಪಪಡುವ ಮಾನವರಿಗೆ ತರಲಿಕ್ಕಿರುವ ಪ್ರಯೋಜನಗಳ ಕುರಿತು ತಿಳಿದಿರುವುದು ಯೆಹೋವನಿಗೆ ಮಹದಾನಂದವನ್ನು ತಂದಿತು.​—⁠ಲೂಕ 15:⁠7.

“ನಮ್ಮ ದ್ರೋಹಗಳ ದೆಸೆಯಿಂದ ಅವನಿಗೆ ಗಾಯವಾಯಿತು”

8ಯೆಶಾಯ 53:6 ಓದಿ. ಕಳೆದುಹೋದ ಕುರಿಯಂತೆ, ಪಾಪಭರಿತ ಮಾನವರು ಆದಾಮನಿಂದ ಪಿತ್ರಾರ್ಜಿತವಾಗಿ ಬಂದ ರೋಗ ಮತ್ತು ಮರಣದಿಂದ ಬಿಡುಗಡೆಯನ್ನು ಪಡೆಯಲಿಕ್ಕಾಗಿ ಅಲೆದಾಡಿದ್ದಾರೆ. (1 ಪೇತ್ರ 2:25) ಅಪರಿಪೂರ್ಣರಾಗಿರುವ ಕಾರಣ ಆದಾಮನ ಸಂತತಿಯವರಲ್ಲಿ ಒಬ್ಬನಿಂದಲೂ ಆದಾಮನು ಕಳೆದುಕೊಂಡದ್ದನ್ನು ಪುನಃ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. (ಕೀರ್ತ. 49:​7, 8) ಆದರೆ ತನ್ನ ಮಹಾ ಪ್ರೀತಿಯಿಂದ, ‘ನಮ್ಮೆಲ್ಲರ ದೋಷಫಲವನ್ನು ಯೆಹೋವನು ಅವನ ಮೇಲೆ’ ಅಂದರೆ ತನ್ನ ಪ್ರಿಯ ಕುಮಾರನೂ ಚುನಾಯಿತ ಸೇವಕನೂ ಆದವನ ಮೇಲೆ ಹಾಕಿದನು. ‘ನಮ್ಮ ದ್ರೋಹಗಳ ದೆಸೆಯಿಂದ ಗಾಯಗೊಳ್ಳಲು’ ಮತ್ತು ‘ನಮ್ಮ ಅಪರಾಧಗಳ ನಿಮಿತ್ತ ಜಜ್ಜಲ್ಪಡಲು’ ಸಮ್ಮತಿಸುವ ಮೂಲಕ ಕ್ರಿಸ್ತನು ನಮ್ಮ ಪಾಪಗಳನ್ನು ಯಾತನಾ ಕಂಬದ ಮೇಲೆ ಹೊತ್ತುಕೊಂಡನು ಮತ್ತು ನಮ್ಮ ಪರವಾಗಿ ಪ್ರಾಣವನ್ನು ತೆತ್ತನು.

9 ಅಪೊಸ್ತಲ ಪೇತ್ರನು ಬರೆದದ್ದು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು. ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು.” ಅನಂತರ ಯೆಶಾಯನ ಪ್ರವಾದನೆಯಿಂದ ಉಲ್ಲೇಖಿಸುತ್ತಾ, “ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು” ಎಂದು ಪೇತ್ರನು ಕೂಡಿಸಿ ಹೇಳಿದನು. (1 ಪೇತ್ರ 2:​21, 24; ಯೆಶಾ. 53:⁠5) ಇದು ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರಲು ಪಾಪಿಗಳಿಗೆ ಮಾರ್ಗವನ್ನು ತೆರೆಯಿತು. ಈ ವಿಷಯದಲ್ಲಿ ಪೇತ್ರನು ಮುಂದುವರಿಸುತ್ತಾ ಹೇಳಿದ್ದು: “ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವದಕ್ಕಾಗಿ ಒಂದೇ ಸಾರಿ ಪಾಪನಿವಾರಣಕ್ಕೋಸ್ಕರ ಬಾಧೆಪಟ್ಟು ಸತ್ತನು.”​—⁠1 ಪೇತ್ರ 3:⁠18.

‘ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಇದ್ದನು’

10ಯೆಶಾಯ 53:​7, 8 ಓದಿ. ಯೇಸು ಬರುತ್ತಿರುವುದನ್ನು ಸ್ನಾನಿಕನಾದ ಯೋಹಾನನು ನೋಡಿದಾಗ, “ಅಗೋ [ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆಮಾಡುವವನು” ಎಂದು ಉದ್ಗರಿಸಿದನು. (ಯೋಹಾ. 1:29) ಯೇಸುವನ್ನು ಕುರಿ ಎಂದು ಸಂಬೋಧಿಸಿ ಮಾತಾಡಿದಾಗ, ‘ಅವನು ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಇದ್ದನು’ ಎಂಬ ಯೆಶಾಯನ ಮಾತುಗಳು ಯೋಹಾನನ ಮನಸ್ಸಿನಲ್ಲಿ ಇದ್ದಿರಬಹುದು. (ಯೆಶಾ. 53:⁠7) ಅವನು ‘ತನ್ನ ಪ್ರಾಣವನ್ನು ಧಾರೆಯೆರೆದು ಮರಣಹೊಂದಿದನು’ ಎಂದು ಯೆಶಾಯನು ಪ್ರವಾದಿಸಿದನು. (ಯೆಶಾ. 53:12) ಆಸಕ್ತಿಕರವಾಗಿಯೇ, ಯೇಸು ತನ್ನ ಮರಣದ ಜ್ಞಾಪಕಾಚರಣೆಯನ್ನು ಆರಂಭಿಸಿದ ರಾತ್ರಿಯಂದು 11 ಮಂದಿ ನಂಬಿಗಸ್ತ ಅಪೊಸ್ತಲರಿಗೆ ದ್ರಾಕ್ಷಾಮದ್ಯದ ಪಾತ್ರೆಯನ್ನು ಕೊಟ್ಟು, “ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ” ಎಂದು ಹೇಳಿದನು.​—⁠ಮತ್ತಾ. 26:⁠28.

11 ಪ್ರಾಚೀನ ಕಾಲದ ಇಸಾಕನಂತೆ, ತನಗೋಸ್ಕರವಾಗಿದ್ದ ಯೆಹೋವನ ಚಿತ್ತವೆಂಬ ಯಜ್ಞವೇದಿಯ ಮೇಲೆ ಯಜ್ಞವಾಗಿ ಅರ್ಪಿಸಲ್ಪಡಲು ಯೇಸು ಮನಃಪೂರ್ವಕವಾಗಿ ಸಿದ್ಧನಿದ್ದನು. (ಆದಿ. 22:​1, 2, 9-13; ಇಬ್ರಿ. 10:​5-10) ಇಸಾಕನು ಯಜ್ಞವಾಗಿ ಅರ್ಪಿಸಲ್ಪಡುವುದಕ್ಕೆ ಸಿದ್ಧಮನಸ್ಸಿನಿಂದ ಸಮ್ಮತಿಸಿದನಾದರೂ ಯಜ್ಞವನ್ನು ಅರ್ಪಿಸಲು ಮುಂದೆ ಬಂದದ್ದು ಅಬ್ರಹಾಮನೇ. (ಇಬ್ರಿ. 11:17) ತದ್ರೀತಿಯಲ್ಲಿ, ತಾನು ಸಾಯಬೇಕಾಗಿದೆ ಎಂಬುದನ್ನು ಯೇಸು ಸಿದ್ಧಮನಸ್ಸಿನಿಂದ ಅಂಗೀಕರಿಸಿದನಾದರೂ ವಿಮೋಚನಾ ಮೌಲ್ಯದ ಏರ್ಪಾಡಿನ ಮೂಲಕರ್ತ ಯೆಹೋವನೇ ಆಗಿದ್ದನು. ದೇವರು ತನ್ನ ಕುಮಾರನನ್ನು ಯಜ್ಞವಾಗಿ ಕೊಟ್ಟದ್ದು ಮಾನವಕುಲದ ಮೇಲೆ ಆತನಿಗಿರುವ ಗಾಢವಾದ ಪ್ರೀತಿಯ ಅಭಿವ್ಯಕ್ತಿಯಾಗಿದೆ.

12 “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು” ಎಂದು ಯೇಸು ತಾನೇ ಹೇಳಿದನು. (ಯೋಹಾ. 3:16) “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ” ಎಂದು ಅಪೊಸ್ತಲ ಪೌಲನು ಬರೆದನು. (ರೋಮಾ. 5:⁠8) ಆದುದರಿಂದ ಕ್ರಿಸ್ತನ ಮರಣವನ್ನು ಆಚರಿಸುವ ಮೂಲಕ ನಾವು ಅವನನ್ನು ಗೌರವಿಸುತ್ತೇವಾದರೂ ಯಜ್ಞಾರ್ಪಣೆಯ ಏರ್ಪಾಡನ್ನು ಮಾಡಿದಾತನು ಮಹಾ ಅಬ್ರಹಾಮನಾದ ಯೆಹೋವನೇ ಆಗಿದ್ದಾನೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ನಾವು ಜ್ಞಾಪಕಾಚರಣೆಯನ್ನು ಆತನ ಸ್ತುತಿಗಾಗಿ ಆಚರಿಸುತ್ತೇವೆ.

ಸೇವಕನು “ಬಹು ಜನರಿಗೆ ನೀತಿಯ ನಿಲುವನ್ನು” ತರುತ್ತಾನೆ

13ಯೆಶಾಯ 53:​11, 12 ಓದಿ. ಯೆಹೋವನು ತನ್ನ ಚುನಾಯಿತ ಸೇವಕನ ಕುರಿತಾಗಿ, “ನೀತಿವಂತನಾದ ನನ್ನ ಸೇವಕನು . . . ಬಹು ಜನರಿಗೆ ನೀತಿಯ ನಿಲುವನ್ನು ತರುವನು” (NW) ಎಂದು ಹೇಳಿದನು. ಯಾವ ವಿಧದಲ್ಲಿ? 12ನೇ ವಚನದ ಕೊನೆಯ ಭಾಗವು ಉತ್ತರವನ್ನು ಕಂಡುಕೊಳ್ಳಲು ನಮಗೆ ಸಹಾಯಮಾಡುತ್ತದೆ. ‘ಬಹು ಜನ ದ್ರೋಹಿಗಳಿಗಾಗಿ ವಿಜ್ಞಾಪನೆಮಾಡಿದನಲ್ಲಾ’ ಎಂದು ಅಲ್ಲಿ ತಿಳಿಸಲ್ಪಟ್ಟಿದೆ. ಆದಾಮನ ಸಂತತಿಯವರೆಲ್ಲರೂ ಜನ್ಮತಃ ಪಾಪಿಗಳಾಗಿದ್ದಾರೆ ಅಥವಾ ‘ಅಪರಾಧಿಗಳಾಗಿದ್ದಾರೆ.’ ಆದುದರಿಂದಲೇ ಅವರು “ಪಾಪವು ಕೊಡುವ ಸಂಬಳ”ವನ್ನು ಅಂದರೆ ಮರಣವನ್ನು ಪಡೆಯುತ್ತಾರೆ. (ರೋಮಾ. 5:12; 6:23) ಯೆಹೋವನು ಮತ್ತು ಪಾಪಭರಿತ ಮಾನವನ ಮಧ್ಯೆ ಸಮಾಧಾನ ಸಂಬಂಧವನ್ನು ಸ್ಥಾಪಿಸುವುದು ಅಗತ್ಯವಾಗಿದೆ. ಯೆಶಾಯನ ಪ್ರವಾದನೆಯ 53ನೇ ಅಧ್ಯಾಯವು, “ನಮಗೆ ಸುಶಾಂತಿಯನ್ನುಂಟುಮಾಡುವ ದಂಡನೆಯನ್ನು ಅವನು ಅನುಭವಿಸಿದನು; ಅವನ ಬಾಸುಂಡೆಗಳಿಂದ ನಮಗೆ ಗುಣವಾಯಿತು” ಎಂದು ಹೇಳುವ ಮೂಲಕ ಯೇಸು ಪಾಪಭರಿತ ಮಾನವಕುಲದ ಪರವಾಗಿ ಹೇಗೆ ‘ವಿಜ್ಞಾಪನೆಮಾಡಿದನು’ ಅಥವಾ ಮಧ್ಯಸ್ತಿಕೆ ವಹಿಸಿದನು ಎಂಬುದನ್ನು ಸುಂದರವಾಗಿ ವರ್ಣಿಸುತ್ತದೆ.​—⁠ಯೆಶಾ. 53:⁠5.

14 ನಮ್ಮ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡು ನಮಗೋಸ್ಕರ ಸಾಯುವ ಮೂಲಕ ಕ್ರಿಸ್ತನು ‘ಬಹು ಜನರಿಗೆ ನೀತಿಯ ನಿಲುವನ್ನು ತಂದನು.’ ಪೌಲನು ಬರೆದುದು: “ತಂದೆಯಾದ ದೇವರು ಆತನಲ್ಲಿ [ಕ್ರಿಸ್ತನಲ್ಲಿ] ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ ಆತನು [ಯಾತನಾ ಕಂಬದ] ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಭೂಪರಲೋಕಗಳಲ್ಲಿರುವ [ಎಲ್ಲ ವಿಷಯಗಳನ್ನೂ] ಆತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ನಿಷ್ಕರ್ಷೆಮಾಡಿದನು.”​—⁠ಕೊಲೊ. 1:​19, 20.

15 ಕ್ರಿಸ್ತನು ಸುರಿಸಿದ ರಕ್ತದ ಮೂಲಕ ಯೆಹೋವನೊಂದಿಗೆ ಸಮಾಧಾನ ಸಂಬಂಧಕ್ಕೆ ತರಲ್ಪಟ್ಟಿರುವ ‘ಪರಲೋಕಗಳಲ್ಲಿರುವ ವಿಷಯಗಳು’ ಕ್ರಿಸ್ತನೊಂದಿಗೆ ಪರಲೋಕದಲ್ಲಿ ಆಳಲು ಕರೆಯಲ್ಪಟ್ಟಿರುವ ಅಭಿಷಿಕ್ತ ಕ್ರೈಸ್ತರಾಗಿದ್ದಾರೆ. ‘ಪರಲೋಕಸ್ವಾಸ್ಥ್ಯಕ್ಕಾಗಿ ಕರೆಯಲ್ಪಟ್ಟಿರುವ’ ಕ್ರೈಸ್ತರು ‘ಜೀವಕ್ಕಾಗಿ ನೀತಿವಂತರೆಂಬ ನಿರ್ಣಯವನ್ನು’ ಹೊಂದಿದ್ದಾರೆ. (ಇಬ್ರಿ. 3:1; ರೋಮಾ. 5:​1, 18) ಆಗ ಯೆಹೋವನು ಅವರನ್ನು ಆಧ್ಯಾತ್ಮಿಕ ಪುತ್ರರಾಗಿ ಸ್ವೀಕರಿಸುತ್ತಾನೆ. ಅವರು ‘ಕ್ರಿಸ್ತನೊಂದಿಗೆ ಬಾಧ್ಯರಾಗಿದ್ದಾರೆ’ ಎಂದು ಪವಿತ್ರಾತ್ಮವು ಅವರಿಗೆ ಸಾಕ್ಷಿಕೊಡುತ್ತದೆ. ಅವರು ಅವನ ಸ್ವರ್ಗೀಯ ರಾಜ್ಯದಲ್ಲಿ ರಾಜರಾಗಲು ಮತ್ತು ಯಾಜಕರಾಗಲು ಕರೆಯಲ್ಪಟ್ಟಿದ್ದಾರೆ. (ರೋಮಾ. 8:​15-17; ಪ್ರಕ. 5:​9, 10) ಅವರು ಆಧ್ಯಾತ್ಮಿಕ ಇಸ್ರಾಯೇಲ್‌ ಅಥವಾ ‘ದೇವರ ಇಸ್ರಾಯೇಲ್‌ನ’ ಭಾಗವಾಗುತ್ತಾರೆ ಮತ್ತು ‘ಹೊಸ ಒಡಂಬಡಿಕೆಯಲ್ಲಿ’ ಭಾಗಿಗಳಾಗುತ್ತಾರೆ. (ಯೆರೆ. 31:​31-34; ಗಲಾ. 6:16) ಹೊಸ ಒಡಂಬಡಿಕೆಯ ಸದಸ್ಯರಾಗಿರುವ ಅವರು, ಯೇಸು ಯಾವುದರ ಕುರಿತು “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ” ಎಂದು ಹೇಳಿದನೋ ಆ ಕೆಂಪು ದ್ರಾಕ್ಷಾಮದ್ಯದ ಪಾತ್ರೆಯನ್ನೂ ಒಳಗೂಡಿಸಿ ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳುವ ಹಕ್ಕನ್ನು ಪಡೆದುಕೊಳ್ಳುತ್ತಾರೆ.​—⁠ಲೂಕ 22:⁠20.

16 ‘ಭೂಮಿಯಲ್ಲಿರುವ ವಿಷಯಗಳು’ ಕ್ರಿಸ್ತನ ಬೇರೆ ಕುರಿಗಳಾಗಿದ್ದಾರೆ. ಇವರಿಗೆ ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆಯಿದೆ. ಯೆಹೋವನ ಚುನಾಯಿತ ಸೇವಕನು ಯೆಹೋವನ ಮುಂದೆ ಇವರಿಗೂ ನೀತಿಯ ನಿಲುವನ್ನು ತರುತ್ತಾನೆ. ಇವರಿಗೆ ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯಿರುವುದರಿಂದ ಮತ್ತು ಇವರು ‘ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿರುವುದರಿಂದ’ ಯೆಹೋವನು ಇವರನ್ನು ನೀತಿವಂತರೆಂದು ನಿರ್ಣಯಿಸುತ್ತಾನೆ. ಆದರೆ ಅವರನ್ನು ಆಧ್ಯಾತ್ಮಿಕ ಪುತ್ರರಾಗಿ ಅಲ್ಲ, ತನ್ನ ಸ್ನೇಹಿತರಾಗಿ ಸ್ವೀಕರಿಸಿ “ಮಹಾ ಸಂಕಟವನ್ನು” (NW) ಪಾರಾಗುವ ಅದ್ಭುತಕರ ಪ್ರತೀಕ್ಷೆಯನ್ನು ಅವರಿಗೆ ನೀಡುತ್ತಾನೆ. (ಪ್ರಕ. 7:​9, 10, 14; ಯಾಕೋ 2:23) ಹೊಸ ಒಡಂಬಡಿಕೆಯ ಭಾಗವಾಗಿಲ್ಲದಿರುವುದರಿಂದ ಮತ್ತು ಈ ಕಾರಣಕ್ಕಾಗಿ ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯಿಲ್ಲದಿರುವುದರಿಂದ ಈ ಬೇರೆ ಕುರಿಗಳು ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳುವುದಿಲ್ಲ, ಬದಲಿಗೆ ಗೌರವಭರಿತ ಪ್ರೇಕ್ಷಕರಾಗಿ ಜ್ಞಾಪಕಾಚರಣೆಗೆ ಹಾಜರಾಗುತ್ತಾರೆ.

ಯೆಹೋವನಿಗೂ ಆತನ ಚುನಾಯಿತ ಸೇವಕನಿಗೂ ತುಂಬುಹೃದಯದ ಕೃತಜ್ಞತೆಗಳು!

17 ಸೇವಕನ ಮೇಲೆ ಗಮನವನ್ನು ಕೇಂದ್ರೀಕರಿಸುವಂಥ ಯೆಶಾಯ ಪುಸ್ತಕದಲ್ಲಿರುವ ಪ್ರವಾದನೆಗಳ ಪರಿಶೀಲನೆಯು, ಕ್ರಿಸ್ತನ ಮರಣದ ಜ್ಞಾಪಕಾಚರಣೆಗಾಗಿ ನಮ್ಮ ಮನಸ್ಸುಗಳನ್ನು ಒಳ್ಳೆಯ ರೀತಿಯಲ್ಲಿ ಸಿದ್ಧಗೊಳಿಸಲು ಸಹಾಯಮಾಡಿತು. ಇದು ನಾವು ‘ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವವನನ್ನು ದೃಷ್ಟಿಯಿಟ್ಟು’ ನೋಡುವಂತೆ ಮಾಡಿದೆ. (ಇಬ್ರಿ. 12:⁠2) ದೇವಕುಮಾರನು ದಂಗೆಕೋರನಲ್ಲ ಎಂಬುದನ್ನು ನಾವು ಕಲಿತುಕೊಂಡಿದ್ದೇವೆ. ಇವನು ಸೈತಾನನಂತಿರದೆ, ಯೆಹೋವನನ್ನು ಪರಮಾಧಿಕಾರಿ ಕರ್ತನೆಂದು ಅಂಗೀಕರಿಸಿ ಆತನಿಂದ ಕಲಿಸಲ್ಪಡುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾನೆ. ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯೇಸು ಯಾರಿಗೆ ಸಾರಿದನೋ ಆ ಜನರಲ್ಲಿ ಅನೇಕರನ್ನು ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ವಾಸಿಮಾಡುವ ಮೂಲಕ ಅವನು ಅವರಿಗೆ ಕನಿಕರ ತೋರಿಸಿದನು. ಹೀಗೆ ಅವನು ಹೊಸ ವಿಷಯಗಳ ವ್ಯವಸ್ಥೆಯಲ್ಲಿ ‘ಲೋಕದಲ್ಲಿ ಸದ್ಧರ್ಮವನ್ನು ಸ್ಥಾಪಿಸುವಾಗ’ ಮೆಸ್ಸೀಯ ರಾಜನಾಗಿ ಏನನ್ನು ಮಾಡುವನು ಎಂಬುದನ್ನು ತೋರಿಸಿದನು. (ಯೆಶಾ. 42:⁠4) ‘ಅನ್ಯಜನಗಳಿಗೆ ಬೆಳಕಾಗಿ’ ಅವನು ದೇವರ ರಾಜ್ಯದ ಕುರಿತು ಸಾರುವುದರಲ್ಲಿ ತೋರಿಸಿದ ಹುರುಪು, ಸುವಾರ್ತೆಯನ್ನು ಲೋಕವ್ಯಾಪಕವಾಗಿ ಹುರುಪಿನಿಂದ ಸಾರಬೇಕು ಎಂಬ ಮರುಜ್ಞಾಪನವನ್ನು ಅವನ ಹಿಂಬಾಲಕರಿಗೆ ಕೊಡುತ್ತದೆ.​—⁠ಯೆಶಾ. 42:⁠7.

18 ಯೆಶಾಯನ ಪ್ರವಾದನೆಯು ನಮಗೋಸ್ಕರ ಬಾಧೆಪಟ್ಟು ಸಾಯುವಂತೆ ತನ್ನ ಪ್ರಿಯ ಕುಮಾರನನ್ನು ಭೂಮಿಗೆ ಕಳುಹಿಸಿಕೊಟ್ಟಾಗ ಯೆಹೋವನು ಮಾಡಿದ ದೊಡ್ಡ ತ್ಯಾಗವನ್ನು ಇನ್ನಷ್ಟು ಹೆಚ್ಚಾಗಿ ಅರ್ಥಮಾಡಿಕೊಳ್ಳಲು ಸಹ ನಮಗೆ ಸಹಾಯಮಾಡುತ್ತದೆ. ಯೆಹೋವನು ತನ್ನ ಕುಮಾರನು ಬಾಧೆಪಡುವುದನ್ನು ನೋಡಿ ಆನಂದಪಡಲಿಲ್ಲ, ಬದಲಿಗೆ ಮರಣದ ತನಕ ಅವನು ತೋರಿಸಿದ ಸಂಪೂರ್ಣ ನಂಬಿಗಸ್ತಿಕೆಯನ್ನು ಅವಲೋಕಿಸಿ ಆನಂದಪಟ್ಟನು. ಸೈತಾನನನ್ನು ಸುಳ್ಳುಗಾರನೆಂದು ರುಜುಪಡಿಸಲು ಮತ್ತು ಯೆಹೋವನ ನಾಮವನ್ನು ಪವಿತ್ರೀಕರಿಸುವ ಮೂಲಕ ಆತನ ಪರಮಾಧಿಕಾರದ ಹಕ್ಕನ್ನು ಎತ್ತಿಹಿಡಿಯಲು ಯೇಸು ಮಾಡಿದ ಎಲ್ಲವನ್ನೂ ಗ್ರಹಿಸುತ್ತಾ ನಾವು ಯೆಹೋವನ ಆನಂದದಲ್ಲಿ ಪಾಲಿಗರಾಗಬೇಕು. ಇದು ಮಾತ್ರವಲ್ಲದೆ ಕ್ರಿಸ್ತನು ನಮ್ಮ ಪಾಪಗಳನ್ನು ತನ್ನ ಮೇಲೆ ತೆಗೆದುಕೊಂಡು ನಮಗೋಸ್ಕರ ಸತ್ತನು. ಹೀಗೆ ಅವನು ತನ್ನ ಅಭಿಷಿಕ್ತ ಸಹೋದರರ ಚಿಕ್ಕ ಹಿಂಡಿನವರು ಮತ್ತು ಬೇರೆ ಕುರಿಗಳವರು ಯೆಹೋವನ ಮುಂದೆ ನೀತಿಯ ನಿಲುವನ್ನು ಹೊಂದುವಂತೆ ಸಾಧ್ಯಗೊಳಿಸಿದನು. ನಾವು ಜ್ಞಾಪಕಾಚರಣೆಗೆ ಒಟ್ಟುಗೂಡಿಬರುವಾಗ ಯೆಹೋವನಿಗಾಗಿಯೂ ಆತನ ನಂಬಿಗಸ್ತ ಸೇವಕನಿಗಾಗಿಯೂ ನಮ್ಮ ಹೃದಯಗಳಲ್ಲಿ ಕೃತಜ್ಞತೆ ತುಂಬಿತುಳುಕಲಿ!

ಪುನರ್ವಿಮರ್ಶೆ

• ಯೆಹೋವನು ಯಾವ ಅರ್ಥದಲ್ಲಿ ತನ್ನ ಕುಮಾರನು ‘ಜಜ್ಜಲ್ಪಡುವುದರಲ್ಲಿ ಆನಂದಪಟ್ಟನು’?

• ಯೇಸು ಹೇಗೆ ‘ನಮ್ಮ ದ್ರೋಹಗಳ ದೆಸೆಯಿಂದ ಗಾಯಗೊಂಡನು’?

• ಸೇವಕನು ಹೇಗೆ ‘ಬಹು ಜನರಿಗೆ ನೀತಿಯ ನಿಲುವನ್ನು ತಂದನು’?

• ಸೇವಕನ ಕುರಿತಾದ ಪ್ರವಾದನೆಗಳ ಅಧ್ಯಯನವು ಜ್ಞಾಪಕಾಚರಣೆಗಾಗಿ ನಿಮ್ಮ ಹೃದಮನಗಳನ್ನು ಹೇಗೆ ಸಿದ್ಧಪಡಿಸಿದೆ?

[ಅಧ್ಯಯನ ಪ್ರಶ್ನೆಗಳು]

1. ನಾವು ಜ್ಞಾಪಕಾಚರಣೆಯನ್ನು ಆಚರಿಸುವಾಗ ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಇದನ್ನು ಮಾಡಲು ಯಾವ ಪ್ರವಾದನೆಯು ನಮಗೆ ಸಹಾಯಮಾಡುವುದು?

2. ಯೆಶಾಯನ ಪ್ರವಾದನೆಯು ಯಾವುದಕ್ಕೆ ಒಂದು ಪುರಾವೆಯಾಗಿದೆ ಮತ್ತು ಇದು ನಮ್ಮ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?

3. ಯೆಹೂದ್ಯರು ಏಕೆ ಯೇಸುವನ್ನು ಸೇರಿಸಿಕೊಳ್ಳಬೇಕಿತ್ತು, ಆದರೆ ಅವರು ಅವನನ್ನು ಹೇಗೆ ಬರಮಾಡಿಕೊಂಡರು?

4. ಯೇಸುವಿಗೆ ಹೇಗೆ ವ್ಯಾಧಿಯ ಪರಿಚಯವಾಯಿತು?

5. ಯೆಹೂದ್ಯರಲ್ಲಿ ಅನೇಕರು ಯೇಸುವಿನ ಮರಣವನ್ನು ಹೇಗೆ ವೀಕ್ಷಿಸಿದರು ಮತ್ತು ಇದು ಅವನ ಬಾಧೆಗೆ ಹೆಚ್ಚನ್ನು ಕೂಡಿಸಿತೇಕೆ?

6, 7. ಯೆಹೋವನು ತನ್ನ ನಂಬಿಗಸ್ತ ಸೇವಕನನ್ನು ಯಾವ ಅರ್ಥದಲ್ಲಿ ‘ಜಜ್ಜಿದನು’ ಮತ್ತು ಇದು ಏಕೆ ದೇವರಿಗೆ ‘ಆನಂದವನ್ನು’ ತಂದಿತು?

8, 9. (ಎ) ಯೇಸು ‘ನಮ್ಮ ದ್ರೋಹಗಳ ದೆಸೆಯಿಂದ ಗಾಯಗೊಂಡದ್ದು’ ಹೇಗೆ? (ಬಿ) ಪೇತ್ರನು ಇದನ್ನು ಹೇಗೆ ದೃಢಪಡಿಸಿದನು?

10. (ಎ) ಸ್ನಾನಿಕನಾದ ಯೋಹಾನನು ಯೇಸುವನ್ನು ಹೇಗೆ ವರ್ಣಿಸಿದನು? (ಬಿ) ಯೋಹಾನನ ಮಾತುಗಳು ಏಕೆ ಸೂಕ್ತವಾದವುಗಳಾಗಿ ರುಜುವಾದವು?

11, 12. (ಎ) ಯಜ್ಞವಾಗಿ ಅರ್ಪಿಸಲ್ಪಡುವುದರಲ್ಲಿ ಇಸಾಕನು ತೋರಿಸಿದ ಸಿದ್ಧಮನಸ್ಸು ಕ್ರಿಸ್ತನ ಯಜ್ಞದ ಬಗ್ಗೆ ಏನನ್ನು ದೃಷ್ಟಾಂತಿಸುತ್ತದೆ? (ಬಿ) ಜ್ಞಾಪಕಾಚರಣೆಯನ್ನು ಆಚರಿಸುವಾಗ ಮಹಾ ಅಬ್ರಹಾಮನಾದ ಯೆಹೋವನ ಕುರಿತು ನಾವು ಏನನ್ನು ಮನಸ್ಸಿನಲ್ಲಿಡತಕ್ಕದ್ದು?

13, 14. ಯೆಹೋವನ ಸೇವಕನು ಹೇಗೆ ‘ಬಹು ಜನರಿಗೆ ನೀತಿಯ ನಿಲುವನ್ನು ತಂದಿದ್ದಾನೆ’?

15. (ಎ) ಪೌಲನಿಂದ ತಿಳಿಸಲ್ಪಟ್ಟ ‘ಪರಲೋಕಗಳಲ್ಲಿರುವ ವಿಷಯಗಳು’ ಯಾರಿಗೆ ಸೂಚಿತವಾಗಿವೆ? (ಬಿ) ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳಲು ಯಾರು ಮಾತ್ರ ಅರ್ಹರಾಗಿದ್ದಾರೆ ಮತ್ತು ಏಕೆ?

16. ‘ಭೂಮಿಯಲ್ಲಿರುವ ವಿಷಯಗಳು’ ಯಾರಿಗೆ ಸೂಚಿತವಾಗಿವೆ ಮತ್ತು ಯಾವ ವಿಧದಲ್ಲಿ ಅವರಿಗೆ ಯೆಹೋವನ ಮುಂದೆ ನೀತಿಯ ನಿಲುವು ಕೊಡಲ್ಪಟ್ಟಿದೆ?

17. ಸೇವಕನ ಮೇಲೆ ಗಮನವನ್ನು ಕೇಂದ್ರೀಕರಿಸುವಂಥ ಯೆಶಾಯ ಪುಸ್ತಕದಲ್ಲಿರುವ ಪ್ರವಾದನೆಗಳ ಅಧ್ಯಯನವು ಜ್ಞಾಪಕಾಚರಣೆಗಾಗಿ ನಮ್ಮ ಮನಸ್ಸುಗಳನ್ನು ಸಿದ್ಧಗೊಳಿಸಲು ಹೇಗೆ ಸಹಾಯಮಾಡಿದೆ?

18. ಯೆಶಾಯನ ಪ್ರವಾದನೆಯು ಯೆಹೋವನಿಗಾಗಿಯೂ ಆತನ ನಂಬಿಗಸ್ತ ಸೇವಕನಿಗಾಗಿಯೂ ನಮ್ಮ ಹೃದಯಗಳಲ್ಲಿ ಕೃತಜ್ಞತೆಯನ್ನು ತುಂಬಿಸುತ್ತದೆ ಏಕೆ?

[ಪುಟ 26ರಲ್ಲಿರುವ ಚಿತ್ರ]

‘ಅವನು ಧಿಕ್ಕಾರಕ್ಕೆ ಒಳಗಾದನು. ನಾವು ಅವನನ್ನು ಲಕ್ಷ್ಯಕ್ಕೇ ತರಲಿಲ್ಲ’

[ಪುಟ 28ರಲ್ಲಿರುವ ಚಿತ್ರ]

‘ಅವನು ತನ್ನ ಪ್ರಾಣವನ್ನು ಧಾರೆಯೆರೆದು ಮರಣಹೊಂದಿದನು’

[ಪುಟ 29ರಲ್ಲಿರುವ ಚಿತ್ರ]

“ಬೇರೆ ಕುರಿಗಳು” ಗೌರವಭರಿತ ಪ್ರೇಕ್ಷಕರಾಗಿ ಜ್ಞಾಪಕಾಚರಣೆಗೆ ಹಾಜರಾಗುತ್ತಾರೆ