ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಿರಿ

ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಿರಿ

ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಿರಿ

‘ನೀವು ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ.’​—⁠ಮತ್ತಾ. 28:⁠19.

ಅಮೆರಿಕದಲ್ಲಿ ಹಿಂದಿ ಭಾಷೆಯನ್ನು ಮಾತಾಡುವಂಥ ಒಂದು ಗುಂಪಿನೊಂದಿಗೆ ಸೇವೆಮಾಡುತ್ತಿರುವ ಒಬ್ಬ ಸಹೋದರಿಯು, “ಕಳೆದ 11 ವಾರಗಳಿಂದ ನಾನು ಪಾಕಿಸ್ತಾನದಿಂದ ಬಂದಿರುವ ಒಂದು ಕುಟುಂಬದೊಂದಿಗೆ ಅಧ್ಯಯನಮಾಡುತ್ತಿದ್ದೇನೆ” ಎಂದು ಬರೆದಳು. ಅವಳು ಮುಂದುವರಿಸುತ್ತಾ ಹೇಳಿದ್ದು: “ನಾವು ಸ್ನೇಹಿತರಾಗಿಬಿಟ್ಟಿದ್ದೇವೆ ಎಂಬುದನ್ನು ಹೇಳಬೇಕಾಗಿಯೇ ಇಲ್ಲ. ಆದರೆ ಸ್ವಲ್ಪದರಲ್ಲೇ ಈ ಕುಟುಂಬವು ಪಾಕಿಸ್ತಾನಕ್ಕೆ ಹಿಂದಿರುಗಲಿದೆ ಎಂಬುದನ್ನು ನೆನಸಿಕೊಂಡಾಗೆಲ್ಲ ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ನನಗೆ ಕಣ್ಣೀರು ಬರಲು ಕಾರಣವೇನೆಂದರೆ, ಅವರ ಒಡನಾಟ ತಪ್ಪಿಹೋಗುತ್ತದೆ ಎಂಬ ಅನಿಸಿಕೆಯಿಂದ ಉಂಟಾಗುವ ದುಃಖ ಒಂದು ಕಡೆಯಾದರೆ, ಯೆಹೋವನ ಕುರಿತು ಅವರಿಗೆ ಕಲಿಸುತ್ತಿರುವಾಗ ನಾನು ಅನುಭವಿಸಿರುವ ಆನಂದದ ಅನಿಸಿಕೆ ಇನ್ನೊಂದು ಕಡೆ.”

2 ಈ ಸಹೋದರಿಯಂತೆ, ಯಾರೊಂದಿಗಾದರೂ ಬೈಬಲ್‌ ಅಧ್ಯಯನ ಮಾಡುವುದರಿಂದ ಸಿಗುವ ಆನಂದವನ್ನು ನೀವು ಎಂದಾದರೂ ಅನುಭವಿಸಿದ್ದೀರೊ? ಯೇಸು ಮತ್ತು ಅವನ ಪ್ರಥಮ ಶತಮಾನದ ಶಿಷ್ಯರು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಮಹತ್ತರವಾದ ಆನಂದವನ್ನು ಕಂಡುಕೊಂಡರು. ಯೇಸುವಿನಿಂದ ತರಬೇತಿಯನ್ನು ಪಡೆದುಕೊಂಡಿದ್ದ 70 ಮಂದಿ ಶಿಷ್ಯರು ಆನಂದಭರಿತ ವರದಿಯೊಂದಿಗೆ ಹಿಂದಿರುಗಿದಾಗ, ಸ್ವತಃ ಯೇಸುವೇ ‘ಪವಿತ್ರಾತ್ಮದ ಪ್ರೇರಣೆಯಿಂದ ಉಲ್ಲಾಸಗೊಂಡನು.’ (ಲೂಕ 10:​17-21) ತದ್ರೀತಿಯಲ್ಲಿ ಶಿಷ್ಯರನ್ನಾಗಿ ಮಾಡುವುದರಲ್ಲಿ ಇಂದು ಅನೇಕರು ಮಹತ್ತರವಾದ ಆನಂದವನ್ನು ಕಂಡುಕೊಳ್ಳುತ್ತಾರೆ. ಇದಕ್ಕೆ ಪುರಾವೆಯೇನೆಂದರೆ, 2007ರಲ್ಲಿ ಕಷ್ಟಪಟ್ಟು ಕೆಲಸಮಾಡುವ ಸಂತೋಷಭರಿತ ಪ್ರಚಾರಕರು ಪ್ರತಿ ತಿಂಗಳು ಸರಾಸರಿ ಅರುವತ್ತೈದು ಲಕ್ಷ ಬೈಬಲ್‌ ಅಧ್ಯಯನಗಳನ್ನು ನಡೆಸಿದರು!

3 ಆದರೆ ಕೆಲವು ಪ್ರಚಾರಕರು ಒಂದು ಬೈಬಲ್‌ ಅಧ್ಯಯನವನ್ನು ನಡೆಸುವುದರಿಂದ ಸಿಗುವ ಆನಂದವನ್ನು ಇನ್ನೂ ಅನುಭವಿಸಿಲ್ಲ. ಇತರರು ಇತ್ತೀಚಿನ ವರ್ಷಗಳಲ್ಲಿ ಬೈಬಲ್‌ ಅಧ್ಯಯನವನ್ನು ನಡೆಸಿಲ್ಲದಿರಬಹುದು. ಒಂದು ಬೈಬಲ್‌ ಅಧ್ಯಯನವನ್ನು ನಡೆಸಲು ಪ್ರಯತ್ನಿಸುವಾಗ ನಾವು ಯಾವ ಪಂಥಾಹ್ವಾನಗಳನ್ನು ಎದುರಿಸಬಹುದು? ಆ ಪಂಥಾಹ್ವಾನಗಳನ್ನು ನಾವು ಹೇಗೆ ಜಯಿಸಬಹುದು? ಮತ್ತು ‘ನೀವು ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ’ ಎಂಬ ಯೇಸುವಿನ ಆಜ್ಞೆಗೆ ವಿಧೇಯರಾಗಲು ನಮ್ಮಿಂದಾದುದೆಲ್ಲವನ್ನೂ ಮಾಡುವಾಗ ನಾವು ಯಾವ ಪ್ರತಿಫಲವನ್ನು ಪಡೆದುಕೊಳ್ಳುತ್ತೇವೆ?

ನಮ್ಮ ಆನಂದವನ್ನು ಕಸಿದುಕೊಳ್ಳಸಾಧ್ಯವಿರುವಂಥ ಪಂಥಾಹ್ವಾನಗಳು

4 ಲೋಕದ ಕೆಲವು ಭಾಗಗಳಲ್ಲಿ ಜನರು ಸಂತೋಷದಿಂದ ನಮ್ಮ ಸಾಹಿತ್ಯವನ್ನು ಸ್ವೀಕರಿಸುತ್ತಾರೆ ಮತ್ತು ನಮ್ಮೊಂದಿಗೆ ಬೈಬಲಿನ ಅಧ್ಯಯನ ಮಾಡಲು ಅತ್ಯಾಸಕ್ತರಾಗಿದ್ದಾರೆ. ಆಸ್ಟ್ರೇಲಿಯದವರಾಗಿದ್ದು ತಾತ್ಕಾಲಿಕವಾಗಿ ಸಾಂಬಿಯದಲ್ಲಿ ಸೇವೆಮಾಡುತ್ತಿದ್ದ ಒಬ್ಬ ದಂಪತಿಗಳು ಬರೆದದ್ದು: “ಆ ಕಥೆಗಳು ನಿಜವಾಗಿವೆ. ಸಾಂಬಿಯವು ಸಾರುವಿಕೆಗೆ ತುಂಬ ಫತವತ್ತಾದ ಕ್ಷೇತ್ರವಾಗಿದೆ. ಬೀದಿ ಸಾಕ್ಷಿಕಾರ್ಯವಂತೂ ನಂಬಲಾಗದಷ್ಟು ವಿಸ್ಮಯಕರವಾಗಿದೆ! ಜನರು ನಮ್ಮ ಬಳಿಗೆ ಬರುತ್ತಾರೆ ಮತ್ತು ಕೆಲವರಂತೂ ಪತ್ರಿಕೆಗಳ ನಿರ್ದಿಷ್ಟ ಸಂಚಿಕೆಗಳನ್ನು ಕೊಡುವಂತೆ ಕೇಳಿಕೊಳ್ಳುತ್ತಾರೆ.” ಇತ್ತೀಚಿನ ಒಂದು ವರ್ಷದಲ್ಲಿ ಸಾಂಬಿಯದಲ್ಲಿನ ಸಹೋದರ ಸಹೋದರಿಯರು 2,00,000ಕ್ಕಿಂತಲೂ ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡೆಸಿದರು. ಒಬ್ಬ ಪ್ರಚಾರಕನು ಸರಾಸರಿ ಒಂದಕ್ಕಿಂತ ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡೆಸಿದನು.

5 ಆದರೆ ಬೇರೆ ಸ್ಥಳಗಳಲ್ಲಿ, ಸಾಹಿತ್ಯವನ್ನು ನೀಡುವುದು ಮತ್ತು ಬೈಬಲ್‌ ಅಧ್ಯಯನಗಳನ್ನು ಕ್ರಮವಾಗಿ ನಡೆಸುವುದು ಪ್ರಚಾರಕರಿಗೆ ಅಷ್ಟೇನೂ ಸುಲಭವಾಗಿರಲಿಕ್ಕಿಲ್ಲ. ಏಕೆ? ಕೆಲವು ಸಂದರ್ಭದಲ್ಲಿ ಒಬ್ಬ ಪ್ರಚಾರಕನು ಮನೆಯಿಂದ ಮನೆಗೆ ಹೋಗುವಾಗ ಜನರು ಮನೆಯಲ್ಲಿ ಇರುವುದಿಲ್ಲ, ಅಥವಾ ಮನೆಯಲ್ಲಿ ಯಾರು ಸಿಗುತ್ತಾರೋ ಅವರಿಗೆ ಧರ್ಮದ ವಿಷಯದಲ್ಲಿ ಆಸಕ್ತಿ ಇರಲಿಕ್ಕಿಲ್ಲ. ಅವರು ಧಾರ್ಮಿಕ ವಾತಾವರಣ ಇಲ್ಲದಿರುವಂಥ ಮನೆವಾರ್ತೆಯಲ್ಲಿ ಬೆಳೆಸಲ್ಪಟ್ಟಿರಬಹುದು ಅಥವಾ ಸುಳ್ಳು ಧರ್ಮದಲ್ಲಿ ಕಂಡುಬರುವ ಕಪಟತನವು ಅವರಲ್ಲಿ ಜಿಗುಪ್ಸೆ ಹುಟ್ಟಿಸಿರಬಹುದು. ಅನೇಕರು ಸುಳ್ಳು ಕುರುಬರಿಂದ ಆಧ್ಯಾತ್ಮಿಕವಾಗಿ ಘಾಸಿಗೊಳಿಸಲ್ಪಟ್ಟಿದ್ದಾರೆ ಮತ್ತು ‘ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರೆ.’ (ಮತ್ತಾ. 9:​36, NW) ಇಂಥವರು ಬೈಬಲಿನ ಕುರಿತಾದ ಚರ್ಚೆಗಳಲ್ಲಿ ಒಳಗೂಡುವ ವಿಷಯದಲ್ಲಿ ಸ್ವಲ್ಪ ಜಾಗ್ರತೆವಹಿಸಬಹುದು ಎಂಬುದು ಅರ್ಥಮಾಡಿಕೊಳ್ಳತಕ್ಕ ಸಂಗತಿಯೇ.

6 ನಂಬಿಗಸ್ತ ಪ್ರಚಾರಕರಲ್ಲಿ ಕೆಲವರು ಎದುರಿಸುವ ಬೇರೊಂದು ಪಂಥಾಹ್ವಾನವು ಅವರ ಆನಂದವನ್ನು ಕಸಿದುಕೊಳ್ಳುತ್ತದೆ. ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಅವರು ಈ ಮುಂಚೆ ತುಂಬ ಕ್ರಿಯಾಶೀಲರಾಗಿದ್ದರಾದರೂ ಈಗ ಅನಾರೋಗ್ಯ ಅಥವಾ ವೃದ್ಧಾಪ್ಯದ ಇತಿಮಿತಿಗಳು ಅವರಿಗೆ ತಡೆಯನ್ನು ಒಡ್ಡಿವೆ. ಅಷ್ಟುಮಾತ್ರವಲ್ಲ, ನಮ್ಮ ಮೇಲೆ ನಾವೇ ಹೇರಿಕೊಳ್ಳಬಹುದಾದ ಕೆಲವು ಇತಿಮಿತಿಗಳನ್ನೂ ಪರಿಗಣಿಸಿರಿ. ಉದಾಹರಣೆಗೆ, ಬೈಬಲ್‌ ಅಧ್ಯಯನವನ್ನು ನಡೆಸಲು ನಾವು ಅರ್ಹರಲ್ಲ ಎಂಬ ಅನಿಸಿಕೆ ನಿಮಗಿದೆಯೊ? ಫರೋಹನ ಮುಂದೆ ಮಾತಾಡುವ ನೇಮಕವನ್ನು ಯೆಹೋವನು ಮೋಶೆಗೆ ಕೊಟ್ಟಾಗ ಅವನಿಗೆ ಹೇಗನಿಸಿತೋ ಹಾಗೆಯೇ ನಿಮಗೂ ಅನಿಸಬಹುದು. ಆ ಸಮಯದಲ್ಲಿ ಮೋಶೆ ಹೇಳಿದ್ದು: “ಸ್ವಾಮೀ, ನಾನು ಮೊದಲಿನಿಂದಲೂ . . . ವಾಕ್ಚಾತುರ್ಯವಿಲ್ಲದವನು.” (ವಿಮೋ. 4:10) ಅಸಮರ್ಥತೆಯ ಅನಿಸಿಕೆಗಳಿಗೆ ನಿಕಟವಾಗಿ ಸಂಬಂಧಿಸಿರುವ ಇನ್ನೊಂದು ವಿಚಾರವು ವಿಫಲರಾಗುತ್ತೇವೆಂಬ ಭಯವೇ ಆಗಿದೆ. ನಾವು ಅತ್ಯುತ್ತಮ ಬೋಧಕರಲ್ಲದ ಕಾರಣ ಒಬ್ಬ ವ್ಯಕ್ತಿಗೆ ಶಿಷ್ಯನಾಗುವಂತೆ ಸಹಾಯಮಾಡಲು ಆಗುವುದಿಲ್ಲ ಎಂಬ ಚಿಂತೆ ನಮಗಿರಬಹುದು. ಇಂಥ ರೀತಿಯ ಅನುಭವವಾಗುವುದನ್ನು ತಡೆಯಲಿಕ್ಕಾಗಿ, ಒಂದು ಬೈಬಲ್‌ ಅಧ್ಯಯನವನ್ನು ನಡೆಸುವ ಅವಕಾಶವನ್ನು ಕೈಬಿಡುವ ನಿರ್ಧಾರವನ್ನು ನಾವು ಮಾಡಬಹುದು. ಈಗಷ್ಟೇ ತಿಳಿಸಿದ ಪಂಥಾಹ್ವಾನಗಳನ್ನು ನಾವು ಹೇಗೆ ನಿಭಾಯಿಸಬಲ್ಲೆವು?

ನಿಮ್ಮ ಹೃದಯವನ್ನು ಸಿದ್ಧಪಡಿಸಿರಿ

7 ಮೊದಲ ಹೆಜ್ಜೆಯು ನಮ್ಮ ಹೃದಯವನ್ನು ಸಿದ್ಧಪಡಿಸುವುದೇ ಆಗಿದೆ. “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು” ಎಂದು ಯೇಸು ಹೇಳಿದನು. (ಲೂಕ 6:45) ಇತರರ ಹಿತಕ್ಷೇಮದ ವಿಷಯದಲ್ಲಿ ಇದ್ದ ಯಥಾರ್ಥವಾದ ಆಸಕ್ತಿಯು ಯೇಸುವನ್ನು ಅವನ ಶುಶ್ರೂಷೆಯಲ್ಲಿ ಪ್ರಚೋದಿಸಿತು. ಉದಾಹರಣೆಗೆ, ಜೊತೆ ಯೆಹೂದ್ಯರು ದೇವರಿಂದ ವಿಮುಖರಾಗಿದ್ದಾರೆ ಎಂಬುದನ್ನು ಅವನು ಗಮನಿಸಿದಾಗ, “ಅವರ ಮೇಲೆ ಕನಿಕರಪಟ್ಟನು.” ಬಳಿಕ ತನ್ನ ಶಿಷ್ಯರಿಗೆ, “ಬೆಳೆಯು ಬಹಳ . . . ಆದದರಿಂದ ಬೆಳೆಯ ಯಜಮಾನನನ್ನು​—⁠ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ” ಎಂದು ಹೇಳಿದನು.​—⁠ಮತ್ತಾ. 9:​36-38.

8 ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಒಳಗೂಡುವಾಗ, ಯಾರೋ ಒಬ್ಬರು ನಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡಲಿಕ್ಕಾಗಿ ಸಮಯವನ್ನು ವಿನಿಯೋಗಿಸಿದ್ದರಿಂದ ನಾವೆಷ್ಟು ಪ್ರಯೋಜನವನ್ನು ಪಡೆದುಕೊಂಡಿದ್ದೇವೆ ಎಂಬುದರ ಕುರಿತು ಗಹನವಾಗಿ ಆಲೋಚಿಸುವುದು ಒಳ್ಳೇದು. ನಾವು ಶುಶ್ರೂಷೆಯಲ್ಲಿ ಭೇಟಿಯಾಗುವಂಥ ಜನರ ಕುರಿತು ಮತ್ತು ನಾವು ಕೊಂಡೊಯ್ಯುವ ಸಂದೇಶವನ್ನು ಕೇಳಿಸಿಕೊಳ್ಳುವುದರಿಂದ ಅವರು ಹೇಗೆ ಪ್ರಯೋಜನ ಹೊಂದುತ್ತಾರೆ ಎಂಬುದರ ಕುರಿತು ಸಹ ಆಲೋಚಿಸಿರಿ. ಒಬ್ಬ ಸ್ತ್ರೀಯು ತಾನು ವಾಸಿಸುತ್ತಿರುವ ದೇಶದ ಬ್ರಾಂಚ್‌ ಆಫೀಸಿಗೆ ಹೀಗೆ ಪತ್ರ ಬರೆದಳು: “ನನ್ನ ಮನೆಗೆ ಬಂದು ವಿಷಯಗಳನ್ನು ಕಲಿಸುವಂಥ ಸಾಕ್ಷಿಗಳನ್ನು ನಾನೆಷ್ಟು ಗಣ್ಯಮಾಡುತ್ತೇನೆ ಎಂಬುದನ್ನು ನಿಮಗೆ ತಿಳಿಸಲು ಬಯಸುತ್ತೇನೆ. ನನ್ನಿಂದ ಅವರಿಗೆ ಕೆಲವೊಮ್ಮೆ ಕರಕರೆಯಾಗುತ್ತದೆ ಎಂಬುದು ನನಗೆ ಗೊತ್ತಿದೆ, ಏಕೆಂದರೆ ನನಗೆ ತುಂಬ ಪ್ರಶ್ನೆಗಳನ್ನು ಕೇಳಲಿಕ್ಕಿರುತ್ತದೆ ಮತ್ತು ಯಾವಾಗಲೂ ಅವರು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯವನ್ನು ನನ್ನೊಂದಿಗೆ ಕಳೆಯುವಂತೆ ಮಾಡಿರುತ್ತೇನೆ. ಆದರೆ ಅವರು ನನ್ನೊಂದಿಗೆ ತಾಳ್ಮೆಯಿಂದ ವರ್ತಿಸುತ್ತಾರೆ ಮತ್ತು ತಾವು ಕಲಿತಿರುವ ವಿಷಯವನ್ನು ನನ್ನೊಂದಿಗೆ ಹಂಚಿಕೊಳ್ಳಲು ಕಾತುರರಾಗಿರುತ್ತಾರೆ. ಈ ಜನರು ನನ್ನ ಜೀವನದಲ್ಲಿ ಬಂದಿರುವುದಕ್ಕಾಗಿ ನಾನು ಯೆಹೋವನಿಗೆ ಮತ್ತು ಯೇಸುವಿಗೆ ಧನ್ಯವಾದ ಹೇಳುತ್ತೇನೆ.”

9 ಯೇಸು ಜನರಿಗೆ ಸಹಾಯಮಾಡಲು ಪ್ರಯತ್ನಿಸಿದಾಗ ಎಲ್ಲರೂ ಅದಕ್ಕೆ ಪ್ರತಿಕ್ರಿಯೆ ತೋರಿಸಲಿಲ್ಲ ಎಂಬುದಂತೂ ನಿಜ. (ಮತ್ತಾ. 23:37) ಕೆಲವರು ಸ್ವಲ್ಪಕಾಲ ಅವನನ್ನು ಹಿಂಬಾಲಿಸಿದರಾದರೂ ಆ ಬಳಿಕ ಅವನ ಬೋಧನೆಗಳ ವಿಷಯದಲ್ಲಿ ಆಕ್ಷೇಪವೆತ್ತಿದರು ಮತ್ತು “ಆತನ ಕೂಡ ಸಂಚಾರಮಾಡುವದನ್ನು ಬಿಟ್ಟರು.” (ಯೋಹಾ. 6:66) ಆದರೆ ಕೆಲವರ ಅಹಿತಕರ ಪ್ರತಿಕ್ರಿಯೆಯು, ತಾನು ಸಾರುವಂಥ ಸಂದೇಶಕ್ಕೆ ಯಾವುದೇ ಬೆಲೆಯಿಲ್ಲ ಎಂಬ ಅನಿಸಿಕೆಯನ್ನು ಉಂಟುಮಾಡುವಂತೆ ಯೇಸು ಬಿಡಲಿಲ್ಲ. ಅವನು ಬಿತ್ತಿದ ಬೀಜಗಳಲ್ಲಿ ಹೆಚ್ಚಿನದ್ದು ಫಲವನ್ನು ಕೊಡಲಿಲ್ಲವಾದರೂ, ತಾನು ಮಾಡುತ್ತಿದ್ದ ಒಳ್ಳೇ ಕೆಲಸದ ಮೇಲೆ ಯೇಸು ಮನಸ್ಸನ್ನು ಕೇಂದ್ರೀಕರಿಸಿದನು. ಅವನು ಹೊಲಗಳು ಬೆಳ್ಳಗಾಗಿ ಕೊಯ್ಲಿಗೆ ಸಿದ್ಧವಾಗಿವೆ ಎಂಬುದನ್ನು ನೋಡಿದನು ಮತ್ತು ಆ ಕೊಯ್ಲಿನಲ್ಲಿ ಸಹಾಯಮಾಡುವ ಮೂಲಕ ಮಹತ್ತರವಾದ ಆನಂದವನ್ನು ಪಡೆದುಕೊಂಡನು. (ಯೋಹಾನ 4:​35, 36 ಓದಿ.) ತದ್ರೀತಿಯಲ್ಲಿ ನಾವು ಸಹ ಕಾಳಿನ ಸಸ್ಯದ ಕಾಂಡಭಾಗದ ನಡುವೆ ಇರುವ ಬಂಜರು ನೆಲವನ್ನು ಮಾತ್ರ ನೋಡದೆ, ನಮ್ಮ ನೇಮಿತ ಕ್ಷೇತ್ರದಲ್ಲಿರುವ ಸಂಭಾವ್ಯ ಕೊಯ್ಲಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸಸಾಧ್ಯವಿದೆಯೊ? ಅಂಥ ಸಕಾರಾತ್ಮಕ ಮನೋಭಾವವನ್ನು ನಾವು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ ಎಂಬುದನ್ನು ಪರಿಶೀಲಿಸೋಣ.

ಕೊಯ್ಯುವ ಉದ್ದೇಶದಿಂದ ಬಿತ್ತಿರಿ

10 ಒಬ್ಬ ರೈತನು ಕೊಯ್ಲನ್ನು ಕೊಯ್ಯುವ ಉದ್ದೇಶದಿಂದ ಬೀಜವನ್ನು ಬಿತ್ತುತ್ತಾನೆ. ತದ್ರೀತಿಯಲ್ಲೇ ನಾವು ಬೈಬಲ್‌ ಅಧ್ಯಯನಗಳನ್ನು ಆರಂಭಿಸುವ ಉದ್ದೇಶದಿಂದ ಸಾರುವ ಅಗತ್ಯವಿದೆ. ಆದರೆ ನೀವು ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ ಸಮಯವನ್ನು ಕಳೆಯುತ್ತಿರುವುದಾದರೂ ಕೆಲವೇ ಜನರನ್ನು ಮನೆಗಳಲ್ಲಿ ಕಂಡುಕೊಳ್ಳುವುದಾದರೆ ಅಥವಾ ನಿಮ್ಮ ಪುನರ್ಭೇಟಿಗಳನ್ನು ಪುನಃ ಸಂಪರ್ಕಿಸುವುದು ಅಸಾಧ್ಯವಾಗಿ ತೋರುವುದಾದರೆ ಆಗೇನು? ಇದರಿಂದ ಆಶಾಭಂಗವಾಗಸಾಧ್ಯವಿದೆ. ಈ ಕಾರಣಕ್ಕಾಗಿ ನೀವು ಮನೆಯಿಂದ ಮನೆಯ ಸಾಕ್ಷಿಕಾರ್ಯವನ್ನು ಬಿಟ್ಟುಬಿಡಬೇಕೊ? ಖಂಡಿತವಾಗಿಯೂ ಇಲ್ಲ! ಸಾರುವಿಕೆಯಲ್ಲಿ ದೀರ್ಘ ಸಮಯದಿಂದಲೂ ಉಪಯೋಗಿಸಲ್ಪಡುತ್ತಿರುವ ಈ ಪರಿಣಾಮಕಾರಿ ವಿಧಾನದ ಮೂಲಕ ಈಗಲೂ ಅನೇಕ ಜನರು ಸಂಪರ್ಕಿಸಲ್ಪಡುತ್ತಿದ್ದಾರೆ.

11 ಆದರೆ ನಿಮ್ಮ ಆನಂದವನ್ನು ಕಾಪಾಡಿಕೊಳ್ಳಲಿಕ್ಕಾಗಿ, ಜನರನ್ನು ತಲಪಬಹುದಾದ ಇತರ ವಿಧಗಳನ್ನು ಒಳಗೂಡಿಸುವ ಮೂಲಕ ನಿಮ್ಮ ಸಾರುವ ವಿಧಾನಗಳನ್ನು ನೀವು ವಿಸ್ತರಿಸಬಲ್ಲಿರೊ? ಉದಾಹರಣೆಗೆ, ಬೀದಿಗಳಲ್ಲಿ ಅಥವಾ ಉದ್ಯೋಗದ ಸ್ಥಳಗಳಲ್ಲಿ ಜನರಿಗೆ ಸಾಕ್ಷಿಯನ್ನು ನೀಡಲು ಪ್ರಯತ್ನಿಸಿದ್ದೀರೊ? ನೀವು ಟೆಲಿಫೋನಿನ ಮೂಲಕ ಜನರನ್ನು ಸಂಪರ್ಕಿಸಸಾಧ್ಯವಿದೆಯೊ ಅಥವಾ ನೀವು ಈಗಾಗಲೇ ಯಾರಿಗೆ ರಾಜ್ಯದ ಸಂದೇಶವನ್ನು ತಿಳಿಸಿದ್ದೀರೋ ಅವರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಲಿಕ್ಕಾಗಿ ಅವರ ಫೋನ್‌ ನಂಬರುಗಳನ್ನು ಪಡೆದುಕೊಳ್ಳಸಾಧ್ಯವಿದೆಯೊ? ನಿಮ್ಮ ಶುಶ್ರೂಷೆಯಲ್ಲಿ ಸತತ ಪ್ರಯತ್ನ ಮತ್ತು ಹೊಂದಾಣಿಕೆಯನ್ನು ಮಾಡಿಕೊಳ್ಳುವ ಮೂಲಕ, ರಾಜ್ಯದ ಸಂದೇಶಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ತೋರಿಸುವಂಥ ವ್ಯಕ್ತಿಗಳನ್ನು ಕಂಡುಕೊಳ್ಳುವುದರಿಂದ ಉಂಟಾಗುವ ಆನಂದವನ್ನು ನೀವು ಅನುಭವಿಸುವಿರಿ.

ನಿರಾಸಕ್ತಿಯನ್ನು ಸಮರ್ಥವಾಗಿ ನಿರ್ವಹಿಸುವುದು

12 ನಿಮ್ಮ ಕ್ಷೇತ್ರದಲ್ಲಿರುವ ಅನೇಕರು ಧರ್ಮದ ವಿಷಯದಲ್ಲಿ ನಿರಾಸಕ್ತರಾಗಿರುವುದಾದರೆ ಆಗೇನು? ಅವರಿಗೆ ಆಸಕ್ತಿಕರವಾಗಿರುವ ಯಾವುದಾದರೊಂದು ವಿಷಯದ ಕುರಿತು ಪ್ರಸ್ತಾಪಿಸುವ ಮೂಲಕ ನೀವು ಸಂಭಾಷಣೆಯನ್ನು ಆರಂಭಿಸಬಲ್ಲಿರೊ? ಅಪೊಸ್ತಲ ಪೌಲನು ಕೊರಿಂಥದಲ್ಲಿದ್ದ ಜೊತೆ ವಿಶ್ವಾಸಿಗಳಿಗೆ ಹೀಗೆ ಬರೆದನು: “ಯೆಹೂದ್ಯರಿಗೆ ಯೆಹೂದ್ಯನಂತಾದೆನು . . . ನಾನು ದೇವರ ನೇಮವಿಲ್ಲದವನಲ್ಲ . . . ಆದರೂ ನಿಯಮವಿಲ್ಲದವರನ್ನು ಸಂಪಾದಿಸಿಕೊಳ್ಳುವದಕ್ಕಾಗಿ ಅವರಿಗೆ ನಿಯಮವಿಲ್ಲದವನಂತಾದೆನು.” ಪೌಲನ ಹೇತುವೇನಾಗಿತ್ತು? “ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ.” (1 ಕೊರಿಂ. 9:​20-22) ತದ್ರೀತಿಯಲ್ಲಿ ನಮ್ಮ ಕ್ಷೇತ್ರದಲ್ಲಿರುವವರಿಗೆ ಆಸಕ್ತಿಕರವಾಗಿರುವ ವಿಷಯಗಳನ್ನು ನಾವು ಕಂಡುಕೊಳ್ಳಸಾಧ್ಯವಿದೆಯೊ? ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯಿಲ್ಲದಿರುವಂಥ ಅನೇಕರು ತಮ್ಮ ಕುಟುಂಬ ಸಂಬಂಧಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಬಯಸುತ್ತಾರೆ. ಅವರು ಜೀವನದಲ್ಲಿ ಒಂದು ಉದ್ದೇಶವನ್ನು ಕಂಡುಕೊಳ್ಳಲು ಸಹ ಪ್ರಯತ್ನಿಸುತ್ತಿರಬಹುದು. ಇಂಥ ಜನರ ಮನಸ್ಸಿಗೆ ಹಿಡಿಸುವಂಥ ರೀತಿಯಲ್ಲಿ ನಾವು ರಾಜ್ಯದ ಸಂದೇಶವನ್ನು ತಿಳಿಯಪಡಿಸಬಲ್ಲೆವೊ?

13 ಅಧಿಕಾಂಶ ಜನರು ನಿರಾಸಕ್ತರಾಗಿ ಕಂಡುಬರುವಂಥ ಸ್ಥಳಗಳಲ್ಲಿಯೂ, ಹೆಚ್ಚಿನ ಸಂಖ್ಯೆಯ ಪ್ರಚಾರಕರು ಶಿಷ್ಯರನ್ನಾಗಿ ಮಾಡುವ ಕೆಲಸದಿಂದ ಪಡೆದುಕೊಳ್ಳುವ ಆನಂದವನ್ನು ಅಧಿಕಗೊಳಿಸಿಕೊಂಡಿದ್ದಾರೆ. ಹೇಗೆ? ಒಂದು ವಿದೇಶೀ ಭಾಷೆಯನ್ನು ಕಲಿಯುವ ಮೂಲಕವೇ. ತಮ್ಮ 60ಗಳ ಪ್ರಾಯದಲ್ಲಿರುವ ಒಬ್ಬ ದಂಪತಿಗಳು, ಸಾವಿರಾರು ಮಂದಿ ಚೀನೀ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ತಮ್ಮ ಸಭೆಯ ನೇಮಿತ ಕ್ಷೇತ್ರದಲ್ಲಿ ವಾಸಿಸುತ್ತಿವೆ ಎಂಬುದನ್ನು ಕಂಡುಕೊಂಡರು. “ಈ ಕಾರಣದಿಂದ ಚೀನೀ ಭಾಷೆಯನ್ನು ಕಲಿಯುವ ಹುಮ್ಮಸ್ಸು ನಮ್ಮಲ್ಲಿ ಉಂಟಾಯಿತು” ಎಂದು ಗಂಡನು ಹೇಳುತ್ತಾನೆ. ಅವನು ಮುಂದುವರಿಸುತ್ತಾ ಹೇಳಿದ್ದು: “ಈ ಭಾಷೆಯನ್ನು ಕಲಿಯಲಿಕ್ಕಾಗಿ ಪ್ರತಿ ದಿನ ಸಮಯವನ್ನು ಬದಿಗಿರಿಸುವುದನ್ನು ಇದು ಅಗತ್ಯಪಡಿಸಿತಾದರೂ, ಇದರ ಫಲಿತಾಂಶವಾಗಿ ನಮ್ಮ ಕ್ಷೇತ್ರದಲ್ಲಿರುವ ಚೀನೀ ಜನರೊಂದಿಗೆ ಅನೇಕ ಬೈಬಲ್‌ ಅಧ್ಯಯನಗಳನ್ನು ನಡೆಸಲು ಸಾಧ್ಯವಾಯಿತು.”

14 ನೀವು ಒಂದು ವಿದೇಶೀ ಭಾಷೆಯನ್ನು ಕಲಿಯಲು ಶಕ್ತರಾಗಿಲ್ಲವಾದರೂ, ಬೇರೊಂದು ಭಾಷೆಯನ್ನು ಮಾತಾಡುವಂಥ ಜನರನ್ನು ಭೇಟಿಯಾದಾಗ ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಪುಸ್ತಿಕೆಯನ್ನು ನೀವು ಸದುಪಯೋಗಿಸಸಾಧ್ಯವಿದೆ. ಅಷ್ಟುಮಾತ್ರವಲ್ಲ, ನೀವು ಭೇಟಿಯಾಗುವಂಥ ಜನರು ಬಳಸುವ ಭಾಷೆಯಲ್ಲಿ ಸಾಹಿತ್ಯವನ್ನು ಸಹ ಪಡೆದುಕೊಳ್ಳಸಾಧ್ಯವಿದೆ. ಬೇರೊಂದು ಭಾಷೆಯ ಮತ್ತು ಸಂಸ್ಕೃತಿಯ ಜನರೊಂದಿಗೆ ಸಂವಾದಿಸಲು ಹೆಚ್ಚಿನ ಸಮಯ ಮತ್ತು ಪ್ರಯತ್ನದ ಅಗತ್ಯವಿದೆ ಎಂಬುದಂತೂ ನಿಜ. ಆದರೆ ದೇವರ ವಾಕ್ಯದಲ್ಲಿ ಕಂಡುಬರುವ “ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು” ಎಂಬ ಮೂಲತತ್ತ್ವವನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಿ.​—⁠2 ಕೊರಿಂ. 9:⁠6.

ಇಡೀ ಸಭೆ ಒಳಗೂಡಿದೆ

15 ಆದರೆ ಶಿಷ್ಯರನ್ನಾಗಿ ಮಾಡುವುದು ಕೇವಲ ಒಬ್ಬ ವ್ಯಕ್ತಿಯ ಪ್ರಯತ್ನಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಬದಲಾಗಿ ಇದು ಇಡೀ ಸಭೆಯ ಪ್ರಯತ್ನವಾಗಿದೆ. ಏಕೆ? “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” ಎಂದು ಯೇಸು ಹೇಳಿದನು. (ಯೋಹಾ. 13:35) ಮತ್ತು ಬೈಬಲ್‌ ವಿದ್ಯಾರ್ಥಿಗಳು ಕೂಟಗಳಿಗೆ ಹಾಜರಾದಾಗ ಅನೇಕವೇಳೆ ನಮ್ಮ ಒಕ್ಕೂಟಗಳಲ್ಲಿರುವ ಪ್ರೀತಿಭರಿತ ವಾತಾವರಣವನ್ನು ನೋಡಿ ಪ್ರಭಾವಿತರಾಗುತ್ತಾರೆ. ಬೈಬಲ್‌ ವಿದ್ಯಾರ್ಥಿಯೊಬ್ಬಳು ಬರೆದುದು: “ಕೂಟಗಳಿಗೆ ಹಾಜರಾಗುವುದು ನನಗೆ ತುಂಬ ಸಂತೋಷವನ್ನು ನೀಡುತ್ತದೆ. ಜನರು ನನ್ನನ್ನು ತುಂಬ ಆದರದಿಂದ ಬರಮಾಡಿಕೊಳ್ಳುತ್ತಾರೆ!” ಯಾರು ತನ್ನ ಹಿಂಬಾಲಕರಾಗುತ್ತಾರೋ ಅವರನ್ನು ಸ್ವಂತ ಕುಟುಂಬದವರೇ ವಿರೋಧಿಸಬಹುದು ಎಂದು ಯೇಸು ಹೇಳಿದನು. (ಮತ್ತಾಯ 10:​35-37 ಓದಿ.) ಆದರೆ ಸಭೆಯಲ್ಲಿ ಅವರಿಗೆ ಅನೇಕಾನೇಕ ಆಧ್ಯಾತ್ಮಿಕ “ಅಣ್ಣತಮ್ಮ ಅಕ್ಕ ತಂಗಿ ತಾಯಿ ಮಕ್ಕಳು” ಸಿಗುತ್ತಾರೆ ಎಂದು ಅವನು ವಾಗ್ದಾನಿಸಿದನು.​—⁠ಮಾರ್ಕ 10:⁠30.

16 ಪ್ರಗತಿಯನ್ನು ಮಾಡುವಂತೆ ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯಮಾಡುವುದರಲ್ಲಿ ವಿಶೇಷವಾಗಿ ನಮ್ಮ ವೃದ್ಧ ಸಹೋದರ ಸಹೋದರಿಯರು ಅತ್ಯಾವಶ್ಯಕ ಪಾತ್ರವನ್ನು ವಹಿಸುತ್ತಾರೆ. ಯಾವ ರೀತಿಯಲ್ಲಿ? ವೃದ್ಧ ಸಹೋದರ ಸಹೋದರಿಯರಲ್ಲಿ ಕೆಲವರು ಸ್ವತಃ ಒಂದು ಬೈಬಲ್‌ ಅಧ್ಯಯನವನ್ನು ನಡೆಸಲು ಅಶಕ್ತರಾಗಿರುವುದಾದರೂ ಸಭಾ ಕೂಟಗಳಲ್ಲಿ ಅವರು ಕೊಡುವ ಭಕ್ತಿವರ್ಧಕ ಹೇಳಿಕೆಗಳು ಅವುಗಳನ್ನು ಕೇಳಿಸಿಕೊಳ್ಳುವವರೆಲ್ಲರ ನಂಬಿಕೆಯನ್ನು ಬಲಪಡಿಸುತ್ತವೆ. ಅವರು “ಧರ್ಮಮಾರ್ಗದಲ್ಲಿ” ಅಥವಾ ನೀತಿಯ ಮಾರ್ಗದಲ್ಲಿ ನಡೆಯುತ್ತಿರುವ ದಾಖಲೆಯು ಸಭೆಗೆ ಇನ್ನಷ್ಟು ಸೊಬಗನ್ನು ನೀಡುತ್ತದೆ ಮತ್ತು ಪ್ರಾಮಾಣಿಕ ಹೃದಯದ ಜನರನ್ನು ದೇವರ ಸಂಸ್ಥೆಯ ಕಡೆಗೆ ಆಕರ್ಷಿಸುತ್ತದೆ.​—⁠ಜ್ಞಾನೋ. 16:⁠31.

ನಮ್ಮ ಭಯಗಳನ್ನು ಜಯಿಸುವುದು

17 ಅಸಮರ್ಥತೆಯ ಅನಿಸಿಕೆಗಳೊಂದಿಗೆ ನೀವು ಹೋರಾಡುತ್ತಿರುವಲ್ಲಿ ಆಗೇನು? ಮೋಶೆಗೆ ಪವಿತ್ರಾತ್ಮವನ್ನು ಮತ್ತು ಅವನ ಸಹೋದರನಾದ ಆರೋನನನ್ನು ಜೊತೆಗಾರನಾಗಿ ಕೊಡುವ ಮೂಲಕ ಯೆಹೋವನು ಅವನಿಗೆ ಸಹಾಯಮಾಡಿದನು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. (ವಿಮೋ. 4:​10-17) ದೇವರಾತ್ಮವು ನಮ್ಮ ಸಾಕ್ಷಿಕಾರ್ಯಕ್ಕೆ ಬೆಂಬಲ ನೀಡುವುದೆಂದು ಯೇಸು ವಾಗ್ದಾನಿಸಿದನು. (ಅ. ಕೃ. 1:⁠8) ಇದಲ್ಲದೆ ಯೇಸು ಸುವಾರ್ತೆಯನ್ನು ಸಾರಲು ಕಳುಹಿಸುವಾಗ ಅವರನ್ನು ಇಬ್ಬಿಬ್ಬರಾಗಿ ಕಳುಹಿಸಿದನು. (ಲೂಕ 10:⁠1) ಆದುದರಿಂದ, ಒಂದು ಬೈಬಲ್‌ ಅಧ್ಯಯನವನ್ನು ನಡೆಸುವುದು ನಿಮಗೆ ಪಂಥಾಹ್ವಾನದಾಯಕವಾಗಿ ತೋರುವಲ್ಲಿ ವಿವೇಕವನ್ನು ದಯಪಾಲಿಸುವಂತೆ ದೇವರಾತ್ಮಕ್ಕಾಗಿ ಪ್ರಾರ್ಥಿಸಿರಿ ಮತ್ತು ಯಾರು ನಿಮ್ಮಲ್ಲಿ ಭರವಸೆಯನ್ನು ಮೂಡಿಸಸಾಧ್ಯವಿದೆಯೋ ಹಾಗೂ ಯಾರ ಅನುಭವವು ನಿಮಗೆ ಸಹಾಯಕರವಾಗಿರಬಹುದೋ ಅಂಥ ಒಬ್ಬ ಜೊತೆಗಾರರೊಂದಿಗೆ ಶುಶ್ರೂಷೆಯಲ್ಲಿ ಕೆಲಸಮಾಡಿರಿ. ಈ ಅಸಾಧಾರಣವಾದ ಕೆಲಸವನ್ನು ಪೂರೈಸಲಿಕ್ಕಾಗಿ ಯೆಹೋವನು ಸಾಧಾರಣ ಜನರನ್ನು​—⁠“ಲೋಕದ ಬಲಹೀನರನ್ನು”​—⁠ಆರಿಸಿಕೊಂಡನು ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ನಂಬಿಕೆಯನ್ನು ಬಲಪಡಿಸುವಂಥದ್ದಾಗಿದೆ.​—⁠1 ಕೊರಿಂ. 1:​26-29.

18 ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಸಹಾಯಮಾಡಲು ಶಕ್ತರಾಗುವುದಿಲ್ಲ ಎಂಬ ಭಯವನ್ನು ನಾವು ಹೇಗೆ ನಿಭಾಯಿಸಬಲ್ಲೆವು? ಶಿಷ್ಯರನ್ನಾಗಿ ಮಾಡುವ ಕೆಲಸವು ಒಂದು ಅಡುಗೆಯನ್ನು ಮಾಡುವ ಕೆಲಸದಂತಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೇದು. ಒಂದು ಅಡುಗೆಯು ಒಳ್ಳೇದಾಗುತ್ತದೋ ಇಲ್ಲವೋ ಎಂಬುದು ಪ್ರಧಾನವಾಗಿ ಒಬ್ಬ ವ್ಯಕ್ತಿಯ ಮೇಲೆ ಅಂದರೆ ಅಡುಗೆಯವನ ಮೇಲೆ ಹೊಂದಿಕೊಂಡಿರುತ್ತದೆ. ಆದರೆ ಶಿಷ್ಯರನ್ನಾಗಿ ಮಾಡುವ ಕೆಲಸವು ಕಡಿಮೆಪಕ್ಷ ಮೂವರು ಸಹಭಾಗಿಗಳನ್ನು ಒಳಗೂಡಿದೆ. ಒಬ್ಬ ವ್ಯಕ್ತಿಯನ್ನು ತನ್ನ ಕಡೆಗೆ ಸೆಳೆಯುವಂಥ ಅತಿ ಪ್ರಾಮುಖ್ಯ ಭಾಗವನ್ನು ಯೆಹೋವನು ಮಾಡುತ್ತಾನೆ. (ಯೋಹಾ. 6:44) ನಾವು ಮತ್ತು ಸಭೆಯಲ್ಲಿರುವ ಇತರರು, ಬೈಬಲ್‌ ವಿದ್ಯಾರ್ಥಿಯು ಪ್ರಗತಿಯನ್ನು ಮಾಡುವಂತೆ ನೆರವು ನೀಡಲಿಕ್ಕಾಗಿ ಬೋಧನಾ ಕಲೆಯನ್ನು ಉಪಯೋಗಿಸಲು ನಮ್ಮಿಂದಾದುದೆಲ್ಲವನ್ನೂ ಮಾಡುತ್ತೇವೆ. (2 ತಿಮೊಥೆಯ 2:15 ಓದಿ.) ಮತ್ತು ವಿದ್ಯಾರ್ಥಿಯು ತಾನು ಕಲಿಯುತ್ತಿರುವ ವಿಷಯಗಳಿಗನುಸಾರ ಕ್ರಿಯೆಗೈಯುವ ಅಗತ್ಯವಿದೆ. (ಮತ್ತಾ. 7:​24-27) ಒಬ್ಬ ವ್ಯಕ್ತಿಯು ಬೈಬಲ್‌ ಅಧ್ಯಯನ ಮಾಡುವುದನ್ನು ನಿಲ್ಲಿಸುವುದರಿಂದ ನಮಗೆ ನಿರಾಶೆಯಾಗಬಹುದು. ಬೈಬಲ್‌ ವಿದ್ಯಾರ್ಥಿಗಳು ಸರಿಯಾದ ಆಯ್ಕೆಯನ್ನು ಮಾಡುವಂತೆ ನಾವು ನಿರೀಕ್ಷಿಸುತ್ತೇವೆ, ಆದರೆ ಪ್ರತಿಯೊಬ್ಬನು “ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು” ಅಥವಾ ದೇವರಿಗೆ ಲೆಕ್ಕವೊಪ್ಪಿಸಬೇಕು.​—⁠ರೋಮಾ. 14:⁠12.

ಯಾವ ಪ್ರತಿಫಲಗಳು ಸಿಗುತ್ತವೆ?

19 ಬೈಬಲ್‌ ಅಧ್ಯಯನಗಳನ್ನು ನಡೆಸುವುದು ದೇವರ ರಾಜ್ಯವನ್ನು ಪ್ರಥಮವಾಗಿ ಹುಡುಕುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ. ಅಷ್ಟುಮಾತ್ರವಲ್ಲದೆ ಇದು ದೇವರ ವಾಕ್ಯದ ಸತ್ಯತೆಗಳನ್ನು ನಮ್ಮ ಮನಸ್ಸು ಮತ್ತು ಹೃದಯಗಳಲ್ಲಿ ಆಳವಾಗಿ ಅಚ್ಚೊತ್ತುವಂತೆ ಮಾಡುತ್ತದೆ. ಹಾಗೇಕೆ? ಬೇರಕ್‌ ಎಂಬ ಪಯನೀಯರನೊಬ್ಬನು ಹೀಗೆ ವಿವರಿಸುತ್ತಾನೆ: “ಬೈಬಲ್‌ ಅಧ್ಯಯನಗಳನ್ನು ನಡೆಸುವುದು ದೇವರ ವಾಕ್ಯದ ಉತ್ತಮ ವಿದ್ಯಾರ್ಥಿಯಾಗಿರುವಂತೆ ನಿಮ್ಮನ್ನು ನಿರ್ಬಂಧಪಡಿಸುತ್ತದೆ. ನಾನು ಇನ್ನೊಬ್ಬರಿಗೆ ಸಮರ್ಪಕವಾಗಿ ಕಲಿಸಲು ಸಾಧ್ಯವಾಗುವುದಕ್ಕೆ ಮುಂಚೆ ನನ್ನ ವೈಯಕ್ತಿಕ ನಿಶ್ಚಿತಾಭಿಪ್ರಾಯಗಳನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕು ಎಂಬುದನ್ನು ನಾನು ಮನಗಾಣುತ್ತೇನೆ.”

20 ನೀವು ಒಂದು ಬೈಬಲ್‌ ಅಧ್ಯಯನವನ್ನು ನಡೆಸುತ್ತಿಲ್ಲದಿರುವಲ್ಲಿ, ನಿಮ್ಮ ಸೇವೆಯು ದೇವರ ದೃಷ್ಟಿಯಲ್ಲಿ ಬೆಲೆಯಿಲ್ಲದ್ದಾಗಿದೆ ಎಂಬುದನ್ನು ಅದು ಸೂಚಿಸುತ್ತದೊ? ನಿಶ್ಚಯವಾಗಿಯೂ ಇಲ್ಲ! ಆತನನ್ನು ಸ್ತುತಿಸಲಿಕ್ಕಾಗಿ ನಾವು ಮಾಡುವ ಪ್ರಯತ್ನಗಳನ್ನು ಯೆಹೋವನು ಬಹಳವಾಗಿ ಗಣ್ಯಮಾಡುತ್ತಾನೆ. ಸಾರುವ ಕೆಲಸದಲ್ಲಿ ಒಳಗೂಡುವವರೆಲ್ಲರೂ ‘ದೇವರ ಜೊತೆಕೆಲಸದವರಾಗಿದ್ದಾರೆ.’ ಆದರೆ ಒಂದು ಬೈಬಲ್‌ ಅಧ್ಯಯನವನ್ನು ನಡೆಸುವುದು ನಮಗೆ ಇನ್ನೂ ಹೆಚ್ಚಿನ ಆನಂದವನ್ನು ಉಂಟುಮಾಡುತ್ತದೆ, ಏಕೆಂದರೆ ನಾವು ನೆಟ್ಟ ಬೀಜವನ್ನು ದೇವರು ಹೇಗೆ ಬೆಳೆಯುವಂತೆ ಮಾಡುತ್ತಾನೆ ಎಂಬುದನ್ನು ನಾವು ನೋಡಸಾಧ್ಯವಾಗುತ್ತದೆ. (1 ಕೊರಿಂ. 3:​6, 9) ಏಮೀ ಎಂಬ ಹೆಸರಿನ ಪಯನೀಯರಳೊಬ್ಬಳು ಹೇಳುವುದು: “ಒಬ್ಬ ಬೈಬಲ್‌ ವಿದ್ಯಾರ್ಥಿಯು ಪ್ರಗತಿಯನ್ನು ಮಾಡುವುದನ್ನು ನೀವು ನೋಡುವಾಗ, ಅತ್ಯುತ್ತಮವಾದ ಒಂದು ಉಡುಗೊರೆಯನ್ನು ಅಂದರೆ ಯೆಹೋವನನ್ನು ತಿಳಿದುಕೊಳ್ಳುವ ಮತ್ತು ನಿತ್ಯಜೀವವನ್ನು ಪಡೆದುಕೊಳ್ಳುವ ಸದವಕಾಶವನ್ನು ಆ ವ್ಯಕ್ತಿಗೆ ಕೊಡಲಿಕ್ಕಾಗಿ ನಿಮ್ಮನ್ನು ಉಪಯೋಗಿಸುವಂತೆ ಯೆಹೋವನು ಅನುಮತಿಸಿರುವುದರಿಂದ ಆತನ ವಿಷಯದಲ್ಲಿ ನಿಮಗೆ ಅಪಾರವಾದ ಕೃತಜ್ಞತಾಭಾವ ಉಂಟಾಗುತ್ತದೆ.”

21 ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಮತ್ತು ನಡೆಸಲು ನಮ್ಮಿಂದಾದ ಅತ್ಯುತ್ತಮ ಪ್ರಯತ್ನವನ್ನು ಮಾಡುವುದು, ಈಗ ದೇವರ ಸೇವೆಯನ್ನು ಮಾಡುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಹೊಸ ಲೋಕದೊಳಗೆ ಪಾರಾಗಿ ಉಳಿಯುವ ನಮ್ಮ ನಿರೀಕ್ಷೆಯನ್ನು ಇನ್ನಷ್ಟು ಬಲಪಡಿಸಲು ನಮಗೆ ಸಹಾಯಮಾಡುವುದು. ಯೆಹೋವನ ಬೆಂಬಲದಿಂದ, ನಮ್ಮ ಉಪದೇಶಕ್ಕೆ ಕಿವಿಗೊಡುವವರನ್ನು ರಕ್ಷಿಸಲು ಸಹ ಸಹಾಯಮಾಡಬಹುದು. (1 ತಿಮೊಥೆಯ 4:16 ಓದಿ.) ಇದರಿಂದ ನಮಗೆಷ್ಟು ಆನಂದ ಉಂಟಾಗುತ್ತದೆ!

ನಿಮಗೆ ನೆನಪಿದೆಯೆ?

• ಯಾವ ಪಂಥಾಹ್ವಾನಗಳು ಬೈಬಲ್‌ ಅಧ್ಯಯನಗಳನ್ನು ನಡೆಸುವುದರಿಂದ ಕೆಲವರನ್ನು ತಡೆಗಟ್ಟಬಹುದು?

• ನಮ್ಮ ಕ್ಷೇತ್ರದಲ್ಲಿರುವ ಅನೇಕರು ನಿರಾಸಕ್ತರಾಗಿ ತೋರುವಲ್ಲಿ ನಾವೇನು ಮಾಡಬಹುದು?

• ಒಂದು ಬೈಬಲ್‌ ಅಧ್ಯಯನವನ್ನು ನಡೆಸುವುದರಿಂದ ನಾವು ಯಾವ ಪ್ರತಿಫಲಗಳನ್ನು ಪಡೆದುಕೊಳ್ಳುತ್ತೇವೆ?

[ಅಧ್ಯಯನ ಪ್ರಶ್ನೆಗಳು]

1-3. (ಎ) ಬೈಬಲ್‌ ಅಧ್ಯಯನಗಳನ್ನು ನಡೆಸುವ ಸದವಕಾಶದ ಕುರಿತು ಅನೇಕರಿಗೆ ಹೇಗನಿಸುತ್ತದೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?

4, 5. (ಎ) ಲೋಕದ ಕೆಲವು ಭಾಗಗಳಲ್ಲಿ ಅನೇಕ ಜನರು ಹೇಗೆ ಪ್ರತಿಕ್ರಿಯೆ ತೋರಿಸುತ್ತಾರೆ? (ಬಿ) ಇತರ ಸ್ಥಳಗಳಲ್ಲಿ ಪ್ರಚಾರಕರು ಯಾವ ಪಂಥಾಹ್ವಾನಗಳನ್ನು ಎದುರಿಸುತ್ತಾರೆ?

6. ಪ್ರಚಾರಕರಲ್ಲಿ ಕೆಲವರಿಗೆ ಯಾವ ಇತಿಮಿತಿಗಳು ಇರಬಹುದು?

7. ಯೇಸುವನ್ನು ಅವನ ಶುಶ್ರೂಷೆಯಲ್ಲಿ ಯಾವುದು ಪ್ರಚೋದಿಸಿತು?

8. (ಎ) ನಾವು ಯಾವುದರ ಕುರಿತು ಆಲೋಚಿಸುವುದು ಒಳ್ಳೇದು? (ಬಿ) ಒಬ್ಬ ಬೈಬಲ್‌ ವಿದ್ಯಾರ್ಥಿಯ ಮಾತುಗಳಿಂದ ನಾವು ಏನನ್ನು ಕಲಿಯಸಾಧ್ಯವಿದೆ?

9. ಯೇಸು ಯಾವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದನು ಮತ್ತು ನಾವು ಅವನನ್ನು ಹೇಗೆ ಅನುಕರಿಸಬಲ್ಲೆವು?

10, 11. ನಿಮ್ಮ ಆನಂದವನ್ನು ಕಾಪಾಡಿಕೊಳ್ಳಲಿಕ್ಕಾಗಿ ನೀವು ಏನು ಮಾಡಸಾಧ್ಯವಿದೆ?

12. ನಮ್ಮ ಕ್ಷೇತ್ರದಲ್ಲಿರುವ ಅನೇಕರು ನಿರಾಸಕ್ತರಾಗಿ ಕಂಡುಬರುವುದಾದರೆ ನಾವೇನು ಮಾಡಬಹುದು?

13, 14. ಶಿಷ್ಯರನ್ನಾಗಿ ಮಾಡುವ ಕೆಲಸದಿಂದ ನಾವು ಪಡೆದುಕೊಳ್ಳುವ ಆನಂದವನ್ನು ಹೇಗೆ ಹೆಚ್ಚಿಸಿಕೊಳ್ಳಸಾಧ್ಯವಿದೆ?

15, 16. (ಎ) ಶಿಷ್ಯರನ್ನಾಗಿ ಮಾಡುವ ಕೆಲಸವು ಇಡೀ ಸಭೆಯ ಪ್ರಯತ್ನವಾಗಿದೆ ಏಕೆ? (ಬಿ) ವೃದ್ಧರು ಯಾವ ಪಾತ್ರವನ್ನು ವಹಿಸುತ್ತಾರೆ?

17. ಅಸಮರ್ಥತೆಯ ಅನಿಸಿಕೆಗಳನ್ನು ಜಯಿಸಲು ನಾವೇನು ಮಾಡಸಾಧ್ಯವಿದೆ?

18. ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಸಹಾಯಮಾಡಲು ಶಕ್ತರಾಗುವುದಿಲ್ಲ ಎಂಬ ಭಯವನ್ನು ನಾವು ಹೇಗೆ ನಿಭಾಯಿಸಬಲ್ಲೆವು?

19-​21. (ಎ) ಬೈಬಲ್‌ ಅಧ್ಯಯನಗಳನ್ನು ನಡೆಸುವ ಮೂಲಕ ನಾವು ಯಾವ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ? (ಬಿ) ಸಾರುವ ಕೆಲಸದಲ್ಲಿ ಒಳಗೂಡುವವರೆಲ್ಲರನ್ನು ಯೆಹೋವನು ಹೇಗೆ ಪರಿಗಣಿಸುತ್ತಾನೆ?

[ಪುಟ 9ರಲ್ಲಿರುವ ಚಿತ್ರಗಳು]

ಪ್ರಾಮಾಣಿಕ ಹೃದಯದ ವ್ಯಕ್ತಿಗಳನ್ನು ಕಂಡುಕೊಳ್ಳಸಾಧ್ಯವಾಗುವಂತೆ ನಿಮ್ಮ ಸಾರುವ ವಿಧಾನಗಳನ್ನು ನೀವು ವಿಸ್ತರಿಸುತ್ತೀರೊ?