ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೌರವಯುತ, ಸರಳ ಮತ್ತು ದೇವರು ಮೆಚ್ಚುವಂಥ ಶವಸಂಸ್ಕಾರಗಳು

ಗೌರವಯುತ, ಸರಳ ಮತ್ತು ದೇವರು ಮೆಚ್ಚುವಂಥ ಶವಸಂಸ್ಕಾರಗಳು

ಗೌರವಯುತ, ಸರಳ ಮತ್ತು ದೇವರು ಮೆಚ್ಚುವಂಥ ಶವಸಂಸ್ಕಾರಗಳು

ಎಲ್ಲೆಲ್ಲೂ ಶೋಕ ಧ್ವನಿಗಳು ಕೇಳಿಬರುತ್ತಿವೆ. ಶೋಕಿಸುವವರು ವಿಶೇಷ ರೀತಿಯ ಕಪ್ಪು ಉಡುಪುಗಳನ್ನುಟ್ಟು ಗೊಳೋ ಎಂದು ಬಿದ್ದು ಬಿದ್ದು ಅಳುತ್ತಿದ್ದಾರೆ. ನೃತ್ಯಗಾರರು ಲಯಬದ್ಧವಾದ ಸಂಗೀತದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇತರರು ಊಟಮಾಡುತ್ತಾ ಗಟ್ಟಿಯಾಗಿ ನಗುತ್ತಾ ಮಜಾಮಾಡುತ್ತಿದ್ದಾರೆ. ಇನ್ನು ಕೆಲವರು ಧಾರಾಳವಾಗಿ ಸಿಗುತ್ತಿರುವ ತಾಳೆ ಮದ್ಯ ಮತ್ತು ಬಿಯರ್‌ ಕುಡಿದು ಮತ್ತರಾಗಿ ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದಾರೆ. ಇದು ಯಾವ ಸಮಾರಂಭ? ಲೋಕದ ಕೆಲವೊಂದು ಕಡೆಗಳಲ್ಲಿನ ಶವಸಂಸ್ಕಾರಗಳಲ್ಲಿ ಇದೆಲ್ಲಾ ಸಾಮಾನ್ಯ. ಇಂಥ ಶವಸಂಸ್ಕಾರಗಳಲ್ಲಿ ಮೃತ ವ್ಯಕ್ತಿಗೆ ಅಂತಿಮ ವಿದಾಯ ಸಲ್ಲಿಸಲು ನೂರಾರು ಮಂದಿ ಕೂಡಿರುತ್ತಾರೆ.

ಅನೇಕ ಯೆಹೋವನ ಸಾಕ್ಷಿಗಳು ವಾಸಿಸುತ್ತಿರುವ ಸಮುದಾಯಗಳಲ್ಲಿ ಅವರ ಸಂಬಂಧಿಕರು ಹಾಗೂ ನೆರೆಹೊರೆಯವರು ತುಂಬ ಮೂಢನಂಬಿಕೆಯುಳ್ಳವರೂ ಮೃತರಿಗೆ ಭಯಪಡುವವರೂ ಆಗಿರುತ್ತಾರೆ. ಒಬ್ಬ ವ್ಯಕ್ತಿ ಸತ್ತಾಗ ಅವನ ಆತ್ಮ ಹೊರಟು ಹೋಗುತ್ತದೆ ಮತ್ತು ಅದು ಜೀವಿತರಿಗೆ ಒಳಿತನ್ನು ಇಲ್ಲವೇ ಕೆಡುಕನ್ನು ಮಾಡಬಲ್ಲದೆಂದು ಲಕ್ಷಾಂತರ ಮಂದಿ ನಂಬುತ್ತಾರೆ. ಈ ನಂಬಿಕೆಯು ಅಂತ್ಯಸಂಸ್ಕಾರದ ಅನೇಕ ವಿಧಿಗಳೊಂದಿಗೆ ಸಂಬಂಧಿಸಿದೆ. ವ್ಯಕ್ತಿಯೊಬ್ಬನು ಮೃತಪಟ್ಟಾಗ ಶೋಕಿಸುವುದು ಸಾಮಾನ್ಯ. ಕೆಲವೊಮ್ಮೆ ಯೇಸು ಮತ್ತು ಅವನ ಶಿಷ್ಯರು ಸಹ ಪ್ರಿಯ ವ್ಯಕ್ತಿಗಳು ಮೃತಪಟ್ಟಾಗ ಶೋಕಿಸಿದರು. (ಯೋಹಾ. 11:​33-35, 38; ಅ. ಕೃ. 8:2; 9:39) ಆದಾಗ್ಯೂ ಅವರೆಂದೂ ಅವರ ದಿನಗಳಲ್ಲಿನ ಜನರಂತೆ ಶೋಕವನ್ನು ಅತಿರೇಕ ರೀತಿಗಳಲ್ಲಿ ವ್ಯಕ್ತಪಡಿಸುತ್ತಿರಲಿಲ್ಲ. (ಲೂಕ 23:​27, 28; 1 ಥೆಸ. 4:13) ಏಕೆ? ಒಂದು ಕಾರಣವೇನೆಂದರೆ, ಅವರಿಗೆ ಮರಣದ ಕುರಿತ ಸತ್ಯ ತಿಳಿದಿತ್ತು.

ಬೈಬಲ್‌ ಸ್ಪಷ್ಟವಾಗಿ ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ ಅಳಿದು ಹೋದವು; . . . ನೀನು ಸೇರಬೇಕಾದ ಪಾತಾಳದಲ್ಲಿ [ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿ] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂ. 9:​5, 6, 10) ವ್ಯಕ್ತಿಯೊಬ್ಬನು ಸಾಯುವಾಗ ಅವನಿಗೆ ತಿಳುವಳಿಕೆ ಅಥವಾ ಪ್ರಜ್ಞೆ ಇರುವುದಿಲ್ಲ ಎಂಬದಾಗಿ ಈ ದೇವಪ್ರೇರಿತ ಬೈಬಲ್‌ ವಚನಗಳು ಸ್ಪಷ್ಟಪಡಿಸುತ್ತವೆ. ಅವನಿಗೆ ಯೋಚಿಸುವ, ಅನುಭವಿಸುವ, ಮಾತಾಡುವ ಇಲ್ಲವೇ ಏನನ್ನೂ ಗ್ರಹಿಸುವ ಸಾಮರ್ಥ್ಯವಿರುವುದಿಲ್ಲ. ಈ ಪ್ರಾಮುಖ್ಯ ಬೈಬಲ್‌ ಸತ್ಯವನ್ನು ಅರಿತಿರುವ ಕ್ರೈಸ್ತರು ಶವಸಂಸ್ಕಾರಗಳನ್ನು ಹೇಗೆ ನಡೆಸಬೇಕು?

“ಅಶುದ್ಧವಾದ ಯಾವದನ್ನೂ ಮುಟ್ಟದಿರಿ”

ಯೆಹೋವನ ಸಾಕ್ಷಿಗಳ ಸಾಂಸ್ಕೃತಿಕ ಹಿನ್ನಲೆ ಯಾವುದೇ ಆಗಿರಲಿ, ಸತ್ತವರು ಪ್ರಜ್ಞಾವಂತರಾಗಿದ್ದು ಜೀವಿತರ ಮೇಲೆ ಪರಿಣಾಮಬೀರುತ್ತಾರೆ ಎಂಬ ನಂಬಿಕೆಗೆ ಸಂಬಂಧಪಟ್ಟ ಎಲ್ಲಾ ಸಂಸ್ಕಾರಗಳಿಂದ ದೂರವಿರಲು ಕಟ್ಟೆಚ್ಚರ ವಹಿಸುತ್ತಾರೆ. ಜಾಗರಣೆ ಮಾಡುವುದು, ಶವಸಂಸ್ಕಾರದ ಸಂಭ್ರಮಾಚರಣೆಗಳು ಹಾಗೂ ವಾರ್ಷಿಕಾಚರಣೆಗಳು, ಎರಡನೇ ಹೂಳುವಿಕೆ, ಸತ್ತವರಿಗಾಗಿ ಬಲಿಗಳನ್ನು ಅರ್ಪಿಸುವುದು, ವೈಧವ್ಯಕ್ಕೆ ಸಂಬಂಧಿಸಿದ ಸಂಸ್ಕಾರಗಳು ಇವೆಲ್ಲವೂ ಅಶುದ್ಧವಾಗಿವೆ ಮತ್ತು ದೇವರನ್ನು ಅಪ್ರಸನ್ನಗೊಳಿಸುತ್ತವೆ. ಕಾರಣವೇನೆಂದರೆ ಆತ್ಮವು ಸಾಯುವುದಿಲ್ಲ ಎಂಬ ಅಶಾಸ್ತ್ರೀಯ, ಸೈತಾನನ ಬೋಧನೆಗೆ ಅವು ಸಂಬಂಧಿಸಿವೆ. ನಿಜ ಕ್ರೈಸ್ತರು ‘ಯೆಹೋವನ ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟಮಾಡಲಾರರು.’ ಆದ್ದರಿಂದ ಅವರು ಈ ಸಂಸ್ಕಾರಗಳಲ್ಲಿ ಪಾಲ್ಗೊಳ್ಳುವುದಿಲ್ಲ. (1 ಕೊರಿಂ. 10:21) “ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ” ಎಂಬ ಆಜ್ಞೆಗೆ ಅವರು ವಿಧೇಯರಾಗುತ್ತಾರೆ. (2 ಕೊರಿಂ. 6:17) ಹಾಗಿದ್ದರೂ ಈ ನಿಲುವನ್ನು ತೆಗೆದುಕೊಳ್ಳುವುದು ಯಾವಾಗಲೂ ಸುಲಭವಲ್ಲ.

ನಿರ್ದಿಷ್ಟ ಸಂಸ್ಕಾರಗಳನ್ನು ಮಾಡದಿದ್ದಲ್ಲಿ ಪೂರ್ವಿಕರ ಆತ್ಮಗಳು ಮುನಿಸಿಕೊಳ್ಳುವವೆಂದು ಆಫ್ರಿಕ ಮತ್ತು ಇನ್ನಿತರೆಡೆಗಳಲ್ಲಿ ನಂಬಲಾಗುತ್ತದೆ. ಅವುಗಳನ್ನು ನಡೆಸದಿರುವುದು ಒಂದು ದೊಡ್ಡ ಅಪರಾಧವೆಂದೂ ಇದರಿಂದಾಗಿ ಇಡೀ ಸಮುದಾಯಕ್ಕೆ ಶಾಪ ಅಥವಾ ಅನಿಷ್ಟ ತಗಲುವುದೆಂದೂ ಎಣಿಸಲಾಗುತ್ತದೆ. ಶವಸಂಸ್ಕಾರದ ಅಶಾಸ್ತ್ರೀಯ ವಿಧಿಗಳಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರಿಂದಾಗಿ ಅನೇಕ ಯೆಹೋವನ ಸಾಕ್ಷಿಗಳನ್ನು ಟೀಕೆ, ಅವಮಾನಗಳಿಗೆ ಗುರಿಪಡಿಸಲಾಗಿದೆ ಮತ್ತು ಅವರ ಊರಿನವರು ಹಾಗೂ ಕುಟುಂಬ ಸಂಬಂಧಿಕರು ಅವರನ್ನು ಬಹಿಷ್ಕೃತರಂತೆ ಕಾಣುತ್ತಾರೆ. ಸಮಾಜ ವಿರೋಧಿಗಳೆಂದೂ ಮೃತ ವ್ಯಕ್ತಿಯ ಕಡೆಗೆ ಅಗೌರವ ತೋರಿಸುವವರೆಂದೂ ಕೆಲವರನ್ನು ಆರೋಪಿಸಲಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಶವಸಂಸ್ಕಾರವು ಕ್ರೈಸ್ತ ಏರ್ಪಾಡಿಗನುಸಾರ ನಡೆಯುತ್ತಿರುವಾಗ ಅವಿಶ್ವಾಸಿಗಳು ಬಲವಂತವಾಗಿ ಮಧ್ಯೆ ಪ್ರವೇಶಿಸಿ ಅದನ್ನು ಅವರ ವಿಧಿಗಳಿಗನುಸಾರ ನಡೆಸಿದ್ದಾರೆ. ಆದ್ದರಿಂದ, ಯೆಹೋವನನ್ನು ಅಪ್ರಸನ್ನಗೊಳಿಸುವಂಥ ಶವಸಂಸ್ಕಾರದ ವಿಧಿಗಳನ್ನು ನಡೆಸುವಂತೆ ಹಠಹಿಡಿಯುವ ಜನರಿಂದ ಮುಂದೆ ಸಮಸ್ಯೆಗಳಾಗದಂತೆ ನಾವೇನು ಮಾಡಬಹುದು? ಇನ್ನೂ ಮುಖ್ಯವಾಗಿ, ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡಬಲ್ಲ ಅಶುದ್ಧ ವಿಧಿಗಳು ಮತ್ತು ಆಚಾರಗಳಿಂದ ನಾವು ಹೇಗೆ ಪ್ರತ್ಯೇಕವಾಗಿರಬಹುದು?

ನಿಮ್ಮ ನಿರ್ಣಯವನ್ನು ಸ್ಪಷ್ಟವಾಗಿ ತಿಳಿಸಿ

ಲೋಕದ ಕೆಲವೊಂದು ಭಾಗಗಳಲ್ಲಿ ಮೃತನ ಸ್ವಂತ ಕುಟುಂಬದವರಲ್ಲದೆ ಇತರ ಸಂಬಂಧಿಕರು ಮತ್ತು ಕುಟುಂಬದ ಹಿರಿಯರು ಸಹ ಶವಸಂಸ್ಕಾರದ ಸಂಬಂಧದಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ನಂಬಿಗಸ್ತ ಕ್ರೈಸ್ತನೊಬ್ಬನು, ಶವಸಂಸ್ಕಾರವನ್ನು ಬೈಬಲ್‌ ಮೂಲತತ್ತ್ವಗಳಿಗನುಸಾರ ಯೆಹೋವನ ಸಾಕ್ಷಿಗಳು ನಿರ್ವಹಿಸುವರು ಎಂಬದನ್ನು ಸ್ಪಷ್ಟವಾಗಿ ತಿಳಿಸಬೇಕು. (2 ಕೊರಿಂ. 6:​14-16) ಕ್ರೈಸ್ತ ಶವಸಂಸ್ಕಾರಗಳಲ್ಲಿ ನಡೆಯುವ ಸಂಗತಿಗಳು ಜೊತೆ ವಿಶ್ವಾಸಿಗಳ ಮನಸ್ಸಾಕ್ಷಿಯನ್ನು ಕದಡಿಸಬಾರದು ಅಥವಾ ಮೃತರ ಸ್ಥಿತಿಯ ಕುರಿತು ನಾವು ನಂಬುವ ಮತ್ತು ಬೋಧಿಸುವ ವಿಚಾರಗಳನ್ನು ತಿಳಿದಿರುವ ಇತರರನ್ನು ಎಡವಿಸಬಾರದು.

ಶವಸಂಸ್ಕಾರ ನಡೆಸುವಂತೆ ಕ್ರೈಸ್ತ ಸಭೆಯ ಪ್ರತಿನಿಧಿಯೊಬ್ಬನನ್ನು ಕೇಳಿಕೊಳ್ಳಲಾಗಿರುವಲ್ಲಿ, ನೇಮಿತ ಹಿರಿಯರು ಸಹಾಯಕಾರಿ ಸಲಹೆಗಳನ್ನೂ ಆಧ್ಯಾತ್ಮಿಕ ಬೆಂಬಲವನ್ನೂ ನೀಡಬಲ್ಲರು. ಇದರಿಂದಾಗಿ ಎಲ್ಲ ಏರ್ಪಾಡುಗಳು ಬೈಬಲ್‌ ನಿರ್ದೇಶನಗಳಿಗನುಸಾರ ನಡೆಯುವಂತೆ ಸಾಧ್ಯವಾಗುವುದು. ಸಾಕ್ಷಿಗಳಲ್ಲದ ಕೆಲವರು ಅಶುದ್ಧ ಆಚಾರಗಳನ್ನು ನಡೆಸಲು ಬಯಸುವಲ್ಲಿ, ದೃಢವಾಗಿದ್ದು ನಮ್ಮ ಕ್ರೈಸ್ತ ನಿಲುವನ್ನು ಧೈರ್ಯದಿಂದ ಹೇಳುವುದು ಅಗತ್ಯ. ಇದನ್ನು ದಯೆಯಿಂದಲೂ ಮರ್ಯಾದೆಯಿಂದಲೂ ತಿಳಿಸಬೇಕು. (1 ಪೇತ್ರ 3:15) ಆದರೆ, ಅವಿಶ್ವಾಸಿ ಸಂಬಂಧಿಕರು ಅಶುದ್ಧ ವಿಧಿಗಳನ್ನು ನಡೆಸಿಯೇ ತೀರುತ್ತೇವೆಂದು ಹಠಹಿಡಿಯುವಲ್ಲಿ ಆಗೇನು? ಅಂಥ ಸಂದರ್ಭದಲ್ಲಿ, ವಿಶ್ವಾಸಿಗಳಾಗಿರುವ ಕುಟುಂಬದವರು ಶವಸಂಸ್ಕಾರದಲ್ಲಿ ಪಾಲ್ಗೊಳ್ಳದೆ ಅಲ್ಲಿಂದ ಹೊರಡಲು ನಿರ್ಣಯಿಸಬಹುದು. (1 ಕೊರಿಂ. 10:20) ಹೀಗಾಗುವಲ್ಲಿ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಅಥವಾ ಬೇರಾವುದೇ ಸೂಕ್ತ ಸ್ಥಳದಲ್ಲಿ ಶವಸಂಸ್ಕಾರದ ಸರಳ ಭಾಷಣವನ್ನು ಏರ್ಪಡಿಸಬಹುದು. ಇದರ ಉದ್ದೇಶ, ಪ್ರಿಯ ವ್ಯಕ್ತಿಯ ಅಗಲಿಕೆಯಿಂದ ನಿಜವಾಗಿ ನೊಂದವರಿಗೆ ಬೈಬಲಿನಿಂದ “ಆದರಣೆಯನ್ನು” ನೀಡುವುದಾಗಿದೆ. (ರೋಮಾ. 15:⁠4) ಮೃತ ದೇಹ ಅಲ್ಲಿರದಿದ್ದರೂ ಅಂಥ ಏರ್ಪಾಡು ಮಾನ್ಯವೂ ಅಂಗೀಕೃತವೂ ಆಗಿರುವುದು. (ಧರ್ಮೋ. 34:​5, 6, 8) ಅವಿಶ್ವಾಸಿಗಳ ನಿರ್ದಯ ವರ್ತನೆಯಿಂದಾಗಿ ಆ ಸಂದರ್ಭದ ಒತ್ತಡ ಹಾಗೂ ದುಃಖ ಹೆಚ್ಚಾಗಬಹುದಾದರೂ ಸರಿಯಾದದನ್ನು ಮಾಡಬೇಕೆಂಬ ನಮ್ಮ ದೃಢನಿರ್ಧಾರವನ್ನು, “ಬಲಾಧಿಕ್ಯ” ಕೊಡುವಾತನಾದ ದೇವರು ಗಮನಿಸದೇ ಇರುವುದಿಲ್ಲ ಎಂಬ ಅರಿವು ನಮಗೆ ಸಾಂತ್ವನ ಕೊಡುವುದು.​—⁠2 ಕೊರಿಂ. 4:⁠7.

ನಿಮ್ಮ ನಿರ್ಣಯವನ್ನು ಬರೆದಿಡಿ

ಒಬ್ಬ ವ್ಯಕ್ತಿ ತನ್ನ ಶವಸಂಸ್ಕಾರ ಹೇಗೆ ನಡೆಯಬೇಕೆಂಬ ವಿವರಗಳನ್ನು ಬರೆದಿಟ್ಟಿರುವಲ್ಲಿ, ಅವನ ಅವಿಶ್ವಾಸಿ ಕುಟುಂಬ ಸದಸ್ಯರೊಂದಿಗೆ ಮಾತಾಡಲು ಹೆಚ್ಚು ಸುಲಭವಾಗುತ್ತದೆ. ಯಾಕೆಂದರೆ ಆಗ ಅವರು ಮೃತ ವ್ಯಕ್ತಿಯ ಇಚ್ಛೆಗಳನ್ನು ಪೂರೈಸುವ ಸಂಭಾವ್ಯತೆ ಹೆಚ್ಚಿದೆ. ಶವಸಂಸ್ಕಾರ ಹೇಗೆ ಮತ್ತು ಎಲ್ಲಿ ನಡೆಯಬೇಕು, ಅದನ್ನು ಏರ್ಪಡಿಸಿ ನಡೆಸುವ ಅಧಿಕಾರ ಯಾರಿಗೆ ಮಾತ್ರ ಇದೆ​—⁠ಇವು ಬರೆದಿಡಲೇಬೇಕಾದ ಪ್ರಮುಖ ವಿವರಗಳು. (ಆದಿ. 50:​4, 5) ಆ ದಸ್ತಾವೇಜಿನಲ್ಲಿ ಆ ವ್ಯಕ್ತಿಯ ಸಹಿ ಮತ್ತು ಸಾಕ್ಷಿದಾರರ ಸಹಿ ಇರುವಲ್ಲಿ ಅದು ಹೆಚ್ಚು ಪರಿಣಾಮಕಾರಿ ಆಗಿರುವುದು. ಬೈಬಲ್‌ ಮೂಲತತ್ತ್ವಗಳ ಮೇಲಾಧರಿತವಾದ ವಿವೇಕ ಹಾಗೂ ಒಳನೋಟದಿಂದ ಭವಿಷ್ಯತ್ತಿಗಾಗಿ ಪೂರ್ವಯೋಜನೆ ಮಾಡುವವರು, ‘ಮುದುಕರಾದಾಗ ನೋಡಿದರಾಯಿತು’ ಅಥವಾ ‘ತುಂಬ ಕಾಯಿಲೆ ಬಿದ್ದರೆ ಆಗ ನೋಡೋಣ’ ಎಂದು ಈ ಕ್ರಮ ಕೈಗೊಳ್ಳುವುದನ್ನು ಮುಂದೂಡುವುದಿಲ್ಲ.​—⁠ಜ್ಞಾನೋ. 22:3; ಪ್ರಸಂ. 9:⁠12.

ಇಂಥ ವಿವರಗಳನ್ನು ಬರೆದಿಡಲು ಕೆಲವರಿಗೆ ಇರಿಸುಮುರಿಸು ಅನಿಸಿದೆ. ಆದರೆ ಹಾಗೆ ಬರೆದಿಡುವುದು, ಕ್ರೈಸ್ತ ಪ್ರೌಢತೆ ಹಾಗೂ ಇತರರ ಮೇಲಿನ ಕಳಕಳಿಯನ್ನು ತೋರಿಸುತ್ತದೆ. (ಫಿಲಿ. 2:⁠4) ಇಂಥ ವಿಷಯಗಳನ್ನು ಕ್ರೈಸ್ತನೊಬ್ಬನು ತನ್ನ ಕುಟುಂಬ ಸದಸ್ಯರಿಗೆ ಬಿಟ್ಟುಬಿಡುವ ಬದಲು ಸ್ವತಃ ಅವನೇ ಮುಂದಾಗಿ ಮಾಡಿಡುವುದು ಒಳ್ಳೇದು. ಏಕೆಂದರೆ ಅಂಥ ಸಂದರ್ಭಗಳಲ್ಲಿ ಒಂದು ಕಡೆ ಆ ಸದಸ್ಯರು ದುಃಖತಪ್ತರಾಗಿರುತ್ತಾರೆ ಮತ್ತು ಇನ್ನೊಂದು ಕಡೆ, ಮೃತ ವ್ಯಕ್ತಿ ಸ್ವತಃ ನಂಬದಿದ್ದ ಇಲ್ಲವೇ ಸಮ್ಮತಿಸದಿದ್ದ ಆಚಾರಗಳನ್ನು ನಡೆಸುವಂತೆ ಅವರು ಒತ್ತಡಕ್ಕೊಳಗಾಗಬಹುದು.

ಶವಸಂಸ್ಕಾರ ಸರಳವಾಗಿರಲಿ

ಆಫ್ರಿಕದ ಅನೇಕ ಕಡೆಗಳಲ್ಲಿ, ಪೂರ್ವಿಕರ ಆತ್ಮಗಳು ಕುಪಿತರಾಗದಂತೆ ಶವಸಂಸ್ಕಾರಗಳನ್ನು ಅದ್ದೂರಿಯಾಗಿ, ಎಲ್ಲರೂ ಹೊಗಳುವಂಥ ರೀತಿಯಲ್ಲಿ ಮಾಡಬೇಕೆಂಬ ನಂಬಿಕೆಯಿದೆ. ಇನ್ನಿತರರು, ಶವಸಂಸ್ಕಾರಗಳನ್ನು ತಮ್ಮ ಸಾಮಾಜಿಕ ಹಾಗೂ ಆರ್ಥಿಕ ಅಂತಸ್ತಿನ ‘ಡಂಬಕ್ಕಾಗಿ’ ಅಂದರೆ ಪ್ರದರ್ಶನ ಮಾಡುವ ಅವಕಾಶವಾಗಿ ಬಳಸಿಕೊಳ್ಳುತ್ತಾರೆ. (1 ಯೋಹಾ. 2:16) ಜನರು ಯಾವುದನ್ನು ‘ಒಳ್ಳೇ ಶವಸಂಸ್ಕಾರ’ ಎಂದೆಣಿಸುತ್ತಾರೊ ಆ ಮಟ್ಟಕ್ಕೆ ತಕ್ಕಂತೆ ಮೃತ ವ್ಯಕ್ತಿಯನ್ನು ಹೂಳಿಡಲಿಕ್ಕಾಗಿ ತುಂಬ ಸಮಯ, ಶ್ರಮ ಹಾಗೂ ಹಣವನ್ನು ವ್ಯಯಿಸಲಾಗುತ್ತದೆ. ಆದಷ್ಟು ಜನರನ್ನು ಆಕರ್ಷಿಸಲಿಕ್ಕಾಗಿ, ಮೃತ ವ್ಯಕ್ತಿಯ ದೊಡ್ಡ ಪೋಸ್ಟರ್‌ಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಹಚ್ಚಲಾಗುತ್ತದೆ. ಹೀಗೆ ಶವಸಂಸ್ಕಾರವನ್ನು ಜಾಹೀರುಪಡಿಸಲಾಗುತ್ತದೆ. ಮೃತ ವ್ಯಕ್ತಿಯ ಚಿತ್ರವುಳ್ಳ ಟಿ-ಶರ್ಟ್‌ಗಳನ್ನು ತಯಾರಿಸಿ, ಶೋಕಿಸುವವರು ಶವಸಂಸ್ಕಾರದ ಸಮಯದಲ್ಲಿ ಅವುಗಳನ್ನು ಧರಿಸುವಂತೆ ವಿತರಿಸಲಾಗುತ್ತದೆ. ಪ್ರೇಕ್ಷಕರು ಗುಣಗಾನ ಮಾಡಬೇಕೆಂಬ ಉದ್ದೇಶದಿಂದ ದುಬಾರಿ ಹಾಗೂ ತುಂಬ ಅಲಂಕಾರವುಳ್ಳ ಶವಪೆಟ್ಟಿಗೆಗಳನ್ನು ಬಳಸಲಾಗುತ್ತದೆ. ಆಫ್ರಿಕನ್‌ ದೇಶವೊಂದರಲ್ಲಿ ವ್ಯಕ್ತಿಯ ಸಿರಿಸಂಪತ್ತನ್ನು ಪ್ರದರ್ಶಿಸಲಿಕ್ಕೆಂದು ಶವಪೆಟ್ಟಿಗೆಗಳನ್ನು ಕಾರು, ವಿಮಾನ, ದೋಣಿ ಇಲ್ಲವೇ ಇನ್ನಿತರ ವಿನ್ಯಾಸಗಳಲ್ಲಿ ತಯಾರಿಸಲಾಗುತ್ತದೆ. ಶವವನ್ನು ಪೆಟ್ಟಿಗೆಯಿಂದ ಹೊರತೆಗೆದು, ವಿಶೇಷವಾಗಿ ಅಲಂಕೃತಗೊಂಡಿರುವ ಮಂಚದ ಮೇಲೆ ಪ್ರದರ್ಶನಕ್ಕಿಡಲಾಗುತ್ತದೆ. ಸ್ತ್ರೀಯೊಬ್ಬಳು ಮೃತಪಟ್ಟಿರುವಲ್ಲಿ, ಆಕೆಗೆ ಮದುವೆಯ ಬಿಳಿಯುಡುಪನ್ನು ತೊಡಿಸಲಾಗುತ್ತದೆ ಮತ್ತು ಬಹಳಷ್ಟು ಆಭರಣ, ಮಣಿಗಳು ಹಾಗೂ ಮೇಕಪ್‌ನಿಂದ ಸಿಂಗರಿಸಲಾಗುತ್ತದೆ. ಇಂಥ ಆಚಾರಗಳಲ್ಲಿ ಪಾಲ್ಗೊಳ್ಳುವುದು ದೇವಜನರಿಗೆ ಸೂಕ್ತವೋ?

ದೈವಿಕ ಮೂಲತತ್ತ್ವಗಳ ಬಗ್ಗೆ ತಿಳಿದಿರದ ಅಥವಾ ತಿಳಿದರೂ ಅದಕ್ಕೆ ಕಿಂಚಿತ್ತೂ ಲಕ್ಷ್ಯಕೊಡದ ಜನರು ಮಾಡುವ ವಿಪರೀತ ಸಂಗತಿಗಳಿಂದ ದೂರವಿರುವುದು ಎಷ್ಟು ವಿವೇಕಯುತ ಎಂಬುದನ್ನು ಪ್ರೌಢ ಕ್ರೈಸ್ತರು ಗ್ರಹಿಸುತ್ತಾರೆ. ಆಡಂಬರದ ಇಲ್ಲವೇ ಅಶಾಸ್ತ್ರೀಯ ಪದ್ಧತಿಗಳು ಹಾಗೂ ಆಚಾರಗಳು ‘ತಂದೆಯಿಂದ ಹುಟ್ಟದೆ ಗತಿಸಿಹೋಗುತ್ತಿರುವ ಲೋಕದಿಂದ ಹುಟ್ಟಿದವುಗಳಾಗಿವೆ’ ಎಂಬದು ನಮಗೆ ತಿಳಿದಿದೆ. (1 ಯೋಹಾ. 2:​15-17) ಬೇರೆಯವರಿಗಿಂತ ಒಂದು ಹೆಜ್ಜೆ ಮುಂದೆ ಇರಬೇಕೆಂಬ ಅಕ್ರೈಸ್ತ ಪ್ರತಿಸ್ಪರ್ಧಿ ಮನೋಭಾವವನ್ನು ತೋರಿಸದಂತೆ ನಾವು ತುಂಬ ಜಾಗ್ರತೆ ವಹಿಸಬೇಕು. (ಫಿಲಿ. 2:⁠3) ಸತ್ತವರ ಭಯವು ಒಂದು ಸಂಸ್ಕೃತಿ ಹಾಗೂ ಸಾಮಾಜಿಕ ಜೀವನದ ಮುಖ್ಯ ಅಂಗವಾಗಿರುವಾಗ ಅಲ್ಲಿನ ಶವಸಂಸ್ಕಾರಗಳಿಗೆ ಬರುವ ಜನರ ಸಂಖ್ಯೆ ದೊಡ್ಡದ್ದಾಗಿದ್ದು ಅವರ ಮೇಲೆ ನಿಗಾ ಇಡಲು ಕಷ್ಟವಾಗುತ್ತದೆ. ಆದುದರಿಂದ ಇಂಥ ಶವಸಂಸ್ಕಾರಗಳು ನಿಯಂತ್ರಣದಲ್ಲಿರುವುದಿಲ್ಲ. ಸತ್ತವರ ಕಡೆಗಿನ ಪೂಜ್ಯಭಾವನೆಯು, ಅವಿಶ್ವಾಸಿಗಳನ್ನು ಉದ್ರೇಕಿಸಿ ಅವರು ಅಶುದ್ಧ ನಡತೆಯಲ್ಲಿ ತೊಡಗುವಂತೆಯೂ ಮಾಡಬಹುದು. ಅಂಥ ಶವಸಂಸ್ಕಾರಗಳಲ್ಲಿ, ಜೋರಾಗಿ ಮತ್ತು ನಿರಂತರವಾಗಿ ಗೋಳಾಡುವುದು, ಶವವನ್ನು ಆಲಂಗಿಸುವುದು, ಅದು ಜೀವದಿಂದಿದೆಯೋ ಎಂಬಂತೆ ಅದರೊಂದಿಗೆ ಮಾತಾಡುವುದು ಮತ್ತು ಶವಕ್ಕೆ ಹಣ ಅಥವಾ ಇನ್ನಾವುದೇ ವಸ್ತುಗಳನ್ನು ಹಾಕುವುದು ಸೇರಿರುತ್ತದೆ. ಇದು ಒಂದು ಕ್ರೈಸ್ತ ಶವಸಂಸ್ಕಾರದಲ್ಲಿ ನಡೆಯುವುದಾದರೆ, ಯೆಹೋವನ ಹೆಸರಿಗೆ ಹಾಗೂ ಆತನ ಜನರಿಗೆ ನಿಂದೆ ಬರುವುದು.​—⁠1 ಪೇತ್ರ 1:​14-16.

ಸತ್ತವರ ನಿಜ ಸ್ಥಿತಿಯ ಕುರಿತ ತಿಳುವಳಿಕೆಯು, ಲೋಕದ ಯಾವುದೇ ಜಾಡು ಇಲ್ಲದಂಥ ರೀತಿಯಲ್ಲಿ ಶವಸಂಸ್ಕಾರಗಳನ್ನು ನಡೆಸಲು ನಮಗೆ ಖಂಡಿತ ಧೈರ್ಯ ಕೊಡಬೇಕು. (ಎಫೆ. 4:​17-19) ಯೇಸು ಭೂಮಿಯಲ್ಲಿ ಜೀವಿಸಿದವರಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಪ್ರಮುಖ ವ್ಯಕ್ತಿಯಾಗಿದ್ದರೂ ಅವನನ್ನು ಸರಳವಾಗಿಯೂ, ಎದ್ದುಕಾಣದಂಥ ರೀತಿಯಲ್ಲೂ ಹೂಳಿಡಲಾಯಿತು. (ಯೋಹಾ. 19:​40-42) ಇಂಥ ಸರಳವಾದ ಶವಸಂಸ್ಕಾರವನ್ನು “ಕ್ರಿಸ್ತನ ಮನಸ್ಸು”ಳ್ಳವರು ಗೌರವಭರಿತವೆಂದೆಣಿಸುತ್ತಾರೆ. (1 ಕೊರಿಂ. 2:16) ಕ್ರೈಸ್ತ ಶವಸಂಸ್ಕಾರಗಳನ್ನು ಸರಳವಾಗಿಡುವುದೇ, ಶಾಸ್ತ್ರೀಯವಾಗಿ ಅಶುದ್ಧವಾದದ್ದನ್ನು ದೂರವಿಡುವ ಮತ್ತು ಪ್ರಶಾಂತ ವಾತಾವರಣವನ್ನು ಕಾಪಾಡುವ ಅತ್ಯುತ್ತಮ ವಿಧವಾಗಿದೆ. ಇಂಥ ವಾತಾವರಣವು ಘನಭರಿತವಾದದ್ದೂ, ಸದಭಿರುಚಿಯದ್ದೂ, ದೇವರನ್ನು ಪ್ರೀತಿಸುವವರಿಗೆ ತಕ್ಕದ್ದೂ ಆಗಿದೆ.

ಸಂಭ್ರಮಾಚರಣೆ ಇರಬೇಕೋ?

ಕೆಲವೆಡೆ ಹೂಳಿಡುವಿಕೆಯ ನಂತರ, ಸಂಬಂಧಿಕರು, ನೆರೆಹೊರೆಯವರು ಮತ್ತು ಇತರರು ಔತಣಕ್ಕಾಗಿಯೂ ಗಟ್ಟಿಯಾದ ಸಂಗೀತಕ್ಕೆ ತಕ್ಕಂತೆ ಕುಣಿಯಲಿಕ್ಕೂ ದೊಡ್ಡ ಸಂಖ್ಯೆಯಲ್ಲಿ ಸೇರಿಬರುವ ಪದ್ಧತಿಯಿದೆ. ಶವಸಂಸ್ಕಾರದ ಈ ಸಂಭ್ರಮಾಚರಣೆಗಳಲ್ಲಿ ಹೆಚ್ಚಾಗಿ ಕುಡಿಕತನ ಮತ್ತು ಅನೈತಿಕತೆ ಇರುತ್ತದೆ. ಇಂಥ ಸಂಭ್ರಮಾಚರಣೆಗಳಿಂದ ದುಃಖವನ್ನು ಮರೆಯಲು ಸುಲಭವಾಗುತ್ತದೆಂಬುದು ಕೆಲವರ ಸಮರ್ಥನೆ. ಇನ್ನಿತರರು, ಇದನ್ನು ತಮ್ಮ ಸಂಸ್ಕೃತಿಯ ಭಾಗವೆಂದೆಣಿಸುತ್ತಾರೆ. ಆದರೆ ಹೆಚ್ಚಿನವರು, ಮೃತ ವ್ಯಕ್ತಿಯನ್ನು ಗೌರವಿಸಲು ಮತ್ತು ಅವನು ಪೂರ್ವಿಕರೊಂದಿಗೆ ಸೇರಲಿಕ್ಕಾಗಿ ಅವನ ಆತ್ಮವನ್ನು ಬಿಡಿಸಲು ಪೂರೈಸಬೇಕಾದ ಅತ್ಯಾವಶ್ಯಕ ವಿಧಿ ಇದಾಗಿದೆಯೆಂದು ನಂಬುತ್ತಾರೆ.

“ನಗೆಗಿಂತ ದುಃಖವೂ ವಾಸಿ. ಏಕೆಂದರೆ ಹೃದಯದ ದುಃಖದ ಭಾವನೆಯಿಂದ ಹೃದಯವು ಗುಣವಾಗುತ್ತದೆ” ಎಂಬ ಶಾಸ್ತ್ರಾಧಾರಿತ ಸಲಹೆಯು ಎಷ್ಟು ವಿವೇಕಯುತ ಎಂಬುದನ್ನು ನಿಜ ಕ್ರೈಸ್ತರು ಗ್ರಹಿಸುತ್ತಾರೆ. (ಪ್ರಸಂ. 7:​3, NIBV) ಅಷ್ಟುಮಾತ್ರವಲ್ಲದೆ, ಶವಸಂಸ್ಕಾರದ ವೇಳೆ ಶಾಂತಚಿತ್ತರಾಗಿದ್ದು ಅಲ್ಪಕಾಲಿಕ ಜೀವನ ಹಾಗೂ ಪುನರುತ್ಥಾನದ ನಿರೀಕ್ಷೆಯ ಕುರಿತು ಮನನಮಾಡುವುದರ ಪ್ರಯೋಜನಗಳು ಅವರಿಗೆ ತಿಳಿದಿವೆ. ಯೆಹೋವನೊಂದಿಗೆ ಬಲವಾದ ವೈಯಕ್ತಿಕ ಸಂಬಂಧವುಳ್ಳವರಿಗೆ “ಜನನದಿನಕ್ಕಿಂತ ಮರಣದಿನ ಮೇಲು.” (ಪ್ರಸಂ. 7:⁠1) ಹೀಗಿರುವುದರಿಂದ, ಶವಸಂಸ್ಕಾರದಲ್ಲಿನ ಗೌಜುಗಮ್ಮತ್ತಿಗೆ ಪ್ರೇತಾತ್ಮವಾದದ ನಂಬಿಕೆಗಳು ಹಾಗೂ ಅನೈತಿಕ ಚಟುವಟಿಕೆಗಳೊಂದಿಗೆ ಸಂಬಂಧವಿದೆಯೆಂದು ತಿಳಿದಿರುವ ಸತ್ಯ ಕ್ರೈಸ್ತರು ಇಂಥ ಸಂಭ್ರಮಾಚರಣೆಗಳನ್ನು ಏರ್ಪಡಿಸುವುದಾಗಲಿ ಅವುಗಳಿಗೆ ಹಾಜರಾಗುವುದಾಗಲಿ ಸರಿಯಲ್ಲ. ಹಾಗೆ ಸಂಭ್ರಮಿಸುತ್ತಿರುವವರ ಒಟ್ಟಿಗಿರುವುದು ಸಹ, ಯೆಹೋವನಿಗೆ ಮಾತ್ರವಲ್ಲ ಆತನ ಇತರ ಆರಾಧಕರ ಮನಸ್ಸಾಕ್ಷಿಗಳಿಗೂ ಅಗೌರವ ತೋರಿಸುತ್ತದೆ.

ಇತರರು ತಾರತಮ್ಯ ನೋಡುವಂತಾಗಲಿ

ಆಧ್ಯಾತ್ಮಿಕ ಅಂಧಕಾರದಲ್ಲಿರುವವರಲ್ಲಿ ತೀರ ಸಾಮಾನ್ಯವಾಗಿರುವ ಮೃತರ ಭೀತಿಯಿಂದ ಮುಕ್ತರಾಗಿರುವುದಕ್ಕೆ ನಾವೆಷ್ಟು ಕೃತಜ್ಞರು! (ಯೋಹಾ. 8:32) ‘ಬೆಳಕಿನವರಾಗಿರುವ’ ನಾವು ನಮ್ಮ ಶೋಕ ಹಾಗೂ ದುಃಖವನ್ನು ಆಧ್ಯಾತ್ಮಿಕ ಜ್ಞಾನೋದಯವನ್ನು ತೋರಿಸುವ ವಿಧದಲ್ಲಿ ಅಂದರೆ, ಸರಳವಾದ, ಗೌರವಭರಿತವಾದ ಮತ್ತು ಪುನರುತ್ಥಾನದ ನಿಶ್ಚಿತ ನಿರೀಕ್ಷೆಯಿಂದ ಕೂಡಿದ ವಿಧದಲ್ಲಿ ತೋರಿಸಬೇಕು. (ಎಫೆ. 5:​8, 9; ಯೋಹಾ. 5:​28, 29) ಇಂಥ ನಿರೀಕ್ಷೆಯು, ನಾವು “ನಿರೀಕ್ಷೆಯಿಲ್ಲದವರಾದ ಇತರರಂತೆ” ವಿಪರೀತ ದುಃಖದ ಪ್ರದರ್ಶನ ಮಾಡದಂತೆ ನಮ್ಮನ್ನು ತಡೆಯುವುದು. (1 ಥೆಸ. 4:13) ಅದು ನಾವು ಮನುಷ್ಯರ ಭಯಕ್ಕೆ ಮಣಿಯದೆ, ಶುದ್ಧಾರಾಧನೆಗಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳುವಂತೆ ಬೇಕಾದ ಧೈರ್ಯ ಕೊಡುವುದು.​—⁠1 ಪೇತ್ರ 3:​13-15.

ನಾವು ನಂಬಿಗಸ್ತಿಕೆಯಿಂದ ಬೈಬಲ್‌ ಮೂಲತತ್ತ್ವಗಳನ್ನು ಅನುಸರಿಸುವಾಗ, ‘ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಕಾಣುವ’ ಅವಕಾಶ ಜನರಿಗೆ ಸಿಗುವುದು. (ಮಲಾ. 3:18) ಮುಂದೊಂದು ದಿನ ಮರಣ ಇಲ್ಲವಾಗುವುದು. (ಪ್ರಕ. 21:⁠4) ನಾವು ಆ ಭವ್ಯ ನಿರೀಕ್ಷೆಯ ನೆರವೇರಿಕೆಗಾಗಿ ಕಾಯುತ್ತಿರುವಾಗ, ಯೆಹೋವನೆದುರಿನಲ್ಲಿ ನಿರ್ಮಲರು, ನಿರ್ದೋಷಿಗಳು ಮತ್ತು ಈ ದುಷ್ಟ ಲೋಕ ಹಾಗೂ ದೇವರನ್ನು ಅಗೌರವಿಸುವ ಅದರ ಆಚಾರಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿತರೂ ಆಗಿ ಕಾಣಿಸಿಕೊಳ್ಳುವಂತಾಗಲಿ.​—⁠2 ಪೇತ್ರ 3:⁠14.

[ಪುಟ 30ರಲ್ಲಿರುವ ಚಿತ್ರ]

ಶವಸಂಸ್ಕಾರದ ಏರ್ಪಾಡುಗಳ ಬಗ್ಗೆ ನಮ್ಮ ವೈಯಕ್ತಿಕ ಇಚ್ಛೆಗಳನ್ನು ಬರೆದಿಡುವುದು ವಿವೇಕಯುತ

[ಪುಟ 31ರಲ್ಲಿರುವ ಚಿತ್ರ]

ಕ್ರೈಸ್ತ ಶವಸಂಸ್ಕಾರಗಳು ಸರಳವೂ ಗೌರವಭರಿತವೂ ಆಗಿರಬೇಕು