ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಇಷ್ಟವಾದದ್ದನ್ನೇ ಮಾಡಲು ಹಠಹಿಡಿಯಬೇಕೋ?

ನಿಮಗೆ ಇಷ್ಟವಾದದ್ದನ್ನೇ ಮಾಡಲು ಹಠಹಿಡಿಯಬೇಕೋ?

ನಿಮಗೆ ಇಷ್ಟವಾದದ್ದನ್ನೇ ಮಾಡಲು ಹಠಹಿಡಿಯಬೇಕೋ?

ಇಬ್ಬರು ಚಿಕ್ಕ ಮಕ್ಕಳು ಆಟವಾಡುತ್ತಿದ್ದಾರೆ. ಒಬ್ಬನು, ಇನ್ನೊಬ್ಬನ ಕೈಯಲ್ಲಿದ್ದ ತನ್ನ ಅಚ್ಚುಮೆಚ್ಚಿನ ಆಟಿಕೆಯನ್ನು ಕಸಿದುಕೊಂಡು “ಇದು ನನ್ನದು” ಎಂದು ಕಿರುಚುತ್ತಾನೆ. ಅಪರಿಪೂರ್ಣ ಮಾನವರು ಚಿಕ್ಕಂದಿನಿಂದಲೇ ಸ್ವಲ್ಪಮಟ್ಟಿಗಾದರೂ ಸ್ವಾರ್ಥಿಗಳಾಗಿರುತ್ತಾರೆ. (ಆದಿ. 8:21; ರೋಮಾ. 3:23) ಅಲ್ಲದೇ ಲೋಕವು ಕೂಡ ಸ್ವಾರ್ಥ ಮನೋಭಾವಕ್ಕೆ ಕುಮ್ಮಕ್ಕು ಕೊಡುತ್ತದೆ. ನಾವು ಲೋಕದ ಈ ಮನೋವೃತ್ತಿಯಿಂದ ದೂರವಿರಬೇಕಾದರೆ ನಮ್ಮಲ್ಲಿರುವ ಸ್ವಾರ್ಥ ಪ್ರವೃತ್ತಿಗಳ ವಿರುದ್ಧ ಕಠಿನ ಹೋರಾಟ ನಡೆಸಬೇಕು. ಹಾಗೆ ಮಾಡದಿರುವಲ್ಲಿ ನಾವು ಸುಲಭವಾಗಿ ಇತರರನ್ನು ಎಡವಿಸುವೆವು ಮತ್ತು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಕೆಡಿಸಿಕೊಳ್ಳುವೆವು.​—⁠ರೋಮಾ. 7:​21-23.

ನಮ್ಮ ಕ್ರಿಯೆಗಳು ಇತರರ ಮೇಲೆ ಬೀರುವ ಪರಿಣಾಮದ ಕುರಿತು ಆಲೋಚಿಸುವಂತೆ ಉತ್ತೇಜಿಸುತ್ತಾ ಅಪೊಸ್ತಲ ಪೌಲನು ಬರೆದದ್ದು: “ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, ಆದರೆ ಎಲ್ಲವೂ ಭಕ್ತಿಯನ್ನು ಬೆಳಿಸುವದಿಲ್ಲ.” ಅಲ್ಲದೇ, “ವಿಘ್ನವಾಗಬೇಡಿರಿ” ಎಂದು ಪೌಲನು ಹೇಳುವ ಮೂಲಕ ನಾವು ಯಾರನ್ನೂ ಎಡವಿಸಬಾರದೆಂದು ಸೂಚಿಸಿದನು. (1 ಕೊರಿಂ. 10:​23, 32) ಹೀಗಿರುವುದರಿಂದ ವೈಯಕ್ತಿಕ ಇಷ್ಟಗಳ ಸಂಬಂಧದಲ್ಲಿ ನಾವು ಈ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ವಿವೇಕಯುತ: ‘ಸಭೆಯ ಶಾಂತಿ ಭಂಗವಾಗುವಂಥ ಸನ್ನಿವೇಶಗಳಲ್ಲಿ, ನನಗಿರುವ ಹಕ್ಕುಗಳನ್ನು ಬಿಟ್ಟುಕೊಡಲು ಸಿದ್ಧನಿದ್ದೇನೋ? ಕಷ್ಟಕರವಾಗಿರುವಾಗಲೂ ಬೈಬಲ್‌ ಮೂಲತತ್ತ್ವಗಳನ್ನು ಪಾಲಿಸುತ್ತೇನೋ?’

ಉದ್ಯೋಗದ ವಿಷಯದಲ್ಲಿ

ಹೆಚ್ಚಿನವರು ಉದ್ಯೋಗವನ್ನು ಆಯ್ಕೆ ಮಾಡುವಾಗ ಅದು ತಮ್ಮ ವೈಯಕ್ತಿಕ ವಿಷಯ, ಅದು ಇತರರ ಮೇಲೆ ಯಾವುದೇ ಪರಿಣಾಮಬೀರುವುದಿಲ್ಲ, ಇಲ್ಲವೇ ಪರಿಣಾಮಬೀರಿದರೂ ಅದು ಸ್ವಲ್ಪವೇ ಎಂದೆಣಿಸುತ್ತಾರೆ. ದಕ್ಷಿಣ ಅಮೆರಿಕದ ಚಿಕ್ಕ ಪಟ್ಟಣದಲ್ಲಿರುವ ಒಬ್ಬ ವ್ಯಾಪಾರಿಯ ಅನುಭವವನ್ನು ಪರಿಗಣಿಸಿ. ಅವನು ಕುಡುಕನೂ ಜೂಜುಗಾರನೂ ಎಂದು ಎಲ್ಲರಿಗೂ ತಿಳಿದಿತ್ತು. ಆದರೆ ಯೆಹೋವನ ಸಾಕ್ಷಿಗಳು ಅವನೊಂದಿಗೆ ಬೈಬಲ್‌ ಅಧ್ಯಯನ ಮಾಡಿದ್ದರ ಫಲಿತಾಂಶವಾಗಿ ಅವನು ಆಧ್ಯಾತ್ಮಿಕ ಪ್ರಗತಿ ಮಾಡುತ್ತಾ ತನ್ನ ಜೀವನರೀತಿಯನ್ನು ಬದಲಾಯಿಸಿದನು. (2 ಕೊರಿಂ. 7:⁠1) ಸಭೆಯೊಂದಿಗೆ ಸಾರ್ವಜನಿಕ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವ ತನ್ನ ಆಸೆಯನ್ನು ಅವನು ವ್ಯಕ್ತಪಡಿಸಿದಾಗ, ಅವನು ಮಾಡುತ್ತಿದ್ದ ವ್ಯಾಪಾರದ ಕುರಿತು ಯೋಚಿಸುವಂತೆ ಹಿರಿಯನೊಬ್ಬನು ಜಾಣ್ಮೆಯಿಂದ ಉತ್ತೇಜಿಸಿದನು. ಬಹಳ ಸಮಯದಿಂದ ಅವನು ಆ ಪಟ್ಟಣದಲ್ಲಿ ಕಬ್ಬಿನ ರಸದಿಂದ ತಯಾರಿಸಲಾಗುವ ಮದ್ಯದ ಮುಖ್ಯ ವಿತರಕನಾಗಿದ್ದನು. ಈ ಮದ್ಯ ಬಹೂಪಯೋಗಿಯಾಗಿದ್ದರೂ ಆ ಪ್ರದೇಶದಲ್ಲಿ, ತಂಪು ಪಾನೀಯಗಳಲ್ಲಿ ಬೆರೆಸಿ ಅಮಲೇರಿಸಲಿಕ್ಕೆಂದೇ ಬಳಸಲಾಗುತ್ತಿತ್ತು.

ತಾನು ಹೀಗೆ ಮದ್ಯವನ್ನು ಮಾರುತ್ತಾ ಇದ್ದು ಅದೇ ಸಮಯದಲ್ಲಿ ಸಾರ್ವಜನಿಕವಾಗಿ ಸಾರಲು ಹೋಗುವಲ್ಲಿ ಸಭೆಯ ಹೆಸರಿಗೆ ಕಳಂಕ ಬರುವುದು ಮತ್ತು ಯೆಹೋವನೊಂದಿಗಿನ ತನ್ನ ಸಂಬಂಧ ಹಾಳಾಗುವುದೆಂದು ಅವನು ತಿಳಿದುಕೊಂಡನು. ತನ್ನ ದೊಡ್ಡ ಕುಟುಂಬದ ಜವಾಬ್ದಾರಿಯನ್ನು ಅವನು ಹೊರಬೇಕಿತ್ತಾದರೂ ಅವನು ಮದ್ಯದ ವ್ಯಾಪಾರವನ್ನು ಬಿಟ್ಟುಬಿಟ್ಟನು. ಅವನೀಗ ಕಾಗದದ ಉತ್ಪನ್ನಗಳನ್ನು ಮಾರಿ ಜೀವನ ನಡೆಸುತ್ತಿದ್ದಾನೆ. ಈ ವ್ಯಕ್ತಿ, ಅವನ ಹೆಂಡತಿ ಮತ್ತವರ ಐದು ಮಕ್ಕಳಲ್ಲಿ ಇಬ್ಬರು ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಅವರಲ್ಲಿ ಈಗ ಹುರುಪಿನಿಂದ ಸುವಾರ್ತೆ ಸಾರಲು ಯಾವುದೇ ಹಿಂಜರಿಕೆಯಿಲ್ಲ.

ಒಡನಾಟದ ವಿಷಯದಲ್ಲಿ

ಅವಿಶ್ವಾಸಿಗಳೊಂದಿಗೆ ಬೆರೆಯುವುದು ನಮ್ಮಿಷ್ಟಕ್ಕೆ ಬಿಟ್ಟ ವಿಷಯವೋ ಇಲ್ಲವೇ ಅದರ ಹಿಂದೆ ಯಾವುದಾದರೂ ಬೈಬಲ್‌ ಮೂಲತತ್ತ್ವಗಳು ಇವೆಯೋ? ಸಹೋದರಿಯೊಬ್ಬಳು ಸಾಕ್ಷಿಯಲ್ಲದ ಯುವಕನೊಂದಿಗೆ ಪಾರ್ಟಿಗೆ ಹೋಗಬೇಕೆಂದಿದ್ದಳು. ಅಪಾಯಗಳ ಕುರಿತು ಎಚ್ಚರಿಸಲಾದರೂ ಪಾರ್ಟಿಗೆ ಹೋಗುವುದು ತನ್ನ ಹಕ್ಕೆಂದು ಆಕೆ ಎಣಿಸಿದಳು. ಅಲ್ಲಿ ತಲಪಿದ ಸ್ವಲ್ಪದರಲ್ಲೇ ಆಕೆಗೆ ಪಾನೀಯದಲ್ಲಿ ನಿದ್ದೆಬರಿಸುವ ಮದ್ದನ್ನು ಬೆರೆಸಿ ಕೊಡಲಾಯಿತು. ಅನೇಕ ತಾಸುಗಳ ಬಳಿಕ ಆಕೆ ಎಚ್ಚೆತ್ತಾಗ ಆ ಸ್ನೇಹಿತನೆನಿಸಿಕೊಂಡವನೇ ಆಕೆಯ ಮೇಲೆ ಅತ್ಯಾಚಾರಗೈದಿರುವುದು ತಿಳಿದುಬಂತು.​—⁠ಆದಿಕಾಂಡ 34:2 ಹೋಲಿಸಿ.

ಅವಿಶ್ವಾಸಿಗಳೊಂದಿಗಿನ ಒಡನಾಟ ಯಾವಾಗಲೂ ಇಂತಹ ದುರಂತಕ್ಕೆ ನಡೆಸಲಿಕ್ಕಿಲ್ಲ. ಆದರೂ ಬೈಬಲ್‌ ಎಚ್ಚರಿಸುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋ. 13:20) ಕೆಟ್ಟ ಒಡನಾಡಿಗಳನ್ನು ಆಯ್ಕೆ ಮಾಡುವುದು ನಮ್ಮನ್ನು ಅಪಾಯಕ್ಕೊಡ್ಡುತ್ತದೆ ಎಂಬುದರಲ್ಲಿ ಮರುಮಾತಿಲ್ಲ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಎನ್ನುತ್ತದೆ ಜ್ಞಾನೋಕ್ತಿ 22:⁠3. ನಮ್ಮ ಒಡನಾಡಿಗಳು ನಮ್ಮನ್ನು ಹಾಗೂ ಯೆಹೋವನೊಂದಿಗೆ ನಮಗಿರುವ ಸಂಬಂಧವನ್ನು ಬಾಧಿಸುತ್ತಾರೆ.​—⁠1 ಕೊರಿಂ. 15:33; ಯಾಕೋ. 4:⁠4.

ಉಡುಪು ಮತ್ತು ಕೇಶಾಲಂಕಾರದಲ್ಲಿ

ಋತುಗಳಂತೆಯೇ ಸ್ಟೈಲ್‌ಗಳು ಮತ್ತು ಫ್ಯಾಷನ್‌ಗಳು ಬದಲಾಗುತ್ತಿರುತ್ತವೆ. ಆದಾಗ್ಯೂ ಉಡುಪು ಮತ್ತು ಕೇಶಾಲಂಕಾರದ ಕುರಿತ ಬೈಬಲ್‌ ಮೂಲತತ್ತ್ವಗಳಾದರೋ ಎಂದೂ ಬದಲಾಗುವುದಿಲ್ಲ. ಪೌಲನು ಕ್ರೈಸ್ತ ಸ್ತ್ರೀಯರನ್ನು, “ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು” ಪ್ರೇರಿಸಿದನು. ಈ ಮೂಲತತ್ತ್ವವು ಪುರುಷರಿಗೂ ಅನ್ವಯವಾಗುತ್ತದೆ. (1 ತಿಮೊ. 2:⁠9) ಚೆನ್ನಾಗಿ ಕಾಣುವ ಬಟ್ಟೆಗಳನ್ನು ಧರಿಸಲೇಬಾರದೆಂದಾಗಲಿ, ಬಟ್ಟೆಯ ವಿಷಯದಲ್ಲಿ ಎಲ್ಲಾ ಕ್ರೈಸ್ತರ ಅಭಿರುಚಿ ಒಂದೇ ಆಗಿರಬೇಕೆಂದಾಗಲಿ ಪೌಲನು ಹೇಳುತ್ತಿರಲಿಲ್ಲ. ಬದಲಿಗೆ ಸೊಕ್ಕು ಅಥವಾ ಒಣಜಂಬವಿಲ್ಲದೆ, ಮರ್ಯಾದೆಗೆ ತಕ್ಕ ಉಡುಪನ್ನು ಧರಿಸುವಂತೆ ಹೇಳಿದನು ಅಷ್ಟೇ.

ನಾವು ಹೀಗೆ ಕೇಳಿಕೊಳ್ಳಬೇಕು: ‘ಯಾವುದೇ ರೀತಿಯ ಬಟ್ಟೆ ಧರಿಸುವ ಹಕ್ಕು ನನಗಿದೆಯೆಂದು ಹಠಹಿಡಿಯುತ್ತಾ ಜನರ ಅನಗತ್ಯ ಗಮನ ಸೆಳೆಯುವಂಥ ಬಟ್ಟೆ ಧರಿಸುವಲ್ಲಿ ನಾನು ಸಭ್ಯನು/ಳು ಎಂದು ಹೇಳಸಾಧ್ಯವೋ? ನಾನು ಧರಿಸುವ ಬಟ್ಟೆ ನನ್ನ ಬಗ್ಗೆ ಅಥವಾ ನನ್ನ ನೈತಿಕತೆಯ ಬಗ್ಗೆ ತಪ್ಪಭಿಪ್ರಾಯ ಮೂಡಿಸುತ್ತದೋ?’ ಈ ವಿಷಯದಲ್ಲಿ “ನಿಂದೆಗೆ ಅವಕಾಶಕೊಡದೆ” ಇರಲು ಅಥವಾ ಯಾರನ್ನೂ ಎಡವಿಹಾಕದಿರಲು ‘ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಬೇಕು.’​—⁠2 ಕೊರಿಂ. 6:3; ಫಿಲಿ. 2:⁠4.

ವ್ಯಾಪಾರ ವಹಿವಾಟುಗಳಲ್ಲಿ

ಕೊರಿಂಥದ ಸಭೆಯಲ್ಲಿ ತಪ್ಪಾದ ಅಥವಾ ಮೋಸಕರ ವಹಿವಾಟುಗಳ ಸಂಬಂಧದಲ್ಲಿ ಗಂಭೀರ ಸಮಸ್ಯೆಗಳೆದ್ದಾಗ ಪೌಲನು ಬರೆದದ್ದು: “ಅನ್ಯಾಯವನ್ನು ಯಾಕೆ ಸಹಿಸಬಾರದು? ಆಸ್ತಿಯ ನಷ್ಟವನ್ನು ಯಾಕೆ ತಾಳಬಾರದು?” ಸಹೋದರನನ್ನು ಕೋರ್ಟಿಗೆಳೆಯುವ ಬದಲು ನಷ್ಟವನ್ನು ಸಹಿಸುವಂತೆ ಪೌಲನು ಕ್ರೈಸ್ತರಿಗೆ ಸಲಹೆನೀಡಿದನು. (1 ಕೊರಿಂ. 6:​1-7) ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ ಸಹೋದರನೊಬ್ಬನು ಈ ಸಲಹೆಯನ್ನು ಅನ್ವಯಿಸಿದನು. ತನಗೆ ಸಿಗಬೇಕಾದ ಸಂಬಳದಲ್ಲಿ ಬಾಕಿ ಉಳಿದಿದ್ದ ಹಣದ ಸಂಬಂಧದಲ್ಲಿ ಅವನಿಗೂ ಅವನ ಕ್ರೈಸ್ತ ಧಣಿಗೂ ಭಿನ್ನಾಭಿಪ್ರಾಯವೆದ್ದಿತ್ತು. ಶಾಸ್ತ್ರಾಧಾರಿತ ಸಲಹೆಗಳನ್ನು ಅನುಸರಿಸುತ್ತಾ ಈ ಸಹೋದರರು ಸಮಸ್ಯೆ ಬಗೆಹರಿಸಲು ಹಲವಾರು ಸಲ ಭೇಟಿಯಾದರೂ ಏನೂ ಆಗಲಿಲ್ಲ. ಕೊನೆಯಲ್ಲಿ ವಿಷಯವನ್ನು “ಸಭೆಗೆ” ಅಂದರೆ ಕ್ರೈಸ್ತ ಹಿರಿಯರ ಬಳಿ ಕೊಂಡೊಯ್ದರು.​—⁠ಮತ್ತಾ. 18:​15-17.

ವಿಷಾದಕರವಾಗಿ, ಸಮಸ್ಯೆ ಆಗಲೂ ಬಗೆಹರಿಯಲಿಲ್ಲ. ಬಹಳ ಪ್ರಾರ್ಥಿಸಿದ ನಂತರ ಸಹೋದರನು ತನಗೆ ಬರಬೇಕಾಗಿದ್ದ ಹಣದಲ್ಲಿ ಹೆಚ್ಚಿನಾಂಶವನ್ನು ಬಿಟ್ಟುಬಿಡಲು ನಿರ್ಧರಿಸಿದನು. ಏಕೆ? ಅನಂತರ ಅವನಂದದ್ದು: “ಆ ಭಿನ್ನಾಭಿಪ್ರಾಯವು ನನ್ನ ಆನಂದವನ್ನು ಕಸಿದುಕೊಂಡಿತ್ತು ಮತ್ತು ಕ್ರೈಸ್ತ ಚಟುವಟಿಕೆಗಳಿಗಾಗಿ ನಾನು ಬಳಸಸಾಧ್ಯವಿದ್ದ ಸಮಯವನ್ನು ಕಬಳಿಸುತ್ತಿತ್ತು.” ಆ ನಿರ್ಧಾರವನ್ನು ಮಾಡಿದ ಬಳಿಕ ತನ್ನ ಆನಂದವನ್ನು ಮರಳಿ ಪಡೆದ ಅನುಭವ ಆ ಸಹೋದರನಿಗಾಯಿತು ಮತ್ತು ತನ್ನ ಸೇವೆಯ ಮೇಲೆ ಯೆಹೋವನ ಆಶೀರ್ವಾದವಿರುವುದನ್ನು ಅವನು ಗ್ರಹಿಸಿದನು.

ಚಿಕ್ಕಪುಟ್ಟ ವಿಷಯಗಳಲ್ಲೂ

ಚಿಕ್ಕಪುಟ್ಟ ವಿಷಯಗಳಲ್ಲೂ ನಮಗೆ ಇಷ್ಟವಾದದ್ದನ್ನು ಮಾಡಲು ಹಠಹಿಡಿಯದಿರುವುದು ಆಶೀರ್ವಾದಗಳನ್ನು ತರುತ್ತದೆ. ಜಿಲ್ಲಾ ಅಧಿವೇಶನವೊಂದರ ಪ್ರಥಮ ದಿನದಂದು ಒಂದು ಪಯನೀಯರ್‌ ದಂಪತಿ ಬೇಗ ಬಂದು ತಮಗಿಷ್ಟವಾದ ಎರಡು ಆಸನಗಳನ್ನು ಕಾದಿರಿಸಿದರು. ಕಾರ್ಯಕ್ರಮವು ಶುರುವಾಗುತ್ತಿದ್ದಂತೆ ಅನೇಕ ಮಕ್ಕಳಿದ್ದ ಒಂದು ದೊಡ್ಡ ಕುಟುಂಬವು, ತುಂಬಿ ಹೋಗಿದ್ದ ಆ ಸಭಾಂಗಣದೊಳಗೆ ಅವಸರವಸರವಾಗಿ ಪ್ರವೇಶಿಸಿತು. ಆ ಕುಟುಂಬವು ಒಟ್ಟಿಗೆ ಕುಳಿತುಕೊಳ್ಳಲಿಕ್ಕಾಗಿ ಆಸನಗಳನ್ನು ಹುಡುಕುತ್ತಿರುವುದನ್ನು ನೋಡಿ ಈ ಪಯನೀಯರ್‌ ದಂಪತಿ ತಮ್ಮ ಆಸನಗಳನ್ನು ಅವರಿಗಾಗಿ ಬಿಟ್ಟುಕೊಟ್ಟರು. ಇದರಿಂದ ಇಡೀ ಕುಟುಂಬ ಒಟ್ಟಿಗೆ ಕುಳಿತುಕೊಳ್ಳಲು ಸಾಧ್ಯವಾಯಿತು. ಅಧಿವೇಶನ ಮುಗಿದು ಕೆಲದಿನಗಳ ನಂತರ ಪಯನೀಯರ್‌ ದಂಪತಿಗೆ ಆ ಕುಟುಂಬ ಧನ್ಯವಾದ ಹೇಳುತ್ತಾ ಬರೆದ ಪತ್ರ ಸಿಕ್ಕಿತು. ಅಧಿವೇಶನಕ್ಕೆ ತಡವಾಗಿ ತಲಪಿದಾಗ ಅವರಿಗೆ ನಿರಾಶೆಯಾಗಿತ್ತೆಂದು ಆ ಪತ್ರದಲ್ಲಿ ತಿಳಿಸಲಾಗಿತ್ತು. ಆದರೆ ಆ ಪಯನೀಯರ್‌ ದಂಪತಿ ತೋರಿಸಿದ ದಯೆಯಿಂದಾಗಿ ಅವರಲ್ಲಿ ಸಂತೋಷ ಹಾಗೂ ಕೃತಜ್ಞತಾಭಾವ ಮೂಡಿತ್ತು.

ಅವಕಾಶ ಸಿಗುವಾಗಲೆಲ್ಲ ಇತರರಿಗಾಗಿ ನಮ್ಮ ಇಷ್ಟಗಳನ್ನು ತ್ಯಾಗಮಾಡಲು ಸಿದ್ಧರಿರೋಣ. ಈ ರೀತಿಯಲ್ಲಿ, ‘ಸ್ವಪ್ರಯೋಜನವನ್ನು ಚಿಂತಿಸದ’ ಪ್ರೀತಿಯನ್ನು ತೋರಿಸುವ ಮೂಲಕ ನಾವು ಸಭೆಯಲ್ಲಿ ಮತ್ತು ನೆರೆಯವರೊಂದಿಗೆ ಶಾಂತಿ ಕಾಪಾಡಿಕೊಳ್ಳುವೆವು. (1 ಕೊರಿಂ. 13:⁠5) ಎಲ್ಲಕ್ಕಿಂತಲೂ ಹೆಚ್ಚಾಗಿ ನಾವು ಯೆಹೋವನೊಂದಿಗಿನ ಸ್ನೇಹವನ್ನು ಉಳಿಸಿಕೊಳ್ಳುವೆವು.

[ಪುಟ 20ರಲ್ಲಿರುವ ಚಿತ್ರ]

ಫ್ಯಾಷನ್‌ ಸಂಬಂಧದಲ್ಲಿ ನಿಮಗೆ ಇಷ್ಟವಾದದ್ದನ್ನು ತ್ಯಾಗಮಾಡಲು ಸಿದ್ಧರಿದ್ದೀರೋ?

[ಪುಟ 20, 21ರಲ್ಲಿರುವ ಚಿತ್ರ]

ಸಹೋದರರಿಗಾಗಿ ಆಸನವನ್ನು ಬಿಟ್ಟುಕೊಡಲು ಸಿದ್ಧರಿದ್ದೀರೋ?