ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ ಪುಸ್ತಕದ ಮುಖ್ಯಾಂಶಗಳು—II

ಪ್ರಕಟನೆ ಪುಸ್ತಕದ ಮುಖ್ಯಾಂಶಗಳು—II

ಯೆಹೋವನ ವಾಕ್ಯವು ಸಜೀವವಾದದ್ದು

ಪ್ರಕಟನೆ ಪುಸ್ತಕದ ಮುಖ್ಯಾಂಶಗಳು​​—⁠II

ಯೆಹೋವನನ್ನು ಆರಾಧಿಸುವವರಿಗೂ ಆರಾಧಿಸದವರಿಗೂ ಮುಂದೇನು ಕಾದಿದೆ? ಸೈತಾನ ಮತ್ತವನ ದೆವ್ವಗಳಿಗೆ ಏನಾಗುವುದು? ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ವಿಧೇಯ ಮಾನವಕುಲಕ್ಕೆ ಯಾವ ಆಶೀರ್ವಾದಗಳು ಕಾದಿವೆ? ಈ ಪ್ರಶ್ನೆಗಳಿಗೂ ಇನ್ನಿತರ ಪ್ರಮುಖ ಪ್ರಶ್ನೆಗಳಿಗೂ ಪ್ರಕಟನೆ 13:​1–22:21ರಲ್ಲಿ ಉತ್ತರಗಳು ಪ್ರಕಟಿಸಲ್ಪಟ್ಟಿವೆ. * ಅಪೊಸ್ತಲ ಯೋಹಾನನು ಸಾ.ಶ. ಒಂದನೆಯ ಶತಮಾನದ ಅಂತ್ಯದಷ್ಟಕ್ಕೆ ಕಂಡ 16 ದರ್ಶನಗಳಲ್ಲಿ 9 ದರ್ಶನಗಳು ಈ ಅಧ್ಯಾಯಗಳಲ್ಲಿವೆ.

ಯೋಹಾನನು ಬರೆಯುವುದು: “ಈ ಪ್ರವಾದನವಾಕ್ಯಗಳನ್ನು ಓದುವಂಥವನೂ ಕೇಳುವಂಥವರೂ ಈ ಪ್ರವಾದನೆಯಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು.” (ಪ್ರಕ. 1:3; 22:⁠7) ಪ್ರಕಟನೆ ಪುಸ್ತಕವನ್ನು ಓದಿ, ಅದರಿಂದ ಕಲಿತಂಥ ವಿಷಯಗಳನ್ನು ಅನ್ವಯಿಸುವುದು ನಮ್ಮ ಹೃದಯವನ್ನು ಪ್ರಭಾವಿಸಬಲ್ಲದು, ದೇವರಲ್ಲೂ ಆತನ ಮಗನಾದ ಯೇಸು ಕ್ರಿಸ್ತನಲ್ಲೂ ನಮ್ಮ ನಂಬಿಕೆಯನ್ನು ಬಲಪಡಿಸಬಲ್ಲದು ಮತ್ತು ಭವಿಷ್ಯತ್ತಿಗಾಗಿ ನಮಗೆ ಉಜ್ವಲ ನಿರೀಕ್ಷೆಯನ್ನು ಕೊಡಬಲ್ಲದು. *​—⁠ಇಬ್ರಿ. 4:⁠12.

ದೇವರ ರೌದ್ರದ ಏಳು ಪಾತ್ರೆಗಳನ್ನು ಸುರಿಸಲಾಗುತ್ತದೆ

(ಪ್ರಕ. 13:​1–16:⁠21)

ಪ್ರಕಟನೆ 11:18 ಹೇಳುವುದು: ‘ಜನಾಂಗಗಳು ಕೋಪಿಸಿಕೊಂಡವು. ದೇವರ ಕೋಪವೂ ಪ್ರಕಟವಾಯಿತು. ಆತನು ಲೋಕನಾಶಕರನ್ನು ನಾಶಮಾಡುವ ಸಮಯ ಬಂದದೆ.’ ದೇವರ ಕೋಪಕ್ಕೆ ಕಾರಣವೇನೆಂಬುದನ್ನು ತೋರಿಸಲು, ಎಂಟನೇ ದರ್ಶನವು ‘ಏಳು ತಲೆ, ಹತ್ತು ಕೊಂಬುಗಳುಳ್ಳ ಮೃಗದ’ ಚಟುವಟಿಕೆಯ ಕುರಿತು ಹೇಳುತ್ತದೆ.​—⁠ಪ್ರಕ. 13:⁠1.

ಒಂಬತ್ತನೇ ದರ್ಶನದಲ್ಲಿ ಯೋಹಾನನು, “ಯಜ್ಞದ ಕುರಿಯಾದಾತನು ಚೀಯೋನ್‌ ಪರ್ವತದ ಮೇಲೆ ನಿಂತಿರುವದನ್ನು” ಮತ್ತು ಆತನ ಜೊತೆಯಲ್ಲಿ “ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ” ಇರುವುದನ್ನು ನೋಡುತ್ತಾನೆ. ‘ಇವರನ್ನು ಮನುಷ್ಯರೊಳಗಿಂದ ಕೊಂಡುಕೊಳ್ಳಲಾಗಿದೆ.’ (ಪ್ರಕ. 14:​1, 4) ತದನಂತರ, ದೇವದೂತರು ಪ್ರಕಟನೆಗಳನ್ನು ಮಾಡುತ್ತಾರೆ. ಮುಂದಿನ ದರ್ಶನದಲ್ಲಿ ಯೋಹಾನನು, ‘ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳನ್ನು’ ನೋಡುತ್ತಾನೆ. ಈ ದೇವದೂತರಿಗೆ, ಸೈತಾನನ ಲೋಕದ ವಿಭಿನ್ನ ಭಾಗಗಳ ಮೇಲೆ “ಏಳು ಪಾತ್ರೆಗಳಲ್ಲಿರುವ ದೇವರ ರೌದ್ರವನ್ನು” ಹೊಯ್ಯುವಂತೆ ಸ್ವತಃ ಯೆಹೋವನೇ ಆಜ್ಞಾಪಿಸುತ್ತಾನೆ. ಈ ಪಾತ್ರೆಗಳಲ್ಲಿ, ದೇವರು ಜಾರಿಗೊಳಿಸಲಿರುವ ತೀರ್ಪುಗಳ ಕುರಿತ ಪ್ರಕಟನೆಗಳು ಮತ್ತು ಎಚ್ಚರಿಕೆಗಳಿವೆ. (ಪ್ರಕ. 15:1; 16:⁠1) ಈ ಎರಡು ದರ್ಶನಗಳು, ಏಳನೇ ತುತೂರಿಯ ಊದುವಿಕೆ ಮತ್ತು ಮೂರನೇ ವಿಪತ್ತಿಗೆ ಸಂಬಂಧಪಟ್ಟ ರಾಜ್ಯ ತೀರ್ಪುಗಳ ಕುರಿತ ವಿವರಗಳನ್ನು ಕೊಡುತ್ತವೆ.​—⁠ಪ್ರಕ. 11:​14, 15.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

13:8​—⁠“ಕುರಿಯಾದಾತನ ಬಳಿಯಲ್ಲಿರುವ ಜೀವಬಾಧ್ಯರ ಪಟ್ಟಿ” ಯಾವುದು? ಇದೊಂದು ಸಾಂಕೇತಿಕ ಪಟ್ಟಿಯಾಗಿದ್ದು, ಇದರಲ್ಲಿ ಯೇಸು ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಆಳುವವರ ಹೆಸರುಗಳು ಮಾತ್ರ ಇವೆ. ಈ ಹೆಸರುಗಳಲ್ಲಿ, ಈಗಲೂ ಭೂಮಿಯಲ್ಲಿರುವ ಆದರೆ ಸ್ವರ್ಗೀಯ ಜೀವನದ ನಿರೀಕ್ಷೆಯುಳ್ಳ ಅಭಿಷಿಕ್ತರ ಹೆಸರುಗಳು ಸಹ ಸೇರಿವೆ.

13:​11-​13​—⁠ಎರಡು ಕೊಂಬುಗಳಿರುವ ಕಾಡುಮೃಗವು ಘಟಸರ್ಪದಂತೆ ನಡೆದುಕೊಳ್ಳುವುದು ಮತ್ತು ಆಕಾಶದಿಂದ ಬೆಂಕಿಯು ಇಳಿದುಬರುವಂತೆ ಮಾಡುವುದು ಹೇಗೆ? ಎರಡು ಕೊಂಬುಗಳಿರುವ ಕಾಡುಮೃಗವು ಅಂದರೆ ಆ್ಯಂಗ್ಲೋ-ಅಮೆರಿಕನ್‌ ಲೋಕ ಶಕ್ತಿಯು ಘಟಸರ್ಪದಂತೆ ಮಾತಾಡುತ್ತದೆಂಬ ವಾಸ್ತವಾಂಶವು ಅದು ಬೆದರಿಕೆ, ಒತ್ತಡ ಹಾಗೂ ಹಿಂಸಾಚಾರವನ್ನು ಬಳಸಿ, ಜನರು ತನ್ನ ಆಡಳಿತವನ್ನು ಸ್ವೀಕರಿಸುವಂತೆ ಒತ್ತಾಯಿಸುತ್ತದೆಂಬುದನ್ನು ಸೂಚಿಸುತ್ತದೆ. ಬೆಂಕಿಯು ಆಕಾಶದಿಂದ ಇಳಿದುಬರುವಂತೆ ಅದು ಮಾಡುತ್ತದೆ ಅಂದರೆ, ಅದು 20ನೇ ಶತಮಾನದ ಎರಡು ವಿಶ್ವ ಯುದ್ಧಗಳಲ್ಲಿ ದುಷ್ಟ ಶಕ್ತಿಗಳನ್ನು ಜಯಿಸಿದೆಯೆಂದೂ, ಕಮ್ಯೂನಿಸಮ್‌ ಮೇಲೆ ಜಯಸಾಧಿಸಿದೆಯೆಂದೂ ಹೇಳಿಕೊಂಡು ಪ್ರವಾದಿಯಂತೆ ವರ್ತಿಸುತ್ತದೆ.

16:17​—⁠ಏಳನೇ ಪಾತ್ರೆಯನ್ನು ಯಾವುದರ ಮೇಲೆ ಹೊಯ್ಯಲಾಗುತ್ತದೊ ಆ “ವಾಯುಮಂಡಲ” ಏನಾಗಿದೆ? “ವಾಯುಮಂಡಲ” [“ಗಾಳಿ,” NW] ಸೈತಾನನಿಗೆ ಸಂಬಂಧಪಟ್ಟ ಆಲೋಚನಾರೀತಿಯನ್ನು ಸಂಕೇತಿಸುತ್ತದೆ. ಇದು “ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮ” ಅಂದರೆ ಮಾನಸಿಕ ಪ್ರವೃತ್ತಿಯಲ್ಲಿ ತೋರಿಬರುತ್ತದೆ. ಸೈತಾನನ ಇಡೀ ದುಷ್ಟ ವ್ಯವಸ್ಥೆಯ ಭಾಗವಾಗಿರುವ ಪ್ರತಿಯೊಬ್ಬನೂ ಈ ವಿಷಭರಿತ ಗಾಳಿಯನ್ನು ಸೇವಿಸುತ್ತಾನೆ.​—⁠ಎಫೆ. 2:⁠2.

ನಮಗಾಗಿರುವ ಪಾಠಗಳು:

13:​1-4, 18. ಮಾನವ ಸರಕಾರಗಳನ್ನು ಸಂಕೇತಿಸುವ ಒಂದು “ಮೃಗವು,” ಪ್ರಕ್ಷುಬ್ದ ಮಾನವಕುಲವೆಂಬ “ಸಮುದ್ರದಿಂದ” ಏರಿಬರುತ್ತದೆ. (ಯೆಶಾ. 17:​12, 13; ದಾನಿ. 7:​2-8, 17) ಸೈತಾನನೇ ರಚಿಸಿ, ಅಧಿಕಾರಕೊಟ್ಟಿರುವ ಈ ಮೃಗಕ್ಕೆ, ತೀವ್ರ ಅಪರಿಪೂರ್ಣತೆಯನ್ನು ಸೂಚಿಸುವ 666 ಎಂಬ ಸಂಖ್ಯೆ ಕೊಡಲಾಗಿದೆ. ಆ ಮೃಗ ಏನಾಗಿದೆ ಎಂಬುದರ ತಿಳುವಳಿಕೆ ನಮಗಿರುವುದರಿಂದ, ಮಾನವಕುಲದಲ್ಲಿ ಹೆಚ್ಚಿನವರು ಮಾಡುವಂತೆ ನಾವದನ್ನು ಆಶ್ಚರ್ಯದಿಂದ ಇಲ್ಲವೇ ಮೆಚ್ಚಿಕೆಯಿಂದ ನೋಡುತ್ತಾ ಹಿಂಬಾಲಿಸೆವು ಮತ್ತು ಅದಕ್ಕೆ ನಮಸ್ಕರಿಸೆವು ಇಲ್ಲವೇ ಆರಾಧಿಸೆವು.​—⁠ಯೋಹಾ. 12:31; 15:⁠19.

13:​16, 17. “ಕ್ರಯ ವಿಕ್ರಯ”ದಂಥ ದಿನನಿತ್ಯದ ಚಟುವಟಿಕೆಗಳ ವಿಷಯದಲ್ಲಿ ನಮಗೆ ತೊಂದರೆಗಳು ಎದುರಾದರೂ, ಮೃಗವು ನಮ್ಮ ಜೀವಿತಗಳನ್ನು ಆಳುವಂತೆ ಬಿಡಬಾರದು. ‘ನಮ್ಮ ಬಲಗೈಯ ಮೇಲಾಗಲಿ ಹಣೆಯ ಮೇಲಾಗಲಿ ಮೃಗದ ಗುರುತನ್ನು’ ಸ್ವೀಕರಿಸುವುದರ ಅರ್ಥ, ಮೃಗವು ನಮ್ಮ ಕ್ರಿಯೆಗಳನ್ನು ನಿಯಂತ್ರಿಸುವಂತೆ ಇಲ್ಲವೇ ಯೋಚನಾರೀತಿಯನ್ನು ಪ್ರಭಾವಿಸುವಂತೆ ಬಿಟ್ಟಿದ್ದೇವೆಂದಾಗಿದೆ.

14:​6, 7. ದೇವದೂತನು ಮಾಡುವ ಘೋಷಣೆಯು, ದೇವರ ಸ್ಥಾಪಿತ ರಾಜ್ಯದ ಸುವಾರ್ತೆಯನ್ನು ನಾವು ತುರ್ತುಪ್ರಜ್ಞೆಯಿಂದ ಸಾರಬೇಕೆಂಬುದನ್ನು ಕಲಿಸುತ್ತದೆ. ನಮ್ಮ ಬೈಬಲ್‌ ವಿದ್ಯಾರ್ಥಿಗಳು ದೇವಭಯವನ್ನು ಬೆಳೆಸಿಕೊಳ್ಳುವಂತೆ ಮತ್ತು ಯೆಹೋವನನ್ನು ಘನಪಡಿಸುವಂತೆ ನಾವು ಸಹಾಯಮಾಡಬೇಕು.

14:​14-​20. “ಭೂಮಿಯ ಪೈರು” ಅಂದರೆ ರಕ್ಷಣೆಹೊಂದಲಿರುವವರ ಒಟ್ಟುಗೂಡಿಸುವಿಕೆ ಮುಗಿದ ಬಳಿಕ, ದೇವದೂತನು ‘ಭೂಮಿಯ ದ್ರಾಕ್ಷಿಯ ಬಳ್ಳಿಯನ್ನು ಒಟ್ಟುಗೂಡಿಸಿ ಅದನ್ನು ದೇವರ ಕೋಪದ ದೊಡ್ಡ ದ್ರಾಕ್ಷಿಯ ತೊಟ್ಟಿಯೊಳಗೆ ಹಾಕುವನು’ (NW). ಆ ದ್ರಾಕ್ಷೇಬಳ್ಳಿ ಅಂದರೆ ಮಾನವಕುಲವನ್ನು ಆಳಲು ಸೈತಾನನು ಬಳಸುತ್ತಿರುವ ಭ್ರಷ್ಟವಾದ ದೃಶ್ಯ ಸರಕಾರಗಳ ವ್ಯವಸ್ಥೆ ಹಾಗೂ ಅದರ ‘ದ್ರಾಕ್ಷೇಗೊಂಚಲುಗಳು’ ಅಂದರೆ ದುಷ್ಟ ಫಲವನ್ನು ತದನಂತರ ಸದಾಕಾಲಕ್ಕೂ ನಾಶಮಾಡಲಾಗುವುದು. ನಾವು ಈ ಭೂಮಿಯ ದ್ರಾಕ್ಷೇಬಳ್ಳಿಯಿಂದ ಪ್ರಭಾವಿತರಾಗದಂತೆ ದೃಢಮನಸ್ಸುಳ್ಳವರಾಗಿರಬೇಕು.

16:​13-16. “ಅಶುದ್ಧಾತ್ಮಗಳು” ಇಲ್ಲವೇ “ಅಶುದ್ಧವಾದ ಪ್ರೇರಿತ ಅಭಿವ್ಯಕ್ತಿಗಳು” (NW) ಪೈಶಾಚಿಕ ಪ್ರಚಾರಕಾರ್ಯವನ್ನು ಸಂಕೇತಿಸುತ್ತವೆ. ಈ ಪ್ರಚಾರದ ಉದ್ದೇಶ, ಭೂರಾಜರು ದೇವರ ರೌದ್ರದ ಏಳು ಪಾತ್ರೆಗಳ ಹೊಯ್ಯುವಿಕೆಯಿಂದ ಪ್ರಭಾವಿತರಾಗದಂತೆ ಖಚಿತಪಡಿಸಿಕೊಂಡು, ಅವರು ಯೆಹೋವನಿಗೆ ವಿರುದ್ಧವಾಗಿ ನಿಲ್ಲುವಂತೆ ಮಾಡುವುದಾಗಿದೆ.​—⁠ಮತ್ತಾ. 24:​42, 44.

16:21. ಲೋಕದ ಅಂತ್ಯವು ಹತ್ತಿರವಾಗುತ್ತಿದ್ದಂತೆ ಸೈತಾನನ ದುಷ್ಟ ವ್ಯವಸ್ಥೆಯ ವಿರುದ್ಧ ಯೆಹೋವನ ತೀರ್ಪುಗಳನ್ನು ಘೋಷಿಸುವಾಗ, ಆ ತೀರ್ಪುಗಳ ಕುರಿತು ಗಂಭೀರವಾದ, ನೇರ ಅಭಿವ್ಯಕ್ತಿಗಳನ್ನು ಬಳಸಬೇಕಾದೀತು. ಬಹುಶಃ ಇದನ್ನೇ ಆನೇಕಲ್ಲಿನಿಂದ ಚಿತ್ರಿಸಲಾಗಿದೆ. ಆದರೆ ಇಂಥ ಘೋಷಣೆಗಳನ್ನು ಕೇಳಿಯೂ, ಅಧಿಕಾಂಶ ಮಾನವರು ದೇವರನ್ನು ದೂಷಿಸುತ್ತಾ ಇರುವರು.

ವಿಜಯಿ ರಾಜನು ಆಳುತ್ತಾನೆ!

(ಪ್ರಕ. 17:​1–22:⁠21)

ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲ್‌’ ಸೈತಾನನ ದುಷ್ಟ ಲೋಕದ ಅಸಹ್ಯಕರ ಭಾಗವಾಗಿದೆ. 11ನೇ ದರ್ಶನದಲ್ಲಿ ಆಕೆಯನ್ನು “ಮಹಾ ಜಾರಸ್ತ್ರೀ” ಎಂದೂ, ‘ರಕ್ತವರ್ಣದ ಮೃಗದ ಮೇಲೆ ಕೂತಿರುವವಳು’ ಎಂದೂ ಚಿತ್ರಿಸಲಾಗಿದೆ. ಆಕೆಯು ಕೂತುಕೊಂಡಿರುವ ಮೃಗದ ಹತ್ತು ಕೊಂಬುಗಳೇ ಆಕೆಯನ್ನು ಪೂರ್ಣವಾಗಿ ನಾಶಗೊಳಿಸಲಿವೆ. (ಪ್ರಕ. 17:​1, 3, 5, 16) ಮುಂದಿನ ದರ್ಶನವು ಆ ಜಾರಸ್ತ್ರೀಯನ್ನು ಒಂದು ‘ಮಹಾ ಪಟ್ಟಣಕ್ಕೆ’ ಹೋಲಿಸಿ ಆಕೆಯ ಪತನವನ್ನು ಘೋಷಿಸುತ್ತದೆ ಮತ್ತು ದೇವಜನರು ‘ಅವಳನ್ನು ಬಿಟ್ಟುಬರುವಂತೆ’ ತುರ್ತು ಕರೆಯನ್ನು ಹೊರಡಿಸುತ್ತದೆ. ಆ ಮಹಾ ಪಟ್ಟಣದ ಅಂತ್ಯದ ಬಗ್ಗೆ ಅನೇಕರು ಶೋಕಿಸುತ್ತಾರೆ. ಆದರೆ ಪರಲೋಕದಲ್ಲಿ ಹರ್ಷೋಲ್ಲಾಸವಿದೆ ಏಕೆಂದರೆ “ಯಜ್ಞದ ಕುರಿಯಾದಾತನ ವಿವಾಹ” ನಡೆಯಲಿದೆ. (ಪ್ರಕ. 18:​4, 9, 10, 15-19; 19:⁠7) 13ನೇ ದರ್ಶನದಲ್ಲಿ “ಬಿಳೀ ಕುದುರೆಯ” ಸವಾರನು ಜನಾಂಗಗಳೊಂದಿಗೆ ಯುದ್ಧಮಾಡಲು ಹೊರಟು, ಸೈತಾನನ ದುಷ್ಟ ಲೋಕವನ್ನು ಅಂತ್ಯಗೊಳಿಸುತ್ತಾನೆ.​—⁠ಪ್ರಕ. 19:​11-16.

‘ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪದ’ ಕುರಿತೇನು? ಅವನನ್ನು “ಬೆಂಕಿ ಗಂಧಕಗಳುರಿಯುವ ಕೆರೆಯಲ್ಲಿ” ಯಾವಾಗ ದೊಬ್ಬಲಾಗುವುದು? ಇದು, 14ನೇ ದರ್ಶನದಲ್ಲಿರುವ ಒಂದು ವಿಷಯವಾಗಿದೆ. (ಪ್ರಕ. 20:​2, 10) ಕೊನೆಯ ಎರಡು ದರ್ಶನಗಳು, ಸಹಸ್ರ ವರ್ಷದಾಳಿಕೆಯಲ್ಲಿ ಜೀವನ ಹೇಗಿರುವುದೆಂಬ ನಸುನೋಟವನ್ನು ಕೊಡುತ್ತವೆ. “ಪ್ರಕಟನೆಯು” ಕೊನೆಗೊಳ್ಳುತ್ತಿರುವಾಗ ಯೋಹಾನನು ‘ಪಟ್ಟಣದ ಬೀದಿಯ ಮಧ್ಯದಲ್ಲಿ ಜೀವಜಲದ ನದಿ ಹರಿಯುತ್ತಿರುವುದನ್ನು’ ನೋಡುತ್ತಾನೆ. “ಬಾಯಾರಿದವನು ಬರಲಿ” ಎಂಬ ಅದ್ಭುತಕರ ಆಮಂತ್ರಣವನ್ನೂ ನೀಡಲಾಗುತ್ತದೆ.​—⁠ಪ್ರಕ. 1:1; 22:​1, 2, 17.

ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:

17:16; 18:​9, 10​—⁠“ಭೂರಾಜರು” ಸ್ವತಃ ತಾವೇ ಧ್ವಂಸಮಾಡಿರುವ ಸಂಘಟನೆಯ ಬಗ್ಗೆ ದುಃಖಿಸುವುದೇಕೆ? ಅವರ ದುಃಖಕ್ಕೆ ಸ್ವಾರ್ಥ ಕಾರಣಗಳಿವೆ. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ನಾಶನದ ಬಳಿಕ, ಆಕೆಯಿಂದ ತಮಗೆ ಎಷ್ಟು ಲಾಭವಾಗುತ್ತಿತ್ತು ಎಂಬುದು ಭೂರಾಜರಿಗೆ ನಿಶ್ಚಯವಾಗಿ ಅರಿವಾಗುತ್ತದೆ. ಅವರ ದಬ್ಬಾಳಿಕೆಯ ಕೃತ್ಯಗಳಿಗೆ ಆಕೆ ಧಾರ್ಮಿಕ ಲೇಪ ಬಳಿಯುತ್ತಿದ್ದಳು. ಯುದ್ಧಕ್ಕಾಗಿ ಯುವಕರನ್ನು ಸೈನ್ಯಕ್ಕೆ ಸೇರಿಸಲು ಸಹ ಆಕೆ ಸಹಾಯ ಮಾಡುತ್ತಿದ್ದಳು. ಅಲ್ಲದೆ, ಜನರನ್ನು ಶಾಂತರನ್ನಾಗಿಡುವುದರಲ್ಲಿ ಮತ್ತು ಭೂರಾಜರಿಗೆ ಅಧೀನರನ್ನಾಗಿಡುವುದರಲ್ಲಿ ಅವಳ ಪಾತ್ರ ಪ್ರಮುಖವಾಗಿತ್ತು.

19:12​—⁠ಯೇಸುವಿಗಿರುವ ಹೆಸರು ಮತ್ತಾರಿಗೂ ತಿಳಿಯದಿರುವುದು ಹೇಗೆ? ಈ ಹೆಸರು, ಯೆಶಾಯ 9:6ರಲ್ಲಿ ತಿಳಿಸಲಾದಂಥ ರೀತಿಯ ಸ್ಥಾನ ಮತ್ತು ವಿಶೇಷ ಪಾತ್ರಗಳನ್ನು ಸೂಚಿಸುತ್ತಿರುವಂತೆ ತೋರುತ್ತದೆ. ಇವುಗಳನ್ನು ಯೇಸು ಕರ್ತನ ದಿನದಲ್ಲಿ ಹೊಂದಿರುತ್ತಾನೆ. ಸ್ವತಃ ಯೇಸುವಿನ ಹೊರತು ಮತ್ತಾರಿಗೂ ಈ ಹೆಸರು ತಿಳಿಯದು ಏಕೆಂದರೆ ಅವನಿಗಿರುವ ಸುಯೋಗಗಳು ಅಪೂರ್ವವಾಗಿವೆ, ಮತ್ತು ಅಂಥ ಉನ್ನತ ಸ್ಥಾನದಲ್ಲಿರುವುದು ಅಂದರೇನೆಂಬುದು ಆತನೊಬ್ಬನಿಗೆ ಮಾತ್ರ ಗೊತ್ತು. ಹಾಗಿದ್ದರೂ, ಯೇಸು ಈ ಸುಯೋಗಗಳಲ್ಲಿ ಕೆಲವೊಂದನ್ನು ತನ್ನ ಮದುವಣಗಿತ್ತಿ ವರ್ಗದವರೊಂದಿಗೆ ಹಂಚಿಕೊಳ್ಳುತ್ತಾನೆ. ಹೀಗೆ ಕಾರ್ಯತಃ ‘ತನ್ನ ಹೊಸ ಹೆಸರನ್ನು ಅವರ ಮೇಲೆ ಬರೆಯುತ್ತಾನೆ.’​—⁠ಪ್ರಕ. 3:⁠12.

19:14​—⁠ಅರ್ಮಗೆದ್ದೋನಿನಲ್ಲಿ ಯೇಸುವಿನೊಂದಿಗೆ ಯಾರಿರುವರು? ದೇವರ ಯುದ್ಧದಲ್ಲಿ ಯೇಸುವಿನೊಂದಿಗಿರುವ ‘ಪರಲೋಕ ಸೈನ್ಯದವರಲ್ಲಿ’ ದೇವದೂತರಲ್ಲದೆ, ತಮ್ಮ ಸ್ವರ್ಗೀಯ ಪ್ರತಿಫಲವನ್ನು ಈಗಾಗಲೇ ಪಡೆದಿರುವ ಅಭಿಷಿಕ್ತ ವಿಜೇತರೂ ಇರುವರು.​—⁠ಮತ್ತಾ. 25:​31, 32; ಪ್ರಕ. 2:​26, 27.

20:​11-​15​—⁠“ಜೀವಬಾಧ್ಯರ ಪಟ್ಟಿ”ಯಲ್ಲಿ ಯಾರ ಹೆಸರುಗಳನ್ನು ಬರೆಯಲಾಗಿದೆ? ಈ ಪಟ್ಟಿಯಲ್ಲಿ, ನಿತ್ಯಜೀವವನ್ನು ಪಡೆಯುವವರೆಲ್ಲರ ಅಂದರೆ ಅಭಿಷಿಕ್ತ ಕ್ರೈಸ್ತರ, ಮಹಾ ಸಮೂಹದವರ ಮತ್ತು ‘ನೀತಿವಂತರ ಪುನರುತ್ಥಾನ’ ಆಗುವಾಗ ಎದ್ದುಬರುವ ದೇವರ ನಂಬಿಗಸ್ತ ಸೇವಕರ ಹೆಸರುಗಳಿವೆ. (ಅ. ಕೃ. 24:15; ಪ್ರಕ. 2:10; 7:⁠9) ‘ಅನೀತಿವಂತರ ಪುನರುತ್ಥಾನ’ ಆಗುವಾಗ ಎದ್ದುಬರುವವರು, ಸಹಸ್ರ ವರ್ಷದಾಳಿಕೆಯಲ್ಲಿ ತೆರೆಯಲಾಗುವ ‘ಪುಸ್ತಕಗಳಲ್ಲಿ ಬರೆದಿರುವ ಸಂಗತಿಗಳಿಗೆ’ ಹೊಂದಿಕೆಯಲ್ಲಿ ಕ್ರಿಯೆಗೈದರೆ ಮಾತ್ರ ಅವರ ಹೆಸರುಗಳನ್ನು “ಜೀವಬಾಧ್ಯರ ಪಟ್ಟಿ”ಯಲ್ಲಿ ಬರೆಯಲಾಗುವುದು. ಆದರೆ, ಒಮ್ಮೆ ಬರೆಯಲಾದ ಹೆಸರುಗಳನ್ನು ಎಂದೂ ಅಳಿಸಲಾಗದು ಎಂದು ಇದರರ್ಥವಲ್ಲ. ಅಭಿಷಿಕ್ತರು ಮರಣಪರ್ಯಂತರ ನಂಬಿಗಸ್ತರಾಗಿ ಉಳಿದರೆ ಮಾತ್ರ ಅವರ ಹೆಸರುಗಳು ಕಾಯಂ ಆಗಿ ಉಳಿಯುತ್ತವೆ. (ಪ್ರಕ. 3:⁠5) ಭೂಮಿಯಲ್ಲಿ ಜೀವವನ್ನು ಪಡೆಯುವವರ ಹೆಸರುಗಳಾದರೋ, ಅವರು ಸಹಸ್ರ ವರ್ಷದ ಕೊನೆಯಲ್ಲಿರುವ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಆ ಪಟ್ಟಿಯಲ್ಲಿ ಕಾಯಂ ಆಗುವವು.​—⁠ಪ್ರಕ. 20:​7, 8.

ನಮಗಾಗಿರುವ ಪಾಠಗಳು:

17:​3, 5, 7, 16. “ಮೇಲಣಿಂದ ಬರುವ ಜ್ಞಾನ” ಅಥವಾ ವಿವೇಕವು, “ಆ ಸ್ತ್ರೀಯಿಂದಲೂ ಅವಳ ವಾಹನವಾಗಿದ್ದು ಏಳು ತಲೆಗಳೂ ಹತ್ತು ಕೊಂಬುಗಳೂ ಉಳ್ಳ [ರಕ್ತ ವರ್ಣದ] ಮೃಗದಿಂದಲೂ ಸೂಚಿತವಾದ ಗೂಢಾರ್ಥವನ್ನು” ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. (ಯಾಕೋ. 3:17) ಈ ಸಾಂಕೇತಿಕ ಮೃಗವು ಆರಂಭದಲ್ಲಿ ‘ಜನಾಂಗ ಸಂಘ’ ಆಗಿತ್ತು ಮತ್ತು ತದನಂತರ ‘ವಿಶ್ವ ಸಂಸ್ಥೆ’ ಆಗಿ ಪುನರುದಯಿಸಿತು. ಈ ಗೂಢಾರ್ಥದ ಕುರಿತ ತಿಳುವಳಿಕೆಯು, ಹುರುಪಿನಿಂದ ದೇವರ ರಾಜ್ಯದ ಸುವಾರ್ತೆಯನ್ನು ಸಾರುವಂತೆ ಮತ್ತು ದೇವರ ತೀರ್ಪಿನ ದಿನದ ಕುರಿತು ಘೋಷಿಸುವಂತೆ ನಮ್ಮನ್ನು ಪ್ರಚೋದಿಸಬೇಕಲ್ಲವೋ?

21:​1-6. ರಾಜ್ಯದಾಳಿಕೆಯ ಬಗ್ಗೆ ಮುಂತಿಳಿಸಲಾಗಿರುವ ಆಶೀರ್ವಾದಗಳು ನೈಜವಾಗಲಿವೆ ಎಂಬ ವಿಷಯದಲ್ಲಿ ನಮಗೆ ಪೂರ್ತಿ ಭರವಸೆ ಇರಬಲ್ಲದು. ಏಕೆ? ಏಕೆಂದರೆ ಅವುಗಳ ಬಗ್ಗೆ ಹೇಳುವಾಗ, “ಎಲ್ಲಾ ನೆರವೇರಿತು” ಎಂದು ತಿಳಿಸಲಾಗಿದೆ.

22:​1, 17. “ಜೀವಜಲದ ನದಿ” ವಿಧೇಯ ಮಾನವಕುಲವನ್ನು ಪಾಪ ಹಾಗೂ ಮರಣದಿಂದ ಬಿಡಿಸಲು ಯೆಹೋವನು ಮಾಡಿರುವ ಒದಗಿಸುವಿಕೆಗಳನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಸ್ವಲ್ಪ ಮಟ್ಟಿಗಿನ ನೀರು ಈಗಲೇ ಲಭ್ಯವಿದೆ. ‘ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಿರಿ’ ಎಂಬ ಆಮಂತ್ರಣವನ್ನು ಸ್ವತಃ ನಾವು ಕೃತಜ್ಞತೆಯಿಂದ ಸ್ವೀಕರಿಸೋಣ. ಮಾತ್ರವಲ್ಲ ಇತರರಿಗೂ ಆ ಆಮಂತ್ರಣವನ್ನು ಉತ್ಸುಕತೆಯಿಂದ ಕೊಡೋಣ!

[ಪಾದಟಿಪ್ಪಣಿಗಳು]

^ ಪ್ಯಾರ. 3 ಪ್ರಕಟನೆ 1:​1–12:17ರ ಚರ್ಚೆಗಾಗಿ ಕಾವಲಿನಬುರುಜು 2009, ಜನವರಿ 15ರ ಸಂಚಿಕೆಯಲ್ಲಿ “ಪ್ರಕಟನೆ ಪುಸ್ತಕದ ಮುಖ್ಯಾಂಶಗಳು​—⁠I” ಲೇಖನ ನೋಡಿ.

^ ಪ್ಯಾರ. 4 ಪ್ರಕಟನೆ ಪುಸ್ತಕದ ಒಂದೊಂದು ವಚನದ ಚರ್ಚೆಗಾಗಿ, ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕ ನೋಡಿ.

[ಪುಟ 5ರಲ್ಲಿರುವ ಚಿತ್ರ]

ರಾಜ್ಯದಾಳಿಕೆಯ ಕೆಳಗೆ ವಿಧೇಯ ಮಾನವಕುಲವು ಎಂಥ ಅದ್ಭುತಕರ ಆಶೀರ್ವಾದಗಳನ್ನು ಅನುಭವಿಸಲಿದೆ!