ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಮಾತುಗಳು ನಿಮ್ಮ ಪ್ರಾರ್ಥನೆಗಳನ್ನು ಪ್ರಭಾವಿಸುತ್ತವೋ?

ಯೇಸುವಿನ ಮಾತುಗಳು ನಿಮ್ಮ ಪ್ರಾರ್ಥನೆಗಳನ್ನು ಪ್ರಭಾವಿಸುತ್ತವೋ?

ಯೇಸುವಿನ ಮಾತುಗಳು ನಿಮ್ಮ ಪ್ರಾರ್ಥನೆಗಳನ್ನು ಪ್ರಭಾವಿಸುತ್ತವೋ?

“ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು.”​—⁠ಮತ್ತಾ. 7:⁠28.

ದೇವರ ಒಬ್ಬನೇ ಮಗನಾದ ಯೇಸು ಕ್ರಿಸ್ತನ ಮಾತುಗಳನ್ನು ನಾವು ಕೇಳಿ ನಮ್ಮ ಬದುಕಿನಲ್ಲಿ ಅನ್ವಯಿಸತಕ್ಕದ್ದು. ಅವನಂತೆ ಖಂಡಿತ ಯಾರೂ ಬೋಧಿಸಿದ್ದಿಲ್ಲ. ಅದಕ್ಕಾಗಿಯೇ, ಅವನು ಪರ್ವತ ಪ್ರಸಂಗದಲ್ಲಿ ಬೋಧಿಸಿದ ರೀತಿಯಿಂದ ಜನರು ವಿಸ್ಮಿತರಾದರು.​—⁠ಮತ್ತಾಯ 7:​28, 29 ಓದಿ.

2 ದೇವರ ಮಗನು ಶಾಸ್ತ್ರಿಗಳಂತೆ ಬೋಧಿಸಲಿಲ್ಲ. ಅವರು ಕೊಡುತ್ತಿದ್ದ ಉದ್ದುದ್ದ ಭಾಷಣಗಳು ಅಪರಿಪೂರ್ಣ ಮಾನವರ ಬೋಧನೆಗಳ ಮೇಲೆ ಆಧರಿಸಿದ್ದವು. ಕ್ರಿಸ್ತನಾದರೋ “ಅಧಿಕಾರವಿದ್ದವನಂತೆ” ಬೋಧಿಸಿದನು ಏಕೆಂದರೆ ಅವನಾಡಿದ ಮಾತುಗಳು ದೇವರದ್ದಾಗಿದ್ದವು. (ಯೋಹಾ. 12:50) ಹಾಗಾಗಿ, ಪರ್ವತ ಪ್ರಸಂಗವನ್ನು ಮುಂದುವರಿಸುತ್ತಾ ಯೇಸು ಹೇಳಿದ ಮಾತುಗಳು ನಮ್ಮ ಪ್ರಾರ್ಥನೆಗಳನ್ನು ಹೇಗೆ ಪ್ರಭಾವಿಸಬಲ್ಲವು ಮತ್ತು ಏಕೆ ಪ್ರಭಾವಿಸಬೇಕು ಎಂಬದನ್ನು ನಾವೀಗ ನೋಡೋಣ.

ಕಪಟಿಗಳಂತೆ ಪ್ರಾರ್ಥಿಸದಿರಿ

3 ಪ್ರಾರ್ಥನೆಯು ಸತ್ಯಾರಾಧನೆಯ ಪ್ರಮುಖ ಭಾಗವಾಗಿದೆ ಮತ್ತು ನಾವು ಯೆಹೋವನಿಗೆ ಕ್ರಮವಾಗಿ ಪ್ರಾರ್ಥಿಸತಕ್ಕದ್ದು. ಆದರೆ ನಮ್ಮ ಪ್ರಾರ್ಥನೆಗಳು ಪರ್ವತ ಪ್ರಸಂಗದ ಯೇಸುವಿನ ಮಾತುಗಳಿಂದ ಪ್ರಭಾವಿಸಲ್ಪಡಬೇಕು. ಅವನಂದದ್ದು: “ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದೀಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”​—⁠ಮತ್ತಾ. 6:⁠5.

4 ಯೇಸುವಿನ ಶಿಷ್ಯರು ಪ್ರಾರ್ಥಿಸುವಾಗ, “ಕಪಟಿಗಳಾದ” ಸ್ವನೀತಿಯ ಫರಿಸಾಯರನ್ನು ಅನುಕರಿಸಬಾರದಿತ್ತು. ಅವರು ತುಂಬ ದೇವಭಕ್ತರೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದರು. (ಮತ್ತಾ. 23:​13-32) ಆ ಕಪಟಿಗಳು, “ಸಭಾಮಂದಿರಗಳಲ್ಲಿಯೂ ಬೀದೀಚೌಕಗಳಲ್ಲಿಯೂ” ನಿಂತು ಪ್ರಾರ್ಥಿಸುವುದನ್ನು ಬಲು ಇಷ್ಟಪಡುತ್ತಿದ್ದರು. ಏಕೆ? ತಮ್ಮನ್ನು ‘ಜನರು ನೋಡಬೇಕೆಂಬ’ ಕಾರಣಕ್ಕಾಗಿಯೇ. ಪ್ರಥಮ ಶತಮಾನದಲ್ಲಿ, ದೇವಾಲಯದಲ್ಲಿ ಸರ್ವಾಂಗಹೋಮಗಳನ್ನು ಅರ್ಪಿಸಲಾಗುತ್ತಿದ್ದಾಗ (ಬೆಳಗ್ಗೆ 9 ಗಂಟೆ ಸುಮಾರಿಗೆ ಮತ್ತು ಮಧ್ಯಾಹ್ನ 3 ಗಂಟೆಗೆ) ಯೆಹೂದ್ಯರಿಗೆ ಸಭೆಯಾಗಿ ಪ್ರಾರ್ಥಿಸುವ ಪದ್ಧತಿಯಿತ್ತು. ಯೆರೂಸಲೇಮಿನ ಅನೇಕ ನಿವಾಸಿಗಳು ದೇವಾಲಯದ ಆವರಣದಲ್ಲಿ ಇತರರೊಂದಿಗೆ ಜೊತೆಗೂಡಿ ಪ್ರಾರ್ಥಿಸುತ್ತಿದ್ದರು. ಆ ಪಟ್ಟಣದ ಹೊರಗಿರುತ್ತಿದ್ದ ಭಕ್ತ ಯೆಹೂದ್ಯರು ದಿನಕ್ಕೆ ಎರಡಾವರ್ತಿ ‘ಸಭಾಮಂದಿರಗಳಲ್ಲಿ ನಿಂತು’ ಪ್ರಾರ್ಥಿಸುತ್ತಿದ್ದರು.​—⁠ಲೂಕ 18:​11, 13 ಹೋಲಿಸಿ.

5 ಹೆಚ್ಚಿನ ಜನರು ಈ ಪ್ರಾರ್ಥನೆಗಳ ಸಮಯದಲ್ಲಿ ಆಲಯ ಇಲ್ಲವೇ ಸಭಾಮಂದಿರದ ಸಮೀಪವಿರದಿದ್ದ ಕಾರಣ ತಾವು ಇದ್ದಲ್ಲಿಂದಲೇ ಪ್ರಾರ್ಥಿಸಬಹುದಿತ್ತು. ಕೆಲವರು ಪ್ರಾರ್ಥನೆಯ ಸಮಯಕ್ಕೆ ಸರಿಯಾಗಿ “ಬೀದೀಚೌಕಗಳಲ್ಲಿ” ಇರುವಂತೆ ನೋಡಿಕೊಳ್ಳುತ್ತಿದ್ದರು. ಆ ಚೌಕಗಳಿಂದ ಹಾದುಹೋಗುತ್ತಿರುವವರು ತಮ್ಮನ್ನು ನೋಡಬೇಕೆಂದು ಇಂಥವರು ಬಯಸುತ್ತಿದ್ದರು. ನೋಡುವವರು ತಮ್ಮನ್ನು ಮೆಚ್ಚಬೇಕೆಂಬ ಹಂಬಲದಿಂದ ಆ ಧಾರ್ಮಿಕ ಕಪಟಿಗಳು “ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು” ಮಾಡುತ್ತಿದ್ದರು. (ಲೂಕ 20:47) ನಮಗೆ ಅಂಥ ಮನೋಭಾವವಿರಬಾರದು.

6 ಅಂಥ ಕಪಟಿಗಳು, “ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು” ಯೇಸು ಘೋಷಿಸಿದನು. ಅವರು, ಜನರ ಮಾನ್ಯತೆ ಹಾಗೂ ಹೊಗಳಿಕೆಗೆ ಹಾತೊರೆಯುತ್ತಿದ್ದರು ಮತ್ತು ಅವರಿಗೆ ಅದು ಮಾತ್ರ ಸಿಕ್ಕಿತ್ತು. ಅದು ಅವರಿಗೆ ಬರತಕ್ಕ ಫಲವಾಗಿತ್ತು ಏಕೆಂದರೆ ಯೆಹೋವನಂತೂ ಅವರ ಕಪಟ ಪ್ರಾರ್ಥನೆಗಳನ್ನು ಉತ್ತರಿಸುತ್ತಿರಲಿಲ್ಲ. ಆದರೆ, ಯೇಸುವಿನ ನಿಜ ಹಿಂಬಾಲಕರ ಪ್ರಾರ್ಥನೆಗಳಿಗೆ ದೇವರು ಕಿವಿಗೊಡುತ್ತಿದ್ದನು. ಇದು, ಯೇಸು ಈ ವಿಷಯದ ಕುರಿತು ಹೇಳಿದ ಮುಂದಿನ ಮಾತುಗಳಿಂದ ವ್ಯಕ್ತವಾಗುತ್ತದೆ.

7“ನೀನು ಪ್ರಾರ್ಥನೆಮಾಡುವಾಗ ನಿನ್ನ ಖಾಸಗಿ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿದ ಬಳಿಕ ರಹಸ್ಯವಾದ ಸ್ಥಳದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಆಗ ರಹಸ್ಯವಾದ ಸ್ಥಳದಿಂದ ನೋಡುವ ನಿನ್ನ ತಂದೆಯು ನಿನಗೆ ಪ್ರತಿಫಲ ಕೊಡುವನು.” (ಮತ್ತಾ. 6:​6, NW) ಖಾಸಗಿ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿ ಪ್ರಾರ್ಥನೆಮಾಡಿ ಎಂದು ಯೇಸು ಹೇಳಿದಾಗ ಅವನ ಮಾತಿನ ಅರ್ಥ, ಸಭೆಯನ್ನು ಪ್ರತಿನಿಧಿಸುತ್ತಾ ಸಾರ್ವಜನಿಕವಾಗಿ ಯಾರೂ ಪ್ರಾರ್ಥನೆ ಮಾಡಬಾರದು ಎಂದಲ್ಲ. ಈ ಸಲಹೆಯು, ಪ್ರಾರ್ಥನೆ ಮಾಡುವವನ ಕಡೆಗೆ ಗಮನ ಸೆಳೆಯುವ ಹಾಗೂ ಇತರರು ಹೊಗಳಬೇಕೆಂಬ ಉದ್ದೇಶದಿಂದ ಮಾಡಲಾಗುವ ಸಾರ್ವಜನಿಕ ಪ್ರಾರ್ಥನೆಗಳನ್ನು ನಿರುತ್ತೇಜಿಸಲು ಕೊಡಲಾಗಿತ್ತು. ಸಾರ್ವಜನಿಕ ಪ್ರಾರ್ಥನೆಯಲ್ಲಿ ದೇವಜನರನ್ನು ಪ್ರತಿನಿಧಿಸುವ ಸದವಕಾಶ ನಮಗೂ ಸಿಗುವಾಗ ಈ ಅಂಶವನ್ನು ನೆನಪಿನಲ್ಲಿಡಬೇಕು. ಪ್ರಾರ್ಥನೆಯ ಕುರಿತು ಯೇಸು ಕೊಟ್ಟ ಮುಂದಿನ ಸಲಹೆಯನ್ನು ಸಹ ಅನ್ವಯಿಸೋಣ.

8“ನೀನು ಪ್ರಾರ್ಥನೆಮಾಡುವಾಗ ಅನ್ಯಜನರು ಮಾಡುವಂತೆ ಹೇಳಿದ್ದನ್ನೇ ಪುನಃ ಪುನಃ ಹೇಳಬೇಡ; ಏಕೆಂದರೆ ತಾವು ತುಂಬ ಮಾತುಗಳನ್ನು ಉಪಯೋಗಿಸುವುದಾದರೆ ತಮ್ಮ ಪ್ರಾರ್ಥನೆಗಳು ಕೇಳಲ್ಪಡುತ್ತವೆ ಎಂದು ಅವರು ನೆನಸುತ್ತಾರೆ. (ಮತ್ತಾ. 6:​7, NW) ಈ ಮಾತುಗಳಿಂದ ಯೇಸು, ಪ್ರಾರ್ಥನೆ ಮಾಡುವ ಇನ್ನೊಂದು ಅಯೋಗ್ಯ ವಿಧಾನ ಅಂದರೆ ಪ್ರಾರ್ಥನೆಗಳ ಪುನರಾವರ್ತನೆಯ ಕುರಿತು ಹೇಳಿದನು. ಹೀಗೆ ಹೇಳಿದಾಗ ಅವನ ಮಾತಿನ ಅರ್ಥ, ಪ್ರಾರ್ಥನೆಯಲ್ಲಿ ನಾವು ಯಥಾರ್ಥ ಬಿನ್ನಹಗಳನ್ನು ಮತ್ತು ಕೃತಜ್ಞತಾ ಸ್ತುತಿಗಳನ್ನು ಪುನರಾವರ್ತಿಸಲೇಬಾರದೆಂದಲ್ಲ. ಸ್ವತಃ ಯೇಸು, ತಾನು ಸಾಯುವ ಹಿಂದಿನ ರಾತ್ರಿ ಗೆತ್ಸೇಮನೆ ತೋಟದಲ್ಲಿ ಪ್ರಾರ್ಥಿಸುವಾಗ “ಅದೇ ಮಾತನ್ನು” ಪುನಃ ಪುನಃ ಹೇಳಿದನು.​—⁠ಮಾರ್ಕ 14:​32-39.

9 “ಅನ್ಯಜನರು ಮಾಡುವಂತೆ” ನಾವು ಪ್ರಾರ್ಥನೆಯನ್ನು ಪುನರಾವರ್ತಿಸುವುದು ತಪ್ಪು. ಅವರು ಹಲವಾರು ಅನಗತ್ಯ ಪದಗಳಿರುವ ವಾಕ್ಸರಣಿಗಳನ್ನು ಬಾಯಿಪಾಠ ಮಾಡಿ ಅವುಗಳನ್ನು “ಪುನಃ ಪುನಃ” ಹೇಳುತ್ತಿರುತ್ತಾರೆ. ಬಾಳನ ಆರಾಧಕರು, “ಬಾಳನೇ, ನಮಗೆ ಕಿವಿಗೊಡು” ಎಂದು ಬೆಳಗ್ಗಿನಿಂದ ಮಧ್ಯಾಹ್ನದ ವರೆಗೂ ಆ ಸುಳ್ಳು ದೇವರ ಹೆಸರೆತ್ತಿ ಅಂಗಲಾಚಿದರೂ ಅವರಿಗೇನೂ ಫಲ ಸಿಗಲಿಲ್ಲ. (1 ಅರ. 18:26) ಇಂದು ಲಕ್ಷಾಂತರ ಜನರು, ಹೇಳಿದ ಪದಗಳನ್ನೇ ಪುನರಾವರ್ತಿಸುತ್ತಾ ಉದ್ದುದ್ದ ಪ್ರಾರ್ಥನೆಗಳನ್ನು ಮಾಡಿ “ತಮ್ಮ ಪ್ರಾರ್ಥನೆಗಳು ಕೇಳಲ್ಪಡುತ್ತವೆ” ಎಂದೆಣಿಸುತ್ತಾರೆ. ಆದರೆ ‘ತುಂಬ ಮಾತುಗಳನ್ನು ಉಪಯೋಗಿಸಿ’ ಮಾಡಲಾಗುವ ಇಂಥ ಪ್ರಾರ್ಥನೆಗಳು ಯೆಹೋವನ ದೃಷ್ಟಿಯಲ್ಲಿ ನಿರರ್ಥಕವಾಗಿವೆ ಎಂಬದನ್ನು ಗ್ರಹಿಸಲು ಯೇಸು ನಮಗೆ ಸಹಾಯ ಮಾಡುತ್ತಾನೆ. ಅವನು ಹೇಳಿದ್ದು:

10“ಆದದರಿಂದ ನೀವು ಅವರ ಹಾಗೆ ಆಗಬೇಡಿರಿ. ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ.” (ಮತ್ತಾ. 6:⁠8) ಅನೇಕ ಯೆಹೂದಿ ಧಾರ್ಮಿಕ ಮುಖಂಡರು ಉದ್ದುದ್ದ ಪ್ರಾರ್ಥನೆಗಳನ್ನು ಮಾಡುವ ಮೂಲಕ ಅನ್ಯಜನರಂತೆ ಪ್ರಾರ್ಥಿಸುತ್ತಿದ್ದರು. ಸ್ತುತಿ, ಕೃತಜ್ಞತೆ ಮತ್ತು ವಿಜ್ಞಾಪನೆಗಳಿಂದ ಕೂಡಿದ ಹೃತ್ಪೂರ್ವಕ ಪ್ರಾರ್ಥನೆಯು ಸತ್ಯಾರಾಧನೆಯ ಪ್ರಮುಖ ಅಂಗವಾಗಿದೆ. (ಫಿಲಿ. 4:⁠6) ಹಾಗಿದ್ದರೂ, ದೇವರು ಮರೆಗುಳಿಯೋ ಎಂಬಂತೆ ನಾವು ಪ್ರಾರ್ಥನೆಯಲ್ಲಿ ಹೇಳಿದ ಪದಗಳನ್ನೇ ಪುನಃ ಪುನಃ ಹೇಳಬೇಕೆಂದು ಭಾವಿಸುವುದು ತಪ್ಪು. ಪ್ರಾರ್ಥಿಸುವಾಗ ನಾವು ನೆನಪಿನಲ್ಲಿಡಬೇಕಾದ ಸಂಗತಿಯೇನೆಂದರೆ, ‘ಬೇಡಿಕೊಳ್ಳುವುದಕ್ಕಿಂತ ಮುಂಚೆಯೇ ನಮಗೆ ಏನೇನು ಅಗತ್ಯವೋ’ ಅದನ್ನು ತಿಳಿದಾತನೊಂದಿಗೆ ಮಾತಾಡುತ್ತಿದ್ದೇವೆ.

11 ಶಬ್ದಾಡಂಬರ ಮತ್ತು ಅನಗತ್ಯ ಮಾತುಗಳುಳ್ಳ ಪ್ರಾರ್ಥನೆಗಳಿಂದ ದೇವರು ಪ್ರಸನ್ನನಾಗುವುದಿಲ್ಲ ಎಂಬದನ್ನು ಅನಂಗೀಕೃತ ಪ್ರಾರ್ಥನೆಗಳ ಕುರಿತ ಯೇಸುವಿನ ಮಾತುಗಳು ನಮಗೆ ನೆನಪುಹುಟ್ಟಿಸಬೇಕು. ಸಾರ್ವಜನಿಕ ಪ್ರಾರ್ಥನೆಗಳನ್ನು ಕೇಳುಗರ ಮೆಚ್ಚುಗೆ ಪಡೆಯಲಿಕ್ಕಾಗಿ ಸಿಕ್ಕಿರುವ ಅವಕಾಶವಾಗಿ ಬಳಸಬಾರದು. ಅಲ್ಲದೆ ನಮ್ಮ ಪ್ರಾರ್ಥನೆಗಳು ಉದ್ದವಾಗಿದ್ದು, ಕೇಳುಗರು ನಾವು ಆಮೆನ್‌ ಹೇಳುವುದನ್ನೇ ಕಾಯುವಂತೆ ಮಾಡಬಾರದು. ಪ್ರಾರ್ಥನೆಯಲ್ಲಿ ಯಾವುದೇ ಪ್ರಕಟನೆಗಳನ್ನು ಮಾಡುವುದು ಅಥವಾ ಸಭಿಕರಿಗೆ ತಿದ್ದುಪಾಟು ನೀಡುವುದು ಸಹ, ಪರ್ವತ ಪ್ರಸಂಗದ ಯೇಸುವಿನ ಮಾತುಗಳಿಗೆ ವಿರುದ್ಧವಾಗಿರುವುದು.

ಹೇಗೆ ಪ್ರಾರ್ಥಿಸಬೇಕೆಂದು ಯೇಸು ಕಲಿಸುತ್ತಾನೆ

12 ಪ್ರಾರ್ಥನೆ ಎಂಬ ಮಹಾ ಸುಯೋಗವನ್ನು ದುರುಪಯೋಗಿಸಬಾರದೆಂದು ಯೇಸು ಎಚ್ಚರಿಸಿದ್ದು ಮಾತ್ರವಲ್ಲ ಹೇಗೆ ಪ್ರಾರ್ಥಿಸಬೇಕೆಂಬದನ್ನೂ ಶಿಷ್ಯರಿಗೆ ಕಲಿಸಿದನು. (ಮತ್ತಾಯ 6:​9-13 ಓದಿ.) ಮಾದರಿ ಪ್ರಾರ್ಥನೆಯನ್ನು ನಾವು ಜ್ಞಾಪಕದಲ್ಲಿಡಬೇಕಾದರೂ, ಅದನ್ನು ಪುನಃ ಪುನಃ ಪಠಿಸಬಾರದು ಬದಲಿಗೆ ನಮ್ಮ ಪ್ರಾರ್ಥನೆಗಳಿಗೆ ಒಂದು ನಮೂನೆಯಾಗಿ ಬಳಸಬೇಕು. ಉದಾಹರಣೆಗೆ ಯೇಸು, “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂಬ ಆರಂಭದ ಮಾತುಗಳೊಂದಿಗೆ ಪ್ರಾರ್ಥನೆಯಲ್ಲಿ ದೇವರಿಗೆ ಪ್ರಥಮ ಸ್ಥಾನ ಕೊಟ್ಟನು. (ಮತ್ತಾ. 6:​9, 10ಎ) ಯೆಹೋವನು ನಮ್ಮ ಸೃಷ್ಟಿಕರ್ತನಾಗಿರುವುದರಿಂದ ನಾವು ಆತನನ್ನು ಸೂಕ್ತವಾಗಿಯೇ, “ನಮ್ಮ ತಂದೆಯೇ” ಎಂದು ಸಂಬೋಧಿಸುತ್ತೇವೆ. ಆತನು ಭೂಮಿಯಿಂದ ಎಷ್ಟೋ ದೂರವಾಗಿರುವ “ಪರಲೋಕದಲ್ಲಿ” ವಾಸಿಸುತ್ತಾನೆ. (ಧರ್ಮೋ. 32:6; 2 ಪೂರ್ವ. 6:21; ಅ. ಕೃ. 17:​24, 28) “ನಮ್ಮ” ಎಂಬ ಬಹುವಚನ ರೂಪವು, ನಮ್ಮ ಜೊತೆ ವಿಶ್ವಾಸಿಗಳಿಗೂ ದೇವರೊಂದಿಗೆ ಆಪ್ತ ಸಂಬಂಧವಿದೆ ಎಂಬದನ್ನು ನಮ್ಮ ಮನಸ್ಸಿಗೆ ತರಬೇಕು. ಏದೆನ್‌ನಲ್ಲಾದ ದಂಗೆಯಂದಿನಿಂದ ಯೆಹೋವನ ಹೆಸರಿನ ಮೇಲೆ ಕಳಂಕ ಬಂದಿದೆ. “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂಬುದು, ಯೆಹೋವನು ಆ ಕಳಂಕವನ್ನು ತೆಗೆದುಹಾಕುವ ಮೂಲಕ ತನ್ನನ್ನೇ ಪವಿತ್ರೀಕರಿಸಲು ಕ್ರಮಗೈಯಲಿ ಎನ್ನುವ ವಿಜ್ಞಾಪನೆಯಾಗಿದೆ. ಆ ಪ್ರಾರ್ಥನೆಗೆ ಉತ್ತರವಾಗಿ ಯೆಹೋವನು ಭೂಮಿಯಲ್ಲಿರುವ ದುಷ್ಟತನವನ್ನು ತೆಗೆದುಹಾಕಿ ಹೀಗೆ ತನ್ನ ನಾಮವನ್ನು ಪವಿತ್ರೀಕರಿಸುವನು.​—⁠ಯೆಹೆ. 36:⁠23.

13“ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾ. 6:10ಬಿ) ಮಾದರಿ ಪ್ರಾರ್ಥನೆಯಲ್ಲಿರುವ ಈ ವಿಜ್ಞಾಪನೆಯ ವಿಷಯದಲ್ಲಿ ನಾವು ನೆನಪಿನಲ್ಲಿಡಬೇಕಾದ ಸಂಗತಿಯೇನೆಂದರೆ “ರಾಜ್ಯವು,” ಯೇಸುವಿನ ಸ್ವರ್ಗೀಯ ಮೆಸ್ಸೀಯ ಸರಕಾರದ ಮೂಲಕ ನಡೆಸಲ್ಪಡುವ ಯೆಹೋವನ ಆಳ್ವಿಕೆಯನ್ನು ಪ್ರತಿನಿಧಿಸುತ್ತದೆ. ಈ ರಾಜ್ಯದ ಅಧಿಕಾರವು ಯೇಸು ಮತ್ತು ಆತನೊಂದಿಗಿರುವ ಪುನರುತ್ಥಿತ “ಪರಿಶುದ್ಧರ” ಕೈಯಲ್ಲಿದೆ. (ದಾನಿ. 7:​13, 14, 18, NIBV; ಯೆಶಾ. 9:​6, 7) ಅದು “ಬರಲಿ” ಎಂದು ಪ್ರಾರ್ಥಿಸುವುದು, ಭೂಮಿಯಲ್ಲಿ ದೈವಿಕ ಆಳಿಕೆಯನ್ನು ವಿರೋಧಿಸುವವರೆಲ್ಲರ ವಿರುದ್ಧ ದೇವರ ರಾಜ್ಯ ಬರಲಿ ಎಂಬ ಬಿನ್ನಹವಾಗಿದೆ. ಬೇಗನೇ ಅದು ಸಂಭವಿಸುವಾಗ ನೀತಿ, ಶಾಂತಿ ಮತ್ತು ಸಮೃದ್ಧಿಯ ಭೌಗೋಲಿಕ ಪರದೈಸಿಗೆ ದಾರಿ ತೆರೆಯುವುದು. (ಕೀರ್ತ. 72:​1-15; ದಾನಿ. 2:44; 2 ಪೇತ್ರ 3:13) ಯೆಹೋವನ ಚಿತ್ತವು ಪರಲೋಕದಲ್ಲಿ ನೆರವೇರುತ್ತಿದೆ. ಅದು ಭೂಮಿಯಲ್ಲಿ ನೆರವೇರಲಿ ಎಂದು ಬೇಡುವಾಗ, ನಮ್ಮ ಭೂಗ್ರಹದ ಕಡೆಗಿರುವ ತನ್ನ ಉದ್ದೇಶಗಳನ್ನು ದೇವರು ನೆರವೇರಿಸಲಿ ಎಂದು ವಿಜ್ಞಾಪಿಸುತ್ತಿದ್ದೇವೆ. ಆ ಉದ್ದೇಶಗಳಲ್ಲಿ ಆತನು ಗತ ಸಮಯದಲ್ಲಿ ಮಾಡಿದಂತೆ ಈಗಲೂ ತನ್ನ ವೈರಿಗಳನ್ನು ನಿರ್ಮೂಲ ಮಾಡುವುದೂ ಸೇರಿದೆ.​—⁠ಕೀರ್ತ. 83:​1, 2, 13-18.

14“ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು.” (ಮತ್ತಾ. 6:11; ಲೂಕ 11:⁠3) ಹೀಗೆ ಬಿನ್ನವಿಸುವ ಮೂಲಕ ನಾವು ‘ಅನುದಿನಕ್ಕಾಗಿ’ ಆಹಾರವನ್ನು ದಯಪಾಲಿಸಬೇಕೆಂದು ದೇವರಿಗೆ ಬೇಡುತ್ತಿದ್ದೇವೆ. ನಮ್ಮ ಆಯಾ ದಿನದ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಯೆಹೋವನಿಗಿದೆ ಎಂಬ ನಂಬಿಕೆ ನಮಗಿದೆ ಎಂಬದನ್ನು ಇದು ತೋರಿಸುತ್ತದೆ. ಇದು ಅಗತ್ಯಕ್ಕಿಂತ ಅಧಿಕವಾದದ್ದನ್ನು ಕೊಡುವುದಕ್ಕಾಗಿರುವ ಬಿನ್ನಹವಲ್ಲ. ಈ ಬಿನ್ನಹವು, “ಆಯಾ ದಿನಕ್ಕೆ ಬೇಕಾದಷ್ಟು” ಮನ್ನವನ್ನು ಕೂಡಿಸಿಡಲು ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಯನ್ನು ನಮ್ಮ ಮನಸ್ಸಿಗೆ ತರುತ್ತದೆ.​—⁠ವಿಮೋ. 16:⁠4.

15 ಮಾದರಿ ಪ್ರಾರ್ಥನೆಯ ಮುಂದಿನ ಬಿನ್ನಹವು ನಾವು ಅಗತ್ಯವಾಗಿ ಮಾಡಬೇಕಾದ ಸಂಗತಿಯ ಕಡೆಗೆ ಗಮನಹರಿಸುತ್ತದೆ. ಯೇಸು ಮುಂದುವರಿಸಿದ್ದು: “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು.” (ಮತ್ತಾ. 6:12) ನಮ್ಮ ವಿರುದ್ಧ ತಪ್ಪು ಮಾಡಿದವರನ್ನು ನಾವು ಈಗಾಗಲೇ ‘ಕ್ಷಮಿಸಿರುವಲ್ಲಿ’ ಮಾತ್ರ ನಮಗೆ ಯೆಹೋವನ ಕ್ಷಮೆ ದೊರೆಯುವುದು. (ಮತ್ತಾಯ 6:​14, 15 ಓದಿ.) ನಾವು ಒಬ್ಬರನ್ನೊಬ್ಬರು ಕ್ಷಮಿಸಿಬಿಡಬೇಕು.​—⁠ಎಫೆ. 4:32; ಕೊಲೊ. 3:⁠13.

16“ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ [“ಕೆಡುಕನಿಂದ,” BSI ಪಾದಟಿಪ್ಪಣಿ] ನಮ್ಮನ್ನು ತಪ್ಪಿಸು.” (ಮತ್ತಾ. 6:13) ಈ ವಾಕ್ಯದಲ್ಲಿರುವ ಎರಡು ಬಿನ್ನಹಗಳ ನಡುವಿನ ಸಂಬಂಧವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ವಿಷಯವಂತೂ ಖಂಡಿತ: ಪಾಪ ಮಾಡುವಂತೆ ಯೆಹೋವನು ನಮ್ಮನ್ನು ಪ್ರಲೋಭಿಸುವುದಿಲ್ಲ. (ಯಾಕೋಬ 1:13 ಓದಿ.) ‘ಕೆಡುಕನಾದ’ ಸೈತಾನನೇ ನಿಜವಾದ “ಶೋಧಕನು.” (ಮತ್ತಾ. 4:⁠3) ಆದರೆ, ದೇವರು ಯಾವುದನ್ನು ಕೇವಲ ಅನುಮತಿಸಿದ್ದಾನೋ ಆ ವಿಷಯಗಳನ್ನು ಸ್ವತಃ ಆತನೇ ಮಾಡುತ್ತಿದ್ದಾನೆ ಎಂಬಂತೆ ಬೈಬಲ್‌ ಹೇಳುತ್ತದೆ. (ರೂತ. 1:​20, 21; ಪ್ರಸಂ. 11:⁠5) ಆದುದರಿಂದ, ‘ನಮ್ಮನ್ನು ಶೋಧನೆಯೊಳಗೆ ಸೇರಿಸಬೇಡ’ ಎಂಬುದು, ಯೆಹೋವನಿಗೆ ಅವಿಧೇಯರಾಗುವ ಪ್ರಲೋಭನೆ ನಮಗೆ ಬರುವಾಗ ಅದಕ್ಕೆ ಬಲಿಬೀಳುವಂತೆ ಆತನು ಅನುಮತಿಸಬಾರದೆಂಬ ವಿಜ್ಞಾಪನೆಯಾಗಿದೆ. ಅಲ್ಲದೆ, “ಕೆಡುಕನಿಂದ ನಮ್ಮನ್ನು ತಪ್ಪಿಸು” ಎಂಬುದು, ಸೈತಾನನು ನಮ್ಮ ಮೇಲೆ ಜಯಸಾಧಿಸುವಂತೆ ಯೆಹೋವನು ಅನುಮತಿಸದಿರಲಿ ಎಂಬ ಬಿನ್ನಹವಾಗಿದೆ. ದೇವರು, ನಮ್ಮ ‘ಶಕ್ತಿಯನ್ನು ಮೀರುವ ಶೋಧನೆಯನ್ನು ಬರಗೊಡಿಸುವುದಿಲ್ಲ’ ಎಂಬ ಭರವಸೆ ನಮಗಿರಬಲ್ಲದು.​—⁠1 ಕೊರಿಂಥ 10:13 ಓದಿ.

‘ಬೇಡಿಕೊಳ್ಳುತ್ತಾ, ಹುಡುಕುತ್ತಾ, ತಟ್ಟುತ್ತಾ ಇರಿ’

17 ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳನ್ನು ಉತ್ತೇಜಿಸಿದ್ದು: “ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ.” (ರೋಮಾ. 12:12) ಯೇಸು ಸಹ ಇಂಥದ್ದೇ ಆಜ್ಞೆಯನ್ನು ಕೊಟ್ಟಿದ್ದನು. ಅವನಂದದ್ದು: “ಬೇಡಿಕೊಳ್ಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು. ಏಕೆಂದರೆ ಬೇಡಿಕೊಳ್ಳುತ್ತಿರುವ ಪ್ರತಿಯೊಬ್ಬನು ಹೊಂದುವನು, ಹುಡುಕುತ್ತಿರುವ ಪ್ರತಿಯೊಬ್ಬನು ಕಂಡುಕೊಳ್ಳುವನು ಮತ್ತು ತಟ್ಟುತ್ತಿರುವ ಪ್ರತಿಯೊಬ್ಬನಿಗೆ ತೆರೆಯಲ್ಪಡುವುದು.” (ಮತ್ತಾ. 7:​7, 8, NW) ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿರುವ ಯಾವುದೇ ವಿಷಯಕ್ಕಾಗಿ ‘ಬೇಡಿಕೊಳ್ಳುತ್ತಾ ಇರುವುದು’ ಉಚಿತವಾಗಿದೆ. ಯೇಸುವಿನ ಮಾತುಗಳಿಗೆ ಹೊಂದಿಕೆಯಲ್ಲಿ ಅಪೊಸ್ತಲ ಯೋಹಾನನು ಬರೆದದ್ದು: “ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು.”​—⁠1 ಯೋಹಾ. 5:⁠14.

18 ‘ಬೇಡಿಕೊಳ್ಳುತ್ತಾ, ಹುಡುಕುತ್ತಾ ಇರಲು’ ಯೇಸು ಕೊಟ್ಟ ಸಲಹೆಯ ಅರ್ಥ ನಾವು ಮನಃಪೂರ್ವಕವಾಗಿ ಮತ್ತು ಪಟ್ಟುಹಿಡಿದು ಪ್ರಾರ್ಥಿಸಬೇಕು ಎಂದಾಗಿದೆ. ರಾಜ್ಯವನ್ನು ಪ್ರವೇಶಿಸಿ, ಅದರ ಆಶೀರ್ವಾದಗಳನ್ನೂ, ಪ್ರತಿಫಲಗಳನ್ನೂ ಪಡೆಯಲು ನಾವು ‘ತಟ್ಟುತ್ತಾ ಇರುವುದು’ ಸಹ ಅತ್ಯಾವಶ್ಯಕ. ಆದರೆ ದೇವರು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುವನೆಂಬ ಭರವಸೆ ನಮಗಿರಬಲ್ಲದೋ? ಹೌದು, ನಾವು ಯೆಹೋವನಿಗೆ ನಂಬಿಗಸ್ತರಾಗಿರುವಲ್ಲಿ ಖಂಡಿತವಾಗಿ ಆ ಭರವಸೆಯಿಂದಿರಬಲ್ಲೆವು. ಯೇಸು ಹೇಳಿದ್ದು: “ಬೇಡಿಕೊಳ್ಳುತ್ತಿರುವ ಪ್ರತಿಯೊಬ್ಬನು ಹೊಂದುವನು, ಹುಡುಕುತ್ತಿರುವ ಪ್ರತಿಯೊಬ್ಬನು ಕಂಡುಕೊಳ್ಳುವನು ಮತ್ತು ತಟ್ಟುತ್ತಿರುವ ಪ್ರತಿಯೊಬ್ಬನಿಗೆ ತೆರೆಯಲ್ಪಡುವುದು.” ಯೆಹೋವನ ಸೇವಕರಿಗಾಗಿರುವ ಅನೇಕಾನೇಕ ಅನುಭವಗಳು, ಯೆಹೋವನು ನಿಜವಾಗಿಯೂ “ಪ್ರಾರ್ಥನೆಯನ್ನು ಕೇಳುವವ”ನೆಂಬುದನ್ನು ರುಜುಪಡಿಸಿವೆ.​—⁠ಕೀರ್ತ. 65:⁠2.

19 ದೇವರು, ತನ್ನ ಮಕ್ಕಳಿಗೆ ಒಳ್ಳೇ ವಿಷಯಗಳನ್ನು ಕೊಡುವ ಪ್ರೀತಿಯ ತಂದೆಯಂತಿದ್ದಾನೆ ಎಂದು ಯೇಸು ಹೇಳಿದನು. ನೀವಲ್ಲಿ ಉಪಸ್ಥಿತರಿದ್ದು, ಪರ್ವತ ಪ್ರಸಂಗವನ್ನು ಕೇಳಿಸಿಕೊಳ್ಳುತ್ತಿದ್ದೀರೆಂದು ಊಹಿಸಿ. ಅಲ್ಲಿ ಯೇಸು ಹೀಗಂದನು: “ನಿಮ್ಮಲ್ಲಿ ಯಾವನಾದರೂ ರೊಟ್ಟಿ ಕೇಳುವ ಮಗನಿಗೆ ಕಲ್ಲನ್ನು ಕೊಡುವನೇ? ಮೀನು ಕೇಳಿದರೆ ಹಾವನ್ನು ಕೊಡುವನೇ? ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯ ವರಗಳನ್ನು ಕೊಡುವನಲ್ಲವೇ.”​—⁠ಮತ್ತಾ. 7:​9-11.

20 ಒಬ್ಬ ಮಾನವ ಪಿತನು, ತಾನು ಬಾಧ್ಯತೆಯಾಗಿ ಪಡೆದಿರುವ ಪಾಪದಿಂದಾಗಿ, ಒಂದರ್ಥದಲ್ಲಿ ‘ಕೆಟ್ಟವನಾಗಿದ್ದರೂ’ ತನ್ನ ಮಕ್ಕಳನ್ನು ಸಹಜವಾಗಿ ಪ್ರೀತಿಸುತ್ತಾನೆ. ಅವನು ತನ್ನ ಮಕ್ಕಳಿಗೆಂದೂ ಮೋಸಮಾಡದೆ, ಅವರಿಗೆ “ಒಳ್ಳೆಯ ಪದಾರ್ಥಗಳನ್ನು” ಕೊಡಲು ಪ್ರಯತ್ನಿಸುವನು. ನಮ್ಮ ಸ್ವರ್ಗೀಯ ತಂದೆ ಸಹ, ಅಂಥ ಪ್ರೀತಿಪರ ಮನೋಭಾವದಿಂದ ತನ್ನ ಪವಿತ್ರಾತ್ಮದಂಥ “ಒಳ್ಳೆಯ ವರಗಳನ್ನು” ನಮಗೆ ಕೊಡುತ್ತಾನೆ. (ಲೂಕ 11:13) ಈ ಪವಿತ್ರಾತ್ಮವು, ‘ಎಲ್ಲಾ ಒಳ್ಳೇ ದಾನಗಳನ್ನೂ ಕುಂದಿಲ್ಲದ ಎಲ್ಲಾ ವರಗಳನ್ನೂ’ ಕೊಡುವಾತನಾದ ಯೆಹೋವನಿಗೆ ಅಂಗೀಕೃತ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡುವುದು.​—⁠ಯಾಕೋ. 1:⁠17.

ಯೇಸುವಿನ ಮಾತುಗಳಿಂದ ಪ್ರಯೋಜನ ಪಡೆಯುತ್ತಿರ್ರಿ

21 ಪರ್ವತ ಪ್ರಸಂಗವು, ಕೊಡಲಾಗಿರುವ ಪ್ರಸಂಗಗಳಲ್ಲೇ ಅತಿ ಶ್ರೇಷ್ಠವಾದದ್ದು ಎಂಬದರಲ್ಲಿ ಎರಡು ಮಾತಿಲ್ಲ. ದೇವರ ಬಗ್ಗೆ ಕಲಿಸುವಂಥ ವಿಷಯಗಳಿಂದಾಗಿ ಮತ್ತು ಅದರ ಸ್ಪಷ್ಟತೆಯಿಂದಾಗಿ ಈ ಪ್ರಸಂಗವು ಗಮನಾರ್ಹವಾಗಿದೆ. ಈ ಲೇಖನಮಾಲೆಯಲ್ಲಿ ಚರ್ಚಿಸಲಾಗಿರುವ ಅಂಶಗಳಿಂದ ತೋರಿಬರುವಂತೆ, ಈ ಪ್ರಸಂಗದಲ್ಲಿರುವ ಬುದ್ಧಿವಾದವನ್ನು ಅನ್ವಯಿಸುವುದರಿಂದ ನಮಗೆ ತುಂಬ ಒಳಿತಾಗುವುದು. ಯೇಸುವಿನ ಈ ಮಾತುಗಳು ಈಗಲೂ ನಮ್ಮ ಜೀವನವನ್ನು ಉತ್ತಮಗೊಳಿಸಬಲ್ಲವು ಮಾತ್ರವಲ್ಲ ಭವಿಷ್ಯತ್ತಿಗಾಗಿಯೂ ಸಂತೋಷಕರ ನಿರೀಕ್ಷೆಯನ್ನು ಕೊಡಬಲ್ಲವು.

22 ಯೇಸುವಿನ ಪರ್ವತ ಪ್ರಸಂಗದಲ್ಲಿರುವ ಆಧ್ಯಾತ್ಮಿಕ ರತ್ನಗಳಲ್ಲಿ ಕೆಲವನ್ನೇ ನಾವು ಈ ಲೇಖನಗಳಲ್ಲಿ ಚರ್ಚಿಸಿದ್ದೇವೆ. ಈ ಪ್ರಸಂಗವನ್ನು ಕೇಳಿದವರು ‘ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟದ್ದರಲ್ಲಿ’ ಅಚ್ಚರಿಯೇನಿಲ್ಲ. (ಮತ್ತಾ. 7:28) ಮಹಾ ಬೋಧಕನಾದ ಯೇಸುವಿನ ಈ ಮಾತುಗಳು ಹಾಗೂ ಇತರ ಮಾತುಗಳನ್ನು ನಮ್ಮ ಹೃದಮನಗಳಲ್ಲಿ ತುಂಬಿಸುವಾಗ, ನಾವು ಸಹ ಅತ್ಯಾಶ್ಚರ್ಯಪಡುವೆವು.

ನಿಮ್ಮ ಉತ್ತರಗಳೇನು?

• ಕಪಟ ಪ್ರಾರ್ಥನೆಗಳ ಕುರಿತು ಯೇಸು ಏನಂದನು?

• ಪ್ರಾರ್ಥನೆ ಮಾಡುವಾಗ ನಾವು ಹೇಳಿದ ಪದಗಳನ್ನೇ ಪುನರಾವರ್ತಿಸಬಾರದೇಕೆ?

• ಯೇಸುವಿನ ಮಾದರಿ ಪ್ರಾರ್ಥನೆಯಲ್ಲಿ ಯಾವ ಬಿನ್ನಹಗಳಿವೆ?

• ನಾವು ಹೇಗೆ ‘ಬೇಡಿಕೊಳ್ಳುತ್ತಾ, ಹುಡುಕುತ್ತಾ, ತಟ್ಟುತ್ತಾ’ ಇರಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2. ಜನರ ಗುಂಪುಗಳು ಯೇಸುವಿನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟದ್ದೇಕೆ?

3. ಮತ್ತಾಯ 6:5ರಲ್ಲಿರುವ ಯೇಸುವಿನ ಮಾತುಗಳ ಸಾರವೇನೆಂದು ತಿಳಿಸಿ.

4-6. (ಎ) ಫರಿಸಾಯರು, “ಸಭಾಮಂದಿರಗಳಲ್ಲಿಯೂ ಬೀದೀಚೌಕಗಳಲ್ಲಿಯೂ” ನಿಂತು ಪ್ರಾರ್ಥಿಸಲು ಇಷ್ಟಪಡುತ್ತಿದ್ದದ್ದು ಏಕೆ? (ಬಿ) ಅಂಥ ಕಪಟಿಗಳು ‘ತಮಗೆ ಬರತಕ್ಕ ಫಲವನ್ನು ಹೊಂದಿದ್ದು’ ಹೇಗೆ?

7. “ಖಾಸಗಿ ಕೋಣೆ”ಯಲ್ಲಿ ಪ್ರಾರ್ಥಿಸುವಂತೆ ಕೊಡಲಾಗಿರುವ ಸಲಹೆಯ ಅರ್ಥವೇನು?

8. ಮತ್ತಾಯ 6:7ಕ್ಕನುಸಾರ ನಾವು ಯಾವ ವಿಧದಲ್ಲಿ ಪ್ರಾರ್ಥಿಸಬಾರದು?

9, 10. ಯಾವ ಅರ್ಥದಲ್ಲಿ ನಾವು ಪ್ರಾರ್ಥನೆಯಲ್ಲಿ ಹೇಳಿದ ಪದಗಳನ್ನೇ ಪುನಃ ಪುನಃ ಹೇಳಬಾರದು?

11. ಸಾರ್ವಜನಿಕ ಪ್ರಾರ್ಥನೆ ಮಾಡುವಾಗ ನಾವೇನನ್ನು ನೆನಪಿನಲ್ಲಿಡಬೇಕು?

12. “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂಬ ವಿಜ್ಞಾಪನೆಯ ಅರ್ಥವೇನು?

13. (ಎ) “ನಿನ್ನ ರಾಜ್ಯವು ಬರಲಿ” ಎಂಬ ಬಿನ್ನಹ ಹೇಗೆ ನೆರವೇರುವುದು? (ಬಿ) ಭೂಮಿಯಲ್ಲಿ ದೇವರ ಚಿತ್ತ ನೆರವೇರುವುದರಲ್ಲಿ ಏನೆಲ್ಲ ಸೇರಿದೆ?

14. “ನಮ್ಮ ಅನುದಿನದ ಆಹಾರ”ಕ್ಕಾಗಿ ಬೇಡುವುದು ಸೂಕ್ತವೇಕೆ?

15. “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು” ಎಂಬ ಬಿನ್ನಹವನ್ನು ವಿವರಿಸಿ.

16. ಪ್ರಲೋಭನೆಗಳು ಮತ್ತು ಕೆಡುಕನಿಂದ ತಪ್ಪಿಸುವ ಕುರಿತ ಬಿನ್ನಹಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?

17, 18. ‘ಬೇಡಿಕೊಳ್ಳುತ್ತಾ, ಹುಡುಕುತ್ತಾ, ತಟ್ಟುತ್ತಾ ಇರಿ’ ಎಂಬ ಮಾತುಗಳ ಅರ್ಥವೇನು?

19, 20. ಮತ್ತಾಯ 7:​9-11ರಲ್ಲಿರುವ ಯೇಸುವಿನ ಮಾತುಗಳಿಗನುಸಾರ ಯೆಹೋವನು ಪ್ರೀತಿಪರ ತಂದೆಯಂತಿರುವುದು ಹೇಗೆ?

21, 22. ಪರ್ವತ ಪ್ರಸಂಗವು ಏಕೆ ಗಮನಾರ್ಹವಾಗಿದೆ, ಮತ್ತು ಯೇಸುವಿನ ಈ ಮಾತುಗಳ ಕುರಿತು ನಿಮಗೆ ಹೇಗನಿಸುತ್ತದೆ?

[ಪುಟ 15ರಲ್ಲಿರುವ ಚಿತ್ರ]

ಇತರರು ನೋಡಬೇಕು, ಕೇಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಾರ್ಥಿಸುತ್ತಿದ್ದ ಕಪಟಿಗಳನ್ನು ಯೇಸು ಖಂಡಿಸಿದನು

[ಪುಟ 17ರಲ್ಲಿರುವ ಚಿತ್ರ]

ನಮ್ಮ ಅನುದಿನದ ಆಹಾರಕ್ಕಾಗಿ ಪ್ರಾರ್ಥಿಸುವುದು ಸೂಕ್ತವೇಕೆಂದು ನಿಮಗೆ ಗೊತ್ತೋ?