ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ಮರೆಯಬೇಡಿ

ಯೆಹೋವನನ್ನು ಮರೆಯಬೇಡಿ

ಯೆಹೋವನನ್ನು ಮರೆಯಬೇಡಿ

ಇಸ್ರಾಯೇಲ್ಯರು ಯೊರ್ದನ್‌ ನದಿ ತಳದ ಮೇಲೆ ನಡೆಯುತ್ತಾ ಇದ್ದರು. ಆದರೂ ಅವರು ಸ್ವಲ್ಪವೂ ಒದ್ದೆಯಾಗಿರಲಿಲ್ಲ. ಹೇಗೆ? ಸ್ವಲ್ಪ ಹೊತ್ತಿನ ಮುಂಚೆ ಯೆಹೋವನು ಯೊರ್ದನ್‌ ನದಿಯ ನೀರಿನ ಹರಿವನ್ನು ನಿಲ್ಲಿಸಿದ್ದನು. ಆ ಇಸ್ರಾಯೇಲ್ಯರಲ್ಲಿ ಕೆಲವರಿಗೆ ಹಿಂದೊಮ್ಮೆ ಈ ಅನುಭವವಾಗಿತ್ತು. ಆದರೆ ಹೆಚ್ಚಿನವರಿಗೆ ಇಂಥ ಅನುಭವವಾಗುತ್ತಿರುವುದು ಇದೇ ಮೊದಲು ಮತ್ತು ಇದೇ ಕೊನೆ. ಲಕ್ಷಗಟ್ಟಲೆ ಇಸ್ರಾಯೇಲ್ಯರು ಉದ್ದ ಮತ್ತು ಅಗಲವಾದ ಮೆರವಣಿಗೆ ಗುಂಪಿನಲ್ಲಿ ನದಿ ತಳದಲ್ಲಿ ನಡೆದು ವಾಗ್ದತ್ತ ದೇಶದತ್ತ ಸಾಗಿದರು. ಯೊರ್ದನ್‌ ನದಿ ದಾಟುತ್ತಿದ್ದವರಲ್ಲಿ ಅನೇಕರು, 40 ವರ್ಷಗಳ ಮುಂಚೆ ಕೆಂಪು ಸಮುದ್ರವನ್ನು ದಾಟಿದ ತಮ್ಮ ಪೂರ್ವಜರಂತೆಯೇ ‘ಯೆಹೋವನು ಈಗೇನು ಮಾಡಿದ್ದಾನೋ ಅದನ್ನೆಂದಿಗೂ ಮರೆಯಲಾರೆ’ ಎಂದು ಹೇಳಿದ್ದಿರಬಹುದು.​—⁠ಯೆಹೋ. 3:​13-17.

ಕೆಲವು ಇಸ್ರಾಯೇಲ್ಯರಾದರೋ ‘ಬೇಗನೆ ತನ್ನ ಕೆಲಸಗಳನ್ನು ಮರೆತುಬಿಡುವರು’ ಎಂಬುದು ಯೆಹೋವನಿಗೆ ತಿಳಿದೇ ಇತ್ತು. (ಕೀರ್ತ. 106:13) ಆದ್ದರಿಂದ ಆತನು ಇಸ್ರಾಯೇಲ್ಯರ ನಾಯಕನಾದ ಯೆಹೋಶುವನಿಗೆ, ನದಿ ತಳದಿಂದ 12 ಕಲ್ಲುಗಳನ್ನು ಆರಿಸಿಕೊಂಡು ನದಿ ದಾಟಿದ ನಂತರ ಪಾಳೆಯ ಹೂಡಿದ್ದ ಸ್ಥಳದಲ್ಲಿ ನಿಲ್ಲಿಸುವಂತೆ ಅಪ್ಪಣೆ ಕೊಟ್ಟನು. ಇದಕ್ಕೆ ಕಾರಣ ಕೊಡುತ್ತಾ ಯೆಹೋಶುವನಂದದ್ದು: “ಈ ಕಲ್ಲುಗಳು ಇಸ್ರಾಯೇಲ್ಯರಿಗೆ ಸದಾಕಾಲವೂ ಸಾಕ್ಷಿಗಳಾಗಿರುವವು.” (ಯೆಹೋ. 4:​1-8) ಆ ಸ್ಮಾರಕವು ಆ ಜನಾಂಗಕ್ಕೆ ಯೆಹೋವನ ಮಹತ್ಕಾರ್ಯಗಳನ್ನು ಜ್ಞಾಪಕಕ್ಕೆ ತರಲಿತ್ತು ಮತ್ತು ಅವರು ಆತನನ್ನು ನಿಷ್ಠೆಯಿಂದ ಸದಾ ಸೇವಿಸಬೇಕಾದ ಕಾರಣವನ್ನು ಮನಸ್ಸಿನಲ್ಲಿ ಅಚ್ಚೊತ್ತಿಸಲಿತ್ತು.

ಈ ವೃತ್ತಾಂತವು ದೇವರ ಸೇವಕರಿಗೆ ಇಂದು ಮಹತ್ತ್ವದ್ದಾಗಿದೆಯೋ? ಹೌದು. ಏಕೆಂದರೆ, ನಾವು ಕೂಡ ಯೆಹೋವನನ್ನು ಮರೆಯದೇ ನಿಷ್ಠೆಯಿಂದ ಸದಾ ಸೇವಿಸಬೇಕು. ಇಸ್ರಾಯೇಲ್ಯರಿಗೆ ಕೊಡಲಾದ ಇತರ ಎಚ್ಚರಿಕೆಗಳೂ ಯೆಹೋವನ ಸೇವಕರಿಗೆ ಇಂದು ಅನ್ವಯವಾಗುತ್ತವೆ. ಮೋಶೆಯ ಈ ಮಾತುಗಳನ್ನು ಪರಿಗಣಿಸಿ: “ನಿಮ್ಮ ದೇವರಾದ ಯೆಹೋವನ ಆಜ್ಞಾವಿಧಿನಿರ್ಣಯಗಳನ್ನು ಕೈಕೊಳ್ಳದವರೂ ಆತನನ್ನು ಮರೆಯುವವರೂ ಆಗಬೇಡಿರಿ, ನೋಡಿರಿ.” (ಧರ್ಮೋ. 8:11) ಒಬ್ಬನು ಯೆಹೋವನನ್ನು ಮರೆಯುವುದಕ್ಕೂ ಆತನಿಗೆ ಅವಿಧೇಯನಾಗುವುದಕ್ಕೂ ಸಂಬಂಧವಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಅಪಾಯ ನಮ್ಮ ದಿನಗಳಲ್ಲೂ ಇದೆ. ಅಪೊಸ್ತಲ ಪೌಲನು ಕ್ರೈಸ್ತರಿಗೆ ಬರೆಯುವಾಗ, ಇಸ್ರಾಯೇಲ್ಯರು ಅರಣ್ಯದಲ್ಲಿದ್ದಾಗ ತೋರಿಸಿದ ‘ಅವಿಧೇಯತ್ವವನ್ನು ಅನುಸರಿಸದಂತೆ’ ಎಚ್ಚರಿಸಿದನು.​—⁠ಇಬ್ರಿ. 4:​8-11.

ನಾವು ಯೆಹೋವನನ್ನು ಮರೆಯಬಾರದು ಎಂಬುದನ್ನು ಎತ್ತಿತೋರಿಸುವ ಕೆಲವೊಂದು ಘಟನೆಗಳನ್ನು ನಾವೀಗ ಇಸ್ರಾಯೇಲ್ಯರ ಚರಿತ್ರೆಯಿಂದ ಪರಿಗಣಿಸೋಣ. ಅಲ್ಲದೇ, ನಿಷ್ಠಾವಂತರಾದ ಇಬ್ಬರು ಇಸ್ರಾಯೇಲ್ಯ ಪುರುಷರ ಜೀವನಗಳಿಂದ ಕಲಿಯಬಹುದಾದ ಪಾಠಗಳು ಯೆಹೋವನನ್ನು ತಾಳ್ಮೆ ಹಾಗೂ ಕೃತಜ್ಞತಾಭಾವದಿಂದ ಸೇವಿಸುವಂತೆ ನಮಗೆ ಸಹಾಯ ಮಾಡುವವು.

ಯೆಹೋವನನ್ನು ಮರೆಯದಿರಲು ಕಾರಣಗಳು

ಇಸ್ರಾಯೇಲ್ಯರು ಐಗುಪ್ತದಲ್ಲಿದ್ದಾಗಲೂ ಯೆಹೋವನು ಅವರನ್ನೆಂದೂ ಮರೆಯಲಿಲ್ಲ. ‘ಅಬ್ರಹಾಮ ಇಸಾಕ ಯಾಕೋಬರಿಗೆ ಮಾಡಿದ ವಾಗ್ದಾನವನ್ನು ಆತನು ನೆನಪಿಗೆ ತಂದುಕೊಂಡನು.’ (ವಿಮೋ. 2:​23, 24) ತದನಂತರ ಅವರನ್ನು ದಾಸತ್ವದಿಂದ ಬಿಡಿಸಲು ಆತನು ಏನೇನು ಮಾಡಿದನೋ ಅದು ನಿಜಕ್ಕೂ ಅವಿಸ್ಮರಣೀಯವಾಗಿತ್ತು.

ಯೆಹೋವನು ಐಗುಪ್ತದ ಮೇಲೆ ಒಂಭತ್ತು ಬಾಧೆಗಳನ್ನು ತಂದನು. ಇವುಗಳನ್ನು ನಿಲ್ಲಿಸುವ ಶಕ್ತಿ ಫರೋಹನ ಜೋಯಿಸರಿಗೂ ಇರಲಿಲ್ಲ. ಹಾಗಿದ್ದರೂ ಫರೋಹನು, ಯೆಹೋವನ ಮಾತನ್ನು ಧಿಕ್ಕರಿಸುತ್ತಾ ಇಸ್ರಾಯೇಲ್ಯರನ್ನು ಬಿಡಗಡೆಗೊಳಿಸಲು ನಿರಾಕರಿಸಿದನು. (ವಿಮೋ. 7:​14–10:29) ಆದರೆ ಹತ್ತನೇ ಬಾಧೆ ಬಂದಾಗ ಆ ಅಹಂಕಾರಿ ದೊರೆ ಯೆಹೋವನಿಗೆ ವಿಧೇಯನಾಗಲೇಬೇಕಾಯಿತು. (ವಿಮೋ. 11:​1-10; 12:12) ಮೋಶೆಯ ನೇತೃತ್ವದಲ್ಲಿ ಇಸ್ರಾಯೇಲ್‌ ಜನಾಂಗ ಮತ್ತು ಬಹುಮಂದಿ ಅನ್ಯರು ಸೇರಿ ಸುಮಾರು 30,00,000 ಜನರು ಐಗುಪ್ತವನ್ನು ಬಿಟ್ಟು ಬಂದರು. (ವಿಮೋ. 12:​37, 38) ಅವರು ಸ್ವಲ್ಪ ದೂರ ಹೋಗುವಷ್ಟರಲ್ಲಿ ಫರೋಹನ ಮನಸ್ಸು ಬದಲಾಯಿತು. ಅವನು ಆ ಕಾಲದಲ್ಲಿ ಭೂಮಿಯಲ್ಲಿದ್ದ ಅತ್ಯಂತ ಬಲಿಷ್ಠ ಸೈನ್ಯವನ್ನು ಅಂದರೆ ತನ್ನ ಶಸ್ತ್ರಸಜ್ಜಿತ ರಥಗಳನ್ನೂ ಅಶ್ವದಳವನ್ನೂ ಕಳುಹಿಸಿ, ತನ್ನ ದಾಸರಾಗಿದ್ದವರನ್ನು ಪುನಃ ಹಿಡಿದು ತರುವಂತೆ ಅಪ್ಪಣೆಕೊಟ್ಟನು. ಈ ಮಧ್ಯೆ, ಇಸ್ರಾಯೇಲ್ಯರನ್ನು ಕೆಂಪು ಸಮುದ್ರ ಮತ್ತು ಬೆಟ್ಟದ ಸಾಲುಗಳ ನಡುವಿನ ಪೀಹಹಿರೋತ್‌ ಎಂಬಲ್ಲಿಗೆ ನಡೆಸುವಂತೆ ಯೆಹೋವನು ಮೋಶೆಗೆ ಅಪ್ಪಣೆಕೊಟ್ಟನು. ಇಲ್ಲಿಂದ ತಪ್ಪಿಸಿಕೊಳ್ಳುವ ಮಾರ್ಗವೇ ಕಾಣದಾಗಿತ್ತು.​—⁠ವಿಮೋ. 14:​1-9.

ಇಸ್ರಾಯೇಲ್ಯರು ಸಿಕ್ಕಿಬಿದ್ದಿದ್ದಾರೆ ಎಂದು ಫರೋಹನು ನೆನಸಿದನು ಮತ್ತು ಅವನ ಸೈನ್ಯ ಅವರ ಮೇಲೆ ಇನ್ನೇನು ಎರಗಬೇಕೆಂದಿದ್ದಾಗ ಯೆಹೋವನು ಅವರ ಮತ್ತು ಇಸ್ರಾಯೇಲ್ಯರ ಮಧ್ಯೆ ಮೇಘಸ್ತಂಭ ಹಾಗೂ ಅಗ್ನಿಸ್ತಂಭವನ್ನಿರಿಸುವ ಮೂಲಕ ಐಗುಪ್ತ್ಯರನ್ನು ಹಿಂದಕ್ಕಿರಿಸಿದನು. ಅನಂತರ ಯೆಹೋವನು ಕೆಂಪು ಸಮುದ್ರವನ್ನು ಇಬ್ಭಾಗಮಾಡಿ ಸಮುದ್ರತಳದಲ್ಲಿ ಮಾರ್ಗವನ್ನು ತೆರೆದನು. ಆ ಮಾರ್ಗದ ಎರಡೂ ಕಡೆಗಳಲ್ಲಿ ನೀರು ಸುಮಾರು 50 ಅಡಿಯಷ್ಟು ಎತ್ತರಕ್ಕೆ ಗೋಡೆಯಂತೆ ನಿಂತಿತು. ಇಸ್ರಾಯೇಲ್ಯರು ಒಣನೆಲದಲ್ಲಿ ನಡೆಯುತ್ತಾ ಸಮುದ್ರವನ್ನು ದಾಟಲಾರಂಭಿಸಿದರು. ಸ್ವಲ್ಪದರಲ್ಲೇ ಸಮುದ್ರ ತೀರವನ್ನು ತಲುಪಿದ ಐಗುಪ್ತ್ಯರು ಆಚೆ ದಡದ ಕಡೆಗೆ ಹೋಗುತ್ತಿರುವ ಇಸ್ರಾಯೇಲ್ಯರನ್ನು ನೋಡಿದರು.​—⁠ವಿಮೋ. 13:21; 14:​10-22.

ವಿವೇಕಿಯಾದ ಯಾವನೇ ದೊರೆ ಇಂಥ ಸನ್ನಿವೇಶದಲ್ಲಿ ಬೆನ್ನಟ್ಟಿಕೊಂಡು ಹೋಗುವ ಸಾಹಸ ಮಾಡುತ್ತಿರಲಿಲ್ಲ. ಫರೋಹನಾದರೋ ಆ ಹುಚ್ಚು ಸಾಹಸಕ್ಕೆ ಕೈಹಾಕಿದನು. ಅತಿಯಾದ ಆತ್ಮವಿಶ್ವಾಸದಿಂದ ಅವನು ತನ್ನ ರಥಾಶ್ವಗಳ ಸೈನಿಕರಿಗೆ ಇಸ್ರಾಯೇಲ್ಯರನ್ನು ಬೆನ್ನಟ್ಟುವಂತೆ ಅಪ್ಪಣೆ ಕೊಟ್ಟನು. ಐಗುಪ್ತ್ಯರು ವೇಗದಿಂದ ಮುನ್ನುಗ್ಗಿದರು. ಆದರೆ ಅವರು ಇಸ್ರಾಯೇಲ್ಯರ ಹಿಂದಣ ದಳವನ್ನು ಆಕ್ರಮಿಸುವ ಮುಂಚೆ ಅವರ ಹುಚ್ಚು ಓಟ ಗಕ್ಕನೆ ನಿಂತುಬಿಟ್ಟಿತು. ಅವರ ರಥಗಳಿಗೆ ಮುಂದೆ ಚಲಿಸಲಾಗಲಿಲ್ಲ, ಏಕೆಂದರೆ ಯೆಹೋವನು ಅವುಗಳ ಚಕ್ರಗಳನ್ನೇ ತೆಗೆದುಬಿಟ್ಟಿದ್ದನು.​—⁠ವಿಮೋ. 14:​23-25; 15:⁠9.

ಇಲ್ಲಿ ಐಗುಪ್ತ್ಯರು ತಮ್ಮ ಜಖಂಗೊಂಡ ರಥಗಳೊಂದಿಗೆ ಪರದಾಡುತ್ತಿದ್ದಾಗ, ಅಲ್ಲಿ ಇಸ್ರಾಯೇಲ್ಯರು ಪೂರ್ವತೀರವನ್ನು ತಲಪಿ ಬಿಟ್ಟಿದ್ದರು. ಮೋಶೆ ಈಗ ಕೆಂಪು ಸಮುದ್ರದ ಮೇಲೆ ತನ್ನ ಕೈಚಾಚಿದನು. ಆಗ ಯೆಹೋವನು ಗೋಡೆಗಳಂತೆ ನಿಂತಿದ್ದ ನೀರು ಪುನಃ ಹರಿಯುವಂತೆ ಮಾಡಿದನು. ಲಕ್ಷಗಟ್ಟಲೆ ಟನ್ನುಗಳಷ್ಟಿದ್ದ ನೀರು ಫರೋಹ ಮತ್ತವನ ಸೈನಿಕರ ಮೇಲೆ ರಭಸವಾಗಿ ಮುನ್ನುಗ್ಗಿ ಅವರನ್ನು ಮುಳುಗಿಸಿಬಿಟ್ಟಿತು. ಆ ಶತ್ರುಗಳಲ್ಲಿ ಯಾರೂ ಬದುಕಿ ಉಳಿಯಲಿಲ್ಲ. ಇಸ್ರಾಯೇಲ್ಯರೀಗ ಸ್ವತಂತ್ರರು!​—⁠ವಿಮೋ. 14:​26-28; ಕೀರ್ತ. 136:​13-15.

ಈ ಘಟನೆಯ ಸುದ್ದಿ ಕೇಳಿ ಆಸುಪಾಸಿನ ರಾಷ್ಟ್ರಗಳಲ್ಲಿ ಹುಟ್ಟಿದ ಭೀತಿಯು ಬಹುಕಾಲ ಉಳಿಯಿತು. (ವಿಮೋ. 15:​14-16) ನಾಲ್ವತ್ತು ವರ್ಷಗಳ ನಂತರ ಯೆರಿಕೋವಿನ ರಾಹಾಬಳು ಇಸ್ರಾಯೇಲಿನ ಇಬ್ಬರು ಪುರುಷರಿಗೆ ಹೇಳಿದ್ದು: ‘ನಿಮ್ಮ ನಿಮಿತ್ತ ನಮಗೆ ಮಹಾಭೀತಿಯುಂಟಾಗಿದೆ; ನೀವು ಐಗುಪ್ತದಿಂದ ಹೊರಟು ಬಂದ ಮೇಲೆ ಯೆಹೋವನು ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟದ್ದನ್ನೂ ಕೇಳಿದ್ದೇವೆ.’ (ಯೆಹೋ. 2:​9, 10) ಆ ಜನರು ವಿಧರ್ಮಿಗಳಾಗಿದ್ದರೂ ಯೆಹೋವನು ತನ್ನ ಜನರನ್ನು ಹೇಗೆ ಬಿಡುಗಡೆಗೊಳಿಸಿದ್ದನು ಎಂಬದನ್ನು ಅವರು ಮರೆತಿರಲಿಲ್ಲ. ಇಸ್ರಾಯೇಲ್ಯರಿಗಾದರೋ ಆತನನ್ನು ಮರೆಯದಿರಲು ಖಂಡಿತವಾಗಿ ಇನ್ನೂ ಹೆಚ್ಚಿನ ಕಾರಣಗಳಿದ್ದವು.

‘ಅವರನ್ನು ತನ್ನ ಕಣ್ಣುಗುಡ್ಡಿನಂತೆ ಕಾಪಾಡಿದನು’

ಕೆಂಪು ಸಮುದ್ರವನ್ನು ದಾಟಿದ ಬಳಿಕ ಇಸ್ರಾಯೇಲ್ಯರು “ಘೋರವಾದ ಮಹಾರಣ್ಯ”ವಾದ ಸೀನಾಯಿ ಮರುಭೂಮಿಯನ್ನು ಪ್ರವೇಶಿಸಿದರು. ಅಷ್ಟೊಂದು ದೊಡ್ಡ ಜನಸಮೂಹಕ್ಕೆ ಬೇಕಾದಷ್ಟು ಆಹಾರವಿಲ್ಲದ ಮತ್ತು ‘ನೀರು ಬತ್ತಿಹೋದ ಆ ಭೂಮಿಯನ್ನು’ ಅವರು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದಾಗ ಯೆಹೋವನು ಅವರ ಕೈಬಿಡಲಿಲ್ಲ. ಮೋಶೆ ನೆನಪಿಸಿಕೊಳ್ಳುವುದು: ‘ಯೆಹೋವನು ಇಸ್ರಾಯೇಲ್ಯರನ್ನು ಶೂನ್ಯವೂ ಭಯಂಕರವೂ ಆಗಿರುವ ಮರಳುಕಾಡಿನಲ್ಲಿ ಕಂಡು ಪರಾಮರಿಸಿ ಪ್ರೀತಿಯಿಂದ ಆವರಿಸಿಕೊಂಡು ಕಣ್ಣುಗುಡ್ಡಿನಂತೆ ಕಾಪಾಡಿದನು.’ (ಧರ್ಮೋ. 8:​15, 16; 32:10) ದೇವರು ಅವರನ್ನು ಹೇಗೆ ಪರಾಮರಿಸಿದನು?

ಯೆಹೋವನು ಅವರಿಗೆ ‘ಆಕಾಶದಿಂದ ಆಹಾರವನ್ನು’ ಅಂದರೆ ಮನ್ನವನ್ನು ದಯಪಾಲಿಸಿದನು. ಅದು “ಅರಣ್ಯದ ನೆಲದಲ್ಲಿ” ಅದ್ಭುತಕರವಾಗಿ ದೊರಕುತ್ತಿತ್ತು. (ವಿಮೋ. 16:​4, 14, 15, 35) “ಗಟ್ಟಿಯಾದ ಬಂಡೆಯೊಳಗಿಂದ” ನೀರು ಬರುವಂತೆಯೂ ಯೆಹೋವನು ಮಾಡಿದನು. ಅವರು ಅರಣ್ಯದಲ್ಲಿ ಕಳೆದ 40 ವರುಷಗಳಲ್ಲಿ ದೇವರ ಆಶೀರ್ವಾದದಿಂದಾಗಿ ಅವರ ಉಡುಪು ಜೀರ್ಣವಾಗಲಿಲ್ಲ, ಕಾಲುಗಳು ಬಾತುಹೋಗಲಿಲ್ಲ. (ಧರ್ಮೋ. 8:⁠4) ಇದಕ್ಕೆ ಪ್ರತಿಯಾಗಿ ಯೆಹೋವನು ಅವರಿಂದೇನು ಬಯಸಿದ್ದನು? ಮೋಶೆ ಇಸ್ರಾಯೇಲ್ಯರಿಗಂದದ್ದು: ‘ನೀವು ಬಹು ಜಾಗರೂಕತೆಯಿಂದ ನಿಮ್ಮನಿಮ್ಮ ಮನಸ್ಸುಗಳನ್ನು ಕಾಪಾಡಿಕೊಳ್ಳುವವರಾಗಿ ನೀವು ನೋಡಿದ ಸಂಗತಿಗಳನ್ನು ಎಷ್ಟುಮಾತ್ರವೂ ಮರೆಯದೆ ಜೀವದಿಂದಿರುವ ವರೆಗೂ ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.’ (ಧರ್ಮೋ. 4:⁠9) ಯೆಹೋವನ ರಕ್ಷಣಾಕಾರ್ಯಗಳನ್ನು ಇಸ್ರಾಯೇಲ್ಯರು ಕೃತಜ್ಞತೆಯಿಂದ ನೆನಪಿನಲ್ಲಿಟ್ಟುಕೊಂಡಿದ್ದರೆ ಅವರು ಯಾವಾಗಲೂ ಆತನನ್ನೇ ಸೇವಿಸುತ್ತಿದ್ದರು ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗುತ್ತಿದ್ದರು. ಆದರೆ ಇಸ್ರಾಯೇಲ್ಯರು ಏನು ಮಾಡಿದರು?

ಮರೆವು ಕೃತಘ್ನತೆಗೆ ನಡಿಸುತ್ತದೆ

ಮೋಶೆ ಹೇಳಿದ್ದು: “ನಿಮ್ಮನ್ನು ಹುಟ್ಟಿಸಿದ ತಂದೆಯಂತಿರುವ ಶರಣನನ್ನು ನೀವು ನೆನಸಲಿಲ್ಲ . . . ದೇವರನ್ನು ಮರೆತು ಬಿಟ್ಟಿರಿ.” (ಧರ್ಮೋ. 32:18) ಕೆಂಪು ಸಮುದ್ರದ ಬಳಿಯಲ್ಲಿ ಯೆಹೋವನು ನಡಿಸಿದ ಮಹತ್ಕಾರ್ಯಗಳನ್ನು, ಅರಣ್ಯದಲ್ಲಿ ಆ ಜನಾಂಗ ಬದುಕಿ ಉಳಿಯುವಂತೆ ಮಾಡಿದ ಒದಗಿಸುವಿಕೆಗಳನ್ನು ಮತ್ತು ಆತನು ಮಾಡಿದ ಉಳಿದೆಲ್ಲಾ ಒಳ್ಳೇ ವಿಷಯಗಳನ್ನು ಇಸ್ರಾಯೇಲ್ಯರು ಬೇಗನೆ ಮರೆತು ಬಿಟ್ಟರು. ಅವರು ದಂಗೆಕೋರರಾದರು.

ಒಂದು ಸಂದರ್ಭದಲ್ಲಿ, ನೀರನ್ನು ಪಡೆಯಲು ಯಾವುದೇ ದಾರಿಯಿಲ್ಲ ಎಂದೆಣಿಸುತ್ತಾ ಅವರು ಮೋಶೆಯನ್ನು ನಿಂದಿಸಿದರು. (ಅರ. 20:​2-5) ಯಾವುದನ್ನು ತಿಂದು ಅವರು ಜೀವದಿಂದುಳಿದರೋ ಅದೇ ಮನ್ನದ ಕುರಿತು ದೂರುತ್ತಾ ಅವರಂದದ್ದು: ‘ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಯಿತು.’ (ಅರ. 21:⁠5) ಅವರು ದೇವರ ನಿರ್ಣಯಗಳನ್ನು ಪ್ರಶ್ನಿಸಿದರು ಮತ್ತು ಮೋಶೆ ತಮ್ಮ ನಾಯಕನಾಗಿ ಮುಂದುವರಿಯುವುದು ಅವರಿಗೆ ಇಷ್ಟವಿರಲಿಲ್ಲ. ಅವರಂದದ್ದು: “ನಾವು ಐಗುಪ್ತದೇಶದಲ್ಲಿಯೇ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಈ ಅರಣ್ಯದಲ್ಲಿಯಾದರೂ ಸತ್ತಿದ್ದರೆ ಮೇಲಾಗಿತ್ತು. . . . ನಾವು ನಾಯಕನನ್ನು ನೇಮಿಸಿಕೊಂಡು ಐಗುಪ್ತದೇಶಕ್ಕೆ ತಿರಿಗಿ ಹೋಗೋಣ.”​—⁠ಅರ. 14:​2-4.

ಇಸ್ರಾಯೇಲ್ಯರು ಅವಿಧೇಯರಾದಾಗ ಯೆಹೋವನಿಗೆ ಹೇಗನಿಸಿತು? ಆ ಘಟನೆಗಳನ್ನು ಮರುಜ್ಞಾಪಿಸಿಕೊಳ್ಳುತ್ತಾ ಅನಂತರ ಕೀರ್ತನೆಗಾರನೊಬ್ಬನು ಅಂದದ್ದು: ‘ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ ಅಲ್ಲಿ ಆತನನ್ನು ನೋಯಿಸಿದರು. ಆತನನ್ನು ಪದೇಪದೇ ಪರೀಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು. ಅವರು ಆತನ ಭುಜಬಲವನ್ನೂ ಶತ್ರುಗಳಿಂದ ಬಿಡಿಸಿದ ಸಮಯವನ್ನೂ ಆತನು ಐಗುಪ್ತದಲ್ಲಿ ನಡೆಸಿದ ಮಹತ್ಕಾರ್ಯಗಳನ್ನೂ ಮರೆತುಬಿಟ್ಟರು.’ (ಕೀರ್ತ. 78:​40-43) ಹೌದು, ಇಸ್ರಾಯೇಲ್ಯರ ಮರೆವು ಯೆಹೋವನನ್ನು ತುಂಬ ನೋಯಿಸಿತು.

ಯೆಹೋವನನ್ನು ಮರೆಯದಿದ್ದ ಇಬ್ಬರು ಪುರುಷರು

ಆದರೆ ಕೆಲವು ಇಸ್ರಾಯೇಲ್ಯರು ಯೆಹೋವನನ್ನು ಮರೆಯಲಿಲ್ಲ. ಅವರಲ್ಲಿಬ್ಬರು ಯೆಹೋಶುವ ಮತ್ತು ಕಾಲೇಬರಾಗಿದ್ದರು. ವಾಗ್ದತ್ತ ದೇಶವನ್ನು ಸಂಚರಿಸಿ ನೋಡುವಂತೆ ಕಾದೇಶ್‌ಬರ್ನೇಯದಿಂದ ಕಳುಹಿಸಲಾದ 12 ಮಂದಿ ಗೂಢಚಾರರಲ್ಲಿ ಇವರಿದ್ದರು. ಉಳಿದ ಹತ್ತು ಮಂದಿ ನಕಾರಾತ್ಮಕ ವರದಿ ಒಪ್ಪಿಸಿದರೂ ಯೆಹೋಶುವ ಮತ್ತು ಕಾಲೇಬರು ಜನರಿಗಂದದ್ದು: “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು; ಅದು ಹಾಲೂ ಜೇನೂ ಹರಿಯುವ ದೇಶ; ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಅದರಲ್ಲಿ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು; ಹೀಗಿರುವದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ.” ಜನಸಮೂಹದವರೆಲ್ಲರೂ ಈ ಮಾತುಗಳನ್ನು ಕೇಳಿ, ಯೆಹೋಶುವ ಮತ್ತು ಕಾಲೇಬರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮಾತಾಡಿಕೊಂಡರು. ಆದರೆ ಯೆಹೋಶುವ ಮತ್ತು ಕಾಲೇಬರು ಯೆಹೋವನ ಮೇಲೆ ಭರವಸೆಯಿಡುತ್ತಾ ದೃಢವಾಗಿ ನಿಂತರು.​—⁠ಅರ. 14:​6-10.

ವರ್ಷಗಳಾನಂತರ ಕಾಲೇಬನು ಯೆಹೋಶುವನಿಗಂದದ್ದು: “ಯೆಹೋವನ ಸೇವಕನಾದ ಮೋಶೆಯು ಈ ದೇಶವನ್ನು ಸಂಚರಿಸಿನೋಡುವದಕ್ಕೋಸ್ಕರ ಕಾದೇಶ್‌ಬರ್ನೇಯದಿಂದ ನನ್ನನ್ನು ಕಳುಹಿಸಿದಾಗ ನನಗೆ ನಾಲ್ವತ್ತು ವರುಷವಾಗಿತ್ತು. ನನ್ನ ಜೊತೆಯಲ್ಲಿ ಬಂದಿದ್ದ ಸಹೋದರರು ಜನರನ್ನು ಎದೆಗೆಡಿಸಿದರು. ನಾನಾದರೋ ನನ್ನ ದೇವರಾದ ಯೆಹೋವನನ್ನೇ ಸಂಪೂರ್ಣವಾಗಿ ನಂಬಿಕೊಂಡು ಯಥಾರ್ಥವನ್ನೇ ಹೇಳಿದೆನು.” (ಯೆಹೋ. 14:​6-8) ದೇವರಲ್ಲಿ ಭರವಸೆಯಿಟ್ಟು ಕಾಲೇಬ ಮತ್ತು ಯೆಹೋಶುವರು ಅನೇಕ ಕಷ್ಟಗಳನ್ನು ತಾಳಿಕೊಂಡರು. ತಮ್ಮ ಜೀವಮಾನದಾದ್ಯಂತ ಯೆಹೋವನನ್ನು ಮರೆಯದಿರಲು ಅವರು ದೃಢನಿಶ್ಚಿತರಾಗಿದ್ದರು.

ಯೆಹೋವನು ತನ್ನ ಜನರನ್ನು ಫಲವತ್ತಾದ ದೇಶಕ್ಕೆ ಬರಮಾಡುವೆನೆಂದು ಕೊಟ್ಟ ಮಾತನ್ನು ಪೂರೈಸಿದ್ದನ್ನು ಅಂಗೀಕರಿಸುತ್ತಾ ಕಾಲೇಬ ಮತ್ತು ಯೆಹೋಶುವರು ಅದಕ್ಕಾಗಿ ಕೃತಜ್ಞತೆಯನ್ನೂ ತೋರಿಸಿದರು. ಹೌದು ಇಸ್ರಾಯೇಲ್ಯರು ಯೆಹೋವನಿಗೆ ಋಣಿಗಳಾಗಿರಬೇಕಿತ್ತು. ಯೆಹೋಶುವನು ಬರೆದದ್ದು: “ಯೆಹೋವನು ಇಸ್ರಾಯೇಲ್ಯರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಇಸ್ರಾಯೇಲ್ಯರಿಗೆ ಕೊಟ್ಟನು. . . . ಆತನು ಇಸ್ರಾಯೇಲ್ಯರಿಗೆ ಮಾಡಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲಾ ನೆರವೇರಿದವು.” (ಯೆಹೋ. 21:​43, 45) ಇಂದು ನಾವು, ಕಾಲೇಬ ಮತ್ತು ಯೆಹೋಶುವರಂತೆ ಹೇಗೆ ಕೃತಜ್ಞತೆ ತೋರಿಸಬಹುದು?

ಕೃತಜ್ಞರಾಗಿರಿ

“ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” ಎಂದು ದೇವಭಯವುಳ್ಳ ವ್ಯಕ್ತಿಯೊಬ್ಬನು ಒಮ್ಮೆ ಕೇಳಿದನು. (ಕೀರ್ತ. 116:12) ದೇವರು ಒದಗಿಸಿರುವ ಭೌತಿಕ ಆಶೀರ್ವಾದಗಳು, ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ನಮ್ಮ ರಕ್ಷಣೆಗಾಗಿ ಆತನು ಏರ್ಪಡಿಸಿರುವ ಸಾಧನ ಇವೆಲ್ಲವುಗಳಿಗಾಗಿ ನಾವು ಯೆಹೋವನಿಗೆ ಸಲ್ಲಿಸಬೇಕಾದ ಋಣ ಎಷ್ಟಿದೆಯೆಂದರೆ ಅದನ್ನು ತೀರಿಸಲು ಅನಂತಜೀವನವೂ ಸಾಲದು. ಆದರೆ ನಾವೆಲ್ಲರೂ ಕೃತಜ್ಞತೆಯನ್ನಂತೂ ಖಂಡಿತ ತೋರಿಸಬಹುದು.

ಸಮಸ್ಯೆಗಳನ್ನು ದೂರವಿರಿಸಲು ಯೆಹೋವನ ಸಲಹೆ ನಿಮಗೆ ನೆರವು ನೀಡಿದೆಯೋ? ಆತನ ಕ್ಷಮೆ ಶುದ್ಧ ಮನಸ್ಸಾಕ್ಷಿಯನ್ನು ಪುನಃ ಪಡೆಯುವಂತೆ ನಿಮಗೆ ಸಾಧ್ಯಮಾಡಿದೆಯೋ? ದೇವರ ಆ ಕೃತ್ಯಗಳಿಂದ ಸಿಗುವ ಪ್ರಯೋಜನಗಳು ಬಹುಕಾಲ ಬಾಳುತ್ತವೆ. ಹಾಗೆಯೇ ಆತನ ಕಡೆಗಿನ ನಿಮ್ಮ ಕೃತಜ್ಞತೆಯೂ ಬಹಳ ಸಮಯ ಬಾಳಬೇಕು. 14 ವರ್ಷ ವಯಸ್ಸಿನ ಸ್ಯಾಂಡ್ರ ಎಂಬಾಕೆಯು ಗುರುತರವಾದ ಸಮಸ್ಯೆಯನ್ನು ಎದುರಿಸುತ್ತಿದ್ದಳು. ಆದರೆ ಯೆಹೋವನ ಸಹಾಯದಿಂದ ಆಕೆ ಅವುಗಳನ್ನು ಜಯಿಸಿದಳು. ಆಕೆ ಹೇಳುವುದು: “ಸಹಾಯಕ್ಕಾಗಿ ನಾನು ಯೆಹೋವನ ಬಳಿ ಬೇಡಿದೆ ಮತ್ತು ಆತನು ಸಹಾಯ ಮಾಡಿದ ವಿಧ ನನ್ನನ್ನು ತುಂಬ ಪ್ರಭಾವಿಸಿದೆ. ‘ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು’ ಎಂಬ ಜ್ಞಾನೋಕ್ತಿ 3:​5, 6ರ ಮಾತುಗಳನ್ನು ನನ್ನ ತಂದೆ ಯಾವಾಗಲೂ ಏಕೆ ಹೇಳುತ್ತಿದ್ದರು ಎಂಬುದು ನನಗೀಗ ಅರ್ಥವಾಗುತ್ತಿದೆ. ಯೆಹೋವನು ಈ ತನಕ ನನಗೆ ಸಹಾಯಮಾಡಿದಂತೆ ಮುಂದೆಯೂ ಮಾಡುವನೆಂಬ ಭರವಸೆ ನನಗಿದೆ.’

ಯೆಹೋವನನ್ನು ಮರೆತಿಲ್ಲ ಎಂದು ತೋರಿಸಲು ತಾಳಿಕೊಳ್ಳಿರಿ

ಯೆಹೋವನನ್ನು ಮರೆಯದೇ ಇರುವುದರೊಂದಿಗೆ ಸಂಬಂಧಿಸಿದ ಇನ್ನೊಂದು ಗುಣವನ್ನು ಬೈಬಲ್‌ ಎತ್ತಿತೋರಿಸುತ್ತದೆ: “ಆ ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.” (ಯಾಕೋ. 1:⁠4) ‘ಸರ್ವಸುಗುಣವುಳ್ಳವರು’ ಆಗಿರುವುದರಲ್ಲಿ ಏನು ಒಳಗೂಡಿದೆ? ನಮಗೆ ಬರುವ ಕಷ್ಟಗಳನ್ನು ಜಯಿಸಲು ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಳ್ಳುವುದೇ. ಇಂತಹ ಗುಣಗಳಲ್ಲದೆ ಯೆಹೋವನಲ್ಲಿ ಭರವಸೆ ಮತ್ತು ಆ ಕಷ್ಟಗಳನ್ನು ತಾಳಿಕೊಳ್ಳಬೇಕೆಂಬ ದೃಢಸಂಕಲ್ಪ ನಮಗಿರಬೇಕು. ನಂಬಿಕೆಯ ಪರೀಕ್ಷೆಗಳು ಕೊನೆಗೊಳ್ಳುವುದಂತೂ ಖಂಡಿತ. ಆದರೆ ನಾವು ತಾಳಿಕೊಂಡರೆ ಮಾತ್ರ ಆ ಪರೀಕ್ಷೆಗಳು ಕೊನೆಗೊಳ್ಳುವಾಗ ನಮಗೆ ಬಹಳಷ್ಟು ಸಂತೃಪ್ತಿ ಸಿಗುವುದು.​—⁠1 ಕೊರಿಂ. 10:⁠13.

ಯೆಹೋವನನ್ನು ದೀರ್ಘಕಾಲದಿಂದಲೂ ಸೇವಿಸುತ್ತಿರುವವನೊಬ್ಬನು, ಗಂಭೀರ ಆರೋಗ್ಯ ಸಮಸ್ಯೆಗಳ ಮಧ್ಯೆಯೂ ತನಗೆ ತಾಳಿಕೊಳ್ಳಲು ಸಹಾಯ ಮಾಡಿದ ಸಂಗತಿಯ ಕುರಿತು ತಿಳಿಸುವುದು: “ನಾನೇನು ಇಚ್ಛಿಸುತ್ತೇನೋ ಅದನ್ನಲ್ಲ ಬದಲಾಗಿ ಯೆಹೋವನೇನು ಮಾಡುತ್ತಿದ್ದಾನೋ ಆ ಕುರಿತು ಯೋಚಿಸಲು ಪ್ರಯತ್ನಿಸುತ್ತೇನೆ. ಸಮಗ್ರತೆಯ ಅರ್ಥ, ನಾನು ನನ್ನ ದೃಷ್ಟಿಯನ್ನು ನನ್ನ ಅಭಿಲಾಷೆಗಳ ಮೇಲಲ್ಲ ಬದಲಾಗಿ ದೇವರ ಉದ್ದೇಶಗಳ ಮೇಲೆ ಕೇಂದ್ರೀಕರಿಸುವುದಾಗಿದೆ. ತಾಪತ್ರಯಗಳನ್ನು ಎದುರಿಸುವಾಗ ‘ನನಗೇ ಯಾಕೆ ಹೀಗೆ ಆಗುತ್ತಿದೆ ಯೆಹೋವನೇ?’ ಎಂದು ನಾನು ಹೇಳುವುದಿಲ್ಲ. ಅನಿರೀಕ್ಷಿತವಾಗಿ ಯಾವುದೇ ಸಮಸ್ಯೆಯೆದ್ದರೂ ಆತನ ಸೇವೆಯನ್ನು ಮುಂದುವರಿಸುತ್ತಾ ಆತನಿಗೇ ಅಂಟಿಕೊಂಡಿರುತ್ತೇನೆ.”

ಇಂದು ಕ್ರೈಸ್ತ ಸಭೆಯು “ಆತ್ಮ ಮತ್ತು ಸತ್ಯದಿಂದ” ಯೆಹೋವನನ್ನು ಆರಾಧಿಸುತ್ತದೆ. (ಯೋಹಾ. 4:​23, 24, NW) ಒಂದು ಗುಂಪಾಗಿ ನಿಜ ಕ್ರೈಸ್ತರು ಇಸ್ರಾಯೇಲ್ಯರಂತೆ ದೇವರನ್ನು ಎಂದೂ ಮರೆಯರು. ಆದರೆ ಕ್ರೈಸ್ತ ಸಭೆಯ ಭಾಗವಾಗಿರುವುದು ತಾನೇ ನಾವು ವೈಯಕ್ತಿಕವಾಗಿ ಸಮಗ್ರತೆಯನ್ನು ಕಾಪಾಡಿಕೊಳ್ಳುವೆವು ಎಂಬುದಕ್ಕೆ ಖಾತ್ರಿಯಾಗಿರುವುದಿಲ್ಲ. ಕಾಲೇಬ ಮತ್ತು ಯೆಹೋಶುವರಂತೆ ನಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನ ಸೇವೆಯಲ್ಲಿ ಕೃತಜ್ಞತೆ ಮತ್ತು ತಾಳ್ಮೆ ತೋರಿಸಬೇಕು. ಇದನ್ನು ಮಾಡಲು ನಮಗೆ ಸಕಾರಣಗಳಿವೆ. ಏಕೆಂದರೆ ಅಂತ್ಯದ ಈ ಕಷ್ಟಕರ ಸಮಯದಲ್ಲೂ ಯೆಹೋವನು ನಮ್ಮನ್ನು ವೈಯಕ್ತಿಕವಾಗಿ ಮಾರ್ಗದರ್ಶಿಸುತ್ತಿದ್ದಾನೆ ಮತ್ತು ಪರಾಮರಿಸುತ್ತಿದ್ದಾನೆ.

ಯೆಹೋಶುವನು ನಿಲ್ಲಿಸಿದ ಕಲ್ಲಿನ ಸ್ಮಾರಕದಂತೆ ದೇವರ ರಕ್ಷಣಾಕಾರ್ಯಗಳ ದಾಖಲೆಯು ಆತನೆಂದಿಗೂ ತನ್ನ ಜನರ ಕೈಬಿಡನು ಎಂಬ ಆಶ್ವಾಸನೆ ಕೊಡುತ್ತದೆ. ಆದುದರಿಂದ ಕೀರ್ತನೆಗಾರನ ಈ ಭಾವನೆಗಳು ನಿಮ್ಮಲ್ಲೂ ಇರಲಿ. ಅವನಂದದ್ದು: “ಯೆಹೋವನ ಕೃತ್ಯಗಳನ್ನು ವರ್ಣಿಸುವೆನು; ಪೂರ್ವದಿಂದ ನೀನು ನಡಿಸಿದ ಅದ್ಭುತಗಳನ್ನು ನೆನಪು ಮಾಡಿಕೊಳ್ಳುವೆನು. ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.”​—⁠ಕೀರ್ತ. 77:​11, 12.

[ಪುಟ 7ರಲ್ಲಿರುವ ಚಿತ್ರ]

ಇಡೀ ಜನಾಂಗವು ‘ನೀರು ಬತ್ತಿಹೋದ ಭೂಮಿಯನ್ನು’ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಿತ್ತು

[ಪುಟ 7ರಲ್ಲಿರುವ ಚಿತ್ರ]

Pictorial Archive (Near Eastern History) Est.

[ಪುಟ 8ರಲ್ಲಿರುವ ಚಿತ್ರ]

Pictorial Archive (Near Eastern History) Est.

[ಪುಟ 8ರಲ್ಲಿರುವ ಚಿತ್ರ]

ಇಸ್ರಾಯೇಲ್ಯರು ಕಾದೇಶ್‌ಬರ್ನೇಯದಲ್ಲಿ ಪಾಳೆಯಹೂಡಿದಾಗ 12 ಮಂದಿ ಗೂಢಚಾರರನ್ನು ವಾಗ್ದತ್ತ ದೇಶಕ್ಕೆ ಕಳುಹಿಸಲಾಯಿತು

[ಪುಟ 9ರಲ್ಲಿರುವ ಚಿತ್ರ]

ಹಲವಾರು ವರ್ಷಗಳನ್ನು ಅರಣ್ಯದಲ್ಲಿ ಕಳೆದ ಇಸ್ರಾಯೇಲ್ಯರು ಫಲವತ್ತಾದ ವಾಗ್ದತ್ತ ದೇಶಕ್ಕಾಗಿ ಕೃತಜ್ಞರಾಗಿರಬಹುದಿತ್ತು

[ಪುಟ 9ರಲ್ಲಿರುವ ಚಿತ್ರ]

Pictorial Archive (Near Eastern History) Est.

[ಪುಟ 10ರಲ್ಲಿರುವ ಚಿತ್ರ]

ಯೆಹೋವನ ಉದ್ದೇಶಗಳ ಮೇಲೆ ಗಮನ ಕೇಂದ್ರೀಕರಿಸುವಲ್ಲಿ ನಾವು ಯಾವುದೇ ಸವಾಲುಗಳನ್ನು ತಾಳಿಕೊಳ್ಳಬಹುದು