ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನ ದೂತನು ಸುತ್ತಲೂ ದಂಡಿಳಿಸಿ ಕಾವಲಾಗಿರುತ್ತಾನೆ’

‘ಯೆಹೋವನ ದೂತನು ಸುತ್ತಲೂ ದಂಡಿಳಿಸಿ ಕಾವಲಾಗಿರುತ್ತಾನೆ’

‘ಯೆಹೋವನ ದೂತನು ಸುತ್ತಲೂ ದಂಡಿಳಿಸಿ ಕಾವಲಾಗಿರುತ್ತಾನೆ’

ಕ್ರಿಸ್ಟಬೆಲ್‌ ಕೊನೆಲ್‌ ಅವರು ಹೇಳಿದಂತೆ

ಕ್ರಿಸ್ಟೊಫರ್‌ ಕೇಳುತ್ತಿದ್ದ ಬೈಬಲ್‌ ಪ್ರಶ್ನೆಗಳನ್ನು ಉತ್ತರಿಸುವುದರಲ್ಲೇ ಮುಳುಗಿಹೋಗಿದ್ದೆವು. ರಾತ್ರಿ ತುಂಬ ಹೊತ್ತಾಗಿರುವುದಾಗಲಿ, ಕ್ರಿಸ್ಟೊಫರ್‌ ಕಿಟಕಿಯಿಂದ ಆಗಾಗ್ಗೆ ಹೊರಗೆ ನೋಡುತ್ತಿರುವುದಾಗಲಿ ನಮ್ಮ ಗಮನಕ್ಕೆ ಬರಲೇ ಇಲ್ಲ. ಕೊನೆಯಲ್ಲಿ ಅವನು ನಮ್ಮ ಕಡೆಗೆ ತಿರುಗಿ ಹೇಳಿದ್ದು: “ನೀವೀಗ ಹೊರಡಲೇನೂ ಅಪಾಯವಿಲ್ಲ.” ಅಷ್ಟನ್ನು ಹೇಳಿ ಅವನು, ನಮ್ಮ ಸೈಕಲ್‌ಗಳನ್ನಿಟ್ಟಿದ್ದ ಸ್ಥಳಕ್ಕೆ ನಮ್ಮೊಟ್ಟಿಗೆ ಬಂದು ಬೀಳ್ಕೊಟ್ಟನು. ಆದರೆ ಅವನಿಗೆ ಕಿಟಕಿಯಿಂದ ಕಾಣುತ್ತಿದ್ದ ಅಪಾಯಕಾರಿ ಸನ್ನಿವೇಶವಾದರೂ ಏನು?

ನಾನು 1927ರಲ್ಲಿ ಇಂಗ್ಲೆಂಡಿನ ಶೆಫಿಲ್ಡ್‌ನಲ್ಲಿ ಹುಟ್ಟಿದೆ. ಎರಡನೇ ಲೋಕ ಯುದ್ಧದ ಸಮಯದಲ್ಲಿ ನಮ್ಮ ಮನೆ ಮೇಲೆ ಬಾಂಬ್‌ ದಾಳಿ ನಡೆದದ್ದರಿಂದ ನನ್ನನ್ನು ಅಜ್ಜಿಯೊಂದಿಗಿರುವಂತೆ ಕಳುಹಿಸಲಾಯಿತು. ಅಲ್ಲಿ ನನ್ನ ಶಾಲಾ ವಿದ್ಯಾಭ್ಯಾಸ ಮುಂದುವರಿಸಿದೆ. ನಾನು ಹೋಗುತ್ತಿದ್ದ ಕಾನ್ವೆಂಟ್‌ ಶಾಲೆಯ ಕ್ರೈಸ್ತ ಸಂನ್ಯಾಸಿನಿಯರಿಗೆ ನಾನು, ಇಷ್ಟೊಂದು ದುಷ್ಟತನ ಮತ್ತು ಹಿಂಸಾಚಾರ ಏಕಿದೆ ಎಂದು ಯಾವಾಗಲೂ ಕೇಳುತ್ತಿದ್ದೆ. ಆದರೆ ಅವರಿಗಾಗಲಿ ಬೇರಾವ ಧಾರ್ಮಿಕ ವ್ಯಕ್ತಿಗಳಿಗಾಗಲಿ ನನ್ನ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರ ಕೊಡಲಾಗಲಿಲ್ಲ.

ಎರಡನೇ ಲೋಕ ಯುದ್ಧ ಮುಗಿದ ಬಳಿಕ ನಾನು ನರ್ಸ್‌ ತರಬೇತಿ ಪಡೆದುಕೊಂಡೆ. ತದನಂತರ ಪ್ಯಾಡಿಂಗ್‌ಟನ್‌ ಜನರಲ್‌ ಹಾಸ್ಪಿಟಲ್‌ನಲ್ಲಿ ಕೆಲಸಮಾಡಲು ಲಂಡನ್‌ಗೆ ಹೋದೆ. ಆದರೆ ಆ ನಗರದಲ್ಲೂ ಹಿಂಸಾಚಾರ ತುಂಬಿರುವುದನ್ನು ನೋಡಿದೆ. ನನ್ನ ಅಣ್ಣ ಕೊರಿಯನ್‌ ಯುದ್ಧಕ್ಕಾಗಿ ಹೋದ ಸ್ವಲ್ಪದರಲ್ಲೇ, ನಾನು ಕೆಲಸಮಾಡುತ್ತಿದ್ದ ಆಸ್ಪತ್ರೆಯ ಹೊರಗೆಯೇ ಇಬ್ಬರು ಹೊಡೆದಾಡುತ್ತಿರುವುದನ್ನು ನೋಡಿದೆ. ಹೊಡೆತ ತಿನ್ನುತ್ತಿದ್ದ ವ್ಯಕ್ತಿಗೆ ಯಾರೂ ಸಹಾಯ ಮಾಡಲಿಲ್ಲ. ಆ ಹೊಡೆದಾಟದಿಂದ ಅವನು ತನ್ನ ದೃಷ್ಟಿಯನ್ನೇ ಕಳೆದುಕೊಂಡನು. ಈ ಸಮಯದಷ್ಟಕ್ಕೆ ನಾನು ಮತ್ತು ನನ್ನ ಅಮ್ಮ ಪ್ರೇತಸಂಪರ್ಕದ ಕೂಟಗಳಿಗೆ ಹೋಗುತ್ತಿದ್ದೆವು. ಆದರೂ, ಇಷ್ಟೊಂದು ದುಷ್ಟತನ ಯಾಕಿದೆ ಎಂಬುದಕ್ಕೆ ನನಗೆ ಉತ್ತರ ಸಿಗಲೇ ಇಲ್ಲ.

ಬೈಬಲ್‌ ಅಧ್ಯಯನ ಮಾಡಲು ಉತ್ತೇಜನ

ಯೆಹೋವನ ಸಾಕ್ಷಿಯಾಗಿಬಿಟ್ಟಿದ್ದ ನನ್ನ ಹಿರಿಯಣ್ಣ ಜಾನ್‌ ಒಂದು ದಿನ ನಮ್ಮನ್ನು ಭೇಟಿಮಾಡಿದ. “ಈ ಎಲ್ಲಾ ಕೆಟ್ಟ ವಿಷಯಗಳು ಏಕೆ ನಡೆಯುತ್ತಿವೆ, ನಿನಗೆ ಗೊತ್ತಾ?” ಎಂದವನು ಕೇಳಿದ. “ಇಲ್ಲ” ಎಂದು ಹೇಳಿದೆ. ಅವನು ಬೈಬಲನ್ನು ತೆರೆದು ಪ್ರಕಟನೆ 12:​7-12ನ್ನು ಓದಿದ. ಸೈತಾನ ಮತ್ತವನ ದೆವ್ವಗಳೇ ಭೂಮಿಯಲ್ಲಿರುವ ದುಷ್ಟತನಕ್ಕೆ ಮುಖ್ಯಕಾರಣರೆಂದು ಆಗ ನನಗೆ ಗೊತ್ತಾಯಿತು. ಆದುದರಿಂದ ಸ್ವಲ್ಪ ಸಮಯದೊಳಗೆ ನಾನು ಅವನ ಮಾತಿನ ಮೇರೆಗೆ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡೆ. ಆದರೆ ನನಗೆ ಮನುಷ್ಯರ ಭಯ ಇದ್ದದ್ದರಿಂದ ದೀಕ್ಷಾಸ್ನಾನ ಪಡೆಯಲು ಹಿಂದೇಟು ಹಾಕಿದೆ.​—⁠ಜ್ಞಾನೋ. 29:⁠25.

ನನ್ನ ಅಕ್ಕ ಡೊರಥಿ ಕೂಡ ಸಾಕ್ಷಿ ಆಗಿಬಿಟ್ಟಿದ್ದಳು. ಆಕೆ ತನ್ನ ಭಾವೀ ಪತಿಯಾದ ಬಿಲ್‌ ರಾಬರ್ಟ್ಸ್‌ನೊಂದಿಗೆ, ನ್ಯೂ ಯಾರ್ಕ್‌ನಲ್ಲಿ (1953) ನಡೆದ ಅಂತಾರಾಷ್ಟ್ರೀಯ ಅಧಿವೇಶನದಿಂದ ಹಿಂದಿರುಗಿದಾಗ ನಾನು ಬೈಬಲನ್ನು ಅಧ್ಯಯನ ಮಾಡಿರುವುದಾಗಿ ಅವರಿಗೆ ಹೇಳಿದೆ. ಬಿಲ್‌ ನನಗೆ ಕೇಳಿದ್ದು: “ನೀನು ಎಲ್ಲಾ ವಚನಗಳನ್ನು ತೆರೆದು ನೋಡಿದೆಯಾ? ನಿನ್ನ ಪುಸ್ತಕದಲ್ಲಿ ಉತ್ತರಗಳಿಗೆ ಅಡಿಗೆರೆ ಹಾಕಿದ್ದಿಯಾ?” ನಾನು ಇಲ್ಲ ಎಂದಾಗ ಅವನಂದದ್ದು: “ಹಾಗಾದರೆ ನೀನು ಸರಿಯಾಗಿ ಅಧ್ಯಯನ ಮಾಡಿಯೇ ಇಲ್ಲ! ಆ ಸಹೋದರಿಯನ್ನು ಸಂಪರ್ಕಿಸಿ ಪುನಃ ಒಮ್ಮೆ ಅಧ್ಯಯನ ಆರಂಭಿಸು.” ಆ ಸಮಯದಷ್ಟಕ್ಕೆ ನನಗೆ ದೆವ್ವಗಳ ಕಾಟ ಆರಂಭವಾಯಿತು. ನನ್ನನ್ನು ಕಾಪಾಡುವಂತೆ ಮತ್ತು ಅವುಗಳ ಪ್ರಭಾವದಿಂದ ಬಿಡಿಸುವಂತೆ ಯೆಹೋವನ ಬಳಿ ಕೇಳುತ್ತಿದ್ದದ್ದು ನನಗಿನ್ನೂ ನೆನಪಿದೆ.

ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ನಲ್ಲಿ ಪಯನೀಯರ್‌ ಸೇವೆ

1954ರ ಜನವರಿ 16ರಂದು ನನ್ನ ದೀಕ್ಷಾಸ್ನಾನವಾಯಿತು. ಅದೇ ವರ್ಷದ ಮೇ ತಿಂಗಳಲ್ಲಿ ನನ್ನ ನರ್ಸಿಂಗ್‌ನ ಒಪ್ಪಂದ ಕೊನೆಗೊಂಡಿತು ಮತ್ತು ಜೂನ್‌ನಲ್ಲಿ ನಾನು ಪಯನೀಯರ್‌ ಸೇವೆ ಆರಂಭಿಸಿದೆ. ಎಂಟು ತಿಂಗಳ ಬಳಿಕ ನನ್ನನ್ನು ಸ್ಕಾಟ್ಲೆಂಡ್‌ನ ಗ್ರ್ಯಾಂಗ್‌ಮೌತ್‌ಗೆ ವಿಶೇಷ ಪಯನೀಯರಳಾಗಿ ಕಳುಹಿಸಲಾಯಿತು. ಅಂಥ ಗ್ರಾಮೀಣ ಟೆರಿಟೊರಿಯಲ್ಲೂ ಯೆಹೋವನ ದೂತರು ನನ್ನ ‘ಸುತ್ತಲೂ ದಂಡಿಳಿಸಿ ಕಾವಲಾಗಿದ್ದಾರೆ’ ಎಂಬುದರ ಅನುಭವ ನನಗಾಯಿತು.​—⁠ಕೀರ್ತ. 34:⁠7.

1956ರಲ್ಲಿ ಐರ್ಲೆಂಡ್‌ನಲ್ಲಿ ಸೇವೆ ಸಲ್ಲಿಸುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. ಇನ್ನಿಬ್ಬರು ಸಹೋದರಿಯರೊಂದಿಗೆ ನನ್ನನ್ನು ಗಾಲ್ವೆ ನಗರಕ್ಕೆ ನೇಮಿಸಲಾಯಿತು. ಪ್ರಥಮ ದಿನವೇ ನಾನೊಬ್ಬ ಪಾದ್ರಿಯನ್ನು ಭೇಟಿಯಾದೆ. ಈ ಭೇಟಿಯ ಬಳಿಕ ಕೆಲವು ನಿಮಿಷಗಳಲ್ಲಿ ಒಬ್ಬ ಪೊಲೀಸ್‌ ಬಂದು ನನ್ನನ್ನೂ ನನ್ನ ಜೊತೆಗಾರ್ತಿಯನ್ನೂ ಠಾಣೆಗೆ ಕರೆದೊಯ್ದ. ನಮ್ಮ ಹೆಸರು ಮತ್ತು ವಿಳಾಸಗಳನ್ನು ಪಡೆದು ಕೂಡಲೇ ಪೋನ್‌ ಮಾಡಲಾರಂಭಿಸಿದ. ಅವನು ಹೀಗೆ ಹೇಳುತ್ತಿದ್ದದ್ದು ನಮ್ಮ ಕಿವಿಗೆ ಬಿತ್ತು: “ಹೌದು ಫಾದರ್‌, ಅವರ ಮನೆ ಎಲ್ಲಿದೆಯೆಂದು ನನಗೆ ಸರಿಯಾಗಿ ಗೊತ್ತು.” ಅಂದರೆ, ನಮ್ಮನ್ನು ಹಿಡಿಯಲು ಪಾದ್ರಿಯೇ ಅವನನ್ನು ಕಳುಹಿಸಿದ್ದನು! ನಮ್ಮನ್ನು ಮನೆಯಿಂದ ಹೊರಗಟ್ಟುವಂತೆ ಮನೆ ಮಾಲಿಕನ ಮೇಲೆ ಒತ್ತಡಹೇರಲಾಯಿತು. ಆದ್ದರಿಂದ ಆ ಸ್ಥಳವನ್ನು ಬಿಡುವಂತೆ ಬ್ರಾಂಚ್‌ ಆಫೀಸ್‌ ನಮ್ಮನ್ನು ಕೇಳಿಕೊಂಡಿತು. ಅದರಂತೆ ನಾವು ಹೊರಟು ರೈಲ್ವೇ ನಿಲ್ದಾಣ ತಲುಪಿದೆವು. ತಲುಪುವಾಗ ಹತ್ತು ನಿಮಿಷ ತಡವಾಗಿತ್ತಾದರೂ ರೈಲುಗಾಡಿ ಇನ್ನೂ ಅಲ್ಲೇ ಇತ್ತು. ನಾವು ಆ ಗಾಡಿಯನ್ನು ಹತ್ತಿ ಹೊರಟುಹೋಗುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಒಬ್ಬ ವ್ಯಕ್ತಿ ಅಲ್ಲಿ ಕಾಯುತ್ತಾ ಇದ್ದನು. ಇದೆಲ್ಲಾ ನಾವು ಗಾಲ್ವೆಗೆ ಹೋಗಿ ಕೇವಲ ಮೂರು ವಾರಗಳಲ್ಲಿ ನಡೆಯಿತು!

ತದನಂತರ ನಮ್ಮನ್ನು ಲೈಮ್‌ರಿಕ್‌ ನಗರಕ್ಕೆ ನೇಮಿಸಲಾಯಿತು. ಆ ನಗರದಲ್ಲೂ ಕ್ಯಾಥೋಲಿಕ್‌ ಚರ್ಚ್‌ನ ಪ್ರಭಾವ ಜೋರಾಗಿಯೇ ಇತ್ತು. ಜನರ ಗುಂಪುಗಳು ಯಾವಾಗಲೂ ನಮ್ಮನ್ನು ಮೂದಲಿಸುತ್ತಿದ್ದವು. ಅನೇಕ ಜನರು ಬಾಗಿಲನ್ನು ತೆರೆಯಲೂ ಹೆದರುತ್ತಿದ್ದರು. ಒಂದು ವರ್ಷ ಹಿಂದೆ, ಹತ್ತಿರದ ಕ್ಲೂನ್‌ಲಾರಾ ಎಂಬ ಚಿಕ್ಕ ಪಟ್ಟಣದಲ್ಲಿ ಸಹೋದರನೊಬ್ಬನನ್ನು ಥಳಿಸಲಾಗಿತ್ತು. ಆದ್ದರಿಂದ, ಲೇಖನದ ಆರಂಭದಲ್ಲಿ ತಿಳಿಸಲಾದ ಕ್ರಿಸ್ಟೊಫರ್‌ ಎಂಬವನ ಭೇಟಿಯಾದಾಗ ನಮಗೆ ತುಂಬ ಖುಷಿಯಾಯಿತು. ಏಕೆಂದರೆ ಅವನಿಗಿದ್ದ ಬೈಬಲ್‌ ಪ್ರಶ್ನೆಗಳ ಚರ್ಚೆಗಾಗಿ ಪುನಃ ಬರುವಂತೆ ಅವನು ನಮ್ಮನ್ನು ಆಮಂತ್ರಿಸಿದನು. ಆ ಭೇಟಿಯ ಸಂದರ್ಭದಲ್ಲಿ ಪಾದ್ರಿಯೊಬ್ಬನು ಒಳಬಂದು ನಮ್ಮನ್ನು ಹೊರಗಟ್ಟುವಂತೆ ಕ್ರಿಸ್ಟೊಫರ್‌ನನ್ನು ಒತ್ತಾಯಿಸತೊಡಗಿದನು. ಇದಕ್ಕೊಪ್ಪದೇ ಅವನಂದದ್ದು: “ನನ್ನ ಮನೆಗೆ ಬರುವಂತೆ ಈ ಮಹಿಳೆಯರನ್ನು ನಾನೇ ಆಮಂತ್ರಿಸಿದ್ದೆ ಮತ್ತು ಅವರು ಒಳಬರುವ ಮುಂಚೆ ಬಾಗಿಲನ್ನು ತಟ್ಟಿ ಅನುಮತಿ ಕೇಳಿದ್ದರು. ನೀವಂತೂ ಬಾಗಿಲು ತಟ್ಟಲೂ ಇಲ್ಲ, ನಿಮ್ಮನ್ನು ಯಾರು ಆಮಂತ್ರಿಸಲೂ ಇಲ್ಲ.” ಸಿಟ್ಟಿನಿಂದ ಪಾದ್ರಿಯು ಅಲ್ಲಿಂದ ಹೊರನಡೆದನು.

ಆ ಪಾದ್ರಿ ತುಂಬ ಜನರನ್ನು ಒಟ್ಟುಗೂಡಿಸಿ ಕ್ರಿಸ್ಟೊಫರ್‌ನ ಮನೆಯ ಹೊರಗೆ ನಮಗಾಗಿ ಕಾಯುತ್ತಿರುವುದು ನಮಗೆ ಗೊತ್ತೇ ಇರಲಿಲ್ಲ. ಉದ್ರಿಕ್ತರಾಗಿದ್ದ ಆ ಜನರ ಗುಂಪನ್ನು ನೋಡಿಯೇ ಕ್ರಿಸ್ಟೊಫರ್‌ ಲೇಖನದ ಆರಂಭದಲ್ಲಿ ತಿಳಿಸಿದಂತೆ ವರ್ತಿಸಿದನು. ಅವರೆಲ್ಲರೂ ಹೊರಟು ಹೋಗುವ ತನಕ ನಾವು ಅಲ್ಲೇ ಇರುವಂತೆ ಆತ ಮಾಡಿದ. ಅವನಿಗೂ ಅವನ ಕುಟುಂಬಕ್ಕೂ ಆ ಪಟ್ಟಣವನ್ನು ಬಿಟ್ಟುಹೋಗುವಂತೆ ಬಲವಂತ ಮಾಡಲಾಯಿತು ಮತ್ತು ಅವರು ಇಂಗ್ಲೆಂಡಿಗೆ ಹೋದರೆಂಬ ಸುದ್ದಿ ನಮಗೆ ತದನಂತರ ಸಿಕ್ಕಿತು.

ಗಿಲ್ಯಡ್‌ ಆಮಂತ್ರಣ

1958ರಲ್ಲಿ ನ್ಯೂ ಯಾರ್ಕ್‌ನಲ್ಲಿ ನಡೆಯಲಿದ್ದ ‘ದೈವಿಕ ಚಿತ್ತ’ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹಾಜರಾಗಲು ನಾನು ಯೋಜನೆಗಳನ್ನು ಮಾಡುತ್ತಿದ್ದಾಗಲೇ ಗಿಲ್ಯಡ್‌ ಶಾಲೆಯ 33ನೇ ತರಗತಿಗೆ ಹಾಜರಾಗಲು ಆಮಂತ್ರಣ ಸಿಕ್ಕಿತು. ಅದು 1959ರಲ್ಲಿ ಆರಂಭವಾಗಲಿತ್ತು. ಆದ್ದರಿಂದ ಸಮ್ಮೇಳನದ ನಂತರ ಮನೆಗೆ ಹಿಂದಿರುಗುವ ಬದಲು ಆ ಶಾಲೆ ಆರಂಭವಾಗುವ ವರೆಗೆ ನಾನು ಕೆನಡದ ಒಂಟಾರಿಯೋದ ಕಾಲಿಂಗ್‌ವುಡ್‌ ಎಂಬಲ್ಲಿ ಸೇವೆಮಾಡಿದೆ. ಆದರೆ ಸಮ್ಮೇಳನದ ಸಮಯದಲ್ಲಿ ನನಗೆ ಎರಿಕ್‌ ಕೊನೆಲ್‌ ಎಂಬವರ ಪರಿಚಯವಾಯಿತು. ಅವರು 1957ರಲ್ಲಿ ಸತ್ಯಕ್ಕೆ ಬಂದಿದ್ದರು ಮತ್ತು 1958ರಲ್ಲಿ ಪಯನೀಯರ್‌ ಸೇವೆ ಆರಂಭಿಸಿದ್ದರು. ಸಮ್ಮೇಳನದ ನಂತರ ನಾನು ಕೆನಡದಲ್ಲಿ ಉಳಿದುಕೊಂಡಿದ್ದಾಗ ಪ್ರತಿದಿನ ಮತ್ತು ಗಿಲ್ಯಡ್‌ ತರಬೇತಿಯಾದ್ಯಂತ ಅವರು ನನಗೆ ಪತ್ರ ಬರೆಯುತ್ತಿದ್ದರು. ಗಿಲ್ಯಡ್‌ ಶಾಲೆ ಮುಗಿದ ನಂತರ ನಾವೇನು ಮಾಡುವೆವೋ ಎಂಬ ಯೋಚನೆ ನನ್ನಲ್ಲಿತ್ತು.

ಗಿಲ್ಯಡ್‌ ಶಾಲೆಗೆ ಹಾಜರಾಗಿದ್ದು ನನ್ನ ಜೀವನದಲ್ಲಿ ತುಂಬ ಮಹತ್ತ್ವದ ಸಂಗತಿಯಾಗಿತ್ತು. ನನ್ನ ಅಕ್ಕ ಡೊರಥಿ ಮತ್ತು ಭಾವ ಸಹ ಅದೇ ತರಗತಿಯಲ್ಲಿದ್ದರು. ಅವರನ್ನು ಪೋರ್ಚುಗಲ್‌ಗೆ ಮಿಷನೆರಿಗಳಾಗಿ ಹೋಗುವಂತೆ ನೇಮಿಸಲಾಯಿತು. ನನ್ನ ನೇಮಕ ಐರ್ಲೆಂಡ್‌ ಎಂದು ತಿಳಿದಾಗ ಚಕಿತಳಾದೆ. ಅಕ್ಕನೊಂದಿಗೆ ಹೋಗಲು ಆಗದೇ ಇದ್ದದ್ದಕ್ಕಾಗಿ ನನಗೆಷ್ಟು ಬೇಸರವಾಯಿತು! ನನ್ನಿಂದೇನಾದರೂ ತಪ್ಪಾಗಿರುವುದರಿಂದ ಅಲ್ಲಿಗೆ ಕಳುಹಿಸಲಾಗುತ್ತಿದೆಯೋ ಎಂದು ಗಿಲ್ಯಡ್‌ ಶಿಕ್ಷಕರೊಬ್ಬರನ್ನು ಕೇಳಿದೆ. ಅವರು “ಇಲ್ಲ” ಎಂದುತ್ತರಿಸುತ್ತಾ ಹೇಳಿದ್ದು: “ನೀನು ಮತ್ತು ನಿನ್ನ ಜೊತೆಗಾರ್ತಿ ಐಲೀನ್‌ ಮಾಓನಿ ಲೋಕದ ಯಾವುದೇ ಸ್ಥಳಕ್ಕೆ ಹೋಗಲು ಸಿದ್ಧರಿದ್ದದ್ದರಿಂದಲೇ ನಿಮ್ಮನ್ನು ಗಿಲ್ಯಡ್‌ ಶಾಲೆಗೆ ಆಮಂತ್ರಿಸಲಾಗಿತ್ತು.” ಈ ಸ್ಥಳಗಳಲ್ಲಿ ಐರ್ಲೆಂಡ್‌ ಕೂಡ ಒಂದು!

ವಾಪಸ್‌ ಐರ್ಲೆಂಡ್‌ಗೆ

ನಾನು 1959ರ ಆಗಸ್ಟ್‌ ತಿಂಗಳಲ್ಲಿ ಐರ್ಲೆಂಡ್‌ಗೆ ವಾಪಸಾದೆ ಮತ್ತು ನನ್ನನ್ನು ಡನ್‌ ಲೆರಿ ಸಭೆಗೆ ನೇಮಿಸಲಾಯಿತು. ಈಮಧ್ಯೆ ಎರಿಕ್‌ ಇಂಗ್ಲೆಂಡಿಗೆ ಹಿಂದಿರುಗಿದ್ದರು. ನಾನೀಗ ಇಂಗ್ಲೆಂಡಿಗೆ ಹತ್ತಿರದಲ್ಲೇ ಇದ್ದದ್ದರಿಂದ ಅವರಿಗೆ ತುಂಬ ಖುಷಿಯಾಯಿತು. ಅವರಿಗೂ ಮಿಷನೆರಿಯಾಗಲು ಮನಸ್ಸಿತ್ತು. ಸೊಸೈಟಿಯು ಇನ್ನೂ ಮಿಷನೆರಿಗಳನ್ನು ಐರ್ಲೆಂಡ್‌ಗೆ ಕಳುಹಿಸುತ್ತಿದ್ದದ್ದರಿಂದ ಅವರು ಅಲ್ಲಿ ಪಯನೀಯರರಾಗಲು ಯೋಚಿಸಿದರು. ಅವರು ಡನ್‌ ಲೆರಿಗೆ ಸ್ಥಳಾಂತರಿಸಿದರು ಮತ್ತು 1961ರಲ್ಲಿ ನಮ್ಮ ಮದುವೆಯಾಯಿತು.

ಆರು ತಿಂಗಳ ಬಳಿಕ ಎರಿಕ್‌ ಮೋಟರ್‌ಬೈಕ್‌ ಅಪಘಾತಕ್ಕೀಡಾದರು. ಅದು ತುಂಬ ಭೀಕರವಾಗಿತ್ತು ಮತ್ತು ಅವರ ತಲೆಬುರುಡೆಗೆ ಏಟುಬಿದ್ದಿತ್ತು. ಅವರನ್ನು ಬದುಕಿಸುವುದು ಕಷ್ಟವೆಂದು ವೈದ್ಯರಿಗನಿಸಿತು. ಅವರು ಆಸ್ಪತ್ರೆಯಲ್ಲಿ ಮೂರು ವಾರ ಇದ್ದರು. ತದನಂತರ ಅವರು ಗುಣಮುಖರಾಗುವ ವರೆಗೆ 5 ತಿಂಗಳುಗಳ ತನಕ ನಾನವರ ಆರೈಕೆ ಮಾಡಿದೆ. ನನ್ನಿಂದ ಸಾಧ್ಯವಿರುವಷ್ಟರ ಮಟ್ಟಿಗೆ ಶುಶ್ರೂಷೆಯನ್ನು ಮುಂದುವರಿಸಿದೆ.

1965ರಲ್ಲಿ ನಮ್ಮನ್ನು ವಾಯುವ್ಯ ಕರಾವಳಿಯ ರೇವು ಪಟ್ಟಣವಾದ ಸ್ಲಿಗೋ ಎಂಬಲ್ಲಿ, ಎಂಟು ಮಂದಿ ಪ್ರಚಾರಕರಿದ್ದ ಸಭೆಗೆ ನೇಮಿಸಲಾಯಿತು. ಮೂರು ವರ್ಷಗಳ ನಂತರ ತೀರಾ ಉತ್ತರಕ್ಕಿದ್ದ ಲಂಡನ್‌ಡೆರಿಯಲ್ಲಿನ ಚಿಕ್ಕ ಸಭೆಗೆ ಹೋದೆವು. ಒಂದು ದಿನ ನಾವು ಸೇವೆಯಿಂದ ಹಿಂದಿರುಗಿದಾಗ, ನಮ್ಮ ಮನೆ ಪಕ್ಕದ ರಸ್ತೆಯಾಚೆಗೆ ಮುಳ್ಳುತಂತಿಯ ಬೇಲಿ ಹಾಕಲಾಗಿರುವುದನ್ನು ಕಂಡೆವು. ಉತ್ತರ ಐರ್ಲೆಂಡ್‌ನ ಅಶಾಂತಿಯ ಅವಧಿ ಆರಂಭವಾಗಿತ್ತು. ಯುವಕರ ಗುಂಪುಗಳು ಕಾರ್‌ಗಳನ್ನು ಸುಟ್ಟುಹಾಕಿದವು. ನಗರವು ಈಗಾಗಲೇ ಪ್ರೊಟೆಸ್ಟಂಟ್‌ ಮತ್ತು ಕ್ಯಾಥೋಲಿಕ್‌ ಕ್ಷೇತ್ರಗಳಾಗಿ ವಿಭಜನೆಯಾಗಿತ್ತು. ನಗರದ ಒಂದು ಕ್ಷೇತ್ರದಿಂದ ಇನ್ನೊಂದಕ್ಕೆ ಕಾಲಿಡುವುದು ಅಪಾಯಕಾರಿಯಾಗಿತ್ತು.

ಅಶಾಂತಿಯ ಅವಧಿಯಲ್ಲಿ ಜೀವನ ಮತ್ತು ಸಾರುವಿಕೆ

ಆದರೆ ಶುಶ್ರೂಷೆಯ ನಿಮಿತ್ತ ನಾವು ಎಲ್ಲೆಡೆಯೂ ಹೋಗಬೇಕಾಗುತ್ತಿತ್ತು. ನಮ್ಮ ಸುತ್ತಲೂ ದೇವದೂತರು ದಂಡಿಳಿದು ಕಾವಲಾಗಿರುವುದು ನಮಗೆ ಪುನಃ ಭಾಸವಾಯಿತು. ನಾವು ಟೆರಿಟೊರಿಯಲ್ಲಿದ್ದಾಗ ದೊಂಬಿ ಗಲಭೆಗಳೇಳುತ್ತಿದ್ದಲ್ಲಿ, ಕೂಡಲೇ ಅಲ್ಲಿಂದ ಹೊರಟು ಪರಿಸ್ಥಿತಿ ತಣ್ಣಗಾದ ಬಳಿಕವೇ ಹಿಂದಿರುಗುತ್ತಿದ್ದೆವು. ಒಮ್ಮೆ ನಮ್ಮ ಅಪಾರ್ಟ್‌ಮೆಂಟ್‌ ಬಳಿ ಗಲಭೆ ಆರಂಭವಾಯಿತು. ಹತ್ತಿರದಲ್ಲೇ ಇದ್ದ ಪೇಂಟ್‌ ಅಂಗಡಿಯಿಂದ ಬೆಂಕಿಹೊತ್ತಿದ್ದ ಅವಶೇಷಗಳು ನಮ್ಮ ಕಿಟಕಿ-ಕಟ್ಟೆ ಮೇಲೆ ಬಿದ್ದವು. ನಾವು ವಾಸಿಸುತ್ತಿದ್ದ ಕಟ್ಟಡಕ್ಕೆ ಎಲ್ಲಿ ಬೆಂಕಿಹತ್ತುವುದೋ ಎಂಬ ಭೀತಿಯಿಂದ ರಾತ್ರಿ ನಮಗೆ ನಿದ್ದೆ ಬರುತ್ತಿರಲಿಲ್ಲ. 1970ರಲ್ಲಿ ನಾವು ಬೆಲ್‌ಫಾಸ್ಟ್‌ ನಗರಕ್ಕೆ ಸ್ಥಳಾಂತರಿಸಿದ ಬಳಿಕ, ಆ ಪೇಂಟ್‌ ಅಂಗಡಿಯ ಮೇಲೆ ಪೆಟ್ರೋಲ್‌ ಬಾಂಬ್‌ ಬಿದ್ದು, ನಾವು ಹಿಂದೆ ವಾಸಿಸುತ್ತಿದ್ದ ಆ ಇಡೀ ಕಟ್ಟಡ ಬೆಂಕಿಗೆ ಆಹುತಿಯಾಯಿತೆಂದು ನಮಗೆ ತಿಳಿದುಬಂತು.

ಇನ್ನೊಂದು ಬಾರಿ, ನಾನೂ ಒಬ್ಬ ಸಹೋದರಿಯೂ ಸೇವೆಗೆ ಹೋಗಿದ್ದಾಗ, ಒಂದು ಕಿಟಕಿ-ಕಟ್ಟೆಯ ಮೇಲೆ ಪೈಪ್‌ ತುಂಡೊಂದನ್ನು ನೋಡಿ ವಿಚಿತ್ರವೆನಿಸಿತು. ನಾವು ಅಷ್ಟೇನೂ ಗಮನಕೊಡದೆ ಮುಂದೆ ನಡೆದೆವು. ಆದರೆ ಕೆಲವೇ ನಿಮಿಷಗಳಲ್ಲಿ ಅದು ಸ್ಫೋಟಿಸಿತು. ಹೊರಬಂದು ನೋಡಿದ ಜನ, ಅದು ನಮ್ಮದೇ ಕೆಲಸವೆಂದು ನೆನಸಿದರು! ಅಷ್ಟರಲ್ಲಿ, ಆ ಕ್ಷೇತ್ರದಲ್ಲಿ ವಾಸಿಸುತ್ತಿದ್ದ ಸಹೋದರಿಯೊಬ್ಬಳು ನಮ್ಮನ್ನು ನೋಡಿ ತನ್ನ ಮನೆಗೆ ಕರೆದಳು. ಇದರಿಂದಾಗಿ, ನಾವು ನಿರಪರಾಧಿಗಳೆಂದು ಆ ನೆರೆಯವರಿಗೆ ತಿಳಿದುಬಂತು.

1971ರಲ್ಲಿ ನಾವು ಒಬ್ಬ ಸಹೋದರಿಯನ್ನು ಭೇಟಿಮಾಡಲಿಕ್ಕಾಗಿ ಲಂಡನ್‌ಡೆರಿಗೆ ಬಂದೆವು. ನಾವು ಬಂದ ಮಾರ್ಗ ಮತ್ತು ದಾರಿಯಲ್ಲಿ ಹಾಕಲಾಗಿದ್ದ ತಡೆಗಟ್ಟಿನ ಕುರಿತು ತಿಳಿಸಿದಾಗ, “ಆ ತಡೆಗಟ್ಟಿನ ಬಳಿ ಯಾರೂ ಇರಲಿಲ್ಲವಾ?” ಎಂದಾಕೆ ಕೇಳಿದಳು. “ಇದ್ದರು, ಆದರೆ ಅವರ್ಯಾರೂ ನಮ್ಮ ಕಡೆಗೆ ನೋಡಲಿಲ್ಲ” ಎಂದು ನಾವು ಹೇಳಿದಾಗ ಆಕೆಗೆ ಅಚ್ಚರಿಯೋ ಅಚ್ಚರಿ! ಏಕೆ? ಕೆಲವೇ ದಿನಗಳ ಹಿಂದೆ ಒಬ್ಬ ಡಾಕ್ಟರ್‌ ಮತ್ತು ಒಬ್ಬ ಪೊಲೀಸನ ಕಾರುಗಳನ್ನು ಅಪಹರಣಮಾಡಿ ಸುಟ್ಟುಹಾಕಲಾಗಿತ್ತಂತೆ!

1972ರಲ್ಲಿ ನಾವು ಕಾರ್ಕ್‌ ಎಂಬಲ್ಲಿಗೆ ಸ್ಥಳಾಂತರಿಸಿದೆವು. ತದನಂತರ ನಾವು ನಾಸ್‌ ಮತ್ತು ಆರ್‌ಕ್ಲೋ ಎಂಬಲ್ಲಿ ಸೇವೆಮಾಡಿದೆವು. ಕೊನೆಗೆ 1987ರಲ್ಲಿ, ನಮ್ಮನ್ನು ಕಾಸಲ್‌ಬಾರ್‌ಗೆ ನೇಮಿಸಲಾಯಿತು. ಈಗ ನಾವು ಅಲ್ಲೇ ಇದ್ದೇವೆ. ಇಲ್ಲಿ ಒಂದು ರಾಜ್ಯ ಸಭಾಗೃಹ ಕಟ್ಟಲು ಸಹಾಯಮಾಡುವ ದೊಡ್ಡ ಸುಯೋಗ ನಮಗೆ ಸಿಕ್ಕಿತು. ಎರಿಕ್‌ 1999ರಲ್ಲಿ ತುಂಬ ಗಂಭೀರವಾಗಿ ಅಸ್ವಸ್ಥರಾದರು. ಆದರೆ ಯೆಹೋವನ ಸಹಾಯ ಹಾಗೂ ಸಭೆಯ ಪ್ರೀತಿಪರ ಬೆಂಬಲದಿಂದ ಅದನ್ನು ನಿಭಾಯಿಸಲು ಮತ್ತು ಅವರು ಪುನಃ ಚೇತರಿಸಿಕೊಳ್ಳುವಷ್ಟರ ಮಟ್ಟಿಗೆ ಅವರ ಆರೈಕೆಮಾಡಲು ಶಕ್ತಳಾದೆ.

ನಾನು ಮತ್ತು ಎರಿಕ್‌ ಎರಡು ಸಲ ‘ಪಯನೀಯರ್‌ ಸರ್ವಿಸ್‌ ಸ್ಕೂಲ್‌’ಗೆ ಹಾಜರಾಗಿದ್ದೇವೆ. ಅವರೀಗಲೂ ಹಿರಿಯರಾಗಿ ಸೇವೆಸಲ್ಲಿಸುತ್ತಿದ್ದಾರೆ. ನನಗಂತೂ ತೀವ್ರ ಸಂಧಿವಾತವಿದೆ ಮತ್ತು ನನ್ನ ಟೊಂಕ ಹಾಗೂ ಮೊಣಕಾಲುಗಳನ್ನು ಶಸ್ತ್ರಕ್ರಿಯೆಮಾಡಿ ಪುನರ್‌ಜೋಡಿಸಲಾಗಿದೆ. ನಾನು ತೀಕ್ಷ್ಣ ಧಾರ್ಮಿಕ ವಿರೋಧವನ್ನು ಎದುರಿಸಿದ್ದೇನೆ ಮತ್ತು ಗಂಭೀರ ರಾಜಕೀಯ ಹಾಗೂ ಸಾಮಾಜಿಕ ಕೋಲಾಹಲದ ಸಮಯಗಳಲ್ಲಿ ಜೀವಿಸಿದ್ದೇನೆ. ಆದರೆ ಇವೆಲ್ಲವುಗಳಿಗಿಂತ ದೊಡ್ಡ ಕಷ್ಟ ನನಗೆದುರಾದದ್ದು, ನಾನು ಕಾರ್‌ ಚಲಾಯಿಸುವುದನ್ನು ನಿಲ್ಲಿಸಬೇಕಾಗಿ ಬಂದಾಗಲೇ. ಇದು ನಿಜವಾಗಿ ಒಂದು ಪರೀಕ್ಷೆಯಾಗಿತ್ತು ಯಾಕೆಂದರೆ ಅದರೊಟ್ಟಿಗೆ ನನ್ನ ಸ್ವಾವಲಂಬಿ ಜೀವನವೂ ನಿಂತುಹೋಯಿತು. ಸಭೆಯು ಬಹಳಷ್ಟು ಸಹಾಯಮಾಡಿದೆ ಮತ್ತು ಬೆಂಬಲಕೊಟ್ಟಿದೆ. ನಾನೀಗ ಊರುಗೋಲಿನ ಸಹಾಯದಿಂದ ನಡೆಯುತ್ತೇನೆ ಮತ್ತು ಹೆಚ್ಚು ದೂರ ಹೋಗಬೇಕಾದರೆ ಬ್ಯಾಟರಿ-ಚಾಲಿತ ಟ್ರೈಸಿಕಲ್‌ ಓಡಿಸುತ್ತೇನೆ.

ನಾನು ಮತ್ತು ನನ್ನ ಗಂಡ ಒಟ್ಟಿಗೆ 100ಕ್ಕಿಂತ ಹೆಚ್ಚು ವರ್ಷ ಸ್ಪೆಷಲ್‌ ಪಯನೀಯರರಾಗಿ ಕೆಲಸಮಾಡಿದ್ದೇವೆ. ಇವುಗಳಲ್ಲಿ 98 ವರ್ಷಗಳನ್ನು ಇಲ್ಲಿ, ಐರ್ಲೆಂಡ್‌ನಲ್ಲಿ ಕಳೆದಿದ್ದೇವೆ. ಯೆಹೋವನ ಸೇವೆಯಿಂದ ನಿವೃತ್ತರಾಗಲು ನಮಗೆ ಸ್ವಲ್ಪವೂ ಮನಸ್ಸಿಲ್ಲ. ನಾವು ಚಮತ್ಕಾರಗಳನ್ನು ಅವಲಂಬಿಸಿ ಜೀವಿಸುತ್ತಿಲ್ಲ, ಆದರೆ ಯೆಹೋವನ ಶಕ್ತಿಶಾಲಿ ದೇವದೂತರು ಆತನ ಭಯಭಕ್ತಿಯುಳ್ಳವರ ಹಾಗೂ ಆತನನ್ನು ನಂಬಿಗಸ್ತಿಕೆಯಿಂದ ಸೇವಿಸುವವರ ಸುತ್ತಲೂ ‘ದಂಡಿಳಿದು ಕಾವಲಾಗಿದ್ದಾರೆಂದು’ ನಾವು ನಂಬುತ್ತೇವೆ.