ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶುಶ್ರೂಷೆಯಲ್ಲಿ ತಾಳಿಕೊಳ್ಳುವುದು ಹೇಗೆ?

ಶುಶ್ರೂಷೆಯಲ್ಲಿ ತಾಳಿಕೊಳ್ಳುವುದು ಹೇಗೆ?

ಶುಶ್ರೂಷೆಯಲ್ಲಿ ತಾಳಿಕೊಳ್ಳುವುದು ಹೇಗೆ?

ಸಾರಲು ಹೋಗುವುದನ್ನೇ ನಿಲ್ಲಿಸಬೇಕೆಂದು ಅನಿಸುವಷ್ಟರ ಮಟ್ಟಿಗೆ ಎಂದಾದರೂ ಬೇಸತ್ತು ಹೋಗಿದ್ದೀರೋ? ಕಠಿನ ವಿರೋಧ, ವ್ಯಾಕುಲತೆ, ಅನಾರೋಗ್ಯ, ಸಮಾನಸ್ಥರ ಒತ್ತಡ, ಸಾರುವಾಗ ಫಲಿತಾಂಶ ಸಿಗದಿರುವುದು, ಇವೆಲ್ಲ ನಮ್ಮ ತಾಳ್ಮೆಯನ್ನು ಪರೀಕ್ಷಿಸಬಹುದು. ಆದರೆ ಯೇಸುವಿನ ಮಾದರಿ ಬಗ್ಗೆ ಸ್ವಲ್ಪ ಯೋಚಿಸಿ. “ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ” ಅವನು ಅತ್ಯಂತ ಕಠಿನ ಪರೀಕ್ಷೆಗಳನ್ನು ತಾಳಿಕೊಂಡನು. (ಇಬ್ರಿ. 12:⁠2) ದೇವರ ಮೇಲೆ ಹೊರಿಸಲಾದ ಆರೋಪಗಳು ಪೂರ್ಣವಾಗಿ ನಿರಾಧಾರವಾದವುಗಳೆಂದು ಸಾಬೀತುಪಡಿಸುವ ಮೂಲಕ ತಾನು ಯೆಹೋವನ ಹೃದಯವನ್ನು ಸಂತೋಷಪಡಿಸುತ್ತಿದ್ದೇನೆ ಎಂಬುದು ಅವನಿಗೆ ಚೆನ್ನಾಗಿ ತಿಳಿದಿತ್ತು.​—⁠ಜ್ಞಾನೋ. 27:⁠11.

ಶುಶ್ರೂಷೆಯಲ್ಲಿ ತಾಳಿಕೊಳ್ಳುವ ಮೂಲಕ ನೀವು ಕೂಡ ಯೆಹೋವನ ಹೃದಯವನ್ನು ಸಂತೋಷಪಡಿಸಬಲ್ಲಿರಿ. ಆದರೆ, ಕೆಲವೊಂದು ಎಡರುತೊಡರುಗಳು ನಿಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೀರಿಕೊಳ್ಳುತ್ತಿರುವಲ್ಲಿ ಆಗೇನು? ಕ್ರಿಸ್ಟಿನಾ ಎಂಬವರು, ಅನಾರೋಗ್ಯದಿಂದ ಬಳಲುತ್ತಿರುವ ಒಬ್ಬಾಕೆ ವೃದ್ಧೆ. ಆಕೆ ಒಪ್ಪಿಕೊಳ್ಳುವುದು: “ದಣಿವು ಮತ್ತು ನಿರುತ್ಸಾಹ ನನಗೆ ಹೊಸತೇನಲ್ಲ. ಅನಾರೋಗ್ಯ ಮತ್ತು ದೈನಂದಿನ ಜೀವನದ ಕುರಿತ ಚಿಂತೆಯಂಥ ವೃದ್ಧಾಪ್ಯದ ಸಮಸ್ಯೆಗಳಿಂದಾಗಿ ನನ್ನ ಹುರುಪು ಕೆಲವೊಮ್ಮೆ ತಾತ್ಕಾಲಿಕವಾಗಿ ತಣ್ಣಗಾಗುತ್ತದೆ.” ಇಂಥ ಅಡ್ಡಿತಡೆಗಳ ಹೊರತೂ ಶುಶ್ರೂಷೆಯಲ್ಲಿ ಹೇಗೆ ಪಟ್ಟುಹಿಡಿಯಬಲ್ಲಿರಿ?

ಪ್ರವಾದಿಗಳನ್ನು ಅನುಕರಿಸಿ

ಸಾರುವ ಕೆಲಸದಲ್ಲಿ ಪಟ್ಟುಹಿಡಿಯಲು, ನಂಬಿಗಸ್ತ ರಾಜ್ಯ ಪ್ರಚಾರಕರು ಪುರಾತನ ಕಾಲದ ಪ್ರವಾದಿಗಳ ಮನೋಭಾವವನ್ನು ಹೊಂದಲು ಪ್ರಯತ್ನಿಸಬೇಕು. ಉದಾಹರಣೆಗೆ, ಅವರಲ್ಲೊಬ್ಬನಾದ ಯೆರೆಮೀಯನನ್ನು ತೆಗೆದುಕೊಳ್ಳಿ. ಪ್ರವಾದಿಯಾಗಿ ಸೇವೆ ಸಲ್ಲಿಸುವಂತೆ ಅವನನ್ನು ಕೇಳಿಕೊಳ್ಳಲಾದಾಗ ಮೊದಲು ಅವನು ಹಿಂಜರಿದನು. ಆದಾಗ್ಯೂ ಅವನು ತದನಂತರ ಆ ಕಷ್ಟಕರ ನೇಮಕದಲ್ಲಿ 40ಕ್ಕಿಂತ ಹೆಚ್ಚು ವರ್ಷ ತಾಳಿಕೊಂಡನು. ಹೇಗೆ? ದೇವರಲ್ಲಿ ಪೂರ್ಣ ಭರವಸೆಯಿಡಲು ಕಲಿತದ್ದರಿಂದಲೇ.​—⁠ಯೆರೆ. 1:6; 20:​7-11.

ಹೆನ್ರಿಕ್‌ ಎಂಬಾತನು ಯೆರೆಮೀಯನ ಮಾದರಿಯಿಂದ ಉತ್ತೇಜನ ಪಡಕೊಳ್ಳುತ್ತಾನೆ. ಅವನನ್ನುವುದು: “70ಕ್ಕಿಂತ ಹೆಚ್ಚು ವರ್ಷಗಳ ಶುಶ್ರೂಷೆಯಲ್ಲಿ, ಜನರ ಪ್ರತಿಕ್ರಿಯೆ, ವಿರೋಧ ಮತ್ತು ಅಸಡ್ಡೆಯಿಂದಾಗಿ ಕೆಲವೊಮ್ಮೆ ನಾನು ನಿರುತ್ತೇಜಿತನಾದದ್ದಿದೆ. ಅಂಥ ಸಮಯಗಳಲ್ಲಿ ನಾನು ಯೆರೆಮೀಯನ ಮಾದರಿಯನ್ನು ನೆನಪಿಸಿಕೊಳ್ಳುತ್ತೇನೆ. ಯೆಹೋವನ ಕಡೆಗೆ ಅವನಿಗಿದ್ದ ಪ್ರೀತಿ ಮತ್ತು ಬಲವಾದ ಆಧ್ಯಾತ್ಮಿಕತೆಯು ಪ್ರವಾದಿಸುವ ಕೆಲಸವನ್ನು ಮಾಡುತ್ತಾ ಹೋಗುವಂತೆ ಅವನನ್ನು ಶಕ್ತಗೊಳಿಸಿತು.” (ಯೆರೆ. 1:17) ರಫಾವ್‌ ಎಂಬಾತನು ಕೂಡ ಯೆರೆಮೀಯನ ಮಾದರಿಯಿಂದ ಸ್ಫೂರ್ತಿ ಪಡೆದನು. ಅವನನ್ನುವುದು: “ಯೆರೆಮೀಯನು ತನಗೆ ಮತ್ತು ತನ್ನ ಅನಿಸಿಕೆಗಳಿಗೆ ಹೆಚ್ಚಿನ ಲಕ್ಷ್ಯಕೊಡುವ ಬದಲು ದೇವರ ಮೇಲೆ ಆತುಕೊಂಡನು. ಎಲ್ಲರ ಹಗೆಯ ಮಧ್ಯೆಯೂ ಅವನು ಎದೆಗುಂದದೆ ಮುಂದುವರಿದನು. ನಾನು ಯಾವಾಗಲೂ ಇದನ್ನು ಮನಸ್ಸಿನಲ್ಲಿಡಲು ಪ್ರಯತ್ನಿಸುತ್ತೇನೆ.”

ಶುಶ್ರೂಷೆಯಲ್ಲಿ ತಾಳಿಕೊಳ್ಳುವಂತೆ ಅನೇಕರಿಗೆ ಸಹಾಯ ಮಾಡುವ ಇನ್ನೊಂದು ಮಾದರಿ ಪ್ರವಾದಿ ಯೆಶಾಯನದ್ದಾಗಿದೆ. ದೇವರು ಅವನನ್ನು ಅವನ ಸ್ವಂತ ಜನರ ಮಧ್ಯೆ ಪ್ರವಾದಿಯಾಗಿ ನೇಮಿಸಿದಾಗ ಅವನು ಹಿಂಜರಿಯದೆ “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳಿದನು. ಯೆಹೋವನು ಇದನ್ನೂ ಹೇಳಿದ್ದನು: ‘ಈ ಜನರ ಹೃದಯಕ್ಕೆ ಕೊಬ್ಬೇರಿಸಿ ಕಿವಿಯನ್ನು ಮಂದಮಾಡು.’ ಅಂದರೆ ಇದರರ್ಥ ಅವರು ಅವನಿಗೆ ಕಿವಿಗೊಡರೆಂದಾಗಿತ್ತು. (ಯೆಶಾ. 6:​8-10) ಹಾಗಾದರೆ ಯೆಶಾಯನು ಪಡುವ ಶ್ರಮವೆಲ್ಲವೂ ವ್ಯರ್ಥವಾಗಲಿತ್ತೋ? ದೇವರ ದೃಷ್ಟಿಕೋನದಲ್ಲಂತೂ ಖಂಡಿತ ಇಲ್ಲ! ಆದ್ದರಿಂದಲೇ ಯೆಶಾಯನು ತನ್ನ ನೇಮಕಕ್ಕೆ ಅಂಟಿಕೊಂಡನು ಕೂಡ. ಸಾರುವ ನೇಮಕಕ್ಕೆ ನೀವು ಸಹ ಹೀಗೆಯೇ ಪ್ರತಿಕ್ರಿಯಿಸುತ್ತೀರೋ?

ಜನರ ಅಸಡ್ಡೆಯ ಮಧ್ಯೆಯೂ ನಾವು ಯೆಶಾಯನಂತೆ ಶುಶ್ರೂಷೆಯಲ್ಲಿ ಪಟ್ಟುಹಿಡಿಯಬೇಕಾದರೆ ಅವರ ನಕಾರಾತ್ಮಕ ಪ್ರತಿಕ್ರಿಯೆಗಳ ಕುರಿತಾಗಿಯೇ ಯೋಚಿಸುತ್ತಿರಬಾರದು. ರಫಾವ್‌ ನಿರುತ್ತೇಜನವನ್ನು ಹೀಗೆ ನಿಭಾಯಿಸುತ್ತಾನೆ: “ನಾನು ಜನರ ಕಟುವಾದ ಮಾತುಗಳ ಕುರಿತು ಚಿಂತಿಸುತ್ತಾ ಕೂತಿರುವುದಿಲ್ಲ. ನನ್ನ ಟೆರಿಟೊರಿಯಲ್ಲಿರುವ ಪ್ರತಿಯೊಬ್ಬರಿಗೂ ತಮಗೆ ಇಷ್ಟ ಬಂದಂತೆ ಪ್ರತಿಕ್ರಿಯಿಸುವ ಹಕ್ಕಿದೆ.” ಆನ್ನಾ ಎಂಬಾಕೆ ಸಹ ಹೇಳುವುದು: “ಯಾವುದೇ ಅಹಿತಕರ ಅಥವಾ ನಿರುತ್ತೇಜನಕರ ವಿಷಯಗಳು ನನ್ನ ಮನಸ್ಸಲ್ಲಿ ಸುಳಿದಾಡಲು ನಾನೆಂದೂ ಬಿಡುವುದಿಲ್ಲ. ಕ್ಷೇತ್ರ ಸೇವೆಗೆ ಹೋಗುವ ಮೊದಲು ನಾನು ಮಾಡುವ ಪ್ರಾರ್ಥನೆ ಮತ್ತು ದಿನದ ವಚನದ ಪರಿಗಣನೆಯಿಂದ ಇದು ಸಾಧ್ಯವಾಗುತ್ತದೆ. ಯಾವುದೇ ಯೋಚನೆಗಳು ಫಕ್ಕನೆ ಮಾಯವಾಗುತ್ತವೆ.”

ಯೆಹೆಜ್ಕೇಲನು ಬಾಬೆಲಿನಲ್ಲಿ ಬಂಧಿವಾಸಿಗಳಾಗಿದ್ದ ಹಠಮಾರಿ ಯೆಹೂದ್ಯರ ಮಧ್ಯೆ ಪ್ರವಾದಿಯಾಗಿ ಸೇವೆ ಮಾಡಿದನು. (ಯೆಹೆ. 2:⁠6) ದೇವರ ಮಾತುಗಳನ್ನು ಜನರಿಗೆ ತಿಳಿಸದೇ ಹೋದಲ್ಲಿ ಮತ್ತು ಒಬ್ಬ ದುಷ್ಟ ವ್ಯಕ್ತಿಗೆ ಎಚ್ಚರಿಕೆ ಸಿಗದೇ ಅವನು ಸಾಯುವಲ್ಲಿ, ಯೆಹೆಜ್ಕೇಲನೇ ಅವನ ಮರಣಕ್ಕೆ ಜವಾಬ್ದಾರನಾಗಿರಲಿದ್ದನು. ಯೆಹೋವನು ಯೆಹೆಜ್ಕೇಲನಿಗಂದದ್ದು: “ಅವನ ಮರಣಕ್ಕಾಗಿ ನಿನಗೇ ಮುಯ್ಯಿತೀರಿಸುವೆನು.”​—⁠ಯೆಹೆ. 3:​17, 18.

ಹೆನ್ರಿಕ್‌ ಯೆಹೆಜ್ಕೇಲನಿಗಿದ್ದಂಥ ಈ ಹೊರನೋಟವನ್ನಿಡಲು ಪ್ರಯತ್ನಿಸುತ್ತಾನೆ: “ಯಾರ ಮರಣದ ದೋಷವೂ ನನ್ನ ತಲೆಯ ಮೇಲೆ ಬರಬಾರದು. ಮಾನವರ ಅಮೂಲ್ಯ ಜೀವಗಳು ಅಪಾಯದಲ್ಲಿವೆ.” (ಅ. ಕೃ. 20:​26, 27) ಜ್ಬಿಗ್‌ನೆವ್‌ಗೂ ಹೀಗನಿಸುತ್ತದೆ: “ಯಾರು ಏನೇ ಎಣಿಸಿದರೂ ಯೆಹೆಜ್ಕೇಲನಂತೂ ತನ್ನ ನೇಮಕದಲ್ಲಿ ಮುಂದುವರಿಯಬೇಕಿತ್ತು. ಇದು ಸಾರುವ ಕೆಲಸದ ಬಗ್ಗೆ ಸೃಷ್ಟಿಕರ್ತನ ನೋಟವನ್ನಿಡಲು ನನಗೆ ಸಹಾಯ ಮಾಡುತ್ತದೆ.”

ನೀವು ಒಬ್ಬಂಟಿಗರಲ್ಲ

ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವಾಗ ನೀವು ಒಬ್ಬಂಟಿಗರಲ್ಲ. ಅಪೊಸ್ತಲ ಪೌಲನಂತೆ ನಾವೂ ಹೀಗನ್ನಬಹುದು: “ನಾವು ದೇವರ ಜೊತೆಕೆಲಸದವರು.” (1 ಕೊರಿಂ. 3:⁠9) ಕೆಲವೊಮ್ಮೆ ನಿರುತ್ತೇಜಿತಳಾಗುತ್ತೇನೆಂದು ಒಪ್ಪಿಕೊಳ್ಳುವ ಕ್ರಿಸ್ಟಿನಾ ಹೇಳುವುದು: “ಆದ್ದರಿಂದಲೇ ಯೆಹೋವನ ಬಳಿ ನಾನು ಬಲಕ್ಕಾಗಿ ಬೇಡಿಕೊಳ್ಳುತ್ತಿರುತ್ತೇನೆ. ಆತನೆಂದೂ ನನ್ನನ್ನು ನಿರಾಶೆಗೊಳಿಸಿಲ್ಲ.” ಹೌದು, ಶುಶ್ರೂಷೆಯಲ್ಲಿ ನಮಗೆ ದೇವರಾತ್ಮದ ಬೆಂಬಲ ಅವಶ್ಯ.​—⁠ಜೆಕ. 4:⁠6.

ನಾವು ಸಾರುತ್ತಿರುವಾಗ ‘ದೇವರಾತ್ಮದ ಫಲವಾಗಿರುವ’ ಗುಣಗಳನ್ನು ತೋರಿಸಲು ಸಹ ಪವಿತ್ರಾತ್ಮ ಸಹಾಯ ಮಾಡುತ್ತದೆ. (ಗಲಾ. 5:​22, 23) ಈ ಗುಣಗಳು, ಏನೇ ಆಗಲಿ ನಾವು ಸಾರುವ ಕೆಲಸದಲ್ಲಿ ಪಟ್ಟುಹಿಡಿಯುವಂತೆ ನೆರವು ನೀಡುತ್ತವೆ. ಹೆನ್ರಿಕ್‌ ತಿಳಿಸುವುದು: “ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದು ನನ್ನ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳುವಂತೆ ಸಹಾಯ ಮಾಡುತ್ತದೆ. ನಾನು ತಾಳ್ಮೆ, ಪರಿಗಣನೆ ತೋರಿಸಲು ಮತ್ತು ಸುಲಭವಾಗಿ ಬಿಟ್ಟುಕೊಡದಿರಲು ಕಲಿಯುತ್ತಿದ್ದೇನೆ.” ಅಡ್ಡಿತಡೆಗಳ ಹೊರತೂ ಶುಶ್ರೂಷೆಯಲ್ಲಿ ತಾಳಿಕೊಳ್ಳುವುದು ಪವಿತ್ರಾತ್ಮದ ಫಲವನ್ನು ಇನ್ನೂ ಹೇರಳವಾಗಿ ಉತ್ಪಾದಿಸುವಂತೆ ನಿಮಗೆ ಸಹಾಯ ಮಾಡುವುದು.

ಈ ಕೆಲಸವನ್ನು ನಿರ್ದೇಶಿಸಲು ಯೆಹೋವನು ತನ್ನ ದೂತರನ್ನು ಉಪಯೋಗಿಸುತ್ತಾನೆ. (ಪ್ರಕ. 14:⁠6) ಇಂಥ ಆತ್ಮ ಜೀವಿಗಳು ಬೈಬಲ್‌ ಪ್ರಕಟಿಸುವಂತೆ, “ಕೋಟ್ಯಾನುಕೋಟಿಯಾಗಿಯೂ ಲಕ್ಷೋಪಲಕ್ಷವಾಗಿಯೂ” ಇದ್ದಾರೆ. (ಪ್ರಕ. 5:11) ಈ ದೇವದೂತರು ಯೇಸುವಿನ ನಿರ್ದೇಶನದ ಮೇರೆಗೆ ಭೂಮಿಯಲ್ಲಿರುವ ದೇವರ ಸೇವಕರನ್ನು ಬೆಂಬಲಿಸುತ್ತಾರೆ. ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗ ಇದು ನಿಮ್ಮ ಮನಸ್ಸಿನಲ್ಲಿರುತ್ತದೋ?

ಆನ್ನಾ ಹೇಳುವುದು: “ದೇವದೂತರು ಶುಶ್ರೂಷೆಯಲ್ಲಿ ನಮ್ಮೊಂದಿಗಿರುತ್ತಾರೆ ಎಂಬ ವಿಚಾರದ ಕುರಿತು ಧ್ಯಾನಿಸುವುದು ನನಗೆ ಉತ್ತೇಜನದ ಸೆಲೆಯಾಗಿದೆ. ಅವರು ಯೆಹೋವ ಮತ್ತು ಯೇಸುವಿನ ನಿರ್ದೇಶನದ ಮೇರೆಗೆ ಕೊಡುವ ಸಹಾಯವನ್ನು ನಾನು ಬಹಳ ಮಾನ್ಯ ಮಾಡುತ್ತೇನೆ.” ನಂಬಿಗಸ್ತ ದೇವದೂತರೊಂದಿಗೆ ಕೆಲಸ ಮಾಡುವುದು ಎಂಥ ಅಮೂಲ್ಯ ಸದವಕಾಶ!

ಇತರ ಪ್ರಚಾರಕರೊಂದಿಗೆ ಕೆಲಸ ಮಾಡುವುದರಿಂದ ತಾಳಿಕೊಳ್ಳಲು ಹೇಗೆ ಸಹಾಯ ಸಿಗುತ್ತದೆ? ನಂಬಿಗಸ್ತ ಸಾಕ್ಷಿಗಳ ಒಂದು ದೊಡ್ಡ ಗುಂಪಿನ ಪರಿಚಯ ಮಾಡಿಕೊಳ್ಳುವ ಆಶೀರ್ವಾದ ನಮಗಿದೆ. “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು” ಎಂಬ ಬೈಬಲ್‌ ಜ್ಞಾನೋಕ್ತಿಯ ಸತ್ಯತೆಯನ್ನು ನೀವು ಖಂಡಿತ ಅನುಭವಿಸಿರಬಹುದು.​—⁠ಜ್ಞಾನೋ. 27:⁠17.

ಶುಶ್ರೂಷೆಯಲ್ಲಿ ಇತರರೊಟ್ಟಿಗೆ ಕೆಲಸ ಮಾಡುವಾಗ ನಮಗೆ ಹೊಸದಾಗಿರುವ ಕೆಲವೊಂದು ಪರಿಣಾಮಕಾರಿ ವಿಧಾನಗಳನ್ನು ಕಲಿಯುವ ಅವಕಾಶ ಸಿಗುತ್ತದೆ. ಎಲ್ಜಬೇಟಾ ಹೇಳುವುದು: “ಬೇರೆ ಬೇರೆ ಪ್ರಚಾರಕರೊಂದಿಗೆ ಕೆಲಸ ಮಾಡುವಾಗ ನನ್ನ ಜೊತೆ ವಿಶ್ವಾಸಿಗಳಿಗೂ ನಾವು ಭೇಟಿಯಾಗುವ ಜನರಿಗೂ ಪ್ರೀತಿ ತೋರಿಸುವ ಅವಕಾಶ ನನಗೆ ಒದಗಿಬರುತ್ತದೆ.” ಶುಶ್ರೂಷೆಯಲ್ಲಿ ಬೇರೆ ಬೇರೆ ಪ್ರಚಾರಕರೊಂದಿಗೆ ಕೆಲಸ ಮಾಡಲು ಪ್ರಯತ್ನಿಸಿ. ಆಗ ನಿಮ್ಮ ಶುಶ್ರೂಷೆ ಹೆಚ್ಚು ವೈವಿಧ್ಯಮಯವೂ ಹೆಚ್ಚು ಆಸಕ್ತಿಕರವೂ ಆಗುವುದು.

ನಿಮ್ಮ ಬಗ್ಗೆಯೂ ಸಾಕಷ್ಟು ಕಾಳಜಿವಹಿಸಿ

ಶುಶ್ರೂಷೆಯಲ್ಲಿ ನಮ್ಮ ಹುರುಪನ್ನು ಕಾಯ್ದುಕೊಳ್ಳಲು, ಸರಿಯಾದ ಯೋಜನೆ, ವೈಯಕ್ತಿಕ ಅಧ್ಯಯನದ ಉತ್ತಮ ರೂಢಿ ಮತ್ತು ಸಾಕಷ್ಟು ವಿಶ್ರಾಂತಿ ಆವಶ್ಯಕ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಆಧ್ಯಾತ್ಮಿಕವಾಗಿಯೂ ಶಾರೀರಿಕವಾಗಿಯೂ ನಮ್ಮ ಬಗ್ಗೆ ಸಾಕಷ್ಟು ಕಾಳಜಿವಹಿಸಬೇಕು.

ಬೈಬಲ್‌ ಹೇಳುವುದು: “ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ.” (ಜ್ಞಾನೋ. 21:​5, NIBV) ಈಗ 88ರ ಪ್ರಾಯದವರಾಗಿರುವ ಜಿಗ್ಮಂಟ್‌ ಹೇಳುವುದು: “ಒಳ್ಳೇ ಕಾರ್ಯತಖ್ತೆಯನ್ನು ಪಾಲಿಸುವುದರಿಂದ ನನ್ನ ಸೇವೆ ಉದ್ದೇಶಭರಿತವಾಗಿರುತ್ತದೆ. ಶುಶ್ರೂಷೆಗೆ ಯಾವಾಗಲೂ ಸಾಕಷ್ಟು ಸಮಯ ಉಳಿಯುವಂತೆ ನನ್ನ ಸಮಯವನ್ನು ಸಂಘಟಿಸುತ್ತೇನೆ.”

ಬೈಬಲಿನ ಸಮಗ್ರ ಜ್ಞಾನವು ಶುಶ್ರೂಷೆಗಾಗಿ ನಮ್ಮನ್ನು ಬಲಪಡಿಸುತ್ತದೆ ಮತ್ತು ಸನ್ನದ್ಧರನ್ನಾಗಿ ಮಾಡುತ್ತದೆ. ಬದುಕಿರಲು ನಾವು ಶಾರೀರಿಕ ಆಹಾರವನ್ನು ಸೇವಿಸಬೇಕಾದಂತೆಯೇ ಸಾರುವ ಕೆಲಸದಲ್ಲಿ ಪಾಲ್ಗೊಳ್ಳಲು ಕ್ರಮವಾಗಿ ಆಧ್ಯಾತ್ಮಿಕ ಆಹಾರವನ್ನು ಸೇವಿಸಬೇಕು. ದಿನನಿತ್ಯವೂ ದೇವರ ವಾಕ್ಯದಿಂದ ನಮ್ಮನ್ನೇ ಪೋಷಿಸಿಕೊಳ್ಳುವ ಮೂಲಕ “ಹೊತ್ತು ಹೊತ್ತಿಗೆ” ಆಹಾರವನ್ನು ಸೇವಿಸುವುದು ಶುಶ್ರೂಷೆಗಾಗಿ ಬೇಕಾದ ಶಕ್ತಿಯನ್ನು ಕೊಡುವುದು.​—⁠ಮತ್ತಾ. 24:​45-47.

ಎಲ್ಜಬೇಟಾ ಶುಶ್ರೂಷೆಯಲ್ಲಿ ಅಭಿವೃದ್ಧಿ ಮಾಡಲಿಕ್ಕಾಗಿ ತನ್ನ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದಳು. ಆಕೆ ಹೇಳುವುದು: “ಶುಶ್ರೂಷೆಗೆ ತಯಾರಿಸಲು ಹೆಚ್ಚು ಸಮಯ ಸಿಗುವಂತೆ ನಾನು ಟಿ.ವಿ. ನೋಡುವುದನ್ನು ಕಡಿಮೆಮಾಡಿದೆ. ಪ್ರತಿ ಸಂಜೆ ಬೈಬಲ್‌ ಓದುವಾಗ ನಾನು ಟೆರಿಟೊರಿಯಲ್ಲಿ ಭೇಟಿಯಾದ ಜನರ ಬಗ್ಗೆ ಯೋಚಿಸುತ್ತೇನೆ. ಅವರಿಗೆ ಸಹಾಯ ಮಾಡಬಲ್ಲ ವಚನಗಳಿಗಾಗಿ ಮತ್ತು ಲೇಖನಗಳಿಗಾಗಿ ನಾನು ಹುಡುಕುತ್ತೇನೆ.”

ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳುವ ಮೂಲಕ ದೇಹಶಕ್ತಿಯನ್ನು ಉಳಿಸಿಕೊಂಡು ಶುಶ್ರೂಷೆಯಲ್ಲಿ ಪೂರ್ಣಮಟ್ಟಿಗೆ ಭಾಗವಹಿಸಲು ಸಾಧ್ಯವಾಗುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ, ಅತಿಯಾದ ವಿನೋದ ವಿಹಾರ ಮತ್ತು ಆಟಪಾಟಗಳು ನಿಮ್ಮ ಕೆಲಸದ ಗುಣಮಟ್ಟವನ್ನು ತಗ್ಗಿಸಬಲ್ಲವು. ಹುರುಪಿನ ಪ್ರಚಾರಕನಾದ ಆಂಜಾ ಎಂಬವನು ತಿಳಿಸುವುದು: “ವಿಶ್ರಾಂತಿ ಕಡಿಮೆಯಾದರೆ ಹೆಚ್ಚು ಆಯಾಸವಾಗುತ್ತದೆ ಮತ್ತು ಆಗ ನಿರುತ್ತೇಜನ ಸುಲಭವಾಗಿ ಬೆನ್ನುಹತ್ತುತ್ತದೆ. ಆದ್ದರಿಂದ ಅತಿಯಾಗಿ ಆಯಾಸಗೊಳ್ಳದಂತೆ ನನ್ನಿಂದಾದದ್ದೆಲ್ಲವನ್ನೂ ಮಾಡುತ್ತೇನೆ.”​—⁠ಪ್ರಸಂ. 4:⁠6.

ನಮ್ಮೆಲ್ಲಾ ಪ್ರಯತ್ನಗಳ ಹೊರತಾಗಿಯೂ ತುಲನಾತ್ಮಕವಾಗಿ ಕೊಂಚವೇ ಮಂದಿ ಸುವಾರ್ತೆಯನ್ನು ಮಾನ್ಯಮಾಡುತ್ತಾರೆ. ಯೆಹೋವನಾದರೋ ನಮ್ಮ ಕೆಲಸವನ್ನೆಂದೂ ಮರೆಯನು. (ಇಬ್ರಿ. 6:10) ಅನೇಕ ಮಂದಿ ನಮ್ಮೊಂದಿಗೆ ಮಾತನ್ನೂ ಆಡಲಿಕ್ಕಿಲ್ಲ ಆದರೆ ನಾವು ಅಲ್ಲಿಂದ ಹೋದ ಮೇಲೆ ನಮ್ಮ ಭೇಟಿಯ ಬಗ್ಗೆ ಅವರು ಮಾತಾಡಿಕೊಳ್ಳಬಹುದು. ನಮ್ಮ ಭೇಟಿಯ ಪರಿಣಾಮವು ಯೆಹೆಜ್ಕೇಲನ ಸಂಬಂಧದಲ್ಲಿ ನಾವು ಓದುವಂತೆ ಇರಬಹುದು. ಅದೇನೆಂದರೆ, ‘ಒಬ್ಬ ಪ್ರವಾದಿ ತಮ್ಮ ಮಧ್ಯದಲ್ಲಿ ಕಾಣಿಸಿಕೊಂಡಿದ್ದನೆಂದು ಜನರು ತಿಳಿದೇ ಇರುವರು.’ (ಯೆಹೆ. 2:⁠5) ಖಂಡಿತವಾಗಿ ನಮ್ಮ ಶುಶ್ರೂಷೆಯು ಸುಲಭದ ಕೆಲಸವೇನಲ್ಲ. ಆದರೆ ಅದರಿಂದ ನಮಗೂ ನಮ್ಮ ಕೇಳುಗರಿಗೂ ಪ್ರಯೋಜನಗಳು ಸಿಗುವವು.

ಜಿಗ್ಮಂಟ್‌ ತಿಳಿಸುವುದು: “ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಮತ್ತು ದೇವರು ಹಾಗೂ ನೆರೆಯವರ ಕಡೆಗೆ ಪ್ರೀತಿ ತೋರಿಸಲು ಸಹಾಯ ಮಾಡುತ್ತದೆ.” ಆಂಜಾ ಸಹ ಹೇಳುವುದು: “ಈ ಜೀವರಕ್ಷಕ ಕೆಲಸದಲ್ಲಿ ಪಾಲ್ಗೊಳ್ಳುವುದು ಸುಯೋಗವೇ ಸರಿ. ಈ ಕೆಲಸವನ್ನು ಇಷ್ಟು ಪ್ರಮಾಣದಲ್ಲಿ ಇಲ್ಲವೇ ಇಂಥ ಪರಿಸ್ಥಿತಿಗಳಲ್ಲಿ ಪುನಃ ಎಂದೂ ಮಾಡಲಾಗುವುದಿಲ್ಲ.” ಇಂದು ನೀವು ಕೂಡ ಶುಶ್ರೂಷೆಯಲ್ಲಿ ಪಟ್ಟುಹಿಡಿಯುವ ಮೂಲಕ ಹೇರಳ ಆಶೀರ್ವಾದಗಳನ್ನು ಕೊಯ್ಯಬಲ್ಲಿರಿ.​—⁠2 ಕೊರಿಂ. 4:​1, 2.

[ಪುಟ 31ರಲ್ಲಿರುವ ಚಿತ್ರ]

ನಮ್ಮ ಆಧ್ಯಾತ್ಮಿಕ ಮತ್ತು ಶಾರೀರಿಕ ಅಗತ್ಯಗಳ ಕಾಳಜಿವಹಿಸುವುದು ಶುಶ್ರೂಷೆಯಲ್ಲಿ ತಾಳಿಕೊಳ್ಳಲು ನೆರವಾಗುತ್ತದೆ