ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಾ ದಾವೀದನೂ ಮಹಾ ಸೊಲೊಮೋನನೂ ಆದ ಯೇಸುವನ್ನು ಮಾನ್ಯಮಾಡುವುದು

ಮಹಾ ದಾವೀದನೂ ಮಹಾ ಸೊಲೊಮೋನನೂ ಆದ ಯೇಸುವನ್ನು ಮಾನ್ಯಮಾಡುವುದು

ಮಹಾ ದಾವೀದನೂ ಮಹಾ ಸೊಲೊಮೋನನೂ ಆದ ಯೇಸುವನ್ನು ಮಾನ್ಯಮಾಡುವುದು

“ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ.”​—⁠ಮತ್ತಾ. 12:⁠42.

ಪ್ರವಾದಿ ಸಮುವೇಲನು ಅವನನ್ನು ನೋಡಿದಾಗ ಅವನೊಬ್ಬ ರಾಜನಂತೆ ತೋರುತ್ತಿರಲಿಲ್ಲ. ಅವನೊಬ್ಬ ಸಾಮಾನ್ಯ ಕುರುಬ ಹುಡುಗನಂತೆ ತೋರುತ್ತಿದ್ದನು. ಅವನ ಹುಟ್ಟೂರಾದ ಬೇತ್ಲೆಹೇಮ್‌ ಸಹ ಅಷ್ಟೇನೂ ಪ್ರಸಿದ್ಧವಾಗಿರಲಿಲ್ಲ. ಅದನ್ನು “ಯೆಹೂದದ ಗ್ರಾಮಗಳಲ್ಲಿ ಚಿಕ್ಕ”ದ್ದೆಂದು ವರ್ಣಿಸಲಾಗಿತ್ತು. (ಮೀಕ 5:⁠2) ಹಾಗಿದ್ದರೂ, ಆ ತೀರ ಚಿಕ್ಕ ಊರಿನವನಾಗಿದ್ದ ಮತ್ತು ತುಂಬ ಅಲ್ಪನೆಂದು ತೋರುತ್ತಿದ್ದ ಈ ಯುವಕನನ್ನೇ ಪ್ರವಾದಿ ಸಮುವೇಲನು ಇಸ್ರಾಯೇಲಿನ ಭಾವೀ ರಾಜನಾಗಿ ಅಭಿಷೇಕಿಸಲಿದ್ದನು.

2 ಸಮುವೇಲನು ಅಭಿಷೇಕಿಸುವಂತೆ ಇಷಯನು ಅವನ ಮುಂದೆ ತಂದು ನಿಲ್ಲಿಸಿದ ಪುತ್ರರಲ್ಲಿ ಯುವ ದಾವೀದನು ಮೊದಲನೆಯವನಾಗಲಿ ಎರಡನೆಯವನಾಗಲಿ ಮೂರನೆಯವನಾಗಲಿ ಆಗಿರಲಿಲ್ಲ. ಅವನು ಇಷಯನ ಎಂಟು ಮಂದಿ ಪುತ್ರರಲ್ಲಿ ಕೊನೆಯವನಾಗಿದ್ದನು ಮತ್ತು ಆ ದೇಶದ ಹೊಸ ಅರಸನನ್ನು ಅಭಿಷೇಕಿಸಲು ಸಮುವೇಲನು ಬಂದಿದ್ದಾಗ, ದಾವೀದನು ಮನೆಯಲ್ಲೂ ಇರಲಿಲ್ಲ. ಆದರೆ ಯೆಹೋವನು ದಾವೀದನನ್ನು ಆಯ್ಕೆಮಾಡಿದ್ದನು ಮತ್ತು ಅದೇ ಮಹತ್ತ್ವದ ಸಂಗತಿಯಾಗಿತ್ತು.​—⁠1 ಸಮು. 16:​1-10.

3 ಸಮುವೇಲನಿಗೆ ನೋಡಲಾಗದ ಸಂಗತಿಯನ್ನು ಯೆಹೋವನು ನೋಡಿದನು. ಹೌದು, ದಾವೀದನ ಹೃದಯದಲ್ಲೇನಿತ್ತು ಎಂಬುದನ್ನು ದೇವರು ನೋಡಶಕ್ತನಾಗಿದ್ದನು ಮತ್ತು ಅದನ್ನು ನೋಡಿ ಮೆಚ್ಚಿದನು. ದೇವರಿಗೆ, ಹೊರಗಿನ ತೋರಿಕೆ ಮುಖ್ಯವಲ್ಲ. ಒಬ್ಬ ವ್ಯಕ್ತಿ ಆಂತರ್ಯದಲ್ಲಿ ಹೇಗಿದ್ದಾನೋ ಅದೇ ಮುಖ್ಯ. (1 ಸಮುವೇಲ 16:7 ಓದಿ.) ಹೀಗಿರುವುದರಿಂದ ಯೆಹೋವನು ಇಷಯನ ಏಳು ಹಿರಿಯ ಪುತ್ರರನ್ನು ಆಯ್ಕೆಮಾಡಿಲ್ಲವೆಂದು ಸಮುವೇಲನು ಗ್ರಹಿಸಿದಾಗ, ಕುರಿ ಮೇಯಿಸಲು ಹೋಗಿದ್ದ ಕಿರಿಯವನನ್ನು ಮನೆಗೆ ಕರೆತರುವಂತೆ ಕೇಳಿಕೊಂಡನು. ವೃತ್ತಾಂತವು ಹೇಳುವುದು: “ಇಷಯನು ಅವನನ್ನು [ದಾವೀದನನ್ನು] ಕರತರಿಸಿದನು. ಅವನು ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು. ಯೆಹೋವನು ಸಮುವೇಲನಿಗೆ​—⁠ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ ಎಂದು ಆಜ್ಞಾಪಿಸಲು ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲೇ ಅಭಿಷೇಕಿಸಿದನು. ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು.”​—⁠1 ಸಮು. 16:​11-13.

ದಾವೀದನು ಕ್ರಿಸ್ತನನ್ನು ಮುನ್‌ಚಿತ್ರಿಸಿದನು

4 ದಾವೀದನು ಹುಟ್ಟಿ ಸುಮಾರು 1,100 ವರ್ಷಗಳ ಬಳಿಕ ಅದೇ ಬೇತ್ಲೆಹೇಮ್‌ನಲ್ಲಿ ಯೇಸು ಹುಟ್ಟಿದನು. ಅನೇಕರ ದೃಷ್ಟಿಯಲ್ಲಿ ಯೇಸು ಸಹ ಒಬ್ಬ ರಾಜನಂತೆ ತೋರಲಿಲ್ಲ. ಅಂದರೆ, ಇಸ್ರಾಯೇಲ್ಯರಲ್ಲಿ ಅನೇಕರು ನಿರೀಕ್ಷಿಸಿಕೊಂಡಿದ್ದ ರಾಜನು ಅವನಾಗಿರಲಿಲ್ಲ. ಆದರೆ ದಾವೀದನಂತೆ ಅವನನ್ನು ಯೆಹೋವನೇ ಆಯ್ಕೆಮಾಡಿದ್ದನು. ದಾವೀದನಂತೆ ಅವನು ಸಹ ಯೆಹೋವನಿಗೆ ಪ್ರಿಯನಾಗಿದ್ದನು. * (ಲೂಕ 3:22) ಯೇಸುವಿನ ಮೇಲೂ ‘ಯೆಹೋವನ ಆತ್ಮ ಬಂದು ನೆಲೆಗೊಂಡಿತು.’

5 ದಾವೀದ ಮತ್ತು ಯೇಸುವಿನ ಮಧ್ಯೆ ಇನ್ನೂ ಅನೇಕ ಹೋಲಿಕೆಗಳಿವೆ. ದೃಷ್ಟಾಂತಕ್ಕೆ, ದಾವೀದನ ಆಪ್ತ ಸಲಹೆಗಾರನಾದ ಅಹೀತೋಫೆಲನೇ ಅವನಿಗೆ ದ್ರೋಹಬಗೆದನು. ಯೇಸುವಿಗೆ ಅವನ ಅಪೊಸ್ತಲನಾದ ಇಸ್ಕರಿಯೋತ ಯೂದನು ದ್ರೋಹಬಗೆದನು. (ಕೀರ್ತ. 41:9; ಯೋಹಾ. 13:18) ದಾವೀದ ಮತ್ತು ಯೇಸು ಇವರಿಬ್ಬರಿಗೂ ಯೆಹೋವನ ಆರಾಧನಾ ಸ್ಥಳಕ್ಕಾಗಿ ಉತ್ಕಟ ಅಭಿಮಾನವಿತ್ತು. (ಕೀರ್ತ. 27:4; 69:9; ಯೋಹಾ. 2:17) ಯೇಸು ದಾವೀದನ ವಂಶಜನೂ ಆಗಿದ್ದನು. ಯೇಸುವಿನ ಜನನದ ಮುಂಚೆ ದೇವದೂತನು ಅವನ ತಾಯಿಗಂದದ್ದು: “ಯೆಹೋವ ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು.” (ಲೂಕ 1:32; ಮತ್ತಾ. 1:⁠1) ಮೆಸ್ಸೀಯನ ಕುರಿತ ಎಲ್ಲ ವಾಗ್ದಾನಗಳು ಯೇಸುವಿನಲ್ಲಿ ನೆರವೇರಲಿರುವುದರಿಂದ ಅವನು ದಾವೀದನಿಗಿಂತಲೂ ಶ್ರೇಷ್ಠನಾಗಿದ್ದಾನೆ. ಅವನೇ ಮಹಾ ದಾವೀದನೂ, ದೀರ್ಘಕಾಲದಿಂದ ಜನರು ಎದುರುನೋಡುತ್ತಿದ್ದ ಮೆಸ್ಸೀಯ ರಾಜನೂ ಆಗಿದ್ದಾನೆ.​—⁠ಯೋಹಾ. 7:⁠42.

ಕುರುಬ-ರಾಜನನ್ನು ಹಿಂಬಾಲಿಸಿರಿ

6 ಯೇಸು ಒಬ್ಬ ಕುರುಬನೂ ಆಗಿದ್ದಾನೆ. ಒಬ್ಬ ಒಳ್ಳೇ ಕುರುಬನ ಲಕ್ಷಣಗಳೇನು? ಅವನು ತನ್ನ ಹಿಂಡನ್ನು ನಂಬಿಗಸ್ತಿಕೆಯಿಂದ ಮತ್ತು ಧೈರ್ಯದಿಂದ ಆರೈಕೆಮಾಡುತ್ತಾನೆ, ಉಣಿಸುತ್ತಾನೆ ಮತ್ತು ಸಂರಕ್ಷಿಸುತ್ತಾನೆ. (ಕೀರ್ತ. 23:​2-4) ಯುವಪ್ರಾಯದಲ್ಲಿ ಕುರುಬನಾಗಿದ್ದ ದಾವೀದನು, ತನ್ನ ತಂದೆಯ ಕುರಿಗಳನ್ನು ಚೆನ್ನಾಗಿ ನೋಡಿಕೊಂಡನು. ಹಿಂಡು ಅಪಾಯದಲ್ಲಿದ್ದಾಗ ಅವನು ಧೈರ್ಯ ತೋರಿಸಿದನು. ತನ್ನ ಜೀವವನ್ನೂ ಪಣಕ್ಕೊಡ್ಡಿ, ಕುರಿಗಳನ್ನು ಸಿಂಹ ಹಾಗೂ ಕರಡಿಯ ದಾಳಿಯಿಂದ ರಕ್ಷಿಸಿದನು.​—⁠1 ಸಮು. 17:​34, 35.

7 ದಾವೀದನು ಹುಲ್ಲುಗಾವಲುಗಳಲ್ಲಿ ಮತ್ತು ಗುಡ್ಡಗಾಡುಗಳಲ್ಲಿ ತನ್ನ ಕುರಿಗಳನ್ನು ಮೇಯಿಸುತ್ತಾ ಕಳೆದ ವರ್ಷಗಳು, ಇಸ್ರಾಯೇಲ್‌ ಜನಾಂಗವನ್ನು ಪಾಲಿಸುವಾಗ ಬಂದ ಭಾರೀ ಕರ್ತವ್ಯ ಹಾಗೂ ಜವಾಬ್ದಾರಿಗಳಿಗಾಗಿ ಅವನನ್ನು ಸಿದ್ಧಗೊಳಿಸಿದವು. * (ಕೀರ್ತ. 78:​70, 71) ಯೇಸು ಸಹ ತಾನೊಬ್ಬ ಆದರ್ಶ ಕುರುಬನೆಂಬುದನ್ನು ಸಾಬೀತುಪಡಿಸಿದ್ದಾನೆ. ಅವನು ತನ್ನ ‘ಚಿಕ್ಕ ಹಿಂಡು’ ಹಾಗೂ ‘ಬೇರೆ ಕುರಿಗಳನ್ನು’ ಪರಿಪಾಲಿಸುವಾಗ ಯೆಹೋವನು ಅವನಿಗೆ ಬಲ ಹಾಗೂ ಮಾರ್ಗದರ್ಶನ ಕೊಡುತ್ತಾನೆ. (ಲೂಕ 12:32; ಯೋಹಾ. 10:16) ಹೀಗೆ, ಯೇಸು ಒಳ್ಳೇ ಕುರುಬನಾಗಿದ್ದಾನೆ. ಆತನಿಗೆ ತನ್ನ ಕುರಿಗಳ ಬಗ್ಗೆ ಎಷ್ಟು ಚೆನ್ನಾಗಿ ತಿಳಿದಿದೆಯೆಂದರೆ ಪ್ರತಿಯೊಂದು ಕುರಿಯನ್ನು ಹೆಸರೆತ್ತಿ ಕರೆಯುತ್ತಾನೆ. ಆತನು ತನ್ನ ಕುರಿಗಳನ್ನು ಎಷ್ಟು ಪ್ರೀತಿಸುತ್ತಾನೆಂದರೆ, ಭೂಮಿಯಲ್ಲಿದ್ದಾಗ ಅವರಿಗಾಗಿ ತ್ಯಾಗಗಳನ್ನೂ ಮಾಡಿದನು. (ಯೋಹಾ. 10:​3, 11, 14, 15) ಒಳ್ಳೇ ಕುರುಬನಾದ ಯೇಸು, ದಾವೀದನಿಗೆ ಅಸಾಧ್ಯವಾಗಿದ್ದ ಒಂದು ಸಂಗತಿಯನ್ನು ಸಾಧಿಸುವನು. ಅವನು ಕೊಟ್ಟ ವಿಮೋಚನಾ ಮೌಲ್ಯದ ಯಜ್ಞವು, ಮಾನವರನ್ನು ಮರಣದಿಂದ ರಕ್ಷಿಸುವ ಮಾರ್ಗವನ್ನು ತೆರೆಯಿತು. ತನ್ನ ‘ಚಿಕ್ಕ ಹಿಂಡನ್ನು’ ಸ್ವರ್ಗದಲ್ಲಿ ಅಮರ ಜೀವನಕ್ಕೆ ಮತ್ತು ‘ಬೇರೆ ಕುರಿಗಳನ್ನು’ ನೀತಿಯ ಹೊಸ ಲೋಕದಲ್ಲಿ ನಿತ್ಯಜೀವಕ್ಕೆ ನಡಿಸುವುದರಿಂದ ಆತನನ್ನು ಯಾವುದೂ ತಡೆಯಲಾರದು. ಆ ಹೊಸ ಲೋಕದಲ್ಲಿ ತೋಳಗಳಂತೆ ಕೊಳ್ಳೆಹೊಡೆಯುವ ಜನರಿರರು.​—⁠ಯೋಹಾನ 10:​27-29 ಓದಿ.

ಜಯಶಾಲಿ ರಾಜನನ್ನು ಹಿಂಬಾಲಿಸಿರಿ

8 ರಾಜ ದಾವೀದನು ಒಬ್ಬ ಧೀರ ಯೋಧನಾಗಿದ್ದನು. ಅವನು ದೇವಜನರ ದೇಶವನ್ನು ಸಂರಕ್ಷಿಸಿದನು. “ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿಹೋದರೂ ಜಯವುಂಟಾಯಿತು.” ದಾವೀದನ ನೇತೃತ್ವದಲ್ಲಿ ಆ ಜನಾಂಗದ ಮೇರೆಗಳು, ಐಗುಪ್ತದ ನದಿಯಿಂದ ಯೂಫ್ರೇಟೀಸ್‌ ನದಿಯ ವರೆಗೂ ವಿಸ್ತರಿಸಿದವು. (2 ಸಮು. 8:​1-14) ಯೆಹೋವನ ಬಲದಿಂದ ಆತನು ಅತ್ಯಂತ ಪ್ರಬಲ ರಾಜನಾದನು. ಬೈಬಲ್‌ ಹೇಳುವುದು: “ದಾವೀದನ ಕೀರ್ತಿಯು ಎಲ್ಲಾ ದೇಶಗಳಲ್ಲಿ ಹಬ್ಬಿತು; ಯೆಹೋವನು ಅವನಿಗೆ ಎಲ್ಲಾ ಜನಾಂಗಗಳೂ ಹೆದರುವಂತೆ ಮಾಡಿದನು.”​—⁠1 ಪೂರ್ವ. 14:⁠17.

9 ಯೇಸು ಕೂಡ ರಾಜ ದಾವೀದನಂತೆ ಧೀರನಾಗಿದ್ದನು. ಮುಂದೆ ರಾಜನಾಗಲಿದ್ದ ಅವನು ಭೂಮಿಯಲ್ಲಿದ್ದಾಗ, ದೆವ್ವಗಳ ಮೇಲೆ ತನಗಿರುವ ಅಧಿಕಾರವನ್ನು ತೋರಿಸುತ್ತಾ, ದೆವ್ವಹಿಡಿದಿದ್ದವರನ್ನು ಅವುಗಳ ಹಿಡಿತದಿಂದ ಬಿಡಿಸಿದನು. (ಮಾರ್ಕ 5:​2, 6-13; ಲೂಕ 4:36) ಪರಮಶತ್ರುವಾದ ಪಿಶಾಚನಾದ ಸೈತಾನನಿಗೂ ಅವನ ಮೇಲೆ ಹತೋಟಿಯಿಲ್ಲ. ಯೆಹೋವನ ಬೆಂಬಲದೊಂದಿಗೆ ಯೇಸು, ಸೈತಾನನ ವಶದಲ್ಲಿರುವ ಲೋಕವನ್ನು ಜಯಿಸಿದನು.​—⁠ಯೋಹಾ. 14:30; 16:33; 1 ಯೋಹಾ. 5:⁠19.

10 ಯೇಸು ಸತ್ತು, ಪುನರುತ್ಥಾನ ಹೊಂದಿ, ಪರಲೋಕಕ್ಕೇರಿ ಹೋದ ಸುಮಾರು 60 ವರ್ಷಗಳ ಬಳಿಕ ಅಪೊಸ್ತಲ ಯೋಹಾನನು ಒಂದು ಪ್ರವಾದನಾತ್ಮಕ ದರ್ಶನವನ್ನು ಪಡೆದನು. ಅದರಲ್ಲಿ, ಯೇಸು ಪರಲೋಕದಲ್ಲಿ ಯೋಧ-ರಾಜನಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿದನು. ಯೋಹಾನನು ಬರೆಯುವುದು: “ಇಗೋ, ಒಂದು ಬಿಳಿ ಕುದುರೆಯು ಕಾಣಿಸಿತು ಮತ್ತು ಅದರ ಮೇಲೆ ಕುಳಿತುಕೊಂಡಿದ್ದವನ ಬಳಿ ಒಂದು ಬಿಲ್ಲು ಇತ್ತು; ಅವನಿಗೆ ಒಂದು ಕಿರೀಟವು ಕೊಡಲ್ಪಟ್ಟಿತ್ತು ಮತ್ತು ಅವನು ಜಯಿಸುತ್ತಾ ತನ್ನ ವಿಜಯವನ್ನು ಪೂರ್ಣಗೊಳಿಸಲು ಹೋದನು.” (ಪ್ರಕ. 6:2) ಬಿಳಿ ಕುದುರೆಯ ಮೇಲಿರುವ ಸವಾರನು ಯೇಸು ಆಗಿದ್ದಾನೆ. 1914ರಲ್ಲಿ ಅವನನ್ನು ಸ್ವರ್ಗೀಯ ರಾಜ್ಯದ ರಾಜನಾಗಿ ಪಟ್ಟಕ್ಕೇರಿಸಲಾದಾಗ ‘ಅವನಿಗೆ ಒಂದು ಕಿರೀಟವನ್ನು ಕೊಡಲಾಯಿತು.’ ತದನಂತರ ‘ಅವನು ಜಯಿಸುತ್ತಾ ಹೋದನು.’ ಹೌದು, ದಾವೀದನಂತೆ ಯೇಸುವೂ ಜಯಶಾಲಿ ರಾಜನಾಗಿದ್ದಾನೆ. ದೇವರ ರಾಜ್ಯದ ರಾಜನಾಗಿ ಪಟ್ಟಕ್ಕೇರಿದ ಸ್ವಲ್ಪ ಸಮಯದಲ್ಲೇ, ಯೇಸು ಸೈತಾನನೊಂದಿಗೆ ಯುದ್ಧಮಾಡಿ ಜಯಶಾಲಿಯಾದನು. ತದನಂತರ ಸೈತಾನನನ್ನೂ ಅವನ ದೆವ್ವಗಳನ್ನೂ ಭೂಮಿಗೆ ದೊಬ್ಬಿದನು. (ಪ್ರಕ. 12:​7-9) ಅವನು ಸೈತಾನನ ದುಷ್ಟ ವ್ಯವಸ್ಥೆಯನ್ನು ಪೂರ್ಣವಾಗಿ ನಾಶಗೊಳಿಸಿ ‘ತನ್ನ ವಿಜಯವನ್ನು ಪೂರ್ಣಗೊಳಿಸುವ’ ತನಕ ವಿಜಯದ ಸವಾರಿಯನ್ನು ಮುಂದುವರಿಸುವನು.​—⁠ಪ್ರಕಟನೆ 19:​11, 19-21 ಓದಿ.

11 ದಾವೀದನಂತೆ ಯೇಸು ಒಬ್ಬ ಕರುಣಾಳು ರಾಜನಾಗಿದ್ದಾನೆ ಮತ್ತು ಅರ್ಮಗೆದ್ದೋನ್‌ನಿಂದ “ಮಹಾ ಸಮೂಹ”ದವರನ್ನು ಸಂರಕ್ಷಿಸಲಿದ್ದಾನೆ. (ಪ್ರಕ. 7:​9, 14) ಅಷ್ಟುಮಾತ್ರವಲ್ಲದೆ ಯೇಸು ಹಾಗೂ ಅವನ ಜೊತೆ ಬಾಧ್ಯಸ್ಥರ ಅಂದರೆ ಪುನರುತ್ಥಿತ 1,44,000 ಮಂದಿಯ ಆಳ್ವಿಕೆಯಲ್ಲಿ, ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ (ಅ. ಕಾ. 24:15) ಭೂಮಿ ಮೇಲೆ ಪುನರುತ್ಥಾನವಾಗುವವರಿಗೆ ಸದಾಕಾಲ ಜೀವಿಸುವ ಪ್ರತೀಕ್ಷೆ ಇರುವುದು. ಅವರಿಗಾಗಿ ಎಷ್ಟು ಅದ್ಭುತ ಭವಿಷ್ಯ ಕಾದಿದೆ! ಈ ಭೂಮಿ, ಮಹಾ ದಾವೀದನ ನೀತಿವಂತ ಹಾಗೂ ಸಂತೋಷಿತ ಪ್ರಜೆಗಳಿಂದ ತುಂಬಿಕೊಂಡಿರುವಾಗ, ನಾವು ಸಹ ಅಲ್ಲಿರುವಂತೆ ‘ಒಳ್ಳೆಯದನ್ನೇ ಮಾಡಲು’ ದೃಢನಿರ್ಧಾರ ಮಾಡೋಣ.​—⁠ಕೀರ್ತ. 37:​27-29.

ವಿವೇಕಕ್ಕಾಗಿ ಸೊಲೊಮೋನನು ಮಾಡಿದ ಪ್ರಾರ್ಥನೆಗೆ ಉತ್ತರ

12 ದಾವೀದನ ಪುತ್ರನಾದ ಸೊಲೊಮೋನನು ಸಹ ಯೇಸುವನ್ನು ಮುನ್‌ಚಿತ್ರಿಸಿದನು. * ಸೊಲೊಮೋನನು ರಾಜನಾದಾಗ ಯೆಹೋವನು ಅವನಿಗೆ ಕನಸೊಂದರಲ್ಲಿ ತೋರಿಬಂದು, ಏನೇ ಬೇಡಿದರೂ ಅದನ್ನು ಕೊಡುವೆನೆಂದು ಹೇಳಿದನು. ಸೊಲೊಮೋನನು ಇನ್ನಷ್ಟು ಸಂಪತ್ತು, ಅಧಿಕಾರ, ಇಲ್ಲವೇ ದೀರ್ಘಾಯುಷ್ಯವನ್ನು ಕೇಳಬಹುದಿತ್ತು. ಅದರ ಬದಲು ಅವನು ನಿಸ್ವಾರ್ಥದಿಂದ ಯೆಹೋವನಿಗೆ ಬೇಡಿದ್ದು: “ನಿನ್ನ ಪ್ರಜೆಯಾದ ಈ ಮಹಾಜನಾಂಗವನ್ನು ಆಳುವದಕ್ಕೆ ಸಮರ್ಥರಾರು! ನಾನು ಈ ಜನರ ನಾಯಕನಾಗಿ ಹೋಗುತ್ತಾ ಬರುತ್ತಾ ಇರುವದಕ್ಕೋಸ್ಕರ ನನಗೆ ಜ್ಞಾನವಿವೇಕಗಳನ್ನು ಅನುಗ್ರಹಿಸಬೇಕು.” (2 ಪೂರ್ವ. 1:​7-10) ಸೊಲೊಮೋನನ ಈ ಪ್ರಾರ್ಥನೆಗೆ ಯೆಹೋವನು ಉತ್ತರಕೊಟ್ಟನು.​—⁠2 ಪೂರ್ವಕಾಲವೃತ್ತಾಂತ 1:​11, 12 ಓದಿ.

13 ಸೊಲೊಮೋನನು ಯೆಹೋವನಿಗೆ ನಂಬಿಗಸ್ತನಾಗಿದ್ದಷ್ಟು ಸಮಯ, ಅವನಾಡಿದ ವಿವೇಕದ ನುಡಿಗಳಿಗೆ ಸರಿಸಾಟಿಯಿರಲಿಲ್ಲ. ಅವನು ‘ಮೂರು ಸಾವಿರ ಜ್ಞಾನೋಕ್ತಿಗಳನ್ನು’ ನುಡಿದನು. (1 ಅರ. 4:​30, 32, 34) ಇವುಗಳಲ್ಲಿ ಹೆಚ್ಚಿನವನ್ನು ಬರೆದಿಡಲಾಗಿದೆ ಮತ್ತು ವಿವೇಕವನ್ನು ಪಡೆಯಲಿಚ್ಛಿಸುವವರು ಅವುಗಳನ್ನು ಈಗಲೂ ಅಮೂಲ್ಯವೆಂದೆಣಿಸುತ್ತಾರೆ. ಶೆಬದ ರಾಣಿ ಸೊಲೊಮೋನನ ವಿವೇಕವನ್ನು “ಒಗಟುಗಳಿಂದ ಪರೀಕ್ಷಿಸುವದಕ್ಕೆ” ಸುಮಾರು 2,400 ಕಿಲೊಮೀಟರ್‌ ದೂರದಿಂದ ಬಂದಳು. ಸೊಲೊಮೋನನು ಆಡಿದ ಮಾತುಗಳನ್ನು ಕೇಳಿ ಮತ್ತು ಅವನ ರಾಜ್ಯದ ಸಮೃದ್ಧಿಯನ್ನು ನೋಡಿ ಮೆಚ್ಚುಗೆಯಿಂದ ತಲೆದೂಗಿದಳು. (1 ಅರ. 10:​1-9) ಸೊಲೊಮೋನನ ಆ ವಿವೇಕದ ಮೂಲವನ್ನು ಗುರುತಿಸುತ್ತಾ ಬೈಬಲ್‌ ಹೀಗನ್ನುತ್ತದೆ: “ಭೂಲೋಕದವರೆಲ್ಲರೂ ದೇವರು ಅವನಿಗೆ ಅನುಗ್ರಹಿಸಿದ ಜ್ಞಾನವಾಕ್ಯಗಳನ್ನು ಕೇಳುವದಕ್ಕೋಸ್ಕರ ಅವನ ದರ್ಶನಕ್ಕೆ ಬಂದರು.”​—⁠1 ಅರ. 10:⁠24.

ವಿವೇಕಿ ಅರಸನನ್ನು ಹಿಂಬಾಲಿಸಿರಿ

14 ಮಾನವರ ಪೈಕಿ ಸೊಲೊಮೋನನನ್ನು ವಿವೇಕದಲ್ಲಿ ಮೀರಿಸಿದ್ದು, ಯೇಸು ಕ್ರಿಸ್ತನೊಬ್ಬನೇ. “ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ” ಎಂದು ಅವನು ತನ್ನ ಬಗ್ಗೆ ಹೇಳಿದನು. (ಮತ್ತಾ. 12:42) ಯೇಸು, “ನಿತ್ಯಜೀವದ ಮಾತು”ಗಳನ್ನಾಡಿದನು. (ಯೋಹಾ. 6:68) ಉದಾಹರಣೆಗೆ ಪರ್ವತ ಪ್ರಸಂಗವು, ಸೊಲೊಮೋನನ ಜ್ಞಾನೋಕ್ತಿಗಳಲ್ಲಿರುವ ಕೆಲವೊಂದು ಮೂಲತತ್ತ್ವಗಳನ್ನು ಇನ್ನಷ್ಟು ವಿಶದವಾಗಿ ತಿಳಿಸಿತು. ಯೆಹೋವನ ಆರಾಧಕನಿಗೆ ಸಂತೋಷ ತರಬಲ್ಲ ಹಲವಾರು ವಿಷಯಗಳನ್ನು ಸೊಲೊಮೋನನು ವರ್ಣಿಸಿದ್ದನು. (ಜ್ಞಾನೋ. 3:13; 8:​32, 33; 14:21; 16:20) ಯೆಹೋವನ ಆರಾಧನೆ ಮತ್ತು ಆತನ ವಾಗ್ದಾನಗಳ ನೆರವೇರಿಕೆಗೆ ಸಂಬಂಧಪಟ್ಟ ವಿಷಯಗಳಿಂದ ನಿಜ ಸಂತೋಷ ಸಿಗುತ್ತದೆಂದು ಯೇಸು ಒತ್ತಿಹೇಳಿದನು. ಅವನಂದದ್ದು: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು.” (ಮತ್ತಾ. 5:3) ಯೇಸುವಿನ ಬೋಧನೆಗಳಲ್ಲಿರುವ ಮೂಲತತ್ತ್ವಗಳನ್ನು ಅನ್ವಯಿಸುವವರು “ಜೀವದ ಬುಗ್ಗೆ” ಆದ ಯೆಹೋವನಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಾರೆ. (ಕೀರ್ತ. 36:9; ಜ್ಞಾನೋ. 22:11; ಮತ್ತಾ. 5:⁠8) ಯೇಸು, ‘ದೇವರ ವಿವೇಕದ’ ಪ್ರತಿರೂಪವಾಗಿದ್ದಾನೆ. (1 ಕೊರಿಂ. 1:​24, 30) ಮೆಸ್ಸೀಯ ರಾಜನಾಗಿರುವ ಯೇಸುವಿನಲ್ಲಿ “ಜ್ಞಾನವಿವೇಕದಾಯಕ ಆತ್ಮ” ಇದೆ.​—⁠ಯೆಶಾ. 11:⁠2.

15 ಮಹಾ ಸೊಲೊಮೋನನ ಹಿಂಬಾಲಕರಾದ ನಾವು ದೈವಿಕ ವಿವೇಕದಿಂದ ಹೇಗೆ ಪ್ರಯೋಜನ ಪಡೆಯಬಲ್ಲೆವು? ಯೆಹೋವನ ವಿವೇಕವನ್ನು ಬೈಬಲ್‌ನಲ್ಲಿ ಪ್ರಕಟಪಡಿಸಲಾಗಿರುವುದರಿಂದ ಆ ವಿವೇಕವನ್ನು ಹುಡುಕಲು ಬೈಬಲನ್ನು, ಅದರಲ್ಲೂ ವಿಶೇಷವಾಗಿ ದಾಖಲಾಗಿರುವ ಯೇಸುವಿನ ಮಾತುಗಳನ್ನು ಓದಲು ಮತ್ತು ಓದಿದ್ದನ್ನು ಧ್ಯಾನಿಸಲು ನಾವು ಶ್ರಮಿಸಬೇಕು. (ಜ್ಞಾನೋ. 2:​1-5) ಅಲ್ಲದೇ ದೇವರ ಬಳಿ ವಿವೇಕಕ್ಕಾಗಿ ಕೇಳುವುದನ್ನು ಬಿಟ್ಟುಬಿಡಬಾರದು. ಸಹಾಯಕ್ಕಾಗಿ ನಾವು ಮಾಡುವ ಯಥಾರ್ಥ ಪ್ರಾರ್ಥನೆಗಳಿಗೆ ಖಂಡಿತ ಉತ್ತರ ಸಿಗುವುದೆಂಬ ಆಶ್ವಾಸನೆಯನ್ನು ದೇವರ ವಾಕ್ಯ ಕೊಡುತ್ತದೆ. (ಯಾಕೋ. 1:⁠5) ಪವಿತ್ರಾತ್ಮದ ಸಹಾಯದಿಂದ ನಾವು ದೇವರ ವಾಕ್ಯದಲ್ಲಿ ಅತ್ಯಮೂಲ್ಯವಾದ ವಿವೇಕವನ್ನು ಕಂಡುಕೊಳ್ಳುವೆವು. ಇದು ನಮಗೆ ಸವಾಲುಗಳನ್ನು ನಿಭಾಯಿಸಲು ಮತ್ತು ವಿವೇಕಯುತ ನಿರ್ಣಯಗಳನ್ನು ಮಾಡಲು ನೆರವು ನೀಡುತ್ತದೆ. (ಲೂಕ 11:13) ಸೊಲೊಮೋನನನ್ನು ‘ಜನರಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದ ಪ್ರಸಂಗಿ’ ಅಥವಾ ಸಭೆ ಜಮಾಯಿಸುವವನು ಎಂದೂ ಕರೆಯಲಾಗುತ್ತಿತ್ತು. (ಪ್ರಸಂ. 12:​9, 10) ಕ್ರೈಸ್ತ ಸಭೆಯ ಶಿರಸ್ಸಾಗಿರುವ ಯೇಸು ಸಹ, ತನ್ನ ಜನರ ಸಭೆ ಜಮಾಯಿಸುವವನಾಗಿದ್ದಾನೆ. (ಯೋಹಾ. 10:16; ಕೊಲೊ. 1:18) ಆದ್ದರಿಂದ, ನಮಗೆಲ್ಲಿ ಸದಾ ‘ಬೋಧಿಸಲಾಗುತ್ತದೋ’ ಆ ಸಭಾ ಕೂಟಗಳಿಗೆ ಹಾಜರಾಗಲು ನಮ್ಮಿಂದಾದದ್ದೆಲ್ಲವನ್ನೂ ಮಾಡಬೇಕು.

16 ಸೊಲೊಮೋನನು ತುಂಬ ಸಾಧನೆಗಳನ್ನು ಮಾಡಿದ ರಾಜನಾಗಿದ್ದನು. ಅವನು ಅರಮನೆಗಳು, ರಸ್ತೆಗಳು, ನೀರಿನ ಕಾಮಗಾರಿಗಳು, ಉಗ್ರಾಣಪಟ್ಟಣಗಳು, ಯುದ್ಧರಥಗಳನ್ನಿರಿಸುವ ಪಟ್ಟಣಗಳು ಮತ್ತು ರಾಹುತರ ಪಟ್ಟಣಗಳ ನಿರ್ಮಾಣ ಹೀಗೆ ತನ್ನ ರಾಜ್ಯದಾದ್ಯಂತ ನಿರ್ಮಾಣ ಯೋಜನೆಗಳನ್ನು ಹಮ್ಮಿಕೊಂಡನು. (1 ಅರ. 9:​17-19) ಈ ಯೋಜನೆಗಳಿಂದ ಇಡೀ ರಾಜ್ಯದ ಜನತೆ ಪ್ರಯೋಜನ ಪಡೆಯಿತು. ಯೇಸು ಕೂಡ ನಿರ್ಮಾಣ ಕೆಲಸವನ್ನು ಮಾಡಿದನು. ಅವನು ತನ್ನ ಸಭೆಯನ್ನು “ಬಂಡೆಯ” ಮೇಲೆ ಕಟ್ಟಿದನು. (ಮತ್ತಾ. 16:18) ನೂತನ ಲೋಕದಲ್ಲಿ ನಡೆಯಲಿರುವ ನಿರ್ಮಾಣ ಕಾರ್ಯದ ಉಸ್ತುವಾರಿಯೂ ಅವನದ್ದಾಗಿರುವುದು.​—⁠ಯೆಶಾ. 65:​21, 22.

ಶಾಂತಿಯ ಅರಸನನ್ನು ಹಿಂಬಾಲಿಸಿ

17 ಸೊಲೊಮೋನ ಎಂಬ ಪದವು “ಶಾಂತಿ” ಎಂಬ ಮೂಲಾರ್ಥವಿರುವ ಪದದಿಂದ ಬಂದಿದೆ. “ದುಪ್ಪಟ್ಟು ಶಾಂತಿಯ ನೆಲೆ” ಎಂಬರ್ಥವಿರುವ ಯೆರೂಸಲೇಮ್‌ ಪಟ್ಟಣದಿಂದ ರಾಜ ಸೊಲೊಮೋನನು ಆಳಿದನು. ಅವನ 40 ವರ್ಷಗಳ ಆಳ್ವಿಕೆಯಾದ್ಯಂತ ಇಸ್ರಾಯೇಲ್‌ನಲ್ಲಿ ಹಿಂದೆಂದೂ ಇರದಷ್ಟು ಶಾಂತಿ ರಾರಾಜಿಸಿತು. ಆ ಸಮಯಾವಧಿಯ ಬಗ್ಗೆ ಬೈಬಲ್‌ ಹೇಳುವುದು: “ಸೊಲೊಮೋನನ ಆಳಿಕೆಯಲ್ಲೆಲ್ಲಾ ದಾನ್‌ ಪಟ್ಟಣ ಮೊದಲುಗೊಂಡು ಬೇರ್ಷೆಬದ ವರೆಗಿರುವ ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.” (1 ಅರ. 4:25) ಆದರೆ ಸೊಲೊಮೋನನಿಗೆ ಇಷ್ಟೊಂದು ವಿವೇಕವಿದ್ದರೂ ತನ್ನ ಪ್ರಜೆಗಳನ್ನು ಅನಾರೋಗ್ಯ, ಪಾಪ ಮತ್ತು ಮರಣದ ಸಂಕೋಲೆಗಳಿಂದ ಬಿಡಿಸಲು ಅವನು ಶಕ್ತನಾಗಿರಲಿಲ್ಲ. ಮಹಾ ಸೊಲೊಮೋನನಾದರೋ ತನ್ನ ಪ್ರಜೆಗಳನ್ನು ಅವೆಲ್ಲವುಗಳಿಂದ ಬಿಡಿಸುವನು.​—⁠ರೋಮನ್ನರಿಗೆ 8:​19-21 ಓದಿ.

18 ಇಂದು ಕ್ರೈಸ್ತ ಸಭೆಯಲ್ಲೂ ಶಾಂತಿಭರಿತ ಪರಿಸ್ಥಿತಿ ಇದ್ದು, ನಾವು ಆಧ್ಯಾತ್ಮಿಕ ಪರದೈಸಿನಲ್ಲಿ ಆನಂದಿಸುತ್ತಿದ್ದೇವೆ. ನಾವು ದೇವರೊಂದಿಗೆ ಮತ್ತು ಜೊತೆ ಮಾನವರೊಂದಿಗೆ ಸಮಾಧಾನದಿಂದಿದ್ದೇವೆ. ನಾವಿಂದು ಅನುಭವಿಸುತ್ತಿರುವ ಪರಿಸ್ಥಿತಿಗಳ ಬಗ್ಗೆ ಯೆಶಾಯನು ಏನು ಪ್ರವಾದಿಸಿದನೋ ಅದಕ್ಕೆ ಗಮನಕೊಡಿ: “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” (ಯೆಶಾ. 2:​3, 4) ದೇವರಾತ್ಮಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಮೂಲಕ ನಾವು ಆ ಶಾಂತಿಯನ್ನು ಹೆಚ್ಚಿಸುತ್ತೇವೆ.

19 ಆದರೆ ಭವಿಷ್ಯತ್ತು ಹೆಚ್ಚು ಉತ್ತಮವಾಗಿರುವುದು. ಹಿಂದೆಂದೂ ಇರದಿದ್ದಷ್ಟು ಶಾಂತಿಯನ್ನು ವಿಧೇಯ ಮಾನವರು ಯೇಸುವಿನ ಆಳ್ವಿಕೆಯ ಕೆಳಗೆ ಅನುಭವಿಸುವರು. ಅವರು ಕ್ರಮೇಣ “ನಾಶದ ದಾಸತ್ವದಿಂದ ಬಿಡುಗಡೆಯಾಗಿ” ಪರಿಪೂರ್ಣತೆಗೇರುವರು. (ರೋಮ. 8:21) ಸಾವಿರ ವರ್ಷದಾಳಿಕೆಯ ಕೊನೆಯಲ್ಲಿರುವ ಅಂತಿಮ ಪರೀಕ್ಷೆಯನ್ನು ದಾಟಿದ ನಂತರ “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತ. 37:11; ಪ್ರಕ. 20:​7-10) ಖಂಡಿತವಾಗಿಯೂ ಕ್ರಿಸ್ತ ಯೇಸುವಿನ ಆಳ್ವಿಕೆಯು ನಾವು ಊಹಿಸಿರದಷ್ಟು ವಿಧಗಳಲ್ಲಿ ಸೊಲೊಮೋನನ ಆಳ್ವಿಕೆಯನ್ನು ಮೀರಿಸುವುದು!

20 ಇಸ್ರಾಯೇಲ್‌ ಜನಾಂಗವು ಮೋಶೆ, ದಾವೀದ ಮತ್ತು ಸೊಲೊಮೋನನ ಮೇಲ್ವಿಚಾರಣೆಯಡಿ ಆನಂದಿಸಿದ್ದಕ್ಕಿಂತ ಹೆಚ್ಚಾಗಿ ನಾವು ಕ್ರಿಸ್ತನ ಆಳ್ವಿಕೆಯಡಿ ಆನಂದಿಸಲಿಕ್ಕಿದ್ದೇವೆ. (1 ಅರ. 8:66) ಮಹಾ ಮೋಶೆ, ದಾವೀದ ಮತ್ತು ಸೊಲೊಮೋನನಾಗಿರುವ ತನ್ನ ಒಬ್ಬನೇ ಮಗನನ್ನು ನಮಗಾಗಿ ಕಳುಹಿಸಿಕೊಟ್ಟದ್ದಕ್ಕಾಗಿ ಯೆಹೋವನಿಗೆ ಅನಂತಾನಂತ ಧನ್ಯವಾದಗಳು!

[ಪಾದಟಿಪ್ಪಣಿಗಳು]

^ ಪ್ಯಾರ. 7 ದಾವೀದ ಎಂಬ ಹೆಸರಿನ ಅರ್ಥ, “ಪ್ರಿಯನು” ಎಂದಾಗಿರಬಹುದು. ಯೇಸುವಿನ ದೀಕ್ಷಾಸ್ನಾನ ಮತ್ತು ರೂಪಾಂತರದ ಸಮಯದಲ್ಲೂ ಯೆಹೋವನು ಸ್ವರ್ಗದಿಂದ ಮಾತಾಡಿದಾಗ ಅವನನ್ನು, “ಪ್ರಿಯನಾಗಿರುವ ನನ್ನ ಮಗನು” ಎಂದು ಕರೆದನು.​—⁠ಮತ್ತಾ. 3:17; 17:⁠5.

^ ಪ್ಯಾರ. 11 ಅದೇ ಸಮಯದಲ್ಲಿ ದಾವೀದನು, ಸಂರಕ್ಷಣೆ ಹಾಗೂ ಮಾರ್ಗದರ್ಶನಕ್ಕಾಗಿ ಮಹಾ ಕುರುಬನಾದ ಯೆಹೋವನೆಡೆಗೆ ನೋಡುವ ಮೂಲಕ, ಕುರುಬನಲ್ಲಿ ಭರವಸೆಯಿಡುವ ಒಂದು ಕುರಿಯಂತಾದನು. “ಯೆಹೋವನು ನನಗೆ ಕುರುಬನು; ಕೊರತೆಪಡೆನು” ಎಂದವನು ಪೂರ್ಣ ಭರವಸೆಯಿಂದ ಹೇಳಿದನು. (ಕೀರ್ತ. 23:⁠1) ಸ್ನಾನಿಕನಾದ ಯೋಹಾನನು ಯೇಸುವನ್ನು “ದೇವರ ಕುರಿಮರಿ” ಎಂದು ಗುರುತಿಸಿದನು.​—⁠ಯೋಹಾ. 1:⁠29.

^ ಪ್ಯಾರ. 18 ಆಸಕ್ತಿಕರ ಸಂಗತಿಯೇನೆಂದರೆ, ಸೊಲೊಮೋನನಿಗಿರುವ ಎರಡನೇ ಹೆಸರು “ಯೆದೀದ್ಯ” ಎಂದಾಗಿತ್ತು. ಇದರರ್ಥ “ಯಾಹುವಿಗೆ ಪ್ರಿಯ.”​—⁠2 ಸಮು. 12:​24, 25.

ನೀವು ವಿವರಿಸಬಲ್ಲಿರೋ?

• ಯೇಸು ಮಹಾ ದಾವೀದನಾಗಿರುವುದು ಹೇಗೆ?

• ಯೇಸು ಮಹಾ ಸೊಲೊಮೋನನಾಗಿರುವುದು ಹೇಗೆ?

• ಮಹಾ ಸೊಲೊಮೋನನೂ ಆಗಿರುವ ಮಹಾ ದಾವೀದನಲ್ಲಿ ನೀವೇನನ್ನು ಮೆಚ್ಚುತ್ತೀರಿ?

[ಅಧ್ಯಯನ ಪ್ರಶ್ನೆಗಳು]

1, 2. ದಾವೀದನನ್ನು ರಾಜನಾಗಿ ಅಭಿಷೇಕಿಸುವಂತೆ ಸಮುವೇಲನಿಗೆ ಹೇಳಲಾದದ್ದು, ಮಾನವ ದೃಷ್ಟಿಕೋನದಲ್ಲಿ ವಿಚಿತ್ರವೆನಿಸುತ್ತದೇಕೆ?

3. (ಎ) ಯೆಹೋವನು ಒಬ್ಬ ವ್ಯಕ್ತಿಯನ್ನು ಪರೀಕ್ಷಿಸುವಾಗ ಯಾವುದಕ್ಕೆ ಹೆಚ್ಚು ಮಹತ್ತ್ವ ಕೊಡುತ್ತಾನೆ? (ಬಿ) ದಾವೀದನನ್ನು ಅಭಿಷೇಕಿಸಿದ ಬಳಿಕ ಏನಾಯಿತು?

4, 5. (ಎ) ದಾವೀದ ಮತ್ತು ಯೇಸುವಿನ ನಡುವಿನ ಕೆಲವೊಂದು ಹೋಲಿಕೆಗಳನ್ನು ತಿಳಿಸಿ. (ಬಿ) ಯೇಸುವನ್ನು ಮಹಾ ದಾವೀದನೆಂದು ಕರೆಯಬಹುದೇಕೆ?

6. ದಾವೀದನು ಯಾವ ವಿಧಗಳಲ್ಲಿ ಒಬ್ಬ ಒಳ್ಳೇ ಕುರುಬನಾಗಿದ್ದನು?

7. (ಎ) ರಾಜನ ಕರ್ತವ್ಯಗಳನ್ನು ನಿರ್ವಹಿಸಲು ದಾವೀದನನ್ನು ಯಾವುದು ಸಿದ್ಧಗೊಳಿಸಿತು? (ಬಿ) ಯೇಸು ತಾನು ಒಳ್ಳೇ ಕುರುಬನೆಂದು ಸಾಬೀತುಪಡಿಸಿದ್ದು ಹೇಗೆ?

8. ದಾವೀದನು ಜಯಶಾಲಿ ರಾಜನಾದದ್ದು ಹೇಗೆ?

9. ಮುಂದೆ ರಾಜನಾಗಲಿದ್ದ ಯೇಸು ಹೇಗೆ ಜಯಶಾಲಿಯಾಗಿದ್ದ ಎಂಬುದನ್ನು ವಿವರಿಸಿರಿ.

10, 11. ಸ್ವರ್ಗದಲ್ಲಿ ಯೋಧ-ರಾಜನ ಪಾತ್ರದಲ್ಲಿ ಯೇಸು ಏನೆಲ್ಲ ಮಾಡಲಿಕ್ಕಿದೆ?

12. ಸೊಲೊಮೋನನು ಯಾವುದಕ್ಕಾಗಿ ಪ್ರಾರ್ಥಿಸಿದನು?

13. ಸೊಲೊಮೋನನ ವಿವೇಕವು ಹೇಗೆ ಸರಿಸಾಟಿಯಿಲ್ಲದ್ದಾಗಿತ್ತು, ಮತ್ತು ಅದರ ಮೂಲವೇನು?

14. ಯೇಸು ಯಾವ ವಿಧಗಳಲ್ಲಿ “ಸೊಲೊಮೋನನಿಗಿಂತಲೂ ಹೆಚ್ಚಿನವನು” ಆಗಿದ್ದನು?

15. ದೈವಿಕ ವಿವೇಕದಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?

16. ಸೊಲೊಮೋನ ಮತ್ತು ಯೇಸುವಿನ ನಡುವೆಯಿರುವ ಹೋಲಿಕೆಗಳೇನು?

17. (ಎ) ಸೊಲೊಮೋನನ ಆಳ್ವಿಕೆಯ ವೈಶಿಷ್ಟ್ಯವೇನಾಗಿತ್ತು? (ಬಿ) ಸೊಲೊಮೋನನು ಏನನ್ನು ಸಾಧಿಸಲು ಅಶಕ್ತನಾಗಿದ್ದನು?

18. ಕ್ರೈಸ್ತ ಸಭೆಯಲ್ಲಿ ನಾವು ಯಾವ ಪರಿಸ್ಥಿತಿಯನ್ನು ಆನಂದಿಸುತ್ತಿದ್ದೇವೆ?

19, 20. ಆನಂದಿಸಲು ನಮಗೆ ಯಾವ ಕಾರಣಗಳಿವೆ?

[ಪುಟ 31ರಲ್ಲಿರುವ ಚಿತ್ರ]

ಸೊಲೊಮೋನನಿಗೆ ದೇವರು ಕೊಟ್ಟ ವಿವೇಕ ಮಹಾ ಸೊಲೊಮೋನನ ವಿವೇಕದ ಮುನ್‌ಛಾಯೆಯಾಗಿತ್ತು

[ಪುಟ 32ರಲ್ಲಿರುವ ಚಿತ್ರ]

ಯೇಸುವಿನ ಆಳ್ವಿಕೆಯು ನಾವು ಊಹಿಸಿರದಷ್ಟು ವಿಧಗಳಲ್ಲಿ ಸೊಲೊಮೋನನ ಮತ್ತು ದಾವೀದನ ಆಳ್ವಿಕೆಯನ್ನು ಮೀರಿಸುವುದು!