ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಬಲ್ಲಿರೋ?

ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಬಲ್ಲಿರೋ?

ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಬಲ್ಲಿರೋ?

“ಅಮೆರಿಕದಲ್ಲಿ ನಮ್ಮ ಜೀವನ ಆರಾಮವಾಗಿ ಸಾಗುತ್ತಿತ್ತು. ಆದರೆ ಅಲ್ಲಿನ ಪ್ರಾಪಂಚಿಕ ವಾತಾವರಣ ಕ್ರಮೇಣ ನಮ್ಮ ಮೇಲೂ ನಮ್ಮ ಮಕ್ಕಳ ಮೇಲೂ ನಕಾರಾತ್ಮಕ ಪ್ರಭಾವಬೀರುವುದೆಂದು ಚಿಂತಿತರಾಗಿದ್ದೆವು. ನಾನು ಮತ್ತು ನನ್ನ ಪತ್ನಿ ಹಿಂದೆ ಮಿಷನೆರಿಗಳಾಗಿದ್ದೆವು. ಸರಳವಾದರೂ ಸಂತೋಷಭರಿತವಾದ ಆ ಜೀವನವನ್ನು ಪುನಃ ಒಮ್ಮೆ ಆನಂದಿಸಲು ನಮಗೆ ಮನಸ್ಸಿತ್ತು.”

ಈ ಆಸೆಯಿಂದ ಪ್ರಚೋದಿತರಾದ ರಾಲ್ಫ್‌ ಮತ್ತು ಪ್ಯಾಮ್‌ 1991ರಲ್ಲಿ ಹಲವಾರು ಬ್ರಾಂಚ್‌ ಆಫೀಸುಗಳಿಗೆ ಪತ್ರಬರೆದು, ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವ ಸ್ಥಳದಲ್ಲಿ ಸೇವೆಸಲ್ಲಿಸುವ ತಮ್ಮ ಮನದಿಚ್ಛೆಯನ್ನು ವ್ಯಕ್ತಪಡಿಸಿದರು. ಮೆಕ್ಸಿಕೊದ ಬ್ರಾಂಚ್‌ ಆಫೀಸು ಅವರ ಪತ್ರಕ್ಕೆ ಉತ್ತರಕೊಡುತ್ತಾ, ತಮ್ಮ ದೇಶದಲ್ಲಿ ಆಂಗ್ಲ ಭಾಷೆಯನ್ನಾಡುವವರಿಗೆ ಸಾರಲು ರಾಜ್ಯ ಪ್ರಚಾರಕರ ತುರ್ತು ಅಗತ್ಯವಿದೆಯೆಂದು ಹೇಳಿತು. ಆ ಕ್ಷೇತ್ರವು, ವಾಸ್ತವದಲ್ಲಿ ‘ಕೊಯ್ಲಿಗೆ ಸಿದ್ಧವಾಗಿದೆ’ ಎಂದು ಆ ಬ್ರಾಂಚ್‌ ಹೇಳಿತು. (ಯೋಹಾ. 4:35) ಸ್ವಲ್ಪ ಸಮಯದಲ್ಲೇ ರಾಲ್ಫ್‌, ಪ್ಯಾಮ್‌ ಹಾಗೂ 8 ಮತ್ತು 12ರ ಪ್ರಾಯದ ಅವರ ಪುತ್ರರು ಈ ಆಮಂತ್ರಣವನ್ನು ಸ್ವೀಕರಿಸಿ, ಆ ದೇಶಕ್ಕೆ ಸ್ಥಳಾಂತರಿಸಲು ಸಿದ್ಧತೆಗಳನ್ನು ಮಾಡಿದರು.

ವಿಶಾಲವಾದ ಟೆರಿಟೊರಿ

ರಾಲ್ಫ್‌ ವಿವರಿಸುವುದು: “ನಾವು ಅಮೆರಿಕದಿಂದ ಹೊರಡುವ ಮುಂಚೆ, ನಮ್ಮ ಹಿತೈಷಿಗಳಾದ ಕೆಲವು ಸಹೋದರ ಸಹೋದರಿಯರು, ‘ಬೇರೆ ದೇಶಕ್ಕೆ ಸ್ಥಳಾಂತರಿಸುವುದು ತುಂಬ ಅಪಾಯಕಾರಿ!’ ‘ನೀವು ಕಾಯಿಲೆಬಿದ್ದಲ್ಲಿ ಏನು ಮಾಡುವಿರಿ?’ ‘ಆಂಗ್ಲ ಭಾಷೆಯಾಡುವವರಿಗೆ ಸಾರಲು ನೀವೇಕೆ ಸ್ಥಳಾಂತರಿಸಬೇಕು? ಅಲ್ಲಿ, ಆಂಗ್ಲ ಭಾಷೆಯಾಡುವವರಿಗೆ ಸತ್ಯದಲ್ಲಿ ಆಸಕ್ತಿಯೇ ಇರುವುದಿಲ್ಲ!’ ಎಂದು ಹೇಳಿದರು. ಆದರೆ ನಾವು ಈಗಾಗಲೇ ಮನಸ್ಸುಮಾಡಿ ಆಗಿತ್ತು. ಈ ನಿರ್ಣಯವೇನೂ ದುಡುಕಿನದ್ದಾಗಿರಲಿಲ್ಲ, ಎಲ್ಲವನ್ನೂ ಜಾಗ್ರತೆಯಿಂದ ಆಲೋಚಿಸಿಯೇ ಮಾಡಿದ್ದೆವು. ಇದಕ್ಕಾಗಿ ನಾವು ಎಷ್ಟೋ ವರ್ಷಗಳಿಂದ ಯೋಜನೆಗಳನ್ನು ಮಾಡಿದ್ದೆವು. ನಾವು ದೀರ್ಘಾವಧಿಯ ಸಾಲಗಳನ್ನು ಮಾಡಿರಲಿಲ್ಲ, ಹಣವನ್ನು ಕೂಡಿಸಿಟ್ಟಿದ್ದೆವು ಮತ್ತು ಎದುರಿಸಬಹುದಾದ ಕಷ್ಟಗಳ ಕುರಿತು ಕುಟುಂಬವಾಗಿ ಹಲವಾರು ಬಾರಿ ಚರ್ಚಿಸಿದ್ದೆವು.”

ಮೊಟ್ಟಮೊದಲು ರಾಲ್ಫ್‌ ಮತ್ತವನ ಕುಟುಂಬ ಮೆಕ್ಸಿಕೊ ಬ್ರಾಂಚ್‌ಗೆ ಭೇಟಿನೀಡಿತು. ದೇಶಕ್ಕೆ ಹೊಸದಾಗಿ ಬಂದಿದ್ದ ಇವರಿಗೆ, ಅಲ್ಲಿದ್ದ ಸಹೋದರರು ಇಡೀ ದೇಶದ ಭೂಪಟವನ್ನು ತೋರಿಸಿ, “ಇದು ನಿಮ್ಮ ಟೆರಿಟೊರಿ!” ಎಂದು ಹೇಳಿದರು. ಈ ಕುಟುಂಬವು, ಮೆಕ್ಸಿಕೊ ನಗರದಿಂದ ನೈರುತ್ಯಕ್ಕೆ 240 ಕಿಲೊಮೀಟರ್‌ ದೂರದಲ್ಲಿದ್ದ ಸಾ ಮಿಗೆಲ್‌ ತಾ ಅಯೆಂಡಾ ಎಂಬ ಪಟ್ಟಣದಲ್ಲಿ ನೆಲೆಸಿತು. ಅಲ್ಲಿ ತುಂಬ ವಿದೇಶೀಯರಿದ್ದರು. ಈ ಕುಟುಂಬವು ಆ ಪಟ್ಟಣಕ್ಕೆ ಬಂದ ಮೂರು ವರ್ಷಗಳೊಳಗೆ ಅಲ್ಲಿ 19 ಪ್ರಚಾರಕರುಳ್ಳ ಇಂಗ್ಲಿಷ್‌ ಸಭೆಯ ರಚನೆಯಾಯಿತು. ಇದು ಮೆಕ್ಸಿಕೊದಲ್ಲೇ ಪ್ರಪ್ರಥಮ ಇಂಗ್ಲಿಷ್‌ ಸಭೆಯಾಗಿತ್ತು. ಆದರೆ ಇನ್ನೂ ಬಹಳಷ್ಟು ಕೆಲಸವು ಬಾಕಿಯಿತ್ತು.

ಮೆಕ್ಸಿಕೊದಲ್ಲಿ ಒಂದು ಲಕ್ಷ ಅಮೆರಿಕನ್‌ ಪ್ರಜೆಗಳಿದ್ದಾರೆಂದು ಅಂದಾಜಿಸಲಾಗಿದೆ. ಅಲ್ಲದೆ, ಹಲವಾರು ಮೆಕ್ಸಿಕನ್‌ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಕೂಡ ಇಂಗ್ಲಿಷ್‌ ಭಾಷೆಯನ್ನಾಡುತ್ತಾರೆ. ರಾಲ್ಫ್‌ ವಿವರಿಸುವುದು: “ಸುವಾರ್ತೆ ಸಾರಲು ಹೆಚ್ಚಿನ ಕೆಲಸಗಾರರಿಗಾಗಿ ನಾವು ಪ್ರಾರ್ಥಿಸಿದೆವು. ಅಗತ್ಯವಿರುವ ಸ್ಥಳದಲ್ಲಿ ಸೇವೆಮಾಡುವ ಉದ್ದೇಶದಿಂದ ಈ ‘ದೇಶ ನೋಡುವುದಕ್ಕೆ’ ಬರುತ್ತಿದ್ದ ಸಹೋದರ ಸಹೋದರಿಯರಿಗೆಂದೇ ನಮ್ಮ ಮನೆಯಲ್ಲಿ ಒಂದು ಕೋಣೆಯನ್ನು ಯಾವಾಗಲೂ ಖಾಲಿಯಾಗಿಡುತ್ತಿದ್ದೆವು.”​—⁠ಅರ. 13:⁠2.

ಶುಶ್ರೂಷೆಯನ್ನು ಹೆಚ್ಚಿಸಲು ಜೀವನ ಸರಳೀಕರಿಸಿದರು

ಸ್ವಲ್ಪದರಲ್ಲೇ, ತಮ್ಮ ಶುಶ್ರೂಷೆಯನ್ನು ಹೆಚ್ಚಿಸಲು ಬಯಸಿದ ಇನ್ನಷ್ಟು ಸಹೋದರ ಸಹೋದರಿಯರು ಬಂದರು. ಇವರಲ್ಲಿ, ಅಮೆರಿಕದಿಂದ ಬಂದ ಬಿಲ್‌ ಮತ್ತು ಕ್ಯಾಥಿ ಎಂಬ ದಂಪತಿ ಇದ್ದರು. ಇವರು, ಹೆಚ್ಚಿನ ಪ್ರಚಾರಕರ ಅಗತ್ಯವಿರುವ ಟೆರಿಟೊರಿಗಳಲ್ಲಿ ಈಗಾಗಲೇ 25 ವರ್ಷ ಸೇವೆಸಲ್ಲಿಸಿದ್ದರು. ಅವರು ಸ್ಪ್ಯಾನಿಷ್‌ ಭಾಷೆ ಕಲಿಯಬೇಕೆಂದಿದ್ದರು. ಆದರೆ ಅವರು ಚಪಾಲಾ ಸರೋವರದ ದಡದಲ್ಲಿರುವ ಅಕೀಕೀಕ್‌ ಪಟ್ಟಣಕ್ಕೆ ಸ್ಥಳಾಂತರಿಸಿದಾಗ ಅವರ ಯೋಜನೆಗಳು ಬದಲಾದವು. ಆ ಪಟ್ಟಣವು ಅಮೆರಿಕದಿಂದ ಬಂದಿದ್ದ ನಿವೃತ್ತ ವ್ಯಕ್ತಿಗಳ ಸ್ವರ್ಗವಾಗಿದೆ. ಬಿಲ್‌ ವಿವರಿಸುವುದು, “ಅಕೀಕೀಕ್‌ನಲ್ಲಿ, ಸತ್ಯವನ್ನು ಕಲಿಯಲು ಬಯಸಿದ ಆಂಗ್ಲ ಭಾಷೆಯ ಹಲವಾರು ಜನರು ನಮಗೆ ಸಿಕ್ಕಿದರು.” ಬಿಲ್‌ ಮತ್ತು ಕ್ಯಾಥಿ ಆ ಪಟ್ಟಣಕ್ಕೆ ಬಂದ ಎರಡು ವರ್ಷಗಳೊಳಗೆ ಅಲ್ಲೊಂದು ಇಂಗ್ಲಿಷ್‌ ಸಭೆಯ ರಚನೆಯಾಗುವುದನ್ನು ನೋಡುವ ಸಂತೋಷ ಪಡೆದರು. ಇದು, ಮೆಕ್ಸಿಕೊ ದೇಶದಲ್ಲಿ ಎರಡನೇ ಇಂಗ್ಲಿಷ್‌ ಸಭೆಯಾಗಿತ್ತು.

ಕೆನಡದವರಾದ ಕೆನ್‌ ಮತ್ತು ಜೊಆನ್‌ ತಮ್ಮ ಜೀವನವನ್ನು ಸರಳೀಕರಿಸಿ, ರಾಜ್ಯ ಅಭಿರುಚಿಗಳಿಗಾಗಿ ಹೆಚ್ಚು ಸಮಯ ಕೊಡಲಪೇಕ್ಷಿಸಿದರು. ಆದುದರಿಂದ ಅವರು ಸಹ ಮೆಕ್ಸಿಕೊ ದೇಶಕ್ಕೆ ಸ್ಥಳಾಂತರಿಸಿದರು. ಕೆನ್‌ ಹೇಳುವುದು: “ಹಲವಾರು ದಿನಗಳ ವರೆಗೆ ಬಿಸಿ ನೀರು ಸಿಗದ, ಕರೆಂಟು ಇಲ್ಲದಿರುವ ಅಥವಾ ಟೆಲಿಪೋನ್‌ನ ಸೌಕರ್ಯ ಕಡಿದುಹೋಗಿರುವ ಸ್ಥಳಕ್ಕೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.” ಆದರೂ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವುದು ಆನಂದದ ಮೂಲವಾಗಿತ್ತು. ಸ್ವಲ್ಪದರಲ್ಲೇ ಕೆನ್‌ ಶುಶ್ರೂಷಾ ಸೇವಕನಾದನು ಮತ್ತು ಎರಡು ವರ್ಷಗಳ ಬಳಿಕ ಹಿರಿಯನಾದನು. ಮೊದಮೊದಲು ಅವರ ಮಗಳಾದ ಬ್ರಿಟನಿಗೆ ಕಷ್ಟವಾಯಿತು ಏಕೆಂದರೆ ಅವರು ಹೋಗುತ್ತಿದ್ದ ಇಂಗ್ಲಿಷ್‌ ಸಭೆ ಚಿಕ್ಕದಾಗಿದ್ದು ಅದರಲ್ಲಿ ಕೆಲವೇ ಯುವ ಜನರಿದ್ದರು. ಆದರೆ ಅವಳು ಸಭಾಗೃಹ ನಿರ್ಮಾಣ ಯೋಜನೆಯಲ್ಲಿ ತನ್ನನ್ನು ತೊಡಗಿಸಿಕೊಂಡ ನಂತರ ದೇಶದಾದ್ಯಂತ ಅನೇಕರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಳು.

ಅಮೆರಿಕದ ಟೆಕ್ಸಾಸ್‌ ರಾಜ್ಯದವರಾದ ಪ್ಯಾಟ್ರಿಕ್‌ ಮತ್ತು ರೊಕ್ಸಾನ್‌, ಇಂಗ್ಲಿಷ್‌ ಭಾಷೆಯನ್ನಾಡುವ ಜನರಿರುವ, ಹೆಚ್ಚು ದೂರದಲ್ಲಿರದ ಒಂದು ಮಿಷನೆರಿ ಕ್ಷೇತ್ರಕ್ಕೆ ತಾವು ಸ್ಥಳಾಂತರಿಸಬಹುದೆಂದು ಕೇಳಿ ಪುಳಕಿತರಾದರು. ಪ್ಯಾಟ್ರಿಕ್‌ ಹೇಳುವುದು: “ಮೆಕ್ಸಿಕೊದ ವಾಯುವ್ಯ ದಿಕ್ಕಿನಲ್ಲಿರುವ ಮೊಂಟೆರಿ ಪಟ್ಟಣವನ್ನು ಭೇಟಿ ಮಾಡಿದ ನಂತರ, ಅಲ್ಲಿ ಸಹಾಯ ಮಾಡುವಂತೆ ಯೆಹೋವನೇ ನಮ್ಮನ್ನು ಕಳುಹಿಸುತ್ತಿದ್ದಾನೋ ಎಂಬಂತೆ ಭಾಸವಾಯಿತು.” ಅದರಂತೆ ಅವರು ಐದೇ ದಿನಗಳಲ್ಲಿ ಟೆಕ್ಸಾಸ್‌ನಲ್ಲಿದ್ದ ತಮ್ಮ ಮನೆಯನ್ನು ಮಾರಿ, ಮೊಂಟೆರಿಗೆ ತಲಪಿದರು. ಇದು, ಅವರು ಸಾಂಕೇತಿಕಾರ್ಥದಲ್ಲಿ ‘ಮಕೆದೋನ್ಯಕ್ಕೆ ಬಂದಂತೆ’ ಇತ್ತು. (ಅ. ಕಾ. 16:⁠9) ಮೆಕ್ಸಿಕೊದಲ್ಲಿ ಜೀವನೋಪಾಯಕ್ಕಾಗಿ ದುಡಿಯುವುದು ಅಷ್ಟೇನೂ ಸುಲಭವಾಗಿರುವುದಿಲ್ಲ. ಆದರೆ 17 ಸಾಕ್ಷಿಗಳಿದ್ದ ಚಿಕ್ಕ ಗುಂಪು ಎರಡೇ ವರ್ಷಗಳಲ್ಲಿ 40 ಪ್ರಚಾರಕರ ಸಭೆಯಾಗಿ ಬೆಳೆಯುವುದನ್ನು ನೋಡುವ ಆನಂದ ಅವರದ್ದಾಗಿದೆ.

ಜೆಫ್‌ ಮತ್ತು ಡೆಬ್‌ ಎಂಬ ದಂಪತಿ ಕೂಡ ಶುಶ್ರೂಷೆಯನ್ನು ಹೆಚ್ಚಿಸಲಿಕ್ಕಾಗಿ ಜೀವನವನ್ನು ಸರಳೀಕರಿಸಿದರು. ಅವರು ಅಮೆರಿಕದಲ್ಲಿದ್ದ ತಮ್ಮ ದೊಡ್ಡ ಬಂಗಲೆಯನ್ನು ಮಾರಿ ಮೆಕ್ಸಿಕೊದ ಪೂರ್ವ ಕರಾವಳಿಯ ಕ್ಯಾನ್‌ಕುನ್‌ ಎಂಬ ನಗರಕ್ಕೆ ಬಂದು ಚಿಕ್ಕ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸಿದರು. ಈ ಮುಂಚೆ ಅವರಿಗೆ ತಮ್ಮ ಮನೆಯ ಹತ್ತಿರದಲ್ಲೇ, ಹವಾನಿಯಂತ್ರಿತ ಕಟ್ಟಡಗಳಲ್ಲಿ ಸಮ್ಮೇಳನಗಳಿಗೆ ಹಾಜರಾಗುವುದು ಅಭ್ಯಾಸವಾಗಿಬಿಟ್ಟಿತ್ತು. ಆದರೆ ಈಗ ಅವರು ಇಂಗ್ಲಿಷ್‌ ಸಮ್ಮೇಳನಗಳಿಗೆ ಹಾಜರಾಗಲು ಎಂಟು ತಾಸು ಪ್ರಯಾಣ ಮಾಡಬೇಕಾಗುತ್ತದೆ ಮತ್ತು ಈ ಸಮ್ಮೇಳನಗಳು ತೆರೆದ ಸಭಾಂಗಣಗಳಲ್ಲಿ ನಡೆಯುತ್ತವೆ. ಆದರೆ ಕ್ಯಾನ್‌ಕುನ್‌ನಲ್ಲಿ ಸುಮಾರು 50 ಪ್ರಚಾರಕರಿರುವ ಸಭೆ ಆರಂಭವಾಗುವುದನ್ನು ನೋಡಿ ಅವರಿಗೆ ಬಹಳಷ್ಟು ತೃಪ್ತಿಯೆನಿಸಿದೆ.

ಮೆಕ್ಸಿಕೊದ ಕೆಲವು ಸಹೋದರ ಸಹೋದರಿಯರು ಸಹ, ಇಂಗ್ಲಿಷ್‌ ಭಾಷೆಯಲ್ಲಿ ಸಾರಲು ಸಹಾಯ ಮಾಡಲಾರಂಭಿಸಿದರು. ಉದಾಹರಣೆಗೆ, ಸಾ ಮಿಗೆಲ್‌ ತಾ ಅಯೆಂಡಾ ಎಂಬ ಪಟ್ಟಣದಲ್ಲಿ ಪ್ರಥಮ ಇಂಗ್ಲಿಷ್‌ ಸಭೆ ರಚನೆಯಾಗಿದೆ ಮತ್ತು ಇಡೀ ಮೆಕ್ಸಿಕೊ ದೇಶ ಅದರ ಟೆರಿಟೊರಿಯಾಗಿದೆ ಎಂದು ರೂಬೆನ್‌ ಹಾಗೂ ಅವರ ಕುಟುಂಬಕ್ಕೆ ತಿಳಿದಾಗ, ಸಹಾಯನೀಡಲು ಅವರು ಕೂಡಲೇ ನಿರ್ಣಯಿಸಿದರು. ಇದಕ್ಕಾಗಿ ಅವರು ಇಂಗ್ಲಿಷ್‌ ಭಾಷೆ ಕಲಿಯಬೇಕಿತ್ತು, ಭಿನ್ನ ಸಂಸ್ಕೃತಿಗೆ ಒಗ್ಗಿಕೊಳ್ಳಬೇಕಿತ್ತು ಮತ್ತು ಕೂಟಗಳಿಗಾಗಿ ತುಂಬ ದೂರ, ಅಂದರೆ ಪ್ರತಿ ವಾರ 800 ಕಿಲೊಮೀಟರ್‌ ಪ್ರಯಾಣ ಮಾಡಬೇಕಿತ್ತು. ರೂಬೆನ್‌ ತಿಳಿಸುವುದು: “ಮೆಕ್ಸಿಕೊದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ ವಿದೇಶೀಯರಿಗೆ ಸಾಕ್ಷಿಕೊಡುವ ಮೂಲಕ, ಅವರು ಸುವಾರ್ತೆಯನ್ನು ಪ್ರಥಮ ಬಾರಿ ತಮ್ಮ ಸ್ವಂತ ಭಾಷೆಯಲ್ಲಿ ಕೇಳಿಸಿಕೊಳ್ಳುವಂತೆ ಮಾಡುವ ಆನಂದ ನಮಗೆ ಸಿಕ್ಕಿದೆ. ಇವರಲ್ಲಿ ಕೆಲವರು ತಮ್ಮ ಕೃತಜ್ಞತೆ ಸೂಚಿಸುವಾಗ ಅವರ ಕಣ್ಣಾಲಿಗಳು ತುಂಬಿಬರುತ್ತಿದ್ದವು.” ರೂಬೆನ್‌ ಮತ್ತು ಅವನ ಕುಟುಂಬದವರು, ಸಾ ಮಿಗೆಲ್‌ ತಾ ಅಯೆಂಡಾದಲ್ಲಿದ್ದ ಸಭೆಗೆ ಸಹಾಯ ನೀಡಿದ ನಂತರ ಮಧ್ಯ ಮೆಕ್ಸಿಕೊದ ಗುಯಾನಜುವಾಟೊ ಪಟ್ಟಣದಲ್ಲಿ ಪಯನೀಯರರಾಗಿ ಸೇವೆಸಲ್ಲಿಸಿದರು. ಅಲ್ಲಿ ಅವರು, 30ಕ್ಕಿಂತಲೂ ಹೆಚ್ಚು ಮಂದಿ ಪ್ರಚಾರಕರಿರುವ ಒಂದು ಇಂಗ್ಲಿಷ್‌ ಸಭೆಯನ್ನು ರಚಿಸಲು ಸಹಾಯಮಾಡಿದರು. ಇಂದು, ಗುಯಾನಜುವಾಟೊ ಪಟ್ಟಣಕ್ಕೆ ಹತ್ತಿರದಲ್ಲೇ ಇರುವ ಇರಾಪ್ವಾಟೊ ಎಂಬಲ್ಲಿ, ಇಂಗ್ಲಿಷ್‌ ಗುಂಪೊಂದರಲ್ಲಿ ಅವರು ಸೇವೆ ಮಾಡುತ್ತಿದ್ದಾರೆ.

ಸುಲಭವಾಗಿ ಮಾತಾಡಲು ಸಿಗದ ಜನರನ್ನು ತಲಪುವುದು

ವಿದೇಶೀಯರಲ್ಲದೆ, ಅನೇಕ ಮೆಕ್ಸಿಕನ್ನರೂ ಇಂಗ್ಲಿಷ್‌ ಮಾತಾಡುತ್ತಾರೆ. ಅವರಿಗೆ ರಾಜ್ಯ ಸಂದೇಶವನ್ನು ತಿಳಿಸುವುದು ತುಂಬ ಕಷ್ಟಕರ ಏಕೆಂದರೆ ಇವರು ಶ್ರೀಮಂತ ವಠಾರಗಳಲ್ಲಿ ಜೀವಿಸುತ್ತಾರೆ ಮತ್ತು ಸಂದರ್ಶಕರನ್ನು ಎದುರುಗೊಳ್ಳಲು ಮನೆಬಾಗಲಿಗೆ ಆಳುಗಳೇ ಬರುತ್ತಾರೆ. ಒಂದುವೇಳೆ ಮನೆಯವರೇ ಮನೆಬಾಗಿಲಿಗೆ ಬಂದರೂ, ಯೆಹೋವನ ಸಾಕ್ಷಿಗಳು ಒಂದು ಸ್ಥಳಿಕ ಚಿಕ್ಕ ಪಂಥವೆಂದು ನೆನಸುತ್ತಾ ನಮ್ಮ ಸಂದೇಶಕ್ಕೆ ಕಿವಿಗೊಡುವುದಿಲ್ಲ. ಆದರೆ ಇಂಥ ಮನೆಯವರನ್ನು ಬೇರೆ ದೇಶಗಳಿಂದ ಬಂದ ಸಾಕ್ಷಿಗಳು ಮಾತಾಡಿಸುವಾಗ ಕೆಲವರು ಒಳ್ಳೇ ಪ್ರತಿಕ್ರಿಯೆ ತೋರಿಸುತ್ತಾರೆ.

ಮಧ್ಯ ಮೆಕ್ಸಿಕೊದ ಕ್ವೆರೆಟಾರೊ ನಗರದಲ್ಲಿರುವ ಗ್ಲೊರಿಯ ಎಂಬವಳ ಉದಾಹರಣೆ ತೆಗೆದುಕೊಳ್ಳಿ. ಆಕೆ ವಿವರಿಸುವುದು: “ಹಿಂದೆ, ಸ್ಪ್ಯಾನಿಷ್‌ ಭಾಷೆಯಾಡುವ ಸಾಕ್ಷಿಗಳು ನನ್ನನ್ನು ಸಂಪರ್ಕಿಸಿದ್ದರು ಆದರೆ ನಾನವರಿಗೆ ಕಿವಿಗೊಡಲಿಲ್ಲ. ಆದರೆ ನನ್ನ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಸಮಸ್ಯೆಗಳು ಕಾಡಲಾರಂಭಿಸಿದಾಗ, ನಾನು ಖಿನ್ನಳಾದೆ ಮತ್ತು ದಾರಿ ತೋರಿಸುವಂತೆ ಅಂಗಲಾಚುತ್ತಾ ದೇವರಿಗೆ ಪ್ರಾರ್ಥಿಸಿದೆ. ಸ್ವಲ್ಪ ಸಮಯದಲ್ಲೇ, ಇಂಗ್ಲಿಷ್‌ ಮಾತಾಡುವ ಸ್ತ್ರೀಯೊಬ್ಬಳು ನನ್ನ ಮನೆಬಾಗಲಿಗೆ ಬಂದಳು. ಮನೆಯಲ್ಲಿ ಯಾರಿಗಾದರೂ ಇಂಗ್ಲಿಷ್‌ ಅರ್ಥವಾಗುತ್ತದೋ ಎಂದವಳು ಕೇಳಿದಳು. ವಿದೇಶದವಳಾಗಿದ್ದ ಅವಳ ಬಗ್ಗೆ ನನ್ನ ಕುತೂಹಲ ಕೆರಳಿತು. ನನಗೆ ಇಂಗ್ಲಿಷ್‌ ಬರುತ್ತದೆಂದು ಹೇಳಿದೆ. ಅವಳು ತನ್ನ ನಿರೂಪಣೆಯನ್ನು ಕೊಡುತ್ತಿದ್ದಾಗ ನಾನು, ‘ಈ ಅಮೆರಿಕನ್‌ ಸ್ತ್ರೀಗೆ ಇಲ್ಲೇನು ಕೆಲಸ?’ ಎಂದು ಯೋಚಿಸುತ್ತಾ ಇದ್ದೆ. ಆದರೆ ನಾನು ಸಹಾಯಕ್ಕಾಗಿ ದೇವರನ್ನು ಬೇಡಿಕೊಂಡಿದ್ದೆ. ಆದುದರಿಂದ ಈ ವಿದೇಶೀ ಸ್ತ್ರೀಯು ನನ್ನ ಪ್ರಾರ್ಥನೆಗೆ ದೇವರು ಕೊಟ್ಟ ಉತ್ತರವಾಗಿರಬೇಕು ಎಂದುಕೊಂಡೆ.” ಗ್ಲೊರಿಯ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡಳು ಮತ್ತು ಕುಟುಂಬದ ವಿರೋಧದ ಮಧ್ಯೆಯೂ ಶೀಘ್ರ ಪ್ರಗತಿ ಮಾಡಿ, ದೀಕ್ಷಾಸ್ನಾನಪಡೆದಳು. ಇಂದು ಗ್ಲೊರಿಯ ಒಬ್ಬ ರೆಗ್ಯುಲರ್‌ ಪಯನೀಯರಳಾಗಿದ್ದಾಳೆ ಮತ್ತು ಅವಳ ಗಂಡ ಹಾಗೂ ಮಗನೂ ಯೆಹೋವನನ್ನು ಆರಾಧಿಸುತ್ತಾರೆ.

ಶುಶ್ರೂಷೆಯನ್ನು ಹೆಚ್ಚಿಸುವವರಿಗೆ ಪ್ರತಿಫಲಗಳು

ರಾಜ್ಯ ಪ್ರಚಾರಕರ ಅಗತ್ಯವಿರುವ ಸ್ಥಳದಲ್ಲಿ ಸೇವೆಸಲ್ಲಿಸುವಾಗ ಹಲವಾರು ಪಂಥಾಹ್ವಾನಗಳಿದ್ದರೂ ಸಿಗುವ ಪ್ರತಿಫಲಗಳಾದರೋ ಹೇರಳ. ಆರಂಭದಲ್ಲಿ ತಿಳಿಸಲಾದ ರಾಲ್ಫ್‌ ಹೇಳಿದ್ದು: “ಚೀನಾ, ಜಮೈಕಾ, ಬ್ರಿಟನ್‌, ಸ್ವೀಡನ್‌ ದೇಶಗಳ ಜನರೊಂದಿಗೆ ಮಾತ್ರವಲ್ಲದೆ ಘಾನದ ರಾಜಮನೆತನದವರೊಂದಿಗೂ ನಾವು ಬೈಬಲ್‌ ಅಧ್ಯಯನಗಳನ್ನು ನಡೆಸಿದ್ದೇವೆ. ಇವರಲ್ಲಿ ಕೆಲವು ಬೈಬಲ್‌ ವಿದ್ಯಾರ್ಥಿಗಳು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದ್ದಾರೆ. ಕಳೆದ ವರ್ಷಗಳಲ್ಲಿ ನಮ್ಮ ಕುಟುಂಬವು, ಏಳು ಇಂಗ್ಲಿಷ್‌ ಸಭೆಗಳು ಆರಂಭವಾಗುವುದನ್ನು ನೋಡಿದೆ. ನಮ್ಮಿಬ್ಬರೂ ಪುತ್ರರು ನಮ್ಮೊಂದಿಗೆ ಪಯನೀಯರ್‌ ಸೇವೆ ಆರಂಭಿಸಿದರು. ಈಗ ಅವರು ಅಮೆರಿಕದ ಬೆತೆಲ್‌ನಲ್ಲಿ ಸೇವೆಸಲ್ಲಿಸುತ್ತಿದ್ದಾರೆ.”

ಸದ್ಯಕ್ಕೆ, ಮೆಕ್ಸಿಕೊದಲ್ಲಿ 88 ಇಂಗ್ಲಿಷ್‌ ಸಭೆಗಳೂ ಹಲವಾರು ಗುಂಪುಗಳೂ ಇವೆ. ಇಂಥ ಕ್ಷಿಪ್ರ ಬೆಳವಣಿಗೆಗೆ ಕಾರಣವೇನು? ಮೆಕ್ಸಿಕೊದಲ್ಲಿರುವ ಇಂಗ್ಲಿಷ್‌ ಜನರನ್ನು ಸಾಕ್ಷಿಗಳು ಹಿಂದೆಂದೂ ಸಂಪರ್ಕಿಸಿರಲಿಲ್ಲ. ಇನ್ನಿತರರು ಉತ್ತಮ ಪ್ರತಿಕ್ರಿಯೆ ತೋರಿಸಲು ಕಾರಣವೇನೆಂದರೆ, ಒಂದುವೇಳೆ ಅವರು ಸ್ವದೇಶಗಳಲ್ಲಿ ಇರುತ್ತಿದ್ದಲ್ಲಿ ಅವರನ್ನು ತಡೆಗಟ್ಟಸಾಧ್ಯವಿದ್ದ ಸಮಾನಸ್ಥರ ಒತ್ತಡ ಅವರಿಗೆ ಇಲ್ಲಿರಲಿಲ್ಲ. ಇನ್ನೂ ಕೆಲವರು ನಿವೃತ್ತರಾಗಿದ್ದು, ಆಧ್ಯಾತ್ಮಿಕ ಅಭಿರುಚಿಗಳನ್ನು ಬೆನ್ನಟ್ಟಲು ಸಮಯವಿದ್ದದರಿಂದ ಬೈಬಲ್‌ ಅಧ್ಯಯನವನ್ನು ಸ್ವೀಕರಿಸಿದ್ದರು. ಅಷ್ಟುಮಾತ್ರವಲ್ಲದೆ, ಇಂಗ್ಲಿಷ್‌ ಸಭೆಗಳಲ್ಲಿರುವ ಪ್ರತಿ ಮೂವರು ಪ್ರಚಾರಕರಲ್ಲಿ ಒಬ್ಬರು ಪಯನೀಯರರಿದ್ದಾರೆ. ಇದು ಆ ಸಭೆಗಳ ಉತ್ಸಾಹ ಮತ್ತು ಬೆಳವಣಿಗೆಗೆ ಇಂಬುಕೊಟ್ಟಿದೆ.

ನಿಮಗಾಗಿ ಆಶೀರ್ವಾದಗಳು ಕಾದಿವೆ

ಲೋಕದಾದ್ಯಂತ ಜನರು ರಾಜ್ಯ ಸಂದೇಶವನ್ನು ತಮ್ಮ ಸ್ವಂತ ಭಾಷೆಯಲ್ಲಿ ಕೇಳಿಸಿಕೊಳ್ಳುವಾಗ ಅವರಲ್ಲಿ ಹೆಚ್ಚಿನವರು ಪ್ರತಿಕ್ರಿಯೆ ತೋರಿಸುವರು. ಆಧ್ಯಾತ್ಮಿಕ ಮನಸ್ಸಿನ ಸಹೋದರ ಸಹೋದರಿಯರಲ್ಲಿ ಅನೇಕ ಯುವ ಜನರು, ವೃದ್ಧರು, ವಿವಾಹಿತರು, ಅವಿವಾಹಿತರು ರಾಜ್ಯ ಘೋಷಕರ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಲು ಸಿದ್ಧರಿರುವುದನ್ನು ನೋಡುವುದು ತುಂಬ ಉತ್ತೇಜನದಾಯಕ. ಅವರಿಗೆ ಕಷ್ಟಗಳು ಎದುರಾದರೂ, ಬೈಬಲ್‌ ಸತ್ಯಗಳನ್ನು ಸ್ವೀಕರಿಸುವ ಪ್ರಾಮಾಣಿಕ ಹೃದಯದ ಜನರು ಸಿಗುವಾಗ ಅವರಿಗಾಗುವ ಸಂತೋಷದ ಎದುರಿನಲ್ಲಿ ಅವು ಮಾಸಿಹೋಗುತ್ತವೆ. ಸ್ವದೇಶದಲ್ಲಿ ಇಲ್ಲವೇ ವಿದೇಶದಲ್ಲಿ, ಹೆಚ್ಚು ರಾಜ್ಯ ಘೋಷಕರ ಅಗತ್ಯವಿರುವ ಟೆರಿಟೊರಿಗೆ ಸ್ಥಳಾಂತರಿಸಲು ನೀವು ಹೊಂದಾಣಿಕೆಗಳನ್ನು ಮಾಡಬಲ್ಲಿರೋ? * (ಲೂಕ 14:​28-30; 1 ಕೊರಿಂ. 16:⁠9) ಹಾಗೆ ಮಾಡುವಲ್ಲಿ, ಹೇರಳ ಆಶೀರ್ವಾದಗಳು ಕಾದಿವೆಯೆಂಬ ಖಾತ್ರಿ ನಿಮಗಿರಲಿ.

[ಪಾದಟಿಪ್ಪಣಿ]

^ ಪ್ಯಾರ. 21 ಅಗತ್ಯ ಹೆಚ್ಚಿರುವಲ್ಲಿ ಸೇವೆಸಲ್ಲಿಸುವುದರ ಬಗ್ಗೆ ಅಧಿಕ ಮಾಹಿತಿಗಾಗಿ ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ 111-112 ಪುಟಗಳನ್ನು ನೋಡಿ.

[ಪುಟ 21ರಲ್ಲಿರುವ ಚೌಕ]

ನಿವೃತ್ತರಾದವರ ಸಂತೋಷ ಗಮನ ಸೆಳೆಯುತ್ತದೆ

ಬೆರಲ್‌ ಎಂಬಾಕೆಯು ಬ್ರಿಟನ್‌ನಿಂದ ಕೆನಡಕ್ಕೆ ವಲಸೆಹೋದಳು. ಅಲ್ಲಿ ಹಲವಾರು ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಮ್ಯಾನೇಜರಳಾಗಿ ಕೆಲಸಮಾಡಿದಳು. ಆಕೆ, ಕುದುರೆಸವಾರಿಯಲ್ಲೂ ಪರಿಣತಳಾಗಿ, 1980ರ ಓಲಿಂಪಿಕ್ಸ್‌ ಆಟದಲ್ಲಿ ಕೆನಡ ದೇಶವನ್ನು ಪ್ರತಿನಿಧಿಸಲು ಆಯ್ಕೆಯಾದಳು. ನಿವೃತ್ತಳಾಗಿ ಮೆಕ್ಸಿಕೊದ ಚಪಾಲಾಕ್ಕೆ ಬಂದು ನೆಲೆಸಿದ ಬಳಿಕ ಬೆರಲ್‌ ಮತ್ತವಳ ಗಂಡ ಹೆಚ್ಚಾಗಿ ಸ್ಥಳಿಕ ರೆಸ್ಟೊರೆಂಟ್‌ಗಳಲ್ಲಿ ಊಟಮಾಡುತ್ತಿದ್ದರು. ಅಲ್ಲಿ, ನಿವೃತ್ತರಾದ ಆಂಗ್ಲರು ಸಂತೋಷವಾಗಿರುವುದನ್ನು ನೋಡಿದಾಗಲೆಲ್ಲ, ಆಕೆ ಅವರ ಬಳಿ ಹೋಗಿ ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದಳು ಮತ್ತು ಅವರು ಮೆಕ್ಸಿಕೊದಲ್ಲಿ ಏನು ಮಾಡುತ್ತಿದ್ದಾರೆಂದು ಕೇಳುತ್ತಿದ್ದಳು. ಆ ಸಂತೋಷಭರಿತ ಜನರಲ್ಲಿ ಹೆಚ್ಚಿನವರು ಯೆಹೋವನ ಸಾಕ್ಷಿಗಳಾಗಿರುತ್ತಿದ್ದರು. ದೇವರ ಬಗ್ಗೆ ತಿಳಿಯುವುದರಿಂದ ಸಂತೋಷ ಹಾಗೂ ಜೀವನಕ್ಕೊಂದು ಉದ್ದೇಶ ಸಿಗುವುದಾದರೆ ತಾವೂ ದೇವರ ಬಗ್ಗೆ ತಿಳಿಯಬೇಕೆಂದು ಬೆರಲ್‌ ಮತ್ತವಳ ಗಂಡ ನೆನಸಿದರು. ಹಲವಾರು ತಿಂಗಳುಗಳ ವರೆಗೆ ಕ್ರೈಸ್ತ ಕೂಟಗಳಿಗೆ ಹಾಜರಾದ ಬಳಿಕ ಬೆರಲ್‌ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡಳು. ಈಗ ಹಲವಾರು ವರ್ಷಗಳಿಂದ ಬೆರಲ್‌ ರೆಗ್ಯುಲರ್‌ ಪಯನೀಯರಳಾಗಿದ್ದಾಳೆ.

[ಪುಟ 22ರಲ್ಲಿರುವ ಚೌಕ]

“ಅವರು ನಮ್ಮೊಂದಿಗಿರುವುದು ವರವೇ ಸರಿ”

ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸುವವರನ್ನು ಅಲ್ಲಿನ ಸಹೋದರರು ತುಂಬ ಮಾನ್ಯಮಾಡುತ್ತಾರೆ. ಕೆರೀಬಿಯನ್‌ ಪ್ರದೇಶದ ಬ್ರಾಂಚ್‌ ಆಫೀಸೊಂದು ಹೀಗೆ ಪತ್ರ ಬರೆಯಿತು: “ಇಲ್ಲಿ ಸೇವೆಸಲ್ಲಿಸುತ್ತಿರುವ ನೂರಾರು ಮಂದಿ ವಿದೇಶೀಯರು ಹೊರಟುಹೋದರೆ, ಸಭೆಗಳ ಸ್ಥಿರತೆಗೆ ಹಾನಿಯಾಗುವುದು. ಅವರು ನಮ್ಮೊಂದಿಗಿರುವುದು ಒಂದು ವರವೇ ಸರಿ.”

“ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು” ಎಂದು ದೇವರ ವಾಕ್ಯ ತಿಳಿಸುತ್ತದೆ. (ಕೀರ್ತ. 68:11) ಆದುದರಿಂದ, ವಿದೇಶದಲ್ಲಿ ಸೇವೆಸಲ್ಲಿಸುತ್ತಿರುವವರಲ್ಲಿ ಅನೇಕರು ಅವಿವಾಹಿತ ಸಹೋದರಿಯರಾಗಿರುವುದು ಆಶ್ಚರ್ಯವೇನಲ್ಲ. ಸ್ವತ್ಯಾಗದ ಮನೋಭಾವವುಳ್ಳ ಈ ಸಹೋದರಿಯರಿಂದ ತುಂಬ ಸಹಾಯವಾಗುತ್ತದೆ. ಪೂರ್ವ ಯೂರೋಪಿನ ಬ್ರಾಂಚ್‌ ಆಫೀಸೊಂದು ಹೇಳಿದ್ದು: “ನಮ್ಮ ಅನೇಕ ಸಭೆಗಳಲ್ಲಿ ಸಹೋದರಿಯರೇ ಹೆಚ್ಚು. ಕೆಲವೊಂದು ಸಭೆಗಳಲ್ಲಿ 70 ಶೇಕಡದಷ್ಟು ಸಹೋದರಿಯರಿದ್ದಾರೆ. ಅವರಲ್ಲಿ ಹೆಚ್ಚಿನವರು ಸತ್ಯದಲ್ಲಿ ಹೊಸಬರು. ಆದರೆ ಬೇರೆ ದೇಶಗಳಿಂದ ಬಂದಿರುವ ಅವಿವಾಹಿತ ಪಯನೀಯರ್‌ ಸಹೋದರಿಯರು ಈ ಹೊಸಬರಿಗೆ ತರಬೇತಿ ಕೊಡುತ್ತಾ ಅತ್ಯಮೂಲ್ಯವಾದ ನೆರವನ್ನು ನೀಡುತ್ತಿದ್ದಾರೆ. ಈ ವಿದೇಶೀ ಸಹೋದರಿಯರು ನಿಜವಾಗಿಯೂ ನಮಗೆ ಉಡುಗೊರೆಯಾಗಿದ್ದಾರೆ!”

ವಿದೇಶದಲ್ಲಿ ಸೇವೆಸಲ್ಲಿಸುವುದರ ಬಗ್ಗೆ ಈ ಸಹೋದರಿಯರಿಗೆ ಹೇಗನಿಸುತ್ತದೆ? ಅವಿವಾಹಿತ ಪಯನೀಯರಳಾಗಿ ಹಲವಾರು ವರ್ಷ ವಿದೇಶದಲ್ಲಿ ಸೇವೆಸಲ್ಲಿಸಿದ, 35ರ ಆಸುಪಾಸಿನ ಪ್ರಾಯದ ಆ್ಯಂಜಲೀಕ ಎಂಬ ಸಹೋದರಿಯೊಬ್ಬಳು ಹೇಳುವುದು: “ಸವಾಲುಗಳು ಅನೇಕ. ಒಂದು ನೇಮಕದಲ್ಲಿದ್ದಾಗ, ನಾನು ದಿನಾಲೂ ಕೆಸರು ತುಂಬಿದ ರಸ್ತೆಗಳಲ್ಲಿ ನಡೆಯಲು ಒದ್ದಾಡುತ್ತಿದ್ದೆ. ಸುತ್ತಲೂ ಮಾನವ ಕಷ್ಟಾನುಭವದ ದೃಶ್ಯಗಳೇ ಕಣ್ಣಿಗೆಬೀಳುತ್ತಿದ್ದವು ಮತ್ತು ಇದು ಖಿನ್ನತೆಯನ್ನು ಉಂಟುಮಾಡುತ್ತಿತ್ತು. ಆದರೆ ಶುಶ್ರೂಷೆಯಲ್ಲಿ ಜನರಿಗೆ ಸಹಾಯ ಮಾಡುವಾಗ ನನಗೆ ತೃಪ್ತಿ ಸಿಗುತ್ತಿತ್ತು. ಸ್ಥಳಿಕ ಸಹೋದರಿಯರು, ನಾನವರಿಗೆ ಸಹಾಯಮಾಡಲು ಬಂದದ್ದಕ್ಕಾಗಿ ಅನೇಕ ಬಾರಿ ಕೃತಜ್ಞತೆ ಸೂಚಿಸುತ್ತಿದ್ದಾಗ ನನ್ನ ಹೃದಯ ಅರಳುತ್ತಿತ್ತು. ಒಬ್ಬಾಕೆ ಸಹೋದರಿಯಂತೂ, ನಾನು ನನ್ನ ದೇಶ ಬಿಟ್ಟು ಅವಳ ದೇಶಕ್ಕೆ ಬರುವ ಮೂಲಕ ಇಟ್ಟ ಮಾದರಿಯು ಅವಳು ಸಹ ಪೂರ್ಣ ಸಮಯದ ಶುಶ್ರೂಷೆ ಆರಂಭಿಸುವಂತೆ ಪ್ರಚೋದಿಸಿದೆಯೆಂದು ಹೇಳಿದಳು.”

50ರ ಆಸುಪಾಸಿನ ಪ್ರಾಯದ ಸೂ ಎಂಬ ಹೆಸರಿನ ಪಯನೀಯರಳೊಬ್ಬಳು ಹೇಳುವುದು: “ಸವಾಲುಗಳು ಇದ್ದೇ ಇರುತ್ತವೆ, ಆದರೆ ನಿಮಗೆ ಸಿಗುವ ಆಶೀರ್ವಾದಗಳೊಂದಿಗೆ ಹೋಲಿಸುವಾಗ ಅವು ಏನೇನೂ ಅಲ್ಲ. ಶುಶ್ರೂಷೆಯು ಉಲ್ಲಾಸದಾಯಕವಾಗಿರುತ್ತದೆ! ನಾನು ಸೇವೆಯಲ್ಲಿ ಯುವ ಸಹೋದರಿಯರೊಂದಿಗೆ ತುಂಬ ಸಮಯ ಕಳೆಯುವುದರಿಂದ, ಅಡೆತಡೆಗಳನ್ನು ನಿಭಾಯಿಸುವ ಬಗ್ಗೆ ನಾನು ಬೈಬಲ್‌ ಹಾಗೂ ಪ್ರಕಾಶನಗಳಿಂದ ಕಲಿತಿರುವ ವಿಷಯಗಳನ್ನು ಅವರೊಂದಿಗೆ ಹಂಚುತ್ತೇನೆ. ಹಲವಾರು ವರ್ಷಗಳಿಂದ ಅವಿವಾಹಿತ ಪಯನೀಯರಳಾಗಿ ಸೇವೆಸಲ್ಲಿಸುತ್ತಾ ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ನಾನಿಟ್ಟಿರುವ ಮಾದರಿಯು, ಬದುಕಿನ ಸವಾಲುಗಳನ್ನು ತಾವೂ ಜಯಿಸಸಾಧ್ಯವಿದೆ ಎಂಬುದನ್ನು ಗ್ರಹಿಸುವಂತೆ ಸಹಾಯ ಮಾಡಿದೆಯೆಂದು ಅವರು ನನಗೆ ಹೇಳುತ್ತಾರೆ. ಈ ಸಹೋದರಿಯರಿಗೆ ಸಹಾಯಮಾಡುವುದರಿಂದ ನನಗೆ ಸಿಗುವ ತೃಪ್ತಿ ಅಷ್ಟಿಷ್ಟಲ್ಲ.”

[ಪುಟ 20ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಮೆಕ್ಸಿಕೊ

ಮೊಂಟೆರಿ

ಗುಯಾನಜುವಾಟೊ

ಇರಾಪ್ವಾಟೊ

ಅಕೀಕೀಕ್‌

ಚಪಾಲಾ

ಚಪಾಲಾ ಸರೋವರ

ಸಾ ಮಿಗೆಲ್‌ತಾ ಅಯೆಂಡಾ

ಕ್ವೆರೆಟಾರೊ

ಮೆಕ್ಸಿಕೊ ನಗರ

ಕ್ಯಾನ್‌ಕುನ್‌

[ಪುಟ 23ರಲ್ಲಿರುವ ಚಿತ್ರ]

ಸುವಾರ್ತೆಯನ್ನು ಪ್ರಥಮ ಬಾರಿ ಕೇಳುತ್ತಿರುವ ವಿದೇಶೀಯರಿಗೆ ಸಾಕ್ಷಿಕೊಡುವ ಖುಷಿ ಕೆಲವರಿಗೆ ಸಿಕ್ಕಿದೆ