ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂತ್ಯ ಬರುವಾಗ ನೀವೆಲ್ಲಿರುವಿರಿ?

ಅಂತ್ಯ ಬರುವಾಗ ನೀವೆಲ್ಲಿರುವಿರಿ?

ಅಂತ್ಯ ಬರುವಾಗ ನೀವೆಲ್ಲಿರುವಿರಿ?

ಅರ್ಮಗೆದೋನಿನಲ್ಲಿ ಯೆಹೋವನು ಸದ್ಯದ ದುಷ್ಟ ವ್ಯವಸ್ಥೆಗೆ ಅಂತ್ಯ ತರುವಾಗ ಯಥಾರ್ಥವಂತರಿಗೆ ಏನಾಗುವುದು? “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು” ಎಂದು ಜ್ಞಾನೋಕ್ತಿ 2:21, 22 ಉತ್ತರಿಸುತ್ತದೆ.

ಹಾಗಾದರೆ, ನಿರ್ದೋಷಿಗಳು ಹೇಗೆ ಭೂಮಿಯಲ್ಲಿ ನೆಲೆಯಾಗಿ ಉಳಿದುಕೊಳ್ಳುವರು? ಆಶ್ರಯಕ್ಕಾಗಿ ಅವರಿಗೆ ಯಾವುದಾದರೊಂದು ಸ್ಥಳವಿರುವುದೋ? ಅಂತ್ಯ ಬರುವಾಗ ಯಥಾರ್ಥವಂತರು ಎಲ್ಲಿರಬೇಕು? ಗತಕಾಲದಲ್ಲಿ ಪಾರಾದವರ ಕುರಿತು ತಿಳಿಸುವ ಬೈಬಲಿನ ನಾಲ್ಕು ವೃತ್ತಾಂತಗಳು ಈ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ.

ಎಲ್ಲಿರಬೇಕೆಂಬುದು ಮುಖ್ಯವಾಗಿತ್ತು

ಮೂಲಪಿತೃಗಳಾದ ನೋಹ ಮತ್ತು ಲೋಟರು ಪಾರುಮಾಡಲ್ಪಟ್ಟ ಕುರಿತು 2 ಪೇತ್ರ 2:5-7ರಲ್ಲಿ ನಾವು ಹೀಗೆ ಓದುತ್ತೇವೆ: “[ದೇವರು] ಪುರಾತನ ಲೋಕವನ್ನು ಸುಮ್ಮನೆ ಬಿಡದೆ, ಭಕ್ತಿಹೀನ ಜನರ ಆ ಲೋಕದ ಮೇಲೆ ಜಲಪ್ರಳಯವನ್ನು ಬರಮಾಡಿದನು; ಆದರೆ ನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ರಕ್ಷಿಸಿದನು. ಸೊದೋಮ್‌ ಮತ್ತು ಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡುವ ಮೂಲಕ ಆತನು ಅವುಗಳನ್ನು ಖಂಡಿಸಿದನು; ಈ ಮೂಲಕ ಭಕ್ತಿಹೀನ ವ್ಯಕ್ತಿಗಳಿಗೆ ಸಂಭವಿಸಲಿರುವ ಸಂಗತಿಗಳ ಕುರಿತು ಒಂದು ನಮೂನೆಯನ್ನು ಇಟ್ಟನು. ನಿಯಮವನ್ನು ಉಲ್ಲಂಘಿಸುವ ಜನರು ಸಡಿಲು ನಡತೆಯಲ್ಲಿ ಮುಳುಗಿರುವುದನ್ನು ಕಂಡು ಬಹಳವಾಗಿ ದುಃಖಿತನಾಗಿದ್ದ ನೀತಿವಂತನಾದ ಲೋಟನನ್ನು ಆತನು ಪಾರುಮಾಡಿದನು.”

ನೋಹನು ಜಲಪ್ರಳಯದಿಂದ ಹೇಗೆ ಪಾರಾದನು? ದೇವರು ನೋಹನಿಗೆ, “ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ; ನಾನು ಅವರನ್ನೂ ಭೂಮಿಯ ಮೇಲಿರುವುದೆಲ್ಲವನ್ನೂ ಅಳಿಸಿ ಬಿಡುತ್ತೇನೆ. ನೀನು ತುರಾಯಿ ಮರದಿಂದ ನಾವೆಯನ್ನು ಮಾಡಿಕೋ” ಎಂದು ಹೇಳಿದನು. (ಆದಿ. 6:13, 14) ಯೆಹೋವನು ಹೇಳಿದಂತೆಯೇ ನೋಹನು ನಾವೆಯನ್ನು ಕಟ್ಟಿದನು. ಜಲಪ್ರಳಯಕ್ಕೆ ಸರಿಯಾಗಿ ಏಳು ದಿನಗಳಿಗೆ ಮುಂಚೆ ನೋಹನು ಪ್ರಾಣಿಗಳನ್ನು ಹಾಗೂ ತನ್ನ ಮನೆಮಂದಿಯನ್ನು ನಾವೆಯೊಳಗೆ ಕರೆದುಕೊಂಡು ಹೋಗುವಂತೆ ಯೆಹೋವನು ಸೂಚಿಸಿದನು. ಏಳನೆಯ ದಿನದಲ್ಲಿ ಯೆಹೋವನು ನಾವೆಯ ಬಾಗಿಲನ್ನು ಮುಚ್ಚಿದನು, ನಂತರ “ನಾಲ್ವತ್ತು ದಿನವೂ ಹಗಲಿರುಳು ಭೂಮಿಯ ಮೇಲೆ ದೊಡ್ಡ ಮಳೆ ಸುರಿಯಿತು.” (ಆದಿ. 7:1-4, 11, 12, 16) ನೋಹ ಮತ್ತು ಅವನ ಕುಟುಂಬವು “ನೀರಿನ ಮಧ್ಯೆ ಸುರಕ್ಷಿತವಾಗಿ ಪಾರಾದರು.” (1 ಪೇತ್ರ 3:20) ನಾವೆಯೊಳಗೆ ಇದ್ದದರಿಂದಲೇ ಅವರು ನಾಶನದಿಂದ ಪಾರಾದರು. ಭೂಮಿಯ ಮೇಲೆ ಇನ್ಯಾವ ಸ್ಥಳದಲ್ಲಿದ್ದರೂ ಪಾರಾಗುತ್ತಿರಲಿಲ್ಲ.—ಆದಿ. 7:19, 20.

ಲೋಟನಿಗಾದರೋ ಭಿನ್ನವಾದ ಸೂಚನೆಗಳನ್ನು ಕೊಡಲಾಗಿತ್ತು. ಎಲ್ಲಿರಬಾರದಿತ್ತು ಎಂದು ಇಬ್ಬರು ದೇವದೂತರು ಅವನಿಗೆ ಹೇಳಿದರು. “[ಸೊದೋಮ್‌] ಪಟ್ಟಣದಲ್ಲಿ ನಿನಗಿರುವ ಬೇರೆ ಎಲ್ಲರನ್ನೂ ಊರ ಹೊರಕ್ಕೆ ಕರೆದುಕೊಂಡು ಬಾ. ನಾವು ಈ ಸ್ಥಳವನ್ನು ನಾಶಮಾಡುವದಕ್ಕೆ ಬಂದವರು” ಎಂದು ಆ ದೇವದೂತರು ಲೋಟನಿಗೆ ಹೇಳಿದರು. ಅಂದರೆ ಪ್ರಾಣ ಉಳಿಸಿಕೊಳ್ಳಲಿಕ್ಕಾಗಿ ಅವರೆಲ್ಲರೂ ‘ಬೆಟ್ಟದ ಸೀಮೆಗೆ ಓಡಿಹೋಗಬೇಕಿತ್ತು.’—ಆದಿ. 19:12, 13, 17.

“ಯೆಹೋವನು ದೇವಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ ತಪ್ಪಿಸುವುದಕ್ಕೂ ಅನೀತಿವಂತರನ್ನು ತೆಗೆದುಹಾಕಲಿಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಅವರನ್ನು ಕಾದಿರಿಸುವುದಕ್ಕೂ ತಿಳಿದವನಾಗಿದ್ದಾನೆ” ಎಂಬುದನ್ನು ನೋಹ ಹಾಗೂ ಲೋಟರ ವೃತ್ತಾಂತಗಳು ಸಾಬೀತುಪಡಿಸುತ್ತವೆ. (2 ಪೇತ್ರ 2:9) ಈ ಎರಡೂ ವೃತ್ತಾಂತಗಳು, ಅವರ ರಕ್ಷಣೆಯು ಅವರೆಲ್ಲಿದ್ದರು ಎಂಬುದರ ಮೇಲೆ ಅವಲಂಬಿಸಿತ್ತು ಎಂಬುದನ್ನು ತೋರಿಸುತ್ತವೆ. ನೋಹನು ನಾವೆಯ ಒಳಗೆ ಹೋಗಬೇಕಿತ್ತು, ಲೋಟನು ಸೊದೋಮ್‌ ಪಟ್ಟಣವನ್ನು ಬಿಟ್ಟು ಹೊರಗೆ ಬರಬೇಕಿತ್ತು. ಹಾಗಾದರೆ, ಎಲ್ಲಿರಬೇಕೆಂಬುದು ಯಾವಾಗಲೂ ಪ್ರಾಮುಖ್ಯವಾಗಿದೆಯೋ? ಯಥಾರ್ಥವಂತರನ್ನು ಎಲ್ಲಿಯೂ ಸ್ಥಳಾಂತರಿಸದೆ ಇದ್ದಲ್ಲೇ ಅವರನ್ನು ಯೆಹೋವನು ರಕ್ಷಿಸುತ್ತಾನೋ? ಉತ್ತರಕ್ಕಾಗಿ ಇನ್ನೆರಡು ವೃತ್ತಾಂತಗಳನ್ನು ಗಮನಿಸಿ.

ಎಲ್ಲಿರಬೇಕೆಂಬುದು ಸದಾ ಪ್ರಾಮುಖ್ಯವೋ?

ಮೋಶೆಯ ಸಮಯದಲ್ಲಿ ಹತ್ತನೇ ಬಾಧೆಯ ಮೂಲಕ ಯೆಹೋವನು ಐಗುಪ್ತವನ್ನು ಧ್ವಂಸಗೊಳಿಸುವ ಮೊದಲು ಇಸ್ರಾಯೇಲ್ಯರು ಪಸ್ಕದ ಪಶುವಿನ ರಕ್ತವನ್ನು ತಮ್ಮ ಮನೆಯ ಬಾಗಲಿನ ಮೇಲಣ ಪಟ್ಟಿ ಹಾಗೂ ನಿಲುವುಕಂಬಗಳಿಗೆ ಹಚ್ಚುವಂತೆ ಆತನು ಆಜ್ಞಾಪಿಸಿದನು. ಹಾಗೆ ಆಜ್ಞಾಪಿಸಿದ್ದೇಕೆ? ಏಕೆಂದರೆ, ‘ಯೆಹೋವನು ಐಗುಪ್ತ್ಯರನ್ನು ಹತಮಾಡುವದಕ್ಕೆ ದೇಶದ ನಡುವೆ ಹಾದುಹೋಗುವಾಗ ಅವರವರ ಮನೇಬಾಗಲಿನ ಮೇಲಣ ಪಟ್ಟಿಯಲ್ಲಿಯೂ ಎರಡು ನಿಲುವುಕಂಬಗಳಲ್ಲಿಯೂ ಆ ರಕ್ತವನ್ನು ಕಂಡು ಮುಂದಕ್ಕೆ ದಾಟಿ ಹೋಗಿ, ಅವರ ಪ್ರಾಣ ತೆಗೆಯುವದಕ್ಕೆ ಸಂಹಾರಕನನ್ನು ಅವರ ಮನೆಗಳಲ್ಲಿ ಬರಗೊಡಿಸದಿರಲಿಕ್ಕಾಗಿತ್ತು.’ ಅದೇ ರಾತ್ರಿ, “ಯೆಹೋವನು ಸಿಂಹಾಸನದಲ್ಲಿರುವ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಬಂದಿವಾನನ ಚೊಚ್ಚಲು ಮಗನ ವರೆಗೂ ಐಗುಪ್ತದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಪಶುಗಳ ಚೊಚ್ಚಲುಮರಿಗಳನ್ನೂ ಸಂಹಾರ ಮಾಡಿದನು.” ಇಸ್ರಾಯೇಲ್ಯ ಚೊಚ್ಚಲ ಮಕ್ಕಳಾದರೋ ಎಲ್ಲಿಯೂ ಸ್ಥಳಾಂತರಗೊಳ್ಳದೆ ಸಂಹಾರದಿಂದ ಪಾರಾದರು.—ವಿಮೋ. 12:22, 23, 29.

ಯೆರಿಕೋ ಪಟ್ಟಣದಲ್ಲಿ ವಾಸಿಸುತ್ತಿದ್ದ ರಾಹಾಬಳೆಂಬ ಸೂಳೆಯ ವಿಷಯವನ್ನೂ ಗಮನಿಸಿ. ಇಸ್ರಾಯೇಲ್ಯರು ವಾಗ್ದಾತ್ತ ದೇಶವನ್ನು ವಶಪಡಿಸಿಕೊಳ್ಳಲು ಇನ್ನೇನು ಪ್ರಾರಂಭಿಸಲಿದ್ದರು. ಯೆರಿಕೋ ಪಟ್ಟಣ ನಾಶವಾಗುವುದೆಂದು ರಾಹಾಬಳು ಅರಿತಳು ಮತ್ತು ಸಮೀಪಿಸುತ್ತಿರುವ ಇಸ್ರಾಯೇಲ್ಯರ ನಿಮಿತ್ತ ಯೆರಿಕೋವಿನ ಜನರು ಮಹಾಭೀತಿಯಿಂದ ಕಂಗೆಟ್ಟುಹೋಗಿದ್ದಾರೆಂದು ಇಬ್ಬರು ಇಸ್ರಾಯೇಲ್ಯ ಗೂಢಾಚಾರರಿಗೆ ಹೇಳಿದಳು. ಆಕೆ ಆ ಗೂಢಾಚಾರರನ್ನು ಬಚ್ಚಿಟ್ಟಳು ಹಾಗೂ ಯೆರಿಕೋ ಪಟ್ಟಣವನ್ನು ವಶಪಡಿಸಿಕೊಂಡಾಗ ತನ್ನನ್ನೂ ತನ್ನ ಕುಟುಂಬವನ್ನೂ ಉಳಿಸುವಂತೆ ಅವರಿಂದ ಪ್ರಮಾಣ ಮಾಡಿಸಿಕೊಂಡಳು. ಊರುಗೋಡೆಯ ಮೇಲಿದ್ದ ರಾಹಾಬಳ ಮನೆಯೊಳಗೆ ಆಕೆಯ ಕುಟಂಬದವರನ್ನು ಒಟ್ಟುಸೇರಿಸಬೇಕೆಂದು ಗೂಢಾಚಾರರು ಆಕೆಗೆ ತಿಳಿಸಿದರು. ಮನೆಯಿಂದಾಚೆ ಬಂದವರು ಪಟ್ಟಣದೊಂದಿಗೆ ನಾಶವಾಗಲಿದ್ದರು. (ಯೆಹೋ. 2:8-13, 15, 18, 19) ಆದರೆ, “ಪಟ್ಟಣದ ಗೋಡೆಯು ತಾನೇ ಬಿದ್ದುಹೋಗುವದು” ಎಂದು ಯೆಹೋವನು ತದನಂತರ ಯೆಹೋಶುವನಿಗೆ ಹೇಳಿದನು. (ಯೆಹೋ. 6:5) ಸುರಕ್ಷಿತವೆಂದು ಗೂಢಾಚಾರರು ಭರವಸೆ ನೀಡಿದ ಸ್ಥಳವು ಈಗ ಭಾರೀ ಗಂಡಾಂತರದಲ್ಲಿತ್ತು. ರಾಹಾಬ ಮತ್ತು ಕುಟುಂಬದವರು ಹೇಗೆ ಪಾರಾಗಲಿದ್ದರು?

ಯೆರಿಕೋವನ್ನು ವಶಪಡಿಸಿಕೊಳ್ಳುವ ಸಮಯ ಬಂದಾಗ ಇಸ್ರಾಯೇಲ್ಯರು ಕೊಂಬುಗಳನ್ನೂದಿ ಆರ್ಭಟಿಸಿದರು. ಯೆಹೋಶುವ 6:20 ಹೇಳುವ ಪ್ರಕಾರ “[ಇಸ್ರಾಯೇಲ್ಯ] ಜನರು ಕೊಂಬಿನ ಧ್ವನಿಯನ್ನು ಕೇಳಿ ಮಹತ್ತರವಾಗಿ ಆರ್ಭಟಿಸಲು ಪಟ್ಟಣದ ಗೋಡೆಯು ತಾನೇ ಬಿದ್ದುಹೋಯಿತು.” ಗೋಡೆ ಕುಸಿದು ಬೀಳುವುದನ್ನು ಯಾವ ನರಪ್ರಾಣಿಯಿಂದಲೂ ತಡೆಯಲು ಸಾಧ್ಯವಾಗಲಿಲ್ಲ. ಅದ್ಭುತವೇನೆಂದರೆ, ಪಟ್ಟಣದ ಗೋಡೆಯು ಸಂಪೂರ್ಣವಾಗಿ ಕುಸಿದುಬೀಳಲಿಲ್ಲ. ರಾಹಾಬಳ ಮನೆಯಿದ್ದ ಗೋಡೆಯ ಭಾಗವು ಹಾಗೆಯೇ ನಿಂತಿತ್ತು. ಯೆಹೋಶುವನು ಆ ಇಬ್ಬರು ಗೂಢಾಚಾರರಿಗೆ, “ನೀವು ಆ ಸೂಳೆಯ ಮನೆಗೆ ಹೋಗಿ ಅವಳಿಗೆ ಪ್ರಮಾಣಮಾಡಿದಂತೆ ಅವಳನ್ನೂ ಅವಳಿಗಿರುವದೆಲ್ಲವನ್ನೂ ಹೊರಗೆ ತೆಗೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು. (ಯೆಹೋ. 6:22) ರಾಹಾಬಳ ಮನೆಯಲ್ಲಿದ್ದ ಎಲ್ಲರೂ ರಕ್ಷಿಸಲ್ಪಟ್ಟರು.

ಯಾವುದು ಹೆಚ್ಚು ಪ್ರಾಮುಖ್ಯವಾಗಿತ್ತು?

ನೋಹ, ಲೋಟ ಮತ್ತು ಮೋಶೆಯ ಸಮಯದಲ್ಲಿದ್ದ ಇಸ್ರಾಯೇಲ್ಯರು ಹಾಗೂ ರಾಹಾಬಳು ಪಾರಾದ ವಿಷಯದಿಂದ ನಾವೇನು ಕಲಿಯಸಾಧ್ಯವಿದೆ? ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯ ಬರುವಾಗ ನಾವೆಲ್ಲಿ ಇರಬೇಕೆಂಬುದನ್ನು ಅರ್ಥಮಾಡಿಕೊಳ್ಳಲು ಈ ವೃತ್ತಾಂತಗಳು ನಮಗೆ ಹೇಗೆ ಸಹಾಯಮಾಡುತ್ತವೆ?

ನೋಹನು ಪಾರಾದದ್ದು ನಾವೆಯೊಳಗೆ ಇದ್ದುದರಿಂದಲೇ ನಿಜ. ಆದರೆ, ಅವನು ಅಲ್ಲಿಗೆ ಹೇಗೆ ಹೋದನು? ನಂಬಿಕೆ ಮತ್ತು ವಿಧೇಯತೆ ತೋರಿಸಿದ್ದರಿಂದ ಅಲ್ಲವೆ? “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು” ಎಂದು ಬೈಬಲ್‌ ಹೇಳುತ್ತದೆ. (ಆದಿ. 6:22; ಇಬ್ರಿ. 11:7) ನಮ್ಮ ಕುರಿತೇನು? ದೇವರು ಅಪ್ಪಣೆಕೊಟ್ಟ ಎಲ್ಲ ವಿಷಯಗಳನ್ನು ನಾವು ಮಾಡುತ್ತಿದ್ದೇವೋ? ನೋಹನು ‘ನೀತಿಯನ್ನು ಸಾರುವವನೂ’ ಆಗಿದ್ದನು. (2 ಪೇತ್ರ 2:5) ಟೆರಿಟೊರಿಯಲ್ಲಿ ಒಳ್ಳೇ ಪ್ರತಿಕ್ರಿಯೆ ಸಿಗದಿದ್ದರೂ ನಾವು ನೋಹನಂತೆ ಸುವಾರ್ತೆಯನ್ನು ಹುರುಪಿನಿಂದ ಸಾರುತ್ತೇವೋ?

ಲೋಟನು ಸೊದೋಮನ್ನು ಬಿಟ್ಟು ಓಡಿಹೋಗುವ ಮೂಲಕ ನಾಶನದಿಂದ ಪಾರಾದನು. ದೇವರ ದೃಷ್ಟಿಯಲ್ಲಿ ನೀತಿವಂತನಾಗಿದ್ದು, ನಿಯಮ ಉಲ್ಲಂಘಿಸುವ ಜನರು ಸಡಿಲು ನಡತೆಯಲ್ಲಿ ಮುಳುಗಿರುವುದನ್ನು ಕಂಡು ಬಹಳವಾಗಿ ದುಃಖಿತನಾಗಿದ್ದರಿಂದಲೇ ಅವನು ಬದುಕುಳಿದನು. ನಮ್ಮ ದಿನಗಳಲ್ಲಿ ವ್ಯಾಪಕವಾಗಿ ಹರಡಿರುವ ಸಡಿಲು ನಡತೆ ನಿಜವಾಗಿಯೂ ನಮ್ಮನ್ನು ದುಃಖಿತರನ್ನಾಗಿ ಮಾಡುತ್ತದೋ? ಅಥವಾ ಅಂಥ ವಿಷಯ ನಮ್ಮ ಕಣ್ಣ ಮುಂದೆ ನಡೆದರೂ ನಾವು ಸಂವೇದನಾಶೂನ್ಯರಾಗಿ ಇರುತ್ತೇವೋ? ನಾವು “ಕಳಂಕವಿಲ್ಲದವರು, ನಿರ್ದೋಷಿಗಳು ಮತ್ತು ಶಾಂತಿಯಿಂದಿರುವವರು” ಆಗಿರಲು ನಮ್ಮಿಂದಾಗುವುದನ್ನೆಲ್ಲ ಮಾಡುತ್ತಿದ್ದೇವೋ?—2 ಪೇತ್ರ 3:14.

ಐಗುಪ್ತದಲ್ಲಿದ್ದ ಇಸ್ರಾಯೇಲ್ಯರು ಮತ್ತು ಯೆರಿಕೋವಿನ ರಾಹಾಬಳು ಜೀವವುಳಿಸಿಕೊಳ್ಳಲಿಕ್ಕಾಗಿ ತಮ್ಮ ತಮ್ಮ ಮನೆಯೊಳಗೇ ಇರಬೇಕಿತ್ತು. ಅದಕ್ಕಾಗಿ ಅವರು ನಂಬಿಕೆ ಮತ್ತು ವಿಧೇಯತೆಯನ್ನು ತೋರಿಸಬೇಕಿತ್ತು. (ಇಬ್ರಿ. 11:28, 30, 31) ಒಂದರನಂತರ ಒಂದರಂತೆ ಐಗುಪ್ತ್ಯರ ಮನೆಯಲ್ಲಿ “ದೊಡ್ಡ ಗೋಳಾಟ” ಕೇಳಿಬರುತ್ತಿದ್ದಾಗ ಇಸ್ರಾಯೇಲ್ಯರು ಮೈಯೆಲ್ಲಾ ಕಾವಲಾಗಿ ತಮ್ಮ ತಮ್ಮ ಚೊಚ್ಚಲ ಮಕ್ಕಳ ಮೇಲೆ ಗಮನವಿಟ್ಟುಕೊಂಡಿದ್ದನ್ನು ತುಸು ಊಹಿಸಿಕೊಳ್ಳಿ. (ವಿಮೋ. 12:30) ಯೆರಿಕೋ ಪಟ್ಟಣದ ಗೋಡೆಗಳು ಕುಸಿದು ಬೀಳುವ ಸದ್ದು ಹತ್ತಿರವತ್ತಿರವಾದಂತೆ ರಾಹಾಬಳೂ ಕುಟುಂಬವೂ ಹೆದರಿ ಒತ್ತಾಗಿ ಕುಳಿತುಕೊಂಡ ದೃಶ್ಯವನ್ನು ಕಲ್ಪಿಸಿಕೊಳ್ಳಿ. ವಿಧೇಯಳಾಗಿ ಆ ಮನೆಯಲ್ಲೇ ಉಳಿದುಕೊಳ್ಳಲು ನಿಜವಾಗಿಯೂ ಆಕೆಗೆ ತುಂಬಾ ನಂಬಿಕೆ ಇರಬೇಕಿತ್ತು.

ಸೈತಾನನ ದುಷ್ಟ ಲೋಕಕ್ಕೆ ಅಂತ್ಯವು ಅತಿ ಬೇಗನೆ ಬರಲಿದೆ. ತನ್ನ ಭಯಪ್ರೇರಕವಾದ “ಸಿಟ್ಟಿನ ದಿನದಲ್ಲಿ” ಯೆಹೋವನು ತನ್ನ ಜನರನ್ನು ಹೇಗೆ ರಕ್ಷಿಸುವನು ಎಂಬುದು ನಮಗಿನ್ನೂ ತಿಳಿದಿಲ್ಲ. (ಚೆಫ. 2:3) ಆ ಸಮಯದಲ್ಲಿ ನಾವು ಎಲ್ಲೇ ಇರಲಿ, ಹೇಗೇ ಇರಲಿ ಯೆಹೋವನಲ್ಲಿ ನಂಬಿಕೆಯಿಟ್ಟು ಆತನಿಗೆ ವಿಧೇಯರಾಗಿರುವಲ್ಲಿ ರಕ್ಷಣೆ ಹೊಂದುವುದು ಖಂಡಿತ. ಅಷ್ಟರವರೆಗೆ, ಯೆಶಾಯನ ಪ್ರವಾದನೆಯು ಯಾವುದನ್ನು ‘ಕೋಣೆಗಳೆಂದು’ ಸೂಚಿಸುತ್ತದೋ ಅದರ ಕಡೆಗೆ ನಾವು ಯೋಗ್ಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

‘ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿಕೊಳ್ಳಿರಿ’

“ನನ್ನ ಜನರೇ, ಬನ್ನಿರಿ, ನಿಮ್ಮ ನಿಮ್ಮ ಕೋಣೆಗಳಲ್ಲಿ ಸೇರಿ ಬಾಗಿಲು ಮುಚ್ಚಿಕೊಳ್ಳಿರಿ; ದೈವರೋಷವು ತೀರುವ ತನಕ ಒಂದು ಕ್ಷಣ ಅವಿತುಕೊಳ್ಳಿರಿ” ಎಂದು ಯೆಶಾಯ 26:20 ತಿಳಿಸುತ್ತದೆ. ಸಾ.ಶ.ಪೂ. 539ರಲ್ಲಿ ಮೇದ್ಯಯಪಾರಸಿಯರು ಬಾಬೆಲನ್ನು ಜಯಿಸಿದಾಗ ಈ ಪ್ರವಾದನೆಯು ಆರಂಭಿಕ ನೆರವೇರಿಕೆಯನ್ನು ಪಡೆದಿದ್ದಿರಬಹುದು. ಕೋರೆಷನು ಬಾಬೆಲನ್ನು ಪ್ರವೇಶಿಸಿದ ಕೂಡಲೇ ಜನರೆಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಉಳಿಯುವಂತೆ ಆದೇಶ ಹೊರಡಿಸಿದ್ದಿರಬೇಕು, ಏಕೆಂದರೆ ಮನೆಯ ಹೊರಗೆ ಇದ್ದವರೆಲ್ಲರನ್ನು ಕೊಲ್ಲುವಂತೆ ಅವನು ತನ್ನ ಸೈನಿಕರಿಗೆ ಆಜ್ಞೆಯಿತ್ತಿದ್ದನು.

ನಮ್ಮ ಸಮಯದಲ್ಲಿ, ಈ ಪ್ರವಾದನೆಯಲ್ಲಿ ತಿಳಿಸಲಾಗಿರುವ ‘ಕೋಣೆಗಳು’ ಲೋಕಾದ್ಯಂತವಿರುವ ಯೆಹೋವನ ಸಾಕ್ಷಿಗಳ ಒಂದು ಲಕ್ಷಕ್ಕೂ ಹೆಚ್ಚಿನ ಸಭೆಗಳಿಗೆ ನಿಕಟವಾಗಿ ಹೋಲುತ್ತವೆ ಎಂದು ಹೇಳಬಹುದು. ಈ ಸಭೆಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ‘ಮಹಾ ಸಂಕಟದ’ ಸಮಯದಲ್ಲೂ ಪ್ರಧಾನ ಪಾತ್ರ ವಹಿಸುವುದನ್ನು ಮುಂದುವರಿಸುತ್ತವೆ. (ಪ್ರಕ. 7:14) “ದೈವರೋಷವು ತೀರುವ ತನಕ” ತಮ್ಮ “ಕೋಣೆಗಳಲ್ಲಿ” ಸೇರಿಕೊಂಡು ಅವಿತುಕೊಳ್ಳುವಂತೆ ದೇವಜನರಿಗೆ ಆಜ್ಞಾಪಿಸಲಾಗಿದೆ. ಆದುದರಿಂದ, ಸಭೆಯ ಕಡೆಗೆ ಹಿತಕರ ಮನೋಭಾವವುಳ್ಳವರಾಗಿ ಅದರೊಂದಿಗೆ ನಿಕಟ ಸಹವಾಸದಲ್ಲಿರಲು ನಾವು ದೃಢನಿಶ್ಚಯ ಹೊಂದಿರುವುದು ಅತಿ ಪ್ರಾಮುಖ್ಯ. ನಾವು ಪೌಲನ ಈ ಮುಂದಿನ ಬುದ್ಧಿವಾದವನ್ನು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು: ‘ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ. ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು [ನಾವು] ನೋಡುವಾಗ ಇದನ್ನು ಇನ್ನಷ್ಟು ಹೆಚ್ಚು ಮಾಡೋಣ.’—ಇಬ್ರಿ. 10:24, 25.

[ಪುಟ 7ರಲ್ಲಿರುವ ಚಿತ್ರಗಳು]

ದೇವರ ಗತಕಾಲದ ರಕ್ಷಣಾಕಾರ್ಯದಿಂದ ನಾವೇನು ಕಲಿಯುತ್ತೇವೆ?

[ಪುಟ 8ರಲ್ಲಿರುವ ಚಿತ್ರ]

ನಮ್ಮ ಸಮಯದಲ್ಲಿ ‘ಕೋಣೆಗಳು’ ಏನನ್ನು ಸೂಚಿಸಬಲ್ಲವು?