ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತ್ತೈಯ ನಿಷ್ಠೆಯನ್ನು ಅನುಕರಿಸಿರಿ

ಇತ್ತೈಯ ನಿಷ್ಠೆಯನ್ನು ಅನುಕರಿಸಿರಿ

ಇತ್ತೈಯ ನಿಷ್ಠೆಯನ್ನು ಅನುಕರಿಸಿರಿ

“ಸರ್ವಶಕ್ತನಾದ ಯೆಹೋವ ದೇವರೇ, ನಿನ್ನ ಕಾರ್ಯಗಳು ಮಹತ್ತರವಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ. ನಿತ್ಯತೆಯ ರಾಜನೇ, ನಿನ್ನ ಮಾರ್ಗಗಳು ನೀತಿಯುತವೂ ಸತ್ಯವೂ ಆಗಿವೆ. ಯೆಹೋವನೇ, ನೀನೊಬ್ಬನೇ ನಿಷ್ಠಾವಂತನಾಗಿರುವುದರಿಂದ ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿದ್ದಾರೆ?” ಎಂಬದಾಗಿ “ಕಾಡುಮೃಗವನ್ನೂ ಅದರ ವಿಗ್ರಹವನ್ನೂ . . . ಜಯಿಸಿ ಬಂದವರು” ಸ್ವರ್ಗದಲ್ಲಿ ಹಾಡಿದ ಹಾಡು ದೇವರ ನಿಷ್ಠೆಯ ಕಡೆಗೆ ಗಮನಹರಿಸುತ್ತದೆ. (ಪ್ರಕ. 15:2-4) ಈ ಅತ್ಯಾಕರ್ಷಕ ಗುಣವನ್ನು ತೋರಿಸುವುದರಲ್ಲಿ ತನ್ನ ಆರಾಧಕರು ತನ್ನನ್ನು ಅನುಕರಿಸಬೇಕೆಂಬುದು ಯೆಹೋವನ ಅಪೇಕ್ಷೆ.—ಎಫೆ. 4:24.

ಇನ್ನೊಂದು ಪಕ್ಕದಲ್ಲಿ ಪಿಶಾಚನಾದ ಸೈತಾನನಾದರೋ, ಭೂಮಿಯಲ್ಲಿರುವ ದೇವಜನರನ್ನು ಅವರು ಆರಾಧಿಸುವ ದೇವರ ಪ್ರೀತಿಯಿಂದ ಅಗಲಿಸಲು ಶಕ್ತಿಮೀರಿ ಪ್ರಯತ್ನಿಸುತ್ತಾನೆ. ಆದರೂ ಅನೇಕರು ಕಠಿನ ಪರೀಕ್ಷೆಗಳ ಮಧ್ಯೆಯೂ ದೇವರಿಗೆ ನಿಷ್ಠರಾಗಿ ಉಳಿದಿದ್ದಾರೆ. ಅಂಥ ಭಕ್ತಿಯನ್ನು ಯೆಹೋವನು ಬಹಳ ಮಾನ್ಯಮಾಡುವುದರಿಂದ ಆತನಿಗೆ ನಾವೆಷ್ಟು ಕೃತಜ್ಞರಾಗಿರಬೇಕು! “ಯೆಹೋವನು ನ್ಯಾಯವನ್ನು ಮೆಚ್ಚುವವನು; ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ” ಎಂಬುದಾಗಿ ನಮಗೆ ಆಶ್ವಾಸನೆ ಕೊಡಲಾಗಿದೆ. (ಕೀರ್ತ. 37:28) ನಾವು ನಿಷ್ಠರಾಗಿ ಉಳಿಯುವಂತೆ ಸಹಾಯ ಮಾಡಲು ತನ್ನ ವಾಕ್ಯದಲ್ಲಿ ಆತನ ಅನೇಕ ನಿಷ್ಠಾವಂತ ಸೇವಕರ ಕೃತ್ಯಗಳನ್ನು ದಾಖಲಿಸಿಟ್ಟಿದ್ದಾನೆ. ಅವುಗಳಲ್ಲೊಂದು ಗಿತ್ತೀಯನಾದ ಇತ್ತೈಯ ವೃತ್ತಾಂತವಾಗಿದೆ.

‘ಸ್ವದೇಶ ಬಿಟ್ಟು ಆಶ್ರಯಕ್ಕೆ ಬಂದವ’

ಇತ್ತೈಯು, ದೈತ್ಯ ಗೊಲ್ಯಾತನ ಹುಟ್ಟೂರಾಗಿದ್ದ ಮತ್ತು ಇಸ್ರಾಯೇಲಿನ ಇತರ ಉಗ್ರ ಶತ್ರುಗಳ ನಗರವಾಗಿದ್ದ ಫಿಲಿಷ್ಟಿಯದ ಪ್ರಸಿದ್ಧ ಗತ್‌ ಊರಿನವನಾಗಿದ್ದಿರಬೇಕು. ಅನುಭವೀ ಯೋಧನಾದ ಇತ್ತೈಯ ಹೆಸರು ಬೈಬಲ್‌ ವೃತ್ತಾಂತಗಳಲ್ಲಿ ಪ್ರಥಮ ಬಾರಿ ತೋರಿಬರುವುದು, ಅಬ್ಷಾಲೋಮನು ರಾಜ ದಾವೀದನ ವಿರುದ್ಧ ದಂಗೆಯೆದ್ದ ಸಂದರ್ಭದಲ್ಲಿ. ಈ ಸಮಯದಲ್ಲಿ, ಇತ್ತೈ ಮತ್ತು ಅವನನ್ನು ಹಿಂಬಾಲಿಸಿಬಂದ 600 ಮಂದಿ ಫಿಲಿಷ್ಟಿಯ ಪುರುಷರು ಸ್ವದೇಶ ಬಿಟ್ಟು ಯೆರೂಸಲೇಮಿನ ಆಸುಪಾಸಿನಲ್ಲೇ ಜೀವಿಸುತ್ತಿದ್ದರು.

ಇತ್ತೈ ಮತ್ತು ಅವನ ಸಂಗಡಿಗರ ಸನ್ನಿವೇಶವು ದಾವೀದನಿಗೆ, 600 ಮಂದಿ ಇಸ್ರಾಯೇಲ್ಯ ಸೈನಿಕರೊಡನೆ ತಾನು ಫಿಲಿಷ್ಟಿಯದ ಕ್ಷೇತ್ರದಲ್ಲಿ ನೆಲೆಸಿದ ಮತ್ತು ಗತ್‌ ಊರಿನ ಅರಸನಾದ ಆಕೀಷನ ಪ್ರಾಂತ್ಯವನ್ನು ಪ್ರವೇಶಿಸಿದ ಸನ್ನಿವೇಶವನ್ನು ನೆನಪಿಗೆ ತಂದಿರಬೇಕು. (1 ಸಮು. 27:2, 3) ದಾವೀದನು ತನ್ನ ಮಗನಾದ ಅಬ್ಷಾಲೋಮನ ದಂಗೆಯನ್ನು ಎದುರಿಸುತ್ತಿದ್ದಾಗ ಇತ್ತೈ ಮತ್ತವನ ಜನರು ಏನು ಮಾಡಲಿದ್ದರು? ಅವರು ಅಬ್ಷಾಲೋಮನ ಪಕ್ಷವಹಿಸಲಿದ್ದರೋ, ತಟಸ್ಥರಾಗಿ ಉಳಿಯಲಿದ್ದರೋ ಇಲ್ಲವೇ ದಾವೀದ ಮತ್ತವನ ಜನರೊಂದಿಗೆ ಸೇರಲಿದ್ದರೋ?

ಈ ಸನ್ನಿವೇಶವನ್ನು ಚಿತ್ರಿಸಿಕೊಳ್ಳಿ: ದಾವೀದನು ಯೆರೂಸಲೇಮಿನಿಂದ ಪಲಾಯನಗೈದು “ಕಡೇ ಮನೆ” ಎಂಬರ್ಥವಿರುವ ಬೆತ್‌ಮರ್ಹಾಕ್‌ ಎಂಬಲ್ಲಿ ತಲುಪಿದ್ದಾನೆ. ಇದು ಎಣ್ಣೇ ಮರಗಳ ಗುಡ್ಡದ ದಿಕ್ಕಿನಲ್ಲಿ ಕಿದ್ರೋನ್‌ಹಳ್ಳವನ್ನು ದಾಟುವ ಮುಂಚೆ ಯೆರೂಸಲೇಮಿನಲ್ಲಿದ್ದ ಕೊನೇ ಮನೆಯಾಗಿದ್ದಿರಬಹುದು. (2 ಸಮು. 15:17) ಇಲ್ಲಿ ತನ್ನ ಪಡೆಗಳು ತನ್ನ ಮುಂದಿನಿಂದ ಹೋಗುತ್ತಿರುವಾಗ ದಾವೀದನು ಅವರನ್ನು ಪರಿಶೀಲಿಸುತ್ತಾನೆ. ಆಗ, ತನ್ನೊಂದಿಗೆ ನಿಷ್ಠಾವಂತ ಇಸ್ರಾಯೇಲ್ಯರು ಮಾತ್ರವಲ್ಲ ಎಲ್ಲಾ ಕೆರೇತ್ಯರೂ ಪೆಲೇತ್ಯರೂ ಇರುವುದನ್ನು ಗಮನಿಸುತ್ತಾನೆ. ಅಷ್ಟೇ ಅಲ್ಲ, ಅಲ್ಲಿ ಇತ್ತೈ ಮತ್ತವನ 600 ಮಂದಿ ಸೈನಿಕರು ಹೀಗೆ ಎಲ್ಲಾ ಗಿತ್ತೀಯರು ಸಹ ಇದ್ದಾರೆ.—2 ಸಮು. 15:18.

ಹೃತ್ಪೂರ್ವಕ ಅನುಕಂಪದಿಂದ ದಾವೀದನು ಇತ್ತೈಗೆ ಹೇಳುವುದು: “ನೀನೂ ನಮ್ಮ ಸಂಗಡ ಯಾಕೆ ಬರಬೇಕು? ನೀನು ಸ್ವದೇಶವನ್ನು ಬಿಟ್ಟು ನನ್ನ ಆಶ್ರಯಕ್ಕೆ ಬಂದವನಲ್ಲವೇ. ಹಿಂದಿರುಗಿ ಹೋಗಿ ಅರಸನ [ಅಬ್ಷಾಲೋಮನಿಗೆ ಸೂಚಿಸಿ ಹೇಳಿರಬಹುದು] ಬಳಿಯಲ್ಲಿ ವಾಸಮಾಡು. ನಾನು ಎಲ್ಲೆಲ್ಲಿಯೋ ಅಲೆಯುತ್ತಿರಬೇಕಾಗುವದು; ಹೀಗಿರುವದರಿಂದ ನಿನ್ನೆ ಬಂದಂಥ ನಿನ್ನನ್ನು ಕರಕೊಂಡು ಹೋಗಿ ಸುಮ್ಮನೆ ಯಾಕೆ ತಿರುಗಾಡಲಿಕ್ಕೆ ಹಚ್ಚಬೇಕು? ನಿನ್ನ ಸಹೋದರರನ್ನು ಕರಕೊಂಡು ಹಿಂದಿರುಗಿ ಹೋಗು; ಕೃಪಾಸತ್ಯತೆಗಳು ನಿನ್ನ ಸಂಗಡ ಇರಲಿ.”—2 ಸಮು. 15:19, 20.

ಇತ್ತೈ ದಾವೀದನ ಕಡೆಗಿನ ತನ್ನ ಅಚಲ ನಿಷ್ಠೆಯನ್ನು ಘೋಷಿಸುತ್ತಾ ಉತ್ತರಿಸುವುದು: “ಯೆಹೋವನಾಣೆ, ನನ್ನ ಒಡೆಯನಾದ ಅರಸನ ಜೀವದಾಣೆ, ಜೀವ ಹೋದರೂ ಉಳಿದರೂ ನನ್ನ ಒಡೆಯನಾದ ಅರಸನಿರುವಲ್ಲಿಗೆ ಹೋಗುವೆನು.” (2 ಸಮು. 15:21) ಇದು ದಾವೀದನಿಗೆ ತನ್ನ ಮುತ್ತಜ್ಜಿಯಾದ ರೂತಳು ಹೇಳಿದ ಮಾತುಗಳನ್ನು ನೆನಪಿಗೆ ತಂದಿರಬೇಕು. (ರೂತ. 1:16, 17) ಇತ್ತೈಯ ಮಾತುಗಳು ದಾವೀದನ ಹೃದಯವನ್ನು ಸ್ಪರ್ಶಿಸಿದವು. ಅದಕ್ಕೆ ದಾವೀದನು ಅವನಿಗೆ ‘ಮುಂದೆ ನಡೆದು’ ಕಿದ್ರೋನ್‌ಹಳ್ಳವನ್ನು ದಾಟುವಂತೆ ಹೇಳಿದನು. ಅದರಂತೆ “ಗಿತ್ತೀಯನಾದ ಇತ್ತೈಯು ತನ್ನ ಎಲ್ಲಾ ಸೈನಿಕರನ್ನೂ ಪರಿಜನವನ್ನೂ ಕರಕೊಂಡು ಮುಂದೆ ನಡೆದನು.”—2 ಸಮು. 15:22.

“ನಮ್ಮನ್ನು ಉಪದೇಶಿಸುವುದಕ್ಕಾಗಿ”

“ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು,” ಎನ್ನುತ್ತದೆ ರೋಮನ್ನರು 15:4. ಆದ್ದರಿಂದ, ನಾವು ಹೀಗೆ ಕೇಳಿಕೊಳ್ಳುವುದು ಉತ್ತಮ: ಇತ್ತೈಯ ಉದಾಹರಣೆಯಿಂದ ನಾವೇನನ್ನು ಕಲಿಯಬಲ್ಲೆವು? ದಾವೀದನಿಗೆ ನಿಷ್ಠನಾಗಿರಲು ಅವನಿಗೆ ಯಾವುದು ಸಹಾಯ ಮಾಡಿರಬಹುದೆಂಬುದನ್ನು ಪರಿಗಣಿಸಿ. ಇತ್ತೈಯು ವಿದೇಶೀಯನಾಗಿದ್ದು ಆಶ್ರಯವನ್ನು ಅರಸುತ್ತಾ ಫಿಲಿಷ್ಟಿಯದಿಂದ ಬಂದಿದ್ದನು. ಆದರೂ ಅವನು ಯೆಹೋವನನ್ನು ದೇವರಾಗಿಯೂ ದಾವೀದನನ್ನು ಯೆಹೋವನ ಅಭಿಷಿಕ್ತನಾಗಿಯೂ ಅಂಗೀಕರಿಸಿದನು. ಇತ್ತೈಯು ಇಸ್ರಾಯೇಲ್ಯರ ಮತ್ತು ಫಿಲಿಷ್ಟಿಯರ ಮಧ್ಯೆಯಿದ್ದ ವೈರತ್ವವನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅವನು ದಾವೀದನನ್ನು, ಫಿಲಿಷ್ಟಿಯರ ದೈತ್ಯ ಗೊಲ್ಯಾತನನ್ನು ಮತ್ತು ಇನ್ನೂ ಅನೇಕರನ್ನು ಕೊಂದವನೆಂಬದಾಗಿ ಮಾತ್ರ ಪರಿಗಣಿಸಲಿಲ್ಲ. (1 ಸಮು. 18:6, 7) ಅದಕ್ಕಿಂತಲೂ ಹೆಚ್ಚಾಗಿ ದಾವೀದನು ಯೆಹೋವನನ್ನು ಪ್ರೀತಿಸಿದ ವ್ಯಕ್ತಿ ಎಂಬುದಾಗಿ ಇತ್ತೈಯು ಪರಿಗಣಿಸಿದನು ಮತ್ತು ಅವನಲ್ಲಿದ್ದ ವಿಶಿಷ್ಟ ಗುಣಗಳಿಗೂ ಗಮನಕೊಟ್ಟನು. ದಾವೀದನಿಗೂ ಇತ್ತೈಯ ಬಗ್ಗೆ ಆಳವಾದ ಗೌರವ ಮೂಡಿತು. ಆದ್ದರಿಂದಲೇ, ಅಬ್ಷಾಲೋಮನ ವಿರುದ್ಧ ನಡೆದ ನಿರ್ಣಾಯಕ ಯುದ್ಧದಲ್ಲಿ ದಾವೀದನು ತನ್ನ ಸೈನ್ಯವನ್ನು ಮೂರು ಭಾಗ ಮಾಡಿ ಅದರಲ್ಲೊಂದನ್ನು ‘ಇತ್ತೈಗೆ ಒಪ್ಪಿಸಿದನು.’—2 ಸಮು. 18:2.

ನಾವು ಕೂಡ ಸಾಂಸ್ಕೃತಿಕ, ಕುಲ ಅಥವಾ ಜಾತಿ ಸಂಬಂಧಿತ ಭಿನ್ನತೆಗಳನ್ನಾಗಲಿ, ಪೂರ್ವಕಲ್ಪಿತ ಅಭಿಪ್ರಾಯ ಅಥವಾ ವೈರತ್ವವನ್ನಾಗಲಿ ಲೆಕ್ಕಿಸದೆ ಇತರರಲ್ಲಿ ಒಳ್ಳೇ ಗುಣಗಳನ್ನು ನೋಡಬೇಕು. ಇಂಥ ಅಡೆತಡೆಗಳನ್ನು ಜಯಿಸಲು ಯೆಹೋವನ ಕುರಿತ ಜ್ಞಾನ ಮತ್ತು ಆತನ ಕಡೆಗಿನ ಪ್ರೀತಿ ಸಹಾಯ ಮಾಡುತ್ತದೆಂದು ದಾವೀದ ಮತ್ತು ಇತ್ತೈಯ ಮಧ್ಯೆಯಿದ್ದ ಬಾಂಧವ್ಯವು ತೋರಿಸುತ್ತದೆ.

ಇತ್ತೈಯ ಮಾದರಿಯನ್ನು ಪರಿಗಣಿಸುವಾಗ ನಾವು ಹೀಗೆ ಕೇಳಿಕೊಳ್ಳಬಹುದು: ‘ನಾನು ಕೂಡ ಮಹಾ ದಾವೀದನಾದ ಕ್ರಿಸ್ತ ಯೇಸುವಿಗೆ ಅಂಥ ನಿಷ್ಠೆಯನ್ನು ತೋರಿಸುತ್ತೇನೋ? ಅಂಥ ನಿಷ್ಠೆಯನ್ನು, ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವ ಮೂಲಕ ತೋರಿಸುತ್ತೇನೋ?’ (ಮತ್ತಾ. 24:14; 28:19, 20) ‘ನನ್ನ ನಿಷ್ಠೆಯನ್ನು ತೋರಿಸಲು ಎಷ್ಟರಮಟ್ಟಿಗೆ ತಾಳಿಕೊಳ್ಳಲು ಸಿದ್ಧನಿದ್ದೇನೆ?’

ನಿಷ್ಠೆಯ ಕುರಿತ ಇತ್ತೈಯ ಮಾದರಿಯನ್ನು ಧ್ಯಾನಿಸುವುದರಿಂದ ಕುಟುಂಬದ ಶಿರಸ್ಸುಗಳೂ ಪ್ರಯೋಜನ ಪಡೆಯಬಲ್ಲರು. ದಾವೀದನ ಕಡೆಗೆ ಅವನು ತೋರಿಸಿದ ನಂಬಿಗಸ್ತಿಕೆ ಮತ್ತು ದೇವರ ಆ ಅಭಿಷಿಕ್ತ ರಾಜನೊಂದಿಗೆ ಹೋಗಲು ಅವನು ತೆಗೆದುಕೊಂಡ ನಿರ್ಣಯ ಇತ್ತೈಯ ಒಟ್ಟಿಗಿದ್ದ ಪುರುಷರ ಮೇಲೂ ಪರಿಣಾಮಬೀರಿತು. ಅದೇ ರೀತಿಯಲ್ಲಿ, ಸತ್ಯಾರಾಧನೆಯನ್ನು ಬೆಂಬಲಿಸಲು ಕುಟುಂಬದ ಶಿರಸ್ಸುಗಳು ಮಾಡುವ ನಿರ್ಣಯಗಳು ಕುಟುಂಬದ ಸದಸ್ಯರ ಮೇಲೂ ಪ್ರಭಾವಬೀರುತ್ತವೆ. ಕೆಲವೊಮ್ಮೆ ಅವು ತಾತ್ಕಾಲಿಕವಾಗಿ ಕಷ್ಟವನ್ನೂ ತಂದೊಡ್ಡಬಹುದು. ಆದರೂ ನಮಗೆ ಈ ಆಶ್ವಾಸನೆಯಿದೆ: ‘ಯೆಹೋವನು ನಿಷ್ಠಾವಂತನೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳುವನು.’—ಕೀರ್ತ. 18:25, NW.

ಅಬ್ಷಾಲೋಮನೊಂದಿಗೆ ದಾವೀದನ ಯುದ್ಧವಾದ ನಂತರ ಇತ್ತೈಯ ಕುರಿತು ಬೈಬಲ್‌ ಏನನ್ನೂ ಹೇಳುವುದಿಲ್ಲ. ಆದರೂ ದೇವರ ವಾಕ್ಯದಲ್ಲಿರುವ ಅವನ ಕುರಿತಾದ ಚಿಕ್ಕ ವೃತ್ತಾಂತವು ದಾವೀದನ ಜೀವನದ ಆ ಕಷ್ಟಕರ ಸಮಯದಲ್ಲಿ ಇತ್ತೈಯು ತೋರಿಸಿದ ಗುಣಗಳ ಗಮನಾರ್ಹ ಒಳನೋಟವನ್ನು ಕೊಡುತ್ತದೆ. ದೇವಪ್ರೇರಿತ ದಾಖಲೆಯಲ್ಲಿ ಇತ್ತೈಯ ವೃತ್ತಾಂತವನ್ನು ಸೇರಿಸಲಾಗಿರುವುದು, ಯೆಹೋವನು ನಿಷ್ಠಾವಂತರನ್ನು ಗುರುತಿಸಿ ಅಂಥವರಿಗೆ ಪ್ರತಿಫಲ ನೀಡುತ್ತಾನೆಂಬುದಕ್ಕೆ ರುಜುವಾತಾಗಿದೆ.—ಇಬ್ರಿ. 6:10.