ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರಿಗೆ ಕೆಲಸಗಳನ್ನು ವಹಿಸಿಕೊಡುವುದು ಏಕೆ ಮತ್ತು ಹೇಗೆ?

ಇತರರಿಗೆ ಕೆಲಸಗಳನ್ನು ವಹಿಸಿಕೊಡುವುದು ಏಕೆ ಮತ್ತು ಹೇಗೆ?

ಇತರರಿಗೆ ಕೆಲಸಗಳನ್ನು ವಹಿಸಿಕೊಡುವುದು ಏಕೆ ಮತ್ತು ಹೇಗೆ?

ಕೆಲಸಗಳನ್ನು ವಹಿಸಿಕೊಡುವ ಕ್ರಿಯೆಯ ಇತಿಹಾಸವು ಭೂಮಿಗಿಂತಲೂ ಹಳೆಯದು. ಯೆಹೋವನು ತನ್ನ ಒಬ್ಬನೇ ಮಗನನ್ನು ಸೃಷ್ಟಿಮಾಡಿ ನಂತರ ತನ್ನ ಈ ಮಗನನ್ನು “ಶಿಲ್ಪಿಯಾಗಿ” ಬಳಸಿ ವಿಶ್ವವನ್ನು ಸೃಷ್ಟಿಮಾಡಿದನು. (ಜ್ಞಾನೋ. 8:22, 23, 30; ಯೋಹಾ. 1:3) ದೇವರು ಪ್ರಥಮ ಮಾನವ ದಂಪತಿಯನ್ನು ಸೃಷ್ಟಿಸಿ ಅವರಿಗೆ, “ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂದು ಹೇಳಿದನು. (ಆದಿ. 1:28) ಸೃಷ್ಟಿಕರ್ತನು ಮಾನವರಿಗೆ ಏದೆನ್‌ನಲ್ಲಿದ್ದ ಪರದೈಸನ್ನು ಇಡೀ ಭೂಮಿಗೆ ವಿಸ್ತರಿಸುವ ಕೆಲಸವನ್ನು ಕೊಟ್ಟನು. ಹೌದು, ಕೆಲಸಗಳನ್ನು ಇತರರಿಗೆ ವಹಿಸಿಕೊಡುವ ಕ್ರಿಯೆ ಆರಂಭದಿಂದಲೂ ಯೆಹೋವನ ಸಂಘಟನೆಯ ವೈಶಿಷ್ಟ್ಯವಾಗಿದೆ.

ಇತರರಿಗೆ ಕೆಲಸಗಳನ್ನು ವಹಿಸಿಕೊಡುವುದರಲ್ಲಿ ಏನೆಲ್ಲಾ ಸೇರಿದೆ? ಕೆಲವೊಂದು ಸಭಾ ಕೆಲಸಗಳನ್ನು ಇತರರಿಗೆ ವಹಿಸಿಕೊಡಲು ಹಿರಿಯರು ಏಕೆ ಕಲಿಯಬೇಕು ಮತ್ತು ಅದನ್ನು ಹೇಗೆ ಮಾಡಬಲ್ಲರು?

ವಹಿಸಿಕೊಡುವುದು ಅಂದರೇನು?

“ವಹಿಸಿಕೊಡು” ಎಂಬುದರ ಅರ್ಥ, “ಇನ್ನೊಬ್ಬ ವ್ಯಕ್ತಿಗೆ ಒಪ್ಪಿಸು; ಇನ್ನೊಬ್ಬ ವ್ಯಕ್ತಿಯನ್ನು ಪ್ರತಿನಿಧಿಯಾಗಿ ನೇಮಿಸು; ಜವಾಬ್ದಾರಿ ಅಥವಾ ಅಧಿಕಾರ ಇತರರಿಗೆ ಕೊಡು” ಎಂದಾಗಿದೆ. ಹೀಗೆ ವಹಿಸಿಕೊಡುವುದರಲ್ಲಿ, ಒಂದು ಕೆಲಸವನ್ನು ಪೂರೈಸಲು ಇತರರನ್ನು ಒಳಗೂಡಿಸುವುದು ಸೇರಿದೆ. ಇದನ್ನು ಮಾಡಲು ಸಹಜವಾಗಿಯೇ ಇತರರೊಂದಿಗೆ ಅಧಿಕಾರ ಹಂಚಿಕೊಳ್ಳಬೇಕಾಗುತ್ತದೆ.

ಕ್ರೈಸ್ತ ಸಭೆಯಲ್ಲಿ ಯಾರಿಗೆ ಕೆಲಸಗಳನ್ನು ವಹಿಸಿಕೊಡಲಾಗಿದೆಯೋ ಅವರು ತಮ್ಮ ನೇಮಕವನ್ನು ಪೂರೈಸಬೇಕು, ಕೆಲಸವನ್ನು ಎಷ್ಟರಮಟ್ಟಿಗೆ ಪೂರೈಸಲಾಗಿದೆ ಎಂಬುದನ್ನು ವರದಿಸುತ್ತಿರಬೇಕು ಮತ್ತು ತಮಗೆ ಕೆಲಸ ವಹಿಸಿಕೊಟ್ಟವನ ಬಳಿ ಸಲಹೆ ಕೇಳುತ್ತಿರಬೇಕು. ಆದರೂ ಆ ಕೆಲಸದ ಪ್ರಮುಖ ಜವಾಬ್ದಾರಿ ಅದನ್ನು ವಹಿಸಿಕೊಟ್ಟ ನೇಮಿತ ಸಹೋದರನಿಗೇ ಇರುತ್ತದೆ. ಕೆಲಸವು ಮುಂದುವರಿಯುತ್ತಾ ಇದೆ ಎಂಬುದನ್ನು ಅವನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಅಗತ್ಯಬಿದ್ದಂತೆ ಸಲಹೆಗಳನ್ನು ನೀಡುತ್ತಿರಬೇಕು. ಆದಾಗ್ಯೂ ಕೆಲವರು ಹೀಗೆ ಕೇಳಬಹುದು: ‘ನಾವೇ ಕೆಲಸವನ್ನು ಮಾಡಲು ಶಕ್ತರಾಗಿರುವಾಗ ಅದನ್ನು ಇತರರಿಗೆ ಏಕೆ ವಹಿಸಿಕೊಡಬೇಕು?’

ಏಕೆ ವಹಿಸಿಕೊಡಬೇಕು?

ಯೆಹೋವನು ತನ್ನ ಒಬ್ಬನೇ ಮಗನನ್ನು ಸೃಷ್ಟಿಸಿ ಅವನಿಗೆ ಸೃಷ್ಟಿಕಾರ್ಯದ ಉಳಿದ ಕೆಲಸವನ್ನು ವಹಿಸಿಕೊಟ್ಟದ್ದರ ಕುರಿತು ಯೋಚಿಸಿ. ಹೌದು, ‘ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ ದೃಶ್ಯವಾದ ಮತ್ತು ಅದೃಶ್ಯವಾದ ಇತರ ಎಲ್ಲವುಗಳು ಅವನ ಮೂಲಕ ಸೃಷ್ಟಿಸಲ್ಪಟ್ಟವು.’ (ಕೊಲೊ. 1:16) ಸೃಷ್ಟಿಕರ್ತನು ಮನಸ್ಸು ಮಾಡಿದ್ದರೆ ತಾನೇ ಎಲ್ಲವನ್ನು ಮಾಡಬಹುದಿತ್ತು. ಆದರೂ ಫಲದಾಯಕ ಕೆಲಸವನ್ನು ಪೂರೈಸುವುದರಲ್ಲಿ ತನ್ನ ಮಗನೂ ಭಾಗವಹಿಸಿ ಆನಂದಪಡಲಿ ಎಂಬುದಾಗಿ ಅವನು ನಿರ್ಧರಿಸಿದನು. (ಜ್ಞಾನೋ. 8:31) ಇದು ದೇವರ ಗುಣಗಳ ಬಗ್ಗೆ ಹೆಚ್ಚನ್ನು ಕಲಿಯುವಂತೆ ಮಗನಿಗೆ ಸಹಾಯ ಮಾಡಿತು. ಒಂದರ್ಥದಲ್ಲಿ, ತಂದೆ ತನ್ನ ಒಬ್ಬನೇ ಮಗನಿಗೆ ತರಬೇತು ನೀಡಲು ಈ ಅವಕಾಶವನ್ನು ಬಳಸಿಕೊಂಡನು.

ಯೇಸು ಭೂಮಿಯಲ್ಲಿದ್ದಾಗ ಜವಾಬ್ದಾರಿಯನ್ನು ವಹಿಸಿಕೊಡುವುದರಲ್ಲಿ ತನ್ನ ತಂದೆಯನ್ನು ಅನುಕರಿಸಿದನು. ಇದಕ್ಕಾಗಿ ಅವನು ತನ್ನ ಶಿಷ್ಯರನ್ನು ಕ್ರಮೇಣ ತರಬೇತುಗೊಳಿಸಿದನು. ಅವನು 12 ಮಂದಿ ಅಪೊಸ್ತಲರು ಮತ್ತು ತದನಂತರ 70 ಮಂದಿ ಇತರ ಶಿಷ್ಯರನ್ನು ತನಗಿಂತ ಮುಂದಾಗಿ ಕಳುಹಿಸಿ ಅವರಿಗೆ ಸಾರುವ ಕೆಲಸದ ಮುಂದಾಳುತ್ವ ವಹಿಸಿಕೊಟ್ಟನು. (ಲೂಕ 9:1-6; 10:1-7) ಕಾಲಾನಂತರ ಯೇಸು ಆ ಪ್ರದೇಶಗಳಿಗೆ ಹೋದಾಗ ಆಸಕ್ತಿಯನ್ನು ಬೆಳೆಸಲು ಬೇಕಾದ ಯೋಗ್ಯ ತಳಪಾಯವು ಈಗಾಗಲೇ ಹಾಕಲ್ಪಟ್ಟಿತ್ತು. ಯೇಸು ಭೂಮಿಯನ್ನು ಬಿಟ್ಟುಹೋಗುವಾಗ ಭಾರೀ ಜವಾಬ್ದಾರಿಗಳನ್ನು, ಉದಾಹರಣೆಗೆ ಭೂವ್ಯಾಪಕ ಸಾರುವ ಕೆಲಸವನ್ನು ತರಬೇತಿ ಪಡೆದ ತನ್ನ ಶಿಷ್ಯರಿಗೆ ವಹಿಸಿಕೊಟ್ಟನು.—ಮತ್ತಾ. 24:45-47; ಅ. ಕಾ. 1:8.

ಇತರರಿಗೆ ಕೆಲಸಗಳನ್ನು ವಹಿಸಿಕೊಡುವುದು ಮತ್ತು ತರಬೇತಿ ನೀಡುವುದು ಕ್ರೈಸ್ತ ಸಭೆಯ ವೈಶಿಷ್ಟ್ಯವಾಗಿಬಿಟ್ಟಿದೆ. ಅಪೊಸ್ತಲ ಪೌಲನು ತಿಮೊಥೆಯನಿಗಂದದ್ದು: “ನೀನು ನನ್ನಿಂದ ಕೇಳಿಸಿಕೊಂಡ ಸಂಗತಿಗಳನ್ನು ಇತರರಿಗೆ ಬೋಧಿಸಲು ತಕ್ಕಷ್ಟು ಅರ್ಹರಾಗಿರುವಂಥ ನಂಬಿಗಸ್ತ ಪುರುಷರಿಗೆ ಒಪ್ಪಿಸಿಕೊಡು.” (2 ತಿಮೊ. 2:2) ಹೌದು, ಅನುಭವಿಗಳು ಹೊಸಬರಿಗೆ ತರಬೇತಿ ನೀಡಬೇಕು. ಆಗ ಸಕಾಲದಲ್ಲಿ ಅವರು ಕೂಡ ಇತರರಿಗೆ ತರಬೇತಿ ನೀಡುವರು.

ಹಿರಿಯನೊಬ್ಬನು ತನಗಿರುವ ಕೆಲಸಗಳಲ್ಲಿ ಕೆಲವೊಂದನ್ನು ಇತರರಿಗೆ ವಹಿಸಿಕೊಡುವಲ್ಲಿ, ಅವರು ಸಹ ಅವನೊಂದಿಗೆ ಬೋಧಿಸುವ ಮತ್ತು ಪರಿಪಾಲನೆ ಕೆಲಸದ ಆನಂದವನ್ನು ಸವಿಯಬಲ್ಲರು. ಮಾನವ ಸಾಮರ್ಥ್ಯಗಳು ಸೀಮಿತ ಎಂಬುದನ್ನು ಹಿರಿಯರು ತಿಳಿದಿರಬೇಕು. ಇದು ಸಭಾ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿ ಇತರರ ನೆರವನ್ನು ಪಡೆಯಲು ಇನ್ನೊಂದು ಕಾರಣವಾಗಿದೆ. ಬೈಬಲ್‌ ಹೇಳುವುದು: “ವಿನಯಶೀಲರಲ್ಲಿ ವಿವೇಕವಿದೆ.” (ಜ್ಞಾನೋ. 11:2, NW) ವಿನಯಶೀಲರಾಗಿರುವುದರಲ್ಲಿ ನಮ್ಮ ಇತಿಮಿತಿಗಳನ್ನು ತಿಳಿದುಕೊಂಡಿರುವುದು ಒಳಗೂಡಿದೆ. ಎಲ್ಲವನ್ನು ನೀವೇ ಮಾಡಲು ಪ್ರಯತ್ನಿಸುವಲ್ಲಿ ನೀವು ಬಳಲಿ ಬೆಂಡಾಗಬಹುದು. ಅಲ್ಲದೇ, ಕುಟುಂಬದೊಂದಿಗೆ ಕಳೆಯಲು ನಿಮಗೆ ಸಾಕಷ್ಟು ಸಮಯ ಸಿಗದು. ಆದ್ದರಿಂದ ಜವಾಬ್ದಾರಿಯ ಭಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಿಜಕ್ಕೂ ವಿವೇಕಯುತವಾಗಿದೆ. ಉದಾಹರಣೆಗೆ, ಹಿರಿಯರ ಮಂಡಲಿಯ ಸಂಯೋಜಕನಾಗಿರುವ ಸಹೋದರನನ್ನು ತೆಗೆದುಕೊಳ್ಳಿ. ಅವನು, ಸಭೆಯ ಅಕೌಂಟ್ಸ್‌ ಅನ್ನು ಆಡಿಟ್‌ ಮಾಡುವಂತೆ ಇತರ ಹಿರಿಯರನ್ನು ಕೇಳಿಕೊಳ್ಳಬಹುದು. ಹೀಗೆ ದಾಖಲೆಗಳನ್ನು ಪರೀಕ್ಷಿಸುವ ಮೂಲಕ ಆ ಹಿರಿಯರು ಸಹ ಸಭೆಯ ಹಣಕಾಸಿನ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದು.

ಕೆಲಸಗಳನ್ನು ವಹಿಸಿಕೊಡುವ ಮೂಲಕ ಇತರರು ಅಗತ್ಯವಾದ ಕೌಶಲ ಹಾಗೂ ಅನುಭವ ಪಡೆಯಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ ಯಾರು ಅದನ್ನು ವಹಿಸಿಕೊಟ್ಟಿದ್ದಾರೋ ಅವರು ಆ ನೇಮಿತ ವ್ಯಕ್ತಿಯ ಸಾಮರ್ಥ್ಯಗಳನ್ನು ನೋಡಸಾಧ್ಯವಾಗುತ್ತದೆ. ಹೀಗೆ, ಸಭೆಯಲ್ಲಿನ ಕೆಲವೊಂದು ಕೆಲಸಗಳನ್ನು ಇತರರಿಗೆ ವಹಿಸಿಕೊಡುವ ಮೂಲಕ ಆ ಸಹೋದರರು ಶುಶ್ರೂಷಾ ಸೇವಕರಾಗಲು “ಯೋಗ್ಯರಾಗಿದ್ದಾರೋ” ಎಂಬುದನ್ನು ಹಿರಿಯರು ಪರೀಕ್ಷಿಸಬಹುದು.—1 ತಿಮೊ. 3:10.

ಕೊನೆಯದಾಗಿ, ಹಿರಿಯರು ಇತರರಿಗೆ ಕೆಲಸಗಳನ್ನು ವಹಿಸಿಕೊಡುವ ಮೂಲಕ ಅವರಲ್ಲಿ ತಮಗೆ ಭರವಸೆಯಿದೆ ಎಂಬುದನ್ನು ತೋರಿಸಿಕೊಡುತ್ತಾರೆ. ತಿಮೊಥೆಯನೊಂದಿಗೆ ಕೆಲಸ ಮಾಡಿ ಪೌಲನು ಅವನಿಗೆ ಮಿಷನೆರಿ ಸೇವೆಯಲ್ಲಿ ತರಬೇತಿ ಕೊಟ್ಟನು. ಅವರಿಬ್ಬರ ನಡುವೆ ಆಪ್ತ ಬಂಧ ಬೆಸೆಯಿತು. ಪೌಲನು ತಿಮೊಥೆಯನನ್ನು “ನಂಬಿಕೆಯಲ್ಲಿ ನಿಜವಾದ ಮಗ” ಎಂದು ಕರೆದನು. (1 ತಿಮೊ. 1:2) ಅದೇ ರೀತಿಯಲ್ಲಿ, ಯೆಹೋವ ಮತ್ತು ಯೇಸು ಎಲ್ಲವನ್ನು ಸೃಷ್ಟಿಮಾಡುವಾಗ ಒಟ್ಟಾಗಿ ಕೆಲಸ ಮಾಡಿದ್ದರಿಂದ ಅವರ ಮಧ್ಯೆ ಬಲವಾದ ಬಂಧ ಬೆಸೆಯಿತು. ಅಂತೆಯೇ, ಇತರರಿಗೆ ಕೆಲಸಗಳನ್ನು ವಹಿಸಿಕೊಡುವ ಮೂಲಕ ಹಿರಿಯರು ಅವರೊಂದಿಗೆ ಆಪ್ತ ಸಂಬಂಧವನ್ನು ಬೆಸೆಯಬಹುದು.

ಕೆಲವರು ಹಿಂಜರಿಯುವುದೇಕೆ?

ಕೆಲಸಗಳನ್ನು ಇತರರಿಗೆ ವಹಿಸಿಕೊಡುವುದರ ಪ್ರಯೋಜನಗಳನ್ನು ತಿಳಿದಿರುವುದಾದರೂ ಕೆಲವು ಹಿರಿಯರಿಗೆ ಹಾಗೆ ಮಾಡಲು ಕಷ್ಟವೆನಿಸುತ್ತದೆ. ಹಾಗೆ ಮಾಡುವಲ್ಲಿ ತಮ್ಮ ಅಧಿಕಾರ ಕಡಿಮೆಯಾಗುತ್ತದೆಂಬ ಚಿಂತೆ ಅವರಿಗಿರುತ್ತದೆ. ಸಾಂಕೇತಿಕವಾಗಿ, ಚಾಲಕನ ಸೀಟ್‌ನಲ್ಲಿ ಯಾವಾಗಲೂ ತಾವೇ ಕುಳಿತಿರಬೇಕೆಂದು ಅವರೆಣಿಸುತ್ತಾರೆ. ಆದರೆ, ಯೇಸು ಸ್ವರ್ಗಕ್ಕೆ ಹೋಗುವ ಮೊದಲು ತನ್ನ ಶಿಷ್ಯರಿಗೆ ಒಂದು ಭಾರೀ ನೇಮಕವನ್ನು ವಹಿಸಿಕೊಟ್ಟನು ಎಂಬುದನ್ನು ನೆನಪಿಸಿಕೊಳ್ಳಿ. ಅವರು ತನಗಿಂತ ಮಹತ್ತರವಾದ ಕೆಲಸಗಳನ್ನು ಪೂರೈಸುವರು ಎಂಬುದು ಅವನಿಗೆ ತಿಳಿದಿತ್ತಾದರೂ ಅವನು ಹಾಗೆ ಮಾಡಿದನು.—ಮತ್ತಾ. 28:19, 20; ಯೋಹಾ. 14:12.

ಇನ್ನಿತರ ಹಿರಿಯರು ಈ ಮುಂಚೆ ಕೆಲವರಿಗೆ ಕೆಲಸಗಳನ್ನು ವಹಿಸಿಕೊಟ್ಟಿರಬಹುದು ಆದರೆ ಮಾಡಲಾದ ಕೆಲಸದಿಂದ ಅವರಿಗೆ ತೃಪ್ತಿಯಾಗಿರಲಿಕ್ಕಿಲ್ಲ. ಇತರರಿಗೆ ವಹಿಸಿಕೊಡುವುದಕ್ಕಿಂತ ನಾನೇ ಆ ಕೆಲಸವನ್ನು ಕಡಿಮೆ ಸಮಯದಲ್ಲಿ ಇನ್ನಷ್ಟು ಉತ್ತಮವಾಗಿ ಮಾಡಬಲ್ಲೆ ಎಂದು ಅವರೆಣಿಸಬಹುದು. ಆದರೆ ಪೌಲನ ಮಾದರಿಯನ್ನು ಪರಿಗಣಿಸಿ. ಕೆಲಸವನ್ನು ಇತರರಿಗೆ ವಹಿಸಿಕೊಡುವುದರ ಮಹತ್ತ್ವ ಅವನಿಗೆ ತಿಳಿದಿತ್ತು. ಆದರೆ ಅವರು ತಾನು ನಿರೀಕ್ಷಿಸಿದ ಮಟ್ಟವನ್ನು ಯಾವಾಗಲೂ ತಲುಪಲಾರರು ಎಂಬುದು ಸಹ ಅವನಿಗೆ ತಿಳಿದಿತ್ತು. ಪ್ರಥಮ ಮಿಷನೆರಿ ಸಂಚಾರದಲ್ಲಿ ಪೌಲನು, ತನ್ನ ಸಂಚರಣಾ ಸಂಗಡಿಗನಾಗಿದ್ದ ಯುವ ಮಾರ್ಕನಿಗೆ ತರಬೇತಿ ಕೊಟ್ಟನು. ಆದರೆ ಮಾರ್ಕನು ತನ್ನ ನೇಮಕವನ್ನು ಅರ್ಧದಲ್ಲೇ ಬಿಟ್ಟು ಮನೆಗೆ ಹಿಂದಿರುಗಿದಾಗ ಪೌಲನು ಬಹಳ ನಿರುತ್ಸಾಹಗೊಂಡನು. (ಅ. ಕಾ. 13:13; 15:37, 38) ಆದರೂ ಇತರರಿಗೆ ತರಬೇತಿ ನೀಡುವುದನ್ನು ಪೌಲನು ನಿಲ್ಲಿಸಲಿಲ್ಲ. ಈಗಾಗಲೇ ತಿಳಿಸಿರುವಂತೆ ತನ್ನ ಸಂಚರಣಾ ಸಂಗಡಿಗನಾಗಲು ಅವನು ಕ್ರೈಸ್ತನಾಗಿದ್ದ ಯುವ ತಿಮೊಥೆಯನನ್ನು ಆಮಂತ್ರಿಸಿದನು. ತಿಮೊಥೆಯನು ಇನ್ನಷ್ಟು ಜವಾಬ್ದಾರಿಯನ್ನು ಹೊರಲು ಸಮರ್ಥನಾದಾಗ ಪೌಲನು ಅವನನ್ನು ಎಫೆಸದಲ್ಲಿ ಬಿಟ್ಟುಹೋದನು. ಅಲ್ಲಿ ಅವನಿಗೆ ಸಭಾ ಮೇಲ್ವಿಚಾರಕರನ್ನೂ ಶುಶ್ರೂಷಾ ಸೇವಕರನ್ನೂ ನೇಮಿಸುವ ಜವಾಬ್ದಾರಿ ವಹಿಸಿಕೊಟ್ಟನು.—1 ತಿಮೊ. 1:3; 3:1-10, 12, 13; 5:22.

ತದ್ರೀತಿಯಲ್ಲಿ, ಆಧುನಿಕ ದಿನಗಳಲ್ಲಿನ ಹಿರಿಯರು ಒಬ್ಬನು ಒಳ್ಳೇ ರೀತಿಯಲ್ಲಿ ಕೆಲಸವನ್ನು ಮಾಡಿಲ್ಲ ಅಂದಮಾತ್ರಕ್ಕೆ ಇತರ ಸಹೋದರರಿಗೆ ತರಬೇತಿ ಕೊಡುವುದನ್ನು ನಿಲ್ಲಿಸಬಾರದು. ಇತರರ ಮೇಲೆ ಭರವಸೆಯಿಟ್ಟು ಅವರಿಗೆ ತರಬೇತಿ ಕೊಡುವುದು ವಿವೇಕಯುತವೂ ಪ್ರಾಮುಖ್ಯವೂ ಆಗಿದೆ. ಆದರೆ ಕೆಲಸಗಳನ್ನು ವಹಿಸಿಕೊಡುವಾಗ ಹಿರಿಯರು ಏನನ್ನು ನೆನಪಿನಲ್ಲಿಡತಕ್ಕದ್ದು?

ಹೇಗೆ ವಹಿಸಿಕೊಡಬೇಕು?

ನೀವು ಯಾರಿಗೆ ಜವಾಬ್ದಾರಿಯನ್ನು ವಹಿಸಿಕೊಡಬೇಕೆಂದಿದ್ದೀರೋ ಆ ಸಹೋದರರ ಅರ್ಹತೆಗಳನ್ನು ಪರಿಗಣಿಸಿ. ಯೆರೂಸಲೇಮಿನಲ್ಲಿ ದಿನನಿತ್ಯದ ಆಹಾರದ ವಿತರಣೆಯನ್ನು ನೋಡಿಕೊಳ್ಳಬೇಕಾಗಿ ಬಂದಾಗ ಅಪೊಸ್ತಲರು, “ಪವಿತ್ರಾತ್ಮಭರಿತರೂ ವಿವೇಕಭರಿತರೂ ಆಗಿರುವ ಏಳು ಮಂದಿ ಒಳ್ಳೇ ಹೆಸರುಳ್ಳ ಅರ್ಹ ಪುರುಷರನ್ನು” ಆರಿಸಿದರು. (ಅ. ಕಾ. 6:3) ನೀವು ಒಂದು ಕೆಲಸವನ್ನು ಭರವಸಾರ್ಹನಲ್ಲದ ವ್ಯಕ್ತಿಗೆ ಕೊಡುವಲ್ಲಿ ಅವನದನ್ನು ಮಾಡಲಾರ. ಆದ್ದರಿಂದ ಮೊದಲು ಕೆಲವೊಂದು ಚಿಕ್ಕಪುಟ್ಟ ಕೆಲಸಗಳನ್ನು ವಹಿಸಿಕೊಟ್ಟು ನೋಡಿ. ಆ ವ್ಯಕ್ತಿ ಅದನ್ನು ನಂಬಿಗಸ್ತಿಕೆಯಿಂದ ಮಾಡುವಲ್ಲಿ ಅದರರ್ಥ ಅವನು ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಶಕ್ತನು.

ಆದಾಗ್ಯೂ, ಇದರಲ್ಲಿ ಇನ್ನೂ ಹೆಚ್ಚಿನದ್ದು ಸೇರಿದೆ. ವ್ಯಕ್ತಿತ್ವಗಳು ಮತ್ತು ಸಾಮರ್ಥ್ಯಗಳು ಭಿನ್ನಭಿನ್ನವಾಗಿರುತ್ತವೆ. ಅನುಭವ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಹೋದರನೊಬ್ಬನು ಸ್ನೇಹಮಯಿ ಮತ್ತು ಹಸನ್ಮುಖಿಯಾಗಿರುವಲ್ಲಿ ಅಟೆಂಡೆಂಟ್‌ ಆಗಿ ಉತ್ತಮ ಕೆಲಸ ಮಾಡಬಲ್ಲನು. ಶಿಸ್ತಿನಿಂದ ಹಾಗೂ ಕ್ರಮಬದ್ಧವಾಗಿ ಕೆಲಸ ಮಾಡುವ ಸಹೋದರನು ಸಭಾ ಸೆಕ್ರೆಟರಿಯ ಸಹಾಯಕನಾಗಿರುವುದು ಒಳ್ಳೇದು. ಕಲಾಭಿರುಚಿಯುಳ್ಳ ಸಹೋದರಿಯೊಬ್ಬಳಿಗೆ ಜ್ಞಾಪಕಾಚರಣೆಯ ಸಮಯದಲ್ಲಿ ವೇದಿಕೆಯನ್ನು ಹೂವುಗಳಿಂದ ಅಲಂಕರಿಸುವ ಕೆಲಸವನ್ನು ಕೊಡಬಹುದು.

ಜವಾಬ್ದಾರಿಗಳನ್ನು ವಹಿಸಿಕೊಡುವಾಗ ಆ ಸಹೋದರರಿಂದ ಏನು ನಿರೀಕ್ಷಿಸಲಾಗುತ್ತದೆ ಎಂಬುದನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿ. ಸ್ನಾನಿಕನಾದ ಯೋಹಾನನು ತನ್ನ ಶಿಷ್ಯರನ್ನು ಯೇಸುವಿನ ಬಳಿ ಕಳುಹಿಸುವ ಮುಂಚೆ, ತನಗೆ ಯಾವ ಮಾಹಿತಿ ಬೇಕು ಮತ್ತು ಅದನ್ನು ವಿಚಾರಿಸುವಾಗ ಅವರು ಯಾವ ಪದಗಳನ್ನು ಬಳಸಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದನು. (ಲೂಕ 7:18-20) ಇದಕ್ಕೆ ವ್ಯತಿರಿಕ್ತವಾಗಿ ಯೇಸು, ಅದ್ಭುತಕರವಾಗಿ ಜನರನ್ನು ಉಣಿಸಿದ ನಂತರ ಅಲ್ಲಿ ಉಳಿದ ಆಹಾರವನ್ನು ಒಟ್ಟುಗೂಡಿಸುವಂತೆ ಶಿಷ್ಯರಿಗೆ ಹೇಳಿದಾಗ ಅದನ್ನು ಹೇಗೆ ಮಾಡಬೇಕೆಂಬುದನ್ನು ವಿವರವಾಗಿ ಹೇಳಲಿಲ್ಲ. (ಯೋಹಾ. 6:12, 13) ಕೆಲಸವನ್ನು ಯಾರಿಗೆ ವಹಿಸಿಕೊಡಬೇಕು ಎಂಬುದು ಕೆಲಸವು ಯಾವ ರೀತಿಯದ್ದು ಮತ್ತು ಕೆಲಸಮಾಡುವವನ ಅರ್ಹತೆಗಳೇನು ಎಂಬುದರ ಮೇಲೆ ಹೊಂದಿಕೊಂಡಿರುತ್ತದೆ. ನಿರೀಕ್ಷಿಸಲಾಗಿರುವ ಫಲಿತಾಂಶ ಮತ್ತು ಕೆಲಸದ ಪ್ರಗತಿಯ ಬಗ್ಗೆ ಎಷ್ಟು ಸಲ ವರದಿ ಒಪ್ಪಿಸಬೇಕು ಎಂಬುದು ಇಬ್ಬರಿಗೂ ಅಂದರೆ, ಕೆಲಸವನ್ನು ವಹಿಸಿಕೊಡುವ ವ್ಯಕ್ತಿ ಹಾಗೂ ನೇಮಕವನ್ನು ಪಡೆದ ವ್ಯಕ್ತಿಗೆ ತಿಳಿದಿರಬೇಕು. ಅಷ್ಟೇ ಅಲ್ಲ ಯಾವ ಕೆಲಸವು ಕೆಲಸ ಮಾಡುವವನ ವಿವೇಚನೆಗೆ ಬಿಡಲ್ಪಟ್ಟಿದೆಯೆಂಬುದು ಇಬ್ಬರಿಗೂ ತಿಳಿದಿರಬೇಕು. ಕೆಲಸವನ್ನು ನಿರ್ದಿಷ್ಟ ದಿನಾಂಕದೊಳಗೆ ಮುಗಿಸಬೇಕಾದಲ್ಲಿ, ಒತ್ತಡಹೇರುವ ಬದಲು ನಿರ್ದಿಷ್ಟ ದಿನಾಂಕದ ಬಗ್ಗೆ ಚರ್ಚಿಸಿ ಇಬ್ಬರೂ ಒಪ್ಪಿಕೊಳ್ಳುವಲ್ಲಿ ಆ ಕೆಲಸ ಮಾಡಲು ಹೆಚ್ಚಿನ ಪ್ರೇರಣೆ ಸಿಗುವುದು.

ನೇಮಕವಾದ ವ್ಯಕ್ತಿಗೆ ಬೇಕಾಗಿರುವ ಹಣ, ಸಲಕರಣೆಗಳು ಮತ್ತು ಸಹಾಯವನ್ನು ಲಭ್ಯಗೊಳಿಸಬೇಕು. ಮಾಡಲಾಗಿರುವ ಏರ್ಪಾಡಿನ ಕುರಿತು ಇತರರಿಗೆ ತಿಳಿಸುವುದರಿಂದಲೂ ಸಹಾಯವಾಗುವುದು. ಯೇಸು ಪೇತ್ರನಿಗೆ ಇತರ ಶಿಷ್ಯರ ಸಮ್ಮುಖದಲ್ಲೇ “ಸ್ವರ್ಗದ ರಾಜ್ಯದ ಬೀಗದ ಕೈಗಳನ್ನು” ಕೊಟ್ಟನು. (ಮತ್ತಾ. 16:13-19) ಅದೇ ರೀತಿಯಲ್ಲಿ ಕೆಲವೊಂದು ಸಂದರ್ಭಗಳಲ್ಲಿ, ನಿರ್ದಿಷ್ಟ ಕೆಲಸವನ್ನು ಮಾಡಲು ಯಾರು ಜವಾಬ್ದಾರರು ಎಂಬುದನ್ನು ಸಭೆಗೆ ತಿಳಿಸುವುದು ಒಳ್ಳೇದು.

ಜಾಗರೂಕರಾಗಿರುವುದೂ ಆವಶ್ಯಕ. ನೀವು ಈಗಾಗಲೇ ಒಬ್ಬನಿಗೆ ವಹಿಸಿಕೊಟ್ಟ ಕೆಲಸದಲ್ಲಿ ಇನ್ನೂ ತಲೆತುರುಕಿಸುತ್ತಾ ಇರುವಲ್ಲಿ, “ನಾನು ನಿನ್ನನ್ನು ನಂಬುವದಿಲ್ಲ” ಎಂದು ಆ ವ್ಯಕ್ತಿಗೆ ಪರೋಕ್ಷವಾಗಿ ಹೇಳಿದಂತಿರುತ್ತದೆ. ಕೆಲವೊಮ್ಮೆ ನೀವು ನಿರೀಕ್ಷಿಸಿದ ಫಲಿತಾಂಶಗಳು ಸಿಗದಿರಬಹುದು. ಆದರೂ ಜವಾಬ್ದಾರಿಯನ್ನು ವಹಿಸಿಕೊಡಲಾಗಿರುವ ಸಹೋದರನಿಗೆ ಸ್ವಲ್ಪ ಸ್ವಾತಂತ್ರ್ಯ ಕೊಡುವಲ್ಲಿ ಅವನು ಆತ್ಮವಿಶ್ವಾಸ ಹಾಗೂ ಅನುಭವ ಗಳಿಸುವನು. ಆದರೆ ಇದರರ್ಥ, ಅವನಿಗೆ ಇಷ್ಟ ಬಂದಂತೆ ಕೆಲಸವನ್ನು ಮಾಡಲಿ ಎಂದೆಣಿಸುತ್ತಾ ನೀವು ಕೈಕಟ್ಟಿ ಕುಳಿತಿರಬೇಕೆಂದಲ್ಲ. ಯೆಹೋವನು ಸೃಷ್ಟಿಕಾರ್ಯದಲ್ಲಿ ತನ್ನ ಮಗನಿಗೆ ಒಂದು ಪಾತ್ರವನ್ನು ವಹಿಸಿಕೊಟ್ಟನಾದರೂ ಸ್ವತಃ ಆತನೂ ಅದರಲ್ಲಿ ಒಳಗೂಡಿದನು. ಅವನು ಆ ಕುಶಲ ಶಿಲ್ಪಿಗೆ ಹೇಳಿದ್ದು: “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ.” (ಆದಿ. 1:26) ಆದ್ದರಿಂದ ನಿಮ್ಮ ಮಾತು ಮತ್ತು ಕ್ರಿಯೆಯಲ್ಲಿ ಮಾಡಲಾಗುತ್ತಿರುವ ಕೆಲಸಕ್ಕೆ ಬೆಂಬಲಕೊಡಿ ಮತ್ತು ಆ ವ್ಯಕ್ತಿಯ ಶ್ರಮಕ್ಕಾಗಿ ಅವನನ್ನು ಶ್ಲಾಘಿಸಿ. ಫಲಿತಾಂಶಗಳನ್ನು ಸಂಕ್ಷಿಪ್ತವಾಗಿ ಪುನರಾವಲೋಕಿಸುವುದು ಅವನಿಗೆ ಸಹಾಯ ಮಾಡಬಲ್ಲದು. ಅವನು ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡದಿರುವಲ್ಲಿ ಹೆಚ್ಚಿನ ಸಲಹೆ ಅಥವಾ ಸಹಾಯ ಕೊಡಲು ಹಿಂಜರಿಯದಿರಿ. ಅಂತಿಮ ಜವಾಬ್ದಾರಿ ಕೆಲಸವನ್ನು ವಹಿಸಿಕೊಟ್ಟಿರುವ ನಿಮ್ಮ ಮೇಲೆಯೇ ಇದೆಯೆಂಬುದನ್ನು ಮರೆಯದಿರಿ.—ಲೂಕ 12:48.

ತಮ್ಮಲ್ಲಿ ನೈಜ ಆಸಕ್ತಿ ತೋರಿಸುತ್ತಾ ಹಿರಿಯರು ಸಭಾ ಕೆಲಸಗಳನ್ನು ವಹಿಸಿಕೊಟ್ಟದ್ದರಿಂದಾಗಿ ಅನೇಕರು ಪ್ರಯೋಜನ ಪಡೆದಿದ್ದಾರೆ. ಯೆಹೋವನನ್ನು ಅನುಕರಿಸುತ್ತಾ ಎಲ್ಲಾ ಹಿರಿಯರು ಕೆಲಸಗಳನ್ನು ಏಕೆ ಮತ್ತು ಹೇಗೆ ವಹಿಸಿಕೊಡಬೇಕೆಂಬುದನ್ನು ಕಲಿಯಬೇಕು.

[ಪುಟ 29ರಲ್ಲಿರುವ ಚೌಕ]

ಕೆಲಸಗಳನ್ನು ವಹಿಸಿಕೊಡುವುದರಿಂದ . . .

• ನಿರ್ದಿಷ್ಟ ಕೆಲಸವನ್ನು ಪೂರೈಸುವ ಆನಂದದಲ್ಲಿ ಇತರರನ್ನೂ ಒಳಗೂಡಿಸಬಹುದು

• ಹೆಚ್ಚಿನ ಕೆಲಸವನ್ನು ಪೂರೈಸಬಹುದು

• ವಿವೇಕ ಮತ್ತು ವಿನಯಶೀಲತೆಯನ್ನು ತೋರಿಸಿಕೊಡಬಹುದು

• ಇತರರಿಗೆ ತರಬೇತಿ ಕೊಡಬಹುದು

• ಇತರರಲ್ಲಿ ಭರವಸೆಯನ್ನು ಪ್ರದರ್ಶಿಸಬಹುದು

[ಪುಟ 30ರಲ್ಲಿರುವ ಚೌಕ]

ಕೆಲಸವನ್ನು ವಹಿಸಿಕೊಡುವುದು ಹೇಗೆ?

• ಕೆಲಸಕ್ಕೆ ತಕ್ಕ ವ್ಯಕ್ತಿಗಳನ್ನು ಆರಿಸಿ

• ಸ್ಪಷ್ಟವಾಗಿ ವಿವರಿಸಿ

• ಏನನ್ನು ಪೂರೈಸಬೇಕೆಂಬುದನ್ನು ಸ್ಪಷ್ಟೀಕರಿಸಿ

• ಅಗತ್ಯಬೀಳುವ ಸಂಪನ್ಮೂಲಗಳನ್ನು ಒದಗಿಸಿ

• ಕೆಲಸದಲ್ಲಿ ಆಸಕ್ತಿವಹಿಸಿ ಮತ್ತು ನಿಮ್ಮ ಭರವಸೆಯನ್ನು ವ್ಯಕ್ತಪಡಿಸಿ

• ಅಂತಿಮ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿರಿ

[ಪುಟ 31ರಲ್ಲಿರುವ ಚಿತ್ರಗಳು]

ವಹಿಸಿಕೊಡುವುದರಲ್ಲಿ ಕೆಲಸವನ್ನು ನೇಮಿಸುವುದು ಮತ್ತು ಅದು ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸುತ್ತಿರುವುದು ಸೇರಿದೆ