ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಆಲಯಕ್ಕಾಗಿ ಅಭಿಮಾನವುಳ್ಳವರಾಗಿರಿ!

ಯೆಹೋವನ ಆಲಯಕ್ಕಾಗಿ ಅಭಿಮಾನವುಳ್ಳವರಾಗಿರಿ!

ಯೆಹೋವನ ಆಲಯಕ್ಕಾಗಿ ಅಭಿಮಾನವುಳ್ಳವರಾಗಿರಿ!

“ನಿನ್ನ ಆಲಯಕ್ಕಾಗಿರುವ ಅಭಿಮಾನವು ನನ್ನನ್ನು ದಹಿಸುವುದು.”—ಯೋಹಾ. 2:17.

1, 2. ಸಾ.ಶ. 30ರಲ್ಲಿ ಯೇಸು ದೇವಾಲಯದಲ್ಲಿ ಏನು ಮಾಡಿದನು, ಮತ್ತು ಏಕೆ?

ಈ ದೃಶ್ಯವನ್ನು ಚಿತ್ರಿಸಿಕೊಳ್ಳಿ. ಸಾ.ಶ. 30ರ ಪಂಚಾಶತ್ತಮದ ಸಮಯ. ಯೇಸು ತನ್ನ ಭೂಶುಶ್ರೂಷೆಯನ್ನು ಆರಂಭಿಸಿ ಆರು ತಿಂಗಳುಗಳು ಕಳೆದಿವೆ. ಅವನೀಗ ಯೆರೂಸಲೇಮಿಗೆ ಹೋಗುತ್ತಾನೆ. ಅಲ್ಲಿ ಅನ್ಯಜನಾಂಗಗಳ ಅಂಗಳದಲ್ಲಿ “ಜಾನುವಾರು, ಕುರಿ ಮತ್ತು ಪಾರಿವಾಳಗಳನ್ನು ಮಾರುತ್ತಿರುವವರನ್ನೂ ಹಣವಿನಿಮಯಗಾರರು ತಮ್ಮ ಆಸನಗಳಲ್ಲಿ ಕುಳಿತುಕೊಂಡಿರುವುದನ್ನೂ” ಯೇಸು ಕಾಣುತ್ತಾನೆ. ಅವನು ಹಗ್ಗಗಳಿಂದ ಒಂದು ಕೊರಡೆ ಮಾಡಿ ಎಲ್ಲಾ ಪ್ರಾಣಿಗಳನ್ನು ಅಲ್ಲಿಂದ ಹೊರಗಟ್ಟುತ್ತಾನೆ. ವ್ಯಾಪಾರಿಗಳು ಇದನ್ನು ನೋಡಿ ಅವುಗಳ ಹಿಂದೆ ಓಡುತ್ತಾರೆ. ಯೇಸು ಅಲ್ಲಿದ್ದ ಹಣವಿನಿಮಯಗಾರರ ನಾಣ್ಯಗಳನ್ನು ಸಹ ಚೆಲ್ಲಿ ಅವರ ಮೇಜುಗಳನ್ನು ಕೆಡವುತ್ತಾನೆ. ಪಾರಿವಾಳ ಮಾರುವವರಿಗೆ ಅವುಗಳನ್ನು ತೆಗೆದುಕೊಂಡುಹೋಗುವಂತೆ ಅಪ್ಪಣೆ ಕೊಡುತ್ತಾನೆ.—ಯೋಹಾ. 2:13-16.

2 ಯೇಸುವಿನ ಆ ಕ್ರಿಯೆಗಳು ಆಲಯದ ಬಗ್ಗೆ ಅವನಿಗಿದ್ದ ಕಾಳಜಿಯನ್ನು ಎತ್ತಿತೋರಿಸುತ್ತವೆ. “ನನ್ನ ತಂದೆಯ ಆಲಯವನ್ನು ವ್ಯಾಪಾರದ ಸ್ಥಳವನ್ನಾಗಿ ಮಾಡುವುದನ್ನು ನಿಲ್ಲಿಸಿರಿ!” ಎಂದವನು ಆಜ್ಞಾಪಿಸುತ್ತಾನೆ. ಈ ಘಟನೆಗಳನ್ನು ನೋಡುತ್ತಿದ್ದ ಯೇಸುವಿನ ಶಿಷ್ಯರಿಗೆ, ಶತಮಾನಗಳ ಹಿಂದೆ ಕೀರ್ತನೆಗಾರನಾದ ದಾವೀದನು ಬರೆದ ಈ ಮಾತುಗಳು ನೆನಪಿಗೆ ಬರುತ್ತವೆ: “ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ.”—ಯೋಹಾ. 2:16, 17; ಕೀರ್ತ. 69:9.

3. (ಎ) ಅಭಿಮಾನ ಎಂದರೇನು? (ಬಿ) ನಾವು ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬಹುದು?

3 ದೇವರ ಆಲಯಕ್ಕಾಗಿ ಯೇಸುವಿಗಿದ್ದ ಕಳಕಳಿ ಮತ್ತು ಅಭಿಮಾನ ಅವನು ಆ ಕ್ರಿಯೆಗೈಯುವಂತೆ ಪ್ರೇರಣೆ ನೀಡಿತು. ಅಭಿಮಾನದ ಅರ್ಥ, “ಒಂದು ವಿಷಯದ ಕಡೆಗಿನ ಉತ್ಸುಕತೆ ಮತ್ತು ಅತ್ಯಾಸಕ್ತಿ” ಆಗಿದೆ. ಈ 21ನೇ ಶತಮಾನದಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ಕ್ರೈಸ್ತರು ದೇವರ ಆಲಯದ ವಿಷಯದಲ್ಲಿ ಅತ್ಯಾಸಕ್ತಿಯನ್ನು ತೋರಿಸುತ್ತಾರೆ. ವೈಯಕ್ತಿಕವಾಗಿ ನಾವು ಹೀಗೆ ಕೇಳಿಕೊಳ್ಳಬಹುದು: ‘ಯೆಹೋವನ ಆಲಯಕ್ಕಾಗಿ ನನಗಿರುವ ಅಭಿಮಾನವನ್ನು ಹೇಗೆ ಹೆಚ್ಚಿಸಬಲ್ಲೆ?’ ಇದಕ್ಕೆ ಉತ್ತರ ಕೊಡಲಿಕ್ಕೋಸ್ಕರ ಇಂದು ದೇವರ ಆಲಯ ಎಂದರೇನು ಎಂಬುದನ್ನು ಮೊದಲು ಪರಿಶೀಲಿಸೋಣ. ಅನಂತರ ಅದಕ್ಕಾಗಿ ಅಭಿಮಾನ ತೋರಿಸಿದ ನಂಬಿಗಸ್ತ ವ್ಯಕ್ತಿಗಳ ಬೈಬಲ್‌ ಮಾದರಿಗಳನ್ನು ಪರಿಗಣಿಸೋಣ. ಅವರ ಮಾದರಿಗಳು “ನಮ್ಮನ್ನು ಉಪದೇಶಿಸುವುದಕ್ಕಾಗಿ” ಬರೆಯಲ್ಪಟ್ಟಿವೆ ಮತ್ತು ದೇವರ ಆಲಯದ ಕಡೆಗಿನ ನಮ್ಮ ಅಭಿಮಾನವನ್ನು ಹೆಚ್ಚಿಸುತ್ತವೆ.—ರೋಮ. 15:4.

ದೇವರ ಆಲಯ—ಅಂದು ಇಂದು

4. ಸೊಲೊಮೋನನು ಕಟ್ಟಿದ ದೇವಾಲಯವು ಯಾವ ಉದ್ದೇಶವನ್ನು ಪೂರೈಸಿತು?

4 ಪ್ರಾಚೀನ ಇಸ್ರಾಯೇಲಿನಲ್ಲಿ ಯೆರೂಸಲೇಮಿನಲ್ಲಿದ್ದ ದೇವಾಲಯವು ದೇವರ ಮನೆಯಾಗಿತ್ತು. ಆದರೆ ಯೆಹೋವನು ಅದರಲ್ಲಿ ಅಕ್ಷರಾರ್ಥವಾಗಿ ವಾಸಿಸುತ್ತಿರಲಿಲ್ಲ. “ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದ ಪೀಠ. ನೀವು ನನಗೆ ಇನ್ನೆಂಥಾ ಮನೆಯನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಎಂಥದು?” ಎಂದು ಆತನೇ ಹೇಳಿದ್ದಾನೆ. (ಯೆಶಾ. 66:1) ಆದಾಗ್ಯೂ, ಸೊಲೊಮೋನನ ಆಳ್ವಿಕೆಯಲ್ಲಿ ಕಟ್ಟಲಾದ ದೇವಾಲಯವು ಯೆಹೋವನ ಆರಾಧನೆಯ ಕೇಂದ್ರವಾಗಿತ್ತು ಮತ್ತು ಅಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿತ್ತು.—1 ಅರ. 8:27-30.

5. ಸೊಲೊಮೋನನ ದೇವಾಲಯದಲ್ಲಿ ಮಾಡಲಾಗುತ್ತಿದ್ದ ಆರಾಧನೆ ಏನನ್ನು ಮುನ್‌ಚಿತ್ರಿಸಿತು?

5 ಇಂದು ಯೆಹೋವನ ಆಲಯವು, ಯೆರೂಸಲೇಮ್‌ನಲ್ಲಾಗಲಿ ಇನ್ನೆಲ್ಲಾಗಲಿ ಕಟ್ಟಲಾಗಿರುವ ಕಲ್ಲಿನ ಕಟ್ಟಡವಾಗಿರುವುದಿಲ್ಲ. ಬದಲಾಗಿ ಅದು, ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದ ಆಧಾರದ ಮೇಲೆ ಯೆಹೋವನನ್ನು ಆರಾಧಿಸುವ ಏರ್ಪಾಡಾಗಿದೆ. ಭೂಮಿಯಲ್ಲಿರುವ ದೇವರ ನಂಬಿಗಸ್ತ ಸೇವಕರೆಲ್ಲರೂ ಯೆಹೋವನನ್ನು ಆರಾಧಿಸಲು ಈ ಆಧ್ಯಾತ್ಮಿಕ ಆಲಯದಲ್ಲಿ ಒಟ್ಟುಸೇರುತ್ತಾರೆ.—ಯೆಶಾ. 60:4, 8, 13; ಅ. ಕಾ. 17:24; ಇಬ್ರಿ. 8:5; 9:24.

6. ಯೆಹೂದದ ಯಾವ ಅರಸರುಗಳು ಸತ್ಯಾರಾಧನೆಗಾಗಿ ಅಸಾಮಾನ್ಯ ಅಭಿಮಾನ ತೋರಿಸಿದರು?

6 ಸಾ.ಶ.ಪೂ. 997ರಲ್ಲಿ ಇಸ್ರಾಯೇಲ್‌ನ ವಿಭಜನೆಯಾದ ನಂತರ, ದಕ್ಷಿಣ ಭಾಗದ ಯೆಹೂದದಲ್ಲಿ 19 ಅರಸರು ಆಳ್ವಿಕೆ ನಡೆಸಿದರು. ಇವರಲ್ಲಿ ಆಸ, ಯೆಹೋಷಾಫಾಟ, ಹಿಜ್ಕೀಯ ಮತ್ತು ಯೋಷೀಯ ಎಂಬ 4 ಮಂದಿ ಅರಸರು ಮಾತ್ರ ಸತ್ಯಾರಾಧನೆಗಾಗಿ ಅಸಾಮಾನ್ಯ ಅಭಿಮಾನ ತೋರಿಸಿದರು. ಅವರ ಮಾದರಿಗಳಿಂದ ನಾವು ಯಾವ ಪ್ರಾಮುಖ್ಯ ಪಾಠಗಳನ್ನು ಕಲಿಯಬಲ್ಲೆವು?

ಪೂರ್ಣಹೃದಯದ ಸೇವೆಯಿಂದ ಆಶೀರ್ವಾದಗಳು

7, 8. (ಎ) ಯಾವ ತರಹದ ಸೇವೆಯನ್ನು ಯೆಹೋವನು ಆಶೀರ್ವದಿಸುತ್ತಾನೆ? (ಬಿ) ರಾಜ ಆಸನ ಮಾದರಿಯಿಂದ ನಾವು ಯಾವ ಎಚ್ಚರಿಕೆಯ ಪಾಠವನ್ನು ಕಲಿಯಬಲ್ಲೆವು?

7 ರಾಜ ಆಸನ ಆಳ್ವಿಕೆಯಲ್ಲಿ ಯೆಹೋವನು ತನ್ನ ಜನಾಂಗವನ್ನು ನಂಬಿಗಸ್ತ ಮಾರ್ಗಕ್ರಮದಲ್ಲಿ ಮುನ್ನಡೆಸಲಿಕ್ಕಾಗಿ ಪ್ರವಾದಿಗಳನ್ನು ಕಳುಹಿಸಿದನು. ಓಬೇದನ ಮಗನಾದ ಪ್ರವಾದಿ ಅಜರ್ಯನು ಇವರಲ್ಲೊಬ್ಬನು. ಆಸನು ಇವನ ಮಾತಿಗೆ ಕಿವಿಗೊಟ್ಟನು ಎಂಬುದಾಗಿ ಬೈಬಲ್‌ ತಿಳಿಸುತ್ತದೆ. (2 ಪೂರ್ವಕಾಲವೃತ್ತಾಂತ 15:1-8 ಓದಿ.) ಆಸನು ಜಾರಿಗೆ ತಂದ ಸುಧಾರಣೆಗಳು ಯೆಹೂದದ ಜನರನ್ನು ಮಾತ್ರವಲ್ಲ, ಯೆರೂಸಲೇಮಿನಲ್ಲಿ ನಡೆದ ದೊಡ್ಡ ಸಭೆಯಲ್ಲಿ ಭಾಗವಹಿಸಲು ಇಸ್ರಾಯೇಲ್‌ ರಾಜ್ಯದಿಂದ ಬಂದ ಅಪಾರ ಸಂಖ್ಯೆಯ ಜನರನ್ನೂ ಐಕ್ಯಗೊಳಿಸಿದವು. ಅವರೆಲ್ಲರೂ ಯೆಹೋವನನ್ನು ನಿಷ್ಠೆಯಿಂದ ಆರಾಧಿಸುವ ತಮ್ಮ ದೃಢನಿರ್ಧಾರವನ್ನು ಒಕ್ಕೊರಳಿನಿಂದ ಘೋಷಿಸಿದರು. ನಾವು ಓದುವುದು: “ಇದಲ್ಲದೆ ಅವರು ತಾವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ತಮ್ಮ ಪಿತೃಗಳ ದೇವರಾದ ಯೆಹೋವನ ಭಕ್ತರಾಗಿರುವೆವೆಂದೂ ತಮ್ಮಲ್ಲಿ ಇಸ್ರಾಯೇಲ್‌ದೇವರಾದ ಯೆಹೋವನ ಭಕ್ತಿಯನ್ನು ಬಿಟ್ಟವರು ಚಿಕ್ಕವರಾಗಲಿ ದೊಡ್ಡವರಾಗಲಿ, ಗಂಡಸರಾಗಲಿ ಹೆಂಗಸರಾಗಲಿ, ಅವರೆಲ್ಲರನ್ನೂ ಕೊಲ್ಲುವೆವೆಂದೂ ತುತೂರಿಕೊಂಬುಗಳನ್ನೂದಿಸಿ ದೊಡ್ಡ ಆರ್ಭಟದೊಡನೆ ಯೆಹೋವನಿಗೆ ಪ್ರಮಾಣಮಾಡಿದರು. ಈ ಪ್ರಮಾಣದ ನಿಮಿತ್ತವಾಗಿ ಯೆಹೂದ್ಯರೆಲ್ಲರಿಗೂ ಸಂತೋಷವಾಯಿತು. ಅವರು ಪೂರ್ಣಮನಸ್ಸಿನಿಂದ ಪ್ರಮಾಣಮಾಡಿ ತುಂಬಾ ಲವಲವಿಕೆಯಿಂದ ಯೆಹೋವನನ್ನು ಬಯಸಿದ ಕಾರಣ ಆತನು ಅವರಿಗೆ ಪ್ರಸನ್ನನಾಗಿ ಎಲ್ಲಾ ಕಡೆಗಳಲ್ಲಿಯೂ ಸಮಾಧಾನವನ್ನನುಗ್ರಹಿಸಿದನು.” (2 ಪೂರ್ವ. 15:9-15) ಅದರಂತೆಯೇ, ನಾವು ಯೆಹೋವನನ್ನು ಪೂರ್ಣಹೃದಯದಿಂದ ಆರಾಧಿಸುವಲ್ಲಿ ಆತನು ನಮ್ಮನ್ನು ಕೂಡ ಖಂಡಿತ ಆಶೀರ್ವದಿಸುವನು.—ಮಾರ್ಕ 12:30.

8 ದುಃಖದ ವಿಷಯವೇನೆಂದರೆ ಆಸನು ಸಮಯಾನಂತರ ಯೆಹೋವನ ಪ್ರವಾದಿಗಳಿಗೆ ಕಿವಿಗೊಡಲಿಲ್ಲ. ಒಂದು ಸಂದರ್ಭದಲ್ಲಿ ದರ್ಶಿಯಾದ ಹನಾನಿ ಅವನನ್ನು ತಿದ್ದಿದಾಗ ಅವನು ತುಂಬ ಕೋಪಿಸಿಕೊಂಡನು. (2 ಪೂರ್ವ. 16:7-10) ನಮಗಿಂದು ಕ್ರೈಸ್ತ ಹಿರಿಯರ ಮೂಲಕ ಯೆಹೋವನು ಬುದ್ಧಿವಾದ ಅಥವಾ ಮಾರ್ಗದರ್ಶನವನ್ನು ಕೊಡುವಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಮುನಿಸಿಕೊಳ್ಳದೆ ಆ ಶಾಸ್ತ್ರಾಧಾರಿತ ಸಲಹೆಯನ್ನು ಕೂಡಲೇ ಸ್ವೀಕರಿಸಿ ಅನ್ವಯಿಸಿಕೊಳ್ಳುತ್ತೇವೊ?

9. ಯೆಹೋಷಾಫಾಟ ಮತ್ತು ಎಲ್ಲಾ ಯೆಹೂದ್ಯರು ಯಾವ ಅಪಾಯದಲ್ಲಿದ್ದರು, ಮತ್ತು ಅವರ ಪ್ರತಿಕ್ರಿಯೆ ಏನಾಗಿತ್ತು?

9 ಯೆಹೋಷಾಫಾಟನು ಸಾ.ಶ.ಪೂ. ಹತ್ತನೇ ಶತಮಾನದಲ್ಲಿ ಯೆಹೂದವನ್ನು ಆಳಿದ ರಾಜನಾಗಿದ್ದನು. ಅವನು ಮತ್ತು ಯೆಹೂದ್ಯರೆಲ್ಲರೂ, ಅಮ್ಮೋನ್‌, ಮೋವಾಬ್‌ ಮತ್ತು ಸೇಯೀರ್‌ ಪರ್ವತ ಪ್ರದೇಶದ ಜನರಿಂದ ಆಕ್ರಮಣಕ್ಕೊಳಗಾಗುವ ಅಪಾಯದಲ್ಲಿದ್ದರು. ರಾಜನು ಹೆದರಿದನಾದರೂ ಏನು ಮಾಡಿದನು? ಅವನು ಮತ್ತು ಅವನ ಜನರು ಅವರ ಹೆಂಡತಿ ಮಕ್ಕಳೊಂದಿಗೆ ಯೆಹೋವನ ಆಲಯದಲ್ಲಿ ಪ್ರಾರ್ಥಿಸಲಿಕ್ಕಾಗಿ ಒಟ್ಟುಸೇರಿದರು. (2 ಪೂರ್ವಕಾಲವೃತ್ತಾಂತ 20:3-6 ಓದಿ.) ಆಲಯದ ಸಮರ್ಪಣೆಯ ಸಂದರ್ಭದಲ್ಲಿ ಸೊಲೊಮೋನನು ಹೇಳಿದ ಮಾತುಗಳಿಗೆ ಹೊಂದಿಕೆಯಲ್ಲಿ ಯೆಹೋಷಾಫಾಟನು ಮನಸ್ಪರ್ಶಿಸುವಂಥ ರೀತಿಯಲ್ಲಿ ಯೆಹೋವನಿಗೆ ಹೀಗೆ ಭಿನ್ನೈಸಿದನು: “ನಮ್ಮ ದೇವರೇ, ಅವರನ್ನು ದಂಡಿಸದೆ ಬಿಡುವಿಯೋ? ನಮ್ಮ ಮೇಲೆ ಬಂದ ಈ ಮಹಾಸಮೂಹದ ಮುಂದೆ ನಿಲ್ಲುವದಕ್ಕೆ ನಮ್ಮಲ್ಲಿ ಬಲವಿಲ್ಲ, ಏನು ಮಾಡಬೇಕೆಂಬದೂ ತಿಳಿಯದು; ನಮ್ಮ ಕಣ್ಣುಗಳು ನಿನ್ನನ್ನೇ ನೋಡುತ್ತವೆ.” (2 ಪೂರ್ವ. 20:12, 13) ಯೆಹೋಷಾಫಾಟನು ಪ್ರಾರ್ಥಿಸಿದ ಬಳಿಕ, “ಆ ಸಮೂಹದೊಳಗೆ” ಒಬ್ಬನಾದ ಯಹಜೀಯೇಲನೆಂಬ ಲೇವಿಯನ ಮೇಲೆ ಯೆಹೋವನ ಆತ್ಮವು ಬಂತು ಮತ್ತು ಜನಸಮೂಹಕ್ಕೆ ಸಾಂತ್ವನದ ಮತ್ತು ಭರವಸೆ ಕೊಡುವ ಮಾತುಗಳನ್ನಾಡುವಂತೆ ಅವನನ್ನು ಶಕ್ತಗೊಳಿಸಿತು.—2 ಪೂರ್ವಕಾಲವೃತ್ತಾಂತ 20:14-17 ಓದಿ.

10. (ಎ) ಯೆಹೋಷಾಫಾಟ ಮತ್ತು ಯೆಹೂದ ರಾಜ್ಯಕ್ಕೆ ಹೇಗೆ ನಿರ್ದೇಶನಗಳು ಸಿಕ್ಕಿದವು? (ಬಿ) ಯೆಹೋವನು ನಮಗಿಂದು ಕೊಡುವ ನಿರ್ದೇಶನಗಳಿಗೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

10 ಹೌದು, ಹಿಂದೆ ಆ ಕಾಲದಲ್ಲಿ ಯೆಹೋಷಾಫಾಟನಿಗೆ ಮತ್ತು ಯೆಹೂದ ರಾಜ್ಯಕ್ಕೆ ಯಹಜೀಯೇಲನ ಮೂಲಕ ಯೆಹೋವನಿಂದ ನಿರ್ದೇಶನ ಸಿಗುತ್ತಿತ್ತು. ಇಂದು ನಮಗೆ ಸಾಂತ್ವನ ಮತ್ತು ನಿರ್ದೇಶನ, ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ವರ್ಗದ ಮೂಲಕ ಸಿಗುತ್ತದೆ. ಈ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಕೊಡುವ ನಿರ್ದೇಶನಗಳನ್ನು ಅನುಸರಿಸುತ್ತಾ ನಮ್ಮನ್ನು ಪರಿಪಾಲಿಸಲು ಕಷ್ಟಪಟ್ಟು ಕೆಲಸಮಾಡುವ ನೇಮಿತ ಹಿರಿಯರೊಂದಿಗೆ ನಾವು ಯಾವಾಗಲೂ ಸಹಕರಿಸಬೇಕು ಹಾಗೂ ಅವರಿಗೆ ಗೌರವ ತೋರಿಸಬೇಕು.—ಮತ್ತಾ. 24:45; 1 ಥೆಸ. 5:12, 13.

11, 12. ಯೆಹೋಷಾಫಾಟ ಮತ್ತು ಯೆಹೂದಕ್ಕೆ ಸಂಭವಿಸಿದ ವಿಷಯಗಳಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?

11 ಯೆಹೋಷಾಫಾಟ ಮತ್ತು ಅವನ ಜನರು ಯೆಹೋವನ ಮಾರ್ಗದರ್ಶನವನ್ನು ಕೋರಲಿಕ್ಕಾಗಿ ಒಟ್ಟುಸೇರಿದಂತೆ, ನಾವು ಸಹ ನಮ್ಮ ಸಹೋದರ ಸಹೋದರಿಯರೊಂದಿಗೆ ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದನ್ನು ಅಲಕ್ಷಿಸದಿರೋಣ. ನಾವು ಕೆಲವೊಮ್ಮೆ ಕಡುಕಷ್ಟದಲ್ಲಿ ಸಿಕ್ಕಿಬಿದ್ದು ಏನು ಮಾಡಬೇಕೆಂದು ದಿಕ್ಕೇತೋಚದಂತಾಗಬಹುದು. ಅಂಥ ಸಂದರ್ಭದಲ್ಲಿ, ಯೆಹೋಷಾಫಾಟ ಹಾಗೂ ಯೆಹೂದದ ಜನರ ಉತ್ತಮ ಮಾದರಿಯನ್ನು ಅನುಸರಿಸುತ್ತಾ ಸಂಪೂರ್ಣ ಭರವಸೆಯೊಂದಿಗೆ ಯೆಹೋವನಿಗೆ ಪ್ರಾರ್ಥಿಸೋಣ. (ಜ್ಞಾನೋ. 3:5, 6; ಫಿಲಿ. 4:6, 7) ನಾವು ಸಹೋದರರಿಂದ ಶಾರೀರಿಕವಾಗಿ ದೂರದಲ್ಲಿದ್ದರೂ ಯೆಹೋವನಿಗೆ ಮಾಡುವ ಪ್ರಾರ್ಥನೆಗಳು, ನಾವು ಒಂಟಿಯಾಗಿಲ್ಲ ಬದಲಾಗಿ ‘ಲೋಕದಲ್ಲಿರುವ ನಮ್ಮ ಸಹೋದರರ ಇಡೀ ಬಳಗದ’ ಭಾಗವಾಗಿದ್ದೇವೆ ಎಂಬ ಭಾವನೆಯನ್ನು ಮೂಡಿಸುತ್ತವೆ.—1 ಪೇತ್ರ 5:9.

12 ಯೆಹೋಷಾಫಾಟ ಮತ್ತವನ ಜನರು ಯಹಜೀಯೇಲನಿಂದ ಸಿಕ್ಕಿದ ದೇವದತ್ತ ನಿರ್ದೇಶನವನ್ನು ಪಾಲಿಸಿದರು. ಫಲಿತಾಂಶ? ಆ ಬಳಿಕ ನಡೆದ ಯುದ್ಧದಲ್ಲಿ ಅವರು ಜಯಗಳಿಸಿದರು ಮತ್ತು “ಜಯಘೋಷಮಾಡುತ್ತಾ” ಯೆರೂಸಲೇಮಿಗೆ ಹಿಂದಿರುಗಿದರು. “ಅವರು ಸ್ವರಮಂಡಲ ಕಿನ್ನರಿ ತುತೂರಿ ಇವುಗಳೊಡನೆ ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಬಂದರು.” (2 ಪೂರ್ವ. 20:27, 28) ಅದರಂತೆಯೇ ನಾವು ಕೂಡ, ಯೆಹೋವನು ತನ್ನ ಮಾಧ್ಯಮದ ಮೂಲಕ ಕೊಡುವ ನಿರ್ದೇಶನವನ್ನು ಮಾನ್ಯಮಾಡುತ್ತೇವೆ ಮತ್ತು ಆತನನ್ನು ಸ್ತುತಿಸುವುದರಲ್ಲಿ ಜೊತೆಗೂಡುತ್ತೇವೆ.

ಕೂಟದ ಸ್ಥಳಗಳನ್ನು ಸುಸ್ಥಿತಿಯಲ್ಲಿಡಿ

13. ಹಿಜ್ಕೀಯನು ತನ್ನ ಆಳ್ವಿಕೆಯ ಆರಂಭದಲ್ಲಿ ಮಾಡಿದ ಕೆಲಸ ಯಾವುದಾಗಿತ್ತು?

13 ಹಿಜ್ಕೀಯನು ತನ್ನ ಆಳ್ವಿಕೆಯ ಪ್ರಥಮ ತಿಂಗಳಲ್ಲೇ ದೇವಾಲಯವನ್ನು ಪುನಃತೆರೆದು ಅದನ್ನು ದುರಸ್ತಿಗೊಳಿಸುವ ಮೂಲಕ ಯೆಹೋವನ ಆರಾಧನೆಗಾಗಿ ತನಗಿದ್ದ ಅಭಿಮಾನವನ್ನು ತೋರಿಸಿದನು. ಯಾಜಕರು ಮತ್ತು ಲೇವಿಯರು ದೇವರ ಆಲಯವನ್ನು ಸ್ವಚ್ಛಗೊಳಿಸುವಂತೆ ಅವನು ಏರ್ಪಡಿಸಿದನು ಮತ್ತು ಅವರದನ್ನು 16 ದಿನಗಳಲ್ಲಿ ಮಾಡಿಮುಗಿಸಿದರು. (2 ಪೂರ್ವಕಾಲವೃತ್ತಾಂತ 29:16-18 ಓದಿ.) ಅವರ ಈ ಪ್ರಯತ್ನವು, ನಾವು ಕೂಟದ ಸ್ಥಳಗಳನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡಬೇಕೆಂಬುದನ್ನು ನೆನಪಿಗೆ ತರುತ್ತದೆ. ಈ ಕೆಲಸ ಮಾಡುವುದರಿಂದ, ನಮ್ಮ ಕೂಟದ ಸ್ಥಳಗಳು ಯೆಹೋವನ ಆರಾಧನೆಗಾಗಿ ನಮಗಿರುವ ಅಭಿಮಾನವನ್ನು ಪ್ರತಿಫಲಿಸುತ್ತವೆ. ಇಂಥ ಕೆಲಸ ಮಾಡುವುದರಲ್ಲಿ ಸಹೋದರ ಸಹೋದರಿಯರು ತೋರಿಸಿರುವ ಹುರುಪಿನಿಂದ ಇತರ ಜನರು ಪ್ರಭಾವಿತರಾದ ಅನುಭವಗಳನ್ನು ನೀವು ಕೇಳಿಸಿಕೊಂಡಿಲ್ಲವೇ? ಹೌದು, ಅವರ ಪ್ರಯತ್ನಗಳು ಯೆಹೋವನಿಗೆ ಬಹಳ ಸ್ತುತಿ ತರುತ್ತವೆ.

14, 15. ಇಂದು ಯಾವ ಕೆಲಸ ಯೆಹೋವನಿಗೆ ಬಹಳ ಸ್ತುತಿ ತರುತ್ತದೆ? ಉದಾಹರಣೆಗಳನ್ನು ಕೊಡಿ.

14 ಉತ್ತರ ಇಂಗ್ಲೆಂಡ್‌ನ ನಗರವೊಂದರಲ್ಲಿ, ಒಬ್ಬ ವ್ಯಕ್ತಿ ತನ್ನ ಕಟ್ಟಡದ ಪಕ್ಕದ ಜಮೀನಿನಲ್ಲಿದ್ದ ರಾಜ್ಯ ಸಭಾಗೃಹದ ನವೀಕರಣ ಕೆಲಸಕ್ಕೆ ತಡೆಯೊಡ್ಡಿದನು. ಆದರೆ ಸ್ಥಳಿಕ ಸಹೋದರರು ಅವನೊಂದಿಗೆ ದಯೆಯಿಂದ ವ್ಯವಹರಿಸಿದರು. ರಾಜ್ಯ ಸಭಾಗೃಹ ಮತ್ತು ಆ ನೆರೆಯವನ ಕಟ್ಟಡದ ಮಧ್ಯೆಯಿದ್ದ ಕಂಪೌಂಡ್‌ ಗೋಡೆಯನ್ನು ರಿಪೇರಿ ಮಾಡುವ ಅಗತ್ಯವನ್ನು ಮನಗಂಡ ಸಹೋದರರು, ಅದನ್ನು ನಾವು ದುರಸ್ತಿಗೊಳಿಸುತ್ತೇವೆ ನೀವೇನೂ ಹಣ ಕೊಡಬೇಕಾಗಿಲ್ಲ ಎಂದು ಹೇಳಿದರು. ಅವರು ಕಷ್ಟಪಟ್ಟು ಶ್ರಮಿಸಿದರು. ಗೋಡೆಯನ್ನು ದುರಸ್ತಿಗೊಳಿಸಿದರು ಎನ್ನುವ ಬದಲು ಅದನ್ನು ಪುನಃ ಕಟ್ಟಿದರೆಂದೇ ಹೇಳಬಹುದು. ಸಹೋದರರ ನಡತೆಯಿಂದಾಗಿ ನೆರೆಯವನ ಮನಸ್ಸು ಬದಲಾಯಿತು. ಈಗಂತೂ ಅವನೇ ರಾಜ್ಯ ಸಭಾಗೃಹದ ಮೇಲೆ ನಿಗಾ ಇಡುತ್ತಾ ಸಹೋದರರಿಗೆ ಸಹಾಯ ಮಾಡುತ್ತಾನೆ!

15 ಯೆಹೋವನ ಜನರು ಲೋಕವ್ಯಾಪಕ ನಿರ್ಮಾಣ ಕೆಲಸವೊಂದರಲ್ಲಿ ಪಾಲ್ಗೊಳ್ಳುತ್ತಾರೆ. ರಾಜ್ಯ ಸಭಾಗೃಹಗಳನ್ನು ಮಾತ್ರವಲ್ಲ ಅಸೆಂಬ್ಲಿ ಹಾಲ್‌ಗಳು ಮತ್ತು ಬೆತೆಲ್‌ ಗೃಹಗಳನ್ನು ಕಟ್ಟುವುದರಲ್ಲಿ ಸ್ಥಳಿಕ ಸ್ವಯಂಸೇವಕರು ಪೂರ್ಣ ಸಮಯದ ಅಂತಾರಾಷ್ಟ್ರೀಯ ಸೇವಕರೊಂದಿಗೆ ಸ್ವಇಷ್ಟದಿಂದ ಜೊತೆಗೂಡುತ್ತಾರೆ. ಸ್ಯಾಮ್‌ ಎಂಬಾತನು ಶಾಖ, ಗಾಳಿಬೆಳಕುಗಳ ಸಂಚಾರ ಮತ್ತು ಹವಾನಿಯಂತ್ರಣದ ಕೆಲಸಗಳಲ್ಲಿ ಪರಿಣತಿಯುಳ್ಳ ಇಂಜಿನೀಯರ್‌ ಆಗಿದ್ದಾನೆ. ಅವನು ಮತ್ತು ಅವನ ಹೆಂಡತಿ ರೂತ್‌ ನಿರ್ಮಾಣ ಯೋಜನೆಗಳಲ್ಲಿ ಸಹಾಯ ಮಾಡಲಿಕ್ಕಾಗಿ ಯುರೋಪ್‌ ಮತ್ತು ಆಫ್ರಿಕದ ಅನೇಕ ದೇಶಗಳಿಗೆ ಪ್ರಯಾಣಿಸಿದ್ದಾರೆ. ಅವರು ಎಲ್ಲಿಯೇ ಹೋಗಲಿ ಸ್ಥಳಿಕ ಸಭೆಗಳೊಂದಿಗೆ ಸಾರುವ ಕೆಲಸದಲ್ಲೂ ಆನಂದಿಸುತ್ತಾರೆ. ಅಂತಾರಾಷ್ಟ್ರೀಯ ಕಾರ್ಯಯೋಜನೆಗಳಲ್ಲಿ ಭಾಗವಹಿಸುವಂತೆ ತನ್ನನ್ನು ಉತ್ತೇಜಿಸಿದ ಸಂಗತಿಯ ಕುರಿತು ಸ್ಯಾಮ್‌ ಹೇಳುವುದು: “ಇಲ್ಲಿ ಮತ್ತು ವಿದೇಶಗಳಲ್ಲಿರುವ ಬೆತೆಲ್‌ಗಳಲ್ಲಿ ಸೇವೆ ಸಲ್ಲಿಸಿದವರಿಂದ ನನಗೆ ಉತ್ತೇಜನ ಸಿಕ್ಕಿತು. ಅವರಲ್ಲಿದ್ದ ಹುರುಪು ಮತ್ತು ಆನಂದವೇ ಈ ರೀತಿ ಸೇವೆ ಸಲ್ಲಿಸಲು ನನಗೆ ಸ್ಫೂರ್ತಿಯಾಗಿತ್ತು.”

ದೇವರ ಸಲಹೆಸೂಚನೆಗಳಿಗೆ ವಿಧೇಯರಾಗಿರಿ

16, 17. ಯಾವ ವಿಶೇಷ ಕಾರ್ಯಾಚರಣೆಯಲ್ಲಿ ದೇವಜನರು ಉತ್ಸುಕತೆಯಿಂದ ಭಾಗವಹಿಸಿದ್ದಾರೆ, ಮತ್ತು ಫಲಿತಾಂಶಗಳೇನು?

16 ಹಿಜ್ಕೀಯನು ದೇವಾಲಯವನ್ನು ದುರಸ್ತಿಗೊಳಿಸಿದ್ದು ಮಾತ್ರವಲ್ಲ, ಯೆಹೋವನು ಆಜ್ಞಾಪಿಸಿದಂಥ ವಾರ್ಷಿಕ ಪಸ್ಕದಾಚರಣೆಯನ್ನು ಸಹ ಪುನಃ ಆರಂಭಿಸಿದನು. (2 ಪೂರ್ವಕಾಲವೃತ್ತಾಂತ 30:1, 4, 5 ಓದಿ.) ಹಿಜ್ಕೀಯ ಮತ್ತು ಯೆರೂಸಲೇಮಿನ ನಿವಾಸಿಗಳು ಇಡೀ ಜನಾಂಗವನ್ನು ಅಂದರೆ ಉತ್ತರ ರಾಜ್ಯವನ್ನು ಸಹ ಅದಕ್ಕಾಗಿ ಆಮಂತ್ರಿಸಿದರು. ದೂತರು ದೇಶದಲ್ಲೆಲ್ಲಾ ಸಂಚರಿಸಿ ಆಮಂತ್ರಣ ಪತ್ರಗಳನ್ನು ಹಂಚಿದರು.—2 ಪೂರ್ವ. 30:6-9.

17 ಇತ್ತೀಚಿನ ವರ್ಷಗಳಲ್ಲಿ ನಾವು ಕೂಡ ತದ್ರೀತಿಯ ಕೆಲಸಗಳನ್ನು ಮಾಡಿದ್ದೇವೆ. ಯೇಸುವಿನ ಅಪ್ಪಣೆಗೆ ವಿಧೇಯತೆಯಲ್ಲಿ ಕರ್ತನ ಸಂಧ್ಯಾ ಭೋಜನದ ಸ್ಮರಣೆಗೆ ನಮ್ಮ ಟೆರಿಟೊರಿಯಲ್ಲಿರುವ ಜನರು ನಮ್ಮೊಂದಿಗೆ ಜೊತೆಗೂಡುವಂತೆ ನಾವು ಅತ್ಯಾಕರ್ಷಕ ಆಮಂತ್ರಣ ಪತ್ರಗಳನ್ನು ಹಂಚಿದ್ದೇವೆ. (ಲೂಕ 22:19, 20) ಸೇವಾ ಕೂಟಗಳಲ್ಲಿ ನಮಗೆ ಸಿಕ್ಕಿದ ಸಲಹೆಸೂಚನೆಗಳೊಂದಿಗೆ ನಾವು ಈ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸಿದೆವು. ಯೆಹೋವನು ಈ ಕೆಲಸವನ್ನು ಎಷ್ಟೊಂದು ಆಶೀರ್ವದಿಸಿದ್ದಾನೆ! ಕಳೆದ ವರ್ಷ ನಮ್ಮಲ್ಲಿ ಸುಮಾರು 70 ಲಕ್ಷ ಮಂದಿ ಆಮಂತ್ರಣಗಳನ್ನು ಹಂಚಿದ್ದೆವು ಮತ್ತು ಒಟ್ಟು 1,77,90,631 ಮಂದಿ ಹಾಜರಾದರು!

18. ನಿಮ್ಮಲ್ಲಿ ಸತ್ಯಾರಾಧನೆಗಾಗಿ ಅಭಿಮಾನವಿರುವುದು ಪ್ರಾಮುಖ್ಯವೇಕೆ?

18 ಹಿಜ್ಕೀಯನ ಕುರಿತು ಹೀಗೆ ಹೇಳಲಾಗಿದೆ: “ಇವನು ಇಸ್ರಾಯೇಲ್‌ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದನು. ಯೆಹೂದ್ಯರಲ್ಲಿ ಇವನಿಗೆ ಸಮಾನನಾದ ಅರಸನು ಮುಂಚೆಯೂ ತರುವಾಯವೂ ಇರಲಿಲ್ಲ. ಇದಲ್ಲದೆ ಇವನು ಯೆಹೋವನನ್ನೇ ಹೊಂದಿಕೊಂಡು ಆತನನ್ನು ಬಿಡದೆ ಹಿಂಬಾಲಿಸಿ ಆತನು ಮೋಶೆಯ ಮುಖಾಂತರವಾಗಿ ಅನುಗ್ರಹಿಸಿದ ಆಜ್ಞೆಗಳನ್ನು ಕೈಕೊಂಡನು.” (2 ಅರ. 18:5, 6) ನಾವು ಕೂಡ ಅವನ ಮಾದರಿಯನ್ನು ಅನುಸರಿಸೋಣ. ದೇವರ ಆಲಯದ ಕಡೆಗೆ ನಮಗಿರುವ ಅಭಿಮಾನವು ನಾವು ನಿತ್ಯಜೀವದ ನಿರೀಕ್ಷೆಯನ್ನು ಕಣ್ಮುಂದೆ ಇಡುತ್ತಾ ‘ಯೆಹೋವನನ್ನೇ ಹೊಂದಿಕೊಂಡಿರಲು’ ಸಹಾಯ ಮಾಡುವುದು.—ಧರ್ಮೋ. 30:16.

ನಿರ್ದೇಶನಕ್ಕೆ ಪ್ರತಿಕ್ರಿಯಿಸಲು ತಡಮಾಡಬೇಡಿ!

19. ಜ್ಞಾಪಕಾಚರಣೆಯ ಅವಧಿಯಲ್ಲಿ ಹುರುಪಿನ ಯಾವ ಪ್ರಯತ್ನಗಳನ್ನು ಮಾಡಲಾಗುತ್ತದೆ?

19 ರಾಜ ಯೋಷೀಯನು ಕೂಡ ಪಸ್ಕಹಬ್ಬವನ್ನು ಆಚರಿಸಲು ಏರ್ಪಾಡು ಮಾಡಿದನು ಮತ್ತು ಅದಕ್ಕಾಗಿ ಬೃಹತ್‌ ಪ್ರಮಾಣದ ಸಿದ್ಧತೆಗಳನ್ನು ಮಾಡಿದನು. (2 ಅರ. 23:21-23; 2 ಪೂರ್ವ. 35:1-19) ಅಂತೆಯೇ, ನಾವು ಕೂಡ ಜಿಲ್ಲಾ ಅಧಿವೇಶನಗಳು, ಸರ್ಕಿಟ್‌ ಮತ್ತು ವಿಶೇಷ ಸಮ್ಮೇಳನಗಳು ಹಾಗೂ ಜ್ಞಾಪಕಾಚರಣೆಗಾಗಿ ವಿಶೇಷ ಕಾಳಜಿವಹಿಸಿ ಸಿದ್ಧತೆಗಳನ್ನು ಮಾಡುತ್ತೇವೆ. ಕೆಲವು ದೇಶಗಳಲ್ಲಿನ ಸಹೋದರರಂತೂ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾಗಲು ತಮ್ಮ ಪ್ರಾಣವನ್ನೂ ಪಣಕ್ಕೊಡ್ಡಲು ಸಿದ್ಧರಿದ್ದಾರೆ. ಸಭೆಯಲ್ಲಿರುವವರೆಲ್ಲರೂ ಜ್ಞಾಪಕಾಚರಣೆಗೆ ಹಾಜರಾಗುವುದನ್ನು ಹುರುಪಿನ ಹಿರಿಯರು ಖಚಿತಪಡಿಸಿಕೊಳ್ಳುತ್ತಾರೆ. ವೃದ್ಧರು ಮತ್ತು ಅಶಕ್ತರಿಗೂ ಹಾಜರಾಗುವಂತೆ ಸಹಾಯ ನೀಡಲಾಗುತ್ತದೆ.

20. (ಎ) ರಾಜ ಯೋಷೀಯನ ಆಳ್ವಿಕೆಯಲ್ಲಿ ಏನಾಯಿತು, ಮತ್ತು ಅವನು ಹೇಗೆ ಪ್ರತಿಕ್ರಿಯಿಸಿದನು? (ಬಿ) ನಾವು ಯಾವ ಪಾಠ ಕಲಿತುಕೊಳ್ಳಬೇಕು?

20 ರಾಜ ಯೋಷೀಯನು ಏರ್ಪಡಿಸಿದ ದೇವಾಲಯದ ಪುನಃಸ್ಥಾಪನೆಯ ಕೆಲಸದ ಸಮಯದಲ್ಲಿ, “ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶದ ಗ್ರಂಥ” ಮಹಾ ಯಾಜಕನಾದ ಹಿಲ್ಕೀಯನಿಗೆ ಸಿಕ್ಕಿತು. ಹಿಲ್ಕೀಯನು ಅದನ್ನು ಅರಸನ ಲೇಖಕನಾದ ಶಾಫಾನನ ಕೈಯಲ್ಲಿ ಕೊಟ್ಟನು ಮತ್ತು ಅವನದನ್ನು ಅರಸನ ಮುಂದೆ ಓದಿದನು. (2 ಪೂರ್ವಕಾಲವೃತ್ತಾಂತ 34:14-18 ಓದಿ.) ಪರಿಣಾಮವೇನಾಗಿತ್ತು? ತಕ್ಷಣ ರಾಜನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು ಮತ್ತು ಯೆಹೋವನನ್ನು ವಿಚಾರಿಸಿ ಬರುವಂತೆ ಆ ಪುರುಷರಿಗೆ ಹೇಳಿದನು. ದೇವರು ಪ್ರವಾದಿನಿ ಹುಲ್ದಳ ಮೂಲಕ, ಯೆಹೂದದಲ್ಲಿ ನಡೆಯುತ್ತಿದ್ದ ಕೆಲವೊಂದು ಧಾರ್ಮಿಕ ಪದ್ಧತಿಗಳನ್ನು ಖಂಡಿಸುವ ಸಂದೇಶವನ್ನು ಕೊಟ್ಟನು. ಯೆಹೂದದಲ್ಲಿ ಇದೆಲ್ಲಾ ನಡೆಯುತ್ತಿದ್ದರೂ ಯೋಷೀಯನು ವಿಗ್ರಹಾರಾಧನೆಯನ್ನು ತೊಡೆದುಹಾಕಲು ಮಾಡುತ್ತಿದ್ದ ಪ್ರಯತ್ನಗಳನ್ನು ಯೆಹೋವನು ಗಮನಿಸಿದ್ದನು. ಆದ್ದರಿಂದ ಆ ಇಡೀ ಜನಾಂಗದ ಮೇಲೆ ವಿಪತ್ತನ್ನು ಬರಮಾಡುವುದಾಗಿ ಯೆಹೋವನು ಮುಂತಿಳಿಸಿದ್ದರೂ ಯೋಷೀಯನಾದರೋ ಆತನ ಅನುಗ್ರಹಕ್ಕೆ ಪಾತ್ರನಾದನು. (2 ಪೂರ್ವ. 34:19-28) ಇದರಿಂದ ನಾವೇನು ಕಲಿಯಬಲ್ಲೆವು? ನಮಗೂ ಯೋಷೀಯನಿಗಿದ್ದಂಥದ್ದೇ ಅಪೇಕ್ಷೆಯಿದೆ. ನಾವು ಯೆಹೋವನ ನಿರ್ದೇಶನವನ್ನು ಸ್ವೀಕರಿಸಲು ತಡಮಾಡಬಾರದು ಮತ್ತು ಆರಾಧನೆಯಲ್ಲಿ ಧರ್ಮಭ್ರಷ್ಟತೆ ಹಾಗೂ ಅಪನಂಬಿಗಸ್ತಿಕೆ ನುಸುಳಿದರೆ ಏನಾಗಬಲ್ಲದು ಎಂಬುದರ ಕುರಿತು ಗಂಭೀರವಾಗಿ ಯೋಚಿಸಬೇಕು. ಯೋಷೀಯನ ವಿಷಯದಲ್ಲಾದಂತೆ, ಸತ್ಯಾರಾಧನೆಗಾಗಿ ನಮಗಿರುವ ಅಭಿಮಾನವನ್ನು ಯೆಹೋವನು ಮೆಚ್ಚುವನು ಎಂಬ ಭರವಸೆ ನಮಗಿರಬಲ್ಲದು.

21, 22. (ಎ) ಯೆಹೋವನ ಆಲಯಕ್ಕಾಗಿ ನಾವೇಕೆ ಅಭಿಮಾನ ತೋರಿಸಬೇಕು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಿರುವೆವು?

21 ಯೆಹೂದದ ನಾಲ್ವರು ಅರಸರಾದ ಆಸ, ಯೆಹೋಷಾಫಾಟ, ಹಿಜ್ಕೀಯ ಮತ್ತು ಯೋಷೀಯ ಎಂಬವರು ದೇವರ ಆಲಯ ಮತ್ತು ಆರಾಧನೆಗಾಗಿ ಅಭಿಮಾನ ತೋರಿಸುವುದರಲ್ಲಿ ಉತ್ತಮ ಮಾದರಿಯನ್ನಿಟ್ಟಿದ್ದಾರೆ. ನಮ್ಮ ಅಭಿಮಾನವು, ಅವರಂತೆಯೇ ಯೆಹೋವನಲ್ಲಿ ಭರವಸವಿಡುವಂತೆ ಮತ್ತು ಆತನ ಆರಾಧನೆಗೋಸ್ಕರ ಕಷ್ಟಪಟ್ಟು ಕೆಲಸಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು. ದೇವರು ಕೊಡುವ ಸಲಹೆಸೂಚನೆಗಳನ್ನು ಪಾಲಿಸುವುದು ಮತ್ತು ಸಭೆ ಹಾಗೂ ಹಿರಿಯರ ಮೂಲಕ ಸಿಗುವ ಪ್ರೀತಿಪೂರ್ವಕ ಆರೈಕೆ, ತಿದ್ದುಪಾಟುಗಳಿಗೆ ಪ್ರತಿಕ್ರಿಯಿಸುವುದು ನಿಜಕ್ಕೂ ವಿವೇಕಯುತ ಕ್ರಮವೂ ಸಂತೋಷದ ಮಾರ್ಗವೂ ಆಗಿದೆ.

22 ಮುಂದಿನ ಲೇಖನವು ಕ್ಷೇತ್ರ ಶುಶ್ರೂಷೆಗಾಗಿ ಅಭಿಮಾನವುಳ್ಳವರಾಗಿರುವುದು ಅಥವಾ ಹುರುಪುಳ್ಳವರಾಗಿರುವುದು ಹೇಗೆಂಬುದರ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದು ಮತ್ತು ನಮ್ಮ ಪ್ರೀತಿಪೂರ್ವಕ ತಂದೆಯ ಸೇವೆಯನ್ನು ಹುರುಪಿನಿಂದ ಮಾಡುವಂತೆ ಯುವ ಜನರಿಗೆ ಪ್ರೇರಣೆ ನೀಡುವುದು. ಅಲ್ಲದೇ, ಸೈತಾನನ ಅತೀ ಭ್ರಷ್ಟ ಪ್ರಭಾವಗಳಲ್ಲೊಂದನ್ನು ತಡೆಯುವುದು ಹೇಗೆಂಬುದನ್ನು ಅದರಲ್ಲಿ ಪರಿಗಣಿಸಲಿರುವೆವು. ಯೆಹೋವನಿಂದ ಸಿಗುವ ಈ ಎಲ್ಲಾ ಮರುಜ್ಞಾಪನಗಳನ್ನು ಹುರುಪಿನಿಂದ ಪಾಲಿಸುವಾಗ ನಾವಾತನ ಮಗನಾದ ಯೇಸುವಿನ ಮಾದರಿಯನ್ನು ಅನುಕರಿಸುತ್ತಿರುವೆವು. ಅವನ ಕುರಿತು ಹೀಗೆ ಹೇಳಲಾಗಿದೆ: “ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ.”—ಕೀರ್ತ. 69:9; 119:111, 129; 1 ಪೇತ್ರ 2:21.

ನೀವು ಜ್ಞಾಪಿಸಿಕೊಳ್ಳಬಲ್ಲಿರೋ?

• ಯಾವ ರೀತಿಯ ಸೇವೆಯನ್ನು ಯೆಹೋವನು ಆಶೀರ್ವದಿಸುತ್ತಾನೆ, ಮತ್ತು ಏಕೆ?

• ಯೆಹೋವನಲ್ಲಿನ ಭರವಸೆಯನ್ನು ನಾವು ಹೇಗೆ ತೋರಿಸಬಲ್ಲೆವು?

• ದೇವರ ಸಲಹೆಸೂಚನೆಗಳಿಗೆ ವಿಧೇಯರಾಗುವಂತೆ ಅಭಿಮಾನ ಹೇಗೆ ಪ್ರಚೋದಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರಗಳು]

ಆಸ, ಯೆಹೋಷಾಫಾಟ, ಹಿಜ್ಕೀಯ ಮತ್ತು ಯೋಷೀಯರು ಯೆಹೋವನ ಆಲಯಕ್ಕಾಗಿ ತಮ್ಮ ಅಭಿಮಾನವನ್ನು ಹೇಗೆ ತೋರಿಸಿದರು?