ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ’

‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ’

‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ’

“ಕ್ರಿಸ್ತನು ನಮ್ಮನ್ನು ಎಲ್ಲ ರೀತಿಯ ಅಧರ್ಮದಿಂದ ಬಿಡಿಸುವುದಕ್ಕೂ ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾದ ತನ್ನ ಸ್ವಂತ ವಿಶಿಷ್ಟ ಜನರನ್ನು ತನಗಾಗಿ ಶುದ್ಧೀಕರಿಸುವುದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.” —ತೀತ 2:14.

1. ಸಾ.ಶ. 33ರ ನೈಸಾನ್‌ 10ರಂದು ಯೇಸು ದೇವಾಲಯಕ್ಕೆ ಬಂದಾಗ ಏನು ಸಂಭವಿಸುತ್ತದೆ?

ನೈಸಾನ್‌ 10, ಸಾ.ಶ. 33. ಪಸ್ಕಹಬ್ಬಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಯೆರೂಸಲೇಮಿನ ಆಲಯದ ವಠಾರದಲ್ಲಿ ಗುಂಪುಗುಂಪಾಗಿ ಕೂಡಿ ಬಂದಿರುವ ಆರಾಧಕರು ಸಂಭ್ರಮದಿಂದಿದ್ದಾರೆ. ಯೇಸು ಅಲ್ಲಿಗೆ ಬಂದಾಗ ಏನಾಗುತ್ತದೆ? ಸುವಾರ್ತಾ ಲೇಖಕರಲ್ಲಿ ಮೂವರು ಅಂದರೆ ಮತ್ತಾಯ, ಮಾರ್ಕ ಮತ್ತು ಲೂಕರು ಹೇಳುವಂತೆ, ದೇವಾಲಯದಲ್ಲಿರುವ ವ್ಯಾಪಾರಿಗಳನ್ನೂ ಖರೀದಿಮಾಡುವವರನ್ನೂ ಯೇಸು ಎರಡನೆಯ ಬಾರಿ ಹೊರದಬ್ಬುತ್ತಾನೆ. ಚಿನಿವಾರರ ಮೇಜುಗಳನ್ನೂ ಪಾರಿವಾಳ ಮಾರುವವರ ಕಾಲ್ಮಣೆಗಳನ್ನೂ ಅವನು ಕೆಡವುತ್ತಾನೆ. (ಮತ್ತಾ. 21:12; ಮಾರ್ಕ 11:15; ಲೂಕ 19:45) ಮೂರು ವರ್ಷಗಳಿಗೆ ಮುಂಚೆ ಯೇಸು ತದ್ರೀತಿಯ ಕೆಲಸವನ್ನು ಮಾಡಿದ್ದನು. ಆಲಯದ ಕಡೆಗೆ ಆಗ ಅವನಿಗಿದ್ದ ಅಭಿಮಾನ ಈಗಲೂ ಕಡಿಮೆಯಾಗಿರಲಿಲ್ಲ.—ಯೋಹಾ. 2:13-17.

2, 3. ಕೇವಲ ಆಲಯವನ್ನು ಶುದ್ಧಗೊಳಿಸುವ ಮೂಲಕ ಯೇಸು ತನ್ನ ಹುರುಪನ್ನು ತೋರಿಸಲಿಲ್ಲವೆಂದು ನಮಗೆ ಹೇಗೆ ಗೊತ್ತು?

2 ಮತ್ತಾಯನ ವೃತ್ತಾಂತಕ್ಕನುಸಾರ, ಈ ಸಂದರ್ಭದಲ್ಲಿ ಕೇವಲ ಆಲಯವನ್ನು ಶುದ್ಧಗೊಳಿಸುವ ಮೂಲಕ ಯೇಸು ತನ್ನ ಅಭಿಮಾನ ಅಥವಾ ಹುರುಪನ್ನು ತೋರಿಸಲಿಲ್ಲ. ಅವನು ತನ್ನ ಬಳಿ ಬರುತ್ತಿದ್ದ ಕುರುಡರನ್ನೂ ಕುಂಟರನ್ನೂ ವಾಸಿಮಾಡುವ ಕೆಲಸವನ್ನು ಸಹ ಮಾಡಿದನು. (ಮತ್ತಾ. 21:14) ಯೇಸು ಇತರ ಕೆಲಸಗಳನ್ನೂ ಮಾಡಿದನೆಂಬುದನ್ನು ಸೂಚಿಸುತ್ತಾ ಲೂಕನ ವೃತ್ತಾಂತ ತಿಳಿಸುವುದು: “[ಯೇಸು] ಪ್ರತಿದಿನ ದೇವಾಲಯದಲ್ಲಿ ಬೋಧಿಸುತ್ತಿದ್ದನು.” (ಲೂಕ 19:47; 20:1) ಹೀಗೆ ಯೇಸುವಿನ ಹುರುಪು ಅವನ ಸಾರ್ವಜನಿಕ ಶುಶ್ರೂಷೆಯಲ್ಲಿ ಸ್ಪಷ್ಟವಾಗಿ ತೋರಿಬರುತ್ತಿತ್ತು.

3 ಸಮಯಾನಂತರ ಅಪೊಸ್ತಲ ಪೌಲನು ತೀತನಿಗೆ ಪತ್ರ ಬರೆದಾಗ ವಿವರಿಸಿದ್ದು: “ಕ್ರಿಸ್ತನು ನಮ್ಮನ್ನು ಎಲ್ಲ ರೀತಿಯ ಅಧರ್ಮದಿಂದ ಬಿಡಿಸುವುದಕ್ಕೂ ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾದ ತನ್ನ ಸ್ವಂತ ವಿಶಿಷ್ಟ ಜನರನ್ನು ತನಗಾಗಿ ಶುದ್ಧೀಕರಿಸುವುದಕ್ಕೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.” (ತೀತ 2:14) ಇಂದು ನಾವು ಯಾವ ವಿಧಗಳಲ್ಲಿ ‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಬಹುದು’? ಮತ್ತು ಯೆಹೂದದ ಒಳ್ಳೇ ರಾಜರುಗಳ ಮಾದರಿಗಳು ಈ ದಿಸೆಯಲ್ಲಿ ನಮ್ಮನ್ನು ಹೇಗೆ ಹುರಿದುಂಬಿಸಬಲ್ಲವು?

ಸಾರುವುದರಲ್ಲಿ ಮತ್ತು ಬೋಧಿಸುವುದರಲ್ಲಿ ಹುರುಪು

4, 5. ಯೆಹೂದದ ನಾಲ್ವರು ಅರಸರು ತಾವು ಸತ್ಕ್ರಿಯೆಗಳಲ್ಲಿ ಹುರುಪುಳ್ಳವರು ಎಂಬುದನ್ನು ಹೇಗೆ ತೋರಿಸಿದರು?

4 ಆಸ, ಯೆಹೋಷಾಫಾಟ, ಹಿಜ್ಕೀಯ ಮತ್ತು ಯೋಷೀಯ ಇವರೆಲ್ಲರೂ ಯೆಹೂದದಿಂದ ವಿಗ್ರಹಾರಾಧನೆಯನ್ನು ಕಿತ್ತೆಸೆಯಲು ಕಾರ್ಯಾಚರಣೆಗಳನ್ನು ನಡೆಸಿದರು. ಆಸನು ‘ಅನ್ಯದೇವತೆಗಳ ಯಜ್ಞವೇದಿಗಳನ್ನೂ ಪೂಜಾಸ್ಥಳಗಳನ್ನೂ ತೆಗೆದುಹಾಕಿ ಕಲ್ಲುಕಂಬಗಳನ್ನು ಒಡಿಸಿ ಅಶೇರವಿಗ್ರಹಸ್ತಂಭಗಳನ್ನು ಕಡಿಸಿಬಿಟ್ಟನು.’ (2 ಪೂರ್ವ. 14:3) ಯೆಹೋವನ ಆರಾಧನೆಗಾಗಿ ಯೆಹೋಷಾಫಾಟನಿಗಿದ್ದ ಹುರುಪು, ‘ಯೆಹೂದದೇಶದಲ್ಲಿದ್ದ ಪೂಜಾಸ್ಥಳಗಳನ್ನೂ ಅಶೇರವಿಗ್ರಹಸ್ತಂಭಗಳನ್ನೂ ತೆಗೆದುಹಾಕಲು’ ಅವನಿಗೆ ಧೈರ್ಯ ಕೊಟ್ಟಿತು.—2 ಪೂರ್ವ. 17:6; 19:3. *

5 ಹಿಜ್ಕೀಯನು ಏರ್ಪಡಿಸಿದ ವಿಧಿವತ್ತಾದ ಏಳು ದಿನಗಳ ಪಸ್ಕಹಬ್ಬವನ್ನಾಚರಿಸಿದ ಬಳಿಕ, “ನೆರೆದುಬಂದ ಇಸ್ರಾಯೇಲ್ಯರೆಲ್ಲರೂ ಯೆಹೂದದೇಶದ ಪಟ್ಟಣಗಳಿಗೆ ಹೋಗಿ ಕಲ್ಲು ಕಂಬಗಳನ್ನು ಒಡೆದು ಅಶೇರವಿಗ್ರಹಸ್ತಂಭಗಳನ್ನು ಕಡಿದುಹಾಕಿ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿಬಿಟ್ಟರು. ಯೆಹೂದ ಬೆನ್ಯಾಮೀನ್‌ ಪ್ರಾಂತಗಳಲ್ಲಲ್ಲದೆ ಎಫ್ರಾಯೀಮ್‌ಮನಸ್ಸೆ ಪ್ರಾಂತಗಳಲ್ಲಿಯೂ ಯಾವದೊಂದನ್ನೂ ಉಳಿಸಲಿಲ್ಲ.” (2 ಪೂರ್ವ. 31:1) ಯೋಷೀಯನು ಎಳೆಯವನಾಗಿದ್ದಾಗ, ಅಂದರೆ ಕೇವಲ ಎಂಟರ ಪ್ರಾಯದಲ್ಲೇ ರಾಜನಾದನು. ಐತಿಹಾಸಿಕ ದಾಖಲೆ ತಿಳಿಸುವುದು: “ಅವನು ತನ್ನ ಆಳಿಕೆಯ ಎಂಟನೆಯ ವರುಷದಲ್ಲಿ ಇನ್ನೂ ಯೌವನಸ್ಥನಾಗಿರುವಾಗಲೇ ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು; ಹನ್ನೆರಡನೆಯ ವರುಷ ಯೆಹೂದದಲ್ಲಿಯೂ ಯೆರೂಸಲೇಮಿನಲ್ಲಿಯೂ ಇದ್ದ ಪೂಜಾಸ್ಥಳಗಳನ್ನೂ ಅಶೇರಸ್ತಂಭಗಳನ್ನೂ ಕೆತ್ತಿದ ಮತ್ತು ಎರಕದ ವಿಗ್ರಹಗಳನ್ನೂ ತೆಗೆದುಹಾಕಿ ದೇಶವನ್ನು ಶುದ್ಧಿಪಡಿಸಿದನು.” (2 ಪೂರ್ವ. 34:3) ಹೀಗೆ ಈ ನಾಲ್ಕೂ ಮಂದಿ ಅರಸರು ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿದ್ದರು.

6. ನಮ್ಮ ಶುಶ್ರೂಷೆಯನ್ನು ಯೆಹೂದದ ನಂಬಿಗಸ್ತ ಅರಸರು ನಡೆಸಿದ ಕಾರ್ಯಾಚರಣೆಗಳಿಗೆ ಹೋಲಿಸಬಹುದು ಏಕೆ?

6 ಇಂದು ನಾವು ಕೂಡ, ವಿಗ್ರಹಾರಾಧನೆಯ ಸಮೇತ ಎಲ್ಲ ಸುಳ್ಳು ಧಾರ್ಮಿಕ ಬೋಧನೆಗಳನ್ನು ಬಿಟ್ಟುಬಿಡುವಂತೆ ಜನರಿಗೆ ಸಹಾಯ ಮಾಡಲಿಕ್ಕಾಗಿ ತದ್ರೀತಿಯ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತೇವೆ. ನಮ್ಮ ಮನೆಮನೆಯ ಶುಶ್ರೂಷೆಯಲ್ಲಿ ನಾವು ಎಲ್ಲ ರೀತಿಯ ಜನರನ್ನು ಭೇಟಿಯಾಗುತ್ತೇವೆ. (1 ತಿಮೊ. 2:4) ಏಷ್ಯಾದ ಒಬ್ಬಾಕೆ ಯುವತಿ, ಮನೆಯಲ್ಲಿ ತನ್ನ ತಾಯಿ ಅನೇಕ ವಿಗ್ರಹಗಳನ್ನಿಟ್ಟು ಪೂಜೆ ಮಾಡುತ್ತಿದ್ದದ್ದನ್ನು ನೆನಪಿಸಿಕೊಳ್ಳುತ್ತಾಳೆ. ಎಲ್ಲ ವಿಗ್ರಹಗಳು ಸತ್ಯ ದೇವರಾಗಿರಲು ಸಾಧ್ಯವಿಲ್ಲ ಎಂಬುದನ್ನು ತನ್ನಲ್ಲೇ ವಿಚಾರಮಾಡಿದ ಆಕೆ ಸತ್ಯ ದೇವರು ಯಾರೆಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಅನೇಕ ಸಲ ಪ್ರಾರ್ಥಿಸಿದ್ದಳು. ಒಮ್ಮೆ ಇಬ್ಬರು ಸಹೋದರಿಯರು ಆಕೆಯ ಮನೆಬಾಗಿಲಿಗೆ ಬಂದರು. ಅವರು ಆಕೆಗೆ ಸತ್ಯ ದೇವರ ಅದ್ವಿತೀಯ ಹೆಸರು ಯೆಹೋವ ಎಂಬುದನ್ನು ಕಲಿಸಿದರು. ಅಷ್ಟುಮಾತ್ರವಲ್ಲದೇ, ವಿಗ್ರಹಗಳ ಕುರಿತ ಸತ್ಯವನ್ನು ಅವರಿಂದ ತಿಳಿದುಕೊಂಡಾಗ ಆಕೆಗೆಷ್ಟು ಹಿತವೆನಿಸಿತು! ಈಗ ಆಕೆ ಇತರರಿಗೆ ಆಧ್ಯಾತ್ಮಿಕವಾಗಿ ಸಹಾಯ ಮಾಡಲು ಶ್ರದ್ಧೆಯಿಂದ ಶುಶ್ರೂಷೆಯಲ್ಲಿ ಭಾಗವಹಿಸುತ್ತಾ ತೋರಿಸುತ್ತಿರುವ ಹುರುಪು ಶ್ಲಾಘನೀಯ.—ಕೀರ್ತ. 83:18; 115:4-8; 1 ಯೋಹಾ. 5:21.

7. ಯೆಹೋಷಾಫಾಟನ ದಿನಗಳಲ್ಲಿ ದೇಶದಾದ್ಯಂತ ಸಂಚರಿಸಿದ ಬೋಧಕರನ್ನು ನಾವು ಹೇಗೆ ಅನುಕರಿಸಬಹುದು?

7 ಮನೆಮನೆಯ ಶುಶ್ರೂಷೆಯಲ್ಲಿ ಭಾಗವಹಿಸುವಾಗ ನಮಗೆ ನೇಮಕವಾದ ಟೆರಿಟೊರಿಯನ್ನು ನಾವು ಎಷ್ಟು ಪೂರ್ಣವಾಗಿ ಆವರಿಸುತ್ತೇವೆ? ಯೆಹೋಷಾಫಾಟನು ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೋವನ ನಿಯಮಗಳನ್ನು ಜನರಿಗೆ ಬೋಧಿಸುವಂತೆ ಐದು ಸರದಾರರನ್ನು, ಒಂಭತ್ತು ಮಂದಿ ಲೇವಿಯರನ್ನು ಮತ್ತು ಇಬ್ಬರು ಯಾಜಕರನ್ನು ದೇಶದಲ್ಲೆಲ್ಲ ಕಳುಹಿಸಿದನು. ಅವರ ಕಾರ್ಯಾಚರಣೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಸುತ್ತಲಿನ ರಾಜ್ಯಗಳವರು ಕೂಡ ಯೆಹೋವನಿಗೆ ಭಯಪಡಲಾರಂಭಿಸಿದರು. (2 ಪೂರ್ವಕಾಲವೃತ್ತಾಂತ 17:9, 10 ಓದಿ.) ಅಂತೆಯೇ, ವಾರದ ಬೇರೆ ಬೇರೆ ದಿನಗಳ ಭಿನ್ನ ಭಿನ್ನ ಸಮಯಗಳಲ್ಲಿ ಜನರನ್ನು ಭೇಟಿಮಾಡುವ ಮೂಲಕ ನಾವು ಒಂದೇ ಮನೆಯ ಅನೇಕ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಗಬಹುದು.

8. ನಾವು ನಮ್ಮ ಶುಶ್ರೂಷೆಯನ್ನು ಹೇಗೆ ವಿಸ್ತರಿಸಬಹುದು?

8 ಆಧುನಿಕ ಸಮಯಗಳಲ್ಲೂ ದೇವರ ಸೇವಕರಲ್ಲಿ ಅನೇಕರು, ಹುರುಪಿನ ಸಾಕ್ಷಿಗಳ ಅಗತ್ಯವಿರುವ ಪ್ರದೇಶಗಳಿಗೆ ಇಚ್ಛಾಪೂರ್ವಕವಾಗಿ ಹೋಗಿದ್ದಾರೆ. ನೀವೂ ಹಾಗೆ ಮಾಡಬಹುದೋ? ಬೇರೆ ಪ್ರದೇಶಗಳಿಗೆ ಹೋಗಲು ಅಶಕ್ತರಾಗಿರುವವರು ತಮ್ಮ ಟೆರಿಟೊರಿಯಲ್ಲೇ ಇರುವ ಪರಭಾಷೀಯರಿಗೆ ಸಾಕ್ಷಿ ನೀಡಲು ಪ್ರಯತ್ನಿಸಬಹುದು. ರಾನ್‌ ಎಂಬವರಿಗೆ ತಮ್ಮ ಟೆರಿಟೊರಿಯಲ್ಲಿ ಬೇರೆ ಬೇರೆ ರಾಷ್ಟ್ರಗಳ ಜನರ ಭೇಟಿಯಾಗುವುದರಿಂದ ಅವರು 81ರ ಪ್ರಾಯದಲ್ಲಿ 32 ಭಾಷೆಗಳಲ್ಲಿ ಜನರನ್ನು ವಂದಿಸಲು ಕಲಿತರು! ಅವರು ಇತ್ತೀಚೆಗೆ ಬೀದಿಯಲ್ಲಿ ಒಂದು ಆಫ್ರಿಕನ್‌ ದಂಪತಿಯನ್ನು ಭೇಟಿಯಾದಾಗ ಅವರನ್ನು ಅವರ ಮಾತೃಭಾಷೆಯಾದ ಯೊರಬದಲ್ಲಿ ವಂದಿಸಿದರು. ಆಗ ಅವರು, ನೀವು ಎಂದಾದರೂ ಆಫ್ರಿಕಕ್ಕೆ ಹೋಗಿದ್ದಿರೋ ಎಂದು ರಾನ್‌ರಿಗೆ ಕೇಳಿದರು. ಅವರು ಇಲ್ಲ ಎಂದುತ್ತರಿಸಿದಾಗ, ಹಾಗಿರುವಲ್ಲಿ ಆ ಭಾಷೆ ಹೇಗೆ ಬರುತ್ತದೆಂದು ಕೇಳಿದರು. ಇದು ಒಳ್ಳೇ ಸಾಕ್ಷಿ ಕೊಡಲು ದಾರಿ ತೆರೆಯಿತು. ಅವರು ಕೆಲವೊಂದು ಪತ್ರಿಕೆಗಳನ್ನು ಸ್ವೀಕರಿಸಿದರು ಮತ್ತು ಸಂತೋಷದಿಂದ ತಮ್ಮ ವಿಳಾಸವನ್ನೂ ಕೊಟ್ಟರು. ಅವರಿಗೆ ಬೈಬಲ್‌ ಅಧ್ಯಯನದ ಏರ್ಪಾಡು ಮಾಡುವಂತೆ ರಾನ್‌ ಆ ವಿಳಾಸವನ್ನು ಸ್ಥಳಿಕ ಸಭೆಗೆ ಕಳುಹಿಸಿದರು.

9. ಶುಶ್ರೂಷೆಯಲ್ಲಿ ಬೈಬಲ್‌ನಿಂದ ನೇರವಾಗಿ ಓದುವುದು ಪ್ರಾಮುಖ್ಯವೇಕೆ? ಉದಾಹರಣೆ ಕೊಡಿ.

9 ಯೆಹೋಷಾಫಾಟನ ಆಜ್ಞೆಯ ಮೇರೆಗೆ ದೇಶದಲ್ಲೆಲ್ಲ ಸಂಚರಿಸಿದ ಬೋಧಕರ ಬಳಿ “ಯೆಹೋವಧರ್ಮಶಾಸ್ತ್ರ” ಇತ್ತು. ನಾವು ಲೋಕದಾದ್ಯಂತ ಬೈಬಲ್‌ನಿಂದ ಜನರಿಗೆ ಬೋಧಿಸುತ್ತೇವೆ ಏಕೆಂದರೆ ಅದು ದೇವರ ವಾಕ್ಯವಾಗಿದೆ. ಇತರರು ಅದರಲ್ಲಿರುವ ಪದಗಳನ್ನು ನೋಡಸಾಧ್ಯವಾಗುವಂತೆ ಸಾಧ್ಯವಾದಲ್ಲೆಲ್ಲ ನೇರವಾಗಿ ಬೈಬಲಿನಿಂದಲೇ ಓದುವ ಮೂಲಕ ನಮ್ಮ ಶುಶ್ರೂಷೆಯಲ್ಲಿ ಬೈಬಲ್‌ನ ಮಹತ್ತ್ವವನ್ನು ತೋರಿಸುತ್ತೇವೆ. ಲಿಂಡ ಎಂಬ ಹೆಸರಿನ ಸಾಕ್ಷಿಗೆ ಮನೆಯವಳೊಬ್ಬಳು, ತನ್ನ ಗಂಡನಿಗೆ ಲಕ್ವಹೊಡೆದಿರುವುದರಿಂದ ಅವರ ಆರೈಕೆಮಾಡಲು ತಾನು ಯಾವಾಗಲೂ ಅವರ ಬಳಿ ಇರಬೇಕೆಂದು ವಿವರಿಸಿದಳು. “ಯಾವ ತಪ್ಪಿಗೆ ದೇವರು ನನಗೆ ಈ ಶಿಕ್ಷೆ ಕೊಟ್ಟಿದ್ದಾನೋ?” ಎಂದೂ ಆಕೆ ಗೋಳುಗರೆದಳು. ಲಿಂಡ ಇದಕ್ಕೆ ಪ್ರತಿಕ್ರಿಯಿಸುತ್ತಾ, “ನಾನು ನಿಮಗೆ ಒಂದು ವಿಷಯದ ಬಗ್ಗೆ ಆಶ್ವಾಸನೆ ಕೊಡಬಹುದೋ?” ಎಂದು ಕೇಳಿದಳು. ಅನಂತರ ಲಿಂಡ ಯಾಕೋಬ 1:13ನ್ನು ಓದಿ ಹೀಗೆ ಹೇಳಿದಳು: “ನಾವಾಗಲಿ ನಮ್ಮ ಪ್ರಿಯ ಜನರಾಗಲಿ ಅನುಭವಿಸುವ ಕಷ್ಟಗಳು ಖಂಡಿತ ದೇವರು ಕೊಡುವ ಶಿಕ್ಷೆ ಅಲ್ಲ.” ಇದನ್ನು ಕೇಳಿ ಆ ಮನೆಯಾಕೆ ಲಿಂಡಳನ್ನು ತಬ್ಬಿಕೊಂಡು ಕೃತಜ್ಞತೆ ಸೂಚಿಸಿದಳು. ಲಿಂಡ ಹೇಳುವುದು: “ಬೈಬಲನ್ನು ಉಪಯೋಗಿಸಿ ಆಕೆಗೆ ಸಾಂತ್ವನ ಕೊಡಲು ಶಕ್ತಳಾದೆ. ಕೆಲವೊಮ್ಮೆ ನಾವು ಬೈಬಲಿನಿಂದ ಓದುವ ವಚನಗಳನ್ನು ಮನೆಯವರು ಹಿಂದೆಂದೂ ಕೇಳಿಸಿಕೊಂಡಿರಲಿಕ್ಕಿಲ್ಲ.” ಅವರ ಈ ಸಂಭಾಷಣೆ ಮನೆಯಾಕೆಯೊಂದಿಗೆ ಕ್ರಮವಾದ ಮನೆ ಬೈಬಲ್‌ ಅಧ್ಯಯನಕ್ಕೆ ನಡೆಸಿತು.

ಹುರುಪಿನಿಂದ ಸೇವೆ ಸಲ್ಲಿಸುವ ಯುವಜನರು

10. ಇಂದಿನ ಕ್ರೈಸ್ತ ಯುವ ಜನರಿಗೆ ಯೋಷೀಯನು ಹೇಗೆ ಒಳ್ಳೇ ಮಾದರಿಯಾಗಿದ್ದಾನೆ?

10 ನಾವು ಯೋಷೀಯನ ಮಾದರಿಯನ್ನು ಪುನಃ ನೆನಪಿಸಿಕೊಳ್ಳೋಣ. ಅವನು ಯುವಕನಾಗಿದ್ದಾಗಲೇ ಸತ್ಯಾರಾಧನೆಯಲ್ಲಿ ತೊಡಗಿದ್ದನು ಮತ್ತು ಸುಮಾರು 20ರ ಪ್ರಾಯದಲ್ಲೇ ವಿಗ್ರಹಾರಾಧನೆಯ ವಿರುದ್ಧ ವಿಸ್ತೃತ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡನು. (2 ಪೂರ್ವಕಾಲವೃತ್ತಾಂತ 34:1-3 ಓದಿ.) ಇಂದು ಸಹ ಬಹುಸಂಖ್ಯೆಯ ಯುವ ಜನರು ರಾಜ್ಯದ ಸೇವೆಯಲ್ಲಿ ಇಂಥದ್ದೇ ಹುರುಪನ್ನು ತೋರಿಸುತ್ತಿದ್ದಾರೆ.

11-13. ಯೆಹೋವನ ಸೇವೆಯನ್ನು ಹುರುಪಿನಿಂದ ಮಾಡುತ್ತಿರುವ ಆಧುನಿಕ ದಿನದ ಯುವ ಜನರಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು?

11 ಇಂಗ್ಲೆಂಡಿನ 13ರ ಪ್ರಾಯದ ಹ್ಯಾನಾ ಎಂಬಾಕೆ, ಶಾಲೆಯಲ್ಲಿ ಫ್ರೆಂಚ್‌ ಭಾಷೆಯನ್ನು ಕಲಿಯುತ್ತಿದ್ದಳು. ಆದುದರಿಂದ ಸಮೀಪದ ಪಟ್ಟಣದಲ್ಲಿ ಫ್ರೆಂಚ್‌ ಭಾಷೆಯನ್ನಾಡುವ ಗುಂಪು ಆರಂಭವಾಗಿದೆ ಎಂಬ ಸುದ್ದಿ ಆಕೆಗೆ ಸಿಕ್ಕಿದಾಗ ಅಲ್ಲಿ ಕೂಟಗಳಿಗೆ ಹೋಗಲು ಬಯಸಿದಳು. ಆಕೆಯ ತಂದೆ ಅವಳೊಂದಿಗೆ ಬರಲು ಒಪ್ಪಿಕೊಂಡರು. ಈಗ 18ರ ಪ್ರಾಯದವಳಾಗಿರುವ ಹ್ಯಾನಾ ರೆಗ್ಯುಲರ್‌ ಪಯನೀಯರಳಾಗಿದ್ದು ಫ್ರೆಂಚ್‌ ಭಾಷೆಯಲ್ಲಿ ಹುರುಪಿನಿಂದ ಸಾರುತ್ತಾಳೆ. ನೀವು ಕೂಡ ಪರಭಾಷೆಯೊಂದನ್ನು ಕಲಿತು ಇತರರೂ ಯೆಹೋವನನ್ನು ತಿಳಿದುಕೊಳ್ಳುವಂತೆ ನೆರವಾಗಬಲ್ಲಿರೋ?

12 ರೇಚಲ್‌ ಎಂಬಾಕೆಯು ದೇವರಿಗೆ ಗೌರವತರುವಂಥ ಗುರಿಗಳನ್ನು ಬೆನ್ನಟ್ಟಿರಿ (ಇಂಗ್ಲಿಷ್‌) ಎಂಬ ವಿಡಿಯೋವನ್ನು ಬಹಳ ಆನಂದಿಸಿದಳು. 1995ರಲ್ಲಿ ಆಕೆ ಯೆಹೋವನ ಸೇವೆ ಮಾಡಲಾರಂಭಿಸಿದಾಗ ಆಕೆಗಿದ್ದ ಯೋಚನಾಧಾಟಿಯ ಬಗ್ಗೆ ಆಕೆ ಹೇಳುವುದು: “ಸತ್ಯವನ್ನು ನನ್ನದಾಗಿಸಿಕೊಂಡಿದ್ದೇನೆಂದು ಈ ತನಕ ಅಂದುಕೊಂಡಿದ್ದೆ.” ಆಕೆ ಮುಂದುವರಿಸಿದ್ದು: “ಆದರೆ ಆ ಡ್ರಾಮಾ ನೋಡಿದ ಬಳಿಕ, ಅನೇಕ ವರ್ಷಗಳಿಂದ ನಾನು ಸತ್ಯದಲ್ಲಿದ್ದರೂ ಹೆಚ್ಚೇನನ್ನೂ ಮಾಡುತ್ತಿರಲಿಲ್ಲ ಎನ್ನುವುದು ನನ್ನ ಅರಿವಿಗೆ ಬಂತು. ನಾನು ಸತ್ಯಕ್ಕೋಸ್ಕರ ಹೋರಾಡಬೇಕು ಮತ್ತು ಹೆಚ್ಚು ಶ್ರದ್ಧೆಯಿಂದ ಸೇವೆ ಹಾಗೂ ವೈಯಕ್ತಿಕ ಅಧ್ಯಯನ ಮಾಡುವತ್ತ ಗಮನಹರಿಸಬೇಕೆಂದು ನನಗೆ ಮನದಟ್ಟಾಯಿತು.” ಈಗ ರೇಚಲ್‌ ಹೆಚ್ಚು ಹುರುಪಿನಿಂದ ಯೆಹೋವನ ಸೇವೆಮಾಡುತ್ತಿದ್ದಾಳೆ. ಆಕೆಗೆ ಯಾವ ಫಲಿತಾಂಶ ಸಿಕ್ಕಿದೆ? ಆಕೆ ಹೇಳುವುದು: “ಯೆಹೋವನೊಂದಿಗಿನ ನನ್ನ ಸಂಬಂಧ ಗಾಢವಾಗಿದೆ. ನನ್ನ ಪ್ರಾರ್ಥನೆಗಳು ಹೆಚ್ಚು ಅರ್ಥಭರಿತವಾಗಿವೆ, ನನ್ನ ಅಧ್ಯಯನವು ಹೆಚ್ಚು ಗಹನವಾದದ್ದೂ ತೃಪ್ತಿಕರವಾದದ್ದೂ ಆಗಿದೆ ಮತ್ತು ಬೈಬಲ್‌ ವೃತ್ತಾಂತಗಳು ನನಗೆ ಹೆಚ್ಚು ನೈಜವಾಗಿ ಬಿಟ್ಟಿವೆ. ಆದ್ದರಿಂದ ಶುಶ್ರೂಷೆಯಲ್ಲಿ ಹೆಚ್ಚು ಆನಂದಿಸುತ್ತೇನೆ ಮತ್ತು ಯೆಹೋವನ ಮಾತುಗಳು ಇತರರಿಗೆ ಸಾಂತ್ವನ ಕೊಡುವುದನ್ನು ನೋಡುವಾಗ ಸಂತೃಪ್ತಳಾಗುತ್ತೇನೆ.”

13 ಯುವಕನಾದ ಲೂಕ್‌ ಎಂಬಾತನು ಯುವಜನರು ಪ್ರಶ್ನಿಸುವುದು—ನಾನು ನನ್ನ ಜೀವನವನ್ನು ಹೇಗೆ ಉಪಯೋಗಿಸುವೆ? (ಇಂಗ್ಲಿಷ್‌) ಎಂಬ ವಿಡಿಯೋ ಡ್ರಾಮಾದಿಂದ ಉತ್ತೇಜಿತನಾದನು. ಅದನ್ನು ವೀಕ್ಷಿಸಿದ ಬಳಿಕ ಅವನು ಬರೆದದ್ದು: “ಇದು, ನಾನು ನನ್ನ ಜೀವಿತವನ್ನು ಹೇಗೆ ಉಪಯೋಗಿಸುತ್ತಿದ್ದೇನೆ ಎಂಬುದರ ಕುರಿತು ಯೋಚಿಸುವಂತೆ ಮಾಡಿತು.” ಅವನು ಒಪ್ಪಿಕೊಳ್ಳುವುದು: “ಈ ಹಿಂದೆ, ಮೊದಲು ಉನ್ನತ ಶಿಕ್ಷಣ ಪಡೆದು ಸ್ವಲ್ಪ ಹಣ ಮಾಡಿ ಆಮೇಲೆ ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿತ್ತು. ಅಂಥ ಒತ್ತಡವು ಆಧ್ಯಾತ್ಮಿಕ ಪ್ರಗತಿಗೆ ಪೂರಕವಾಗಿಲ್ಲ ಬದಲಿಗೆ ಮಾರಕವಾಗಿದೆ.” ಯುವ ಸಹೋದರ ಸಹೋದರಿಯರೇ, ಶಾಲೆಯಲ್ಲಿ ನೀವೇನು ಕಲಿಯುತ್ತೀರೋ ಅದನ್ನು ಹ್ಯಾನಾಳಂತೆ ಶುಶ್ರೂಷೆಯನ್ನು ವಿಸ್ತರಿಸಲು ಬಳಸಬಹುದೋ? ರೇಚಲ್‌ಳನ್ನು ಅನುಕರಿಸುತ್ತಾ ದೇವರಿಗೆ ನಿಜವಾಗಿ ಗೌರವತರುವಂಥ ಗುರಿಗಳನ್ನು ಹುರುಪಿನಿಂದ ಬೆನ್ನಟ್ಟಬಹುದೋ? ಲೂಕ್‌ನ ಮಾದರಿಯನ್ನು ಅನುಸರಿಸುತ್ತಾ ಅನೇಕ ಯುವ ಜನರಿಗೆ ಮಾರಕವಾಗಿ ಪರಿಣಮಿಸಿರುವ ಅಪಾಯಗಳಿಂದ ದೂರವಿರಿ.

ಹುರುಪಿನಿಂದ ಎಚ್ಚರಿಕೆಗಳಿಗೆ ಲಕ್ಷ್ಯಕೊಡಿ

14. ಯಾವ ರೀತಿಯ ಆರಾಧನೆಯನ್ನು ಯೆಹೋವನು ಮೆಚ್ಚುತ್ತಾನೆ, ಮತ್ತು ಇಂದು ಹಾಗೆ ಆರಾಧಿಸುವುದು ಸವಾಲಾಗಿದೆಯೇಕೆ?

14 ಯೆಹೋವನ ಜನರು ಸಲ್ಲಿಸುವ ಆರಾಧನೆ ಆತನಿಗೆ ಮೆಚ್ಚಿಕೆಯಾಗಬೇಕಾದರೆ ಅವರು ಶುದ್ಧರಾಗಿರತಕ್ಕದ್ದು. ಯೆಶಾಯನು ಎಚ್ಚರಿಸಿದ್ದು: “ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ, ಅದರ ಮಧ್ಯದೊಳಗಿಂದ ತೆರಳಿರಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!” (ಯೆಶಾ. 52:11) ಯೆಶಾಯನು ಈ ಮಾತುಗಳನ್ನು ಬರೆದ ಹಲವು ವರ್ಷಗಳ ಮುಂಚೆ ಒಳ್ಳೇ ಅರಸನಾದ ಆಸನು ಯೆಹೂದದಲ್ಲಿದ್ದ ಅನೈತಿಕತೆಯನ್ನು ಬೇರುಸಹಿತ ಕಿತ್ತೆಸೆಯಲು ಬಿರುಸಿನ ಕಾರ್ಯಾಚರಣೆ ನಡೆಸಿದನು. (1 ಅರಸುಗಳು 15:11-13 ಓದಿ.) ಶತಮಾನಗಳ ನಂತರ ಅಪೊಸ್ತಲ ಪೌಲನು, ಯೇಸು ತನ್ನ ಹಿಂಬಾಲಕರನ್ನು ಶುದ್ಧೀಕರಿಸಿ ಅವರನ್ನು ‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾದ ತನ್ನ ಸ್ವಂತ ವಿಶಿಷ್ಟ ಜನರಾಗಿ ಮಾಡಲು’ ತನ್ನನ್ನು ನೀಡಿಕೊಂಡನು ಎಂಬುದಾಗಿ ತೀತನಿಗೆ ಹೇಳಿದನು. (ತೀತ 2:14) ಇಂದು ಈ ಅನೈತಿಕ ಲೋಕದಲ್ಲಿ ನೈತಿಕವಾಗಿ ಶುದ್ಧರಾಗಿ ಉಳಿಯುವುದು ವಿಶೇಷವಾಗಿ ಯುವಜನರಿಗೆ ಸವಾಲೇ ಸರಿ. ಉದಾಹರಣೆಗೆ, ದೇವರ ಸೇವಕರೆಲ್ಲರೂ ಅಂದರೆ ಆಬಾಲವೃದ್ಧರೆಲ್ಲರೂ ಜಾಹೀರಾತು ಫಲಕಗಳಲ್ಲಿ, ಟಿ.ವಿ. ಪರದೆಯ ಮೇಲೆ, ಚಲನಚಿತ್ರಗಳಲ್ಲಿ ಮತ್ತು ವಿಶೇಷವಾಗಿ ಇಂಟರ್‌ನೆಟ್‌ನಲ್ಲಿ ಕಂಡುಬರುವ ಅಶ್ಲೀಲ ಚಿತ್ರಣಗಳಿಂದ ತಮ್ಮ ಮನಸ್ಸನ್ನು ಕಲುಷಿತಗೊಳಿಸದಿರಲು ಹೋರಾಡಬೇಕಾಗುತ್ತದೆ.

15. ಕೆಟ್ಟದ್ದನ್ನು ದ್ವೇಷಿಸಲಾರಂಭಿಸಲು ನಮಗೆ ಯಾವುದು ಸಹಾಯ ಮಾಡಬಲ್ಲದು?

15 ದೈವಿಕ ಎಚ್ಚರಿಕೆಗಳಿಗೆ ಲಕ್ಷ್ಯಕೊಡಲು ನಮಗಿರುವ ಹುರುಪು ಕೆಟ್ಟದ್ದನ್ನು ದ್ವೇಷಿಸಲಾರಂಭಿಸುವಂತೆ ಸಹಾಯ ಮಾಡಬಲ್ಲದು. (ಕೀರ್ತ. 97:10; ರೋಮ. 12:9) ಉದಾಹರಣೆಗೆ, ಅಶ್ಲೀಲ ಚಿತ್ರಣಗಳನ್ನು ತೆಗೆದುಕೊಳ್ಳಿ. ಒಬ್ಬ ಕ್ರೈಸ್ತನು ಹೇಳಿದಂತೆ, ಅವುಗಳಿಗೆ “ಶಕ್ತಿಯುತವಾದ ಆಯಸ್ಕಾಂತದಂಥ ಸೆಳೆತವಿದೆ.” ಅದರಿಂದ ತಪ್ಪಿಸಿಕೊಳ್ಳಲು ನಾವದನ್ನು ಹೇಸಬೇಕು. ಆಯಸ್ಕಾಂತಕ್ಕೆ ಅಂಟಿಕೊಂಡಿರುವ ಲೋಹಗಳನ್ನು ಅದರಿಂದ ಬೇರ್ಪಡಿಸಲು ಆ ಆಯಸ್ಕಾಂತದ ಆಕರ್ಷಣಾ ಶಕ್ತಿಗಿಂತ ಹೆಚ್ಚಿನ ಬಲ ಬೇಕಾಗುತ್ತದೆ. ಅದೇ ರೀತಿಯಲ್ಲಿ, ಅಶ್ಲೀಲ ಚಿತ್ರಣಗಳ ಸೆಳೆತದಿಂದ ದೂರವಿರಲು ಕಠಿನ ಶ್ರಮ ಅಗತ್ಯ. ಅಶ್ಲೀಲ ಚಿತ್ರಣಗಳು ನಮಗೆಷ್ಟು ಹಾನಿಮಾಡಬಲ್ಲವು ಎಂಬುದನ್ನು ಅರ್ಥಮಾಡಿಕೊಂಡರೆ ಅವುಗಳ ಕಡೆಗೆ ಹೇವರಿಕೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವುದು. ಒಬ್ಬ ಸಹೋದರನಿಗೆ, ಇಂಟರ್‌ನೆಟ್‌ನಲ್ಲಿ ಅಶ್ಲೀಲ ಚಿತ್ರಣಗಳ ವೆಬ್‌ಸೈಟ್‌ಗಳನ್ನು ತೆರೆದುನೋಡುವ ಅಭ್ಯಾಸವಿತ್ತು. ಅದನ್ನು ಬಿಟ್ಟುಬಿಡಲು ಅವನು ಶಕ್ತಿಮೀರಿ ಪ್ರಯತ್ನಿಸಿದನು. ಅದಕ್ಕಾಗಿ ಅವನು ತನ್ನ ಕಂಪ್ಯೂಟರನ್ನು ಕುಟುಂಬದ ಎಲ್ಲ ಸದಸ್ಯರು ನೋಡಸಾಧ್ಯವಿದ್ದ ಸ್ಥಳದಲ್ಲಿಟ್ಟನು. ಅಲ್ಲದೇ ತನ್ನನ್ನೇ ಶುದ್ಧಗೊಳಿಸಿ ಸತ್ಕ್ರಿಯೆಗಳಿಗಾಗಿ ಹುರುಪುಳ್ಳವನಾಗಿರಬೇಕೆಂಬ ತನ್ನ ದೃಢನಿಶ್ಚಯವನ್ನು ಇನ್ನಷ್ಟು ಬಲಪಡಿಸಿದನು. ಅವನು ಇನ್ನೊಂದು ಕ್ರಮವನ್ನೂ ಕೈಗೊಂಡನು. ತನ್ನ ಕೆಲಸಕ್ಕಾಗಿ ಇಂಟರ್‌ನೆಟ್‌ ಬಳಸಬೇಕಾಗುತ್ತಿದ್ದ ಕಾರಣ ತನ್ನ ಹೆಂಡತಿ ಪಕ್ಕದಲ್ಲಿದ್ದಾಗ ಮಾತ್ರ ಅದನ್ನು ಬಳಸುವ ನಿರ್ಣಯ ಮಾಡಿದನು.

ಒಳ್ಳೆಯ ನಡತೆಯ ಮಹತ್ತ್ವ

16, 17. ನಮ್ಮ ಒಳ್ಳೇ ನಡತೆ ನಮ್ಮನ್ನು ಗಮನಿಸುವವರ ಮೇಲೆ ಯಾವ ಪ್ರಭಾವಬೀರುತ್ತದೆ? ಒಂದು ಉದಾಹರಣೆ ಕೊಡಿ.

16 ಯೆಹೋವನ ಸೇವೆಯಲ್ಲಿರುವ ಯುವಕ ಯುವತಿಯರಿಗೆ ಎಷ್ಟು ಉತ್ತಮ ಮನೋಭಾವವಿದೆ ಮತ್ತು ಅದು ಇತರರ ಮೇಲೆ ಎಷ್ಟೊಂದು ಒಳ್ಳೆಯ ಪ್ರಭಾವಬೀರಿದೆ! (1 ಪೇತ್ರ 2:12 ಓದಿ.) ಲಂಡನ್‌ನ ಬೆತೆಲ್‌ಗೆ ಒಬ್ಬ ವ್ಯಕ್ತಿ ಮುದ್ರಣ ಯಂತ್ರದ ಸರ್ವಿಸಿಂಗ್‌ಗಾಗಿ ಬಂದಿದ್ದನು. ಅವನು ಅಲ್ಲಿ ಕೆಲಸ ಮಾಡಿದ ಒಂದೇ ದಿನದಲ್ಲಿ ಯೆಹೋವನ ಸಾಕ್ಷಿಗಳ ಬಗ್ಗೆ ಅವನಿಗಿದ್ದ ಅಭಿಪ್ರಾಯ ಪೂರ್ತಿ ಬದಲಾಯಿತು. ಸ್ಥಳಿಕ ಸಾಕ್ಷಿಯೊಬ್ಬಳಿಂದ ಬೈಬಲ್‌ ಅಧ್ಯಯನವನ್ನು ಪಡೆದುಕೊಳ್ಳುತ್ತಿದ್ದ ಅವನ ಹೆಂಡತಿ ಈ ಬದಲಾವಣೆಯನ್ನು ಗಮನಿಸಿದಳು. ಈ ಮುಂಚೆ ಸಾಕ್ಷಿಗಳು ತನ್ನ ಮನೆಗೆ ಬರುವುದನ್ನು ಅವನು ಸ್ವಲ್ಪವೂ ಇಷ್ಟಪಡುತ್ತಿರಲಿಲ್ಲ. ಆದರೆ ಬೆತೆಲ್‌ನಲ್ಲಿ ಕೆಲಸಮಾಡಿ ಬಂದ ನಂತರ ಅವನಿಗೆ ಅಲ್ಲಿ ಸಿಕ್ಕಿದ ಉಪಚಾರದ ಕುರಿತು ಹಾಡಿಹೊಗಳಿದನು. ಅಲ್ಲಿ ಯಾರೂ ಕೆಟ್ಟ ಮಾತುಗಳನ್ನಾಡುತ್ತಿರಲಿಲ್ಲ ಎಂಬುದಾಗಿ ಅವನು ಹೇಳಿದನು. ಎಲ್ಲರೂ ತಾಳ್ಮೆಯಿಂದಿದ್ದರು ಮತ್ತು ವಾತಾವರಣ ಶಾಂತವಾಗಿತ್ತು. ವಿಶೇಷವಾಗಿ ಯುವ ಸಹೋದರ ಸಹೋದರಿಯರು, ತಮ್ಮ ಸಮಯ ಮತ್ತು ಶಕ್ತಿಯನ್ನು ಸುವಾರ್ತೆಯನ್ನು ಪ್ರಕಟಪಡಿಸುವುದರಲ್ಲಿ ವಿನಿಯೋಗಿಸುತ್ತಾ ಸಂಬಳವಿಲ್ಲದೇ ಹುರುಪಿನಿಂದ ಕೆಲಸ ಮಾಡುತ್ತಿದ್ದದ್ದನ್ನು ಅವನು ತುಂಬ ಮೆಚ್ಚಿಕೊಂಡನು.

17 ಅದೇ ರೀತಿಯಲ್ಲಿ, ತಮ್ಮ ಕುಟುಂಬಗಳನ್ನು ನೋಡಿಕೊಳ್ಳಲು ಐಹಿಕ ಉದ್ಯೋಗದಲ್ಲಿರುವ ಸಹೋದರ ಸಹೋದರಿಯರು ತಮ್ಮ ಕೆಲಸವನ್ನು ಪೂರ್ಣ ಪ್ರಾಣದಿಂದ ಮಾಡುತ್ತಾರೆ. (ಕೊಲೊ. 3:23, 24) ಅವರ ಈ ಶ್ರದ್ಧಾಪೂರ್ವಕ ಕೆಲಸವನ್ನು ಧಣಿಗಳು ಮಾನ್ಯಮಾಡುತ್ತಾರೆ ಮತ್ತು ಅವರನ್ನೇ ಕೆಲಸಕ್ಕಿಟ್ಟುಕೊಳ್ಳಲು ಬಯಸುತ್ತಾರೆ. ಹೀಗಿರುವುದರಿಂದ ಅವರು ಕೆಲಸ ಕಳೆದುಕೊಳ್ಳುವ ಸಾಧ್ಯತೆಗಳು ಕಡಿಮೆ.

18. ನಾವು ಹೇಗೆ ‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಬಹುದು’?

18 ನಾವು ಯೆಹೋವನಲ್ಲಿ ಭರವಸೆಯಿಡುವುದು, ಆತನ ಸಲಹೆಸೂಚನೆಗಳಿಗೆ ವಿಧೇಯರಾಗುವುದು ಮತ್ತು ನಮ್ಮ ಕೂಟದ ಸ್ಥಳಗಳನ್ನು ಸುಸ್ಥಿತಿಯಲ್ಲಿಡುವುದು—ಇವೆಲ್ಲವೂ ಯೆಹೋವನ ಆಲಯಕ್ಕಾಗಿರುವ ನಮ್ಮ ಅಭಿಮಾನವನ್ನು ತೋರಿಸುವ ಕೆಲವು ವಿಧಗಳಾಗಿವೆ. ಇದಕ್ಕೆ ಕೂಡಿಸುತ್ತಾ, ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಸಾಧ್ಯವಾದಷ್ಟು ಮಟ್ಟಿಗೆ ಪಾಲ್ಗೊಳ್ಳುತ್ತೇವೆ. ನಾವು ಯುವ ಪ್ರಾಯದವರಾಗಿರಲಿ ವೃದ್ಧರಾಗಿರಲಿ ನಮ್ಮ ಆರಾಧನೆಗೆ ಸಂಬಂಧಿಸಿದ ಶುದ್ಧ ಮಟ್ಟಗಳನ್ನು ಹುರುಪಿನಿಂದ ಪಾಲಿಸುವಾಗ ನಮಗೆ ಅನೇಕ ಪ್ರಯೋಜನಗಳು ಲಭಿಸುವವು ಮತ್ತು ನಾವು “ಸತ್ಕ್ರಿಯೆಗಳಲ್ಲಿ ಹುರುಪುಳ್ಳ” ಜನರೆಂದು ಯಾವಾಗಲೂ ಗುರುತಿಸಲ್ಪಡುವೆವು.—ತೀತ 2:14.

[ಪಾದಟಿಪ್ಪಣಿ]

^ ಪ್ಯಾರ. 4 ಆಸನು ಸುಳ್ಳು ದೇವರುಗಳ ಪೂಜಾಸ್ಥಳಗಳನ್ನು ತೆಗೆದುಹಾಕಿರಬಹುದು ಆದರೆ ಯೆಹೋವನ ಆರಾಧನಾ ಸ್ಥಳಗಳಲ್ಲಿದ್ದ ಪೂಜಾಸ್ಥಳಗಳನ್ನು ತೆಗೆದುಹಾಕಿರಲಿಕ್ಕಿಲ್ಲ. ಅಥವಾ ಆಸನ ಆಳ್ವಿಕೆಯ ಕೊನೆಯಲ್ಲಿ ಪೂಜಾಸ್ಥಳಗಳು ಪುನಃ ಕಟ್ಟಲ್ಪಟ್ಟಿರಬಹುದು ಮತ್ತು ಇವುಗಳನ್ನೇ ಅವನ ಮಗನಾದ ಯೆಹೋಷಾಫಾಟನು ತೆಗೆದುಹಾಕಿದನು.—1 ಅರ. 15:14; 2 ಪೂರ್ವ. 15:17.

ಬೈಬಲ್‌ ಮತ್ತು ಆಧುನಿಕ ದಿನದ ಮಾದರಿಗಳಿಂದ ಕೆಳಕಂಡ ವಿಷಯಗಳ ಕುರಿತು ಏನು ಕಲಿತಿರಿ?

• ಸಾರುವುದರಲ್ಲಿ ಮತ್ತು ಬೋಧಿಸುವುದರಲ್ಲಿ ಹುರುಪನ್ನು ತೋರಿಸುವುದು ಹೇಗೆ?

• ಕ್ರೈಸ್ತ ಯುವಜನರು ಹೇಗೆ ‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಬಹುದು’?

• ಮಲಿನ ಅಭ್ಯಾಸಗಳನ್ನು ಹೇಗೆ ಬಿಟ್ಟುಬಿಡಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ಶುಶ್ರೂಷೆಯಲ್ಲಿ ನೀವು ಬೈಬಲನ್ನು ಬಳಸುತ್ತೀರೋ?

[ಪುಟ 15ರಲ್ಲಿರುವ ಚಿತ್ರ]

ಶಾಲೆಯಲ್ಲಿ ಹೊಸ ಭಾಷೆಯೊಂದನ್ನು ಕಲಿಯುವುದು ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಲು ಸಹಾಯ ಮಾಡುವುದು