ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅವನಲ್ಲಿ ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿರುವ ನಿಕ್ಷೇಪಗಳನ್ನು’ ಕಂಡುಕೊಳ್ಳುವುದು

‘ಅವನಲ್ಲಿ ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿರುವ ನಿಕ್ಷೇಪಗಳನ್ನು’ ಕಂಡುಕೊಳ್ಳುವುದು

‘ಅವನಲ್ಲಿ ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿರುವ ನಿಕ್ಷೇಪಗಳನ್ನು’ ಕಂಡುಕೊಳ್ಳುವುದು

“ಅವನಲ್ಲಿ ವಿವೇಕ ಮತ್ತು ಜ್ಞಾನದ ಎಲ್ಲ ನಿಕ್ಷೇಪಗಳು ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿವೆ.” —ಕೊಲೊ. 2:3.

1, 2. (ಎ) 1922ರಲ್ಲಿ ಯಾವ ಹಸ್ತಕೃತಿಗಳನ್ನು ಕಂಡುಹಿಡಿಯಲಾಯಿತು, ಮತ್ತು ಅವು ಈಗ ಎಲ್ಲಿವೆ? (ಬಿ) ದೇವರ ವಾಕ್ಯವು ಎಲ್ಲರಿಗೆ ಯಾವ ಆಮಂತ್ರಣ ಕೊಡುತ್ತದೆ?

ಬಚ್ಚಿಡಲ್ಪಟ್ಟಿರುವ ನಿಕ್ಷೇಪಗಳು ಕಂಡುಹಿಡಿಯಲ್ಪಟ್ಟಾಗಲೆಲ್ಲ ದೊಡ್ಡ ಸುದ್ದಿಯಾಗಿಬಿಡುತ್ತವೆ. ಉದಾಹರಣೆಗೆ, ಕಠಿನ ಪರಿಸ್ಥಿತಿಗಳಲ್ಲಿ ದಶಕಗಳ ವರೆಗೆ ಬೆವರುಸುರಿಸಿ ದುಡಿದ ಬ್ರಿಟಿಷ್‌ ಅಗೆತಶಾಸ್ತ್ರಜ್ಞರಾದ ಹಾವರ್ಡ್‌ ಕಾರ್ಟರ್‌ 1922ರಲ್ಲಿ ಅಸಾಮಾನ್ಯವಾದದ್ದೇನನ್ನೋ ಕಂಡುಹಿಡಿದರು. ಅದು ಫರೋಹ ಟುಟಂಕಮೆನ್‌ನ ವೈಭವಪೂರ್ಣ ಸಮಾಧಿಭವನವಾಗಿತ್ತು. ಅದರಲ್ಲಿ ಹೆಚ್ಚುಕಡಿಮೆ 5,000 ವಸ್ತುಗಳಿದ್ದು, ಯಾವುದಕ್ಕೂ ಹೆಚ್ಚೇನೂ ಹಾನಿಯಾಗಿರಲಿಲ್ಲ.

2 ಕಾರ್ಟರ್‌ನ ಕಂಡುಹಿಡಿತವು ವೈಭವಪೂರ್ಣವಾಗಿದ್ದರೂ, ಅದರಲ್ಲಿ ಹೆಚ್ಚಿನ ಹಸ್ತಕೃತಿಗಳು ಈಗ ವಸ್ತು ಸಂಗ್ರಹಾಲಯಗಳಲ್ಲೋ ವೈಯಕ್ತಿಕ ಸಂಗ್ರಹಗಳಲ್ಲೋ ಇವೆ. ಅವುಗಳಿಗೆ ಐತಿಹಾಸಿಕ ಇಲ್ಲವೇ ಕಲಾತ್ಮಕ ಮೌಲ್ಯವಿರಬಹುದು. ಆದರೆ ನಮ್ಮ ದೈನಂದಿನ ಜೀವನದ ಮೇಲೆ ಅವುಗಳೇನೂ ಪ್ರಭಾವಬೀರವು. ದೇವರ ವಾಕ್ಯವಾದರೋ, ನಮ್ಮ ಮೇಲೆ ನಿಜವಾಗಿಯೂ ಪ್ರಭಾವಬೀರುವ ನಿಕ್ಷೇಪಗಳನ್ನು ಹುಡುಕುವಂತೆ ಆಮಂತ್ರಿಸುತ್ತದೆ. ಈ ಆಮಂತ್ರಣವನ್ನು ಎಲ್ಲರಿಗೂ ಕೊಡಲಾಗಿದೆ. ಇದಕ್ಕೆ ಓಗೊಡುವುದರಿಂದ ಸಿಗುವ ಪ್ರತಿಫಲವು ಯಾವುದೇ ಭೌತಿಕ ನಿಕ್ಷೇಪಕ್ಕಿಂತ ಹೆಚ್ಚು ಬೆಲೆಬಾಳುವಂಥದ್ದು.—ಜ್ಞಾನೋಕ್ತಿ 2:1-6 ಓದಿ.

3. ಯೆಹೋವನು ತನ್ನ ಆರಾಧಕರಿಗೆ ಹುಡುಕುವಂತೆ ಉತ್ತೇಜಿಸುವ ನಿಕ್ಷೇಪಗಳು ಹೇಗೆ ಉಪಯುಕ್ತವಾಗಿವೆ?

3 ಯೆಹೋವನು ತನ್ನ ಆರಾಧಕರಿಗೆ ಹುಡುಕುವಂತೆ ಉತ್ತೇಜಿಸಿರುವ ನಿಕ್ಷೇಪಗಳ ಮೌಲ್ಯವನ್ನು ಪರಿಗಣಿಸಿರಿ. ಅಂಥ ನಿಕ್ಷೇಪಗಳಲ್ಲಿ, “ಯೆಹೋವನ ಭಯ” ಒಂದಾಗಿದೆ. ಇದು ಈ ಕಷ್ಟಕರ ಸಮಯಗಳಲ್ಲಿ ನಮಗೆ ಸಂರಕ್ಷಣೆಯಾಗಿರಬಲ್ಲದು. (ಕೀರ್ತ. 19:9) ಇನ್ನೊಂದು ನಿಕ್ಷೇಪವು “ದೈವಜ್ಞಾನ” ಆಗಿದೆ. ಇದನ್ನು ಪಡೆದುಕೊಳ್ಳುವ ಯಾವುದೇ ವ್ಯಕ್ತಿ, ಮಾನವನಿಗೆ ಸಿಗಸಾಧ್ಯವಿರುವುದರಲ್ಲೇ ಅತಿ ದೊಡ್ಡ ಸನ್ಮಾನಕ್ಕೆ ಪಾತ್ರನಾಗುವನು. ಅದುವೇ, ಸರ್ವೋನ್ನತನೊಂದಿಗಿನ ಅತ್ಯಾಪ್ತ ವೈಯಕ್ತಿಕ ಸಂಬಂಧವಾಗಿದೆ. ಅಲ್ಲದೆ, ದೇವದತ್ತ ವಿವೇಕ, ಜ್ಞಾನ ಹಾಗೂ ವಿವೇಚನಾಶಕ್ತಿಗಳೆಂಬ ನಿಕ್ಷೇಪಗಳು ನಮ್ಮ ಬಳಿಯಿದ್ದರೆ, ದೈನಂದಿನ ಜೀವನದಲ್ಲಿ ಎದುರಾಗುವಂಥ ಸಮಸ್ಯೆಗಳನ್ನೂ ಚಿಂತೆಗಳನ್ನೂ ಯಶಸ್ವಿಯಾಗಿ ನಿಭಾಯಿಸಲು ಶಕ್ತರಾಗುವೆವು. (ಜ್ಞಾನೋ. 9:10, 11) ಇಂಥ ಅನರ್ಘ್ಯ ನಿಕ್ಷೇಪಗಳನ್ನು ಹೇಗೆ ಕಂಡುಕೊಳ್ಳಬಲ್ಲೆವು?

ಆಧ್ಯಾತ್ಮಿಕ ನಿಕ್ಷೇಪಗಳನ್ನು ಕಂಡುಕೊಳ್ಳುವುದು

4. ದೇವರು ವಾಗ್ದಾನಿಸಿರುವ ನಿಕ್ಷೇಪಗಳನ್ನು ನಾವು ಹೇಗೆ ಕಂಡುಕೊಳ್ಳಬಲ್ಲೆವು?

4 ಅಗೆತಶಾಸ್ತ್ರಜ್ಞರು ಮತ್ತು ಇತರ ಅನ್ವೇಷಕರು ನಿಕ್ಷೇಪಗಳನ್ನು ಕಂಡುಕೊಳ್ಳಲಿಕ್ಕಾಗಿ ಎಲ್ಲಾ ಕಡೆ ಹುಡುಕಬೇಕಾಗುತ್ತದೆ. ನಾವಾದರೋ ಹಾಗೆ ಹುಡುಕಬೇಕಾಗಿಲ್ಲ, ಏಕೆಂದರೆ ಆಧ್ಯಾತ್ಮಿಕ ನಿಕ್ಷೇಪಗಳು ಎಲ್ಲಿವೆಯೆಂದು ನಮಗೆ ಗೊತ್ತಿದೆ. ದೇವರ ವಾಕ್ಯವು ಒಂದು ನಿಧಿ ನಕ್ಷೆಯಂತಿದ್ದು, ಆತನು ವಾಗ್ದಾನಿಸಿರುವ ನಿಕ್ಷೇಪಗಳನ್ನು ನಾವು ಕಂಡುಕೊಳ್ಳಬಲ್ಲ ನಿಖರ ಸ್ಥಳವನ್ನು ತೋರಿಸುತ್ತದೆ. ಕ್ರಿಸ್ತನಿಗೆ ಸೂಚಿಸುತ್ತಾ ಅಪೊಸ್ತಲ ಪೌಲನು ಬರೆದದ್ದು: “ಅವನಲ್ಲಿ ವಿವೇಕ ಮತ್ತು ಜ್ಞಾನದ ಎಲ್ಲ ನಿಕ್ಷೇಪಗಳು ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿವೆ.” (ಕೊಲೊ. 2:3) ಈ ಮಾತುಗಳನ್ನು ಓದಿದ ಬಳಿಕ ನಾವು ಹೀಗೆ ಕೇಳಿಕೊಳ್ಳಬಹುದು: ‘ನಾವು ಆ ನಿಕ್ಷೇಪಗಳಿಗಾಗಿ ಏಕೆ ಹುಡುಕಬೇಕು? ಅವು ಕ್ರಿಸ್ತನಲ್ಲಿ ಹೇಗೆ “ಗೋಪ್ಯವಾಗಿಡಲ್ಪಟ್ಟಿವೆ?” ನಾವು ಆ ನಿಕ್ಷೇಪಗಳನ್ನು ಕಂಡುಕೊಳ್ಳುವುದು ಹೇಗೆ?’ ಉತ್ತರಗಳಿಗಾಗಿ ನಾವು ಅಪೊಸ್ತಲ ಪೌಲನ ಮಾತುಗಳನ್ನು ಹೆಚ್ಚು ನಿಕಟವಾಗಿ ಪರಿಶೀಲಿಸೋಣ.

5. ಪೌಲನು ಆಧ್ಯಾತ್ಮಿಕ ನಿಕ್ಷೇಪಗಳ ಕುರಿತು ಬರೆದದ್ದೇಕೆ?

5 ಪೌಲನು ಆ ಮಾತುಗಳನ್ನು ಕೊಲೊಸ್ಸೆಯಲ್ಲಿದ್ದ ಜೊತೆ ಕ್ರೈಸ್ತರಿಗೆ ಬರೆದನು. ‘ಅವರ ಹೃದಯಗಳಿಗೆ ಸಾಂತ್ವನ ದೊರೆತು, ಅವರು ಪ್ರೀತಿಯಲ್ಲಿ ಹೊಂದಿಕೆಯಿಂದ ಕಟ್ಟಲ್ಪಡಬೇಕೆಂಬ’ ಕಾರಣಕ್ಕಾಗಿ ತಾನು ಅವರ ಪರವಾಗಿ ಹೋರಾಡುತ್ತಿದ್ದೇನೆಂದು ಅವನು ಹೇಳಿದನು. (ಕೊಲೊಸ್ಸೆ 2:1, 2 ಓದಿ.) ಅವರ ಬಗ್ಗೆ ಅವನಿಗೆ ಏಕೆ ಅಷ್ಟು ಕಳಕಳಿಯಿತ್ತು? ಆ ಸಹೋದರರಲ್ಲಿ ಕೆಲವರು ನಿರ್ದಿಷ್ಟ ಗ್ರೀಕ್‌ ತತ್ತ್ವಜ್ಞಾನಗಳನ್ನು ಪ್ರವರ್ಧಿಸುತ್ತಿದ್ದರು ಅಥವಾ ಮೋಶೆಯ ಧರ್ಮಶಾಸ್ತ್ರವನ್ನು ಪುನಃ ಪಾಲಿಸಲಾರಂಭಿಸಬೇಕೆಂದು ಹೇಳುತ್ತಿದ್ದರು. ಇದು ಸಭೆಯಲ್ಲಿದ್ದವರ ಮೇಲೆ ಪ್ರಭಾವಬೀರುತ್ತಿರುವುದು ಪೌಲನಿಗೆ ಗೊತ್ತಿತ್ತು. ಅವನು ಆ ಸಹೋದರರಿಗೆ ಈ ಬಲವಾದ ಎಚ್ಚರಿಕೆಯನ್ನು ಕೊಟ್ಟನು: “ಎಚ್ಚರವಾಗಿರಿ! ಕ್ರಿಸ್ತನಿಗೆ ಅನುಸಾರವಾಗಿರದೆ ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿಯೂ ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳಿಗೆ ಅನುಸಾರವಾಗಿಯೂ ಇರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು.”—ಕೊಲೊ. 2:8.

6. ಪೌಲನ ಸಲಹೆಯಲ್ಲಿ ನಾವೇಕೆ ಆಸಕ್ತರಾಗಿರಬೇಕು?

6 ಇಂದು ನಾವು ಸಹ ಸೈತಾನನಿಂದಲೂ ಅವನ ದುಷ್ಟ ವ್ಯವಸ್ಥೆಯಿಂದಲೂ ಅಂಥದ್ದೇ ಪ್ರಭಾವಗಳನ್ನು ಎದುರಿಸುತ್ತೇವೆ. ಐಹಿಕ ಮಾನವತಾವಾದ (ಅಂದರೆ ದೇವರನ್ನು ಕಡೆಗಣಿಸಿ ಮಾನವನೇ ಶ್ರೇಷ್ಠ, ಎಲ್ಲಕ್ಕೂ ಮೂಲ ಎಂಬ ಸಿದ್ಧಾಂತ) ಹಾಗೂ ವಿಕಾಸವಾದದ ಸಮೇತ ಇತರ ಲೌಕಿಕ ತತ್ತ್ವಜ್ಞಾನಗಳು ಜನರ ವಿಚಾರಧಾಟಿ, ನೈತಿಕತೆ, ಗುರಿಗಳು ಮತ್ತು ಜೀವನಶೈಲಿಗಳನ್ನು ರೂಪಿಸುತ್ತಿವೆ. ಇಂದಿನ ಅನೇಕ ಉತ್ಸವಾಚರಣೆಗಳಲ್ಲಿ ಸುಳ್ಳುಧರ್ಮದ ಪಾತ್ರ ಪ್ರಧಾನವಾದದ್ದು. ತಪ್ಪಾದ ಶಾರೀರಿಕ ಅಭಿಲಾಷೆಗಳೆಂಬ ಬೆಂಕಿಗೆ ಮನೋರಂಜನಾ ಜಗತ್ತು ತುಪ್ಪ ಸುರಿಯುತ್ತಿದೆ. ಇಂಟರ್‌ನೆಟ್‌ನಲ್ಲಿರುವ ಹೆಚ್ಚಿನ ವಿಷಯಗಳು ಆಬಾಲವೃದ್ಧರೆನ್ನದೆ ಎಲ್ಲರಿಗೂ ನಿಜವಾದ ಅಪಾಯವಾಗಿರುತ್ತವೆ. ಇವುಗಳಿಗೆ ಹಾಗೂ ಲೋಕದ ಇತರ ಶೈಲಿಗಳಿಗೆ ನಾವು ನಿರಂತರವಾಗಿ ಒಡ್ಡಲ್ಪಡುವಾಗ, ಯೆಹೋವನು ಕೊಡುವ ನಿರ್ದೇಶನದ ಕಡೆಗಿನ ನಮ್ಮ ಭಾವನೆಗಳೂ ಮನೋಭಾವವೂ ಸುಲಭವಾಗಿ ಬದಲಾಗಬಹುದು. ಇದು ವಾಸ್ತವವಾದ ಜೀವನದ ಮೇಲಿನ ನಮ್ಮ ಭದ್ರವಾದ ಹಿಡಿತವನ್ನು ಸಡಿಲಿಸಬಹುದು. (1 ತಿಮೊಥೆಯ 6:17-19 ಓದಿ.) ನಾವು ಸೈತಾನನ ಕುಟಿಲ ತಂತ್ರಗಳಿಗೆ ಬಲಿಬೀಳದೇ ಇರಬೇಕಾದರೆ, ಪೌಲನು ಕೊಲೊಸ್ಸೆಯವರಿಗೆ ಬರೆದ ಮಾತುಗಳ ಅರ್ಥ ಗ್ರಹಿಸಿ, ಅವನ ಸಲಹೆಯನ್ನು ಪಾಲಿಸಬೇಕು.

7. ಕೊಲೊಸ್ಸೆಯವರಿಗೆ ಯಾವ ಎರಡು ಸಂಗತಿಗಳು ಸಹಾಯಮಾಡುವವೆಂದು ಪೌಲನು ಹೇಳಿದನು?

7 ಪೌಲನು ಕೊಲೊಸ್ಸೆಯವರಿಗೆ ಬರೆದ ಮಾತುಗಳನ್ನು ಪುನಃ ನೋಡೋಣ. ಅಲ್ಲಿ ಅವನು ತನ್ನ ಕಳಕಳಿಯನ್ನು ವ್ಯಕ್ತಪಡಿಸಿದ ಬಳಿಕ, ಸಾಂತ್ವನ ಪಡೆಯುವಂತೆ ಮತ್ತು ಪ್ರೀತಿಯಲ್ಲಿ ಐಕ್ಯವಾಗಿರುವಂತೆ ಆ ಸಹೋದರರಿಗೆ ಸಹಾಯಮಾಡುವ ಎರಡು ವಿಷಯಗಳನ್ನು ತಿಳಿಸಿದನು. ಮೊದಲನೆಯದಾಗಿ ಅವನು, “ತಿಳಿವಳಿಕೆಯಿಂದ ಕೂಡಿದ ಪೂರ್ಣ ಭರವಸೆಯ” ಕುರಿತು ಹೇಳುತ್ತಾನೆ. ಅಂದರೆ, ಅವರ ನಂಬಿಕೆ ಒಂದು ದೃಢವಾದ ಅಸ್ತಿವಾರದ ಮೇಲೆ ಆಧರಿತವಾಗಿರಬೇಕಾದರೆ ಶಾಸ್ತ್ರಗಳ ಕುರಿತು ತಮಗಿರುವ ತಿಳುವಳಿಕೆ ಸರಿಯೆಂಬ ಪೂರ್ಣ ಮನವರಿಕೆ ಅವರಿಗಾಗಬೇಕಿತ್ತು. (ಇಬ್ರಿ. 11:1) ಎರಡನೆಯದಾಗಿ, ‘ದೇವರ ಪವಿತ್ರ ರಹಸ್ಯದ ಕುರಿತ ನಿಷ್ಕೃಷ್ಟ ಜ್ಞಾನದ’ ಕುರಿತು ಅವನು ತಿಳಿಸುತ್ತಾನೆ. ಅವರು ಸತ್ಯದ ಪ್ರಾಥಮಿಕ ಜ್ಞಾನವನ್ನು ಹೊಂದಿರುವುದು ಮಾತ್ರ ಸಾಲುತ್ತಿರಲಿಲ್ಲ. ದೇವರ ಅಗಾಧವಾದ ವಿಷಯಗಳ ಬಗ್ಗೆ ಹೆಚ್ಚು ಸ್ಪಷ್ಟವಾದ ತಿಳುವಳಿಕೆಯನ್ನೂ ಅವರು ಹೊಂದಿರಬೇಕಿತ್ತು. (ಇಬ್ರಿ. 5:13, 14) ಇದು ಕೊಲೊಸ್ಸೆಯವರಿಗೆ ಮಾತ್ರವಲ್ಲ ಇಂದು ನಮಗೂ ಸ್ವಸ್ಥಕರವಾದ ಸಲಹೆಯಾಗಿದೆ. ಆದರೆ ನಾವು ಆ ಭರವಸೆ ಹಾಗೂ ನಿಷ್ಕೃಷ್ಟ ಜ್ಞಾನವನ್ನು ಹೇಗೆ ಪಡೆಯಬಹುದು? ಇದರ ಕೀಲಿಕೈ, ಯೇಸು ಕ್ರಿಸ್ತನ ಕುರಿತು ಪೌಲನು ಮಾಡಿದ ಈ ಗಹನವಾದ ಹೇಳಿಕೆಯಲ್ಲಿದೆ: “ಅವನಲ್ಲಿ ವಿವೇಕ ಮತ್ತು ಜ್ಞಾನದ ಎಲ್ಲ ನಿಕ್ಷೇಪಗಳು ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿವೆ.”

ಕ್ರಿಸ್ತನಲ್ಲಿ ‘ಗೋಪ್ಯವಾಗಿಡಲ್ಪಟ್ಟಿರುವ’ ನಿಕ್ಷೇಪಗಳು

8. ಕ್ರಿಸ್ತನಲ್ಲಿ “ಗೋಪ್ಯವಾಗಿಡಲ್ಪಟ್ಟಿವೆ” ಎಂಬುದರ ಅರ್ಥವನ್ನು ವಿವರಿಸಿ.

8 ವಿವೇಕ ಹಾಗೂ ಜ್ಞಾನದ ಎಲ್ಲ ನಿಕ್ಷೇಪಗಳು ಕ್ರಿಸ್ತನಲ್ಲಿ “ಗೋಪ್ಯವಾಗಿಡಲ್ಪಟ್ಟಿವೆ” ಎಂಬುದರ ಅರ್ಥ, ಯಾರ ಕೈಗೂ ಸಿಗದಂತೆ ಅವುಗಳನ್ನು ಅಡಗಿಸಿಡಲಾಗಿದೆ ಎಂದಲ್ಲ. ಬದಲಾಗಿ, ಆ ನಿಕ್ಷೇಪಗಳನ್ನು ಕಂಡುಹಿಡಿಯಲಿಕ್ಕಾಗಿ ನಾವು ಕಠಿನ ಶ್ರಮಪಡಬೇಕು ಮತ್ತು ನಮ್ಮ ಗಮನ ಯೇಸು ಕ್ರಿಸ್ತನ ಕಡೆಗೆ ನಿರ್ದೇಶಿಸಲ್ಪಡಬೇಕು ಎಂಬುದೇ ಇದರರ್ಥ. ಇದು ಯೇಸು ತನ್ನ ಕುರಿತು ಹೇಳಿದ ಈ ಮಾತುಗಳಿಗೆ ಹೊಂದಿಕೆಯಲ್ಲಿದೆ: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ.” (ಯೋಹಾ. 14:6) ಹೌದು, ದೇವಜ್ಞಾನವನ್ನು ಕಂಡುಕೊಳ್ಳಲಿಕ್ಕಾಗಿ ನಾವು ಯೇಸು ಒದಗಿಸುವ ಸಹಾಯ ಹಾಗೂ ನಿರ್ದೇಶನವನ್ನು ಸ್ವೀಕರಿಸಲೇಬೇಕು.

9. ಯೇಸುವಿಗೆ ಯಾವ ಪಾತ್ರಗಳನ್ನು ನೇಮಿಸಲಾಗಿದೆ?

9 ಯೇಸು ತಾನು, “ಮಾರ್ಗ” ಮಾತ್ರವಲ್ಲ “ಸತ್ಯವೂ ಜೀವವೂ” ಆಗಿದ್ದೇನೆಂದು ಹೇಳಿದನು. ಇದು ಅವನಿಗೆ, ತಂದೆಯನ್ನು ಸಮೀಪಿಸುವ ಮಾಧ್ಯಮ ಎಂಬ ಪಾತ್ರ ಮಾತ್ರವಲ್ಲ ಹೆಚ್ಚಿನ ಪಾತ್ರಗಳೂ ಇವೆಯೆಂಬುದನ್ನು ಸೂಚಿಸುತ್ತದೆ. ಯೇಸುವಿನ ಈ ಪಾತ್ರಗಳು, ನಾವು ಬೈಬಲ್‌ ಸತ್ಯವನ್ನು ಅರ್ಥಮಾಡಿಕೊಳ್ಳಲು ಹಾಗೂ ನಿತ್ಯಜೀವವನ್ನು ಗಳಿಸಲು ಅತ್ಯಾವಶ್ಯಕ. ನಿಜವಾಗಿಯೂ, ಬೆಲೆಕಟ್ಟಲಾಗದ ಆಧ್ಯಾತ್ಮಿಕ ರತ್ನಗಳು ಯೇಸುವಿನಲ್ಲಿ ಗೋಪ್ಯವಾಗಿಡಲ್ಪಟ್ಟಿವೆ. ಶ್ರದ್ಧಾಪೂರ್ವಕ ಬೈಬಲ್‌ ವಿದ್ಯಾರ್ಥಿಗಳು ಅವುಗಳನ್ನು ಕಂಡುಹಿಡಿಯಬಹುದು. ಭವಿಷ್ಯತ್ತಿನ ಪ್ರತೀಕ್ಷೆಗಳ ಮೇಲೂ ದೇವರೊಂದಿಗಿನ ನಮ್ಮ ಸಂಬಂಧದ ಮೇಲೂ ನೇರವಾಗಿ ಪರಿಣಾಮ ಬೀರುವ ಕೆಲವೊಂದು ಆಧ್ಯಾತ್ಮಿಕ ರತ್ನಗಳನ್ನು ನಾವೀಗ ಪರಿಶೀಲಿಸೋಣ.

10. ಕೊಲೊಸ್ಸೆ 1:19 ಮತ್ತು 2:9ರಿಂದ ನಾವು ಯೇಸುವಿನ ಬಗ್ಗೆ ಏನು ಕಲಿಯಬಲ್ಲೆವು?

10“ದೈವಿಕ ಗುಣದ ಸರ್ವಸಂಪೂರ್ಣತೆ ದೈಹಿಕವಾಗಿ ನೆಲೆಸಿರುವುದು ಕ್ರಿಸ್ತನಲ್ಲೇ.” (ಕೊಲೊ. 1:19; 2:9) ಯುಗಯುಗಾಂತರಗಳಿಂದ ಯೇಸು ತನ್ನ ಸ್ವರ್ಗೀಯ ತಂದೆಯೊಟ್ಟಿಗೆ ಇದ್ದದ್ದರಿಂದ ದೇವರ ವ್ಯಕ್ತಿತ್ವ ಮತ್ತು ಚಿತ್ತದ ಬಗ್ಗೆ ಬೇರಾರಿಗಿಂತಲೂ ಅವನಿಗೆ ಚೆನ್ನಾಗಿ ತಿಳಿದಿದೆ. ಯೇಸು ತನ್ನ ಭೂಶುಶ್ರೂಷೆಯಾದ್ಯಂತ, ತನ್ನ ತಂದೆ ಕಲಿಸಿದಂಥ ವಿಷಯಗಳನ್ನು ಕಲಿಸಿದನು ಮತ್ತು ತನ್ನ ತಂದೆ ತನ್ನಲ್ಲಿ ಬೆಳೆಸಿದಂಥ ಗುಣಗಳನ್ನು ಕ್ರಿಯೆಗಳಲ್ಲಿ ತೋರಿಸಿದನು. ಆದುದರಿಂದಲೇ ಯೇಸು ಹೀಗಂದನು: “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ.” (ಯೋಹಾ. 14:9) ದೇವರ ವಿವೇಕ ಮತ್ತು ಜ್ಞಾನವು ಕ್ರಿಸ್ತನಲ್ಲಿ ಅಡಗಿದೆ ಇಲ್ಲವೇ ನೆಲೆಸಿದೆ. ಆದುದರಿಂದ ಯೆಹೋವನ ಬಗ್ಗೆ ಕಲಿಯಬೇಕಾದರೆ ಯೇಸುವಿನ ಕುರಿತು ನಾವು ಸಾಧ್ಯವಿರುವುದೆಲ್ಲವನ್ನೂ ಜಾಗರೂಕತೆಯಿಂದ ಕಲಿಯಬೇಕು. ಇದಕ್ಕಿಂತ ಒಳ್ಳೆಯ ವಿಧಾನ ಬೇರೊಂದಿಲ್ಲ.

11. ಯೇಸುವಿಗೂ ಬೈಬಲ್‌ ಪ್ರವಾದನೆಗಳಿಗೂ ಸಂಬಂಧವೇನು?

11“ಯೇಸುವಿನ ವಿಷಯವಾಗಿ ಸಾಕ್ಷಿನೀಡುವುದೇ ಪ್ರವಾದಿಸುವುದನ್ನು ಪ್ರೇರಿಸುತ್ತದೆ.” (ಪ್ರಕ. 19:10) ಈ ಮಾತುಗಳು, ಬೈಬಲ್‌ನಲ್ಲಿರುವ ಅನೇಕ ಪ್ರವಾದನೆಗಳು ಯೇಸುವಿನಲ್ಲೇ ನೆರವೇರುತ್ತವೆಂದು ಸೂಚಿಸುತ್ತವೆ. ಆದಿಕಾಂಡ 3:15ರಲ್ಲಿ ದಾಖಲಾಗಿರುವ ಯೆಹೋವನ ಪ್ರಥಮ ಪ್ರವಾದನೆಯಿಂದ ಹಿಡಿದು ಪ್ರಕಟನೆ ಪುಸ್ತಕದಲ್ಲಿರುವ ಮಹಿಮಾಭರಿತ ದರ್ಶನಗಳ ವರೆಗಿನ ಬೈಬಲ್‌ ಪ್ರವಾದನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ, ಮೆಸ್ಸೀಯ ರಾಜ್ಯದ ಸಂಬಂಧದಲ್ಲಿ ಯೇಸುವಿನ ಪಾತ್ರವನ್ನು ಮಾನ್ಯಮಾಡಲೇಬೇಕು. ಅನೇಕರು ಯೇಸುವನ್ನು ವಾಗ್ದತ್ತ ಮೆಸ್ಸೀಯನೆಂದು ಸ್ವೀಕರಿಸದೇ ಇರುವುದರಿಂದ ಹೀಬ್ರು ಶಾಸ್ತ್ರಗ್ರಂಥಗಳಲ್ಲಿರುವ ಹಲವಾರು ಪ್ರವಾದನೆಗಳು ಅವರಿಗೆ ಒಗಟಿನಂತಿವೆ. ಅಲ್ಲದೆ, ಇನ್ನಿತರರು ಮೆಸ್ಸೀಯನ ಕುರಿತ ಪ್ರವಾದನೆಗಳಿಂದ ತುಂಬಿರುವ ಹೀಬ್ರು ಶಾಸ್ತ್ರಗ್ರಂಥಗಳನ್ನು ಮಾನ್ಯಮಾಡದೇ ಇರುವುದರಿಂದ ಯೇಸು ಬರೀ ಮಹಾನ್‌ ಪುರುಷನಷ್ಟೇ ಎಂದು ಅವರಿಗನಿಸುತ್ತದೆ. ದೇವಜನರಿಗಾದರೋ ಯೇಸುವಿನ ಕುರಿತ ಜ್ಞಾನವಿರುವುದರಿಂದ, ಇನ್ನೂ ನೆರವೇರಲಿರುವ ಬೈಬಲ್‌ ಪ್ರವಾದನೆಗಳೂ ಅರ್ಥವಾಗುತ್ತವೆ.—2 ಕೊರಿಂ. 1:20.

12, 13. (ಎ) ಯೇಸು ‘ಲೋಕಕ್ಕೆ ಬೆಳಕಾಗಿರುವುದು’ ಹೇಗೆ? (ಬಿ) ಕ್ರಿಸ್ತನ ಹಿಂಬಾಲಕರಿಗೆ ಧಾರ್ಮಿಕ ಕತ್ತಲೆಯಿಂದ ಬಿಡುಗಡೆ ಆಗಿರುವುದರಿಂದ ಯಾವ ಹಂಗು ಇದೆ?

12“ನಾನು ಲೋಕಕ್ಕೆ ಬೆಳಕಾಗಿದ್ದೇನೆ.” (ಯೋಹಾನ 8:12; 9:5 ಓದಿ.) ಯೇಸು ಭೂಮಿ ಮೇಲೆ ಹುಟ್ಟುವುದಕ್ಕಿಂತ ಎಷ್ಟೋ ಸಮಯದ ಹಿಂದೆ ಪ್ರವಾದಿ ಯೆಶಾಯನು ಮುಂತಿಳಿಸಿದ್ದು: “ಕತ್ತಲಲ್ಲಿ ಸಂಚರಿಸಿದ ಜನರಿಗೆ ದೊಡ್ಡ ಬೆಳಕು ಕಾಣಿಸಿತು; ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಪ್ರಕಾಶವು ಹೊಳೆಯಿತು.” (ಯೆಶಾ. 9:2) ಈ ಪ್ರವಾದನೆಯನ್ನು, “ಜನರೇ ಪಶ್ಚಾತ್ತಾಪಪಡಿರಿ, ಸ್ವರ್ಗದ ರಾಜ್ಯವು ಸಮೀಪಿಸಿದೆ” ಎಂದು ಯೇಸು ಸಾರಲಾರಂಭಿಸಿದಾಗ ನೆರವೇರಿಸಿದನೆಂದು ಅಪೊಸ್ತಲ ಮತ್ತಾಯನು ವಿವರಿಸಿದನು. (ಮತ್ತಾ. 4:16, 17) ಯೇಸುವಿನ ಶುಶ್ರೂಷೆಯಿಂದಾಗಿ ಜನರಿಗೆ ಆಧ್ಯಾತ್ಮಿಕ ಜ್ಞಾನೋದಯವಾಯಿತು ಹಾಗೂ ಧಾರ್ಮಿಕ ಸುಳ್ಳು ಬೋಧನೆಗಳೆಂಬ ಸಂಕೋಲೆಗಳಿಂದ ಬಿಡುಗಡೆಯಾಯಿತು. ಯೇಸು ಹೇಳಿದ್ದು: “ನನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಕತ್ತಲೆಯಲ್ಲೇ ಉಳಿಯಬಾರದೆಂದು ನಾನು ಲೋಕಕ್ಕೆ ಬೆಳಕಾಗಿ ಬಂದಿದ್ದೇನೆ.”—ಯೋಹಾ. 1:3-5; 12:46.

13 ಹಲವಾರು ವರ್ಷಗಳ ನಂತರ ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತರಿಗಂದದ್ದು: “ಹಿಂದೊಮ್ಮೆ ನೀವು ಕತ್ತಲೆಯಾಗಿದ್ದಿರಿ, ಆದರೆ ಈಗ ಕರ್ತನ ಸಂಬಂಧದಲ್ಲಿ ಬೆಳಕಾಗಿದ್ದೀರಿ. ಬೆಳಕಿನ ಮಕ್ಕಳಾಗಿ ನಡೆಯುತ್ತಾ ಇರಿ.” (ಎಫೆ. 5:8) ಕ್ರೈಸ್ತರಿಗೆ, ಆಧ್ಯಾತ್ಮಿಕ ಕತ್ತಲೆಯ ಬಂಧಿವಾಸದಿಂದ ಬಿಡುಗಡೆಯಾಗಿರುವುದರಿಂದ, ಬೆಳಕಿನ ಮಕ್ಕಳಾಗಿ ನಡೆಯುವ ಹಂಗು ಇದೆ. ಇದು, ಯೇಸು ತನ್ನ ಹಿಂಬಾಲಕರಿಗೆ ಪರ್ವತ ಪ್ರಸಂಗದಲ್ಲಿ ಹೇಳಿದ ಈ ಮಾತುಗಳಿಗೆ ಹೊಂದಿಕೆಯಲ್ಲಿದೆ: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.” (ಮತ್ತಾ. 5:16) ಯೇಸುವಿನಲ್ಲಿ ಕಂಡುಕೊಂಡ ಆಧ್ಯಾತ್ಮಿಕ ನಿಕ್ಷೇಪಗಳನ್ನು ನೀವೆಷ್ಟು ಮಾನ್ಯಮಾಡುತ್ತೀರಿ? ಅವುಗಳನ್ನು, ಬಾಯಿಮಾತಿನ ಮೂಲಕ ಮತ್ತು ಉತ್ತಮ ಕ್ರೈಸ್ತ ನಡತೆಯ ಮೂಲಕ ಇತರರಿಗೆ ಶಿಫಾರಸ್ಸು ಮಾಡುತ್ತೀರೋ?

14, 15. (ಎ) ಬೈಬಲ್‌ ಸಮಯಗಳ ಸತ್ಯಾರಾಧನೆಯಲ್ಲಿ ಕುರಿಗಳ ಹಾಗೂ ಇತರ ಪ್ರಾಣಿಗಳ ಪಾತ್ರವೇನಾಗಿತ್ತು? (ಬಿ) “ದೇವರ ಕುರಿಮರಿ” ಎಂಬ ಯೇಸುವಿನ ಪಾತ್ರವು ಸರಿಸಾಟಿಯಿಲ್ಲದ ನಿಕ್ಷೇಪವಾಗಿದೆ ಏಕೆ?

14ಯೇಸು “ದೇವರ ಕುರಿಮರಿ” ಆಗಿದ್ದಾನೆ. (ಯೋಹಾ. 1:29, 36) ಬೈಬಲಿನಾದ್ಯಂತ, ಕುರಿಗಳಿಗಿದ್ದ ಗಮನಾರ್ಹ ಪಾತ್ರವನ್ನು ತೋರಿಸಲಾಗಿದೆ. ಪಾಪ ಕ್ಷಮೆಗಾಗಿ ಹಾಗೂ ದೇವರನ್ನು ಸಮೀಪಿಸಲಿಕ್ಕಾಗಿ ಅವುಗಳನ್ನು ಯಜ್ಞವಾಗಿ ಅರ್ಪಿಸಲಾಗುತ್ತಿತ್ತು. ದೃಷ್ಟಾಂತಕ್ಕೆ, ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಇನ್ನೇನು ಬಲಿಕೊಡಬೇಕೆಂದಿದ್ದಾಗ ಅವನಿಗೇನೂ ಮಾಡದಂತೆ ದೇವರು ಹೇಳಿದನು. ಅವನಿಗೆ ಬದಲಾಗಿ ಒಂದು ಟಗರು ಇಲ್ಲವೇ ಗಂಡುಕುರಿಯನ್ನು ಒದಗಿಸಲಾಯಿತು ಮತ್ತು ಅದನ್ನು ಅರ್ಪಿಸುವಂತೆ ಹೇಳಲಾಯಿತು. (ಆದಿ. 22:12, 13) ಐಗುಪ್ತದಿಂದ ಇಸ್ರಾಯೇಲ್ಯರ ಬಿಡುಗಡೆಯ ಸಮಯದಲ್ಲೂ ಕುರಿಗಳ ಪಾತ್ರ ಮಹತ್ತ್ವದ್ದಾಗಿತ್ತು. ಈ ಬಾರಿ ಅವು, ‘ಯೆಹೋವನಿಗೆ ಆಚರಿಸತಕ್ಕ ಪಸ್ಕಹಬ್ಬದ’ ಭಾಗವಾಗಿದ್ದವು. (ವಿಮೋ. 12:1-13) ಅಷ್ಟುಮಾತ್ರವಲ್ಲ, ಮೋಶೆಯ ಧರ್ಮಶಾಸ್ತ್ರಕ್ಕನುಸಾರವೂ ಕುರಿ ಹಾಗೂ ಆಡುಗಳನ್ನು ಸೇರಿಸಿ ವಿಭಿನ್ನ ಪ್ರಾಣಿಗಳನ್ನು ಯಜ್ಞವಾಗಿ ಅರ್ಪಿಸಲಾಗುತ್ತಿತ್ತು.—ವಿಮೋ. 29:38-42; ಯಾಜ. 5:6, 7.

15 ಆದರೆ ಆ ಯಜ್ಞಗಳಷ್ಟೇ ಅಲ್ಲ, ಮಾನವರು ಅರ್ಪಿಸುವ ಯಾವುದೇ ಯಜ್ಞಗಳೂ ಪಾಪಮರಣದಿಂದ ಶಾಶ್ವತ ಬಿಡುಗಡೆಯನ್ನು ತರಸಾಧ್ಯವಿರಲಿಲ್ಲ. (ಇಬ್ರಿ. 10:1-4) ಯೇಸುವಾದರೋ “ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ” ಆಗಿದ್ದಾನೆ. ಅವನ ಈ ಪಾತ್ರವು, ಯಾವುದೇ ಭೌತಿಕ ನಿಕ್ಷೇಪಕ್ಕಿಂತ ಹೆಚ್ಚು ಮೌಲ್ಯವುಳ್ಳ ನಿಕ್ಷೇಪವಾಗಿದೆ. ಹೀಗಿರುವುದರಿಂದ ನಾವು ವಿಮೋಚನಾ ಮೌಲ್ಯದ ಕುರಿತು ಶ್ರದ್ಧೆಯಿಂದ ಅಧ್ಯಯನಮಾಡಲು ಸಮಯ ತೆಗೆದುಕೊಳ್ಳುವುದು ಮತ್ತು ಆ ಅದ್ಭುತವಾದ ಏರ್ಪಾಡಿನಲ್ಲಿ ನಂಬಿಕೆಯನ್ನಿಡುವುದು ಒಳ್ಳೇದು. ಹೀಗೆ ಮಾಡುವಲ್ಲಿ ಮಹಾ ಆಶೀರ್ವಾದವನ್ನೂ ಬಹುಮಾನವನ್ನೂ ಪಡೆಯುವ ನಿರೀಕ್ಷೆ ನಮಗಿರಬಲ್ಲದು. ಅದು, ‘ಚಿಕ್ಕ ಹಿಂಡಿಗಾಗಿ’ ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಮಾನಮಹಿಮೆ ಮತ್ತು ‘ಬೇರೆ ಕುರಿಗಳಿಗೆ’ ಭೂಪರದೈಸಿನಲ್ಲಿ ನಿತ್ಯಜೀವ ಆಗಿದೆ.—ಲೂಕ 12:32; ಯೋಹಾ. 6:40, 47; 10:16.

16, 17. “ನಂಬಿಕೆಯ ಮುಖ್ಯ ನಿಯೋಗಿಯೂ ಪರಿಪೂರ್ಣಕನೂ” ಆಗಿ ಯೇಸುವಿಗಿರುವ ಪಾತ್ರವನ್ನು ನಾವು ಅರ್ಥಮಾಡಿಕೊಳ್ಳುವುದು ಅತ್ಯಾವಶ್ಯಕವೇಕೆ?

16ಯೇಸು, ‘ನಮ್ಮ ನಂಬಿಕೆಯ ಮುಖ್ಯ ನಿಯೋಗಿಯೂ ಪರಿಪೂರ್ಣಕನೂ ಆಗಿದ್ದಾನೆ.’ (ಇಬ್ರಿಯ 12:1, 2 ಓದಿ.) ಇಬ್ರಿಯ 11ನೇ ಅಧ್ಯಾಯದಲ್ಲಿ ನಂಬಿಕೆಯ ಕುರಿತು ಪೌಲನ ಪ್ರಭಾವಶಾಲಿ ಚರ್ಚೆಯಿದೆ. ಇದರಲ್ಲಿ ನಂಬಿಕೆಯ ಕುರಿತ ಚುಟುಕಾದ ಅರ್ಥನಿರೂಪಣೆ ಮತ್ತು ನಂಬಿಕೆಯಲ್ಲಿ ಆದರ್ಶಪ್ರಾಯರಾಗಿದ್ದ ನೋಹ, ಅಬ್ರಹಾಮ, ಸಾರ ಹಾಗೂ ರಾಹಾಬಳ ಹೆಸರುಗಳುಳ್ಳ ಪಟ್ಟಿಯಿದೆ. ಇವರೆಲ್ಲರ ಬಗ್ಗೆ ಹೇಳಿದರೂ ಪೌಲನು ತನ್ನ ಜೊತೆ ಕ್ರೈಸ್ತರಿಗೆ, ‘ನಮ್ಮ ನಂಬಿಕೆಯ ಮುಖ್ಯ ನಿಯೋಗಿಯೂ ಪರಿಪೂರ್ಣಕನೂ ಆಗಿರುವ ಯೇಸುವಿನ ಮೇಲೆ ದೃಷ್ಟಿನೆಡುವಂತೆ’ ಉತ್ತೇಜಿಸಿದನು. ಅವನು ಯೇಸುವಿನ ಕಡೆಗೆ ಗಮನ ಸೆಳೆದದ್ದೇಕೆ?

17 ಇಬ್ರಿಯ 11ನೇ ಅಧ್ಯಾಯದಲ್ಲಿ ಪಟ್ಟಿಮಾಡಲಾಗಿರುವ ಆ ನಂಬಿಗಸ್ತ ಸ್ತ್ರೀಪುರುಷರಿಗೆ ದೇವರ ವಾಗ್ದಾನದಲ್ಲಿ ಬಲವಾದ ನಂಬಿಕೆಯಿತ್ತಾದರೂ, ದೇವರು ಮೆಸ್ಸೀಯನ ಮತ್ತು ರಾಜ್ಯದ ಮೂಲಕ ತನ್ನ ವಾಗ್ದಾನವನ್ನು ಹೇಗೆ ಪೂರೈಸಲಿದ್ದಾನೆ ಎಂಬುದರ ಕುರಿತ ಎಲ್ಲಾ ವಿವರಗಳು ಅವರಿಗೆ ತಿಳಿದಿರಲಿಲ್ಲ. ಈ ಅರ್ಥದಲ್ಲಿ ಅವರ ನಂಬಿಕೆ ಅಪೂರ್ಣವಾಗಿತ್ತು. ವಾಸ್ತವದಲ್ಲಿ, ಮೆಸ್ಸೀಯನ ಕುರಿತ ಅನೇಕ ಪ್ರವಾದನೆಗಳನ್ನು ಬರೆಯಲು ಯೆಹೋವನು ಯಾರನ್ನು ಬಳಸಿದ್ದನೋ ಅವರಿಗೂ, ತಾವು ಬರೆದ ಸಂಗತಿಗಳ ಪೂರ್ಣ ಅರ್ಥವನ್ನು ಗ್ರಹಿಸಲಾಗಲಿಲ್ಲ. (1 ಪೇತ್ರ 1:10-12) ಯೇಸುವಿನ ಪಾತ್ರವನ್ನು, ವಿಶೇಷವಾಗಿ ಅವನು ಪ್ರವಾದನೆಗಳನ್ನು ಹೇಗೆ ನೆರವೇರಿಸಿದ್ದಾನೆಂಬುದನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವಲ್ಲಿ ಮಾತ್ರ ನಮ್ಮ ನಂಬಿಕೆ ಪರಿಪೂರ್ಣವಾಗುತ್ತದೆ ಇಲ್ಲವೇ ಸಂಪೂರ್ಣವಾಗುತ್ತದೆ. ಹೀಗಿರುವುದರಿಂದ, “ನಂಬಿಕೆಯ ಮುಖ್ಯ ನಿಯೋಗಿಯೂ ಪರಿಪೂರ್ಣಕನೂ” ಆಗಿ ಯೇಸುವಿಗಿರುವ ಪಾತ್ರವನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಅಂಗೀಕರಿಸುವುದು ಎಷ್ಟು ಅತ್ಯಾವಶ್ಯಕ!

ಹುಡುಕುತ್ತಾ ಇರಿ

18, 19. (ಎ) ಯೇಸುವಿನಲ್ಲಿ ಗೋಪ್ಯವಾಗಿಡಲ್ಪಟ್ಟಿರುವ ಇತರ ಆಧ್ಯಾತ್ಮಿಕ ರತ್ನಗಳನ್ನು ಹೆಸರಿಸಿ. (ಬಿ) ನಾವು ಯೇಸುವಿನಲ್ಲಿ ಆಧ್ಯಾತ್ಮಿಕ ನಿಕ್ಷೇಪಗಳನ್ನು ಹುಡುಕುತ್ತಾ ಇರಬೇಕು ಏಕೆ?

18 ಮಾನವಕುಲದ ರಕ್ಷಣೆಗಾಗಿರುವ ದೇವರ ಉದ್ದೇಶದಲ್ಲಿ ಯೇಸುವಿಗಿರುವ ಬಹುಮೂಲ್ಯ ಪಾತ್ರಗಳಲ್ಲಿ ಕೆಲವೊಂದನ್ನು ಮಾತ್ರ ನಾವು ಪರಿಗಣಿಸಿದ್ದೇವೆ. ಕ್ರಿಸ್ತನಲ್ಲಿ ಇನ್ನೂ ಇತರ ಆಧ್ಯಾತ್ಮಿಕ ರತ್ನಗಳು ಗೋಪ್ಯವಾಗಿವೆ. ಅವುಗಳನ್ನು ಕಂಡುಕೊಳ್ಳುವುದರಿಂದ ನಮಗೆ ಹರ್ಷವೂ ಪ್ರಯೋಜನಗಳೂ ಸಿಗುವವು. ಉದಾಹರಣೆಗಾಗಿ, ಅಪೊಸ್ತಲ ಪೇತ್ರನು ಯೇಸುವನ್ನು “ಜೀವದ ಮುಖ್ಯ ನಿಯೋಗಿ” ಮತ್ತು “ಉದಯ ನಕ್ಷತ್ರ” ಎಂದು ಕರೆಯುತ್ತಾನೆ. (ಅ. ಕಾ. 3:15; 5:31; 2 ಪೇತ್ರ 1:19) ಬೈಬಲ್‌ನಲ್ಲಿ ಯೇಸುವಿಗೆ “ಆಮೆನ್‌” ಎಂಬ ಬಿರುದನ್ನೂ ಕೊಡಲಾಗಿದೆ. (ಪ್ರಕ. 3:14) ಈ ಪಾತ್ರಗಳ ಅರ್ಥ ಹಾಗೂ ಮಹತ್ತ್ವವೇನೆಂದು ನಿಮಗೆ ಗೊತ್ತೋ? ಯೇಸು ಹೇಳಿದಂತೆ, “ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ.”—ಮತ್ತಾ. 7:7.

19 ಇತಿಹಾಸದಲ್ಲಿ ಬೇರಾವ ವ್ಯಕ್ತಿಯ ಜೀವನಕ್ಕೂ, ಯೇಸುವಿನ ಜೀವನದಷ್ಟು ಅರ್ಥಪೂರ್ಣತೆಯೂ ಇಲ್ಲ ನಮ್ಮ ನಿತ್ಯ ಕ್ಷೇಮದೊಂದಿಗೆ ನಿಕಟ ಸಂಬಂಧವೂ ಇಲ್ಲ. ಯೇಸುವಿನಲ್ಲಿರುವ ಆಧ್ಯಾತ್ಮಿಕ ನಿಕ್ಷೇಪಗಳು, ಅದನ್ನು ಮನಃಪೂರ್ವಕವಾಗಿ ಹುಡುಕುವ ಯಾವುದೇ ವ್ಯಕ್ತಿಗೆ ಸುಲಭವಾಗಿ ಸಿಗುತ್ತವೆ. ಆದುದರಿಂದ, ‘ಅವನಲ್ಲಿ ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿರುವ’ ಆ ನಿಕ್ಷೇಪಗಳನ್ನು ಕಂಡುಕೊಳ್ಳುವ ಆನಂದವೂ ಆಶೀರ್ವಾದವೂ ನಿಮ್ಮದಾಗಲಿ.

ನಿಮಗೆ ಜ್ಞಾಪಕವಿದೆಯೋ?

• ಯಾವ ನಿಕ್ಷೇಪಗಳನ್ನು ಹುಡುಕುವಂತೆ ಕ್ರೈಸ್ತರನ್ನು ಉತ್ತೇಜಿಸಲಾಗಿದೆ?

• ಪೌಲನು ಕೊಲೊಸ್ಸೆಯವರಿಗೆ ಕೊಟ್ಟ ಸಲಹೆ ಇಂದು ನಮಗೂ ಸೂಕ್ತವಾಗಿದೆ ಏಕೆ?

• ಕ್ರಿಸ್ತನಲ್ಲಿ ‘ಗೋಪ್ಯವಾಗಿಡಲ್ಪಟ್ಟಿರುವ’ ಆಧ್ಯಾತ್ಮಿಕ ನಿಕ್ಷೇಪಗಳಲ್ಲಿ ಕೆಲವೊಂದನ್ನು ವಿವರಿಸಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 5ರಲ್ಲಿರುವ ಚಿತ್ರಗಳು]

ಬೈಬಲ್‌ ಒಂದು ನಿಧಿ ನಕ್ಷೆಯಂತೆ, ಕ್ರಿಸ್ತನಲ್ಲಿ ‘ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿರುವ’ ನಿಕ್ಷೇಪಗಳ ಕಡೆಗೆ ನಮ್ಮನ್ನು ಮಾರ್ಗದರ್ಶಿಸುತ್ತದೆ