ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಕುಟುಂಬಗಳೇ—ಯೇಸುವಿನ ಮಾದರಿಯನ್ನು ಅನುಸರಿಸಿ!

ಕ್ರೈಸ್ತ ಕುಟುಂಬಗಳೇ—ಯೇಸುವಿನ ಮಾದರಿಯನ್ನು ಅನುಸರಿಸಿ!

ಕ್ರೈಸ್ತ ಕುಟುಂಬಗಳೇ—ಯೇಸುವಿನ ಮಾದರಿಯನ್ನು ಅನುಸರಿಸಿ!

“ಕ್ರಿಸ್ತನು . . . ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು.”—1 ಪೇತ್ರ 2:21.

1. (ಎ) ದೇವರ ಮಗನಿಗೆ ಸೃಷ್ಟಿಕಾರ್ಯದಲ್ಲಿ ಯಾವ ಪಾತ್ರವಿತ್ತು? (ಬಿ) ಯೇಸುವಿಗೆ ಮಾನವರ ಬಗ್ಗೆ ಹೇಗನಿಸುತ್ತದೆ?

ದೇವರು ಭೂಮ್ಯಾಕಾಶಗಳನ್ನು ನಿರ್ಮಿಸುತ್ತಿದ್ದಾಗ ಆತನ ಜ್ಯೇಷ್ಠಪುತ್ರನು ಆತನ ಹತ್ತಿರ ‘ಶಿಲ್ಪಿಯಾಗಿದ್ದನು.’ ಯೆಹೋವನು ಭೂಮಿಯ ಮೇಲೆ ವೈವಿಧ್ಯಮಯ ಪ್ರಾಣಿಗಳನ್ನು ಹಾಗೂ ಸಸ್ಯಗಳನ್ನು ವಿನ್ಯಾಸಿಸಿ ಸೃಷ್ಟಿಸಿದಾಗ ಮತ್ತು ಮಾನವರಿಗೆ ಬೀಡಾಗಲಿದ್ದ ಪರದೈಸನ್ನು ಸಿದ್ಧಗೊಳಿಸುತ್ತಿದ್ದಾಗಲೂ ದೇವರ ಈ ಮಗನು ತಂದೆಯೊಂದಿಗೆ ಸಹಕರಿಸಿದನು. ಕಾಲಾನಂತರ ಯೇಸುವೆಂದು ಪ್ರಸಿದ್ಧನಾದ ಈತನಿಗೆ ಮಾನವರ ಮೇಲೆ ತುಂಬ ಪ್ರೀತಿಯಿತ್ತು. ‘ಆತನು ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದನು.’—ಜ್ಞಾನೋ. 8:27-31; ಆದಿ. 1:26, 27.

2. (ಎ) ಯೆಹೋವನು ಅಪರಿಪೂರ್ಣ ಮಾನವಕುಲಕ್ಕಾಗಿ ಯಾವ ಏರ್ಪಾಡು ಮಾಡಿದ್ದಾನೆ? (ಬಿ) ಜೀವನದ ಯಾವ ಕ್ಷೇತ್ರದ ಬಗ್ಗೆಯೂ ಬೈಬಲ್‌ ನಿರ್ದೇಶನ ಕೊಡುತ್ತದೆ?

2 ಪ್ರಥಮ ಮಾನವ ದಂಪತಿ ಪಾಪಗೈದ ಬಳಿಕ, ಪಾಪಪೂರ್ಣ ಮಾನವಕುಲದ ವಿಮೋಚನೆಯು ಯೆಹೋವನ ಉದ್ದೇಶದ ಪ್ರಮುಖ ಭಾಗವಾಯಿತು. ಅದಕ್ಕೆಂದೇ ಆತನು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞವನ್ನು ಏರ್ಪಡಿಸಿದನು. (ರೋಮ. 5:8) ಅಲ್ಲದೆ ಯೆಹೋವನು ತನ್ನ ವಾಕ್ಯವಾದ ಬೈಬಲನ್ನು ಕೊಟ್ಟನು. ಇದು, ಬಾಧ್ಯತೆಯಾಗಿ ಬಂದಿರುವ ಅಪರಿಪೂರ್ಣತೆಯ ಮಧ್ಯೆಯೂ ಮಾನವರು ಜೀವನದಲ್ಲಿ ಸಫಲರಾಗುವುದು ಹೇಗೆಂಬುದರ ಬಗ್ಗೆ ಮಾರ್ಗದರ್ಶನ ಕೊಡುತ್ತದೆ. (ಕೀರ್ತ. 119:105) ಜನರು ತಮ್ಮ ಕುಟುಂಬಗಳನ್ನು ಬಲವಾಗಿರಿಸಲು ಮತ್ತು ಸುಖಿಯಾಗಿರಿಸಲು ಸಹಾಯಮಾಡುವ ನಿರ್ದೇಶನವನ್ನು ಯೆಹೋವನು ತನ್ನ ವಾಕ್ಯದಲ್ಲಿ ಕೊಡುತ್ತಾನೆ. ಆದಿಕಾಂಡ ಪುಸ್ತಕವು ವಿವಾಹದ ಬಗ್ಗೆ ಹೇಳುವುದು: ‘ಪುರುಷನು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗುವರು.’—ಆದಿ. 2:24.

3. (ಎ) ಯೇಸು ವಿವಾಹದ ಕುರಿತು ಏನು ಕಲಿಸಿದನು? (ಬಿ) ಈ ಲೇಖನದಲ್ಲಿ ನಾವೇನು ಪರಿಗಣಿಸಲಿದ್ದೇವೆ?

3 ವಿವಾಹವು ಒಂದು ಶಾಶ್ವತ ಬಂಧವಾಗಿರಲಿಕ್ಕಾಗಿ ಉದ್ದೇಶಿಸಲಾಗಿತ್ತೆಂಬ ಮಾತನ್ನು ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಒತ್ತಿಹೇಳಿದನು. ಅವನು ಕಲಿಸಿದಂಥ ಮೂಲತತ್ತ್ವಗಳನ್ನು ಅನ್ವಯಿಸುವುದರ ಮೂಲಕ ಕುಟುಂಬ ಸದಸ್ಯರು ವಿವಾಹಬಂಧಕ್ಕಾಗಲಿ, ಕುಟುಂಬದ ಸಂತೋಷಕ್ಕಾಗಲಿ ಕಂಟಕವಾಗಿರುವ ಮನೋಭಾವಗಳನ್ನೂ ನಡತೆಯನ್ನೂ ದೂರವಿಡಸಾಧ್ಯವಿದೆ. (ಮತ್ತಾ. 5:27-37; 7:12) ಗಂಡಂದಿರು, ಹೆಂಡತಿಯರು, ಹೆತ್ತವರು ಮತ್ತು ಮಕ್ಕಳು ಸಂತೋಷಭರಿತ, ತೃಪ್ತಿದಾಯಕ ಜೀವನವನ್ನು ನಡೆಸುವಂತೆ ಯೇಸುವಿನ ಬೋಧನೆಗಳು ಮತ್ತು ಭೂಮಿಯಲ್ಲಿದ್ದಾಗ ಅವನಿಟ್ಟ ಮಾದರಿ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ಈ ಲೇಖನ ಚರ್ಚಿಸುವುದು.

ಕ್ರೈಸ್ತ ಗಂಡನು ತನ್ನ ಹೆಂಡತಿಯನ್ನು ಗೌರವಿಸುವ ವಿಧ

4. ಯೇಸುವಿನ ಹಾಗೂ ಕ್ರೈಸ್ತ ಗಂಡಂದಿರ ಪಾತ್ರದಲ್ಲಿ ಯಾವ ಸಮಾನತೆಯಿದೆ?

4 ದೇವರು ಯೇಸುವನ್ನು ಸಭೆಯ ಶಿರಸ್ಸಾಗಿ ನೇಮಿಸಿರುವಂತೆಯೇ ಗಂಡನನ್ನು ಕುಟುಂಬದ ಶಿರಸ್ಸಾಗಿ ನೇಮಿಸಿದ್ದಾನೆ. ಅಪೊಸ್ತಲ ಪೌಲನು ತಿಳಿಸಿದ್ದು: “ಕ್ರಿಸ್ತನು ಸಭೆಯೆಂಬ ದೇಹದ ರಕ್ಷಕನಾಗಿದ್ದು ಅದರ ಶಿರಸ್ಸಾಗಿರುವಂತೆಯೇ ಗಂಡನು ತನ್ನ ಹೆಂಡತಿಗೆ ಶಿರಸ್ಸಾಗಿದ್ದಾನೆ. ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ.” (ಎಫೆ. 5:23, 25) ಹೌದು, ಯೇಸು ತನ್ನ ಹಿಂಬಾಲಕರನ್ನು ಉಪಚರಿಸಿದ ರೀತಿ, ಕ್ರೈಸ್ತ ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ಉಪಚರಿಸಬೇಕು ಎಂಬುದಕ್ಕೆ ಮಾದರಿಯಾಗಿದೆ. ಯೇಸು ತನ್ನ ದೇವದತ್ತ ಅಧಿಕಾರವನ್ನು ಬಳಸಿದ ವಿಧಗಳಲ್ಲಿ ಕೆಲವೊಂದನ್ನು ಪರಿಗಣಿಸೋಣ.

5. ಯೇಸು ಶಿಷ್ಯರ ಮೇಲೆ ತನ್ನ ಅಧಿಕಾರ ಬಳಸಿದ್ದು ಹೇಗೆ?

5 ಯೇಸು “ಸೌಮ್ಯಭಾವದವನೂ ದೀನಹೃದಯದವನೂ” ಆಗಿದ್ದನು. (ಮತ್ತಾ. 11:29) ಅವನು ಅಗತ್ಯಬಿದ್ದಾಗ ನಿರ್ಣಾಯಕ ಕ್ರಮ ಕೈಗೊಳ್ಳುವ ವ್ಯಕ್ತಿಯೂ ಆಗಿದ್ದನು. ಅವನೆಂದೂ ತನ್ನ ಜವಾಬ್ದಾರಿಗಳಿಂದ ಜಾರಿಕೊಳ್ಳುತ್ತಿರಲಿಲ್ಲ. (ಮಾರ್ಕ 6:34; ಯೋಹಾ. 2:14-17) ಅವನು ತನ್ನ ಶಿಷ್ಯರಿಗೆ ದಯೆಯಿಂದ ಸಲಹೆಕೊಡುತ್ತಿದ್ದನು ಮತ್ತು ಅವಶ್ಯಬಿದ್ದಲ್ಲಿ ಅದನ್ನು ಮತ್ತೆ ಮತ್ತೆ ಕೊಡುತ್ತಿದ್ದನು. (ಮತ್ತಾ. 20:21-28; ಮಾರ್ಕ 9:33-37; ಲೂಕ 22:24-27) ಹಾಗಿದ್ದರೂ ಯೇಸು ಅವರನ್ನೆಂದೂ ಬಯ್ಯಲಿಲ್ಲ ಇಲ್ಲವೇ ಅವಮಾನಿಸಲಿಲ್ಲ. ಅವರು ಪ್ರೀತಿಸಲ್ಪಡಲು ಯೋಗ್ಯರಲ್ಲ ಇಲ್ಲವೇ ತಾನು ಕಲಿಸಿಕೊಡುತ್ತಿದ್ದ ಸಂಗತಿಗಳನ್ನು ಪಾಲಿಸಲು ಸಮರ್ಥರಲ್ಲ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಲಿಲ್ಲ. ಬದಲಾಗಿ ತನ್ನ ಶಿಷ್ಯರನ್ನು ಪ್ರಶಂಸಿಸಿದನು ಮತ್ತು ಉತ್ತೇಜಿಸಿದನು. (ಲೂಕ 10:17-21) ಯೇಸು ತನ್ನ ಶಿಷ್ಯರ ಗೌರವಕ್ಕೆ ಪಾತ್ರನಾದದ್ದು ಅವರನ್ನು ಪ್ರೀತಿ ಹಾಗೂ ಕರುಣೆಯಿಂದ ಉಪಚರಿಸಿದ್ದರಿಂದಲೇ.

6. (ಎ) ಯೇಸು ತನ್ನ ಶಿಷ್ಯರನ್ನು ಉಪಚರಿಸಿದ ವಿಧದಿಂದ ಗಂಡನೊಬ್ಬನು ಏನು ಕಲಿಯಬಹುದು? (ಬಿ) ಪೇತ್ರನು ಗಂಡಂದಿರಿಗೆ ಯಾವ ಉತ್ತೇಜನ ಕೊಡುತ್ತಾನೆ?

6 ಕ್ರಿಸ್ತನ ಶಿರಸ್ಸುತನವನ್ನು ಅನುಕರಿಸ ಬಯಸುವ ಗಂಡಂದಿರು ತಮ್ಮ ಹೆಂಡತಿಯರ ಮೇಲೆ ದರ್ಪದಿಂದ ಅಧಿಕಾರ ಚಲಾಯಿಸದೇ ಯೇಸುವಿನ ಮಾದರಿ ಕಲಿಸುವಂತೆ ಅವರನ್ನು ಗೌರವ ಹಾಗೂ ಸ್ವತ್ಯಾಗದ ಪ್ರೀತಿಯಿಂದ ಉಪಚರಿಸಬೇಕು. ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ‘ಅದೇ ರೀತಿಯಲ್ಲಿ ಬಾಳುವೆ ಮಾಡಿ ಗೌರವ ಸಲ್ಲಿಸುವ’ ಮೂಲಕ ಯೇಸುವಿನ ಪ್ರೀತಿಪರ ಮಾರ್ಗಗಳನ್ನು ಅನುಕರಿಸುವಂತೆ ಅಪೊಸ್ತಲ ಪೇತ್ರನು ಉತ್ತೇಜಿಸಿದನು. (1 ಪೇತ್ರ 3:7 ಓದಿ.) ಹಾಗಾದರೆ ಗಂಡನೊಬ್ಬನು ತನ್ನ ಅಧಿಕಾರವನ್ನು ಬಳಸುವಾಗ ಹೆಂಡತಿಯನ್ನು ಹೇಗೆ ಗೌರವದಿಂದ ಉಪಚರಿಸಸಾಧ್ಯ?

7. ಗಂಡನೊಬ್ಬನು ತನ್ನ ಹೆಂಡತಿಯನ್ನು ಹೇಗೆ ಗೌರವಿಸಬಹುದು? ದೃಷ್ಟಾಂತಿಸಿ.

7 ಗಂಡನೊಬ್ಬನು ತನ್ನ ಹೆಂಡತಿಯನ್ನು ಗೌರವಿಸುವ ಒಂದು ವಿಧ, ಕುಟುಂಬಕ್ಕೆ ಸಂಬಂಧಪಟ್ಟ ನಿರ್ಣಯಗಳನ್ನು ಮಾಡುವ ಮುಂಚೆ ಆಕೆಯ ಅನಿಸಿಕೆ ಹಾಗೂ ಭಾವನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಾಗಿದೆ. ಉದಾಹರಣೆಗೆ, ಮನೆಯನ್ನೋ ಕೆಲಸವನ್ನೋ ಬದಲಾಯಿಸುವುದರ ಬಗ್ಗೆ, ರಜೆಗಾಗಿ ಎಲ್ಲಿ ಹೋಗಬೇಕೆಂಬುದರ ಬಗ್ಗೆ ಇಲ್ಲವೇ ನಿತ್ಯಬಳಕೆಯ ವಸ್ತುಗಳ ಬೆಲೆಯೇರಿಕೆಯನ್ನು ನಿಭಾಯಿಸಲಿಕ್ಕಾಗಿ ಕುಟುಂಬದ ಬಜೆಟ್‌ ಅನ್ನು ಹೊಂದಿಸಿಕೊಳ್ಳುವುದು ಹೇಗೆಂಬುದರ ಕುರಿತು ಒಂದು ನಿರ್ಣಯ ಮಾಡಬೇಕಾದೀತು. ಇಂಥ ನಿರ್ಣಯಗಳು ಇಡೀ ಕುಟುಂಬದ ಮೇಲೆ ಪರಿಣಾಮಬೀರಲಿರುವುದರಿಂದ, ಗಂಡನು ಹೆಂಡತಿಯ ಅಭಿಪ್ರಾಯವನ್ನು ಪರಿಗಣಿಸುವುದು ಉಪಯುಕ್ತಕರ ಹಾಗೂ ದಯಾಪರ. ಹೀಗೆ ಮಾಡುವುದರಿಂದ ಅವನು ಹೆಚ್ಚು ಸಮತೂಕದ, ವಿವೇಚನೆಯ ನಿರ್ಣಯ ಮಾಡಲು ಸಾಧ್ಯವಾಗುವುದು. ಹೆಂಡತಿಗೂ ಗಂಡನನ್ನು ಬೆಂಬಲಿಸಲು ಹೆಚ್ಚು ಸುಲಭವಾಗುವುದು. (ಜ್ಞಾನೋ. 15:22) ಹೆಂಡತಿಯರನ್ನು ಗೌರವಿಸುವ ಕ್ರೈಸ್ತ ಗಂಡಂದಿರು, ಅವರ ಪ್ರೀತಿ ಹಾಗೂ ಗೌರವವನ್ನು ಸಂಪಾದಿಸುತ್ತಾರೆ ಮಾತ್ರವಲ್ಲ, ಅದಕ್ಕಿಂತಲೂ ಮಿಗಿಲಾಗಿ ಯೆಹೋವನ ಮೆಚ್ಚುಗೆಯನ್ನು ಗಳಿಸುತ್ತಾರೆ.—ಎಫೆ. 5:28, 29.

ಹೆಂಡತಿ ತನ್ನ ಗಂಡನಿಗೆ ಆಳವಾದ ಗೌರವ ತೋರಿಸುವ ವಿಧ

8. ಹವ್ವಳ ಮಾದರಿಯನ್ನು ಏಕೆ ಅನುಸರಿಸಬಾರದು?

8 ಅಧಿಕಾರಕ್ಕೆ ಅಧೀನತೆ ತೋರಿಸುವ ವಿಷಯದಲ್ಲಿ ಕ್ರೈಸ್ತ ಹೆಂಡತಿಯರಿಗೆ ಯೇಸು ಪರಿಪೂರ್ಣ ಮಾದರಿಯಾಗಿದ್ದಾನೆ. ಅಧಿಕಾರದ ಬಗ್ಗೆ ಅವನ ನೋಟಕ್ಕೂ, ಮಾನವಕುಲದಲ್ಲೇ ಪ್ರಪ್ರಥಮ ಹೆಂಡತಿಯಾದ ಹವ್ವಳ ನೋಟಕ್ಕೂ ಎಷ್ಟು ಅಜಗಜಾಂತರ! ಹೆಂಡತಿಯರಿಗಾಗಿ ಒಂದು ಒಳ್ಳೇ ಮಾದರಿಯನ್ನಿಡಲು ಆಕೆ ತಪ್ಪಿಹೋದಳು. ಆಕೆಗೊಬ್ಬ ದೇವದತ್ತ ಶಿರಸ್ಸಿದ್ದನು ಮತ್ತು ಅವನ ಮೂಲಕ ಯೆಹೋವನು ಆಕೆಗೆ ಸೂಚನೆಗಳನ್ನು ಕೊಡುತ್ತಿದ್ದನು. ಆದರೆ ಹವ್ವಳು ಆ ಏರ್ಪಾಡನ್ನು ಗೌರವಿಸಲಿಲ್ಲ. ಆದಾಮನು ಅವಳಿಗೆ ರವಾನಿಸಿದ ದೈವಿಕ ಸೂಚನೆಯನ್ನು ಪಾಲಿಸಲು ಅವಳು ತಪ್ಪಿಹೋದಳು. (ಆದಿ. 2:16, 17; 3:3; 1 ಕೊರಿಂ. 11:3) ಹವ್ವಳನ್ನು ವಂಚಿಸಲಾಗಿತ್ತು ನಿಜ. ಆದರೆ, ‘ದೇವರಿಗೆ ಚೆನ್ನಾಗಿ ಗೊತ್ತಿರುವ’ ಸಂಗತಿಗಳನ್ನು ತಿಳಿಸುತ್ತಿದ್ದೇನೆಂದು ಹೇಳಿಕೊಂಡ ಆ ಧ್ವನಿಯನ್ನು ನಂಬಬೇಕೋ ಇಲ್ಲವೋ ಎಂಬುದರ ಬಗ್ಗೆ ಆಕೆ ತನ್ನ ಗಂಡನ ಬಳಿ ಒಂದು ಮಾತು ಕೇಳಬೇಕಿತ್ತು. ಹಾಗೆ ಮಾಡುವ ಬದಲು, ಆಕೆಯೇ ತನ್ನ ಗಂಡನಿಗೆ ಏನು ಮಾಡಬೇಕೆಂದು ಹೇಳುವ ಧೈರ್ಯಮಾಡಿದಳು!—ಆದಿ. 3:5, 6; 1 ತಿಮೊ. 2:14.

9. ಅಧೀನತೆಯ ವಿಷಯದಲ್ಲಿ ಯೇಸು ಯಾವ ಮಾದರಿಯನ್ನಿಡುತ್ತಾನೆ?

9 ಇದಕ್ಕೆ ವ್ಯತಿರಿಕ್ತವಾಗಿ, ಯೇಸು ತನ್ನ ಶಿರಸ್ಸಿಗೆ ಅಧೀನತೆಯನ್ನು ತೋರಿಸುತ್ತಾ ಒಂದು ಪರಿಪೂರ್ಣ ಮಾದರಿಯನ್ನಿಟ್ಟನು. ಅವನು “ದೇವರಿಗೆ ಸಮಾನನಾಗಿರಬೇಕೆಂಬುದಕ್ಕೆ ಯಾವುದೇ ಪರಿಗಣನೆಯನ್ನು ತೋರಿಸಲಿಲ್ಲ” ಎಂಬುದನ್ನು ಅವನ ಮನೋಭಾವ ಹಾಗೂ ಜೀವನಕ್ರಮವು ತೋರಿಸಿತು. ಅದರ ಬದಲಿಗೆ ‘ಅವನು ತನ್ನನ್ನು ಬರಿದುಮಾಡಿಕೊಂಡು ದಾಸನ ರೂಪವನ್ನು ಧರಿಸಿದನು.’ (ಫಿಲಿ. 2:5-7) ಇಂದು ಯೇಸು ಆಳುತ್ತಿರುವ ರಾಜನಾಗಿದ್ದರೂ ಅವನಲ್ಲಿ ಅದೇ ಮನೋಭಾವವಿದೆ. ಅವನು ನಮ್ರತೆಯಿಂದ ಎಲ್ಲದರಲ್ಲೂ ತನ್ನ ತಂದೆಗೆ ಅಧೀನನಾಗುತ್ತಾನೆ ಮತ್ತು ಆತನ ಶಿರಸ್ಸುತನವನ್ನು ಬೆಂಬಲಿಸುತ್ತಾನೆ.—ಮತ್ತಾ. 20:23; ಯೋಹಾ. 5:30; 1 ಕೊರಿಂ. 15:28.

10. ಹೆಂಡತಿ ತನ್ನ ಗಂಡನ ಶಿರಸ್ಸುತನವನ್ನು ಹೇಗೆ ಬೆಂಬಲಿಸಬಹುದು?

10 ಕ್ರೈಸ್ತ ಹೆಂಡತಿಯು ತನ್ನ ಗಂಡನ ಶಿರಸ್ಸುತನವನ್ನು ಬೆಂಬಲಿಸುವ ಮೂಲಕ ಯೇಸುವನ್ನು ಅನುಕರಿಸತಕ್ಕದ್ದು. (1 ಪೇತ್ರ 2:21; 3:1, 2 ಓದಿ.) ಹೀಗೆ ಮಾಡಲು ಆಕೆಗೆ ಅವಕಾಶಕೊಡುವ ಈ ಸನ್ನಿವೇಶವನ್ನು ಪರಿಗಣಿಸಿರಿ. ಮಗನಿಗೆ ಒಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಹೆತ್ತವರ ಅನುಮತಿ ಬೇಕಾಗಿದೆ. ಅವನು ಸೀದಾ ತಾಯಿ ಬಳಿ ಬಂದು ಕೇಳುತ್ತಾನೆ. ಆದರೆ ಈ ವಿಷಯವನ್ನು ಹೆತ್ತವರು ಈ ಮುಂಚೆ ಚರ್ಚಿಸಿರದ ಕಾರಣ ತಾಯಿ ಅವನಿಗೆ, “ನೀನು ಅಪ್ಪನನ್ನು ಕೇಳಿದ್ದೀಯಾ?” ಎಂದು ವಿಚಾರಿಸುವುದು ಸೂಕ್ತ. ಒಂದುವೇಳೆ ಮಗನು ಕೇಳಿರದಿದ್ದರೆ, ಆ ವಿಷಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಮುಂಚೆ ಆಕೆ ಗಂಡನೊಟ್ಟಿಗೆ ಚರ್ಚಿಸಬೇಕು. ಅಷ್ಟುಮಾತ್ರವಲ್ಲದೆ ಕ್ರೈಸ್ತ ಹೆಂಡತಿಯೊಬ್ಬಳು ಮಕ್ಕಳ ಮುಂದೆ, ತನ್ನ ಗಂಡನ ಮಾತಿಗೆ ವಿರುದ್ಧವಾಗಿ ಮಾತಾಡುವುದಾಗಲಿ ಅವನಿಗೆ ಸವಾಲುಹಾಕುವುದಾಗಲಿ ಸಲ್ಲದು. ಆಕೆಗೆ ತನ್ನ ಗಂಡನ ಮಾತು ಸರಿಕಾಣದಿದ್ದಲ್ಲಿ, ಅವನೊಂದಿಗೆ ಖಾಸಗಿಯಾಗಿ ಮಾತಾಡುವಳು.—ಎಫೆ. 6:4.

ಹೆತ್ತವರಿಗಾಗಿ ಯೇಸುವಿನ ಮಾದರಿ

11. ಯೇಸು ಹೆತ್ತವರಿಗೆ ಯಾವ ಮಾದರಿಯನ್ನಿಟ್ಟನು?

11 ಯೇಸುವಿಗೆ ಮದುವೆಯಾಗದಿದ್ದರೂ ಇಲ್ಲವೇ ಮಕ್ಕಳಿಲ್ಲದಿದ್ದರೂ ಅವನು ಕ್ರೈಸ್ತ ಹೆತ್ತವರಿಗಾಗಿ ಉತ್ಕೃಷ್ಟ ಮಾದರಿಯಾಗಿದ್ದಾನೆ. ಹೇಗೆ? ಅವನು ಪ್ರೀತಿ ಹಾಗೂ ತಾಳ್ಮೆಯಿಂದ ತನ್ನ ಮಾತು ಮತ್ತು ಮಾದರಿಯ ಮೂಲಕ ಶಿಷ್ಯರಿಗೆ ಕಲಿಸಿದನು. ಅವನು ಅವರಿಗೆ ತಾನು ಕೊಟ್ಟ ನೇಮಕವನ್ನು ಹೇಗೆ ಪೂರೈಸುವುದೆಂದು ತೋರಿಸಿಕೊಟ್ಟನು. (ಲೂಕ 8:1) ಯೇಸುವಿಗೆ ತನ್ನ ಶಿಷ್ಯರ ಕಡೆಗಿದ್ದ ಮನೋಭಾವ ಮತ್ತು ಅವನು ಅವರೊಂದಿಗೆ ನಡೆದುಕೊಂಡ ರೀತಿಯು, ಪರಸ್ಪರರನ್ನು ಹೇಗೆ ಉಪಚರಿಸಬೇಕೆಂಬುದನ್ನು ಅವರಿಗೆ ಕಲಿಸಿಕೊಟ್ಟಿತು.—ಯೋಹಾನ 13:14-17 ಓದಿ.

12, 13. ಮಕ್ಕಳು ದೇವಭಯವುಳ್ಳವರಾಗಿ ಬೆಳೆಯಬೇಕಾದರೆ ಹೆತ್ತವರೇನು ಮಾಡಬೇಕು?

12 ಸಾಮಾನ್ಯವಾಗಿ ಮಕ್ಕಳು ತಮ್ಮ ಹೆತ್ತವರನ್ನು ಅನುಕರಿಸುತ್ತಾರೆ. ಅವರು ಒಳ್ಳೇದನ್ನೇ ಮಾಡಲಿ ಕೆಟ್ಟದ್ದನ್ನೇ ಮಾಡಲಿ ಅದನ್ನೇ ಮಕ್ಕಳು ಮಾಡುತ್ತಾರೆ. ಹೀಗಿರುವುದರಿಂದ ಹೆತ್ತವರೇ ನಿಮ್ಮನ್ನೇ ಕೇಳಿಕೊಳ್ಳಿ: ‘ನಾವು ಟಿ.ವಿ. ನೋಡುವುದಕ್ಕೂ ಮನೋರಂಜನೆಗಾಗಿಯೂ ಕೊಡುವ ಸಮಯ ಮತ್ತು ಬೈಬಲ್‌ ಅಧ್ಯಯನಕ್ಕೂ ಕ್ಷೇತ್ರ ಸೇವೆಗೂ ಕೊಡುವ ಸಮಯದ ಮೂಲಕ ನಮ್ಮ ಮಕ್ಕಳಿಗೆ ಏನನ್ನು ಕಲಿಸಿಕೊಡುತ್ತಿದ್ದೇವೆ? ನಮ್ಮ ಕುಟುಂಬ ನಿಜವಾಗಿಯೂ ಯಾವುದಕ್ಕೆ ಆದ್ಯತೆ ಕೊಡುತ್ತದೆ? ನಮ್ಮ ಜೀವನ ಹಾಗೂ ನಿರ್ಣಯಗಳಲ್ಲಿ ಸತ್ಯಾರಾಧನೆಗೆ ಪ್ರಧಾನ ಸ್ಥಾನ ಕೊಡುವ ಮೂಲಕ ಒಳ್ಳೇ ಮಾದರಿಯನ್ನಿಡುತ್ತಿದ್ದೇವೋ?’ ಮಕ್ಕಳು ದೇವಭಯವುಳ್ಳವರಾಗಿ ಬೆಳೆಯಬೇಕಾದರೆ, ದೇವರ ನಿಯಮಗಳು ಮೊದಲು ಹೆತ್ತವರ ಹೃದಯದಲ್ಲಿರಬೇಕು.—ಧರ್ಮೋ. 6:6.

13 ಹೆತ್ತವರು ದಿನನಿತ್ಯ ಚಿಕ್ಕಪುಟ್ಟ ಸಂಗತಿಗಳಲ್ಲೂ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಲು ಪ್ರಯತ್ನಿಸುವಲ್ಲಿ, ಮಕ್ಕಳು ಅದನ್ನು ಖಂಡಿತ ಗಮನಿಸುವರು. ಆಗ ಹೆತ್ತವರ ಮಾತುಗಳಿಗೂ ಬೋಧನೆಗಳಿಗೂ ಬೆಲೆಯಿರುವುದು. ಆದರೆ ಹೆತ್ತವರು ‘ಹೇಳುವುದು ಒಂದು ಮಾಡುವುದು ಇನ್ನೊಂದಾದರೆ,’ ಬೈಬಲ್‌ ಮೂಲತತ್ತ್ವಗಳು ನಿಜವಾಗಿ ಪ್ರಾಮುಖ್ಯವಲ್ಲ ಇಲ್ಲವೇ ಪ್ರಾಯೋಗಿಕವಲ್ಲ ಎಂದು ಮಕ್ಕಳು ನೆನಸುವರು. ಫಲಿತಾಂಶವಾಗಿ, ಲೋಕದ ಒತ್ತಡ ಬರುವಾಗ ಅದನ್ನು ಪ್ರತಿರೋಧಿಸಲು ಅವರು ಶಕ್ತರಾಗಲಿಕ್ಕಿಲ್ಲ.

14, 15. ಹೆತ್ತವರು ತಮ್ಮ ಮಕ್ಕಳಲ್ಲಿ ಯಾವ ಮೌಲ್ಯಗಳನ್ನು ಬೆಳೆಸತಕ್ಕದ್ದು, ಮತ್ತು ಅವರಿದನ್ನು ಮಾಡಬಹುದಾದ ಒಂದು ವಿಧ ಯಾವುದು?

14 ಮಕ್ಕಳನ್ನು ಬೆಳೆಸುವುದರಲ್ಲಿ ಅವರ ಭೌತಿಕ ಅಗತ್ಯಗಳನ್ನು ಪೂರೈಸುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ ಎಂಬುದು ಕ್ರೈಸ್ತ ಹೆತ್ತವರಿಗೆ ತಿಳಿದಿದೆ. ಆದುದರಿಂದ ಕೇವಲ ಭೌತಿಕ ಲಾಭ ತರುವಂಥ ಗುರಿಗಳನ್ನು ಬೆನ್ನಟ್ಟುವಂತೆ ಮಕ್ಕಳಿಗೆ ಕಲಿಸುವುದು ಅವಿವೇಕತನವೇ ಸರಿ. (ಪ್ರಸಂ. 7:12) ಆಧ್ಯಾತ್ಮಿಕ ಮೌಲ್ಯಗಳು ಮತ್ತು ಚಟುವಟಿಕೆಗಳಿಗೆ ಆದ್ಯತೆ ಕೊಡುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. (ಮತ್ತಾ. 6:33) ಆದುದರಿಂದ, ಅವನನ್ನು ಅನುಕರಿಸುತ್ತಾ ಕ್ರೈಸ್ತ ಹೆತ್ತವರು ಸಹ ತಮ್ಮ ಮಕ್ಕಳಲ್ಲಿ ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವ ಆಸೆಯನ್ನು ಬೆಳೆಸಬೇಕು.

15 ಹೆತ್ತವರು ಇದನ್ನು ಮಾಡಬಹುದಾದ ಒಂದು ವಿಧ, ಮಕ್ಕಳಿಗೆ ಪೂರ್ಣ ಸಮಯದ ಸೇವಕರೊಂದಿಗೆ ಸಹವಾಸ ಮಾಡಲು ಅವಕಾಶ ಕಲ್ಪಿಸಿಕೊಡುವುದೇ ಆಗಿದೆ. ಪಯನೀಯರರ ಅಥವಾ ಸರ್ಕಿಟ್‌ ಮೇಲ್ವಿಚಾರಕರು ಮತ್ತವರ ಹೆಂಡತಿಯ ಪರಿಚಯ ಬೆಳೆಸಿಕೊಳ್ಳುವುದು ಹದಿವಯಸ್ಕರಿಗೆ ಎಷ್ಟೊಂದು ಉತ್ತೇಜನದಾಯಕ ಆಗಿರುವುದು ಎಂಬುದನ್ನು ಪರಿಗಣಿಸಿ. ಸಂದರ್ಶಿಸುತ್ತಿರುವ ಮಿಷನೆರಿಗಳು, ಬೆತೆಲಿಗರು ಹಾಗೂ ಅಂತಾರಾಷ್ಟ್ರೀಯ ನಿರ್ಮಾಣ ಕೆಲಸಮಾಡುವವರು ಯೆಹೋವನ ಸೇವೆಮಾಡುವುದರ ಬಗ್ಗೆ ಉತ್ಸಾಹದಿಂದ ಮಾತಾಡುವರು. ಖಂಡಿತವಾಗಿಯೂ ಇಂಥವರ ಬಳಿ ತಿಳಿಸಲಿಕ್ಕಾಗಿ ರೋಚಕ ಅನುಭವಗಳಿರುವವು. ಸ್ವತ್ಯಾಗದ ಸೇವೆ ಮಾಡುವುದರಲ್ಲಿ ಅವರಿಟ್ಟಿರುವ ಮಾದರಿಯು, ನಿಮ್ಮ ಮಕ್ಕಳಿಗೆ ವಿವೇಕಯುತ ನಿರ್ಣಯಗಳನ್ನು ಮಾಡಲು, ಶ್ಲಾಘನೀಯ ಗುರಿಗಳನ್ನಿಡಲು ಮತ್ತು ತಮ್ಮ ಕಾಲ ಮೇಲೆ ನಿಂತು ಪೂರ್ಣ ಸಮಯದ ಸೇವೆಮಾಡಲು ಬೇಕಾದ ಸೂಕ್ತ ಶಿಕ್ಷಣ ಪಡೆಯಲು ತುಂಬ ಸಹಾಯಮಾಡುವುದು.

ಮಕ್ಕಳಿಗೆ ಯೇಸುವಿನ ಮಾದರಿಯನ್ನು ಅನುಸರಿಸಲು ಸಹಾಯ

16. ಯೇಸು ತನ್ನ ಮಾನವ ಹೆತ್ತವರನ್ನು ಮತ್ತು ತನ್ನ ಸ್ವರ್ಗೀಯ ತಂದೆಯನ್ನು ಗೌರವಿಸಿದ್ದು ಹೇಗೆ?

16 ಮಕ್ಕಳೇ, ಯೇಸು ನಿಮಗೂ ಉತ್ಕೃಷ್ಟ ಮಾದರಿಯಾಗಿದ್ದಾನೆ. ಯೇಸುವನ್ನು ಬೆಳೆಸುವ ಜವಾಬ್ದಾರಿಯನ್ನು ಯೋಸೇಫ ಮತ್ತು ಮರಿಯಳಿಗೆ ಒಪ್ಪಿಸಲಾಗಿತ್ತು. ಅವನು ಅವರಿಗೆ ವಿಧೇಯನಾಗಿದ್ದನು. (ಲೂಕ 2:51 ಓದಿ.) ಅವರಲ್ಲಿ ಕುಂದುಕೊರತೆಗಳಿದ್ದರೂ, ತನ್ನನ್ನು ನೋಡಿಕೊಳ್ಳುವ ದೇವದತ್ತ ಜವಾಬ್ದಾರಿ ಅವರಿಗಿದೆ ಎಂಬುದನ್ನು ಅವನು ಅಂಗೀಕರಿಸಿದನು. ಹೀಗಿರುವುದರಿಂದ ಅವನು ಅವರಿಗೆ ಗೌರವ ಕೊಡಲೇಬೇಕಿತ್ತು. (ಧರ್ಮೋ. 5:16; ಮತ್ತಾ. 15:4) ಯೇಸು ದೊಡ್ಡವನಾದಾಗಲೂ ಎಲ್ಲ ಸಮಯದಲ್ಲಿ ತನ್ನ ಸ್ವರ್ಗೀಯ ತಂದೆ ಮೆಚ್ಚುವಂಥ ಕೆಲಸಗಳನ್ನೇ ಮಾಡಿದನು. ಇದಕ್ಕಾಗಿ ಅವನು ಪ್ರಲೋಭನೆಯನ್ನೂ ಪ್ರತಿರೋಧಿಸಬೇಕಾಯಿತು. (ಮತ್ತಾ. 4:1-10) ಹೆತ್ತವರಿಗೆ ಅವಿಧೇಯರಾಗುವ ಪ್ರಲೋಭನೆ ಯುವ ಜನರಾದ ನಿಮಗೂ ಎದುರಾಗಬಹುದು. ಆಗ ಯೇಸುವಿನ ಮಾದರಿಯನ್ನು ಅನುಸರಿಸಲು ನಿಮಗೆ ಯಾವುದು ಸಹಾಯಮಾಡುವುದು?

17, 18. (ಎ) ಯುವ ಜನರು ಶಾಲೆಯಲ್ಲಿ ಯಾವ ಒತ್ತಡ ಎದುರಿಸುತ್ತಾರೆ? (ಬಿ) ಏನನ್ನು ನೆನಪಿನಲ್ಲಿಡುವುದು ಯುವ ಜನರಿಗೆ ನಂಬಿಕೆಯ ಪರೀಕ್ಷೆಗಳನ್ನು ಎದುರಿಸಲು ಸಹಾಯಮಾಡುವುದು?

17 ನಿಮ್ಮ ಸಹಪಾಠಿಗಳಲ್ಲಿ ಹೆಚ್ಚಿನವರು ಬೈಬಲ್‌ ಮಟ್ಟಗಳನ್ನು ಸ್ವಲ್ಪವೂ ಗೌರವಿಸಲಿಕ್ಕಿಲ್ಲ. ನೀವು ತಪ್ಪಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಅವರು ಒತ್ತಡಹೇರಬಹುದು ಮತ್ತು ನೀವದನ್ನು ನಿರಾಕರಿಸುವಾಗ ಗೇಲಿಮಾಡಬಹುದು. ನೀವು ನಿರ್ದಿಷ್ಟ ಚಟುವಟಿಕೆಗಳಲ್ಲಿ ನಿಮ್ಮ ಸಹಪಾಠಿಗಳೊಂದಿಗೆ ಸೇರದಿರುವುದರಿಂದ ಅವರು ನಿಮಗೆ ಅಡ್ಡಹೆಸರುಗಳನ್ನು ಇಟ್ಟಿದ್ದಾರೋ? ಆಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ನೀವು ಅವರಿಗೆ ಹೆದರಿ ಅವರು ಹೇಳಿದಂತೆ ಮಾಡುವಲ್ಲಿ, ನಿಮ್ಮ ಹೆತ್ತವರಿಗೂ ಯೆಹೋವನಿಗೂ ನಿರಾಶೆಯಾಗುವುದೆಂದು ನಿಮಗೆ ಗೊತ್ತಿದೆ. ನಿಮ್ಮ ಸಹಪಾಠಿಗಳು ಮಾಡುವಂತೆ ಮಾಡುವಲ್ಲಿ ನಿಮಗೇನಾಗುವುದು? ಬಹುಶಃ ನೀವು ಪಯನೀಯರರಾಗುವ, ಶುಶ್ರೂಷಾ ಸೇವಕರಾಗುವ, ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವ ಟೆರಿಟೊರಿಯಲ್ಲಿ ಸೇವೆಸಲ್ಲಿಸುವ ಇಲ್ಲವೇ ಬೆತೆಲಿಗರಾಗುವ ಗುರಿಯನ್ನಿಟ್ಟಿದ್ದೀರಿ. ನಿಮ್ಮ ಸಹಪಾಠಿಗಳೊಂದಿಗಿನ ಸಹವಾಸವು ಈ ಗುರಿಗಳನ್ನು ತಲಪಲು ನಿಮಗೆ ಸಹಾಯಮಾಡುವುದೋ?

18 ಕ್ರೈಸ್ತ ಸಭೆಗಳಲ್ಲಿರುವ ಯುವ ಜನರೇ, ನಿಮ್ಮ ನಂಬಿಕೆಯು ಪರೀಕ್ಷೆಗೊಳಗಾಗುವ ಸನ್ನಿವೇಶಗಳು ನಿಮಗೆ ಎದುರಾಗುತ್ತಿರುತ್ತವೋ? ನಿಮ್ಮ ಪ್ರತಿಕ್ರಿಯೆ ಏನಾಗಿರುತ್ತದೆ? ನಿಮ್ಮ ಆದರ್ಶ ವ್ಯಕ್ತಿಯಾದ ಯೇಸುವಿನ ಕುರಿತು ಯೋಚಿಸಿ. ಅವನು ಪ್ರಲೋಭನೆಗೆ ಮಣಿಯದೆ, ಯಾವುದು ಸರಿಯೆಂದು ಅವನಿಗೆ ಗೊತ್ತಿತ್ತೋ ಅದರ ಪರವಾಗಿ ಅಚಲ ನಿಲುವನ್ನು ತೆಗೆದುಕೊಂಡನು. ಇದನ್ನು ನೆನಪಿನಲ್ಲಿಡುವುದರಿಂದ, ತಪ್ಪೆಂದು ನಿಮಗೆ ತಿಳಿದಿರುವಂಥ ಕೆಲಸದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಸಹಪಾಠಿಗಳಿಗೆ ಹೇಳಲು ಬೇಕಾದ ಬಲ ನಿಮಗೆ ಸಿಗುವುದು. ಯೇಸುವಿನಂತೆ, ಜೀವನಪೂರ್ತಿ ಯೆಹೋವನಿಗೆ ಆನಂದಭರಿತ ಸೇವೆ ಸಲ್ಲಿಸುವ ಮತ್ತು ವಿಧೇಯತೆ ತೋರಿಸುವುದರ ಪ್ರತೀಕ್ಷೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ.—ಇಬ್ರಿ. 12:2.

ಸುಖೀ ಕುಟುಂಬ ಜೀವನದ ಗುಟ್ಟು

19. ನಿಜ ಸಂತೋಷ ತರುವಂಥ ಜೀವನಕ್ರಮ ಯಾವುದು?

19 ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಮಾನವಕುಲಕ್ಕಾಗಿ ಅತ್ಯುತ್ತಮವಾದದ್ದನ್ನು ಬಯಸುತ್ತಾರೆ. ನಮ್ಮ ಅಪರಿಪೂರ್ಣ ಸ್ಥಿತಿಯಲ್ಲೂ ನಾವು ಸ್ವಲ್ಪಮಟ್ಟಿಗಾದರೂ ಸಂತೋಷಿತರಾಗಿರಬಲ್ಲೆವು. (ಯೆಶಾ. 48:17, 18; ಮತ್ತಾ. 5:3) ಯೇಸು ಕಲಿಸಿದಂಥ ಧಾರ್ಮಿಕ ಸತ್ಯಗಳು ಮಾನವಕುಲದ ಸಂತೋಷಕ್ಕೆ ಆಧಾರವನ್ನು ಕೊಡುತ್ತವೆ. ಆದರೆ ಅವನು ತನ್ನ ಶಿಷ್ಯರಿಗೆ ಅಷ್ಟನ್ನು ಮಾತ್ರ ಕಲಿಸಲಿಲ್ಲ. ಅತ್ಯುತ್ತಮವಾದ ಜೀವನ ರೀತಿ ಯಾವುದೆಂಬುದನ್ನೂ ಅವನು ಕಲಿಸಿದನು. ಅದಕ್ಕಿಂತಲೂ ಹೆಚ್ಚಾಗಿ ಸಮತೂಕದ ಜೀವನ ಹಾಗೂ ಮನೋಭಾವದ ವಿಷಯದಲ್ಲಿ ಅವನೊಂದು ಪ್ರಾಯೋಗಿಕ ಮಾದರಿಯನ್ನು ಬಿಟ್ಟುಹೋದನು. ಕುಟುಂಬದಲ್ಲಿ ನಮ್ಮ ಪಾತ್ರ ಏನೇ ಆಗಿರಲಿ, ಆತನ ಮಾದರಿಯನ್ನು ಅನುಸರಿಸುವುದರಿಂದ ನಮಗೆಲ್ಲರಿಗೆ ಪ್ರಯೋಜನವಾಗುವುದು. ಆದುದರಿಂದ ಗಂಡಂದಿರೇ, ಹೆಂಡತಿಯರೇ, ಹೆತ್ತವರೇ, ಮಕ್ಕಳೇ ಯೇಸುವಿನ ಮಾದರಿಯನ್ನು ಅನುಸರಿಸಿರಿ! ಯೇಸುವಿನ ಬೋಧನೆಗಳನ್ನು ಸ್ವೀಕರಿಸಿ ಅವನ ಮಾದರಿಯನ್ನು ಅನುಕರಿಸುವುದೇ ಸುಖೀ ಕುಟುಂಬ ಜೀವನದ ಗುಟ್ಟಾಗಿದೆ.

ನಿಮ್ಮ ಉತ್ತರವೇನು?

• ಗಂಡಂದಿರು ತಮ್ಮ ದೇವದತ್ತ ಅಧಿಕಾರವನ್ನು ಹೇಗೆ ಬಳಸಬೇಕು?

• ಹೆಂಡತಿಯು ಯೇಸುವಿನ ಮಾದರಿಯನ್ನು ಹೇಗೆ ಅನುಕರಿಸಬಹುದು?

• ಯೇಸು ತನ್ನ ಶಿಷ್ಯರನ್ನು ಉಪಚರಿಸಿದ ರೀತಿಯಿಂದ ಹೆತ್ತವರು ಏನು ಕಲಿಯಬಲ್ಲರು?

• ಯೇಸುವಿನ ಮಾದರಿಯಿಂದ ಯುವ ಜನರು ಏನು ಕಲಿಯಬಲ್ಲರು?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರ]

ಕುಟುಂಬಕ್ಕೆ ಸಂಬಂಧಪಟ್ಟ ನಿರ್ಣಯ ಮಾಡುವ ಮುಂಚೆ, ಪ್ರೀತಿಪರ ಗಂಡನು ಏನು ಮಾಡುವನು?

[ಪುಟ 9ರಲ್ಲಿರುವ ಚಿತ್ರ]

ಗಂಡನ ಶಿರಸ್ಸುತನವನ್ನು ಬೆಂಬಲಿಸಲು ಯಾವ ಸನ್ನಿವೇಶ ಹೆಂಡತಿಗೆ ಅವಕಾಶಕೊಡುತ್ತದೆ?

[ಪುಟ 10ರಲ್ಲಿರುವ ಚಿತ್ರ]

ಹೆತ್ತವರ ಒಳ್ಳೇ ರೂಢಿಗಳನ್ನು ಮಕ್ಕಳು ಅನುಕರಿಸುತ್ತಾರೆ