ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತೊಂಭತ್ತು ವರ್ಷಗಳ ಹಿಂದೆ ‘ನನ್ನ ಸೃಷ್ಟಿಕರ್ತನನ್ನು ಸ್ಮರಿಸಲು’ ಆರಂಭಿಸಿದೆ

ತೊಂಭತ್ತು ವರ್ಷಗಳ ಹಿಂದೆ ‘ನನ್ನ ಸೃಷ್ಟಿಕರ್ತನನ್ನು ಸ್ಮರಿಸಲು’ ಆರಂಭಿಸಿದೆ

ತೊಂಭತ್ತು ವರ್ಷಗಳ ಹಿಂದೆ ‘ನನ್ನ ಸೃಷ್ಟಿಕರ್ತನನ್ನು ಸ್ಮರಿಸಲು’ ಆರಂಭಿಸಿದೆ

ಎಡ್ವಿನ್‌ ರಿಜ್ವೆಲ್‌ ಅವರು ಹೇಳಿದಂತೆ

ಇಸವಿ 1918ರ ನವೆಂಬರ್‌ 11 ಕದನ ವಿರಾಮ ದಿನವಾಗಿತ್ತು. ಒಂದನೇ ಲೋಕ ಯುದ್ಧವೆಂದು ತದನಂತರ ಕರೆಯಲಾದ ಮಹಾ ಯುದ್ಧದ ಅಂತ್ಯವನ್ನು ಆಚರಿಸಲು ನಾನು ಓದುತ್ತಿದ್ದ ಶಾಲೆಯಲ್ಲಿ ಮಕ್ಕಳೆಲ್ಲರನ್ನೂ ಅನಿರೀಕ್ಷಿತವಾಗಿ ಸೇರಿಸಲಾಯಿತು. ನನಗಾಗ ಕೇವಲ ಐದು ವರ್ಷ. ಆ ಸಮಾರಂಭವನ್ನು ಏಕೆ ಏರ್ಪಡಿಸಲಾಗಿದೆ ಎಂಬುದು ನನಗೆ ಅರ್ಥವಾಗಲಿಲ್ಲ. ಆದರೂ ನನ್ನ ಹೆತ್ತವರು ದೇವರ ಬಗ್ಗೆ ನನಗೇನು ಕಲಿಸಿದ್ದರೋ ಅದರಿಂದ ನಾನದರಲ್ಲಿ ಭಾಗವಹಿಸಬಾರದೆಂಬುದು ನನಗೆ ತಿಳಿದಿತ್ತು. ನಾನು ದೇವರಿಗೆ ಪ್ರಾರ್ಥಿಸಿದೆ. ಆದರೂ ನನ್ನ ಭಾವನೆಗಳನ್ನು ಹತ್ತಿಕ್ಕಲಾಗದೇ ಅಳಲಾರಂಭಿಸಿದೆ. ಹೀಗಿದ್ದರೂ ನಾನು ಆ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ನಾನು ‘ನನ್ನ ಸೃಷ್ಟಿಕರ್ತನನ್ನು ಸ್ಮರಿಸಲು’ ಆರಂಭಿಸಿದ್ದು ಆಗಲೇ.—ಪ್ರಸಂ. 12:1.

ಈ ಘಟನೆಯ ಕೆಲವೇ ತಿಂಗಳ ಹಿಂದೆ ನಮ್ಮ ಕುಟುಂಬ ಸ್ಕಾಟ್ಲೆಂಡ್‌ನ ಗ್ಲಾಸ್‌ಗೋವಿಗೆ ಸ್ಥಳಾಂತರಿಸಿತ್ತು. ಈ ಸಮಯದಷ್ಟಕ್ಕೆ ನನ್ನ ತಂದೆ, “ಈಗ ಜೀವಿಸುತ್ತಿರುವ ಲಕ್ಷಾಂತರ ಮಂದಿ ಎಂದಿಗೂ ಸಾಯುವುದಿಲ್ಲ” ಎಂಬ ಶೀರ್ಷಿಕೆಯ ಸಾರ್ವಜನಿಕ ಭಾಷಣಕ್ಕೆ ಹಾಜರಾಗಿದ್ದರು. ಅದು ಅವರ ಜೀವನವನ್ನು ಬದಲಾಯಿಸಿತು. ಅಪ್ಪ ಅಮ್ಮ ಬೈಬಲನ್ನು ಅಧ್ಯಯನ ಮಾಡಲಾರಂಭಿಸಿದರು ಮತ್ತು ದೇವರ ರಾಜ್ಯ ಹಾಗೂ ಬರಲಿರುವ ಆಶೀರ್ವಾದಗಳ ಕುರಿತು ಆಗಾಗ್ಗೆ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಆ ಸಮಯದಿಂದ ಹಿಡಿದು, ದೇವರನ್ನು ಪ್ರೀತಿಸುವಂತೆ ಮತ್ತು ಆತನಲ್ಲಿ ಭರವಸೆಯಿಡುವಂತೆ ನನ್ನ ಹೆತ್ತವರು ಕಲಿಸಿದರು. ಅದಕ್ಕಾಗಿ ನಾನು ದೇವರಿಗೆ ಬಹಳ ಆಭಾರಿ.—ಜ್ಞಾನೋ. 22:6.

ನನ್ನ ಪೂರ್ಣ ಸಮಯದ ಶುಶ್ರೂಷೆಯ ಆರಂಭ

15 ವರ್ಷ ಪ್ರಾಯದವನಾಗಿದ್ದಾಗ ನಾನು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬಹುದಿತ್ತಾದರೂ ಪೂರ್ಣ ಸಮಯದ ಶುಶ್ರೂಷಕನಾಗಲು ಬಯಸಿದೆ. ಈ ಸೇವೆಗಾಗಿ ನಾನಿನ್ನೂ ಚಿಕ್ಕವನೆಂದು ತಂದೆ ಹೇಳಿದರು. ಆದ್ದರಿಂದ ನಾನು ಸ್ವಲ್ಪ ಸಮಯ ಕಛೇರಿಯೊಂದರಲ್ಲಿ ಕೆಲಸಕ್ಕೆ ಹೋದೆ. ಆದರೂ ಯೆಹೋವನನ್ನು ಪೂರ್ಣ ಸಮಯ ಸೇವಿಸಬೇಕೆಂಬ ಬಯಕೆ ನನ್ನಲ್ಲಿ ಎಷ್ಟು ಉತ್ಕಟವಾಗಿತ್ತೆಂದರೆ ಆ ಸಮಯದಲ್ಲಿ ಲೋಕವ್ಯಾಪಕ ಸಾರುವ ಕೆಲಸವನ್ನು ನೋಡಿಕೊಳ್ಳುತ್ತಿದ್ದ ಜೆ. ಎಫ್‌. ರದರ್‌ಫರ್ಡ್‌ರಿಗೆ ಪತ್ರ ಬರೆದೆ. ನನ್ನ ಯೋಜನೆಗಳ ಬಗ್ಗೆ ಅವರ ಅನಿಸಿಕೆಯನ್ನು ಕೇಳಿದೆ. ಸಹೋದರ ರದರ್‌ಫರ್ಡ್‌ ಹೀಗೆ ಉತ್ತರ ಕಳುಹಿಸಿದರು: “ನೀನು ಕೆಲಸ ಮಾಡುವಷ್ಟು ದೊಡ್ಡವನಾಗಿದ್ದೀಯ ಅಂದಮೇಲೆ ಕರ್ತನ ಕೆಲಸವನ್ನೂ ಮಾಡುವಷ್ಟು ದೊಡ್ಡವನಾಗಿದ್ದೀಯ ಎಂದರ್ಥ. . . . ಕರ್ತನನ್ನು ನಂಬಿಗಸ್ತನಾಗಿ ಸೇವಿಸಲು ಶ್ರಮಿಸುವಲ್ಲಿ ಆತನು ಖಂಡಿತ ನಿನ್ನನ್ನು ಆಶೀರ್ವದಿಸುವನೆಂಬ ನಂಬಿಕೆ ನನಗಿದೆ.” 1928ರ ಮಾರ್ಚ್‌ 10ರಂದು ಬರೆಯಲಾಗಿದ್ದ ಆ ಪತ್ರ ನಮ್ಮ ಕುಟುಂಬದ ಮೇಲೆ ಗಾಢವಾದ ಪ್ರಭಾವಬೀರಿತು. ಸ್ವಲ್ಪ ಸಮಯದಲ್ಲೇ ಅಪ್ಪ, ಅಮ್ಮ, ಅಕ್ಕ ಮತ್ತು ನಾನು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದೆವು.

1931ರಲ್ಲಿ ಲಂಡನ್‌ನಲ್ಲಿ ನಡೆದ ಅಧಿವೇಶನದಲ್ಲಿ, ಸಹೋದರ ರದರ್‌ಫರ್ಡ್‌ ಸುವಾರ್ತೆಯನ್ನು ವಿದೇಶಗಳಲ್ಲಿ ಸಾರಲಿಕ್ಕಾಗಿ ಸ್ವಯಂಸೇವಕರ ಅಗತ್ಯವಿರುವುದಾಗಿ ಹೇಳಿದರು. ನಾನು ಹೆಸರುಕೊಟ್ಟೆ. ನನ್ನನ್ನು ಆ್ಯಂಡ್ರೂ ಜಾಕ್‌ರೊಂದಿಗೆ ಲಿಥುವೇನಿಯಾದ ಅಂದಿನ ರಾಜಧಾನಿಯಾದ ಕಾವ್ನಾಸ್‌ಗೆ ನೇಮಿಸಲಾಯಿತು. ಆಗ ನನಗೆ 18 ವರ್ಷ.

ವಿದೇಶದಲ್ಲಿ ರಾಜ್ಯ ಸಂದೇಶವನ್ನು ಸಾರುವುದು

ಆಗ ಲಿಥುವೇನಿಯಾವು ಕೃಷಿ ಅವಲಂಬಿತ ಬಡ ರಾಷ್ಟ್ರವಾಗಿತ್ತು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಾರುವುದು ಸುಲಭವಾಗಿರಲಿಲ್ಲ. ವಸತಿ ಸೌಕರ್ಯಗಳನ್ನು ಪಡೆಯುವುದು ಬಹಳ ಕಷ್ಟಕರವಾಗಿತ್ತು. ನಾವು ವಾಸವಾಗಿದ್ದ ಕೆಲವೊಂದು ಸ್ಥಳಗಳನ್ನು ಎಂದೂ ಮರೆಯಲಾರೆವು. ಉದಾಹರಣೆಗೆ, ನಾವು ವಾಸವಿದ್ದ ಒಂದು ಸ್ಥಳದಲ್ಲಿ ರಾತ್ರಿಯೊಮ್ಮೆ ನಮಗೆ ಏನೋ ಕಚ್ಚಿದಂತೆನಿಸಿ ಇಬ್ಬರೂ ಎದ್ದೆವು. ಎಣ್ಣೆ ದೀಪವನ್ನು ಹಚ್ಚಿದಾಗ, ನಾವು ಮಲಗಿದ್ದ ಹಾಸಿಗೆತುಂಬ ತಿಗಣೆಗಳನ್ನು ನೋಡಿದೆವು. ಅಂಗಾಲಿನಿಂದ ನಡುನೆತ್ತಿಯ ವರೆಗೂ ಅವು ನಮ್ಮನ್ನು ಕಚ್ಚಿದ್ದವು. ನೋವನ್ನು ಹೋಗಲಾಡಿಸಲಿಕ್ಕೆ ನಾನು ಒಂದು ವಾರದ ತನಕ ಪ್ರತಿದಿನ ಬೆಳಗ್ಗೆ ಸಮೀಪದ ನದಿಯಲ್ಲಿ ಕುತ್ತಿಗೆ ವರೆಗೆ ತಣ್ಣೀರಿನಲ್ಲಿ ನಿಲ್ಲಬೇಕಾಯಿತು. ಆದರೂ ಶುಶ್ರೂಷೆಯನ್ನು ಮುಂದುವರಿಸಲು ನಾವು ದೃಢನಿಶ್ಚಿತರಾಗಿದ್ದೆವು. ಅನಂತರ ಸ್ವಲ್ಪದರಲ್ಲೇ, ನಮ್ಮ ವಸತಿ ಸೌಕರ್ಯದ ಸಮಸ್ಯೆ ಬಗೆಹರಿಯಿತು. ಹೇಗೆಂದರೆ, ನಮ್ಮಿಂದ ಬೈಬಲ್‌ ಸತ್ಯವನ್ನು ಕಲಿತ ಯುವ ದಂಪತಿ ನಮ್ಮನ್ನು ತಮ್ಮ ಮನೆಯಲ್ಲಿ ಉಳಿದುಕೊಳ್ಳುವಂತೆ ಆಮಂತ್ರಿಸಿದರು. ಅವರ ಮನೆ ಚಿಕ್ಕದಾದರೂ ಚೊಕ್ಕದಾಗಿತ್ತು. ನಾವಲ್ಲಿ ನೆಲದ ಮೇಲೆ ಮಲಗುತ್ತಿದ್ದರೂ ನಿದ್ದೆ ಸುಖದಾಯಕವಾಗಿರುತ್ತಿತ್ತು.

ಆ ಕಾಲದಲ್ಲಿ ಲಿಥುವೇನಿಯಾ ರೋಮನ್‌ ಕ್ಯಾಥೋಲಿಕ್‌ ಮತ್ತು ರಷ್ಯನ್‌ ಆರ್ತೊಡಾಕ್ಸ್‌ ಪಾದ್ರಿಗಳ ಮುಷ್ಟಿಯಲ್ಲಿತ್ತು. ಬೈಬಲ್‌ ಅನ್ನು ಕೇವಲ ಸಿರಿವಂತರು ಕೊಳ್ಳಸಾಧ್ಯವಿತ್ತು. ಸಾಧ್ಯವಾದಷ್ಟು ಹೆಚ್ಚು ಟೆರಿಟೊರಿಯನ್ನು ಆವರಿಸುವುದು ಮತ್ತು ಸಾಧ್ಯವಾದಷ್ಟು ಹೆಚ್ಚು ಬೈಬಲ್‌ ಪ್ರಕಾಶನಗಳನ್ನು ಆಸಕ್ತ ಜನರಿಗೆ ಕೊಡುವುದು ನಮ್ಮ ಮುಖ್ಯ ಗುರಿಯಾಗಿತ್ತು. ನಾವೊಂದು ಪಟ್ಟಣವನ್ನು ತಲುಪಿದೊಡನೆ ಮೊದಲು ಮಾಡುತ್ತಿದ್ದ ಕೆಲಸ ವಸತಿ ಸೌಕರ್ಯವನ್ನು ಹುಡುಕುವುದಾಗಿತ್ತು. ನಂತರ ನಾವು ಪಟ್ಟಣದ ಹೊರವಲಯದಲ್ಲಿದ್ದ ಪ್ರದೇಶಗಳನ್ನು ಜಾಗರೂಕತೆಯಿಂದ ಆವರಿಸುತ್ತಿದ್ದೆವು. ಆಮೇಲೆ ಪಟ್ಟಣವನ್ನು ತ್ವರಿತಗತಿಯಲ್ಲಿ ಆವರಿಸುತ್ತಿದ್ದೆವು. ಹೀಗೆ ಸ್ಥಳಿಕ ಪಾದ್ರಿಗಳ ಕಾಟ ಆರಂಭವಾಗುವ ಮುಂಚೆಯೇ ನಮ್ಮ ಕೆಲಸವನ್ನು ಮಾಡಿಮುಗಿಸುತ್ತಿದ್ದೆವು.

ಗಲಭೆಯಿಂದ ಸಿಕ್ಕಿದ ಪ್ರಚಾರ

1934ರಲ್ಲಿ ಆ್ಯಂಡ್ರೂವನ್ನು ಕಾವ್ನಾಸ್‌ನಲ್ಲಿನ ಬ್ರಾಂಚ್‌ ಆಫೀಸ್‌ನಲ್ಲಿ ಕೆಲಸ ಮಾಡುವಂತೆ ನೇಮಿಸಲಾಯಿತು. ಆಗ ಜಾನ್‌ ಸೆಂಪೆ ಎಂಬವರು ನನ್ನ ಜೊತೆಗಾರರಾದರು. ನಮಗಾದ ಕೆಲವೊಂದು ಅನುಭವಗಳು ಅವಿಸ್ಮರಣೀಯವಾಗಿದ್ದವು. ಒಂದು ದಿನ ನಾನು ಚಿಕ್ಕ ಪಟ್ಟಣವೊಂದರಲ್ಲಿ ಒಬ್ಬ ವಕೀಲರನ್ನು ಅವರ ಕಛೇರಿಯಲ್ಲಿ ಭೇಟಿಯಾದೆ. ಆ ವ್ಯಕ್ತಿ ಕುಪಿತನಾಗಿ ತನ್ನ ಮೇಜಿನೊಳಗಿಂದ ಪಿಸ್ತೂಲನ್ನು ಹೊರತೆಗೆದು ಅಲ್ಲಿಂದ ಹೊರಡುವಂತೆ ನನಗೆ ಬೆದರಿಸಿದ. ನಾನು ಮೌನವಾಗಿ ಪ್ರಾರ್ಥಿಸಿ ಬೈಬಲ್‌ನ ಈ ಸಲಹೆಯನ್ನು ನೆನಪಿಸಿಕೊಂಡೆ: “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು.” (ಜ್ಞಾನೋ. 15:1) ಆದ್ದರಿಂದ ನಾನು ಹೀಗಂದೆ: “ನಾನಿಲ್ಲಿ ಒಬ್ಬ ಸ್ನೇಹಿತನೋಪಾದಿ ನಿಮಗಾಗಿ ಒಂದು ಒಳ್ಳೇ ಸಂದೇಶವನ್ನು ತೆಗೆದುಕೊಂಡು ಬಂದಿರುವೆ. ನೀವು ನಿಮ್ಮನ್ನೇ ನಿಯಂತ್ರಿಸಿಕೊಂಡದ್ದಕ್ಕೆ ಧನ್ಯವಾದ.” ಆಗ ಆ ವ್ಯಕ್ತಿ ಪಿಸ್ತೂಲಿನ ಗುಂಡಿಯ ಮೇಲಿದ್ದ ತನ್ನ ಬೆರಳನ್ನು ತೆಗೆದನು. ನಾನು ಅವನ ಕಛೇರಿಯಿಂದ ಜಾಗರೂಕವಾಗಿ ಹಿಂದೆ ಹೆಜ್ಜೆ ಹಾಕುತ್ತಾ ಹೊರಬಂದೆ.

ಜಾನ್‌ ನನಗೆ ಸಿಕ್ಕಿದಾಗ, ಅವನಿಗೂ ಒಂದು ಕಠಿನ ಅನುಭವವಾದದ್ದಾಗಿ ಹೇಳಿದನು. ಅವನನ್ನು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು. ಏಕೆಂದರೆ ಅವನು ಭೇಟಿಯಾಗಿದ್ದ ಸ್ತ್ರೀಯೊಬ್ಬಳು ಅವನೊಂದು ದೊಡ್ಡ ಮೊತ್ತದ ನೋಟನ್ನು ಕಳವು ಮಾಡಿದ್ದಾನೆಂಬ ಸುಳ್ಳಾರೋಪ ಹೊರಿಸಿದ್ದಳು. ಆ ನೋಟನ್ನು ಹುಡುಕಲು ಠಾಣೆಯಲ್ಲಿ ಜಾನ್‌ನನ್ನು ವಿವಸ್ತ್ರಗೊಳಿಸಲಾಯಿತು. ಖಂಡಿತ ಅವನ ಬಳಿ ಆ ನೋಟ್‌ ಇರಲಿಲ್ಲ. ನಿಜವಾದ ಕಳ್ಳ ನಂತರ ಸಿಕ್ಕಿಬಿದ್ದ.

ಈ ಎರಡೂ ಘಟನೆಗಳು ಸಾಮಾನ್ಯವಾಗಿ ಶಾಂತವಾಗಿರುತ್ತಿದ್ದ ಆ ಪಟ್ಟಣದಲ್ಲಿ ದಾಂಧಲೆ ಎಬ್ಬಿಸಿದವು ಮತ್ತು ನಮ್ಮ ಕೆಲಸಕ್ಕೆ ಪುಕ್ಕಟೆ ಪ್ರಚಾರವೂ ಸಿಕ್ಕಿತು.

ಗುಪ್ತ ಕಾರ್ಯಾಚರಣೆಗಳು

ನೆರೆಯ ದೇಶವಾದ ಲಾಟ್ವಿಯದಲ್ಲಿ ಸಾರುವ ಕೆಲಸಕ್ಕೆ ನಿಷೇಧವಿದ್ದದ್ದರಿಂದ ಅಲ್ಲಿಗೆ ಬೈಬಲ್‌ ಪ್ರಕಾಶನಗಳನ್ನು ಕೊಂಡೊಯ್ಯುವುದು ಅಪಾಯಕಾರಿ ನೇಮಕವಾಗಿತ್ತು. ತಿಂಗಳಿಗೊಮ್ಮೆ ನಾವು ರಾತ್ರಿ ರೈಲುಗಾಡಿಯಲ್ಲಿ ಲಾಟ್ವಿಯಕ್ಕೆ ಹೋಗಿಬರುತ್ತಿದ್ದೆವು. ಕೆಲವೊಮ್ಮೆ ಸಾಹಿತ್ಯಗಳನ್ನು ನೀಡಿದ ಬಳಿಕ ನಾವು ಹೆಚ್ಚಿನ ಸಾಹಿತ್ಯಗಳನ್ನು ತರಲಿಕ್ಕಾಗಿ ಇನ್ನೂ ಮುಂದಕ್ಕೆ ಅಂದರೆ ಎಸ್ಟೊನಿಯಾಕ್ಕೆ ಪ್ರಯಾಣಿಸುತ್ತಿದ್ದೆವು. ಹಿಂದಿರುಗಿ ಬರುವಾಗ ಅದನ್ನು ಲಾಟ್ವಿಯದಲ್ಲಿ ಕೊಟ್ಟುಬರುತ್ತಿದ್ದೆವು.

ಒಂದು ಸಂದರ್ಭದಲ್ಲಿ, ಕಸ್ಟಮ್ಸ್‌ ಅಧಿಕಾರಿಗೆ ಯಾರೋ ನಮ್ಮ ಚಟುವಟಿಕೆಯ ಬಗ್ಗೆ ಸುಳಿವು ಕೊಟ್ಟದ್ದರಿಂದ ಆತ ನಮಗೆ ರೈಲುಗಾಡಿಯಿಂದ ಕೆಳಗಿಳಿಯುವಂತೆ ಹೇಳಿದ ಮತ್ತು ಸಾಹಿತ್ಯಗಳನ್ನು ತನ್ನ ಮೇಲಧಿಕಾರಿಯ ಬಳಿ ತರುವಂತೆ ಹೇಳಿದ. ನಾನು ಮತ್ತು ಜಾನ್‌ ಇಬ್ಬರೂ ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದೆವು. ಆಶ್ಚರ್ಯಕರವಾಗಿ ಆ ಅಧಿಕಾರಿ ತನ್ನ ಮೇಲಧಿಕಾರಿಗೆ ನಾವೇನನ್ನು ತಂದಿದ್ದೇವೆಂದು ಹೇಳಲಿಲ್ಲ. ಬದಲಿಗೆ “ಇವರಿಗೆ ತಮ್ಮ ಬಳಿಯಿರುವ ಸರಕುಗಳ ಬಗ್ಗೆ ಏನೋ ಹೇಳಿಕೆ ಕೊಡಲಿಕ್ಕಿದೆ” ಎಂದಷ್ಟೇ ಹೇಳಿದ. ನಮ್ಮ ಸಂಕಷ್ಟಕರ ಲೋಕದಲ್ಲಿ ನಡೆಯುತ್ತಿರುವ ಘಟನೆಗಳ ಮಹತ್ತ್ವವನ್ನು ಮನಗಾಣಲು ಶಾಲಾ ಕಾಲೇಜುಗಳಲ್ಲಿ ವ್ಯಕ್ತಿಗಳಿಗೆ ಸಹಾಯ ಮಾಡುವ ಸಾಹಿತ್ಯಗಳ ಬಗ್ಗೆ ಅವರಿಗೆ “ಹೇಳಿಕೆ ಕೊಟ್ಟೆ.” ಆ ಅಧಿಕಾರಿ ನಮಗೆ ಮುಂದೆ ಹೋಗಲು ಅನುಮತಿ ನೀಡಿದ ಮತ್ತು ನಾವು ಸುರಕ್ಷಿತವಾಗಿ ಸಾಹಿತ್ಯಗಳನ್ನು ತಲುಪಿಸಿದೆವು.

ಬಾಲ್ಟಿಕ್‌ ರಾಜ್ಯಗಳಲ್ಲಿನ ರಾಜಕೀಯ ವಾತಾವರಣ ಹದಗೆಟ್ಟಿದ್ದರಿಂದ ಜನರು ಯೆಹೋವನ ಸಾಕ್ಷಿಗಳನ್ನು ಹೆಚ್ಚು ವಿರೋಧಿಸಲಾರಂಭಿಸಿದರು. ನಮ್ಮ ಸಾರುವ ಕೆಲಸಕ್ಕೆ ಲಿಥುವೇನಿಯಾದಲ್ಲೂ ನಿಷೇಧ ಹೇರಲಾಯಿತು. ಆ್ಯಂಡ್ರೂ ಮತ್ತು ಜಾನ್‌ರನ್ನು ಗಡೀಪಾರು ಮಾಡಲಾಯಿತು. ಅಲ್ಲದೇ, ಎರಡನೇ ಲೋಕ ಯುದ್ಧದ ಕಾರ್ಮೋಡಗಳು ಕವಿಯಲಾರಂಭಿಸಿದ್ದರಿಂದ ಬ್ರಿಟಿಷ್‌ ಪ್ರಜೆಗಳೆಲ್ಲರೂ ಆ ದೇಶವನ್ನು ಬಿಟ್ಟುಹೋಗುವಂತೆ ಹೇಳಲಾಯಿತು. ಆದ್ದರಿಂದ ನಾನು ಕೂಡ ದುಃಖದಿಂದ ಹಿಂದಿರುಗಿದೆ.

ಉತ್ತರ ಐರ್ಲೆಂಡ್‌ನಲ್ಲಿ ಸುಯೋಗಗಳು ಮತ್ತು ಆಶೀರ್ವಾದಗಳು

ಈ ಸಮಯದಷ್ಟಕ್ಕೆ ನನ್ನ ಹೆತ್ತವರು ಉತ್ತರ ಐರ್ಲೆಂಡ್‌ಗೆ ಸ್ಥಳಾಂತರಿಸಿದ್ದರು. 1937ರಲ್ಲಿ ನಾನು ಅವರ ಜೊತೆ ಸೇರಿದೆ. ಎರಡನೇ ಲೋಕ ಯುದ್ಧದ ಕುರಿತ ಜನರ ಆವೇಶದಿಂದಾಗಿ ಉತ್ತರ ಐರ್ಲೆಂಡ್‌ನಲ್ಲೂ ನಮ್ಮ ಸಾಹಿತ್ಯಗಳನ್ನು ನಿಷೇಧಿಸಲಾಯಿತು. ಹಾಗಿದ್ದರೂ ಯುದ್ಧದ ಅವಧಿಯಾದ್ಯಂತ ನಾವು ಸಾರುವುದನ್ನು ಮುಂದುವರಿಸಿದೆವು. ಎರಡನೇ ಲೋಕ ಯುದ್ಧದ ನಂತರ ನಮ್ಮ ಕೆಲಸವನ್ನು ಯಾವುದೇ ಕಾನೂನುರೀತ್ಯ ಅಡ್ಡಿತಡೆಗಳಿಲ್ಲದೇ ಮಾಡಸಾಧ್ಯವಿತ್ತು. ಹ್ಯಾರಲ್ಡ್‌ ಕಿಂಗ್‌ ಎಂಬ ಅನುಭವೀ ಪಯನೀಯರರು (ತದನಂತರ ಚೀನಾದಲ್ಲಿ ಮಿಷನೆರಿಯಾಗಿ ಸೇವೆಸಲ್ಲಿಸಿದರು) ಹೊರಾಂಗಣದಲ್ಲಿ ಸಾರ್ವಜನಿಕ ಭಾಷಣಗಳನ್ನು ಕೊಡುವುದರಲ್ಲಿ ಮುಂದಾಳುತ್ವ ವಹಿಸಿದರು. “ಈ ಶನಿವಾರ ನಾನು ಪ್ರಥಮ ಹೊರಾಂಗಣ-ಭಾಷಣ ಕೊಡಲಿದ್ದೇನೆ” ಎಂದು ಅವರು ಹೇಳಿದರು. ನಂತರ ಅವರು ನನ್ನ ಕಡೆಗೆ ನೋಡಿ ಹೇಳಿದ್ದು: “ಮುಂದಿನ ಶನಿವಾರ ನಿನ್ನ ಸರದಿ.” ಇದನ್ನು ಕೇಳಿ ನಾನು ಬೆಚ್ಚಿಬಿದ್ದೆ.

ನನ್ನ ಆ ಪ್ರಥಮ ಭಾಷಣ ನನಗಿನ್ನೂ ಚೆನ್ನಾಗಿ ನೆನಪಿದೆ. ನೂರಾರು ಜನ ಹಾಜರಿದ್ದರು. ಒಂದು ಪೆಟ್ಟಿಗೆಯ ಮೇಲೆ ನಿಂತುಕೊಂಡು ಯಾವುದೇ ಧ್ವನಿವರ್ಧಕದ ಸಹಾಯವಿಲ್ಲದೇ ನಾನದನ್ನು ಪ್ರಸ್ತುತಪಡಿಸಿದೆ. ಭಾಷಣದ ಕೊನೆಯಲ್ಲಿ ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದು ನನ್ನ ಕೈಕುಲುಕಿ, ತನ್ನನ್ನು ಬಿಲ್‌ ಸ್ಮಿತ್‌ ಎಂದು ಪರಿಚಯಿಸಿಕೊಂಡ. ಅವನು ಗುಂಪನ್ನು ಗಮನಿಸಿ ಇಲ್ಲಿ ಏನಾಗುತ್ತಿದೆಯೆಂದು ನೋಡಲು ಬಂದದ್ದಾಗಿ ಹೇಳಿದ. ನನಗೆ ಬಳಿಕ ತಿಳಿದುಬಂದದ್ದೇನೆಂದರೆ ಬಿಲ್‌ನನ್ನು ನನ್ನ ತಂದೆ ಈ ಮುಂಚೆ ಭೇಟಿಯಾಗಿದ್ದರು. ಆದರೆ ನನ್ನ ತಂದೆ ಮತ್ತು ಮಲತಾಯಿ ಪಯನೀಯರ್‌ ಸೇವೆ ಮಾಡಲು ಡಬ್ಲಿನ್‌ಗೆ ಸ್ಥಳಾಂತರಿಸಿದ್ದರಿಂದ ಅವನೊಂದಿಗಿನ ಸಂಪರ್ಕ ಕಡಿದುಹೋಗಿತ್ತು. ನಾವು ಬೈಬಲ್‌ ಅಧ್ಯಯನವನ್ನು ಆರಂಭಿಸಿದೆವು ಮತ್ತು ಕಾಲಾನಂತರ ಬಿಲ್‌ನ ಕುಟುಂಬದ ಒಂಭತ್ತು ಮಂದಿ ಸದಸ್ಯರು ಯೆಹೋವನ ಸೇವಕರಾದರು.

ಅನಂತರ ನಾನು ಬೆಲ್‌ಫಾಸ್ಟ್‌ನ ಹೊರವಲಯದಲ್ಲಿದ್ದ ದೊಡ್ಡ ಬಂಗಲೆಗಳಿಗೆ ಹೋಗಿ ಸಾರಲಾರಂಭಿಸಿದೆ. ಅಲ್ಲಿ ನಾನು ಹಿಂದೆ ಲಿಥುವೇನಿಯಾದಲ್ಲಿ ವಾಸವಾಗಿದ್ದ ರಷ್ಯಾದ ಮಹಿಳೆಯೊಬ್ಬಳನ್ನು ಭೇಟಿಯಾದೆ. ನಾನು ಕೆಲವು ಸಾಹಿತ್ಯಗಳನ್ನು ಆಕೆಗೆ ತೋರಿಸಿದಾಗ ಆಕೆ ಒಂದು ಪುಸ್ತಕದ ಕಡೆಗೆ ಕೈತೋರಿಸಿ ಹೀಗೆ ಹೇಳಿದಳು: “ಇದು ನನ್ನ ಬಳಿ ಇದೆ. ಕಾವ್ನಾಸ್‌ನ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರರಾಗಿರುವ ನನ್ನ ದೊಡ್ಡಪ್ಪ ಅದನ್ನು ನನಗೆ ಕೊಟ್ಟರು.” ಆಕೆ ನನಗೆ ಪೋಲಿಷ್‌ ಭಾಷೆಯಲ್ಲಿದ್ದ ಸೃಷ್ಟಿ ಪುಸ್ತಕವನ್ನು ತೋರಿಸಿದಳು. ಪುಸ್ತಕದ ಅಂಚುಗಳಲ್ಲೆಲ್ಲಾ ಟಿಪ್ಪಣಿಗಳು ತುಂಬಿದ್ದವು. ಕಾವ್ನಾಸ್‌ನಲ್ಲಿ ಆಕೆಯ ದೊಡ್ಡಪ್ಪನಿಗೆ ಆ ಪುಸ್ತಕವನ್ನು ಕೊಟ್ಟಿದ್ದು ನಾನೇ ಎಂದಾಗ ಆಕೆಗೆ ತುಂಬ ಆಶ್ಚರ್ಯವಾಯಿತು!—ಪ್ರಸಂ. 11:1.

ಅಲ್ಲಿಂದ ನಾನು ಉತ್ತರ ಐರ್ಲೆಂಡ್‌ಗೆ ಹೋಗಲಿದ್ದಾಗ ಜಾನ್‌ ಸೆಂಪೆ, ಬೈಬಲ್‌ ಸತ್ಯದಲ್ಲಿ ಸ್ವಲ್ಪ ಆಸಕ್ತಿಯನ್ನು ತೋರಿಸಿದ್ದ ಅವರ ತಂಗಿ ನೆಲ್ಲಿ ಎಂಬಾಕೆಯನ್ನು ಭೇಟಿಮಾಡುವಂತೆ ನನ್ನಲ್ಲಿ ಕೇಳಿಕೊಂಡರು. ನಾನು ಮತ್ತು ನನ್ನ ಅಕ್ಕ ಕಾನಿ ಅವಳೊಂದಿಗೆ ಬೈಬಲ್‌ ಅಧ್ಯಯನ ನಡೆಸಿದೆವು. ನೆಲ್ಲಿ ಕ್ಷಿಪ್ರ ಪ್ರಗತಿ ಮಾಡಿ ತನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡಳು. ಕಾಲಾನಂತರ, ನಾವಿಬ್ಬರು ಮದುವೆಯಾದೆವು.

ನಾನು ಮತ್ತು ನೆಲ್ಲಿ ಯೆಹೋವನ ಸೇವೆಯಲ್ಲಿ ಒಟ್ಟಿಗೆ 56 ವರ್ಷ ಕಳೆದೆವು. ಬೈಬಲ್‌ ಸತ್ಯದ ಜ್ಞಾನವನ್ನು ಪಡೆದುಕೊಳ್ಳುವಂತೆ ನೂರಕ್ಕಿಂತಲೂ ಹೆಚ್ಚು ಮಂದಿಗೆ ಸಹಾಯಮಾಡುವ ಸುಯೋಗ ನಮ್ಮದಾಗಿತ್ತು. ಜೊತೆಯಾಗಿ ಅರ್ಮಗೆದೋನನ್ನು ಪಾರಾಗಿ ಯೆಹೋವನ ಹೊಸ ಲೋಕಕ್ಕೆ ಕಾಲಿಡುವ ಬಯಕೆ ನಮಗಿತ್ತು. ಆದರೆ, 1998ರಲ್ಲಿ ಮರಣವೆಂಬ ಕ್ರೂರ ವೈರಿ ಅವಳನ್ನು ನನ್ನಿಂದ ಕಸಿದುಕೊಂಡಿತು. ಇದರಿಂದ ನಾನು ಜರ್ಜರಿತನಾದೆ. ನನ್ನ ಜೀವನದ ಅತ್ಯಂತ ಕಷ್ಟಕರ ಪರೀಕ್ಷೆ ಇದಾಗಿತ್ತು.

ಬಾಲ್ಟಿಕ್‌ ರಾಜ್ಯಗಳಿಗೆ ಹಿಂದಿರುಗಿದ್ದು

ನೆಲ್ಲಿ ಮರಣಹೊಂದಿ ಒಂದು ವರ್ಷವಾಗುವಷ್ಟರಲ್ಲಿ ನನಗೊಂದು ಅದ್ಭುತ ಆಶೀರ್ವಾದ ಸಿಕ್ಕಿತು. ಎಸ್ಟೊನಿಯಾದ ತಾಲ್ಲಿನ್‌ನಲ್ಲಿರುವ ಬ್ರಾಂಚ್‌ ಆಫೀಸನ್ನು ಸಂದರ್ಶಿಸುವಂತೆ ನನಗೆ ಆಮಂತ್ರಣ ಸಿಕ್ಕಿತು. ಎಸ್ಟೊನಿಯಾ ಬ್ರಾಂಚ್‌ನ ಸಹೋದರರ ಪತ್ರವೊಂದು ವಿವರಿಸಿದ್ದು: “1920ರ ದಶಕದ ಕೊನೆಯಲ್ಲಿ ಮತ್ತು 1930ರ ಆರಂಭದಲ್ಲಿ ಬಾಲ್ಟಿಕ್‌ ರಾಜ್ಯಗಳಿಗೆ ನೇಮಿಸಲ್ಪಟ್ಟ ಹತ್ತು ಮಂದಿ ಸಹೋದರರಲ್ಲಿ ಬದುಕುಳಿದಿರುವವರು ನೀವೊಬ್ಬರೇ.” ಎಸ್ಟೊನಿಯಾ, ಲಾಟ್ವಿಯ ಮತ್ತು ಲಿಥುವೇನಿಯಾದಲ್ಲಿ ನಡೆದ ಸಾರುವ ಕೆಲಸದ ಚರಿತ್ರೆಯನ್ನು ಬ್ರಾಂಚ್‌ ತಯಾರಿಸುತ್ತಿರುವುದರಿಂದ “ನೀವು ಬರಸಾಧ್ಯವೋ?” ಎಂದು ಸಹ ಆ ಪತ್ರದಲ್ಲಿ ಕೇಳಲಾಗಿತ್ತು.

ಆ ಆರಂಭದ ವರ್ಷಗಳಲ್ಲಿ ನನಗೆ ಮತ್ತು ನನ್ನ ಜೊತೆಗಾರರಿಗಾದ ಅನುಭವಗಳನ್ನು ಪುನಃ ಜ್ಞಾಪಿಸಿಕೊಂಡು ಹೇಳುವುದು ಎಂಥ ಸುಯೋಗವಾಗಿತ್ತು! ಲಾಟ್ವಿಯದಲ್ಲಿ ನಾವು ಆರಂಭದಲ್ಲಿ ಬ್ರಾಂಚ್‌ ಆಫೀಸ್‌ ಆಗಿ ಉಪಯೋಗಿಸುತ್ತಿದ್ದ ಅಪಾರ್ಟ್‌ಮೆಂಟನ್ನು ಮತ್ತು ಸಾಹಿತ್ಯಗಳನ್ನು ಅಡಗಿಸಿಡುತ್ತಿದ್ದ ಆದರೆ ಎಂದೂ ಪೊಲೀಸರ ಕಣ್ಣಿಗೆ ಬೀಳದ ಮಾಳಿಗೆಯ ಮೇಲಿದ್ದ ಸ್ಥಳವನ್ನು ಸಹೋದರರಿಗೆ ತೋರಿಸಿದೆ. ಲಿಥುವೇನಿಯಾದಲ್ಲಿ ನಾನು ಹಿಂದೆ ಪಯನೀಯರ್‌ ಸೇವೆ ಸಲ್ಲಿಸುತ್ತಿದ್ದ ಶಾವ್ಲಿ ಎಂಬ ಚಿಕ್ಕ ಪಟ್ಟಣಕ್ಕೆ ನನ್ನನ್ನು ಕರೆದೊಯ್ಯಲಾಯಿತು. ಅಲ್ಲಿ ನೆರೆದಿದ್ದ ಸಹೋದರರಲ್ಲಿ ಒಬ್ಬನು ನನಗಂದದ್ದು: “ಅನೇಕ ವರ್ಷಗಳ ಹಿಂದೆ ನಾನು ಮತ್ತು ನನ್ನ ತಾಯಿ ಪಟ್ಟಣದಲ್ಲಿ ಒಂದು ಮನೆಯನ್ನು ಕೊಂಡುಕೊಂಡೆವು. ಅಟ್ಟದಲ್ಲಿದ್ದ ಕಸವನ್ನು ಗುಡಿಸಿ ತೆಗೆಯುವಾಗ ನಮಗೆ ದ ಡಿವೈನ್‌ ಪ್ಯ್ಲಾನ್‌ ಆಫ್‌ ದ ಏಜಸ್‌ ಮತ್ತು ದ ಹಾರ್ಪ್‌ ಆಫ್‌ ಗಾಡ್‌ ಎಂಬ ಪುಸ್ತಕಗಳು ಸಿಕ್ಕಿದವು. ಅವುಗಳನ್ನು ಓದಿದಾಗ ಇದೇ ಸತ್ಯ ಎಂದು ನನಗೆ ಗೊತ್ತಾಯಿತು. ಅನೇಕ ವರ್ಷಗಳ ಹಿಂದೆ ಆ ಮನೆಯಲ್ಲಿ ಈ ಪುಸ್ತಕಗಳನ್ನು ಬಿಟ್ಟು ಹೋದವರು ನೀವೇ ಆಗಿರಬೇಕು.”

ಅಷ್ಟುಮಾತ್ರವಲ್ಲದೆ, ನಾನು ಪಯನೀಯರ್‌ ಸೇವೆ ಮಾಡಿದ್ದ ಪಟ್ಟಣದಲ್ಲೇ ನಡೆದ ಸರ್ಕಿಟ್‌ ಸಮ್ಮೇಳನಕ್ಕೂ ಹಾಜರಾದೆ. 65 ವರ್ಷಗಳ ಹಿಂದೆ ನಾನಲ್ಲಿ ಸಮ್ಮೇಳನವನ್ನು ಹಾಜರಾದಾಗ ಬರೀ 35 ಮಂದಿ ಉಪಸ್ಥಿತರಿದ್ದರು. ಈಗ ಅಲ್ಲಿ 1,500ಕ್ಕೂ ಹೆಚ್ಚು ಮಂದಿ ಹಾಜರಾಗಿರುವುದನ್ನು ನೋಡಿದಾಗ ನನಗಾದ ಆನಂದ ಹೇಳತೀರದು! ಖಂಡಿತವಾಗಿಯೂ ಯೆಹೋವನು ಅಲ್ಲಿನ ಕೆಲಸವನ್ನು ಆಶೀರ್ವದಿಸಿದ್ದಾನೆ!

‘ಯೆಹೋವನು ನನ್ನ ಕೈಬಿಡಲಿಲ್ಲ’

ಇತ್ತೀಚೆಗೆ, ನಾನು ಕನಸಲ್ಲೂ ನೆನಸಿರದ ಆಶೀರ್ವಾದವೊಂದು ನನಗೆ ಸಿಕ್ಕಿತು. ಕ್ರೈಸ್ತ ಸಹೋದರಿಯಾದ ಬೀ ನನ್ನನ್ನು ಮದುವೆಯಾಗಲು ಒಪ್ಪಿದರು. 2006ರ ನವೆಂಬರ್‌ನಲ್ಲಿ ನಮ್ಮ ಮದುವೆಯಾಯಿತು.

ಜೀವನದಲ್ಲಿ ಏನು ಮಾಡಬೇಕೆಂದು ಯೋಚಿಸುತ್ತಿರುವ ಯುವ ಜನರಿಗೆ, “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂಬ ದೇವಪ್ರೇರಿತ ಮಾತುಗಳನ್ನು ಪಾಲಿಸುವುದು ವಿವೇಕಯುತವೆಂಬ ಭರವಸೆ ನಾನು ಕೊಡಬಲ್ಲೆ. ಕೀರ್ತನೆಗಾರನಂತೆ ನಾನೀಗ ಸಂಭ್ರಮಿಸಬಲ್ಲೆ: “ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ; ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ. ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.”—ಕೀರ್ತ. 71:17, 18.

[ಪುಟ 25ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಲಾಟ್ವಿಯಕ್ಕೆ ಸಾಹಿತ್ಯಗಳನ್ನು ಕೊಂಡೊಯ್ಯುವುದು ಅಪಾಯಕಾರಿ ನೇಮಕವಾಗಿತ್ತು

ಎಸ್ಟೊನಿಯಾ

ತಾಲ್ಲಿನ್‌

ರೀಗ ಕೊಲ್ಲಿ

ಲಾಟ್ವಿಯ

ರೀಗ

ಲಿಥುವೇನಿಯಾ

ವಿಲ್‌ನಿಯಸ್‌

ಕಾವ್ನಾಸ್‌

[ಪುಟ 26ರಲ್ಲಿರುವ ಚಿತ್ರ]

ನಾನು 15ರ ಪ್ರಾಯದಲ್ಲಿ ಸ್ಕಾಟ್ಲೆಂಡ್‌ನಲ್ಲಿ ಕಾಲ್‌ಪೋರ್ಟರ್‌ (ಪಯನೀಯರ್‌) ಆಗಿ ಸೇವೆ ಸಲ್ಲಿಸಲಾರಂಭಿಸಿದೆ

[ಪುಟ 26ರಲ್ಲಿರುವ ಚಿತ್ರ]

ನೆಲ್ಲಿ ಮತ್ತು ನಾನು 1942ರಲ್ಲಿ ಮದುವೆಯಾದಾಗ