ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಯೆಂಬ “ಉತ್ಕೃಷ್ಟವಾದ ಮಾರ್ಗವನ್ನು” ನೀವು ಅನುಸರಿಸುತ್ತೀರೋ?

ಪ್ರೀತಿಯೆಂಬ “ಉತ್ಕೃಷ್ಟವಾದ ಮಾರ್ಗವನ್ನು” ನೀವು ಅನುಸರಿಸುತ್ತೀರೋ?

ಪ್ರೀತಿಯೆಂಬ “ಉತ್ಕೃಷ್ಟವಾದ ಮಾರ್ಗವನ್ನು” ನೀವು ಅನುಸರಿಸುತ್ತೀರೋ?

“ದೇವರು ಪ್ರೀತಿಯಾಗಿದ್ದಾನೆ.” ಅಪೊಸ್ತಲ ಯೋಹಾನನ ಈ ಮಾತುಗಳು ದೇವರ ಅತಿ ಪ್ರಧಾನ ಗುಣವನ್ನು ಗುರುತಿಸುತ್ತವೆ. (1 ಯೋಹಾ. 4:8) ಮಾನವಕುಲದ ಮೇಲೆ ದೇವರಿಗಿರುವ ಪ್ರೀತಿಯೇ ನಮ್ಮನ್ನು ಆತನ ಸಮೀಪಕ್ಕೆ ಸೆಳೆದು ಆತನೊಂದಿಗೆ ವೈಯಕ್ತಿಕ ಸಂಬಂಧವನ್ನು ಇಟ್ಟುಕೊಳ್ಳುವಂತೆ ಸಾಧ್ಯಮಾಡುತ್ತದೆ. ದೇವರ ಪ್ರೀತಿ ಬೇರೆ ಯಾವ ವಿಧದಲ್ಲಿ ನಮ್ಮನ್ನು ಪ್ರಭಾವಿಸುತ್ತದೆ? “ನಾವೇನನ್ನು ಪ್ರೀತಿಸುತ್ತೇವೋ ಅದೇ ನಮ್ಮನ್ನು ರೂಪಿಸುತ್ತದೆ” ಎಂಬ ಮಾತಿದೆ. ಈ ಮಾತು ಸತ್ಯ. ಅಷ್ಟೇ ಅಲ್ಲ, ನಾವು ಯಾರನ್ನು ಪ್ರೀತಿಸುತ್ತೇವೋ ಮತ್ತು ನಮ್ಮನ್ನು ಯಾರು ಪ್ರೀತಿಸುತ್ತಾರೋ ಅವರು ಸಹ ನಮ್ಮನ್ನು ರೂಪಿಸುತ್ತಾರೆ ಎಂಬುದೂ ನಿಜ. ನಮ್ಮನ್ನು ದೇವರ ಸ್ವರೂಪದಲ್ಲಿ ಸೃಷ್ಟಿಸಲಾಗಿರುವುದರಿಂದ ಆತನ ಪ್ರೀತಿಯನ್ನು ಪ್ರತಿಫಲಿಸುವ ಸಾಮರ್ಥ್ಯ ನಮಗಿದೆ. (ಆದಿ. 1:27) ಆದ್ದರಿಂದಲೇ ಅಪೊಸ್ತಲ ಯೋಹಾನನು ಬರೆದದ್ದು: “ಆತನು [ದೇವರು] ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ” ನಾವಾತನನ್ನು ಪ್ರೀತಿಸುತ್ತೇವೆ.—1 ಯೋಹಾ. 4:19.

ಪ್ರೀತಿಯನ್ನು ಬಣ್ಣಿಸುವ ನಾಲ್ಕು ಪದಗಳು

ಪ್ರೀತಿಯು “ಉತ್ಕೃಷ್ಟವಾದ ಮಾರ್ಗ” ಆಗಿದೆ ಎಂದು ಅಪೊಸ್ತಲ ಪೌಲನು ಹೇಳಿದನು. (1 ಕೊರಿಂ. 12:31) ಅವನು ಪ್ರೀತಿಯನ್ನು ಹಾಗೆ ಬಣ್ಣಿಸಿದ್ದೇಕೆ? ಅವನು ಯಾವ ವಿಧದ ಪ್ರೀತಿಗೆ ಸೂಚಿಸುತ್ತಿದ್ದನು? ಇದನ್ನು ಪತ್ತೆಹಚ್ಚಲಿಕ್ಕಾಗಿ ಮೊದಲು “ಪ್ರೀತಿ” ಎಂಬ ಪದದ ಅರ್ಥವನ್ನು ನಿಕಟವಾಗಿ ಪರಿಶೀಲಿಸೋಣ.

ಪುರಾತನ ಗ್ರೀಕರು ಪ್ರೀತಿಯನ್ನು ಬಣ್ಣಿಸಲು, ಸ್ಟೊರ್ಜೆ, ಈರೊಸ್‌, ಫಿಲಿಯ, ಅಗಾಪೆ ಎಂಬ ನಾಲ್ಕು ಮೂಲಪದಗಳನ್ನು ವಿವಿಧ ರೂಪಗಳಲ್ಲಿ ಬಳಸುತ್ತಿದ್ದರು. ಇವುಗಳಲ್ಲಿ, “ದೇವರು ಪ್ರೀತಿಯಾಗಿದ್ದಾನೆ” ಎಂದು ವರ್ಣಿಸುವಾಗ ಅಗಾಪೆ ಎಂಬ ಪದವನ್ನು ಬಳಸಲಾಗಿದೆ. * ಈ ವಿಧದ ಪ್ರೀತಿಯ ಕುರಿತು ಪ್ರೊಫೆಸರ್‌ ವಿಲ್ಯಮ್‌ ಬಾರ್ಕ್ಲೆ ತಮ್ಮ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ ಎಂಬ ಪುಸ್ತಕದಲ್ಲಿ ಹೇಳಿದ್ದು: “ಅಗಾಪೆ ಎಂಬ ಪ್ರೀತಿಯು ಮನಸ್ಸಿಗೆ ಸಂಬಂಧಿಸಿದ್ದು: ಅದು ನಮ್ಮ ಹೃದಯದಲ್ಲಿ ಸಹಜವಾಗಿ ಹುಟ್ಟುವ ಪ್ರೀತಿಯಲ್ಲ; ಅದೊಂದು ಮೂಲತತ್ತ್ವವಾಗಿದ್ದು ಅದಕ್ಕನುಸಾರ ಜೀವಿಸಲು ನಾವು ಉದ್ದೇಶಪೂರ್ವಕವಾಗಿ ಪ್ರಯತ್ನಿಸಬೇಕಾಗಿದೆ. ಅಗಾಪೆಯು ಪೂರ್ಣವಾಗಿ ಒಬ್ಬ ವ್ಯಕ್ತಿಯ ಮನಸ್ಸಿಗೆ ಸಂಬಂಧಪಟ್ಟದ್ದು.” ಇಲ್ಲಿ ಅಗಾಪೆ ಎಂಬುದು, ಮೂಲತತ್ತ್ವಗಳನ್ನು ಪಾಲಿಸಲಿಕ್ಕಾಗಿ ತೋರಿಸಲಾಗುವ ಪ್ರೀತಿಯಾಗಿದೆ. ಇದರಲ್ಲಿ ಕೆಲವೊಮ್ಮೆ ಬಲವಾದ ಭಾವನೆಗಳೂ ಸೇರಿರುತ್ತವೆ. ಒಳ್ಳೇ ಹಾಗೂ ಕೆಟ್ಟ ಮೂಲತತ್ತ್ವಗಳಿರುವುದರಿಂದ, ಸ್ವತಃ ಯೆಹೋವ ದೇವರು ಬೈಬಲ್‌ನಲ್ಲಿ ಸ್ಥಾಪಿಸಿಟ್ಟಿರುವ ಒಳ್ಳೇ ಮೂಲತತ್ತ್ವಗಳಿಂದ ಕ್ರೈಸ್ತರು ಮಾರ್ಗದರ್ಶಿಸಲ್ಪಡಬೇಕು. ಅಗಾಪೆಯ ಕುರಿತು ಬೈಬಲ್‌ನಲ್ಲಿ ಕೊಡಲಾಗಿರುವ ವರ್ಣನೆಗಳನ್ನು, ಪ್ರೀತಿಯನ್ನು ವರ್ಣಿಸಲು ಬೈಬಲ್‌ ಉಪಯೋಗಿಸುವ ಇತರ ಪದಗಳೊಂದಿಗೆ ಹೋಲಿಸಿ ನೋಡುವಾಗ ನಾವು ತೋರಿಸಬೇಕಾದ ಪ್ರೀತಿಯ ಹೆಚ್ಚು ಉತ್ತಮ ತಿಳುವಳಿಕೆ ನಮಗೆ ಸಿಗುವುದು.

ಕುಟುಂಬ ವೃತ್ತದೊಳಗೆ ಪ್ರೀತಿ

ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಕೂಡಿರುವ ಕುಟುಂಬದ ಭಾಗವಾಗಿರುವುದು ಎಷ್ಟು ಆಹ್ಲಾದಕರ! ಕುಟುಂಬದ ಸದಸ್ಯರ ನಡುವಿನ ಸ್ವಾಭಾವಿಕ ಪ್ರೀತಿಗೆ ಸೂಚಿಸುವಾಗ ಸ್ಟೊರ್ಜೆ ಎಂಬ ಗ್ರೀಕ್‌ ಪದವನ್ನು ಅನೇಕವೇಳೆ ಬಳಸಲಾಗುತ್ತಿತ್ತು. ಕ್ರೈಸ್ತರು ತಮ್ಮ ಕುಟುಂಬ ಸದಸ್ಯರಿಗೆ ಪ್ರೀತಿ ತೋರಿಸುತ್ತಾರೆ. ಆದರೆ ಕಡೇ ದಿವಸಗಳಲ್ಲಿ ಹೆಚ್ಚಿನ ಜನರು ‘ಸ್ವಾಭಾವಿಕ ಮಮತೆಯಿಲ್ಲದವರು’ ಆಗಿರುವರೆಂದು ಪೌಲನು ಪ್ರವಾದಿಸಿದನು. *2 ತಿಮೊ. 3:1, 3.

ದುಃಖಕರವಾಗಿ, ಕುಟುಂಬ ಸದಸ್ಯರ ಮಧ್ಯೆ ಇರಬೇಕಾದ ಸ್ವಾಭಾವಿಕ ಪ್ರೀತಿ ಇಂದಿನ ಜಗತ್ತಿನಲ್ಲಿ ಕಣ್ಮರೆಯಾಗುತ್ತಿದೆ. ಅನೇಕ ತಾಯಂದಿರು ಗರ್ಭಪಾತ ಮಾಡಿಸಿಕೊಳ್ಳುವುದು ಏಕೆ? ಅನೇಕ ಮಕ್ಕಳು ತಮ್ಮ ವೃದ್ಧ ಹೆತ್ತವರ ಪರಾಮರಿಕೆ ಮಾಡುತ್ತಿಲ್ಲ ಏಕೆ? ವಿವಾಹ ವಿಚ್ಛೇದದ ಪ್ರಮಾಣ ಗಗನಕ್ಕೇರುತ್ತಿದೆ ಏಕೆ? ಇದಕ್ಕೆಲ್ಲ ಉತ್ತರ ಒಂದೇ: ಜನರಲ್ಲಿ ಸ್ವಾಭಾವಿಕ ಮಮತೆಯೇ ಇಲ್ಲ.

ಅಷ್ಟುಮಾತ್ರವಲ್ಲದೆ, “ಹೃದಯವು ಎಲ್ಲಕ್ಕಿಂತಲೂ ವಂಚಕ” ಎಂಬುದಾಗಿ ಬೈಬಲ್‌ ಬೋಧಿಸುತ್ತದೆ. (ಯೆರೆ. 17:9) ಕೌಟುಂಬಿಕ ಪ್ರೀತಿಯಲ್ಲಿ ನಮ್ಮ ಹೃದಯ ಮತ್ತು ಭಾವನೆಗಳು ಒಳಗೊಂಡಿವೆ. ಹಾಗಿದ್ದರೂ ಗಂಡನು ತನ್ನ ಹೆಂಡತಿಗೆ ತೋರಿಸಬೇಕಾಗಿರುವ ಪ್ರೀತಿಯನ್ನು ವರ್ಣಿಸುವಾಗ ಪೌಲನು ಅಗಾಪೆ ಎಂಬ ಪದವನ್ನು ಬಳಸಿದ್ದು ಆಸಕ್ತಿಕರ. ಪೌಲನು ಆ ಪ್ರೀತಿಯನ್ನು ಕ್ರಿಸ್ತನು ಸಭೆಗೆ ತೋರಿಸಿದ ಪ್ರೀತಿಗೆ ಹೋಲಿಸಿದನು. (ಎಫೆ. 5:28, 29) ಈ ಪ್ರೀತಿಯು ಕುಟುಂಬ ಏರ್ಪಾಡಿನ ಮೂಲಕರ್ತನಾದ ಯೆಹೋವನ ಮೂಲತತ್ತ್ವಗಳ ಮೇಲಾಧರಿತವಾಗಿದೆ.

ಕುಟುಂಬ ಸದಸ್ಯರ ಮೇಲೆ ನಮಗಿರುವ ಸಾಚಾ ಪ್ರೀತಿಯು ನಾವು ನಮ್ಮ ವೃದ್ಧ ಹೆತ್ತವರ ಪರಾಮರಿಕೆ ಮಾಡುವಂತೆ ಅಥವಾ ನಮ್ಮ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಪ್ರೇರೇಪಿಸುತ್ತದೆ. ಇದು ಹೆತ್ತವರು ತಮ್ಮ ಮಕ್ಕಳಿಗೆ ಅಗತ್ಯವಿರುವಾಗ ಪ್ರೀತಿಭರಿತ ಶಿಸ್ತನ್ನು ನೀಡುವಂತೆ ಪ್ರಚೋದಿಸುತ್ತದೆ ಹಾಗೂ ಮಕ್ಕಳನ್ನು ಅತಿಯಾಗಿ ಸಡಿಲುಬಿಡುವಂತೆ ಮಾಡುವ ಅತಿಭಾವುಕತೆಯ ಪ್ರೀತಿ ತೋರಿಸದಂತೆ ತಡೆಯುತ್ತದೆ.—ಎಫೆ. 6:1-4.

ಪ್ರಣಯಾತ್ಮಕ ಪ್ರೀತಿ ಹಾಗೂ ಬೈಬಲ್‌ ಮೂಲತತ್ತ್ವಗಳು

ಗಂಡ ಹೆಂಡತಿ ಪರಸ್ಪರ ದೈಹಿಕ ಪ್ರೀತಿಯನ್ನು ಹಂಚುವುದು ನಿಜವಾಗಿಯೂ ದೇವರು ಕೊಟ್ಟ ಉಡುಗೊರೆಯಾಗಿದೆ. (ಜ್ಞಾನೋ. 5:15-17) ಹಾಗಿದ್ದರೂ ಪ್ರಣಯಾತ್ಮಕ ಪ್ರೀತಿಯನ್ನು ಸೂಚಿಸುವ ಈರೊಸ್‌ ಎಂಬ ಪದವನ್ನು ಪ್ರೇರಿತ ಬೈಬಲ್‌ ಲೇಖಕರು ಉಪಯೋಗಿಸಲಿಲ್ಲ. ಏಕೆ? ಕೆಲವು ವರ್ಷಗಳ ಹಿಂದೆ ಕಾವಲಿನಬುರುಜು ಪತ್ರಿಕೆ ಹೀಗೆ ಹೇಳಿತ್ತು: “ಇಂದು ಇಡೀ ಪ್ರಪಂಚವು ಪುರಾತನ ಗ್ರೀಕರು ಮಾಡಿದಂಥ ತಪ್ಪನ್ನೇ ಮಾಡುತ್ತಿರುವಂತೆ ತೋರುತ್ತದೆ. ಅವರು ಈರೊಸ್‌ ಅನ್ನು ದೇವರೆಂದು ಆರಾಧಿಸಿದರು. ಅವನಿಗೆ ಅಡ್ಡಬಿದ್ದರು ಮತ್ತು ಬಲಿಗಳನ್ನು ಅರ್ಪಿಸಿದರು. . . . ಆದರೆ ಇತಿಹಾಸ ತೋರಿಸುವಂತೆ ಅಂಥ ಲೈಂಗಿಕ ಪ್ರೀತಿಯ ಆರಾಧನೆಯಿಂದ ಬರೀ ಅವನತಿ, ವಿಷಯಲಂಪಟತೆ ಮತ್ತು ನೈತಿಕತೆಯ ಕ್ಷಯಿಸುವಿಕೆ ಫಲಿಸಿತು. ಬಹುಶಃ ಈ ಕಾರಣದಿಂದ ಬೈಬಲ್‌ ಲೇಖಕರು ಆ ಪದವನ್ನು ಬಳಸಲಿಲ್ಲ.” ದೈಹಿಕ ಆಕರ್ಷಣೆಯ ಮೇಲೆಯೇ ಪೂರ್ತಿಯಾಗಿ ಆಧರಿತವಾದ ಸಂಬಂಧಗಳಲ್ಲಿ ನಾವು ಒಳಗೂಡದೆ ಇರಬೇಕಾದರೆ, ಪ್ರಣಯಾತ್ಮಕ ಭಾವನೆಗಳನ್ನು ಬೈಬಲ್‌ ಮೂಲತತ್ತ್ವಗಳಿಂದ ಹದಗೊಳಿಸಬೇಕು ಇಲ್ಲವೇ ಹದ್ದುಬಸ್ತಿನಲ್ಲಿಡಬೇಕು. ಆದ್ದರಿಂದ ಹೀಗೆ ಕೇಳಿಕೊಳ್ಳಿ: ‘ನನ್ನ ಸಂಗಾತಿಯ ಕಡೆಗೆ ನನಗಿರುವ ಪ್ರಣಯಾತ್ಮಕ ಭಾವನೆಗಳನ್ನು ನಿಜ ಪ್ರೀತಿಯೊಂದಿಗೆ ಸರಿದೂಗಿಸಿದ್ದೇನೋ?’

“ಯೌವನದ ಪರಿಪಕ್ವ ಸ್ಥಿತಿ”ಯಲ್ಲಿ ಲೈಂಗಿಕ ಆಸೆಗಳು ಪ್ರಬಲವಾಗಿರುವುದರಿಂದ ಬೈಬಲ್‌ ಮೂಲತತ್ತ್ವಗಳಿಗೆ ಅಂಟಿಕೊಳ್ಳುವ ಯುವ ಜನರು ಮಾತ್ರ ನೈತಿಕವಾಗಿ ಶುದ್ಧರಾಗಿ ಉಳಿಯಬಲ್ಲರು. (1 ಕೊರಿಂ. 7:36; ಕೊಲೊ. 3:5) ನಾವು ವಿವಾಹವನ್ನು ಯೆಹೋವನು ಕೊಟ್ಟಿರುವ ಪವಿತ್ರ ಉಡುಗೊರೆಯಾಗಿ ವೀಕ್ಷಿಸುತ್ತೇವೆ. ವಿವಾಹಿತ ದಂಪತಿಗಳ ಕುರಿತು ಯೇಸುವಂದದ್ದು: “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” (ಮತ್ತಾ. 19:6) ಲೈಂಗಿಕ ಆಕರ್ಷಣೆ ಇರುವ ವರೆಗೆ ಮಾತ್ರ ಜೊತೆಗೂಡಿ ಬಾಳುವುದರ ಬದಲು ನಾವು ವಿವಾಹಕ್ಕೆ ಯಾವಾಗಲೂ ಬದ್ಧರಾಗಿರುತ್ತೇವೆ. ಸಮಸ್ಯೆಗಳೇಳುವಾಗ ವಿವಾಹ ಬಂಧದಿಂದ ನುಣುಚಿಕೊಳ್ಳುವ ಬದಲು ನಮ್ಮ ಕುಟುಂಬ ಜೀವನವನ್ನು ಸಂತೋಷವಾಗಿರಿಸಲಿಕ್ಕಾಗಿ ದೈವಿಕ ಗುಣಗಳನ್ನು ತೋರಿಸಲು ಶ್ರದ್ಧೆಯಿಂದ ಪ್ರಯತ್ನಿಸುತ್ತೇವೆ. ಅಂಥ ಪ್ರಯತ್ನಗಳು ಚಿರಕಾಲಿಕ ಸಂತೋಷವನ್ನು ತರುತ್ತವೆ.—ಎಫೆ. 5:33; ಇಬ್ರಿ. 13:4.

ಮಿತ್ರರ ನಡುವಣ ಪ್ರೀತಿ

ಮಿತ್ರರಿಲ್ಲದ ಮಾನವ ಬಲಗೈಯಿಲ್ಲದ ಎಡಗೈಯಂತೆ! ಬೈಬಲ್‌ ಜ್ಞಾನೋಕ್ತಿಯೊಂದು ಹೇಳುವುದು: “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು.” (ಜ್ಞಾನೋ. 18:24) ನಮಗೆ ನಿಜ ಮಿತ್ರರಿರಬೇಕೆಂದು ಯೆಹೋವನು ಬಯಸುತ್ತಾನೆ. ದಾವೀದ ಯೋನಾತಾನರು ಪ್ರಾಣ ಸ್ನೇಹಿತರಾಗಿದ್ದರು ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. (1 ಸಮು. 18:1) ಯೇಸುವಿಗೆ ಅಪೊಸ್ತಲ ಯೋಹಾನನ ಮೇಲೆ ಮಮತೆಯಿತ್ತೆಂದು ಬೈಬಲ್‌ ಹೇಳುತ್ತದೆ. (ಯೋಹಾ. 20:2) “ಮಮತೆ” ಅಥವಾ “ಸ್ನೇಹ” ಎನ್ನುವುದಕ್ಕಿರುವ ಗ್ರೀಕ್‌ ಪದ ಫಿಲಿಯ ಎಂದಾಗಿದೆ. ಸಭೆಯಲ್ಲಿ ನಮಗೊಬ್ಬ ಆಪ್ತ ಸ್ನೇಹಿತನಿರುವುದು ತಪ್ಪಲ್ಲ. 2 ಪೇತ್ರ 1:7ರಲ್ಲಿ “ಸಹೋದರ ಮಮತೆಗೆ” (ಫಿಲಡೆಲ್ಫಿಯ) ಪ್ರೀತಿಯನ್ನು (ಅಗಾಪೆ) ಕೂಡಿಸುವಂತೆ ನಮ್ಮನ್ನು ಉತ್ತೇಜಿಸಲಾಗಿದೆ. * ನಮ್ಮ ಮಿತ್ರರೊಂದಿಗಿನ ಸಂಬಂಧಗಳು ಬಾಳುವಂಥದ್ದಾಗಿರಬೇಕಾದರೆ ನಾವು ಈ ಸಲಹೆಯನ್ನು ಅನ್ವಯಿಸಿಕೊಳ್ಳಬೇಕು. ನಾವು ಹೀಗೆ ಕೇಳಿಕೊಳ್ಳಬೇಕು: ‘ನನ್ನ ಸ್ನೇಹದ ಭಾವನೆಗಳು ಬೈಬಲ್‌ ಮೂಲತತ್ತ್ವಗಳೊಂದಿಗೆ ಸರಿದೂಗಿಸಲ್ಪಟ್ಟಿವೆಯೋ?’

ನಮ್ಮ ಮಿತ್ರರು ಮತ್ತು ಇತರರೊಂದಿಗೆ ವ್ಯವಹರಿಸುವಾಗ ಪಕ್ಷಪಾತ ತೋರಿಸದಂತೆ ದೇವರ ವಾಕ್ಯ ನಮಗೆ ಸಹಾಯ ಮಾಡುತ್ತದೆ. ಅಂದರೆ ನಮ್ಮ ಸ್ನೇಹಿತರ ವಿಷಯದಲ್ಲಿ ಮೃದು ಧೋರಣೆ ತಾಳಿ ಬೇರೆಯವರ ವಿಷಯದಲ್ಲಿ ಅತಿ ಕಟ್ಟುನಿಟ್ಟಿನ ಧೋರಣೆ ತಾಳುತ್ತಾ ನಾವು ಇಬ್ಬಗೆಯ ಮಟ್ಟಗಳನ್ನಿಡುವುದಿಲ್ಲ. ಅಲ್ಲದೇ ಇತರರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲಿಕ್ಕೋಸ್ಕರ ನಾವು ಮುಖಸ್ತುತಿ ಮಾಡುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುವಲ್ಲಿ ಮಿತ್ರರನ್ನು ಆಯ್ಕೆಮಾಡುವಾಗ ಬೇಕಾದ ವಿವೇಚನೆ ಸಿಗುತ್ತದೆ ಮತ್ತು ‘ಸದಾಚಾರಗಳನ್ನು ಕೆಡಿಸುವ ದುಸ್ಸಹವಾಸದಿಂದ’ ದೂರವಿರಲು ಸಾಧ್ಯವಾಗುತ್ತದೆ.—1 ಕೊರಿಂ. 15:33.

ಪ್ರೀತಿಯ ಅನನ್ಯ ಬಂಧ!

ಕ್ರೈಸ್ತರನ್ನು ಐಕ್ಯಗೊಳಿಸುವ ಬಂಧವು ನಿಜವಾಗಿಯೂ ಅನನ್ಯ! ಅಪೊಸ್ತಲ ಪೌಲನು ಬರೆದದ್ದು: “ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ. . . . ಸಹೋದರ ಪ್ರೀತಿಯಲ್ಲಿ ಒಬ್ಬರಿಗೊಬ್ಬರು ಕೋಮಲ ಮಮತೆಯುಳ್ಳವರಾಗಿರಿ.” (ರೋಮ. 12:9, 10) ನಿಶ್ಚಯವಾಗಿಯೂ ಕ್ರೈಸ್ತರಲ್ಲಿ ‘ನಿಷ್ಕಪಟವಾದ ಪ್ರೀತಿ (ಅಗಾಪೆ)’ ಇದೆ. ಈ ಪ್ರೀತಿಯು ಹೃದಯದಲ್ಲಿ ಸಹಜವಾಗಿ ಹುಟ್ಟುವುದಿಲ್ಲ ಬದಲಾಗಿ ಅದು ಬೈಬಲ್‌ ಮೂಲತತ್ತ್ವಗಳಲ್ಲಿ ಆಳವಾಗಿ ಬೇರೂರಿದೆ. ಆದರೆ ಪೌಲನು “ಸಹೋದರ ಪ್ರೀತಿ” (ಫಿಲಡೆಲ್ಫಿಯ) ಮತ್ತು “ಕೋಮಲ ಮಮತೆ” (ಫೈಲೊಸ್ಟೊರ್ಜೋಸ್‌ *) ಕುರಿತೂ ಮಾತಾಡಿದನು. ಒಬ್ಬ ವಿದ್ವಾಂಸನಿಗನುಸಾರ “ಸಹೋದರ ಪ್ರೀತಿ” ಎಂಬುದು “ವಾತ್ಸಲ್ಯಭರಿತ ಪ್ರೀತಿ, ದಯೆ, ಅನುಕಂಪ ತೋರಿಸುವುದು, ಹಾಗೂ ಸಹಾಯ ನೀಡುವುದು” ಆಗಿದೆ. ಯೆಹೋವನ ಆರಾಧಕರ ಮಧ್ಯೆ ಆಪ್ತ ಒಡನಾಟವಿರುವುದು ಫಿಲಡೆಲ್ಫಿಯ ಮತ್ತು ಅಗಾಪೆ ಸೇರಿರುವುದರಿಂದಲೇ. (1 ಥೆಸ. 4:9, 10) ರೋಮನ್ನರಿಗೆ 12:9, 10ರಲ್ಲಿರುವ ಇನ್ನೊಂದು ಅಭಿವ್ಯಕ್ತಿಯಾದ “ಕೋಮಲ ಮಮತೆ” ಎಂಬುದು ಬೈಬಲ್‌ನಲ್ಲಿ ಕೇವಲ ಒಂದು ಬಾರಿ ಕಂಡುಬರುತ್ತದೆ ಮತ್ತು ಅದು ಒಂದು ಕುಟುಂಬದಲ್ಲಿರುವಂಥ ರೀತಿಯ ಆಪ್ತತೆಗೆ ಸೂಚಿಸುತ್ತದೆ. *

ಸತ್ಯ ಕ್ರೈಸ್ತರನ್ನು ಒಂದುಗೂಡಿಸುವ ಬಂಧವು ಕೌಟುಂಬಿಕ ಪ್ರೀತಿ ಹಾಗೂ ನಿಜ ಸ್ನೇಹಿತರ ಕಡೆಗಿರುವ ಪ್ರೀತಿಯ ಸಂಯೋಗವಾಗಿದ್ದು, ಎಲ್ಲ ಸಂಬಂಧಗಳು ಬೈಬಲ್‌ ಮೂಲತತ್ತ್ವಗಳ ಮೇಲಾಧರಿತ ಪ್ರೀತಿಯಿಂದ ನಿಯಂತ್ರಿಸಲ್ಪಟ್ಟಿವೆ. ಕ್ರೈಸ್ತ ಸಭೆ ಸಾಮಾಜಿಕ ಕ್ಲಬ್‌ ಅಲ್ಲ ಇಲ್ಲವೇ ಐಹಿಕ ಸಂಘಟನೆಯಲ್ಲ ಬದಲಾಗಿ ಯೆಹೋವ ದೇವರ ಆರಾಧನೆಯಲ್ಲಿ ಐಕ್ಯವಾಗಿರುವ ಒಂದು ಅನ್ಯೋನ್ಯ ಕುಟುಂಬವಾಗಿದೆ. ನಾವು ಜೊತೆ ವಿಶ್ವಾಸಿಗಳನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇವೆ ಆದ್ದರಿಂದ ಅವರನ್ನು ಸಹೋದರ ಸಹೋದರಿಯರೆಂದು ಕರೆಯುತ್ತೇವೆ. ನಾವು ಅವರನ್ನು ನಮ್ಮ ಆಧ್ಯಾತ್ಮಿಕ ಕುಟುಂಬದ ಸದಸ್ಯರೆಂದು ಪ್ರೀತಿಸುತ್ತೇವೆ, ಸ್ನೇಹಿತರೆಂದು ಪ್ರೀತಿಸುತ್ತೇವೆ ಮತ್ತು ಯಾವಾಗಲೂ ಬೈಬಲ್‌ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲೂ ಪ್ರೀತಿಸುತ್ತೇವೆ. ಸತ್ಯ ಕ್ರೈಸ್ತ ಸಭೆಯನ್ನು ಐಕ್ಯಗೊಳಿಸುವ ಮತ್ತು ಗುರುತಿಸುವ ಈ ಪ್ರೀತಿಯ ಬಂಧವನ್ನು ನಾವೆಲ್ಲರೂ ಬಲಗೊಳಿಸುತ್ತಿರೋಣ.—ಯೋಹಾ. 13:35.

[ಪಾದಟಿಪ್ಪಣಿಗಳು]

^ ಪ್ಯಾರ. 5 ಅಗಾಪೆ ಎಂಬ ಪದವನ್ನು ನಕಾರಾತ್ಮಕ ಅರ್ಥಕೊಡುವ ಸಂದರ್ಭದಲ್ಲೂ ಬಳಸಲಾಗಿದೆ.—ಯೋಹಾ. 3:19; 12:43; 2 ತಿಮೊ. 4:10; 1 ಯೋಹಾ. 2:15-17.

^ ಪ್ಯಾರ. 7 ಈ ವಚನದಲ್ಲಿ ಸ್ಟೊರ್ಜೆ ಪದದ ಮುಂಚೆ “ಇಲ್ಲ” ಎಂಬರ್ಥವಿರುವ ಎಂಬ ಗ್ರೀಕ್‌ ನಿಷೇಧಾರ್ಥಕ ಪೂರ್ವಪ್ರತ್ಯಯ ಇರುವುದರಿಂದ “ಸ್ವಾಭಾವಿಕ ಮಮತೆಯಿಲ್ಲ” ಎಂಬುದಾಗಿ ಭಾಷಾಂತರಿಸಲಾಗಿದೆ.—ರೋಮನ್ನರಿಗೆ 1:31 ಸಹ ನೋಡಿ.

^ ಪ್ಯಾರ. 15 ಫಿಲಡೆಲ್ಫಿಯ ಎಂಬುದು ಫೈಲೋಸ್‌ (“ಸ್ನೇಹಿತ”) ಮತ್ತು ಅಡೆಲ್ಫೊಸ್‌ (“ಸಹೋದರ”) ಎಂಬ ಗ್ರೀಕ್‌ ಪದಗಳ ಸಂಯುಕ್ತ ಪದವಾಗಿದೆ.

^ ಪ್ಯಾರ. 18 ಫೈಲೊಸ್ಟೊರ್ಜೋಸ್‌ ಎಂಬುದು ಫೈಲೋಸ್‌ ಮತ್ತು ಸ್ಟೊರ್ಜೆ ಎಂಬ ಗ್ರೀಕ್‌ ಪದಗಳ ಸಂಯುಕ್ತ ಪದವಾಗಿದೆ.

^ ಪ್ಯಾರ. 18 ನೂತನ ಲೋಕ ಭಾಷಾಂತರದಲ್ಲಿ ಇನ್ನಿತರ ಗ್ರೀಕ್‌ ಪದಗಳನ್ನು ಸಹ “ಕೋಮಲ ಮಮತೆ” ಎಂದು ಭಾಷಾಂತರಿಸಲಾಗಿದೆ. ಆದ್ದರಿಂದಲೇ “ಕೋಮಲ ಮಮತೆ” ಎಂಬ ಅಭಿವ್ಯಕ್ತಿ ಆ ಭಾಷಾಂತರದಲ್ಲಿ ರೋಮನ್ನರಿಗೆ 12:10ರಲ್ಲಿ ಮಾತ್ರವಲ್ಲ ಫಿಲಿಪ್ಪಿ 1:8 ಮತ್ತು 1 ಥೆಸಲೊನೀಕ 2:8ರಲ್ಲೂ ಕಂಡುಬರುತ್ತದೆ.

[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಮ್ಮೆಲ್ಲರನ್ನು ಐಕ್ಯಗೊಳಿಸುವ ಪ್ರೀತಿಯ ಬಂಧವನ್ನು ಬಲಗೊಳಿಸಲು ನೀವೇನು ಮಾಡುತ್ತೀರಿ?