ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವನ್ನು ಅನುಕರಿಸುತ್ತಾ ಧೈರ್ಯದಿಂದ ಸಾರಿರಿ

ಯೇಸುವನ್ನು ಅನುಕರಿಸುತ್ತಾ ಧೈರ್ಯದಿಂದ ಸಾರಿರಿ

ಯೇಸುವನ್ನು ಅನುಕರಿಸುತ್ತಾ ಧೈರ್ಯದಿಂದ ಸಾರಿರಿ

“ಸುವಾರ್ತೆಯನ್ನು ನಿಮಗೆ ತಿಳಿಸಲು . . . ಧೈರ್ಯವನ್ನು ಪಡೆದುಕೊಂಡೆವು.” —1 ಥೆಸ. 2:2.

1. ದೇವರ ರಾಜ್ಯದ ಸುವಾರ್ತೆ ಏಕೆ ಅತ್ಯಾಕರ್ಷಕವಾಗಿದೆ?

ಒಳ್ಳೇ ಸುದ್ದಿ ಯಾವುದೇ ಆಗಿರಲಿ ಅದನ್ನು ಕೇಳಿದಾಗ ನಮಗೆಷ್ಟು ಖುಷಿಯಾಗುತ್ತದೆ! ಅಂಥ ಸುದ್ದಿಗಳಲ್ಲಿ ಅತ್ಯುತ್ತಮವಾದದ್ದು ದೇವರ ರಾಜ್ಯದ ಸುವಾರ್ತೆಯೇ. ಕಷ್ಟಸಂಕಟ, ಕಾಯಿಲೆ, ನೋವು ಹಾಗೂ ಮರಣಕ್ಕೆ ಕೊನೆಯಿರುವುದೆಂಬ ಆಶ್ವಾಸನೆ ಈ ಸುವಾರ್ತೆಯಲ್ಲಿದೆ. ಇದು ನಿತ್ಯಜೀವದ ನಿರೀಕ್ಷೆಯನ್ನು ಕೊಡುತ್ತದೆ, ದೇವರ ಉದ್ದೇಶವನ್ನು ಪ್ರಕಟಪಡಿಸುತ್ತದೆ, ಮತ್ತು ದೇವರೊಟ್ಟಿಗೆ ನಾವು ಹೇಗೆ ಒಂದು ಪ್ರೀತಿಯ ಬಂಧವನ್ನು ಬೆಸೆಯಬಹುದೆಂಬುದನ್ನು ತೋರಿಸುತ್ತದೆ. ಯೇಸು ಮಾನವಕುಲದೊಂದಿಗೆ ಹಂಚಿಕೊಂಡಂಥ ಈ ಸುವಾರ್ತೆಯನ್ನು ಕೇಳಲು ಎಲ್ಲರೂ ಹರ್ಷಿಸುವರೆಂದು ನೀವೆಣಿಸಬಹುದು. ಆದರೆ ವಿಷಯ ಹಾಗಿರುವುದಿಲ್ಲ.

2. “ಒಡಕನ್ನು ಉಂಟುಮಾಡಲು ಬಂದೆನು” ಎಂಬ ಯೇಸುವಿನ ಹೇಳಿಕೆಯನ್ನು ವಿವರಿಸಿ.

2 ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಾನು ಭೂಮಿಯ ಮೇಲೆ ಶಾಂತಿಯನ್ನು ಉಂಟುಮಾಡಲು ಬಂದೆನೆಂದು ನೆನಸಬೇಡಿರಿ; ನಾನು ಶಾಂತಿಯನ್ನಲ್ಲ ಖಡ್ಗವನ್ನು ಹಾಕಲು ಬಂದೆನು. ಮಗನಿಗೂ ಅವನ ತಂದೆಗೂ, ಮಗಳಿಗೂ ಅವಳ ತಾಯಿಗೂ, ಯುವ ಪತ್ನಿಗೂ ಅವಳ ಅತ್ತೆಗೂ ಒಡಕನ್ನು ಉಂಟುಮಾಡಲು ಬಂದೆನು. ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವುದು ನಿಶ್ಚಯ.” (ಮತ್ತಾ. 10:34-36) ಹೆಚ್ಚಿನ ಜನರು ಸುವಾರ್ತೆಯನ್ನು ಉಲ್ಲಾಸದಿಂದ ಸ್ವೀಕರಿಸುವ ಬದಲು ಅದನ್ನು ತಿರಸ್ಕರಿಸುತ್ತಾರೆ. ಇನ್ನು ಕೆಲವರಾದರೋ, ಸುವಾರ್ತೆಯನ್ನು ಪ್ರಕಟಪಡಿಸುವವರ—ಅವರು ತಮ್ಮ ಹತ್ತಿರದ ಸಂಬಂಧಿಕರಾಗಿದ್ದರೂ ಸರಿ—ವೈರಿಗಳಾಗುತ್ತಾರೆ.

3. ಸಾರುವ ಕೆಲಸವನ್ನು ಪೂರೈಸಲು ನಮಗೆ ಏನು ಅಗತ್ಯ?

3 ಯೇಸು ತಿಳಿಸಿದ ಸತ್ಯಗಳನ್ನೇ ನಾವಿಂದು ಘೋಷಿಸುತ್ತೇವೆ ಮತ್ತು ಜನರು ಅಂದು ಪ್ರತಿಕ್ರಿಯಿಸಿದಂತೆಯೇ ಇಂದು ಸಹ ಪ್ರತಿಕ್ರಿಯಿಸುತ್ತಾರೆ. ಇದು ನಿರೀಕ್ಷಿಸಬೇಕಾದದ್ದೇ. ಯಾಕೆಂದರೆ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಒಬ್ಬ ಆಳು ತನ್ನ ಯಜಮಾನನಿಗಿಂತ ದೊಡ್ಡವನಲ್ಲ . . . ಅವರು ನನ್ನನ್ನು ಹಿಂಸೆಪಡಿಸಿರುವಲ್ಲಿ ನಿಮ್ಮನ್ನೂ ಹಿಂಸೆಪಡಿಸುವರು.” (ಯೋಹಾ. 15:20) ಅನೇಕ ದೇಶಗಳಲ್ಲಿ ನಮ್ಮನ್ನು ನೇರವಾಗಿ ಹಿಂಸಿಸಲಾಗುತ್ತಿಲ್ಲ ಎಂಬುದೇನೊ ನಿಜ. ಆದರೆ ಜನರು ತಿರಸ್ಕಾರ ಹಾಗೂ ನಿರಾಸಕ್ತಿಯನ್ನಂತೂ ತೋರಿಸುತ್ತಿದ್ದಾರೆ. ಆದಕಾರಣ, ಧೈರ್ಯದಿಂದ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ತಾಳ್ಮೆಯಿಂದಿರಲು ನಮಗೆ ನಂಬಿಕೆ ಹಾಗೂ ಧೈರ್ಯ ಅಗತ್ಯ.—2 ಪೇತ್ರ 1:5-8 ಓದಿ.

4. ಸಾರಲಿಕ್ಕಾಗಿ ಪೌಲನು ‘ಧೈರ್ಯವನ್ನು ಪಡೆಯುವ’ ಅಗತ್ಯವಿತ್ತೇಕೆ?

4 ಆದರೂ ಕೆಲವೊಮ್ಮೆ, ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ನಿಮಗೆ ಕಷ್ಟಕರವಾಗಬಲ್ಲದು ಅಥವಾ ಶುಶ್ರೂಷೆಯ ಯಾವುದಾದರೊಂದು ವೈಶಿಷ್ಟ್ಯದಲ್ಲಿ ಪಾಲ್ಗೊಳ್ಳಲು ನೀವು ಹೆದರುತ್ತಿರಬಹುದು. ನಿಮಗಷ್ಟೇ ಅಲ್ಲ ಇನ್ನೂ ಅನೇಕ ಪ್ರಚಾರಕರಿಗೆ ಹಾಗನಿಸುತ್ತದೆ. ಅಪೊಸ್ತಲ ಪೌಲನು ಸಾರುವುದರಲ್ಲಿ ಧೀರನೂ ನಿರ್ಭೀತನೂ ಆಗಿದ್ದನು. ಅವನಿಗೆ ಸತ್ಯದ ಒಳ್ಳೆಯ ಜ್ಞಾನವಿತ್ತು. ಆದರೂ ಕೆಲವೊಂದು ಸಂದರ್ಭಗಳಲ್ಲಿ ಸಾರುವುದು ಅವನಿಗೂ ಒಂದು ಹೋರಾಟವಾಗಿತ್ತು. ಥೆಸಲೊನೀಕದ ಕ್ರೈಸ್ತರಿಗೆ ಪೌಲನು ಬರೆದದ್ದು: “(ನಿಮಗೆ ತಿಳಿದಿರುವಂತೆ) ಫಿಲಿಪ್ಪಿಯಲ್ಲಿ ನಾವು ಮೊದಲು ಕಷ್ಟವನ್ನು ಅನುಭವಿಸಿ ಅವಮಾನಿಸಲ್ಪಟ್ಟರೂ ಎಷ್ಟೋ ದೊಡ್ಡ ಹೋರಾಟದೊಂದಿಗೆ ದೇವರ ಸುವಾರ್ತೆಯನ್ನು ನಿಮಗೆ ತಿಳಿಸಲು ನಮ್ಮ ದೇವರ ಸಹಾಯದಿಂದ ಧೈರ್ಯವನ್ನು ಪಡೆದುಕೊಂಡೆವು.” (1 ಥೆಸ. 2:2) ಫಿಲಿಪ್ಪಿಯಲ್ಲಿ ಅಧಿಕಾರಿಗಳು ಪೌಲ ಹಾಗೂ ಅವನ ಸಂಗಡಿಗನಾದ ಸೀಲನನ್ನು ಕೋಲುಗಳಿಂದ ಹೊಡೆದರು, ಅವರನ್ನು ಸೆರೆಮನೆಗೆ ಹಾಕಿದರು ಮತ್ತು ಕಾಲುಗಳಿಗೆ ಬೇಡಿ ತೊಡಿಸಿದರು. (ಅ. ಕಾ. 16:16-24) ಹಾಗಿದ್ದರೂ, ಪೌಲ ಹಾಗೂ ಸೀಲರು ‘ಧೈರ್ಯವನ್ನು ಪಡೆದುಕೊಂಡು’ ಸಾರುವುದನ್ನು ಮುಂದುವರಿಸಿದರು. ನಾವು ಸಹ ಅದನ್ನು ಹೇಗೆ ಮಾಡಬಲ್ಲೆವು? ಉತ್ತರಕ್ಕಾಗಿ, ಬೈಬಲ್‌ ಸಮಯಗಳಲ್ಲಿದ್ದ ಯೆಹೋವನ ಸೇವಕರಿಗೆ ಆತನ ಕುರಿತ ಸತ್ಯವನ್ನು ಧೈರ್ಯದಿಂದ ಮಾತಾಡಲು ಯಾವುದು ಶಕ್ತಗೊಳಿಸಿತು ಎಂಬುದನ್ನು ಪರಿಗಣಿಸೋಣ. ಅಲ್ಲದೆ, ಅವರ ಮಾದರಿಗಳನ್ನು ನಾವು ಹೇಗೆ ಅನುಕರಿಸಬಲ್ಲೆವು ಎಂಬುದನ್ನು ಕಲಿಯೋಣ.

ಹಗೆತನವನ್ನು ಎದುರಿಸಲು ಧೈರ್ಯ ಅಗತ್ಯವಿತ್ತು

5. ಯೆಹೋವನಿಗೆ ನಿಷ್ಠರಾಗಿದ್ದವರಿಗೆ ಯಾವಾಗಲೂ ಧೈರ್ಯ ಅಗತ್ಯವಿತ್ತೇಕೆ?

5 ಎದೆಗಾರಿಕೆ ಹಾಗೂ ಧೈರ್ಯದ ಸರ್ವೋತ್ಕೃಷ್ಟ ಮಾದರಿ ಯೇಸು ಕ್ರಿಸ್ತನದ್ದೇ ಆಗಿದೆ. ಆದರೆ ಮಾನವ ಇತಿಹಾಸದ ಆರಂಭದಿಂದಲೂ ಯೆಹೋವನಿಗೆ ನಿಷ್ಠರಾಗಿದ್ದವರೆಲ್ಲರಿಗೆ ಧೈರ್ಯ ಬೇಕಾಗಿತ್ತು. ಏಕೆ? ಏಕೆಂದರೆ ಏದೆನ್‌ನಲ್ಲಾದ ದಂಗೆಯ ನಂತರ, ದೇವರ ಸೇವೆ ಮಾಡುವವರ ಹಾಗೂ ಸೈತಾನನ ಸೇವೆ ಮಾಡುವವರ ಮಧ್ಯೆ ಹಗೆತನವಿರುವುದೆಂದು ಯೆಹೋವನು ಪ್ರವಾದಿಸಿದನು. (ಆದಿ. 3:15) ಈ ಹಗೆತನವು ಬಲು ಬೇಗನೆ ವ್ಯಕ್ತವಾಯಿತು. ನೀತಿವಂತನಾದ ಹೇಬೆಲನನ್ನು ಅವನ ಅಣ್ಣನು ಕೊಲೆಮಾಡಿದನು. ನಂತರ, ಈ ಹಗೆತನವು ಜಲಪ್ರಳಯದ ಮುಂಚೆ ಜೀವಿಸಿದ ಇನ್ನೊಬ್ಬ ನಂಬಿಗಸ್ತ ಮನುಷ್ಯನಾದ ಹನೋಕನ ವಿರುದ್ಧ ವ್ಯಕ್ತವಾಯಿತು. ದೇವರು ಅಸಂಖ್ಯಾತರಾದ ತನ್ನ ಪವಿತ್ರ ದೂತರೊಂದಿಗೆ ಭಕ್ತಿಹೀನರ ವಿರುದ್ಧ ನ್ಯಾಯ ವಿಧಿಸುವುದಕ್ಕೆ ಬರುವನೆಂಬದಾಗಿ ಹನೋಕನು ಪ್ರವಾದಿಸಿದನು. (ಯೂದ 14, 15) ಖಂಡಿತವಾಗಿಯೂ ಜನರು ಈ ಸಂದೇಶವನ್ನು ಇಷ್ಟಪಡಲಿಲ್ಲ. ಅವರು ಹನೋಕನನ್ನು ಹಗೆ ಮಾಡಿದರು ಮತ್ತು ಒಂದು ವೇಳೆ ಯೆಹೋವನು ಅವನ ಜೀವವನ್ನು ಕೊನೆಗೊಳಿಸದೆ ಇದ್ದಲ್ಲಿ, ಅವರು ಹನೋಕನನ್ನು ಖಂಡಿತವಾಗಿಯೂ ಕೊಲ್ಲುತ್ತಿದ್ದರು. ಹನೋಕನು ಎಂಥ ಧೈರ್ಯವನ್ನು ಪ್ರದರ್ಶಿಸಿದನು!—ಆದಿ. 5:21-24.

6. ಫರೋಹನೊಟ್ಟಿಗೆ ಮಾತಾಡಲು ಮೋಶೆಗೆ ಧೈರ್ಯದ ಅಗತ್ಯವಿತ್ತೇಕೆ?

6 ಫರೋಹನೊಂದಿಗೆ ಮಾತಾಡುವಾಗ ಮೋಶೆ ತೋರಿಸಿದ ಧೈರ್ಯದ ಕುರಿತು ಸಹ ಯೋಚಿಸಿ. ಈ ಫರೋಹನನ್ನು ದೇವರುಗಳ ಪ್ರತಿನಿಧಿ ಎಂದಲ್ಲ ಬದಲಾಗಿ ಸ್ವತಃ ದೇವರೆಂದು, ‘ರಾ’ ಎಂಬ ಸೂರ್ಯದೇವನ ಮಗನೆಂದು ಪರಿಗಣಿಸಲಾಗುತ್ತಿತ್ತು. ಇತರ ಫರೋಹರಂತೆ ಇವನು ಸಹ ತನ್ನ ಸ್ವಂತ ಪ್ರತಿಮೆಯನ್ನು ಆರಾಧಿಸುತ್ತಿದ್ದಿರಬಹುದು. ಅವನ ಮಾತೇ ವೇದವಾಕ್ಯವಾಗಿತ್ತು. ಅವನು ಹೇಳಿದ್ದೇ ನಡೆಯುತ್ತಿತ್ತು ಮತ್ತು ಏನು ಮಾಡಬೇಕೆಂದು ಅವನಿಗೆ ಯಾರೂ ಹೇಳುವಂತಿರಲಿಲ್ಲ. ಇಂತಹ ಒಬ್ಬ ಪ್ರಭಾವಶಾಲಿ, ಅಹಂಕಾರಿ, ಹಠಮಾರಿ ವ್ಯಕ್ತಿಯ ಸಮ್ಮುಖಕ್ಕೆ ದೀನ ಕುರುಬನಾಗಿದ್ದ ಮೋಶೆ ಯಾವುದೇ ಆಮಂತ್ರಣವಿಲ್ಲದೆ, ಸ್ವಾಗತವಿಲ್ಲದೆ ಪದೇ ಪದೇ ಹೋಗಬೇಕಾಗುತ್ತಿತ್ತು. ಮೋಶೆ ಅಲ್ಲಿ ಏನನ್ನು ಮುಂತಿಳಿಸಿದನು? ಧ್ವಂಸಕಾರಿ ಬಾಧೆಗಳನ್ನೇ. ಅವನು ಫರೋಹನ ಮುಂದಿಟ್ಟ ಬೇಡಿಕೆ ಯಾವುದು? ಲಕ್ಷಾಂತರ ಗುಲಾಮರಿಗೆ ದೇಶಬಿಟ್ಟು ಹೋಗಲು ಅನುಮತಿ ನೀಡಬೇಕೆಂದೇ. ಹೀಗಿರುವಾಗ ಮೋಶೆಗೆ ಧೈರ್ಯದ ಅಗತ್ಯವಿತ್ತೋ? ಖಂಡಿತವಾಗಿ!—ಅರ. 12:3; ಇಬ್ರಿ. 11:27.

7, 8. (ಎ) ಪುರಾತನ ಕಾಲದ ನಂಬಿಗಸ್ತರು ಯಾವ ಪರೀಕ್ಷೆಗಳನ್ನು ಎದುರಿಸಿದರು? (ಬಿ) ಕ್ರೈಸ್ತಪೂರ್ವ ಸಮಯಗಳಲ್ಲಿದ್ದವರಿಗೆ ಸತ್ಯಾರಾಧನೆಯನ್ನು ಧೈರ್ಯದಿಂದ ಎತ್ತಿಹಿಡಿಯಲು ಹಾಗೂ ಪ್ರವರ್ಧಿಸಲು ಸಾಧ್ಯವಾದದ್ದು ಹೇಗೆ?

7 ತದನಂತರದ ಶತಮಾನಗಳಲ್ಲಿದ್ದ ದೇವರ ಪ್ರವಾದಿಗಳು ಹಾಗೂ ನಂಬಿಗಸ್ತ ಸೇವಕರು ಧೈರ್ಯದಿಂದ ಶುದ್ಧಾರಾಧನೆಗಾಗಿ ತಮ್ಮ ನಿಲುವನ್ನು ತೆಗೆದುಕೊಂಡರು. ಸೈತಾನನ ಲೋಕವು ಅವರಿಗೆ ಸ್ವಲ್ಪವೂ ದಯೆ ತೋರಿಸಲಿಲ್ಲ. ಅವರ ಕುರಿತು ಪೌಲನು ಹೇಳಿದ್ದು: “ಕೆಲವರು ಕಲ್ಲೆಸೆದು ಕೊಲ್ಲಲ್ಪಟ್ಟರು, ಕೆಲವರು ಪರೀಕ್ಷಿಸಲ್ಪಟ್ಟರು, ಕೆಲವರು ಗರಗಸದಿಂದ ಇಬ್ಭಾಗವಾಗಿ ಕೊಯ್ಯಲ್ಪಟ್ಟರು, ಕೆಲವರು ಕತ್ತಿಯಿಂದ ಕ್ರೂರವಾಗಿ ಹತಿಸಲ್ಪಟ್ಟರು, ಕೆಲವರು ಕೊರತೆ, ಸಂಕಟ ಮತ್ತು ದುರುಪಚಾರವನ್ನು ಅನುಭವಿಸುತ್ತಿದ್ದಾಗ ಕುರಿಗಳ ಮತ್ತು ಆಡುಗಳ ಚರ್ಮಗಳನ್ನು ಧರಿಸಿಕೊಂಡವರಾಗಿ ತಿರುಗಾಡಿದರು.” (ಇಬ್ರಿ. 11:37) ದೇವರ ಈ ನಿಷ್ಠಾವಂತ ಸೇವಕರಿಗೆ ಸ್ಥಿರವಾಗಿ ನಿಲ್ಲಲು ಯಾವುದು ಸಹಾಯ ಮಾಡಿತು? ಹೇಬೆಲ, ಅಬ್ರಹಾಮ, ಸಾರ ಮತ್ತು ಇತರರಿಗೆ ಯಾವುದು ಬಲ ನೀಡಿತೆಂಬುದನ್ನು ಅಪೊಸ್ತಲ ಪೌಲನು ಹಿಂದಿನ ವಚನಗಳಲ್ಲಿ ಹೀಗೆ ತಿಳಿಸಿದನು: ‘ಇವರೆಲ್ಲರೂ ವಾಗ್ದಾನದ ನೆರವೇರಿಕೆಯನ್ನು ಹೊಂದಲ್ಲಿಲ್ಲವಾದರೂ ಅವುಗಳನ್ನು [ನಂಬಿಕೆಯಿಂದ] ದೂರದಿಂದಲೇ ನೋಡಿ ಸ್ವಾಗತಿಸಿದರು.’ (ಇಬ್ರಿ. 11:13) ಅಂತೆಯೇ, ಧೈರ್ಯದಿಂದ ಸತ್ಯಾರಾಧನೆಯ ಪಕ್ಷವಹಿಸಿದ ಪ್ರವಾದಿಗಳಾದ ಎಲೀಯ, ಯೆರೆಮೀಯ ಹಾಗೂ ಕ್ರೈಸ್ತಪೂರ್ವ ಸಮಯಗಳಲ್ಲಿನ ಇನ್ನಿತರ ನಂಬಿಗಸ್ತರಿಗೆ ಯೆಹೋವನ ವಾಗ್ದಾನಗಳ ಮೇಲೆ ದೃಷ್ಟಿನೆಟ್ಟಿದ್ದರಿಂದಲೇ ತಾಳಿಕೊಳ್ಳಲು ಸಹಾಯ ಸಿಕ್ಕಿತು.—ತೀತ 1:2.

8 ಕ್ರೈಸ್ತಪೂರ್ವ ಸಮಯಗಳಲ್ಲಿನ ಆ ನಂಬಿಗಸ್ತರು ಉಜ್ವಲ ಹಾಗೂ ಮನಮೋಹಕವಾದ ಭವಿಷ್ಯವನ್ನು ಎದುರುನೋಡಿದರು. ಪುನರುತ್ಥಾನಗೊಂಡ ನಂತರ ಅವರು ಕ್ರಿಸ್ತ ಯೇಸು ಮತ್ತು 1,44,000 ಉಪಯಾಜಕರ ಸೇವೆಯಿಂದ ಕಟ್ಟಕಡೆಗೆ ಪರಿಪೂರ್ಣತೆಗೆ ತಲುಪಿ ‘ನಾಶದ ದಾಸತ್ವದಿಂದ ಬಿಡುಗಡೆಯಾಗುವರು.’ (ರೋಮ. 8:21) ಯೆರೆಮೀಯ ಹಾಗೂ ಪುರಾತನ ಕಾಲದ ದೇವರ ಇತರ ಧೀರ ಸೇವಕರು ಧೈರ್ಯದಿಂದ ಇದ್ದದ್ದು ಯೆಹೋವನು ಕೊಟ್ಟ ಆಶ್ವಾಸನೆಯಿಂದಾಗಿಯೇ. ಈ ಆಶ್ವಾಸನೆ ಆತನು ಯೆರೆಮಿಯನಿಗೆ ಮಾಡಿದ ಈ ವಾಗ್ದಾನದಲ್ಲಿ ಕಂಡುಬರುತ್ತದೆ: “ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.” (ಯೆರೆ. 1:19) ಇಂದು ನಾವು ಸಹ ಭವಿಷ್ಯತ್ತಿಗಾಗಿ ದೇವರು ಮಾಡಿರುವ ವಾಗ್ದಾನಗಳು ಮತ್ತು ಆಧ್ಯಾತ್ಮಿಕ ಸಂರಕ್ಷಣೆಯ ವಿಷಯದಲ್ಲಿ ಆತನು ಕೊಟ್ಟಿರುವ ಆಶ್ವಾಸನೆಯ ಬಗ್ಗೆ ಮನನ ಮಾಡುವಾಗ ಅದೇ ರೀತಿಯ ಬಲ ಪಡೆದುಕೊಳ್ಳುವೆವು.—ಜ್ಞಾನೋ. 2:7; 2 ಕೊರಿಂಥ 4:17, 18 ಓದಿ.

ಧೈರ್ಯದಿಂದ ಸಾರುವಂತೆ ಯೇಸುವನ್ನು ಪ್ರೀತಿ ಪ್ರಚೋದಿಸಿತು

9, 10. ಯೇಸು ಯಾವ ವಿಧಗಳಲ್ಲಿ ಧಾರ್ಮಿಕ ಮುಖಂಡರ, ಸೈನಿಕರ, ಮಹಾ ಯಾಜಕನ ಮತ್ತು ಪಿಲಾತನ ಮುಂದೆ ಧೈರ್ಯ ತೋರಿಸಿದನು?

9 ನಮಗೆ ಮಾದರಿಯಾಗಿರುವ ಯೇಸು ತನ್ನ ಧೈರ್ಯವನ್ನು ಹಲವಾರು ವಿಧಗಳಲ್ಲಿ ತೋರಿಸಿದನು. ಉದಾಹರಣೆಗೆ, ಅಧಿಕಾರ ಹಾಗೂ ವರ್ಚಸ್ಸುಳ್ಳ ವ್ಯಕ್ತಿಗಳು ಯೇಸುವನ್ನು ದ್ವೇಷಿಸುತ್ತಿದ್ದರೂ, ಜನರು ತಿಳಿಯಲೇಬೇಕೆಂದು ದೇವರು ಅಪೇಕ್ಷಿಸಿದ ವಿಷಯದ ತೀಕ್ಷ್ಣತೆಯನ್ನು ಅವನು ಕಡಿಮೆಮಾಡಿ ಹೇಳಲಿಲ್ಲ. ಅವನು ಅಧಿಕಾರಶಾಹಿ ಧಾರ್ಮಿಕ ಮುಖಂಡರ ಸ್ವನೀತಿ ಮತ್ತು ಸುಳ್ಳು ಬೋಧನೆಗಳನ್ನು ನಿರ್ಭೀತಿಯಿಂದ ಬಯಲುಪಡಿಸಿದನು. ಅವರನ್ನು ನೇರ ಹಾಗೂ ಸ್ಪಷ್ಟ ಮಾತುಗಳಲ್ಲಿ ಖಂಡಿಸಿದನು. ಒಂದು ಸಂದರ್ಭದಲ್ಲಿ ಅವನಂದದ್ದು: “ಕಪಟಿಗಳಾದ ಶಾಸ್ತ್ರಿಗಳೇ ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸುಣ್ಣ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಅವು ಹೊರಗೆ ಬಹಳ ಸುಂದರವಾಗಿ ಕಾಣುತ್ತವೆ ಆದರೆ ಒಳಗೆ ಸತ್ತ ಮನುಷ್ಯರ ಎಲುಬುಗಳಿಂದಲೂ ಎಲ್ಲ ರೀತಿಯ ಅಶುದ್ಧತೆಯಿಂದಲೂ ತುಂಬಿರುತ್ತವೆ. ಹಾಗೆಯೇ ನೀವು ಸಹ ಹೊರಗೆ ಮನುಷ್ಯರಿಗೆ ನೀತಿವಂತರಂತೆ ಕಾಣುತ್ತೀರಿ, ಆದರೆ ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.”—ಮತ್ತಾ. 23:27, 28.

10 ಗೆತ್ಸೆಮನೆ ತೋಟದಲ್ಲಿ ಸೈನಿಕರ ತಂಡ ಯೇಸುವಿನೆದುರು ಬಂದಾಗ ಅವನು ಧೈರ್ಯದಿಂದ ತನ್ನ ಗುರುತನ್ನು ಹೇಳಿದನು. (ಯೋಹಾ. 18:3-8) ನಂತರ ಅವನನ್ನು ಸನ್ಹೆದ್ರಿನ್‌ನ ಮುಂದೆ ಕರೆದೊಯ್ಯಲಾಯಿತು ಮತ್ತು ಮಹಾ ಯಾಜಕನು ಅವನನ್ನು ಪ್ರಶ್ನಿಸಿದನು. ಮಹಾ ಯಾಜಕನು ತನ್ನನ್ನು ಕೊಲ್ಲಲು ನೆಪ ಹುಡುಕುತ್ತಿದ್ದಾನೆಂಬುದು ಯೇಸುವಿಗೆ ತಿಳಿದಿದ್ದರೂ ಅವನ ಮುಂದೆ ಭಯಪಡದೆ ತಾನು ಕ್ರಿಸ್ತನೂ ದೇವರ ಮಗನೂ ಆಗಿದ್ದೇನೆಂದು ದೃಢವಾಗಿ ಹೇಳಿದನು. ಅಲ್ಲದೇ, “ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಕುಳಿತುಕೊಂಡಿರುವುದನ್ನೂ ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ನೋಡುವಿರಿ” ಎಂದು ಅಲ್ಲಿದ್ದವರಿಗೆ ಹೇಳಿದನು. (ಮಾರ್ಕ 14:53, 57-65) ಸ್ವಲ್ಪ ಸಮಯಾನಂತರ, ಬಂಧಿತನಾಗಿದ್ದ ಯೇಸುವನ್ನು ಪಿಲಾತನ ಮುಂದೆ ನಿಲ್ಲಿಸಲಾಯಿತು. ಅವನನ್ನು ಬಿಡಿಸುವ ಅಧಿಕಾರ ಪಿಲಾತನಿಗಿತ್ತು. ಹಾಗಿದ್ದರೂ, ತನ್ನ ಮೇಲೆ ಹೊರಿಸಲಾದ ದೋಷಾರೋಪಣೆಗಳ ಸಂಬಂಧದಲ್ಲಿ ಯೇಸು ಮೌನವಾಗಿದ್ದನು. (ಮಾರ್ಕ 15:1-5) ಇದೆಲ್ಲವನ್ನು ಮಾಡಲು ಬಹಳ ಧೈರ್ಯ ಬೇಕಿತ್ತು.

11. ಧೈರ್ಯಕ್ಕೂ ಪ್ರೀತಿಗೂ ಸಂಬಂಧವೇನು?

11 ಯೇಸು ಪಿಲಾತನಿಗಂದದ್ದು: “ನಾನು ಸತ್ಯಕ್ಕೆ ಸಾಕ್ಷಿಹೇಳಲಿಕ್ಕಾಗಿಯೇ ಹುಟ್ಟಿದ್ದೇನೆ ಮತ್ತು ಅದಕ್ಕಾಗಿಯೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾ. 18:37) ಯೆಹೋವನು ಯೇಸುವಿಗೆ ಸುವಾರ್ತೆಯನ್ನು ಸಾರುವ ನೇಮಕ ಕೊಟ್ಟಿದ್ದನು ಮತ್ತು ಯೇಸು ಅದನ್ನು ಮಾಡಲು ಹರ್ಷಿಸಿದನು ಏಕೆಂದರೆ ತನ್ನ ಸ್ವರ್ಗೀಯ ತಂದೆಯನ್ನು ಅವನು ಪ್ರೀತಿಸುತ್ತಿದ್ದನು. (ಲೂಕ 4:18, 19) ಯೇಸುವಿಗೆ ಜನರ ಮೇಲೂ ಪ್ರೀತಿಯಿತ್ತು. ಅವರ ಕಷ್ಟಗಳು ಅವನಿಗೆ ಅರ್ಥವಾಗುತ್ತಿದ್ದವು. ಅಂತೆಯೇ, ಯೆಹೋವನ ಮೇಲೆ ಮತ್ತು ನೆರೆಯವರ ಮೇಲೆ ನಮಗಿರುವ ಆಳವಾದ ಪ್ರೀತಿಯಿಂದಲೇ ನಾವು ಯಾವುದೇ ಅಂಜಿಕೆಯಿಲ್ಲದೇ ಧೈರ್ಯದಿಂದ ಸಾರುತ್ತೇವೆ.—ಮತ್ತಾ. 22:36-40.

ಧೈರ್ಯದಿಂದ ಸಾರುವಂತೆ ಪವಿತ್ರಾತ್ಮವು ನಮ್ಮನ್ನು ಶಕ್ತಗೊಳಿಸುತ್ತದೆ

12. ಆದಿ ಶಿಷ್ಯರಿಗೆ ಸಂತೋಷವನ್ನು ತಂದ ಸಂಗತಿ ಯಾವುದು?

12 ಯೇಸುವಿನ ಮರಣಾನಂತರದ ವಾರಗಳಲ್ಲಿ, ಯೆಹೋವನು ಹೊಸ ಶಿಷ್ಯರನ್ನು ತಮ್ಮ ಗುಂಪಿಗೆ ಸೇರಿಸುತ್ತಿರುವುದನ್ನು ನೋಡಿ ಶಿಷ್ಯರು ಸಂತೋಷಿಸಿದರು. ಪಂಚಾಶತ್ತಮವನ್ನು ಆಚರಿಸಲು ಅನೇಕ ದೇಶಗಳಿಂದ ಯೆರೂಸಲೇಮಿಗೆ ಬಂದಿದ್ದ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳಲ್ಲಿ 3,000 ಮಂದಿ ದೀಕ್ಷಾಸ್ನಾನ ಪಡೆದರು, ಅದು ಕೂಡ ಕೇವಲ ಒಂದೇ ದಿನದಲ್ಲಿ! ಈ ಸಂಗತಿ ಯೆರೂಸಲೇಮಿನ ನಿವಾಸಿಗಳೆಲ್ಲರ ಮನೆಮಾತಾಗಿದ್ದಿರಬೇಕು. ಬೈಬಲ್‌ ಹೇಳುವುದು: “ಪ್ರತಿಯೊಬ್ಬರೂ ಭಯಭೀತರಾಗತೊಡಗಿದರು ಮತ್ತು ಅಪೊಸ್ತಲರ ಮೂಲಕ ಅನೇಕ ಆಶ್ಚರ್ಯಕಾರ್ಯಗಳೂ ಸೂಚಕಕಾರ್ಯಗಳೂ ನಡೆಸಲ್ಪಟ್ಟವು.”—ಅ. ಕಾ. 2:41, 43.

13. ಸಹೋದರರು ಧೈರ್ಯಕ್ಕಾಗಿ ಪ್ರಾರ್ಥಿಸಿದ್ದೇಕೆ, ಮತ್ತು ಫಲಿತಾಂಶವೇನು?

13 ಇದರಿಂದ ಕೆರಳಿದ ಧಾರ್ಮಿಕ ಮುಖಂಡರು ಪೇತ್ರ ಯೋಹಾನರನ್ನು ದಸ್ತಗಿರಿ ಮಾಡಿ ಅವರನ್ನು ರಾತ್ರಿಯಿಡೀ ಬಂಧನದಲ್ಲಿರಿಸಿ ಯೇಸುವಿನ ಕುರಿತು ಮಾತಾಡಬಾರದೆಂದು ಅಪ್ಪಣೆಮಾಡಿದರು. ಬಂಧನದಿಂದ ಬಿಡುಗಡೆಯಾದ ನಂತರ ಅವರಿಬ್ಬರೂ ನಡೆದ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರು. ಅವರೆಲ್ಲರೂ ಬಂದಂಥ ವಿರೋಧದ ಕುರಿತು ಹೀಗೆ ಪ್ರಾರ್ಥಿಸಿದರು: “ಯೆಹೋವನೇ . . . ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಮಾತಾಡುತ್ತಾ ಇರಲು ನಿನ್ನ ಸೇವಕರಿಗೆ ಸಹಾಯಮಾಡು.” ಫಲಿತಾಂಶ? “ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡುತ್ತಿದ್ದರು.”—ಅ. ಕಾ. 4:24-31.

14. ನಮ್ಮ ಸಾರುವ ಕೆಲಸದಲ್ಲಿ ಪವಿತ್ರಾತ್ಮ ಹೇಗೆ ಸಹಾಯ ಮಾಡುತ್ತದೆ?

14 ದೇವರ ವಾಕ್ಯವನ್ನು ಧೈರ್ಯದಿಂದ ಸಾರುವಂತೆ ಶಿಷ್ಯರಿಗೆ ಸಹಾಯ ಮಾಡಿದ್ದು ಯೆಹೋವನ ಬಲಾಢ್ಯವಾದ ಪವಿತ್ರಾತ್ಮವೇ ಎಂಬುದನ್ನು ಗಮನಿಸಿ. ಇತರರೊಂದಿಗೆ ಹಾಗೂ ನಮ್ಮ ಸಂದೇಶವನ್ನು ವಿರೋಧಿಸುವ ಜನರೊಂದಿಗೂ ಸತ್ಯದ ಕುರಿತು ಮಾತಾಡಲಿಕ್ಕೆ ಕೇವಲ ನಮ್ಮ ಬಳಿ ಇರುವ ಶಕ್ತಿ ಏನೂ ಸಾಲದು. ನಾವು ಯೆಹೋವನ ಬಳಿ ಆತನ ಪವಿತ್ರಾತ್ಮಕ್ಕಾಗಿ ಕೇಳಿಕೊಳ್ಳುವಲ್ಲಿ ಆತನದನ್ನು ಕೊಡಶಕ್ತನು ಮತ್ತು ಖಂಡಿತ ಕೊಡುವನು. ನಾವು ಸಹ ಯೆಹೋವನ ಸಹಾಯದೊಂದಿಗೆ, ವಿರೋಧದ ಮಧ್ಯೆಯೂ ಜಯಶಾಲಿಗಳಾಗಲು ಬೇಕಾದ ಧೈರ್ಯವನ್ನು ಪ್ರದರ್ಶಿಸಬಲ್ಲೆವು.—ಕೀರ್ತನೆ 138:3 ಓದಿ.

ಕ್ರೈಸ್ತರಿಂದು ಧೈರ್ಯದಿಂದ ಸಾರುತ್ತಾರೆ

15. ಇಂದು ಸತ್ಯವು ಜನರನ್ನು ಹೇಗೆ ವಿಭಾಗಿಸುತ್ತಿದೆ?

15 ಹಿಂದೆ ನಡೆದಂತೆ ನಮ್ಮ ದಿನಗಳಲ್ಲೂ ಸತ್ಯವು ಜನರನ್ನು ವಿಭಾಗಿಸುತ್ತಿದೆ. ಅಂದರೆ, ಕೆಲವರು ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ ಆದರೆ ಇನ್ನಿತರರು ನಮ್ಮ ಆರಾಧನೆಯನ್ನು ಅರ್ಥಮಾಡಿಕೊಳ್ಳುವುದೂ ಇಲ್ಲ ಅದನ್ನು ಗೌರವಿಸುವುದೂ ಇಲ್ಲ. ಯೇಸು ಮುಂತಿಳಿಸಿದಂತೆ ಕೆಲವರು ನಮ್ಮನ್ನು ಟೀಕಿಸುತ್ತಾರೆ, ಅಪಹಾಸ್ಯ ಮಾಡುತ್ತಾರೆ ಮತ್ತು ದ್ವೇಷಿಸುತ್ತಾರೆ. (ಮತ್ತಾ. 10:22) ಕೆಲವೊಮ್ಮೆ ಸಮೂಹಮಾಧ್ಯಮದ ಮೂಲಕ ನಮ್ಮ ಕುರಿತು ಸುಳ್ಳು ಮಾಹಿತಿಯನ್ನು ಬಿತ್ತರಿಸಲಾಗುತ್ತದೆ ಮತ್ತು ಅಪಪ್ರಚಾರ ಮಾಡಲಾಗುತ್ತದೆ. (ಕೀರ್ತ. 109:1-3) ಆದರೂ ಲೋಕದಾದ್ಯಂತ ಯೆಹೋವನ ಜನರು ಧೈರ್ಯದಿಂದ ಸುವಾರ್ತೆಯನ್ನು ಪ್ರಚುರಪಡಿಸುತ್ತಿದ್ದಾರೆ.

16. ನಾವು ತೋರಿಸುವ ಧೈರ್ಯದಿಂದಾಗಿ ಯಾರಿಗೆ ಸಾರುತ್ತೇವೋ ಅವರ ಮನೋಭಾವ ಬದಲಾಗುತ್ತದೆಂಬುದನ್ನು ಯಾವ ಅನುಭವ ತೋರಿಸುತ್ತದೆ?

16 ನಾವು ತೋರಿಸುವ ಧೈರ್ಯದಿಂದಾಗಿ ಜನರು ರಾಜ್ಯ ಸಂದೇಶದ ಕಡೆಗೆ ತಮಗಿರುವ ಮನೋಭಾವವನ್ನು ಕೆಲವೊಮ್ಮೆ ಬದಲಾಯಿಸಿಕೊಳ್ಳಬಹುದು. ಕಿರ್ಗಿಸ್ತಾನ್‌ನಲ್ಲಿನ ಸಹೋದರಿಯೊಬ್ಬಳು ಹೇಳುವುದು: “ನಾನೊಮ್ಮೆ ಸಾರುತ್ತಿದ್ದಾಗ ಮನೆಯವನೊಬ್ಬನು, ‘ನನಗೆ ದೇವರಲ್ಲಿ ನಂಬಿಕೆಯಿದೆ, ಆದರೆ ಕ್ರಿಶ್ಚಿಯನ್ನರ ದೇವರಲ್ಲಿ ಅಲ್ಲ. ನೀನು ಈ ಗೇಟ್‌ ಹತ್ತಿರ ಪುನಃ ಬಂದರೆ, ನನ್ನ ನಾಯಿಯನ್ನು ಛೂಬಿಡುತ್ತೇನೆ, ಹುಷಾರು!’ ಅಂದನು. ಅವನ ಹಿಂದೆಯೇ ಕಟ್ಟಿಹಾಕಿದ್ದ ದೊಡ್ಡ ಗೂಳಿನಾಯಿ ಇತ್ತು. ಹೀಗಿದ್ದರೂ, ‘ಧರ್ಮದ ಹೆಸರಿನಲ್ಲಿ ನಡೆಯುವ ದುಷ್ಕೃತ್ಯಗಳು ಅಂತ್ಯವಾಗುವವೋ?’ ಎಂಬ ಶೀರ್ಷಿಕೆಯ ರಾಜ್ಯ ವಾರ್ತೆ ನಂ. 37ನ್ನು ಹಂಚುವ ಕಾರ್ಯಾಚರಣೆಯ ಸಮಯದಲ್ಲಿ, ಆ ಮನೆಯ ಬೇರೆ ಸದಸ್ಯರು ಸಿಗಬಹುದೆಂಬ ನಿರೀಕ್ಷೆಯಿಂದ ನಾನು ಆ ಮನೆಗೆ ಪುನಃ ಹೋದೆ. ಆದರೆ ಆ ವ್ಯಕ್ತಿಯೇ ಬಾಗಿಲು ತೆರೆದ. ನಾನು ಕೂಡಲೇ ಯೆಹೋವನಿಗೆ ಪ್ರಾರ್ಥಿಸಿದೆ ಮತ್ತು ಹೀಗಂದೆ: ‘ನಮಸ್ಕಾರ, ಮೂರು ದಿನಗಳ ಹಿಂದೆ ನಿಮ್ಮೊಂದಿಗೆ ನಡೆದ ಸಂಭಾಷಣೆ ನನಗೆ ನೆನಪಿದೆ, ಮತ್ತು ನಿಮ್ಮ ನಾಯಿಯ ನೆನಪೂ ಇದೆ. ಆದರೆ ಇವತ್ತು ನಿಮ್ಮನ್ನು ಭೇಟಿಯಾಗದೇ ಮುಂದೆ ಹೋಗಲು ನನ್ನಿಂದಾಗಲಿಲ್ಲ. ಏಕೆಂದರೆ ಕೇವಲ ಒಬ್ಬ ಸತ್ಯ ದೇವರಿದ್ದಾನೆಂದು ನಿಮ್ಮಂತೆಯೇ ನಾನು ಸಹ ನಂಬುತ್ತೇನೆ. ತನಗೆ ಅಪಕೀರ್ತಿ ತರುತ್ತಿರುವ ಎಲ್ಲ ಧರ್ಮಗಳನ್ನು ದೇವರು ಬೇಗನೆ ಶಿಕ್ಷಿಸಲಿದ್ದಾನೆ. ಅದರ ಕುರಿತು ಹೆಚ್ಚನ್ನು ನೀವಿದರಲ್ಲಿ ಓದಿ ತಿಳಿದುಕೊಳ್ಳಬಹುದು.’ ಆ ವ್ಯಕ್ತಿ ರಾಜ್ಯ ವಾರ್ತೆಯನ್ನು ಸ್ವೀಕರಿಸಿದಾಗ ನನಗಾದ ಆಶ್ಚರ್ಯ ಹೇಳತೀರದು. ಅನಂತರ ನಾನು ಇನ್ನೊಂದು ಮನೆಗೆ ಹೋದೆ. ಕೆಲವು ನಿಮಿಷಗಳ ನಂತರ ಅದೇ ವ್ಯಕ್ತಿ ರಾಜ್ಯ ವಾರ್ತೆಯನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಕಡೆಗೆ ಓಡಿಬಂದ. ‘ಇದನ್ನು ಓದಿದೆ. ದೇವರ ಕೋಪಕ್ಕೆ ಗುರಿಯಾಗದಂತೆ ನಾನೇನು ಮಾಡಬೇಕು?’ ಎಂದು ಅವನು ಕೇಳಿದ.” ಅವನೊಂದಿಗೆ ಅಧ್ಯಯನವನ್ನು ಆರಂಭಿಸಲಾಯಿತು ಮತ್ತು ಅವನು ಕ್ರೈಸ್ತ ಕೂಟಗಳನ್ನು ಹಾಜರಾಗಲು ಆರಂಭಿಸಿದನು.

17. ಸಹೋದರಿಯೊಬ್ಬಳ ಧೈರ್ಯ, ಭಯಪಡುತ್ತಿದ್ದ ಬೈಬಲ್‌ ವಿದ್ಯಾರ್ಥಿಯೊಬ್ಬಳನ್ನು ಹೇಗೆ ಬಲಪಡಿಸಿತು?

17 ನಮ್ಮ ಧೈರ್ಯ ಇತರರಿಗೂ ಧೈರ್ಯತಂದುಕೊಡುತ್ತದೆ. ರಷ್ಯಾದಲ್ಲಿ ಸಹೋದರಿಯೊಬ್ಬಳು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಜೊತೆ ಪ್ರಯಾಣಿಕಳಿಗೆ ಪತ್ರಿಕೆಯೊಂದನ್ನು ಕೊಟ್ಟಳು. ಆಗ ಅಲ್ಲಿದ್ದವನೊಬ್ಬನು ತನ್ನ ಸೀಟ್‌ನಿಂದ ತಟ್ಟನೆ ಎದ್ದು ಬಂದು ಸಹೋದರಿಯ ಕೈಯಿಂದ ಪತ್ರಿಕೆಯನ್ನು ಕಸಿದುಕೊಂಡು ಅದನ್ನು ಮುದ್ದೆಮಾಡಿ ನೆಲಕ್ಕೆಸೆದನು. ಸಹೋದರಿಗೆ ಜೋರಾಗಿ ಬಯ್ಯುತ್ತಾ ಆಕೆಯ ವಿಳಾಸವನ್ನು ಕೇಳಿದನು ಮತ್ತು ಆ ಗ್ರಾಮದಲ್ಲಿ ಸಾರದಂತೆ ಎಚ್ಚರಿಸಿದನು. ಸಹೋದರಿ ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದಳು ಮತ್ತು ಯೇಸುವಿನ ಈ ಮಾತುಗಳನ್ನು ಮನಸ್ಸಿಗೆ ತಂದುಕೊಂಡಳು: ‘ದೇಹವನ್ನು ಕೊಲ್ಲುವವರಿಗೆ ಭಯಪಡಬೇಡಿರಿ.’ (ಮತ್ತಾ. 10:28) ಎದ್ದುನಿಂತು ಶಾಂತಸ್ವರದಲ್ಲಿ ಆಕೆ ಅವನಿಗಂದದ್ದು: “ನಾನು ನಿನಗೆ ನನ್ನ ವಿಳಾಸವನ್ನು ಕೊಡುವುದಿಲ್ಲ. ಅಷ್ಟೇ ಅಲ್ಲ, ಈ ಗ್ರಾಮದಲ್ಲಿ ನಾನು ಸಾರುವುದನ್ನು ನಿಲ್ಲಿಸುವುದಿಲ್ಲ.” ತದನಂತರ ಆಕೆ ಬಸ್‌ನಿಂದಿಳಿದು ಹೋದಳು. ಆ ಬಸ್‌ನಲ್ಲಿ ತನ್ನ ಬೈಬಲ್‌ ವಿದ್ಯಾರ್ಥಿಯೊಬ್ಬಳು ಇದ್ದದ್ದು ಆಕೆಗೆ ಗೊತ್ತೇ ಇರಲಿಲ್ಲ. ಈ ವಿದ್ಯಾರ್ಥಿ ಮನುಷ್ಯರ ಭಯದಿಂದಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿರಲಿಲ್ಲ. ಆದರೆ ನಮ್ಮ ಸಹೋದರಿಯ ಧೈರ್ಯವನ್ನು ನೋಡಿದ ಬಳಿಕ ಕೂಟಗಳಿಗೆ ಹಾಜರಾಗಲು ಆಕೆ ನಿರ್ಣಯಿಸಿದಳು.

18. ಯೇಸುವಿನಂತೆ ಧೈರ್ಯದಿಂದ ಮಾತಾಡಲು ನಿಮಗೆ ಯಾವುದು ಸಹಾಯ ಮಾಡುವುದು?

18 ದೇವರಿಂದ ವಿಮುಖವಾಗಿರುವ ಈ ಲೋಕದಲ್ಲಿ ಯೇಸುವಿನಂತೆ ಸಾರಲು ಧೈರ್ಯ ಅತ್ಯಗತ್ಯ. ಧೈರ್ಯದಿಂದ ಸಾರಲು ನಿಮಗೆ ಯಾವುದು ಸಹಾಯ ಮಾಡುವುದು? ಭವಿಷ್ಯತ್ತಿನ ಕಡೆಗೆ ನೋಡಿ. ದೇವರ ಮೇಲೆ ಮತ್ತು ನೆರೆಯವರ ಮೇಲೆ ನಿಮಗಿರುವ ಪ್ರೀತಿಯನ್ನು ಬಲವಾಗಿರಿಸಿ. ಧೈರ್ಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿ. ನೀವು ಒಬ್ಬಂಟಿಗರಲ್ಲ, ಯೇಸು ನಿಮ್ಮೊಂದಿಗಿದ್ದಾನೆ ಎಂಬುದನ್ನು ಯಾವಾಗಲೂ ನೆನಪಿಡಿ. (ಮತ್ತಾ. 28:20) ಪವಿತ್ರಾತ್ಮವು ನಿಮ್ಮನ್ನು ಬಲಪಡಿಸುವುದು. ಯೆಹೋವನು ನಿಮ್ಮನ್ನು ಆಶೀರ್ವದಿಸುವನು ಮತ್ತು ಬೆಂಬಲಿಸುವನು. ಆದ್ದರಿಂದ ಧೈರ್ಯದಿಂದ ಹೀಗೆ ಹೇಳೋಣ: “ಯೆಹೋವನು ನನ್ನ ಸಹಾಯಕನು; ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?”—ಇಬ್ರಿ. 13:6.

ನಿಮ್ಮ ಉತ್ತರವೇನು?

• ದೇವರ ಸೇವಕರಿಗೆ ಧೈರ್ಯ ಅಗತ್ಯವೇಕೆ?

• ಕ್ರಿಸ್ತನ ಮುಂಚೆ ಜೀವಿಸಿದ್ದ ನಂಬಿಗಸ್ತ ಜನರಿಂದ

ಯೇಸು ಕ್ರಿಸ್ತನಿಂದ

ಆದಿ ಕ್ರೈಸ್ತರಿಂದ

ಇಂದಿನ ಜೊತೆ ಕ್ರೈಸ್ತರಿಂದ

ಧೈರ್ಯದಿಂದಿರುವುದರ ಕುರಿತು ಏನನ್ನು ಕಲಿಯಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 21ರಲ್ಲಿರುವ ಚಿತ್ರ]

ಯೇಸು ನಿರ್ಭೀತಿಯಿಂದ ಧಾರ್ಮಿಕ ಮುಖಂಡರನ್ನು ಬಯಲಿಗೆಳೆದನು

[ಪುಟ 23ರಲ್ಲಿರುವ ಚಿತ್ರ]

ಸಾರಲು ಬೇಕಾದ ಧೈರ್ಯವನ್ನು ಯೆಹೋವನು ನಮಗೆ ಕೊಡುತ್ತಾನೆ